Total Pageviews

Friday, March 30, 2018

ಎಲ್ಲ ಸಿಗಬೇಕಿಲ್ಲೆ


ಬಹುರೂಪಿಯಲ್ಲದ
ಕಾಲನ ಕಾಲಿಗೆ ಗೆಜ್ಜೆಗಳಿಲ್ಲ
ಹುಟ್ಟುತ್ತಾನೆ
ಜಡೆಗಂಟಿಗೊಂಡ ಹಿಡಿ-ಹಿಡಿ ಮಣ್ಣು ಜಾಡಿಸಿಕೊಂಡು
ಮರೆತ ಮೌಲ್ಯಗಳ ಮತ್ತೆ ಮೆಲುಕಿಸಿಕೊಂಡು
ಸಾವಿಗೂ ಸಾವಿರ ನೆನಪ ನಿಲುಕಿಸಿಕೊಂಡು
ಎತ್ತರಕೆ ಮೊಗ ಮಾಡಿ
ನೆತ್ತರಕೂ ನಗೆ ಹಾಡಿ
ಹಿಂದಿರುಗಿ ನೋಡದೆ
ಹೊರಟುಬಿಡಬೇಕಷ್ಟೇ

ನೆತ್ತಿ-ಬುತ್ತಿಯಲೂ
ನಿಲ್ಲದ ಕೆಲಸಗಳೇ
ಕಂದನ ಜಡೆಯನೊಯ್ದು
ಹಿಮಾಲಯದ ತೊಡೆಯಿಳಿದು ಬರುವ
ನದಿ-ನಾರಿಯರ ಛಳಿಗೆ ಹೊದಿಕೆಯಾಗಿಸಬೇಕು
ಸಂಘಮಿತ್ರೆಯ ಸಾಂತ್ವನಕ್ಕೆ
ದಾರಿ ಸಿಗಬೇಕಿಲ್ಲಿ ಸಂತರಲ್ಲಿ
ಯಶೋಧೆ-ರಾಹುಲರ ಮುಗ್ಧತೆಗೆ
ಧೀರ್ಘವಾಗಿರಲಿ ನಿದ್ರೆ
ಇನ್ನೂ ಬಸಿರಾಗದ ಬದುಕಿನಲ್ಲಿ
ನಗುತಿರಲಿ ಮಗಳ ನಗೆ
ಮುಗಿಲ ನಕ್ಷತ್ರಗಳಂತೆ
ಬೀಸುವ ಕೈ, ಭಾರವಾದ ಎದೆ
ಏನೆಲ್ಲ ಬಿತ್ತಿಯೂ ಬೀಸಾಣಕ್ಕೆ ಬಾರದ ಬಳಗ
ಎಲ್ಲ ಹೀಗಿರುವಾಗ
ಹೀಗೆ ಇರುವಾಗ
ಸಾಗುವ ದಾರಿ
ಮುಗಿಯುದಿಲ್ಲ, ಮಾಗುವುದಿಲ್ಲ
ನಗುವುದು ಇಲ್ಲ
ನೆತ್ತಿ ಗಂಟೆನ್ನುವುದು
ವಿಕ್ರಮಾದಿತ್ಯನ ಹೆಗಲ ಹೆಣವಲ್ಲ
ಆದರೆ, ಬುತ್ತಿಯೂ ಅಲ್ಲವಲ್ಲ


Saturday, March 24, 2018

ನಯ-ವಿನಯದ ನಿರ್ಮಲ ಮನುಷ್ಯ.


ಬ್ರಹ್ಮ ಪದವಿಯನೊಲ್ಲೆ
ವಿಷ್ಣು ಪದವಿಯನೊಲ್ಲೆ
ಇಂದ್ರ ಪದವಿಯನೊಲ್ಲೆ
ರುದ್ರ ಪದವಿಯನೊಲ್ಲೆ
ಎಲ್ಲಕ್ಕೂ ಒಡೆಯ
ಶ್ರೀ ಶಿವನ ಪ್ರಮಥಂಗಳ
ತಿಪ್ಪೆಯ ಮೇಲಣ ಹುಳುವಾಗಿ ಹುಟ್ಟಿಸು
ಮಹಾ ಮಹಿಮ ಸೊಡ್ಡಳ
ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಪಡಿಸುತ್ತ, ಬಿಜಾಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳಿಗೆಪದ್ಮಶ್ರೀಪ್ರಶಸ್ತಿ ಎಂದು ಮಾಧ್ಯಮಗಳು ದಾಖಲಿಸುವ ವೇಳೆ ನನ್ನ ಹಿರಿಯ ಮಗ ಸಿದ್ಧಾರ್ಥ ಶರಣ ಬಾಚಿರಸನ ಮೇಲಿನ ವಚನವನ್ನು ಕಲಿಯುತ್ತಿದ್ದ. ಅಂದುಕೊಂಡಂತೆಯೇ ಆಯಿತು. ಶ್ರೀ ಸಿದ್ಧೇಶ್ವರ ಶ್ರೀಗಳು ಪ್ರಶಸ್ತಿಯನ್ನು ನಯ ಹಾಗೂ ವಿನಯದಿಂದ ನಿರಾಕರಿಸಿದ್ದರು.
ಶ್ರೀ ಸಿದ್ಧೇಶ್ವರರೆಂದರೆ ಇಷ್ಟೆ, ನಯ-ವಿನಯದ ನಿರ್ಮಲ ಮನುಷ್ಯ.
ಇಂಥ ಮನುಷ್ಯರ ಕುರಿತು ಹೆನ್ರಿ ಕಿಸಿಂಜರ್ ಮಾತೊಂದನ್ನು ಹೇಳುತ್ತಾನೆ – ‘ಮನುಷ್ಯ ಕೇವಲ ಕಷ್ಟಪಡುವುದಿಲ್ಲ, ಹೋರಾಡುವುದಿಲ್ಲ, ಬದುಕುತ್ತಾನೆಯೂ ಕೂಡ. ದುರಂತವೆಂದರೆ ನಾವು ಬದುಕಿದ ರೀತಿ ಭಿನ್ನವಾಗಿದೆ. ಬದುಕುವುದಕ್ಕಾಗಿ ವಿಕಾರ ಹೋರಾಟಗಳಿಗೆ ತೊಡಗುತ್ತೇವೆ.’ ಮಹತ್ವದ ಮಾತಲ್ಲವೆ. ಇಲ್ಲಿ, ‘ಮನುಷ್ಯ ಬದುಕುತ್ತಾನೆಎನ್ನುವುದರ ಅರ್ಥ ಬಹಳ ತಾತ್ವಿಕವಾಗಿದೆ. ಉಸಿರಾಡುವವರು-ಕೊಸರಾಡುವವರು-ಕೆಸರಾಡುವವರೆಲ್ಲರೂ ಬದುಕುತ್ತಾರೆ ಎಂದಲ್ಲ, ಮನುಷ್ಯ ಬದುಕುತ್ತಾನೆ. ಇದಕ್ಕೆ ಶ್ರೀ ಅರಬಿಂದೋ ಅವರ ಯೋಗ ಸಾಧನಾ ಹಿನ್ನೆಲೆಯ ಮನುಷ್ಯ ನಿರ್ಮಾಣದ ವಿಚಾರಗಳನ್ನೆಲ್ಲ ಅಂಟಿಸಬಹುದು. ಶ್ರೀ ಸಿದ್ಧೇಶ್ವರರು ಇಂಥ ಹಿನ್ನೆಲೆಯಲ್ಲಿ ಸಿದ್ಧವಾದ ಒಂದು ಸನ್ಮನಸ್ಸು.
ನಾವು ಬೆಳೆದ ನೆಲದಲ್ಲಿ ಇರಲಾರದ್ದಾವುದೂ ನಮ್ಮಲ್ಲಿರುವುದಿಲ್ಲ. ಇದು ಸಿದ್ಧೇಶ್ವರರಿಗೂ ಅನ್ವಯವಾಗುವ ಮಾತೇ. ಹಂಗಿನರಮನೆಯನ್ನು ತೊರೆದು ಶರಣರ ಸಂಘ ಬಯಸಿದ ಬಿಜಾಪುರವೆಂಬ ಬಯಲಪ್ರಸ್ಥಾನದಲ್ಲಿ ಬಿಸಿಲಂತೆ ಬೆಳಗಿದ ಪ್ರತಿಭೆ ಅದು. ಹೀಗಾಗಿ ನಿರಾಕರಣೆಯ ಸೊಡ್ಡಳ ಬಾಚಿರಸನ ವಚನವನ್ನು ಅವರಿಗೆ ಬದುಕಲು ಸಾಧ್ಯವಾಯಿತು. ಹೆಜ್ಜೆ ಇಡೀ ನಮ್ಮ ಪ್ರಶಸ್ತಿ ಪರಂಪರೆ, ಅವುಗಳ ಮೌಲ್ಯ, ಅವುಗಳಿಗಾಗಿ ಎಂಥ ನೀಚಾತಿ ನೀಚ ಅಧೋದಾರಿಗಳನ್ನು ತುಳಿಯಲು ಸಿದ್ಧರಾಗುವ ಸ್ವಘೋಷಿತ ಸಾಧಕರು, ಜಾತಿ, ಪ್ರದೇಶ, ಲಿಂಗ ಹಾಗೂ ಬ್ಯಾಕ್ಲಾಗ್ಗಳ ಲೆಕ್ಕ ಹಚ್ಚಿ ಇದನ್ನು ಗೆಲ್ಲಿಸುವ, ಸೋಲಿಸುವ ಪಂಡಿತ ಮಹಾಶಯರು ಮೂಲಕ ಪ್ರಪಂಚದಲ್ಲಿ ಏನೋ ಆಯಿತು ಎಂದು ಸಾರುವ ಮಾಧ್ಯಮ ಸಮಾಜ ಎಲ್ಲ ಒಂದು ಕ್ಷಣ ನನ್ನ ಮನದ ಮೂಲಕ ಹಾಯ್ದು ಹೋದರು.
ಬೇಸರವಾಗುತ್ತದೆ, ಸಿದ್ಧೇಶ್ವರ ಶ್ರೀಗಳ ಪ್ರಶಸ್ತಿ ನಿರಾಕರಣೆಯ ಹೆಜ್ಜೆಯ ಹಿಂದಿನ ತಾತ್ವಿಕತೆ ಒಂದು ಚರ್ಚೆಯನ್ನು ಹುಟ್ಟು ಹಾಕಲಿಲ್ಲ. ವರ್ತಮಾನದ ಅತ್ಯಂತ ತುರ್ತಿನ ಸಂಗತಿಯಾಗಿದ್ದ ನಿರಾಕಣೆಯ ನಿಲುವನ್ನು ಉದ್ದೇಶ ಪೂರ್ವಕವಾಗಿಯೇ ಚರ್ಚೆಗೊಳಪಡಿಸಲಿಲ್ಲವೆ? ನೆಪಕ್ಕಾಗಿ ಶ್ರೀಗಳ ಸಾಧನೆಯ ಸುತ್ತಲೂ ನಡೆಯಬೇಕಾದ ತಾತ್ವಿಕ ಚಿಂತನೆಯನ್ನು ಮುದ್ದಾಮಾಗಿಯೇ ಅವಜ್ಞಗೊಳಪಡಿಸಲಾಯಿತೆ? ಬಹುಶಃ ಇಂಥ ಒಂದು ಚರ್ಚೆ ನಮ್ಮ ಅಸ್ಥಿತ್ವಗಳ ಬುಡಕ್ಕೆ ಕೈ ಹಾಕುತ್ತದೆ ಎನ್ನುವ ಕಾರಣಕ್ಕಾಗಿಯೇ ನಾಡಿನ ದೊಡ್ಡ ದೊಡ್ಡ ಮಠಾಧೀಶರು, ಸಾಹಿತಿಗಳು ಹಾಗೂ ಮಾಧ್ಯಮ ಚಿಂತಕರು ವಿಚಾರದ ಕೈ ಬಿಟ್ಟರೆ? ಸಂಶಯಗಳು ನನ್ನನ್ನು ಕಾಡಿವೆ. ಏನೆಲ್ಲ ಸುದ್ದಿಯಾಗುವ ನಿರ್ಮಮ ದಿನಗಳಲ್ಲಿ ನಿರಾಳವಾದ ಚರ್ಚೆ ಮಾತಾಗಲಿಲ್ಲ ಎನ್ನುವುದು ನಾನು ಕ್ಷಮಿಸಿಕೊಳ್ಳಲಾರದ ಸಂಗತಿ.
ನನ್ನಂಥವರನ್ನು, ನನಗಿಂತಲೂ ಪೂರ್ವದವರಾದ ಶ್ರೀ ಸಿದ್ಧೇಶ್ವರರಂಥವರನ್ನು ರೂಪಿಸಿದ ಪರಿಸರದ ಬಗ್ಗೆ ಒಂದಿಷ್ಟು ನಿಮ್ಮೊಂದಿಗೀಗ ಹಂಚಿಕೊಳ್ಳಬೇಕೆನಿಸುತ್ತದೆ. ಬಂಧುಗಳೆ, ನನ್ನ ಬಾಲ್ಯ ವೇಳೆಯಲ್ಲಿ ನನ್ನೂರು ಚಡಚಣ ಸಾಹಿತ್ಯಿಕವಾಗಿ, ಸಂಸ್ಕøತಿಕವಾಗಿ ತುಂಬ ಅದ್ಭುತವಾಗಿತ್ತು. ಅಕ್ಕಮಹಾದೇವಿಯ ವಚನದ ಭಾಷೆಯಲ್ಲಿಯೇ ಹೇಳಬೇಕೆಂದರೆಸಂತೆಯಲ್ಲಿ ಸಣ್ಣದೊಂದು ಮನೆಯ ಮಾಡಿದಂತಿದ್ದ ನಾನು ಕಲಿತ ಬಾಲವಾಡಿ, ನನ್ನ ಶಾಲೆಗಳಿಗೆ ಶಬ್ಧಸೂತಕದ ಛಾಯೆ ಇರಲಿಲ್ಲ. ಅವೆಲ್ಲ ಶಬ್ಧಶಃ ಗಿಜಗನ ಗೂಡುಗಳು.
ಖಂಡಿತವಾಗಿಯೂ ಸಾರ್ವಜನಿಕರ ದಾಳಿಗೊಳಗಾಗಿದ್ದ ನಮ್ಮ ಶಾಲೆಗಳಲ್ಲಿ ಆಗ ಸ್ವಚ್ಛತೆಯಿರಲಿಲ್ಲ, ಮೂಲಭೂತ ಸೌಕರ್ಯಗಳಿರಲಿಲ್ಲ, ಕಿಟಕಿ-ಬಾಗಿಲುಗಳಿರಲಿಲ್ಲ ಆದರೆ ಇಂದು ಬೆಂಗಳೂರಿನ ಅತ್ಯಂತ ಸುಸಜ್ಜಿತ ಶಾಲೆಗಳಲ್ಲಿಯೂ ಇಲ್ಲದ ಅಚ್ಚ ಕನ್ನಡದ ಬೆಳಕಿತ್ತು, ಜನಸಾಮಾನ್ಯರ ಮಕ್ಕಳಿಂದಲೇ ತುಬಿಂದ್ದ ನಾ ಕಲಿತ ಚಡಚಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಬಡತನವಿತ್ತೇ ವಿನಃ ಭಾವ-ಬುದ್ಧಿಯ ದಾರಿದ್ರ್ಯವಿರಲಿಲ್ಲ. ಎಲ್ಲೆಂದರಲ್ಲಿ ನುಸುಳುವ ಧೂಳು, ಮಣ್ಣು, ಶಾಲೆಯ ಎದುರೇ ಸದಾ ಮೈದುಂಬಿ ಹರಿಯುತ್ತಿದ್ದ ಹಳ್ಳ, ದಿವಂಗತ ಜೀವರಾಜ ಜೋಶಿಯವರ ಕಾಲಕ್ಕೆ ನೆಡೆಸಿದವುಗಳು ಎನ್ನಲಾದ ಸಾಲುಸಾಲು ಹುಣಸೆ ಮರಗಳ ನೆರಳು ಕುಣಿ-ಕುಣಿದೇ ಪಾಠ ಮಾಡುತ್ತಿದ್ದ ಅಚ್ಚ ಬಿಳಿ ಬಟ್ಟೆಯಲ್ಲಿ ಮುಚ್ಚಿಟ್ಟ ಜ್ಞಾನಪರಿಮಳದ ನನ್ನ ವಿದ್ಯಾ ಗುರುಗಳು, ಅವರ ಪ್ರೀತಿ, ಸಿಟ್ಟು, ಪ್ರೋತ್ಸಾಹಗಳೇ ನನ್ನ ಹಿಂದಿನ ಬೆಳಕು.
ಹೋದ ವರ್ಷ ನಾನು ಹಾಗೂ ಶ್ರೀ ಸಿದ್ಧೇಶ್ವರರು ವಿದ್ಯಾಭ್ಯಾಸ ಪೂರೈಸಿದ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಲಾದ  ಹಿಂದಿನ ವಿದ್ಯಾರ್ಥಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದೇವು. ಅಂದಹಾಗೆ, ನಮ್ಮೂರ ಹೈಸ್ಕೂಲನ್ನು ವೇದಾಂತ ಕೇಸರಿ ಗದುಗಿನ ಮಲ್ಲಿಕಾರ್ಜುನ ಸ್ವಾಮಿಗಳು ಸ್ಥಾಪಿಸಿದರು. ಇವರು ಜಾತಿಯಿಂದ ನಾಯಿದರು(ನಾವಲಿಗ). ಆಗ ವೃತ್ತಿಯಿಂದ ಹವಾಲ್ದಾರರಾಗಿದ್ದ ಎಂ.ಆರ್.ಜಹಾಗೀರದಾರರಿಗೆ ದುಂಬಾಲು ಬಿದ್ದು ಇದ್ದ ವೃತ್ತಿಗೆ ರಾಜಿನಾಮೆ ಕೊಡಿಸಿ ನಮ್ಮೂರಿಗೆ ಕರೆತಂದು ಹೈಸ್ಕೂಲು ಹೆಡ್ಮಾಸ್ತರಿಕೆಯನ್ನು ಒಪ್ಪಿಸಿದರು. ಜೊತೆಗೆ ತಮ್ಮ ಶಿಷ್ಯನೊಬ್ಬನನ್ನು ಇವರ ಕೈಗೆ ನೀಡಿ `ಈತನಿಗೆ ಇಂಗ್ಲೀಷ ಕಲಿಸಬೇಕು' ಎಂದು ತಿಳಿಸಿದರು.
ಜಹಾಗೀರದಾರರಿಗೆ ಹೈಸ್ಕೂಲು ನಡೆಸುವುದು ಕಷ್ಟಕರವಾಗಿರಲಿಲ್ಲ ಆದರೆ ಸ್ವಾಮಿಗಳ ಶಿಷ್ಯನಿಗೆ ಇಂಗ್ಲೀಷ ಕಲಿಸುವುದು ಕಷ್ಟಕರವಾಗಿತ್ತು. ಯಾಕೆಂದರೆ ಊದಿದರೆ ಹಾರಿಹೋಗುವ ಶರೀರ, ಸಿಂಬಳ ಮೂಗು, ಮೇಲಾಗಿ ಈತ ಗುರುಗಳ ಶಿಷ್ಯ. ಇಂಥವನೊಂದಿಗೆ ಆರಂಭಿಕ ದಿನಗಳು ಕಷ್ಟಕರವೇ ಆಗಿದ್ದವು. ಈತ ಸರಿಯಾಗಿ ಶಾಲೆಗೂ ಬರುತ್ತಿರಲಿಲ್ಲ. ಪರೀಕ್ಷೆಯ ದಿನಗಳಲ್ಲಿಯಂತೂ ಎಲ್ಲೋ ಹೋಗಿರುತ್ತಿದ್ದ ಮಹಾರಾಯನನ್ನು ಹುಡುಕಿ ತರುವ ಸತ್ವ ಪರೀಕ್ಷೆಯ ಕಾಲ. ಆತನೋ ಊರ ಹೊರಗಿನ ಹಾಳು ದೇಗುಲಗಳಲ್ಲಿ ಧ್ಯಾನಸ್ಥನಾಗಿರುತ್ತಿದ್ದ. ಹಾಗೂ ಹೀಗೂ ಪತ್ತೆ ಹಚ್ಚಿ ಎತ್ತಿ ತಂದು ಪರೀಕ್ಷೆ ಬರೆಯಿಸಿದರೆ ಪೇಪರ್ ತುಂಬಾ ಎರಡೆರಡು ಮೊಟ್ಟೆ ಇಟ್ಟು ಹೋಗುತ್ತಿದ್ದ. ಇದನ್ನು ಸಹಿಸಲಾಗದ ಎಂ.ಆರ್.ಜಹಾಗೀರದಾರರು ಕೊನೆಗೊಮ್ಮೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ``ನನಗೆ ಬೇರೆ ಏನು ಬೇಕಾದರು ಹೇಳ್ರಿ, ಆದ್ರ ನಿಮ್ಮ ಶಿಷ್ಯನನ್ನು ಕರೆದುಕೊಂಡು ಹೋಗ್ರಿ. ಕಲ್ಲನ್ನು ನನಗೆ ಕಟೆಯೋಕ ಆಗುದಿಲ್ಲಾ'' ಎಂದು ಖಡಾಮುಡಿ ಹೇಳಿಬಿಟ್ಟರು. ಮಲ್ಲಿಕಾರ್ಜುನ ಶ್ರೀಗಳ ಕಣ್ಣುಗಳು ಒದ್ದೆಯಾದವು. ಶಿಷ್ಯನನ್ನು ಸಮೀಪ ಕರೆದು ಹೇಳಿದರು, ``ಕೇಳಿದೆ ಏನಪ್ಪ, ಅವರಿಗೆ ಬ್ಯಾಡದ ಮ್ಯಾಲ ನೀ  ನನಗೂ ಬ್ಯಾಡ. ಎಲ್ಲಾ ಆಟಾ ಸಾಕು. ನಾನು ಇಡೀ ಜಗತ್ತನ್ನು ನಿನ್ನ ಕಣ್ಣುಗಳ ಮುಖಾಂತರ ನೋಡಬೇಕು ಅಂದುಕೊಂಡಿದ್ದೆ.....''
ಇದೆಲ್ಲ ಕೇಳಿ ಶಿಷ್ಯನಲ್ಲಿ ಏನೋ ಪರಿವರ್ತನೆಯಾಯ್ತು. ಆತನೂ ಅಳಲಾರಂಭಿಸಿದ, ಬದಲಾದ. ಈಗ ಇಡೀ ಕನ್ನಡ ಕುಲಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಎಂದು ಪರಿಚಿತನಾದ. ಮುಂದಿನ ಅವರ ಸಾಧನೆಯ ದಾರಿ ಇಲ್ಲಿ ಬೇಡ. ನಾನು ಹೇಳಬೇಕಾದುದಿಷ್ಟೇ. ನಿರ್ಮೋಹದ ಗುರು ಮಾತ್ರ ನಿರ್ಭೀತಿಯ ಶಿಷ್ಯನನ್ನು ಕೊಡಲು ಸಾಧ್ಯವಿದೆ. ಹಾಗೆಯೇ ಎಂ.ಆರ್.ಜಹಾಗೀರದಾರ ಸಿದ್ಧೇಶ್ವರ ಸ್ವಾಮಿಗಳು ಎಂಬ ಶಿಷ್ಯನನ್ನು ರೂಪಿಸಿದ್ದು. ಆಗ ಕೈ ಹಿಡಿದ ಗುರು ಬದುಕಿನ ಕೊನೆಯುಸಿರಿನವರೆಗೆ ಸಿದ್ಧೇಶ್ವರರಿಗೆ ತಮ್ಮ ಜ್ಞಾನವನ್ನು ಧಾರೆ ಎರೆಯುತ್ತಲೇ ಹೋದರು. ನನಗೆ ನೆನಪಿದೆ, ಸಿದ್ಧೇಶ್ವರ ಸ್ವಾಮಿಗಳು ಉಪನಿಷತ್ ಕುರಿತಾದ ಆರಂಭಿಕ ಪ್ರವಚನಗಳನ್ನೆಲ್ಲ ನೀಡಿದ್ದು ನಮ್ಮೂರಿನಲ್ಲಿಯೆ. ಯಾಕೆಂದರೆ ಎಂ.ಆರ್.ಜಹಾಗೀರದಾರ, ಸಿಂಪಿಯವರನ್ನು ಕರೆದುಕೊಂಡು ಹೋಗಿ ಶಿಷ್ಯ ನೀಡುವ ಪ್ರವಚನವನ್ನು ಕಣ್ಣು ಮುಚ್ಚಿ ಕುಳಿತುಕೊಂಡು ಅತ್ಯಂತ ಧ್ಯಾನಸ್ಥರಾಗಿ ಕೇಳುತ್ತಿದ್ದರು. ಶಿಷ್ಯನನ್ನು ವೇದಿಕೆ ಮೇಲೆ ಕೂಡ್ರಿಸಿ, ಸ್ವಲ್ಪ ಕೆಳಗೆ ಶಿಷ್ಯನ ಸಮೀಪ ತಾವೂ ಕುಳಿತು ತಮ್ಮ ಬೆತ್ತವನ್ನು ನನ್ನ ಕೈಗೆ ನೀಡಿ, ಕಾವಲಿರಿಸಿದ ಗುರುವನ್ನು ನೆನೆದರೆ, ಗಂಗಾಳದ ತುಂಬ ಹುಗ್ಗಿ ಹಾಕಿ ಸೆರಗಿನಿಂದ ಗಾಳಿ ಹಾಕುತ್ತ ಪಕ್ಕದಲ್ಲಿ ಕುಳಿತ ನಮ್ಮೂರ ಸಾಲು ಸಾಲು ಅಜ್ಜಿಯರ ನೆನಪಾಗುತ್ತದೆ ನನಗೆ.
ತತ್ವಜ್ಞಾನದಲ್ಲಿ ಕೊಲ್ಲಾಪುರ ವಿಶ್ವವಿದ್ಯಾಲಯದಿಂದ ಎಂ. ಪದವಿ ಪೂರೈಸಿದ ಶ್ರೀ ಸಿದ್ಧೇಶ್ವರರದ್ದು ಮೂಲತಃ ಸಾಹಿತ್ಯಿಕ ಮನಸ್ಸು ಹಾಗೂ ಸರ್ವೋದಯದ ನಿಲುವು. ಅವರಸಾಂಗ್ಸ್ ಆಫ್ ಸೈಲೆನ್ಸ್’, ‘ಭಗವತ್ ಚಿಂತನ’, ‘ಶ್ರೀ ಸಿದ್ಧರಾಮನ ವಚನಗಳು’, ಉಪನಿಷತ್ಗಳ ಕುರಿತಾದ ಅವರ ಟೀಕೆಗಳು, ಗ್ರಾಮಾಭಿವೃದ್ಧಿಯ ಅವರ ಕನಸುಗಳು, ಸ್ವಚ್ಛತೆ ಹಾಗೂ ನೈರ್ಮಲ್ಯದ ಅವರ ಪರಿಕಲ್ಪನೆ ಅವರನ್ನು ನನ್ನ ಪಾಲಿನ ಗಾಂಧಿಯಾಗಿಸಿದೆ.
ಅಂದಹಾಗೆ ನನ್ನ ಮೊದಲ ಕಾವ್ಯ ಸಂಕಲನಅರ್ಪಣೆ ಮುನ್ನುಡಿಯ ಸಾಲುಗಳನ್ನು ಬರೆದ ಶ್ರೀ ಸಿದ್ಧೇಶ್ವರ ಶ್ರೀಗಳೇ ನೇತೃತ್ವ ವಹಿಸಿ, ಸಿಂಪಿ ಲಿಂಗಣ್ಣನವರ ಅಧ್ಯಕ್ಷತೆಯಲ್ಲಿ ನನ್ನ ಕೃತಿ ಲೋಕಾರ್ಪಣೆ ಮಾಡಿದರೆನ್ನುವುದು ಇಂದಿಗೂ ನನಗೆ ಗರ್ವದ ಮಾತಾಗಿದೆ. ಸಾವಿಲ್ಲದ ರೋಮಾಂಚನದ ಕ್ಷಣವಾಗಿದೆ.
ಆಸೆಗಳ ಕುರಿತ ಅವರ ಅದೆಷ್ಟೋ ಪ್ರವಚನಗಳನ್ನು ಕುರಿತು ಕೇಳಿದ್ದೆ. ಮನುಷ್ಯನ ನಿಲುವು ಆಸೆಗಳ ವಿಸ್ತಾರದಲ್ಲಿ ಹೇಗಿರಬೇಕು ಎನ್ನುವುದನ್ನು ಅವರು ಕಾಲಕಾಲಕ್ಕೆ ತಿಳಿಸುತ್ತಲೇ ಬಂದಿದ್ದಾರೆ. ಅದೆಲ್ಲ ಈಗ ಹೇಗೆ ಹೇಳಲಾದೀತು. ಹೇಳಲೇಬೇಕೆನ್ನುವುದಾದರೆ ಹೀಗೆ ಹೇಳಬಹುದೆನೊ. ಬಸವಯುಗದ ಮಹತ್ವದ ವಚನಕಾರ ಹಾಗೂ ಶರಣ ಹಾವಿನಾಳ ಕಲ್ಲಯ್ಯ ಬರೆಯುತ್ತಾರೆ -  
ಅತ್ಯಾಶಯೆಂಬುದೆ ಪಾಪ
ಬೇರೆ ಪಾಪೆಂಬುದಿಲ್ಲ ಕಂಡಿರೆ
ಪರಿಣಾಮವೆಂಬುದೆ ಪರಮಾನಂದ
ಬೇರೆ ಪರಲೋಕವಿಲ್ಲ, ಕಂಡಿರೆ ಅಯ್ಯಾ
ಇಹಪರದಾಶೆಯಿಲ್ಲದಿಹುದೆ ಶಿವಯೋಗ
ಮಹಾಲಿಂಗ ಕಲ್ಲೇಶ್ವರ ಬಲ್ಲ, ಸಿದ್ಧಾರಾಮ ಪರಿಯ
ಆಶೆ, ಆಶಯಗಳಿಲ್ಲದೆ ಜೀವನವಿಲ್ಲ ಬಂಧುಗಳೆ. ಆದರೆ ಅತ್ಯಾಶಯ, ದುರಾಸೆಗಳು ಮೃತ್ಯುವಿಗೆ ದಾರಿ ಎನ್ನುತ್ತಾರೆ ಹಾವಿನಾಳ ಕಲ್ಲಯ್ಯ. ನಿರಾಸೆ ಬೇಡ, ದುರಾಸೆ ಬೇಡ, ಅತ್ಯಾಶಯ ಬೇಡ ಸದಾಶಯವಿರಬೇಕು ಎನ್ನುತ್ತಾರೆ ನಮ್ಮ ಶರಣರು.
ಈಗ ಹೇಳಿ, ಕ್ರಿಕೆಟ್ ಪಟು ಒಬ್ಬನಿಗೆ ಘಾಯವಾದರೆ, ಬೋನಿಕಪೂರ ಮೂರನೆಯ ಮದುವೆಯಾದರೆ, ರಾಜಕಾರಣಿಯೊಬ್ಬ ಜಾರಿ ಬಿದ್ದರೆ, ಕ್ಯಾಬರೆ ಸುಂದರಿಯೊಬ್ಬಳು ಕಚ್ಚಿ ಬಿಟ್ಟ ಹಣ್ಣು ಹೆಚ್ಚಿನ ಮೊತ್ತಕ್ಕೆ ಹರಾಜಾದರೆ, ನಟಿಯೊಬ್ಬಳು ಕಣ್ಣು ಹೊಡೆದರೆ ತಿಂಗಳುಗಳವರೆಗೆ ಬರೆದು, ವರ್ಷಗಳವರೆಗೆ ದೃಶ್ಯ ಮಾಧ್ಯಮದಲ್ಲಿ ತೋರಿಸಿ ಕಥೆ ಹೆಣೆಯುವ ಪ್ರಚಾರ ಸಮಾಜಕ್ಕೆ ಸರಳವಾಗಿ, ಮನುಷ್ಯನಾಗಿ, ಸುಂದರವಾಗಿ ಹೇಗೆ ಬದುಕಬೇಕೆಂಬ ಸಿದ್ಧೇಶ್ವರ ಶ್ರೀಗಳ ಪ್ರಶಸ್ತಿ ನಿರಾಕರಣೆಯ ಹೆಜ್ಜೆ ನಮಗೊಂದು ಮರೆಯಲಾಗದ, ಮರೆಯಬಾರದ ಸಂದೇಶವಾಗಿ ನೀಡಲಿಲ್ಲವೆನ್ನುವುದು ಬೇಸರದ ಸಂಗತಿಯಲ್ಲವೆ. ಭಾವದಾರಿದ್ರ್ಯಕ್ಕೊಂದು ನಿದರ್ಶನವಲ್ಲವೆ?