Total Pageviews

Wednesday, December 23, 2015

ಬರಿದೆ ಮಾತೇಕಿನ್ನು. . . .



      ಕನಕದಾಸರನ್ನು ನಾನು ಅರ್ಥೈಸಿಕೊಳ್ಳುವ ರೀತಿಯೆ ಈ ತೆರನಾದುದು. ಇಂದು ನೂರಾರು ಚಿಂತನೆಗಳಿಗೆ ಇಂಬುಗೊಟ್ಟ ಕನಕ ಮೂಲದಲ್ಲಿ ಒಂದು ದೇಹದಿಂದ ಆಯಾಮ ಪಡೆದ ಚಿಂತನೆಯೆ. ಇದು ಕೇವಲ ಎರಡು ದಿನಗಳ, ಒಂದು ತಿಂಗಳಿನ, ಒಂದು ವರ್ಷದ ಅಥವಾ ಒಂದು ಜೀವಮಾನದ ಸಾಧನೆಯ ಪ್ರಶ್ನೆಯಲ್ಲ. ಹೀಗೆ ಹೇಳಿದಾಗ ನಾನೆಲ್ಲೊ ಕನಕನನ್ನು ಬುದ್ಧನ ಜನ್ಮಾಂತರಗಳ ಪರಿಕಲ್ಪನೆಗೆ ಜಾರಿಸಿದೆನೆಂದು ಭಯಪಡಬೇಕಿಲ್ಲ. ಎಂಥ ಜಾರುವಿಕೆಯ ಸಂದರ್ಭದಲ್ಲೂ ಜಾಗೃತಿ ಇದ್ದರೆ ಸಾಕು ಅದು ಜೀವನವನ್ನು ಸಂದೀರ್ಘ ಅವಲೋಕನದ ಪ್ರತಿಫಲವಾಗಿಸಿಬಿಡುತ್ತದೆ.
     ಕನಕದಾಸರ ಬದುಕು ಮತ್ತು ಬರಹ ಅಂಥ ಪ್ರತಿಫಲ. ಅದು ತನ್ನೊಳಗಿನ ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತ ಸಮಷ್ಠಿಯನ್ನು ತನ್ನೊಳಗೆ ಶಕ್ತಿಯಾಗಿಸಿದ ಪ್ರಕ್ರಿಯೆ.
      ಪ್ರಪಂಚದ ಮಹತ್ವದ ದಾರ್ಶನಿಕರಲ್ಲಿ ಒಬ್ಬರಾದ ಔಸ್‍ಪೆನ್‍ಸ್ಕಿ ಹೇಳುತ್ತಾರೆ, “ಕನಿಷ್ಟ ನೀವು ನಿಮ್ಮ ಬಗ್ಗೆ ಯೋಚಿಸುವುದರಲ್ಲಿಯೂ ಕೂಡಾ ಒಂದು ಪ್ರಯೋಜನವಿದೆ. ಇಡೀ ಪ್ರಪಂಚದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಒಮ್ಮಿಗೆ ಸಾಧ್ಯವಿಲ್ಲ ಎಂದು ಎಲ್ಲರೂ ಸುಮ್ಮನಾದರೆ ಎಂದೆಂದಿಗೂ ಯಾರೊಬ್ಬರೂ ಇಲ್ಲಿ ಸ್ವತಂತ್ರರಾಗಲಾರರು. ಅದರ ಬದಲಿಗೆ, ಒಮ್ಮೆಗೆ ಒಂದು ಗುಂಪಿನಂತೆ ಸ್ವತಂತ್ರರಾಗುತ್ತ, ಉಳಿದವರಿಗೆ ಅವರು ಮಾರ್ಗದರ್ಶಕರಾದರೆ ಆಗ ಎಲ್ಲರೂ ಒಂದು ದಿವಸ ಸ್ವತಂತ್ರರಾಗಬಹುದು. ಇದರ ಹೊರತು ಸ್ವತಂತ್ರರಾಗುವಂತಹ ಬೇರೆ ಯಾವ ಸಾಧ್ಯತೆಯೂ ನಮಗೆ ಇಲ್ಲಿ ಇಲ್ಲ.” ಈ ಆಲೋಚನೆ ರಷಿಯಾದ ಚಿಂತಕನಿಂದ ನಡೆದಿದೆ. ಆದರೆ ಇದು ನಿಜಕ್ಕೂ ಶತಮಾನಗಳಿಂದ ಆಧ್ಯಾತ್ಮಿಕ ನೆಲೆಯಲ್ಲಿ ಭಾರತದಲ್ಲಿ ಆಚರಣೆಯಲ್ಲಿದೆ. ಇದಕ್ಕೊಂದು ನಿದರ್ಶನ ಕನಕದಾಸ ಹಾಗೂ ಅವರ ಸಾಹಿತ್ಯ.
       ಪ್ರಸ್ತುತ ‘ಬಯಲು ಆಲಯದೊಳಗೊ’ ಕೃತಿಯು, ಕನಕದಾಸರನ್ನೇ ಈ ಸಮಾಜಕ್ಕೆ ತೆರೆದುಕೊಂಡ ಬೆಳಕಿಂಡಿಯಾಗಿಸಿಕೊಂಡು, ಓದಿನ ಹಿನ್ನೆಲೆಯ ಒಂದು ದೊಡ್ಡ ಗುಂಪು ಹೊಸ ಆಶಯಗಳನ್ನು ರೂಪಿಸಲು ತಮ್ಮನ್ನೇ ತಾವು ತೊಡಗಿಸಿಕೊಂಡಿರುವುದಕ್ಕೊಂದು ಸಾಕ್ಷಿ. ಇಲ್ಲಿ ಚಿಂತನೆಗೆ ತೊಡಗಿಸಿಕೊಂಡವರ್ಯಾರೂ ಬರೀ ಜ್ಞಾನವನ್ನು ನಂಬಿಕೊಂಡವರಲ್ಲ. ಹಾಗೊಂದು ವೇಳೆ ಮಾಡಿದ್ದರೆ ಕನಕದಾಸರ ಸಾಹಿತ್ಯ ಅಂಥವರಿಗೆ ದಕ್ಕಲು ಸಾಧ್ಯವಿಲ್ಲ. ಯಾಕೆಂದರೆ ಭಾರತ ಶತಮಾನಗಳಿಂದಲೂ ನಂಬಿದೆ. ಕಾಲಕಾಲಕ್ಕೆ ಅದು ತನ್ನ ಸಾಧು, ಸಂತ ಹಾಗೂ ಸಾಧಕರ ಮೂಲಕ ಇದನ್ನು ಸಾಬೀತು ಪಡಿಸಿದೆ. ಕೇವಲ ಜ್ಞಾನ ಹಾಗೂ ಸ್ಥಾನ ಮಾತ್ರದಿಂದ ಸಮಾಜದೊಳಗಿನ ಮತ್ತು ತನ್ನೊಳಗಿನ ದ್ವಂದ್ವಗಳನ್ನು ಗೆಲ್ಲಲಾಗದು. ಕಾಲದ ಹೆಡಮುರಿಗೆಯನ್ನು ಕಟ್ಟಿಕೊಳ್ಳುವ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳಲಾಗದು ಎಂದು ಹೇಳಿದೆ. ಇದೇ ವಿಚಾರವನ್ನು ಸಾರಿದ ಪ್ರಪಂಚದ ಮಹತ್ವದ ಮುಂಚೂಣಿಯ ಚಿಂತಕರಲ್ಲಿ ಕರ್ನಾಟಕದ ನಮ್ಮ ಸಂತಪರಂಪರೆಯೂ ಬರುತ್ತದೆ.
      ಜ್ಞಾನ, ಇಚ್ಚೆಗಳನ್ನು ಮೀರುವ ದಾರಿಯನ್ನು ತೋರಿಸುವುದಿಲ್ಲ. ದೇಹವೆಂಬ ಮದ ಮಡಿಕೆಯ ಕಾಯಿಸಲು ‘ಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಬೇಕು’ ಎಂದು ಹೇಳುವ ಕನಕದಾಸ ಈ ಪರಂಪರೆಯ ಮಹತ್ವದ ಕೊಂಡಿಯಾಗಿ ಕಾಣುತ್ತಾರೆ. ಮನುಷ್ಯನೆಂಬ ಕ್ಲಿಷ್ಟಕರ ಯಂತ್ರಕ್ಕೆ ಕೀರ್ತನೆ-ಪ್ರಾರ್ಥನೆಗಳ ಕೀಲೆಣ್ಣೆ ಸುರಿದು ದುರಸ್ತಿಗೊಳಿಸಿದ ಕನಕದಾಸರು ಸಮಾಜದ ದುರವಸ್ಥೆಯನ್ನು ನೋಡಿ ಲೇವಡಿ ಆಡುತ್ತ ಹೋಗಿದ್ದರೆ ಖಂಡಿತ ಮತ್ತೆ ಅವರ ಓದು ಅನಿವಾರ್ಯವೂ ಆಗುತ್ತಿರಲಿಲ್ಲ, ಅವಶ್ಯಕತೆಯೂ ಆಗುತ್ತಿರಲಿಲ್ಲ. ಒಬ್ಬ ಚಿಂತಕನ ವಿಚಾರದಲ್ಲಿ ಈ ಎರಡೂ ಅವಕಾಶಗಳು ಹುಟ್ಟುವುದು ಬರೀ ಆತನ ಪಾಂಡಿತ್ಯದಿಂದಲ್ಲ ಬದಲಾಗಿ ಜೀವನ ಕಾಳಜಿಗಳಿಂದ. ಕನಕದಾಸ ಜೀವ-ಜೀವ್ಹೆಯ ಕವಿ. ಅದಕ್ಕೊಂದು ಸಾಕ್ಷಿ ಅವರ ಈ ಪದ್ಯ -
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ

ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು
ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು

ತಾಯಿ ತಂದೆಯ ಬಿಟ್ಟು ತಪವ ಮಾಡಲೂಬಹುದು
ದಾಯಾದಿ ಬಂಧುಗಳ ಬಿಡಲೂಬಹುದು
ರಾಯ ತಾ ಮನಿದರೆ ರಾಜ್ಯವನೇ ಬಿಡಬಹುದು
ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು

ಪ್ರಾಣವ ಪರರು ಬೇಡಿದರೆತ್ತಿಕೊಡಬಹುದು
ಮಾನದಲಿ ಮನವ ತಗ್ಗಿಸಬಹುದು
ಜಾಣ ನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು

       ಇದು ಲೋಕ ವ್ಯಾಪಿಸಿದ ಕನಕದಾಸರ ಪದ್ಯ. ಇದೊಂದು ಅಮಾಯಕ ಹೃದಯಜನ್ಯ ವ್ಯಾಪಿಸುವಿಕೆ. ಜನಾಂಗಗಳು ಅಂದಿನಿಂದ ಇಂದಿನವರೆಗೂ ತಮ್ಮ ಬುದ್ಧಿ ಹೃದಯ ಹಾಗೂ ಕಾಯಗಳನ್ನು ಏಕಕಾಲಕ್ಕೆ ತಿದ್ದಿಕೊಳ್ಳಲು ಸರ್ವಾಂಗ ಸುಂದರ ವ್ಯಾಯಾಮದಂತೆ ಇದನ್ನು ಅನುಸರಿಸುತ್ತ ಬಂದಿದ್ದಾರೆ. ನನ್ನ ಓದಿಗೆ ನಿಲುಕಿದಂತೆ ಈ ಪದ್ಯದಲ್ಲಿಯ ‘ಬರಿದೆ ಮಾತೇಕಿನ್ನು’, ‘ಅರೆಘಳಿಗೆ ಬಿಡಲಾಗದು’, ಹಾಗೂ ‘ಜಾಣ ನಾಯಕನಾದ’ ಎನ್ನುವ ಪದಪುಂಜಗಳು ಕಾಯಾ-ವಾಚಾ ಹಾಗೂ ಮನಸಾ ಶುದ್ಧಿಯ, ಜಾಗೃತಿಯ ನೆಲೆಗಳಂತೆ ತೋರಿ, ಭಕ್ತಿ ಎಂಬ ಮಹಾ ಮಂಟಪದ ಬುನಾದಿಯ ಬೆರಗನ್ನು ಬಿಚ್ಚಿಡುತ್ತವೆ.
       ಪದ್ಯವೊಂದು ಹಾಡಾಗಿ ಕಾಡುವ ಭಾಗ್ಯ ಎಲ್ಲ ಪದ್ಯಗಳಿಗೂ ಇರುವುದಿಲ್ಲ. ಮತ್ತೆ ಗೆದ್ದಲು ಹುಳುಗಳಂತೆ ನಮ್ಮ ನೆಮ್ಮದಿ ಕದಡುವ ಜನಪ್ರಿಯ ಪದ್ಯಗಳಿಗೆ ಕಾಲಾತೀತವಾದ ಮೌಲ್ಯವಿರುವುದಿಲ್ಲ. ಪದಕಾರನ ಬದುಕಿನ ಪುಣ್ಯದ ಮೇಲೆ, ಆತನ ಲೌಕಿಕ ಹಾಗೂ ಪಾರಮಾರ್ಥಿಕ ಮೌಲ್ಯಗಳ ಹುಡುಕಾಟದ ರೀತಿಯ ಮೇಲೆ ಪದ್ಯದ ಸಾರ್ವತ್ರಿಕತೆಯ ವಿಸ್ತಾರ ನಿಗದಿಯಾಗುತ್ತದೆ. ಅಂಥ ವಿಸ್ತøತಿಯ ಬಾಳು ಕನಕದಾಸರದ್ದಾದುದರಿಂದಲೇ ಅವರ ಸಾಹಿತ್ಯ ಮತ್ತು ಜೀವನಗಳೆರಡೂ ವಿಸ್ಮøತಿಗೆ ಒಳಗಾಗಲಿಲ್ಲ. “ದಾಸ ದಾಸರ ಮನೆಯ ದಾಸಾನು ದಾಸ ನಾನು, ಆಳುದಾಸ, ಕಿರಿಯದಾಸ, ಆಳಿನಡಿದಾಸ, ಮಂಕುದಾಸ, ಕುರುಡದಾಸ, ಬಡದಾಸ, ಕುರುಬದಾಸ, ಹೊಲೆದಾಸ, ರಂಗ ನಿನ್ನ ಮನೆಯ ಮಾದಿಗದಾಸ ನಾನೆಂದು ವಿನಮ್ರವಾಗಿ ಹೇಳುತ್ತಲೆ ಸಮಾಜಕ್ಕಂಟಿದ ಹಲವು ಕೊಳೆಗಳನ್ನು ತೊಳೆಯಲೆತ್ನಿಸಿದವರು ಕನಕದಾಸರು.
       ಕನಕದಾಸರ ಸಾಹಿತ್ಯ ಕುರಿತಾಗಿ ನಾವು ವರ್ತಮಾನದಲ್ಲಿ ನಡೆಸುತ್ತಿರುವ ಕೆಲವು ವಾದ-ಸಂವಾದಗಳು ಎಲ್ಲೋ ಕೆಲವೊಮ್ಮೆ ಅವರ ಸಾಹಿತ್ಯದ ಮೂಲ ಆಶಯವನ್ನೇ ಎರ್ರಾಬಿರ್ರಿಗೊಳಿಸುತ್ತಿದೆ ಏನೋ ಎಂಬ ಗುಮಾನಿ ಬರುವಂತೆ ಮಾಡುತ್ತದೆ. ಜಾಸ್ ವೀಡಾನ್ ಒಂದೆಡೆ ಬರೆಯುತ್ತಾನೆ, ‘ಐ ಆ್ಯಮ್ ಎ ವೇರಿ ಹಾರ್ಡ್ ಲೈನ್. ಆ್ಯಂಗ್ರಿ ಏತಿಸ್ಟ್. ಯಟ್ ಐ ಆ್ಯಮ್ ಫ್ಯಾಸಿನೇಟೆಡ್ ಬೈ ದ ಕಾನ್ಸೆಪ್ಟ ಆಫ್ ಡಿವೋಷನ್’. ಡಿವೋಷನ್ ಅಂದರೆ ಭಕ್ತಿ. ಇದು ಕನಕದಾಸರ ಸಾಹಿತ್ಯದ ಅಡಿಪಾಯ. ಹಾಗೆ ನೋಡಿದರೆ ಇದುವೇ ಎಲ್ಲವೂ. ಭಾರತದ ಒಂದು ನಿರ್ದಿಷ್ಟ ಘಟ್ಟದ ಒಟ್ಟು ಸೃಜನ ಕ್ರಿಯೆಯ ಬುನಾದಿಯೇ ಭಕ್ತಿ. ಅದು ಇಲ್ಲಿಯ ನಾಗರೀಕತೆಯ ದಿನಗಳಿಂದ ವರ್ತಮಾನದವರೆಗೂ ಅಖಂಡವಾಗಿದೆ. ಕನಕದಾಸರಂತೂ ‘ದಾಸನಾಗಬೇಕು, ಸದಾಶಿವನ ದಾಸನಾಗಬೇಕು’, ಎಂದು ಹಾಡುತ್ತ, ‘ಬಿರುದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನು’ ಎಂದು ಆದಿಕೇಶವನೆಂಬ ಪ್ರಜ್ಞೆಯಲ್ಲಿ ಮಾಗಿದ ಭಕ್ತಿಯ ಮಹಾ ಮನಸ್ಸು. 
       ಕನಕದಾಸರ ಭಕ್ತಿ ಒಂದು ಮಹಾಪೂರ. ಅದರೊಳಗೆ ಹರಿದು ಬಂದ ಲೋಕ, ಪಾರಮಾರ್ಥಗಳ ಚಿಂತನೆಗಳನ್ನು ಗಮನಿಸಿದಾಗ, “ದ ಹೋಲ್ ಹೌಸ್ ಕೇಮ ಅಪ್ ಆ್ಯಂಡ್ ಐ ಕೇಮ್ ಅಪ್ ವಿಥ್ ಇಟ್. ಐ ವಾಜ್ ಜಸ್ಟ್ ಪ್ರೇಯಿಂಗ್ ಟು ದ ಲಾರ್ಡ್ ಟು ಟೇಕ್ ಕೇರ್ ಆಫ್ ಮಿ” ಎಂಬ ಅಮೇರಿಕಾದ ಜನಪದ ಗಾಯಕ ವಿಲಿ ನೆಲ್ಸನ್‍ರ ಮಾತು ನೆನಪಾಗುತ್ತದೆ. ಬದುಕಿನ ಅಥವಾ ಸಾಹಿತ್ಯದ ಸಾತತ್ಯವಿರುವುದೇ ಸಮಗ್ರತೆಯಲ್ಲಿ. ಅಂಥ ಸಮಗ್ರತೆ ಕನಕರ ಸಾಹಿತ್ಯ ಮತ್ತು ಬದುಕುಗಳೆರಡರಲ್ಲೂ ನಾವು ಕಾಣಬಹುದಾಗಿದೆ.
      ಭಕ್ತಿಯಲ್ಲಿ ಹೇಗೋ ಹಾಗೆಯೆ ಸಾಹಿತ್ಯ ರಚನೆಯಲ್ಲೂ ಸಂಖ್ಯೆಯಿಂದ ದೊಡ್ಡ ಸಂತರಾದವರಲ್ಲ ಕನಕದಾಸರು. ಮುನ್ನೂರಕ್ಕೂ ಮಿಕ್ಕಿದ ಕೀರ್ತನೆಗಳು, ನಾಲ್ಕು ದೊಡ್ಡ ಕಾವ್ಯಕೃತಿಗಳು, ಅವುಗಳಲ್ಲಿ ಅಭಿವ್ಯಕ್ತಿಗೊಂಡ ಸಂಸಾರ, ಜ್ಞಾನ, ವೈರಾಗ್ಯ, ವೈಚಾರಿಕತೆ, ಊರುಗಾರಿಕೆ, ಅರಸೊತ್ತಿಗೆಯ ಪ್ರಶ್ನೆ. ಜೀವನ ಚಿಂತನೆಗಳು ಬರೀ ಕಾಲ್ಪನಿಕವಾಗಿ ಕಾಯಪಡೆದವುಗಳಲ್ಲ. ಬದಲಾಗಿ ಲೋಕ ಸಂಚಾರದ ಮಹಾ ಯಾತ್ರೆಯಿಂದ ಮೈದಾಳಿದ ವಾಸ್ತವಗಳು. ಅಂತೆಯೆ ಕುಲದ ನೆಲೆ, ಭಕ್ತಿ ಮತ್ತು ಡಾಂಭಿಕತೆ, ಧರ್ಮ ಮತ್ತು ಸಮಕಾಲೀನ ರಾಜಕಾರಣದ ಪ್ರಶ್ನೆಗಳು ಅವರ ಇಡೀ ಸಾಹಿತ್ಯದಲ್ಲಿ ಮತ್ತೆ ಮತ್ತೆ ಪ್ರಸ್ತಾಪಗೊಳ್ಳುತ್ತವೆ. ಲೋಕವಿಮುಖ ಸಾಹಿತ್ಯ ಹಾಗೂ ಸಾಹಿತಿಗಳಿಬ್ಬರಲ್ಲೂ ಈ ಪ್ರಶ್ನೆಗಳು ಅಪ್ರಸ್ತುತ. ಪ್ರಶ್ನೆಗಳಲ್ಲದ ಸಾಹಿತ್ಯ ಅಷ್ಟೇ, ಅದು ಅಲ್ಪಾಯು. ಆದರೆ ಕನಕದಾಸ ಸಾಹಿತ್ಯ ಕಾಲ ಪ್ರವಾಹದಲ್ಲಿ ಕೊಚ್ಚಿಹೋಗಿ ಮರೆವಿಗೆ ಒಳಗಾಗುವ ಬದಲು ಜನಪದ, ಕರ್ನಾಟಕ, ಹಿಂದೂಸ್ತಾನಿ, ರವೀಂದ್ರ ಸಂಗೀತಗಳ ಮೂಲಕ, ಸಿನಿಮಾ, ಪ್ರವಚನ ಹಾಗೂ ಗಣಕಯಂತ್ರಗಳಂಥ ಆಧುನಿಕ ಮಾಧ್ಯಮಗಳ ಮೂಲಕ ಹರಿದು ಬಂದು ಅಖಂಡವಾಗಿ ನಮ್ಮನ್ನು ವ್ಯಾಪಿಸಿದೆ, ವ್ಯಾಪಿಸುತ್ತಲೇ ಇದೆ.
      ಪ್ರಸ್ತುತ ‘ಬಯಲು ಆಲಯದೊಳಗೊ’ ಕೃತಿ ಶಿವಮೊಗ್ಗೆಯ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ, ರಾಪ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಪ್ರಾಯೋಜಿತ ಎರಡು ದಿನಗಳ ಸಂವಾದ ಸಂಕಿರಣದ ಫಲಶೃತಿ. ಇದು ಕನಕದಾಸರ ಕೃತಿಗಳೊಂದಿಗೆ ಜರುಗಿದ ಹೊಸ ತಲೆಮಾರಿನ ಆಲೋಚನೆಗಳ ಅನುಸಂಧಾನ. ಕನಕ ಸಾಹಿತ್ಯವನ್ನು ಓದುವ ಹೊಸ ಸಾಧ್ಯತೆಗಳನ್ನು ಹಾಗೂ ಅದರಿಂದ ಪರಸ್ಪರ ಆಲೋಚನೆಗಳು ವಿಸ್ತಾರಗೊಳ್ಳುವ, ಜಂಗಮವಾಗುವ ಪರಿಯನ್ನು ವಿವರಿಸುವ ಒಂದು ಪ್ರಯತ್ನ. ಭಕ್ತಿಯ ನೆಲಯಲ್ಲಿ ಒಂದೊಮ್ಮೆ ಹೊರಟು  ಸಮಕಾಲೀನ ಹಾಗೂ ಆಧುನಿಕ ಸಾಂಸ್ಕøತಿಕ-ಧಾರ್ಮಿಕ ರಾಜಕಾರಣವನ್ನು ನಿರಚನಗೊಳಿಸುವ ಕನಕರ ಸಾಹಿತ್ಯ ಈ ಕೃತಿಯಲ್ಲಿ ಅನಾವರಣಗೊಳ್ಳುವ ರೀತಿಯೇ ಬೆರಗುಗೊಳ್ಳುವಂಥದು. ಎಷ್ಟಾದರೂ ಬಯಲ ಬೆರಗೇ ಅಂಥದಲ್ಲವೆ?
     ಈ ಬೆರಗನ್ನು ಬಾಚುವ ಸುವರ್ಣಾವಕಾಶ ನನಗೆ ದೊರೆತದ್ದು ಅಧ್ಯಯನ ಕೇಂದ್ರ ಸಮನ್ವಯಾಧಿಕಾರಿಗಳಾದ ಶ್ರೀ ಕಾ.ತ. ಚಿಕ್ಕಣ್ಣರವರಿಂದ. ಅಂದಹಾಗೆ, ಈ ಸೇವಾವಕಾಶಕ್ಕೆ ನನ್ನನ್ನು ಚಿಕ್ಕಣ್ಣವರು ಆಯ್ಕೆ ಮಾಡಿಕೊಂಡದ್ದೂ ಕೂಡ ಭಾರತದ ರಾಜಕೀಯ ಸಂತನೆಂದೇ ಖ್ಯಾತರಾದ ಗಾಂಧಿಯ ಮೂಲಕ. ಅವರ ಕುರಿತ ನನ್ನ ಕೃತಿಗಳಲ್ಲಿ ಉಲ್ಲೇಖಗೊಂಡ ಗುಜರಾತಿ ಸಂತರ ಪದ್ಯಗಳ ಮೂಲಕ. ಸಂತ ಕರ್ನಾಟಕದವನೊ ಗುಜರಾತಿನವನೊ, ರಾಜಕಾರಣ ಭಾರತದ್ದೊ ಅಮೇರಿಕಾದ್ದೊ ಅವುಗಳೊಳಗಿನ ಧರ್ಮ ಒಂದೇ ಎನ್ನುವುದು ಇಂಥ ಅನುಸಂಧಾನಗಳಿಗೆ ಕಾರಣವಾಗುತ್ತದೆ. ಇದು ಮನೆಯ ಬೆಳಕನ್ನು ಮಹಾ ಬೆಳಕಿನೊಂದಿಗೆ ಸೇರಿಸಿದಂತೆ. ಶ್ರೀ ಕಾ.ತ. ಚಿಕ್ಕಣ್ಣ ಈ ಕೆಲಸವನ್ನು ಕೃತಿಯ ಸಂಪಾದನೆಯ ಜವಾಬ್ದಾರಿಯನ್ನು ನನಗೆ ನೀಡುವುದರ ಮೂಲಕ ಸಾಧ್ಯವಾಗಿಸಿದ್ದರಿಂದ ಅವರಿಗೆ ನನ್ನ ಅನಂತ ಧನ್ಯವಾದಗಳು.

Thursday, December 17, 2015

‘ಮಹಿಳೆ’ ಎಂಬ ಮೂರಕ್ಷರ. . . . .

 
         ನನ್ನಹೆಣ್ಣು ಹೇಳುವ ಅರ್ಧಸತ್ಯಕೃತಿಯು 2014ರಲ್ಲಿ ಪ್ರಕಟವಾಯಿತು. ಅಲ್ಲಿಂದೀಚೆಗೆ ಅದರ ಎರಡನೆಯ ಭಾಗವನ್ನು ಹೊರತರಬೇಕೆಂದು ನನ್ನ ಓದುಗರ ಒತ್ತಾಸೆ. ಆದರೆ ನನಗೇಕೊ ಮಧ್ಯ ಮಹಿಳಾ ಪ್ರಪಂಚದ ಜಾಗತಿಕ ವಿನ್ಯಾಸದೊಳಗೊಂದು ಪಯಣ ಅವಶ್ಯವೆನ್ನಿಸಿತು. ಆದರೆ ಬೆಂಗಳೂರಿನ ಯಾಂತ್ರಿಕ ಧಾವಂತದ ಜೀವನದಲ್ಲಿ ಇಂಥ ಧ್ಯಾನಸ್ಥ ಓದು ಅಸಾಧ್ಯವೆನ್ನಿಸಿತು. ಅದು ಒಂದು ವೇಳೆ ಸಾಧ್ಯವಾಗುವುದಾದರೆ, ಸಾಧ್ಯವಾಗಿಸಿಕೊಳ್ಳುವುದಾದರೆ ಈಗಾಗಲೇ ನಿಗಧಿತ ಕಾರ್ಯವ್ಯಾಪ್ತಿಯೊಳಗೇ ಆಗಬೇಕು ಎಂದುಕೊಂಡು, ನನ್ನ ಅಂಕಣ ಬರಹದ ಓದಿನ ಹಿನ್ನೆಲೆಯಲ್ಲಿ ಆಗಾಗ ಜಾಗತಿಕ ಮಟ್ಟದಲ್ಲಿ ತಾತ್ವಿಕ ಸಂಘರ್ಷಕ್ಕಿಳಿದ ಮಹಿಳೆಯರೆಡೆಗೆ ಗಮನ ಹರಿಸಿದುದರ ಫಲಶೃತಿಯೇ ಕೃತಿಮಹಿಳೆಎಂಬ ಮೂರಕ್ಷರ.
ಮಹಿಳೆಯರ ಕುರಿತು ಮತ್ತೆ ಮತ್ತೆ ಬರೆದವರಲ್ಲಿ, ಚಿಂತಿಸಿದವರಲ್ಲಿ, ಆಕೆಯ ಭಾವಲೋಕವನ್ನು ಅನಾವರಣಗೊಳಿಸಿದವರಲ್ಲಿ ನಾನೂ ಒಬ್ಬ ಎಂಬುದು ಮತ್ತೆ ಮತ್ತೆ ನನ್ನನ್ನುಪುರುಷಎಂಬ ಪ್ರಜ್ಞೆಗೊಳಪಡಿಸಿರುವುದರೊಂದಿಗೆ ನನ್ನ ಒಳ ನಿಧಾನವಾದಮಹಿಳೆ ಅಸ್ತಿತ್ವವನ್ನು ಖಚಿತಪಡಿಸಿದೆ. ಇದು ಇನ್ನೊಂದು ಅರ್ಥದಲ್ಲಿ ಎಲ್ಲರಿಗೂ ದಕ್ಕಿದ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಸತ್ಯ.
ಭಾರತದ ಅಥವಾ ಒಟ್ಟು ಪ್ರಪಂಚದ ಹಲವು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವಿನ್ಯಾಸಗಳಿಂದಾಗಿಮಹಿಳಾಲೋಕದಲ್ಲಿ ಏರಿಳಿತಗಳಾದವು ಅಥವಾ ಮಹಿಳೆಯೇ ವಿನ್ಯಾಸಗಳಿಗೆ ಕಾರಣಗಳಾದಳೋ ಇದು ಈಗಲೂ ಬಿಡಿಸಲಾಗದ ಪ್ರಶ್ನೆ ನನಗೆ. ಒಂದಂತೂ ಇದರಿಂದ ಸ್ಪಷ್ಟ. ಮಹಿಳೆ ಇಲ್ಲದ, ಅವಳನ್ನು ಹೊರತುಪಡಿಸಿದ ಮಾನವ ಇತಿಹಾಸದ ಓದು ಅಸಾಧ್ಯವಾಗಿದೆ, ಅಪೂರ್ಣವಾಗಿದೆ, ಅರ್ಧಸತ್ಯಗಳಿಂದ ಕೂಡಿದೆ ಹಾಗೂ ಅಪಾಯಕಾರಿಯಾಗಿದೆ.
ಭಾರತದ ಅಥರ್ವವೇದ ಮತ್ತು ಬೃಹದಾರಣ್ಯಕೋಪನಿಷತ್ತಿನಲ್ಲಿ ಪುರುಷನುಮಹಿಳೆಯನ್ನು (ವರನು ಕನ್ಯೆಯನ್ನು) ಕುರಿತು ಹೇಳುವ ಒಂದು ಮಂತ್ರ
ಪುರುಷನಾಗಿದ್ದೇನೆ ನಾನು, ಪ್ರಕೃತಿಯೇ ನೀನು
ಸಾಮಗಾನ ನಾನು, ಋಕ್ ಮಂತ್ರ ನೀನು
ಸ್ವರ್ಗವಾಗಿರುವೆ ನಾನು, ಭುವಿ ನೀನು.
ಸೇರೋಣ ನಾವಿಬ್ಬರೂ ಇಲ್ಲಿ, ಪ್ರಜೆಗಳನ್ನು ಸೃಷ್ಟಿಸೋಣ.

ನಮ್ಮ ಕುಡಿನೋಟಗಳು ಮಧುರವಾಗಿರಲಿ
ವದನಗಳು ನಮ್ಮ ಮೈತ್ರಿಯನ್ನು ಪ್ರತಿಬಿಂಬಿಸಲಿ
ನನ್ನನ್ನು ನಿನ್ನ ಹೃದಯ ಪೀಠದಲ್ಲಿರಿಸು
ನಮ್ಮೀರ್ವರಲಿ ಒಂದೇ ಚೇತನ ನೆಲೆಸಿರಲಿ

ನೀನು ನನ್ನಿಂದ ಪಾಲಿಸಲ್ಪಡಲಿ
ಬೃಹಸ್ಪತಿಯು ನಿನ್ನನ್ನು ನನ್ನವಳಾಗಿಸಿದ್ದಾನೆ;
ನಮ್ಮ ಮಕ್ಕಳ ತಾಯಿಯೇ, ನಿನ್ನ ಪತಿಯಾದ
ನನ್ನ ಜೊತೆ ನೂರು ವರ್ಷಗಳವರೆಗೆ ಜೀವಿಸು.

ಸೌಭಾಗ್ಯಕ್ಕಾಗಿ ನಿನ್ನ ಕೈ ಹಿಡಿಯುವೆ
ನನ್ನೊಂದಿಗೇ ನೀನು ವೃದ್ಧಳಾಗು;
ನನ್ನ ಮನೆಯ ಯಜಮಾನಿಯಾಗು.
         ಮನು ಪ್ರಣೀತ ನಾಡಿನಲ್ಲಿಯೇ ಸಮರ್ಪಣಾ ಭಾವದ ಇನ್ನೊಂದು ಅಭಿವ್ಯಕ್ತಿ ಇದೆ. ಇಡೀ ಮಂತ್ರವನ್ನು ನಾನು ಮತ್ತೆ ಮತ್ತೆ ಓದಿದ್ದೇನೆ. ಮಹಿಳೆಯನ್ನು ಧಿಕ್ಕರಿಸಿ ತನ್ನ ಅಸ್ತಿತ್ವ ಸಾಧ್ಯ ಎಂಬ ಪುರುಷನ ಅಹಂ ಎಲ್ಲಿಯಾದರೂ ಇಣುಕಿದೆಯೆ? ಅವನು ಅವಳವಳಲ್ಲ ಎಂಬ ಘೋಷಣೆ ಎಲ್ಲಿಯಾದರೂ ಸಾಧ್ಯವಾಗಿದೆಯೇ ಎಂದೆಲ್ಲ ಪರಿಕ್ಷಿಸಿದ್ದೇನೆ. ಊಹೂಂ, ಅದೆಲ್ಲಿಯೂ ಸಾಧ್ಯವಿಲ್ಲ. ವಾಸ್ತವದಲ್ಲಿಮಹಿಳೆಹೊರತಾದ ಅಂಥ ಒಂದು ಜೀವನ ಸಾಧ್ಯವಾಗುವುದಾದರೆ ತಾನೆ ಅದು ನಮ್ಮ ಆಲೋಚನೆಯ ಅಥವಾ ಅಭಿವ್ಯಕ್ತಿಯ ಭಾಗವಾಗುವುದು?
ಯಾವುದು ಜೀವನಯಂತ್ರದ ಚಾಲನಾ ಶಕ್ತಿಯಲ್ಲವೊ ಅದು ಮಂತ್ರವಾಗಲು ಎಂದಿಗೂ ಸಾಧ್ಯವಿಲ್ಲ.
ಇಲ್ಲಿ ಪರಿಚಯಿಸಲಾದಮಹಿಳಾಸತ್ಯಗಳಿಗೆ ಪೂರ್ವ-ಪಶ್ಚಿಮ ಎಂಬ ಪ್ರತ್ಯೇಕತೆ ಪ್ರಾಪ್ತವಾಗುವುದು ಹುಟ್ಟಿನ ಕಾರಣಕ್ಕೆ ಮಾತ್ರ. ಇಲ್ಲದೇ ಹೋದಲ್ಲಿ ಇದೊಂದು ನದಿ, ದೊಡ್ಡ ಜೀವನದಿ ಅಷ್ಟೆ. ನೆಲ ಇದೊ ಅದೊ, ಇವರೆಲ್ಲರ ನೆಲೆ ಮಾತ್ರ ನೋವು ಮತ್ತು ದುರಂತಗಳದ್ದು. ಸೋಲು ಮತ್ತು ಅಪಮಾನಗಳದ್ದು. ನಿತ್ಯ ಹಿನ್ನಡೆ ಮತ್ತೆ ಚಿಗುರುವ ಹಂಬಲದ್ದು.
ಸತ್ಯವನ್ನೇ ಹೇಳಬೇಕೆಂದರೆಮಹಿಳೆ ಎಂಬ ಮೂರಕ್ಷರಮೈದಾಳಿದುದರ ಹಿಂದೆ ಪ್ರಕಾಶಕ ಮಿತ್ರ ಶರಣು ಪಾಟೀಲರ ಪಾತ್ರ ಅತ್ಯಂತ ಮಹತ್ವದ್ದು. ಅವರು ಪಟ್ಟು ಹಿಡಿಯದೇ ಹೋಗಿದ್ದರೆ ಇತ್ತ ನನ್ನ ಗಮನವೇ ಹರಿಯುತ್ತಿರಲಿಲ್ಲವೇನೊ. ಅಷ್ಟೊಂದು ಪ್ರೀತಿ ಹಾಗೂ ಕಾಳಜಿಗಳೊಂದಿಗೆ ಬೆನ್ನು ಹತ್ತಿದವರು ಚಿತ್ತಾರ ಪ್ರಕಾಶನದ ಮಾಲೀಕರೂ ಹಾಗೂ ಸ್ವಯಂ ಲೇಖಕರೂ ಆದ ಶ್ರೀ ಶರಣು ಪಾಟೀಲ. ಅವರ ಪ್ರೀತಿಗೆ ನಾನು ಋಣಿಯಾಗಿದ್ದೇನೆ.
ನನ್ನ ಬರಹದ ಪ್ರೇರಣಾ ಶಕ್ತಿಗಳಲ್ಲೊಬ್ಬರು ಖ್ಯಾತ ಲೇಖಕಿಕಸ್ತೂರಿ ಬಾಯರಿ’. ಕೃತಿಗೆ ಅವರ ಬೆನ್ನುಡಿ ದೊರೆತು ಪುಸ್ತಕದ ಘನತೆ ಹೆಚ್ಚಾಗಿದೆ ಎಂದುಕೊಂಡಿದ್ದೇನೆ. ಅಭಿಮಾನದ ಸಾಲುಗಳಿಗಾಗಿ ಅವರಿಗೂ ಋಣಿಯಾಗಿದ್ದೇನೆ.
ಯಥಾ ಪ್ರಕಾರ ಅರುಣ ಆಚಾರ್ಯ ಪುಸ್ತಕದ ಮುಖಪುಟ ವಿನ್ಯಾಸ ಮಾಡಿದ್ದಾನೆ. ಸೊಸೆ ನೀತು ಎಷ್ಟೊಂದು ಮಾತಾಡಿದ್ದಾಳೆ. ಕೃತಿಯ ಬಾಹ್ಯ ವಿನ್ಯಾಸಕಾರಳು ನಿಜವಾಗಿಯೂ ಇವಳೆ. ಮಗ ಸಿದ್ಧಾರ್ಥನ ಸೂಚನೆಗಳಿಗೇನೂ ಕೊರತೆ ಇಲ್ಲ. ಆತನ ಕಣ್ಣುಗಳೋ ಸದಾ ವಿನ್ಯಾಸ ದೊಷಗಳನ್ನೇ ಹುಡುಕುತ್ತಿರುತ್ತವೆ. ಅವನನ್ನು ತೃಪ್ತಿಪಡಿಸದ ಯಾವ ಕಲಾಕೃತಿಯೂ ನನಗೂ ಇಷ್ಟವಾಗಿಲ್ಲವೆಂದೇ ಹೇಳಬೇಕು.
ಸದಾ ನನ್ನ ಪುಸ್ತಕಗಳನ್ನು ಸಾಧ್ಯವಾಗಿಸುವವಳು ನನ್ನ ಪ್ರೀತಿಯ ಪದ್ದಿ. ಅವಳಿಗೆ ಧನ್ಯವಾದ ಹೇಳಬಹುದೆ? ಹಾಂ. ಹೇಳಲೇಬೇಕು. ಯಾಕೆಂದರೆ ಅವಳು ಮಹಿಳೆ, ಒರಟು ಮನಸ್ಸುಗಳನ್ನು ಮುಗುಳ್ನಗೆ ಮತ್ತು ಮೌನ ಮಾತ್ರದಿಂದಲೇ ಮಾತೃಕಾರುಣ್ಯದಿಂದ ತುಂಬಿ ಬಿಡುವಂತೆ ಮಾಡುವ ಮಲ್ಲಿಗೆಯಾಗಿಸುವ ಮಹಾ ಮಹಿಳೆ.

ಓದುತ್ತ ಓದುತ್ತ ನನ್ನೊಂದಿಗ ಎಲ್ಲೆಲ್ಲ ಬಂದವರು ನೀವು. ನಿಮ್ಮ ಸಾಂಗತ್ಯವೇ ನನ್ನ ಶಕ್ತಿ. ನೀವು ಹೀಗೇ ಇರಿ ಸದಾ ನನ್ನೊಂದಿಗೆ.