Total Pageviews

Tuesday, March 29, 2011

ಏನಾಗಿದೆ?(a dark in the light)....

  


ಈ ಬೆಳಕಿನಲ್ಲಿ
ಎಷ್ಟೊಂದು ಕತ್ತಲೆಯಿದೆ

ಅಂಗುಲಂಗೂಲಕೂ
ಲಪಾಟಿ ಸುತ್ತಿಕೊಂಡೂ
ದೇಹ ಬೆತ್ತಲೇ ಇದೆ

ಬ್ರಹ್ಮಾಂಡ ಸುತ್ತುವಷ್ಟು
ಅಪರಂಪಾರ ಕರುಳಿದ್ದೂ
ಕರುಣೆ ಕಲ್ಲಾಗಿದೆ

ಜಗದ ಬುಡ ಅಲುಗಾಡಿಸಿ
ಗೆಲ್ಲಿಸುವ ಬೆರಳುಗಳಿದ್ದೂ
ಮನುಷ್ಯತೆಯ ಲೆಕ್ಕಾಚಾರ ಬಡವಾಗಿದೆ

ಹಾದಿ-ಹಾದಿಗೆ ಹುಲ್ಲು
ಬೀದಿಗಳ ಬಾಯ್ಮುಚುವಷ್ಟು ಬೆಳೆಯಿದ್ದೂ
ಸಮಾಜ ಕಸಾಯಿಖಾನೆಯಾಗಿದೆ

ಆತ್ಮ ಸತ್ತವರ ಮುಂದೆ
ಕುರಿಮಂದೆಯಂತೆ ನಮಾಜು ಹಾಕಿದೆ

ನೀ-ನಾನಾಗು..



ಮಣ್ಣಿಗಿರುವ ಲಜ್ಜೆ
ನಿನಗೆ ಬಂದರೆ
ಬಣ್ಣಕಿರುವ ಹಂಬಲ
ನಿನ್ನೊಳಗೆ ಹುಟ್ಟಿದರೆ

ಗಾಳಿಗಿರುವ ಚಂಚಲತೆ
ನಿನ್ನಾಶೆಯಾದರೆ
ನೀರಿಗಿರುವ ನಿರ್ಮಲತೆ
ನೀನೇ ಆದರೆ
ಬೆಂಕಿಯೊಳಗಿನ ಬೆಂಕಿ
ನಿನ್ನ ಧರ್ಮವಾದರೆ

ನಾನು ಅರೆಘಳಿಗೆಯೂ ನಿನ್ನೊಂದಿಗೆ
ಇರಲಾಗದು
ದೇವರಾದ ನಿನ್ನೊಂದಿಗೆ
ಬರಲಾಗದು

ನೀನು ನೀನಾಗಿರು ನನಗೆ
ಬೇಸರಾದರೆ ಮತ್ತೆ
ನೀನು ನಾನೇ ಆಗು ಸಾಕು

ಯೌವ್ವನಕ್ಕೊಂದು ಧೋಖಾ



ಈಗ
ಅಜ್ಜಿ,ಊರಲ್ಲಿ
ಗೆಜ್ಜೆ ಸದ್ದೇ ಇಲ್ಲ
ಎಲ್ಲ ಹಾಳು,ಬೀಳು,ಧೂಳು
ಬೆಳದಿಂಗಳಿಗೆ ಬಾಯ್ತೆರೆದು ಮಲಗಿದರೆ
ಕೇಳುವ ಧ್ವನಿ ಗೋಳು


ಈಗ ಎಲ್ಲ ಹೀಗೆ
ಇಣುಕಿ ನೋಡಿದರೆ
ಅವರವ್ವನನ್ನು ನುಂಗಿ ನೀರು ಕುಡಿದ
ಬಾವಿಯ ಬಾಯಿಗೆ
ಈಗ್ ಬೋರ್ ನೀರಿನ ಜೀವದಾನ
ಗಡಗಡಿಗಳು ತುಕ್ಕಾಗಿ
ಕೊಡದ ಕಟ್ಟೆಗಳೆಲ್ಲ ಒಡೆದು ಹೋಗಿ
ಬಾವಿ ಈಗ
ಗಣೇಶನ ಆತ್ಮಹತ್ಯೆಯ ಸ್ಥಳವಷ್ಟೇ

ಕೊಳೆತು
ಕಪ್ಪಿಟ್ಟ ನೀರೊಳಗೆ
ಬಿಂದಿಗೆಗಾಗಿ ಬಾಗಿದ
ಗೆಳತಿಯರ ನೆರಳಿಲ್ಲ
ಕಲ್ಲು ಕಲ್ಲಿನ ಮೆಲೆ ಬಿದ್ದ
ಬಳೆಚೂರು ಕಳೆದುಕೊಂಡಿವೆ ಎಲ್ಲ

ಸತ್ತು ಸ್ವರ್ಗ ಸೇರದೆ ಊರು ಸೇರಿದ
ಅಜ್ಜಿಗೆ ಹೇಳಬೇಕಿದೆ ನಾನು
ಊರಿಗೆ ಬಂದವಳು ನೀರಿಗೆ ಬರುತ್ತಿಲ್ಲ ಅಜ್ಜಿ

ನೀರಿಗೇ ಬರದವಳು
ಎದೆಯ ಮೇಲೊಂದು ನಿರಿಗೆ
ಹಾಕುವುದು ಹ್ಯಾಗೆ ಅಜ್ಜಿ?


ಸಾಯದೇ ಸಿಗುವುದೊಮೊಮ್ಮೆ.....

ಮೋಕ್ಷ

ಕಾಲದ ಬರಸಿಡಿಲು ಬಡಿದು
ಸುಟ್ಟ ಮರದೆದುರು ಕುಳಿತಿದ್ದೇನೆ
ಎಲ್ಲೋ ಒಂದಿಷ್ಟು ಉಸಿರು ಉಳಿದಿರಬಹುದು
ಹಸಿರ ಹಸಿ ಒಳಗಿರಬಹುದು
ಚಿಟ್ಟೆಯೊಂದರ ಮೊಟ್ಟೆ ತಪ್ಪಿ ಉಳಿದಿರಬಹುದು
ಅರೆಪಕ್ಕದ ಹಕ್ಕಿ ಗೂಡಿಗಾಗಿ ಹುಡುಕುತಿರಬಹುದು




  1.                                                  ಈ ಸನಾತನದ ಮರದ ಎದೆಯೊಳಗೆ
ಬಿದ್ದ ಗೊರಲಿಯ ಮಣ್ಣೇ ಈಗ
ಇದರ ವಂಶದ ಕನಸಾಗಿರಬಹುದು
ಆಶಯ,ಅನ್ವೇಷಣೆ ಎಲ್ಲ ಆಗಲೂಬಹುದು
ಹದ್ದು ಹಾರಾಡುತ ಬಂದು ಉಚ್ಚೆ ಹೋಯ್ದರೂ
ಮತ್ತೆ ಹಸುರಾಗಬಹುದೇ ಮರ?
ಹೀಗೆ ಕರುಣಿಸಬಹುದೇ
ಕರುಣಾಳು ಭಗವಂತ ಒಂದು ವರ?


ಮರ ಸುಟ್ಟಿದೆ ಭಯವಿಲ್ಲ,ಆದರೆ
ಅಯ್ಯೋ
ನಿಂತ ನೆಲದ ಹಸಿಗೆ ಅಭಯವಿಲ್ಲ


ನಾನು ಹೀಗೆಯೇ ಕುಳಿತಿರುತ್ತೇನೆ
ಕನಿಷ್ಟ ಕನಿಷ್ಟ
ಈ ದೇಶದ ಕೋಟಿ ಕೋಟಿ
ಹೆಣ ಹೊತ್ತೊಯ್ದು ಮೋಕ್ಷ  ಕಾಣಿಸಿದ ಗಂಗೆ
ಒಂದು ದಿನ ದಾರಿ ತಪ್ಪಿ ಬಂದು
ಈ ಮರವನ್ನು ಹೊತ್ತೋಯ್ದು
ಯಾವುದೋ ಯಜ್ಞಕುಂಡಕ್ಕೆ
ಆಹುತಿಯಾಗಿಸಿ ಮೋಕ್ಷ ನೀಡುವವರೆಗೆ