Total Pageviews

Thursday, August 30, 2018

ಬೆಸುಗೆ ಎಂಥದೊ


ದಿನದ ಬೆಳಗಿನಲಿ
ನಾ ನಡೆವ ದಾರಿಯಲಿ
ಎಷ್ಟೊಂದು ಹೂವುಗಳು ಗೆಳತಿ!
ನಿಷ್ಠೆ ಇಲ್ಲದ ನಾವು
ನಿಷ್ಠೆ ಎಂದರೆ ಹೂವು
ಸೃಷ್ಠಿ ಲೋಕದಲಿ
ಬೆಸುಗೆ ಎಂಥದೊ ಒಡತಿ!

ಕಾಡು, ಕಲ್ಲಲಿ, ಹಾಡು, ಮೋಡ
ಕಡಲು, ಕೊಳ, ಮರಭೂಮಿಯಲಿ
ಮಾತಲ್ಲಿ, ಮೌನದಲಿ
ಹೂಗಳದೇ ಹಾವಳಿ
ಅಬ್ಬಾ! ಇದು ಮಕರಂದದ ಹೋಳಿ!
ಆತನೇ ಅಲ್ಲಿ ಗೌಳಿ

ಒಂದೊಂದು ಹೂವಿನಲಿ
ಅವನಲ್ಲಿ ಗಂಧವಲ್ಲಿ
ಒಂದೇ ಬಾಳಲಿ ಹೇಗೆ
ಬಾಚಿಕೊಳ್ಳಲಿ?
ಒಂದೊಂದು ಬಣ್ಣದಲಿ
ಅವನೊಲವು ಧಾರೆ ಇಲ್ಲಿ
ಒಂದೇ ಜನ್ಮದಲಿ
ಸಹಿಸಲೆಂತು!

ಬೆಳಗ ತಂಗಾಳಿಯಲಿ
ಮೌನ ಹೂವಂತರಳಿ
ಹೊರಟವನ ಹಾದಿಗೆ
ಹಬ್ಬಿಕೊಂಡರೆ ಹೀಗೆ,
ಎದೆಯ ಗುಡಿಸಲ ಹಣೆಗೆ
ನೆನಪ ಮಾಲೆಯೇ ಕೊನೆಗೆ.
ಕೊನೆ ಬೇಡ ಕೊನೆಗೆಂದು
ಹೇಗೆ ಬೇಡಲಿ ಅವನ?

ಅವನ ಲೋಕದಲಿ
ನಿತ್ಯ ನವಮಾಸದ ಕೂಸು ನಾ
ನನ್ನ ತೊದಲ ಹಾಡಿಗೆ ಎದೆ ಗೂಡು ನೀ
ತುಟಿಯಿರದ ಶೃತಿ ಇದು ಸಾಯಬಾರದು ಒಡತಿ


Thursday, August 16, 2018

ಇದು ನಮ್ಮ ಹಕ್ಕು


ಅಖಂಡ ಇಂಡಿ ತಾಲೂಕಾ 10 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣದ ಕೊನೆಯ ಭಾಗ
ಸಾಹಿತ್ಯ ಮತ್ತು ಕಾವ್ಯಧರ್ಮ:
ಕವಿತೆಯಂಥ ರಮಿಸಿಕೊಳ್ಳುವ ಕ್ರಿಯೆ ಪ್ರಪಂಚದಲ್ಲಿ ಮತ್ತೊಂದಿಲ್ಲ. ಪಶುವಿನಿಂದ ಮನುಷ್ಯನವರೆಗೆ, ಮನುಷ್ಯನಿಂದ ಮಹಾದೇವನವರೆಗೆ ಎಲ್ಲರಿಗೂ ಬೇಕಾದುದೆ ಕವಿತೆ. ಕಡಲೂ ಕವಿತೆಗಳ ಹಾಡುತ್ತದೆ, ಗಾಳಿಯೂ ಕವಿತೆಗಳ ಕೊರೆಯುತ್ತದೆ, ಕಾನನದ ಬಿದಿರು ಮೇಳಗಳಲ್ಲಿ ಕವಿತೆ ಇದೆ, ಹಕ್ಕಿಗಳ ಉಲಿಯಲ್ಲಿ, ಜೇಡದ ಬಲೆಯಲ್ಲಿ, ಸಾಲಾಗಿ ಸಾಗುವ ಇರುವೆ ಕಾಲಲ್ಲಿ, ಕವಿತೆ ಇದೆ.
ದೇವರಿಲ್ಲದ ದೇಶ-ಕಾಲ-ಧರ್ಮಗಳು ಹೇಗೆ ಅಸಾಧ್ಯವೊ, ಕವಿತೆ ಇಲ್ಲದ ಜೀವನ ವ್ಯವಹಾರವೂ ಅಷ್ಟೇ ಅಸಾಧ್ಯ. ಇದು ನಾಲ್ಕು ದಶಕಗಳ ನನ್ನ ಅನುಭವ, ಎದೆಗೆ ವೇದ್ಯವಾದ ಮಾತು. ಇದಿಲ್ಲದ ನಮ್ಮ ಸಮಾಜ ಏನಾಗಿರುತ್ತಿತ್ತು? ಮನುಷ್ಯನ ಗತಿ-ಸ್ಥಿತಿಗಳೇನಾಗಿರುತ್ತಿದ್ದವು? ಪ್ರಶ್ನಿಗಳಿಗೆ ಕವಿತೆಯಂತೆಯೆ ರಮಿಸುತ್ತ ಚಿಂತಕನೊಬ್ಬ ಬರೆಯುತ್ತಾನೆWithout the poetic element in our own being and without our poets and their great poetry, we would be brutes, or what is worse and we are most likely today: vicious automata of self-will.
ಎಷ್ಟೊಂದು ಭಯಾನಕ ಅಲ್ಲವೆ! ಕವಿತೆ ಇಲ್ಲದೆ ಹೋದಲ್ಲಿ ಪಶುಗಳಾಗಿರುತ್ತಿದ್ದೆವು ನಾವು. ಅಸಭ್ಯವಾಗಿರುತ್ತಿತ್ತು ಸಮಾಜ. ಭೂಮಿ ಎನ್ನುವುದು ಮೃಗಗಳ ದೊಡ್ಡಿಯಾಗಿರುತ್ತಿತ್ತು. ಹಾಗಿದ್ದರೆ ಕವಿತೆ ನಮ್ಮ ಕೈ ಹಿಡಿದು ಬದುಕನ್ನು ಒಪ್ಪಗೊಳಿಸಿದೆ. ರಮಿಸಿದೆ ತಾಯಿಯಂತೆ. ಹೀಗಾಗಿ ಕವಿತೆ ಕಟ್ಟದ ಮನಸ್ಸು ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲಾರದು ಎನ್ನುವುದು ಸತ್ಯ. ಅಂತೆಯೆ ಲೇಖಕ ಹೈಡೆಗರ್ ಹೇಳಿದ, Poetry is an indispensable function for human life. It is the creative source of the humanness of the dwelling life of man. ಕವಿತೆಯೊಂದು ಅವಶ್ಯಕ ಕ್ರಿಯೆ. ಅದು ಬಾಳಿನ ಊರ್ಜೆ. ಹೌದು, ಅದಿಲ್ಲದ ಜಗವಿಲ್ಲ, ಯುಗವೂ ಇಲ್ಲ.
ಕವಿತೆ, ಕವಿ, ಹೆಣ್ಣು, ಮೃತ್ಯು ಮತ್ತು ಮಣ್ಣನ್ನು ಕುರಿತು ಧ್ಯಾನಿಸಿದಷ್ಟು ಮತ್ತಿನ್ನೇನೂ ಧ್ಯಾನಿಸಲಿಲ್ಲ ನಾನು. ಬದುಕಿನಲ್ಲಿ ಸಿಗಬೇಕಾದ ಎಲ್ಲ ಶ್ರೇಯ-ಪ್ರೇಯ, ಅದಮ-ಅಪರೂಪ, ಸುಂದರ-ಕುರೂಪ, ವ್ಯಕ್ತಿ-ವಿಚಾರ ಹಾಗೂ ಬದುಕುಗಳು ಮೇಲಿನ ನಾಲ್ಕೇ ಪದಗಳ ಧ್ಯಾನಿಸುವಲ್ಲಿ ದಕ್ಕಿವೆ ನನಗೆ.
ಒಂದು ಉತ್ಕøಷ್ಟ ಕಾವ್ಯದ ಗಂತವ್ಯವೇ ಸತ್ಯ, ಸತ್ಯವನ್ನಲ್ಲದೆ ಅದು ಮತ್ತಿನ್ನೇನೂ ಹೇಳುವುದಿಲ್ಲವಾದುದರಿಂದ ಅದು ನಮ್ಮ ನೆನಪುಗಳಿಗೆ ಮತ್ತೆ ಮತ್ತೆ ಹತ್ತಿರವಾಗುತ್ತಿರುತ್ತದೆ.
The function of poetry is the founding of truth. ಹೀಗಾಗಿಯೆ, ಲೋಕವ್ಯವಹಾರದ ಭಾಗವೇ ಆಗಿರುವ ಕವಿ ಸುಳ್ಳಾಡಬಹುದು, ಆದರೆ ಎಲ್ಲವೂ ಮೀರಿ ಅವನೊಳಗೆ ಘಟಿಸುವ ಕವಿತೆ ಎಂದೂ ಸುಳ್ಳಾಡದು.
          ಕವಿತೆಗೆ ಸಾವಿಲ್ಲ ಯಾಕೆಂದರೆ ಅದು ಹುಟ್ಟಲಿಲ್ಲ. ಇದುವರೆಗಿನ ಎಲ್ಲ ಭಾಷೆಗಳೊಳಗಿನ ಎಲ್ಲ ಕಾವ್ಯವೂ ನಮ್ಮ ಪಠ್ಯಕ್ರಮದ ವಿಭಜನೆಯಷ್ಟೆ. ಕವಿತೆ, ಅದು ಧರ್ಮ ಹೀಗಾಗಿ ಅದರ ವಿಭಜನೆ ಸಾಧ್ಯವಿಲ್ಲ. ಅದು ಮುಗಿಯದ ದಾರಿ. ಹೀಗಾಗಿ ನಮ್ಮ ವಿಭಜನೆಗಳಾದ ಹಳೆಕಾವ್ಯ, ಹೊಸಕಾವ್ಯ, ಇಂಗ್ಲೀಷ್ಕಾವ್ಯ, ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ, ಬಂಡಾಯೋತ್ತರ ಕಾವ್ಯ ಎನ್ನುವುದು ನಾವೆತ್ತಿಕೊಂಡ ಕಾವ್ಯದ ರಸಯಾತ್ರೆಯಲ್ಲಿ ವಿರಮಿಸಿದ ತಾಣಗಳಷ್ಟೆ. ಅದು ಕಾವ್ಯವೇ ವಿರಮಿಸಿದ ಹಂತವಲ್ಲ. ಕಾವ್ಯಾನುಭವದಲ್ಲಿ ಭಾಷಾಜ್ಞಾನದಷ್ಟೇ ಮುಖ್ಯ ಬದುಕಿನ ಉಗ್ರಾಣದಲ್ಲಿಯ ವಸ್ತುಗಳ ಪರಿಚಯ ಇಲ್ಲದೇ ಹೋದಲ್ಲಿ ಕವಿ ಮತ್ತು ಕಾವ್ಯಾಸಕ್ತನ ಮಾತು ಎರಡು ದಡಗಳ ಮೇಲಿನ ಮಾರ್ದನಿಗಳಾಗುತ್ತವೆ.
ಒಂದು ಪದ್ಯವನ್ನು ಕೇಳಬಹುದು, ಆದರದು ಆಡುವ ಮಾತಿನ ಸದ್ದಲ್ಲ. ಅದನ್ನು ಹಾಡಬಹುದು, ಆದರದು ಸಂಗೀತದ ರಾಗಬದ್ಧವಾದ ಶಬ್ದವಲ್ಲ. ಅದನ್ನು ಓದಬಹುದು, ಆದರದು ಮುದ್ರಿತಾಕ್ಷರಗಳ ನೋಟವಲ್ಲ. ಅದು ಅರ್ಥವತ್ತಾದ ಮಾಹಿತಿ, ಲಯಬದ್ಧ ಭಾಷೆಯಿಂದ ಹೇಳಬಲ್ಲ ಒಂದು ಪ್ರತಿಭಾಶಿಶು, ಕವಿಕಲ್ಪನೆ. ಹಾಡು, ಮಾತು, ಮುದ್ರಾಕ್ಷರಗಳು ಅದಕ್ಕೆ ಬೇರೆ ಬೇರೆಯಾದ ಅರ್ಥವಾಹಕಗಳು. ಸಂಗೀತದ ನಿಯಮಗಳಂತೆ ಪಧ್ಯ ರಚಿತವಾಗಿಲ್ಲ. ಆಡುನುಡಿಯಂತೆಯೂ ಅದಿಲ್ಲ. ಅದರ ಭಾಷೆಯನ್ನು ಅಂತಃಕರಣದ ಪ್ರಶಾಂತ ಕಿರಣವೆನ್ನಬಹುದು. ಪದ್ಯವೊಂದು ಅಂತರಂಗದ ಒಳಗತಿಯಾಗಿಬಿಟ್ಟಿದೆ. ನಿಃಶ್ಯಬ್ಧ ಮನದ ನಿಸರ್ಗಧಾರೆಯಾಗಿದೆ. ಕಾಲ ಹೋದಹಾಗೆ ಕವಿತೆ ಅತೀಂದ್ರಿಯವೂ, ಬೌದ್ಧಿಕವೂ, ಆಧ್ಯಾತ್ಮಿಕವೂ ಆಗುತ್ತ ಹೋಗುತ್ತದೆ.

ಕಾವ್ಯ ಘಟಿಸುವ ಪರಿ:
ನಮ್ಮ ಕಾಡುವ ಕವಿ ಹಾಗೂ ಕವಿತೆಗಳು ಹೇಗೆ ಮತ್ತು ಎಲ್ಲಿ ಘಟಿಸುತ್ತಾರೆ? ಅವರ ಕವಿತೆಗಳಲ್ಲಿ ಅದ್ಯಾವ ಅದ್ಭುತ ಲೋಕ ಸೃಷ್ಟಿಯಾಗಿರುತ್ತದೆ? ಎಂದು ಕೇಳಿದರೆ ಕಾವ್ಯ ಚಿಂತಕನೊಬ್ಬ ಹೇಳುತ್ತಾನೆPoetry is the original way in which beings are brought into the open clearing of truth, in which world and earth, mortals and gods are bidden to come to their appointed places of meeting. ಸತ್ಯ, ಸೌಂದರ್ಯ ಹಾಗೂ ಸುತ್ತಲಿನ ವಾಸ್ತವಗಳ ದರ್ಶನವೇ ಕವಿ ಹಾಗೂ ಕಾವ್ಯದ ಮಹಾ ಜವಾಬ್ದಾರಿ. ಮನುಷ್ಯನಶಬ್ಧಹಾಗೂಆಲೋಚನೆಅರ್ಥಗಳಿಂದ ಗರ್ಭಕಟ್ಟುವ ಸಂದರ್ಭಗಳು ಅವನ ನಿತ್ಯ ವ್ಯವಹಾರದಲ್ಲಿಲ್ಲ. ಇಲ್ಲೆಲ್ಲ ಅವು ಸಾಮಾನ್ಯ ಆಯವ್ಯಯದ ಸರಕುಗಳಷ್ಟೆ. ನಮ್ಮಶಬ್ಧಹಾಗೂಆಲೋಚನೆನಮಗೆ ಅಚ್ಚರಿಯನ್ನುಂಟು ಮಾಡುವ ಅರ್ಥಗಳಾಗಿ ಸಿಡಿಯುವುದು ಕವಿತೆ ಹಾಗೂ ಮೌನದಲ್ಲಿ ಮಾತ್ರ. 
ಬರಹವನ್ನು ಗದ್ಯ-ಪದ್ಯ ಎಂದು ಸೀಳಲಾಗದು. ಬರಹವನ್ನು ನಾನು ಪ್ರಾರಂಭಿಸಿದಂದಿನಿಂದಲೂ ನನ್ನ ಬಲವಾದ ನಂಬಿಕೆಯಿದು. ಜಗತ್ತಿನ ಶ್ರೇಷ್ಠ ಬರಹಗಾರನಾದ ಪ್ರೇಮಚಂದ, ಕುವೆಂಪು, ಮಾಂಟೊ, ಟ್ಯಾಗೋರ್, ಟಾಲ್ಸ್ಟಾಯ್, ದಾಸ್ತೋಯೆವಸ್ಕಿ, ಕಾಮು, ಶರೀಫ, ಓಶೋ ಇವರನ್ನೆಲ್ಲ ನಾನು ಓದಿದ್ದು ಹೀಗೆಯೆ. ಇವರೆಲ್ಲ ನನಗೆ ದಾರ್ಶನಿಕರಂತೆ ದಕ್ಕಿದವರು. ಹೀಗಾಗಿ ಕವಿತೆಯಂತೆ ಕಾಡಿವೆ ಇವರ ಆಲೋಚನೆಗಳು.
ಅಂದಹಾಗೆ, ಒಂದು ಆಲೋಚನೆಯ ಪ್ರಕಾರ The opposite of the poem is not the prose, pure prose is as poetic as any poetry. The voice of thought must be poetic.  ಕಪ್ಪುಶಬ್ದದ ವಿರುದ್ದಾರ್ಥಕ ಹೇಗೆಬಿಳಿಅಲ್ಲವೊ ಹಾಗೆಯೆ ಆಲೋಚನೆಗಳಾಗಿ ನಮ್ಮ ತಲೆಮಾರುಗಳನ್ನು ಕಾಡುವ ಲೇಖಕರಲ್ಲಿಗದ್ಯಎಂಬ ಪದಕ್ಕೆ ವಿರುದ್ದಾರ್ಥಕವಾಗಿಪದ್ಯಎಂಬ ಪರಿಕಲ್ಪನೆ ಹುಟ್ಟುವುದಿಲ್ಲ. ಮನುಕುಲವನ್ನು ಕಾಡಿದ ಯಾವ ಚಿಂತಕನೂ ಗದ್ಯ-ಪದ್ಯಗಳ ಮಾನದಂಡಗಳನ್ನಿಟ್ಟುಕೊಂಡು ಮಾತಾಡಿಲ್ಲ. ಸಾಕ್ರೆಟಸ್, ದಾವ್, ಔಸ್ಪೆನಸ್ಕಿ, ಮೋಲಿಯರ್, ಶಂಕರಚಾರ್ಯ, ರಾಮಕೃಷ್ಣ ಪರಮಹಂಸ ಎಲ್ಲರೂ ಹೀಗೆಯೆ. ಆದರೆ ಒಂದು ಸತ್ಯ, ಇವರೆಲ್ಲ ಕವಿತೆಯಂತೆ ಆಲೋಚಿಸಿದ್ದಾರೆ ಅಥವಾ ಅವರ ಆಲೋಚನೆಗಳೆಲ್ಲವೂ ಕವಿತೆಗಳಂತೆ ನಮ್ಮನ್ನು ಕಾಡಿವೆ. ಹೀಗಾಗಿ ಅವು ಬರೀ ಅರ್ಥದ ಸೀಮೆಗಳಲಿಲ್ಲ ಬದಲಾಗಿ ಸೀಮಾತೀತವಾದ ಅರ್ಥಲೋಕಗಳನ್ನೇ ಸೃಷ್ಟಿಸಿವೆ.
ಆದರೆ ಬರೀ ವ್ಯಕ್ತಿಗತ ಭಾವನೆಗಳನ್ನೇ ಕೇಂದ್ರವಾಗಿಸಿಕೊಂಡ, ಸೀಮಿತವಾದ ಸಾಹಿತ್ಯ ಪರಿಧಿಯನ್ನಿಟ್ಟುಕೊಂಡ ಇಪ್ಪತ್ತನೆಯ ಶತಮಾನದ ಭಾರತೀಯ ಕವಿಗಳು ಅನುಭವಿಸಿದ ತಲ್ಲಣಗಳನ್ನು ವರ್ತಮಾನದ ಕನ್ನಡ ಕವಿಗಳೂ ಅನುಭವಿಸುತ್ತಿದ್ದಾರೆ. ಅವರ ಉದಯರವಿ ಅವರಿಗೆ ಬೆಳಕು ತರುತ್ತಿಲ್ಲ. ಹೊಟ್ಟೆಪಾಡಿಗಾಗಿ ಹುಟ್ಟಿಕೊಂಡ ಅವರ ಕಾರ್ಖಾನೆಗಳಲ್ಲಿ ಪಾರಿವಾಳಗಳು ಗೂಡು ಕಟ್ಟುತ್ತಿವೆ. ಗ್ಲೋಬಲೈಝೇಶನ್ ಗಾಳಿಯಲ್ಲಿ ಹಾರಿಹೋದ ಅವರ ತಿರಂಗಾ ತಿರುಗಿ ಬರುವ ಮಾತೇ ಆಡುತ್ತಿಲ್ಲ. ಪೆನ್ನು ತುಕ್ಕು ಹಿಡಿದು ಗೋಲ್ಕೊಂಡಾದ ಕೋಟೆಯೊಳಗೆ ಬಿದ್ದ ತುಪಾಕಿಯಾಗಿದೆ. ನಮ್ಮ ಯುವಕರ ಪ್ರೀತಿಯ ಹುಡುಗಿಯರೆಲ್ಲ ವಿಶ್ವ ಸೌಂಧರ್ಯದ ಸ್ಪರ್ಧೆಗಳಲ್ಲಿ, ಫ್ಯಾಶನ್ ಷೋಗಳಲ್ಲಿ, ಜಾಹಿರಾತುಗಳಲ್ಲಿ ಕಳೆದುಕೊಂಡಿದ್ದಾರೆ. ಪ್ರತಿ ಯುವ ಭಾರತೀಯ ಪ್ರೇಮಿಯ ಮನಸ್ಸು ಒಂದು ವಾಣಿಜ್ಯ ಮಳಿಗೆಯಾಗಿ, ತಾವು ಪ್ರೀತಿಸಿದ ಹುಡುಗಿಯರೆಲ್ಲ Reception Counter ನಲ್ಲಿ ನಿಂತ  ಹೃದಯ ಹೀನ ಗೊಂಬೆಗಳಂತೆ ಕಾಣುತ್ತಿದ್ದಾರೆ. ವಿಶ್ವಾಸ ರೈಲು ಡಬ್ಬಿಯಾಗಿದೆ.
ಕಳೆದು ಎರಡು ದಶಕಗಳಲ್ಲಿ ನಮ್ಮ ಕನ್ನಡ ಕಾವ್ಯಕ್ಕೆ ಯಾವ ಗ್ರಹಣ ಹಿಡಿದಿತ್ತೋ? ಕೃತಕ ಮೋಡ ಬಿತ್ತಣದಂತೆ, ಅದೆಷ್ಟೋ ಕವಿಗಳು ಕವನ ಸಂಕಲನಗಳನ್ನು ಹೊರ ತಂದರೂ ಕೂಡಾ, ಗರ್ಭಪಾತಗಳೇ ಹೊರತು ಜೀವನದಿಯಾಗುವಂಥ ಒಂದು ಅರ್ಥಪೂರ್ಣ ಮಳೆಗೆ ಕವಿತೆ ಸಿದ್ಧವಾಗಲಿಲ್ಲ. ನಾನು ಸಂದರ್ಭವನ್ನು ದೂಷಿಸುವುದಿಲ್ಲ. ಎಲ್ಲ ಕಾಲಘಟ್ಟದಲ್ಲೂ ಒಂದು Tension ಇದ್ದೇ ಇದೆ. ಅದನ್ನು ಅಸ್ಥಿವಾರವಾಗಿಸಿಕೊಂಡು ಕುವೆಂಪು, ಬೇಂದ್ರೆಯಂಥ, ಎಕ್ಕುಂಡಿ, ಪುರಾಣಿಕರಂಥ ಕವಿಗಳಾದರು ಹುಟ್ಟಿ ಬರಬೇಕು, ಇಲ್ಲ ‘Waste land’ zÀAxÁ ಕವಿತೆಯಾದರು ಹುಟ್ಟಿ ಬರಬೇಕು. ಹಾಗಂತ ಪ್ರತಿ ಕವನ ಸಂಕಲನವೂ ಬಕುಲ, ಬ್ರಹ್ಮ ಕಮಲಗಳನ್ನು ನೀಡಲೇಬೇಕೆಂದು ನನ್ನ ಹಠವಿಲ್ಲ. ಆದರೆ ಕನಿಷ್ಠ ಒಂದು ಸೃಜನಶೀಲ ಅನ್ವೇಷಣೆಯಾದರು ಅಲ್ಲಿ ನಡೆಯಬೇಕಲ್ಲ?
ಯಾವುದೇ ಕವಿ ಮನಸ್ಸಿಗೆ ಸಾವು ಒಂದು ಸಲ್ಲಾಪದ ಸಂಗಾತಿಯಲ್ಲ. ಬದಲಾಗಿ ಎಲ್ಲವನ್ನೂ ಇಂಗಿಸಿಕೊಳ್ಳಬಲ್ಲ ಒಂದು ರಹಸ್ಯ. ಮೌನದ ಭಯಾನಕ ಸಾಗರ. ಅದರೊಂದಿಗಿನ ಮಾತುಕತೆ ಸ್ವಗತದ ನೆಲೆಯನ್ನು ಮೀರಿ ಬೆಳೆಯುವುದೇ ಇಲ್ಲ. ಅಥವಾ ಸಾವಿನಿಂದ ಬದುಕಿಗೆ ಹೊಸದೇನನ್ನೋ ಕಟ್ಟಿ ಕೊಡುವ ಪ್ರಯತ್ನವೂ ಪದ್ಯಗಳಿಂದ ಆಗುವುದಿಲ್ಲ. ಬದುಕು ಮುದ್ದಿಸಬೇಕಾಗಿದ್ದ ಕವಿಯ ಬಾಯಿಯಲ್ಲಿ ಮೃತ್ಯವಿನ ಮಾತು ವರ್ತಮಾನದ ದುರಂತವೋ ಅಥವಾ ಬರೀ ಕವಿಯೋರ್ವನ ದುರ್ದೈವವೋ ನೀವೇ ನಿರ್ಧರಿಸಬೇಕು. ಯಾಕೆಂದರೆ ಕವಿ ಅಥವಾ ಕಾವ್ಯ ಸ್ವಯಂಭೂ ಅಲ್ಲ. ಅದು ಕಾಲದ ಕೂಸು. ಸಂಸ್ಕಾರಗಳ ಶಿಶು. ಒಂದು ಯುಗಧರ್ಮ ಒಬ್ಬ ಕವಿ ಅಥವಾ ಕಾವ್ಯದ ಮೂಲಕ ಮಾತನಾಡುತ್ತಿರುತ್ತದಷ್ಟೆ.
ಇದು ನಮ್ಮ ಹಕ್ಕು:
ಕನ್ನಡದ, ಕರ್ನಾಟಕದ ಕೊನೆಯ ಪಟ್ಟಣವಾದ ಚಡಚಣದ ಪುಣ್ಯ ನೆಲದಲ್ಲಿ ನಿಂತು, ಇಂದು 26.07.2018, ಗುರುವಾರ ದಂದು ನಡೆಯುತ್ತಿರುವ ಅಖಂಡ ಇಂಡಿ ತಾಲೂಕಿನ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ, ನಿಮ್ಮೆಲ್ಲರ ಧ್ವನಿಯಾಗಿ, ಪ್ರದೇಶದ ಪ್ರಗತಿಗಾಗಿ ಜರುಗಲೇಬೇಕಾದ ಹಲವಾರು ಸಂಗತಿಗಳತ್ತ ರಾಜ್ಯದ ಆಡಳಿತ ಯಂತ್ರದ, ಮಾಧ್ಯಮ ಮಿತ್ರರ, ರಾಜಕೀಯ ಮುಖಂಡರುಗಳÀ, ಚಿಂತಕರ, ಸಕಲ ಸಾಧು-ಸಂತರ, ಸಾಹಿತಿ-ವಿಜ್ಞಾನಿಗಳ, ಮಹಿಳೆಯರ ಹಾಗೂ ಸಂಘಟಕರ ಗಮನವನ್ನು ಸೆಳೆಯಲು ಯತ್ನಿಸುತ್ತೇನೆ ಬಂಧುಗಳೆ.
ಬಿಸಿಲನುಂಡ ನಮ್ಮ ಪ್ರದೇಶದ ಜನರಿಗೆ ಬುದ್ಧಿ-ಭಾವಗಳ ವಿಕಸನಕ್ಕೆ ಹಳ್ಳಿ-ಹಳ್ಳಿಗೂ ಗ್ರಂಥಾಲಯಗಳ ಅವಶ್ಯಕತೆ ಇದೆ.
ವಚನ ಪಿತಾಮಹ . ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಮಾದರಿಯಲ್ಲಿಯೇ ಜನಪದ ಕಣ್ವ ಸಿಂಪಿ ಲಿಂಗಣ್ಣನವರ ಹೆಸರಿನಲ್ಲಿ ಚಡಚಣದಲ್ಲಿ ಜನಪದ ಸಂಶೋಧನಾ ಕೇಂದ್ರದ ಅವಶ್ಯಕತೆ ಇದೆ.
ನಮ್ಮೆಲ್ಲರ ಹೆಮ್ಮೆಯಾಗಿದ್ದ ಸಿಂಪಿ ಲಿಂಗಣ್ಣನವರ ಸಮಾಧಿ ಇರುವ ಭೂಪ್ರದೇಶ ಸಂಕಷ್ಟದಲ್ಲಿದ್ದು ಅದಕ್ಕೊಂದು ಸಮರ್ಥ ಪರಿಹಾರ ಕಾಣಿಸುವಲ್ಲಿ ಸರ್ಕಾರ ಜವಾಬ್ದಾರಿವಹಿಸಬೇಕಿದೆ.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಾಜ್ಯ ಗಡಿ ರಕ್ಷಣಾ ಆಯೋಗ, ಗಡಿ ರಕ್ಷಣಾ ಸಮಿತಿಗಳಂಥ ಸರ್ಕಾರಿ ವ್ಯವಸ್ಥೆಗಳ ಮಹತ್ವದ ಹುದ್ದೆಗಳಿಗೆ ನಮ್ಮ ಭಾಗದ ಸಂಘಟನಕಾರರಿಗೆ ಆದ್ಯತೆಯನ್ನು ನೀಡಬೇಕು. ನಾಯಕತ್ವವನ್ನು ಕೊಡಬೇಕು.
ಕನಕದಾಸರ ಸಾಹಿತ್ಯಕ್ಕೆ ಸರ್ಕಾರ ತೋರಿಸಿದ ಮುತುವರ್ಜಿಯನ್ನೇ ಗಡಿ ಪ್ರದೇಶದ ಅದ್ಭುತ ಅನುಭಾವ ಕವಿಯಾದ ಮಧುಚನ್ನರನ್ನೂರಾಷ್ಟ್ರೀಯ ಸಂತಕವಿಎಂದು ಫೋಷಿಸಿ ಅವರ ಸಾಹಿತ್ಯವನ್ನು ಭಾರತ ದೇಶದ ಎಲ್ಲ ಭಾಷೆಗಳಿಗೆ ಭಾಷಾಂತರಿಸುವ ಯೋಜನೆಯನ್ನು ರೂಪಿಸಬೇಕು.
ಸ್ಥಾವರಗಳ ಹಂಗು ಹರಿದುಕೊಂಡು, ಪ್ರಶಸ್ತಿ-ಪುರಸ್ಕಾರಗಳಿಗೆ ನಿರ್ಮೋಹಿಯಾಗಿ, ಹೋದ ಹಳ್ಳಿ-ಪಟ್ಟಣ-ನಗರಗಳಲ್ಲೆಲ್ಲ ಸದಾಕಾಲ ನನ್ನಂಥ ಎಳೆಯರನ್ನು ಹಿರಿಯರನ್ನು ಸೇರಿಸಿಕೊಂಡು ತತ್ವ ಚಿಂತನೆಯಲ್ಲಿ ತೊಡಗಿದ, ಜಂಗಮತ್ವಕ್ಕೆ ನಿಜವಾದ ಅರ್ಥ ಹಾಗೂ ಕಾಯಕದ ವಿಸ್ತಾರ ಒದಗಿಸಿದ ಏಕೈಕ ಅಪರೂಪದ ಭಾರತದ ಚಿಂತಕ, ಸಾಹಿತಿ, ಸಂಘಟಿಕ ಶ್ರೀ ಸಿದ್ಧೇಶ್ವರ ಶ್ರೀಗಳು ಇಲ್ಲಿರುವುದು ನಮ್ಮ ಭಾಗ್ಯ ಹಾಗೂ ಗಡಿನಾಡಿನ ಹೆಮ್ಮೆ. ಅವರ ಪ್ರವಚನಗಳು ನಮಗೆ ಕೇವಲ ಒಂದು ಗಂಟೆ ಕೇಳಿ ಮರೆಯುವ ವ್ಯಸನವಾಗದೆ, ಅವರ ಭಾವಚಿತ್ರ ಬರೀ ಪೂಜೆಯ ವಸ್ತುವಾಗದೆ ಅವರ ಶಾಂತಿ, ಶಿಕ್ಷಣ, ನೈರ್ಮಲ್ಯ, ಪರಿಸರ ಹಾಗೂ ಸಾಹಿತ್ಯ ಪರವಾದ ಕಾಳಜಿಗಳು ನಮ್ಮ ನಿತ್ಯ ಜೀವನ ರೀತಿಯನ್ನು ನಿರ್ದೇಶಿಸಬೇಕಿದೆ.
ಕುವೆಂಪು ಸಾಹಿತ್ಯದ ಮಾದರಿಯಲ್ಲಿಯೇ ಶ್ರೀ ಸಿದ್ಧೇಶ್ವರ ಶ್ರೀಗಳ ಶ್ರೇಷ್ಠ ಕೃತಿಗಳಾದಭಗವತ್ ಚಿಂತನ, ‘ಸಾಂಗ್ಸ್ ಆಫ್ ಸೈಲೆನ್ಸ್ನಮ್ಮ ಮನೆ-ಮನೆಗಳ ಓದಾಗಬೇಕಾಗಿರುವುದರಿಂದ ಸರ್ಕಾರ ಸಂಪುಟಗಳಲ್ಲಿ ಅವರ ಚಿಂತನೆಗಳನ್ನು ಮುದ್ರಿಸಿ ಜನಸಾಮಾನ್ಯರಿಗೆ ನಿಲುಕುವ ದರದಲ್ಲಿ ಸಾಹಿತ್ಯ ಮುಟ್ಟಿಸುವ ಯೋಜನೆಯನ್ನು ಹಮ್ಮಿಕೊಳ್ಳಬೇಕು.

ಭಾರತೀಯ ತತ್ವಶಾಸ್ತ್ರದಲ್ಲಿ ಮಹತ್ವದವರೆನಿಸಿದ್ದ ಗುರುದೇವ ರಾನಡೆ, ಅರಬಿಂದೋ ಸಾಹಿತ್ಯದಲ್ಲಿ ಅಪರೂಪದ ಕೃಷಿಗೈದ, ಗಡಿನಾಡಿನಲ್ಲಿ ಬೃಹತ್ ಶಿಷ್ಯ ಪರಂಪರೆಯನ್ನು ಹೊಂದಿದ್ದ ದಿವಗಂತ ಶ್ರೀ ಎಂ. ಆರ್. ಜಹಗೀರದಾರ, ನವಕಲ್ಯಾಣ ಮಠದ ಕುಮಾರಸ್ವಾಮಿಗಳು, ವಿರೇಂದ್ರ ಸಿಂಪಿ, ಕುಮಾರ ಕಕ್ಕಯ್ಯ ಪೋಳ, ಹಲಸಂಗಿ ಖಾಜಾಸಾಹೇಬರ ಕುರಿತಾದ ಜನ್ಮಶತಮಾನೋತ್ಸವ, ವಿಚಾರ ಸಂಕಿರಣಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಗಡಿ ಅಭಿವೃದ್ದಿ ಪ್ರಾಧಿಕಾರಗಳ ಕ್ಯಾಲೆಂಡರ ಆಫ್ ಇವೆಂಟ್ಸನ ಭಾಗಗಳಾಗುವಂತೆ ಪ್ರದೇಶದ ಸಾಹಿತಿಗಳು, ರಾಜಕೀಯ ಮುಖಂಡರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೇಲೆ ಒತ್ತಡವನ್ನು ತರಬೇಕಿದೆ.
ಆಧ್ಯಾತ್ಮ ಜನರ ಹಸಿವಾಗಿದ್ದು, ಅನುಭಾವ ಇಲ್ಲಿಯ ಸೃಜನಶೀಲತೆಯ ಗತಿಯಾಗಿದೆ. ಇದಕ್ಕೊಂದು ಸಾಕ್ಷಿ ಮೂರು ದಿನಗಳ ಹಿಂದೆ(23-07-2018) ಇಲ್ಲಿಂದಲೇ ಸಾಗಿ ಹೋದ, ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮಧ್ಯದ ಬೆಸುಗೆಗೆ ಕಾರಣವಾದ, ಪಂಢರಪೂರ ವಿಠ್ಠಲನನ್ನು ಕೇಂದ್ರವಾಗಿಸಿಕೊಂಡ ವಾರಕರಿ ಪಂಥ. ಸಮಾಜವಾದದ ಪರಿಕಲ್ಪನೆಯನ್ನು ವಿಸ್ತರಿಸಿದ ಇಂಚಗೇರಿ ಸಂಪ್ರದಾಯ, ಬಸವ ಕ್ರಾಂತಿಯ ಮಹತ್ವದ ಕೊಂಡಿಯಾಗಿ ಶರಣ ಸಂಘಟನೆಯ ಮುಂಚೂಣಿಯಲ್ಲಿದ್ದ ಗುಡ್ಡಾಪೂರದ ದಾನಮ್ಮ, ಬದುಕಿನ ಆಕಸ್ಮಿಕವೊಂದರಲ್ಲಿ ಆಧ್ಯಾತ್ಮಕ್ಕೆ ಹೊರಳಿದ ರೇವತಗಾಂವದ ಸಿಂಹಗಢ ಮಹಾರಾಜರು, ಗೊಳಸಂಗಿಯ ಪುಂಢಲಿಕ ಮಹಾರಾಜರು, ಜೇವೂರಿನ ಹಠಯೋಗಿ ರೇವಣಸಿದ್ಧರು-ಹೀಗೆ ಇಲ್ಲಿಯ ಜೀವನ ಮೌಲ್ಯ ಎತ್ತರಿಸಿದ ಇಂತಹ ಅನೇಕರ ಕುರಿತು ಸಮರ್ಪಕವಾದ ಸಂಶೋಧನೆಗಳು ನಡೆಯಬೇಕಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ನಮ್ಮ ತಾಲೂಕಿನ ಎಲ್ಲ ದೇಶಭಕ್ತರ ಜೀವನ ಚರಿತ್ರೆಗಳು ಗ್ರಂಥ ರೂಪದಲ್ಲಿ ನಮ್ಮ ಮಕ್ಕಳಿಗೆ ದಕ್ಕಬೇಕಿದೆ.
ಇಂಡಿ ತಾಲ್ಲೂಕಿನ ಅಭಿವೃದ್ಧಿಯಲ್ಲಿ ಮಹತ್ವದವುಗಳು ಎನಿಸಿದ ಸರೋಜಿನಿ ಮಹಿಷಿ ಹಾಗು ಮಹಾಜನ್ ವರದಿಗಳ ಅನುಷ್ಠಾನವಾಗಬೇಕಿದೆ.
ಪ್ರದೇಶದ ವಿಶಿಷ್ಟ ಪ್ರದರ್ಶನಾ ಕಲೆಗಳಾದ ದೊಡ್ಡಾಟ, ಸಣ್ಣಾಟ ಹಾಗೂ ಬಯಲಾಟಗಳಿಗೆ ಹೊಸ ಕಾಯಕಲ್ಪ ಬೇಕಾಗಿದೆ. ಈಗಷ್ಟೇ ರಚನೆಯಾಗಿರುವ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿಯಿಂದ ಕಳದ ಆರು ಹಲವಾರು ದಶಕಗಳಿಂದ ಕಲೆಗಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಕಲಾವಿದರಿಗೆ ಮಾನ-ಸನ್ಮಾನಗಳು ದಕ್ಕಬೇಕಿವೆ. ಓದು-ಸಂಶೋಧನೆಗಳು ನಡೆಯಬೇಕಿವೆ. 
ಭಾಷಾವಾರು ಪ್ರಾಂತ್ಯಗಳ ರಚನೆಗೂ ಪೂರ್ವದಿಂದ ಕನ್ನಡ ಸಂವೇದನೆಗೊಂದು ನೆಲ ಬೇಕು, ಕನ್ನಡ ಸಂಸ್ಕøತಿಗೊಂದು ಸ್ವತಂತ್ರ ಅಸ್ತಿತ್ವ ಬೇಕು ಎಂದು ಹೋರಾಡಿದವುಗಳಲ್ಲಿ ನಮ್ಮ ಕನ್ನಡ ಶಾಲೆಗಳ ಪಾತ್ರ ಸಣ್ಣದಲ್ಲ, ನಮ್ಮ ಗಡಿನಾಡ ಕರ್ನಾಟಕದ, ಕನ್ನಡ ಶಾಲಾ ಶಿಕ್ಷಕರ ತ್ಯಾಗವೂ ಸಣ್ಣದಲ್ಲ. ಹೀಗಾಗಿ ಕನಾಟಕದ ಗಡಿಯ ಬತೇರಿಗಳಗಿರುವ ಕನ್ನಡ ಶಾಲೆಗಳನ್ನು ಉಳಿಸುವ, ಇಂತಹ ಶಾಲೆಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ನಮ್ಮ ಸರ್ಕಾರಗಳಿಂದ ಪ್ರಾರಂಭವಾಗಬೇಕಿದೆ.
ಒಂದು ಕಾಲಕ್ಕೆ ನಳಂದ ವಿಶ್ವವಿದ್ಯಾಲಯದ ಸಮಸಮವೆನಿಸಿ, ಅದರ ಅಂಗಭಾಗವಾಗಿ ಕಾರ್ಯ ನಿರ್ವಹಿಸಿದ ಸಾಲೋಟಗಿ ವಿದ್ಯಾಕೇಂದ್ರದ ಕಾಲ್ಪನಿಕ ಪ್ರತಿಕೃತಿ ಎನಿಸಿದರೂ ಸರಿ, ಇಲ್ಲಿಯ ಶಾಸನಗಳನ್ನಾಧಹರಿಸಿ ನಿರ್ಮಾಣ ಮಾಡಿ ಹೊಸ ಜನಾಂಗದ ಗಮನಕ್ಕೆ ತರಬೇಕಾಗಿರುವುದು ಕರ್ನಾಟಕ ಪ್ರಾಚ್ಯಶಾಸ್ತ್ರ ಇಲಾಖೆಯ ಮಹತ್ವದ ಜವಾಬ್ದಾರಿಯಾಗಿದೆ.
ಭಾಗದ ಶೈಕ್ಷಣಿಕ ಹರಿಕಾರರಲ್ಲಿ ಮುಂಚೂಣಿಯಲ್ಲಿದ್ದವರು ಬಂತನಾಳ ಶಿವಯೋಗಿಗಳು, ಹರ್ಡೇಕರ ಮಂಜಪ್ಪ, .ಗು.ಹಳಕಟ್ಟಿ ಹಾಗೂ ಶ್ರೀ ಜೀವರಾಜ ಶೆಢ್ಜಿಯವರು. ಬಂತನಾಳದ ಜಾತ್ರಾ ಮಹೋತ್ಸವದಲ್ಲಿ ಇಂದಿಗೂ ರಾಷ್ಠ್ರದ್ವಜವನ್ನು ಹಾರಿಸುವ ಪದ್ಧತಿ ಇದ್ದು, ಎಲ್ಲ ಕಾಲಕ್ಕೂ ಧರ್ಮ ಮತ್ತು ದೇಶ ಒಂದೇ ಎನ್ನುವ ಸಂದೇಶವನ್ನು ಸಾರಲಾಗುತ್ತಿದೆ. ಇಂತಹ ಮಹನೀಯರ ಸ್ಮರಣಾರ್ಥ ಪ್ರದೇಶದ ಸ್ವತಂತ್ರ ಅಸ್ಮಿತೆಯ ಸಂಕೇತವಾಗಿ ನಮ್ಮ ನಗರಗಳ ರಸ್ತೆ ವರ್ತುಲಗಳಲ್ಲಿ ಪ್ರತಿಮೆಗಳ ನಿರ್ಮಾಣವಾಗಬೇಕಿದೆ.
ಒಣಬೇಸಾಯವನ್ನಾಧರಿಸಿದ ನಾವು ಮಳೆಯನ್ನೇ ನಂಬಿದ್ದೇವೆ. ಇಂತಹ ಸಂಕಷ್ಟದಲ್ಲಿ ಹನಿ ನೀರೂ ತೆನೆಯಾಗುವ ಕೃಷಿ ತಂತ್ರಜ್ಞಾನ ನಮಗೆ ದೊರೆತು ಇಲ್ಲಿಯ ರೈತರ ಬಾಳು ಹಸನಾಗಬೇಕಿದೆ. ಭೀಮಾ ನದಿಯ ನೀರಿನ ಸಮರ್ಥ ಬಳಕೆಯಾಗಬೇಕಿದೆ. ದಿಢೀರ್ ಶ್ರೀಮಂತಿಕೆಯ, ನಮ್ಮ ನೆಲದ ಫಲವತ್ತತೆ ಹಾಗೂ ತೇವಾಂಶವನ್ನು ನಷ್ಟ ಮಾಡುವ ಕೃಷಿಯನ್ನು ಬದಿಗಿರಿಸಿ ನೆಮ್ಮದಿಯ ಅನ್ನಕ್ಕೆ ಮಾರ್ಗವಾಗುವ ಕೃಷಿ ಪದ್ಧತಿಯನ್ನು ನಾವು ರೂಢಿಸಿಕೊಳ್ಳಬೇಕಿದೆ ಹಾಗೂ ನಿಟ್ಟಿನಲ್ಲಿ ನಮ್ಮ ಸಮಾಜವನ್ನು ಪ್ರೋತ್ಸಾಹಿಸುವ ಸಾಹಿತ್ಯ ಹಾಗು ವಿಜ್ಞಾನವನ್ನು ಸರ್ಕಾರ ನಮಗೆ ಒದಗಿಸಬೇಕಿದೆ.
ಈಗಾಗಲೇ ಹಿಂದಿನ ಸರ್ಕಾರದಲ್ಲಿದ್ದ ಕೃಷಿ ಹಾಗೂ ನೀರಾವರಿ ಖಾತೆಯ ಶಾಸಕರಿಂದ ಸಾಕಷ್ಟು ಇಲ್ಲಿಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಶ್ಲಾಘನೀಯ ಕೆಲಸವಾಗಿದ್ದು ಇನ್ನೂ ಹೆಚ್ಚಿನ ಸಂಖ್ಯೆಯ ಕೆರೆಗಳ ಅಭಿವೃದ್ದಿ ಪ್ರಚಲಿತ ಸರ್ಕಾರದಲ್ಲಿಯೂ ಮುನ್ನಡೆಯಬೇಕು. ಆಲಮಟ್ಟಿ ಲಾಲ್ಬಹದ್ದೂರ ಶಾಸ್ತ್ರಿ ಜಲಸಾಗರದ ಭಾಗ್ಯ ನಮಗೂ ದಕ್ಕಬೇಕು. ಇಂಡಿ ಏತ ನೀರಾವರಿ, ಇಂಡಿ ಶಾಖಾ ಕಾಲುವೆ, ಮುಳವಾಡ ಏತ ನೀರಾವರಿ ಯೋಜನೆ, ಚಡಚಣದ ಏತ ನೀರಾವರಿ ಯೋಜನೆ ಹಾಗೂ ಗುತ್ತಿ ಬಸವಣ್ಣ ನೀರಾವರಿ ಯೋಜನೆಗಳು ತೀವ್ರಗತಿಯಲ್ಲಿ ಅನುಷ್ಠಾನಗೊಳ್ಳಬೇಕು.
ವ್ಯಕ್ತಿಗತ ದ್ವೇಷದ ಕಾರಣ, ಅಸಮರ್ಥ ಕಾನೂನು ವ್ಯವಸ್ಥೆಯ ಕಾರಣ ಇಂದುಭೀಮೆಯ ಒಡಲು ರಕ್ತದ ಮಡಿಲುಅಸಹ್ಯ ಪ್ರಚಾರಕ್ಕೆ ಒಳಗಾಗಿ ನಾಡಿನುದ್ದಕ್ಕೂ ನಾವು ರೋಚಕ ಸಂಗತಿಯಾಗಿದ್ದೇವೆ, ನಗೆಪಾಟಲಿನ ವಸ್ತುವಾಗಿದ್ದೇವೆ. ಇದು ಯಾವುದೇ ಜವಾಬ್ದಾರಿಯುತ ಸಂಸ್ಕøತಿಯ, ಜನಾಂಗದ ಹೆಮ್ಮೆಯ   ಸಂಗತಿಯಾಗಲಾರದು. ಪೆನ್ನಿಗೂ ಪುಣ್ಯದ ಪದಗಳನ್ನು ಬರೆಯುವ ಪಥವನ್ನು ತೋರಿಸಿದ ಶ್ರೇóಷ್ಠಾತಿಶ್ರೇಷ್ಠ ಆಧ್ಯಾತ್ಮ ಸಾಹಿತಿಗಳು, ಚಿಂತಕರು ಇಲ್ಲಿದ್ದೂ ನಾವೀಗ ಅಪರಾಧಿಗಳ ಪಟ್ಟಿಯಲ್ಲಿ ಪರಿಗಣಿತವಾಗಿರುವುದು ನಮ್ಮೆಲ್ಲರ ಬದುಕಿನ ಅತ್ಯಂತ ಅಸಹ್ಯ ಸಂದರ್ಭವಾಗಿದೆ. ಎಲ್ಲರೂ ಒಂದಾಗಿ ಸ್ವಚ್ಛ ಭಾರತ ಆಂದೋಲನದಂತೆಸ್ವಚ್ಚ ಭೀಮಾ ಕಿನಾರೆಆಂದೋಲನದ ಪಂಜುಗಳನ್ನು ಮೊದಲು ನಮ್ಮ ಪ್ರಜ್ಞೆಯಲ್ಲಿ ಹೊತ್ತಿಸಿಕೊಳ್ಳಬೇಕಿದೆ.
ನಮ್ಮ ನಗರಗಳು ಸ್ವಚ್ಛ ಸುವ್ಯವಸ್ಥಿತಗೊಳ್ಳಬೇಕಾಗಿದೆ. ಕಾನೂನು ವ್ಯವಸ್ಥೆ ಜನರ ವಿಶ್ವಾಸವನ್ನು ಪುನಃ ಗಳಿಸಿಕೊಳ್ಳಬೇಕಿದೆ. ಕೆರೆ-ನದಿ, ಹೊಳೆ-ಹಳ್ಳಗಳ ಮೇಲೆ ಪಟ್ಟಭದ್ರರು ನಡೆಸುತ್ತಿರುವ ಬಲಾತ್ಕಾರವನ್ನು ತಪ್ಪಿಸಬೇಕಿದೆ. ಈಗ ಬೇಕು ಸರ್ವರಿಗೂ ಸಹಬಾಳು-ಸರ್ವರಿಗೂ ಸಮಪಾಲು.
ನನ್ನ ಮೊದಲ ಕಾವ್ಯ ಸಂಕಲನವಾದಅರ್ಪಣೆಯನ್ನು ಮೂರು ದಶಕಗಳ ಹಿಂದೆ ಶ್ರೀ ಸಂಗಮನಾಥನ ಇದೇ ಆವರಣದಲ್ಲಿ ಬಿಡುಗಡೆ ಮಾಡುತ್ತಾ ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ಆಡಿದ ಮಾತೊಂದು ಇಲ್ಲಿ ಸ್ಮರಣೀಯ. “ಇಂದು ಲೇಖನಿಯನ್ನೆತ್ತಿಕೊಂಡು ಕಾವ್ಯಕ್ಕೆ ಅಣಿಯಾದ ಕವಿ ಮುಂದೆಂದೂ ಖಡ್ಗವನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳುವ ಸಂದರ್ಭವನ್ನು ಇಲ್ಲಿಯ ಹಿರಿಯರು ತರಬಾರದುಎಂದಿದ್ದರು ಶ್ರೀಗಳು. ಈಗಲೂ ಅದೇ ಸಂದೇಶ, ಅದೇ ಆಶಯ ಗನ್ನುಗಳನ್ನೆಸೆದು ಪೆನ್ನುಗಳ ಹಿಡಿಯಲಿ ಯುವಕರು. ರೋಚಕತೆಯಿಂದ ಹೊರಬಂದು ರಮಿಸಿಕೊಳ್ಳಲಿ ತಮ್ಮ ಎದೆಯನ್ನು. ಪ್ರೀತಿ, ಕರುಣೆ ಹಾಗೂ ಶಾಂತಿಗಳಿಂದ ವೈರ-ಹಗೆಗಳು ನಿಲ್ಲಲಿ, ಅಕಾಲಿಕ ಮೃತ್ಯುವಿನ ಸರಣಿ ಇಲ್ಲಿಯೇ ಕೊನೆಯಾಗಲಿ. ‘ಮರುಳುಮಾಫಿಯಾಕ್ಕೆ ನಿತ್ಯದ ತುತ್ತು ಅನ್ನ  ರಕ್ತವಾಗುವುದು ತಪ್ಪಲಿ. ಭೀಮೆ ಬೆಳಕಾಗಲಿ ಮತ್ತೆ ಬೊರಿ ನದಿ ಮೈದುಂಬಿ ಹರಿಯಲಿ, ಹಂತಕರ ನಾಡು ಚಿಂತಕರ ಬೀಡಾಗಲಿ. ಸಂತರ ಹಾಡಾಗಲಿ ಮುಂಬರುವ ಮಹಂತರ ನೆಲೆಯಾಗಲಿ.
ಲೇಖಕನಿಗೂ ಮಿಗಿಲಾಗಿ ನಾನೊಬ್ಬ ಮನುಷ್ಯ. ಶ್ರೀಸಾಮಾನ್ಯರೊಳಗಿನ ಸಾಮಾನ್ಯ ಮನುಷ್ಡ. ಇಲ್ಲಿಯ ನದಿಗಳಂತೆ, ನೆಲ ಮತ್ತು ಭಾಷೆಗಳಂತೆ ವಿಕಾಸದ ಪಥದಲ್ಲಿರುವ ಮನುಷ್ಯ ನಿಮ್ಮೊಂದಿಗೆ ನಿಮ್ಮೊಳಗಿರುವ ಮನುಷ್ಯ. ನಿಮ್ಮ ಜಂಗಮನಾಗಿ ಇಲ್ಲಿಯ ಪುಣ್ಯದ ಸಂದೇಶಗಳನ್ನು ಹೊತ್ತುಕೊಂಡು ಮುನ್ನಡೆಯಬೇಕಾದ ಮನುಷ್ಯ ನೀವು ನಿರ್ಮೋಹದ ಗುರುಗಳು ನಾನು ನಿರ್ಭೀತಿಯ ಶಿಷ್ಯ. ದಣಿವರಿಯದ ದಾರಿ ನನ್ನದಾಗಬೇಕು, ಧರ್ಮವನ್ನೇ ಸೂಚಿಸುವ ಹೊಣೆಗಾರಿಕೆ ನಿಮ್ಮದಾಗಬೇಕು. ಸಾಹಿತ್ಯದ ದಾರಿಯಲ್ಲಿ ಸಾಗಿದ್ದೇನೆ, ಸಾಗುತ್ತಲಿದ್ದೇನೆ ಮುಂದೆಯೂ ಸಾಗುತ್ತೇನೆ. ನನ್ನ ಬೆಳೆಸಿದ ನನ್ನೆಲ್ಲ ಸಾಮಾನ್ಯ ಹಿತೈಷಿಗಳೊಂದಿಗೆ ಅಂತಿಮವಾಗಿ ಮಹಾನ್ ಕವಿ .ಎಮ್. ಫ್ರಾಸ್ಟ್ ನಾಲ್ಕು ಸಾಲುಗಳನ್ನು ಹಂಚಿಕೊಳ್ಳುತ್ತೇನೆ.
The Woods are lovely dark and deep
But, I have a promise to keep
Miles to go before I sleep
Miles to go before I sleep.
  
ಸುಂದರವಾಗಿದೆ ದಾರಿ, ನಿಲ್ಲಲು ಹರಟಲು ಅವಕಾಶವಿಲ್ಲ, ಸಮಯವಿಲ್ಲ. ಕ್ಷಣಿಕವಾಗಿದೆ ಬಾಳು, ಚಿರವಾಗಿ ಒಮ್ಮೆ ವಿರಮಿಸುವ ಮುನ್ನ ಕ್ರಮಿಸಬೇಕಾದುದು ಅನಂತವಾಗಿದೆ, ಅನಂತವಾಗಿದೆ.