Total Pageviews

Thursday, June 6, 2013

ಗೊಡ್ಸೆ ಕೊಂದಿದ್ದು ಯಾರನ್ನು?

 
      ಇತ್ತಿಚಿಗೆ ನಾನು ಓದಿದ ಡಾ.ರಾಜಶೇಖರ ಮಠಪತಿಯವರ(ರಾಗಂ) ಅವರ `ಗಾಂಧಿ: ಅಂತಿಮ ದಿನಗಳು’, ಹಾಗೂ ` ಗಾಂಧಿ: ಮುಗಿಯದ ಅಧ್ಯಾಯ’ ಇವು ವಿಭಿನ್ನ ದೃಷ್ಟಿಕೋನದ ವಿಶಿಷ್ಟ ಕೃತಿಗಳಾಗಿವೆ. ಗಾಂಧಿಯ ಸುತ್ತ ಹುತ್ತಗಟ್ಟಿರುವ ಮಿಥ್‍ಗಳನ್ನು ಒಡೆದು ಮಾನವೀಯ ತುಡಿತ ಮಿಡಿತಗಳಿಂದ ಸರಿಪಡಿಸಿ ಮಿಡಿವ ಹಾಗೆ ಮಿಡಿಯುತ್ತಲೇ ಓದುಗರ ಉಸಿರಿನೊಂದಿಗೆ ಒಂದಾಗಿಬಿಡುವ ಗಾಂಧಿಯೊಳಗಿನ ಅಸಹಾಯಕ ಗಾಂಧಿಯನ್ನು ಭೇಟಿಯಾಗುತ್ತೇವೆ. ಮಠಪತಿಯವರ ಅತ್ಯಪೂರ್ವ ವಾಸ್ತವ ಓಳನೋಟಗಳಿಂದ ಕೂಡಿದ ಈ ಎರಡು ಕೃತಿಗಳು ನಿಸ್ಸಂದೇಹವಾಗಿ ಅಪರೂಪದ ಕೃತಿಗಳಾಗಿವೆ. 
            ಈ ಕೃತಿಗಳನ್ನು ಓದಿದಂತೆ ದೂರದ ಗಾಂಧಿ ನಮಗೆ ಹತ್ತಿರವಾಗುತ್ತಾರೆ. ಹಾಗೆ ಹತ್ತಿರವಾಗುತ್ತಲೇ ಜನರ ನಾಡಿ-ಮಿಡಿತಗಳೊಂದಿಗೆ ಆಪ್ತವಾಗಿ ಮಿಡಿಯುತ್ತಾ ಒಳಚಿಂತನೆಗೆ ಪ್ರೇರೆಪಿಸುತ್ತಾರೆ. ಏಕೆಂದರೆ ಎರಡೂ ಕೃತಿಗಳು ಗಾಂಧಿಯ ಅಂತಿಮ ದಿನಗಳ ಅಸಹಾಯಕ ಸಂಕೀರ್ಣ ಓಳನೋಟಗಳ ಜೇನುಗೂಡಾಗಿವೆ. ರಾಗಂ ತಮ್ಮ ಸರಾಗವಾದ ಸರಳ ಶೈಲಿಯಲ್ಲಿ ಗಾಂಧಿ ಅಂತಿಮ ದಿನಗಳಲ್ಲಿ ಎದುರಾದ ಸಂದಿಗ್ದಗಳನ್ನು ಹಿಡಿದುಕೊಟ್ಟು ಓದುಗರ ಕುತೂಹಲವನ್ನು ಕೆರಳಿಸುತ್ತಾರೆ. ಅವರ ಈ ಚುಂಬಕ ಶಕ್ತಿಯ ಅಭಿವ್ಯಕ್ತಿಯಿಂದಾಗಿ ಗಾಂಧಿಯ ಅಸಹಾಯಕತೆಯ ಕುರಿತು ಓದುಗನನ್ನು ಮತ್ತೆ ಮತ್ತೆ ಚಿಂತನೆಗಿಡು ಮಾಡುತ್ತದೆ. ಅಭಿವ್ಯಕ್ತಿಯ ಶೈಲಿ ಅವ್ರ ಕೈಲಿ ಹೊಸ ಮೈಲಿಗಲ್ಲನ್ನು ತೆರೆದಿದೆ. ಬರವಣಿಗೆಯ ಓಘವಂತೂ ಅಮೋಘ.
         ನಿಸರ್ಗ ನಿಗೂಢಶಕ್ತಿಗಳ ಅಗಣಿತ ಗಣಿ. ಹೆಕ್ಕಿದಷ್ಟೂ ಉಕ್ಕುವ ಅದರ ಉತ್ಸಾಹಕ್ಕೆ ಕೊನೆ ಇಲ್ಲ. ಅದು ತನ್ನನ್ನು ತಾನು ಪ್ರಕಟಿಸಿಕೊಳ್ಳಲು ಹವಣಿಸುತ್ತದೆ. ದಾರ್ಶನಿಕರನ್ನು, ಮಹಾನ್ ಸಾಹಿತಿಗಳನ್ನು, ವಿಜ್ಞಾನಿಗಳನ್ನು, ಸಾಹಸಿಗರನ್ನು, ಅದ್ಭುತ ಸಂಗೀತಜ್ಞರನ್ನು, ಕಲಾವಿದರನ್ನು, ಶಿಲ್ಪಿಗಳನ್ನು ಆಯ್ಕೆಮಾಡಿಕೊಂಡು ತನ್ಮೂಲಕ ಹೊರಹೊಮ್ಮುತ್ತದೆ. ಅಂತಹ ಆಯ್ಕೆಗಳಲ್ಲಿ ಗಾಂಧಿಯೂ ಒಬ್ಬರು.
ನಿಜ, ಅದು ಗಾಂಧಿಯನ್ನು ಆಯ್ಕೆ ಮಾಡಿಕೊಂಡು ಜಗತ್ತಿಗೆ ಕರುಣಿಸಿದ ಕಾಣ್ಕೆ ಯಾವುದು? ಆ ಕಾಣ್ಕೆಗಳು ಹಲವಾದರೂ ಪ್ರಧಾನವಾಗಿ ಕಣ್ಮುಂದೆ ಕಡೆದು ನಿಲ್ಲುವುದು ಅಹಿಂಸೆ ಹಾಗೂ ಅಚ್ಚಳಿಯದ ಮಾನವ ಪ್ರೀತಿ.
ಗಾಂಧಿ ಅಹಿಂಸೆಯ ಪ್ರತಿರೂಪವಾಗಿದ್ದರೂ ಅವರು ತಮ್ಮೊಳಗೆ ಅನುಭವಿಸಿದ ಹಿಂಸೆಯ ಸ್ವರೂಪ ಅತ್ಯಂತ ಸೂಕ್ಷ್ಮವಾದುದು, ಸಂಕೀರ್ಣವಾದುದು. ಅಳತೆಗೆಟುಕದ ಅದರದು ಸಾಗರದ ಆಳ. ಆಕಾಶದ ಅಗಲ. ಇದು ಎಲ್ಲ ಸೂಕ್ಷ್ಮ ಜೀವಿಗಳೂ ಅನುಭವಿಸಲೇಬೇಕದ ಅನಿವಾರ್ಯತೆ ಎಂಬ ಸತ್ಯವನ್ನು ಸಾರುತ್ತದೆ. ನಾವು ಯಾವ ಗಾಂಧಿಯನ್ನು ನೋಡಬೇಕು? ಅರೆಬೆತ್ತಲಾಗಿ ಪ್ರಪಂಚದ ಉದ್ದಗಲ ಓಡಾಡಿದ ಆತನ ಬೆತ್ತಲೆ ಎದೆಯನ್ನೇ? ಅಥವಾ ಮಾನವ ಪ್ರೀತಿಯನ್ನೇ ಎದೆಯ ತುಂಬಾ ತುಂಬಿಕೊಂಡು ಅಹಿಂಸೆಯ ಆಗರವಾಗಿದ್ದ ಒಳ ಎದೆಯ ಗಾಂಧಿಯನ್ನೇ? ಎರಡನ್ನೂ ನೋಡಬೇಕು. ನೋಡಿ, ಅವು ಕರುಣಿಸಿದ ಕಾಣ್ಕೆಯನ್ನು ಕಂಡು ಅಪ್ಪಬೇಕು. ಬೆತ್ತಲಾಗಿದ್ದ ಆತನ ಹೊರ ಎದೆ ಕರುಣಿಸಿದ್ದು  ಸರಳತೆಯನ್ನಾದರೆ ಆತನ ಒಳ ಎದೆ ಕರುಣಿಸಿದ್ದು ಸಾರ್ವಕಾಲಿಕ ಸತ್ಯವನ್ನು. ಗಾಂಧಿಯ ಹೆಗ್ಗಳಿಕೆ ಎಂದರೆ ಆತ ಕ್ರೌರ್ಯವನ್ನು ಕರುಣೆಯನ್ನಾಗಿ ಪರಿವರ್ತಿಸಬಲ್ಲ, ಅತ್ಯಂತ ಕಠಿಣ ಎನ್ನುವ ಉಕ್ಕನ್ನೂ ಹೂವಾಗಿಸಬಲ್ಲ, ಅದುವರೆಗೂ ಜಗತ್ತು ಕಂಡರಿಯದ ವಿನೂತನ ಚುಂಬಕ ಶಕ್ತಿ. ಮನುಕುಲ ಬದುಕಿ ಉಳಿಯಬೇಕಾದರೆ ಗಾಂಧಿಯ ಈ ಕಾಣ್ಕೆಗಳನ್ನು ಅರಗಿಸಿಕೊಳ್ಳಬೇಕಾದುದು ಅನಿವಾರ್ಯ.
       ಜಗತ್ತಿಗೆ ಬಂದ ದಾರ್ಶನಿಕರು ಎರಡು ದುರಂತಗಳಿಗೆ ಒಳಗಾಗಿಬಿಡುತ್ತಾರೆ. ಒಂದೋ ಆರಾಧನೆಗೆ ಇಲ್ಲಾ ಅವಜ್ಞೆಗೆ. ಇದು  ಮಾನವ ಇತಿಹಾಸದ ಕಟು ವ್ಯಂಗ್ಯ. ಭಾರತೀಯ ಮನಸ್ಸೆಂಬುದಂತೂ ಅರಿತು ಆಚರಿಸುವ ಗುಣದ್ದಲ್ಲ, ಬದಲಿಗೆ ಪೂಜಿಸುವುದು ಇಲ್ಲ ತ್ಯಜಿಸಿಬಿಡುವುದು ಅದರ ಹುಟ್ಟುಗುಣ. ದಿನಕಳೆಂದಂತೆ ಗಾಂಧಿ ಈ ಎರಡೂ ದುರಂತಗಳಿಗೆ ಬಲಿಯಾಗುತ್ತಿದ್ದಾರೆ.
       ಬಂದೂಕಿನ ಬಲ ಹೊಂದಿದ್ದ ಬ್ರಿಟಿಷರನ್ನು ಒಲಿಸಿಕೊಂಡ ಗಾಂಧಿಯ ಶಕ್ತಿಗೆ ಭಾರತದ ಹಿಂದೂ-ಮುಸ್ಲಿಂ ನಡುವಿನ ಬಿರುಕನ್ನು ಬೆಸೆಯಲಾಗಲಿಲ್ಲ. ಕಾರಣ ಬ್ರಿಟಿಷರ ನಡೆ ಅರಿವಿನದ್ದಾದರೆ ಭಾರತೀಯರ ನಡೆ ಅಮಲಿನದು. ಧರ್ಮದ ಅರಿವಿನಿಂದ ದೂರವಾದ ಹಿಂದೂ-ಮುಸ್ಲಿಂ ಮನಸ್ಸುಗಳು ಮತೀಯ ಅಮಲನ್ನು ಅಪ್ಪಿ ಹಿಡಿದಿದ್ದವು. ಅಪ್ಪಿ-ತಪ್ಪಿಯೂ ಆ ಅಮಲಿನ ಅಪ್ಪುಗೆಯಿಂದ ಹೊರಳಲಿಲ್ಲ. ಗಾಂಧಿ ತನ್ನ ಅಂತಿಮ ದಿನಗಳಲ್ಲಿ ಅಡಿಯಿಂದ ಮುಡಿವರೆಗೆ ಅನುಭವಿಸಿದ್ದು ಈ ಮತೀಯ ಸಂಘರ್ಷದ ಕಹಿ ಒಂದಾದರೆ ಮತ್ತೊಂದು ಚರಕವನ್ನು ಬೆಂಬಲಿಸುತ್ತಲೇ `ಬೃಹತ್ ಗಿರಣಿಗಳನ್ನು ತಮ್ಮ ಅಂತರಂಗದಲ್ಲಿ ಅಪ್ಪಿ ಹಿಡಿದಿದ್ದ ಸ್ವಾರ್ಥ ಹಿಂಬಾಲಕರನ್ನು . ಅಧಿಕಾರವನ್ನೇ ಆತ್ಮವಾಗಿಸಿಕೊಂಡಿದ್ದ ಈ ಹಿಂಬಾಲಕರು ಭಾರತೀಯ ಹೃದಯವನ್ನು ಛಿದ್ರಗೊಳಿಸುವಲ್ಲಿ ಹಿಂದೆ-ಮುಂದೆ ನೋಡಲಿಲ್ಲ.
    ಗಾಂಧಿಯದು ಎಲ್ಲವೂ ಸರಿ ಎಂದಲ್ಲ. ಆದರೆ ವಿಶ್ವವ್ಯಾಪಕವಾದ ಅವರ ಮಾನವೀಯ ಹೃದಯದ ಪ್ರೀತಿಯನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತೆಯೂ ಇಲ್ಲ. ವಿಶ್ವ ಭಾತೃತ್ವವನ್ನು ಬಿತ್ತಲೆತ್ನಿಸಿದ ಅವರ ಅಹಿಂಸಾತತ್ವ ಹಿಂಸೆಯಿಂದಲೇ ಅಂತ್ಯಗೊಂಡಿದ್ದು ಒಂದು ದುರಂತವೇ ಸರಿ. ಸರ್ವಧರ್ಮಗಳನ್ನು ಸಮಾನವಾಗಿ ಪ್ರೀತಿಸಿ, ನಿರಾಶ್ರೀತರಿಗೆ ಆಶ್ರಯವನ್ನು ನೀಡಿದ ಹಾಗೂ ನೀಡುತ್ತಿರುವ ಸರ್ವಧರ್ಮ ಸಮನ್ವಯದ ಒಂದು ರಾಷ್ಟ್ರ ಭೂಮಿಯ ಮೇಲಿದ್ದರೆ ಅದು ಭಾರತ ಒಂದೇ. ಅದರ ಆ ಹೃದಯ ವೈಶಾಲ್ಯತೆಯನ್ನು ಮತೀಯ ಕತ್ತಲೆ ಮತ್ತೆ ಕಬಳಿಸದಿರಲಿ ಎಂಬ ಎಚ್ಚರವನ್ನು ಈ ಕೃತಿಗಳು ಕರುಣಿಸುತ್ತವೆ.
        ಇತಿಹಾಸವನ್ನು ಅಮೂಲಾಗ್ರ ಅರಿತಿದ್ದ ವಿವೇಕಾನಂದರು,` ಸ್ವಮತಾಭಿಮಾನ, ಅನ್ಯಮತ ದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುಕಾಲದಿಂದಲೂ ಆವರಿಸಿಕೊಂಡಿರುವುದು. ಹಲವು ವೇಳೆ ನರರಕ್ತದಿಂದ ತೋಯಿಸಿರುವುದು. ಸಂಸ್ಕೃತಿಯನ್ನು ನಾಶಮಾಡಿರುವುದು. ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುದು. ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೇ ಇದ್ದರೆ ಮಾನವ ಜನಾಂಗ ಇಂದೆಂದಿಗಿಂತಲೂ ಎಷ್ಟೋ ಮುಂದುವರೆದು ಹೋಗಬೇಕಾಗಿತ್ತು.’ ಎಂದು ವಿಶ್ವವೇದಿಕೆಯಲ್ಲಿ ಮೊಳಗಿಸಿದ ಎಚ್ಚರದ ನುಡಿಗಳು ಮತೀಯ ಅಮಲಿನ ಈ ಹುಚ್ಚರನ್ನು ಎಚ್ಚರಿಸಲಾಗಲಿಲ್ಲ. ಹೀಗಾಗಿ ಗಾಂಧಿ, ಅಹಿಂಸೆಯನ್ನು ಜಗತ್ತಿಗೆ ಸಾರಿದ ಗಾಂಧಿ ಅಂತಿಮವಾಗಿ ಗೋಡ್ಸೆಯ ಗುಂಡಿಗೆ  ತೆತ್ತರು. 

       ಗಾಂಧಿಯ ಸಾವು ಎಂತಹ ಸಾವು? ` ನಾನು ರಾಜಕೀಯ ವೇಷ ಧರಿಸಿದ್ದರೂ ನಿಜವಾಗಿಯೂ ಅಂತರಂಗದಲ್ಲಿ ಧಾರ್ಮಿಕ ವೃತ್ತಿಯವನು’ ಎಂದು ಗಾಂಧಿ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ದಾರ್ಶನಿಕ ಗಾಂಧಿಯೊಳಗೆ ಅಪೂರ್ಣ ರಾಜಕೀಯ ವ್ಯಕ್ತಿತ್ವದ ಗಾಂಧಿ ಸೇರಿಕೊಂಡು ಅತ್ತ ಬುದ್ಧನ ಪರಿಪೂರ್ಣ ದಾರ್ಶನಿಕ ವ್ಯಕ್ತಿತ್ವವಾಗಲಿ ಇಲ್ಲಾ ಮಾವೋತ್ಸೆ ತುಂಗನ ರಾಜಕೀಯ ಮುತ್ಸದ್ಧಿತನವಾಗಲೀ ಇಲ್ಲದೇ ಗಾಂಧಿ ಅಪೂರ್ಣವಾಗಿ ನಿಲ್ಲುತಾರೆ. ಹೀಗಾಗಿ ಗೋಡ್ಸೆ ಕೊಂದದ್ದು ರಾಜಕೀಯ ಗಾಂಧಿಯನ್ನೋ ಇಲ್ಲಾ ದಾರ್ಶನಿಕ ಗಾಂಧಿಯನ್ನೋ? ರಾಜಕೀಯ ಗಾಂಧಿಯ ಕೊಲೆಯಾಗಿದ್ದರೆ ಅದು ದುರಂತ. ದಾರ್ಸನಿಕ ಗಾಂಧಿಯ ಕೊಲೆಯಾಗಿದ್ದರೆ ಅದು ಅಮರ. ಇಬ್ಬರ ಕೊಲೆಯಾಗಿದ್ದರೆ ಅದು ಇತಿಹಾಸದ ವ್ಯಂಗ್ಯ.
ಸಂಕೀರ್ಣ ಮನಸ್ಸಿನ ಈ ಗಾಂಧಿ ಜನಕ್ಕೆ ಅರ್ಥವಾಗಲೇ ಇಲ್ಲ. ಆತ ತನ್ನ ಅಂತಿಮ ದಿನಗಳಲ್ಲಿ ಪಟ್ಟ ಪರಿಪಾಟಲುಗಳನ್ನು ಡಾ.ರಾಜಶೇಖರ ಮಠಪತಿಯವರು ಮನ ಕಲುಕುವಂತೆ, ಹೃದಯ ಅಲುಗುವಂತೆ ತಾಯಿ ಪ್ರೀತಿಯ ಭಾಷೆಯಲ್ಲಿ ಕಡೆದುಕೊಟ್ಟಿದ್ದಾರೆ. ಯಾರೇ ಆಗಿರಲಿ ಅವರು ನೆಲ ಸೇರುವ ಮುನ್ನ ಓದಿದರಾದರೆ ಅವರಿಗೆ ಅದರ ಫಲ, ಇಲ್ಲವಾದರೆ ವಿಫಲ.

ಹಾಸನ                                                                                                 ಜಹೊನಾ
30-50-13                                                                                    ಮೊ-948037033
ಜ.ಹೊ. ನಾರಯನಸ್ವಾಮಿ
†064ಅ,`ಮಾನವ’
ಉತ್ತರ ಬಡಾವಣೆ
ಹಾಸನ