Total Pageviews

Wednesday, June 25, 2014

ಸಮರಸವೇ ಜೀವನ

ದಿನಾಂಕ 26 ಜೂನ್ ರಂದು ಸಂಯುಕ್ತ ಕರ್ನಾಟಕದಲ್ಲಿ ಸುದ್ದಿಯೊಂದನ್ನು ಓದಿದೆ. ಈ ಕತೆ ಉಜ್ಮಾಶೇಖ್ ಎನ್ನುವ ಮಹಿಳೆಯದ್ದು. ಉದ್ಯೋಗಸ್ಥಳೂ, ಸುಂದರಿಯೂ ಆಗಿರುವ ಇವಳ ವಯಸ್ಸು 24. ಈಕೆಯ ಮದುವೆಯಾಗಿದೆ ಗಂಡ ಸಭ್ಯಸ್ಥ, ಸಮಾಜದ ಪ್ರಜ್ಞೆಯಲ್ಲಿ ಬದುಕುವವ. ಆದರೆ ಹೆಂಡತಿ ಉಜ್ಮಾಶೇಖ್ ಇದಕ್ಕೆ ಸಂಪೂರ್ಣ ತದ್ವಿರುದ್ಧ. ರೂಪದ ಮದದಲ್ಲಿ ಎಂಥ ಸತ್ಯಗಳನ್ನೂ ಸುಟ್ಟು ಹಾಕಬಹುದು, ಸುಳ್ಳುಗಳನ್ನು ಸ್ಥಾಪಿಸಬಹುದು, ಯಾವನೊಂದಿಗೂ, ಎಲ್ಲಿ ಬೇಕಾದಲ್ಲಿಯೂ, ಯಾವಾಗ ಬೇಕಾದರೂ ಹೋಗಬಹುದು ಎನ್ನುವ ಹುಂಬ ಸಾಹಸದ ಹುಚ್ಚು ಹೆಣ್ಣು. 25 ರ ರಾತ್ರಿ ಈಕೆ ನೈಟ್ ಕ್ಲಬ್ಬಿಗೆ ತನ್ನ ಮೂರು ವರ್ಷದ ಮಗುವಿನೊಂದಿಗೆ ಹೋಗುತ್ತಾಳೆ. ಆದರೆ ಕ್ಲಬ್ಬಿನ ದ್ವಾರಪಾಲಕರು ಮಗುವಿನೊಂದಿಗೆ ಆಕೆಗೆ ಕ್ಲಬ್ಬಿನೊಳಗೆ ಹೋಗಲು ಅನುಮತಿಸುವುದಿಲ್ಲ. ಈ ಅಪಮಾನದಿಂದ ಕೆರಳಿದ ಉಜ್ಮಾಶೇಖ್ ಮಗುವನ್ನು ಒಯ್ದು ಕಾರಿನಲ್ಲಿ ಕೂಡಿಹಾಕಿ, ತಾನು ಮಾತ್ರ ಕ್ಲಬ್ಬಿನೊಳಗೆ ಹೋಗಿಯೇ ಬರಬೇಕು ಎನ್ನುವ ಹಠಕ್ಕೆ ಬಿಳುತ್ತಾಳೆ. ಆಕೆ ಕ್ಲಬ್ಬ ಸೇರಿದ ಮರುಕ್ಷಣ ಅಲ್ಲಿಗೆ ಬಂದ ಪೋಲಿಸರು ಕಾರಿನಲ್ಲಿ ಕೂಸು ಅರಚುವುದನ್ನು ಕಂಡು ಈಕೆಗಾಗಿ ಹುಡುಕಾಟ ಪ್ರಾರಂಭವಾಗುತ್ತದೆ. ಕ್ಲಬ್ಬಿನಲ್ಲಿ ಹಲವು ಗಂಡಸರ ಮಧ್ಯ ಅಮಲಿನಲ್ಲಿದ್ದ ಈಕೆಯನ್ನು ಬಂಧಿಸಿ ಸೆರೆಮನೆಗೆ ಅಟ್ಟಲಾಗುತ್ತದೆ.

        ಈ ದೇಶದ ಶಾಲೆಗಳಿಗೆ ಹೆಣ್ಣು ಮಕ್ಕಳು ಬಂದಾಗ, ಮಧ್ಯರಾತ್ರಿ ಹೆಣ್ಣುಮಗಳು ನಿರ್ಭಯವಾಗಿ ಓಡಾಡಿದಾಗ ಭಾರತಕ್ಕೆ ಸ್ವಾತಂತ್ರ್ಯ ಬಂತು ಎಂದುಕೊಳ್ಳುತ್ತೇನೆ, ಎಂದವರು ಅಂಬೇಡ್ಕರ್ ಮತ್ತು ಗಾಂಧಿ. ಆದರೆ ಈ ಎರಡೂ ಚಿಂತಕರ ಆಲೋಚನೆಯ ಕಾಳಜಿ ಮಾತ್ರ ಮಹಿಳೆಯ ಉದ್ಧಾರ. ಆದರೆ ಒಂದು ವಿಚಾರಕ್ಕೆ, ಕನಿಷ್ಟ ತನ್ನ ಸ್ವಯಂ ಆಂಗಿಕ ಮಿತಿಗಳಿಗೂ ಬದ್ಧಳಾಗದ ಯಾವ ಹೆಣ್ಣನ್ನೂ, ಯಾವ ಕ್ರಾಂತಿ ಪುರುಷರೂ ಉದ್ಧರಿಸಲು ಸಾಧ್ಯವಿಲ್ಲ. ಸಂಸ್ಕತಿಯ ತೊಟ್ಟಿಲಾದ ಮಹಿಳೆ, ಸಂಸಾರದ ಗುಟ್ಟು ಅಥವಾ ರಟ್ಟು. ಎರಡಕ್ಕೂ ಹೊಣೆಗಾರಳಾಗಿದ್ದಾಳೆ. ದಾಂಪತ್ಯ ಅವಳ ಕೈಯಲ್ಲಿರುವ ಹಾಲಿನ ಬಟ್ಟಲು. ಅದನ್ನು ಹುಳಿಯಾಗಿಸುವ ಅಥವಾ ಬದುಕಾಗಿಸುವ ಸಾಧ್ಯತೆ ಅವಳ ವಿವೇಚನೆಯನ್ನು ಆಧರಿಸಿದೆ. ಆದರೆ ಉಜ್ಮಾಶೇಖ್‍ಳ ಉದಾಹರಣೆಗೆ ಸಂಪೂರ್ಣ ತದ್ವಿರುದ್ಧವಾದ ಆದರ್ಶ ಒಂದು ದಿನಾಂಕ 25 ರಂದು ಬೇಲೂರಿನ ವೇಲಾಪುರಿ ಸಾಹಿತ್ಯ ವೇದಿಕೆ ನಮ್ಮ ಮುಂದಿರಿಸಿದೆ.
ವೇದಿಕೆಯು ತನ್ನ 21 ನೆ ಮನೆ ಮನೆ ಸಾಹಿತ್ಯಗೋಷ್ಠಿಯನ್ನು, ವಿಶ್ವ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿತ್ತು. ಈ ಸಂದರ್ಭದ ಆದರ್ಶಗಳು ಪ್ರೊ.ಜಯಣ್ಣಗೌಡ ಹಾಗೂ ಶ್ರೀಮತಿ ಶೋಭಾ. ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ, ಎನ್ನುವ ಹಾಗೆ ಇವರಿಬ್ಬರೂ ಪೂರೈಸಿದ 25 ವರ್ಷದ ದಾಂಪತ್ಯವನ್ನು ವಿಶ್ವ ಶಾಲಾ ಕಾಲೇಜು ಸಿಬ್ಬಂದಿಗಳು ಆಚರಿಸಿದರು. 25 ವರ್ಷಗಳ ಹಿಂದೆ ಜಯಣ್ಣಗೌಡರ ಮನೆಗೆ ಕಾಲಿಟ್ಟು ದೀಪ ಹಚ್ಚಿ, ಸಂಸಾರ ಬೆಳಗಿದ ಶ್ರೀಮತಿ ಶೋಭಾ ಈ ದಿನವೂ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎದೆಯೊಳಗೆ ಅಪಾರವಾದ ಪ್ರೀತಿ ಇಟ್ಟುಕೊಂಡೂ, ಸಾಮಾಜಿಕ ತುಡಿತ, ಶೈಕ್ಷಣಿಕ ಪ್ರೇಮ ಹಾಗೂ ಶಿಸ್ತುಗಳಿಗಾಗಿ ಎಂಥ ಹೋರಾಟಕ್ಕೂ ಸಿದ್ಧನಾಗುವ ಸಿಪಾಯಿಯಂಥ ಗೆಳೆಯ ಜಯಣ್ಣ, ಶೋಭಾ ಅವರಿಗೆ ಅಷ್ಟೆ ಅನುರೂಪದ ಮನುಷ್ಯ. ಸದಾ ಕಾಲು ಕೆದರಿ ಜಗಳಕ್ಕೆ ನಿಂತವನಂತೆ ಬಾಹ್ಯದಲ್ಲಿ ಕಾಣುವ ಜಯಣ್ಣ, ಮಹಾ ಹೆಂಗರಳಿನ ಮನುಷ್ಯ ಅವನ ಜಗಳವೂ ಒಂದು ರೀತಿಯ ಪ್ರೀತಿಯೇ. ನನ್ನ ದೃಷ್ಠಿಯಲ್ಲಿ ಇವನ ಜಗಳವನ್ನು ಅರ್ಥೈಸಿಕೊಳ್ಳದವರು ಇವನ ಪ್ರೀತಿಯನ್ನೂ ದಕ್ಕಿಸಿಕೊಳ್ಳಲಾಗುವುದಿಲ್ಲ.  
   
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದಯಾನಂದ ವಹಿಸಿಕೊಂಡಿದ್ದರು. ಆರಂಭಿಕವಾಗಿ ಶ್ರೀಮತಿ ಪದ್ಮಶ್ರೀರಾಗಂ ದಂಪತಿಗಳಿಗೆ ಶುಭಕೋರುತ್ತ, ಹೆಣ್ಣಿಗೆ ಸಹನೆ ಮುಖ್ಯ, ಸಹನೆ ಇದ್ದಲ್ಲಿ ಸುಂದರ, ಸುಧೀರ್ಘ ದಾಂಪತ್ಯ ಜೀವನ ಸಾಧ್ಯ. ದಾಂಪತ್ಯ ಜೀವನದಲ್ಲಿ ಜಗಳ, ಕೋಪ-ತಾಪ ಇದೆಲ್ಲದರೊಂದಿಗೆ ಪ್ರೀತಿ ಇರಬೇಕು ಎಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಬೇಲೂರಿನ ಸಾಮಾನ್ಯ ಶಾಲೆಗಳಲ್ಲಿಯೇ ಕಲಿತು, ಇಂದು ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶ್ರೀ ಹರ್ಷಾ ಹಾಗೂ ಅನೇಕ ಸಾಧಕರಿಗೆ ವೇಲಾಪುರಿ ಸಾಹಿತ್ಯ ವೇದಿಕೆಯವತಿಯಿಂದ ಸನ್ಮಾನಿಸಲಾಯಿತು. ವೈ.ಡಿ.ಡಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜು, ಬೇಲೂರು ಕೃಷ್ಣಮೂರ್ತಿ, ಮ.ಶಿವಮೂರ್ತಿ, ಪಾಪಣ್ಣ, ಸ.ರಂ.ಈರೇಗೌಡರು, ವಿಶ್ವ ಕಾಲೇಜು ಮತ್ತು ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥತರಿದ್ದರು. ಪ್ರೊ.ಸಿದ್ದೇಗೌಡರು ಕಾರ್ಯಕ್ರಮ ನಿರೂಪಣೆ ಮಾಡಿದರು.

Monday, June 23, 2014

ಶಿರಸಿ ಎಂದರೆ ಸಾಯದ ನೆನಪು

ಗೋಜಲು ಗೋಜಲಾಗಿಹ
ಜೀವನದ ದಾರದುಂಡೆಯ
ಬಿಡಿಸುತಿರೆ, ಗಡಸು ಗಡಸಾಗುತಿಹುದು
ಎಳೆ ಎಳೆಯ ಹೆಕ್ಕಿ
ಎಳೆಯುತಿರೆ ಸುಕ್ಕು
ಎಳೆ ಕೊನೆಯ ಸಿಕ್ಕದೇ
ಸುಕ್ಕು ಸುಕ್ಕಾಗುತಿದೆ
                                      ಮನಸು ಕಕ್ಕಾಬಿಕ್ಕಿಯಾಗಿದೆ      ('ಒಡಂಬಡಿಕೆ', ಡಾ.ಪವಾರ)
        2002 ರಲ್ಲಿ ಭಟ್ಕಳ ಗುರು ಸುಧೀಂದ್ರ ಕಾಲೇಜಿನಲ್ಲಿ, ಒಂದು ವರ್ಷದ ಮಟ್ಟಿಗೆ ಉಪನ್ಯಾಸಕನಾಗಿದ್ದೆ. ಅದೇಕೊ ವ್ಯಾವಹಾರಸ್ಥ, ವ್ಯಾಕರಣಬದ್ಧ ಆ ಜನಗಳಿಗೂ, ಅಲ್ಲಿಯ ಮೈ ನವಿರೇಳಿಸುವ ನಿಸರ್ಗ ಸೌಂದರ್ಯಕ್ಕೂ, ಬೆವರಿಳಿಸುವ ಊರಿನಲ್ಲಿ ಬಿಸಿ ಬಿಸಿಯಾದ ನನ್ನ ಆಲೋಚನಾ ಕ್ರಮಕ್ಕೂ ಹೊಂದಾಣಿಕೆಯಾಗದೆ ಕವಳಾ ಹಾಕುವ ಸುಖಕ್ಕಾಗಿ, ಕಾಲೇಜು ಬಿಟ್ಟೇನು ಕವಳ(ಅವಳ?) ಬಿಡಲಾಗದು ಎಂದು ರಾಜಿನಾಮೆ ಬಿಸಾಕಿ, ಹೊರಟು ಬಂದದ್ದಾಯಿತು. ಆದರೆ ಅವುಗಳ ನೆನಪಿನಲ್ಲಿಯೇ ಅದೆಷ್ಟೋ  ಕಾಲ ನೂಕಿದ್ದಾಯಿತು.

        ಈ ಭಾಗ ಎಂದರೆ ಶುರುವಾಗುತ್ತದೆ ನನ್ನ ಕತೆ ಉಜಿರೆ, ಗುರುವಾಯುವಿನಕೆರೆ, ಮುಡಬಿದ್ರೆ, ಕುಂದಾಪುರ, ಭಟ್ಕಳ, ಸಿದ್ದಾಪುರ ಮತ್ತು ಶಿರಸಿ. ಹಳೆಯ ಮುಸ್ಲಿಂ ಗೆಳತಿಯೊಬ್ಬಳು ಭಟ್ಕಳದಿಂದ ಬಂದು ಶಿರಸಿಯಲ್ಲಿ ಸಂಸಾರ ಹೂಡಿದಳು, ಎಳೆಯ ಗೆಳತಿಯೊಬ್ಬಳು ನರಗುಂದದಿಂದ ಬಂದು ಮುಡಬಿದ್ರೆಯಲ್ಲಿ ಬದುಕು ತೆಯ್ದಳು, ಶಿಷ್ಯನೊಬ್ಬ ಸಿದ್ದಾಪುರದಲ್ಲಿ ಸಂಸಾರದ ಮಠ ಕಟ್ಟಿಕೊಂಡ, ಪ್ರೀತಿಯ ಗೆಳೆಯನೊಬ್ಬ ಭಟ್ಕಳದಲ್ಲಿ ಮಡದಿಯೊಂದಿಗೆ ಸಂಸ್ಥೆಯೊಂದಕ್ಕೆ ಬದುಕನ್ನೇ ಸಮರ್ಪಿಸಿಕೊಂಡ. ಈಗೊಬ್ಬ ಇದ್ದಾನೆ ಅಲೆಮಾರಿಯಂತೆ, ಈ ಮಧ್ಯ ಸಾವಿನೊಂದಿಗೆ ಸೆಣಸಾಡುತ್ತ ನಾನು ಮತ್ತೆ ಮತ್ತೆ ಮುಡಬಿದ್ರೆಗೆ ಬಂದದ್ದೇ ಒಂದು ಕಂತೆ.

    ಮೀನು ತಿನ್ನಲು ಬಾರದ ದಿನಗಳಲ್ಲಿ ಮತ್ಸ್ಯ ಸಾಗರದಲ್ಲಿದ್ದೆ. ಇಲ್ಲಿ ಬಂದಾಗಲೆಲ್ಲ ನನ್ನನ್ನು ಕಾಡುವುದು ಸ್ವಚ್ಚ, ಶಾಂತ, ಖಾಲಿ ಖಾಲಿ ರಸ್ತೆಗಳು, ಮೀನಿನ ಬಾಝಾರುಗಳು, ತೈಲಗಳು, ಕಶಾಯಗಳು, ನನ್ನ ಪ್ರೇಯಸಿಗೆಂದೇ ಒಯ್ಯುತ್ತಿದ್ದ ದಂಡೆ ದಂಡೆ ಹೂಗಳು, ಈ ಹೂವಿಗೆ ನನ್ನ ಪಾಲಿನ ಕೊನೆಯ ಹುಡುಕಾಟದ ಸ್ಥಳ ಈ ಶಿರಸಿ. ಶಿರಸಿ ಎಂದರೆ ಈಗಲೂ ಸಾಕಿಯರ ಸಾಗರವೆ. ಇಂಥ ಶಿರಸಿಗೆ ಅತಿಥಿಯಾಗಿ ಬರುವ ಆಸೆ ಇತ್ತು, ಆದರೆ ಅದಕ್ಕಾಗಿ ಒಂದು ಅವಕಾಶ ಬೇಕಿತ್ತು. ಅದು ಶಿರಸಿಯ ಲಯನ್ಸ್ ಕ್ಲಬ್, ಲಯನೆಸ್ ಎಜುಕೇಶನ್ ಸೊಸೈಟಿ ಹಾಗೂ ಸನ್ಮತಿ ಸಾಹಿತ್ಯ ಪೀಠಗಳ ಸಂಯುಕ್ತ ಆಶ್ರಯದಲ್ಲಿದಿನಾಂಕ 22/06/2014 ರಂದು,
ನಾಡಿನ ಹೆಸರಾಂತ ವೈದ್ಯರಲ್ಲಿ ಒಬ್ಬರಾದ ಡಾ.ಕೆ.ವಿ.ಪವಾರ ಅವರ 'ಹುಡುಕಾಟ' ಕೃತಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳವುದರ ಮೂಲಕ ಸಿಕ್ಕಿತು. ಡಾ.ಎ.ಎಸ್.ಪಟವರ್ಧನ ಸಭಾ ಭವನ, ಶಿರಸಿಯಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯಕ್ಕಾಗಿ ರಾಷ್ಟ್ರಪತಿಗಳಿಂದ ಪುರಸ್ಕತರಾದ ಡಾ. ಧರಣೇಂದ್ರ ಕುರುಕುರೆ ವಹಿಸಿದ್ದರು. ನಾನು ಪವಾರ ಅವರು ಕಾವ್ಯ ಕ್ರಮಿಸಿದ ರೀತಿಯನ್ನು ಕುರಿತು ಮಾತನಾಡಿದೆ. 'ಗೀತಾಂಜಲಿ', 'ಒಡಂಬಡಿಕೆ' ಹಾಗೂ 'ಹುಡುಕಾಟ' ಕೃತಿಗಳಲ್ಲಿ ಪವಾರ ಕವಿಯಾಗಿ ಬೆಳೆಯುತ್ತಿರುವ ರೀತಿ ವಿವರಿಸಿದೆ. ಕಾರ್ಯಕ್ರಮದಲ್ಲಿ ಪ್ರಭಾಕರ ಹೆಗಡೆ, ತ್ರಿವಿಕ್ರಮ ಪಟವರ್ಧನ, ಗಂಗಾ ಹೆಗಡೆ, ಮಾಧವಿ ಭಂಡಾರಿ, ಕೆರೆಮನೆ ಹೆಗಡೆ, ತಾರಾ ಹೆಗಡೆ, ಶ್ಯಾಮಸುಂದರ ಭಟ್, ಡಿ.ಎಸ್.ನಾಯಕ ಹಾಗೂ ಸ್ಥಳೀಯ ಗಾಯಕರು ಭಾಹವಹಿಸಿದ್ದರು.


Saturday, June 21, 2014

ಹತ್ತು ರೂಪಾಯಿಗೆ ಹಾದಿ ತಪ್ಪುವ ಬದುಕು

       ವರುಷಗಳ ಹಿಂದಿನ ಮಾತು. ಗೆಳತಿಯೊಬ್ಬಳಿಗೆ ಹಿಂದಿ ಚಿತ್ರ ಒಂದರ ಕತೆ ಹೇಳುತ್ತಿದ್ದೆ, ಚಪ್ಪಲಿ ಅಂಗಡಿಯೊಂದರಲ್ಲಿ ಪಕ್ಕದ ತಲೆ ಹಿಡುಕಿಯೊಬ್ಬಳಿಂದ ಇಪ್ಪತ್ತು ರೂಪಾಯಿ ಉದಾರವಾಗಿ ಪಡೆಯುವ ಉಪನ್ಯಾಸಕನ ಹೆಂಡತಿ, ಬರೀ ಹೊಗಳಿಕೆಗಳಿಗೆ ಮರುಳಾಗುತ್ತ ಹಾದಿ ತಪ್ಪಿ ಹಾಸಿಗೆಯಿಂದ ಹಾಸಿಗೆಗೆ ಹರಿಯುತ್ತ ಹದ ತಪ್ಪುತ್ತಾಳೆ. ಬದುಕಿಯೂ ಅಪರಾಧಿ ಪ್ರಜ್ಞೆಯ ಹೆಣವಾಗುತ್ತಾಳೆ. ಹೆಣ್ಣಿಗೆ ಹೊಗಳಿಕೆ, ಸಂಶಯ, ದುಸ್ಸಾಹಸಗಳೆ ವೈರಿಗಳು.

   ಇಂಥದೇ ಒಂದು ಘಟನೆಗೆ ನಾನು ಮುಖಾಮುಖಿಯಾದೆ. ಇದು ಕತೆಯಲ್ಲ ನಿತ್ಯ ಉರಿದ ಚಿತೆ.

       ರಾತ್ರಿ ಕಡೂರಿಂದ ರೈಲಿಗೆ ಹೊರಟ ನನಗೆ ಯುವಕನೊಬ್ಬ ಸಿಕ್ಕ. ಮಾತಿಗಿಳಿದೆ. ಕತೆ ಅನಾವರಣವಾಯಿತು. ಈತ ಕಳೆದ ಮೂರು ದಿನಗಳಿಂದ ಟ್ರೇನಿನಲ್ಲಿ ಹೇಗೆ ಓಡಾಡುತ್ತಿದ್ದಾನೆಂದು ಕೇಳಿ ಗಾಭರಿಯಾದೆ. ಎರಡು ಖಾಲಿ ಕೊಡ, ಒಂದು ಕೈ ಚೀಲು, ಒಳಗೊಂದು ದೇವರ ಫೋಟೊ, ತಾಯಿಗಾಗಿ ಬಳೆಗಳ ಕಟ್ಟು, ತಂಗಿಗೆ ಚುರುಮುರಿ, ಏನೇನೊ. ಆತನಿಗೆ ಮರಳಿ ಮನೆ ಸೇರುವ ಆಸೆ ಆದರೆ ಅಪ್ಪನೊಂದಿಗೆ  ಸುಳ್ಳು ಹೇಳಿದ, ಜಗಳಾಡಿದ, ಓಡಿಬಂದ ಭಯ. ಮನಸ್ಸು ಬಾಗಲು, ಮಾಗಲು ಸಿದ್ಧವಿಲ್ಲ. ಅದುದಿಷ್ಟೇ ಅಪ್ಪನ ಜೇಬಿನಿಂದ ಈತ ಹತ್ತು ರೂಪಾಯಿ ಕದ್ದಿದ್ದಾನೆ. ಹೊರಳಿ ಹೋಗಲು ಮುಖವಿಲ್ಲ, ಓಡಿ ಹೋಗಲು ಮನಸ್ಸಿಲ್ಲ. ರಾತ್ರಿಯೆಲ್ಲ ಬೋಗಿಯಲ್ಲಿದ್ದವರೆಲ್ಲ ಹೇಳಿ ಹೇಳಿ ಸೋತು ಹೋದರು. ಬೆಳಗಿನ ಸಮಯ, ಆಲಮಟ್ಟಿಯಿಂದ ಒಬ್ಬ ಶಾಲಾ ಶಿಕ್ಷಕಿ ಟ್ರೇನು ಹತ್ತಿದರು. ಅವರೂ ಈತನ ಕತೆಗೆ ಕಿವಿಯಾದರು, ತಕ್ಷಣ ಆತನ ಕೆನ್ನೆ ಹಿಡಿದು, ತಲೆ ತೀಡಿ ನನಪ್ಪ, ಹೆತ್ತವರ ಜೀವಾ ಉರಸಬ್ಯಾಡ ನಿಮ್ಮಪ್ಪಗ ಹತ್ತು ರೂಪಾಯಿ ನಾ ಕೊಡ್ತೀನಿ. ಬಸ್ ಚಾರ್ಜ್ ಕೊಡ್ತೀನಿ ಮನೆಗೆ ಹೋಗು ಇಲ್ಲಾ ಅಂದ್ರ ಪೋಲಿಸರಿಗೆ ಕೊಡ್ತೀನಿ ಎಂದು ಗದರಿಸಿದರಷ್ಟೆ, ಯುವಕ ಕಣ್ಣೀರಾಗಿ ಇಳಿದುಕೊಂಡ. ನಾನು ಆ ತಾಯಿಯ ಕೈ ಹಿಡಿದು ಆತ್ಮಸ್ಥೈರ್ಯ ಪಡೆದುಕೊಂಡೆ.

         ನನ್ನ ಕತೆಯೂ ಹಾಗೆಯೇ ಇತ್ತು ಮೇ 12 ರಿಂದ. ಆನಂತರ ತೊರೆದ ಮನೆಯ ಕಿಡಕಿಯ ಪರೆದೆಗಳು ಸರಿದಾಡಿ, ದೀಪ ಬೆಳಗಿ, ದೇಹ ಹರಿದಾಡುವುದನ್ನು ಕಂಡ ಮೇಲೆ ನಾನು ಅಲ್ಲಿಂದ ತಣ್ಣಗೆ ದೂರ ಸರಿದೆ.  

     ಎಲ್ಲ ಕಾಯುವಿಕೆ, ಕೂಡಿಸುವಿಕೆ, ಮತ್ತೆ ಮತ್ತೆ ಕ್ಷಮಿಸುವಿಕೆಗಳ ಹಿಂದೆ ಬರೀ ಕಾಸಿನ, ಕಾಮದ, ಲಾಭದ ಲೆಕ್ಕಾಚಾರಗಳೇ ಇರುವುದಿಲ್ಲ. ಪ್ರಪಂಚದಲ್ಲಿ ವಿನಾ ಕಾರಣ ಪ್ರೀತಿಸುವವರಿದ್ದಾರೆ. ಅವರೆಲ್ಲ ಬರೀ ಗಂಡಸರಲ್ಲ. ಅವರೊಳಗಿನ ತಾಯಿ ಅವರ ದೌರ್ಬಲ್ಯವಲ್ಲ. ಇಂಥ ಪ್ರೀತಿಯನ್ನು ಉಡಾಫೆ ಎಂದುಕೊಳ್ಳುವುದು ಉಡಿಯಲ್ಲಿ ಪಾಪ ಕಟ್ಟಿಕೊಳ್ಳುವುದು ಎರಡೂ ಒಂದೇ. ಇದು ಇನ್ನಾವುದೋ ಜನ್ಮಕ್ಕೆ ಕೈ ಕಳೆದುಕೊಳ್ಳುವ ಸುಳಿವು. 

        ಯುವಕ ಈಗ ಮನೆ ಸೇರಿರಬಹುದು. ಈಗ ಆ ಮನೆಯಲ್ಲೇನು ನಡೆಯುತ್ತಿದೆ? ಅದು ನನ್ನ ಕುತೂಹಲವಾಗಬಾರದು, ವ್ಯಸನವಾಗಬಾರದು, ಈಗ ಅಲ್ಲಿ ಕೈ ಕೈ ಕೂಡಿರಬಹುದು, ಅಪ್ಪಿ ಕಣ್ಣೀರಾಗಿರಬಹುದು, ತಪ್ಪಿ ಕುದಿಯುತ್ತಿರಬಹುದು ಅದು ನಮ್ಮ “ಬುದ್ಧಿಯಾಚೆಗಿನ ಮಾತು. ಪ್ರೀತಿಯಂಥ ವಸ್ತು ಜಗದಲ್ಲಿ ಕಾಣೆ, ಮನಗಂಡ ಮಾತು”

Saturday, June 14, 2014

ಕಣ್ಣು ಕೋರೈಸುವ ಕಂಪ್ಯೂಟರ್ ಕಣ್ಣೀರೊರೆಸುವುದಿಲ್ಲ

ಹಳೆಮನೆ: ಒಂದು ನೆನಪು    
ವರ್ತಮಾನದ ಬಿಕ್ಕಟ್ಟುಗಳು
 ದಿನಾಂಕ: 14/06/2014    ಸ್ಥಳ: ಶ್ರೀರಂಗ ಸಭಾಂಗಣ, ರಂಗಾಯಣ
ಭಾಷೆಯನ್ನು ಕುರಿತು ಮಾತನಾಡುವಾಗಲೆಲ್ಲಾ ಅಲ್ಲಮನ ಒಂದು ಸಾಲನ್ನು ಹಳೆಮನೆ ಪದೇ ಪದೇ ಹೇಳುತ್ತಿದ್ದ ನೆನಪು. 'ಪದವನರ್ಪಿಸಬಹುದಲ್ಲದೆ ಪದಾರ್ಥವನ್ನರ್ಪಿಸಲಾಗದು'. ಈಗ ಈ ಮಾತನ್ನು ಬದಲಿಸಿ ನಾನು ಹೇಳಬೇಕು, `ಪದವನ್ನೂ ಅರ್ಪಿಸಲಾಗದು ಹಳೆಮನೆಯವರೆ.’ ಪದ, ಪದಾರ್ಥಗಳೆಲ್ಲವೂ ಮೌನದೀಚೆಗಿನ ವ್ಯಾವಹಾರಿಕ ತಳಮಳಗಳಷ್ಟೇ. ಅದನ್ನು ಮೀರಿದ ಮೇಲೆ ಮೌನದ್ದೇ ಸಾಮ್ರಾಜ್ಯ.
ಸತ್ತ ವ್ಯಕ್ತಿಯ ಸತ್ಯದ ಮೂಲಗಳನ್ನು ತಡಕಾಡುವುದು ಅಸಾಧ್ಯವೂ ಮತ್ತು ಅಸತ್ಯವೂ ಕೂಡ. ದಿನಾಂಕ 12/06/11ರ ಸಾಯಂಕಾಲದ ಆರು ಗಂಟೆಗೆ ರಂಗಾಯಣದ “ಭೂಮಿಗೀತ”ದಲ್ಲಿ ರಂಗಚಿಂತಕರು, ಮೈಸೂರಿನ ಒಡನಾಡಿಗಳು ಹಮ್ಮಿಕೊಂಡ “ಹಳೆಮನೆಯವರಿಗೆ ಶೃದ್ಧಾಂಜಲಿ” ಕಾರ್ಯಕ್ರಮ ಮುಗಿಸಿಕೊಂಡು ಬಂದು ಕುಳಿತು ಈ ಲೇಖನದ ಮುಕ್ತಾಯದ ಸಾಲುಗಳನ್ನು ಬರೆಯುತ್ತಿದ್ದೇನೆ. ಆ ಕೆಟ್ಟ ಕಾರ್ಯಕ್ರಮದಲ್ಲಿ ‘ಜನ್ನಿ’ಯೊಬ್ಬನವೇ ಮಾತುಗಳು. ಒಂದು ರೀತಿಯಲ್ಲಿ ‘ಜ್ಯೂಲಿಯಸ್ ಸೀಜರ್’ ನಾಟಕದಲ್ಲಿ ಮಾರ್ಕ್ ಎಂಟನಿಯ ಮಾತುಗಳಂತೆ. ಅದೇ ವೇಳೆಗೆ ಸರಿಯಾಗಿ ‘ಪ್ರಜಾವಾಣಿ’ಯ ಸಹೋದರಿ ಸುಶೀಲಾ ಡೋಣೂರ ಒಂದು ಎಸ್. ಎಂ. ಎಸ್ ಕಳುಹಿಸಿದ್ದಾಳೆ. “Being frank is always better than being falsely sweet. Because by being frank in life, we may get a lot of true enemies but surely not untrue friends
 ನಮ್ಮ ಸುತ್ತಲಿನ ಸತ್ಯವನ್ನು ದೂರಿಕರಿಸಿ ದೂರದ ಅವಾಸ್ತವವನ್ನು ನಂಬುವ ವರ್ತಮಾನದ ಯುವ ಜನಾಂಗ, ಕಾರ್ಪೊರೇಟ್ ವಲಯದ ಬಳಸಿ ಬಿಸಾಡುವ ಸಿದ್ಧಾಂತಕ್ಕೆ ಮರುಳಾಗಿದ್ದಾರೆ. ಅವಕಾಶಗಳ ಭ್ರಮೆಯನ್ನು ಹುಟ್ಟಿಸುವ ಈ ಬಿಕ್ಕಟ್ಟು, ಅದೇ ಕಾರ್ಪೊರೇಟ್ ವಲಯದಿಂದ, ಮತ್ತೆ ಅದೇ ಸಿದ್ಧಾಂತದಿಂದ ಮೋಸಕ್ಕೆ ಹೋಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ. ಓಡಿಹೋಗಲಾಗದ, ನಿಂತು ಬದುಕಲಾಗದ ಆದರೆ ನಿರಂತರ ಹುಚ್ಚು ಹುಡುಕಾಟಕ್ಕೆ ಹಚ್ಚುವ ಈ ಹವ್ಯಾಸ, ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ನಂಬಿಕೊಂಡಿರುವವರಿಗೆ ಹುಡುಗಾಟವೆನ್ನಿಸಿದೆ. ಕಣ್ಣು ಕೋರೈಸುವ ಟ್ಯಾಬ್, ಮೋಬೈಲ್, ಕಂಪ್ಯೂಟರ್‍ಗಳು ಕಣ್ಣೀರೊರೆಸುವುದಿಲ್ಲ. ಫ್ಯಾಶನ್‍ನನ್ನು ಕುರಿತು ಮಾತಾಡುವ ಈ ಲೋಕ ಪ್ಯಾಶೆನ್ ಕುರಿತು ಮನುಷ್ಯನನ್ನು ಕೇಂದ್ರಿಕರಿಸುವುದಿಲ್ಲ. ಸಹನೆಯಂತೂ ಸತ್ತುಹೋದ ವಿಚಾರ. ಸಾಮಾಜಿಕ ತಾಣಗಳೆಂದು ಗುರುತಿಸಲ್ಪಡುವ ಈ ಅಂತರ್‍ಜಾಲ ತಾಣಗಳು ನಿಜವಾದ ಸಾಮಾಜಿಕತೆಯ ಮನುಷ್ಯ ಸೌಂದರ್ಯವನ್ನು ಕೊಂದು ಇರುವ ಮನೆಯಲ್ಲಿಯೇ ಒಬ್ಬ ಇನ್ನೊಬ್ಬನೊಂದಿಗೆ ಮಾತನಾಡದಂತೆ ಮಾಡಿ ಆತನನ್ನು ಭ್ರಮೆಗಳಿಂದ ತುಂಬುತ್ತದೆ. ನಾವು ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಈ ಮಾರ್ಗ ನಾನು ಏನಾಗಬೇಕು ಎನ್ನುವುದಕ್ಕೆ ಕನ್ನಡಿ ಹಿಡಿಯುವುದಿಲ್ಲ. ಎಲೆಕ್ಟ್ರಾನಿಕ್ ಜಗತ್ತು ನಮ್ಮಲ್ಲಿ ಧೈರ್ಯವನ್ನು ಬೆಳೆಸಲಿಲ್ಲ, ಹೇಸಿ ಧೈರ್ಯವನ್ನ, ಭಂಡ ಧೈರ್ಯವನ್ನ ಬೆಳೆಸಿತು. ಆಳ ಅಧ್ಯಯನದ ಅವಶ್ಯಕತೆಯನ್ನು ದೂರಿಕರಿಸಿ ಮುಂಜಾನೆ ಕುಡಿಯುವ ಚಹಾ ಕುರಿತಾದ ತಿಳುವಳಿಕೆಗೂ ತನ್ನನ್ನು ಮೊರೆ ಹೋಗುವಂತೆ ಮಾಡಿತು. ದುಡ್ಡು, ಅವಕಾಶ ಎನ್ನುವ ಪದಗಳ ಬೆನ್ನು ಹತ್ತಿ ಆತ್ಮವನ್ನು ಧಿಕ್ಕರಿಸಿ ಅನ್ಯರ ಭಾವನೆಗಳನ್ನು ಅವಹೇಳಿಸಿ ಓಡಿಹೋಗುವ ನಿರ್ಲಜ್ಜತೆಯನ್ನು ಬೆಳೆಸಿತು. 
ಮುಂದಿನ ಮರೀಚಿಕೆಯನ್ನು ಮೆಚ್ಚಿಕೊಂಡವರು ಹಿಂದಣ ಅನಂತವನ್ನು ಅಸಹ್ಯಗೊಳಿಸುವ ಆತ್ಮ ಭ್ರಷ್ಟತೆಯನ್ನು ಬೆಳೆಸಿತು. ಈ ರೀತಿ ಬುಡವಿಲ್ಲವಾಗಿರುವ ಈ ನನ್ನ ಎಳೆಯ ಜಗತ್ತನ್ನು ನಾನು ವಾಟೆವರ್ ಜನರೇಶನ್ ಎನ್ನುತ್ತೇನೆ, ಎನ್ನುತ್ತಾರೆ ನನ್ನೊಂದಿಗಿದ್ದ ಗೆಳೆಯ ನವೀನ್. ಇದೊಂದು ಶೇಮ್‍ಲೆಸ್ ಸೋಸಾಯಿಟಿ ಎನ್ನುತ್ತಾರೆ ಹಿರಿಯ ಚಿಂತಕಿ ಡಾ.ಇಂದಿರಾ. ಈ ಬಿಕ್ಕಟ್ಟೆ ನಮ್ಮ ಮೂಲ. ಏಕೆಂದರೆ ವರ್ತಮಾನದ ಹೂಗಳನ್ನು ಧಿಕ್ಕರಿಸಿ ಭವಿಷ್ಯದ ಹಣ್ಣುಗಳ ಕನಸು ಕಾಣಲಾಗುವುದಿಲ್ಲ ಹಾಗೆಯೇ ನಮ್ಮ ಮುಂದೆಯೇ ನಾಶವಾಗುವ ಯುವಜನಾಂಗವನ್ನು ನಿರ್ಲಕ್ಷಿಸಿ ಭವಿಷ್ಯದ ಭವ್ಯ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.

Tuesday, June 10, 2014

ಸಾಧು ಸಂಗ ಕೊಟ್ಟು ಎನಗೆ ಪಾರುಗಾಣಿಸಯ್ಯ ಕೊನೆಗೆ.....


     ಪೂಜ್ಯ ಮತ್ತು ಪೂಜಕ ಈರ್ವರೂ ಈಗ ಒಂದೇದ್ವೈತಕ್ಕೆ ಇಂಬಿಲ್ಲವಯ್ಯಾ.
ಕರ್ಪುರವು ಉರಿಯಲು ನಿಶ್ಯೂನ್ಯವಾಹುದಯ್ಯಾ
ಅಂತೆಯೇ ನಿಮ್ಮ ಚೇತನವು ಅಪ್ಪುದಯ್ಯಾ  

                                                       
                                                             - ಬುರಹಾನ್ ಅಲ್-ದಿನ್

     ಮೇ 12 ರಿಂದ ಜೂನ್ 12 ರ ವೇಳೆ ನನ್ನ ಬದುಕಿನ ಅತ್ಯಂತ ಮಹತ್ವದ ಘಳಿಗೆ. ಇದೊಂದು ರೀತಿ ಆತ್ಮಾವಲೋಕನದ, ದೇಹಾವಲೋಕನದ ಸ್ಥಿತಿ ಎಂದೇ ಹೇಳಬೇಕು. ಈಗೆಲ್ಲ ನನ್ನ ಕೈ ಹಿಡಿದುದು ರಿಚರ್ಡ ಈಟನ್ ಅವರ ಸೂಫೀಜ್ ಆಫ್ ಬಿಜಾಪುರ ಕೃತಿ. ಮಹತ್ವದ ಸಾಲೊಂದನ್ನು ಓದಿಬಿಟ್ಟೆ, 'ಬಿಜಾಪುರ ಸೂಫಿಗಳನ್ನು ಹುಗಿದ ಸ್ಥಳಗಳ, ಕಟ್ಟಿದ ಕಟ್ಟಡಗಳ ಸಂಖ್ಯೆ ಮೂನ್ನುರರ ಸಮೀಪ.' ವಾಕ್ಯ ಓದುತ್ತಲೇ ಕುಟುಂಬ ಕಟ್ಟಿಕೊಂಡು ಓಡಿಯೇ ಬಿಟ್ಟೆ ನನ್ನೂರಿಗೆ, ಅದನ್ನು ತನ್ನ ಗರ್ಭದಲ್ಲಿರಿಸಿಕೊಂಡ ಬಿಜಾಪುರಕ್ಕೆ. ಬೇಡವಾಗಿದ್ದ ಭಾರಗಳನ್ನು ಚಿತಾಸಾಕ್ಷಿಯಾಗಿ ಹಿಡಿದ ಕಾರಣಕ್ಕೆ ನಿಭಾಯಿಸಲು ಇಂದಿಗೂ ಹೆಣಗಾಡಿದಂತೆ ಅಂದು ನಮ್ಮಪ್ಪನ ಒಂದು ಕಾಲ ಕನಸಿನ ಹೆಗಲಾಗಿದ್ದೆ ನಾನು. ಇಂಗ್ಲೀಷ್ ಸಾಹಿತ್ಯ ಓದಬೇಕು, ಅದರೊಳಗೇ ಮಹತ್ವದ ಸಾಧನೆಯನ್ನು ಮಾಡಬೇಕು ಎನ್ನುವ ಆತನ ಕನಸಿಗೆ ಆಸರೆಯಾಗಿ ನಿಂತವರು, ನನ್ನನ್ನು ಆ ಸಾಧನೆಗೆ ಅಣಿಯಾಗಿಸಿದವರು ಇದೇ ಸೂಫಿಗಳು ಮತ್ತು ಅವರ ದರ್ಗಾಗಳು. ಬೆಳಗಿನ ಆರು ಗಂಟೆಗೆ ಬಂದು ಈ ಸ್ಥಳಗಳಲ್ಲಿ ಕುಳಿತುಕೊಳ್ಳುತ್ತಿದ್ದ ನಾನು ಮಧ್ಯಾಹ್ನದ ಮೂರು ಗಂಟೆಗೆ ಕೋಣೆ ಸೇರುತ್ತಿದ್ದೆ. ಅಂದು ನನ್ನ ಜೊತೆಯಾದ ಸೂಫಿಗಳು ಇಂದಿಗೂ ನನ್ನ ಆತ್ಮದ ಕನವರಿಕೆಯಾಗಿದ್ದಾರೆ.  

ನನಗೆ ನನ್ನ ಜನ, ನನ್ನ ಸಂಸ್ಕೃತಿ ಅಸಹ್ಯಕ್ಕೊಳಪಡುವುದು ಸಹಿಸಲಾಗದ ವಿಚಾರ. ಬಿಜಾಪುರದ ನನ್ನ ಸಾಧನೆಯ ಸ್ಥಳಗಳು, ನನ್ನ ಏಕಾಂತದ ಅಸಹಾಯಕ ಕ್ಷಣಗಳು ಎಲ್ಲ ವಿವರಿಸುತ್ತ ಶಿಶುನಾಳಕ್ಕೆ ಬಂದಾಗ ಮಬ್ಬುಗತ್ತಲೆ. ಅವನ ಕೆಲವು ಸಾಲುಗಳು -
ಬಹಳೊಂದು ಚೆಲ್ವಿಕೆ ನನ್ನ ಹೆಂಡತಿ
ಅಳು ತಾಪ ಕೇಳಿಸಿದಿ ನನ್ನ ಹೆಂಡತಿ
ಕೀಳು ಮಾತೆಲ್ಲ ಜಗದೊಳಗೆ ಮೋಹಿಸಿ
ಸೂಳೆಯೆಂದೆನಿಸಿದಿ ನನ್ನ ಹೆಂಡತಿ


 ಏಟ್ಸನ 'ಪ್ರೇಯರ್ ಟು ಮಾಯ್ ಡಾಟರ್' ನೆನಪಿಸುವ ಈ ಸಾಲುಗಳು ವರ್ತಮಾನವನ್ನು ವ್ಯಂಗಿಸುತ್ತಲೇ ನಮ್ಮ ಬದುಕುಗಳನ್ನು ತಿದ್ದುವ ಶರೀಫ, ಬದುಕಿದ್ದಾಗಲೂ ಶಿಕ್ಷಕ, ಗತಿಸಿದ ಮೇಲೂ ಶಿಕ್ಷಕ ಎನ್ನುವುದನ್ನು ಖಾತರಿ ಪಡಿಸುತ್ತವೆರ ಹೆಂಡತಿಯಾದವಳು ಹೊಸ್ತಿಲೊಳಗೆ ಇರಬೇಕಾದುದರ ಸುಖವನ್ನು ವಿವರಿಸುತ್ತದೆ.   

      ಒಂದು ವಾರದ ಅಲೆದಾಟದ ನಂತರ ಊರಿಗೆ ಬಂದಾಗ ಎಷ್ಟೊಂದು ತಾಯಂದಿರ, ಅಭಿಮಾನಿಗಳ ಹರಕೆ ಮತ್ತು ಕಾಣಿಕೆ. ಝಾನ್ಸಿ, ಮುಂಬಯಿ, ಗೋಕರ್ಣ, ಚಿಂತಾಮಣಿ ಸಾಲು ಸಾಲಾಗಿ ಹರಕೆಗಳು, ಹಾರೈಕೆಗಳು ಮತ್ತು ಕೊಡುಗೆಗಳು. ಇದನ್ನೊಂದು ಶಾಲುಗಳ ಸಂತೆಯೇ ಎನ್ನಬೇಕು. ಇನ್ನು ಹರಕೆಯ ಈ ಶಾಲುಗಳು ನನ್ನ ಬದುಕಿನ ಭಾಗಗಳೇ ಆಗಬೇಕು. ಅಷ್ಟೊಂದು ಬಂದಿವೆ, ಕೆಲವು ನಿಮ್ಮೊಂದಿಗಿವೆ. ನಿಮ್ಮ ಅಭಿಮಾನದ ಧೂಳಿನ ಕಣವಾದ ನಾನು ಅಹಂಕಾರದ ಸಂಕೇತವಾಗದೆ ಹೋದರೆ ಸಾಕು ನಾನು ಈ ದೇಶದ ಸೂಫಿಗಳನ್ನು, ಸಾಧು-ಸಂತರನ್ನು ಗೌರವಿಸಿದ್ದೇನೆ ಎಂದುಕೊಂಡಿದ್ದೇನೆ.