Total Pageviews

Thursday, November 27, 2014

ಕಳೆದು ಹೋದ ಕೆಂಪು ಡೈರಿಯ ನೆನೆದು



ಯಹಾಂ ಕಾ ಹೈ ದಸ್ತೂರ್, ಖಾಮೋಷ ರೆಹೆನಾ
ದಿಲ್‍ಪೆ ಜೋ ಗುಜರೆ ಹೈ ಕಿಸಿಸೇ ನಾ ಕೆಹೆನಾ
ಯಹಾಂ ಫೂಲ್ ಖಿಲ್ತೆ, ಬಹಾರೋಂ ಸೆ ಮಿಲ್ತೆ
ಬಿಚಡತೆ ರಹೇಂ. . . .
                                                                                  -ಮೆಹಂದಿ ಹಸನ್
        ಎಂಥ ಎದೆಯೊಡೆಯುವ ಸಂದರ್ಭದಲ್ಲಯೂ ಮೌನದ ಮಹಾ ಪಾಠ ಕಲಿಸಿದ ನನ್ನ ಪಾಲಿನ ಮತ್ತಿನ ಗಾಯಕ ಈ ಮೆಹಂದಿ ಹಸನ್. ಈತನ ಕಂಠದಲ್ಲಿ ದೀಪದ ಶಾಂತಿ ಇದೆ ಎಂದಿದ್ದರು ಲತಾ ಮಂಗೇಶ್ಕರ್. ನಿಮ್ಮೊಂದಿಗೆ ಈತನ ಕುರಿತು ಹಂಚಿಕೊಳ್ಳುವುದು ಬಹಳಷ್ಟಿದೆ ಆದರೆ ಈಗಲ್ಲ. ಯಾಕೆಂದರೆ ಆತ ಇನ್ನೂ ನನ್ನೊಳಗೆ ಇಳಿಯಬೇಕಿದೆ. ಯಾರೇ, ಎಷ್ಟೇ ಅವಹೇಳಿಸುತ್ತಿದ್ದರೂ ನನ್ನ ತಲೆಯಲ್ಲಿ ಈತನ ಈ ಸಾಲುಗಳು ಸುತ್ತಿ ನಾನು ಮೌನವಾಗಿ ಬಿಡುತ್ತೇನೆ. 


     ಅಂದಹಾಗೆ, ದುರಾಲೋಚನೆಗಳ ಹಿನ್ನೆಲೆಯಲ್ಲಿ ಒಬ್ಬರನ್ನು ಅವಹೇಳಿಸುವುದರಿಂದ ಏನಾಗುತ್ತದೆ ನೋಡಿ ‘The discredit thrown on your relation reflects upon yourself and wounds your vanity’ ಇವು ಸಾಮರ್‍ಸೆಟ್‍ಮಾಮ್‍ನ ಸಾಲುಗಳು. ನೀಶ್ಚೆ ಮತ್ತು ಶಾಫನ್‍ಆವರ್‍ರಿಂದ ತೀರ್ವ ಪ್ರಭಾವಿತನಾಗಿದ್ದ ಈತನ ಬರಹಗಳೆಂದರೆ ಮಾಗಿದ ಮಸ್ತಕದೊಳಗೊಂದು ಅರಿವಿನ ಯಾತ್ರೆ. ಈ ಕೆಲವು ದಿನ ನಾನು ಈತನ A writer note book’ ಓದುತ್ತಿದ್ದೆ. ಅಂದಹಾಗೆ, ನೋಟ್‍ಬುಕ್ ಎಂದತಕ್ಷಣ ನಾನು ಕಳೆದುಕೊಂಡ ನನ್ನ ಕೆಂಪು ಡೈರಿಯ ಹಳೆತಾದ ಪುಟಗಳು, ನಿತ್ಯ ನವೀನವಾದ ಅದರೊಳಗಿನ ಪದ್ಯಗಳು ನೆನಪಾಗಿ ಈ ಕ್ಷಣವೆನ್ನುವುದು ಕಣ್ಣೀರಾಗುತ್ತದೆ. ಒಂದು ಡೈರಿಯಾಗಿ ಅದು ಕಳೆದು ಹೋಗಿದ್ದರೆ ಬೇಸರವಿರಲಿಲ್ಲ. ಬದಲಾಗಿ, ಅದು ನನ್ನ ಬಾಲ್ಯದ ಹಾಡುಗಳ, ಮಾರ್ಪಡುತ್ತ ಬಂದ ನನ್ನ ಕೈ ಬರಹಗಳ, ನನ್ನ ಮಕ್ಕಳಿಗಾಗಿ ಕೂಡಿಟ್ಟ ಪದ್ಯಗಳ ಒಂದು ಅಮೂಲ್ಯ ಸಂಗ್ರಹ. ಗೊತ್ತಿರಲಿ, ಅದು ನಾನು ಕಳೆದುಕೊಂಡ ನನ್ನ ಬದುಕಿನ ಮೊದಲ ಸಂಪಾದನೆ. ಸಂಪಾದನೆ ಮತ್ತು ಕಳೆದುಕೊಳ್ಳುವುದು ಎಂತ ತಕ್ಷಣ ನೆನಪಾಗುತ್ತಾರೆ ನನ್ನ ಜಗಮೊಂಡ ಗುರು ಲಿಂಗದೇವರು ಹಳೆಮನೆ. ಅವರು ಹೆಣ್ಣು ಹದ್ದು ಮೀರಿದ ದಿನವೆ ಸಂಸಾರ ಒದ್ದು, ಉಟ್ಟ ಬಟ್ಟೆಯ ಮೇಲೆ ಹೊರಬಿದ್ದು, ಪ್ರಪಂಚದ ಐದು ರಾಷ್ಟ್ರಗಳ ಸುತ್ತಿ, ಸಂಗ್ರಹಿಸಿದ್ದೆಲ್ಲ ತ್ಯಜಿಸಿ, ಬರಿಗೈ ದಾಸನಾಗಿ ಬಸ್ಟ್ಯಾಂಡಿನಲ್ಲಿ ಕುಳಿತುಕೊಂಡಿದ್ದರಂತೆ. ಈ ಸಂಘರ್ಷದಲ್ಲಿ ಅವರು ಕಳೆದುಕೊಂಡ ಒಂದು ಡೈರಿ ಅವರನ್ನು ಕೊನೆಯವರೆಗೂ ಕಾಡಿದ್ದ ಚಿಂತೆ. 
      ನನ್ನ ಕೆಂಪು ಡೈರಿ ನನ್ನ ಮೊದಲ ಸಂಪಾದನೆ ಎಂದೆ. ಹೌದು, ಶಾಲಾದಿನಗಳೊ ಅಥವಾ ಹೈಸ್ಕೂಲ್ ದಿನಗಳೊ ಈಗ ಸ್ಪಷ್ಟವಾಗಿ ನೆನಪಿಲ್ಲ. ಒಟ್ಟಾರೆ ನಾನೊಮ್ಮೆ ಮನೆಯಲ್ಲಿ ಹಣ ಕದ್ದೆ, ಸುಮಾರು 900 ರೂಗಳು. ಅಷ್ಟು ಕದಿಯಲು ತುಂಬಾ ಶ್ರಮಪಟ್ಟಿದ್ದೆ. ಹೀಗೆ ಸಂಪಾದಿಸಿದ ಈ ಹಣದಿಂದ ಹಂಬಲಿಸಿ ಕೊಂಡ ಎರಡೇ ವಸ್ತಗಳು, ಒಂದು ಈ ಕೆಂಪು ಡೈರಿ, ಮತ್ತೊಂದು ಪೆನ್ನು. ನೋರು ರೂಪಾಯಿಯೂ ಖರ್ಚಾಗಲಿಲ್ಲ. ಉಳಿದ ಹಣ ಅಪ್ಪನಿಗೇ ಪ್ರಾಮಾಣಿಕವಾಗಿ ಮರಳಿಸಿ ಬೆನ್ನುತುಂಬಾ ಬಾಸುಂಡೆ ಉಂಡೆ. ಕೆಂಪು ಡೈರಿಯ ಮೊದಲ ಪುಟದಲ್ಲಿ ‘ರಾಜಶೇಖರ ಆಫೀಸರ್’ ಎಂದು ಬರೆದೆ. ತುಂಬ ಜತನವಾಗಿರಿಕೊಂಡಿದ್ದ, ಭವಿಷ್ಯವಾಣಿ ದಾಖಲಿಸಿದ್ದ ಈ ಡೈರಿ ನಾನು ಆಫೀಸರ್ (ಈಗ ನನ್ನ ಹೆಸರಿನ ಕೆಳಗೆ ಯು.ಜಿ.ಸಿ ನೋಡಲ್ ಆಫೀಸರ್)ಆದಾಗ ನನ್ನೊಂದಿಗಿಲ್ಲದ್ದು ಎಷ್ಟೊಂದು ನೋವಿಗೆ ಕಾರಣವಲ್ಲವೆ?
ಅಂದಹಾಗೆ ನಾನು ಓದಿದ ಸಾಮರ್‍ಸೆಟ್ ಮಾಮ್‍ನ A writer note book’ ಇಂಥದೇ ನೆನಪುಗಳ ಸಂಗ್ರಹ. ಇದು ಆತನ ಕೊನೆಯ ಕೃತಿಯೂ ಹೌದು. ಇದನ್ನಾತ ಸಾವಿನ ಛಾವಣಿಯ ಮೇಲೆ ಕುಳಿತು ಬರೆದಿದ್ದಾನೆ. ಪ್ರತಿ ಪುಟವು ಪ್ರೊಫೌಂಡ್. ಪ್ರಬುದ್ಧ ಲೇಖಕನ ಕೊನೆಯ ಕೃತಿಯ ಸೊಗಸೇ ಇದು. ಕೃತಿಯ ಮುನ್ನುಡಿಯಲ್ಲಿ ಆತನ ಒಂದು ಮಾತು. ನನ್ನನ್ನು ತುಂಬಾ ಸಮಾಧಾನಿಸಿದೆ. ಆತನನ್ನು, ಅವನ ಸಾಹಿತ್ಯವನ್ನು ಅವಹೇಳಿಸಲು ಯಾವನೊ ಪುಣ್ಯಾತ್ಮ ಅವನಿಗೆ ಬರೆಯುತ್ತಾನೆ – In these days you are quickly forgotten if you do not by some new work keep your name before the public.’  ಹಂಗಿಸುವವರಿಗೆ ಇದಕ್ಕಿಂತ ಸುಂದರ ಉತ್ತರ ಬೇಕೆ. ಅದರೊಳಗಿನ ಕುಹಕವನ್ನು ಗಮನಿಸಿದ ಮಾಮ್ ಮುಗುಳ್ನಗುತ್ತ ಉತ್ತರಿಸುತ್ತಾನೆ – ‘I have said my say. Let others occupy my small place. I am prepared for that. When my obituary notice at last appears in the paper and they say, ‘what, I thought he died years ago, my ghost will gently chuckle.’ ಹಂಗಿಸುವವರಿಗೆ ಇದಕ್ಕಿಂತ ಸುಂದರ ಉತ್ತರ ಬೇಕೆ.
 ಛೇ, ಒಂದು ವಾರ ಉರುಳಿದೆ. ಕರ್ನಾಟಕದ ಐದು ಸಾವಿರ ಉಪನ್ಯಾಸಕರನ್ನು, ಹನ್ನೆರಡು ಸಾವಿರ ಅತಿಥಿ ಉಪನ್ಯಾಸಕರನ್ನು ಪ್ರತಿನಿಧಿಸಿದ ಈ ಎರಡು ನೂರು ಕಾಲೇಜುಗಳ ಪ್ರಾಂಶುಪಾಲರುಗಳ ನನ್ನ ವಿಭಾಗದ ಸಮಾವೇಶ, ಯಶಸ್ವಿಯಾಗಿ ಮುಗಿದಿದೆ. 
        ಸನ್ಮಿತ್ರ ಧರ್ಮದಾಸ್ ಮೂರು ನೂರು ಕೋಟಿ ರೂಪಾಯಿಯ ತನ್ನ ಯೋಜನೆಯನ್ನು ಡಿ.ಕೆ.ಶಿ ಯವರೊಂದಿಗೆ ಕರ್ನಾಟಕದಲ್ಲಿ ಪ್ರಾರಂಭಿಸಿದ್ದಾನೆ. ಇದೇ ಖುಷಿಯಲ್ಲಿ ನನ್ನ ಜೋಳಿಗೆಗೆ ತನ್ನ ಫೂಟಾನ್‍ದಿಂದ ಸುಮಾರು ಎರಡು ಲಕ್ಷ ರೂಪಾಯಿಗಳ ಸೋಲಾರ್ ಲೈಟ್ ಪ್ರಾಯೋಜಿಸಿದ್ದಾನೆ. ಸಾಕಿ ಮುದ್ದಾಗಿ ಮುದ್ರಣಗೊಂಡು ನನ್ನ ಗ್ಲಾಸುಗಳ ಮುಂದೆ ಮುಗುಳ್ನಗುತ್ತಿದ್ದಾಳೆ. ಇಷ್ಟರಲ್ಲೆ ಮಾರುಕಟ್ಟೆಗೆ ಬರುತ್ತಾಳೆ. ಛಳಿಯ ಈ ದಿನಗಳಲ್ಲಿ ನಿಮ್ಮೊಂದಿಗೆ ಬಿಸಿ ಬಿಸಿಯಾದ ಚರ್ಚೆಗಿಳಿಯುತ್ತಾಳೆ. ನೀವು ದೊಡ್ಡವರು, ಹೆಣ್ಣು ಹೆತ್ತವರು. ಅವಳ ಕೈ ಹಿಡಿದು ಬಾಳಿನೆಡೆಗೇ ನಡೆಸಬೇಕು. ಯಾಕೆಂದರೆ ಆರಿಸುವ, ಕೆರಳಿಸುವ, ಕೆಡಸುವ ಕೈಗಳಿಗಿಂತ ದೀಪ ಹೊತ್ತಿಸುವ, ಮೌನದಿಂದ ಮುನ್ನಡೆಸುವ ಕೈಗಳು ನೈತಿಕವಾಗಿ ಮೇಲಲ್ಲವೆ?

Thursday, November 20, 2014

ಇಲ್ಲಿ ಇರಲಾಗದು ಇನ್ನೆಲ್ಲಿಯೂ ಹೋಗಲಾಗದು

                                                                ಮುಂಜಾನೆ ಎದ್ದು
ನೀರೆರೆದು ರಂಗೋಲಿ, ಅರಿಶಿಣ-ಕುಂಕುಮ
ಹೊಸ್ತಿಲಿಗೆ ಹೂ ಇಡುವ ಹೆಣ್ಣು ನೋಡಿದಾಗ
ಸಣ್ಣದೊಂದು ಗುಮಾನಿ ಶುರುವಾಗುತ್ತದೆ
ನಾ ಸತ್ತ ಮೇಲೆ ಹೀಗೆಯೇ ನನ್ನ ಸಮಾಧಿಗೆ
ಹೂ ಇಡುವ ಅವಳ ನೆನೆದು
ವರ್ತಮಾನವೂ ತಣ್ಣಗಾಗುತ್ತದೆ.
ಈ ಬೆಂಗಳೂರಿನಲ್ಲಿ ಭ್ರಮೆ ಮತ್ತು ಬದುಕಿನ ಮಧ್ಯ ವ್ಯತ್ಯಾಸ ಕಾಣುವುದು ಎಷ್ಟೊಂದು ಕಷ್ಟವಲ್ಲವೆ? ಇಡೀ ವಾರ ರಸ್ತೆಗಳ ಮೇಲೆ ಶರವೇಗದಲ್ಲಿ ಹೊರಟ ವಾಹನಗಳಂತೆ ಓಡುತ್ತಲೇ ಇರುತ್ತದೆ ಬದುಕು. ಬೆಳಗಾದರೆ ಒಂದು ಭ್ರಮೆ. ಅದನ್ನು ಸುತ್ತಿ ಎನೋ ಸಾಧಿಸಿ ಬಂದೆ ಎಂದು ನಿರಾಳದ ಉಸಿರು ಬಿಟ್ಟು ಸಂಭ್ರಮಿಸುವುದು ಮತ್ತೊಂದು ಭ್ರಮೆ. ಕಛೇರಿಯಲ್ಲಿ ಕುಳಿತು ಸುತ್ತಲು ನಡೆಯುವ ಒಟ್ಟು ಚಟುವಟಿಕೆಯನ್ನು ಗಮನಿಸಿದಾಗ ಇಡೀ ದಿನವನ್ನೊ, ವಾರವನ್ನೊ ಅವಲೋಕಿಸಿದಾಗ, ಏನು ಸಾಧನೆಯಾಯಿತು ಎಂದು ಪ್ರಶ್ನಿಸಿಕೊಂಡಾಗ ಸಿಗುವ ಉತ್ತರ ಪುಟಗಳಿಂದ ಭಾರವಾದ ಸಾಲು ಸಾಲು ಕಡತಗಳು. ಒಂದು ಕಡೆಯಿಂದ ಇನ್ನೊಂದು ಕಡೆ ಅದು ಹೋಗುತ್ತದೆ ಮತ್ತೆ ಯಥಾವತ್ತಾಗಿ ಬಂದು ಕುಳಿತುಕೊಳ್ಳುತ್ತದೆ. ಹೊತ್ತು ತಿರಗುವ ಜವಾನರ ಚಪ್ಪಲಿ ಸವಿಯುತ್ತದೆ ಸಮಸ್ಯೆ ಮಾತ್ರ ಹಾಗೆಯೇ ಇರುತ್ತದೆ. ಕಳೆದ ನಾಲ್ಕು ತಿಂಗಳಲ್ಲಿಯೇ ಈ ನಡಿಗೆಯನ್ನು ಗಮನಿಸಿದ ನಮಗೆ ನಾವೆಲ್ಲಿದ್ದೇವೆ? ನಮ್ಮ ಬುದ್ಧಿ ಭಾವಕ್ಕೆ ಏನು ಸೇರಿದೆ? ಶುದ್ಧ ಗಾಳಿಯಲ್ಲಿ ಅದ್ದಿ ತೆಗೆಯಲಾದ ಬದುಕಿಗೆ ಏನು ದಕ್ಕಿದೆ? ಹೀಗೆ ನಿರುತ್ತರ ಪ್ರಶ್ನೆಗಳು.
        ಗೆಳೆಯ ಮೂರ್ತಿ ಜ್ಞಾನಜ್ಯೋತಿ ಸಭಾಂಗಣದ ನನ್ನ ಮೊದಲ ಭಾಷಣಕ್ಕೆ ಮಾರುಹೋದ ಮಹತ್ವದ ಸಿನಿಮಾ ನಿರ್ದೇಶಕ. ಮನೆವರೆಗೂ ಬಂದು, ಪ್ರೀತಿಯಿಂದ ನಳಪಾಕಕ್ಕೆ ಕರೆದೋಯ್ದು ಗಂಟೆಗಳವರೆಗೆ ನನ್ನ ಶಕ್ತಿಗಳನ್ನು ನನಗೇ ಪರಿಚಯಿಸಿ, ನನ್ನಿಂದ ಹೊಸದೇನನ್ನೋ ಬಯಸುತ್ತಿದ್ದ ಅವರಿಗೆ ಇಂದಿಗೂ ನಿಖರವಾಗಿ ಏನೂ ಹೇಳಲಾಗುತ್ತಿಲ್ಲ. ಜಿ.ವಿ ಅಯ್ಯರ್‍ರ ಪರಮ ಶಿಷ್ಯರಾದ ಅವರು ‘ಹಂಸಗೀತೆ’, ‘ಸಿದ್ಧಗಂಗಾ’ ಮತ್ತು ‘ಶಂಕರ ಪುಣ್ಯಕೋಟಿ’ ಚಿತ್ರಗಳನ್ನು ಮಾಡಿ ಕನ್ನಡ, ತಮಿಳು, ಮಲಿಯಾಳಿ ಮತ್ತು ಹಿಂದಿ ಸೇರಿ 90 ಚಿತ್ರಗಳ ನಿರ್ದೇಶಕನಾಗಿ, ಆಧ್ಯಾತ್ಮ ಜೀವಿಯಾಗಿ ಉಳಿಸಿಕೊಂಡ ಶಿಸ್ತು, ವಿನಯ ಮತ್ತು ಅವರ ಪ್ರೀತಿ ಒಂದು ಆದರ್ಶ. ಕಳೆದ ಅನೇಕ ವರ್ಷಗಳಿಂದ ನಿದ್ರೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ನನಗೆ ಉತ್ಸಾಹದ ಕೊರತೆಯಾಗುತ್ತಿದೆಯೇ? ಏನು ಬೇಡ ಎನಿಸುತ್ತಿದೆಯೇ? ಒಂದು ಸಣ್ಣ ಗುಮಾನಿ. 
 ಸಾಕಿ ಈ ವಾರಾಂತ್ಯಕ್ಕೆ ಸಿದ್ಧವಾಗಿ ಅಂಗಡಿಗಳ ಸೇರಬೇಕು. ರಶ್ಮಿ ಬನ್‍ಸಲ್‍ಗಾಗಿ ವೆಸ್ಟಲೈನ್ ಪಬ್ಲಿಕೇಷನ್ ಅವರೊಂದಿಗಿನ ಯೋಜನೆ ಪೂರ್ಣವಾಗಬೇಕು. ಇದೇ 26 ಕ್ಕೆ ಇಲಾಖೆಯ ನನ್ನ ವಿಭಾಗದಿಂದ ಉನ್ನತ ಶಿಕ್ಷಣ ಪರಿಷತ್‍ನಲ್ಲಿ ಬೃಹತ್ ಸಮಾವೇಷವಾಗಬೇಕು, ಗೆಳೆಯನೊಬ್ಬನ ಹಗಲು-ರಾತ್ರಿಯ ನಿರಂತರ ಪ್ರಾಮಾಣಿಕ ಪರಿಶ್ರಮದಿಂದ ಸಿದ್ಧಗೊಂಡ ಲೋಕದ ಮನೆ ‘ಜೋಳಿಗೆ’ ಲೋಕಾರ್ಪಣೆಯಾಗಬೇಕು, ನನ್ನ ಪ್ರೀತಿಯ ಪದ್ದಿಗಾಗಿ ಫೆಬ್ರುವರಿ 14 ಕ್ಕೆ ಚಿತ್ರರಂಗದ ಗಣ್ಯರನ್ನೆಲ್ಲಾ ಸೇರಿಸಿ ಗಂಭೀರವಾದುದೆನನ್ನೋ ನೀಡಬೇಕು, ಬೆಂಗಳೂರಿನ ರಾಜಕುಮಾರ ಅಭಿಮಾನಿ ಸಂಘಗಳು ನನ್ನ ಹೆಗಲಿಗೆ ಹಾಕಿರುವ ‘ಮುತ್ತು ರಾಜ್’ ಮತ್ತೆ ಮಾತಾಗಬೇಕು. ಅಬ್ಬಾ! ನಿದ್ರೆ ಹತ್ತುವುದಿಲ್ಲ, ನಿದ್ರಿಸದೆ ಬದುಕಲಾಗುವುದಿಲ್ಲ. ಬೆಂಗಳೂರಿನಲ್ಲಿ ಇರಲಾಗದು ಇನ್ನೆಲ್ಲಿಯೂ ಹೋಗಲಾಗದು. ಯಾವ ನಿರೀಕ್ಷೆಗಳು ಇಲ್ಲದೆ ನಿರಾಳವಾಗಿ ಈ ನಗರ ಸೇರಿದೆ ಆದರೆ ಅನಿರೀಕ್ಷಿತವಾಗಿ ಏನೆಲ್ಲ ತಂದು ನಿಲ್ಲಿಸಿದ ದೇವರು. ಎಷ್ಟೊಂದು ಮುಗಿಸುತ್ತೇನೊ, ಇನ್ನೆಷ್ಟನ್ನು ಅರ್ಧ ಮುಗಿಸುತ್ತೆನೊ ದೈವ ಇಚ್ಛೆ. 
      ಸಂಯುಕ್ತ ಕರ್ನಾಟಕದ ನನ್ನ ಮೂರುವರೆ ಲಕ್ಷ ಬಂಧುಗಳು ನಿರಂತರ ಹೀಗೆಯೇ ಹರಸುತ್ತಾ, ನನ್ನ ಇರುವನ್ನು ಮರೆಸುತ್ತಾ ಕೈಹಿಡಿದು ನಡೆಸಿದರೆ ಏನೆಲ್ಲ ಚಮತ್ಕಾರವಾಗಬಹುದು. ಹಾಗೆ ನೋಡಿದರೆ ಬದುಕೇ ಒಂದು ಚಮತ್ಕಾರ. ಎಲ್ಲಿ? ಯಾವಾಗ? ಯಾರಿಂದ? ನೆಳಕಿನ ಕಿರಣಗಳು ಈ ಜಡ ಬಾಳಿನೊಳು ಹೊಕ್ಕು ನಮ್ಮ ಬೆಳಕಾಗಿಸಿಬಿಡುತ್ತವೊ ಅದು ಆ ಭಗವಂತನಿಗೊಬ್ಬನಿಗೆ ಗೊತ್ತು. ನಿದ್ರೆ ಬರುತ್ತಿದೆ ಜಾರುವ ಮುನ್ನ ಒಂದು ಪ್ರೀತಿಯ ಪದ್ಯ –
ನನ್ನ ಬೆಳಕಿನ ಪ್ರಭೆ ನಿನ್ನದೇ ಇತ್ತು
ನನ್ನ ಕಾವ್ಯದ ಕಮನೀಯತೆ ನಿನಗಷ್ಟೆ ಗೊತ್ತು
ಉಸಿರಿದರೆ ಕೆಸರಾಗಿ ಸವರಿಕೊಳ್ಳುತ್ತಿದ್ದ ನೀನಗೆ
ನನ್ನ ಹಣೆ ನೇವರಿಸಿ ಕನಸು ಅರಳಿಸುವ
ಮನಸ್ಸು-ಮುದ-ಆ ಕೈಗೊಂದು ಹದ ಮತ್ತೆ
ಛೇಡಿಸುವ ಪದ ಎಲ್ಲ ನಿನ್ನಲ್ಲಿತ್ತು
ಹೀಗಾಗಿಯೇ ಇರಬಹುದು
ನಿನೆಂದರೆ ಅನುಗಾಲವೂ ಮತ್ತು

Thursday, November 13, 2014

ಜಂಗಮಯ್ಯಗ ಜೋತು ಬಿದ್ದು



ಜಂಗಮಯ್ಯಗ ಜೋತು ಬಿದ್ದು
ಎಂಜಲಾದ ಬಳಿಕ ಸಖಿ ಏನು? ಸಾಖಿ ಏನು? ಸತಿ ಏನು?
ಹೆಜ್ಜೆ ಒಳಗಿಟ್ಟು ಬಂದ ಮೇಲೆ
ಮೈ ಮೆರವಣಿಗೆಯ ಹೆಣ್ಣಷ್ಟೇ ಅಲ್ಲ ನೀನು
 ನಮ್ಮ ಪ್ರೀತಿ ಈಗ ಹದಿನೈದರ ಹೊಸ್ತಲಲ್ಲಿ. ಸಂಸಾರ ಹತ್ತರ ಮತ್ತಿನಲ್ಲಿ, ಹೊಸ ಗತ್ತಿನಲ್ಲಿ. ಒಂದು ಎರಡಾಯಿತು, ಎರಡು ನಾಲ್ಕಾಯಿತು, ನಾಲ್ಕು ಆರಾಯಿತು, ಆರು ಅದರದರ ದಾರಿಯನ್ನು ಅರಸಿ ಆಕಾಶವಾಯಿತು, ಅಲ್ಲಮವಾಯಿತು, ನಿಲ್ಲದೆ ಹರಿಯುವ ಬದುಕಿನ ನದಿಯಾಯಿತು. ಬದುಕು ನನ್ನದೆನ್ನುವುದು ಎಂಥ ಸುಳ್ಳಿನ ಮಾತು. ಈ ಸಂಸಾರದ ಮೆರವಣಿಗೆಗೆ ಯಾರೊ ಹೆಗಲಾಗುತ್ತಾರೆ, ಬಗಲಿಗೆ ಬೆರಗಾಗಿ, ಮರುಳಾಗಿ ಮಲಗಿ, ಮುಳ್ಳಿಟ್ಟು ಹೋಗುತ್ತಾರೆ. ಮತ್ತಿನ್ನ್ಯಾರೊ ಮಡಿದಿ ಎಂಬ ರೂಪದಲ್ಲಿ ನಿಂತು ಮಲಾಮು ಸವರುತ್ತಾರೆ. ಒಟ್ಟಾರೆ ಖುಷಿಯೊಂದೆ, ಸೋಲು-ಸಾವು, ಅಪಮಾನ-ಸನ್ಮಾನ, ಬಾಚಿ ತಬ್ಬುವಿಕೆ-ದೂರ ಸರಿಯುಕೆಗಳೆಲ್ಲದರ ಮಧ್ಯ ಸಂಸಾರ ನದಿಯಂತೆ ನಿರಂತರವಾಗುತ್ತದೆ
        ನಾವಿಬ್ಬರೂ ಈಗ ಲೆಕ್ಕದ ಯಾವುದೊ ಹೊಸ್ತಿಲಲ್ಲಿ. ಸುಖವಾಗಿಗಿದ್ದುದರಗಿಂತ ಬದುಕೆಂಬ ಪ್ರಯೋಗಾಲಯದಲ್ಲಿ ಸುಟ್ಟು ಕೊಂಡುದೆ ಹೆಚ್ಚು. ನನಗಿಂತಲು ಹೆಚ್ಚು ಬಾಧಿಸಿದೆ ಅವಳನ್ನು ಕಿಚ್ಚು. ಬಂದವರಿಗೆ ಬಾ ಎಂದು, ಹೋದವರಿಗೂ ಬಾ ಎಂದು, ಬರದವರಿಗೂ ಬಾ ಎಂದು ಬಾಚಿ ತಬ್ಬಕೊಂಡಿದ್ದೇವೆ. ನಮ್ಮೊಂದಿಗೆ ಬೆಚ್ಚಗಾಗಿ, ನಮ್ಮ ಮಕ್ಕಳು ಮರಿಗಳನ್ನು ಕಾಲದ ಹದ್ದುಗಳಿಂದ ಬಚ್ಚಿಟ್ಟುಕೊಂಡು ಅವರೂ ಕಾಯ್ದಿದ್ದಾರೆ, ಕಾಪಾಡಿದ್ದಾರೆ, ಕೈಹಿಡಿದು ನಡೆಸಿದ್ದಾರೆ. ಅವರ ತ್ಯಾಗದ ಫಲ, ನಮ್ಮ ಸಂಸಾರದ ಬಲ.
       ಏನಾದರಾಗಲಿ ಶಿವನೆ, ಮನುಷ್ಯನಿಗೆ ಸಂಬಂಧಗಳ ದೊಡ್ಡ ಸಂಸಾರವಿರಬೇಕು. ಅದರಲ್ಲಿ ಎಲ್ಲರೂ ಇರಬೇಕು. ಕಾಲು ಕೆದರಿ ಜಗಳಾಡುವವರು, ಮೋಹದಿಂದ ಮುದ್ದಿಸುವವರು, ತಲೆ ನೇವರಿಸಿ ನೆಮ್ಮದಿ ಪಡುವವರು, ಮಾತಿನ ಮಚ್ಚಿನಿಂದ ನಿರುಪಯುಕ್ತವಾದುದನ್ನೆಲ್ಲ ಕೊಚ್ಚಿಹಾಕುವವರು - ಎಲ್ಲರೂ ಇರಬೇಕು. ಹೀಗೆ ಇದ್ದರೆ, ಕಾಲದ ಆಶೀರ್ವಾದವಿದ್ದರೆ ಬದುಕಬಹುದು. ಆದರೆ ಇಡೀ ಬದುಕೆಂಬುದು ಅಕಾಲಿಕ ಮೃತ್ಯು, ಅಚಾನಕ ವಿಘಟನೆ ಮತ್ತು ಆತ್ಮವಂಚನೆಯ ಆಲಿಂಗನವಾದರೆ ಎಷ್ಟೊಂದು ದುರಂತವಲ್ಲವೆ? ಅದು ಪ್ರತಿ ಕ್ಷಣವೂ ಮುಖ ಮುಚ್ಚಿಕೊಳ್ಳುವ, ಸುಳ್ಳುಗಳ ಸಹಾಯ ಪಡೆಯುವ ಹಾಗೂ ಸಾವಿನ ತೆಕ್ಕೆಗೆ ಬೀಳುವ ನೋವಿನ ಕಥೆಯಾಗುತ್ತದೆ. 
        ನವೆಂಬರ್ 10 ನಮ್ಮ ವಿವಾಹ ವಾರ್ಷಿಕೋತ್ಸವ. ಈ ಉತ್ಸವದ ಹಿಂದು-ಮುಂದಿನ ಹಾದಿಯನ್ನು ನೋಡಿದರೆ ನಾನು ಒಂದು ಕ್ಷಣ ಸ್ಥಿತಪ್ರಜ್ಞನಾಗುತ್ತೇನೆ. ವೈಯಕ್ತಿಕವಾಗಿ, ಇದು ನನ್ನ ಅತ್ಯಂತ ಸಂಭ್ರಮದ, ಗೆಲುವಿನ ಮತ್ತು ಸಾಲು ಸಾಲಾಗಿ ಬಂದ ಅವಕಾಶಗಳ ದಿನ. ಹಿಂದಿನ ದಿನವಷ್ಟೆ ರಾಜ್ಯದ ಹಿರಿಯ ರಾಜಕಾರಣಿ ಶ್ರೀಮಾನ ಕೆ.ಎಚ್.ಶ್ರೀನಿವಾಸ ಫೋನ್ ಮಾಡಿ, ‘ಚೌಡಯ್ಯ ಸ್ಮಾರಕ ಭವನದಲ್ಲಿ ನನ್ನ ಮಗಳ ಹಿಂದೂಸ್ತಾನಿ ಓಕಲ್ ಇದೆ. ನಮ್ಮೊಂದಿಗೆ ರಾಜ್ಯಪಾಲರಾದ ವಾಜುಭಾಯಿ ವಾಲಾ ಮತ್ತು ಕಂಬಾರರೂ ಇರುತ್ತಾರೆ. ರಾಗಂ, ನೀವು ನಿಮ್ಮ ತಾನಂ(ಹೆಂಡತಿ)ಯೊಂದಿಗೆ ಯಾಕೆ ಬರಬಾರದು? ದಂಪತಿಗಾಗಿ ಎರಡು ಸೀಟ್‍ಗಳನ್ನು ಕಾಯ್ದಿರಿಸಿರುತ್ತೇನೆ.’ ಎಂದು ಕೇಳಿದಾಗ ನನಗೆ ಎಷ್ಟೊಂದು ಬೇಸರವಾಯಿತು. ಕಾರಣ ಇಂಥ ಒಂದು ಅಪರೂಪದ ಕ್ಷಣಕ್ಕೆ ಹೋಗಲು ನನ್ನ ಬಳಿ ಸಮಯವಿರಲಿಲ್ಲ. ಮಗ ಸಿದ್ಧಾರ್ಥ ಸಣ್ಣದೊಂದು ಸಾಧನೆ ಮಾಡಿ, ಒಂಟಿಯಾಗಿ ನಮಗಾಗಿ ಕಾಯುತ್ತಿದ್ದ, ಅತ್ತ ಹೋಗಲೊ? ಇತ್ತ ಉಳಿಯಲೊ? ಕರುಳು ಮಾಡುವಷ್ಟು ಮರಳು ಮಾಹೋಲ್ ಮಾಡುವುದಿಲ್ಲ. ನಾನು ಅವನೆಡೆಗೆ ಹೊರಟೆ. ಆದರೆ ಮರಳಿ ಬೆಂಗಳೂರಿಗೆ ಬಂದರೂ ಮತ್ತೊಂದು ಸಂಗೀತದ ಸಮಾರಂಭ ನಮಗಾಗಿ ಕಾಯುತ್ತಲೇ ಇತ್ತು. ಅದೂ ನಮ್ಮ ವಿವಾಹೋತ್ಸವದ ದಿನವೆ. ಖಾನೆವಾಲೆ ಕಾ ನಾಮ್ ದಾನೆ ದಾನೆ ಪರ್ ಎಂದ ಹಾಗೆ. ಮಾತು ಬೇಡವಾಗಿತ್ತು ನನಗೆ. ಸಾಮಾನ್ಯನಂತಿರಬೇಕಿತ್ತು. ಹೀಗಾಗಿ ಮುಂಚೆಯೇ ಅದೆಲ್ಲವನ್ನು ತಿಳಿಸಿ ಸಮಾರಂಭಕ್ಕೆ ಹೋದೆ. 
        ಸಮಾರಂಭದಲ್ಲಿ ಕುಳಿತಾಗಲೂ ಎರಡು ಸಾವುಗಳು ನನ್ನನ್ನು ತುಂಬಾ ಆವರಿಸಿದ್ದವು. ಒಂದು ನಮ್ಮ ಕಾಲೇಜು ಶಿಕ್ಷಣ ಇಲಾಖೆಯ ಸೂಪರಿಂಟೆಂಡೆಂಟ್ ಆಗಿದ್ದ ಎಳೆಯ ಗೆಳೆಯ ಹರೀಶ್‍ನದು, ವಯಸ್ಸು ಕೇವಲ 35. ಸಾಯಂಕಾಲ ನಮ್ಮಂತೆಯೇ ಮನೆಗೆ ಹೋಗುತ್ತಿದ್ದ ಈತ ಹೃದಯಾಘಾತದಿಂದ ಸಾವಿನ ಮನೆಗೆ ಹೋದ. ಮತ್ತೊಂದು ಭವಾನಿಯದು. ವಯಸ್ಸು 37, ಎರಡು ಮಕ್ಕಳ ತಾಯಿ, ಗ್ಲಾಸ್‍ಗೋವಾ ವಿಶ್ವವಿದ್ಯಾಲಯದಿಂದ ಎಂಎಸ್ಸಿ, ಎಂಸ್ಸನ್ನು ಮುಗಿಸಿದ್ದ ಇವಳು ಇಂಗ್ಲಿಷ್ ಕವಿತೆಗಳ ಆರಾಧಕಿ. ಕವಿತೆಗಳ ಕಟ್ಟೊಂದನ್ನು ತೆಗೆದುಕೊಂಡು ನಾನು ಆಸ್ಪತ್ರೆಗೆ ಹೋಗಬೇಕೆನ್ನುವುದರಲ್ಲಿ ಕೋಮಾಕೆ ಜಾರಿದಳು. ಕೋಮಾಕೆ ಜಾರಿದವಳು ಕೊನೆಯುಸಿರೆಳೆದಳು.
       ಅರ್ಥವಿದೆ ಈ ಬದುಕುಗಳಿಗೆ. ಭವಾನಿಯ ಬದುಕಂತು ನನ್ನನ್ನು ಭಯಾನಕ ಕಾಡಿದೆ. ಅವಳ ಮನೆ ಎನ್ನುವುದು ಸಾಧನಾ ಫಲಕಗಳ ದೊಡ್ಡ ಸಂತೆ. 37 ವರ್ಷ ಹಂಬಲಿಸಿ ಮಾಡಿದ ಬದುಕು. ಸಾವಿನ ಕ್ಷಣದವರೆಗೂ ಕಣ್ಣೀರಿರಲಿಲ್ಲ. God has choosen me for mutation ಎಂದು ಹೇಳುತ್ತಿದ್ದ ಅವಳು ಗಾಲ್ಬ ಬ್ಲ್ಯಾಡರ ಕ್ಯಾನ್ಸನಿಂದ ನರಳಿ, ಕಾಲುಗಳಿಂದ ನೀರು ಬಸಿದು ತೀರಿದರೂ, ತನ್ನ ಹಿಂದೊಂದು ತಪ್ಪುಗಳ ಸರಮಾಲೆಯನ್ನು ಬಿಟ್ಟುಹೋಗಲಿಲ್ಲ. ನಮ್ಮ ನಿರ್ಗಮನ ಎಲ್ಲಿಂದಲೇ ಇರಲಿ, ಯಾರಿಂದಲೇ ಇರಲಿ, ಯಾವಾಗಲೇ ಇರಲಿ ಅದು ಸ್ವಚ್ಚವಾಗಿರಬೇಕು. ಕಣ್ತುಂಬಿ ಯಾರಾದರು ಸ್ಮರಿಸಿಕೊಂಡರೆ ಇಡೀ ಬದುಕು ಪುನರತ್ಥಾನ ಪಡೆಯಬೇಕು. 
   ಹಾಂ, ಹಕ್ಕಿ ಹಾರಿದಂತೆ ಹತ್ತು-ಹದಿನಾಲ್ಕು ವರ್ಷಗಳು, ನಮ್ಮಿಬ್ಬರ ಮೈ ಎಲ್ಲ ಓಡಾಡಿ, ಮಕ್ಕಳನ್ನು ನೀಡಿ ಸಂತೃಪ್ತಿಯ ಜೋಗುಳವನ್ನು ಹಾಡಿ ಹಾರಿ ಹೋಗಿವೆ. ನನ್ನವಳಿಗೆ ನಾನು ಆಗಾಗ ಛೇಡಿಸುತ್ತಲೇ ಇರುತ್ತೇನೆ, ‘ಯಾರೆಲ್ಲ ಬಂದು ಹೋದ ಈ ಜಂಗಮಯ್ಯನಿಗೆ ಯಾಕೆ ನಿ ಜೋತುಬಿದ್ದಿರುವೆ? ಡೈಓರ್ಸ್ ಪಡೆಯಬಾರದೆ?’ ಅವಳು ಸುಮ್ಮನೆ ಸಣ್ಣದೊಂದು ನಗೆ ಬೀರಿ ಮರಳಿ ಕೇಳುತ್ತಾಳೆ, ‘ಅಯ್ಯ ಜಂಗಮಯ್ಯ, ಎಷ್ಟಂತ ಕಾಯುವುದು? ಬೇಗ ನೀ ನನ್ನ ಮದುವೆಯಾಗಬಾರದೆ?’ ಅಂದಹಾಗೆ, ನಮ್ಮ ವಿವಾಹೋತ್ಸವದ ಸುತ್ತ ಬರೆದ ಒಂದು ಕವಿತೆ ನಿಮಗಾಗಿ –

ಜಂಗಮಯ್ಯನ ಜೋತು ಬಿದ್ದು
ಎಂಜಲಾದ ಬಳಿಕ ಸಖಿ ಏನು? ಸಾಖಿ ಏನು? ಸತಿ ಏನು?
ಹೆಜ್ಜೆ ಒಳಗಿಟ್ಟು ಬಂದ ಮೇಲೆ
ಮೈ ಮೆರವಣಿಗೆಯ ಹೆಣ್ಣಷ್ಟೇ ಅಲ್ಲ ನೀನು

ಹೇಳು ಸಖಿ,
ಮಾತಿನ ಹೊತ್ತು ಬದಲಿಸಲೊ, ಸುಗಂಧದ ನೆತ್ತಿ ಬದಲಿಸಲೊ
ಮುತ್ತು, ಮತ್ತು ಬದಲಿಸಲೊ, ಕೈ ತುತ್ತು ಬದಲಿಸಲೊ
ಮನೆ ಬದಲಿಸಲೊ, ಹುಚ್ಚು ಮನ ಬದಲಿಸಲೊ
ಮಧುಶಾಲೆ ಮದಲಿಸಲೊ, ಹೊದ್ದ ಶಾಲು ಬದಲಿಸಲೊ
ಮೆಹಕ ಬದಲಿಸಲೊ, ಮೆಹಖಾನೆ ಬದಲಿಸಲೊ
ಮೈ ಬದಲಿಸಲೊ, ಮೈ ದಾರಿ ಬದಲಿಸಲೊ
ಏನು ಬದಲಿಸಲಿ ಸಾಖಿ?
ನಿನ್ನ ಸುಖದ ಹೊಸ ಅನುಭವಕೆ?

ಚಂದ್ರ ಸತ್ತ ಛಳಿ ರಾತ್ರಿಯಲಿ
ಕಾಯುತ್ತಿದ್ದೇನೆ ನಿನ್ನೆದೆಯ ಬಿಸಿನೀರ ಬುಗ್ಗೆಗಾಗಿ
ಬೆತ್ತಲಾಗಿ ಕುಳಿತ್ತದ್ದೇನೆ ಸಂತನಂತೆ
ನಿನ್ನ ಬೆನ್ನ ಧನ್ಯತೆಯ ಬಯಲೊಳಗೆ ಬತ್ತುವುದಕಾಗಿ
ಸತ್ತು ಹೋಗಿದ್ದಾನೆ ಸೂರ್ಯ ಶತಮಾನಗಳ ಹಿಂದೆ
ಸತ್ಯಂ. ಶಿವಂ, ಸುಂದರಂ ನಿನ್ನ ತೊಟ್ಟುಗಳ ಮೇಲೆ ಈಗ ನನ್ನ ಮುಂದೆ
ದೇವರೀಗ ಮರೆಯಾಗಿದ್ದಾನೆ ದಾರಿ ನಮಗಾಗಿಯೇ ಇರಿಸಿ
ದೈವ ಸರಿಯಾಗಿದೆ ಮತ್ತೆ ಹೊಸ ಹಾಸಿಗೆ ಹರಸಿ

ಸಖಿ, ಸಂತೆಯೊಳಗೀಗ ಸಸ್ತಾ ಆಗಿದೆ ಶೆರೆ
ಕುಡುಕರೆಲ್ಲ ಹೇಳಿ ಹೋಗಿದ್ದಾರೆ ಬೇಗ ನಿನ್ನ ಸಾಖಿಯ ಕರೆ
ಬಾ, ಸಾಯಬಾರದು ಸುಖ, ಸಂಸಾರ, ಸಂತಾನ ಸಾಖಿ
ನಮ್ಮ ಜಗಳಗಳ ಕಡತ ಮುಂದಿನ ಜನ್ಮಕ್ಕೂ ಇರಲಿ ಬಾಕಿ

ಸಂಜೆ ಸುಮ್ಮನಾಗಬಾರದು ಬಾ ಸಾಕಿ, ಸಣ್ಣ ಸೆಟುವಿಲ್ಲದೆ
ಛಳಿಗೂ ಬೇವರಿಳಿಸುತ್ತೇನೆ ಬೆಡ್ಡಿನಲಿ ಎಂಬ ಹಠವಿಲ್ಲಿದೆ
ದಾರಿ ಕೇಳುತ್ತಿದ್ದೇನೆ, ನಿನ್ನ ಹೊರೆಯನ್ನು ದೂರಿರಿಸಿ
ಕೇರಿ ತೋರಿಸಬೇಡ ಸಾಕಿ ನಿನ್ನ ನಿನೇ ಧಿಕ್ಕರಿಸಿ

ಕೇರಿಯ ಸೂಳೆಯರೀಗ ಸರಳವಲ್ಲವಂತೆ,
ನೀ ಬಿಟ್ಟರೆ ಜಂಗಮಯ್ಯ ಮರಳದಿರುವುದೇ ಚಿಂತೆ
ಜಘನಗಳ ಜಾಲಾಡದೆ ಜಾರಿ ಹೋದರೆ ಈತ
ನಿನ್ನ ಪಾಲಿಗೆ ಆತ ಬಿಟ್ಟ ‘ಜೋಳಿಗೆ’ ಒಂದೇ ಅಂತೆ

      

Thursday, November 6, 2014

ಬೆಂಗಳೂರಿನ ಬಾಝಾರಿಗೆ ಅಂಜಿ!!!



I am consistent, constantly consistent
Contradicting on the surface
But the inner current remains same
My talking is just like poetry
Because I am not a philosopher
I may be a poet, wild as wine, arrogant, aggressive
But my poetic flow is like, the flow of the life
     -         Ragam
       ನಾನು ಕವಿಯಾಗುತ್ತಿರುವೆನೆ? ಭಯವಾಗುತ್ತದೆ ನನಗೆ. ಕಛೇರಿಯ ಕಡತಗಳಲ್ಲಿ ಕವಿಯಾಗುವುದೊಂದು ಅಪರಾಧವೆ ಸರಿ! ನಾನು ಹಂಚಿಕೊಳ್ಳಬೇಕಾದುದು ಕವಿಯನ್ನಲ್ಲ, ಕಾಲದೊಂದಿಗೆ ಕರಿಗಿ ಹೋದ ಕನಸಿನ ಆ ಕ್ಷಣಗಳನ್ನು. ಮನೆಲಾಡಿನಂತೆಯೇ ಹಚ್ಚು ಹಸಿರಾದ ಆ ದಿನಗಳನ್ನು.
     ಇದೊಂದು ರೋಮಾಂಚನದ ಕ್ಷಣ. ಈ ವೇದಿಕೆಯಿಂದ ಮಾತಾಡುತ್ತಿರಬೇಕಾದರೆ ನೆನಪುಗಳ ಸುರಳಿ ಎಷ್ಟೊಂದು ಸರಕನ್ನು ಅನಾವರಣಗೊಳಿಸುತ್ತಿತ್ತು. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಉರ್ದು, ಸಂಸ್ಕತ, ಭೌತವಿಜ್ಞಾನ ಮತ್ತು ಜೀವ ವಿಜ್ಞಾನಗಳ ಹಲವಾರು ವರ್ಷಗಳ ಬೋಧನಾನುಭವದ ಪರಿಣಿತರೊಂದಿಗೆ ಎರಡು ಮಹತ್ವದ ಚರ್ಚೆಗಳು. ಒಂದು ನೃಪತುಂಗ ರಸ್ತೆಯ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ, ಮತ್ತೊಂದು ವಿ.ಹೆಚ್.ಡಿ ಗೃಹ ವಿಜ್ಞಾನ ಕಾಲೇಜಿನಲ್ಲಿ. ವೇದಿಕೆಯಿಂದ ಮಾತಾಡುತ್ತಿರಬೇಕಾದರೆ ಮನಸ್ಸು 2009ರ ಸಪ್ಟೆಂಬರ್‍ನ ಕ್ಷಣಗಳನ್ನು ಮೆಲಕು ಹಾಕುತ್ತಿತ್ತು.
    ದಿನಾಂಕ 02 ಸಪ್ಟೆಂಬರ್ 2009 ರಂದು ಇದೇ ಆಡಿಟೋರಿಯಂನಲ್ಲಿ ನನ್ನ ಉಪನ್ಯಾಸ ವೃತ್ತಿಯ ಆದೇಶ ಪತ್ರ ಪಡೆದಿದ್ದೆ. ಸರಿಯಾರಿ ಒಂಬತ್ತುನೂರು ಗೆಳೆಯರು, ಇಡೀ ದಿನ ನಾನು, ನನ್ನ ಪದ್ದು ಊಟ ಮಾಡಿರಲಿಲ್ಲ. ಮಗ ನನ್ನ ಶಿಷ್ಯ ಮಿತ್ರರ ಕೈಗೊಂಬೆಯಾಗಿದ್ದ. ನಾವು, ದಾರಿ ಯಾವುದಿರಬಹುದು ನಮ್ಮ ದೈವಕ್ಕೆ ಎಂದು ಕುತೂಹಲದಿಂದ ಕ್ಷಣಗಣನೆಯಲ್ಲಿದ್ದರೆ, ಸಿಕ್ಕದ್ದು ಬೇಲೂರಿನ ಚನ್ನಕೇಶವನ ಸಾನಿಧ್ಯ. ಈ ದಿನದ, ಈ ಕಾಲೇಜಿನ, ಈ ಕ್ಷಣದ ಒಂದು ವಿಚಿತ್ರವೆಂದರೆ, ಇದೇ ಕೋಣೆಯಿಂದ ಆದೇಶ ಪತ್ರ ಪಡೆದು ನಾನು ಹೊರಬಂದಾಗ ನನ್ನ ವಿದ್ಯಾರ್ಥಿ ಗೆಳೆಯರೆಲ್ಲರಿಗೂ ಒಂದು ಕುತೂಹಲ. ನಾನು ಯಾವ ಸ್ಥಳ ಆಯ್ಕೆ ಮಾಡಿಕೊಂಡಿರಬಹುದು? ಎಂದು. ಕೊನೆಗೆ ನನ್ನ ಆದೇಶ ಪತ್ರ ಅವರ ಕೈಗಿಟ್ಟಾಗ ಕೆಲವರಿಗೆ ಬೇಸರ, ಇನ್ನು ಕೆಲವರದ್ದು ಪ್ರೀತಿಯ ಸಿಟ್ಟು, ಮತ್ತೆ ಕೆಲವರದ್ದು ಉಪೇಕ್ಷೆ.
       ಮಾಡುವುದೆನು? ನನ್ನ ಪದ್ದಿ ಮುಗ್ಧವಾಗಿಯೇ ಈ ಸ್ಥಳವನ್ನು ಆಯ್ದುಕೊಂಡಿದ್ದಳು. ಅಂದು ಈ ಸಭಾಂಗಣದಲ್ಲಿ ಅದ್ಯಾವ ಭಾವ ಸಂಚರಿಸುತ್ತಿತೊ? ಅದೇನು ಕತೆಯೊ? ತಳ್ಳಿದೆಡೆ ತಾಳ್ಮೆಯಿಂದ ಸಂಸಾರದೊಂದಿಗೆ ಹೊರಟೆ. ತಲೆತುಂಬ ತಲುಪದ ಊರಿನ ಕನಸು. ಆಂದ್ರದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯ ಸಾವು, ಕಾಯುತ್ತಿದ್ದ ಶಿಕ್ಷಕರ ದಿನಾಚರಣೆ ಎಷ್ಟೊಂದು ಸಂಕೀರ್ಣವಾಗಿತ್ತು ಕಾಲ. ಅಂದಹಾಗೆ, ಬೇಲೂರಿನ ಆನಂತರದ ಐದು ವರ್ಷಗಳ ಅವಧಿ ಅಷ್ಟೇ ಸಂಕೀರ್ಣವಾಗಿ ಉರುಳಿ ಹೋಯಿತು. ಈಗ ಇಲ್ಲಿ ನಾನಿದ್ದೇನೆ, ಈ ಸಭಾಂಗಣವಿದೆ, ಅಂದು ನಡೆಸಿದ ಶಕ್ತಿಯೇ ಇಂದು ಮತ್ತೆ ನಿಲ್ಲಿಸಿ ಮಾತಾಡಿಸುತ್ತಿದೆ. ಈಗಲೂ ಮಾತಿಗೆ, ಪ್ರೀತಿಗೆ ಮುಖಗಳಿವೆ, ಥೇಟ್ ಅಂದಿನಂತೆಯೆ. ಇತಿಹಾಸ ಮರುಕಳಿಸುತ್ತದೆ ಎಂದರೆ ಇದೇ ಇರಬಹುದೇನೊ.
       ಇಲ್ಲಿಂದ, ಇಂದು ಮಧ್ಯಾಹ್ನ ಕಾರ್ಯಕ್ರಮ ವಿ.ಹೆಚ್.ಡಿ ಗೃಹ ವಿಜ್ಞಾನ ಕಾಲೇಜಿನಲ್ಲಿ. ಕಾಲ ಬದಲಾಗುತ್ತಿದೆ. ನಮ್ಮ ಪಠ್ಯ-ಪಾಠ ಬದಲಾಗಬೇಕಿದೆ. ನನ್ನ ಭಾಷಾ ವಿಭಾಗದ ಗೆಳೆಯರಿಗೆ ನನ್ನ ಇಂದಿನ ಮುಖ್ಯ ಪ್ರಶ್ನೆಯೆ ಇದು. ಸಾಹಿತ್ಯ ಒಂದೆಡೆ ಇರಲಿ, ಕಳೆದ ಅನೇಕ ವರ್ಷಗಳಿಂದ ನಾನು ಸತ್ತು ಹೋದ ಭಾಷೆ ಮತ್ತು ವ್ಯಾಕರಣವನ್ನು ಕಲಿಸುತ್ತಿದ್ದೇನೆಯೆ? ಎಂಬ ಪ್ರಶ್ನೆ ಅದೆಷ್ಟೋ ಕಾಡಿದೆ ನನ್ನನ್ನು, ನನ್ನಂತೆಯೇ ಅನೇಕರನ್ನು. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಇ-ಕಂಟೆಂಟನ್ನು ಅಭಿವೃದ್ಧಗೊಳಿಸಿ, ನಮ್ಮ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಿರುವ ಖಾನ್ ಅಕಾಡೆಮಿ, ಸಿಇಸಿ, ಎಂಆಯ್‍ಟಿ, ಎನ್‍ಟಿಎನ್‍ಗಳ ಬೋಧನಾ ಕ್ರಮ ಗಮನಿಸಿದ ಮೇಲಂತೂ ಇಂಥ ಬೆಳವಣಿಗೆ ನಮ್ಮಲ್ಲಿ ಬೇಕೆನಿಸಿದೆ. ಈ ಕಾರಣ ವೈ.ಸಿ ಕಮಲಮ್ಮ ಮತ್ತು ನಾಗಲಕ್ಷ್ಮಿರಾವ್ ರವರ ನೆರೆವಿನಿಂದ ಭಾಷೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಗೆಳೆಯರನ್ನು ಕಲೆಹಾಕಿಕೊಂಡು, ಇಲಾಖೆಯ ನೆರವಿನಿಂದ ಹಮ್ಮಿಕೊಂಡ ಕಾರ್ಯಾಗಾರ ಫಲಪ್ರದವೆಂದುಕೊಂಡೆ. ಹಿಡಿ ಅನ್ನದ ಋಣ, ಪ್ರೀತಿಯ ಮೋಹಕ್ಕಾಗಿ ಗೆಳೆಯ ಗುರುನಾಥನನ್ನು, ಜಯಣ್ಣನನ್ನೂ ಸೇರಿಸಿಕೊಂಡೆ. ಇವರಿಬ್ಬರೂ ನಾನು ಕಂಡ ಅಪರೂಪದ ಮೋಹಿಗಳು, ದಣಿವರಿಯದ ಜೀವಗಳು. ಇವರಿರಬೇಕು ನನ್ನೊಂದಿಗೆ, ನಾನು ಬಿಟ್ಟು ಹೋದರು ನನ್ನ ಇಲಾಖೆಯೊಂದಿಗೆ. ಇಲಾಖೆ ಹೆಮ್ಮರ, ನಾನೊಂದು ಟೊಂಗೆ ಮಾತ್ರ. ಐದು ಲಕ್ಷದಲ್ಲಿ ನಾನೊಂದು ಸಂಖ್ಯೆ. ಆದರೆ ಇವರು ಪ್ರಾಮಾಣಿಕತೆಯ ಅಂಕೆ. ಜ್ಞಾನದ ತೀಟೆಗಾಗಿ ಸಾಗರದ ಹೆಚ್.ಆರ್ ಅಮರನಾಥ. ಆದರೆ ಅಮರನಾಥ ಅಂತಿಂಥವರಲ್ಲ. ಅವರು ಸಣ್ಣದಕ್ಕೆ ತೆಕ್ಕೆ ಹೊಡೆಯುವವರೂ ಅಲ್ಲ. ಅವರು ನಮ್ಮ ಇಲಾಖೆಯ ಗರ್ವ. ಇವರೊಂದಿಗೆ ಇಡೀ ದಿನವೆನ್ನುವುದು ಒಂದು ಸಾಹಸ ಅಥವಾ ಕನಸಿನ ಮೇಲಿನ ಸವಾರಿ ಎನ್ನಬಹುದು.
 
 ಸಾಯಂಕಾಲ ಐದಕ್ಕೆ ನಿಟ್ಟುಸಿರುಬಿಟ್ಟು ಗೆಳೆಯ ಗುರುನಾಥನೊಂದಿಗೆ ಸಪ್ನಾಕ್ಕೆ ಹೋಗುತ್ತಿದ್ದರೆ, ಆತ ಒಂದು ಪ್ರೀತಿಯ ಪದ್ಯ ಹಾಡುತ್ತಿದ್ದ –
“ನಾಯಿ ತೆಲಿಮ್ಯಾಲಿನ ಬುತ್ತಿ ಈ ಸಂಸಾರ
ಅಂತ ಅಂತಾರ” ಏನೇನೊ. . . . . 
  ನಾನು ಈ ಕಲ್ಪನೆಗೆ ಕಾಲ್ದಾರಿ ಕಳೆದುಕೊಳ್ಳುತ್ತಿರಬೇಕಾದರೆ, ಕರುಳು ಮಿಡಿದಂತೆ ಫೋನಿನ ಕರೆ ಗಂಟೆ. ಹಾಂ, ಸತ್ಯ. ಅತ್ತ ಕರುಳ ಮಿಡಿಯುತ್ತಿತ್ತು, ಮಗ ಸಿದ್ಧಾರ್ಥ ತಾಲ್ಲೂಕು ಮಟ್ಟವನ್ನು ಮೀರಿ ಜಿಲ್ಲಾ ಮಟ್ಟಕ್ಕೆ ಗಾಯನದಲ್ಲಿ ಆಯ್ಕೆಯಾದ ಸುದ್ದಿ ತಿಳಿಸಲು ಫೋನಾಯಿಸಿದ್ದ. ಏನೆಲ್ಲ ನೆನಪುಗಳು ಒತ್ತರಿಸಿ ಕಣ್ಣೀರಾದೆ, ಆದರೆ ಕಕ್ಕಲಿಲ್ಲ. ಬೆಂಗಳೂರಿನ ಕಾರ್ಬನಿನಲ್ಲಿ ಕಣ್ಣೀರೂ ಕಪ್ಪಾಗಿಯೇ ಹರಿಯುತ್ತವೆ. ಸತ್ಯವೂ ಈ ಕಪ್ಪು ಕತ್ತಲೆಯಲ್ಲಿಯೇ ಕೊನೆಯುಸಿರೆಳೆಯುತ್ತದೆ. ಕಣ್ಣೀರು ರೆಪ್ಪೆಯಲ್ಲೇ ಇಂಗಿಸಿಕೊಂಡು, ನಿರ್ಮೋಹದ ರೆಕ್ಕೆ ಬಿಚ್ಚಿಕೊಂಡೆ. ನನ್ನನ್ನೇ ನಾನು ಬೆಂಗಳೂರಿನ ಬಾಝಾರಿಗಂಜಿ ಬಚ್ಚಿಟ್ಟುಕೊಂಡೆ. 
 ಕಾಯುತ್ತಿರಿ ನನ್ನ ಅಭಿಮಾನಿಗಳೆ, ಮಲಗುವ ಮುನ್ನ ನನಗೊಂದು ಅಚ್ಚರಿಯ ಸುದ್ದಿ ಬಂದಿದೆ. ಇದು ನಿಮ್ಮ ಪ್ರಾರ್ಥನೆಗಳ ಫಲವೆನ್ನದೆ ಇನ್ನೇನು ಅಂದುಕೊಳ್ಳಲಾದೀತು?