Total Pageviews

Thursday, May 26, 2011

ಏಕ್ ದಿನ್ ಕಾ ಸುಲ್ತಾನ್.....(origin-K A Abbas)


ಏಕ್ ದಿನ್ ಕಾ ಸುಲ್ತಾನ್.......

ಅದು ಸಭೆ. ಕುಳಿತಿದ್ದಾನೆ ರಾಜ, ರಾಜ ಸಭೆಯಲ್ಲಿ. ಎತ್ತರದ ಸಿಂಹಾಸನ, ಝಗಝಗಿಸುವ ಕಿರೀಟು, ರಾಜದಂಡ, ಆತನ ಗಾಂಭೀರ್ಯ, ರೇಷ್ಮೆ, ಮಸ್ಲೀನ್‌ಗಳಲ್ಲಿ ಹೊಲಿಸಿದ ಆತನ ಬಟ್ಟೆಗಳು. ಆತನ ಸಿಂಹಾಸನಕ್ಕೆ ಹೊದಿಸಿದ ಹುಲಿಯ ಚರ್ಮ, ಚರ್ಮಕ್ಕೆ ಹೊಂದಿಕೊಂಡ ಹುಲಿಯ ತಲೆಯ ಮೇಲೆ ಆತನ ಕಾಲು ಎಲ್ಲವೂ ಆತ ರಾಜನೇ, ನಾಡಿನ ನಿರ್ವಿವಾದಿತ ಪ್ರಭು ಎಂದೂ ಮತ್ತೆ ಮತ್ತೆ ಸಾರುತ್ತಿವೆ.
ಆಸ್ತಾನದ ಸಭೆಯ ತುಂಬ ಮಂತ್ರಿಗಳು, ಮುಖ್ಯಮಂತ್ರಿ, ವಿದೂಷಕರು, ಜ್ಯೋತಿಷಿಗಳು, ಸೇನಾಪತಿ, ಅಂದದ ಬೆಲೆ ಬಾಳುವ ಹೆಂಗಸರು, ನಗರದ ಪ್ರಮುಖರು ನಿಂತಿದ್ದಾರೆ. ರಾಜನ ಮುಂದೆ ಭಯ ಭಕ್ತಿಯಿಂದ. ರಾಜ ಕೂಡ್ರುತ್ತಾನೆ, ಅವರು ಆತನ ಅಪ್ಪಣೆಗಾಗಿ ಕಾಯುತ್ತಾರೆ.
ಅಗೋ, ರಾಜ ಚಪ್ಪಾಳೆ ತಟ್ಟಿದ. ಅಬ್ಬಬ್ಬಾ! ಎಂಥ ಬೆಲೆಬಾಳುವ ಉಂಗುರಗಳವು ಆತನ ಬೆರಳುಗಳಲ್ಲಿ. ರಾಜ ಫರ್‌ಮಾನ್ ಹೊರಡಿಸಿದ- ``ಹೂಂ, ನೃತ್ಯ ಪ್ರಾರಂಭವಾಗಲಿ.’’ ಆತನ ಒಂದು, ಒಂದೇ ಮಾತು ಸಾಕು. ಇಡೀ ಸಭೆ ನೃತ್ಯ, ಗಾಯನಗಳ ಜಾತ್ರೆಗೆ ಸಿದ್ಧವಾಗುತ್ತದೆ. ರಾಜ ಅಂದರೆ ಇವನೆ. ಹೀಗೆಯೆ ಇರಬೇಕು ರಾಜ. ಅಲ್ಲವೆ?
ಒಂದಾದ ಮೇಲೆ ಒಂದು ಹೇಗೆ ಏಳು ಪರದೆಗಳು ಮೇಲೆಳುತ್ತವೆ. ಚೆಂದದ ನೃತ್ಯಗಾರ್ತಿಯರು ಕಾಣಿಸಿಕೊಳ್ಳುತ್ತಾರೆ. ಸರಿ, ಆತನಿಗೆ ಏಳು ಸಲ ವಂದಿಸಿದ. ಅವರು ಸಂಗೀತಗಾರರ ಸಾರ್ಥಗಾಗಿ ಕಾಯುತ್ತಾರೆ. ಅವರು ಸಿದ್ಧರಾಗಿದ್ದಾರೆ. ರಾಜನಿಗಾಗಿ ನೃತ್ಯ ಪ್ರಾರಂಭವಾಯಿತು.
ಅಬ್ಬಬ್ಬಾ! ಏನು ಯೌವ್ವನ ಆ ಹೆಣ್ಣುಗಳಲ್ಲಿ. ಅವರ ಕಣ್ಣುಗಳೂ, ಕಣ್ಣುಗಳಲ್ಲ, ಮದಿರೆಯ ಬಟ್ಟಲುಗಳು. ಕಣ್ಣುಗಳಲ್ಲೆ ಕರೆಯುತ್ತಾಳೆ. ಆಕೆಗೆ ಆಶೆಯನ್ನಿಟ್ಟು ಪಂಥಕ್ಕೆ ಆಹ್ವಾನಿಸುತ್ತಾಳೆ ಮತ್ತೊಬ್ಬಳು. ಇರಿಯುತ್ತಾಳೆ ಒಬ್ಬಳು. ಹಾಗಲ್ಲ, ಮತ್ತೊಬ್ಬಳು ನೋಡುಗರ ಕಣ್ಣುಗಳ ಮುಖಾಂತರ ದೇಹದೊಳಗೆ ಬೆರೆಯುತ್ತಾಳೆ ಕಳ್ಳಿ. ರಾಜನ ಸಭೆಯಲ್ಲಿ ಸೇರಿದವರೆಲ್ಲರಿಗೂ ಒಂದು ಕೈ ಈ ಹೆಣ್ಣುಗಳ ತೊಡೆಗಳಲ್ಲಿ ತಮ್ಮ ಆಶೆಯ ತೆನೆ ಬೇಯಿಸಿಕೊಳ್ಳುವಾಸೆ. ಆದರೆ? ಆದರೆ ಅಲ್ಲಿ ರಾಜನಿದ್ದಾನೆ. ಆ ನೃತ್ಯಗಾರ್ತಿಯರೆಡೆಗೆ ಇನ್ನಾರೂ ನೋಡುವಂತಿಲ್ಲ. ಮೀಸೆಯ ಹುರಿ ಕಟ್ಟುತ್ತ ಮತ್ತೆ ಮತ್ತೆ ಅವನೊಬ್ಬನೆ ನೋಡುತ್ತಾನೆ ಅವರೆಡೆಗೆ. ಒಂದು ಗಂಟೆಯಲ್ಲಿ ಇಡೀ ಸಭೆ ಎಂಬ ಬ್ರಹ್ಮಾಂಡ ಕುಣಿಸಿದ ಹೆಂಗಸರು, ನೃತ್ಯ ನಿಲ್ಲಿಸಿದರು. ರಾಜ ಖುಷಿಯಾದ. ಅವನ ಕೊರಳೊಳಗಿನ ಮುತ್ತಿನ ಸರ ಈಗ ಅವರಿಗೆ ಕಾಣಿಕೆ.
ಆತ ಬೀಸಿ ಒಗೆದ ಮುತ್ತಿನ ಹಾರವನ್ನು ಎತ್ತಿಕೊಳ್ಳುತ್ತ ನೃತ್ಯಗಾರ್ತಿಯೊಬ್ಬಳು ಸಮೀಪ ಬಂದು ರಾಜನ ಪಾದ ಚುಂಬಿಸುತ್ತಾಳೆ ಹಾಗೂ ಹೇಳುತ್ತಾಳೆ.
``ಮಹಾಪ್ರಭುವೆ, ನಿಮ್ಮ ಉಪಕಾರವನ್ನು ಏನಂತ ಬಣ್ಣಿಸಲಿ? ಹೇಗೆ ತೀರಿಸಲಿ? ದಿಗ್ವಿಜಯಗಳ ಒಡೆಯರು ನಿವಾಗಿರಿ. ಚಿರಕಾಲ ಬಾಳಿರಿ. ನಮ್ಮಂಥವರ ಬಾಳಿನ ಕಣ್ಣಾಗಿ, ವಿಜಯದ ಸರಮಾಲೆಗಳೇ ಆಗಲಿ; ಇಷ್ಟೇ ನನ್ನ ಹಾರೈಕೆ.’’
ನೃತ್ಯಗಾರ್ತಿಯ ಡೈಯಲಾಗ್ ಇನ್ನೂ ಪೂರ್ಣವಾಗಿರಲಿಲ್ಲ. ಅಷ್ಟರಲ್ಲಿ ರಾಜನ ಧ್ವನಿಗಿಂತಲೂ ಗಂಭೀರವಾದ ಧ್ವನಿಯೊಂದು ಇಡೀ ಸನ್ನಿವೇಶವನ್ನು ಸೀಳಿಕೊಂಡು ಬಂತು. ಅದು ಆಜ್ಞೆ-
``ಕಟ್’’
``ಕಟ್’’

ಸ್ಟುಡಿಯೋದ ಲೈಟುಗಳು ಆರಿದವು. ರಾಜನ ಸಭೆ ಅರೆ ಮರೆ ಕಿತ್ತಿದ ನಾಟಕ ಗೃಹದಂತಾಯಿತು. ತಮ್ಮ ತಮ್ಮ ಕೈಯೊಳಗೆ, ತಾವು ಉಟ್ಟಿದ್ದ ಪಿತಾಂಬರ ಬಟ್ಟೆಗಳನ್ನು ಕಳೆದು, ಹಿಡಿದುಕೊಂಡು ಹೊರಟರು ನೃತ್ಯದ ಹೆಂಗಸರು. ಅವರವರೊಳಗೆ ಮಾತು, ಬೆವರು ಒರಿಸಿಕೊಳ್ಳುವ ಕ್ರಿಯೆ. ಇನ್ನ್ಯಾವಳದೊ ಕಿಬ್ಬೊಟ್ಟೆ ಕೆಳಗೆ ನೋವು, ರಾತ್ರಿಯಾಗುತ್ತಿದೆ, ಮನೆಮುಟ್ಟುವ ಚಿಂತೆ ಹೆಂಗಸರಿಗೆ. ಸಹ ನಟರು ಬಿಚ್ಚಿಟ್ಟ ಮೀಸೆ, ಗಡ್ಡ, ಒಳ ಚೊಡ್ಡಿಗಳನ್ನು ಎತ್ತಿ ಗುಪ್ಪೆ ಮಾಡಿಕೊಂಡು ಜ್ಯೂನಿಯರ್ ಅಸಿಸ್ಟೆಂಟ್ ಒಬ್ಬ ಮೇಕಪ್ ಕೋಣೆಗೆ ಹೋದ. ರಾಜ ಕಿರೀಟ ತೆಗೆದ, ಛೇ ಕಿರೀಟದೊಂದಿಗೆ ತಲೆಗೆ ಹಾಕಿಕೊಂಡ ವಿಗ್ ಎದ್ದೆ ಬಿಟ್ಟಿತು. ಈ ಕಿರೀಟವಿಲ್ಲದ ರಾಜನಿಗೆ ಸಿನಿಯರ್ ಮೇಕಪ್ ಮ್ಯಾನ್‌ನ ಮೇಲೆ ಎಲ್ಲಿಲ್ಲದ ಸಿಟ್ಟು. ಛಿ, ಈ ಎಲ್ಲ ಅಸಹ್ಯ ಅನುಭವಗಳಿಗೆ ಈ ಮೇಕಪ್ ಮ್ಯಾನರೇ ಕಾರಣ, ಅಲ್ವೆ? ಯಾರೋ ಕೂಗಿದರು, ರಾಜ ಹಿಂದೆ ನೋಡಿದ ``ಏ. ಏನ್ ಮಾಡ್ತಾ ಇದ್ದೀಯ? ಒಂದಿಷ್ಟಾದರೂ ಮೈ ಮೇಲೆ ಪ್ರಜ್ಞೆ ನಿನಗೆ, ವಿಗ್ ಬಗ್ಗೆ ಒಂದಿಷ್ಟಾದರೂ ಕಾಳಜಿ ಬೇಡವೆ? ಏ, ಮೂರ್ಖಾ ಹುಷಾರ್, ಆ ವಿಗ್‌ನ ಬೆಲೆ ಒಂದುನೂರಾ ಐವತ್ತು ರೂಪಾಯಿ. ಮಾರುಕಟ್ಟೆಯಲ್ಲಿ ನಿನ್ನನ್ನು ಮಾರಿದರೂ ಅಷ್ಟು ದುಡ್ಡು ಸಿಗಲಿಕ್ಕಿಲ್ಲ.’’
ಅನಿರೀಕ್ಷಿತವಾಗಿ ಬಂದ ಬೈಗುಳಳಿಗೆ ಅಂಜಿದ ರಾಜ ವಿಗ್‌ನ್ನು ಹಾಗೆಯೇ ತಲೆ ಮೇಲಿಟ್ಟುಕೊಂಡು ಸುಮ್ಮನೆ ಕುಳಿತ. ಆದರೆ ಭಯದಿಂದ ನರಳುತ್ತಿದ್ದ ಆತನ ಕೈಯಲ್ಲಿದ್ದ ಕಿರೀಟ ಕೆಳಗೆ ಬಿದ್ದಿತು. ಕಿರೀಟದಲ್ಲಿಯ ನಕಲಿ ವಜ್ರ ಹಾಗೂ ರತ್ನದ ಹರಳುಗಳು ಉಚ್ಚಿಬಿದ್ದು ಚೆಲ್ಲಾಪಿಲ್ಲಿಯಾದವು.
ಮೇಕಪ್ ಕೋಣೆಗೆ ಹೋಗಿ ರೇಷ್ಮೆ ಶರ್ಟ್, ಬಂಗಾರ ಮುದ್ರಿತಕ ಚಪ್ಪಲಿ, ರೇಷ್ಮೆಯ ಧೋತಿ ಕಳೆದು ಹಾಕಿ ಕಾಟನ್‌ದೊಳಗೆ ಹೊಲಿಸಿದ್ದ ಅಂಡರ್‌ವೇರ್ ಮೇಲೆ ಅರ್ಧ ಬೆತ್ತಲೆಯಾಗಿ ನಿಂತುಕೊಂಡ ರಾಜ. ಆತನ ಬನಿಯನ್ ಹಳೆಯದಾಗಿ, ಹಳದೀ ಬಣ್ಣಕ್ಕ ತಿರುಗಿ, ನೂರಾರು ತೂತುಗಳು ಬಿದ್ದಿವೆ. ಆತನ ಚಪ್ಪಲಿಗೆ ಉಂಗುಟವಿಲ್ಲ. ದೃಷ್ಟಿ ಮಂದವಾಗಿದ್ದ ಆತ ನಿತ್ರಾಣಗೊಂಡ ಕನ್ನಡಕ ಎತ್ತಿ ಹಾಕಿಕೊಂಡ. ಕಾಟನ್‌ಪ್ಯಾಡ್‌ಗಳಿಂದ ವಿಸ್ತೃತಿವಾಗಿದ್ದ ಆತನ ಭುಜಬಲ ಈಗ ಉಡುಗಿ, ಆತ ಸಾಮಾನ್ಯನಾದ. ಈಗ ಆತ ರಾಜನಲ್ಲ. ಬರೀ ಎಲುಬಿನ ಹಂದರದೊಳಗೆ ಜೀವ ಹಿಡಿದುಕೊಂಡ ಮನುಷ್ಯ. ಈಗ ಆತನಿಗೆ ಯಾವ ಮರ್ಯಾದೆ, ಗೌರವ, ಫರಾಕುಗಳು ಇಲ್ಲ. ಅಲ್ಲಿ ನಿಂತಿದ್ದಾನೆ ಒಬ್ಬನೆ ಹರುಕು ಬಟ್ಟೆಯೊಳಗೆ ಬಡವ.
ಗೋಡೆಯ ಗೂಟಕ್ಕೆ ನೇತುಹಾಕಿದ್ದ ತನ್ನ ಹರಿದ ಪ್ಯಾಂಟು, ಇಸ್ತ್ರೀ ಇಲ್ಲದ ನಿಲುವಂಗಿ ಎತ್ತಿಕೊಂಡು ಮೇಕಪ್ ಕೋಣೆಯಿಂದ ಆತ ಹೊರ ನಡೆದಾಗ ಆತ ಅಂದುಕೊಂಡ `ಈಗ ತಾನು ಯಾರು?’ ಸಂದರ್ಭ, ಸನ್ನಿವೇಶಗಳಿಗೆ ತಕ್ಕಂತೆ ನಿರ್ದೇಶಕನ ನಿರೀಕ್ಷೆಯ ಪ್ರಕಾರ ಎಕ್ಸಟ್ರಾ ಕಲಾವಿದರನ್ನು ಪೂರೈಸುವವನಿಂದ ದಿನಕ್ಕೆ ಹದಿನೈದು ರೂಪಾಯಿ ಸಂಭಾವನೆ ಪಡೆಯುವ ಸಾಮಾನ್ಯ, ತೀರ ಸಾಮಾನ್ಯ ಮನುಷ್ಯ ಅಷ್ಟೆ. ಎದುರಿಗೆ ಬಂದ ನಿರ್ದೇಶಕನಿಗೆ ದಯನೀಯವಾಗಿ ವಂದಿಸುತ್ತ ರಾಜ ಕೇಳಿದ. ``ಸ್ವಾಮಿ ನಾಳೆ ನನ್ನ ಪಾತ್ರವಿದೆಯೆ?’’
``ಇಲ್ಲ. ನಾಳೆ ನಿನ್ನ ಯಾವ ಸನ್ನಿವೇಶಗಳು ಇಲ್ಲ. ಅಂದಹಾಗೆ ನಾಳೆ ನಾವು ಮಲ್‌ಬಾರ್ ಗುಹೆಗಳ ಸೆಟ್ ಹಾಕಬೇಕು. ಒಬ್ಬ ದರೋಡೆಕೋರ ಹಾಗೂ ಅವನಿಗೆ ಹೊಂದುವ ಸಹ ಕಲಾವಿದರು ಸಾಕಷ್ಟೆ.’’ ನಿರ್ದೇಶಕ ಉತ್ತರಿಸಿದ ನಿರ್ಲಕ್ಷದಿಂದ.
``ಸರಿ, ಹಾಗಿದ್ದರೆ, ನಾಳೆ ದರೋಡೆಕೋರನ ಪಾತ್ರವನ್ನೂ ನಾನೇ ಮಾಡುತ್ತೇನೆ.’’ ರಾಜ ಬೇಡಿಕೊಂಡ ಭಯಭಕ್ತಿಯಿಂದ, `ಅಯ್ಯಾ ಈ ಇಡೀ ತಿಂಗಳು ನೀವು ಕೊಟ್ಟಿದ್ದಷ್ಟೆ ಕೆಲಸ ನನಗೆ. ನನ್ನೊಂದಿಗೆ ಇಬ್ಬರು ಮಕ್ಕಳು, ಹೆಂಡತಿ ಹಾಗೂ ಮುಪ್ಪಿನ ತಾಯಿಯಿದ್ದಾಳೆ.’’ ಆತನಗರಿವಿಲ್ಲದೆ ಆತನ ಕೆನ್ನೆಯ ಮೇಲೆ ಕಣ್ಣೀರು ಧಾರೆ ಇಟ್ಟವು.
``ಸ್ವಾಮಿ ಹಸಿವು, ಬಡತನ ನನ್ನನ್ನು ಹುಚ್ಚನನ್ನಾಗಿಸಿವೆ. ಕಳೆದ ಅನೇಕ ದಿನಗಳಿಂದ ಮನೆ ಬಾಡಿಗೆ ಕೊಟ್ಟಿಲ್ಲ. ತಾಯಿ ಔಷಧಿಗೆ ದುಡ್ಡಿಲ್ಲ. ಐವತ್ತು ರೂಪಾಯಿ ಮುಂಗಡ ಕೊಟ್ಟರೆ ತಾವು, ಅದು ತನಗೆ ಮಹದುಪಕಾರ. ಪುಕ್ಕಟೆಯಾಗಿ ಬೇಡ ಸ್ವಾಮಿ, ನಾನು ದುಡಿದಂತೆ ನೀವದನ್ನು ಮುರಿದುಕೊಳ್ಳಬಹುದು.’’ ಅಳುತ್ತಾ ರಾಜ ಕೇಳುತ್ತಲೇ ಇದ್ದ. ಅವನ ಮಾತುಗಳೆಲ್ಲ ಬರೀ ಸ್ವಗತ ಅಥವಾ ಬೆಟ್ಟದ ಮುಂದಿನ ಆಲಾಪ ಆಗಿತ್ತಷ್ಟೆ.
``ಇಲ್ಲ ಎಂದ ನಿರ್ದೇಶಕ. ಅವನ ಮಾತುಗಳಲ್ಲಿ ಕರುಣೆ ಇರಲಿಲ್ಲ.
``ಇಲ್ಲ, ಹೀಗೆಯೇ ಹೋದರೆ ಸಿನಿಮಾದ ತುಂಬಾ ರಾಜನೇ ಆದಾನು. ಅಂದ ಹಾಗೆ ಆಗಲೇ ಸಾಕಷ್ಟು ದೃಶ್ಯಗಳನ್ನು ಕತ್ತರಿಸಬೇಕಿದೆ. ಇದು ರಾಜರಯುಗವಲ್ಲ. ಶ್ರೀಸಾಮಾನ್ಯನ ಯುಗ’’ ಎಂದು ಮಾತು ಮುಗಿಸಿದ ನಿರ್ದೇಶಕ ಹೊರಟು ಹೋದ.
ರಾಜ, ಅಲ್ಲಲ್ಲಿ ಶ್ರೀಸಾಮಾನ್ಯ ಕಣ್ಣೀರು ಗರಿಯುತ್ತ ಕುಳಿತುಕೊಂಡ.
                                                                                       ಮೂಲ:ಕೆ.ಎ.ಅಬ್ಬಾಸ್(K A Abbas)
                                          ಕನ್ನಡಕ್ಕೆ:ಆರ್.ಜಿ.ಮಠಪತಿ(ರಾಗಂ)(R G Mathapati)                                                                                
                                                                                      


Friday, May 20, 2011

ನಿಶಾ-ಚರ

ನಿಶಾ-ಚರ


ಬರೀ ಬೆತ್ತಲಾಗಿ
ಕತ್ತಲಲ್ಲಿ ಬೆಳಕಂತೆ
ಮಲಗಿದ ಅವಳ
ತೊಡೆಯಲ್ಲಿ ಉರಿ
ಎದೆಯಲ್ಲಿ ಯಜ್ನಕುಂಡ
ಕಣ್ತುಂಬ ಕೋಲ್ಮಿಂಚು
ಕನಸೋ ಅವಳ ಎದೆಯ ಸಂಚು

ಅವಳ ಮಧ್ಯದ
ಮುಸ್ಸಂಜೆಯಲ್ಲಿ
ಮಿಂದವನ ಮಾತು ಶರಣಾಗಿ
ಮೌನದ ಕಣಿವೆಯಲ್ಲಿ
ಮಂತ್ರ ಪಠಿಸುತ್ತದೆ
ಆತ ಸಂತನಾಗುತ್ತಾನೆ

ಅವಳ ಜಘನಗಳ
ದಿಬ್ಬವೇರಿ
ನಿಂದವನ ಉಸಿರು ಹಸಿರಾಗಿ
ಆತ ಜಂಗಮನಾಗಿ
ಮಿಂಚಿನಂತೆ ಮಾಯವಾಗುವ
ಬದುಕು
ಮೋಕ್ಷ ಕಾಣುತ್ತದೆ

Saturday, May 7, 2011

ಸುಡುವ ಪ್ರೀತಿ, ತಂಪೆರೆವ ಸಾವು(LOVE)

                              ಸುಡುವ ಪ್ರೀತಿ, ತಂಪೆರೆವ ಸಾವು
ಸುಡುವುದು ಪ್ರೀತಿಯ ಗುಣ. ಅದು ಸುಡುತ್ತಲೇ ಹೊರ ಪುಟಿಯುವ ಚಿನ್ನ. ಈ  ಪ್ರೀತಿಗೊಂದು ತಾರ್ಕಿಕತೆ , ಸಂಸ್ಕಾರ, ಸಮಾಜ ಭಯ ಬೇಕೆಂದು ಹೇಳುವವರು ತಾವು ಅಸಹಜವಾದುದನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಮರೆಯಬಾರದು. ನಾನು ನಿಸರ್ಗದ ಮಗು ಹಾಗು ನಿಸರ್ಗದ ನಗು. ಈ ನಿಸರ್ಗದಲ್ಲಿರುವ ನದಿಗಳು  ಮೈದುಂಬಿ ಹರಿದು,ಮೇರೆಗಳನ್ನು ಕೊಡವಿ, ಅನಾಗರಿಕವಾದುದೆಲ್ಲವನ್ನು   ಮಾಡುತ್ತಲೇ ನಾಗರಿಕತೆಯ ತೊಟ್ಟಿಲುಗಳಾಗುತ್ತವೆ. ಇಂದು ನಾಗರೀಕತೆಯ    ತೊಟ್ಟಿಲುಗಳಾಗಿರುವ ನದಿಗಳೆಲ್ಲ ಒಂದು ಕಾಲಕ್ಕೆ ಅನಾಗರಿಕತೆಯ ಹಾದಿಯಲ್ಲಿ ಸಾಗಿ ಬಂದವುಗಳೇ. ಅಂತೆಯೇ ನಮ್ಮೊಳಗೇ ಹರಿಯುವ ಈ ಪ್ರೀತಿಯ ಕತೆಯೂ ಕೂಡಾ. ಅದು ಹರಿದದ್ದೇ ಭಂಗಿ, ನಡೆದದ್ದೇ ದಾರಿ. ಅದನ್ನು ನೀವು ಬಚ್ಚಿಡಲಾಗುವುದಿಲ್ಲ. ಕಾಮ ಮತ್ತು ಪ್ರೀತಿ ಕಲುಶಿತಗೊಂಡದ್ದು ನಮ್ಮ ವೈಚಾರಿಕತೆಯಿಂದಲೇ ವಿನಃ ಅವುಗಳೊಳಗಿನ ನಿಸರ್ಗ ಸಹಜ ಗುಣಗಳಿಂದಲ್ಲ. ತಂಪೆರೆವ ಸಾವಿಗೆ ಮೈಯೊಡ್ಡುವ ಮೊದಲು ಸುಡುವ ಪ್ರೀತಿಯೊಂದಿಗೆ ಒಂದಿಷ್ಟು ಪಿಸುಮಾತು ಅಪರಾಧ ಹೇಗೆ? ಸುಡುವ ಪ್ರೀತಿಯೊಂದಿಗೆ ಪಲಾಯನಗೈಯ್ಯುವವರಿಗೆ ಸಾವೂ ತಂಪೆರೆಯಲಾರದು. ಮಾಗಿಯ ಛಳಿಯ ಅನುಭವವಿಲ್ಲದ ವ್ಯಕ್ತಿ ಬೇಸಿಗೆಯ ಸುಖವನ್ನೂ ಅನುಭವಿಸಲಾರ.