Total Pageviews

Sunday, May 19, 2013

ಬೋಧಿ ನೆರಳಿನ ದಾರಿಯಲ್ಲಿ….




      ಬೋಧಿ, ಬೋಧಿಸತ್ವ ಮತ್ತು ಬುದ್ಧ ಇವು ಭಾರತದ ಒಟ್ಟು ಇತಿಹಾಸವನ್ನು ಆವರಿಸಿಕೊಂಡಿರುವ ಅಮೋಘ ಪದಗಳು. ಇವು ಒಬ್ಬ ಬುದ್ಧನನ್ನು ಗಿರಕಿ ಹೊಡೆದ ಆಲೋಚನೆಗಳು ಎಂದು ನಾವು ತಿಳಿದುಕೊಳ್ಳುವುದಾದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಬುದ್ಧನಾಗುವ, ಬುದ್ಧರಾಗುವ ನಿರಂತರ ಪ್ರಯತ್ನವೇ ಭಾರತೀಯ ಬದುಕಿನ ಒಟ್ಟು ಸೌಂದರ್ಯ. ವಯಸ್ಸು ಮತ್ತು ವ್ಯಕ್ತಿಗತ ತಾತ್ಕಾಲಿಕ ಅವಶ್ಯಕತೆಗಳಿಗಾಗಿ ಯಾವುದೇ ಮಿತಿಯೊಳಗೆ ನಿಂತು ಮಾತನಾಡಿದರೂ ಯಾವುದೋ ನಿರ್ದಿಷ್ಟ ಧರ್ಮ, ಚಿಂತನೆ, ಪಂಗಡಕ್ಕೆ ಒಳಗಾಗಿದ್ದರೂ ಅಂತಿಮ ಉದ್ದೇಶ ಮಾತ್ರ ಈ `ಭೋಧಿ ನೆರಳಿನ ದಾರಿ’ಯನ್ನು ಅರಸುವುದೇ ಆಗಿದೆ. ಚೆನ್ನಪಟ್ಟಣದ ಪಲ್ಲವ ಪ್ರಕಾಶನ ಹೊರತಂದ, 2012 ನೇ ಸಾಲಿನ `ತೇಜಸ್ವಿ ಕಟ್ಟೀಮನಿ ಪ್ರಶಸ್ತಿ’ಗೆ ಭಾಜನವಾದ ಗೆಳೆಯ ವಿಠ್ಠಲ ದಳವಾಯಿಯವರ ಕಾವ್ಯ ಸಂಕಲನ `ಭೋದಿ ನೆರಳಿನ ದಾರಿ’ ನನ್ನ ಈ ಮೇಲಿನ ವಾದದ ಒಟ್ಟು ತಿರುಳಾಗಿ ಮೂಡಿಬಂದಿದೆ. ಹೃದ್ಯ ಕಾವ್ಯದ ಪ್ರೀತಿಯ ಕವಿಯಾದ ದಳವಾಯಿ ಸಮಕಾಲೀನ ತಲ್ಲಣಗಳಾದ ಭೂ ಸ್ವಾಧೀನ, ಆತ್ಮವಂಚನೆಗೊಳಗಾಗುತ್ತಿರುವ ರೈತ ಸಮುದಾಯ, ಜಾಗತೀಕರಣಗಳನ್ನು ಕುರಿತು ಗಂಭೀರವಾಗಿ ಇಲ್ಲಿ ಕವಿತೆಗಳನ್ನು ಹೆಣೆದಿದ್ದಾರೆ. ದಲಿತ ಕಾವ್ಯದ ಸಿಟ್ಟು, ಒತ್ತಡ, ಹತಾಶೆಗಳ ಹಸಿ-ಹಸಿ ಭಾಷೆಗಳಿಂದ ಹೊರಬಂದು ಸಮಷ್ಠಿ ಪ್ರಜ್ಞೆಯ ಗಂಭೀರ ಕವಿಯಾಗಿ ಹೊರ ಹೊಮ್ಮಿದ್ದಾರೆ ಎನ್ನಲು ಅವರ ಎರಡು ಕವಿತೆಗಳ ಈ ಎರಡು ಪದ್ಯಗಳನ್ನು ನೋಡಿ-

ಹಗಲಿರಳು ದುಡಿದರೂ
ಹೊಸತಾಗದ ಬನಿಯನ್ನಿನಲ್ಲಿ
ಮೂಡಿದ ಭಾರತ ನಕಾಶೆ
ನನ್ನಪ್ಪನ ಕಪ್ಪು ಬೆನ್ನನ್ನು ಬೆತ್ತಲಾಗಿಸುತ್ತದೆ  (ಅಪ್ಪ ನೆನಪಾಗುತ್ತಿಲ್ಲ)
**************

ಅವಧೂತರ ಆತುಮಗಳು ಅಡ್ಡಾಡುವ
ಈ ಅವನಿಯಲ್ಲಿ ಕಾಲಿಡಲಾಗದಷ್ಟು
ಅವಮಾನ ಮರಾಮೋಸದ ಮಗ್ಗುಲ ಮುಳ್ಳೆದ್ದು
ರಕ್ತಸಿಕ್ತ ಹೆಜ್ಜೆಜಾಡು ಮೂಡಿದೆ  (ಅವಧೂತರ ನೆಲದಲ್ಲಿ)
***************

         ದಳವಾಯಿಯವರ ಮೊದಲ ಪದ್ಯ ರೈತನಾದ ತನ್ನ ತಂದೆಯನ್ನು ಕುರಿತೇ ಹಾಡಿದ್ದರೂ ಅದರೊಳಗಿನ ಹಸಿವು ಮತ್ತು ಬಡತನ ಮಾತ್ರ ಸರ್ವವ್ಯಾಪಿಯಾದವುಗಳು. ಈ ಸಾಲುಗಳು ತಟ್ಟನೆ ಒಂದು ಕ್ಷಣ ಸಿದ್ಧಯ್ಯ ಪುರಾಣಿಕರ `ಸಲಾಂ ಸಾಬ್’ ಪದ್ಯವನ್ನು ನೆನಪಿಸುತ್ತವೆ. `ಜಡ ತನುವಿಗಿರಬಹುದು, ಬಡತನಕ್ಕೆ ಕುಲವುಂಟೆ’ ಎಂದು ಮಾತನಾಡಿದ ಪುರಾಣಿಕರ ಜಾಡಿನಲ್ಲಿಯೇ ದಳವಾಯಿಯವರ `ಅಪ್ಪ ನೆನಪಾಗುತ್ತಿಲ್ಲ’ ಕವಿತೆ ಸಾಗಿ ಹೋಗುತ್ತದೆ. ಹಾಗೆಯೇ ಅವರ `ಅವಧೂತರು ನಡೆದ ನೆಲದಲ್ಲಿ’ ಕವಿತೆಯೂ ಕೂಡ. ಕವಿ ಬಿ.ಆರ್. ಪೋಲಿಸ ಪಾಟೀಲರ `ಎಂಥ ಚೆಂದಿತ್ತ ಹಿಂದೂಸ್ಥಾನ’ ಕವಿತೆಯನ್ನು ಈ ಕವಿತೆಯ ಪಕ್ಕದಲ್ಲಿಯೇ ಇಟ್ಟುಕೊಂಡು ಓದಬೇಕು. ಪಾಟೀಲರು ಲಾವಣಿಯ ಶೈಲಿಯಲ್ಲಿ ಹೇಳುತ್ತಾರೆ, `ತ್ಯಾಗಿ ಮಾಡಿದ ಮಂಚದ ಮ್ಯಾಲ ಗೂಗಿ ಕುಂತಾವಲ್ಲ, ಮೈಲಾರ ಲಿಂಗ’. ಇದನ್ನೇ ದಳವಾಯಿ `ಅವಧೂತರ ಆತುಮಗಳು ಅಡ್ಡಾಡುವ ... ...’ ಎನ್ನುವ ಸಮಕಾಲೀನ ಭಾಷೆಯಲ್ಲಿ ಪುನರುಚ್ಛರಿಸಿದ್ದಾರೆ.
       ಕಾವ್ಯದ ವಸ್ತು ಆಯ್ಕೆಯ ಸೂಕ್ಷತೆಯನ್ನು ಸೂಚಿಸುವ ದಳವಾಯಿಯವರ ಎರಡು ಕವಿತೆಗಳು `ಕಡಲ ತಡಿಯಲ್ಲೊಬ್ಬ ಬಡ ಜೋಗಿ’ ಹಾಗೂ `ಅವಸರವಿದ್ದರೂ’ . ಈ ಕೆಳಗಿನ ಪದ್ಯಗಳನ್ನು ಓದಿ-
ಒಲವಿನ ಮಾನಿನಿಯರೆ
ಸಾಕಿನ್ನು ಏಳಿ ಸೂರ್ಯಸ್ನಾನ
ಬಡಜೋಗಿಯು ನಾನು
ಒಂಚೂರು ಕೇಳಿ ಎದೆಯ ಗಾನ   (ಕಡಲ ತಡಿಯಲ್ಲೊಬ್ಬ ಬಡ ಜೋಗಿ)
****************

ಅದೆಷ್ಟೇ ಅವಸರವಿದ್ದರೂ
ಅಡ್ಡಾಡುವ ಕೋಳಿಮರಿ
ನೋಡಿಕೊಂಡೇ ಗಾಡಿ ಓಡಿಸು
ಗೆಳೆಯಾ
ಇರುವಂತೆಯೇ ದಾಟಿಸಲಾಗದು ಮುಟ್ಟಿಸಲಾಗದು
ಒಳ ಹುಟ್ಟಿ ಹೊರಳಾಡುವ ಹಸಿ ಮಾತುಗಳ  (ಅದೆಷ್ಟೇ ಅವಸರವಿದ್ದರೂ)
*******************
      
        ಕವಿ ವಿಠ್ಠಲ ದಳವಾಯಿಯವರ `ಬಡ ಜೋಗಿಯ ಹಾಡು’ ಅದೊಂದು ರೀತಿಯಲ್ಲಿ ಎದೆಯ ಗಾನ. ಊರ್ಜ್ವ ಸಂಸ್ಕೃತಿಯೊಂದಿಗೆ ಮುಖಾಮುಖಿ. ಸುಖ ಮತ್ತು ಶ್ರಮ ವರ್ಗಗಳ ಮಧ್ಯದ ವಾಗ್ವಾದ. ಕಾಸ್ಮೆಟಿಕ್ ಸಂಸ್ಕೃತಿಯನ್ನು ಧಿಕ್ಕರಿಸಿ ನೆಲಕ್ಕೆ ಬನ್ನಿ, ಮಹಲುಗಳನ್ನು ಮಗ್ಗಲಿರಿಸಿ ಮನುಷ್ಯರಾಗಲು ಕಾತರಿಸಿ ಎನ್ನುವ ವಿಚಾರಗಳನ್ನು ಆವರಿಸಿಕೊಂಡ ಮಹತ್ವದ ಕವಿತೆ.  ಹಾಗೆಯೇ ಎರಡನೆಯ ಕವಿತೆಯೂ ಕೂಡಾ. ಅದ್ಯಾವ ಓಟಕ್ಕೆ ಸಿಕ್ಕು ಸಂಸಾರದಲ್ಲಿ ಸಿಗುವ ಸಹಜ ಸುಖವನ್ನು ಮರೆತಿರುವನೋ ಮನುಷ್ಯ, ಅವನಿಗೊಂದಿಷ್ಟು ಸಾವಧಾನದ, ಸಮಾಧಾನದ ಸಿಂಚನ ಇಲ್ಲಿದೆ. ಷೇರ್ ಮಾರ್ಕೆಟು, ಕಾಂಕ್ರಿಟ್ ಕಟ್ಟಡಗಳು, ಚುನಾವಣಾ ಪ್ರಣಾಳಿಕೆಗಳು ಹೀಗೆ ಪ್ರಗತಿಯ ಹೆಸರಿನಲ್ಲಿ ಪಾಪಿಯಾಗುತ್ತಿರುವ ಮನುಷ್ಯನಿಗೆ `ಕೋಳಿ ಮರಿ ನೋಡಿಕೊಂಡೇ ಗಾಡಿ ಓಡಿಸು ಗೆಳೆಯಾ’ ಎಂದು ಹೇಳುವ ಮೂಲಕ ಸಮಾಜವನ್ನು ಮಾನವೀಯಗೊಳಿಸುವ ಮಹತ್ವದ ಕೆಲಸವನ್ನು ಕವಿ ಇಲ್ಲಿ ಪೂರೈಸಿದ್ದಾರೆ.

    ಸಂಕಲನದ ಶೀರ್ಷಿಕೆ ಪದ್ಯ `ಭೋಧಿ ನೆರಳಿನ ದಾರಿ’ ಮನುಷ್ಯನ ವಿವಶತೆಗೆ, ಹತಾಶೆಗೆ ಹಿಡಿದ ಕನ್ನಡಿ. ಈ ಸಾಲುಗಳನ್ನು ನೋಡಿ- 


ಕೆಲಸವಿಲ್ಲದಿದ್ದರೆ ನಿಮ್ಮ ಕೈ
ಜಾಲಿಮುಳ್ಳಿನ ಜಾತ್ರೆಯಲ್ಲಿ
ಜೋಲಿ ಹೊಡೆಯುವ ಕುರಿಗಳು
ಹುಲ್ಲುಗಾವಲು ಹುಡುಕಾಡುವ ಚಿತ್ರ
ನಿಮ್ಮ ಕಣ್ಣಿಗೆ ಖಾರದ ಬಣ್ಣ ತರುತ್ತದೆ 
      (ಭೋಧಿ ನೆರಳಿನ ದಾರಿ)
  
           ಇದು ಇಡೀ ಸಂಕಲನದಲ್ಲಿರುವ, ಜಾತಿ ಮತ್ತು ವರ್ಗ ಸಂಘರ್ಷವನ್ನು ಢಾಳು ಢಾಳಾಗಿ ಬಿಂಬಿಸುವ ಏಕೈಕ ಪದ್ಯ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೆಚ್ಚು ಪ್ರಸ್ತುತವೆನಿಸಬಹುದಾಗಿದ್ದ ಈ ಸಾಲುಗಳಲ್ಲಿ ಅದೇ ಕೇರಿ ಮತ್ತು ಉಚ್ಛ ಜಾತಿಗಳ ಮಧ್ಯದ ತಿಕ್ಕಾಟವನ್ನು ನೋಡಬಹುದಾಗಿದೆ. ಶೋಷಿತ, ಅವಮಾನಿತ, ತುಳಿತಕ್ಕೊಳಗಾದ ಜಾತಿಗಳ ಪ್ರತಿನಿಧಿಯಾಗಿ ಆಕ್ರೋಶದ ಮಾತನಾಡುವ ಕವಿ ದಳವಾಯಿ ತಮ್ಮ ಈ ಆಕ್ರೋಶವನ್ನು ಅತ್ಯಂತ ಯುನಿವರ್ಸಲ್ ಆಗಿ ಹೇಳುವ ಉತ್ತಮ ಪದ್ಯ ಅವರ `ಅಕಾಲ ಹಣು’್ಣ. ಕಾವ್ಯ ಕಟ್ಟುವಿಕೆಯ ಈ ಕವಿಯ ಸಾಮರ್ಥ್ಯಕ್ಕೆ ಸಾಕ್ಷಿ ಪದ್ಯದ ಈ ಎರಡು ಸಾಲುಗಳು-

ಹೌದು ನಾನು ಹಣ್ಣಾದೆ
ನೀನು ಉಣ್ಣದೆ ಮಣ್ಣಿಗೆಸೆದೆ   (ಅಕಾಲ ಹಣ್ಣು)


         ಇಲ್ಲಿ ಆಲೋಚಿಸಿದಷ್ಟು ಅರ್ಥಗಳು, ಮನಸ್ಸು ಮತ್ತು ಮನುಷ್ಯನ ಆಲೋಚನೆಗಳು ಹೊರಳಿದಷ್ಟು ಅರ್ಥದ ಹೊಸ ಪದರುಗಳು. ಸ್ತ್ರೀ ವಾದವನ್ನು ಒಳಗೊಂಡು ಅಧ್ಯಾತ್ಮಿಕ ಅನುಭವಗಳವರೆಗೂ ಅರ್ಥ ಸಾಧ್ಯತೆಗಳನ್ನು ಹೊರಹೊಮ್ಮಿಸುವ ಶಕ್ತಿ ಈ ಪದ್ಯಕ್ಕಿದೆ. ಕವಿ ಹೇಳಿಕೊಂಡಂತೆ ಪುಟ್ಟ ಜೀವವೊಂದರ ಆಕಸ್ಮಿಕ ಸಾವಿನ ಹಿನ್ನೆಲೆಯನ್ನಿಟ್ಟುಕೊಂಡು ಈ ಕವಿತಯನ್ನು ಬರೆದಿದ್ದರೂ ಸಾವಿನಷ್ಟೇ ಸರ್ವವ್ಯಾಪಿ ಮತ್ತು ಸಾರ್ವತ್ರಿಕ ವೈಶಾಲವನ್ನು ಸಾಧಿಸಿವೆ, ಸಿದ್ಧಿಸಿವೆ. ಹೀಗೆ ಸಂಕಲನದುದ್ದಕ್ಕೂ ಹರಳುಗಟ್ಟುವ ಅದೆಷ್ಟೋ  ಅನುಭವಗಳನ್ನು `ಭೋಧಿ ನೆರಳಿನ ದಾರಿ’ಯಲ್ಲಿ ಕಾವ್ಯಾಸಕ್ತರು ಪಡೆಯಬಹುದಾಗಿದೆ.

        ಬಡತನವನ್ನು ಚಿಂತಿಸುತ್ತ ಹುಟ್ಟಿನಿಂದ ತನಗೆ ಬಂದ ಕಪ್ಪುಕಪ್ಪಾದ ವರ್ಣದ ಬಗ್ಗೆ ಹಿಂಜರಿಯುತ್ತ ನಮ್ಮ ದಲಿತ ಕವಿಗಳು ಪ್ರೇಮದಂತಹ ಅನುಭವಗಳಿಂದ ಮತ್ತು ಅವುಗಳಿಗೆ ತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಿ ಕೊಡುವುದರಿಂದ ದೂರವೇ ಉಳಿದರು ನಮ್ಮ ಕುಂವೀ ಅವರ ವಾದ. ಆದರೆ ಇದಕ್ಕೆ ಅಪವಾದ ಕವಿ ವಿಠ್ಠಲ ದಳವಾಯಿ. ಅವರ ಈ ಅಪವಾದವೇ ಈ ಪಂಥದ ಕವಿಗಳಿಂದ ಅವರನ್ನು ಒಂದು ಹೆಜ್ಜೆ ಮುಂದೊಯ್ದು ನಿಲ್ಲಿಸುವುದು ಕೂಡ. ಅವರ ಈ ಸಂಕಲನದ `ಕಪ್ಪು ದಾಸವಾಳದ ಕನವರಿಕೆ’ ನಾವೆಲ್ಲ ಓದಲೇಬೇಕಾದ ಮಹತ್ವದ ಪ್ರೇಮಗೀತೆ. 


ಸಾಲಿಯ ಬೀದಿಯಲಿ
ನಿನ್ನ ನಗುವಿನ ಬಸಿರ ಹೊತ್ತು
ಹೂ-ಹಣ್ಣು ಹೆತ್ತ ಮರ
ನನ್ನ ಕಂಡೊಡನೆ ತಲೆತಗ್ಗಿಸುತ್ತದೆ
ನನ್ನಾಳದ ಅಳಲಿಗೆ ತೊಳಲುವ
ಕೃತಜ್ಞತೆಗೆ ಎರಡು ಕಂಬನಿ ಮೀಸಲಿವೆ
ಸೇತುವೆ ಮರದ ಪಥದಲಿ
ಸರಿದು ಹೋದ ನೀನು
        ಹೊರಳಿ ನಿರುಕಿಸುವುದು ಸರಿಯೇನು ಸಖಿ?
  ಅಮವಾಸೆ ನಾನು
            ನನ್ನ ಬೆಳದಿಂಗಳ ರಾತ್ರಿಗಳ ಹೇಗೆ ಹೇಳಲಿ ಸಖಿ?  
  (ಕಪ್ಪು ದಾಸವಾಳದ ಕನವರಿಕೆ)

            `ಭೋಧಿ ನೆರಳಿನ ದಾರಿ’ ಒಂದು ಉತ್ತಮ ಕಾವ್ಯ ಸಂಕಲನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನೊಂದು ಅತ್ಯುತ್ತಮ ಸಂಕಲನವನ್ನಾಗಿ ಇನ್ನೂ ಮಾಡಬಹುದಿತ್ತಲ್ಲವೇ? ಎನ್ನುವ ಪ್ರಶ್ನೆಯನ್ನು ಕವಿ ಹಾಕಿಕೊಳ್ಳುವುದಾದರೆ ಈಗ ಬಳಸಿರುವ ಪದಗಳ ಅರ್ಧ ಸಂಖ್ಯೆಯಲ್ಲಿಯೇ ಈ ಸಂಕಲನವನ್ನು ಇನ್ನೂ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಿತ್ತು. ಪದವೇ ಕವಿತೆಗೆ ದಾರಿಯಾಗಿರುವಂತೆ ಅದುವೇ ತಪ್ಪಿದಲ್ಲಿ ಕಾವ್ಯದ ಒಟ್ಟೂ ಸೌಂದರ್ಯಕ್ಕೆ ಭಂಗ ಎನ್ನುವುದು ಕೂಡ ತಿಳಿದುಕೊಳ್ಳುವುದು ಮುಖ್ಯ. ಉದಾಹರಣೆಗೆ `ಅವಧೂತರು ನಡೆದ ನೆಲದಲ್ಲಿ’ ಬದಲಾಗಿ `ಅವಧೂತರ ನೆಲದಲ್ಲಿ’ ಸಾಕಾಗಿತ್ತು. ಮತ್ತೊಂದು ಕಡೆ `ಅಮವಾಸೆ ನಾನು ನನ್ನ ಬೆಳದಿಂಗಳ ರಾತ್ರಿಗಳ ಹೇಗೆ ಹೇಳಲಿ ಸಖಿ?’ ಎನ್ನುವ ಬದಲಾಗಿ `ಅಮವಾಸೆ ನಾನು, ಬೆಳದಿಂಗಳ ಹೇಗೆ ಹೇಳಲಿ ಸಖಿ’ ಎನ್ನಬಹುದಿತ್ತು. ಹೀಗೆ ಸಂಕಲನದುದ್ದಕ್ಕೂ ಹತ್ತಾರು ಉದಾಹರಣೆಗಳ್ನ್ನು ಎತ್ತಿಕೊಳ್ಳಬಹುದು. ಖಂಡಿತ ಈ ಅಭಿವ್ಯಕ್ತಿ ಪ್ರೌಢಿಮೆಯನ್ನು ತಮ್ಮ ಮುಂದಿನ ಸಂಕಲನಗಳಲ್ಲಿ ಕವಿ ದಳವಾಯಿ ಸಾಧಿಸುತ್ತಾರೆ ಎಂದು ಆಶಿಸುತ್ತೇನೆ.