Total Pageviews

Monday, May 21, 2018

ನಾಮ ಜಪನ ಕ್ಯೋಂ ಛೋಡ ದಿಯಾ?

ದೆಹಲಿಗೆ ಬಂದಿಳಿದಾಗ ನನ್ನ ಕಾಡಿದ ಪ್ರಶ್ನೆಯೊಂದೆ. ನಾನು ಹುಟ್ಟಿದ್ದೆಲ್ಲಿ? ನನ್ನ ತಾಯಿಯ ಗರ್ಭದಲ್ಲಿಯೋ? ನನ್ನ ತಂದೆಯ ಸಂಕಲ್ಪದಲ್ಲಿಯೊ? ಇದಕ್ಕೂ ಪೂರ್ವ ನಮ್ಮ ಪೂರ್ವಜರ ಪ್ರಾರ್ಥನೆಗಳಲ್ಲಿಯೊ? ನನ್ನ ಗೆಳೆಯ-ಗೆಳತಿಯರ ಹಾಗೂ ಹೆಂಡತಿಯ ಹರಕೆಯಲ್ಲಿಯೊ? ಎಲ್ಲಿ? ಎಲ್ಲಿ? ನನ್ನ ಹುಟ್ಟಾದುದು? ಮಂದಿರ, ಮಸೀದೆ, ಮಜಾರ, ಗುಂಡಾರ ಎನ್ನುವ ಬೇಧಗಳಿಲ್ಲದೆ ನನ್ನ ಕರೆದೊಯ್ದ ನನ್ನ ತಂದೆ, ಗಂಟೆಗಳವರೆಗಿನ ಪ್ರಾರ್ಥನೆಯ ನಂತರ ಒಂದು ಪ್ರಶ್ನೆ ಕೇಳುತ್ತಿದ್ದರು. ‘ನೀನು ಏನಾಗಬೇಕು?’ ಮೌನವಾಗಿರುತ್ತಿದ್ದ ನನಗೆ ಒಳಗಿರುವ ದೇವರೆಡೆಗೆ ಬೆರಳು ಮಾಡಿ ಅವರೇ ಉತ್ತರಿಸುತ್ತಿದ್ದರು, ‘ನೀನು ಅವನಾಗಬೇಕು’.
ದೆಹಲಿಯ ನನ್ನ ದಾಂಗುಡಿ ಏಪ್ರಿಲ್ 7ರವರೆಗೆ ಅವಿರತವಾಗಿತ್ತು. .ಸಿ ಬಿಟ್ಟು ಹೊರಗೆ ಬಂದರೆ ಸುಟ್ಟುಹಾಕುವ ಸೂರ್ಯ, ಹಾಗೆಯೇ ಒಳಗಡೆ ಕಾಡುವ ಇಂಥ ನೂರಾರು ಪ್ರಶ್ನೆಗಳು. ಅದೇನು ಕರ್ಮವೊ ಅಂದಿನ ನಮ್ಮ ಕಾವ್ಯ ಸಮಾರಂಭವೂ ಇಂಥ ಪ್ರಶ್ನೆಗಳ ಸರಮಾಲೆಯ ಪ್ರಾರ್ಥನೆಯಿಂದಲೇ ಪ್ರಾರಂಭವಾಯಿತು. ಆರಂಭದ ಪ್ರಾರ್ಥನೆಯಂತೂ ನನ್ನನ್ನು ಹುಚ್ಚನನ್ನಾಗಿಸಿದೆ, ನೀವಿದನ್ನು ಕೇಳಲೇಬೇಕು.
ನಾಮ ಜಪನ ಕ್ಯೋಂ ಛೋಡ ದಿಯಾ?
ಕ್ರೋಧ ಛೋಡಾ, ಝೂಠ ಛೋಡಾ,
ಸತ್ಯ ವಚನ ಕ್ಯೋಂ ಛೋಡಾ ದಿಯಾ?

ಝೂಠೇ ಜಗ ಮೇಂ ದಿಲ ಲಲಚಾ ಕರ
ಅಸಲ ವತನ ಕ್ಯೋಂ ಛೋಡ ದಿಯಾ?
ಕೌಡೀ ಕೋ ತೋ ಖೂಬ ಸಮ್ಹಾಲಾ
ಲಾಲ ರತನ ಕ್ಯೋಂ ಛೋಡ ದಿಯಾ?
ಒಂದಂತೂ ಸತ್ಯ, ಇದು ನನ್ನ ಹೃದಯಕ್ಕೆ ವೇದ್ಯವಾದ ಮಾತು. ನಾನು, ಇಂದಿನ ನನ್ನ ಪರಿಭ್ರಮಣ, ಸಾಧನೆ, ಸಂಸಾರ ಹಾಗೂ ಸಂಪತ್ತುಗಳು ರೂಪ ಪಡೆದದ್ದು ನನ್ನ ತಂದೆಯ ಸಂಕಲ್ಪದಲ್ಲಿಯೇ. ನನ್ನ ಶ್ರಮ ಒಂದು ಭಾಗವಾದರೆ, ತಂದೆ-ತಾಯಿಯ ಶುದ್ಧಾಂತಃಕರಣದ ಸಂಕಲ್ಪ ಮತ್ತೊಂದು ಭಾಗ. ಪರಿಶ್ರಮದಿಂದ ದಾರಿದ್ರ್ಯವನ್ನು ಗೆದ್ದ ಅವರು ಬದುಕಿನ ಸಹಜತೆಯ ಪಾಠಗಳನ್ನು ಹೇಳಿಕೊಟ್ಟವರು. ಪದೇ ಪದೇ ಬದುಕಿನಲ್ಲಿ ಭಾಗ್ಯ ಬರಬೇಕಾದ ರೀತಿಯನ್ನು ಕುರಿತು ಅವರು ಕಲಿಸುತ್ತಿದ್ದ ಒಂದು ಪದ್ಯ
ಸಹಜ ಮಿಲೆ ತೊ ದೂದ್ ಸಮಾನ್
ಮಾಂಗೇ ಜೊ ಮಿಲೆ ಪಾನಿ ಸಮಾನ್
ಜಾಂಮೇ ಏಂಚತಾನಿ
ರಕ್ತ ಸಮಾನ
ಹಾಲಿನಂತೆ ಸಹಜವಾಗಿ ಭಾಗ್ಯಗಳು ದಕ್ಕಬೇಕು. ಮನುಷ್ಯನಿಗೆ ದೈವಭಾಗ್ಯ, ಸಮಾಜ ಭಾಗ್ಯ ಹಾಗೂ ಸಂಸಾರ ಭಾಗ್ಯ ಯಾವುದೇ ಆಗಿರಲಿ ಅದು ನೆತ್ತರಿನ, ನೀಚತನದ ವಾಸನೆಯೊಂದಿಗೆ ನಮಗೆ ಅಂಟಿಕೊಳ್ಳಬಾರದು. ಕಾಲ ಹರಿದಷ್ಟೇ ಸಹಜವಾಗಿ ನಮ್ಮ ಬದುಕಿನಲ್ಲಿ ಯಶಸ್ಸಿನ ಹೊಳೆ ಹರಿಯಬೇಕು.
ನಾನು ಗಮನಿಸಿದಂತೆ, ಜೀವನದ ಒಂದು ಸಹಜ-ಸರಳ ಸಿದ್ಧಾಂತದಿಂದ ವಿಮುಖವಾದ, ಅದನ್ನು ನಿರ್ಮಮವಾಗಿ ತುಳಿದ, ಸೀಳಿದ ಯಾವುದೇ ನೀಚ ಕ್ರಿಯಾ ಶಕ್ತಿಗೂ ಭವಿಷ್ಯವಿರುವುದಿಲ್ಲ. ಅಂತೆಯೇ ಪ್ರಪಂಚದ ಶ್ರೇಷ್ಠ ವೈಚಾರಿಕ ಸಂತ ಕಬೀರನೂ ಒಳ್ಳೆಯತನವೆನ್ನುವುದು ದೌರ್ಬಲ್ಯವಲ್ಲ, ಬಡತನ ದೌರ್ಬಲ್ಯವಲ್ಲ, ಕೆಲವು ಮೌಲ್ಯಗಳಿಗಾಗಿ ಬಡತನವನ್ನೇ ಬಾಚಿಕೊಳ್ಳುವ ಯಾರೂ ಅಸಹಜರಲ್ಲ, ನಿರ್ವೀರ್ಯರಲ್ಲ. ಅಂಥವರ ಅವಮಾನ ಮೃತ್ಯುವಿಗೆ ನೀಡುವ ಆಮಂತ್ರಣ ಎಂದು ಬರೆಯುತ್ತಾನೆ. ಇಲ್ಲಿ ಕೇಳಿ. . . .
ದುರ್ಬಲ್ ಕೋ ಸತಾಯಿಯೇ
ಜಾ ಕಿ ಮೋಟಿ ಹಾಯ್
ಬಿನಾ ಜೀವ ಕಿ ಸಾಸ್ ಸೆ
ದೇಹ ಬಸಮ್ ಹೊಯಿ ಜಾಯ್
ಖಂಡಿತ, ವ್ಯಾವಹಾರಿಕವಾದ ಬದಕಿನಲ್ಲಿ ಪಾಪಕ್ಕೂ ಒಂದು ಸ್ಥಾನವಿದೆ. ತಪ್ಪಿಗೂ ಒಂದವಕಾಶವಿದೆ. ಇಂಥ ಸುಳಿಯಲ್ಲಿ ಸಿಕ್ಕಿದ್ದ ನಿಕೋಡಾಮಸ್ ಎಂಬ ಪರಮ ಪಾಪಿ ಜೀಸಸ್ರನ್ನು ಭೇಟ್ಟಿಯಾಗಿ ಕೇಳಿದ, ‘ಸ್ವಾಮಿ, ಮನುಷ್ಯತ್ವಕ್ಕೆ ಎಂದೂ ಸಲ್ಲದ ಅಪರಾಧಗಳನ್ನು ಮಾಡಿ, ಪರಮಪಾಪಿಯಾಗಿರುವ ನನಗೆ ಉದ್ಧಾರದ ದಾರಿಯನ್ನು ತೋರಿಸಿರಿ’. ಜೀಸಸ್ ನಿಕೋಡಾಮಸ್ನಿಗೆ ಒಂದೇ ವಾಕ್ಯ ಹೇಳಿದರು, ಬಿ ಬಾರ್ನ್ ಅಗೇನ್ಮತ್ತೆ ಹುಟ್ಟು, ಮರುಹುಟ್ಟು ನಿಕೋಡಾಮಸ್ಎಂದು. ತನ್ನ ತಪ್ಪಿನ ಪ್ರತಿ ಅರಿವಿನಲ್ಲಿ ಮನುಷ್ಯನ ಮರುಜನ್ಮದ ಅದ್ಭುತ ಸಾಧ್ಯತೆಗಳಿವೆ. ಇದುವೆನಿದ್ದಗೊಮ್ಮೆ ನಿತ್ಯ ಮರಣ, ಎದ್ದ ಸಲ ಹೊಸತು ಜನ್ಮಎನ್ನುವುದರ ಅರ್ಥ. ಎಳೆಯರಾದ ನಮ್ಮನ್ನು ಪ್ರಾರ್ಥನಾ ಪರಂಪರೆಯಲ್ಲಿಯೇ, ದೈವದ ನೆರಳಿನಲ್ಲಿಯೇ ಬೆಳೆಸಿದ ನಮ್ಮೂರ ಹಿರಿಯ ಜೀವ ಸಿಂಪಿ ಲಿಂಗಣ್ಣನವರು
ನಿದ್ದೆಯಲ್ಲಿ ಬಿದ್ದೇಕೆ ಆತ್ಮವೇ
ಏಳು ಆಳದಿಂದ,
ಏಳು, ಏಳು ಜಗದಗ್ನಿಲಿಂಗವೆ
ದೇವಕಿರಣದಿಂದ.
ಎತ್ತು ನಿನ್ನ ಮೋಗವೆತ್ತು
ಹೃದಯ ಧನ ಏರು ಎಸೆದ ತೆಂಗು
ಮೇಲಿನ ಚರ್ಚೆಯನ್ನೇ ತಮ್ಮ ಪದ್ಯದಲ್ಲಿ ಪುಷ್ಠೀಕರಿಸುತ್ತಾರೆ.

ನಾನು ಧರ್ಮದ, ಸಮಾಜದ, ಜೀವನದ ಹಾಗೂ ಪ್ರೀತಿಯ ಯಾವುದೇ ಘಟ್ಟಕ್ಕೆ ಹೋದರೂ ಅಲ್ಲಿ ಪ್ರಾರ್ಥನೆ ಹಾಗೂ ಸಂಕಲ್ಪಗಳ ಒಂದು ಪುಟ ಪ್ರಾರಂಭವಾಗಿಬಿಡುತ್ತದೆ. ಒಂದಿಷ್ಟು ಹಿಂದೆ ನೋಡಿದರೆ ಆಗ ಕನ್ನಡ ಶಾಲೆಯಲ್ಲಿದ್ದ, ನನ್ನ ತಂದೆಯ ಹಿರಿಯಣ್ಣನಂತಿದ್ದ ಶ್ರೀ ಎಚ್.ಎನ್.ನದಾಫ ಗುರುಗಳ ಸಂಸಾರವೆನ್ನುವುದು ಶಿಶುನಾಳ ಶರೀಫ ಹಾಡಿದಂತೆಹುಲುಗುರ ಸಂತೆ’; ದೇವರ ನಿಂಬರಗಿಯ ಇನ್ನೋರ್ವ ನನ್ನ ತಂದೆಯ ವೃತ್ತಿ ಬಾಂಧವರಾದ ಪ್ರೊ. ಆರ್.ಎಸ್.ಬಿರಾದಾರರ ನಾಲ್ಕು, ನನ್ನ ತಂದೆಯ ಮೂರು, ಸ್ವತಃ ತಮ್ಮ ನಾಲ್ಕು ಹೀಗೆ ಒಟ್ಟು ಹನ್ನೊಂದು ಮಕ್ಕಳನ್ನೆದೆಯಲ್ಲಿರಿಸಿಕೊಂಡು ಪಾಂಡೀಚರಿಯ ಮಾತಾರವಿಂದ, ಬಾದಾಮಿ ಬನಶಂಕರಿಯರನ್ನು ಪೂಜಿಸುತ್ತ, ಬೆಳೆದು ಬೆಳೆಸಿದ ಅವರೆಲ್ಲ ಭಿನ್ನ ಮತದವರು ಎಂದು ನನಗೆ ಗೊತ್ತಾಗುವ ವೇಳೆಗೆ ನನ್ನ ಎಂ. ಮುಗಿದಿತ್ತು. ಆದರೆ ಪ್ರಾರ್ಥನೆ ಅಖಂಡವಾಗಿತ್ತು. ಸಂಕಲ್ಪ ನಿತ್ಯ ಸಂಗಾತಿಯಾಗಿತ್ತು. ಇಂಥ ಧಾರ್ಮಿಕರು, ಮುಕ್ತ ಸಂಸ್ಕøತಿಯ ಇಂಗ್ಲಿಷನ್ನೇ ಮುಖ್ಯವಾಗಿಸಿಕೊಂಡು ನಾನು ಎಂ. ಮಾಡಬೇಕೆಂಬುದು ಅವರ ಮಹದಾಶೆಯಾಗಿತ್ತು. ಭಾವೈಕ್ಯತೆಯ, ಸಾಮರಸ್ಯದ ಇಂಥ ಸಮಾಜ ನನಗೆ ಮನುಷ್ಯತ್ವದ ಮಹೋನ್ನತಿಯ ಪಾಠ ಕಲಿಸಿದೆ. ಕೊನೆಯುಸಿರಿನವರೆಗೂ ಇದು ನನ್ನ ಸಂಕಲ್ಪವಾಗಿ ಅಗ್ನಿ ಪರೀಕ್ಷೆಗಳನ್ನು ಎದುರಿಸಬೇಕಿದೆ ಅಷ್ಟೆ.
ಮೇಲಿನದೆಲ್ಲವೂ ಸತ್ಯ, ಇದು ಕಾಡುತ್ತದೆ ದೆಹಲಿಯ ಬಿರು ಬಿಸಿಲಿನಂತೆ ನಿತ್ಯ. ಹೀಗಾಗಿ ನನ್ನ ವರ್ತಮಾನದ ಶ್ರೇಯ, ಪ್ರೇಯಗಳೆಲ್ಲವೂ ಇವರೆಲ್ಲರ ಪ್ರಾರ್ಥನೆ ಹಾಗೂ ಸಂಕಲ್ಪಗಳಿಗೇ ಸಲ್ಲಬೇಕು.
ಮುಗಿಸುವ ಮುಂಚೆ ಇದನ್ನೇ ವಾದಿಸುವ ಒಂದು ಕಠ್ಮಾಂಡು ಕವಿತೆ ನಿಮ್ಮೊಂದಿಗೆ
17.    ಶಿಖರ ಮುಟ್ಟುವ ಮುಂಚೆ

ದಾರಿ ಕ್ರಮಿಸಿದ್ದಕ್ಕೂ ಹೆಚ್ಚಾಗಿ
ದಾರಿ ತುಳಿದ ಕಾರಣವೇ
ಕಾಡುತ್ತದೆ, ಕುಪಿತನಾಗಿಸಿದೆ ನನ್ನ,
ದಡದಲ್ಲಿ ಕುಳಿತು ಲೆಕ್ಕ ಹಾಕುವ
ಆಳದ ಲೆಕ್ಕಾಚಾರವೇ
ನೀರಿಗಿಳಿದು ಮುಳುಗಿ ಸಾಯುವುದಕ್ಕಿಂತ
ಮಿಗಿಲಾಗಿ ಬಾಧಿಸಿದೆ ನನ್ನ,
ಪಾಪಿಯಾಗುವುದಕ್ಕೂ ಮಿಗಿಲಾಗಿ
ಪಾಪ ಕೃತ್ಯಕ್ಕೆ ಸನ್ನಧವಾದ
ವ್ಯಭಿಚಾರವೇ, ಸುಡುತ್ತದೆ ನನ್ನಾತ್ಮವ ಬೆಂಕಿಯಾಗಿ,
ಕ್ಷಣಕ್ಕೊಂದು ದಿಕ್ಕು ಬದಲಿಸುವ ಬುದ್ಧಿ
ಪರಿಣಾಮಗಳನ್ನನುಭವಿಸಲೇಬೇಕು.
ಸತ್ಯ, ಅನಾಹುತಗಳು ಹೊತ್ತೊಯ್ದು
ನಮ್ಮ ಹತ್ಯೆಗೈಯುವ ಮುಂಚೆ
ದಿಕ್ಕಿನೆಡೆಗಿನ
ನಡಿಗೆಯ ನಿಲ್ಲಿಸುವುದೇ ಉತ್ತಮ;
ಒಪ್ಪುತ್ತೇನೆ, ಘಟಿಸುವಿಕೆಗೂ ಮೊದಲು
ಅನುಭವವ ಅರುಹುವುದು ಕಷ್ಟ,
ಗಳಿಸಿಕೊಂಡದುದನ್ನೊಮ್ಮೆ
ಮರೆತು ಕಳೆದುಕೊಳ್ಳದೇ
ಬೆಲೆ ಅರಿಯಲಾಗದು.
ಗೊತ್ತು, ಮತ್ತೆ ಹುಡುಕುವ ದಾರಿ
ಮತ್ತಷ್ಟು ದುಬಾರಿ,
ಒಂದಿಷ್ಟೇ ಹಿತಕಾರಿ;
ತುಂಡು ವಸ್ತುಗಳ ನೆಚ್ಚಿ-ಮೆಚ್ಚಿ
ಆನಂದೋನ್ಮಾದರಾಗುವುದು
ನಿರೀಕ್ಷೆಯ ತಿರುಗಣಿಯಲಿ
ನಿತ್ಯ ಸುತ್ತುತಲೇ ಇರುವುದು.
ಎಷ್ಟೊಂದು ಜಟೀಲ, ಸಂಕೀರ್ಣ.
ಎಷ್ಟೆಲ್ಲ ಗಮನಿಸಿದೆ,
ಒಮ್ಮೆ ಗಟ್ಟಿಗೊಂಡು, ಸಿದ್ಧವಾಗಿ
ಆಳಗಲ ಅರಿಯಲು
ಬೆಟ್ಟದಿಂದ ಹೊರಡುವುದೇ
ಎಷ್ಟೊಂದು ದುಬಾರಿ ಕೆಲವೊಮ್ಮೆ,
ಆಲೋಚನೆಯಲ್ಲೇ ಕಾಲ ಕಳೆಯುತ್ತ
ಬೆಟ್ಟದೆತ್ತರದಲ್ಲಿ, ಮೈ ಕೊರೆಯುವ ಮಂಜು,
ಶೀತಲ ಗಾಳಿಗಳಿಗೆ
ಶವವಾಗುವುದಕ್ಕಿಂತಲು ವಾಸಿ
ಹೊರಡುವುದು ಕೆಲವೊಮ್ಮೆ, ಆದರೆ
ಅಬ್ಬಾ! ಎಷ್ಟು ಕಷ್ಟವೀ ಲೆಕ್ಕ

ಸಣ್ಣ ಅವಘಡಗಳ ಸಾಮಾನ್ಯ ಘಾಯ
ಎಂದೂ ಮಾಯದ ಘಾಯಕ್ಕೂ ಮಿಗಿಲಾಗಿ
ಕಾಡುತ್ತದೆ ಕೆಲವೊಮ್ಮೆ,
ನಿಶ್ಯಬ್ಧ ಕಾನನದ ಒಂಟಿತನಕ್ಕಿಂತಲೂ
ಹೆಚ್ಚು ಬಳಲಿಸಿವೆ ಇರಿಯುವ ಕಣ್ಣುಗಳ
ಬಾಜಾರುಗಳು,
ಇಲ್ಲಿ ಕದ್ದ ಕ್ಷಣದ ನೋಟ, ಕ್ಷಣದ್ದಷ್ಟೆ.

ಪ್ರತಿ ಮನೆಯಲೂ ಹೊತ್ತಿಸಲಾಗಿದೆ ದೀಪಗಳ
ಕಡಿಮೆಯಾಗಿದೆ ಖಂಡಿತ ಕತ್ತಲೂ ಕೂಡ
ಅಳೆಯ ಹೊರಟವರಿಗೆ ಗೊತ್ತು
ಗೆಲ್ಲಲಾಗದ ಬೆಟ್ಟವ ಅಳೆಯುವುದು ಕಷ್ಟ
ಪುಟ್ಟ ಅಪಘಾತಗಳ ಎದುರಿಸುವ ಅವಸರವಿದೆ ಈಗ
ದೊಡ್ಡದೊಂದು ಘಟಿಸುವುದಕ್ಕೂ ಮುಂಚೆ

ಮೂಲ: ಕೃಷ್ಣ ಜೋಶಿ
ಇಂಗ್ಲೀಷ್ಗೆ: ಮಹೇಶ ಪೌದ್ಯಾಳ
ಕನ್ನಡಕ್ಕೆ: ರಾಗಂ