Total Pageviews

Sunday, March 27, 2016

ಸಲ್ಲುವ ದಾರಿ ಸಿಗದೆ!!!

ಕೆನಡಿಯನ್ ಕಾವ್ಯ ಇನ್ನೂ ವಿಸ್ತಾರಗೊಳ್ಳಬೇಕಾಗಿದೆ. ವಿಶಾಲ ರಾಷ್ಟ್ರದ ಸೃಜನಶಕ್ತಿ ಇನ್ನೂ ಸಮೃದ್ಧವಾಗಬೇಕಾಗಿದೆ. ರಾಷ್ಟ್ರದ ಗಾತ್ರದ ಮೇಲೆ ಸಾಹಿತ್ಯದ ಗಾತ್ರ ನಿರ್ಧಾರವಾಗುವುದಿಲ್ಲ. ನೀರಿಲ್ಲದ ನಾಡಿನಲ್ಲಿ ಸಾಹಿತ್ಯದ ಮಹಾಸಾಗರಗಳೇ ಹರಿದ ಉದಾಹರಣೆಗಳಿವೆ. ಶ್ರೀಮಂತಿಕೆಯ ನಾಡುಗಳಲ್ಲಿ ಸಾಂಸ್ಕøತಿಕ ಬರ ಘಟಿಸಿದ ಉದಾಹರಣೆಗಳೂ ಇವೆ. ಕೆನಡಾ ಭೌತಿಕವಾಗಿ ಸಮರ್ಥ ರಾಷ್ಟ್ರ ಆದರೆ ಸಾಂಸ್ಕøತಿಕವಾಗಿ ಅಲ್ಲ.
ಇಲ್ಲಿಂದಲೇ ಬಂದವಳು ತಿನ್ಮುತ್. ಇವಳ ಆಯುಷ್ಯ ಕೇವಲ ನಲವತ್ತು ವರ್ಷ. ಪೂರ್ಣ ಹೆಸರು ಪೆಟ್ರಿಸಿಯಾ ಲೂಯಿಸ್ ತಿನ್ಮುತ್. 1935ರಲ್ಲಿ ಜನಿಸಿ 1975ರಲ್ಲಿ ಜೀವನ ರಂಗಸ್ಥಳದಿಂದ ನಿರ್ಗಮಿಸಿದ ಪಾತ್ರ. ಬ್ರಿಟಿಷ್ ಕೋಲಂಬಿಯಾದ ವ್ಯಾಂಕೋರ್ನಲ್ಲಿ ಹುಟ್ಟಿ ನಾರ್ಥ ವ್ಯಾಂಕೋರ್ನಲ್ಲಿ ಬೆಳೆದವಳು.
ಕೇವಲ ಹತ್ತು ವರ್ಷದವಳಿದ್ದಾಗ ತಿನ್ಮುತ್ ಮೊದಲ ಕವಿತೆ ಪ್ರಕಟವಾಯಿತು. ಈಕೆ 23ನೇ ವಯಸ್ಸಿನಲ್ಲಿದ್ದಾಗ ದಿಸ್ ಡಿಫಿಕಲ್ಟ್ ಫ್ಲಾವರಿಂಗ್ ಎನ್ನುವ ತನ್ನ ಕಾವ್ಯಸಂಕಲನವನ್ನು ಪ್ರಕಟಿಸಿದಳು. ಸ್ಟೋನ ಹೌಸ್ ಎನ್ನುವ ಪ್ರಕಾಶನ ಸಂಸ್ಥೆ ಸೌಥ್ ಅಮೇರಿಕಾದ ಕ್ರಾಂತಿಯಿಂದ ಸ್ಪೂರ್ತಿ ಪಡೆದು ಹುಟ್ಟಿದ ಇವಳ ಧೀರ್ಘ ಕವಿತೆಯನ್ನು 1972ರಲ್ಲಿ ಪ್ರಕಟಿಸಿತು. ಫಾಬ್ಲೋ ನರೋಡಾನನ್ನು ಕುರಿತು ಇವಳು ಬರೆದ ಕವನ ರೀಗಾರ್ಡ್ ಟು ನೆರೂಡಾ ನೀವು ಓದಲೇಬೇಕು.
ಪ್ರತಿಭಾನ್ವಿತ ಕವಿಯತ್ರಿ ತಿನ್ಮುತ್. ಲೀಗ ಆಫ್ ಕೆನಡಿಯನ್ ಪೋಯಟ್ಸ್ ಸಂಘಟನೆಯ ನಿರ್ದೇಶಕಿಯಾಗಿದ್ದ ಇವಳು ಕೆಲವು ವರ್ಷ ಯುನಿವರ್ಸಿಟಿ ಆಫ್ ಬ್ರಿಟಿಷ್ ಕೋಲಂಬಿಯಾದಲ್ಲಿ ಪ್ರಾಧ್ಯಾಪಕಿಯಾಗಿಯೂ ಕೆಲಸ ಮಾಡಿದವಳು. ಬರೀ ತನ್ನ ಕಾವ್ಯ ಮಾತ್ರಕ್ಕಾಗಿಯೇ ಪ್ರಪಂಚದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದವರಲ್ಲಿ ಇವಳೂ ಒಬ್ಬಳು. ಇವಳ ಹಿಸ್ಟ್ರಿ ಆಫ್ ಲೆಸನ್ಸ್, ವಾಟರ್ ಕ್ಲಾಕ್, ರೈಡಿಂಗ್ ಪಾಸ್ಟ್ ಮತ್ತು ಕ್ಲೌಡ್ ಹಾರ್ಸಸ್ಗಳು ಪ್ರತಿಯೊಬ್ಬ ಕಾವ್ಯಾಸಕ್ತನೂ ಓದಲೇಬೇಕಾದ ಕವಿತೆಗಳು.
1953ರಲ್ಲಿ ತಿನ್ಮುತ್ ಬಿಲ್ ಎನ್ನುವವನನ್ನು ಮದುವೆಯಾಗಿ ಕ್ಯಾಥರಿನ್ ಮತ್ತು ಅಲನ್ ಎಂಬ ಎರಡು ಮಕ್ಕಳ ತಾಯಿಯಾಗುತ್ತಾಳೆ. ಆದರೆ ಸಂಸಾರದ ಆಯುಷ್ಯ ಕೇವಲ ನಾಲ್ಕು ವರ್ಷ ಮಾತ್ರ. ಸರಿಯಾಗಿ ಹತ್ತು ವರ್ಷಗಳ ನಂತರ ಅಂದರೆ 1963ರಲ್ಲಿ ರಾಯ್ ಲೋಥರ್ ಎಂಬುವವನನ್ನು ಮದುವೆಯಾಗಿ ಮತ್ತೆ ಎರಡು ಹೆಣ್ಣು ಮಕ್ಕಳ ತಾಯಿಯಾಗುತ್ತಾಳೆ. ತಿನ್ಮುತ್ಳದು ಈಗ ಆರು ಸದಸ್ಯರ ಸಂಸಾರ. ಸಂಸಾರದ ಮಹಾ ಧ್ಯಾನವೇ ಕವಿತೆ, ಕವಿತೆ ಮತ್ತೂ ಕವಿತೆ. ನಾನು ಇಷ್ಟೊಂದು ಹೊಗಳುತ್ತಿರುವ ಇವಳ ಕಾವ್ಯ ಪ್ರತಿಭೆ ಎಂಥದಿರಬಹುದು ಎನ್ನುವ ಕುತೂಹಲವಲ್ಲವೆ? ಒಂದು ಕವಿತೆಯನ್ನು ಓದಿಯೇ ಬಿಡಿ
ಬೆರಳ ತುದಿಗಳಿಂದ ನೀರ ಹನಿಗಳು ಉರುಳಿದಂತೆ
ಮನುಷ್ಯ ಉದುರಿದ್ದಾನೆ ಉದ್ದೇಶಗಳ ತಿರುಗಣಿಯಲ್ಲಿ
ಉಲಿಯೊಂದಿಗೆ ನಲಿಯುವುದ ಬಿಟ್ಟು
ಕನಲುತ್ತಲೇ ಇದ್ದಾನೆ ಕನವರಿಕೆಗಳ ಹಾಸಿ
ಮುಗ್ಧತೆಯ ಚರ್ಮ ಸುಕ್ಕುಗಟ್ಟಿದೆ
ಹಾಳಾಗಿದೆ ಒಡಲ ವನದ ಸೌಂದರ್ಯ
ನೀರಲ್ಲಿ ಮುಖ ನೋಡಿಕೊಂಡು
ನಡೆಯಬೇಕಿದೆ ಸುಮ್ಮನೆ ತಡಯಲಾಗದ್ದಕ್ಕಾಗಿ
      ತಿನ್ಮುತ್ ಅನೇಕ ಕವಿತೆಗಳಲ್ಲಿ ಆಯ್ದುಕೊಂಡ ಒಂದು ಕವಿತೆ ಇದು. ಬರೀ ಕವಿತೆಯನ್ನು ಈಕೆ ಸೃಷ್ಟಿಸಲಿಲ್ಲ ಎನ್ನುವುದಕ್ಕೆ ಸಾಕ್ಷಿ ಈಕೆಯ ಮಗಳು ಕ್ರಿಸ್ಟಿನಾ. ಇವಳು ತಾಯಿಯಂತೆಯೇ ಅಪರೂಪದ ಕವಿಯತ್ರಿ. ಈಗಾಗಲೇ ಹೇಳಿದೆ ಕಾವ್ಯವನ್ನೆ ಹಾಸಿ, ಹೊದಿಸಿ ಬದುಕಿದ್ದ ತಿನ್ಮುತ್ ಜೀವನ ಮಾತ್ರ ಸಮಸ್ಯೆಗಳ ದೊಡ್ಡ ಸುಳಿಯಾಗಿತ್ತು. ಬಡತನ ಭೂತದಂತೆ ಅವಳ ಹೆಗಲ ಏರಿತ್ತು. ಮೊದಲ ಗಂಡ ಬಿಲ್ ಈಕೆಯ ಕೈಬಿಟ್ಟ ಮೇಲೆ ಪತ್ರಿಕೆಗಳಿಗೆ ಕವಿತೆಗಳನ್ನೊ, ಲೇಖನಗಳನ್ನೊ ಬರೆದುಕೊಂಡೇ ಈಕೆ ಹಣ ಗಳಿಸಬೇಕಿತ್ತು. ಆದರೆ ಕವಿತೆ ಎಷ್ಟು ಹಣ ಕೊಟ್ಟೀತು.
ಹಣ ಸಿಗುತ್ತದೆಂದು ಏನೆನೋ ಬರೆದವಳಲ್ಲ ತಿನ್ಮುತ್. ಕ್ರಾಂತಿ, ತಾಯ್ತನ, ಪ್ರೀತಿ, ದೇಶ ಇವಳ ಕವಿತೆಯ ನಿರಂತರ ವಿಷಯಗಳಾಗಿದ್ದವು. ಇದನ್ನು ಹೊರತುಪಡಿಸಿ ಮಹಾಯುದ್ಧಗಳ ಸಂದರ್ಭಗಳಲ್ಲಿ ಘಾಸಿಗೊಂಡ ಮನೆ-ಮನಸ್ಸುಗಳ ಬಗೆಗೂ ಇವಳು ಬರೆದಿದ್ದಾಳೆ. ಇವಳ ಆತ್ಮಕಥೆ ಹಾಫ್ ಲೈವ್ಸ್ಕೃತಿಯಂತೂ ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತ ಮಹಾ ಪ್ರಬಂಧವೇ ಆಗಿದೆ. ತಾನು ಕಂಡ ಮಹಿಳೆಯರ ಸಜೀವ ದಹನ, ಗಂಡಂದಿರಿಂದ ಅನುಭವಿಸಿದ ಮಹಿಳೆಯರ ಯಾತನೆಗಳ ಕುರಿತು ಬರೆಯುತ್ತ ಇವಳು ತಿಳಿಸುತ್ತಾಳೆ ಜರ್ಮ ಆಫ್ ವಾಯಲನ್ಸ್ ಅಗೆನಸ್ಟ್ ವೂಮೆನ್ ಇಸ್ ಡೀಪ್ಲಿ ಇಂಬೆಗೆಡ್ ಇನ್ ಮೇಲ್ ಸೈಕೆಎನ್ನುತ್ತಾಳೆ.
ಹೀಗೆ ಹೇಳುವ ತಿನ್ಮುತ್ ಗಂಡಸರ ಬಗೆಗೆ ಹಾಗೂ ಅವರ ಮನೋಸ್ಥಿತಿಯ ಕುರಿತು ಒಂದು ಕವಿತೆ ಬರೆದಿದ್ದಾಳೆ
ಅವಳ ನೆನಪಾಗಿಬಿಟ್ಟರೆ!!!
ಭಯಪಡುತ್ತಾನೆ ಚಳಿ-ಗಾಳಿಗೆ ಗಂಡಸು
ದುಗುಡ, ಆಸೆ ಕೊಟ್ಟು ಮುರಿದ ಭಾಷೆಗಳ ನೆನಪಾಗಿ
ಕಪ್ಪಿಡುತ್ತದೆ ಮುಖ, ಆದರೂ ಅದೆಂಥ ಸುಖ!
ಚಳಿಗೆ ಅವಳು ಬೇಕೇ ಇತ್ತು
ನೆತ್ತಿಗೆ ಅವಳ ಉಸಿರು ಬೇಕಿತ್ತು
ಒಂಟಿತನದ ಸೀಲುಬೆಗಿಂತ
ಸರಿಯಾಗಿತ್ತು ಅವಳೊಂದಿಗಿನ ಸೂಳೆತನ
ಆದರೆ, ಅವಳು ಗಾಳಿ ಹಿಡಿತಕ್ಕೆ ಸಿಗದವಳು
ಅವಳು ನೀರು, ನೆಲೆ ಇಲ್ಲದವಳು
ಕಣ್ಣೀರಾಗುತ್ತೇನೆ ನಮಗಿಬ್ಬರಿಗೂ
ಸಲ್ಲುವ ಒಂದೇ ದಾರಿ ಸಿಗದ್ದಕ್ಕೆ
         ಪ್ರಪಂಚದ ಮಹಿಳಾ ಸಂಕಥನಗಳಲ್ಲಿ ಇವಳ ಬದುಕಿಗೆ ಯಾವ ನೆಲೆ ಇದೆಯೋ ಗೊತ್ತಿಲ್ಲ. ಆದರೆ ಬಹುತೇಕ ಇವಳ ಸಾಹಿತ್ಯದ ಚಿಂತನೆಯನ್ನು ಸಮಕಾಲೀನರೂ ಮಾಡಲಿಲ್ಲ. ಸಾಮಾನ್ಯರ ಧ್ವನಿಯಾಗಿ, ತನ್ನ ಬರಹಗಳ ಮೂಲಕ ಅವರ ಆಶೋತ್ತರಗಳ ಅಭಿವ್ಯಕ್ತಿಯಾಗಿ ಇವಳು ಸಲ್ಲಿಸಿದ ಸೇವೆ ಅದ್ಭುತವಾಗಿದೆ. ಕೆನಡಿಯನ್ ಗ್ರಾಮೀಣ ಮಹಿಳಾ ಸಮಸ್ಯೆಗಳನ್ನು ಮತ್ತು ಇಲ್ಲಿಯ ನಗರಗಳಲ್ಲಿ ಅನಾಮಧೇಯವಾಗಿ ಸತ್ತು ಹೋದ, ಕೊಲೆಯಾದ, ಅಪಹರಣಕ್ಕೊಳಗಾದ ವೇಶ್ಯೆಯರ ಕುರಿತು ಬಹಳಷ್ಟು ಸಂಗತಿಗಳನ್ನು ತಿನ್ಮುತ್ ದಾಖಲಿಸಿದ್ದಾಳೆ. ಹೀಗಾಗಿ ಇವಳನ್ನು ಕೆನಡಿಯನ್ ಕಾವ್ಯದಲ್ಲಿ ಮಹಿಳಾ ಸಂವೇದನೆಗಳ ಪ್ರನಿಧಿ ಎಂದು ಪರಿಗಣಿಸಲಾಗಿದೆ. ಈಗಲೂ ಅಷ್ಟೆ, ಪ್ರತಿ ವರ್ಷ ಇವಳ ಹೆಸರಿನಲ್ಲಿ ನೀಡಲಾಗುವ ಕೆನಡಿಯನ್ ಕಾವ್ಯ ಪ್ರಶಸ್ತಿ ಯುವ ಬರಹಗಾರ್ತಿಯ ಮೊದಲ ಸಂಕಲನಕ್ಕೇ ಮೀಸಲಾಗಿದೆ.
ಸಾಮಾನ್ಯರ ಸಶಕ್ತ ವೇದಿಕೆಯಾಗಿ ಇವಳ ಕಾವ್ಯ ಹುಲುಸಾಗಿ ಬೆಳೆಯಲು ಇವಳ ಸಾಂಸಾರಿಕ ಹಿನ್ನೆಲೆ ಮಹತ್ವದ ಕಾರಣವಾಗಿದೆ. ಈಗಾಗಲೇ ಚರ್ಚಿಸಿದಂತೆ ಹದಿನಾರನೇ ವಯಸ್ಸಿನಲ್ಲಿ ಕುಟುಂಬದ ಆರ್ಥಿಕ ಸ್ಥಿತಿ ದುರ್ಬಲವಾದುದರಿಂದ ಓದನ್ನು ಬಿಟ್ಟ ತಿನ್ಮುತ್ ಬಾಲ್ಯದಲ್ಲಿ ಯಾವ ಸಂಭ್ರಮಗಳಿರಲಿಲ್ಲ. ಹದಿನೆಂಟನೇ ವಯಸ್ಸಿನಲ್ಲಿ ಈಕೆ ಮದುವೆಯಾದದ್ದು ಶಿಪ್ ಬಿಲ್ಡಿಂಗ್ ಕಂಪನಿಯೊಂದರಲ್ಲಿಯ ನೌಕರನನ್ನು. ಎರಡನೇಯ ಮದುವೆಯೂ ಅಷ್ಟೆ ರಾಯ್ ಆರ್ಮಸ್ಟ್ರಾಂಗ್ ಎನ್ನುವ ಗಂಡ ಆಗರ್ಭ ಶ್ರೀಮಂತನೆನಲ್ಲ. ಓರ್ವ ಪಬ್ಲಿಕ್ ಸ್ಕೂಲ್ ಟೀಚರ್. ರಾಜಕೀಯವಾಗಿ ಎಡಪಂಥಿಯ ಚಿಂತಕ. ಸರ್ಕಾರದ ವಿರುದ್ಧದ ಇತನ ಬರಹ ಮತ್ತು ಭಾಷಣಗಳಿಂದಾಗಿ ನೌಕರಿಯಿಂದ ತೆಗೆದುಹಾಕಲಾಗಿತ್ತು. ಸ್ವಯಂ ಇತನೂ ಕವಿಯಾಗಿದ್ದರೂ ಕೂಡ ತಿನ್ಮುತ್ ಕವಿತೆಗಿದ್ದ ಶಕ್ತಿ, ಸಾಮಥ್ರ್ಯ ಇವನ ಕವಿತೆಗಿರಲಿಲ್ಲ. ಸಂಸಾರದ ಒಡಕಿಗೆ ಇದೂ ಒಂದು ಕಾರಣವಾಯಿತೇನೊ.
ಸದಾ ಮಹಿಳೆಯರ ಮೇಲಿನ ಹಿಂಸೆಯನ್ನು ತನ್ನ ಕಾವ್ಯದ ಮೂಲಕ ವಿರೋಧಿಸಿದ ಇವಳ ಬಾಳು ಹಿಂಸೆಯಲ್ಲಿಯೇ ಹೋಳಾದುದು ಮಾತ್ರ ಅತ್ಯಂತ ದುರದೃಷ್ಟಕರ.
1975 ಅಕ್ಟೋಬರ್ 15, ಇವಳ ಮನೆಯಿಂದ ಐದು ಕಿಲೋಮೀಟರ್ಗಳ ಆಚೆಯ ಕಲ್ಲು ಪೊಟರೆಯೊಳಗೆ ಅನಾಥ ಶವವಾಗಿದ್ದಳು ತಿನ್ಮುತ್. ನಾಲ್ಕು ದಿನಗಳವರೆಗೆ ಇವಳ ಶವದ ಪತ್ತೆಯಾಗಿರಲಿಲ್ಲ. ಮನೆಗೆ ಬಂದ ಪೋಲಿಸರು ತನಿಖೆಯ ಸಂದರ್ಭದಲ್ಲಿ 117 ರಕ್ತದ ಕಲೆಗಳನ್ನು ಇವಳ ಬೆಡ್ರೂಂನಲ್ಲಿ ಗಮನಿಸಿದರು. ಮೊದಮೊದಲು ಏನೇನೊ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ ರಾಯ್ ಆನಂತರ ಮನೆಯಲ್ಲಿರುವ ಹ್ಯಾಮರ್ನಿಂದ ಅವಳನ್ನು ಚಚ್ಚಿ ಕೊಂದಿರುವುದಾಗಿಯೂ, ಕೊಲೆಗೆ ಅವಳು ಇಟ್ಟುಕೊಂಡಿದ್ದ ಅನೈತಿಕ ಸಂಬಂಧವೇ ಮುಖ್ಯ ಕಾರಣ ಎಂದು ಸ್ಪಷ್ಟನೆ ನೀಡಿದ.
ತಿನ್ಮುತ್ ಗಂಡ ರಾಯ್ನನ್ನು ಬಂಧಿಸಿ ಜೈಲಿನಲ್ಲಿಡಲಾಯಿತು. ಮುಂದೆ ಕಾಲಾಂತರದಲ್ಲಿ ಜೈಲಿನಲ್ಲಿಯೇ ಇತನ ನಿಧನವಾಯಿತು. ಹೀಗೆ ಹತ್ತು ವರ್ಷಗಳ ಸಂಸಾರ ಒಂದು ಶೋಕಗೀತೆಯಾಯಿತು.
ಹಿಲ್ದಾ ಥಾಮಸ್ ಎಂಬ ಕೆನಡಿಯನ್ ಸಾಹಿತ್ಯ ಚಿಂತಕನ ಪ್ರಕಾರ, ‘ಸಾಂಸಾರಿಕ ದುರಂತದ ನಂತರವೂ ಈಕೆ ಅಪರೂಪದ ಕವಿಯತ್ರಿ. ಇವಳ ಸಾವಿನಿಂದ ಕೆನಡಿಯನ್ ಕಾವ್ಯದ ಕಡಲು ಖಾಲಿಯಾಯಿತೇನೊ ಎನಿಸುತ್ತದೆಎಂದಿದ್ದಾನೆ. ಅಲನ್ ಸಫಾರಿಕ್ ಇವಳ ಏಜ್ ಆಫ್ ಬರ್ಡ್ಪ್ರಕಟಿಸಿದ್ದಾನೆ. ಆಕ್ಸಫರ್ಡ್ ವಿಶ್ವವಿದ್ಯಾಲಯದ ಪ್ರೆಸ್ ಇವಳ ಸಮಗ್ರ ಕಾವ್ಯವನ್ನು ಪ್ರಕಟಿಸಿದೆ. ಪ್ರತಿ ವರ್ಷವೂ ಇವಳ ಹೆಸರಿನಲ್ಲಿ ಜಾಗತಿಕ ಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಆದರೆ ಮನುಷ್ಯರ ಮಧ್ಯ, ಮನುಷ್ಯರಿಗಾಗಿ, ಮನುಷ್ಯಳಂತೆ ಬದುಕಿದ್ದ ತಿನ್ಮುತ್ ಈಗ ಕೆನಡಾದ ಚಳಿ-ಗಾಳಿಯಲ್ಲಿ ಮರಗಟ್ಟದ ಮೂರ್ತಿಯಾಗಿದ್ದಾಳೆ!!