Total Pageviews

Saturday, November 28, 2015

ನಿಮ್ಮ ಸೈರಣೆಗೆ ಲೆಕ್ಕವಿಲ್ಲವಯ್ಯಾ....



ಇತಿಹಾಸ ವರ್ತಮಾನಗಳೆರಡೂ ಕೆಲವು ಬಾರಿ ಒಂದಾಗಿ ಬಿಡುತ್ತವೆ. ಈ ನನ್ನ ಹೇಳಿಕೆ ಸರಿಯಾಗಿದೆಯೆ? ಯಾಕೆಂದರೆ, ಇತಿಹಾಸದ ಹೊಟ್ಟೆಯಿಂದ ವರ್ತಮಾನ, ಮತ್ತೆ ಕೆಲವು ಸಲ ವರ್ತಮಾನದ ಆವರಣದೊಳಗೇ ಮುಂದೊಮ್ಮೆ ದಾಖಲಾಗಬಲ್ಲ ಇತಿಹಾಸ ರೂಪಗೊಂಡು ಬಿಡುತ್ತದೆ. ಇದು ಒಂದರ್ಥದಲ್ಲಿ ಯುಗಧರ್ಮ. ಆದರೆ ಇದೆಲ್ಲ ನನ್ನ ‘ಕಾವ್ಯಕ್ಕೆ ಉರುಳು’ ಅಂಕಣಗಳ ಬರಹದ ಅವಧಿಯ ಸುತ್ತಲೂ ಜರುಗಿತೆನ್ನುವುದೇ ಈ ಚಿಂತನೆಗೆ ಕಾರಣ.
ದೂರದ ನಾಡುಗಳಲ್ಲಿ, ನಮಗೆ ಗೊತ್ತಿಲ್ಲದ, ನಾವು ಸಾಕ್ಷಿಯಾಗಿರದ ಕಾಲ ಹಾಗೂ ಸಂದರ್ಭಗಳಲ್ಲಿ ತಮ್ಮ ಕ್ರಾಂತಿಕಾರಿ ಪ್ರಗತಿಪರ ಆಲೋಚನೆಗಳಿಂದಾಗಿ ಗಲ್ಲಿಗೇರಿಸಲ್ಪಟ್ಟ, ಗಡಿಪಾರುಗೊಂಡ ಅಥವಾ ಹತ್ಯೆಯಾದ ಲೇಖಕರುಗಳ ಜೀವನಗಳನ್ನು ಪ್ರತಿ ವಾರವೂ ನಾನು ಅನಾವರಣಗೊಳಿಸುವಾಗ ಒಂದು ಸುದ್ಧಿಯಂತೆ ಓದಿ ಬಿಡುತ್ತಿದ್ದ ನನ್ನ ಓದುಗ ಸಮುದಾಯ ಅಂಥ ಒಂದು ಘಟನೆ ತನ್ನ ಪಕ್ಕದಲ್ಲಿಯೇ ಜರುಗಿದಾಗ ಕಕ್ಕಾಬಿಕ್ಕಿಯಾಯಿತು. ಒಂದು ಕ್ಷಣ ಕಾಲದ ಪ್ರವಾಹವೇ ನಿಂತು ಹೋದಂತೆ ಅವರು ಭಯಗ್ರಸ್ಥರಾದರು. ಅದು ಮೃತ್ಯುವಿನ ಭಯವಷ್ಟೆ, ಬದಲಾವಣೆಯ ಅಥವಾ ಅವರ ರೂಪಾಂತರದ ಪ್ರಶ್ನೆಯಲ್ಲ.
       ನಾಡಿನ ಹೆಸರಾಂತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರನ್ನು ಹಂತಕನೋರ್ವ ನನ್ನೂರಾದ ಸಾಂಸ್ಕ್ರತಿಕ ನಗರಿ ಧಾರವಾಡದಲ್ಲಿ ಹತ್ಯಗೈದ ದಿನ ನನಗೆ ಸಾಲು ಸಾಲಾಗಿ ಫೋನ್‍ಗಳು, ಪ್ರಶ್ನೆಗಳು, ಚರ್ಚೆಗಳು. ಅವರೆಲ್ಲರ ಆ ಆತಂಕಗಳಲ್ಲಿ ಒಂದು ಸಹಜ ನಿರೀಕ್ಷೆ, ಜಗತ್ತಿನ ಯಾವ ಯಾವುದೋ ದೇಶದ ದುರಂತ ಲೇಖಕರುಗಳನ್ನು ಕುರಿತು ಪ್ರತಿವಾರ ಬರೆಯುವ ನಾನು ಕಲಬುರ್ಗಿಯವರ ಹತ್ಯೆಯನ್ನು ಕುರಿತು ‘ಕಾವ್ಯಕ್ಕೆ ಉರುಳು’ ಅಂಕಣ ಮಾಲೆಯಲ್ಲಿ ಯಾವಾಗಲ ಬರೆಯುತ್ತೇನೆ? ಹಾಗೂ ಏನಂತ ಬರೆಯುತ್ತೇನೆ ಎನ್ನುವುದು. ಮತ್ತೆ ಕೆಲವರು ಈ ಪ್ರಶ್ನೆಯನ್ನು ನೇರವಾಗಿ ಕೇಳಿಯೂ ಬಿಟ್ಟರು.
 ಇರುವ ಸಂಗತಿ ಎಂದರೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಕಳೆದ ಅರವತ್ತು ವಾರಗಳಿಂದ ಉತ್ತರ ಕೊಡುತ್ತಲೇ ಇದ್ದೇನೆ. ಆದರೆ ಈಗ ನಿಮ್ಮ ಸಮಾಧಾನಕ್ಕಾಗಿ ಅದನ್ನೇ ಪುನರ್ ಉಚ್ಚರಿಸುತ್ತಿದ್ದೇನೆ. ಕಲಬುರ್ಗಿಯವರ ನೆತ್ತರು ಹೀರಿದ ನನ್ನೂರು ಧಾರವಾಡ, ಚಿಂತಕ ಕೆನ್‍ಸಾರೋನ ಸಾವಿಗೆ ಸಾಕ್ಷಿಯಾದ ನೈಜೀರಿಯಾ, ಗಾಂಧಿಯ ರಕ್ತತರ್ಪಣವಾದ ದೆಹಲಿ, ಕೇವಲ ಇಪ್ಪತ್ತೊಂದು ವರ್ಷದ ಎಳೆಯ ಹುವಾಂಗ್‍ನ ರಕ್ತ ಕುಡಿದ ಚೈನಾ, ಸುಶ್ಮಿತಾ ಬ್ಯಾನರ್ಜಿಯನ್ನು ಕೊಲೆ ಮಾಡಿದ ಅಪಘಾನಿಸ್ಥಾನ-ಹೀಗೆ ಭಿನ್ನ ಆಲೋಚನೆ ಮಾತ್ರಕ್ಕಾಗಿಯೇ ಕೊನೆಯುಸಿರೆಳೆಯುವ ದೇಹಗಳಿಗೆ ಮೈ ಹಾಸುವ ನೆಲಗಳ ಮತ್ತು ವ್ಯಕ್ತಿಗಳ ಹೆಸರುಗಳಷ್ಟೇ ಭಿನ್ನ, ಕೃತ್ಯ ಮತ್ತು ಮನುಷ್ಯನ ಮೌಢ್ಯತನ ಮಾತ್ರ ಎಲ್ಲ ಕಾಲಕ್ಕೂ ಒಂದೇ ತೆರನಾದುದು. ಇದುವರೆಗೂ ನನ್ನ ಓದುಗ ಬಳಗ ಓದುತ್ತಿದ್ದ ಜೀವನಗಳಲ್ಲಿ ‘ಧಾರವಾಡ’ ಮತ್ತು ‘ಎಂ.ಎಂ.ಕಲಬುರ್ಗಿ’ ಎಂಬ ಶಬ್ಧಗಳಿರಲಿಲ್ಲ ಅಷ್ಟೆ.
ಮೃತ್ಯುವಿನ ನಿತ್ಯ ಕಥೆಯಲ್ಲಿ ಇದ್ದಕ್ಕಿದ್ದಂತೆ ನಮ್ಮ ಹೆಸರೂ ಸೇರಿಕೊಂಡಾಗ ಕ್ಷಣಕಾಲ ನೋವಿನಿಂದ ನಲುಗುವುದು ಸ್ವಾಭಾವಿಕ. ದೂರದ ದೇಶದಲ್ಲಿ ಘಟಿಸುವ ಸಾವಿಗೂ, ಪಕ್ಕದ ಮನೆಯಲ್ಲಿ ಘಟಿಸುವ ಸಾವಿಗೂ ಮತ್ತು ನನ್ನೊಳಗೇ ಘಟಿಸುವ ಸಾವಿಗೂ ಖಂಡಿತವಾಗಿಯೂ ಸಾಮಾನ್ಯನೊಬ್ಬನ ಭಾವ ತೀವ್ರತೆಯಲ್ಲಿ ವ್ಯತ್ಯಾಸವಿದೆ. ಆದರೆ ಓರ್ವ ಸೂಕ್ಷ್ಮ ಮನಸ್ಸಿನ ಲೇಖಕನಲ್ಲಿ ಅಲ್ಲ. ಆತನ ಪಾಲಿಗೆ ಇಂಥ ಘಟನೆಗಳು ತೆರೆದುಕೊಳ್ಳುವ ಪ್ರಕ್ರಿಯೆ ತೀರ ಭಿನ್ನ. ಅವನಿಗೆ ಹತ್ತಿರವಿರುವುದೆಲ್ಲ ದೂರಾಗಿ ಕಾಣಬಹುದು. ದೂರವಿರುವುದೆಲ್ಲ ಹತ್ತಿರವಾಗಬಹುದು. ಅದಕ್ಕೊಂದು ಸಿದ್ಧ ಸೂತ್ರವಿಲ್ಲ. ಯಾಕೆಂದರೆ, ಅದು ಮನಸ್ಸಿನ ಯಾನ, ಮೌನ ಮತ್ತು ಮಂಥನಗಳ ಮುಗಿಯದ ಪ್ರವಾಸ.
ಸೈನ್ಸ್‍ನ ಪ್ರಕಾರ ಒಬ್ಬ ವ್ಯಕ್ತಿಯ ಸಾವಿನ ಏಳು ನಿಮಿಷಳವರೆಗೂ ಆತನ ಮೆದುಳು ಬದುಕಿರುತ್ತದೆಯಂತೆ. ಸಾಹಿತ್ಯದ ಪ್ರಕಾರ ಇಂಥ ವ್ಯಕ್ತಿಯ ಮೆದುಳಿನಿಂದ ಮೈದಾಳಿದ ಆಲೋಚನೆ ಸಾವಿರಾರು ವರ್ಷಗಳಿಗೂ ಬದುಕಿರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಜನ್ಮಾಂತರಗಳವರೆಗೂ ವ್ಯಕ್ತಿಯ ಅಸ್ತಿತ್ವ ಮಾನಸಿಕವಾಗಿ ಅಖಂಡವಾಗಿರುತ್ತದೆ. ಈ ಅರ್ಥದಲ್ಲಿ ಹತ್ಯೆಯಾದ, ನನ್ನ ಕಾವ್ಯಕ್ಕೆ ಉರುಳು ಅಂಕಣಮಾಲೆಯ ಅನೇಕ ಲೇಖಕರುಗಳಂತೆ ಹುತಾತ್ಮರಾದ ಪ್ರೊ. ಎಂ.ಎಂ.ಕಲಬುರ್ಗಿ ನನ್ನ ಪಾಲಿಗೆ ಈ ಲೋಕ ನಿರ್ಗಮಿಸಿದ ಪಾತ್ರದಂತೆ ಕಾಣುವುದಿಲ್ಲ. ಆಲೋಚನೆಯಾಗಿ ಕಾಡುತ್ತಿದ್ದಾರೆ.
ನಿಜವಲ್ಲದ ಗುರು, ನಿಷ್ಠೆ ಇಲ್ಲದ ಶಿಷ್ಯ ಪರಂಪರೆಯನ್ನು ನೆಚ್ಚಿಕೊಂಡು, ಪೂಜಿಸಿಕೊಂಡು, ಪೋಷಿಸಿಕೊಂಡು ಬಂದಿದ್ದ ಹಿರಿಯರಾದ ಎಂ.ಎಂ.ಕಲಬುರ್ಗಿಯವರು ನನ್ನ ಗುರುಗಳೂ ಆಗಿರಲಿಲ್ಲ. ನಾನು ಅವರ ಅಭಿಮಾನಿಯೂ ಆಗಿರಲಿಲ್ಲ. ಬದಲಾಗಿ ಒಂದೇ ಕಾಲಘಟ್ಟದಲ್ಲಿ ಬದುಕಿದ್ದ ಎರಡು ಬೇರೆ ಬೇರೆ ತಲೆಮಾರುಗಳ ಲೇಖಕರಾಗಿದ್ದೆವು. ಅವರ ಬರಹಕ್ಕಿಂತಲೂ ಜೀವನ ತೀವ್ರತೆ ಮತ್ತು ಅಧ್ಯಯನದ ಶಿಸ್ತು ನನಗೆ ಅವರಲ್ಲಿ ಇಷ್ಟವಾದ ಗುಣಗಳಾದರೆ ನನ್ನ ಬರಹದ ಶೈಲಿ ಮತ್ತು ಸಾಹಿತ್ಯ ಕೃಷಿ ಅವರಿಗೆ ಇಷ್ಟವಾಗಿತ್ತು. ನಮ್ಮಿಬ್ಬರ ಮಧ್ಯ ಚಹಾ ಮತ್ತು ಸೌಜನ್ಯದ ಸಲುಗೆ ಇತ್ತು. ನನ್ನೊಂದು ಪುಸ್ತಕಕ್ಕೆ ಅವರ ಪತ್ರವೇ ಮುನ್ನುಡಿಯಾಗಿತ್ತು. ಈಗ ಅವರ ಹತ್ಯೆಯಾಗಿ ನನ್ನ ಅಂಕಣ ಸರಣಿಯ ಮುಂದೆ ದುತ್ತೆಂದು ನಿಂತುಕೊಂಡಿದ್ದಾರೆ, ಪ್ರಶ್ನೆಯಾಗಿ. 
ಪ್ರಶ್ನೆ ಈಗ ಲೇಖನವಾಗಿ ಅನಾವರಣಗೊಳ್ಳಬೇಕು. ಅದಕ್ಕೂ ಮುಂಚೆ ಅದು ನನ್ನೊಳಗಿಳಿಯಬೇಕು, ಬೆಳೆಯಬೇಕು ಈ ಅಂಕಣ ಮಾಲೆಯ ಉಳಿದ ಜೀವನಗಾಥೆಗಳಂತೆಯೆ ಮತ್ತೆ ಮರುಜನ್ಮ ಪಡೆಯಬೇಕು, ಪಡೆಯುತ್ತದೆ.
ಕಾವ್ಯಕ್ಕೆ ಉರುಳು ಭಾಗ-3 ನಿಮ್ಮ ಕೈಯಲ್ಲಿದೆ. ಇದು ನೀವು ಮುನ್ನಡಿಸಿದ ಮಾಲೆ. ಹಿಂದಿನ ಎರಡು ಭಾಗಗಳಿಗಿಂತಲೂ ಅಚ್ಚುಕಟ್ಟಾಗಿದೆ ಭಿನ್ನವಾಗಿದೆ, ಸುಂದರವಾಗಿ ರೂಪುಗೊಂಡಿದೆ, ಸೊಗಸಾಗಿದೆ ಎನ್ನಲಾರೆ. ಏಕೆಂದರೆ ಸಾವು, ಅದೂ ಅನಿರೀಕ್ಷಿತ ಸಾವು ಸೊಗಸಿನ ಮಾತಾಗಲಾರದು. ಆದರೆ ಸ್ವಲ್ಪ ತಡವಾಗಿ ನಿಮ್ಮ ಕೈ ಸೇರುತ್ತಿದೆ. ಬರಹವೆನ್ನುವುದೇ ಹಾಗೆ. ಹಲವು ಸಲ ಎಲ್ಲ ಸಿದ್ಧವಾಗಿದ್ದಾಗಲೂ ಅದು ಹೊರಬರಲು ತುಂಬ ತಡವಾಗಿ ಬಿಡುತ್ತದೆ. ಈ ಪುಸ್ತಕ ತಿಂಗಳುಗಳ ಹಿಂದೆಯೆ ಎಲ್ಲ ರೀತಿಯಿಂದಲೂ ಸಿದ್ಧವಾಗಿದ್ದರೂ ಕೂಡಾ ಹೊರಬರಲು ವಿಳಂಭಿಸಿತು. ಕಾರಣಕ್ಕೆ ಮತ್ತೆ ಆಕಾಶಕ್ಕೆ ಕೈ, ಮತ್ತೊಮ್ಮೆ ಹೇಳಿ ಬಿಡುತ್ತೇನೆ-
                         ನನ್ನ ತಪ್ಪುಗಳು ಅನಂತ ಕೋಟಿ
                        ನಿಮ್ಮ ಸೈರಣೆಗೆ ಲೆಕ್ಕವಿಲ್ಲವಯ್ಯಾ.....

25.11.2015                                                     ಕ್ಷಮೆಯಿರಲಿ
                                                                        ರಾಗಂ

Wednesday, November 18, 2015

ಮನುಷ್ಯರೆಲ್ಲರು ಜೇಡರ ಹುಳುಗಳೆ

 ಹ್ಯಾಂಪ್ಸ್ಟೆಡ್ನಿಂದ ಒಂದು ಪತ್ರ ಬಂದಿದೆ. ಈಗಲ್ಲ, 19 ಫೆಬ್ರುವರಿ 1818ರಲ್ಲಿ. ಇದು ಬಂದದ್ದು ಗೆಳೆಯ ರೋನಾಲ್ಡ್ಸನಿಗೆ. ಬರೆದವ ಜಾನ್ ಕೀಟ್ಸ್. ಪ್ರಪಂಚದಲ್ಲಿ ಕೀಟಗಳಿಂದ ಕಚ್ಚಿಸಿಕೊಳ್ಳದವರಿರಬಹುದೇನೊ. ಆದರೆ ಕೀಟ್ಸ್ ಗೊತ್ತಿಲ್ಲದವರು ಬಹುತೇಕ ಯಾರೂ ಇಲ್ಲ. ಸಂವಹನ ಸಂಸ್ಕøತಿಯೇ ವಿಕೃತಗೊಂಡ ಮೊಬೈಲ್ ದಿನಗಳಲ್ಲಿ ಇವರಿಬ್ಬರ ಮಧ್ಯದ ಪತ್ರ ಸಂವಾದ ನನಗೊಂದು ರೀತಿಯ ಸಮಾಧಾನ ನೀಡಿದೆ.
ಮೊಬೈಲ್ ಚಾಟ್ ಎಂಬ ಚಟ ಪ್ರೇರಕ ಪ್ರಯೋಗದಲ್ಲಿ ಎಲ್ಲವೂ ಜ್ಞಾನವೆಂದೇ ಗೋಚರಿಸಿ ನನ್ನಂಥವರು ಶತಮಾನಗಳ ಹಿಂದಿನ ಪಳಯುಳಿಕೆ ಎನ್ನುವ ಮೂದಲಿಕೆಗೆ ಒಳಗಾಗುವ ಘಳಿಗೆಯಲ್ಲಿ ಪಳಯುಳಿಕೆಯಾಗಿ ಉಳಿಯುವುದರ ಪುಣ್ಯ ಏನೆಂದು ಕೀಟ್ಸ್ ಪತ್ರ ತೋರಿಸಿದೆ. ನನ್ನ ಪ್ರೀಯ ಗೆಳತಿಯೊಬ್ಬರು ಸದಾ ನನ್ನನ್ನುಯು ಆರ್ ಆ್ಯನ್ ಆಂಟಿಕ್ ಪೀಸ್ಎಂದೇ ಮೂದಲಿಸುತ್ತ ಮುದ್ದಿಸುತ್ತಿದ್ದರು. ನಾನು ಮುಗುಳ್ನಗುತ್ತಿದ್ದೆ ಅಷ್ಟೆ.
ಬದುಕು ಮೊಬೈಲ್ ಆದರೆ ವಿಸ್ತರಿಸಿಕೊಳ್ಳುತ್ತದೆ. ಮೊಬೈಲೇ ಬದುಕಾದರೆ ಆತ್ಮದೊಂದಿಗೆ ಮಾನವ ಸಂಬಂಧ ಕ್ಷೀಣಿಸುತ್ತದೆ. ತೀಟಕ್ಕೆ ತೆಪ್ಪವಾಗುವ ಮೊಬೈಲ್ಗಿಂತ, ಅದರೊಳಗಿನ ಚಾಟ್ಗಿಂತ ನಾನು ನಿಮ್ಮ ಕಣ್ಣಾಲೆಗಳಲ್ಲಿ ಆಲೆ ಮನೆಯ ನಿದ್ರೆ ನೋಡಬೇಕು. ನಿಮ್ಮೆದೆಯ ಬಿಂಬವಾಗಿ ಮುಂದಿರಬೇಕು. ನಮ್ಮ ಪ್ರೀತಿ ಪ್ರೇಮದ ಸಂವಹನಕ್ಕೊಂದು ಘನತೆ ಇರಬೇಕು. ಇದು ನೀವು ಒಪ್ಪುವುದಾದರೆ ಇಲ್ಲಿ ನೋಡಿ ಕೀಟ್ಸ್ನೂ ನಿಮ್ಮೊಂದಿಗಿದ್ದಾನೆ, ನಮ್ಮೊಂದಿಗಿದ್ದಾನೆ.
 
ನನ್ನ ಪ್ರೀತಿಯ ರೋನಾಲ್ಡ್ಸ,
          ಮನುಷ್ಯನನ್ನು ಕುರಿತು ಯೋಚಿಸಿದಾಗಲೆಲ್ಲ ನನಗನ್ನಿಸುತ್ತದೆ ಕೆಲವು ದಿನಗಳವರೆಗೆ ಬರೀ ಕವಿತೆಯನ್ನೊ ಅಥವಾ ಹದಗೊಂಡ ಗದ್ಯವನ್ನೊ ಓದುತ್ತ, ಕುರಿತೇ ಚಿಂತಿಸುತ್ತ, ಧ್ಯಾನಿಸುತ್ತ ಅದರೊಳಗಣ ಸುಖಕ್ಕೆ ಮೈಯ್ಯಾಗುತ್ತ, ಬೆರಗಿಗೆ ಕಣ್ಣಾಗುತ್ತ, ಅದನ್ನೇ ಎದೆಗೇರಿಸಿಕೊಳ್ಳುತ್ತ, ಇಲ್ಲಾ ಅದನ್ನೇ ಕನಸುತ್ತ, ಒಟ್ಟಾರೆ ಇನ್ನೇನು ಅದು ಖಾಲಿಯಾಗಿ ಬತ್ತಿ ಬಣ್ಣ ಕಳೆದುಕೊಂಡಿದೆ ಎನ್ನಿಸುವವರೆಗೂ ಅದರೊಂದಿಗೇಕಿರಬಾರದು? ಆದರೆ, ಇದು ಸಾಧ್ಯವೇ ರೋನಾಲ್ಡ್ಸ? ಇಲ್ಲ, ಆದರೆ ಮನುಷ್ಯ ಮಾಗಿದನೆಂಬ ಮಧ್ಯಘಟ್ಟ ತಲುಪುತ್ತಲೇ, ಅವನೊಳಗಿನ ನಾಟಕೀಯ ಆಧ್ಯಾತ್ಮ ಆತನನ್ನು ಹಲವು ಹತ್ತುಗಳ ಹಿಂದೆ ಅಲೇಮಾರಿಯಾಗಿಸಿಬಿಡುತ್ತದೆ.
ಸಿದ್ಧಾಂತಗಳ ಬರಡು ದಾರಿಯಲ್ಲಿ ಅದೇನು ಸುಖವರಸುತ್ತಾನೊ ಮನುಷ್ಯ? ಹಿತವೆನಿಸುವ ಹೇಡಿತನ! ಸೋಪಾದ ಮೇಲೆ ಸುಖವಿಲ್ಲದ ನಿದ್ರೆ! ನಡುಹಗಲ ತೂಕಡಿಕೆ! ಕಿರಿಕಿರಿ ಎನಿಸುವ ಮುದ್ದು ಮಗುವಿನ ಅಳು! ಯುವಕರನ್ನೆಲ್ಲ ಶಪಿಸಬೇಕೆನ್ನುವ ಒಳಗುದಿ! ಯಾವಾಗಲೂ ಕರ್ಕಶವಾಗಿ ಕೇಳುವ ಸಂಗೀತ! ಇಂಥ ಸಿದ್ಧಾಂತಿಗೆ ಗಾಳಿ ಜೋಗುಳ ಕೂಡ ಸಾವ ಸೋಂಕುವ ಚಳಿಯೇ. ಬಹುತೇಕ ಈಗ ಆತ ಒಳಗೆ ಮರಣಿಸಿದ್ದಾನೆ. ಲೋಕಕ್ಕೆ ತಾನೇನೊ ಇದುವರೆಗೆ ಯಾರು ಮಾಡದ್ದನ್ನು ಮಾಡಿ ಉಪಕರಿಸಿದ್ದೇನೆ ಎನ್ನುವ ಭ್ರಮೆ ಈಗ ಆತನನ್ನು ಜೀವಂತವಾಗಿರುವಾಗಲೇ ನಿರ್ಜೀವ ವಸ್ತುಗಳ ಪಟ್ಟಿಗೆ ಸೇರಿಸಿದೆ. ಈಗ ಸಂತಸ ಹಂಚುವ ಯಾವ ಪುಸ್ತಕದಿಂದಲೂ ಆತನಿಗೆ ವಸಂತ ಸೃಷ್ಟಿಯಾಗದು. ಈಗ ಅವನ ನರಗಳು ಬದುಕಿರುವುದಕ್ಕಾಗಿ ಆತ ಬದುಕಿದ್ದಾನಷ್ಟೆ.
ಗೊತ್ತಿರಲಿ ರೋನಾಲ್ಡ್ಸ, ಬದುಕಿನೊಳಗಿನ ಸಾವ ಕುರಿತು ನಿಜಕ್ಕೂ ತಿಳಿಸದವರು ನಮ್ಮ ಮಧ್ಯ ಇಲ್ಲ ಎಂದುಕೊಳ್ಳಬೇಡ. ಅವರು ವಿಚಾರಿಸಬಲ್ಲವರಾಗಿದ್ದಾರೆ. ಆದರೆ ಸಿದ್ಧಾಂತಗಳ ಸಂತೆಯಲ್ಲಿ ಕಳೆದು ಹೋಗಿದ್ದಾರೆ.
ನನಗೆ ಮನುಷ್ಯರೆಲ್ಲರು ಜೇಡರ ಹುಳಗಳಂತೆ ಕಾಣುತ್ತಾರೆ ರೋನಾಲ್ಡ್ಸ. ತಮ್ಮ ತಮ್ಮ ಭ್ರಮೆಗಳ ಏರಿನಲ್ಲಿ ಇವರೆಲ್ಲರೂ ಸ್ಪರ್ಧೆ ಮಾಡಿದ್ದು ಸುತ್ತಿಕೊಂಡು ಸಾಯುವುದಕ್ಕಾಗಿಯೆ. ಜೇಡ ತಾನು ಕಟ್ಟುವ ಸ್ವಹತ್ಯೆಯ ಮನೆಗೆ ಬಳಸಿಕೊಳ್ಳುವ ಮರದ ಟೊಂಗೆ, ಎಲೆ, ತೊಗಟೆಗಳ ಸಂಖ್ಯೆ ಬಹಳ ಕಡಿಮೆ. ಅದರ ಹೊರಗೆ ಸಾವಿಗೆ ಸಹಕರಿಸಲು ದೊಡ್ಡ ಪ್ರಮಾಣದ ಪರಿಕರಗಳಿಲ್ಲ. ಆದರೆ ತನ್ನೆದೆಯಿಂದ ಎಳೆದುಕೊಳ್ಳುವ, ಬಾಯಿಯಿಂದ ಚಿತ್ತಾರ ಬಿಡಿಸುವ ಮೃತ್ಯು ತಂತುಗಳ ಜಾಲ ದೊಡ್ಡದು. ಮನುಷ್ಯನ ಕಥೆಯೂ ಜೇಡದಂತೆಯೆ. ಮರಣಕ್ಕೆ ಬೇಕಾದುದೆಲ್ಲವೂ ಅವನೊಳಗೇ ಇದೆ. ಇಂಥ ಬಾಳು ಬೇಕೆ ರೋನಾಲ್ಡ್ಸ?
ಆತ್ಮದ ಸುಂದರ ಕಸೂತಿಗೆ ಬೇಕಾದವುಗಳು ಕೆಲವೇ ವಸ್ತುಗಳು. ಕಸೂತಿಯನ್ನು ಬದಲಾಯಿಸಬೇಕೆನ್ನುವುದು ಅದರ ಹೆಣಿಕೆಯ ರೀತಿಯಿಂದ, ವಸ್ತಗಳಿಂದಲ್ಲ. ಇಡಿಯಾಗಿ ನೇಯ್ಗೆಯನ್ನು ವಿರುದ್ಧವಾಗಿ ಮಾಡಬೇಕಿದೆ. ಮೇಲಿನದೆಲ್ಲವೂ ಕೆಳಗೆ, ಕೆಳಗಿರಬೇಕಾದುದೆಲ್ಲವೂ ಮೇಲೆ. ಆತ್ಮದ ಕಣ್ಣುಗಳನ್ನು ಸಂಖ್ಯೆತಗಳಿಂದ ತುಂಬಿಬಿಡಬೇಕು. ಪೂರ್ಣ ಎಚ್ಚರಿಕೆಯ ಒಂದು ಸ್ಪರ್ಶ, ಅಚ್ಚರಿ, ಒಂದಿಷ್ಟು ಖಾಲಿ ಸ್ಥಳ, ವಿಜ್ರಂಬಣೆಗೊಂದಿಷ್ಟು ಸಾವಧಾನ ಇದೆಲ್ಲವೂ ಆತ್ಮದ ಹಸಿವೇ.
ಆದರೆ ಮಣ್ಣಿನ ಮಕ್ಕಳ ದುರಂತವೇ ಬೇರೆ. ಇವರ ಬದುಕೆಲ್ಲವೂ ಬರೀ ತಪ್ಪು ದಾರಿಗಳ ಪಯಣ. ಕ್ಷುಲ್ಲಕ ಆಸಕ್ತಿಗಳು, ಅಸಾಧ್ಯತೆಗಳ ಗೊಣಗುವಿಕೆ, ಊಹೆಗಳ ಲೆಕ್ಕಾಚಾರ ಬರೀ ಇಂಥದೆ.
ನಾನಂದುಕೊಳ್ಳುತ್ತೇನೆ ರೋನಾಲ್ಡ್ಸ, ಲೆಕ್ಕಾಚಾರಗಳಿಲ್ಲದ ದಾರಿಗಳ ಮೇಲೆ ಎರಡು ಮನಸ್ಸುಗಳು ವಿರುದ್ಧ ದಿಕ್ಕಿನಲ್ಲಿಯೇ ಹೋಗಬೇಕು. ಪಯಣದ ಕೊನೆಗೆ ಗೌರವದ ಭೇಟಿ ಸಾಧ್ಯವಾಗುತ್ತದೆ. ಒಬ್ಬ ಅಜ್ಜ ಮತ್ತೊಂದು ಮೊಮ್ಮಗ ಕೂಡಿ ಹೊರಟಿದ್ದರೆ ಹೇಗಿರುತ್ತದೆ? ಅಜ್ಜ ಹೇಳುತ್ತಲೇ ಇರುತ್ತಾನೆ, ಮಗು ಸುಮ್ಮನೆ ಕೇಳುತ್ತ ಎಲ್ಲವನ್ನು ಊಹಿಸಿಕೊಳ್ಳುತ್ತಿರುತ್ತದೆ, ಚಿಂತಿಸುತ್ತಿರುತ್ತದೆ. ಹೀಗಿರಬೇಕು ನಮ್ಮ ಬಾಳು.
ಮನುಷ್ಯ ವಾದಿಸಲು, ವ್ಯಾಖ್ಯಾನಗಳನ್ನು ನೀಡಲು, ಉತ್ತರಿಸಲು ಹಾತೊರೆಯಬಾರದು ರೋನಾಲ್ಡ್ಸ. ಸಂಗಾತಿಗಳಿಗೆ ತಾನುಂಡ ಸತ್ಯವನ್ನು, ಪಡೆದ ಫಲಿತಾಂಶಗಳನ್ನು ಮೆಲ್ಲಗೆ ಕಿವಿಯಲ್ಲಿ ಉಸುರಬೇಕಷ್ಟೆ. ನಮ್ಮ ಆತ್ಮದ ಪ್ರತಿ ಜೀವಕೋಶವೂ ಬದುಕಿನ ಆಳದಲ್ಲಿ ಅವಿತು ಕುಳಿತ ಆಧ್ಯಾತ್ಮದ ಸುಖವನ್ನು ಹೀರಿಕೊಳ್ಳಬೇಕಷ್ಟೆ. ಪ್ರತಿ ಮನುಷ್ಯನು ಮಹಾ ಮಾನವನಾಗಬೇಕು. ಆತ ಮನುಷ್ಯತ್ವವೇ ಆಗಬೇಕು. ಕುರುಚಲು ಗಿಡ-ಗಂಟಿಗಳಂತೆ ಅಥವಾ ಅಲ್ಲೊಂದು ಇಲ್ಲೊಂದು ಬಳಗ ಬಿಟ್ಟು ಬೆಳೆಯುವ ಓಕ್ ಮರಗಳಂತೆ ಬಾಳಬಾರದು ಮನುಷ್ಯ. ಆತ ದಟ್ಟಾರಣ್ಯವಾಗಬೇಕು! ದರ್ಶನವಾಗಬೇಕು.
ಬಹಳ ಹಳೆಯ ಹೋಲಿಕೆಯೊಂದನ್ನು ನೀನು ಗಮನಿಸಿರಬಹುದು ರೋನಾಲ್ಡ್ಸ. ಅದು ನಮ್ಮ ಹಸಿವೆಗೆ ಕುರಿತಾದದ್ದೆ. ಅದರಲ್ಲಿ ಹೂ ಮತ್ತು ದುಂಬಿಯ ಕಥೆ ಇದೆ. ಆದರೆ ಕಥೆ ತಪ್ಪಾಗಿದೆ. ಕೊಡುವುದರಕ್ಕಿಂತಲೂ ಪಡೆಯುವುದರಿಂದ, ಎಲ್ಲವನ್ನೂ ಸ್ವೀಕರಿಸುವುದರಿಂದ ನಾವು ಅದ್ಭುತವಾಗುತ್ತೇವೆ, ಜ್ಞಾನಿಗಳಾಗುತ್ತೇವೆ ಎಂದೆಲ್ಲ ಅದರಲ್ಲಿ ವಾದಿಸಲಾಗಿದೆ. ಹೀಗಾಗಿ ಇಲ್ಲಿ ದುಂಬಿಗೆ ಎಲ್ಲಿಲ್ಲದ ಪ್ರಾಶಸ್ತ್ಯ ಲಭಿಸಿದೆ. ಆದರೆ ನನ್ನ ದೃಷ್ಟಿಯಲ್ಲಿ ಕೊಟ್ಟವನು ಹಾಗೂ ಪಡೆದವನು ಇಬ್ಬರೂ ಸಮಾನರೆ. ಕಥೆಯಲ್ಲಿಯೇ ನೋಡು, ಸುಮ್ಮನೆ ಎಲ್ಲವನ್ನು ಸ್ವೀಕರಿಸುವ ಹೂವಿಗೆ ದುಂಬಿಯಿಂದ ಎಷ್ಟೆಲ್ಲ ರಕ್ಷಣೆ ಸಿಕ್ಕಿದೆ ಅಲ್ಲವೆ? ಪರಾಗದ ಸಂಭ್ರಮ ದಕ್ಕಿದೆ ಅದಕ್ಕೆ. ಕಾರಣಕ್ಕಾಗಿಯೆ, ದುಂಬಿಯ ಕಾರಣಕ್ಕಾಗಿಯೇ ಅದರ ಪ್ರತಿ ವಸಂತವೂ ಅದ್ಭುತವೆ.
ಪ್ರಪಂಚದಲ್ಲಿ ಅದ್ಭುತವಾಗಿರುವುದು ಹೆಣ್ಣೋ ಅಥವಾ ಗಂಡೋ ಎಂದು ಮೂರ್ಖರು ಪ್ರಶ್ನಿಸುತ್ತಾರೆ. ನನಗೆ ನಗು ಬರುತ್ತದೆ. ಮಕ್ರ್ಯೂರಿಯ ವೇಗಕ್ಕೆ ಅರ್ಥ ಬಂದಿರುವುದು ನಿಧಾನವಾದ ಇನ್ನಾವುದೋ ಪದಾರ್ಥದಿಂದಲೆ. ಕ್ಷಣಾರ್ಧದಲ್ಲಿ ಹಾರಿಹೋಗುವ ಮಕ್ರ್ಯೂರಿಗೆ ಅಸ್ಥಿತ್ವ ದಕ್ಕಿದ್ದೇ ನಿಶ್ಚಲವಾದ ಇನ್ನಾವುದೋ ಘನ ವಸ್ತುವಿನಿಂದ. ಅಂತೆಯೇ ಹೇಳುತ್ತೇನೆ ದುಂಬಿಯಂತೆ ಜೇನು ಸಂಗ್ರಹಿಸಲು ಅವಸರ ಬೇಡ ರೋನಾಲ್ಡ್ಸ. ಜ್ಞಾನಕ್ಕಾಗಿ ಹಪಹಪಿಸುತ್ತ ಅತೃಪ್ತ ಆತ್ಮವನ್ನು ಹೊತ್ತುಕೊಂಡು ದುಂಬಿಯಂತೆ ಹಾರಾಡುವ ಅವಶ್ಯಕತೆ ಇಲ್ಲ ಬದುಕಿನಲ್ಲಿ. ಹೂವಿನಂತೆ ಇದ್ದಲ್ಲಿಯೇ ನಮ್ಮೆದೆಯ ಪಕಳೆಗಳನ್ನು ತೆರೆದುಕೊಳ್ಳೋಣ, ಇದ್ದಲ್ಲಿಯೇ ಇದ್ದು ಸ್ವೀಕರಿಸಲು ಹಸಿಯೋಣ, ಬೆಳಕಿಗೆ ಹಾತೊರೆಯುತ್ತಲೇ ಬಾಯ್ತೆರೆಯುವ ಮೊಗ್ಗುಗಳಂತೆ ಕಾಯೋಣ, ಪ್ರತಿ ಚಿಟ್ಟೆಯ, ಸೂಕ್ಷ್ಮಾತೀಸೂಕ್ಷ್ಮ ಜೀವಿಗಳ ಮುದ್ದು ಕಾಲುಗಳಿಗೆ ಕೆನ್ನೆ ಹಾಸೋಣ. ಅವುಗಳ ಭೇಟಿಯೇ ಒಂದು ಮಹಾ ಘಟಿಸುವಿಕೆ. ಈಗ ನಮಗೆ ಮಣ್ಣಿನೊಳಗಿನ ಮಾಧುರ್ಯ ದಕ್ಕುತ್ತದೆ. ನೀರಿನೊಳಗಿನ ಪನ್ನೀರು ಸಿಗುತ್ತದೆ.
ಸೋಂಬೇರಿ ಮನಸ್ಸಿನ ಮೇಲೆ ಮುಂಜಾವು ತನ್ನ ಸೌಂದರ್ಯದ ಮೋಡಿ ಮಾಡುತ್ತಲೇ ನಾನು ಆಲೋಚನೆಗಳಿಗಿಳಿದೆ ರೋನಾಲ್ಡ್ಸ. ನಾನು ಯಾವುದೇ ಪುಸ್ತಕಗಳನ್ನಿಟ್ಟುಕೊಂಡು ಸಾಲುಗಳನ್ನು ಬರೆಯಲಿಲ್ಲ. ಆದರೆ ಮುಂಜಾವು ಹೇಳುತ್ತಿದೆ ನನ್ನ ಕ್ರಮ ಸರಿಯಾಗಿದೆ ಎಂದು. ಮುಂಜಾವಿನ ನನ್ನ ಆಲೋಚನೆಯೇ ಮುಂಜಾವು, ಬರೀ ಮುಂಜಾವು. ಉಲಿಯುವ ಹಕ್ಕಿಗಳ ಹಾಡುಗಳೂ ನನ್ನ ವಾದವನ್ನೇ ಸಮರ್ಥಿಸುತ್ತಿವೆ.
ನಿನ್ನ ಕೆನ್ನೆಗಳಿಗೆ ಚಳಿಗಾಲದ ಛಳಿ ಕಚುಗುಳಿ ಇಟ್ಟಿದೆಯೊ
 ನಿನ್ನ ಕಣ್ಣಲ್ಲಿ ಮಂಜು ಸುರಿಯುವ ಮೋಡ ತೇಲಾಡುತ್ತಿದೆಯೊ
 ಬೆಟ್ಟಗಳ ಅಂಚುಗಳು ನಕ್ಷತ್ರಗಳಂತೆ ನಿನ್ನ ನಿದ್ರೆ ಕೆದಡಿವೆಯೊ
 ಸರಿ, ಹಾಗಿದ್ದರೆ ವಸಂತ ಬರುತ್ತಿದ್ದಾನೆ ತನ್ನ ರಾಶಿಗೆ ನಿನ್ನೆದೆಯ ಕಣಕ್ಕೆ
 ಕತ್ತಲೆಯನುಂಡು ಪುಸ್ತಕದಲಿ ಬೆಳಕ ಹುಡುಕುವ ಬಂಧುವೆ
 ನೀನು ವಸಂತ ಮೂರು ಗಾವುದ ದೂರ, ದೂರ, ದೂರ

 ಓ ಹುಚ್ಚನೆ, ಜ್ಞಾನದ ಹಂಬಲ ಬಿಡು, ನನ್ನ ನೋಡು

 ನಾನೊಂದು ಶೂನ್ಯ ಆದರೂ ನನ್ನ ಹಾಡುಗಳಲ್ಲಿ ಹಳ್ಳಿ ಧೂಳಿನ ಹಿತವಿದೆ
          ಹುಚ್ಚನೆ, ಜ್ಞಾನದ ಹಂಬಲ ಬಿಡು, ನನ್ನ ನೋಡು
 ನಾನೊಂದು ಶೂನ್ಯ ಆದರೂ ಸಂಜೆಗೆ ಇಂಬಾಗುತ್ತದೆ ನನ್ನ ಮನಸ್ಸು
 ಸೋಮಾರಿ ಎಂದು ಖಿನ್ನರಾದವರೆ, ಮೃತ್ಯವಲ್ಲ ಸೋಮಾರಿತನ
 ಮಲಗಿದವರೆಲ್ಲರಿಗೂ ಗೊತ್ತು ತಾನು ಎಚ್ಚರವಾಗಿದ್ದೇನೆಂದು.”
ರೋನಾಲ್ಡ್ಸ ನಾನು ಮುಂಜಾವಿನ ಕಲ್ಪನೆಯಲ್ಲಿ ಎಷ್ಟೊಂದು ಮುಳುಗಿ ಹೋಗಿದ್ದೇನಲ್ಲ! ನಾನು ಆತ್ಮವಂಚನೆ ಮಾಡಿಕೊಳ್ಳಲಾರೆ. ಬದುಕಿನಲ್ಲಿ ಜಡ-ಜಂಗಮಗಳೆರಡರ ಕೈಯನ್ನು ಬಿಡಲಾರೆ, ನನ್ನ ವಿಧೇಯ ದುಬಿಯೂ ಬೇಕು ಅದರ ಹೂವಿನೊಂದಿಗೆ, ನಾನು ಸರಿಯೋ, ತಪ್ಪೋ. ಒಟ್ಟಾರೆ ನಿನ್ನ ಹೆಗಲ ಹೊರೆಯಾದ ಸಮಯವನ್ನೊಂದಿಷ್ಟು ನಾನು ಕದ್ದಿದ್ದೇನೆ, ನನ್ನನ್ನು ಕ್ಷಮಿಸಲಾರೆಯಾ ಗೆಳೆಯಾ?
                                                                                 ನಿನ್ನ ಪ್ರೀತಿಯ
                                                                                 ಜಾನ್ ಕೀಟ್ಸ್

19/02/1818
ಹ್ಯಾಂಪ್ಸ್ಟೆಡ್