Total Pageviews

Sunday, March 25, 2012

ಜೀವನಾವರ್ತನ ಗೀತೆಗಳು ಮತ್ತು ಹೂ ಹಕ್ಕಿ ಮಕ್ಕಳು


ಜೀವನಾವರ್ತನ ಗೀತೆಗಳು ಮತ್ತು ಹೂ ಹಕ್ಕಿ ಮಕ್ಕಳು
                          (ಕೃತಿಗಳ ಬಿಡುಗಡೆ ಸಮಾರಂಭ ,ದಿನಾಂಕ: ೧೨/೦೩/೨೦೧೨, ಸರಕಾರಿ ಕಲಾ ಕಾಲೇಜು, ಹಾಸನ)


ಡಾ.ಹಂಪನಹಳ್ಳಿ ತಿಮ್ಮೇಗೌಡರ "ಜೀವನಾವರ್ತನ ಗೀತೆಗಳು" ಮತ್ತು ಮೇಟಿಕೆರೆ ಹಿರಿಯಣ್ಣನವರ "ಹೂ ಹಕ್ಕಿ ಮಕ್ಕಳು" ಎರಡೂಜೀವನ್ಮುಖಿ ಕೃತಿಗಳೇ. ಇರ್ವರೂ ಜೀವನ ಶ್ರದ್ಧೆಯ ಲೇಖಕರುಗಳೇ. ಒಬ್ಬರದು ಸಂಗ್ರಹ, ಇನ್ನೊಬ್ಬರದು ಸೃಜನಶೀಲ. ಒಂದು ಜಿಲ್ಲೆಯಲ್ಲಿ ಹೀಗೆ ಒಂದಿಷ್ಟು ಸಾಹಿತ್ಯವನ್ನೇ ತಪಸ್ಸಾಗಿಸಿಕೊಂಡ ಲೇಖಕರುಗಳೊಂದಿಗೆ ಒಡನಾಡುವುದೇ ಛಂದ. ಹೀಗೆಯೆ ಕೃತಿಗಳ ಬಿಡುಗಡೆಯ ಸಮಾರಂಭದಲ್ಲಿ ಮೂರು ತಲೆಮಾರುಗಳಿಗೆ ಸಾಕ್ಷಿಯಾಗಿರುವ .ಹೊ.ನಾರಾಯಣಸ್ವಾಮಿಯವರಂಥ ಹಿರಿಯ ಚಿಂತನಶೀಲ ಲೇಖಕರು ನಮ್ಮೊಂದಿಗಿರುವುದು ಛಂದಕ್ಕೂ ಛಂದ. ಹೀಗೆ ಹೇಳಿದರೆ ಅತೀಶಯೊಕ್ತಿಯಾಗಬಾರದು. ಹಾಸನ ಎಂದರೆ ಹೊಟ್ಟೆ ತುಂಬುವಷ್ಟು ರಾಜಕಾರಣ. ಸಾರ್ವಜನಿಕ ಸ್ಥಳಗಳಿಂದ ಕಾಲೇಜಿನ ಕಾರಿಡಾರ್ಗಳವರೆಗೆ ರಾಜಕಾರಣವೆಂಬ ಅಕ್ಟೋಪಸ್ ತನ್ನ ಮೈ ಚಾಚಿದೆ. ಇಲ್ಲಿ ಎಲ್ಲೆ ನಿಂತು ಒಂದು ಕಲ್ಲು ಒಗೆದರೂ ಅದು ಒಂದಿಲ್ಲಾ ಒಂದು ರೀತಿಯ, ರೂಪದ ರಾಜಕಾರಣಿಯ ಮೇಲೆಯೇ ಬೀಳುತ್ತದೆ. ಇಂಥಹದರ ಮಧ್ಯ ನಿರ್ಲಿಪ್ತತೆಯನ್ನ ಘೋಶಿಸಿಕೊಂಡು ಸಂಸ್ಕೃತಿಮುಖಿಯಾಗುವುದು, ಜೀವನ್ಮುಖಿಯಾಗುವುದು ಒಬ್ಬ ಲೇಖಕನ ಜೀವಂತಿಕೆಯ ಲಕ್ಷಣ.   ಹಿನ್ನೆಲೆಯಲ್ಲಿ ಕೃತಿಗಳ ಲೋಕಾರ್ಪಣೆ ಒಂದುಅರ್ಥಪೂರ್ಣ ಕಾರ್ಯ.
ನಾನು ಒಂದೆರಡು ವರ್ಷ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಅಧ್ಯಯನ ಸಂಸ್ಥೆಯಲ್ಲಿ ಡಾ.ಜನಿಫರ್ ಬೇಯರ್ ಹಾಗೂ ಪ್ರೊ.ಕಿಕ್ಕೆರಿನಾರಾಯಣರೊಂದಿಗೆ ಸೇರಿಕೊಂಡು ಜೇನುಕುರುಬರ ಸಾಹಿತ್ಯ ಸಂಗ್ರಹದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಇಂದು ಕೃತಿಗಳ ಬಿಡುಗಡೆಗೆ ನನಗೊಂದು ಅರ್ಹತೆಯನ್ನು ಒದಗಿಸಿವೆ ಎನ್ನುವ ಭರವಸೆಯೊಂದಿಗೆ ಕೃತಿಗಳ ಬಿಡುಗಡೆ ಮಾಡಿ ಮಾತನಾಡುವ ಧೈರ್ಯ ಮಾಡಿದ್ದೇನೆ.
ಡಾ.ಹಂಪನಹಳ್ಳಿ ತಿಮ್ಮೇಗೌಡರಿಂದ ಸಂಪಾದಿತ 'ಜೀವನಾವರ್ತನ ಗೀತೆಗಳು' ಕುರಿತು ಬರೆಯುತ್ತ ಪ್ರೊ.".ಸಿ.ರಾಮಚಂದ್ರೇಗೌಡರು ಮಹತ್ವದ ಚರ್ಚೆಯನ್ನು ಎತ್ತಿದ್ದಾರೆ. 'ಆಧುನಿಕ' ಮತ್ತು 'ಪುರಾತನ' ಎಂಬ ಎರಡು ಪದಗಳನ್ನು ಬಳಸುವುದರ ಮೂಲಕ ಜ್ಞಾನದ, ಅದರಲ್ಲೂ ಜನಪದದ ಅಪಮೌಲೀಕರಣ ಹೇಗಾಯಿತು ಎನ್ನುವುದನ್ನು ಬಹಳ ಸಮರ್ಥವಾಗಿ ವಿಶ್ಲೇಸಿದ್ದಾರೆ. " ಕಾಲದ ಪರಿಸ್ಥಿತಿ ಹೊರಗಿನಿಂದ ಬಂದಜ್ಞಾನ 'ಆಧುನಿಕ', ನಮ್ಮದೆಂಬುದು 'ಪುರಾತನ' ಎಂದು ಮನಸೋತು ಒಪ್ಪಿಕೊಂಡು ಬಿಟ್ಟಿತು. ಭಾರತೀಯ ಉತ್ಪಾದನೆಯಲ್ಲಿ ಹೊಸತು ಮತ್ತು ಹಳತು ಎಂಬ ವಿಭಜಿತ ಧೋರಣೆ ಎಲ್ಲರ ಮನದೊಳಗೆ ದಾಖಲಾಗಿತ್ತು. ಕಾರಣದಿಂದ ಮೇಲಿಂದ ನಮ್ಮ ಸಂಸ್ಕೃತಿ ಮತ್ತು ಜನಪದ ಸಾಹಿತ್ಯ ನಮ್ಮ ಹಳ್ಳಿಗಳಂತೆ ಹಳೆಯದು ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲ." ಇಂಥದೇ ಒಂದು ಹೇಳಿಕೆಯನ್ನ ಅನಂತಮೂರ್ತಿಯವರಿಂದಲೂ ಆಗಿರುವುದನ್ನು ನಾವಿಲ್ಲಿ ಗಮನಿಸಬೇಕು. ವ್ಯತ್ಯಾಸವಿಷ್ಟೆ, ಅವರು ಪೂರ್ವ ಮತ್ತು ಪಶ್ಚಿಮದ ಹಿನ್ನೆಲೆಯಿಂದ ವಿವರಿಸಿದ್ದಾರೆ. ಅವರು ಬರೆಯುತ್ತಾರೆ "ಭಾರತದ ಸತ್ವ ಸುಪ್ತವಾಗಿದ್ದ ಕಾಲದಲ್ಲಿ ಪಾಶ್ಚಾತ್ಯಲೋಕ ಎಚ್ಚೆತ್ತು ವ್ಯಕ್ತಿಧರ್ಮವನ್ನೇ ಎತ್ತಿ ಹಿಡಿದು ಅದೃಶ್ಯ ಶಕ್ತಿಗಳನ್ನು ಬೀಳ್ಗಳೆದು, ಸಮಾಜಧರ್ಮವನ್ನು ರೂಢಿಸಿಕೊಳ್ಳದೆ ಇಂದ್ರಿಯಗಮ್ಯವಾದ ಪದಾರ್ಥ ಲೋಕವೊಂದನ್ನೇ ನೆಚ್ಚಿ ವಿಜ್ಞಾನದ ಮಂತ್ರಕಂಬದ ಮೇಲೆ ಕುಳಿತು ಮೈದಾಸನ ಸ್ವರ್ಣ ಹಸ್ತದಿಂದ ಮುಟ್ಟಿದ್ದನ್ನೆಲ್ಲ ಚಿನ್ನ ಮಾಡುವೆನೆಂದು ಹೊರಟಿತು. ಅದರ ಸಾಧನೆ ಬೆರಗುಗೊಳಿಸುವಂಥದಾದರೂ ಅದರ ಸಿದ್ಧಿಯಲಿ ಮನುಷ್ಯ ಅಂತರಂಗಲೋಕದ, ಧರ್ಮಲೋಕದ, ಅದೃಶ್ಯಲೋಕದ ಅರಿವಿ ಅಭಾವ ವಿಜ್ಞಾನ ಧರ್ಮಮಾರಕವಾಗಲೂ ಕಾರಣವಾಟಿತು. 
ಎರಡು ಭಿನ್ನ ಹಿನ್ನೆಲೆಂದ ಹೊರಟ ಎರಡೂ ಹೇಳಿಕೆಗಳ ಕಾಳಜಿ ಒಂದೇ ಮತ್ತು ಉದ್ದೇಶವುಧ್ಯಾನಸ್ಥ ಸ್ಥಿತಿಯ ಭಾರತದ ಸಂಸ್ಕೃತಿ, ಸಾಹಿತ್ಯ ಬದಲಾಗುವ ರೀತಿ ಭಿನ್ನ. ಅದರ ಲಯ ಗತಿಗಳೂ ಭಿನ್ನ. ಜ್ಞಾನದ ಹೊಳವೂ ಭಿನ್ನ. ಹೀಗಾಗಿ ನೂರಾರು ವರ್ಷಗಳವರೆಗೆ ಪಶ್ಚಿಮದ ತೆಕ್ಕೆಗೆ ಬಿದ್ದ ದೇಶ, ಅದರ ಜನಪದ, ಸಂಸ್ಕೃತಿ, ಮತ್ತು   ಧರ್ಮ ಒಂದು ರೀತಿಯಿಂದ ಭಗ್ನಗೊಂಡಿತು ಎನ್ನುವುದನ್ನು ಹೇಳಿಕೆಗಳು ಸ್ಪಷ್ಟಪಡಿಸುತ್ತವೆ. ಪೂರ್ವ ಪಶ್ಚಿಮದ ತಿಕ್ಕಾಟದಲ್ಲಿ, ಪಶ್ಚಿಮ ಪ್ರಣೀತ ವಿಜ್ಞಾನ, ಪೂರ್ವ ಪ್ರಣೀತ ಜ್ಞಾನಗಳ ಮಸೆತದಲ್ಲಿ, ಜನಪರವಾದ, ಜನಪದೀಯವಾದ, ಅದರಲ್ಲೂ ಮುಖ್ಯವಾಗಿ ಮೌಖಿಕವಾದ ಬಹಳಷ್ಟು ಸಾಹಿತ್ಯ ಇನ್ನಿಲ್ಲದಷ್ಟು ಹಾನಿಗೊಳಗಾತು ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ನಾವು ಒಪ್ಪಿಕೊಳ್ಳದಿದ್ದರೆನಂತೆ, ಡಾ.ಹಂಪನಹಳ್ಳಿ ತಿಮ್ಮೇಗೌಡರ ಜೀವನಾವರ್ತನ ಗೀತೆಗಳಂಥ ಸಂಪಾದನೆಗಳು ಇದನ್ನು ಒಪ್ಪುವಂತೆ ಮಾಡುತ್ತವೆ. ಬರಹವನ್ನು ಸಾಕ್ಷಿಯಾಗಿಸಿಕೊಂಡ ಲಿಖಿತ ಅಥವಾ ಶಿಷ್ಟ ಸಾಹಿತ್ಯ ಕಾಲಾಂತರದಲ್ಲಿಯೂ ಕಾದಾಡಲು ಸಮರ್ಥವಾಗಿದೆ. ಆದರೆ ಜನಪದದ ಸಮಸ್ಯೆಯೆ ಬೇರೆ. ಅದು ಮುಖವಾಣಿ. ಎಲ್ಲದರ ತಾಯಿಬೇರು. ಕಾರಣ ಅದಕ್ಕೆ ಬೇರೆಯದೇ ಆದ ಕಾಳಜಿಗಳು ಬೇಕು. ಡಾ.ತಿಮ್ಮೇಗೌಡರು ಬರೆಯುತ್ತಾರೆ "ನಮ್ಮ ಸಾಹಿತ್ಯ ಪರಂಪರೆಯನ್ನು ನೋಡಿದಾಗ ಶಿಷ್ಟ ಸಾಹಿತ್ಯಕ್ಕೆ ಪ್ಠು ನೀಡಿ ನೀರೆರೆದು ಬೆಳೆಸಿರುವುದು ಮೌಖಿಕ ಸಾಹಿತ್ಯ. ಆದರೆ ಶಿಷ್ಟ ಸಾಹಿತ್ಯಕ್ಕೆ ದೊರಕಿರುವಷ್ಟು ಪುರಸ್ಕಾರ, ಗೌರವ, ಆದರಗಳು ಮೌಖಿಕ ಸಾಹಿತ್ಯಕ್ಕೆ ಸಿಕ್ಕಿಲ್ಲ." ಇದು ವಿಷಾದದ ಸಂಗತಿಯಾಗಿರುವಂತೆ ಸಂಸ್ಕೃತಿ ವಿನಾಶದ ಅಂಚಿನಲ್ಲಿರುವುದನ್ನೂ ಸೂಚಿಸುತ್ತಿದೆ. ಒಂದು ರೀತಿಯ ಅವಜ್ಞೆ ಬೆಳೆಯುತ್ತಿದೆ. ಡಾ.ತಿಮ್ಮೇಗೌಡರು ಹೇಳಿದಂತೆ, "ಇಂದು ನಾವು ಭಾರತೀಯ ಸಂಸ್ಕೃತಿಯಲ್ಲಿರುವ ದೇಸಿ ಜ್ಞಾನವನ್ನುಅಲಕ್ಷಿಸುತ್ತಾ, ಅನ್ಯ ಸಂಸ್ಕೃತಿಯ ಜ್ಞಾನಕ್ಕೆ ಹಾತೊರೆಯುತ್ತಿದ್ದೇವೆ. ಈಗ ವಸ್ತು ಸಂಸ್ಕೃತಿಗೆ ಮಾರು ಹೋಗುತ್ತಿದ್ದು, ಜ್ಞಾನ ಸಂಸ್ಕೃತಿಯ ಕಡೆ ಅಲಕ್ಷ್ಯ ಭಾವನೆ ತಳೆಯುತ್ತಿದ್ದೇವೆ. ನಮ್ಮಲ್ಲಿರುವ ಜಾನಪದ ಸಂಪತ್ತು ಸ್ಥಳೀಯ ಜ್ಞಾನದ ಗಣಿ. ಅದನ್ನು ಬಗೆದಷ್ಟು ಅಪಾರಜ್ಞಾನ ಚಿನ್ನದಂತೆ ದೊರಕುತ್ತಿರುತ್ತದೆ."
'ನಮ್ಮಲ್ಲಿರುವ ಜಾನಪದ ಸಂಪತ್ತು ಸ್ಥಳೀಯ ಜ್ಞಾನದಗಣಿ.' ಎನ್ನುವ ತಿಮ್ಮೇಗೌಡರ ಹೇಳಿಕೆಯ ವ್ಯಾಪ್ತಿ ದೊಡ್ಡದು.ಇಡೀ ಜೀವನಾವರ್ತನವನ್ನು ಅದರ ಒಟ್ಟು ಸೊಗಡಿನೊಂದಿಗೆ ಸೂಚಿಸುವಂಥದ್ದು. ಅದು ನಮ್ಮ ದೇಶಿಯ "ಜ್ಞಾನ, ಧರ್ಮ, ಜೀವನ ಶೈಲಿ, ವನಸ್ಪತಿ, ಉಡುಗೆ, ಆಚರಣೆಗಳೆಲ್ಲವನ್ನು ಸಮಾವಿಷ್ಟಗೊಳಿಸಿಕೊಂಡ ಮಹಾನ್ ಸಾಗರ, ಜೀವ ನದಿ. ಮಹತ್ವವನ್ನು ತಿಳಿದುಕೊಂಡೇ ಶಿಷ್ಟ ಸಾಹಿತ್ಯದ ಅನೇಕ ಪ್ರಾಜ್ಞರು ನಮ್ಮಜಾನಪದ ಸಾಹಿತ್ಯವನ್ನು ಸಂಗ್ರಹಿಸುವತ್ತ ಕಾರ್ಯೋನ್ಮುಖರಾದರು. ಅಂಥವರ ಒಂದು ದೊಡ್ಡ ಪಟ್ಟಿಯನ್ನು ಸಂಗ್ರಹದ ಆರಂಭದಲ್ಲಿ ರಾಮೇಗೌಡರು ಸೂಚಿಸಿದ್ದಾರೆ. ಕನ್ನಡದ ಪಾಲಿಗೆ ಇರುವಂತೆ ರಾಷ್ಟ್ರಮಟ್ಟದಲ್ಲಿಯೂ ಜನಪದ ಸಂಗ್ರಹಕಾರರ ಒಂದು ದೊಡ್ಡ ಪಡೆಯೇ ಇದೆ.ಅವರಲ್ಲಿ ಪ್ರಮುಖವಾಗಿ ಏಳೆಂಟು ಹೆಸರುಗಳು ನನಗಿಲ್ಲಿ ದಾಖಲಿಸಬೇಕು ಎನಿಸುತ್ತಿದೆ.
ವೇರಿಯರ್ಎಲ್ವಿನ್ ಬಗೆಗೆ ನಿಮಗೆ ಗೊತ್ತಿರಬಹುದು. ೧೯೦೨ ಮತ್ತು ೬೪ರ ಅವಧಿಯಲ್ಲಿ ಬದುಕಿದ್ದ ಈತ ಮಾನವ ಶಾಸ್ತ್ರಜ್ಞನಾಗಿರುವಂತೆ, ಗುಡ್ಡಗಾಡು, ಜನಪದ ಸಂಗ್ರಹಕಾರನೂ ಆಗಿದ್ದ. ಭಾರತಕ್ಕೆ ಕ್ರೈಸ್ತಮತ ಪ್ರಚಾರಕನಾಗಿ ಬಂದ ಗಾಂಧಿಯೊಂದಿಗೆ ಭಾರತೀಯರ ಕಾಂಗ್ರೆಸ್ಸಿಗೆ ಸೇವೆ ಸಲ್ಲಿಸುವಗೊಸ್ಕರ ತನ್ನ ವೃತ್ತಿಗೆ ರಾಜಿನಾಮೆಕೊಟ್ಟ ವಿಚಿತ್ರ ಮನುಷ್ಯ. ಮುಂದೊಂದು ಕಾಲಕ್ಕೆ ಶಿಲ್ಲಾಂಗ್, ಓರಿಸ್ಸಾ ಮತ್ತು ಮಧ್ಯಪ್ರದೇಶಗಳಲ್ಲಿ ಜನಪದ ಸಾಹಿತ್ಯ ಸಂಗ್ರಹಿಸುವ ಆಲೋಚನೆಯಿಂದ ಗಾಂಧಿ ಮತ್ತು ಆತನ ಕಾಂಗ್ರೆಸ್ಸನ್ನು ಬಿಟ್ಟ. ಇನ್ನೊಬ್ಬಳಿದ್ದಾಳೆ  ಜಾನ್ ಮೇರಿಯಮ್ಮ, ದಲಿತರ ಪಾಲಿನ ಅಜ್ಜಿಯಂದೇ ಖ್ಯಾತಳಿವಳು. ಕೇರಳದಲ್ಲಿ ತೊಂಬತ್ತು ವರ್ಷ ಜನಪದ ಸಾಹಿತ್ಯದ ಸಂಗ್ರಹ ಮಾಡಿದ ಈಕೆ ಕೊಟ್ಟಾಯಮ್ಮ್ ಮೀಪದ  ಕಾಲೇಜೊಂದರಲ್ಲಿ ಕಸ ಗೂಡಿಸುವ ಕೆಲಸದಲ್ಲಿದ್ದಳು. ಆದರೆ ಕೇರಳದ ಜನಪದವನ್ನು ಇನ್ನೆಂದೂ ಸಾಯದಂತೆ ಕಟ್ಟಿಕೊಟ್ಟಳು. ಕಲಕತ್ತೆಯ ಚಂದ್ರಕುಮಾರ ಕೂಡ ಅಷ್ಟೇ ಮಹತ್ವದ ಜನಪದ ಸಂಗ್ರಹಕಾರ. ಕಿರಾಣಿ ಅಂಗಡಿಯೊಂದರಲ್ಲಿ ಒಂದು ರೂಪಾಯಿ ಸಂಬಳದೊಂದಿಗೆ ಜೀವನ ಪ್ರಾರಂಭಿಸಿ, ಮುಂದೆ ತಾಲೂಕಾಫೀಸಿನಲ್ಲಿ ಎರಡು ರೂಪಾಯಿ ಸಂಬಳ ಪಡೆದು, ಎಂಟು ರೂಪಾಯಿ ಸಂಬಳ ಪಡೆಯುವಷ್ಟರಲ್ಲಿ ಹಳ್ಳಿಗಳಿಗೆ ಹೋಗಿ ತೆರಿಗೆ ಸಂಗ್ರಹಿಸುವ ಅಧಿಕಾರಿಯಾದ. ಇದೆ ಆತನ ಪಾಲಿಗೆ ಜನಪದವನ್ನು ಸಂಗ್ರಹಿಸಲು ದಾರಿಯಾತು. ಮುಂದೊಂದು ಕಾಲಕ್ಕೆ ಕಲಕತ್ತಾ ವಿಶ್ವವಿದ್ಯಾಲಯದಲ್ಲಿ ಎಪ್ಪತ್ತು ರೂಪಾಯಿ ಸಂಬಳದೊಂದಿಗೆ ದೊಡ್ಡಜನಪದ ಸಂಗ್ರಹಕಾರನಾಗಿ ಬೆಳೆದ. ಬಂಗಾಲದ ಮಹಾನ್ಜನಪದ ತಜ್ಞನೆನಿಸಿಕೊಂಡ.
ಹಾಗೆಯೆ ಕೇರಳದ ಕಿ.ರಾಜನಾರಾಯಣ್, ಕೋಮಲ್ ಸ್ವಾಮಿನಾಥನ್, ರಾಜಸ್ಥಾನದ ಕೋಮಲ್ಕೊಠಾರಿ, ದೇವಿಲಾಲ ಸಮರ್, ಗುಜರಾತಿನ ಭಗವಾನ್ದಾಸ ಪಟೇಲ್ ,ಹೀಗೆಯೆ ಅನೇಕರನ್ನು ಹೆಸರಿಸಬಹುದು.
ನಮಗೆ ಖುಶಿಯಾಗಬೇಕು, ಇದೆ ದಾರಿಯನ್ನು ಕ್ರಮಿಸಿದ ಡಾ.ಹಂಪನಹಳ್ಳಿ ತಿಮ್ಮೇಗೌಡ  ಮತ್ತು ಮೇಟಿಕೆರೆ ಹಿರಿಯಣ್ಣ ನಮ್ಮೊಂದಿಗಿದ್ದಾರೆ. ಐದು ಪ್ರಮುಖ ಭಾಗಗಳಲ್ಲಿ ವಿಂಗಡಿಸಲ್ಪಟ್ಟ ಹಂಪನಳ್ಳಿಯವರ ಕೃತಿ ಜೀವನ ಶ್ರದ್ಧೆಗೊಂದು ಸಾಕ್ಷಿ. ಪುಸ್ತಕ ನಮ್ಮ ಮನೆಯ ಗ್ರಂಥಾಲಯದಲ್ಲಿರುವುದು ಒಂದು ಶ್ರೀಮಂತಿಕೆ. ಪ್ರತಿ ಸಾಲು ಉದ್ದರಣೆಗೆ ಯೋಗ್ಯ. ಉದಾಹರಣೆಗೆ-'ನಿದ್ರೆಗೆ ಮದ್ದುಂಟೆ ವಜ್ರಕ್ಕೆ ಬೆಲೆಯುಂಟೆ', 'ಸಂಜೆ ದೇವತೆ ತಾಯೆ ಕಂದನ ತಲೆ ಕಾಯೆ', 'ಅತ್ತೆಯೆಂಬ ಬಾಯಿಗೆ ಮುತ್ತ ತಂದು   ತುಂಬುವೆ', 'ಹಾಗಾಲಕಾಯನ್ನು ಹೇಗೆ ಅಟ್ಟರೂ ಹಿಯೆ', 'ಗಂಜಿಯ ಕುಡಿದರೂ ಗಂಡನ ಮನೆ ಲೇಸು' ಹೀಗೆ ಒಂದೇ, ಎರಡೇ, ಸಾವಿರಾರು ಸಾಲುಗಳನ್ನು ಉದ್ಧರಿಸಬಹುದು. ಜನಪದದಷ್ಟು ಉದ್ಧರಣಯೋಗ್ಯವಾದ ಸಾಹಿತ್ಯ ಬೇರೆ ಇನ್ಯಾವುದು ಇಲ್ಲವೆನ್ನುವುದನ್ನು ನಿರ್ವಿವಾದಿತವಾಗಿ ಒಪ್ಪಿಕೊಳ್ಳಬೇಕು. ಜಾನಪದ ಬೌದ್ಧಿಕ ಕಸರತ್ತಿನಿಂದ ಹುಟ್ಟಿಕೊಂಡದ್ದಲ್ಲ. ಅದು ಬುದ್ಧಿ ಪಾರಮ್ಯದ ಸಾಹಿತ್ಯವೂ ಅಲ್ಲ. ಒಂದು ರೀತಿಯಲ್ಲಿ ಅನುಭಾವಕ್ಕೆ ಮೀಪವಾದ ಜನಾಂಗದ ತಲೆಮಾರುಗಳ ಸ್ವಾನುಭವದ ಕೆನೆ. ನಿತ್ಯಜಂಗಮವಾದ ಜಾನಪದ ಕಾಠಿಣ್ಯದ ಮಾತುಗಳಾಡುವುದಿಲ್ಲ. ಬದಲಾಗಿ ನಮ್ಮನ್ನು ಮಾನವ ಕಾರುಣ್ಯಕ್ಕೆ ಕರೆದೊಯ್ಯುತ್ತದೆ. ಕಾರಣಗಳಿಂದಾಗಿಯೇ ಜನಪದ ಕಾಲಾತೀತವಾಗಿ ಬದುಕುತ್ತದೆ.
ಸುಮಾರು ಐದನೂರು ಪುಟಗಳ ಇಂಥ ಒಂದು ಜನಪದ ಸಂಪಾದನೆಯನ್ನು ಮಾಡಿಕೊಡುವ ಮೂಲಕ ಡಾ.ತಿಮ್ಮೇಗೌಡರು ಸಂಸ್ಕೃತಿ ಮತು ಜೀವನ ಕಾಳಜಿಯನ್ನು ಮೆರೆದಿದ್ದಾರೆ. ನಾನಿಲ್ಲಿ ಅಲೆಗ್ಸಾಂಡರ್ ಪೋಪನನ್ನ ನೆನಪಿಸಿಕೊಳ್ಳಬೇಕು. ಆತ ಹೇಳಿದ್ದ, "ಸಾಹಿತಿಯಾದವನು ಹೊಸದೇನನ್ನು ಹೇಳಬೇಕಾದುದಿಲ್ಲ. ಇದುವರೆಗೂ ಹೇಳದ ಯಾವ ಹೊಸತು ಯಾವ ಲೇಖಕನಿಗೂ ಸಾಧ್ಯವಿಲ್ಲ. ಇರುವದನ್ನೇ ಸಂಗ್ರಹಿಸಿಕೊಟ್ಟರೂ ಅದು ಹೊಸತೇ." ಮಾತು ತಿಮ್ಮೇಗೌಡರ ಸಂಗ್ರಹದಲ್ಲಿ ಸಾಧ್ಯವಾಗಿದೆ. ಒಂದರ್ಥದಲ್ಲಿ ತಿಮ್ಮೇಗೌಡರು ಸಾಹಿತ್ಯದ ಕೆರೆಯ ನೀರನ್ನು ಕೆರೆಗೇ ಚಲ್ಲಿ ವರವ ಪಡೆದ ಧನ್ಯರು.

ನಮ್ಮೊಂದಿಗೆ ಇನ್ನೊಬ್ಬರಿದ್ದಾರೆ ಮೇಟಿಕೆರೆ ಹಿರಿಯಣ್ಣ. ಆಕಾರದಲ್ಲಿ ಮತ್ತು ಆಲೋಚನೆಯಲ್ಲಿ ಅವರು ಹಿರಿಯಣ್ಣನೇ. ಅರವತ್ತರ ಅಂಚನ್ನು ದಾಟಿ ಹಿರಿಯಣ್ಣ ತೊಡಗಿಸಿಕೊಂಡ ಲೋಕ ಮಾತ್ರ ಮಕ್ಕಳದ್ದು. ಇದು ತುಂಬಾ ಕಷ್ಟದ ಕೆಲಸ. ಮನುಷ್ಯ ಮಗುವಾಗುವುದು ಇನ್ನೂ ಪ್ರಯಾಸ. ಅವರ ಬ್ಯಾ ಬ್ಯಾ ಕುರಿಗಳೇ, ದೀವಳಿಗೆ, ಚಿಲಿಪಿಲಿ, ಬಿಸಿಬಿಸಿ ಕಜ್ಜಾಯ ಎಲ್ಲ ಮಕ್ಕಳ ಲೋಕವೇ. ಈಗ `ಹೂ ಹಕ್ಕಿ ಮಕ್ಕಳು' ಅದರ ಮುಂದುವರಿಕೆ.
ಕೃತಿಯ ಮುನ್ನುಡಿಯನ್ನು ಬರೆಯುತ್ತಾ ಡಾ.ಸಿದ್ದಲಿಂಗಯ್ಯ ಕನ್ನಡದಲ್ಲಿ ಶಿಶುಸಾಹಿತ್ಯದ ಶೈಶವಾವಸ್ಥೆಯ ಬಗೆಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಕನ್ನಡದಲ್ಲಿ ಶಿಶುಸಾಹಿತ್ಯಕ್ಕೆ ಅಂತಹ ಪುರಾತನತೆಯೇನು ಇಲ್ಲ. ಸುಮಾರು ೧೨೦೦ ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯದಲ್ಲಿ ಶಿಶುಗೀತೆಗಳು ಒಂದನೂರು ವರ್ಷ ಹಳೆಯದಷ್ಟೆ. ಪ್ರೌಢಸಾಹಿತ್ಯದ ಒಂದು ಭಾಗವಾಗಿ ಮಕ್ಕಳಿಗಾಗಿ ನೀತಿಕತೆಗಳು ಬಂದಿರುವುದನ್ನು ಬಿಟ್ಟರೆ, ಇಪ್ಪತ್ತನೇ ಶತಮಾನದ ಆದಿಭಾಗಕ್ಕೆ ಮೊದಲು ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಇಲ್ಲವೇ ಇಲ್ಲ ಎನ್ನಬಹುದು. ಪಂಜೆ, ಹೊಯ್ಸಳ, ರಾಜರತ್ನಂ ಮುಂತಾದವರು ದಕ್ಷಿಣಕರ್ನಾಟಕದ ಭಾಗದಲ್ಲಿ, ಅದೇ ರೀತಿ ಮುಂದೆ ಶಂ.ಗು.ಬಿರಾದಾರ, .ಕೆ.ರಾಮೇಶ್ವರ ಮುಂತಾದವರು ಗಣನೀಯ ಪ್ರಮಾಣದಲ್ಲಿ ಉತ್ತರಕರ್ನಾಟಕದಲ್ಲಿ ಶಿಶುಸಾಹಿತ್ಯವನ್ನು ರಚಿಸಿದವರು. ಇಂದು ವಿದ್ಯಾವಂತರ ಮಕ್ಕಳು ನಿಜವಾಗಿ ಕನ್ನಡದ ಪದ್ಯಗಳಿಂದ, ಸಂಸ್ಕೃತಿಯಿಂದ   ದೂರವಾಗುತ್ತಿದ್ದಾರೆ. ಈಗ್ಗೆ ೪೦-೫೦ ವರ್ಷಗಳ ಹಿಂದೆ ತಾಯಂದಿರು ಮಕ್ಕಳಿಗೆ ಹೇಳುತ್ತಿದ್ದ ಜಾನಪದ ಕತೆ, ಕವನಗಳು, ಸಂಪ್ರದಾಯದ ಹಾಡುಗಳು ಕಣ್ಮರೆಯಾಗಿವೆ. ಜಾಗಕ್ಕೆ ಇಂಗ್ಲೀಷ ರೈಮ್ಸ್ ಬಂದಿವೆ; ಜೊತೆಗೆ ಮಕ್ಕಳ ಇಂಗ್ಲೀಷ ಪದ್ಯಗಳ ಪುಸ್ತಕ, ಸಿ.ಡಿ ದೊರಕುವ ಪ್ರಮಾಣದಲ್ಲಿ ಕನ್ನಡದಲ್ಲಿ ದೊರಕುತ್ತಿಲ್ಲ."
ಸಿದ್ಧಲಿಂಗಯ್ಯನವರ ಹೇಳಿಕೆ ಒಪ್ಪುವಂಥದೇ. ಆದರೆಇಂತದರಲ್ಲೂ ಕಂಚಾಣಿ ಶರಣಪ್ಪ, .ಬಾ.ಚಿಕ್ಕಮಣ್ಣುರ, ಹುಲ್ಲೆಪ್ಪನವರಮಠ ಹಾಗೂ ಮೇಟಿಕೆರೆ ಹಿರಿಯಣ್ಣನವರಂಥ ಲೇಖಕರು ಮಕ್ಕಳ ಸಾಹಿತ್ಯಕ್ಕೆ ಗಂಭೀರವಾಗಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಬೇಕಾದುದೆ. ಶಿಶುಸಾಹಿತ್ಯ ಮನಸ್ಸಿಗೆ ಸಂಬಂಧ ಪಟ್ಟ ಪ್ರಶ್ನೆ. ಅದು ಎಲ್ಲರಿಗೂ ದಕ್ಕುವಂಥದಲ್ಲ. ಮಕ್ಕಳ ಸಾಹಿತ್ಯ ರಚನೆಗೆ ಬೇರೆಯದೇ ಮನಸ್ಥಿತಿ ಬೇಕಾಗುತ್ತದೆ.ಸರಳವಲ್ಲದ ಮನಸ್ಸು ಸಾಹಿತ್ಯವನ್ನು   ಸೃಜಿಸಲು  ಸಾಧ್ಯವಿಲ್ಲ. ಮೇಟಿಕೆರೆ ಹಿರಿಯಣ್ಣ ಸರಳತೆಯನ್ನು ಸಿದ್ಧಿಸಿಕೊಂಡ ಹಿರಿಯ ಮನುಷ್ಯ. ಸಂಕಲನದ ಮೂರು ನಾಮದ ದಾಸಯ್ಯ, ಅಮ್ಮನ ಹೂ ತೋಟ, ನಿಸರ್ಗ, ಮಗು ಮತ್ತು ಮೋಡ ವಿತೆಗಳು ಅವುಗಳ ಸರಳ ಭಾಷೆ, ವಿಚಾರ ಮತ್ತು ಪದಗಳ ಲಾಲಿತ್ಯದಿಂದಾಗಿ ನಿಮ್ಮನ್ನು ಕಾಡದೆ ಇರುವುದಿಲ್ಲ.
ಒಟ್ಟಾರೆ ಹಾಸನ ಜಿಲ್ಲೆಯ ಇಬ್ಬರು ಮಹತ್ವದ ಜಾನಪದ ಚಿಂತಕರು, ಸಂಗ್ರಹಕಾರರು ವಿಷ್ಯದ ಕಾಳಜಿಗಳೊಂದಿಗೆ ಸಾಹಿತ್ಯ ಸೃಷ್ಟಿಯಲ್ಲಿ  ತೊಡಗಿಕೊಂಡು ವರ್ತಮಾನದ ಅನೇಕ ವಿಚಾರಗಳಿಗೆ ಮುಖಾಮುಖಿಯಾಗುತ್ತಿರುವುದು ಜಿಲ್ಲೆಯ ಅಳಿದುಳಿದ ಸೃಜನಶೀಲ ಆರೋಗ್ಯತೆಗೆ ಸಾಕ್ಷಿ ಎಂದು ಹೇಳುತ್ತಾ ಎರಡು ಮಹತ್ವದ ಕೃತಿಗಳನ್ನು ನೀಡಿದ ಇಬ್ಬರು ಹಿರಿಯರನ್ನು ಹುತ್ಪೂರ್ವಕವಾಗಿ ಅಭಿನಂದಿಸುತ್ತೇನೆ.  







Sunday, March 11, 2012

ಕವಿಶೈಲದ ಮಣ್ಣು, ಬೆಂಗಳೂರಿನ ಮತ್ತು


                 ಕವಿಶೈಲದ ಮಣ್ಣು, ಬೆಂಗಳೂರಿನ ಮತ್ತು

                             ಟೀಕೆ ಟಿಪ್ಪಣಿಗಳಿಗೆ ಕನ್ನಡದಲ್ಲಿ ಕಂಡುಬರುವುದು ಅಖಂಡ ಮೌನ ಮಾತ್ರ.
                                                                                                                      
                                                                                                    -ವಸಂತ ಬನ್ನಾಡಿ

ನಮ್ಮ ಸಾಹಿತ್ಯಕ ರಾಜಧಾನಿಗಳಲ್ಲಿ (ಮೈಸೂರು-ಬೆಂಗಳೂರು-ಧಾರವಾಡ) ಅಲ್ಲಲ್ಲಿ ನಡುಗಡ್ಡೆಗಳಂತೆ ಸಾಹಿತಿಗಳ ಗುಂಪುಗಳಿಗೆ. ಇವುಗಳಿಗೆ ಹೊರನೋಟಕ್ಕೆ ವೈಚಾರಿಕ, ಸೈದ್ಧಾಂತಿಕ ಭಿನ್ನತೆಯ ಕಾರಣಗಳಿದ್ದರೂ ಆಂತರಿಕವಾಗಿ ಜಾತಿ ಮತ್ತು ಸ್ವಾರ್ಥವೇ ಈ ಗುಂಪುಗಾರಿಕೆಗೆ ಕಾರಣವಾಗಿರುವುದನ್ನು ಗಮನಿಸಬಹುದು. ಅವರವರ ಚೇಲಾಗಳು ಬಗಲಿನ ಚೀಲುಗಳಲ್ಲಿ ಬಾಟಲ್ ಹಾಕಿಕೊಂಡು, ತನ್ನ ಪಾಲಿನ ಜಾಗತಿಕ ಲೇಖಕನಿಗೆ ಅಹವಾಲುಗಳನ್ನಿಟ್ಟುಕೊಂಡು, ರಾತ್ರಿಯ ಲೆಕ್ಕಾಚಾರಗಳಲ್ಲಿ ಏರಿಸಿ-ಇಳಿಸಿ, ಗುಂಡಿನ ರೌಂಡಗೊಮ್ಮೆ ಮಾತು ಬದಲಿಸಿ, ಮತ್ತಿಗೊಮ್ಮೆ ಸಿದ್ಧಾಂತಕ್ಕೆ ಹೊರಳಿಸಿ ಮುಕ್ತಾಯವಾಗುವ ಗೋಷ್ಠಿಗಳನ್ನು ಮರುದಿನ ಸ್ಮರಿಸಿಕೊಂಡರೆ ಎಲ್ಲವೂ ಭ್ರಮನಿರಸನ. ಇಂಥ ಒಂದೆರಡು ರಾತ್ರಿಗಳನ್ನು ನಾನು ಬೆಂಗಳೂರಿಲ್ಲಿ ಕಳೆದಿರಬಹುದೇನೊ. ಆದರೆ ನೆಲಮಂಗಲಕ್ಕೆ ಬರುತ್ತಲೆ ಹಿಂದಿನ ಒಂದೆರಡು ಗಂಟೆಗಳ ಮತ್ತು ಇಳಿದು ನೆಲದ ಅನುಭವವಾಗುತ್ತ ಮತ್ತೆ ಈ ರಾಜಕೀಯ ಕವಿಗಳ ಮಧ್ಯ ಮನುಷ್ಯನೊಬ್ಬನ ಹುಡುಕಾಟ ಪ್ರಾರಂಭವಾಗುತ್ತದೆ. ಇತ್ತೀಚೆಗೆ ಹೀಗೇ ಆಯಿತು.
            ತಿಂಗಳಾಯಿತು ಬಾಗಲಕೋಟೆಗೆ ಹೋಗಿ ಬಂದು. ದರವೆಸಿ ಮನಸ್ಸಿನ ಹುಡುಕಾಟ ನಿಂತಿರಲಿಲ್ಲ. ಕೊನೆಗೂ ಬಾಬಣ್ಣ ಸಿಕ್ಕೆ ಬಿಟ್ಟ. ಮನೆಗೆ ಹೋದಾಗ ಮೂರುಸಂಜೆ. ಆಗಷ್ಟೆ ಅಂಗಳದ ಮಣ್ಣಿಗೆ ಚಳಿ ಹೊಡೆದಿರಬಹುದು. ಯಾಕೆಂದರೆ ನಾನು ಕುಳಿತುಕೊಳ್ಳಬೇಕಾಗಿದ್ದಲ್ಲಿ ಮಣ್ಣಿನ ವಾಸನೆ. ನನ್ನಪ್ಪನಿಗೆ ಅಣ್ಣನಂತಿದ್ದ ಬಾಬಾ(ಹುಸೇನಸಾಬ) ನನಗಾಗಿಯೇ ಕಾಯುತ್ತಿದ್ದನೇನೋ! ಈತನಿಗೆ ಲಕ್ವಾ ಹೊಡೆದು ವರ್ಷಗಳೇ ಉರುಳಿವೆ. ಕ್ಷಮಿಸಿ, ಆತ ಈತ ಎನ್ನುತ್ತಿದ್ದೇನೆ. ಯಾಕೆಂದರೆ ಇದು ಆತ್ಮದ ದ್ವನಿ. ಆತ್ಮಕ್ಕೆ ಆಭರಣದ ಭಾಷೆ ಗೊತ್ತಿಲ್ಲ.
ಹೋಗಿ ಪಕ್ಕದಲ್ಲಿ ಕುಳಿತೆ. ಹಸುಗೂಸನ್ನು ಜೋಡುಕಾಲುಗಳ ಮೇಲೆ ಹಾಕಿಕೊಂಡು ಮುಖದಿಂದ ತಿಕದವರೆಗೆ ತಿಕ್ಕುವ ತಾಯಿಯಂತೆ ನನ್ನ ಮೈಯೆಲ್ಲಾ ಹುಸೇನಸಾಬ ಕೈಯಾಡಿಸಿಬಿಟ್ಟ. ನಾನೊಂದು ಕ್ಷಣ ದುರ್ಯೋದನನಿಗಿಂತಲೂ ಬೆತ್ತಲೆಯಾಗಿ ನಿಂತು ಗಾಂಧಾರಿಯಿಂದ ವರ್ಜಕಾಯ ಪಡೆದ ಆತ್ಮಸ್ಥೈರ್ಯವನ್ನು ಅನುಭವಿಸಿದೆ. ಮುಪ್ಪು ಕೈಗಳ ಹುಸೇನಸಾಬ ತೊದಲುತ್ತಾ ಗದ್ಗದಿತನಾಗಿ ನನ್ನ ಕೆನ್ನೆ ಸವರಿ ಹೇಳಿದ

ನೀನು ಮಣ್ಣೊಳಗಿನ ಬಂಗಾರ
ಮಣ್ಣು ಬಡವರ ಅನ್ನ

            ಅವನು ಕವಿ ಅಲ್ಲ ಬಿಡಿ. ಕೆರಿಯೊಳಗೆ ಕುಳಿತುಕೊಂಡು ಹಾಡುವ ಯಜಮಾನನಂತೆ ಅವನ ಸಾಲುಗಳು ನನಗೆ ಕಾಡಿವೆ ಅಷ್ಟೆ. ಒಂದು ಕಾಲಕ್ಕೆ ಈತ ಶರೆ ಕುಡಿದು ಲೋಕವ್ಯವಹಾರ ಮಾತನಾಡುವಾಗ ನಾನು ಮಣ್ಣಿನ ವಾಸನೆ ಹಿರುತ್ತಾ ನಿದ್ರೆಯಲ್ಲಿರುತ್ತಿದ್ದೆ. ಈಗಲೂ ನನಗೆ ಮಣ್ಣೆಂದರೆ ನೆನಪಾಗುವದು ಈ ಹುಸೇನಸಾಬ, ನನ್ನೂರು ಮತ್ತು ನನ್ನ ನಿದ್ರೆಯಲ್ಲೂ ಸಂಚಲನವಾಗುತ್ತಿದ್ದ ಶಕ್ತಿ.
            ಮುಂದೆ ಮತ್ತೆ ಈ ಮಣ್ಣಿನ ಬಗ್ಗೆ ಓದಿದಾಗ ನನ್ನನ್ನು ಕಾಡಿದ್ದು ಸು ರಂ ಯಕ್ಕುಂಡಿಯ ಕವಿತೆ. ಈ ಯಕ್ಕುಂಡಿ ಕಾವ್ಯ ನನ್ನ ಅತಿ ದೊಡ್ಡ ದೌರ್ಬಲ್ಯ. ವಿಮರ್ಶಕ ಬಂದುಗಳಿಗೆ ಈತ ಎಷ್ಟು ಬೇಕಾಗಿದ್ದನೋ ಇಲ್ಲವೋ ಆ ಮಾತು ಬೇರೆ. ನಾನಂತು ಈತನನ್ನು ಕುಡಿದು ಬಿಟ್ಟೆ. ರಾಮಾಯಣದ ಸೀತೆಯನ್ನು ಕೊಟ್ಟ ಮಣ್ಣನ್ನು ಕುರಿತು ಕವಿ ಬರೆಯುತ್ತಾನೆ -

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಿ ಬರುವೆ
ರಾಮಭದ್ರನ ಕಥೆಯ ಹಾಡಿ ಕರಡಿಗೆಯಲ್ಲಿ
ಜನಕರಾಜನ ಹೊಲದ ಮಣ್ಣು ತರುವೆ

            ಯಕ್ಕುಂಡಿಯವರ ಕವಿತೆ ‘ಮಿಥಿಲೆ’ ನಾನು ನೂರು ಸಾರಿ ಓದಿರಬಹುದು. ಮಗಳು ಹುಟ್ಟಿದ ಮೇಲಂತೂ ಅದು ನನ್ನ ಹೃದಯದ ಅವಿಭಾಜ್ಯ ಅಂಗವೇ ಆಗಿದೆ. ನೆನಪಿರಲಿ, ಈ ಕವಿತೆ ಇರುವುದು ಅಯೋಧ್ಯಯ ಮಹಾರಾಣಿ ಸೀತೆಯನ್ನು ಕುರಿತಲ್ಲ ಜನಕರಾಜನ ಮಗಳು ಮಿಥಿಲೆಯ ಬಗ್ಗೆ. ಸೀತೆ ಮಿಥಿಲೆಯಾಗಿದ್ದಳು ಎನ್ನುವುದೇ ಈ ಹೆಣ್ತನದ ಸೌಂದರ್ಯ.
            ಈ ಲೇಖನ ಬರೆಯುವ ವೇಳೆಗೆ ಉತ್ತರ ಕರ್ನಾಟಕದಲ್ಲಿ ಯಲ್ಲಮ್ಮನ ಜಾತ್ರೆ ಮುಗಿದು ಕೆಲವು ದಿನಗಳಾಗಿರಬಹುದಷ್ಟೆ.  ದೇವಿಯ ಭಂಡಾರ ಸಿಗದ ತಾಯಂದಿರು ಪಾದಗಟ್ಟಿಗೆ ಸುತ್ತು ಹೊಡೆದು ಹಸುಗೂಸುಗಳ ಹಣೆಗೆ ಮಣ್ಣನ್ನೇ ಬಂಡಾರದಂತೆ ಬಳಿಯುವ ದೃಶ್ಯ ಇಲ್ಲಿ ನೆನಪಾಗುತ್ತದೆ ನನಗೆ.
            ಹಲಸಂಗಿಯಲ್ಲಿ ಮಧುರಚೆನ್ನರ ಸಮಾಧಿಯ ಸುತ್ತ ಸುತ್ತು ಹಾಕುವ ತಾಯಂದಿರು ಅಲ್ಲಿಯ ಮಣ್ಣನ್ನೆತ್ತಿ ಮಗುವಿನ ಹಣೆಗಿಡುವ ದೃಶ್ಯವನ್ನ ನಾನು ನೋಡಿದ್ದೇನೆ. ಬಿ.ಎಮ್.ಶ್ರೀ ಬಿಜಾಪುರಕ್ಕೆ ಕಾಲಿಡುತ್ತಲೇ ಭಾವಪರವಷರಾಗಿ ಅಲ್ಲಿಯ ಮಣ್ಣನ್ನೆತ್ತಿಕೊಂಡಿದ್ದನ್ನು ಕೇಳಿದ್ದೇನೆ. ಹೀಗೆ ಈ ಮಣ್ಣಿನ ಮಹಿಮೆ ಒಂದೇ ಎರಡೆ.
            ಮಣ್ಣು ಎಲ್ಲಕಾಲಕ್ಕೂ ಶೋಷಿತರ, ದಮನಿತರ ಸಂಕೇತ. ಅದು ಅನ್ನ ಮತ್ತು ಬದುಕಿನ ಭರವಸೆಯ ಸಂಕೇತ, ಅದು ಬೇರುಗಳ ಪ್ರಶ್ನೆ, ಮತ್ತಿನ್ನೇನೋ. ಕೆಲವರು ಮೆಟ್ಟಿದ ಮಣ್ಣು ವಿಭೂತಿ ಮತ್ತೇ ಕೆಲವರು ಮೆಟ್ಟಿದ ಮಣ್ಣು ಧೂಳು.  ಧೂಳಿಗೂ ವಿಭೂತಿಗೂ ವ್ಯತ್ಯಾಸವಿದೆ. ಅಂತೆಯೆ ಬರೆದರು ನಮ್ಮ ಚಂಪಾ-
ಹೋಗಿ ಬರ್‍ತೀನಜ್ಜಾ ಹೋಗಿ ಬರ್‍ತೀನಿ
ನಿನ್ನ ಪಾದದ ಧೂಳಿ ನನ್ನ ಹಣಿಮ್ಯಾಗಿರಲಿ
ತಪ್ಪಿಯೂ ಕಣ್ಣಾಗ ಬೀಳದಿರಲಿ

            ಇಷ್ಟೆಲ್ಲ ಪೀಠಿಕೆಯ ಉದ್ದೇಶವಿಷ್ಟೆ ಮಣ್ಣು ಮತ್ತು ಅದರ ಸಂಸ್ಕೃತಿ ಕಾಡಿದ ರೀತಿಯಲ್ಲಿ ನಮ್ಮನ್ನು ಬೌದ್ಧಿಕತೆ  ಕಾಡುವುದಿಲ್ಲ. ಮಣ್ಣಿಗಿರುವ ವಿನಯ, ಪ್ರಾಮಾಣಿಕತೆ ಮನಿಷ್ಯನ ಬುದ್ಧಿಗಿಲ್ಲ. ಬುದ್ಧಿ ಪಾರಮ್ಯದ ಲೇಖಕರು ಮಣ್ಣು ಸಹಜವಾದ ಲೇಖಕರಂತೆ ನಮ್ಮನ್ನು ಕಾಡುವುದಿಲ್ಲ. ಅದಕ್ಕಾಗಿ ನಾನು ಹೀಗೆ ಬರೆದೆನೇನೋ.....
ರಾತ್ರಿ ಹತ್ತಾದರೆ
ಇಳಿಯುತ್ತದೆ ಬೆಂಗಳೂರಿನ ಮತ್ತು
ಇರುಳ ಕನಸೆಲ್ಲಾ ಕಾಡುತ್ತದೆ
ಕವಿಶೈಲದ ಮಣ್ಣು ಮತ್ತೆ
ಮಧುರಚೆನ್ನರ ನವಿಲಿನ ಕಣ್ಣು
                                  ರಾಗಂ
ಹಿರಿಯ ವಿಮರ್ಶಕ ಗೆಳೆಯ ರಹಮತ್ ತರಿಕೆರೆ ತಮ್ಮ ಕತ್ತಿಯಂಚಿನ ದಾರಿಯಲ್ಲಿ ಒಂದು ಮಹತ್ವದ ವಿಚಾರವನ್ನು ಚರ್ಚಿಸಿದ್ದಾರೆ. “ಒಂದು ಭಾಷೆಯ ಲೇಖಕ ಸಮುದಾಯವು, ಸಂಗಾತಿಗಳಂತೆ ಪರಸ್ಪರ ಕಲಿತು ಕಲಿಸುವ ಡೆಮಾಕ್ರಟಿಕ್ ಪರಿಸರವೊಂದು ನಿರ್ಮಿಸಿಕೊಳ್ಳುವುದು, ಸಾಹಿತ್ಯಕ ಪರಿಸರದ ಆರೋಗ್ಯಕ್ಕೆ ಮಾತ್ರವಲ್ಲ; ಸಮಾಜದ ಇತರೆ ಕ್ಷೇತ್ರಗಳಲ್ಲೂ ಶ್ರೇಷ್ಠ-ಕನಿಷ್ಠಗಳೆಂಬ ತರತಮವಿಲ್ಲದೆ ಒಡನಾಡುವ ಸಾಂಸ್ಕೃತಿಕ ವಿನಯವನ್ನು ಪಡೆದುಕೊಳ್ಳುವುದಕ್ಕೆ ನೆರವಾಗುತ್ತದೆ. ಹಾಗಲ್ಲದೆ ಬರೀ ಕಲಿಸುವ ಮಾತನಾಡುವುದು ಮತ್ತೊಂದು ಪ್ರಕಾರದ ಸ್ವಾಯತ್ತತೆಯನ್ನು ಮನ್ನಿಸದ ಅಹಂಕಾರವಾಗುತ್ತದೆ. ಇದಕ್ಕೂ ಮತ್ತೊಬ್ಬ ವ್ಯಕ್ತಿಯ ಘನತೆಯನ್ನು ಮನ್ನಿಸದಿರುವ ನಿಲುವಿಗೂ ವ್ಯತ್ಯಾಸವೇನಿಲ್ಲ”. ಇಲ್ಲಿ ತರಿಕೆರೆಯವರ ಈ ಹೇಳಿಕೆಯಲ್ಲಿ ಗಮನಿಸಬೇಕಾದುದು “ಸಂಗಾತಿ” ಕಲಿತು-ಕಲಿ. ಡೆಮಾಕ್ರಟಿಕ್, ಆರೋಗ್ಯ, ಸಮಾಜ ಎಂಬ ಪದಗಳನ್ನು ಇವು ನೆಲದ ಮೇಲಿರುವವರ, ನೆಲವೇ ನೆಲೆ ಎಂದು ತಿಳಿದವರು ಬರೆಯಬಹುದಾದ ಸಾಲುಗಳು.
            ಜನೆವರಿ ೨೮/೨೦೧೨ ರಂದು “ದ ಹಿಂದೂ” ಪತ್ರಿಕೆಯ ಸಾಹಿತ್ಯಕ ಪುರವಣಿಯಲ್ಲಿ ಸುಪ್ರೀಂ ಕೋರ್ಟನ ಮಾಜಿ ಜಡ್ಜ್ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಹಾಲಿ ಚೇರ್‌ಮನ್‌ರೂ ಆಗಿರುವ ಮಾರ್ಕಂಡೆಯ ಕಾಟ್ಜು ಅವರು ಒಟ್ಟು ಭಾರತೀಯ ಸಾಹಿತ್ಯವನ್ನು ಗಮನದಲ್ಲಿರಿಸಿಕೊಂಡು ಪ್ರಶ್ನೆಯೊಂನ್ನು ಎತ್ತಿದ್ದಾರೆ - However, there is hardly any good art and literature today before us. Where are the Sarat Chandras and Premchands? Where are the Kabirs, the Dickens? There seems to be a vacuum in artistic and literary terms. Everything seems to have become commercialized. Writers write not to highlight the plight of the masses but to earn money.
            Today India thirsts for good literature. If someone writes about the people’s real problems it will spread like wildfire. But are our writers doing this? If they are not, why do they complain that nobody wants to read them? Art and literature must serve the people. Writers and artists must have genuine sympathy for the people and depict their sufferings. Like Dickens and Shaw in  England, Rousseau and Valtaire in France, Thomas Paine and Walt Whiteman in America, Chernyshevsky  and Gorky in Russia and  Sarat Chandra and Nazrul Islam in Bengal, they must inspire people to struggle for a better life. What can be really called human existence, and to create a better world, free of injustice. Only then will people respect them. ಈ ಹೇಳಿಕೆಯಲ್ಲೂ ಅಷ್ಟೆ. ನೆಲದಂತೆ ಹಂಬಲಿಸಿದ ಮನಸ್ಸಿನ ಕನವರಿಕೆಗಳಿವೆ. ಅಪಾರ ಸಂಖ್ಯೆಯ ಬರಹಗಾರರ ಮಧ್ಯ ಲೇಖಕರನ್ನು ಹುಡುಕುವ ಪ್ರಯತ್ನ ನಡೆದಿದೆ. ಪೀಠ, ಪ್ರಶಸ್ತಿ ಸಮ್ಮೆಳನಗಳಲ್ಲಿ ಕಳೆದುಹೋಗದೇ ರೈತನಂತೆ ತೊಡಗಿಸಿಕೊಂಡ ಲೇಖಕ ಮಹಾಶಯನ ಅನ್ವೇಷಣೆ ನಡೆದಿದೆ. ಪಥಬ್ರಷ್ಟತೆಗೆ ಸಾಹಿತ್ಯದ ಯಾವ ಪ್ರಕಾರವೂ ಸಾಕ್ಷಿಯಾಗಿಸಬಹುದು, ಆದರೆ ವಿಮರ್ಶೆಯನ್ನೇ ನಾನೆತ್ತಿಕೊಂಡಿದ್ದೇನೆ ಯಾಕೆಂದರೆ ಸೃಜನಶೀಲ ಕ್ರಿಯೆಯಲ್ಲಿಯೇ ಅತ್ಯಂತ ಎಚ್ಚರಿಕೆಯಿಂದ ನಡೆಯುವುದು ವಿಮರ್ಶೆ. ಆದರೆ ಈ ಎಚ್ಚರಿಕೆಯ ಕ್ರಿಯೆ ಹೇಗಿದೆ ಎನ್ನುವುದಕ್ಕೆ ಇಲ್ಲಿಯೊಂದು ಸಾಕ್ಷಿ.  
ಇದು ಕನ್ನಡದ ಪಾಲಿಗೆ ಇಡಿಯಾಗಿ ಸಮ್ಮತವಲ್ಲದಿದ್ದರೂ ಕೂಡ ನಮ್ಮ ಸಾಹಿತ್ಯ ಸೃಷ್ಠಿಯ ಒಂದು ಆಯಾಮವಾದ ವಿಮರ್ಶೆಯಲ್ಲಿ ಯಾವ ಬೆಳವಣಿಗೆ ಇದೆ ಎನ್ನುವುದನ್ನು ತರಿಕೆರೆ ಹೀಗೆ ದಾಖಲಿಸಿದ್ದಾರೆ. “ಈಗ ವಿಮರ್ಶೆ ಎಂಬುದು ರಾಜಕಾರಣ, ಧರ್ಮ, ಸಮಾಜ, ಫಿಲಾಸಫಿ ಹೀಗೆ ಲೋಕದ ಹತ್ತೆಂಟು ವಿಷಯಗಳನ್ನು ಮೈಮೇಲೆ ಎಳೆದುಕೊಂಡು ಚರ್ಚಿಸುತ್ತಿದೆ. ಈ ಹಲವು ವಿಷಯಗಳಲ್ಲಿ ಸಾಹಿತ್ಯವು ಮುಖ್ಯವಾಗಿದ್ದರೂ, ಅದೇ ಎಲ್ಲವೂ ಅಲ್ಲ. ಇದರಿಂದ ವಿಮರ್ಶೆಯು ಶುದ್ಧ ಸಾಹಿತ್ಯಗಿರಿ ಬಿಟ್ಟು ‘ಅಶುದ್ಧ’ವಾಗಿ, ಈ ಕಾರಣಕ್ಕೇ ತನ್ನ ಕಾಲ ಮೇಲೆ ನಿಂತುಕೊಳ್ಳಬಲ್ಲ ವ್ಯಕ್ತಿತ್ವ ಪಡೆಯುತ್ತ, ಸಂಸ್ಕೃತಿ ಚಿಂತನೆಯಾಗಿ ರೂಪಾಂತರಗೊಳ್ಳುತ್ತಿದೆ. ವಿಮರ್ಶೆ ಓದುಗರ ಜೊತೆಗೆ ಸಂವಾದ ಏರ್ಪಡಿಸುವ ಕೆಲಸಕ್ಕಿಂತ ಹೆಚ್ಚಾಗಿ, ಲೇಖಕರನ್ನು ಮನ್ನಣೆಯ ಜಾಗಗಳಿಗೆ ಹತ್ತಿಸುವ ಏಣಿಯ ಕೆಲಸವನ್ನು ಸಮಕಾಲೀನ ಸಂದರ್ಭ ಹೇರಿಬಿಟ್ಟಿರುವುದು. ಹೀಗಾಗಿ ವಿಮರ್ಶೆ ಏಕಕಾಲಕ್ಕೆ ಬುದ್ಧಿ ಹೇಳಿಸಿಕೊಳ್ಳುವ ದಡ್ಡನಂತೆ, ಪರಿಚಾರಿಕೆ ಮಾಡುವ ಊಳಿಗದವನಂತೆ, ಪ್ರಾಡಕ್ಟನ್ನು ಪ್ರಚಾರ ಮಾಡುವ ಜಾಹಿರಾತುದಾರನಂತೆ, ಬಹುರೂಪಿಯಾಗಿ ಕಾಣುತ್ತಿದೆ.” ಈ ವಿಮರ್ಶೆಯ ಅದ್ವಾನಗಳನ್ನು ಕುರಿತು ಬೇರೆ ಬೇರೆ  ಕಾಲ, ಘಟ್ಟಗಳಲ್ಲಿಯೂ ಚರ್ಚೆ ನಡೆದಿರುವುದಕ್ಕೆ ವಸಂತ ಬನ್ನಾಡಿ ತಮ್ಮ ‘ಇಗೋ ಅರಿವೆ’ಯಲ್ಲಿ ಒಂದು ನಿದರ್ಶನವನ್ನು ಕೊಟ್ಟಿದ್ದಾರೆ. ಇದು ರಿಲ್ಕೆ ಮತ್ತು ಫ್ರಾನ್ಜ್ ಕಾಫ್ಕರ ಮಧ್ಯದ ಪತ್ರ ವ್ಯವಹಾರ. “ಸಾಹಿತ್ಯ ವಿಮರ್ಶೆಯನ್ನು ಆದಷ್ಟು ಕಡಿಮೆ ಓದು, ಸಾಹಿತ್ಯ ವಿಮರ್ಶೆಯೆನ್ನುವುದು ಪಕ್ಷಪಾತದ ಅಭಿಪ್ರಾಯಗಳಾಗಿರುತ್ತದೆ. ಜಡ್ಡುಕಟ್ಟಿ ಅರ್ಥಹೀನವಾಗಿ, ನಿರ್ಜೀವವಾಗಿರುತ್ತದೆ. ಅಥವಾ ಇಂದು ಈ ಅಭಿಪ್ರಾಯವನ್ನು ಗೆಲ್ಲಿಸುವ, ನಾಳೆ ಮತ್ತೊಂದು ಅಭಿಪ್ರಾಯವನ್ನು ಗೆಲ್ಲಿಸುವ ಜಾಣತನದ ಪದಕ್ರೀಡೆಯಾಗಿರುತ್ತದೆ.” 
            ಈ ಮೇಲಿನ ಕೆಲವು ಆರೋಪಗಳನ್ನು, ಹೇಳಿಕೆಗಳನ್ನು ಸಾಹಿತ್ಯವನ್ನು ಗಂಭೀರವಾಗಿ ಎತ್ತಿಕೊಂಡವರು ಪರಿಗಣಿಸುವದಾದರೆ ಒಟ್ಟು ಸೃಜನಶೀಲ ಪರಿಸರದಲ್ಲಿ ಧ್ಯಾನಪರತೆಯ ಕೊರತೆಯಾಗಿರುವದಂತೂ ಸ್ಪಷ್ಟವಾಗುತ್ತದೆ. ಸಹಜತೆಹಿಂದ ದೂರ ಸರಿದು ರಾಜಕೀಯದ, ಅಧಿಕಾರದ, ಪ್ರಾಚಾರದ ಹುಚ್ಚು ನಶೆ ಹುಟ್ಟಿಸಿಕೊಂಡ ನಮ್ಮ ಸಾಹಿತ್ಯ ಮತ್ತು ಸಾಹಿತಿಗಳಿಂದ ಏನನ್ನು ನಿರೀಕ್ಷಿಸುವುದು? ದೊಡ್ಡ ಪ್ರಶ್ನೆಯಾಗಿದೆ. ಕವಿಋಷಿ, ದೃಷ್ಠಾರ ಎನ್ನುವ ಪದಗಳು ಹೋಗಲಿ ಒಬ್ಬ ಸಾಮಾನ್ಯ ಮನುಷ್ಯನ ಸ್ಥರದಿಂದಲೂ ಆತ ದೂರ ಎನಿಸುತ್ತಿದೆ. ದಿನೇ ದಿನೇ ಜನಸಾಮಾನ್ಯರು ಸಾಹಿತಿಗಳನ್ನು ಯಾವ ಗುಮಾನಿಯಿಂದ ಗಮನಿಸುತ್ತಿದ್ದಾರೆ ಎನ್ನುವುದೂ ಆತನಿಗೆ ಗೊತ್ತಾಗುತ್ತಿಲ್ಲವೆ? ಅಥವಾ ಈ ಭಂಡತನದ ಪ್ರತಿಪಾದನೆಯೆ ಆತನ ಉದ್ದೇಶವೆ? 
            ಇದರಿಂದ ಒಂದಂತು ಸತ್ಯ ಇದು ನಾವು ಲೇಖಕರು ನಮ್ಮ ನಮ್ಮ ಭ್ರಮೆಗಳಿಂದ ಹೊರಬಂದು ವ್ಯಕ್ತಿ ನಿರಸನಗೊಳಿಸಿಕೊಳ್ಳಬೇಕಾದ ಸಂದರ್ಭವಂತೂ ಸತ್ಯ. ಜನ ಮತ ಹಾಕುವುದೇ ಯಾವ ರೀತಿ ಒಬ್ಬ ಜನ ಪ್ರತಿನಿಧಿಯ ಅರ್ಹತೆಯಾಗಲಾರದೊ ಹಾಗೆಯೇ ನಮ್ಮ ಸಮ್ಮೇಳನ, ಪೀಠ ಮತ್ತು ನಮ್ಮ ಪ್ರಶಸ್ತಿಗಳೇ ನಮ್ಮ ಸಾಹಿತ್ಯದ ಅಸ್ತಿತ್ವಗಳ ಮಾನದಂಡಗಳಾಗಲಾರವು. ಅಲ್ಲಮನಂತೆ ಆಳವಾಗುತ್ತಾ ಹೋಗುವವರ ಜೀವನ ದರ್ಶನ ನೀಡಬಲ್ಲ ದೃಷ್ಠಾರನ ನೆಲೆಯ ಸಾಹಿತಿಗಳ ನಿರೀಕ್ಷೆ ಈ ಸಮಾಜಕ್ಕಿದೆ. ಸ್ವಯಂ ಸಾಂಪ್ರದಾಯಿಕತೆಯಿಂದ ಬಿಡುಗಡೆ ಹೊಂದಿ ತನ್ನವರನ್ನು ಮೌಡ್ಯಗಳಿಂದ ಹೊರತರಬಲ್ಲ ಲೇಖಕನನ್ನು ಈಗಲೂ ಜನ ಕಾಯುತ್ತಿದ್ದಾರೆ. ಸಾಂಪ್ರದಾಯಿಕತೆಯಿಂದ ಮುಕ್ತಿ ಬೇಕೇ ಬೇಕು ಯಾಕೆಂದರೆ ಅದು ಕಾಲದ ಪರಿವೆಯಿಲ್ಲದೆ ನಿಂತ ನೀರು. ಅದು ನಿರಂತರವಲ್ಲ.
ಹಿಂದೆಂದಿಗಿಂತಲೂ ಲೇಖಕ ಹಾಗೂ ಓದುಗನ ಪಾಲಿಗೆ ಸಾಹಿತ್ಯದ ವರ್ತಮಾನ ಸಂಕೀರ್ಣವಾಗಿದೆ. ಇದು ಒಬ್ಬ ಜನಮುಖಿ ಲೇಖಕ ತನ್ನ Egocentric Utopia ದಿಂದ ಹೊರಬಂದು ತನ್ನ ಸುತ್ತಲಿನದೆಲ್ಲವನ್ನೂ ತನ್ನೊಳಗೆ ಸಮಾವಿಷ್ಠಗೊಳಿಸಿಕೊಂಡು ಚಿಂತಿಸಬೇಕು. ಅಂತ ಕೆಲಸ ಕನ್ನಡದಲ್ಲಿ ಆಗುತ್ತಿದೆ ಎನ್ನುವುದಕ್ಕೆ ಇಂದಿನ ಈರ್ವರು ಲೇಖಕರು ಸಾಕ್ಷಿ. ಸಿ.ಎನ್.ಆರ್ ಅವರು ‘For Reasons of Their own’ ಬಗ್ಗೆ ಬರೆಯುತ್ತ Prof Sudheer Chandra Hajela ಕನ್ನಡ ಆಲೋಚನೆಯ ಗರಿಮೆ ಏನು ಅನ್ನುವುದನ್ನು ಬಹಳ ಸುಂದರವಾಗಿ ಹೇಳಿದ್ದಾರೆ. “Prof C.N. Ramachandran seems to believe that the colonial hegemony of the pre- independence era has taken new dimensions in the wake of globalization and the commercialization of literature, the identity of regional and indigenous literature is to be preserved by a close scrutiny of the ancient myths, folklores and poetics available in oral and written literatures with a spirit to intervene with the given ‘constructs’ and modulate them to represent India’s hither to neglected social and cultural identities/groups and communities.”
ಈ ಆಲೋಚನೆ ಆಕಾರ ಪಡೆದ ಪ್ರಕಾರವಷ್ಟೇ ಭಿನ್ನ ಆದರೆ ಅದೇ ಚಿಂತನೆ. ಒಂದು ಕಡೆಗೆ ಸಮಾಧಾನ ಮತ್ತೊಂದು ಕಡೆ ಮತ್ತೆ ಎಚ್ಚರಿಕೆ. ಮೈ ಮರೆಯಬಹುದಾದ ಲೇಖಕರಿಗೆ ಜವಾಬ್ದಾರಿಯ ಪ್ರಶ್ನೆ. ಇಂದಿನ ಇನ್ನೊರ್ವ ಲೇಖಕರಾದ ಪ್ರೊ.ವಿ.ಕೃಷ್ಣಮೂರ್ತಿರಾವ್ ಅವರು “ಶೃತಿ ಹಿಡಿದು ಶೂನ್ಯದಲಿ” ಸಂಕಲನದ ‘ಅರೆಮತ್ತ ರಸಿಕ ಗೆಳೆಯನ ಉವಾಚ-೨’ ಕವಿತೆಯಲ್ಲಿ ಇದನ್ನೇ ಬಹಳ ಸುಂದರವಾಗಿ ಪ್ರಶ್ನಿಸಿದ್ದಾರೆ-
ನೀನು ತೆರೆದು ನೋಡುವ ಬುಕ್ಕು
ಓದಲಿರುವ ಕವನಗಳಿಂದ
ಜೋಡಿಸಿಟ್ಟಿರುವ ಆಲ್ಬಮ್ಮುಗಳಿಂದ
ಹಾಲು ರೂಮು ಗೋಡೆಗೆ  ನೇತು
ಹಾಕಿದ ಪ್ರಶಸ್ತಿ ಮಾನ ಪತ್ರ
ಅಕಾಡೆಮಿ ಪ್ರತಿಷ್ಠಾನ ಬಹುಮಾನ
ನೆನಪಿನ ಕಾಣಿಕೆಗಳಲ್ಲಿ ನಿನ್ನನ್ನು
ನೀನೊಮ್ಮೆ ಕಾಣ ಬಲ್ಲೆಯೋ ನಾ ಕಾಣೆ.

ಮಾರ್ಟು ಮಾಲುಗಳಿಗೊಮ್ಮೆ ಹೋಗಿ ನೋಡು
ಮೇಲಿನವರನ್ನೊಲಿಸಲು
ವಿವಿಧ ಭಂಗಿಯ ಮಾಡೆಲ್ಲುಗಳು
ಲೆಕ್ಕವಿಲ್ಲದ ಈ ಸಾಲುಗಳಲ್ಲಿ
ನಿನ್ನಂತೆ ಇರಬಹುದು ಸಂಧರ್ಭಕ್ಕೆ ತಕ್ಕಂತೆ
ಅಸಲು ಕಳೆದುಕೊಂಡು ಮುಲಾಜಿಗೆ
ಬಸಿರಾದ ಎಷ್ಟೊಂದು ನಕಲಿ ವೇಷಗಳು.

            ಪ್ರಕಾಶನ/ಪ್ರಕಟಣೆಯ ಪ್ರಶ್ನೆ ಬಂದಾಗಲೂ ಅಷ್ಟೆ. ಪುಸ್ತಕ ಸಂಸ್ಕೃತಿಯ ಹೆಸರಿನಲ್ಲಿ ಪುಸ್ತಕ ತ್ಯಾಜ್ಯದ ಪ್ರಶ್ನೆ ಗಂಭೀರವಾಗುತ್ತಿದೆ. ಪ್ರಕಟಣವಾಗುವ ಸಾವಿರ ಸಾವಿರ ಪುಸ್ತಕಗಳಲ್ಲಿ ಓದಲು ಯೋಗ್ಯವಾದ ಪುಸ್ತಕಗಳನ್ನು ಆಯ್ದುಕೊಳ್ಳುವುದೇ ಪ್ರಶ್ನೆಯಾಗಿದೆ. ನಿಜವಾಗಿಯೂ ವೃತ್ತಿ ಗೌರವವನ್ನು ಉಳಿಸಿಕೊಂಡು ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸುವವರನ್ನೂ ಈ ಕಾಳಸಂತೆಯಲಿ ನಾವು ಕಳೆದುಕೊಳ್ಳುವ ಭಯವಿದೆ. ಒಟ್ಟಾರೆ ಹೇಳಬೇಕೆಂದರೆ ಥರಾವರಿಯ ಈ ವರ್ತಮಾನದಲ್ಲಿ ಧ್ಯಾನಪರತೆಯ,  ವ್ಯಕ್ತಿನಿರಸನತೆಯ ದೊಡ್ಡ ಕೊರತೆ ಎದ್ದು ಕಾಣುತ್ತಿದೆ. ಇದು ಅಳಿಯಬೇಕಿದೆ. ಈ ವೇಳೆಯಲ್ಲಿ ಕುವೆಂಪು ಅವರ ಪದ್ಯ ನೆನಪಾಗುತ್ತದೆ-
ಕಾಳಿಂಗನ ತುಳಿದಂದದಿ
ತುಳಿ ತುಳಿ ತುಳಿ
ಹತ್ತಿ ತುಳಿ, ಮೆಟ್ಟಿ ತುಳಿ, ಮತ್ತೆ ತುಳಿ, ಒತ್ತಿ ತುಳಿ

            ಇದು ನಮ್ಮೊಳಗೇ ನಡೆಯಬೇಕಾದುದು, ನಮ್ಮುಳುವಿಗೆ ನಡೆಯಬೇಕಾದುದು, ನಮ್ಮಿಂದಲೇ ನಡೆಯಬೇಕಾದುದು. ಅಂದಾಗ ಮಾತ್ರ ಆ ಮೇರು ಓದುಗರ ಎದೆಯಲ್ಲಿ ಆ ಏರು ಸಾಧ್ಯವಾಗಬಹುದೇನೋ? ಸ್ವಚ್ಛವಾದ ಮನಸ್ಸನ್ನು ಸಾಕ್ಷಿಯಾಗಿಸಿಕೊಂಡು ನಾವು ಹಾಡಬಹುದೇನೋ. ಪ್ರಶಸ್ತಿ, ಪುರಸ್ಕಾರಗಳ ಪೊಗರಿನಿಂದ ಹೊರಬಂದು ನಾವು ಮಣ್ಣಂತೆ ನಿರಾಳವಾದ ಕುವೆಂಪು ಪ್ರಾರ್ಥನೆಯ ಆಳ ಅರಿಯಬಹುದೇನೊ-
ನಿಮ್ಮ ಬಾಂದಳದಂತೆ
ನನ್ನ ಮನವಿರಲಿ
ನಿನ್ನ ಆಗಸದಂತೆ
ನನ್ನ ಎದೆಯಿರಲಿ
ನಿನ್ನಾತ್ಮದಾನಂದ ನನ್ನದಾಗಲಿ
ನಿನ್ನೊಳಗಿರುವ ಭಾಗ್ಯ ನನ್ನೆಡೆಗೆ ಬರಲಿ.
                                                                                                            ಧನ್ಯವಾದಗಳು

ಸಂದರ್ಭ : ಡಾ.ಸಿ.ಎನ್.ರಾಮಚಂದ್ರನ್ ಅವರ ‘For Reasons of Their own’ ಮತ್ತು
             ಪ್ರೊ.ವಿ.ಕೃಷ್ಣಮೂರ್ತಿರಾವ್ ಅವರ ‘ಶೃತಿ ಹಿಡಿದು ಶೂನ್ಯದಲಿ’ ಪುಸ್ತಕ ಬಿಡುಗಡೆ  
                     ವಾಡಿಯಾ ಸಭಾಂಗಣ ಬೆಂಗಳೂರು ದಿನಾಂಕ: ೦೫/೦೨/೨೦೧೨


Monday, February 6, 2012

ತುಘಲಕ್: ವಿಮರ್ಶೆ-ಪರಾಮರ್ಶೆ


                                                     ತುಘಲಕ್: ವಿಮರ್ಶೆ-ಪರಾಮರ್ಶೆ

Let us not seek to satisfy our thirst drinking from the cup of bitterness and hatred. We must forever conduct our struggle on the high plane of dignity and discipline. We must not allow our creative protest to degenerate into physical violence. Again and again we must rise to the majestic heights of meeting physical force with soul force.
                                                                                     
                                      -Martin Luther King Junior,I Have A Dreame
ಭಾರತೀಯ ರಂಗ ಪರಿಕಲ್ಪನೆ ಒಂದು ಸಿದ್ಧಾಂತವಾಗಿ ನಮ್ಮನ್ನು ಕಾಡಲಿಲ್ಲ. ಯಾವುದು ನಮ್ಮದೋ ಅದು ಸಾಮಾನ್ಯವಾಗಿ ಹಾಗೆ ಕಾಡುವುದು ಇಲ್ಲ. ನವೋದಯದ ಉತ್ತರಾರ್ಧದಲ್ಲಿ ಮತ್ತು ಇಡೀ ನವ್ಯದ ಕಾಲಘಟ್ಟದಲ್ಲಿ ನಮ್ಮ ರಂಗ ಇತಿಹಾಸದಲ್ಲಿ ಒಂದು ವಿಶಿಷ್ಠ ಬದಲಾವಣೆಯಾಯಿತು. ಈ ಬದಲಾವಣೆಯನ್ನು ಬೆಳವಣಿಗೆ ಎನ್ನಬೇಕೋ, ಪ್ರಭಾವ ಎನ್ನಬೇಕೋ, ಪರಿಣಾಮ ಎನ್ನಬೇಕೋ ಅದು ಇನ್ನೂ ಚರ್ಚೆಗೆ ಯೋಗ್ಯ ವಿಷಯ. ನಾನು ಆರಂಭದಲ್ಲಿ ಹೇಳಿದೆ, ನಾಟ್ಯಶಾಸ್ತ್ರ ನಮಗೆ ಒಂದು ಸಿದ್ಧಾಂತವಾಗಿ ಕಾಡಲಿಲ್ಲ. ಕಾಡಿದ್ದರೂ ಅದರ ತೀವ್ರತೆ ಯೂರೋಪಿನ ರಂಗಸಿದ್ಧಾಂತದಷ್ಟು ಪ್ರಖರವಾಗಿರಲಿಲ್ಲ. ಇಲ್ಲಿ ಇನ್ನೂ ಒಚಿದು ಓದು  ಸಾಧ್ಯವಿದೆ. ಬಹುತೇಕ ಗಾಂಧಿ ಯುಗದಿಂದ ಇಂದಿರಾ ಗಾಂಧಿಯವರೆಗಿನ ಆ ಸಂದರ್ಭವೇ ಹೀಗೆ. ಇಲ್ಲಿ ಪಶ್ಚಿಮದಿಂದ ಬಂದುದೆಲ್ಲವೂ ಆಕರ್ಷಕವಾಗಿ ಕಂಡಿತು. ಆತ್ಮೀಯವೆನ್ನಿಸಿತು ಮತ್ತು ವರ್ತಮಾನವನ್ನು ಇದರಿಂದ ಚೆನ್ನಾಗಿ ವಿಶ್ಲೇಷಿಸಬಹುದು ಎನ್ನುವ ಭ್ರಮೆಯನ್ನೂ ಸೃಷ್ಟಿಸಿತು. ನಾನಿದನ್ನು ಈಗ ಭ್ರಮೆ ಎನ್ನುತ್ತಿದ್ದೇನೆ, ಯಾಕೆಂದರೆ ನಮ್ಮ ರಂಗಚಿಂತನೆ ಅದರಿಂದ ಹೊರಬಂದು ಮತ್ತೆ ಮೂಲದತ್ತಲೋ, ಹೊಸದರತ್ತಲೋ ತವಕಿಸುವ ಹೊರಳು ದಾರಿಯಲ್ಲಿದೆ.
ಸನ್ಮಿತ್ರ ಡಾ.ಎಚ್.ಎಲ್. ಮಲ್ಲೇಶಗೌಡರ ‘ತುಘಲಕ್ ದರ್ಬಾರಿನಲ್ಲಿ’ ಓದುತ್ತಿದ್ದರೆ, ತುಘಲಕ್‌ನಂತಹ ದ್ವಂದ್ವ ಮನಸ್ಥಿತಿಯ ಅನೇಕ ಪಾತ್ರಗಳು ಕಾರ್ನಾಡರ ‘ತುಘಲಕ್’ನ ಆಸುಪಾಸಿನಲ್ಲಿ ಭಾರತೀಯ ಸಾಹಿತ್ಯದಲ್ಲಿ ಬಂದಿರುವುದು ನೆನಪಾಗುತ್ತದೆ. ಬಾದಲ್ ಸರ್ಕಾರ್‌ರ ‘ಇಂದ್ರಜಿತ್’, ವಿಜಯ ತೆಂಡೂಲ್ಕರ್‌ರ ‘ಘಾಸೀಂ ರಾಮ್ ಕೋತ್ವಾಲ್’, ಇಂದಿರಾ ಪಾರ್ಥಸಾರಥಿಯವರ ‘ಔರಂಗಜೇಬ್’, ಧರ್ಮವೀರ ಭಾರತೀಯವರ ‘ಅಂಧಾಯುಗ’ ದಲ್ಲಿನ ಯುಯುತ್ಸು ಅಥವಾ ಕಂಬಾರ, ಕುಸನೂರು ಮತ್ತು ಚಂದ್ರಶೇಖರ ಪಾಟೀಲರ ನಾಟಕದಲ್ಲಿಯ ಅನೇಕ ಪಾತ್ರಗಳಾಗಿರಬಹುದು. ಇವೆಲ್ಲಾ ಅಲ್ಬರ್ಟ್ ಕಾಮೂವಿನ ‘ಕಲಿಗುಲ’ದ, ಕಾನಾರ್ಡರ ತುಃಲಹನ ಅನ್ಯ ಮುಖಗಳೇ.
ಯೂರೋಪಿನ, ಮನುಷ್ಯನೊಳಗಿನ ಈ ಓದನ್ನು ನಾನು ಒಂದು ಸಾಧ್ಯತೆ ಎಂದು ತಿಳಿದುಕೊಂಡಿದ್ದೇನೆ. ಈ ಕಾರಣಕ್ಕಾಗಿಯೇ ಭಾರತೀಯ ನಾಟಕಕಾರ ಒಂದು ದೊಡ್ಡ ಪಡೆ ಕಾಲಾಂತರದಲ್ಲಿ ಪೂಜೆ ಮತ್ತು ಆರಾಧನೆಯ ಹಂತದಿಂದ ಕೆಳಗಿಳಿದು, ನಮ್ಮ ಪುರಾಣ, ಕಾವ್ಯ, ಜಾನಪದ ಮತ್ತು ಇತಿಹಾಸದೊಳಗಿನ ಪಾತ್ರಗಳನ್ನು ಹೀಗೆ ಓದಲಾರಂಭಿಸಿತು. ಗಿರೀಶ ಕಾರ್ನಾಡರ ‘ತುಘಲಕ’ ಅಂತಹ ಒಂದು ಓದು ಅಷ್ಟೇ. ಯಾವುದನ್ನು ಇತಿಹಾಸ ಆಗಾಧ, ವಿಚಿತ್ರ ಎಂದು ಸಾರಿ ಒಂದು ರೀತಿಯ ಉದಾಸೀನದ ಲೋಕಕ್ಕೆ ತಳ್ಳಿಬಿಟ್ಟಿತ್ತೋ ಅದನ್ನು ಸಹಜವಾಗಿಸುವ, ಸಮೀಪವಾಗಿಸುವ ಕ್ರಿಯೆ. ಈ ಸಂದರ್ಭದ ಸೃಜನಶೀಲ ಮತ್ತು ಭಾಷಾಂತರದ ಮುಖೇನ ಬಂದ ಅನೇಕ ನಾಟಕ ರಚನೆಗಳನ್ನು ಗಮನಿಸಿ. ಷೇಕ್ಸ್‌ಪಿಯರ್‌ನ To be or not to be ಆಲೋಚನೆಯೇ ಇವುಗಳ ಮನೋಸ್ಥಿತಿ. ಸ್ವಲ್ಪ ಹಿಂದೆ ಸರಿದು ಶ್ರೀರಂಗರ ‘ಶೋಕಚಕ್ರ’, ಪರ್ವತವಾಣಿಯವರ ‘ಭೂತಗಳು’, ಕಾರ್ನಾಡರ ಸಮಕಾಲೀನರಾದ ಲಂಕೇಶರ ‘ದೊರೆ ಈಡಿಪಸ್’, ಇವೆಲ್ಲವೂಗಳಲ್ಲಿಯೂ ಮನುಷ್ಯನ ಮನೋದ್ವಂದ್ವ ಒಂದು ಬಿಡಿಸಲಾಗದ ಕಗ್ಗಂಟು. ಈ ತೆರನಾದ ಸೃಷ್ಟಿಗೆ ಈ ಸಂದರ್ಭದ ಸಾಮಾಜಿಕ ಮತ್ತು ರಾಜಕೀಯ ಸಂದರ್ಭಗಳ ಕೊಡುಗೆ ಖಂಡಿತವಾಗಿಯೂ ಇದೆ.
ಇತಿಹಾಸವನ್ನಾಧರಿಸಿದ ನಾಟಕವೊಂದು ಪ್ರಸ್ತುತವಾಗುತ್ತದೆ. ಯಾಕೆಂದರೆ ಇತಿಹಾಸವೆನ್ನುವುದು ಘಟನೆಗಳ ಪುನರಾವರ್ತನೆಯಲ್ಲದೇ ಮತ್ತೇನೂ ಅಲ್ಲ. ಬದುಕಿನ ತೊಂಬತ್ತೈದನೇ ವಯಸ್ಸಿನಲ್ಲಿ ಖುಷ್ವಂತ್‌ಸಿಂಗ್ ಬರೆದ, Absoulute Khushwanthದಲ್ಲಿಯ ಈ ಸಾಲುಗಳನ್ನು ನೋಡಿ.

Partition was bloodiest exchange. I do not think either Pandit Neharu or Jinnah had imagined this level of violence. In any case both of them seemed to live in the dream world of their own.

Over 10 million people were uprooted from their homes. In a couple of months a million were slaughtered in cold blood. Almost over night, Muslims, Hindus and Sikhs, who had co-existed amicably over centuries, became sworn enemies.
                             ಈ ಸಾಲುಗಳ ಹಿನ್ನೆಲೆಯಿಂದ ನೋಡಿ. ತುಘಲಕ್ ದರ್ಬಾರು ಮುಗಿದಿದೆ ಎನ್ನಿಸುವುದೇ ಇಲ್ಲ. ಧರ್ಮಕಾರಣ, ರಾಜಕಾರಣದ ಸಿಲಸಿಲಾ ಕೊನೆಯಾಗುತ್ತದೆ ಎನಿಸುವುದಿಲ್ಲ. ವರ್ತಮಾನಕ್ಕೆ ಬರೋಣ. ಬಾಬರ್ ಮಸೀದಿಯ ಧ್ವಂಸ, ಗೋಧ್ರಾ ಹತ್ಯಾಕಾಡ, ನಮ್ಮ ಕರಾವಳಿ ತೀರದುದ್ದಕ್ಕೂ ನಡೆದ ಚರ್ಚುಗಳ ಮೇಲಿನ ದಾಳಿ, ಪಾದ್ರಿಗಳ ಜೀವಂತ ದಹನ, ಪ್ರತಿಫಲವಾಗಿ,

The BJP got what it wanted. It reaped a rich electoral harvest.
ಖುಷ್ವಂತ ಸಿಂಣ್‌ರ ಇನ್ರ್ನೆಂದು ಮಾತು,  ’’Advani , more than any one else, sensed that Islaofobia was deeply ingrained in the minds of mollions of Hindus and it needed only a spark to set it a blaze”. ಬಾಬರಿ ಮಸೀದಿಯ ಧ್ವಂಸ, ಸಾವಿರಾರು ಅಮಾಯಕರನ್ನು ಕೊಂದು ಒಬ್ಬ ವ್ಯಕ್ತಿಗೆ, ಒಂದು ಪಕ್ಷಕ್ಕೆ, ಲಾಭ ತಂದು ಕೊಟ್ಟಂತೆ ನಮ್ಮ ದೇಶ ವಿಭಜನೆಯ ಕತೆಯಾಯಿತು. ಹಾಗೆಯೇ ತುಘಲಕನ ರಾಜಧಾನಿ ಬದಲಾವಣೆಯ ವ್ಯವಹಾರವೂ ಕೂಡ. ಅದು ಅಜೀಜ್ ಹಾಗೂ ಆಜಮರಿಗೆ ಲಾಭ ತಂದಿತಷ್ಟೇ. ಪರಿಣಾಮವನ್ನು ಗ್ರಹಿಸಲಾಗದ ನಾಯಕರು ಮೂರ್ಖರಾಗುತ್ತಾರೆ. ನಗೆಪಾಟಲಾಗುತ್ತಾರೆ. ಈ ಕಾರಣಕ್ಕಾಗಿ ತುಘಲಕ್ ಮೂರ್ಖ ಅರಸ ಆದ.
ನಾನು ಹೇಳುತ್ತಿರುವುದಿಷ್ಟೇ. ಧರ್ಮಕ್ಕಾಗಿ ರಾಜಕಾರಣ, ರಾಜಕಾರಣಕ್ಕಾಗಿ ಧರ್ಮ, ಹೀಗೆ ಅದಲು-ಬದಲು, ಕಂಚಿ ಬದಲನ್ನು ಜನರೊಂದಿಗೆ ಆಡುವ ತುಘಲಕರು ಪುನರಾವರ್ತನೆ ಆಗುತ್ತಲೇ ಇದ್ದಾರೆ. ಔರಂಗಜೇಬ್, ನೆಹರೂ, ಜಿನ್ನಾ, ಪಟೇಲ್, ಅದ್ವಾನಿ, ಹೆಸರುಗಳಷ್ಟೇ ಭಿನ್ನ. ಇವರೆಲ್ಲಾ ತಮ್ಮ ಸ್ವಾರ್ಥದ ಕಲ್ಪನೆಗಳಿಗೆ ಇಡೀ ದೇಶ, ಜನಾಂಗಗಳನ್ನೇ ಮೃತ್ಯವಿನ ಬಾಯಿಗೆ ತಳ್ಳಲು ಹೇಸಿದವರಲ್ಲ. ಒಟ್ಟಾರೆ ರಾಜಕಾರಣ, ಅದಕ್ಕೊಂದು ನೆಪ, ಜೊತೆಗೆ ಧರ್ಮದ ಆಫೀಮು, ಹದಿನಾಲ್ಕನೇ ಶತಮಾನದಲ್ಲಿ ತುಘಲಕ್ ಮಾಡಿದ್ದು ಇದನ್ನೇ.
ಡಾ. ಮಲ್ಲೇಶಗೌಡರು ಇಡೀ ತುಘಲಕನ ವ್ಯಕ್ತಿತ್ವವನ್ನು, ಆಡಳಿತವನ್ನು ಒಂದು ವಾಕ್ಯದಲ್ಲಿ ಕಟ್ಟಕೊಟ್ಟಿದ್ದಾರೆ. ನಿಜವಾಗಿಯೂ ತುಘಲಕನದು ಆದರ್ಶವಲ್ಲ, ಆವೇಶ ಮಾತ್ರ. ಇದನ್ನೇ ಕುರ್ತಕೋಟಿಯವರು His character transcends his actionಅಂತ ಸ್ವಲ್ಪ ಭಿನ್ನವಾಗಿ ಹೇಳಿರುವುದು. ಮ್ಯಾಕಬತ್‌ನಂತೆ, ಓಡಿಪಸ್, ಹ್ಯಾಮ್ಲೆಟರಂತೆ ಈ ತುಘಲಕ ದ್ವಂದ್ವದ ಮನುಷ್ಯ.  ಇವನ ದ್ವಂದ್ವಕ್ಕೆ ಕಾರಣ ಹತ್ತಾರು. ವಿವೇಚನಾರಹಿತ ಹೆಜ್ಜೆಗಳು ಮತ್ತು ಹಿಡಿತದಲ್ಲಿಲ್ಲದ ಆಡಳಿತಗಾರರು. ಮಲ್ಲೇಶಗೌಡರ ಪದಗಳಲ್ಲಿಯೇ ಹೇಳಬೇಕೆಂದರೆ ‘ಈ ನಾಟಕದ ಪಾತ್ರಗಳ ಬೇರೆ ಬೇರೆ ಸ್ವಭಾವಗಳೆಲ್ಲಾ ತುಘಲಕನ ಪಾತ್ರವೊಂದರಲ್ಲಿಯೇ ನರ್ತನ ಮಾಡಿವೆ.’

·        “The personality of Mohammad Tugalak is so vast that, its parts are distributed among the other characters of the play”.
ಮಲ್ಲೇಶಗೌಡರು ತುಘಲಕ ದರ್ಬಾರಿನ ಮೂಲಕ ಏನನ್ನು ಹೇಳಲು ಯತ್ನಿಸುತ್ತಿದ್ದಾರೆ?   ತಿಳಿಸುವುದಕ್ಕೂ ಮುಂಚೆ ಕಾನಾರ್ಡರ ತುಘಲಕನ್ನು ನೋಡಿಬಿಡೋಣ-
          ಮಧ್ಯಯುಗೀನ ಭಾರತೀಯ ಸಂದರ್ಭದಲ್ಲಿ ಖಿಲ್ಜಿಗಳ ನಂತರ ಬಂದವನು ಘಿಯಾಸುದ್ದೀನ್ ತುಘಲಕ್. ಹಿಂದೂ ಹೆಂಗಸನ್ನು ಮದುವೆಯಾಗಿ, ರಾಜ್ಯಭಾರ ನಡೆಸಿದ ಘಿಯಾಸುದ್ದೀನ್‌ನ ಕುಡಿಯೇ ಮಹಮ್ಮದ್ ಬಿನ್ ತುಘಲಕ್. ಇವನ ಮೂಲ ಹೆಸರು ಜುನಾಖಾನ್. ಈತನ ಒಂದು ಕನಸು, ನೂತನ, ಸರ್ವಸುಂದರ ರಾಜ್ಯವನ್ನು ನಿರ್ಮಾಣ ಮಾಡಬೇಕು ಎಂಬುದು. ಆದರೆ ಸಂಧರ್ಭ ಎಂತಹದು? ಆಳುವ ತಾನು, ಅಲ್ಪಸಂಖ್ಯಾತ ಮುಸ್ಲಿಂ. ಪ್ರಜೆಗಳು ಬಹುಸಂಖ್ಯಾತ ಹಿಂದೂಗಳು. ದಿಲ್ಲಿಯ ಗದ್ದಿಗೆಯ ಸುತ್ತ ಅಮೀರರು, ಅಮೀರರ ಸುತ್ತ ಮುಲ್ಲಾಗಳು. ಧರ್ಮದ ಪ್ರಭಾವಳಿ. ಅಲ್ಪಸಂಖ್ಯಾತ ಮುಸ್ಲಿಮರು ಒಂದು ಕಡೆ ಎಂದೂ ಈತನ ವಿಶ್ವಾಸಕ್ಕೆ ಪಾತ್ರರಾಗದ ಹಿಂದೂಗಳು ಇನ್ನೊಂದು ಕಡೆ. ಸೋದರಿಯ ಮಗ ದೀನ್ ಘುರ್ಸೈಫನ ದಂಗೆ, ಉಲ್‌ಮುಲ್ಕನ ದಾಳಿ, ದೋಅಬ್‌ನಲ್ಲಿ ಭೀಕರ ಬರಗಾಲ, ಮುಂಗೋಲರ ಕಿರಿಕಿರಿ, ಮುಲ್ತಾನಿನ ಖುಸ್ಸುಖಾನನ ಪ್ರತಿಭಟನೆ, ಗುಜರಾತಿನ ತಾಷ್ ಎನ್ನುತ್ತಿದ್ದವ ನೀಡುತ್ತಿದ್ದ ನಿರಂತರ ಕಿರಿಕಿರಿ, ಇವುಗಳ ಮಧ್ಯೆ ಉದಯಿಸಬೇಕಾಗಿದೆ ತುಘಲಕನ ಆದರ್ಶ ರಾಜ್ಯ. ಆದರೆ ದುರ್ದೈವ, ಅಧಿಕಾರಕ್ಕೆ ಬರುತ್ತಲೇ ಆತ ಕಳಂಕಿತ, ಅಧಿಕಾರಕ್ಕಾಗಿ ತಂದೆಯನ್ನು ಕೊಲ್ಲಿಸಿದವ, ತಮ್ಮನನ್ನು ಕೊಲ್ಲಿಸಿದವ ಎನ್ನುವ ಕುಖ್ಯಾತಿ ಬೇರೆ. ಈ ಹಿಂಸೆಗಳೆಲ್ಲಾ ಮಹಮ್ಮದ ಬಿನ್ ತುಘಲಕನನ್ನು, ಲೇಖಕರು ಹೇಳುವಂತೆ, ‘ ಮನುಷ್ಯ ಸಂಬಂಧದ ಮೂಲ ಸೆಲೆಯನ್ನು ಗುಮಾನಿಯಿಂದ ನೋಡುವಂತಹ ಸ್ಥಿತಿಗೆ  ತಂದು ನಿಲ್ಲಿಸುತ್ತದೆ. ಅದಕ್ಕಾಗಿ ಬದುಕಿನಲ್ಲಿ ಅತ್ಯಂತ ಆರ್ದ ಸಂದರ್ಭವನ್ನು ಏರ್ಪಡಿಸಬಲ್ಲ ವಿವಾಹದಿಂದ ದೂರ ಉಳಿಯುತ್ತಾನೆ. ಅವನ ಮಾನವೀಯತೆಯ ಸಂಕೇತವಾಗಿರುವ ಮಲತಾಯಿಯನ್ನು ಸಾರ್ವಜನಿಕವಾಗಿ ಬೀದಿಯಲ್ಲಿ ಕಟ್ಟಿಸಿ, ರಾಜದ್ರೋಹದ ಆಪಾದನೆಯ ಮೇರೆಗೆ ಕಲ್ಲು ಹೊಡೆಸಿ ಕೊಲ್ಲುತ್ತಾನೆ. ಧರ್ಮಗುರುಗಳಾದ ಷೇಕ್ ಇಮಾಮ್ ಉದ್ದೀನರನ್ನು ಕೊಲ್ಲಿಸುತ್ತಾನೆ. ವಿಪರ್ಯಾಸವೆನ್ನುವಂತೆ ಅಜೀಜನಂತಹ ಹಗಲುಗಳ್ಳನ ಕಾಲಿಗೆ ಪ್ಚಜೆಗಳೇದುರೇ ಧೀರ್ಘದಂಡ ನಮಸ್ಕಾರ ಮಾಡಿಕೊಳ್ಳುವ ಸಂದರ್ಭ ತಂದುಕೊಳ್ಳುತ್ತಾನೆ. ಕೈಗಂಟಿದ ರಕ್ತವನ್ನು ಒರೆಸಿಕೊಳ್ಳಲು ಆಶಿಸುತ್ತಲೇ ಇಡೀ ಮನಸನ್ನೇ ರಕ್ತದ ಕೊಳವನ್ನಾಗಿಸಿಕೊಳ್ಳುತ್ತಾನೆ. ಹಾಗೂ-ಹೀಗೂ ಜನರಪ್ರೀತಿಯ ದೊರೆಯಾಗುವ ಧಾವಂತದಲ್ಲಿ ದೆಹಲಿಯಿಂದ ದೌಲತಾಬಾದ್‌ಗೆ ರಾಜಧಾನಿಯನ್ನು ಬದಲಾಯಿಸುತ್ತಾನೆ. ಧಂಗೆಗಳಿಗೆ ಹಣವೇ ಮೂಲ ಎಂದು ಜನರ ಬಳಿ ಹಣವಿಲ್ಲದಂತೆ ನೋಡಲು ಯತ್ನಿಸುತ್ತಾನೆ. ವಿಚಿತ್ರ ಎನ್ನಿಸುವಂತೆ ಚಿನ್ನ ಮತ್ತು ಬೆಳ್ಳಿ ನಾಣ್ಯಗಳ ಬದಲಾಗಿ ತಾಮ್ರ, ಹಿತ್ತಾಳೆ, ಚರ್ಮದ ನಾಣ್ಯಗಳನ್ನು ಜಾರಿಗೆ ತರುತ್ತಾನೆ. ಇಲ್ಲಿ ‘ತುಘಲಕ್ ದರ್ಬಾರಿನ’ ಹುಚ್ಚುತನದ ಕುರಿತು ಡಾ. ಮಲ್ಲೇಶಗೌಡರು ಒಂದು ಪ್ರಶ್ನೆ ಕೇಳಿದ್ದಾರೆ.
” ಆ ಕಾಲದ ಹಿಂದೂ ಧರ್ಮದ ಕಲ್ಪನೆಯಲ್ಲಿ ಹಣ ಸಾಕ್ಷಾತ್ ಲಕ್ಷ್ಮೀ. ಜೊತೆಗೆ ಸವರ್ಣೀಯರಿಗೆ ಪೂಜಾರ್ಹ  ಎನ್ನಿಸಿರುವ ಹಣವನ್ನು ಚರ್ಮದ ರೂಪದಲ್ಲಿ ಸ್ವೀಕರಿಸಲು ಸಾಧ್ಯವೇ? ಇದು ಒಂದು ರಾಷ್ಟ್ರದ ದೊರೆಗೆ ಸಹಜವಾಗಿ ಹೊಳೆಯಬೇಕಾದುದಲ್ಲವೇ?”ಖಂಡಿತವಾಗಿಯೂ ಇದೇ ತುಘಲಕ್ ಪಾತ್ರದ ಅಸ್ತಿತ್ವ. ಆತನ ಇಪ್ಪತೈದು ವರ್ಷಗಳ ಆಳ್ವಿಕೆಯೆನ್ನುವುದು ಇಂತಹ ಹಲವಾರು ವಿವೇಚನಾ ರಹಿತ ನಿರ್ಧಾರಗಳ ಕತೆ.ಕೊನೆಗೆ ಇತಿಹಾಸಕಾರರು ಹೇಳಿದಂತೆ, ಸುಲ್ತಾನನಿಂದ ಪ್ರಜೆಗಳು, ಪ್ರಜೆಗಳಿಂದ ಸುಲ್ತಾನರು ಬಿಡುಗಡೆ ಹೊಂದಿದ್ದಾರೆ ಎನ್ನುವುದೇ ಅವನ ಆಳ್ವಿಕೆಯ ಸಾಧನೆ.
ನಾಟಕ ಶುರುವಾಗುವುದು ಅಜೀಜನಂತಹ ಅಯೋಗ್ಯನನ್ನು ಕ್ಷಮಿಸುವ ದೃಶ್ಯದಿಂದ, ತಾರಕಕ್ಕೇರುವುದು ಷೇಕ್ ಇಮಾಮುದ್ದೀನರ ಕೊಲೆಯಿಂದ ಮುಕ್ತಾಯವಾಗುವುದು ಅಜೀಜನ ವಿಜಯದಿಂದ. ನಾಟಕದ ಆರಂಭದಿಂದಲೂ ತುಘಲಕ ಅರಸನಾಗಿ ಅವನತಿಯ ದಾರಿಯಲ್ಲಿದ್ದಾನೆ, ಅಜೀಜ ಅಗಸನಾಗಿ ಯಶಸ್ಸಿನ ದಾರಿಯಲ್ಲಿದ್ದಾನೆ. ಆರಂಭದಲ್ಲಿ ಅಜೀಜ ತುಘಲಕನಿಗೆ ಬಂಧಿ. ಅಂತ್ಯದಲ್ಲಿ ತುಘಲಕ ಅಜೀಜನಿಗೆ ಬಂಧಿ. ಯಾತಕ್ಕಾಗಿ ಆತನನ್ನು ಕ್ಷಮಿಸುತ್ತಾನೋ ದಿನಕ್ಕೆ ಐದು ಹೊತ್ತು ನಮಾಜು ಮಾಡಬೇಕೆಂದು ಘೋಷಿಸಿದವ, ದೌಲತಾಬಾದಿನಲ್ಲಿ ಐದು ವರ್ಷಗಳವರೆಗೆ ನಮಾಜನ್ನೇ ಯಾಕೆ ನಿಲ್ಲಿಸಿದನೋ ಒಂದೂ ಸ್ಪಷ್ಟವಿಲ್ಲ ಆತನಿಗೆ. ಆದರೆ ಒಂದಂತೂ ಸತ್ಯ.

“His religiosity dies as soon as he gets Sheikh imam-ud-din killed.”
ಇತಿಹಾಸದ ತುಘಲಕ್ ನಮಗೆಲ್ಲರಿಗೂ ಗೊತ್ತು. ಕಾರ್ನಾಡರ ‘ತುಘಲಕ್’ ನಾಟಕವೂ ಗೊತ್ತು. ಇಂತಹ ಸುಪ್ರಸಿದ್ಧ ವ್ಯಕ್ತಿ, ಇತಿಹಾಸ ಕುರಿತು ಮಲ್ಲೇಶಗೌಡರು ಯಾಕೆ ಸಂಶೋಧನೆ ಮಾಡಬೇಕಿತ್ತು? ಗಮನಿಸಬೇಕು, ೧೯ವರ್ಷಗಳ ಹಿಂದೆ ಅವರು ಕೈಕೊಂಡ ಸಂಶೋಧನೆ ಇದು. ಸುಮಾರು ಎರಡು ದಶಕಗಳ ನಂತರ ನಮ್ಮ ಕೈಗಿಡುತ್ತಿದ್ದಾರೆ. ಯಾಕೆ? ಗೊತ್ತಿರಲಿ, ಈ ಕೃತಿ ತುಘಲಕ್ ನಾಟಕದ ಕುರಿತು ಇದುವರೆಗೂ ಬಂದ ವಿಮರ್ಶೆಯ ಪರಾಮರ್ಶೆ. ಈ ಪರಾಮರ್ಶೆಗೆ ಲೇಖಕರು ಹುಡುಕುವ ಕಾರಣಗಳು, ಕೊಡುವ ಸಮಜಾಯಿಷಿಗಳು, ನನ್ನ ಕುತೂಹಲಗಳನ್ನು ಕೆರಳಿಸಿವೆ.
೧) ನಾಟಕ ಕೃತಿಯ ವಿಮರ್ಶೆ ಅಥವಾ ಆ ನಾಟಕದ ಬರೀರಂಗ ಪ್ರಯೋಗದ ವಿಮರ್ಶೆ ಎರಡು ಅಪೂರ್ಣ. ಅವೆರಡನ್ನು ಸೇರಿಸಿ ನೋಡುವುದು ಆರೋಗ್ಯಪೂರ್ಣ ಎನ್ನುವ ಊಹೆಗಾಗಿ ಈ ಹುಡುಕಾಟ.
೨) ಇದುವೆರಗೂ ನಾಟಕ ಸಾಹಿತ್ಯವನ್ನು ಕುರಿತು ಒಂದು ಸ್ಪಷ್ಟವಾದ ವಿಮರ್ಶೆಯ ಮಾನದಂಡವೇ ನಮ್ಮಲ್ಲಿ ಬರಲಿಲ್ಲ ಎನ್ನುವುದು.
೩) ವಿಮರ್ಶೆ ಸಾಮಾನ್ಯ ಓದುಗನಿಗೂ ನಾಟಕದ ಮೌಲ್ಯವನ್ನು ತಿಳಿಸುವಂತಿರಬೇಕು. ಅಂದರೆ ನಿರ್ದೇಶಕ ಮತ್ತು ವಿಮರ್ಶಕ, ಪೇಕ್ಷಕ ಮತ್ತು ಓದುಗನ ಅಭಿರುಚಿಯನ್ನು ಕಾಲಮಾನಕ್ಕೆ ತಕ್ಕಂತೆ ಬದಲಿಸಿ ಆಸಕ್ತಿಯನ್ನು ಕೆರಳಿಸುವ ಸಾಮರ್ಥ್ಯ ಹೊಂದಿದವರಾಗಿರಬೇಕು.
೪) ನಾಟಕಗಳನ್ನು ವಿರ್ಮಶಿಸುವ ವಿಮರ್ಶಕನಿಗೆ ನಾಟಕಗಳಲ್ಲಿನ ರಂಗಸಾಧ್ಯತೆಗಳನ್ನು ಹೆಕ್ಕಿ ತೆಗೆಯುವ ಗುಣ ಅವಶ್ಯಕ.

ಇವು ಕಾನಾರ್ಡರ ‘ತುಘಲಕ್’ ನಾಟಕವನ್ನು ನೆಪವಾಗಿರಿಕೊಂಡು  ಮಲ್ಲೇಶಗೌಡರು ಒಟ್ಟು ರಂಗಚಟುವಟಿಕೆಗಳಲ್ಲಿ ನಡೆಸುವ ಹುಡುಕಾಟ. ತುಘಲಕ ನಾಟಕದ ಮನಸ್ಥಿತಿ ಅಥವಾ ವಿಷಯ ಹೊಸದೇನಲ್ಲ. ಷೇಕ್ಸಪಿಯರನ ಮಾಕಬೆತ್ ಇತ್ತು, ಕನ್ನಡ ಅರುಣೋದಯ ಕಾಲದ ಬಹಳ ಪ್ರಮುಖ ಭಾಷಾಂತರಕಾರ ಎಮ್. ಎಸ್ ಶ್ರೀಕಂಠೇಶಗೌಡರಿಂದ ಸಧ್ಯದ ಕೆ.ಎಸ್ ಭಗವಾನರವರೆಗೆ ‘ಷೇಕ್ಸಪಿಯರ್’ ನಾಟಕದ ಅನೇಕ ಅವತರಣಿಕೆಗಳು ಲಭ್ಯವಿದ್ದವು. ಲಂಕೇಶರ ‘ದೊರೆ ಈಡಿಪಸ’ ಇತ್ತು. ಆದರೆ ಮಲ್ಲೇಶಗೌಡರಿಗೆ ಕಾನಾರ್ಡರ ತುಘಲಕ್ ಯಾಕೇ ಬೇಕಾಗಿರಬಹುದು? ಎನ್ನುವುದಕ್ಕೆ ನಾನು ಕಂಡುಕೊಂಡಿರುವ ಒಂದು ಸಮಾಧಾನ-
ಮ್ಯಾಕಬೆತ್ ಮತ್ತು ಓಡೀಪಸರು ಸಾಂಧರ್ಬಿಕ ಬೊಂಬೆಗಳು. ಅವರ ಬಹುಪಾಲು ಕ್ರಿಯೆಗೆ ಅವರು ಹೊಣೆಗಾರರಲ್ಲ. ಅವರು ನಿಯಂತ್ರಿಸಲಾಗದ ಶಕ್ತಿಯೊಂದರ ಕೈಯಲ್ಲಿನ ದಾಳಗಳಷ್ಟೇ. ಆದರೆ ಈ ತುಘಲಕ್ ಹಾಗಲ್ಲ. ಇಲ್ಲಿ ಈತನೇ ಎಲ್ಲ ಯೋಜನೆಗಳ ಹರಿಕಾರ. ತನ್ನ ಕ್ರಿಯೆಗಳ ಫಲಿತಾಂಶಗಳಿಗೆ ಆತನೇ ಹೊಣೆಗಾರ, ಇಂತಹ ಪಾತ್ರಗಳ ಶಕ್ತಿಯೇ ಭಿನ್ನ. ಜೊತೆಗೆ ರಂಗ ಪ್ರಯೋಗವಾಗಿಯೂ, ಒಂದು ಸಾಹಿತ್ಯ ಕೃತಿಯಾಗಿಯೂ ಒಂದು ಸಶಕ್ತ ಸೃಷ್ಟಿ. ‘ತುಘಲಕ್’ನನ್ನು ಚಿತ್ರಿಸುತ್ತಾ ಈ ತುಘಲಕ ಏನನ್ನೂ ಸಾಬೀತುಪಡಿಸುತ್ತಾನೆ ಎನ್ನುವುದನ್ನು ಮಲ್ಲೇಶಗೌಡರು ಬರೆಯುತ್ತಾರೆ. “ಇವನಲ್ಲಿ ಅಸಾಧಾರಣ ರಾಜಕಾರಣ, ಅಗಾಧ ಪಾಂಡಿತ್ಯ, ಕನಸುಗಾರಿಕೆಗಳ ಜೊತೆಗೆ ರಾಕ್ಷಸಿಯತೇ, ಅವಿವೇಕತೆಗಳೂ ಮನೆ ಮಾಡಿಕೊಂಡಿವೆ. ತನ್ನ ಪರಿಸರದ ಜನಮಾನಸವನ್ನು ಅರ್ಥಮಾಡಿಕೊಳ್ಳಲು ಅಸರ್ಮಥನಾದ ತುಘಲಕನಿಗೆ ತನ್ನ ಆದರ್ಶದ ಹಟವೇ ಮುಖ್ಯವಾಗಿ, ಇನ್ನುಳಿದ ಮೌಲ್ಯಗಳನ್ನು ಮಣ್ಣುಪಾಲು ಮಾಡುತ್ತಾನೆ. ಇದರಿಂದಾಗಿ ಈತ ಸ್ವಯಂನಿಷ್ಟನಾಗಿ ಗೋಚರಿಸುತ್ತಾನೆ. ಜೀವನ ಮೌಲ್ಯಗಳನ್ನು ಲೆಕ್ಕಿಸದೆ ಕೇವಲ ಆದರ್ಶಗಳಿಗೆ ಹಂಬಲಿಸುವವನ ಬದುಕಿನ ಬೆಲೆಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
ಮುಂದುವರೆದು ಬರೆಯುತ್ತಾರೆ, “ತನ್ನ ರಾಜ್ಯದಲ್ಲಿ ಶಾಂತಿ, ನ್ಯಾಯ ಸಮ್ಮತಿ ಬೇಕೆಂದು ಆದರ್ಶ  ಹೊಂದಿದ್ದ ತುಘಲಕನೇ ಹಿಂಸೆಯ, ಕೌರ್ಯದ ಆರಾಧಕನಾದುದು ಮಾತ್ರ  ಆಶ್ಚರ್ಯವಾಗುತ್ತದೆ. ಮಲ್ಲೇಶಗೌಡರು ಇದೇ ನಾಟಕದಲ್ಲಿ ಬಂದ ಮಲತಾಯಿ, ಅಜೀಜ್, ಅಜಂ, ನಜೀಬ್, ಬರನಿ, ಷಾಯುದ್ದೀನ, ರತನ್‌ಸಿಂಗರನ್ನು ಕುರಿತು ಇದುವರೆಗೂ ಬಂದ ವಿಮರ್ಶೆಯನ್ನು ಪ್ರಶ್ನಿಸುತ್ತಾರೆ.
ತುಘಲಕನನ್ನು ಕುರಿತು ಖಾಸಗಿ ಬದುಕಿನಿಂದ ವಂಚಿತನಾದವನು ನಿಜವಾಗಿಯೂ ಶ್ರೇಷ್ಟ. ಅಸಂಗತ ನಾಯಕನಾಗಬಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ.ತುಘಲಕ ನಾಟಕವನ್ನು ಕುರಿತು ಬಹುತೇಕ ಇದುವರೆಗೆ ಕನ್ನಡ ವಿಮರ್ಶಕರು ಗಮನಿಸದೇ ಇರುವ  ಹಲವು ವಿಚಾರಗಳನ್ನು ಅವರು ಇಲ್ಲಿ ಬರೆದಿದ್ದಾರೆ.
೧) ಕಾರ್ನಾಡರ ಈ ನಾಟಕದಲ್ಲಿ ತುಘಲಕ ಒಂದು ಪಾತ್ರವಾದರೆ, ಅವನ ಸುತ್ತ ಬರುವ ಎಲ್ಲ ವ್ಯಕ್ತಿಗಳು ಸೇರಿ ಮತ್ತೊಂದು ಪಾತ್ರ. ಈ ವ್ಯಕ್ತಿಗಳಲ್ಲಿ ಪ್ರಧಾನ ಅಪ್ರಧಾನವೆಂಬ ತಾರತಮ್ಯವಿಲ್ಲವೆನಿಸುತ್ತದೆ. ಕೆಲವು ಪಾತ್ರಗಳು ರಂಗದ ಮೇಲೆ ಹೆಚ್ಚು ಕಾಣಿಸಿಕೊಳ್ಳಬಹುದು.ಜೊತೆಗೆಹೆಚ್ಚು ಮಾತಾಡಬಹುದು. ಇನ್ನೂ ಕೆಲವು ಪಾತ್ರಗಳು  ಒಂದೆರಡು ಬಾರಿ ಬಂದು ಕೆಲವೇ ಮತುಗಳನ್ನಾಡಬಹುದು. ಅಥವಾ ಕೆಲವು ಪಾತ್ರಗಳು ರಂಗದ ಮೇಲೆಯೂ ಬರದೆಯೂ ಹೋಗಬಹುದು.ಆದರೆ ಎಲ್ಲ ಪಾತ್ರಗಳ ಪರಿಣಾಮ ಒಂದೇ.
೨) ರಾಜಧಾನಿ ಬದಲಾವಣೆ,ತೆರಿಗೆ ನೀತಿ, ಮತ್ತು ನಾಣ್ಯ ಪರಿವರ್ತನೆ, ಘಟನೆಗಳೀಗೆ ಹೆಚ್ಚು ಒತ್ತು ಕೊಟ್ಟು, ಅವುಗಳ ಸುತ್ತ ಉಳಿದ ಘಟನೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ದಂಗೆ,ಪಿತೂರಿ ಮತು ಬರಹಗಳಂತಹ ವಿಶಾಲ ಸಂದೇಶಗಳನ್ನು ಸಾಂಕೇತಿಕವಾಗಿ ಮಾತ್ರ ತರುತ್ತಾರೆ.
೩) ನಾಟಕ ಆಟಗಳಿಂದ ಕೂಡಿದೆ. ಜಾನಪದ ಅಥವಾ ಗ್ರಾಮೀಣ ಜನ ಆಟ ಎಂಬ ಪದವನ್ನು, ನಾಟಕ ಎಂಬರ್ಥದಲ್ಲಿ ಬಳಸುತ್ತಿರುವುದನ್ನು ಗಮನಿಸುತ್ತಿರಬಹುದು. ನಾಟಕ ಪ್ರಾರಂಭವಾಗುವುದು ಅಂಥದೊಂದ್ದು ಆಟದಿಂದಲೇ.ಕಳ್ಳನ ಹಾಗೆ ಖಾಜಿಯ ಎದುರು ಅರಸ ಮತ್ತು ಅಗಸ ಕೈಕಟ್ಟಿ ನಿಂತಿದ್ದಾರೆ.ನ್ಯಾಯ ವಿಚಾರಣೆ ಎಂಬ ಆಟ ನಡೆಯುತ್ತದೆ.ತೀರ್ಪು ಹೊರಬೀಳುತ್ತದೆ. ಹೊರಡಿರಿ,ಹೊರಡಿರಿ, ಆಟ ಎಲ್ಲ ಮುಗಿಯಿತು ಎಂಬಲ್ಲಿಗೆ ಕಾವಲುಗಾರ ಎಲ್ಲರನ್ನು ಕಳುಹಿಸುತ್ತಾನೆ.
೪) ಚದುರಂಗ ಈ ನಾಟಕದಲ್ಲಿ ಪ್ರಾಸಂಗೀಕವೂ ಹೌದು. ಸಾಂಕೇತಿಕವೂ ಹೌದು.ತುಘಲಕನ ವ್ಯಕ್ತಿತ್ವದ ಒಂದು ಮುಖ್ಯ ಮುಖಕ್ಕೆ ದೀಪವೂ ಹೌದು.
೫) ಜನ ಮತ ಹಾಕುವುದೇ ನನ್ನ ಅರ್ಹತೆಯಾಗಲಾರದು. ಒಬ್ಬನನ್ನು ಚುನಾವಣೆಯಲ್ಲಿ ಸೋಲಿಸದ್ದಷ್ಟಕ್ಕೆ ನಾನು ನಾಯಕನಾಗಲಾರೆ ಎಂಬ ಅರಿವು ಸೂತ್ರ ಹಿಡಿಯುವವರೆಗೆ ಇರಬೇಕಾಗುತ್ತದೆ ಎಂಬುದನ್ನು ಧ್ವನಿಸುತ್ತಾರೆ.

ಬಹಳ ದಿನಗಳ ಹಿಂದೆಯೇ ರಾಮಚಂದ್ರ ದೇವ ಅವರ, ‘ಷೇಕ್ಸಪಿಯರ್ ಎರಡು ಸಂಸ್ರ್ಕತಿಗಳಲಿ’ ಎನ್ನುವ ಕೃತಿ ಓದಿದ್ದೆ. ಅದು ಕೂಡ ಹೀಗೆಯೇ ಷೇಕ್ಸಪಿಯರನ ಕುರಿತು ಬಂದ ವಿಮರ್ಶೆಗಳ ಪರಾಮರ್ಶೆ.ಇಂತಹ ಬರಹ ಬಹಳಷ್ಟು ಎಚ್ಚರಿಕೆಗಳಿಂದ ಕೂಡಿರುತ್ತದೆ. ತೀರ ಪರಿಚಿತ ಮತ್ತು ತೀರ ಅಪರಿಚಿತವಾದವುಗಳನ್ನು ಬರೆದು ಗೆಲ್ಲುವುದು ಕಷ್ಟ. ಹಾಗೆಯೇ ಮಲ್ಲೇಶಗೌಡರ ತುಘಲಕ ಕುರಿತ ಈ ಬರಹವೂ ಕೂಡ. ತೀರ ಪರಿಚಿತವಾದುದನ್ನು ಕುರಿತು ಮಲ್ಲೇಶಗೌಡರು ಯಶಸ್ವಿಯಾಗಿ ಬರೆದಿದ್ದಾರೆ. ಅವರಿಗೆ ಅಭಿನಂದನೆಗಳು.


Saturday, December 31, 2011

ಬಸವಳಿದ ಗ್ರೀಸ್ : ಬೆಳೆಯುತ್ತಿರುವ ಭಾರತ


 ದಿನಾಂಕ 31/12/2011 ರ ವರ್ಷದ ಕೊನೆಯ ದಿನ ಮೈಸೂರು ಮಾರ್ಗವಾಗಿ ಬೇಲೂರಿಗೆ ಬಂದಿದ್ದ ಗ್ರೀಸ್ ದೇಶದ ಮಹಿಳೆ ಓಲ್ಗಾ ಹಾಗೂ ಅವರ ಪತಿ ಡಿಮಿಟ್ರಿಯಸ್(ಮಿಮ್) ಬೇಲೂರಿನ ಖ್ಯಾತ ಸಾಹಿತಿಗಳು, ರಂಗ ಚಿಂತಕರು ಆದ ಡಾ.ರಾಜಶೇಖರ ಮಠಪತಿಯವರೊಂದಿಗೆ ಬದಲಾಗುತ್ತಿರುವ ಎರಡು ಮಹಾನ್ ದೇಶಗಳಾದ ಭಾರತ ಮತ್ತು ಗ್ರೀಸ್ಗಳ ಅನೇಕ ವಿದ್ಯಮಾನಗಳನ್ನು ಕುರಿತು ಚರ್ಚಿಸಿದರು. ಗ್ರೀಸ್ ದೇಶದಲ್ಲಿ ಜರ್ಮನ್ ಶಿಕ್ಷಿಯಾದ ಓಲ್ಗಾ, ಸ್ಪ್ಯಾನಿಷ್ ಶಿಕ್ಷಕನಾದ ಡಿಮಿಟ್ರಿಯಸ್, ಭಾರತದಲ್ಲಿ ಇಂಗ್ಲೀಷ ಶಿಕ್ಷಕರಾದ ಡಾ.ಮಠಪತಿ ಭಾಷಿಕ ಕಾರಣಗಳಿಂದಾಗಿ ವ್ಯಕ್ತಿ ಬೇರುಗಡಿತನಾಗುವ ತಲ್ಲಣಗಳನ್ನು ಕುರಿತು ಮುಖ್ಯವಾದ ಚರ್ಚೆಗಳನ್ನು ಮಾಡಿದರು. ಗ್ರೀಸ್ ಹಾಗೂ ಅವರ ಸುತ್ತಲಿನ ರಾಷ್ಟ್ರಗಳಲ್ಲಿ ಉಂಟಾಗಿರುವ ರಾಜಕೀಯ ಅರಾಜಕತೆ, ಮಾಧ್ಯಮಗಳ ಹೊಣೆಗೇಡಿತನ, ಇಸ್ಲಾಂದ ಮೂಲಭೂತತನ, ಹಾಗೂ ಅದು ಉಂಟುಮಾಡಿರುವ ಭೀತಿ, ಒಂದು ಕಾಲಕ್ಕೆ ಜಗತ್ತಿಗೇ ಮಾರ್ಗದರ್ಶಿಯಾಗಿದ್ದ ಅಥೆನ್ಸ್ದ ಅಧಃ ಪತನ, ಗ್ರೀಸ್ ದೇಶದಲ್ಲಿ ನಶಿಸುತ್ತಿರುವ ಶೈಕ್ಷಣಿಕ ಕಾಳಜಿ ಮತ್ತು ಅಲ್ಲಿಯ ಸರಕಾರದ ಬೇಜವಾಬ್ದಾರಿತನಗಳನ್ನು ಪ್ರಮುಖವಾಗಿ ಚರ್ಚಿಸಿದರು. ಒಂದು ದೇಶ ಎಂದರೆ ಪುಸ್ತಕ ಸಂಸ್ಕೃತಿ, ಒಂದು ಕಾಲಕ್ಕೆ ಇಡೀ ಯೂರೋಪಿಗಷ್ಟೇ ಅಲ್ಲ, ಪೂರ್ವದ ದೇಶಗಳಿಗೂ ಗ್ರಂಥ ಸಂಸ್ಕೃತಿಗೆ ಮಾದರಿಯಾಗಿದ್ದ ಗ್ರೀಸ್ ದೇಶ ಈಗ ಸಾಹಿತ್ಯ ಸೃಷ್ಠಿಯಲ್ಲಿ ಎಷ್ಟೊಂದು ಹಿಂದೆ ಉಳಿದಿದೆ ಹಾಗೂ ಸಾಹಿತಿಗಳ ಸ್ಥಿತಿ ಎಷ್ಟೊಂದು ಚಿಂತಾಜನಕವಾಗಿದೆ ಎನ್ನುವ ವಾಸ್ತವಗಳನ್ನು ಅವರು ಬಿಚ್ಚಿಟ್ಟರು. ಡಾ.ಮಠಪತಿ ಅವರು ಹೇಳಿದ ರಂಗ ಚಟುವಟಿಕೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಗ್ರೀಸ್ ದೇಶದ ಪುನರುತ್ಥಾನಕ್ಕೆ ಈಗ ಉಳಿದಿರುವ ಎಕೈಕ ದಾರಿ ರಂಗಭೂಮಿ ಎಂದು ಓಲ್ಗಾ ದಂಪತಿಗಳು ಉತ್ತರಿಸಿದರು.
 ಸಾಯಂಕಾಲದ ನಾಲ್ಕು ಗಂಟೆಯಿಂದ ಮಧ್ಯರಾತ್ರಿ ಹನ್ನೆರಡು ಗಂಟೆಯವರೆಗೆ ಡಾ.ಮಠಪತಿಯವರೊಂದಿಗಿದ್ದ ಈ ತಂಡ ಭಾರತದ ಶೈಕ್ಷಣಿಕ ಕ್ರಾಂತಿ, ಮುಕ್ತ ಮನಸ್ಸು, ಆತಿಥ್ಯದ ಪರಿ, ಸಾಮಾಜಿಕ ಸೌಖ್ಯ ಮತ್ತು ಈ ಶತಮಾನದಲ್ಲಿ ಭಾರತ ಬೆಳೆಯುತ್ತಿರುವ ರೀತಿಯನ್ನು ಮುಕ್ತವಾಗಿ ಹೊಗಳಿದರು. ಅಮೇರಿಕಾ, ಇಂಗ್ಲೆಂಡ್, ಪೆರು, ಉರುಗ್ವೆ, ದಕ್ಷಿಣ ಆಫ್ರಿಕಾಗಳನ್ನು ಸುತ್ತಿದ ಈ ಚಿಂತಕರು ಭಾರತವನ್ನು ನೋಡದೆ ಹೋದರೆ ಬಹುತೇಕ ಈ ಪ್ರಪಂಚವನ್ನು ಅವರು ತಪ್ಪಾಗಿ ಬಿಂಬಿಸುತ್ತಿದ್ದರು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಹೊಸ ವರ್ಷದ ಮೊದಲ ಕ್ಷಣವನ್ನು ಭಾರತದಲ್ಲಿ ಅತ್ಯಂತ ಆತ್ಮತೃಪ್ತಿಯಿಂದ ಅನುಭವಿಸಿದ ಈ ದಂಪತಿಗಳು ಇದು ವರ್ಷದುದ್ದಕ್ಕೂ ನಿರಂತರವಾಗಿರಲಿ ಎಂದು ಚೆನ್ನಕೇಶವನಲ್ಲಿ ಪ್ರಾರ್ಥಿಸಿದರು.