Total Pageviews

Wednesday, June 29, 2016

ನಾನು ಎಂಬ ವಿಶ್ವಾತ್ಮಕತೆಯ ಜಾಡು ಹಿಡಿದು...



ಕನ್ನಡ ಸಾಹಿತ್ಯದ ವಿದ್ಯಾರ್ಥಿ, ಇಂಗ್ಲೀಷ ಸಾಹಿತ್ಯ ಅಭ್ಯಾಸಿಗನಿಗೆ ಪ್ರತಿಕ್ರಿಯಿಸುವುದು ಹೇಗೆ? ಒಂದು ಸ್ಥಳಿಯ ನೆಲೆ. ಮತ್ತೊಂದು ವಿಶ್ವಾತ್ಮಕತೆ ನೆಲೆ. ಇಂದು ಬಹುತೇಕ ಅಧ್ಯಯನ, ಓದು, ಗ್ರಹಿಕೆಗಳೆಲ್ಲವೂ ಸ್ಥಳೀಕರಣ ಪ್ರಕ್ರಿಯೆಯ ಹಿನ್ನೆಲೆಯಲ್ಲಿಯೇ ನಡೆಯುತ್ತಿವೆ. ಕವಿರಾಜಮಾರ್ಗಕಾರ ಹೇಳಿದ ‘.....ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯವಿಲೀನವಿಶದ ವಿಷಯ ವಿಶೇಷಂ’ ಇದೇ ಅರ್ಥವನ್ನು ಕೊಡುತ್ತಿದೆ. ಕನ್ನಡವೇ ಒಂದು ಜಗತ್ತು. ಅದರ ಮೂಲಕ ವಿಶ್ವವನ್ನು ನೋಡುವ ಪ್ರಯತ್ನ ಬಹಳ ಮುಖ್ಯವಾದದ್ದು. ಈ ಹಿನ್ನೆಲೆಯಲ್ಲಿ ವಿಶ್ವಕ್ಕೆ ಸಂಬಂಧಿಸಿವೆ ಎನ್ನಬಹುದಾದ  ಸಂಗತಿಗಳು ಕನ್ನಡದ ಪ್ರವೇಶವನ್ನು ಬಯಸುವ ಸಂದರ್ಭದಲ್ಲಿ ನಮ್ಮವರ ಪ್ರತಿಕ್ರಿಯೆ ಪ್ರಾರಂಭದಲ್ಲಿ ಆಶಾದಾಯಕವಾಗಿರಲಿಲ್ಲ. ಅದಕ್ಕೆ ಅನೇಕ ತಕರಾರುಗಳೇ ಇದ್ದವು. ನವೋದಯ ಕವಿಗಳ ಈ ಪ್ರಯತ್ನವನ್ನು ಒಂದು ರೀತಿಯಿಂದ ಸ್ವೀಕರಿಸಿದೆವಾದರೂ ನವ್ಯದವರು ಮಾಡಿದ ಪ್ರಯೋಗಗಳು ನಮ್ಮನ್ನು ಸಾಕಷ್ಟು disturb ಮಾಡಿದ್ದವು. ಈ ಹಂತದಲ್ಲಿಯೇ ಅಡಿಗ, ಅನಂತಮೂರ್ತಿ, ಲಂಕೇಶ್‍ರಂತಹವರು ಜಾಗತಿಕ ಸಂಗತಿಗಳನ್ನು ಒಂದು ಪಠ್ಯರೂಪದಲ್ಲಿಯೇ ಪರಿಚಯಿಸಿದ್ದರು. ಇಲ್ಲಿ ಉಲ್ಲೇಖಿಸಲೇಬೇಕಾದ ಕೃತಿಗಳೆಂದರೆ  ‘ರೂಪಕ ಲೇಖಕರು’ ‘ಮನಕೆ ಕಾರಂಜಿಯ ಸ್ಪರ್ಶ’  ಮತ್ತು ಎನ್. ಎಸ್ ಶಂಕರ್ ಅವರ ‘ಚಂಚಲೆ ’. ಬದುಕಿನ ಸಾಧನೆಗಳ ಜೊತೆಗೆ ಪೊಳ್ಳುತನಗಳನ್ನು, ಮುಖವಾಡಗಳನ್ನು, ನೈತಿಕ ಮತ್ತು ಅನೈತಿಕತೆಯ ಪರಿಭಾಷೆಯಲ್ಲಿ ನೋಡದೆ ಬಿಚ್ಚಿಟ್ಟ ಅಪರೂಪದ ಬರಹಗಳಿವು. ಚಂಚಲೆಯ ಕೃತಿಯ ಮುನ್ನುಡಿಯಲ್ಲಿ ಪಿ. ಲಂಕೇಶ್ ಹೇಳಿದ ಮಾತುಗಳು ಈ ಸಂದರ್ಭಕ್ಕೆ  ಬಹಳ ಮಹತ್ವದಾಗಿವೆ. ಯಾವುದೇ ಸಾಹಿತ್ಯವನ್ನು ‘receive’ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ಮಾತುಗಳು relavent ಆಗುತ್ತವೆ. ಲಂಕೇಶ್  ಹೇಳುವ ಹಾಗೇ “ನಾವು ಸತ್ಯವೆಂದು ಭ್ರಮಿಸಿದ್ದಕ್ಕೆ ಸವಾಲಾಗಿ ಹತ್ತಾರು ಬಗೆಯ ಸ್ತರಗಳಿರುತ್ತವೆ. ಉತ್ತಮ ಲೇಖನ ಮತ್ತು ಉತ್ತಮ ಪತ್ರಕರ್ತ ಜೀವಸೆಲೆಯ ಹುಡುಕಾಟದಲ್ಲಿ ಸರಿಯಾದದ್ದನ್ನು  ಆರಿಸಿಕೊಳ್ಳುತ್ತಾನೆ”. 
       ಈ ‘ಹುಡುಕಾಟ’ ಮತ್ತು ‘ಸರಿಯಾದದ್ದನ್ನು’ ಆರಿಸಿಕೊಳ್ಳುವ ಪ್ರಕ್ರಿಯೆ ಇನ್ನು ನಿಂತಿಲ್ಲ ಎನ್ನುವುದಕ್ಕೆ ಸಾಕ್ಷಿಯಂತಿದೆ ಡಾ. ರಾಜಶೇಖರ್ ಮಠಪತಿಯವರ ‘ಕಾವ್ಯಕ್ಕೆ ಉರುಳು’. ಮೂಲತಃ ಕವಿಯಾದ ರಾಗಂ, ಇಲ್ಲಿ ಬರೆಯ ಹೊರಟಿರುವುದು ಬದುಕಿನ ಕಾವ್ಯ ವಿಮರ್ಶೆಯನ್ನು. ಆದರೆ ಈ ಕಾವ್ಯದ ವಿಮರ್ಶೆಯ ಉದ್ದೇಶವೇನು? ನಮ್ಮಲ್ಲಿ ಭೀತಿ ಹುಟ್ಟಿಸುವುದೇ? ಅಥವಾ ನಿರ್ಲಿಪ್ತವಾಗಿಸುವುದೇ? ಇಲ್ಲವೇ ಬದುಕನ್ನು ಸಾವಿನಂತೆ ವಿಸ್ತರಿಸುವುದೇ? ಯಾಕೆಂದರೆ ಇಲ್ಲಿ ಬರೆದ ವಿಷಯಗಳು ಆನಂದಕ್ಕಾಗಿ ಖಂಡಿತವಾಗಿಯೂ ಬರೆದಂತಹವುಗಳಲ್ಲ. ನನಗನಿಸುತ್ತೆ ಕಾಲವನ್ನು ಕೇಂದ್ರವನ್ನಾಗಿಟ್ಟುಕೊಂಡು ಬದುಕಿನ ಸಂಘರ್ಷಗಳನ್ನು ಆನಂತರದ ದುರಂತಗಳನ್ನು ವಿವರಿಸುವ ಪ್ರಯತ್ನವನ್ನು ಮಠಪತಿ ಇಲ್ಲಿ ಮಾಡಿದ್ದಾನೆ.
        ವರ್ತಮಾನಕ್ಕೂ - ಭೂತಕ್ಕೂ ಒಂದು ಅಂತರ್‍ಸಂಬಂಧವಿದೆ ಎನ್ನುವ ಕಾರಣಕ್ಕಾಗಿಯೇ  ಇಂತಹ ವಿಷಯಗಳು ವಸ್ತುರೂಪವನ್ನು ಪಡೆದುಕೊಳ್ಳುತ್ತವೆ.  ಕಾಲದ ಹಂಗು, ಭಾಷೆಯ ಹಂಗು, ಸ್ಥಳೀಯತೆಯ ಹಂಗನ್ನು ತೊರೆದ ಇಲ್ಲಿಯ ಬರಹಗಳು ‘ತುದಿ ಮೊದಲಿಲ್ಲದ’ ಹಾಗೆ ಬೆಳೆಯುತ್ತಾ ಹೊಗುತ್ತವೆ. ಈ ಬೆಳವಣಿಗೆ ಬರೀ ನಿನ್ನೆಗೆ ಸಂಬಧಿಸಿದ್ದಲ್ಲ. ವರ್ತಮಾನಕ್ಕೂ ಅನ್ವಯಿಸುತ್ತವೆ ಎನ್ನುವ ಒಳದನಿಯನ್ನು’ರಾಗಂ’ ಇಲ್ಲಿ ವ್ಯಕ್ತಪಡಿಸಿದ್ದಾರೆ. 
        ಭೂತಕಾಲದ ‘ಭ್ರೂಣಹತ್ಯೆ’ಗಳಂತೆ ಇಲ್ಲಿಯ ಕಥಾನಕಗಳಿವೆ. ಇಲ್ಲಿಯ 24 ಲೇಖನಗಳಲ್ಲಿ ಬಹುತೇಕ ಪಾತ್ರಗಳು ಆತ್ಮಹತ್ಯೆಯಂತಹ ಅಸಹಜ ಸಾವುಗಳನ್ನು ಅಪ್ಪಿಕೊಳ್ಳುತ್ತವೆ. ಅದೂ ಸಾಯಬಾರದ ವಯಸ್ಸಿನಲ್ಲಿ! ಸಾವೆನ್ನುವುದು ಅಮೂರ್ತವಾದದ್ದು. ಯಾವ ರೂಪದಲ್ಲಿ, ಯಾವ ಕಾಲದಲ್ಲಿ, ಯಾರ ನಡುವೆ ಅದು ನಮ್ಮನ್ನು ಹಂಚಿಕೊಳ್ಳುತ್ತದೆಯೋ ಗೊತ್ತಿಲ್ಲ. ಈ ಪ್ರಶ್ನೆ ಇಲ್ಲಿಯ ಪ್ರತಿಯೊಂದು ಬರಹಗಳಲ್ಲಿದೆ. ಉದಾ:  ‘ಅವಳೊಂದು ನೆಳಲಿನ ಅನುಭವ’ ದ ಡೆಲ್ಮಿರಾ ಅಗಸ್ಟೈನ್. ಈಕೆ 20 ನೇ ಶತಮಾನದ ಲ್ಯಾಟೀನ್ ಅಮೇರಿಕಾ ಕವಿಗಳಲ್ಲಿ ಅಗ್ರಪಂಕ್ತಿಯಲ್ಲಿದ್ದವಳು. ಫ್ರೆಂಚ್ ಸಾಹಿತ್ಯ, ಸಂಗೀತ, ಚಿತ್ರಕಲೆಗಳಲ್ಲಿ ಈಕೆಗಿರುವ ಜ್ಞಾನ ಅವತ್ತಿನ ಕಾಲಕ್ಕೆ ಯಾರಿಗೂ ಇರಲಿಲ್ಲವಂತೆ. ಆಕೆಯ ಪ್ರಥಮ ಸಂಕಲನದ ಪದ್ಯದ ಮಾದರಿ ಈ ರೀತಿಯಾಗಿದೆ.
              “ ನೆರಳುಗಳ ನಡಿಗೆ ಹಿಡಿಯಲಾಗದೊ ಒಡೆಯ
ಬಾಯಿ ಇಲ್ಲದ ಸಂಕಟವದು, ಒಳಗುದಿಯ ಗುದುಮುರಿಗಿ
ಮೌನದಲ್ಲಿ ಮಾತ್ರ ನನ್ನಾತ್ಮ ನಿನ್ನ ಸಾಮಿಪ್ಯದಲ್ಲಿ
ನಾನೊಂದು ಬರೀ ಬತ್ತಲೆ ಕನ್ನಡಿ ನಿನ್ನ ಸನ್ನಿಧಿಯಲ್ಲಿ”
       ಈ ಕುರಿತು ರಾಜಶೇಖರ ಹೇಳುವುದು ಹೀಗೆ. “ಇಷ್ಟೊಂದು ತೀವ್ರವಾಗಿ ಬರೆಯುತ್ತಿದ್ದ ಡೆಲ್ಮಿರಾಳ ವೈಯಕ್ತಿಕ ಬದುಕು ಹೇಗಿರಬಹುದು ಎನ್ನುವ ನನ್ನ ಕುತೂಹಲಕ್ಕೆ ದಕ್ಕಿದ ಮಾಹಿತಿ ಬಹಳ ಕಡಿಮೆ. ಸಿಕ್ಕ ಈ ಕಡಿಮೆ ಮಾಹಿತಿಯು ಕೊಲೆ, ರಕ್ತ ಮತ್ತು ಹತಾಶೆಗಳಲ್ಲಿ ಅದ್ದಿ ತೆಗೆದ ಸಾಲುಗಳು. ಯಾಕೆ ಹುಟ್ಟುತ್ತಾರೋ ಈ ಬೆಳಕಿನ ಬಾಲೆಯರು? ಯಾಕೆ ಹೀಗೆ ಮರೆಯಾಗುತ್ತಾರೋ?” ಈ ಪ್ರಶ್ನೆಗಳು ಇಡೀ ಬರಹದುದ್ದಕ್ಕೂ ‘ರಾಗಂ’ ಗೆ ಕಾಡಿವೆ. ಅದಕ್ಕೆ ಉದಾಹರಣೆಗೆ ‘ಪುಣ್ಯದ ಕೈಗಳ ಪಾಪದ ಹೂಗಳು’ ಲೇಖನ. ಇದರ ಕಥಾ ನಾಯಕ ಬಹಳ ಬರಿಯದ ಬೋದಿಲೇರ್. ಆದರೆ ಇವನನ್ನು ‘ ರಾಗಂ’ ನೋಡುವ ದೃಷ್ಟಿಕೋನವೇ ಬೇರೆ. “ಬರೆದುದಷ್ಟರಲ್ಲೇ ಪ್ರಪಂಚ ಬೆರಗಾಗುವಷ್ಟು ಧ್ವನಿಗಳನ್ನು ಹೊರಡಿಸಿದವನು.  ಇವನೊಂದು ರೀತಿ ರಾಗವೊಂದಕ್ಕೆ ಸಾವಿರ ಹಾಡುಗಳ ಸಂಸಾರ ಕಟ್ಟಿದ ಕಟ್ಟಿದ ಸೂಕ್ಷ್ಮ ಕುಸುರಿಯ ಕಲಾವಿದ”.
“. . . . . .  . . . . . .
ಆಳಕ್ಕಿಳಿದರೆ ಮತ್ತೆ ನೀನೆ ನೆಲ
ಬೊಗಸೆಯೊಳಗೆತ್ತಿಕೊ ಬದುಕ ಮೊಗಸಾಲೆ ತೊಳೆದುಕೋ
ಕೆಡಲಾದ ನನ್ನ ಕಣ್ಣೀರ ಒಡಲೊಳು ನಿನ್ನ ಸಂಸಾರದ ತೆಪ್ಪ ತೇಲಿಸಿಕೊ
ಬೆಳಕಾದವರ ಸಮಾಧಿಗಳ ತೊಳೆದುಕೋ
ಬಾಳಬೇಸಿಗೆಯಲ್ಲಿ ಬಾಯಾರಿಕೆಯೇ?
ಭಯ ಬೇಡ ಬಳಸಿಕೋ
ಗದ್ದೆ- ತೋಟಗಳ ( ಲೋಟಗಳ)  ಒದ್ದೆ ಮಾಡಿ
ಬಿದ್ದ ಪೈರಿನ ಪಾಡು ನೀಗಿಸಿಕೊ
ಹೆಣದ ಕೊನೆಯ ಸ್ನಾನವೂ ಮುಗಿದು ಬಿಡಲಿ
ಆದರೆ ಕಾಲಾಡಿಸಿ ಕಲಕಬೇಡ
ಆಡಿ ಬರುವ ನಿನ್ನ ಕಂದಮ್ಮನ ಅಂಗಾಲ ತೊಳೆಯಲು
ನೀರಿಲ್ಲದಂತಾಗಿಸಿಕೊಳ್ಳಬೇಡ”
     ಮುಂದುವರೆದು ‘ರಾಗಂ’ ಬೋದಿಲೇರನ ಬರವಣಿಗೆಯ ಕಾಳಜಿಗಳನ್ನು ಹೀಗೆ ಗುರುತಿಸುತ್ತಾನೆ. “ಅತೃಪ್ತ ಕಾಮ, ಸಾವು, ಸಲಿಂಗ ಕಾಮ, ಪವಿತ್ರ ಮತ್ತು ಪಥಬ್ರಷ್ಟ ಪ್ರೇಮ, ಮನುಷ್ಯನ ರೂಪಾಂತರ, ದುಃಖ, ನಗರೀಕರಣ, ಮತ್ತು ಅವುಗಳ ಅದ್ವಾನ ಸ್ಥಿತಿ, ಮನುಷ್ಯ ಕಳೆದುಕೊಂಡ ಮುಗ್ದತೆ, ಜೀವನದ ಒತ್ತಡ, ಸ್ವಾಸ್ಥ ಕೆಡಿಸಿದ ಕುಡಿತಗಳು” ಎಂದು. ಇವು ಬರೀ ಬೋದಿಲೇರ್‍ನ ಬರಹಕ್ಕೆ ಶಕ್ತಿ ದೌರ್ಬಲ್ಯಗಳಾದವುಗಳಲ್ಲ. ಇಲ್ಲಿ ಬರುವ ಲೇಖನಗಳ ಎಲ್ಲಾ ದುರಂತ ಪಾತ್ರಗಳ ಹಿಂದಿರುವ ಕಾವ್ಯ ಕಾಳಜಿ ಮತ್ತು ಬದುಕಿನ ದುರಂತಕ್ಕೆ ಕಾರಣಗಳಾಗಿವೆ. ನಾಳೆಗಳಿಗಾಗಿ ‘ನಿನ್ನೆ ಸತ್ತ’ ಇವರ ಬದುಕು- ಬರಹ  ಹೊಸ ಚರಿತ್ರೆಗೆ ದಾರಿ ಮಾಡಿಕೊಡುತ್ತವೆ. ವರ್ತಮಾನವನ್ನು ಕಾಣದೇ ಭೂತಕ್ಕಾಗಿ, ಭವಿಷ್ಯಕ್ಕಾಗಿ ನಲುಗಿದವರು ಇವರು. ಹೀಗಾಗಿ ನನಗೆ ಇವರು ವರ್ತಮಾನವನ್ನು ಕಾಣದೇ ಭವಿಷ್ಯವನ್ನು ಭವತಿಕವಾಗಿ ಕಾಣದೇ, ಉಳಿದುಹೋದ ಕಥಾ ನಾಯಕರುಗಳು ಎನಿಸುತ್ತಾರೆ. ಈ ಕಾಲ ಎನ್ನುವುದು ಅನಂತವಾದದ್ದು. ಅದರೊಂದಿಗೆ ಮುಳುಗಿಹೋದ ಬೇರಿಲ್ಲದ ಕಸಕಡ್ಡಿಗಳೂ ಇವೆ. ಹಾಗೇ ಬೇರು ಸಹಿತ ಮುಳುಗಿ ಹೋದ ಹೆಮ್ಮರಗಳು ಇವೆ. ಈ ಹೆಮ್ಮರಗಳು ಸಧ್ಯ ನಮಗೆ ಕಾಣದೇ ಹೋದರೂ ಮುಂದೂಂದು ದಿನ ನೆರಳಾಗಿ ಅನೇಕ ಜೀವಸಂಕುಲಕ್ಕೆ ‘ಗೂಡಾ’ಗಿ ‘ತಾಯಿ’ಯಾಗಿ ನಿಲ್ಲುತ್ತವೆ. ಅಂತಹ ತಾಯಿಯಾಗುವ ಕನಸು ಈ ಬರಹಕ್ಕಿದೆ. ಇಲ್ಲಿಯ ಪಾತ್ರಗಳಿಗಿದೆ. ಇಂತಹ ಕನಸುವ ಲೋಕ ಅತ್ಯಂತ ಸುಂದರವಾಗಿ ಇರಬೇಕೆಂದೇನೂ ಇಲ್ಲ. ಕೆಲವೂಮ್ಮೆ ಅದು ಸಾವಿನಂತೆ ತಣ್ಣಗಿರಬಹುದು, ಸಂಕಟವಾಗಿರಬಹುದು ಇಲ್ಲವೇ ವ್ಯಾಕುಲವಾಗಿರಬಹುದು. ಇವೆಲ್ಲವೂ ನಮ್ಮ ಬದುಕಿನ (ಅ)ನಿರೀಕ್ಷಿತ ಸಂಗತಿಗಳು. ಈ  ಸಂಗತಿಗಳು ಅನೇಕ ಬಾರಿ ಕುತೂಹಲವೂ, ತಲ್ಲಣವೂ ಹೌದು! ಅಂತಹ ತಲ್ಲಣದ ವಿವಿಧ ಮಾದರಿಗಳು ಇಲ್ಲಿವೆ. 
 ಡಾ. ರಾಜಶೇಖರ ಮಠಪತಿ ಸ್ಥಾವರವಲ್ಲ, ಜಂಗಮ. ನಿತ್ಯ ಸಂಚಾರಿ. ಬಹುರೂಪಿ. ಒಂದು ಸಿದ್ಧ ಮಾದರಿಯ ಚೌಕಟ್ಟಿನಲ್ಲಿರುವ ವ್ಯಕ್ತಿಯಲ್ಲ. ಅದನ್ನು ಮುರಿಯುವ ಮತ್ತು ತನ್ನ ನಿಲುವುಗಳಿಗೆ ತಕ್ಕಂತೆ ರೂಪಿಸಿಕೊಳ್ಳುವ ಮನಸ್ಥಿತಿಯವನು. ಅನೇಕ ವರ್ಷಗಳ ಸಾಮಿಪ್ಯದಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಹೀಗಾಗಿ ರಾಜಶೇಖರನ ವ್ಯಕ್ತಿತ್ವ ‘ಜಲಬಿಂದು’ ವಿನಂತಲ್ಲ. ಹರಿಯುವ ನೀರಿನಂತೆ. ಆ ನೀರಿನಲ್ಲಿ ಪಾಪಿಗಳೂ, ಪುಷ್ಪಗಳೂ ಎರಡೂ ತೇಲಬಹುದು. ಆದರೆ ಅದು ತನ್ನ ಪಾಡಿಗೆ ತಾನು ಹರಿಯುತ್ತಲೇ ಇರುತ್ತದೆ. ಇದೊಂದು ಸಹಜ ಪ್ರಕ್ರಿಯೆ. ಕೆಲವೊಮ್ಮೆ ಅದು ಧುಮುಕುವುದರಲ್ಲಿಯೇ ಸಂತೋಷವನ್ನು ಕಾಣುತ್ತದೆ. ಅಂಥಹ ಧುಮುಕುವ, ಹರಿಯುವ ಪ್ರವೃತ್ತಿ ಇರುವುದರಿಂದಲೇ ರಾಜಶೇಖರ ಸೃಜನಶೀಲವಾಗಿ ಗಟ್ಟಿಗೊಳ್ಳುತ್ತಿರುವುದು.
       ಮಠಪತಿ ಈಗ ಅಕ್ಷರವೆಂಬ ಮರದ ಫಲ. ಈ ಹಿಂದೆ ಅಂದರೆ ಒಂದೂವರೆ ದಶಕಗಳ ಹಿಂದೆ ನಾನು ನೋಡಿದ ಮಠಪತಿಗೂ, ಈಗಿನ ‘ರಾಗಂ’ ಗೂ ಬಹಳ ವ್ಯತ್ಯಾಸವಿದೆ. ಇದನ್ನು ನಾನು ಹೇಳುತ್ತಿರುವುದು ಬದುಕಿನ ಗಂಭೀರತೆ, ಓದು, ಬರಹಕ್ಕೆ ಸಂಬಂಧಿಸಿ.  ಎರಡು ದಶಕಗಳ ನಂತರ ಕಾಣುವ ಈ ವ್ಯತ್ಯಾಸವನ್ನು ನಾನು ಬಯಸಿರಲಿಲ್ಲ ಎಂದರ್ಥವಲ್ಲ ಮತ್ತು ಅದನ್ನು ನೇತ್ಯಾತ್ಮಕವಾಗಿ ಹೇಳುತ್ತಿಲ್ಲ. ಸೃಜನಶೀಲತೆ ಎಂಬ ‘ಬೀಜ’ ಮರವಾದಾಗ ಆಗುವ ಬೆರಗು, ಸಂತೋಷವಿದು. ಯಾಕೆಂದರೆ ಸದಾ ವಿಕ್ಷೀಪ್ತವಾಗಿರುತ್ತಿದ್ದ ರಾಜಶೇಖರ ಇಷ್ಟು ಬರೆಹಕ್ಕೆ ತೊಡಗಿಸಿಕೊಳ್ಳುತ್ತಾನೆಂದು ನಾನು ಊಹಿಸಿರಲಿಲ್ಲ. ಆದರೆ ಓದಿನ ಒತ್ತಡ, ಗ್ರಹಿಕೆ, ಬದುಕಿನಲ್ಲಿ ಸಿಕ್ಕ ಒಂದಷ್ಟು ಅವಕಾಶಗಳು  ಅವನನ್ನು ಈ ರೀತಿಯಾಗಿ ಬೆಳೆಸಿದೆ ಎನಿಸುತ್ತದೆ. ಈಗ ನಾನು ಕಂಡುಕೊಂಡ ಸಂಗತಿಯೆಂದರೆ ಅವನ ವ್ಯಕ್ತಿತ್ವಕ್ಕೂ - ಬರಹಕ್ಕೂ ಅಂತಹ ವ್ಯತ್ಯಾಸವಿಲ್ಲ. ಮಾತಿನಂತೆ ತೋರುವ ಇಲ್ಲಿಯ ಅಕ್ಷರಗಳೂ ಏನನ್ನೋ ಧೇನಿಸುವಂತಿವೆ. ಇದೊಂದು ಅಪರೂಪದ ಬರೆಹದ ಕ್ರಮ.  ಈ ಕ್ರಮವನ್ನು, ಅದರ ಆಳದ ಕಾಳಜಿಯನ್ನು ವ್ಯಕ್ತಪಡಿಸುವಲ್ಲಿ  ‘ರಾಗಂ’ ತೋರಿದ ಸಂಯಮ, ಅಧ್ಯಯನದ  ಶಿಸ್ತು ನಿಜಕ್ಕೂ ಸಂತೋಷವನ್ನು ಕೊಡುತ್ತದೆ. ಹಾಗೇ ನೋಡಿದರೆ ಕನ್ನಡಕ್ಕೆ ಇಂಗ್ಲೀಷ್ ಪ್ರಾಧ್ಯಾಪಕರ ಕೊಡುಗೆ ಅಸಾಧಾರಣವಾದದ್ದು. ಕನ್ನಡ ಕಾವ್ಯ, ವಿಮರ್ಶೆ, ಕನ್ನಡ ಜಗತ್ತು ಮಹತ್ವದ್ದು ಎಂದು ತಿಳಿಸಿಕೊಡುವಲ್ಲಿ, ಇಂಗ್ಲೀಷ್ ಪ್ರಾಧ್ಯಾಪಕರ ಕಾಣ್ಕೆಯನ್ನು  ಸ್ಮರಿಸಲೇಬೇಕಾಗಿದೆ.   ಅಡಿಗರು, ಕುರ್ತಕೋಟಿ, ಶಂಕರ ಮೊಕಾಶಿ ಪುಣೇಕರ, ಅನಂತಮೂರ್ತಿ, ಲಂಕೇಶ್‍ರಂತಹವರ ಚಿಂತನೆಗಳು ಬರೀ ಇಂಗ್ಲೀಷಿನ ಪ್ರಭಾವದಿಂದ ಕೂಡಿರಲಿಲ್ಲ. ಜಾಗತಿಕ ಬೆಳವಣಿಗೆಯನ್ನು,  ಕನ್ನಡದ ಅರಿವನ್ನಾಗಿಸಿದ ಆ ಕಾಲವನ್ನು ನಾವು ಮರೆಯುವಂತಿಲ್ಲ. ಆ ಪರಂಪರೆ ಗಿರಡ್ಡಿ ಗೋವಿಂದರಾಜ, ಚಂಪಾರವರೆಗೂ ಬೆಳೆದುಕೊಂಡು ಬಂದಿತ್ತು. ಅಂದರೆ ನವ್ಯ ಕಾಲಘಟ್ಟದವರೆಗೂ ಢಾಳಾಗಿ ಅದು ಕಾಣಿಸಿಕೊಂಡಿತ್ತು. ಆದರೆ ನಂತರದಲ್ಲಿ ಇದು ಮಸುಕಾಗಿತ್ತು. ನಮ್ಮ ತಲೆಮಾರಿಗಂತೂ ಇದು ಕಾಡುತ್ತಲೇ ಇದೆ.
ಅನ್ಯ ಜೀವನ ಕ್ರಮಗಳ ಜೊತೆಗೆ ಬದುಕಿನ  ವಿಕ್ಷೀಪ್ತತೆಗಳನ್ನು, ಪೊಳ್ಳುತನವನ್ನು, ಸಿನಿಕತನವನ್ನು ನಿರ್ಭಿಡೆಯಿಂದ ಅಭಿವ್ಯಕ್ತಿಸಿದ ನವ್ಯ ಲೇಖಕರು ನಮಗೆ ಇಂದಿಗೂ ಬೆರಗನ್ನುಂಟು ಮಾಡುತ್ತಾರೆ. ದೂರದ, ಗೊತ್ತಿಲ್ಲದ ಬಾಷೆಯ ಸೃಜನಶೀಲತೆಯ ಹೃದಯದ ‘ಕವಾಟು’ ಗಳನ್ನು ನಮಗೆ ಪರಿಚಯಿಸಿದ, ಆಲೋಚಿಸಿದ ಕ್ರಮ ಪುನಃ ನಮ್ಮನ್ನು ಕಾಡುತ್ತಲೇ ಇದ್ದವು. ಇದು ಸ್ಥಗಿತವಾಯಿತಲ್ಲ ಎನ್ನುವ ಗೊಣಗಾಟದ ಮಧ್ಯೆ ಸದ್ದಿಲ್ಲದೇ ಚಿಗುರುತ್ತಿರುವ ‘ಬೆಳೆ’ ‘ರಾಗಂ’ ಎಂದೆನಿಸುತ್ತದೆ.
ನನ್ನ ಮಟ್ಟಿಗೆ ಪಾಶ್ಚಾತ್ಯ ಲೇಖಕರನ್ನು ಒಂದು ‘ರೂಪಕ’ವಾಗಿ ನಮಗೆ ತೋರಿಸಿಕೊಟ್ಟವರು ಲಂಕೇಶ್‍ರವರು. ಲಂಕೇಶ್‍ರ ಆ ತೀಕ್ಷ್ಣತೆ, ಆಳದ ವಿಮರ್ಶೆ, ಯಾವುದಕ್ಕೂ ರಾಜಿಯಾಗದ ಸ್ವಭಾವ, ನಿರಂತರ ಓದು, ಬರಹ ಇಂದಿಗೂ ನಮಗೊಂದು ಮಾದರಿ. ಲಂಕೇಶರು ಕೊಟ್ಟ ಬರಹದ ದರ್ಶನ, ಬದುಕಿನ ಪ್ರೀತಿಯನ್ನು ‘ರಾಗಂ’ ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡರೆ, ಆ ಪರಂಪರೆಯನ್ನು ಮುಂದುವರೆಸುವಲ್ಲಿ ಯಾವುದೇ ಅನುಮಾನಗಳಿಲ್ಲ. ಲಂಕೇಶರು ಬಳಸುತ್ತಿದ್ದ first person ಗೂ ರಾಜಶೇಖರ ಬಳಸುತ್ತಿರುವ ‘ನಾನು’ ಗೂ ವ್ಯತ್ಯಾಸವಿದೆ. ಪ್ರತಿಯೊಂದು ಲೇಖನಗಳಲ್ಲಿ ಈ ಶಬ್ದ  ‘ನಾನು’ ಕಣ್ಣಿಗೆ ರಾಚುತ್ತದೆ. ಇಲ್ಲಿ ಬಳಸುವಾಗ ಅದೊಂದು universal ಸ್ವರೂಪವನ್ನು ಪಡೆದುಕೊಳ್ಳಬೇಕು.  ಇದು ‘ಲಂಕೇಶ್’ ರಿಂದ ಸಾಧ್ಯವಾಗಿತ್ತು. ಯಾಕೆಂದರೆ ಲಂಕೇಶ್‍ಗೆ ಬರಹವೆಂದರೆ ‘ನೋವಿನ ಸ್ಪರ್ಶ’ವಾಗಿತ್ತು. ಆ ನೋವಿನ ನೆಲೆಗಳನ್ನು ಹುಡುಕುತ್ತಾ ಹೋಗುವ, ಅದಕ್ಕೆ ಮದ್ದನ್ನು ಕಂಡುಕೊಳ್ಳುವ ಬಹುದೊಡ್ಡ ಸೃಜನಶೀಲತೆಯ ಮಾದರಿಗಳು ಲಂಕೇಶ್‍ರಲ್ಲಿ ಯಥೇಚ್ಛವಾಗಿದ್ದವು. ಅಂತಹ ಮಾದರಿಗಳ ಹುಡುಕಾಟದ ಜಾಡಿನಲ್ಲಿ  ‘ರಾಗಂ’ ಪಯಣಿಸಲಿ ಎಂದು ಆಶಿಸುತ್ತೇನೆ. 
 ರಾಜಶೇಖರನ ‘ಬರೆಹ’ ಎಂಬ journey ಸಣ್ಣದಲ್ಲ. ನಿರಂತರವಾಗಿ ಯೋಚಿಸುವ, ಬರೆಯುವ ದೈತ್ಯಶಕ್ತಿಯನ್ನು ಈಗಾಗಲೇ ಪಡೆದುಕೊಂಡಿದ್ದಾನೆ. ‘ರಾಗಂ’ ನ ವಿಷಯಗಳ ಆಯ್ಕೆಯೇ  ಇದನ್ನು ಸಾಬೀತುಪಡಿಸುತ್ತದೆ.  ರಾಗಂ ನ ಈ ಕೃತಿಯ ‘ಸ್ಥಾಯಿವಸ್ತು’ ವೆಂದರೆ ಸಾವು. ಆದರೆ ಇತ್ತೀಚೆಗೆ ಹೊಸ ಸಂವೇದನೆಯ ತರ್ಕವಾಗಿ ಸಾವು ಇದೆ. ಅದೇನೆಂದರೆ ‘ಸಾವು ಬದುಕಿನ ಕೊನೆಯಲ್ಲ’ ಎನ್ನುವುದು. ಇಂತಹ ತರ್ಕಗಳ ಪರಂಪರೆಯನ್ನು  ನಾವು ಇತಿಹಾಸದಲ್ಲಿ ಕಾಣುತ್ತೇವೆ. ಅಂತಹ ಸಾವುಗಳನ್ನು ಚರ್ಚಿಸುವ ಅಗತ್ಯ ಇದೆಯೆಂದು ಇಲ್ಲಿಯ ಲೇಖನಗಳು ಒತ್ತಾಯಿಸುತ್ತವೆ.  ಬದುಕಿನ ಭಾಗವಾದಂತಹ ‘ಸಾವು’ ಅನೇಕ ಅರ್ಥಗಳನ್ನು ಆನಂತರವೂ ಪಡೆದುಕೊಳ್ಳುತ್ತದೆ ಎನ್ನುವುದಕ್ಕೆ  ಇಲ್ಲಿ ದಾಖಲಾದ ‘ಸಾವಿನ ರೂಪಕ’ ವೇ ಸಾಕ್ಷಿಯಾಗಿದೆ.
       ಬದುಕಿನ ಅರ್ಥಗಳನ್ನು ವೈಯಕ್ತಿಕ ನೆಲೆಯಲ್ಲಿ ಹುಡುಕಲು ಆರಂಭಿಸಿ, ವಿಶ್ವಾತ್ಮಕ ನೆಲೆಗೆ ತಲುಪುವ ಇಲ್ಲಿನ ಬರಹದ ಒತ್ತಾಸೆ ಅನನ್ಯವಾಗಿದೆ.  ನವತರುಣರಿಗೆ, ಪಾಶ್ಚಾತ್ಯ ಸಾಹಿತ್ಯದ ಅಧ್ಯಯನ ಪ್ರಿಯರಿಗೆ ಆಧುನಿಕ ಜಗತ್ತಿನ ಬಿಕ್ಕಟ್ಟನ್ನು, ದುರಂತಗಳನ್ನು ಪುಟ್ಟ- ಪುಟ್ಟ ಲೇಖನಗಳಲ್ಲಿ ತೋರಿಸಿದ ಪ್ರಾಯೋಗಿಕ ಕಾವ್ಯ ವಿಮರ್ಶೆಯಿದು.
 ‘ರಾಗಂ’ ಎಂದಿಗೂ ‘comfort zone’ನ್ನು ಇಷ್ಟಪಟ್ಟವನಲ್ಲ. ಪ್ರಯೋಗಶೀಲತೆಯನ್ನು ತುಂಬಾ ಸಹಜವಾಗಿರಿಸಿಕೊಂಡಿರುವ ಕಾರಣಕ್ಕೆ ಅದು ಬಹಳ ದೊಡ್ಡ ‘ರಿಸ್ಕ’ ಎಂತಲೂ ಭಾವಿಸಿಲ್ಲ. ತನ್ನ ವಾರಿಗೆಯವರ ಒತ್ತಡಗಳಿಗೆ ತೀರಾ ತಲೆಕೆಡಿಸಿಕೊಳ್ಳದೇ ತನ್ನದೇ ಹಾದಿಯಲ್ಲಿ  ‘ಒಂಟಿ’ ಯಾದರೂ, ಪಯಣಿಸುವ, ಯೋಚಿಸುವ ಇರಾದೆ ರಾಗಂನದು.
ಬದುಕಷ್ಟೇ journey ಅಲ್ಲ, ಸಾಹಿತ್ಯದ ಒಡನಾಟವೂ ಒಂದು journey ಎಂದುಕೊಂಡಿರುವುದರಿಂದಲೇ ‘ರಾಗಂ’ ಗೆ ಇಷ್ಟೆಲ್ಲಾ ಬರೆಯಲು ಸಾಧ್ಯವಾಗಿದೆ.  ಈ ಬರಹಕ್ಕೂ ಅನೇಕ ಭವಾವಳಿಗಳಿವೆ. ‘ರಾಗಂ’ ನ ಪ್ರಕಾರ ಮನುಷ್ಯ ಒಂದು ಕಾವ್ಯ ಅಷ್ಟೇ ಅಲ್ಲ. ಅವನೊಂದು ಧರ್ಮ, ದೇಶ, ಭಾಷೆ, ಸಂವೇದನೆಯ ರೂಪಕವಾಗಿದ್ದಾನೆ. ಇಂತಹ ‘ರೂಪಕ’ ದ ಅನೇಕ ವ್ಯಕ್ತಿತ್ವಗಳನ್ನು  ಪರಿಚಯಿಸುತ್ತಿರುವ ‘ರಾಗಂ’ನ ಈ ಬೆಳವಣಿಗೆಯನ್ನು ಕಂಡು ಸಂತೋಷಪಟ್ಟಿದ್ದೇನೆ ಮತ್ತು ಮತ್ತಷ್ಟು ಕಾಲ ಬಾಳುವ ಬರೆಹದ ಕಡೆ ಗಮನಕೊಡಲೆಂದು ಆಶಿಸುತ್ತೇನೆ.
                                                     ಡಾ. ವೆಂಕಟಗಿರಿ ದಳವಾಯಿ


Tuesday, June 14, 2016

ಬಂದುಬಿಡು ನನ್ನೊಂದಿಗೆ



ಹೆಬ್ಬಂಡೆಗಳ ಜನ್ಮ ದಿನಗಳನ್ನೇ ಅಳಿಸಿ ಹಾಕಿವೆ
ನಿಮ್ಮ ನೆರಳುಗಳು
ನಡುಹಗಲ ಬೆಳಕನ್ನೇ ನುಂಗಿ ಬಿಟ್ಟಿವೆ
ನಿಮ್ಮೆದುರು ಬಿರುಗಾಳಿಯೂ ಸುಳಿಯಲು ಭಯಪಡುತ್ತಿದೆ ಈಗ
ಕರಗಿಹೋಗಿವೆ ಹಿಮಗಿರಿಗಳು ಕಂಗಾಲಾಗಿ
ಸದಾ ನಿಗಿನಿಗಿಯಾದವರು ನಿದ್ರಿಸುವ ಸಮುದ್ರವೇ
ನಿಮ್ಮ ನೆರಳಿಗಂಜಿ ಜಡತ್ವದ ಜೋಗುಳಕ್ಕೊರಗಿ ನಿದ್ರಿಸುತ್ತಿದೆ ಕೂಸಂತೆ,
ಅಂಬೆಗಾಲಿಡುವ ಮಗುವಂತೆ
‘ಕ್ರಾಂತಿ’ ಈಗ ಮರಭೂಮಿಯಲ್ಲಿ ತೆವಳುತ್ತಿರುವ ಬಸವನಹುಳು

       ಸೆಂಟ್ರಲ್ ಅಮೇರಿಕಾದ ಕವಿ ಡಾಲ್ಟನ್ ಗಾರ್ಸಿಯಾನ ಈ ಸಾಲುಗಳು ಜಾಗತಿಕವಾದವುಗಳೆ. ನಿಜಕ್ಕೂ ಎಲ್ಲ ಜನಾಂದೋಲನಗಳು ಜಿಡ್ಡುಗಟ್ಟಿದ, ಜೀವಕಳೆದುಕೊಂಡ ಮತ್ತು ದಾರಿ ತಪ್ಪಿದ ದುರದೃಷ್ಟದ ದಿನಗಳಿವು. ನಮ್ಮ ನಗರಗಳ ಸಂದು ಸಂದುಗಳಲ್ಲಿ ಧರಣಿ, ಸತ್ಯಾಗ್ರಹ ಮತ್ತು ಹೋರಾಟದ ಭಿತ್ತಿ ಪತ್ರಗಳನ್ನು ನಾವು ನಿತ್ಯ ನೋಡುತ್ತೇವೆ. ಆದರೆ ಅಂಥ ಒಂದು ಹೋರಾಟ ನಿಜಕ್ಕೂ ನಡೆದಿದೆ ಎನ್ನುವಷ್ಟು ನಿಸ್ತೇಜಗೊಳ್ಳುತ್ತಲೇ ಹೊರಟಿದೆ ವರ್ತಮಾನ. ಪ್ರತಿ ಪತ್ರಿಕೆಯ ಪುಟ ಪುಟವೂ ರ್ಯಾಲಿ, ಮೋರ್ಚಾಗಳ ಫೋಟೋಗಳಿಂದ ತುಂಬಿ ಹೋಗಿವೆ. ಆದರೆ ಅದು ಯಾವುದರತ್ತ ಕೇಂದ್ರಿಕೃತವಾಗಿದೆ ಮತ್ತು ನಮ್ಮ ಸಮಾಜದ ಯಾವ ವೈಫಲ್ಯವನ್ನು ಸರಿಗೊಳಿಸಿದೆ ಎನ್ನುವುದು ಇಂದಿಗೂ ಬಗೆ ಹರಿಯದ ಪ್ರಶ್ನೆ. ಡಾಲ್ಟನ್ ಗಾರ್ಸಿಯಾ ತನ್ನ ಕ್ರಾಂತಿ ಕವಿತೆಗಳನ್ನು ಹೊಸೆಯುವಾಗ ಇಂಥದೇ ಸ್ಥಿತಿ ನಿರ್ಮಾಣವಾಗಿತ್ತು. ಅಂತೆಯೇ ಆತ ವ್ಯಂಗ್ಯವಾಗಿ ಹೇಳುತ್ತಾನೆ, ‘ಕ್ರಾಂತಿ’ ಈಗ ಮರಭೂಮಿಯಲ್ಲಿ ತೆವಳುತ್ತಿರುವ ಬಸವನಹುಳು
ಲ್ಯಾಟಿನ್ ಅಮೇರಿಕಾದ ಅತ್ಯಂತ ಪ್ರಭಾವಿ ಕವಿಗಳ ಪಟ್ಟಿಯನ್ನೆನಾದರೂ ನೀವು ಮಾಡಿದರೆ ಮೊದಲಿಗರಲ್ಲಿ ಬರುವ ಅತ್ಯಂತ ಪ್ರಭಾವಿ ಕವಿ ಡಾಲ್ಟನ್ ಗಾರ್ಸಿಯಾ. ವ್ಯಂಗ್ಯ, ಭಾವ ತೀವ್ರತೆ, ಬದುಕು, ಸಾವು, ಪ್ರೀತಿ, ಹೋರಾಟ ಮತ್ತು ರಾಜಕಾರಣದ ತಾತ್ವಿಕ ಪ್ರಶ್ನೆಗಳನ್ನೆತ್ತಿಕೊಂಡು ಹರಿಯುವ ಅವನ ಕಾವ್ಯಧಾರೆ ಒಂದರ್ಥದಲ್ಲಿ ಅಗ್ನಿಧಾರೆ. ಪ್ರತಿರೋಧ ಮತ್ತು ಪ್ರಶ್ನೆಗಳಿಲ್ಲದ ಅವನ ಒಂದೇ ಒಂದು ಕವಿತೆಯನ್ನು ನೀವು ಓದಲು ಸಾಧ್ಯವಿಲ್ಲ. ಕವಿ ಪತ್ರಕರ್ತನಾಗಿದ್ದ ಗಾರ್ಸಿಯಾನಂಥ ಹೋರಾಟದ ಬದುಕು ಲ್ಯಾಟಿನ್ ಅಮೇರಿಕಾದ ಇತಿಹಾಸದಲ್ಲಿ ಮತ್ತೊಬ್ಬರಿರಲು ಸಾಧ್ಯವಿಲ್ಲ.
        ವಿನಾಲ್ ಡಾಲ್ಟನ್ ಮತ್ತು ಮಾರಿಯಾ ಗಾರ್ಸಿಯಾರ ಅನೈತಿಕ ಸಂಬಂಧದ ಸಂತಾನ ಈ ರೋಕ್ ಗಾರ್ಸಿಯಾ. ಇತಿಹಾಸಕಾರರು ಈತ ಒಂದು ಅಕ್ರಮ ಸಂತಾನ ಎಂದು ದಾಖಲಿಸಲು ಹೇಳುವ ಕಥೆ ಅತ್ಯಂತ ಸರಳವಾಗಿದೆ. ಯಾವಾಗಲೂ ಕಾನೂನು ಬಾಹೀರವಾಗಿಯೇ ಬದುಕಿದ ಡಾಲ್ಟನ್ ಸಹೋದರರಲ್ಲಿ ಒಬ್ಬನಾದ ವಿನಾಲ್ ಡಾಲ್ಟನ್, ಮದುವೆಯಾಗಿದ್ದು ಮಕ್ಕಳೊಂದಿಗಿನ ಒಬ್ಬ ಕುಟುಂಬಸ್ಥ. ಕುಟುಂಬ ಕದನವೊಂದರಲ್ಲಿ ಸಾಮೂಹಿಕ ಹತ್ಯೆಯಲ್ಲಿ ಬದುಕಿ ಉಳಿದ ಈತ ಆಸ್ಪತ್ರೆ ಸೇರುತ್ತಾನೆ. ಈತನ ಆರೈಕೆಗೆಂದೇ ನಿಯುಕ್ತಳಾದ ನರ್ಸ್ ಮಾರಿಯಾಳೊಂದಿಗೆ ದೈಹಿಕ ಸಂಬಂಧ ಮಾಡಿ ಈತ ರೋಕ್ ಡಾಲ್ಟನ್ ಗಾರ್ಸಿಯಾನಿಗೆ ಜನ್ಮ ನೀಡಿ ತಂದೆಯಾಗುತ್ತಾನೆ.
      ತಂದೆಯ ಕರ್ಮಕಾಂಡಗಳೇನೆ ಇರಲಿ, ಅವುಗಳ ಬಗೆಗೆ ಎಂದೂ ಚಿಂತಿಸದೆ ಮಗನ ಮನಸ್ಸನ್ನು ಅದರತ್ತ ಎಂದೂ ಗಮನ ಹರಿಸದೆ ಅತ್ಯಂತ ಪರಿಶ್ರಮದಿಂದ ದುಡಿದು ಓರ್ವ ಸಭ್ಯಸ್ಥ ತಾಯಿಯಾಗಿ ಜೀವನವನ್ನು ರೂಪಿಸಿದವಳು ಮಾರಿಯಾ ಗಾರ್ಸಿಯಾ. ಸೆಲ್ವೆಡರ್‍ನ ಪ್ರತಿಷ್ಠಿತ ಶಾಲೆ-ಕಾಲೇಜುಗಳಲ್ಲಿಯೇ ಮಗನ ಶಿಕ್ಷಣವನ್ನು ಪೂರೈಸಲು ಪ್ರಾಣವನ್ನೆ ಪಣಕ್ಕಿಟ್ಟವಳಿವಳು. ಮಗ ರೋಕ್ ಗಾರ್ಸಿಯಾನೂ ಅಷ್ಟೆ. ಶಾಲಾ ದಿನಗಳಲ್ಲಿ ಅತ್ಯಂತ ತೀಕ್ಷ್ಣ ಮತಿಯೂ ಹಾಗೂ ಸೂಕ್ಷ್ಮ ಮನಸ್ಸಿನವನೂ ಆಗಿದ್ದವ.
        ಎಷ್ಟೇ ಪ್ರಯತ್ನಿಸಿದರೂ ಸಮಾಜದ ಮೂದಲಿಕೆಯಿಂದ ಮಾತ್ರ ರೋಕ್ ಗಾರ್ಸಿಯಾನಿಗೆ ಹೊರಬರಲು ಆಗಲೇ ಇಲ್ಲ. ಶ್ರೀಮಂತ ವಿದ್ಯಾರ್ಥಿಗಳ ಬಗೆಗೆ ಶಿಕ್ಷಕರಿಗಿದ್ದ ಆಸೆ, ಅಕ್ರಮ ಮಕ್ಕಳನ್ನು ಅವರು ವ್ಯಂಗ್ಯ ಮಾಡುತ್ತಿದ್ದ ರೀತಿ, ಈತನ ಹುಟ್ಟಿನ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸದಾ ಸಂಶಯದಿಂದ ನೋಡಿದ ಸ್ನೇಹಿತರು ಹಾಗೂ ಸಮಾಜ ಗಾರ್ಸಿಯಾನಲ್ಲಿ ಒಬ್ಬ ಅಪರೂಪದ ಕವಿ ಸಂಗಾತಿಗೆ ಹುಟ್ಟು ನೀಡಿತು. ಚಿಲಿಯ ಸ್ಯಾಂಟಿಗೋ ವಿಶ್ವವಿದ್ಯಾಲಯದಲ್ಲಿ ಹಾಗೂ ಯುನಿವರ್ಸಿಟಿ ಆಫ್ ಸೆಲ್ವೆಡಾರ್‍ನಲ್ಲಿ ಶಿಕ್ಷಣವನ್ನು ಪಡೆಯುತ್ತಲೇ ತನ್ನ ಕಾವ್ಯ ಸಂವೇದನೆಗಳನ್ನು ಗಾರ್ಸಿಯಾ ತೀಕ್ಷ್ಣಗೊಳಸಿಕೊಂಡ. ಈ ಸಂದರ್ಭದ ಒಂದು ಕವಿತೆಯ ಅವನ ಈ ಸಾಲುಗಳನ್ನು ನೀವು ಓದಲೇಬೇಕು -

ಉಪ್ಪು ಉಪ್ಪಾದ ಜ್ಞಾನವನ್ನು ಹುಗಿದಿಟ್ಟುಕೊಂಡಿದೆ ಸಮುದ್ರ
ಬೆಂಕಿಯಿಲ್ಲದ ಬೆಳಕು ಜಗವನಾವರಿಸಿದೆ
ಮೊಗವೆತ್ತಲು ಯತ್ನಿಸುವ ಸತ್ಯವೊಂದು ಇಡೀ ಆಕಾಶವನ್ನೇ ಘಾಸಿಗೊಳಿಸಿದೆ
ನಿಸ್ಸೋತ ದಡಗಳ ತೋಳುಗಳಲ್ಲಿ ಬಿದ್ದು ಬಿಟ್ಟಿದೆ ಸಮುದ್ರ

        ಇದೇ ಅವಧಿ, ಕವಿ ಗಾರ್ಸಿಯಾ ಕಮ್ಯುನಿಸ್ಟ ಪಾರ್ಟಿಯ ಸದಸ್ಯನಾಗಿ ಚಳುವಳಿಗೂ ಇಳಿದ. ಕ್ಯೂಬಾದ ಕ್ರಾಂತಿಯ ದಿನಗಳಲ್ಲಿ ಈತ ಒಬ್ಬ ಕಟ್ಟರ್ ಕಮ್ಯುನಿಸ್ಟ. ವಿದ್ಯಾರ್ಥಿಗಳನ್ನು ಹಾಗೂ ರೈತರನ್ನು ಕ್ರಾಂತಿಗೆ ಪೂರಕವಾಗಿ ಒಗ್ಗೂಡಿಸಿದ ಆಪಾದನೆಯ ಮೇರೆಗೆ ಪ್ರಭಲ ರಾಜಕಾರಣಿಗಳು ಹಾಗೂ ಭೂ ಮಾಲೀಕರೆಲ್ಲ ಸೇರಿ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಈತನನ್ನು ಎರಡು ಬಾರಿ ಬಂಧಿಸಿ ಜೈಲಿಗಟ್ಟಿದರು. ಸಾರ್ವಜನಿಕ ಸ್ಥಳದಲ್ಲಿ ಸ್ಕಡ್ ಹಾರಿಸಿದ ಆಪಾದನೆಯ ಮೇರೆಗೆ ಕೆಲಕಾಲ ದೇಶದಿಂದ ಗಡಿಪಾರುಗೊಳಿಸಿದರು. ಹದ್ದು ಮೀರಿ ಬಂದ ಈತನನ್ನು ಜೈಲೊಂದರಲ್ಲಿ ಬಂಧಿಸಿಟ್ಟರು. ಆದರೆ ಲಾವಾರಸವನ್ನು ಯಾರೂ ನಿಲ್ಲಿಸಲಾಗದು ಎನ್ನುವಂತೆ ಭೀಕರ ಭೂಕಂಪವಾಗಿ ಈತನನ್ನು ಬಂಧಿಸಿಟ್ಟ ಜೈಲು ಕುಸಿದು ಬಿದ್ದಿತು. ಬಂಧ ಮುಕ್ತನಾದ ಗಾರ್ಸಿಯಾ ಇಲ್ಲಿಂದ ಓಡಿಹೋಗಿ ಮತ್ತೆ ಕ್ಯೂಬಾ ಮತ್ತು ಪೆರಿಗ್ವೆಗಳಲ್ಲಿ ಹೋರಾಟಕ್ಕಿಳಿದುಕೊಂಡ.
     1973ರಲ್ಲಿ ಸೆಲ್ವಿಡಾರ್‍ಗೆ ಬಂದು ಭೂಗತನಾಗಿದ್ದುಕೊಂಡೇ ಕ್ರಾಂತಿಯ ಕನಸನ್ನು ಕಾಪಿಟ್ಟುಕೊಂಡ. ತನ್ನಲ್ಲಿರುವ ಕವಿತೆಗೆ ಆತ ಅಭಿವ್ಯಕ್ತಿ ಕೊಟ್ಟಿದ್ದು ಕೂಡ ಮೆಕ್ಸಿಕೋದ ತನ್ನ ಪಲಾಯನದ ದಿನಗಳಲ್ಲಿ. ಈ ಸಂದರ್ಭದಲ್ಲಿ ಆತ ಅನೇಕ ಕ್ಯೂಬನ್ ಮತ್ತು ಲ್ಯಾಟಿನ್ ಅಮೇರಿಕನ್ ಉಚ್ಛಾಟಿತ ಕವಿಗಳ ಸಂಪರ್ಕಕ್ಕೆ ಬಂದ. ತಲೆಮರೆಸಿಕೊಂಡವನಾಗಿದ್ದುಕೊಂಡೇ ಏನೆಲ್ಲ ಮಾಡಬೇಕೆಂದುಕೊಂಡಿದ್ದ ಗಾರ್ಸಿಯಾನಿಗೆ ನಿರೀಕ್ಷಿಸಿದಷ್ಟು ಸಮಯ ಸಿಗಲಿಲ್ಲ. ಈತ ಅಡಗಿದ ತಾಣದ ಪತ್ತೆಯಾಗಿ ಇವನನ್ನು ಹೊರಗೆಳೆದು ಮತ್ತೆ ಜೈಲಿಗೆ ಅಟ್ಟುವವರೆಗೆ ಸರ್ಕಾರ ನಿದ್ರಿಸಲಿಲ್ಲ.
        ಸ್ಥಾಪಿತ ಶಕ್ತಿಗಳ ನಿದ್ರೆಗೆಡಿಸಿದಂತೆ ಬದುಕಿದವನು ಗಾರ್ಸಿಯಾ. ಬದುಕಿನ ಪುಟ ಪುಟವೂ ಪ್ರಚಂಡ ಶಕ್ತಿಯ ಆಸ್ಫೋಟ. ಆದರೂ ಇಂಥ ಸ್ಪುರದ್ರೂಪಿ ಕ್ರಾಂತಿಕಾರಿ ಕವಿ ಬರೆದ ಪ್ರೀತಿ ಕುರಿತಾದ ಒಂದು ಕವಿತೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ-

ಬೆಳಕಿನ ದೀವಟಿಗೆ ಹಿಡಿಯದೆ
ಆ ಕಪ್ಪು ಬೆಟ್ಟದಿಂದ
ನೀನಿಂದು ಬರುವಾಗ
ಬೆತ್ತಲೆ, ಬರೀ ಬೆತ್ತಲೆ ಇತ್ತು
ನಮ್ಮ ಮಧ್ಯ

ರಕ್ತ ಕಣೀರಿನಲ್ಲಿ ಅದ್ದಿಹೋದ ನಮ್ಮ ಗತವನ್ನು
ಅದೆಷ್ಟೊಂದು ಬಾರಿ ನೆನಪಿಸುತ್ತಿತ್ತು!
ಪ್ರೀತಿ ಹುಟ್ಟಿದ ಈ ಕ್ಷಣದಲ್ಲಿ
ಎಷ್ಟೊಂದು ಮೃದು-ಮಾಧುರ್ಯ-ಮೌನದ ಬೆಸುಗೆ ಇತ್ತು
ಮಾತೂ ಸಿಡಿಯುತ್ತಿತ್ತು ಸ್ಪೋಟಗೊಂಡ ಶಬ್ಧದಂತೆ
ನಮ್ಮ ಇಂದ್ರಿಯಗಳೊ
ಕಿರಣಗಳಿಗೆ ಮೊಗಮಾಡಿದ ಸೂರ್ಯಕಾಂತಿ ಹೂಗಳು

ನನ್ನ ಪ್ರೀತಿಯೆ,
ಹಿಂದಿನ ರಾತ್ರಿಯ ಮಳೆಯ ಕೊಳೆಯನ್ನು
ತೊಳೆದುಕೊಳ್ಳಲು ನಾನು ಸ್ನಾನಕ್ಕೆ ಹೋಗಿದ್ದೇನೆ
ಅದೇಕೊ ನಿತ್ಯ ಹಾಡುತ್ತಿದ್ದ ಸಮುದ್ರ ಹಕ್ಕಿಯ ಹಾಡು ಮರೆತಿದ್ದೇನೆ
ದಿಂಬಗಳ ಮೇಲೆ ನಿನ್ನ ಗಲ್ಲಗಳ ಮುದ್ರೆ ಮೂಡುವ ಮುನ್ನ
ಬಂದುಬಿಡು ನನ್ನೊಂದಿಗೆ
ನಾನು ಕಾಯುತ್ತಿದ್ದೇನೆ ನಿನಗಾಗಿ ಮುಂಗೋಳಿಯಂತೆ

      ಕವಿತೆಯೋ, ಪತ್ರಿಕೆಯೊಂದರ ಅಂಕಣವೊ ಯಾವುದಾದರೂ ಸರಿ, ಈತನೆಂದರೆ ಪ್ರತಿ ಕ್ಷಣವೂ ಎಚ್ಚರಿಕೆ. ತನ್ನ ವಿಚಾರಗಳ ಕಾರಣ ಹಲವು ಸಾರಿ ಬಂಧನಕ್ಕೊಳಗಾಗಿ ಎರಡು ಸಾರಿ ಗಲ್ಲು ಶಿಕ್ಷೆಗೊಳಗಾಗಿದ್ದ ಗಾರ್ಸಿಯಾ, ಎಂಟೇ ಎಂಟು ಅಪರೂಪದ ಕಾವ್ಯಸಂಕಲನಗಳನ್ನು ರಚಿಸಿದ್ದಾನೆ. 1970ರಲ್ಲಿ ಆತನ ಕೊನೆಯ ಕಾವ್ಯ ಸಂಕಲನ ಪ್ರಕಟಗೊಂಡರೆ, 1974ರಲ್ಲಿ ಈತನ ಕೊನೆಯ ಅಂಕಣ ಪ್ರಕಟಗೊಂಡಿದೆ.
       ಬದುಕಿನಲ್ಲಿ ಏನೆಲ್ಲ ಏರಿಳಿತಗಳನ್ನು ಕಂಡಿದ್ದ ಗಾರ್ಸಿಯಾ, ತನ್ನ ಕವಿತೆಗಳ ಮೂಲಕವೇ ರಾಜಕೀಯ ವೈರಿಗಳನ್ನು ಸೃಷ್ಠಿಸಿಕೊಂಡಿದ್ದ ಎನ್ನುತ್ತಾರೆ ಇತಿಹಾಸಕಾರರು. ತನ್ನ ಜೀವನದ ನಲವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮುನ್ನಾದಿನ ಅಂದರೆ, 10 ಮೇ 1975ರಲ್ಲಿ ರಾಜಕೀಯ ವೈರಿಯೊಬ್ಬನಿಂದ ಹತ್ಯೆಗೊಳಗಾಗುತ್ತಾನೆ. ಮೇ ತಿಂಗಳಲ್ಲಿಯೇ ಹುಟ್ಟಿ, ಮೇ ತಿಂಗಳಲ್ಲಿಯೇ ಮೃತ್ಯುಕೂಪಕ್ಕೆ ಜಾರಿದ ಗಾರ್ಸಿಯಾನ ಸಾವು ಒಂದು ರಾಷ್ಟ್ರೀಯ ದುರಂತ ಎಂದು ಸಾರುವುದರೊಂದಿಗೆ ಸರ್ಕಾರ ಸ್ಟಾಂಪ್ ಪ್ರಕಟಿಸಿ ಸಾವಿನ ಲೆಕ್ಕವನ್ನು ಸರಿದೂಗಿಸುತ್ತದೆ.
      

ದೊಡ್ಡ ದೊಡ್ಡ ಜೈಲುಗಳು, ಗಲ್ಲಿನ ಆದೇಶಗಳು, ಗಡಿಪಾರಿನ ಸಂದರ್ಭಗಳು ಹಾಗೂ ಸಾರ್ವಜನಿಕ ಆಕ್ರಮಣಗಳು ಗಾರ್ಸಿಯಾನ ಬದುಕನ್ನು ಎಂದೂ ಬಾಧಿಸಲಿಲ್ಲ ಅಥವಾ ಅದಕ್ಕೊಂದು ಭಯಾನಕ ಅಂತ್ಯವನ್ನು ಹಾಡಲಿಲ್ಲ. ಬದಲಾಗಿ ರಾಜಕಾರಣ ಈತನ ಬದುಕನ್ನು ಮುಗಿಸಿತು, ಕವಿತೆಯಾಗಿದ್ದ ಈತನ ಕತ್ತು ಹಿಸುಕಿತು ಎನ್ನುವುದು ಪ್ರಪಂಚದ ಯಾವುದೇ ದೇಶದ ಪದ ಸಂಸ್ಕøತಿಗೆ, ಪ್ರಶ್ನೋತ್ತರ ಪರಂಪರೆಗೆ ದೊಡ್ಡ ಭೀತಿ ಎನ್ನುವುದನ್ನು ಸಾಬೀತು ಪಡಿಸುತ್ತದೆ ಅಲ್ಲವೆ? ಈ ಸತ್ಯವೆ ಈ ಸಮಾಜದ ದುರಂತ.