Total Pageviews

Wednesday, May 21, 2014

ಬರೆದು ಬಿಟ್ಟಿದ್ದೇನೆ, ತೆರೆದೂ ಬಿಡುತ್ತೇನೆ

      
     2012, ಜುಲೈ ತಿಂಗಳ ಮೊದಲ ಮಳೆಗಳ ಮಣ್ಣಿನ ವಾಸನೆಯೊಂದಿಗೆ ಮೈದಾಳಲಾರಂಭಿಸಿದರು ನನ್ನ ಸಾಕಿಯರು. ಉತ್ತರ ಕರ್ನಾಟಕದ ವಾಡೆಯಂಥ ಸಕಲೇಶಪುರದ ಹಳೆಯ ಮನೆ, ಕಾಲು ಕೆದರುತ್ತ ಸುತ್ತಲು ಸುಳಿದಾಡುವ ಕೋಳಿ, ನಾಯಿ, ಅಪರೂಪಕ್ಕೊಮ್ಮೆ ಕಪ್ಪೆ ಹಿಡಿಯಲು ಬರುತ್ತಿದ್ದ ಹಾವು, ಮನೆಗೆ ಸುತ್ತುವರಿದು ಹುಟ್ಟುತ್ತಿದ್ದ ಕಾಡುಕಾಡಾದ ಹೂ, ಹುಲ್ಲು ಗರಿಕೆಯ ಮೇಲೆ ಮಗಳ ರೆಪ್ಪೆಯಂಚಿನಲ್ಲಿ ಹೊಳೆಯುವ ಕಣ್ಣೀರ ಹನಿಯಂಥ ತುಂತುರು, ಎಲ್ಲ ಈ ಸಾಕಿಯರಂತೆ. ಲೆಕ್ಕಕ್ಕೆ ಸಿಗುವುದಿಲ್ಲ, ಒಕ್ಕಣಿಕೆಗೆ ಒಳಗಾಗುವುದಿಲ್ಲ. ಇದು ಮೋಡ ತೆಕ್ಕೆ ಹೊಡೆಯುವ ವಿಫಲ ಯತ್ನ. 
         ನಾನು ಇವರ ಕುರಿತು ಮಾತಾಡುತ್ತ ಹೊರಟೆ, ಅವಳು ಹರಿಯುವ ಮಾತಿಗೆ ಲಿಪಿಯ ಕಟ್ಟೆ ಕಟ್ಟುತ್ತ ಪಾತ್ರಗಳಾಗಿ ನಿಲ್ಲಿಸಿ ಬಿಟ್ಟಳು. ಗೆಳೆಯ ರಾಜು ಮಳವಳ್ಳಿ "'ಸಿಹಿ ಗಾಳಿ'ಗಾಗಿ ಏನಾದರೂ ವಿಶೇಷ ಕೊಡಿ ಸಾಹೇಬರೆ" ಎಂದು ಕೇಳಿದ್ದೇ ಸಾಕಾಯಿತು, ನವೆಂಬರ್ ತಿಂಗಳ ವಿಶೇಷಾಂಕದಲ್ಲಿ ಬಯಲಿಗೆ ಬಿದ್ದ ನನ್ನ ಸಾಕಿಯರು 14 ತಿಂಗಳು ನಿರಂತರ ಹಾಡಿದ್ದೇ ಹಾಡು. ಈ ಹಾಡುಗಳು ಕೆಲವರಿಗೆ ಇಷ್ಟ ಮತ್ತೆ ಕೆಲವರಿಗೆ ಕನಿಷ್ಟ. ಕೆಲವರಿಗೆ ಆತ್ಮದ ಆಲಾಪ ಮತ್ತೆ ಕೆಲವರಿಗೆ ರೋಚಕ ರಂಜನೀಯ ಓದು. ಯಾರು ಏನಾದರೂ ಅಂದುಕೊಳ್ಳಲಿ ಬರಬೇಕಾದವರು ಬಂದುಬಿಟ್ಟಿದ್ದಾರಷ್ಟೆ.

        
        ಇಂಥ ನೀಚ ಬದುಕುಗಳು ಯಾವ ಕಾರಣಕ್ಕಾಗಿ ಬರೆಯಲ್ಪಡಬೇಕು? ಇವು ಕೊಡುವ ಸಂದೇಶವಾದರೂ ಏನು? ಕಾಮದ ಕಮನೀಯತೆಯನ್ನು ಕತ್ತಲೊಳಗಷ್ಟೆ ಖುಷಿಯಾಗಿಸಿಕೊಳ್ಳುವುದು ಒಳಿತಲ್ಲವೆ? ಎಂದು ಕೆಲವರು ಜರಿದರೆ, ಮತ್ತೆ ಕೆಲವರು ಇದು ಬದುಕು ಸಾಗಿದ ರೀತಿ. ಇಂಥ ಬದುಕುಗಳಿಗೆ ಯಾವ ಲಯ, ಬದ್ಧತೆ ಹಾಗೂ ವ್ಯಾಕರಣಗಳು ಇರುವುದಿಲ್ಲ. ಇದ್ದಂತೆ ಇರಲಿ ಬಿಡಿ ಎಂದು ಸಮಾಧಾನಿಸಿದವರು ಮತ್ತೆ ಕೆಲವರು. ಬರಹ ಮುಗಿದು, ಮುದ್ರಣ ಮನೆ ಸೇರಿ, ಅಲ್ಲಿಂದ ಮನೆಮಾತಾಗಿ, ಮತ್ತೆ ಒಂದು ಪುಸ್ತಕ ರೂಪದಲ್ಲಿ ಕಟ್ಟಿಕೊಡುತ್ತಿರುವ ಈ ವೇಳೆಯಲ್ಲಿ, ಇನ್ನೂ ನಾನು ಅದೇ ದ್ವಂದ್ವದಲ್ಲಿದ್ದೇನೆ. ಸತ್ತವರನ್ನು ನೆನಪಾಗಿ ಎಬ್ಬಿಸಿ, ಸಮಾಜಕ್ಕೆ ಭೂತವಾಗಿ ಬೆನ್ನಟ್ಟಿಸುವ ನನ್ನ ಈ ಕ್ರಿಯೆ ಎಷ್ಟರ ಮಟ್ಟಿಗೆ ಸೂಕ್ತ? ಹೀಗಾಗಿಯೇ ಇರಬಹುದು, ಗೆಳತಿಯೊಬ್ಬಳ ಪರಿಶ್ರಮದಿಂದ ಸಂಪೂರ್ಣಗೊಂಡು, ಹಲವು ತಿಂಗಳಿಂದ ನನ್ನ ಟೇಬಲ್ಲಿನ ಮೇಲೆ ಬಿದ್ದುಕೊಂಡಿದ್ದ ಈಕೆಯನ್ನು ಮತ್ತೆ ಛೇಡಿಸಿದವರು, ಪೀಡಿಸಿದವರು ಚಿತ್ರ ಕಲಾವಿದ ಗೆಳೆಯ ಶ್ರೀ ಬಿ.ಎಸ್.ದೇಸಾಯಿ.
        ಬರೆದು ಬಿಟ್ಟಿದ್ದೇನೆ, ತೆರೆದೂ ಬಿಡುತ್ತೇನೆ. ತೆಕ್ಕೆಯೋ, ಧಿಕ್ಕಾರವೋ: ಸಾಂತ್ವಾನವೋ, ಸಾವೋ ಎಲ್ಲ ನಿಮಗೇ ಸೇರಿದ್ದು. ಕೃತಿಯ ಮುಖಪುಟವನ್ನು ನಿಮಗೆ ತೋರಿಸುತ್ತಿದ್ದೇನೆ. ಕೇವಲ ಒಂದು ತಿಂಗಳು ಕಾಯಿರಿ, ಬರುತ್ತಾರಿವರು ಬೆಳಕಾಗಿ, ಕೊಳಕಾಗಿ, ಎದೆ ಕಲಕುವ ಕಥೆಗಳಾಗಿ.




Thursday, May 15, 2014

ಕಣ್ಣೊದ್ದೆಯಾದಾಗ ಬುದ್ಧನೊಬ್ಬನೇ ಇದ್ದ!!!


        ನನ್ನ ಮನೆಗೆ ಬುದ್ಧ ಬರುವ ಕಾಲ, ಸಿದ್ಧತೆ ನಡೆದಿತ್ತು ನನ್ನ ಮನೆಯೊಳಗೆ ಹಾಗೂ ಮನದೊಳಗೆ. ದಿನಾಂಕ 10, ಮಧ್ಯರಾತ್ರಿ ಎರಡು ಗಂಟೆಯ ಸಮಯ ಏನೋ ಓದಿಬಿಟ್ಟೆ. ನಮ್ಮ ಬೆನ್ನು ಹಿಂದೆಯೇ ನಮ್ಮ ಎದೆ ಸೀಳುವ ಮೋಸದ ಆಲೋಚನೆ ಹೆಪ್ಪುಗಟ್ಟುತ್ತದೆ ಎನ್ನುವುದು ಎಷ್ಟೊಂದು ಆಘಾತಕಾರಿ! ಬೇಸರ, ಸಿಟ್ಟು ಮತ್ತು ಮನುಷ್ಯ ಜಾತಿಯ ಬಗ್ಗೆ ಅಸಹ್ಯ ಎಲ್ಲ ಮಡುಗಟ್ಟಿದವು ಮನಸ್ಸಿನಲ್ಲಿ. ಬಿಕ್ಕಳಿಕೆ ಉಮ್ಮಳಿಸಿ ಕಣ್ಣೊದ್ದೆಯಾದವು. ಆನಂತರ ಬರೀ ಮೌನ.
ಹೊರಗೆ ಕತ್ತಲು ಕರಗುತ್ತಲಿತ್ತು ಆದರೆ ನಸುಕಿನ ನಿದ್ರೆಯೊಳಗೆ ಬುದ್ಧ ಬರುತ್ತಲಿದ್ದ. ಅವನು, ಅವನೊಂದಿಗೆ ಕಬೀರ, ಅಕ್ಕಮಹಾದೇವಿ, ಸಾಕ್ರೆಟಸ್, ಸೂಳೆ ಸಂಕವ್ವ, ಮೀರಾ ಸಾಲು ಸಾಲಾಗಿ ಸಾಂತ್ವಾನದ ಕೈಗಳು, ನನ್ನ ದಡ್ಡತನಕ್ಕೆ ಮುಗುಳ್ನಗುವ ಮೈ ಮುಖಗಳು. ಹೇಸಿ ಮೋಹದ ಮೇಲಿಯೂ ಮಲ್ಲಿಗೆಯ ಹಾಸಿ, ನಿರ್ಭಾವುಕನಾಗಿ ಎದ್ದು ಹೆಂಡತಿಯೊಂದಿಗೆ ಬುದ್ಧನ ಬರುವಿಗಾಗಿ ಕಾಯಲು ಸಿದ್ಧನಾದೆ.

        ನನ್ನಪ್ಪನಿಂದಾಗಿ ನಾನು ಕಬೀರನ ಕೈ ಹಿಡಿದೆ. ನನ್ನ ಓದಿನಿಂದಾಗಿ ನಾನು ಬುದ್ಧನ ಬಾಗಿಲಿಗೆ ಬಂದೆ. ಈ ಮಧ್ಯ ಎಷ್ಟೆಲ್ಲ ಓದಿದ್ದರೂ ಬದುಕಿಗೆ ಬೆಂಗಾವಲಾಗಿ ನಿಂತವರು ಇವರಿಬ್ಬರೆ. ಹಾಗಾದರೆ ಅದ್ಯಾವ ಬೋಧ ಸುಧೆ ನನಗಿವರು ಉಣ್ಣಿಸಿರಬಹುದು? ಸರಳವಾಗಿದೆ ಉತ್ತರ. ಮಡದಿಯೇ ಮತ್ತೊಬ್ಬನಿಗಾಗಿ ಮಿಡುಕಾಡುತ್ತಿದ್ದುದು ಗೊತ್ತಿದ್ದು, ಕಬೀರ ಆಕೆಗೆ ನಾವಿಕನಾಗಿ, ತಾನು ವಿರ್ಭಾವುಕನಾಗಿ ಬಿಟ್ಟು ಬಂದ. ಇನ್ನು ಬುದ್ಧ ತಾನುಣ್ಣುವ ಹಂದಿ ಮಾಂಸದ ಭೋಜನವೆ ತನ್ನ ಬದುಕಿನ ಕೊನೆಯ ಊಟವಾಗುತ್ತದೆ ಎಂದು ಗೊತ್ತಿದ್ದೂ ಅದನ್ನ ಆತ ನಿರಾಕರಿಸಲಿಲ್ಲ. ಹೀಗೆ ಇಬ್ಬರೂ ಈ ಬದುಕು ನೀಡುವ ಉರಿ ಇರಲಿ, ಸಿರಿ ಇರಲಿ ತಮ್ಮೆದುರೇ ಮೋಸದ ಮಹಾ ಮುಖವಿರಲಿ ಅವುಗಳನ್ನು ಮನಸಾರೆ ಸವರಿ, ಮುತ್ತಿಟ್ಟು ಮನುಷ್ಯರನ್ನಾಗಿಸಲು ಯತ್ನಿಸಿದವರು. ಇಂಥ ಬುದ್ಧರು ಬರುವ ಕಾಲ ನಾನು ಎದ್ದು ನಿಲ್ಲಲೇ ಬೇಕಿತ್ತು ಶಿರ ಬಾಗಿ ನಮಸ್ಕರಿಸಿ ಬೆಳಕನ್ನು ಬರಮಾಡಿಕೊಳ್ಳಬೇಕಿತ್ತು. ಕಬೀರನಂತೆ ಮೌನಿಯಾಗಲೇಬೇಕಿತ್ತು ನಾನು, ಮತ್ತೆ ಬುದ್ಧನಂತೆ ಶಾಪಗಳ ಕೂಪದಲ್ಲಿ ಬಿದ್ದವರಿಗೂ ಸನ್ಮಂಗಲವೇ ಆಗಲಿ ಎಂದು ಹರಸಿ ಮುಗುಳ್ನಗಬೇಕಿತ್ತು. 
        ಬೌದ್ಧ ಪೂರ್ಣಿಮೆಯ ತುಣುಕು ಬೆಳಕಿನಂತೆ ಹುಟ್ಟಿದವಳು ನನ್ನ ಮಗಳು. ಯಾವ ವೈಶಾಖ ಪೂರ್ಣಿಮೆಯ ದಿನ ಬುದ್ಧ ಈ ಪ್ರಪಂಚಕ್ಕೆ ¨ಂದು, ಇದೇ ದಿನದಂದು ಜ್ಞಾನೋದಯ ಹೊಂದಿ ಮತ್ತೆ ಇದೇ ದಿನ ನಿರ್ವಾಣ ಹೊಂದಿದನೋ ಅದೇ ದಿನದಲ್ಲಿ ನನಗೆ ಮಗಳು ಹುಟ್ಟಿದ್ದು. ಈ ದಿನದ ಬಗೆಗಿನ ನನ್ನ ವಿಚಿತ್ರ ಮೋಹಕ್ಕೆ ಇದೂ ಒಂದು ಕಾರಣ. ಅವಳ ಕಣ್ಣು ರೆಪ್ಪೆಗಳಲ್ಲಿ ನಾನು ಬುದ್ಧನ ಅಬಾಧಿತ, ಶಾಂತ ನಿದ್ರೆಯನ್ನು ಕಂಡಿದ್ದೇನೆ. ಹೀಗಾಗಿ ಇಂಥ ಘಳಿಗೆಯನ್ನು ಕಳೆದುಕೊಳ್ಳುವುದೆಂದರೆ ಬೆಳಕಿನಿಂದ ಮುಖ ಮುಚ್ಚಿಕೊಂಡಂತೆ. ಬೇಲೂರಿನ ವೇಲಾಪುರಿ ಸಾಹಿತ್ಯ ವೇದಿಕೆಯ 20 ನೆಯ ಮನೆ ಮನೆ ಸಾಹಿತ್ಯ ಗೋಷ್ಠಿಯನ್ನು ಈ ಬೌದ್ಧ ಪೂರ್ಣಿಮೆಯ ಮತ್ತು ಮಗಳ ಜನ್ಮ ದಿನದ ಕಾರಣಾರ್ಥ ಹಮ್ಮಿಕೊಂಡೆ. ಬುದ್ಧನ ನಗೆಯಂತೆ ಈ ಸಮಾರಂಭ ಇರಬೇಕೆನ್ನುವುದು ನನ್ನ ಬಯಕೆಯಾಗಿತ್ತು. ಮಾತಿರಬಾರದು, ಗೊಡ್ಡು ಪಾಂಡಿತ್ಯದ ಪ್ರದರ್ಶನವಿರಬಾರದು, ಮಕ್ಕಳು ಮಹಿಳೆಯರು, ತಿಳಿದವರು ತಿಳಿಯದವರೂ ಆನಂದಿಸುವ ಸರಳ ಸಭೆ ಇದಾಗಿರಲಿ ಎಂದುಕೊಂಡು ರಂಗ ಗೀತೆಗಳನ್ನು ಹಾಡಿಸಿ, ಆ ಮೂಲಕ ಬುದ್ಧನ ಬೆಳಕನ್ನು ಆಹ್ವಾನಿಸಿ ಅವಳನ್ನು ಹರಸಬೇಕೆನ್ನುವುದು ನನ್ನ ತಹತಹಿಕೆ. ಹಾಗೆಯೇ ಆಯಿತು. ಸೇರಿದ ಮೂವತ್ತು ಜನರಲ್ಲಿ ಹತ್ತಾರು ಜನ ಹಾಡಿ ನನ್ನ ಮನೆ ಮನಗಳನ್ನ ಚೇತೊಹಾರಿಯಾಗಿಸಿದರು. ಸಾಯಂಕಾಲ 5 ಗಂಟೆಯಿಂದ ರಾತ್ರಿಯ 2 ಗಂಟೆಯವರೆಗೂ ವೈಶಾಖ ಪೂರ್ಣಿಮೆಯ ಬೆಳಕಿನಲ್ಲಿ ಹಸುಳೆಯನ್ನು ಹುಡುಕಿಕೊಂಡು ಹಾರೈಸಲು ಬುದ್ಧ ಬರುತ್ತಲೇ ಇದ್ದ, ಗೆಳೆಯನಾಗಿ, ಹಿರಿಯನಾಗಿ ಮತ್ತು ಹೆಂಗಸಾಗಿ.

ಬರುತ್ತಿರಲಿ ಬುದ್ಧ ಹಿಗೆಯೇ, ಕಾಡಿಸುತ್ತ ಪಿಡಿಸುತ್ತ, ಹಂಗಿಸುತ್ತ ಮುಗುಳ್ನಗೆಯಿಂದ ವ್ಯಂಗಿಸುತ್ತ. ಅವನೆಷ್ಟು ಸಾರಿ ಬಂದರೂ, ಯಾವ ರೂಪದಲ್ಲಿ ಬಂದರೂ ನಾನು ಮತ್ತೆ ಮತ್ತೆ ಕರೆಯುತ್ತೇನೆ, ಈ ಬಾಗಿಲುಗಳನ್ನು ಹಿಗೆಯೇ ತೆರೆದಿಟ್ಟುಕೊಂಡು ಕುಟುಂಬ ಸಮೇತನಾಗಿ ಆಹ್ವಾನಿಸುತ್ತಲೇ ಇರುತ್ತೇನೆ ಬಾ ಬುದ್ಧನೆ ನಮ್ಮ ಬೆಳಕಾಗು ಎಂದು.

Thursday, May 1, 2014

ಕಾವಲು ನಿಲ್ಲಿಸಿದ್ದೇನೆ ಕಾವ್ಯವನ್ನು


     ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕದಳಿ ಮಹಿಳಾ ವೇದಿಕೆ, ತಾಲೂಕಾ ಶರಣ ಸಾಹಿತ್ಯ ಪರಿಷತ್, ಜಲಮಿತ್ರ ರಂಗ ವೇದಿಕೆ, ಚುಟುಕು ಸಾಹಿತ್ಯ ಪರಿಷತ್, ಮರುಳ ಸಿದ್ಧೇಶ್ವರ ಯುವಕ ಮಂಡಳಗಳ ಸಹಕಾರದೊಂದಿಗೆ ಗೆಳೆಯ ಉಮೇಶ ತಿಮ್ಮಾಪುರ ಅವರ ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ಮುಂಡರಗಿಯ ಕೆ.ಆರ್.ಬೆಲ್ಲದ ಕಾಲೇಜನಲ್ಲಿ ದಿನಾಂಕ 20/04/2014 ರ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಗೆ ನನ್ನೊಂದಿಗೆ ಕುಂ.ವೀರಭದ್ರಪ್ಪ, ಮುಖ್ಯ ಅತಿಥಿಯ ಪಾತ್ರಕ್ಕೆ ನಾನು. ಗೋಷ್ಠಿ ಒಂದರಲ್ಲಿ ಗೆಳೆಯರಾದ ಪ್ರಕಾಶ ಖಾಡೆ, ವಿದ್ಯಾ ಕುಂದರಗಿ, ಸಾವಿತ್ರಿ ಮುಜುಂದಾರ ಕವಿಗೋಷ್ಠಿಯಲ್ಲಿ ವಡ್ಡಗೆರೆ ನಾಗರಾಜಯ್ಯ, ರಾಜೇಶ್ವರಿ.ಎನ್ ಹಾಗೂ ಉಳಿದ ಇಪ್ಪತ್ನಾಲ್ಕು ಕವಿಗಳು, ಸಮಾರೋಪಕ್ಕೆ ಗೆಳೆಯರಾದ ಡಾ.ಬಾಳಾಸಾಹೇಬ ಲೋಕಾಪೂರ, ವೆಂಕಟಗಿರಿ ದಳವಾಯಿ, ಡಾ. ನಿಂಗು ಸೊಲಗಿ ಹಾಗೂ ಜೋಳದ ಕೂಡ್ಲಿಗಿ.


     ಚಿಕ್ಕಮಂಗಳೂರು, ಹರಿಹರ, ಹೂವಿನ ಹಡಗಲಿ ಮಾರ್ಗವಾಗಿ ಹಿಂದಿನ ದಿನ ಮುಂಡರಗಿಯನ್ನು ತಲುಪಿದ ನಾನು ಸರಿಯಾಗಿ ಎರಡು ರಾತ್ರಿ ಉತ್ತರ ಕರ್ನಾಟಕದ ಊಟ, ವಿಚಾರ ಹಾಗೂ  ಪ್ರೀತಿಯ ಜಾತ್ರೆಯಲ್ಲಿ ಇದ್ದೆ ಎಂದೇ ಹೇಳಬೇಕು. 
ಕಾವಲು ನಿಲ್ಲಿಸಿದ್ದೇನೆ
ಕಾವ್ಯವನ್ನು, ಸತ್ಯ ಸಂಘರ್ಶಗಳ
ಬೆನ್ನಿಗೆ ಪದ ಗುಚ್ಚಗಳನ್ನೇರಿಸಿ
ಜಾತಿ-ಮತದ ಗಡಿಯಲಿ
ಸಾಲು ಕಟ್ಟಿದ್ದೇನೆ ಸಮಾನತೆಯ
ಅಸಮಾನತೆಯ ಕಟುಸಂಕೋಲೆಯ
ಲಾಂಛನ ಕಿತ್ತೆಸೆದು
        ಹೀಗೆ ಕವಿತೆಗೊಂದು ಕಾಯಕ ಕಟ್ಟಿ ‘ಬಿರಿದ ನೆನಪುಗಳು’, ‘ಮೆಘಧ್ವನಿ’, ‘ತ್ವಯ್ದ ಬದುಕಿನ ಸಾಲು’. ‘ಒರತೆ’, ‘ಕಾಡುದಾರಿಯ ಕಂದಿಲುಗಳು’, ‘ನಡುಹಗಲ ಸಂಜೆ’, ‘ಸಮುಕ್ಷ’, ‘ಕಥಾಲೋಕ’ ಹತ್ತು ಹಲವಾರು ಕೃತಿಗಳನ್ನು ರಚಿಸಿ, ನನ್ನೊಂದಿಗೆ ನಮ್ಮವನಾಗಿ ಎಲ್ಲರನ್ನು ‘ಅಣ್ಣಾ’ ಎನ್ನುವ ಸಂಬೋಧನೆಯಿಂದಲೇ ಬಾಚಿ ತಬ್ಬುವ ಉಮೇಶನ ಸಾಹಿತ್ಯದ ವಿಮರ್ಶೆಗೆ ಇನ್ನೂ ದೀರ್ಘವಾದ ದಾರಿಯಿದೆ, ಸಮಯವೂ ಇದೆ. ಆದರೆ ಬರಹವನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಎತ್ತಿಕೊಂಡಿರುವ ಇಂಥ ಗೆಳೆಯನನ್ನು ಪ್ರೋತ್ಸಾಹಿಸಬೇಕಾದುದು ನಮ್ಮ ಧರ್ಮವಾಗಿದೆ. ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಉಮೇಶ ಇದೇ ಮುಂಡರಗಿ ತಾಲೂಕಿನ ಕೆಲುರು ಗ್ರಾಮದವ. 42 ವಯಸ್ಸಿನ ಈ ನನ್ನ ಗೆಳೆಯನಿಗೆ ಸಾವಿರಾರು ಕನಸುಗಳು ಇವೆ. ಅವುಗಳನ್ನು ಕಾಪಾಡಿಕೊಂಡರೆ ಸಾಗಿದಷ್ಟು ದಾರಿಯೂ ಇದೆ. ಅವನ ಕಾವ್ಯ ಕುರಿತು ಮುಂಡರಗಿಯಲ್ಲಿ ಮಾತನಾಡುತ್ತ ನಾನು ಒಂದು ಮಾತನ್ನು ಹೇಳಿದೆ : With the magnanimity of innocence poets take birth, but alas! With individual hypocrisy they die. ಇದೊಂದು ಸ್ಥಳೀಯ ರೋಗ. ಎಷ್ಟೆಲ್ಲ ಪ್ರತಿಭೆ ಇರುವ ಅದೆಷ್ಟೋ ಬರಹಗಾರರು ಇದರಿಂದ ಬಿಡಿಸಿಕೊಳ್ಳುವದಾಗಿಲ್ಲ. ಪರಸ್ಪರ ಕಾಲೆಳೆಯುವದರಲ್ಲಿ ಯೇ ಕಾಲ ಕರಗಿ ಹೋಗಿದೆ. 
     ಸಂತೋಷದ ಸಂಗತಿ ಇದರಿಂದ ಹೊರತಾದವನು ಗೆಳೆಯ ಉಮೇಶ ತಿಮ್ಮಾಪೂರ. ಇವನ ಅನೇಕ ರಚನೆಗಳಲ್ಲಿ ನನಗೆ ಇಷ್ಟವಾದ ಒಂದು ರಚನೆ ನಿಮ್ಮೊಂದಿಗೆ. . . . .

ನೀನೆಂದರೆ
ಮೈಮುರಿದು ಮಲಗಿದ ಬೆಟ್ಟ
ಸುಖ ಸ್ಪರ್ಶ ನೀಡುವ
ತಂಗಾಳಿ
ತಲೆಯ ತೆವಲಿನ ತುರುಬ
ಬತ್ತಿ ಹೆಣೆದ ಜಡೆಗೆ
ತೀಡಿ ಮಾಡಿದ
ಮುತ್ತು ಮಾಲೆ

ನೀನೆಂದರೆ. .
ಕಾಡು ತೋಪಿನ ಮಾವು
ರೆಂಬೆಗಿಳಿದಾ ಗೊಂಚಲು
ಹಸಿದ ಹೊಟ್ಟೆ ತಣಿದ
ರಸಪಾಕ

ನೀನೆಂದರೆ. .
ಹರಿವ ನೀರ್ಝೆರೆ
ತುಳುಕಿ ದಡ ಸೇರುವ
ತೆರೆ
ಸರಿದ ಕತ್ತಲಿನ
ಸೆರಗ ಮುಡಿಯಲಿ ತುಂಬುವ
ಹಗಲ ಬೆಳಕಿನ
ಕಣ್ಣ ಮಂಜು

ನೀನೆಂದರೆ. .
ಒಡಲು ಬಿರಿದ
ನೆಲದೊಡತಿಯ
ಮಳೆಯ ಮುಂಜಾವ
ಎದೆಯೊಳಗ
         ಪುಳಕಗೊಂಡ ಜಲಕನ್ಯ