Total Pageviews

Sunday, March 9, 2014

ಕನ್ನಡದ ದೈವ, ಸಂಭ್ರಮ ಮತ್ತು ಜಾತ್ರೆ

“ಜಂಬುಖಂಡೆಯ ಎಪ್ಪತ್ತರ ಸೀಮೆಯ ಮುಧವಳಲು ರನ್ನನ ಜನ್ಮಸ್ಥಳ.” 

“ಕೊಂಡು ತಂದು, ಹೊತ್ತು ಮಾರಿ ಹಣ ಗಳಿಸಲು ವಿದ್ಯೆಯೇನು ಬಳೆಯ ಮಾಲಾರವೆ?”
       ಇವು ರನ್ನನನ್ನು ಕುರಿತು ನಾನು ಐದನೆಯ ಇಯತ್ತೆಯಲ್ಲಿದ್ದಾಗ ಓದಿದ ಸಾಲುಗಳು. ಒಂದು ಸಾಕ್ಷಿಗಲ್ಲಿನಂತೆ ನಿಂತ ರನ್ನನ ಜನ್ಮಸ್ಥಳವಾದ ಈ ಮುಧೋಳನ್ನು ಬಳಸಿಕೊಂಡೇ ನನ್ನ ನಾಲ್ಕುವರೆ ದಶಕಗಳ ಬಾಳನ್ನು ಕಳೆದಿದ್ದೇನೆ.ಇಲ್ಲಿ ನಿಂತು ಮಾತನಾಡುತ್ತಿರುವುದು, ಅದು ಸಾರ್ವಜನಿಕವಾಗಿ ಮಾತನಾಡುತ್ತಿರುವುದು, ಸಾಹಿತ್ಯದೊಂದಿಗೆ ಸಂವಾದಿಸುತ್ತಿರುವುದು ಇದೇ ಮೊದಲ ಬಾರಿ. ಕೆಲವು ತಿಂಗಳಗಳ ಹಿಂದಷ್ಟೆ ನನ್ನ ತಮ್ಮನಾದ ಪೈಲವಾನ್ ರತ್ನಕುಮಾರ ಮಠಪತಿ ಮುಧೋಳದ ವಿಶಾಲ ರನ್ನ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟಕನಾಗಿ ಪಾಲ್ಗೊಂಡರೆ, ಇಂದು ನಾನು ಪಾಲ್ಗೊಂಡಿರುವುದು ಸಾಹಿತಿಯಾಗಿ. ಜಾಗತೀಕರಣ ಮತ್ತು ಕನ್ನಡದ ಅಸ್ಮಿತೆ ಇದು ನನ್ನ ಈ ದಿನದ ಭಾಷಣದ ವಿಷಯ. ಅಂದಹಾಗೆ ಅದು ಫೆಬ್ರುವರಿ 23, 2014.
  ಮುಂಜಾನೆ ಮುಧೋಳದಲ್ಲಿ ಕಾಲಿಟ್ಟಾಗ  ಮೊದಲ ಫೋನ್ ನನ್ನ ಪ್ರೀತಿಯ ಕವಿ, ಶಂಕರ ಕಟಗಿಯವರದು. ಅವರು ನನ್ನ ಪಾಲಿಗೆ ಸಂಪಿಗೆ ತಾಯವ್ವ, ಗಣಿಯ ನಾದ, ದಟ್ಟಿದಾವಣಿ ಎಲ್ಲವೂ. ಮೊದಲ ಅಪ್ಪುಗೆ ಗೆಳೆಯ ಪ್ರಕಾಶ ಖಾಡೆಯವರದು. ಮೊದಲ ಸ್ವಾಗತ ಡಾ. ವಿಜಯಕುಮಾರ ಕಟಗೀಹಳ್ಳಿಮಠ ಅವರದು. ಬಸ್ಸ್‍ಸ್ಟ್ಯಾಂಡಿನಿಂದ ನೇರ ಖಾಡೆಯವರ ಮನೆಗೆ. ಅಲ್ಲೊಂದು ಜನಪದ ಜೀವ. ಆ ಮನೆ ಯೇ ಜನಪದ. ಗೆಳೆಯ ಪ್ರಕಾಶ ಖಾಡೆಯವರ ತಂದೆ. ಕನ್ನಡದ ಅಪರೂಪದ ಜನಪದ ವಿದ್ವಾಂಸ. ನನ್ನ ಹತ್ತಿರವಿದ್ದದ್ದು ಕೇವಲ ಒಂದು ಗಂಟೆಯ ಸಮಯ. ಆ ಸಮಯವೆಲ್ಲವು ಸಾಹಿತ್ಯದ ಸಂಸಾರಕ್ಕೇ ಮೀಸಲು.
       ಮನೆಯಿಂದ ನೇರ ಮುಧೋಳದ ರನ್ನ ಕ್ರೀಡಾಂಗಣಕ್ಕೆ. ಕನ್ನಡದ ಅಸ್ಮಿತೆಯ ಪ್ರಶ್ನೆಯನ್ನು  ನಾನು ಎತ್ತ ಬೇಕಾದುದೇ ಈ ಗಂಡು ಮೆಟ್ಟಿನ ನೆಲದಲ್ಲಿ. ಅದು ಬಾಗಲಕೋಟ ಜಿಲ್ಲೆಯ 4 ನೇ ಕನ್ನಡ ಸಾಹಿತ್ಯ ಸಮ್ಮೇಳನ. ಸಭೆಯಲ್ಲಿರುವವರೆಲ್ಲರೂ ಸಾಹಿತ್ತಿಕ ದಿಗ್ಗಜರುಗಳೆ. ವೇದಿಕೆಯ ಮುಂದೆ ಡಾ. ಪ್ರಕಾಶ ಖಾಡೆ, ತಿಮ್ಮಾಪುರ, ಮಲ್ಲಿಕಾರ್ಜುನ ಹಿರೇಮಠ, ಹುಲಗಬಾಳಿ, ಕಿಟ್ಟಣ್ಣವರ, ಕೊನೆಸಾಗರ, ವೆಂಕಟಗಿರಿ ದಳವಾಯಿ, ವಾಸಣ್ಣ ದೇಸಾಯಿ, ಮಲ್ಲಿಕಾರ್ಜುನ ಬನ್ನಿ, ಸಿದ್ಧರಾಜ ಪೂಜಾರಿ ಹೀಗೆ ದಂಡು ದಂಡಾಗಿ ಸಾಹಿತಿಗಳು. ನನ್ನೊಂದಿಗೆ ವೇದಿಕೆಯ ಮೇಲೆ ಶ್ರೀ ನಿರುಪಾದಿಶ್ವರರು. ಅದೊಂದು ಅಮೋಘ ಘಳಿಗೆ. ಕೇವಲ ಮೂರು ಗಂಟೆಯ ಉತ್ತರ ಕರ್ನಾಟಕದ ಈ ಭೇಟಿಗೆ ನಾನು ಕಳೆದದ್ದು  ಬರೋಬ್ಬರಿ 16 ಗಂಟೆಗಳ ಪ್ರಯಾಣದ ಸಮಯವನ್ನು. ಮಾತನಾಡಿದ್ದು ಕೇವಲ 45 ನಿಮಿಷಗಳು. ಆದರೆ ಸೇರಿದ ದೈವ, ಅದು ಕನ್ನಡದ ದೈವ, ಕನ್ನಡದ ಸಭ್ರಮ, ಕನ್ನಡಿಗರ ಜಾತ್ರೆ.

Saturday, March 8, 2014

ಸ್ನೇಹಕ್ಕೆ ತಲೆಬಾಗಿ



     ಒಂದು ಪ್ರೀತಿಯ ಕರೆಯನ್ನು ಎಷ್ಟು ದಿನ ನಿರಾಕರಿಸಬಹುದು? ಅಥವಾ ಅದೆಷ್ಟು ದಿನ ಮುಂದುಡಬಹುದು? ಹಾಗೆ ಮಾಡಲಾಗದ ಒಂದು ಕೋರಿಕೆ ಗೆಳೆಯ ಡಾ. ವಿರೇಶ ಬಡಿಗೇರನಿಂದ. ದಿನಾಂಕ 05/02/2014 ರಂದು ಜೆ.ಎಸ್.ಎಸ್ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಡಾ. ವಿರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರ, ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಹತ್ತನೆಯ ಹಸ್ತಪ್ರತಿ ಸಮ್ಮೇಳನಕ್ಕೆ ಈ ಗೆಳೆಯನಿಂದ ಪ್ರೀತಿಯ ಆಹ್ವಾನ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕ್ರಮಗಳನ್ನು ಜನ ಮುಖಿಯಾಗಿಸಿದ  ಒಬ್ಬ ಅಪರೂಪದ ಸಂಘಟಿಕ ಈ ನನ್ನ ಗೆಳೆಯ. ನನ್ನ ಸೃಜನಶೀಲ ಬದುಕಿನ ಅಪರೂಪದ ಸಂಗಾತಿ. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಉಪನ್ಯಾಸಕರುಗಳಿಗೆ ಇರುವ ಸಂಕುಚಿತತೆ ಮತ್ತು ಸೋಗಲಾಡಿತನಗಳನ್ನು ಮೀರಿದ ಮನುಷ್ಯ. ಸೌಜನ್ಯ, ಪ್ರೀತಿ ಮತ್ತು ಸ್ನೇಹಕ್ಕೆ ಇನ್ನೊಂದು ಹೆಸರು ಗೆಳೆಯ ವಿರೇಶ ಬಡಿಗೇರ. ಇಂಥ ಗೆಳೆಯನ ಕರೆಗೆ ಓಗೊಟ್ಟು ಈ ಸಾರಿ ಅವರು ಆಯೋಜಿಸಿದ್ದ ಹಸ್ತಪ್ರತಿ ಸಮ್ಮೇಳನದ ಒಂದು ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ನಾನು ಧಾರವಾಡಕ್ಕೆ ಹೋದೆ. ಇದು ಚಂದ್ರಶೇಖರ ಕಂಬಾರರ ಸಮ್ಮುಖದಲ್ಲಿ ನಡೆದ ಎರಡು ದಿನಗಳ ಅಪರೂಪದ ಸಮ್ಮೇಳನವಾಗಿರುವಂತೆಯೇ, ಅವರೊಂದಿಗೆ ಕೆಲವು ಕ್ಷಣಗಳನ್ನು ಹಂಚಿಕೊಳ್ಳುವ ನನ್ನ ಪಾಲಿನ ಎರಡನೆಯ ಸಂದರ್ಭವೂ ಆಗಿತ್ತು.


       ಇನ್ನೊಂದು ಕಾರಣಕ್ಕಾಗಿಯೂ ಇದು ನನಗೆ ಅಪರೂಪದ ಕ್ಷಣವೆ. ಪಠ್ಯ ಮತ್ತು ಲಿಂಗ ಸಂಬಂಧಿ ನೆಲೆಗಳನ್ನಿಟ್ಟುಕೊಂಡು ಮಾತನಾಡಿದ ನನ್ನೊಂದಿಗೆ, ವೇದಿಕೆಯಲ್ಲಿದ್ದವರು ನನ್ನ ಒಂದು ಕಾಲದ ಮೈಸೂರಿನ ಆಶ್ರಯದಾತ ಪ್ರೊ. ಕಿಕ್ಕೇರಿ ನಾರಾಯಣ, ಅವರದೇ ಅಧ್ಯಕ್ಷತೆ. ನನ್ನೊಂದಿಗೆ ಸಹ ಸಂಪನ್ಮೂಲ ವ್ಯಕ್ತಿಗಳಾಗಿದ್ದವರು ಡಾ. ಮಲ್ಲಿಕಾರ್ಜುನ ಮೇಟಿ, ಡಾ. ಕೇಶವಶರ್ಮಾ ಮತ್ತು ಡಾ. ನಟರಾಜ ಬೂದಾಳು. ನಟ ಶ್ರೀಧರ, ನನ್ನ ತಂದೆ ಜಿ.ಜಿ.ಮಠಪತಿ ಹಾಗೂ ಧಾರವಾಡದ ನನ್ನ ಅಪಾರ ಸಾಹಿತ್ಯ ಮಿತ್ರರು ಈ ಕಾರ್ಯಕ್ರಮದಲ್ಲಿದ್ದುದು ನನ್ನ ಬದುಕಿನ ಅಪರೂಪದ ಕ್ಷಣಗಳಲ್ಲಿ ಒಂದು.

Thursday, March 6, 2014

ನಿಂದೆ ನಿರ್ನಾಮಕಾರಿಯೇ ವಿನಹ ನಿರ್ಮಾಣಕಾರಿಯಲ್ಲ

  ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೇಲೂರು ಮತ್ತು ಡಾ. ಎನ್.ರಾಮರೆಡ್ಡಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಬೇಲೂರು ಕೃಷ್ಣಮೂರ್ತಿಯವರ ನೂರು ನಾಟಕಗಳ ಹತ್ತು ಸಂಪುಟಗಳ ಲೋಕಾರ್ಪಣೆ ಸಮಾರಂಭ ಚನ್ನಕೇಶವೇಗೌಡ ಕಲ್ಯಾಣ ಮಂಟಪ ಬೇಲೂರಿನಲ್ಲಿ ದಿನಾಂಕ 18/01/2014 ರಂದು ಜರುಗಿತು. ವೇದಿಕೆಯಲ್ಲಿ ನನ್ನೊಂದಿಗಿದ್ದವರು ಬೇಲೂರಿನ ಶಾಸಕರಾದ ಶ್ರೀ ವೈ.ಎನ್.ರುದ್ರೇಶಗೌಡ, ಪ್ರಕಾಶಕ ಮಿತ್ರ ಮಾನಸ, ಶ್ರೀ ಕವಿತಾ ಕೃಷ್ಣ, ಶ್ರೀ ಎಚ್.ಎಂ.ದಯಾನಂದ ಹಾಗೂ ಸನ್ಮಿತ್ರ ಪ್ರೊ. ಜಯಣ್ಣಗೌಡ.
      ಕೆಲವು ಸಭಾ ಮರ್ಯಾದೆ ಮತ್ತು ರೀತಿ ನೀತಿಗಳನ್ನು ಪಾಲಿಸದೇ ಇರುವದಕ್ಕಾಗಿ 14/04/2012 ರಿಂದ ಸ್ಥಳೀಯ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಿದ್ದೆ. ಆದರೆ ಬೇಲೂರು ಕೃಷ್ಣಮೂರ್ತಿಯವರ ಕಾರಣಕ್ಕಾಗಿ, ಅವರ ನಿರಂತರ ಜೀವನೋತ್ಸಾಹಕ್ಕಾಗಿ ಈ ವೇದಿಕೆಯಲ್ಲಿ ಪಾಲ್ಗೋಳ್ಳಬೇಕಾಯಿತು. 95 ರ ಅಂಚಿನಲ್ಲಿ ಕುಳಿತು ಬರೆದ ಖುಷ್‍ವಂತ ಸಿಂಗ್‍ನ ಆತ್ಮಕತೆಯ ಈ ಸಾಲುಗಳಿಂದ 85 ರ ಬೆ.ಕೃ(ಬೇಲೂರು ಕೃಷ್ಣಮೂರ್ತಿ) ಅವರ ಈ ಸಮಾರಂಭದ ಪ್ರಾಸ್ತಾವಿಕ ನುಡಿಗಳನ್ನು ನಾನು ಪ್ರಾರಂಭಿಸಿದೆ. ವ್ಯಕ್ತಿಯ ವರ್ತಮಾನದ ಜೊತೆ ಜೊತೆಗೆಯೇ ಆತನ ಇತಿಹಾಸ ರೂಪಗೊಳ್ಳುತ್ತಿರುತ್ತದೆ. ಈ ಪ್ರಜ್ಞೆ ಇರುವ ವ್ಯಕ್ತಿಯಲ್ಲಿ ಅನ್ಯ ಆಲೋಚಗಳಿಗೆ ಅವಕಾಶವಿರುವುದಿಲ್ಲ. ‘ನಿಂದೆ ನಿರ್ನಾಮಕಾರಿಯೇ ವಿನಹ ನಿರ್ಮಾಣಕಾರಿಯಲ್ಲ’ ಎನ್ನುವುದನ್ನು ತಿಳಿದ ಇಂಥವರು ಅಂಥರ್ಮುಖಿಗಳಾಗಿರುತ್ತಾರೆ. ಕವಿ ಕೀಟ್ಸ್, ಶರೀಫ್, ವೈಕುಂಠ ದಾಸರೆಲ್ಲರೂ ಇಂಥ ಅಂಥರ್ಮುಖಿಗಳೆ. ಸರ್ಪಭೂಷಣ ಶಿವಯೋಗಿ ಹೇಳುವಂತೆ-
‘ಜನಮೆಚ್ಚಿ ನಡಕೊಂಡರೇನುಂಟು ಲೋಕದಿ,
 ಮನಮೆಚ್ಚಿ ನಡಕೊಂಬುವುದೇ ಚಂದವು,
 ಜನರೇನು ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲ’ ಆತ್ಮರತಿ, ಮೆರವಣಿಗೆ ಮತ್ತು ಜನ್ಮದಿನೋತ್ಸವಗಳ ಮೋಹದಿಂದ ಹೊರಬಂದುದಾದರೆ ಕೃಷ್ಣಮೂರ್ತಿಯವರಿಗೂ ಒಂದು ಅರ್ಥಪೂರ್ಣ ಅಸ್ಥಿತ್ವವಿದೆ. ಅವರ ಸಾಹಿತ್ಯಕ್ಕೆ ಕಾಲಾತೀತ ಗೌರವವಿದೆ ಎನ್ನುವುದು ಇಂದಿನ ನನ್ನ ವಾದವಾಗಿತ್ತು.
       ಹಲವು ಹಂಗುಗಳಿಂದ ಹೊರಬಿದ್ದಿರುವ ಬೆ.ಕೃ ಅವರ ಬದುಕು ಖುಷ್‍ವಂತ್ ಸಿಂಗನ ಆತ್ಮಕಥೆಯ ಎರಡು ಉಲ್ಲೇಖಗಳನ್ನು ನಾನಿಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದೆ. ಮೊದಲನೆಯದು ಅವರ ಶಿಸ್ತು ಮತ್ತು ಸಮಯ ಪ್ರಜ್ಞೆ  ಕುರಿತಾಗಿ “You have only one life so make the best use of it. Don’t waste time, for time is worship and not a minute should be wasted” ಬೆ.ಕೃ ನೂರು ನಾಟಕಗಳನ್ನು ಬರೆದರು ಎನ್ನುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವರು ಒಂದು ಕ್ಷಣ ಸಮಯವನ್ನು ಹಾಳುಮಾಡದೆ ಬದುಕಿದರು ಎನ್ನುವುದು. ಎರಡನೆಯದಾಗಿ ದೇವರು ಮತ್ತು ದೈವದ ಭಯಗಳಿಂದ ಮುಕ್ತರಾಗಿ ಬದುಕಿದರು ಎನ್ನುವುದು. ನಿಧನದ ನಂತರ ತಮ್ಮ ಶರೀರವನ್ನು ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಗೆ ದಾನವಾಗಿ ಕೊಟ್ಟಿರುವ ಕೃಷ್ಣಮೂರ್ತಿ ಈ ಕಾರಣಕ್ಕಾಗಿಯೂ ನಮಗೆ ಅವರು ಆದರ್ಶವಾಗಲೇ ಬೇಕು. ಖುಷ್‍ವಂತನ ಈ ಸಾಲುಗಳನ್ನು ಓದಿ-
“Here lies one who spared neither man nor God, waste not tears on him” ಇದೇ ದಾರಿಯಲ್ಲಿದ್ದಾರಿ ನಮ್ಮ ಬೇಲೂರು ಕೃಷ್ಣಮೂರ್ತಿಯವರೂ ಕೂಡ.