Total Pageviews

Friday, December 15, 2017

ಬರಹಗಾರರ ತಲ್ಲಣ

ಗೌರಿ ಎಂದರೆ ದಾಂಗುಡಿ, ದಡಬಡಿಸುವ ಬದುಕು, ಧೀಡಿರ್ ದಾರಿಯ ಕ್ರಮಿಸುವಿಕೆ. ಇದನ್ನು ಹಲವು ವರ್ಷಗಳ ಹಿಂದಿನ ಒಂದು ಅನುಭವವನ್ನು ಆಧರಿಸಿಯೇ ಹೇಳುತ್ತಿದ್ದೇನೆ. 2003 ರಿಂದ 2009 ಅವಧಿ, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಇಂಗ್ಲೀಷ್ ಸ್ನಾತಕೋತ್ತರ ವಿಭಾಗದಲ್ಲಿ ನಾನು ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ಸಂದರ್ಭ. ಧಾರವಾಡದಅಡವಿ ಪ್ರಕಾಶನನನ್ನಒಂದಿಷ್ಟು ಕರುಣೆ ಮತ್ತಷ್ಟು ನೀರುಎಂಬ ಕಾವ್ಯಸಂಕಲನವನ್ನು ಪ್ರಕಟಿಸಿ, ಧಾರವಾಡದಲ್ಲಿ ಸಂಕಲನದ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಿ, ಗೌರಿ ಲಂಕೇಶರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಅಧ್ಯಕ್ಷತೆಯಲ್ಲಿದ್ದವರು ಹೆಸರಾಂತ ನಾಟಕಕಾರ ಚಂದ್ರಕಾಂತ ಕುಸನೂರ.

ಅದೇನಾಯಿತೋ! ಕೊನೆಯ ಘಳಿಗೆಯಲ್ಲಿ ಇದ್ದಕ್ಕಿದಂತೆ ಸುದ್ದಿ. ‘ಗೌರಿ ಲಂಕೇಶ್ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಒಂದು ಕ್ಷಣ ತಬ್ಬಿಬ್ಬು, ಬೇಸರ, ಅಸಮಾಧಾನ. ಆದರೆ ದಿನಕಳೆದಂತೆ ಗೊತ್ತಾಯಿತು, ಬರಹದ ಉಮೇದಿನಲ್ಲಿ ಹಿರಿಯ ಪತ್ರಕರ್ತರನ್ನು ಹೀಯಾಳಿಸಿದ್ದ ಅವರನ್ನು ಕಡೆಗೆ ಬಂದಾಗ ಘೇರಾವ್ ಹಾಕಿಸುವುದಾಗಿ ಕೆಲವು ಕಿಡಗೇಡಿಗಳು ಗೌರಿ ಅವರಿಗೆ ಸಂದೇಶ ರವಾನಿಸಿ ಭಯದ ವಾತಾವರಣವನ್ನು ಸೃಷ್ಟಿಸಿದ್ದರು. ಹೀಗಾಗಿ ಗೌರಿ ಬರಲಿಲ್ಲ.

ಆನಂತರವೂ ಅನೇಕ ವರ್ಷ ಅವರೊಂದಿಗೆ ಫೋನ್ ಸಂಪರ್ಕದಲ್ಲಿದ್ದ ನಾನು, ನೇರವಾಗಿ ಅವರನ್ನು ಭೇಟ್ಟಿಯಾದುದು ಒಂದೇ ಬಾರಿ. ಆಗವರು ತಲೆ ಬೋಳಿಸಿಕೊಂಡು ಕಾಫಿ ಹೀರುತ್ತಾ ಮಾತನಾಡಿದ ನೆನಪು. ಲಂಕೇಶರ ವಿಭಿನ್ನ ಶೈಲಿಯ ಬರಹದ ಆಕರ್ಷಣೆಯ ಪಥದಲ್ಲಿದ್ದ ನನಗೆ ಸೊಗಸು ಆನಂತರ ಸಿಗದ್ದಕ್ಕೆ ಗೌರಿಯವರೊಂದಿಗೆ ಮುಂದುವರೆಯಲಿಲ್ಲವೇನೊ. ಗೌರಿಯವರ ನಕ್ಸಲ್ ಕಾಳಜಿ ಹಾಗೂ ಕೋಮು ಸೌಹಾರ್ದದ ಮಹತ್ವದ ಜಿಲ್ಲೆಗಳಲ್ಲಿಯೇ ನಾನು ಉಪನ್ಯಾಸಕ ವೃತ್ತಿಯನ್ನು ಮಾಡಿದರೂ ಕೂಡಾ ಅನಿವಾರ್ಯದ ಹಂತದ ಹಂಚಿಕೊಳ್ಳುವಿಕೆ ಅವರೊಂದಿಗೆ ನನ್ನಿಂದ ಸಾಧ್ಯವಾಗಲೇ ಇಲ್ಲ. ನಿಂತದ್ದು ನಿಂತೇ ಹೋಯಿತು.
ಪ್ರಪಂಚದ ನೂರು ಲೇಖಕರ ಹತ್ಯೆಯ ಕತೆಯನ್ನುಕಾವ್ಯಕ್ಕೆ ಉರುಳುಎಂಬ ಶೀರ್ಷಿಕೆಯಲ್ಲಿ ಎರಡು ವರ್ಷಗಳ ಕಾಲ ನಿರಂತರಸಂಯುಕ್ತ ಕರ್ನಾಟಕದಲ್ಲಿ ಬರೆದ ನನಗೆ ಎಂ.ಎಂ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶರ ಹತ್ಯೆಗಳು ಎದುರಾದದ್ದು ಇದೇ ಅವಧಿಯಲ್ಲಿ. ಆದರೆ ಇವರೀರ್ವರನ್ನೂ ಸರಣಿಯಲ್ಲಿ ಚರ್ಚಿಸಲಾಗಲಿಲ್ಲ. ಕುರಿತು ಬೇಸರವೂ ಇಲ್ಲ.
ಆದರೆ ಕೊಲೆಯ ಕಾವಿನಲ್ಲಿ ಶಬ್ದಗಳ ಜಾಲಾಡಿಸಿ, ಇಲ್ಲದ್ದನ್ನೂ, ಇದ್ದದನ್ನೂ, ಇರಬೇಕಾದುದನ್ನೂ ಸೇರಿಸಿ ಹತ್ಯೆ ಸೃಷ್ಟಿಸುತ್ತಿರುವ ಹುತಾತ್ಮತೆಯ ಕುರಿತು ಬಹಳ ಬೇಸರವಿತ್ತು ನನಗೆ. ಇದಕ್ಕೊಂದು ಅಭಿವ್ಯಕ್ತಿ ಸಿಕ್ಕಿದ್ದು ಇತ್ತೀಚೆಗೆ, ಎನ್.ಕೆ.ಮೋಹನ್ರಾಂ ಅವರ ಲೇಖನದಲ್ಲಿ.
ಹಿರಿಯ ಪತ್ರಕರ್ತ ಶ್ರೀ ಮಹಾದೇವ ಪ್ರಕಾಶ ನೇತೃತ್ವದಭಾನುವಾರಮಾಸಿಕದ ಅಕ್ಟೋಬರ್ ಸಂಚಿಕೆಯಲ್ಲಿ ಎನ್.ಕೆ.ಮೋಹನ್ರಾಂ ಅವರ ಲೇಖನಹತ್ಯೆ ಸೃಷ್ಟಿಸುತ್ತಿರುವ ಹುತಾತ್ಮತೆನನಗೆ ಮೇಲಿನದೆಲ್ಲವನ್ನೂ ಸ್ಮರಿಸಿಕೊಳ್ಳಲು ಕಾರಣವಾಯಿತು. ಶಬ್ದ ಹಾಗೂ ಸಂದರ್ಭ ನೆಪವಾಗಿ ಹುಟ್ಟಿದ ಬರಹವೊಂದು ತನ್ನ ಹಿಂದಿನ ಪರಂಪರೆಯ ಸಂಪರ್ಕ ಸಾಧಿಸಿಕೊಳ್ಳದೆ, ಭವಿತವ್ಯಕ್ಕೆ ಬಾಚಿಕೊಳ್ಳದೆ ಹೋದರೆ ಅದು ವರದಿಯಾಗಿ ಸತ್ತು ಹೋಗುತ್ತದೆ. ಆದರೆ ಮೋಹನ್ರಾಂ ಲೇಖನ ಕವರ್ ಸ್ಟೋರಿಯಾಗಿ ಹುಟ್ಟಿಕೊಂಡು, ಪತ್ರಕರ್ತೆ ಗೌರಿ ಲಂಕೇಶರ ಹತ್ಯೆಯ ವರದಿಯನ್ನು ಮಾಡುತ್ತಲೇ ನಮ್ಮ ಪತ್ರಿಕಾ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಸಾಂಪ್ರಾದಾಯಿಕವಾಗಿ ಮಡುಗಟ್ಟಿದ ಅದೆಷ್ಟೋ ಸತ್ಯಗಳ ಮೇಲೆ ಬೆಳಕು ಚೆಲ್ಲಿದೆ. ಒಂದು ಸಾವನ್ನು ಕುರಿತು ಬರೆಯುತ್ತಲೇ ಸಾವು ಸೃಷ್ಟಿಸುವ ಸುಳ್ಳು ಸಮಾವೇಶಗಳ ಕೃತ್ರಿಮತೆಗಳನ್ನು ಇದು ಟೀಕಿಸುತ್ತದೆ.
ಲಂಕೇಶರ ನಿಕಟವಲಯದಲ್ಲಿ ಸಂಕಟ-ಸಂಕಷ್ಟದ ದಿನಗಳಲ್ಲಿ ಒಂದೆಡೆ ಲಂಕೇಶ, ಮತ್ತೊಂದೆಡೆ ಅವರ ಸಾಮಾಜಿಕತೆ, ಮಗದೊಂದೆಡೆ ಅವರ ಸಂಸಾರ, ವ್ಯಾವಹಾರಿಕತೆಗಳಿಗೆ ಮುಖಾಮುಖಿಯಾದ ಮೋಹನ್ರಾಂದು ನಿರ್ಲಿಪ್ತ ನಿಲುವು. ಲಂಕೇಶ ಸುತ್ತಲೂ ಸಾಧ್ಯವಾಗದೇ ಇರುವುದರವುಗಳ ಕುರಿತು ಮಾತನಾಡುವಷ್ಟೇ ನಿರ್ಮೋಹಿಯಾಗಿ ಸಾಧನೆಗಳ ಕುರಿತೂ ಅವರು ಅಷ್ಟೇ ನಿವ್ರ್ಯಾಜ್ಯವಾಗಿ ಬರೆಯುತ್ತಾರೆ. ಗೌರಿಯ ಕುರಿತು ಬರೆಯುವಾಗ ತಂದೆ ಲಂಕೇಶ ಹಾಗೂ ಅವರ ವಿದ್ವತ ಲೋಕ, ವಿಕಾರಗಳನ್ನು ವಿಚಾರವಾಗಿಸುತ್ತಿದ್ದ ಅವರ ಬರಹದ ತೀಕ್ಷ್ಣತೆಯನ್ನು ಪ್ರಶ್ನೆಯಾಗಿ ನಿಲ್ಲಿಸುತ್ತಾರೆ. ಕುಷ್ಟಗಿ, ರೇಶ್ಮೆ, ದ್ವಾರಕಾನಾಥ, ಕೀರಂ, ಸ್ವಯಂ ತಮ್ಮನ್ನೂ ಸೇರಿಸಿಕೊಂಡು ಗೌರಿ ಹಾಗೂ ಇಂದ್ರಜಿತರವರೆಗಿನ ಲಂಕೇಶೆಂಬ ದಾರಿಯ ಕ್ರಮಿಸುವಿಕೆಯಲ್ಲಿ ತಾತ್ವಿಕವಾಗಿ ಏನನ್ನು ಅನುಸರಿಸಲಾಗಲಿಲ್ಲ ಎನ್ನುವ ಆತ್ಮವಿಮರ್ಶೆಯ ನೆಲೆಯ ಅವರ ಲೇಖನ ಗೌರಿಯ ವ್ಯಕ್ತಿತ್ವ ಹಾಗೂ ಎಂ.ಎಂ.ಕಲ್ಬುರ್ಗಿಯವರ ಜೀವನಾಂತ್ಯಗಳ ಹಿಂದಿನ ಸಾಮಾನ್ಯತೆಯ ಕುರಿತು ಮರುಚಿಂತನೆಗೀಡು ಮಾಡುತ್ತದೆ.
ಸಾವು ಒಂದು ಸತ್ಯವಾದರೆ ಅದನ್ನು ನಿಭಾಯಿಸಬೇಕಾದ ಹೊಣೆಗಾರಿಕೆ ಮತ್ತೊಂದು ಮಹತ್ವದ ಮಜಲು. ಹೀಗಾಗಿ ಮೋಹನ್ರಾಂ ಇಲ್ಲಿ ಬರೆಯುವ ಪ್ರತಿಸಾಲು ಅತ್ಯಂತ ಜವಾಬ್ದಾರಿ ಹಾಗೂ ಮಾನವೀಯ ಕಾಳಜಿಯಿಂದ ತುಂಬಿವೆ. ಎಲ್ಲಕ್ಕೂ ಮಿಗಿಲಾಗಿ ಬದುಕಿ ಬಾಳಬೇಕಾಗಿದ್ದ ಗೌರಿ ಮುಖ್ಯವಾಗಿರುವುದರಿಂದ ಮೋಹನ್ರಾಂ ಅಭಿವ್ಯಕ್ತಿಸುವ ಲೇಖನದಲ್ಲಿಯ ಬಹಳಷ್ಟು ಕಾಳಜಿಗಳನ್ನು ದಕ್ಕಿಸಿಕೊಳ್ಳಬೇಕಾದರೆ ಓದುಗನಿಗೆ ರೋಚಕತೆಯನ್ನು ಹೊರತಾಗಿಸಿದ ಜೀವನ ಪ್ರೀತಿ ಬೇಕಾಗುತ್ತದೆ. ಗೌರಿಯ ಹತ್ಯೆ ಒಂದು ಸಂಗತಿಯಾದರೆ, ಪಾಪಿಗಳ ಬಂಧನ ಇನ್ನೊಂದು ದಿನ ಮತ್ತೊಂದು ಸಂಗತಿ. ಆದರೆ ಎರಡೂ ಸಂಗತಿಗಳ ಮಧ್ಯ ಜೀವನವೆಂಬ ತಪದ, ಸಹನೆಯ, ಸಂಯಮದ ದಾರಿ ಏನಾಯಿತು? ಎಂಬುದೇ ಮೋಹನ್ರಾಂ ಕೇಳುವ ಮುಖ್ಯ ಪ್ರಶ್ನೆ
ಇಂಥ ಪ್ರಬುದ್ಧ ಲೇಖನ ಪ್ರಕಟಿಸಿ  ಬರಹಗಾರರ ತಲ್ಲಣಗಳಿಗೆ ಕನ್ನಡಿ ಹಿಡಿದ ಹಿರಿಯ ಸಂಪಾದಕರಾದ ಶ್ರೀ ಮಹಾದೇವ ಪ್ರಕಾಶರವರಿಗೆ ಧನ್ಯವಾದಗಳು.