Total Pageviews

Wednesday, September 19, 2012

ಚಲಂ: ಇವನೊಂದು ರೀತಿ ಅಜೂಬಾ


ಚಲಂ: ಇವನೊಂದು ರೀತಿ ಅಜೂಬಾ

 

                                                                                                
ಗ ಸಾಹಿತ್ಯಕ್ಕೆ ತನ್ನ ಸಾಂಪ್ರದಾಯಿಕ ನಡಿಗೆಯಲ್ಲಿ ವಿಶ್ವಾಸವಿಲ್ಲ. ನವೋದಯಕ್ಕೆ, ಪ್ರಗತಿಶೀಲ, ನವ್ಯ, ಬಂಡಾಯದಂತಹ ಸಾಹಿತ್ಯಿಕ ಸಂದರ್ಭಗಳಲ್ಲಿಯೂ ಒಂದೊಂದು ನಿರ್ದಿಷ್ಠ ಸಾಹಿತ್ಯ ಪ್ರಕಾರ ಬರಹಗಾರನ ಅಭಿವ್ಯಕ್ತಿಗೆ ಸರ್ವಸಮ್ಮತ ದಾರಿಯಾಗಿ ಬೆಳೆದಿರುವುದನ್ನು ನಾವು ನೋಡುತ್ತೇವೆ. ಈಗ ಹಾಗಲ್ಲ, ಪ್ರಕಾರ ನೆಪ ಮಾತ್ರ. ಇನ್ನೂ ಮುಂದು ಹೋಗಿ ಕೆಲವು ಸೃಜನಶೀಲರಂತೂ ಪ್ರಕಾರದೊಳಗೊಂದು ಪ್ರಕಾರ, ಅನೇಕ ಪ್ರಕಾರಗಳನ್ನು ಸೇರಿಸಿ ಒಂದು ಪ್ರಕಾರದಂತಹ ಪ್ರಯೋಗಶೀಲತೆಗೆ ತೊಡಗಿರುವುದನ್ನು ನಾವು ಗಮನಿಸಿದ್ದೇವೆ. ಎಲ್ಲವೂ ಸಂಕೀರ್ಣ. ಬಾಹ್ಯದ ಈ ಸಂಕೀರ್ಣತೆ ಕೆಲವೊಮ್ಮೆ ನಮ್ಮ ಆಂತರಿಕ ತೊಳಲಾಟದ ಪ್ರತಿರೂಪವೇ ಆಗಿರುತ್ತದೆ. ಷೇಕ್ಸ್‌ಪಿಯರ್ ಇದನ್ನೇ ಕೇಳಲಿಲ್ಲವೇ? “”ಯುದ್ಧ ಒಳಗೆ ನಡೆಯದ ಹೊರತು ಹೊರಗೆ ಘೋಷಣೆಯಾಗುವುದುಂಟೇ?”  ನನ್ನ ಈ ಯಾವ ಮಾತುಗಳು ಹೊಸದೆಂದುಕೊಳ್ಳುವುದಿಲ್ಲ ನಾನು,ಪ್ರಕಾರಗಳ ಪರಿಮಿತಿಗಳನ್ನು ಬಹಳ ಹಿಂದೆಯೇ ಕ್ರಮಿಸಿ ಹೋದವರು ರವೀಂದ್ರನಾಥ  ಠ್ಯಾಗೋರ್. ಆದಾಗ್ಯೂ ಐದಾರು ದಶಕಗಳ ಒಟ್ಟು  ದಾರಿಯಲ್ಲಿ ಕನ್ನಡ ಸಾಹಿತ್ಯ ಒಂದಷ್ಟು ಸಾಂಪ್ರದಾಯಿಕ ದಾರಿಯಲ್ಲಿಯೇ ಸಾಗಿ ಬಂದು ಈಗ ತೀರ ಭಿನ್ನವಾಗುತ್ತಿರುವ ಲಕ್ಷಣಗಳನ್ನು ಸ್ಪಷ್ಟವಾಗಿಸುತ್ತದೆ.

               ಕಾಲದ ಈ ಸಂಕೀರ್ಣತೆಯ ಹೊಕ್ಕಳಲ್ಲಿ ಹುಟ್ಟಿದ ನನ್ನ ಸಮಕಾಲೀನ ಅನೇಕ ಗೆಳೆಯ-ಗೆಳತಿಯರಿದ್ದಾರೆ. ಇವರೆಲ್ಲ ಹಿಂದಣ ಅನಂತದ ಪರಿಕಲ್ಪನೆಯೊಂದಿಗೆ ವರ್ತಮಾನದ ವೈಚಿತ್ರ್ಯಕ್ಕೆ ಮನಸೋತವರು ಮತ್ತು ಮುಖಾಮುಖಿಯಾದವರು. ಬೇಕೆಂದರೆ ಒಂದಿಷ್ಟು ಹೆಸರುಗಳನ್ನು ಸೂಚಿಸಬಹುದು. ವೀಣಾ ಬನ್ನಂಜೆ, ರವಿ ಬೆಳಗೆರೆ,ಜೋಗಿ, ಜ.ನಾ.ತೇಜಶ್ರೀ, ರಾಜೇಶ್ವರಿ ಎನ್, ಚಲಂ ಮತ್ತೆ ಹತ್ತಾರು. ಇವರು ಯಾವ ಪ್ರಕಾರದಲ್ಲಿ ಬರೆಯುತ್ತಾರೆ? ಏನನ್ನು ಬರೆಯುತ್ತಾರೆ? ಎನ್ನುವುದಕ್ಕಿಂತ ಮನಸೋಲುವಂತೆ ಬರೆಯುತ್ತಾರೆ ಎನ್ನುವುದು ಮುಖ್ಯ. ಬರಹಕ್ಕಾಗಿ ಬರೆಯುತ್ತಾರೆ ಎನ್ನವುದು ಇನ್ನೂ ಮುಖ್ಯ. ಮತ್ತೂ ವಿಶೇಷ ಎನಾದರೂ ಇದೆಯಾ? ಎಂದು ಕೇಳಿದರೆ ಸ್ವಾನುಭವ ಮತ್ತು ಸಮಕಾಲೀನ ಸಂದರ್ಭಗಳಿಂದ ಆರೊಗ್ಯಕರ ಅಂತರದಲ್ಲಿ ನಿಂತು ಬರೆಯುತ್ತಾರೆ ಎನ್ನುವುದು ಅತ್ಯಂತ ಮುಖ್ಯವಾದ ವಿಚಾರ. ನಿಮ್ಮ ಸಾಹಿತ್ಯಿಕ ಮಾನದಂಡಗಳು, ವಿಮರ್ಶೆ, ಪ್ರಚಾರ ಮತ್ತು ಪ್ರಶಸ್ತಿಗಳು ಇಂತಹ ಕೆಲವು ಲೇಖಕರನ್ನು ಭಾದಿಸುವುದಿಲ್ಲ.ಭಾದಿಸಬಾರದು ಎಂದೇ ನನ್ನ ಆಶಯ. ಈ ಗುಂಪಿನಲ್ಲಿ ಈಗ ನಾನು ಮಾತನಾಡಲು ಕುಳಿತಿರುವುದು ಈ ಚಲಂ ಎಂಬ ‘ಚಂಚಲ‘ನ ಕುರಿತು.
                    ಇವನೊಂದು ರೀತಿ ಅಜೂಬಾ. ಹಾಸನದ ಯಾವುದೋ ಸಭೆ, ರಸ್ತೆ, ಬಸ್ಟ್ಯಾಂಡು, ಮುಂಗಟ್ಟಿನ ಮುಂದೆ ಧುತ್ತನೆ ಭೇಟ್ಟಿಯಾಗಿ ತಟ್ಟನೆ ಮರೆಯಾಗುತ್ತಾನೆ. ಸದಾ ಸಮಯದ ಕೊರತೆಯಿಂದ ಕಕ್ಕಾಬಿಕ್ಕಿಯಾದ ಹುಡುಗ. ಹಾಗಂತ ಈತ ನಮ್ಮ ರಂ.ಶ್ರೀ.ಮುಗಳಿಯಂತೆ ಅಥವಾ ಎಮ್.ಕೆ.ನಾಯಕರಂತೆ ಎಲ್ಲವನ್ನೂ ಅವಧಿಗೆ ನಿಗದಿತಗೊಳಿಸಿದವನು ಎಂದುಕೊಳ್ಳಬೇಡಿ. ಮಹಾ ಸೋಂಬೇರಿ. ಮತ್ತೇ ಕೆಲವೊಮ್ಮೆ ಭೂಮಿ-ಆಕಾಶವನ್ನು ಒಂದು ಮಾಡಿ ಹಾರಾಡಿ ಬಿಡುವ ಕನಸು. ಇವನ ತಲೆ ಎನ್ನುವುದು ಮೂಡುಬಿದಿರೆಯ ಗಿರಿಗಿಟ್ಲೆಯ ಪಾತ್ರೆಯಂತೆ. ಒಟ್ಟಾರೆ ಅದರೊಳಗೆ ಏನೇನೋ ಹಾಕಿ ತಿರುವಿ ಕೈಗೊಂದು ಪೊಟ್ಟಣ ಕೊಟ್ಟುಬಿಡುತ್ತಾನೆ.   ತಿಂದವರಿಗೆ ಪ್ರಾಣಾಪಾಯವೇನೂ ಇಲ್ಲ. ಯಾಕೆಂದರೆ ಈತ ಒಂದು ರೀತಿಯ ವಿಚಿತ್ರ ಭರವಸೆ, ನಂಬಿಕೆ ಮತ್ತು ಹೊಸತನ. ಈತನನ್ನು ಕಂಡಾಗಲೆಲ್ಲಾ ನನ್ನನ್ನು ಕಾಡಿದ ಪ್ರಶ್ನೆ ,ನನಗೆ ಮುಪ್ಪಾಯಿತೇ? ಯಾವ ಕ್ಷಣದಲ್ಲಿಯೂ ಯಾವ ವೃತ್ತಿ/ವ್ಯಕ್ತಿ/ವಿಚಾರ ಮತ್ತು ಸ್ಥಳಗಳನ್ನು ಧಿಕ್ಕರಿಸಿ ಓಡಿಹೋಗಿ ಏನನ್ನೂ ಮಾಡಬಲ್ಲೆ ಎನ್ನುವ ಛಲದ ಮಾತನಾಡುವ ಈ ಚಲಂ, ನನಗೆ ಈ ಕಾರಣಕ್ಕಾಗಿಯೇ ಕಾಡುತ್ತಾನೆ.
                    ಯಾರು ಏನಾದರೂ ಹೇಳಿಕೊಳ್ಳಲಿ, ವಿಕ್ಷಿಪ್ತತೆಯ ಬೇರುಗಳನ್ನು ಕಳೆದುಕೊಂಡ ಬರಹಗಾರ ತನ್ನ ಬರಹದಲ್ಲಿ ಬೆಂಕಿಯ ಹೂಗಳನ್ನು ಅರಳಿಸುವುದಿಲ್ಲ. ಇಂತಹ ಹೂಗಳಿಲ್ಲದ ಬರಹ ಬರಹವೇನೋ ಸತ್ಯ, ಆದರೆ ಬದುಕಿಗೆ ಅದರ ಕೊಡುಗೆ ಮಾತ್ರ ಶೂನ್ಯ. ತುಂಬಿ ಹರಿಯುವ ಹೊಳೆಯಲ್ಲಿ ಬಿದ್ದ ಹೆಣಗಳಂತೆ ಬರುವ ಲೇಖಕ ಮತ್ತು ಪುಸ್ತಕಗಳಿಗೇನೂ ಇಂದು ಕೊರತೆಯಿಲ್ಲ. ಆದರೆ ಈ ವಿಕ್ಷಿಪ್ತತೆಯನ್ನು ಅನವರತವೂ ಕಾಯ್ದುಕೊಂಡು ಹೊಸದಕ್ಕಾಗಿ ತಹತಹಿಸುತ್ತಿರುವ ಲೇಖಕರ ಕೊರv  ಖಂಡಿತವಾಗಿಯೂ ಇದೆ. ‘ಜನತಾ ಮಾಧ್ಯಮ‘ದಂತಹ ಸಣ್ಣ ಪತ್ರಿಕೆಯಲ್ಲಿ ಒಂದು ಓದಿನ ಮನೆಯನ್ನು ಕಟ್ಟಿಕೊಂಡು ಮಾತನಾಡುವ ಚಲಂ ಇತ್ತೀಚಿಗೆ ನನ್ನ ಸ್ನೇಹದ ತೆಕ್ಕೆಗೆ ಬಂದ ಒಬ್ಬ ವಿಕ್ಷಿಪ್ತ. ಅವನಿಗೆ ಸಮಾಧಾನವಿಲ್ಲ.  ಹುಡುಕಾಟದ ಭಯಾನಕ ಹಸಿವು. ತೇಜಸ್ವಿಯೊಬ್ಬರೇ  ಈತನನ್ನು ಸಮಾಧಾನವಾಗಿಸುವಲ್ಲಿ ಯಶಸ್ವಿಯಾದವರು. ಸಧ್ಯ ನನ್ನ ಬರಹವನ್ನು ಮೋಹಿಸುತ್ತಿರುವುದಂತೂ ಸತ್ಯ. ಆದರೆ ನಂಬಿರಲಿಕ್ಕಿಲ್ಲ ಎನ್ನುವ ಗುಮಾನಿ ನನಗೂ ಇದೆ. ಈ ಗುಮಾನಿ ಜೀವಂತವಾಗಿರುವವರೆಗೆ ನಾವು ಒಬ್ಬರಿನ್ನೊಬ್ಬರಿಗೆ ಜೇಡದಂತೆ ಬಲೆ ನೇಯ್ದುಕೊಳ್ಳುವುದಿಲ್ಲ.
                    ನಾನು ಈತನ ‘ಪುನರಪಿ‘ಯನ್ನು ಓದಿದ್ದೇನೆ.ಇದನ್ನು ಕುರಿತು ಏನು ಹೇಳಬೇಕೆನ್ನುವುದು ಒಂದು ಪ್ರಶ್ನೆಯೇ. ಕಥಾ ಸಂಕಲನ ಎಂದು ಚಲಂ ಹೇಳಿರುವುದರಿಂದ,  ಇಲ್ಲಿಯ ವಿಚಾರಗಳು ಕಥೆಯ ಚೌಕಟ್ಟಿನಲ್ಲಿ ಅನಾವರಣಗೊಂಡಿದ್ದರಿಂದ ಇವು ಕಥೆಗಳು ಎಂದು ಹೇಳಬಹುದು. ಆದರೆ ಗೊತ್ತಿರಲಿ, ಕಥೆಯ ಶಿಸ್ತಿಗೆ ಸಂಪೂರ್ಣವಾಗಿ ಒಳಪಟ್ಟವು ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಸುಳಿದು ಹೋಗುವ ಮಹತ್ವದ ಪಾತ್ರಧಾರಿ ಚಲಂನೇ. ಆದರೆ ಲಂಕೇಶರಂತೆ ಕಥೆಯೊಳಗಿನ ಪಾತ್ರಗಳ ಹೆಗಲಿಗೆ ಹೊರೆಯಾದವನಲ್ಲ. ಕಲ್ಪನೆಯ  ಸರಳ ಬೆರಿಕೆಯೊಂದಿಗೆ ವಾಸ್ತವದ ಗಂಭಿರತೆಯನ್ನು ಸ್ಪಷ್ಟಪಡಿಸುವ ಕ್ರಿಯೆ ಈ ಕಥೆಗಳಲ್ಲಿ ನಿರಂತರವಾಗಿ ನಡೆದಿದೆ. ಆಕಾಶಕ್ಕೆ ಏಣಿ ಕಟ್ಟುವ ಬಹುಪಾಲು ಪಾತ್ರಗಳಿಗೆ ವಾಸ್ತವದ ಬಾಲಂಗೋಚಿಯಂತೆ ಜೊತೆಯಾಗಿರುವ ಲೇಖಕ ಯಾವುದನ್ನೂ ಬದುಕಿನ ವ್ಯಾಪ್ತಿ ಪ್ರದೇಶದಿಂದ ಹೊರತಾಗುವುದನ್ನು ತಪ್ಪಿಸುತ್ತಾನೆ. ಈ ಕಾರಣಕ್ಕಾಗಿ ಚಲಂ ಒಬ್ಬ ಕಥೆಗಾರನಾಗಿ ನನಗೆ ಪ್ರೀತಿಯವನಾಗುತ್ತಾನೆ.
                    ಇಡೀ ಸಂಕಲನದಲ್ಲಿ ನನ್ನನ್ನು ವಿಚಿತ್ರವಾಗಿ ಕಾಡಿದ ಕಥೆ ‘ದೇವರ ಹಳ್ಳಿಯ ಸಾವಿನ ನ್ಯಾಯ‘. ಇಂತಹ ಒಂದು ಕಲ್ಪನೆಯೇ ವಿಚಿತ್ರ. ಇದನ್ನು ಚಲಂ ಮಾತ್ರ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಕನ್ನಡಕ್ಕೆ ನಲವತ್ಮೂರು ಕೃತಿಗಳನ್ನು  ಬರೆದು ಸುರಿದ ನನ್ನ ಬುದ್ಧಿಗೆ ಇಂತಹ ಒಂದು ಯೋಚನೆಯೇ ಬರಲಿಲ್ಲವಲ್ಲಾ? ಎಂದು ನಾನು ಮತ್ಸರಗೊಂಡಿದ್ದೇನೆ. ಈ ಕಥೆಯನ್ನು ಕುರಿತು ಅಥವಾ ಅದರ ತಂತ್ರ, ವಿಚಾರ, ವಿನ್ಯಾಸ ಹಾಗೂ ವಸ್ತುಗಳನ್ನು ಕುರಿತು ನಾನು ಮಾತನಾಡಿದರೆ ಇದುವರೆಗಿನ ನಮ್ಮ ವಿಮರ್ಶಕ ಪುಂಡರು ಮಾಡಿದ ಬುದ್ಧಿಗೇಡಿತನವನ್ನೇ ನಾನೂ ಪ್ರದರ್ಶಿಸಿದಂತಾದೀತು ಎಂದು ಕೈ ಬಿಟ್ಟಿದ್ದೇನೆ. ಕಥೆಯೋ, ಕವಿತೆಯೋ ಯಾವುದೋ ಒಂದು ಬರಹವೋ ,ಕೂಸಿನಂತೆ  ಬಳಿ ಬಂದಾಗ ಸುಮ್ಮನೆ ಅಪ್ಪಿಕೊಳ್ಳಬೇಕು. ಆ ಅಪ್ಪಿಕೊಳ್ಳುವಿಕೆಯೇ ಅದಕ್ಕೆ ಸಲ್ಲುವ ದೊಡ್ಡ ‘ಅಪ್ರಿಸಿಯೇಶನ್‘. ಅದನ್ನು ಬಿಟ್ಟು ಅದರ ಸಿಂಬಳ ಮೂಗು, ಒದ್ದೆ ಚಡ್ಡಿಯ ಕುರಿತು ವಿಮರ್ಶೆಗಿಳಿಯಬಾರದು. ಹಾಗೊಂದು ವೇಳೆ ನಾವು ಇಳಿಯುವುದಾದರೆ ಹಸೂಗೂಸಿನ ಹಾಲು ವಾಸನೆಯ ಉಸಿರ ಹಿತ  ಕಳೆದುಕೊಂಡ ಪಿಂಡಗಳಾಗುತ್ತೇವೆ.ಚಲಂನ ‘ದೇವರ ಹಳ್ಳಿಯ ಸಾವಿನ ನ್ಯಾಯ‘ ಎಂಥ ಕಥೆ ಅಂತೀರಾ. ‘ಪುನರಪಿ‘ಯನ್ನು ಇಡೀಯಾಗಿ ಓದುತ್ತಿರೋ ಇಲ್ಲವೋ ಈ ಕಥೆಯನ್ನು ಮಾತ್ರ ಬಿಡಬೇಡಿ.
                    ‘ಬೇಗೂರಿನ ಬಾನಗಡಿಗಳು‘ ನಮ್ಮ ಸಮಾಜ ನಿಷ್ಠ ಶ್ರದ್ಧೆಗೆ ಸಿಗುವ ಗೆಲುವನ್ನು ಕುರಿತು ಬರೆದಾದುದು. ನವೋದಯದವರ ಶ್ರದ್ಧೆ , ಪ್ರಗತಿಶೀಲರ ಹೋರಾಟ ಎರಡನ್ನೂ ಸಮೀಕರಿಸಿಕೊಂಡು ಸಮಾಜಮುಖಿಯಾಗಿ ಹರಿಯುವ ಯುವ ಪಡೆಯೊಂದು ಬೇಗೂರಿಗೆ ಬೆಳಕಾಗುವ ಪರಿಯೇ ಈ ಕಥೆಯ ಹರವು. ಅತ್ಯಂತ ಸರಳವಾಗಿ ನಿಮ್ಮನ್ನು ಮುಟ್ಟುತ್ತದೆ. ಆದರೆ ‘ಕಥೆಗಾರನ ಬಲಿ‘ ಕಥೆ ಹಾಗಲ್ಲ. ಈ ಇಡೀ ಕಥೆಯೇ ಒಂದು ಕವಿತೆ. ಕವಿತೆಯನ್ನು ಗೆಲ್ಲಿಸುವುದೇ ಕಥೆಗಾರನ ಗುರಿ. ಹೆಣ್ಣಿನ ವ್ಯಾವಹಾರಿಕತೆಯಿಂದ ಹೊರಗಿಟ್ಟು ಕವಿತೆಯನ್ನು ನೋಡಬೇಕೆನ್ನುವುದು ಆತನ ಹಟ. ಕವಿತೆಯನ್ನು ಹೆಣ್ಣಿಗೆ ಆರೋಪಿಸುವವರ ಸಾಲಿನಲ್ಲಿ ಈತ ಇಲ್ಲ -

“ನನ್ನ ಎದೆಯ ಮೇಲೆ
ನಿನ್ನ ಗೋರಿಯ ಕಟ್ಟಿ
ತಾಜಮಹಲ್ ಎಂದು ಬೀಗುವ
ನಾನು ಜಗತ್ತಿನ ದೊಡ್ಡ ಮೂರ್ಖ”
                     ಎಂದು ಹೇಳುವ ಮೂಲಕ ಕಥೆಗಾರ ಏನನ್ನು ಧಿಕ್ಕರಿಸುತ್ತಿದ್ದಾನೆ ಎಂದು ನಾನು ವಿವರಿಸಬೇಕಿಲ್ಲ. ಈ ಕಥೆಯ ಒಂದೇ ದೃಶ್ಯ- ತಾನು ಭಯಾನಕವಾಗಿ ಪ್ರೀತಿಸುವ ಇಂಚರ ಎನ್ನುವ ಹುಡುಗಿಯನ್ನು ಕುರಿತು ಹುಡುಗ ಕೇಳುತ್ತಾನೆ ‘ನಾನು ಪತ್ರಿಕೆಗಳಲ್ಲಿ ತಣ್ಣನೆಯ ರಕ್ತದ ಹಂತಕರನ್ನು ಕುರಿತು ಓದಿದ್ದೆ. ನಿನ್ನ ಮೈಯಲ್ಲೂ ಆ ರಕ್ತ ಹರಿಯುತ್ತಿದೆಯಾ?‘ ಇದು ಹೆಣ್ಣಿನ ನವಿರತೆಯೊಳಗೆ ಹುದುಗಿಕೊಂಡ ಒಂದು ಮುಖಕ್ಕೆ ಕಥೆಗಾರನ ಅದ್ಭುತ ಕನ್ನಡಿ.
                    ‘ಉದ್ದನೆಯ ಜಡೆಯ ಹುಡುಗಿ‘ ಮತ್ತು ‘ಶಾರದಾನ್ವೇಷಣೆ‘  ತುಂಬಾ  ಶಿಥಿಲ  ರಚನೆಯೊಳಗೆ ಒಡಮೂಡಿದ್ದರೂ ಕಥೆಯೊಂದು ಮುಕ್ತಾಯದಲ್ಲಿ ಬಿಚ್ಚಿಡಬೇಕಾದ ಅಚ್ಚರಿಗೇನೂ ಕೊರತೆಯಿಲ್ಲ. ಲೇಖಕ ಹರಳುಗಟ್ಟದ ವಿಚಾರವಸ್ತುಗಳ ಸುತ್ತ ಸ್ವಲ್ಪ ಹೆಚ್ಚು ಸುತ್ತಾಡಿದ್ದೇ ಈ ಶಿಥಿಲತೆಗೆ ಕಾರಣ. ಕಥೆಯ ಸೂಕ್ಷ್ಮತೆಯೇ ಇದು. ಉದ್ದೇಶವಿಲ್ಲದ ಕಾಡುಹರಟೆಗೆ ಅಲ್ಲಿ ಅವಕಾಶವಿರುವುದಿಲ್ಲ.
‘ಉದ್ದನೆಯ ಜಡೆಯ ಹುಡುಗಿ‘ ಕೊನೆಯಲ್ಲಿ ಬರುವ ‘ ಉದ್ದನೆಯ ಗ್ಲಾಸಿನಲ್ಲಿ ಬಿಯರ್ ಉಕ್ಕುತ್ತಿತ್ತು‘ ಎನ್ನುವ ವಾಕ್ಯವೇ ಇಡೀ ಕಥಾನಕದ ಉದ್ದೇಶ. ಇದಕ್ಕೆ ಆರು ಪುಟಗಳ ವ್ಯಾಪ್ತಿ ಬೇಕಿರಲಿಲ್ಲ. ಪದ ಕಡಿಮೆಯಾದಷ್ಟು ಕಥೆಯ ಮೆರುಗೇ ಬೇರೆ.  ‘ಶಾರದಾನ್ವೇಷಣೆ‘ ಯೂ ಅಷ್ಟೇ. ಈ ಕಥೆಯ ಕೊನೆಯಲ್ಲೊಂದು ಅಚ್ಚರಿಯಿದೆ. ಕಥಾನಾಯಕ ಅಕ್ಷಯನಿಗೆ ತನ್ನ ತಮ್ಮ ಅರುಣನೇ ತಾನು ಹುಡುಕುತ್ತಿರುವ ಹುಡುಗಿಯನ್ನು ಒಡಿಸಿಕೊಂಡು ಹೋದ ವಿಚಾರ ಗೊತ್ತಿಲ್ಲ. ಇದೊಂದು ವಿಷಾದ, ಈ ವಿಷಾದಕ್ಕೆ ಏಳು ಪುಟಗಳ ವಸ್ತು-ವಿಚಾರಗಳ ವಿವರಣೆ ಭಾರವಾಗಿದೆ. ವಿಷಾದದ ಈ ಘಟ್ಟ ಮುಟ್ಟುವುದರೊಳಗಾಗಿ ಕಥೆಗಾರನಿಗೆ ತನ್ನ ದಾರಿಯ ಸ್ಪಷ್ಟ ಹೊಳಹು ಸಿಗಬೇಕಾಗಿತ್ತು, ಅದೂ ಆತನಿಗೆ ದಕ್ಕದೆ ಹೋಗಿದೆ. ಒಂದಷ್ಟು ವಿವರಣೆಗಳನ್ನು ಕತ್ತರಿಸಿದರೆ ಇವೆರಡು ಗಮನಾರ್ಹ ಶಿಲ್ಪಗಳಾಗಬಹುದಾಗಿತ್ತು.
                    ನನ್ನನ್ನು ಆವರಿಕೊಂಡ ಕಥೆಗಳಲ್ಲಿ ಚಲಂ ಅವರ ‘ಬಿಳಿ ಎಕ್ಕದ ಗಿಡದ ಮದುವೆ‘ ಮಹತ್ವದ್ದು. ಮದುವೆ, ಅದಕ್ಕೊಂದು ಮಹೂರ್ತ, ಮನುಷ್ಯನ ವಯೋಸಹಜವಾದ ಈ ಆಸೆಗಳೊಂದಿಗೆ ಬ್ರೋಕರ್‌ಗಳು ನಡೆಸುವ ವ್ಯವಹಾರ. ನಿರಂತರ ಇದ್ದು ಮನುಷ್ಯನ ಯಾವ ನಿಲುವಿಗೂ ನೆಲೆಯಾಗದ ದೇವರು, ಕೈಗೆಟುಕದೆಯೂ ಸಂಸಾರದ ಕೈ ಸುಡುವ ನಕ್ಷತ್ರಗಳು, ಇವುಗಳ ಕುರಿತ ಕಥೆಗಾರನ ಹತಾಶತೆ, ವ್ಯಂಗ್ಯ, ವೈಚಾರಿಕತೆ, ಎಲ್ಲವೂಗಳು ಎಷ್ಟೊಂದು ಅದ್ಭುತವಾಗಿ ಈ ಕಥೆಯಲ್ಲಿ ಮೈ ಹಾಸಿವೆ. ಇದರ ವ್ಯಾಪ್ತಿಯೇ ಅಷ್ಟು ದೊಡ್ಡದು. ಚಲಂ ಇಲ್ಲಿ ಇನ್ನೊಂದಿಷ್ಟು ಲಂಬಿಸಿದ್ದರೂ ಹಾನಿ ಇರಲಿಲ್ಲ . ಇಲ್ಲಿ ಒಂದು ಪ್ರಶ್ನೆ- ದೇವರೇ ಪ್ರಸಾದ ಕೊಡುವುದಾದರೆ ಜೋತಿಷಿ ಯಾಕೆ ಬೇಕು?  ಈ ಪ್ರಶ್ನೆಯೇ ಇಡೀ ಕಥೆಯ ಹುಡುಕಾಟ. ಜೋತಿಷಿಯ ಭವಿಷ್ಯ - ಹುಡುಗಿ ಹೋಗುವಲ್ಲಿ ಅತ್ತೆ ಇರಬಾರದು. ಇದು ಸಾಧ್ಯವೇ? ಇದನ್ನು ಸಾಧ್ಯವಾಗಿಸುವುದೇ ಜೋತಿಷ್ಯದ ಅಸ್ತಿತ್ವ. ರಾಜಕಾರಣ ಮತ್ತು ಜೋತಿಷ್ಯ ಮನುಷ್ಯರ ಆಶೆಗಳನ್ನೇ ಕುಡಿದು ಉನ್ಮಾದ ಅನುಭವಿಸುವ ಸಿದ್ಧಾಂತಗಳು. ಇಲ್ಲಿ ಮಲೆನಾಡಿಗರ ಬದುಕಿನ ಭಾಗವೇ ಆಗಿರುವ  ಶಿಕಾರಿಯ ಕುರಿತು  ಚಲಂ ಎಷ್ಟೊಂದು ಸೊಗಸಾಗಿ ಬರೆದಿದ್ದಾರೆ. ಇದು ನಾವು ಮರೆಯಲಾಗದ ಕಥೆ.
                    ಉಳಿದಂತೆ ‘ಬಿಡುಗಡೆ‘, ‘ಪುನರಪಿ‘ ,‘ಬೇಲಿ‘, ‘ಸರಿಯದ ಪರದೆ‘, ‘ಗುಣಶೇಖರನ ದಂಡಯಾತ್ರೆ‘ ಗಳಲ್ಲಿ  ‘ಪುನರಪಿ‘ ಓದುಗನನ್ನು ತಡೆದು ನಿಲ್ಲಿಸುತ್ತದೆ. ಇದು ಗಾಂಧಿ ವಿಚಾರಧಾರೆಯನ್ನು ಪ್ರತಿಪಾದಿಸುತ್ತಾ ಫ್ರೆಂಚ್‌ನ ಶ್ರೇಷ್ಠ ಕಥೆಗಾರ ಮೊಪಾಸನ ‘ವೈಯಲನ್ಸ್‘ ಕಥೆಯನ್ನು ನೆನಪಿಗೆ ತರುವ ಒಂದು ಸಿದ್ಧಾಂತ ಪ್ರಧಾನ ಕಥಾನಕ. ಕ್ಯಾಂಪಸ್ ರಾಜಕೀಯವೇ ಇದರ ಹರವು ಇದರ ವಿಚಾರಧಾರೆ. ಪತ್ರಿಕೆ ಮತ್ತು ಬಳಗದ ಗೆಲುವೇ ಇಲ್ಲಿಯ ಸಂದೇಶ. ಮನುಷ್ಯನ ಆಂತರಿಕ ಸೌಂದರ್ಯಕ್ಕೆ ಮಾರುಹೋಗುವ ಸೌಮ್ಯತೆ ಚಲಂ ಅವರ ‘ಕಥೆಗಾರನ ಬಲಿ‘ ಕಥೆಯಲ್ಲಿ ಬರುವ  ಇಂಚರಳಿಗೆ ಮುಖಾಮುಖಿಯಾಗಿ ನಿಲ್ಲುವ ಒಂದು ಸಮರ್ಥ ಪಾತ್ರ. ಜೀವನವನ್ನು  ಆಶಾದಾಯಕವಾಗಿ ನೋಡುವ ಅನೇಕ ವಿಚಾರ ಮತ್ತು ವ್ಯಕ್ತಿಗಳ ಒಂದು ದೊಡ್ಡ  ಗ್ಯಾಲರಿಯನ್ನು  ‘ಪುನರಪಿ‘ಯಲ್ಲಿ ಸೃಷ್ಟಿಸಿದ್ದಾರೆ.
                    ಒಟ್ಟು ಸಂಕಲನ ನಮ್ಮ ಸಮಾಜವನ್ನು ಕಟ್ಟಿಕೊಡುವ ಒಂದು ಅದ್ಭುತ ಪ್ರಯತ್ನ. ಕುತೂಹಲದ ಬೆನ್ನು ಹತ್ತಿ  ಓಡುವುದರಕ್ಕಿಂತಲೂ ಯಥಾರ್ತತೆಯ ಅನಾವರಣ ಕಥೆಗಾರನ ಉದ್ದೇಶ. ಕಥೆಗಾರ ಚಲಂನ ಬರಹ ಚಲಂನಂತೆಯೆ. ಕಾಡುಕಾಡಾಗಿ ಹರಿಯುವ ಈತನ ಕುರುಚಲು ಗಡ್ಡದ ಮುಖ ಪದ-ಪದಗಳಲ್ಲಿಯೂ ನಿಮಗೆ ಕಾಣಸಿಗುತ್ತದೆ. ವ್ಯಕ್ತಿಯಲ್ಲಿಯ ಸಮಷ್ಠಿಯ ಅನಾವರಣ. ಇದು ಒಂದು ಇನ್ನೊಂದರಿಂದ ವಿಭಜಿಸಿ ನೋಡಲಾಗದ ಕರ್ಮ. ಆದರೆ ಇದು ಅಥವಾ ಇಂತಹ ಬಾಂಧವ್ಯ ಎರಕ ಹೊಯ್ದುಕೊಂಡವರು  ತೀರ  ಅಪರೂಪ. ಕೆಲವರಿಗೆ ಸಾಹಿತ್ಯ ಬೇರೆ, ಬದುಕು ಬೇರೆ. ಕಲ್ಪನೆಯಲ್ಲಿ ಹುಟ್ಟಿ, ಪುಟಗಳಲ್ಲಿ ಅನಾವರಣಗೊಂಡು ರಂಜಿಸುವ ಬರಹ ಬಾಳುವುದಿಲ್ಲ. ಈ ಚಲಂ ಇಂತಹ ಲೇಖಕರ ಸಾಲಿನಲ್ಲಿ ಇಲ್ಲ ಎನ್ನುವುದೇ ಈ ಗೆಳೆಯನ ಗೆಲುವು. ಈಗಷ್ಟೇ ಕಥೆ ಶುರುವಾಗಿದೆ, ಈತ ಹೇಳಬೇಕಾದುದು  ಇನ್ನೂ ಬಹಳಷ್ಟಿದೆ.





                                                                                         



Monday, August 20, 2012

ವಿರಸವೆಂಬ ವಿಷಕೆ: ಭೂತಯ್ಯನ ಮಗ ಅಯ್ಯು

 
bhutayyana maga ayyu
    ಸಾಮಾಜಿಕತೆ ಮತ್ತು ಸಾಹಿತ್ಯ, ಸಾಮಾಜಿಕತೆ ಮತ್ತು ಮಾಧ್ಯಮ, ಸಾಮಾಜಿಕತೆ ಮತ್ತು ಕ್ರೀಡೆ ಇವುಗಳ ಪರಸ್ಪರ ಕೊಡು-ಕೊಳ್ಳುವಿಕೆ, ಬದ್ಧತೆಗಳ ಪ್ರಶ್ನೆ ಇಂದು ನಿನ್ನೆಯದಲ್ಲ. ಸೃಜನಶೀಲ ಈ ಆಯಾಮಗಳಿಗೊಂದು ಸಾಮಾಜಿಕ ಹೊಣೆಗಾರಿಕೆ ಬೇಕು ಎನ್ನುವವರ ದೊಡ್ಡದೊಂದು ಗುಂಪನ್ನು ಜಾಗತಿಕ ಮಟ್ಟದಲ್ಲಿ ನಾವು ನೋಡಬಹುದು. ಆಪ್ಟೆನ್ ಸಿಂಕ್ಲೆರ್, ಜಾನ್ ಗಿಲಾಸ್‌ವರ್ದಿ, ಅರ್ನೆಸ್ಟ್ ಹೆಮ್ಮಿಂಗ್ ವೇ, ಸಾಮರ್‌ಸೆಟ್ ಮಾಮ್, ದಾಸ್ತೋವಸ್ಕಿ, ಒಂದೇ, ಎರಡೇ ಚಿಂತಕರ ದೊಡ್ಡ ಪಡೆಯೇ ಇದೆ ಇಲ್ಲಿ. ಭಾರತದಲ್ಲೂ ಈ ನಿಟ್ಟಿನಲ್ಲಿ ಆಲೋಚಿಸಿದವರ, ಕಾರ್ಯೋನ್ಮುಖರಾದವರ ಕೊರತೆಯೇನು ಇಲ್ಲ. ಪ್ರೇಮಚಂದ್, ಸಜ್ಜದ್ ಜಾಹೀರ್,ಮುಲ್ಕರಾಜ ಆನಂದ್, ಯಶಪಾಲ್, ಧರ್ಮವೀರ್ ಭಾರತಿ, ಶ್ರೀ, ಶ್ರೀ ಥಕಾಜಿ ಶಿವಶಂಕರ ಪಿಳ್ಳೆ,ಖುಷವಂತ್ ಸಿಂಗ್,  ಕರ್ತರ್ ಉಲ್ಲ್ ಹೈದರ್,ಬಲವಂತ್ ಗಾರ್ಗಿ  ಹೀಗೆ ಅನೇಕ ಹೆಸರುಗಳನ್ನು ಸೂಚಿಸಬಹುದು. ಠ್ಯಾಗೋರ್ ಮತ್ತು ಅರಬಿಂದರಿಗೆ ಈ ಸೆಳೆತವಿರಲಿಲ್ಲ. ಅವರೇನಿದ್ದರೂ ಕಲೆ, ಕಲೆಗಾಗಿ ಎನ್ನುವ ವಾದಕ್ಕೆ ಬದ್ಧರಾದವರು. ಆದರೆ ಮೇಲೆ ಸೂಚಿಸಿದ ಲೇಖಕರುಗಳ ಮುಂಚೂಣಿಯಲ್ಲಿದ್ದವರು, ಮಾರ್ಗದರ್ಶಕರಾದವರು ಗಾಂಧಿ ಎಂಬುವುದನ್ನು ಮರೆಯುಂತಿಲ್ಲ. ಈ ಗಾಂಧಿ ಎಂದರೆ ಹೀಗೆಯೇ, ಹೊಣೆಗಾರಿಕೆಯ ವ್ಯಾಪ್ತಿಯಿಂದ ಹೊರೆತಾದುದ್ಯಾವುದನ್ನು ಅವರು ಗೌರವಿಸಲಿಲ್ಲ.ಕನ್ನಡಕ್ಕೆ ಬನ್ನಿ, ಇಡೀ ಪ್ರಗತಿಶೀಲ ಘಟ್ಟದ ಎಲ್ಲ ಸೃಜನಶೀಲರು ಸಾಹಿತ್ಯ ಮತ್ತು  ಮಾಧ್ಯಮಗಳ ಹೊಣೆಗಾರಿಕೆಯನ್ನು ಅತ್ಯಂತ ಬಲವಾಗಿ ಪ್ರತಿಪಾದಿಸಿದವರು. ನವ್ಯದ ಕಥೆ ಬೇರೆ, ಆದರೆ ನವೋದಯದವರಲ್ಲಿ ಮಾತ್ರ ಒಂದಿಷ್ಟು ಜನ ಹಾಗೆ, ಕೆಲವು ಜನ ಹೀಗೆ.
      ಕನ್ನಡ ಸಿನಿಮಾ ಒಂದು ನಿಶ್ಚಿತ ಆಕಾರ ಪಡೆಯಲು ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯದ ಪ್ರಗತಿಶೀಲ ಸಾಹಿತ್ಯ ಘಟ್ಟದ ಅವಧಿಯಲ್ಲಿಯೇ. ಸಮಾಜಮುಖಿಯಾದ ಚಿತ್ರ ನಿರ್ಮಾಪಕರ, ನಿರ್ದೇಶಕರುಗಳ, ಸಾಹಿತಿಗಳ ದೊಡ್ಡ ಪಡೆಯೊಂದು ಈ ಸಂದರ್ಭದಲ್ಲಿ ಕ್ರಿಯಾಶೀಲವಾಯಿತು. ಇದರ ಮುಂಚೂಣಿಯಲ್ಲಿದ್ದವರು ಬಿ.ಆರ್. ಪಂತುಲು. ಅವರನ್ನು ಹಿಂಬಾಲಿಸಿದವರು ಕಣಗಾಲ್ ಪ್ರಭಾಕರ ಶಾಸ್ತ್ರಿ, ನಾಗೇಂದ್ರ ರಾವ್, ಸುಬ್ಬಯ್ಯನಾಯ್ಡು, ಎ.ವಿ ವರದಾಚಾರ್, ಗಂಗಾಧರ ರಾಯ, ಸಿ.ಬಿ.ಮಲ್ಲಪ್ಪ,   ರಾಮನಾಥನ್, ಶಿವರಾಮ್, ಪುಟ್ಟಣ್ಣ ಕಣಗಾಲ್, ಲಕ್ಷ್ಮಿ ನಾರಾಯಣ್, ಸಿದ್ಧಲಿಂಗಯ್ಯ, ಎಸ್. ಪಿ. ವರದರಾಜ್, ಟಿ.ಎಸ್. ನಾಗಾಭರಣ, ಗಿರೀಶ್ ಕಾಸರವಳ್ಳಿ, ಕಾಶೀನಾಥ, ಬರಗೂರ್ ರಾಮಚಂದ್ರಪ್ಪ, ಟಿ.ಎಸ್ /ಬಿ,ಎಸ್ ರಂಗಾ ಇವರೆಲ್ಲ ಕನ್ನಡ ಸುಸಂಸ್ಕೃತ ಸಾಮಾಜಿಕ ಜವಾಬ್ದಾರಿಯ ಪ್ರೇಕ್ಷಕ ಎಂದೂ ಮರೆಯಲಾಗದ  ಚಿತ್ರರಂಗದ ಹೆಸರುಗಳು. ಸಾಮಾಜಿಕ ಬದ್ಧತೆಯ ಈ ಪಡೆ ತಮ್ಮ ಚಿತ್ರಗಳಲ್ಲಿ ಮಾನವೀಯತೆ, ಮನುಷ್ಯ ಗೌರವ ಮತ್ತು ಮನುಕುಲದ ಭವಿಷ್ಯವನ್ನು ಅತ್ಯಂತ ಗಂಭೀರವಾಗಿ ಚರ್ಚಿಸಿತು. ಚಿತ್ರದ ಆರ್ಥಿಕ ಯಶಸ್ಸಿನೊಂದಿಗೆ ಅದು ಸಮಾಜಕ್ಕೆ ಎನನ್ನು ತಿಳಿಸಬೇಕು ಎನ್ನುವುದು ಅವರ ಬಹಳ ದೊಡ್ಡ ಚಿಂತನೆಯಾಗಿತ್ತು.
    ಕನ್ನಡ ಚಿತ್ರ ಅಥವಾ ಭಾರತೀಯ ಯಾವುದೇ ಚಿತ್ರರಂಗ ಉದ್ಯಮವಾಗಿ ಬದಲಾದದ್ದು ತೀರ ಇತ್ತೀಚಿಗೆ. ಆರಂಭದಲ್ಲಿ ಈ ತಂತ್ರಜ್ಞಾನವನ್ನು ಈ ದೇಶದ ಇತಿಹಾಸ , ಭವ್ಯ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಪರಿಚಾರಿಕತೆಗೆ ಬಳಸಿಕೊಳ್ಳಲಾಯಿತು ಮತ್ತು ಅದನ್ನೇ ಸರಿಯೆಂದು ಪರಿಗಣಿಸಿ ಒಂದು ವಾದವಾಗಿ ಸ್ಥಾಪಿಸಲಾಯಿತು. ಆದರೆ ಕಾಲಾಂತರದಲ್ಲಿ ಇದು ಹಣ ಹೂಡಿಕೆಯ ಅತ್ಯಂತ ಆಕರ್ಷಕ ಮತ್ತು ದಿಢೀರ್ ಶ್ರೀಮಂತಿಕೆಯ ದಾರಿಯಾಗಿ ಮಾರ್ಪಟ್ಟು ಉದ್ಯಮವಾಗಿ ಬದಲಾಯಿತು. ಹಾಗಂತ  ತನ್ನ ಸಾಮಾಜಿಕತೆಯಿಂದ ಮನವೀಯ ಮೌಲ್ಯಗಳ ಬಗೆಗಿದ್ದ ಕಾಳಜಿಂದ ಸಂಪೂರ್ಣ ವಿಮುಖವಾಯಿತು ಎಂದು ನಾವು ಹೇಳುವಂತಿಲ್ಲ. ಮಾನವೀಯತೆಯನ್ನೇ ಗಮನದಲ್ಲಿರಿಕೊಂಡು ಈ ಅರ್ಧಶತಮಾನದಲ್ಲಿ ಬಂದ ಅನೇಕ ಚಿತ್ರಗಳನ್ನು ನಾವು ನೋಡಿದ್ದೇವೆ. ದೋ ಭಿಗಾ ಜಮೀನ್, ದೋ ಆಂಖೇ ಬಾರಾ ಹಾಥ್, ಶ್ರೀ ೪೨೦, ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ,ಮದರ್ ಇಂಡಿಯಾ, ರಾಮ್ ತೇರಿ ಗಂಗಾ ಮೈಲಿ, ವಾರಿಸ್, ಅಂತರ್‌ಮಹಲ್, ಸ್ಲಂ ಡಾಗ್ ಮಿಲೇನಿಯರ್, ಪಿಪ್ಲಿ ಲೈವ್,  ಹೀಗೆ ಸಾವಿರಾರು ಚಿತ್ರಗಳನ್ನು ಉದ್ಧರಿಸಬಹುದು. ಕನ್ನಡಕ್ಕೆ ಬಂದರೆ ಸಾಕುಮಗಳು, ಬಂಗಾರದ ಮನುಷ್ಯ, ಚಂದವಳ್ಳಿಯ ತೋಟ,ಬಡವರ ಬಂಧು, ಚೋಮನದುಡಿ, ನಮ್ಮ ಮಕ್ಕಳು, ಸ್ಕೂಲ್‌ಮಾಸ್ಟರ್, ಬೆಟ್ಟದ ಹೂ, ಗಜ್ಜೆಪೂಜೆ,ಧರ್ಮಸೆರೆ, ಮಸಣದ ಹೂ, ಭೂತಯ್ಯನ ಮಗ ಅಯ್ಯು, ಫಣಿಯಮ್ಮ,ಬರ, ಪಟ್ಟಣಕ್ಕೆ ಬಂದ ಪತ್ನಿಯರು,  ಘಟಶ್ರಾದ್ಧ, ಕಾಕನಕೋಟೆ, ಕಾಡು, ಮಕ್ಕಳ ಸೈನ್ಯ, ಬೆತ್ತಲೆ ಸೇವೆ, ಕಪ್ಪು-ಬಿಳುಪು, ಕಾರ್ಮಿಕ ಕಳ್ಳನಲ್ಲ, ಬ್ಯಾಂಕರ್ ಮರ್ಗಯ್ಯ, ಹುಲಿಯಾ,  ಹಸೀನಾ, ದ್ವೀಪ,  ಗುಲಾಬಿ ಟಾಕೀಜ್, ಮೊಗ್ಗಿನ ಮನಸ್ಸು, ನಾನು ನನ್ನ ಕನಸು,ಮಠ, ಎದ್ದೇಳು ಮಂಜುನಾಥ, ಜಾಕಿ,   ತೀರ ಇತ್ತೀಚಿಗೆ  ಬಂದ ದಂಡುಪಾಳ್ಯ, ಇವೆಲ್ಲ  ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕತೆಯನ್ನು ಮೈಗೂಡಿಸಿಕೊಂಡು ಮಾನವೀಯ ಮೌಲ್ಯಗಳನ್ನೇ ಆಧರಿಸಿದ  ಮಹತ್ವದ ಚಿತ್ರಗಳು. ಈ ಮೇಲಿನ ಪಟ್ಟಿ ನನ್ನ ದೃಷ್ಟಿಯ ಮಿತಿಯೊಳಗೆ ನಾನು ಸಾಗಿದ ಚಿತ್ರವಿಕ್ಷಣೆಯ ದಾರಿಯೊಳಗಿನ ಸಾಕ್ಷಿಗಳು. ಅಂದ ಮಾತ್ರಕ್ಕೆ ಇದು ಇಡೀ ಕನ್ನಡ ಚಿತ್ರರಂಗದಲ್ಲಿಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಚಿತ್ರಗಳ ಸಂಪೂರ್ಣ ಪಟ್ಟಿಯಲ್ಲ. ಆದರೆ ಮಾನವೀಯ ಮೌಲ್ಯವನ್ನೇ ಪ್ರಧಾನ ವಿಚಾರವಾಗಿಸಿಕೊಂಡು ನಾನು ನೋಡಿದ ಚಿತ್ರಗಳು.   
    ಸಿನಿಮಾ ರಂಗವನ್ನು  ಹಣಹೂಡಿಕೆಯ, ಹಣಗಳಿಕೆಯ ಮಾರ್ಗವೆಂದು ಪರಿಗಣಿಸಿದವರ ಮಧ್ಯದಲ್ಲಿಯೇ ಇದನ್ನೊಂದು  ಸಾಮಾಜಿಕ ಕ್ರಾಂತಿಯ, ಮನುಷ್ಯತ್ವದ ಸಾಧನೆಯ ಸಾಧನವಾಗಿಸಿಕೊಂಡವರ ದೊಡ್ಡ ಪಡೆ ವರ್ತಮಾನದಲ್ಲಿರುವುದು ಅತ್ಯಂತ ಸಂತಸದ ಸಂಗತಿ. ಮೃಣಾಲ್ ಸೇನ್‌ರಿಂದ ಪ್ರಾರಂಭವಾಗಿ ವಿ.ಶಾಂತಾರಾಂ, ಕೆ.ಎ.ಅಬ್ಬಾಸ್, ರಾಜಕಪೂರ್, ಯಶ್ ಚೋಪ್ರಾ, ವಿ.ವಿ ಚೋಪ್ರಾ, ಅಶೋಕ ಕಶ್ಯಪ್, ಅಮೀರ್ ಖಾನ್, ಗಿರೀಶ ಕಾರ್ನಾಡ್, ಕರಣ್ ಜೋಹರ್, ಬಿ.ವಿ.ಕಾರಂತ, ಜಿ,ವಿ ಅಯ್ಯರ್, ಎಮ್, ಎಸ್, ಸತ್ಯು, ಗಿರೀಶ ಕಾಸರವಳ್ಳಿ, ಟಿ.ಎಸ್. ನಾಗಾಭರಣ, ಗುರುಪ್ರಸಾದ್-ಇವರೆಲ್ಲಾ ಸಿನಿಮಾ ಸಾರಬೇಕಾದ ಮಾನವೀಯತೆಯನ್ನು ಕುರಿತೇ ತಲೆಕೆಡಿಸಿಕೊಂಡವರು.  ಶ್ರೇಷ್ಟ ಸಿನಿಮಾ ಚಿಂತಕನೊಬ್ಬ ಒಂದು ಸಿನಿಮಾ ಏನಾಗಿರಬೇಕು ಅನ್ನುವುದನ್ನು ತುಂಬ ಚೆನ್ನಾಗಿ ಹೇಳಿದ್ದಾರೆ, “ “Great cinema, like all great art must serve the spiritual needs of  the people, express their unexpressed thoughts and emotions, their joys and sorrows, their urges and aspirations. It must make the people laugh and cry, it must make them think, it must stimulate their imagination, make them indignant against social injustice, must help them to understand and its complexities, it must help them to understand themselves.” 
   ಸಾಮಾಜಿಕತೆಯ ಬುನಾದಿಯೇ ಮಾನವೀಯತೆ. ಎಲ್ಲಿ ಮಾನವೀಯತೆ ಉಪೇಕ್ಷೆಗೊಳಗಾಗಿರುತ್ತದೆಯೋ ಅಲ್ಲಿ ಒಂದು ಆರೋಗ್ಯಕರ ಸಾಮಾಜಿಕತೆಯನ್ನು ನಾವು ನಿರೀಕ್ಷಿಸಲಾಗದು. ಹೀಗಾಗಿ ಕನ್ನಡದ ಎಲ್ಲ ಸಾಮಾಜಿಕ ಚಿತ್ರಗಳನ್ನು ಮಾನವೀಯ ಮೌಲ್ಯಗಳನ್ನು ಚಿತ್ರಗಳೆಂದೇ ಸಾರಾಸಗಟಾಗಿ ಸ್ವೀಕರಿಸಬಹುದು. ಕನ್ನಡ ಚಿತ್ರಗಳ ಪಾಲಿಗೆ ಗಮನಿಸಬೇಕಾದ ವಿಚಾರ- ಕಪ್ಪು-ಬಿಳುಪಿನ ಅವಧಿಯನ್ನು ಭಕ್ತಿ ಮತ್ತು ವ್ಯಕ್ತಿ ಪ್ರಧಾನದ ಚಿತ್ರಗಳ ಕಾಲ ಎನ್ನಬಹುದು. ಈಸ್ಟಮನ್ ಕಲರ್‌ದ ಘಟ್ಟವನ್ನು ಸಾಮಾಜಿಕ ಚಿತ್ರಗಳ ಘಟ್ಟ ಎನ್ನಬಹುದು. ಈ ಸಾಮಾಜಿಕತೆಯ ವ್ಯಾಪ್ತಿಯಲ್ಲಿಯೇ “Angry Young Man movement ಮತ್ತು ಹೊಸ ಅಲೆಯ ಚಿತ್ರಗಳನ್ನು ಸೇರಿಸಿಬಿಡಬಹುದು. ಇನ್ನು ಅಲ್ಟ್ರಾಸೌಂಡ್, ಮಲ್ಟಿಟೇಕ್ ಮತ್ತು ಪಿ.ವಿ.ಆರ್‌ಗಳ ಈ ಕಾಲಘಟ್ಟವನ್ನು ಉದ್ಯಮ ಪರ ಚಿತ್ರಗಳ ಘಟ್ಟವೆಂದು ಗುರುತಿಸಬಹುದೇನೋ. ಈ ವಿಭಜನೆ ತೀರ ಕಟ್ಟು ನಿಟ್ಟಿನದಲ್ಲ. ಚಿತ್ರಗಳ ಸಂಖ್ಯಾವಾರು ಫಲಿತಾಂಶವನ್ನು ಆಧರಿಸಿದ್ದು.
          ಸಿನಿಮಾ ಎಂಬ ಭ್ರಮಾಲೋಕಕ್ಕೆ ಮಾನವೀಯ ಮೌಲ್ಯಗಳನ್ನು ಆಧರಿಸಿದ ಹೊಸ ಅಲೆಯ ಚಿತ್ರಗಳು ಎಂತಹ ಹೊಡೆತವನ್ನು ಕೊಟ್ಟವು ಎನ್ನುವುದನ್ನು ಇಲ್ಲಿ ಗಮಿನಿಸಿ-“” The new wave is valid because it is iconoclastic, it is helping to break the images that many of have worshipped so long, the great golden calf of the box-office the shadow gods and goddess of the star system, the oracles of “ Give the public what it wants”. ಇಲ್ಲಿ ಕನ್ನಡದ ಎರಡು ಮಹತ್ವದ ಚಿತ್ರಗಳನ್ನು ಹೆಸರಿಸಬಹುದು-ಕಾಡು ಮತ್ತು ಸಂಸ್ಕಾರ. ನಮ್ಮ ಸಾಹಿತ್ಯದಲ್ಲಿ ಮಡಿವಂತರ ಒಂದು ಗುಂಪಿರುವಂತೆ ಚಿತ್ರರಂಗದಲ್ಲಿಯೂ ಕೂಡ. ಹೀಗಾಗಿ ಇವು ಮಾಸ್ ಮೂವಿಗಳ ತೆಕ್ಕಗೆ ಬೀಳಲಿಲ್ಲ. ಸಿನಿಮಾ ಒಂದೆಡೆಯಾದರೆ ಆಲೋಚನೆ ಮತ್ತೊಂಡೆಯಾಯಿತು. ಇವೆರಡನ್ನು ಎರಕ ಹೊಯ್ದು ಕನ್ನಡದ ಎರಡು ಮಹತ್ವದ ಸಂಸ್ಥೆಗಳು ಚಿತ್ರಗಳನ್ನು ಮಾಡಿವೆ. ಒಂದು ಅಂಕಲಗಿ ಬ್ರದರ್ಸ ಮತ್ತೊಂದು ರಾಶಿ ಸಹೋದರರು. ಆದರೆ ಅವು ಈಗ ಮರೆತು ಹೋದ ಪುಟಗಳೇ. ಆದರೆ ಹೊಸ ಅಲೆಯ ಚಿತ್ರಗಳ ಮಾನವೀಯ ಕಾಳಜಿ ಆಕ್ಯಾಡೆಮಿಕ್ ಶಿಸ್ತನ್ನು ಸೇರಿಸಿಕೊಂಡು ಜನಮುಖಿಯಾದ ಸಿನಿಮಾಗಳನ್ನು ಮಾಡಿದ ಕೆಲವು ಮಹನೀಯರನ್ನು ಇಂದಿಗೂ ನಾವು ಮರೆತಿಲ್ಲ. ಉದಾಹರಣೆಗೆ ಬಿ.ಆರ್. ಪಂತುಲು, ಪುಟ್ಟಣ್ಣ ಕಣಗಾಲ್, ಎಮ್. ಎಸ್. ಸತ್ಯು, ಸಿದ್ಧಲಿಂಗಯ್ಯ,  ಅಬ್ಬಯ್ಯ ನಾಯ್ಡು, ಸುರೇಶ ಹೆಬ್ಳಿಕರ್, ನಾಗಭರಣ ,ಬರಗೂರು ಹಾಗೂ ಅನೇಕರು.
   ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಕನ್ನಡ ಚಿತ್ರಗಳ ದೊಡ್ಡ ಸಂಖ್ಯೆಯಿದೆ. ಕರುಳಿನ ಕರೆ, ಸಾಕುಮಗಳು, ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್, ಗಿರಿಕನ್ಯೆ, ಜಿಮ್ಮಿಗಲ್ಲು, ಅಂತ, ಚಕ್ರವ್ಯೂಹ, ತಾಯಿಯ ಮಡಿಲಲ್ಲಿ,ನ್ಯೂ ಡೆಲ್ಲಿ,  ತಾಯಿಯ ನುಡಿ ಹೀಗೆ ನೂರಾರು ಚಿತ್ರಗಳನ್ನು ಹೇಳುತ್ತಾ ಹೋಗಬಹುದೇನೋ. ಆದರೆ ಇವೆಲ್ಲ ಚಿತ್ರಗಳಿಗೆ ಮಾನವೀಯ ಮೌಲ್ಯಗಳ ಪ್ರತಿಪಾದನೆಯೊಂದಿಗೆ ಬೇರೆ ಆಯಾಮಗಳು ಇವೆ. ಮನುಷ್ಯತ್ವವನ್ನೇ ಮುಖ್ಯವಾಗಿಟ್ಟುಕೊಂಡ ಅನೇಕ ಚಿತ್ರಗಳಲ್ಲಿ ನನಗೆ ಅತ್ಯಂತ ಮುಖ್ಯವಾಗಿ ಕಾಣುವುದು ಸಿದ್ಧಲಿಂಗಯ್ಯನವರ ಬಂಗಾರದ ಮನುಷ್ಯ ಮತ್ತು ಭೂತಯ್ಯನ ಮಗ ಅಯ್ಯು. ನಾಯಕ ಪ್ರಧಾನವಾದ, ನಾಯಕನ ಆರಾಧನೆಯ ಎಡೆಗೆ ಒಂದಿಷ್ಟು ವಾಲಿದ್ದರಿಂದ ನಾನು ಬಂಗಾರದ ಮನುಷ್ಯನನ್ನು ಎತ್ತಿಕೊಳ್ಳುತ್ತಿಲ್ಲ. ಬದಲಾಗಿ ಇವುಗಳಿಂದ ಮುಕ್ತವಾಗಿ ಒಂದು ವಿಚಾರವನ್ನೇ ಕೇಂದ್ರವಾಗಿಸಿಕೊಂಡು ಅದನ್ನು ಸಾಧಿಸುವದಕೊಸ್ಕರ ಪಾತ್ರಗಳನ್ನು ಬಳಸಿಕೊಂಡ ಭೂತಯ್ಯನ ಮಗ ಅಯ್ಯುನನ್ನು ಚರ್ಚಿಸುವುದು  ಯೋಗ್ಯ ಎಂದುಕೊಂಡಿದ್ದೇನೆ. 
kannada actor M P Shankar
         ಭೂತಯ್ಯ- ಹೆಸರೇ ಸೂಚಿಸುವಂತೆ ಮನುಷ್ಯರು, ಮನುಷ್ಯತ್ವ ಮತ್ತು ಮಾನವೀಯತೆಗಳಿಂದ ಹೊರತಾದ ಒಂದು ಪಾತ್ರ. ಈತ ಜೀವಂತವಿದ್ದೂ ತನ್ನ ಕ್ರೂರತೆಯಿಂದಾಗಿ ಸಮಾಜದ ಕಣ್ಣಿನಲ್ಲಿ ಭೂತವಾಗಿ ಕಾಣಿಸಿಕೊಂಡವನು. ಹಣ ಬಿಟ್ಟರೆ ಆತನ ಕಣ್ಣಿಗೆ ಏನೂ ಕಾಣುವುದಿಲ್ಲ. ಶವದ ಮೆರವಣಿಗೆಯನ್ನು ನಿಲ್ಲಿಸಿಯೂ ಸುಲಿಗೆ ಮಾಡುವ ಸೈತಾನ ಈ ಭೂತಯ್ಯ. ಈತ ಸಮಾಜ ಕಂಟಕ, ಮನುಷ್ಯಲೋಕದ ಕಳಂಕ.ಮನುಷ್ಯತ್ವ ಮತ್ತು ಮೃಗತ್ವದ ಮಧ್ಯ ನಡೆಯುವ ಹೋರಾಟಕ್ಕೆ ಇದಕ್ಕಿಂತಲೂ ಉತ್ತಮವಾದ ಒಂದು ಸಿನಿಮಾ ಕನ್ನಡದಲ್ಲಿ ಬರಲಿಲ್ಲವೆಂದು ಗಟ್ಟಿಯಾಗಿ ಹೇಳಬಹುದು.
       ಜೈನ್ ಕಂಬೈನ್ಸ್‌ನ ‘ಭೂತಯ್ಯನ ಮಗ ಅಯ್ಯು’‘ ಈಸ್ಟಮನ್ ಕಾಲದಲ್ಲಿ  ಬಂದ ಮೊದಲ ಔಟ್‌ಡೋರ್ ಶೂಟಿಂಗ್ ಮಾಡಿದ ಚಿತ್ರ. ಕನ್ನಡದಲ್ಲಿ ಔಟ್‌ಡೋರ ಶೂಟಿಂಗ್‌ನ ರುಚಿ ಹಚ್ಚಿಸಿದವರು ಪುಟ್ಟಣ್ಣ ಕಣಗಾಲ್. ಕಣಗಾಲರ ಒಂದೊಂದು ಚಿತ್ರವೆಂದರೆ ಕರ್ನಾಟಕದ ಒಂದೊಂದು ಪ್ರದೇಶದ ದರ್ಶನ. ‘ಫಲಿತಾಂಶ‘ದಲಿ ಬಿಜಾಪೂರಕ್ಕೆ ಕರೆದುಕೊಂಡು ಹೋಗುವ ಕಣಗಾಲ್, ‘ಮಾನಸ ಸರೋವರ‘ದಲ್ಲಿ ಸೆಂಡೂರಿಗೆ ಕರೆದುಕೊಂಡು ಹೋದರು. ‘ನಾಗರಹಾವಿ‘ನಲ್ಲಿ ಚಿತ್ರದುರ್ಗವನ್ನು ಸುತ್ತಿಸಿದ ಕಣಗಾಲ್  ‘ಉಪಾಸನೆ‘ಯಲ್ಲಿ ಕನ್ಯಾಕುಮಾರಿಗೆ ಕರೆದೊಯ್ಯುತ್ತಾರೆ. ‘ಋಣಮುಕ್ತಳು‘ ಚಿತ್ರದಲ್ಲಂತೂ ಮೌಂಟ್‌ಅಬು ಹತ್ತಿ ಇಳಿಯುತ್ತೀರಿ. ಈ ಜಾಡಿನಲ್ಲಿದ್ದುದೇ ಸಿದ್ಧಲಿಂಯ್ಯನವರ ‘ಭೂತಯ್ಯನ ಮಗ ಅಯ್ಯು‘. ಕಳಸಾಪೂರ, ಕೆಳಗೂರು ಟೀ ಎಸ್ಟೇಟ್, ಗೋರೂರುಗಳ ಸುತ್ತ ಚಿತ್ರಿಕರಣಗೊಂಡ ‘ಭೂತಯ್ಯನ ಮಗ ಅಯ್ಯು‘,ಮೂಲ- ಗೋರೂರು ರಾಮಸ್ವಾಮಿ ಅಯ್ಯಂಗಾರರ ‘ವೈಯ್ಯಾರಿ‘ ಕಥಾಸಂಕಲನದಿಂದ ಎತ್ತಿಕೊಂಡ ಒಂದು ಕಥೆಯನ್ನು ಆಧರಿಸಿದ್ದು. ಎನ್.ವೀರಾಸ್ವಾಮಿ, ಎಸ್.ಪಿ ವರದರಾಜ್, ಸಿದ್ಧಲಿಂಗಯ್ಯ ಹಾಗೂ ಚಂದುಲಾಲ್ ಜೈನ್‌ರ ಸಾಮೂಹಿಕ ನಿರ್ಮಾಣದಲ್ಲಿ ಬಂದ ಈ ಚಿತ್ರಕ್ಕೆ ಸಿದ್ಧಲಿಂಗಯ್ಯನವರ ಚಿತ್ರಕಥೆ ಮ್ತತು ನಿರ್ದೇಶನವಿದೆ. ಹುಣಸೂರು ಕೃಷ್ಣಮೂರ್ತಿಯವರ ಸಾಹಿತ್ಯ, ಎಮ್.ಪಿ ಶಂಕರ್.ಲೋಕೆಶ್, ಲೋಕನಾಥ್, ವಿಷ್ಣುವರ್ಧನ್, ಬಾಲಕೃಷ್ಣ,ಭವಾನಿ, ವಿ.ಶಾರದಾ, ದೀನೇಶ, ವೈಶಾಲಿ ಕಾಸರವಳ್ಳಿ, ಧೀರೆಂದ್ರಗೋಪಾಲ್ ಹಾಗೂ ಜಯಮಾಲಾರ  ತಾರಾಗಣವಿದೆ. 
Kannada actor M P Shankar with Lokanath
    ಮಲೆನಾಡಿನ ಹಳ್ಳಿಯೊಂದರಲ್ಲಿ ಹಣ ಸುಲಿಯುವವನೊಬ್ಬ ರೈತರನ್ನು ದೋಚುವ ಅಮಾನವೀಯತೆ ಅಂತಿಮವಾಗಿ ಅವನ ಮಗನನ್ನು  ಗೆಲ್ಲುವ ಮಾನವೀಯತೆ ಈ ಚಿತ್ರದ ತಾಕಲಾಟ. ಕೋರಿಯೋಗ್ರಾಫಿ ಇಷ್ಟೊಂದು ಶುದ್ಧವಾಗಿರುವ ಚಿತ್ರವೊಂದು ಸಿಗುವುದು ಅಪರೂಪವೇ. ಪ್ರತಿ ಪಾತ್ರವೂ ಮಣ್ಣಿನಿಂದ, ಬಡತನದಿಂದ, ಹಿಂಸೆಯಿಂದ ಎದ್ದುಬಂದಿವೆ. ಇದು ಒಂದು ಮಾಸ್ ಚಿತ್ರವಾಗಿದ್ದರೂ ಕೂಡ ಕಲಾತ್ಮಕತೆಗೆ ಕುಂದಿಲ್ಲ. ಮಾರುಕಟ್ಟೆಯಲ್ಲಿ ಗೆಲ್ಲಿಸುವದಕ್ಕಾಗಿ ಸನ್ನಿವೇಶಗಳನ್ನು ಎರ್ರಾಬಿರ್ರಿಯಾಗಿ ಎಳೆದಾಡಿಲ್ಲ.ಮೂಲ ಕಥೆಗೆ ಧಕ್ಕೆ ಉಂಟಾಗುವ ಯಾವ ತಪ್ಪು ಇಲ್ಲಿ ಆಗಿಲ್ಲ ಎನ್ನುವುದೇ ಇದೊಂದು ಅಪರೂಪದ ಚಿತ್ರ ಎನ್ನಲಿಕ್ಕೆ ಕಾರಣ.
          ಭೂತಯ್ಯ ಮತ್ತು ಆತನ ಮಗ ಅಯ್ಯು   ವಾಸಿಸಿದ ಊರಿನಲ್ಲಿಯೇ ತನ್ನ ಮಗ ಬುಳ್ಳನೊಂದಿಗೆ ಬಡ, ಸಂಸ್ಕಾರವಂತ ರೈತನೊಬ್ಬ ವಾಸಿಸಿದ್ದಾನೆ. ಈತ ಭೂತಯ್ಯನ ಕಪಿಮುಷ್ಟಿಗೆ ಸಿಕ್ಕಿಲ್ಲ ಎನ್ನುವುದೇ ಒಂದು ಹೆಗ್ಗಳಿಕೆ. ಹಾಡುಹಗಲೇ ರಕ್ತ ಹೀರುವ ಈ ಭೂತಯ್ಯನಿಗೆ ಈಗಾಗಲೇ ಎರಡು ಬಾರಿ ಪಾರ್ಶ್ವ ಹೊಡೆದಿದೆ. ಸಾವು ಮತ್ತು ಅಸಹಾಯಕತೆಗಳನ್ನು ಹೆಗಲ ಮೇಲೆ ಹೊತ್ತು ತಿರುಗುವ ಈ ಭೂತಯ್ಯನಿಗೆ ಹೆಣಗಳು ಕೂಡ ಹಣ ಗಳಿಸುವ ಮಾರ್ಗಗಳು. ಸತ್ತು ಮಣ್ಣು ಸೇರಿದ ರೈತರ ಗೋರಿಗಳನ್ನು ಬಗಿದು ಹೆಬ್ಬಟ್ಟು ಒತ್ತಿಸಿಕೊಳ್ಳುವ ಈ ಭೂತಯ್ಯ ಮನೆಗೆ ಬಂದ ಅತಿಥಿಗಳು, ಬೀಗರು ಹೆಚ್ಚು ಊಟ ಮಾಡಿದರೂ ಹಣ ವಸೂಲಿ ಮಾಡುವ ಕ್ರೂರಿ. ರೈತನೊಬ್ಬನ ಅಂತ್ಯ ಸಂಸ್ಕಾರಕ್ಕೆ ಈ ಭೂತಯ್ಯ ಅಡ್ಡಿಪಡಿಸುತ್ತದುದನ್ನು ನೋಡಲಾಗದೇ ಬುಳ್ಳನ ತಂದೆ ಭೂತಯ್ಯನಿಗೆ ತನ್ನ ಜಮೀನು ಅಡವಿಟ್ಟು ಸಂಸ್ಕಾರ ಕ್ರಿಯೆಗೆ ದಾರಿ ಮಾಡಿಕೊಡುತ್ತಾನೆ. ಜಮೀನು ಗೆದ್ದ ಭೂತಯ್ಯ ಕೊನೆಗೊಂದು ದಿನ ಸೇಡು, ಪ್ರತಿಕಾರ ಮತ್ತ ಸುಲಿಗೆ ಮಂತ್ರವನ್ನು ತನ್ನ ಮಗ ಅಯ್ಯುವಿಗೆ ಭೋದಿಸಿ ಕೊನೆಯುಸಿರೆಳುತ್ತಾನೆ. ಸಾಯುವಾಗ ಆತ ಮಗನಿಗೆ ಕೊಡುವ ಮಹತ್ವದ ಕಾಣಿಕೆ ಬಂದೂಕು.ಇಷ್ಟೊಂದು ಮೆರೆದ ಭೂತಯ್ಯ ಸತ್ತಾಗ ಹೆಣ ಎತ್ತಲು ಒಬ್ಬನೇ ಒಬ್ಬ ಬರುವುದಿಲ್ಲ. ಬುಳ್ಳಯ್ಯನ ತಂದೆ ಅಂತ್ಯಸಂಸ್ಕಾರಕ್ಕೆ ಹೋದರೆ ಭೂತಯ್ಯನ ಮಗ ಅಯ್ಯು ಆತನನ್ನು ಧಿಕ್ಕರಿಸುತ್ತಾನೆ. ಚಕ್ಕಡಿಯಲ್ಲಿ ಹೊರಟ ಭೂತಯ್ಯನ ಹೆಣಕ್ಕೆ ಹಳ್ಳಿಗರ ಶಾಪದ ಸುರಿಮಳೆಯಾಗುತ್ತದೆ. ಆತ ಮಣ್ಣು ಸೇರುತ್ತಾನೆ.
kannada actor lokesh

          ಎರಡನೇ ತಲೆಮಾರಿನ ಅಯ್ಯು ತನ್ನ ತಂದೆ ಕಾಲದ ಒಪ್ಪಂದದ ಪ್ರಕಾರ ಬುಳ್ಳನ ತಂದೆಗೆ ಜಮೀನು ಕೇಳುತ್ತಾನೆ. ಕೇಸು ಕೋರ್ಟಿಗೆ ಬೀಳುತ್ತದೆ. ಕೋರ್ಟಿನಲ್ಲಿ ಸೋತ ಬುಳ್ಳಾ ಮನೆ- ಜಮೀನು ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಅಪಮಾನ ಸಿಸಿಕೊಳ್ಳಲಾಗದ ಬುಳ್ಳನ ತಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದನ್ನು ಸಹಿಸಿಕೊಳ್ಳಲಾಗದ ಬುಳ್ಳ ಅಯ್ಯುನ ವಿರುದ್ಧ ಕತ್ತಿ ಮಸೆಯಲಾರಂಭಿಸುತ್ತಾನೆ. ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು  ಸೇರು ಇಡೀ ಊರು ಪಂಗಡಗಳಾಗಿ ದ್ವೇಷದಲ್ಲಿ ಹೊತ್ತಿ ಉರಿಯಲಾರಂಭಿಸುತ್ತದೆ. ಆಗ ತೇಲಿ ಬರುವ ಜಿ.ಕೆ.ವೆಂಕಟೇಶರ ಈ ಗೀತೆ-
        “ ವಿರಸವೆಂಬ ವಿಷಕೆ ಬಲಿಯಾದೆ ಏತಕೆ
       ಸುಖ ಶಾಂತಿ ನಾಶಕೆ, ಮರುಳಾ."    ಜೀವನದುದ್ದಕ್ಕೂ ನಿಮ್ಮನ್ನು ಕಾಡುತ್ತದೆ.
       ಇಡೀ ಚಿತ್ರಕ್ಕೆ ಹೊಸ ತಿರುವನ್ನು ಕೊಡುವ ಪಾತ್ರ ಅಯ್ಯುವಿನ ಹೆಂಡತಿ. ಸ್ರ್ತೀ ಪಾತ್ರವೊಂದು ಚಿತ್ರದ ಪೂರ್ವಾರ್ಧದಲ್ಲಿ ಮೌನವಾಗಿದ್ದು ಎರಡನೆ ಭಾಗದಲ್ಲಿ ಈಡೀ ಚಿತ್ರದ ಪಾತ್ರಗಳನ್ನು ನಿರ್ದೇಶಿಸುವ ಇಂಥ ಮತ್ತೊಂದು ಕನ್ನಡ ಚಿತ್ರವಿರಲಿಕ್ಕಿಲ್ಲ. ಅತ್ಯಂತ ಕಡಿಮೆ ಮಾತನಾಡಿದ ಪಾತ್ರವಿದು, ಆದರೆ  ಆಕೆ ಆಡುವ ಒಂದೊಂದು ಮಾತು ಅಯ್ಯುನನ್ನ ಮನುಷ್ಯತ್ವದೆಡೆಗೆ ಕರೆದುಕೊಂಡು ಹೋಗುವ ಹೊಸದಾರಿಗಳು. ಭಾರತಲ್ಲಿ ಹೆಂಡತಿಯೊಬ್ಬಳು ಸಹಧರ್ಮಿಣಿಯಾಗಿರುವುದರೊಂದಿಗೆ ಏನಾಗಿರುತ್ತಾಳೆ, ಏನಾಗಿರಬೇಕು ಎನುವದಕ್ಕೂ ಇದೊಂದು ಅತ್ಯುತ್ತಮ ನಿದರ್ಶನ. ಇವಳು ಕ್ಷಮಯಾ ಧರಿತ್ರಿ, ಮಂತ್ರಿಯಂತೆ ಮಾರ್ಗದರ್ಶಿಸುತ್ತಾ ಅಯ್ಯುನನ್ನು ರಕ್ಷಿಸಿಕೊಳ್ಳುವುದರೊಂದಿಗೆ ತನ್ನ ಮಾಂಗಲ್ಯವನ್ನು ಬುಳ್ಳನ ಹೆಂಡತಿಯ ಮಾಂಗಲ್ಯವನ್ನು ಬಡ ರೈತರ ಸಂಸಾರಗಳನ್ನು ರಕ್ಷಿಸುತ್ತಾರೆ. ಬುಳ್ಳನ ನೇತ್ರತ್ವದಲ್ಲಿ ಹಾಡು ಹಗಲೇ ಪುಂಡರ ಗುಂಪೊಂದು ಅಯ್ಯುವಿನ ಮನೆ ಹೊಕ್ಕು ದೋಚಿದರೂ ಪೋಲಿಸರ ಸಮಕ್ಷಮದಲ್ಲಿ ಊರಿನವರೆಲ್ಲಾ ನನ್ನ ಬಂಧುಗಳು, ಅವರ್‍ ಯಾರು ತನಗೆ ಕೇಡು ಬಗೆಯಲಿಲ್ಲ ಎನ್ನುವ ಮಾತನ್ನು ಅಯ್ಯುವಿನ ಮೂಲಕ ಹೇಳೀಸಿ ಮನಪರಿವರ್ತನೆಗೆ ನಾಂದಿ ಹಾಡುತ್ತಾಳೆ. ಚಿತ್ರದ ಕೊನೆಯ ದೃಶ್ಯ ಹೀಗೆದೆ-ವಿಪರೀತ ಮಳೆ, ಅಯ್ಯು ಊರಲಿಲ್ಲ .ತುಂಬಿ ಬಂದ ಹೊಳೆಯಲಿ ಆತನ ಹೆಂಡತಿ, ಮಕ್ಕಳು ನೀರುಪಾಲಾಗುತ್ತಿದ್ದಾರೆ, ಈಗ ಬುಳ್ಳಾ ತನ್ನ ಪ್ರಾಣವನ್ನು ಲೆಕ್ಕಿಸದೇ ಅಯ್ಯುವಿನೊಂದಿಗಿನ ಹಳೆಯ ಹಗೆತನವನ್ನು ಮರೆತು ಅವರನ್ನು ರಕ್ಷಿಸುತ್ತಾನೆ. ಆ ಮೂಲಕ ಮಾನವೀಯತೆಯ ಗೆಲುವನ್ನು ಸಾರುತ್ತಾನೆ
          ಆದರೆ ಈ ಚಿತ್ರದ ಶಕ್ತಿಯೇ ನಟ ಲೋಕೆಶ್. ಇಂಥ ಒಬ್ಬ ನಟನನ್ನು ಕನ್ನಡ ಚಿತ್ರರಂಗ ಮತ್ತೆ ಕಾಣುವುದು ಕನಸಿನ ಮಾತೇ. ಒರಟು ತಂದೆಯಾಗಿ ಎಮ್. ಪಿ. ಶಂಕರ್ ಆತನ ಮಗನಾಗಿ ಅಷ್ಟೇ ಒರಟಾದ ಲೋಕೆಶ್ ಎಂಥ ಅದ್ಭುತ ಜೋಡಿ! ಲೋಕೆಶ್ ಯಾವುದೇ ಪಾತ್ರವನ್ನು ನಟಿಸಲಿಲ್ಲ ಅವುಗಳನ್ನು ಬದುಕಿಬಿಟ್ಟರು ಮತ್ತು ಬದುಕಿಸಿಬಿಟ್ಟರು.   ಇಡೀ ಚಿತ್ರದ ತುಂಬಾ ಅವರ ಆಂಗಿಕತೆಯನ್ನು ಗಮನಿಸಬೇಕು. ಅವರ ಮುಖವಂತೂ ಮಹಾರಂಗಭೂಮಿ. ಭಾಷೆಯನ್ನು ಬರೀ ಕಣ್ಣು ಮೂಗಿನಲ್ಲಿ ಬಿಂಬಿಸಿಬಿಡುವ ಕಲಾವಿದ ಲೋಕೆಶ್. ಇವರ ಅಭಿನಯದ ಮುಂದೆ ವಿಷ್ಣುವರ್ಧನ ತುಂಬಾ ಪೇಲವ. ಈ ಚಿತ್ರದ ಮೂಲಕ ಅಭಿನಯ ಲೋಕದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟವರು ನಟ ಲೋಕನಾಥ್. ಮೋಚಿಯ ಪಾತ್ರದ ಲೋಕನಾಥ್ ಎಂದರೆ ಉಪ್ಪಿನಕಾಯಿ, ಉಪ್ಪಿನಕಾಯಿ ಎಂದರೆ ಲೋಕನಾಥ್ ಎನ್ನುವಷ್ಟು ಆಗ ಅವರು ಮನೆ ಮಾತಾಗಿಬಿಟ್ಟರು. ಚಿತ್ರದ ವಿಶೇಷತೆಯೇ ಇದು. ಧೀರೆಂದ್ರಗೋಪಾಲ್, ದೀನೇಶ್, ಜಯಮಾಲಾ  ಇಲ್ಲಿ ಕೇವಲ ಪೋಷಕ ಪಾತ್ರಗಳು.
   ಒಟ್ಟು ಚಿತ್ರದ ಶಕ್ತಿ ಸಿದ್ಧಲಿಂಗಯ್ಯನವರ ನಿರ್ದೇಶನ. ಇಲ್ಲಿ ಅವಸರಕ್ಕೆ ಆಸ್ಪದವಿಲ್ಲ. ಅಬ್ಬರದ ಸಂಭಾಷಣೆಯಿಲ್ಲ. ಅಂತಹ ಅದ್ಭುತವಾದ ಸಂಗೀತವೂ ಇಲ್ಲ. ಆದರೂ ಒಂದು ಚಿತ್ರ ಯಾಕೆ ನಮ್ಮನ್ನು ಕಾಡುತ್ತದೆ ಮತ್ತೆ ಮತ್ತೆ ಕೇಳಿಕೊಳ್ಳುವಂತೆ ಯಾವುದೋ ಆಕರ್ಷಣೆಯನ್ನು ಸಿದ್ಧಲಿಂಗಯ್ಯನವರು ಇಲ್ಲಿಟ್ಟಿದ್ದಾರೆ. ಇದನ್ನು ನಿರ್ದೇಶಕನ ಕೈಚಳಕ ಎನ್ನದೇ ಮತ್ತಿನ್ನೇನೆಂದು ಗ್ರಹಿಸಲಾದೀತು? ಇದು ಸತ್ಯ ಎನ್ನುವುದಾದರೆ ಕನ್ನಡದಲ್ಲಿ ಈ ತೆರನಾಗಿ ಕಾಡುವ ಚಿತ್ರಗಳ ಸಂಖ್ಯೆ ಎಷ್ಟು ನೀವೇ ಉತ್ತರಿಸಬೇಕು.         
           
         
 


Saturday, August 18, 2012

ಟಿ.ಎಸ್.ನಾಗಾಭರಣ(T S Nagabharana) ರ `ಬ್ಯಾಂಕರ್ ಮಾರ್ಗಯ್ಯ’ (Financial expert)


                                                                                  
                 
                      ( ನಾಗಾಭರಣರಿಗೆ ಅರವತ್ತು ವರ್ಷ ತುಂಬಿದ ಸಂದರ್ಭ)

Banker Margayya
" ಸಾಲ ಸಲಹೆಗಾರ, ನಶೆ ಪುಡಿ ಮಾರಾಟಗಾರ, ಹಲ್ಲು ಪುಡಿ ಮಾರಾಟಗಾರ, ಪ್ರಕಾಶಕ, ಬ್ಯಾಂಕರ್ ಹೀಗೆ ರೂಪಾಂತರಗೊಳ್ಳುತ್ತ ಹೋದ ಮಾರ್ಗಯ್ಯ ಒಬ್ಬ ಶುದ್ಧ ಲೌಕಿಕ. ಲೌಕಿಕತೆಯ ಆತನ ತಪಸ್ಸನ್ನು ನೀವು ಸಂಶಯಿಸುವಂತಿಲ್ಲ. ಯಾಕೆಂದರೆ ವ್ಯವಹಾರಿಕನಾಗಿ ಏನೆಲ್ಲ ಏರಿಳಿತಗಳನ್ನು ಕಾಣುವ ಆತನಲ್ಲಿ ಸಾಂಸಾರಿಕ ಕಾಳಜಿಯ ವ್ಯಕ್ತಿ ಘನತೆಯ ಬಿರುಕುಗಳಿಲ್ಲ. ತನ್ನ ಗೆಲುವಿನೊಂದಿಗೆ ಸಂಸಾರ ಗೆಲ್ಲಬೇಕು, ತತ್ವ ಗೆಲ್ಲಬೇಕು, ಸಮಾಜ ಗೆಲ್ಲಬೇಕು ಎನ್ನುವುದೇ ಮಾರ್ಗಯ್ಯನ ವ್ಯಕ್ತಿತ್ವಕ್ಕಿರುವ ಸೌಂದರ್ಯ. ಈ ನಿಟ್ಟಿನಲ್ಲಿ ಬ್ಯಾಂಕರ್ ಮಾರ್ಗಯ್ಯ ಕನ್ನಡ ಸಮಾಜ ಎಲ್ಲ ಕಾಲಕ್ಕೂ ಒಪ್ಪಿಕೊಳ್ಳುವ ಒಂದು ಪಾತ್ರ. ಬರೀ ಕಾದಂಬರಿಯ ಚೌಕಟ್ಟಿನಲ್ಲಿ ಉಳಿದುಕೊಂಡಿದ್ದರೆ ಆತ ನಮ್ಮನ್ನು ಕಾಡುತ್ತಿದ್ದನೋ ಏನೋ ಆತ ಸಿನಿಮಾದಲ್ಲಿ ನಾಗಾಭರಣರಿಂದ ಪುನರ್ಜನ್ಮ ಪಡೆದದ್ದು ನಮ್ಮನ್ನು ಎಲ್ಲ ಕಾಲಕ್ಕೂ ಕಾಡಲು ಪ್ರಾರಂಭವಾಗಿದೆ."


ಕನ್ನಡಿಗರು ಮರೆಯಬಹುದಾದ ಚಿತ್ರವಲ್ಲ ಬ್ಯಾಂಕರ್ ಮಾರ್ಗಯ್ಯ(Banker Margayaa). ಕಾರಣಗಳು ಅನೇಕ. ಪ್ರಥಮತಹ ಇದು ಟಿ.ಎಸ್.ನಾಗಾಭರಣರ(T S Nagabharana) ನಿರ್ದೇಶನದಲ್ಲಿ ಒಡಮುಡಿದ ಕಲಾ ಕೃತಿ. ಎರಡನೆಯದಾಗಿ ಈ ಚಿತ್ರ ಮೂಲತಃ ಭಾರತೀಯ ಇಂಗ್ಲೀಷ ಸಾಹಿತಿ ಆರ್.ಕೆ.ನಾರಾಯಣ(R K Narayan)ರ ಕಾದಂಬರಿಯನ್ನು ಆಧಾರಿಸಿದ್ದು. ಮೂರನೆಯದಾಗಿ ಈಡಿ ಸಿನಿಮಾ ಕೊಪ್ಪ ಗ್ರಾಮದಲ್ಲಿ ಶೂಟ್ ಆಗಿದ್ದ. ಕೊಪ್ಪ, ಕಳಸ ಹೊರನಾಡಿನ ಆ ಅಗಾಧ ಮೌನವನ್ನು ಇಂದಿಗೂ ಅನುಭವಿಸುವಂತೆ ಮಾಡಿದ್ದು. ಇದೇಲ್ಲದಕ್ಕೆ ಕಳಸಪ್ರಾಯವೆನ್ನುವಂತೆ ನಟ ಲೋಕೆಶ(Actor Lokesh)ರ ಮನೋಜ್ಞ ಅಭಿನಯ.
          ಭಾರತ ಸಾಹಿತ್ಯದಲ್ಲಿಯೂ ಬಹಳಷ್ಟು ಪ್ರಯೋಗಶೀಲವಾದುದ್ದನ್ನು ನೀಡಿತು. ಸಿನಿಮಾದಲ್ಲಿಯೂ ಪ್ರಯೋಗಶೀಲತೆಯ ಸಾಕಷ್ಟು ದೀರ್ಘ ದಾರಿಯನ್ನು ಕ್ರಮಿಸಿತು. ಆದರೆ ಈ ಸಾಹಿತ್ಯ ಮತ್ತು ತಂತ್ರಜ್ಞಾನ ಅತ್ಯಂತ ಯಶಸ್ವಿಯಾಗಿ ಸಮೀಕರಣಗೊಂಡಿದ್ದಕ್ಕೆ ಸಾಕ್ಷಿಗಳು ಕಡಿಮೆ. ಹಿಂದಿ ಚಿತ್ರ ಜಗತ್ತಿಗೆ ಹೋದರೆ ಸಂಗೀತ ಮತ್ತು ಸಿನಿಮಾಕೆ ಸಾಮರಸ್ಯ ಸಾಧ್ಯವಾಗುವುದನ್ನು ನೋಡಬಹುದು. ಆದರೆ ಅದೇ ಪ್ರಮಾಣದಲ್ಲಿ ಕಾದಂಬರಿಕಾರ ಮತ್ತು ಸಿನಿಮಾಕ್ಕೆ, ಕಥೆಗಾರ ಮತ್ತು ಸಿನಿಮಾಕ್ಕೆ ಸಾಮರಸ್ಯ ಒಡಮೂಡಿ ಹೊರಬಂದ ಕಲಾಕೃತಿಗಳ ಲೆಕ್ಕ ನೋಡಿದರೆ ಒಂದು ಶೋಚನೀಯ ಸನ್ನಿವೇಶವೇ ಎದುರಾಗುತ್ತದೆ. ಹಿಂದಿಯಲ್ಲಿ ಸಂಗೀತ ,ಸಾಹಿತ್ಯ ಮತ್ತು ಸಿನಿಮಾ ಮೂರು ಸೇರಿಕೊಂಡು ಎಪ್ಪತ್ತರ ದಶಕದವರೆಗೂ ಚಿತ್ರರಂಗವನ್ನು ಆಳಿದ ಪರಿಯನ್ನು ಯಾರೂ ಮರೆಯುವಂತಿಲ್ಲ. ಆದರೆ ಇಂಥ ಅಮೋಘ ಘಳಿಗೆ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಸಾಧ್ಯವಾಗಲಿಲ್ಲ. ಸಾಧ್ಯವಾಗಿದ್ದರೂ ಅದು ಕೆಲವರಿಗೆ ಮಾತ್ರ. ಅಂಥ ಕೆಲವರಲ್ಲಿ ಕನ್ನಡದ ನಾಗಾಭರಣರು(T S Nagabharana) ಒಬ್ಬರು.
         ಗಮನಿಸಬೇಕು, ನಾಗಭರಣರೊಬ್ಬರೇ ಎಂದು ನಾನು ಹೇಳುತ್ತಿಲ್ಲ ಇವರದೊಂದು ದೊಡ್ಡ ಪರಂಪರೆ ಕನ್ನಡದಲ್ಲಿದೆ. ಸತ್ಯಜೀತ್‌ರೆ(Satyajith re),  ಶ್ಯಾಂ ಬೆನಗಲ್( Shyam Benagal), ಕೆ.ಎ.ಅಬ್ಬಾಸ್(K A Abbas), ಬಟ್ಟಾಚಾರ್ಯ(Bhattacharya)ರಂತೆಯೆ ಕನ್ನಡದಲ್ಲಿಯೂ ಪುಟ್ಟಣ್ಣ ಕಣಗಾಲ್(Puttanna Kanagal), ಎಂ.ಎಸ್.ಸತ್ಯು(M S Satyu), ಕಾಸರವಳ್ಳಿ(Girish Kaasaravalli), ನಾಗತೀಹಳ್ಳಿ(Naagatihalli Chandrasekhar), ಗಿರೀಶ ಕಾರ್ನಾಡ(Girish karnad) ಹಾಗೂ ನಾಗಾಭರಣ(Nagabharana)ರಂಥವರ ದೊಡ್ಡ ಪಡೆಯೇ ಬಂತು. ಓದಿನ ದೊಡ್ಡ ಹರವು, ಪ್ರಾದೇಶಿಕ ಭಾಷೆ ಸಾಹಿತ್ಯಿಕ ಅರಿವು, ಸಮಕಾಲೀನ ಪ್ರಜ್ಞೆ, ಭವಿಷ್ಯದ ಕಾಳಜಿ ಮತ್ತು ತಂತ್ರಜ್ಞಾನವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದ ಇವರು ಇದುವರೆಗೆ ನೀಡಿದ ಕಲಾಕೃತಿಗಳು ಎಲ್ಲ ಕಾಲಕ್ಕೂ ಸಲ್ಲುವಂಥವುಗಳೇ. ವಿಶ್ವವಿದ್ಯಾಲಯ ಮತ್ತು ಶೈಕ್ಷಣಿಕ ಒಲಯಗಳಲ್ಲಿಯೂ ಗಂಭೀರವಾಗಿ ಚರ್ಚೆಗೊಳಗಾಗಬೇಕಾದವುಗಳೇ. ಆದರೆ ಆಗಿಲ್ಲವಲ್ಲ ಎನ್ನುವುದು ಮಾತ್ರ ಖೇದದ ಸಂಗತಿ.
         ನಾಗಾಭರಣರ(Nagabharana)  ಬ್ಯಾಂಕರ್ ಮಾರ್ಗಯ್ಯ (Banker Margayya)ನಾಲ್ಕೇ ಸಾಲುಗಳನ್ನು ಬರೆಯಿಸಿಕೊಳ್ಳುವ ಸಿನಿಮಾ ಅಲ್ಲ. ಕೋಮಲ್ ಪ್ರೊಡಕ್ಶನ್ ಅರ್ಪಿಸಿದ, ಆರ್.ಕೆ.ನಾರಾಯಣರವರ ಫೈನಾನ್‌ಸಿಯಲ್ ಎಕ್ಸಪರ್ಟ್(Financial Expert)  ಕಾದಂಬರಿಯಾಧಾರಿತ ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಅಪ್ಪಟ ಕಲಾವಿದರೆಂದೇ ಖ್ಯಾತರಾದ ಲೊಕೇಶ(Lokesh), ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ (Musuri krishnamurthi) ಮತ್ತು ಜಯಂತಿ(Jayanti) ಸೇರಿಕೊಂಡಿದ್ದಾರೆ. ಈ ಆಯ್ಕೆಯೇ ಸಾಕು ನಿರ್ದೇಶಕ ಟಿ.ಎಸ್.ನಾಗಾಭರಣ(T S Nagabharana)ರ ಸಿನಿಮಾ ಓದಿನ ಸೂಕ್ಷ್ಮತೆಯನ್ನ ಗಮನಿಸಲು. ಯಾವ ಪಾತ್ರಕ್ಕೆ ಯಾವ ನಟ, ಎಷ್ಟರ ಮಟ್ಟಿಗಿನ ನ್ಯಾಯ ಒದಗಿಸಬಲ್ಲ ಎನ್ನುವುದನ್ನು ತಿಳಿಯಲಾಗದ ನಿರ್ದೇಶಕ ಎಷ್ಟು ಸಿನಿಮಾಗಳನ್ನು ಮಾಡಿದರೂ ಅಷ್ಟೆ. ಅವನೂ ಒಬ್ಬ ನಿರ್ದೇಶಕನಾಗಿರುತ್ತಾನೆ ಆದರೆ ಜನಾಂಗದ ಕಣ್ಣನ್ನು ತೆರೆಯುವ ನಿರ್ದೇಶಕನಾಗಲು ಸಾಧ್ಯವಿಲ್ಲ.
ಆರ್.ಕೆ.ನಾರಾಯಣ(R K Narayan)ರ ಕಾದಂಬರಿಯನ್ನು ಆಧರಿಸಿ ಹಿಂದಿಯ ದೇವಾನಂದರು `ಗೈಡ್’(Guide) ಸಿನಿಮಾ ಮಾಡಿದ್ದಾರೆ. ಆದರೆ ಕಲಾತ್ಮಕತೆಯ ಜಾಡಿನಿಂದ ಜಾರಿ ಅಪ್ಪಟ ವ್ಯಾಪಾರಿ ಸಿನಿಮಾ ಆದ ಅಲ್ಲಿ ನಿರ್ದೇಶಕ ಮೂಲ ಕಾದಂಬರಿಕಾರನನ್ನು ಸಮಾಧಾನಪಡಿಸುವುದಾಗಿಲ್ಲ. ಆದರೆ ಇಂಥ ಒಂದು ಅವಿಶ್ವಾಸವನ್ನು ಲೇಖಕನಿಂದ ಗಳಿಸಿಕೊಳ್ಳದೇ ನಾಗಾಭರಣರು ಬ್ಯಾಂಕರ್ ಮಾರ್ಗಯ್ಯ(Financial expert)  ಮಾಡಿರುವುದು ಅವರ ನೈಪುಣ್ಯಕ್ಕೆ ಹಿಡಿದ ಕನ್ನಡಿ. ನಿರ್ದೇಶಕನ ಸಂಕಟಗಳು ನೂರಾರು. ಆದರೆ ಆ ಸಂಕಟಗಳಿಂದ ಗೆದ್ದವರು ಮಾತ್ರ ಕೆಲವೇ ಜನ. ತ.ರಾ.ಸು (Ta.Ra.Su)ಅವರ ನಾಗರ ಹಾವು(Nagarahaavu), ಆಕಸ್ಮಿಕ(Akasmika),  ಕುವೆಂಪು (Kuvempu) ಅವರ ಕಾನೂನು ಸುಬ್ಬಮ್ಮ ಹೆಗ್ಗಡತಿ(Kanuru subbamma heggadati) ಹೀಗೆ ಹೇಳುತ್ತ ಹೋದರೆ ಈ ಪಟ್ಟಿ ಬೆಳೆಯುತ್ತ ಹೋಗುತ್ತದೆ, ವಿಚಾರವಿಷ್ಟೆ ಇವುಗಳನ್ನು ಆಧಾರಿಸಿದ ಸಿನಿಮಾಗಳು ಲೇಖಕನಿಗೆ ಸಮಾಧಾನವನ್ನು ತರಲಿಲ್ಲ. ನಾಗಾಭರಣರ `ಬ್ಯಾಂಕರ್ ಮಾರ್ಗಯ್ಯ’ (Banker Margayya)ಈ ಸಿನಿಮಾಗಳ ಸಾಲಿಗೆ ಸೇರುವುದಿಲ್ಲ ಬದಲಾಗಿ ಸಮಾಧಾನದ ಪಟ್ಟಿಗೆ ಸೇರಿಕೊಳ್ಳುತ್ತದೆ.
ಅಲ್ಬರ್ಟ ಕಾಮುನ ಮೆಟಾಮಾರ್ಪಸಿಸ್ ನೀವು ಓದಿರದೇ ಇದ್ದರೆ ಚಿಂತೆ ಇಲ್ಲ. ಯಾಕೆಂದರೆ ಮನುಷ್ಯ ರೂಪಾಂತರಗೊಳ್ಳುತ್ತ ಹೋಗುವ ಮತ್ತು ಆ ಮೂಲಕ ಮಾಗುವ ಒಂದು ಮಹತ್ವದ ಕಥೆಯನ್ನು ಆತ ಹೇಳುತ್ತಾನಷ್ಟೆ. 

 

ನಾಗಾಭರಣರ `ಬ್ಯಾಂಕರ್ ಮಾರ್ಗಯ್ಯ’ ಇದನ್ನೆ ಪುನರುಚ್ಚರಿಸುತ್ತದೆ.
ಸಿನಿಮಾ ಪ್ರಾರಂಭವಾದಾಗ ಮಾರ್ಗಯ್ಯನ ಪಾತ್ರದಲ್ಲಿರುವ ಲೊಕೇಶ ಹಳ್ಳಿಗರಿಗೆ ಸೋಸೈಟಿಯೊಂದರಿಂದ ಸಾಲ ಎತ್ತುವ ಪಾಠಕಲಿಸುವ ಒಬ್ಬ ಮನುಷ್ಯ. ಮುರುಕು ಪೆಟ್ಟಿಗೆ, ಅಕ್ಷರ ಜ್ಞಾನ ಬಿಟ್ಟರೆ ಈ ಮಾರ್ಗಯ್ಯನ ಬಳಿ ಮತ್ತೇನು ಇಲ್ಲ. ಆತನ ಬಂಡವಾಳವೇ ಆತನ ತಲೆ. ಈ ತಲೆಯೊಂದಿದ್ದರೆ ಸಾಕು ಈ ಪ್ರಪಂಚವನ್ನು ಹೇಗೆ ಬೇಕಾದರೂ ಆಟವಾಡಿಸಬಹುದು ಎಂದು ನಂಬಿರುವ ಇ ಮನುಷ್ಯ ರೂಪಾಂತರಗೊಳ್ಳುತ್ತ ಹೋಗುವುದನ್ನ ನಾಗಾಭರಣ ಅದ್ಭುತವಾಗಿ ಚಿತ್ರಿಸಿದ್ದಾರೆ. ಸೋಸೈಟಿಯೊಂದರ ಮುಂದೆ ಬೇವಿನ ಮರದ ಕೆಳಗೆ ಕುಳಿತು ಹಣ ಗಳಿಸುವ ದಾರಿಗಳನ್ನು ಹುಡುಕುವ ಮಾರ್ಗಯ್ಯ ಸ್ವತಃ ಮಾರ್ಗವೊಂದರ ಶೋಧದಲ್ಲಿರುವ ಪಾತ್ರ. ಆದರೆ ತನ್ನ ಈ ಸತ್ಯ ಶೋಧನೆಗೆ ಸಮಾಜ, ಧರ್ಮ, ಕುಟುಂಬ ಏನೆಲ್ಲವನ್ನು ಬಳಸಿಕೊಳ್ಳುತ್ತ ಹೋಗುತ್ತಾನೆ. ಬಡವನಾಗಿ ಹುಟ್ಟಿದ ಆತನಿಗೆ ಬಡವನಾಗಿ ಸಾಯುವ ಹೇಡಿತನವಿಲ್ಲ. ಬದುಕಿನ ಈ ಪಂದ್ಯವನ್ನ ಹೇಗಾದರೂ ಗೆಲ್ಲಬೇಕು ಎನ್ನುವುದು ಆತನ ಹವಣಿಕೆ ಅಲ್ಲ. ಯಶಸ್ವಿಯಾಗಿಯೇ ಗೆಲ್ಲಬೇಕೆನ್ನುವುದು ಆತನ ಹಠ. ಅದಕ್ಕಾಗಿ ಆತ ಯಾವ ತಪಸ್ಸು, ಪೂಜೆ, ನಿಗ್ರಹ ಮತ್ತು ತ್ಯಾಗಕ್ಕೂ ಸಿದ್ಧ.
 ಸುಖಾಸುಮ್ಮನೆ ಸಡೆದಿದ್ದ ಆತನ ವ್ಯವಹಾರದ ಪುಸ್ತಕವೊಂದು ಮಗನ ಅಚಾತುರ್ಯದಿಂದಾಗಿ ಚರಂಡಿಗೆ ಬಿಳುತ್ತದೆ. ಅದರೊಂದಿಗೆ ಮಾರ್ಗಯ್ಯನ ಮೊದಲ ವ್ಯವಹಾರಗಳು ಚರಂಡಿ ಸೇರುತ್ತದೆ. ಇನ್ನೆನು ಮಾಡಬೇಕು ಎಂದು ಹತಾಶನಾಗಿ ಕುಳಿತಿದ್ದ ಮಾರ್ಗಯ್ಯನಿಗೆ ಪೂಜಾರಿಯೊಬ್ಬ ನಲವತ್ತೆಂಟು ದಿನಗಳ ಕಠಿಣ ವೃತವನ್ನು ಬೋಧಿಸಿ ಶ್ರೀಮಂತನಾಗುವ ದಾರಿ ತೋರಿಸುತ್ತಾನೆ. ಇದೇ ಸಂದರ್ಭದಲ್ಲಿ ಸಮಾಜ ವಿಜ್ಞಾನಿಯೊಬ್ಬ ಬೇಟ್ಟಿಯಾಗಿ ತಾನು ಬರೆದ ಲೈಂಗಿಕತೆಯ ಪುಸ್ತಕವನ್ನ ಮಾರ್ಗಯ್ಯನ ಕೈಗಿಡುತ್ತಾನೆ. ಅದನ್ನು ಮುದ್ರಿಸಿದರೆ ಕೋಟ್ಯಾಂತರ ಹಣವನ್ನು ಮಾಡಬಹುದು ಎಂದು ಬೇರೆ ತಿಳಿಸುತ್ತಾನೆ. ಬಡತನದಿಂದ ಕಂಗೆಟ್ಟು ಹೋದ ಮಾರ್ಗಯ್ಯನಿಗೆ ಹೇಗಾದರೂ ಸರಿ ಹಣ ಬಂದರೆ ಸಾಕಾಗಿದೆ. ಆಗ ಆತ  ಆ ಕೃತಿಯನ್ನು ಪ್ರಕಟಿಸುತ್ತಾನೆ. ಇದ್ದಕ್ಕಿದ್ದಂತೆ ನೂರಾರು ಮುದ್ರಣವನ್ನು ಕಂಡ ಆ ಕೃತಿಯ ಪರಿಣಾಮದಿಂದಾಗಿ ಮಾರ್ಗಯ್ಯ ದಿಢೀರ್ ಶ್ರೀಮಂತನಾಗುತ್ತಾನೆ. ತುತ್ತು ಅನ್ನಕ್ಕೂ ಗತಿಯಿಲ್ಲದ ಈತ ಶಿಕ್ಷಣ ತಜ್ಞನಾಗುತ್ತಾನೆ. ಕಾರ್‌ನಲ್ಲಿ ಸುತ್ತಾಡುವಷ್ಟು ಶ್ರೀಮಂತನಾಗುತ್ತಾನೆ. ಆದರೆ `ದೀಪದ ಬುಡದಲ್ಲಿಯೇ ಕತ್ತಲೆ’ ಎನ್ನುವಂತೆ ಆತ ಪ್ರಕಟಿಸಿದ ಈ ಪುಸ್ತಕ ಆತನ ಸಂಸಾರಕ್ಕೇ ಮುಳುವಾಗುತ್ತದೆ. ಮಗ ಲಂಪಟನಾಗುತ್ತಾನೆ. ಅಪ್ಪನ ಈ ಪುಸ್ತಕವನ್ನು ಓದುತ್ತಾ  ತಾನು ಓದಬೇಕಾದ ಪುಸ್ತಕಗಳನ್ನು ಮರೆಯುತ್ತಾನೆ. ಈಗ ಮಾರ್ಗಯ್ಯ ತಬ್ಬಿಬ್ಬಾಗುತ್ತಾನೆ.
         ಶುದ್ಧ ಸಂಸಾರಿಯಾದ ಮಾರ್ಗಯ್ಯನಿಗೆ ಈಗ ಮತ್ತೊಂದು ಪ್ರಶ್ನೆ. ತನ್ನ ಸಂಸಾರವನ್ನು ಉಳಿಸಿಕೊಳ್ಳುವುದು. ಮತ್ತೆ ಅದೇ ಸಮಾಜ ವಿಜ್ಞಾನಿಯೊಂದಿಗೆ ಸೇರಿಕೊಂಡು ಬ್ಯಾಂಕ್ ಶುರುಮಾಡುತ್ತಾನೆ. ಈಗ ಆತ ಬ್ಯಾಂಕರ್ ಮಾರ್ಗಯ್ಯ. ಈ ಎಲ್ಲ ಬದಲಾವಣೆಗಳ ಮಧ್ಯ ಆತ ಕಾಯ್ದುಕೊಂಡು ಬಂದ ಏಕೈಕ ಆಸ್ತಿ ಜನರ ವಿಶ್ವಾಸ. ಅದುವೇ ಆತನ ಬಂಡವಾಳ. ಆತ ಸ್ವತಃ ಎನನ್ನು ಹಾಕುತ್ತಿಲ್ಲ. ಬ್ಯಾಂಕರ್ ಮಾರ್ಗಯ್ಯನಾಗಿ ಆತ ಗೆಲ್ಲುವುದೂ ಹೀಗೆ. ಆದರೆ ಮಾರ್ಗಯ್ಯನ ಮಗನನ್ನೇ ಬಳಸಿಕೊಂಡು ಸಮಾಜ ವಿಜ್ಞಾನಿ ಮಾರ್ಗಯ್ಯನ ಸಂಸಾರದ ಐಕ್ಯತೆಗೆ, ವ್ಯಕ್ತಿತ್ವಕ್ಕೆ ಕೊಳ್ಳೆ ಇಡುತ್ತಾನೆ. ವಯಸ್ಸಿಗೆ ಬಂದ ಮಗ ಮದುವೆಯ ನಂತರವು ಸೊಸೆಯನ್ನು ದಿಕ್ಕರಿಸಿ ಸೂಳೆಯರ ಪಾಲಾಗುವುದು ಮಾರ್ಗಯ್ಯನ ಕರುಳು ಹಿಂಡುತ್ತದೆ. ಒಂದು ಕಾಲಕ್ಕೆ ನಶೆ ಹಿಂಡಿಯನ್ನು ಮಾರಿ ಹಣ ಗಳಿಸಬೇಕೆಂದು ಆಲೋಚಿಸಿದ ಮಾರ್ಗಯ್ಯ ಈಗ ತನ್ನ ಮಗನನ್ನು ನಶೆಯಿಂದ ಹೇಗೆ ಹೊರಗೆ ತರುವುದು ಎಂದು ಆಲೋಚಿಸುತ್ತಾನೆ.
         ಸಾಲ ಸಲಹೆಗಾರ, ನಶೆ ಪುಡಿ ಮಾರಾಟಗಾರ, ಹಲ್ಲು ಪುಡಿ ಮಾರಾಟಗಾರ, ಪ್ರಕಾಶಕ, ಬ್ಯಾಂಕರ್ ಹೀಗೆ ರೂಪಾಂತರಗೊಳ್ಳುತ್ತ ಹೋದ ಮಾರ್ಗಯ್ಯ ಒಬ್ಬ ಶುದ್ಧ ಲೌಕಿಕ. ಲೌಕಿಕತೆಯ ಆತನ ತಪಸ್ಸನ್ನು ನೀವು ಸಂಶಯಿಸುವಂತಿಲ್ಲ. ಯಾಕೆಂದರೆ ವ್ಯವಹಾರಿಕನಾಗಿ ಏನೆಲ್ಲ ಏರಿಳಿತಗಳನ್ನು ಕಾಣುವ ಆತನಲ್ಲಿ ಸಾಂಸಾರಿಕ ಕಾಳಜಿಯ ವ್ಯಕ್ತಿ ಘನತೆಯ ಬಿರುಕುಗಳಿಲ್ಲ. ತನ್ನ ಗೆಲುವಿನೊಂದಿಗೆ ಸಂಸಾರ ಗೆಲ್ಲಬೇಕು, ತತ್ವ ಗೆಲ್ಲಬೇಕು, ಸಮಾಜ ಗೆಲ್ಲಬೇಕು ಎನ್ನುವುದೇ ಮಾರ್ಗಯ್ಯನ ವ್ಯಕ್ತಿತ್ವಕ್ಕಿರುವ ಸೌಂದರ್ಯ. ಈ ನಿಟ್ಟಿನಲ್ಲಿ ಬ್ಯಾಂಕರ್ ಮಾರ್ಗಯ್ಯ ಕನ್ನಡ ಸಮಾಜ ಎಲ್ಲ ಕಾಲಕ್ಕೂ ಒಪ್ಪಿಕೊಳ್ಳುವ ಒಂದು ಪಾತ್ರ. ಬರೀ ಕಾದಂಬರಿಯ ಚೌಕಟ್ಟಿನಲ್ಲಿ ಉಳಿದುಕೊಂಡಿದ್ದರೆ ಆತ ನಮ್ಮನ್ನು ಕಾಡುತ್ತಿದ್ದನೋ ಏನೋ ಆತ ಸಿನಿಮಾದಲ್ಲಿ ನಾಗಾಭರಣರಿಂದ ಪುನರ್ಜನ್ಮ ಪಡೆದದ್ದು ನಮ್ಮನ್ನು ಎಲ್ಲ ಕಾಲಕ್ಕೂ ಕಾಡಲು ಪ್ರಾರಂಭವಾಗಿದೆ.
          ಟಿ.ಎಸ್.ನಾಗಾಭರಣ(T S Nagabhrana) ಕನ್ನಡ ಸಿನಿಮಾ ಕಂಡ ಒಂದು ಅಪರೂಪದ ವ್ಯಕ್ತಿತ್ವ. ಇಂಥ ಸಿನಿಮಾಗಳು ಅವರಿಂದ ಮಾತ್ರ ಸಾಧ್ಯ. ಒಂದು ಕಾಲಕ್ಕೆ ಈ ನಾಗಾಭರಣ ರಂಗವನ್ನ ನಿರ್ಗಮಿಸಬೇಕಾದುದು ಅನಿವಾರ್ಯವೇ ಆದರೆ ಈ ಮಾತು ಅವರ ಪಾತ್ರಗಳಿಗೆ ಅನ್ವಯವಾಗುವುದಿಲ್ಲ ಸಿನಿಮಾ ಇರುವವರೆಗೂ ಅವರ ಈ ಪಾತ್ರಗಳು ಉಳಿದುಕೊಳ್ಳುತ್ತವೆ.
                                                                        



Friday, June 8, 2012

ಬಹಿಷ್ಕೃತ ಬ್ರಾಹ್ಮಣರ ಬೆಳಕಿನಲ್ಲಿ


ಬಹಿಷ್ಕೃತ ಬ್ರಾಹ್ಮಣರ ಬೆಳಕಿನಲ್ಲಿ
                                                      ---------------------------------------------------------------------------------------
Shishunala Sharifa & Guru ovinda Bhatta
 "ಚಡಚಣ(chadachan)ವೆಂದರೆ ಚಂದಪ್ಪ ಹರಿಜನ್(chandappa harijan), ಪುತ್ರಪ್ಪ ಸಾಹುಕಾರ,ಕೇಶವ ತಾವರಖೇಡ ಹಾಗೂ ಭೀಮಾತೀರದ ಹಂತಕರು ಎನ್ನುವ ಗೃಹಿಕೆಗೆ ತಂದು ನಿಲ್ಲಿಸಿದ್ದು ಮಾತ್ರ ನಮ್ಮ ಕನ್ನಡ ಸಿನಿಮಾದ ಕೆಲವು ಪಾತಕ ಮನಸ್ಸಿನ ನಿರ್ದೆಶಕರು ಮತ್ತು ಬೆಂಗಳೂರಿನ ಬರಹಗಾರರು. ಆದರೆ ನಲವತ್ತು ವರ್ಷಗಳ ದೀರ್ಘ ಬಾಳನ್ನು ಇಲ್ಲಿ ಕ್ರಮಿಸಿದ ನಮ್ಮಂಥವರಿಗೆ ನಮ್ಮೂರು ಗೊತ್ತು. ನಮ್ಮೂರು ಚಡಚಣ ಎಂದರೆ ಸಾಹಿತ್ಯ ಮತ್ತು ಆಧ್ಯಾತ್ಮ ದಿಗ್ಗಜರುಗಳಾದ ಸಿಂಪಿ ಲಿಂಗಣ್ಣ, ಬೇಂದ್ರೆ, ಮಧುರಚನ್ನ, ಕಾಪಸೆ, ಶ್ರೀ. ಎಂ.ಆರ್.ಜಾಹಾಗೀರದಾರ, ಡಾ.ಜಿ.ಬಿ.ಸಜ್ಜನ, ಗದುಗಿನ ಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಸಿದ್ಧೇಶ್ವರ ಸ್ವಾಮಿಗಳು. ನಮ್ಮೂರೆಂದರೆ ಅರವಿಂದ ಗ್ರಂಥಮಾಲೆ, ಸುಪ್ರಸಿದ್ಧ ದನಗಳ ಸಂತೆ, ಅರಿವೆ 
                                      ವ್ಯಾಪಾರ  ಹಾಗೂ ಜನಪದ ಜಾತ್ರೆ".




 ಬೇಲೂರಿನಲ್ಲಿ ನನ್ನ ಎದುರು ಮನೆಯೇ ಬೇಲೂರು ಕೃಷ್ಣಮೂರ್ತಿಯವರದ್ದು. ಸುಪ್ರಸಿದ್ಧ ವೈಕುಂಠದಾಸರ ಬೀದಿಯಲ್ಲಿ ಇರುವ ಇವರ ಆತ್ಮಕತೆಗೆ ‘ವೈಕುಂಠ ಬೀದಿ’ ಎಂದು ಹೆಸರಿಟ್ಟವನು ನಾನೆ. ಇವರು ನಮ್ಮ ಬ್ರಹ್ಮಣಕೇರಿಯ  ಕಾಫಿರ. ಇವರ ಆತ್ಮ ಕತೆಯಲ್ಲಿ ಒಂದು ಪದ್ಯ -
ಉಪ್ಪಾರಣ್ಣ ಊ ರಿಗೆ ಬಿದ್ದ ಕಚ್ಚೇಪೋಯ
ಜಂಗಮಯ್ಯ ಜಾರಿಬಿದ್ದ ಲಿಂಗಪೋಯ
ಹಾರುವಯ್ಯ ಹಾರಿಬಿದ್ದ ದಾರಪೋಯ.
ಇದು ಹಂಗು ಹರಿದವರು ತಮ್ಮನ್ನೂ, ಲೋಕವನ್ನೂ ಮುಂದಿಟ್ಟುಕೊಂಡು ನಗುವ ಪರಿ. ಗುರು ಗೋವಿಂದ ಭಟ್ಟನ ನೆಲೆಯವರು. ಇಂಥ ಬಹಿಷ್ಕೃತ ಬ್ರಾಹ್ಮಣರ ಒಂದು ದೊಡ್ಡ ಪಡೆಯೇ ನನ್ನನ್ನು ಆರಂಭದಿಂದಲೂ ತಿದ್ದಿ ತೀಡಿತು ಎಂದು ಹೇಳಲು ಅಭಿಮಾನವೆನಿಸುತ್ತದೆ. ಬಾಲ್ಯದಲ್ಲಿ ರಾಮಚಂದ್ರ ಕುಲಕರ್ಣಿ, ಹಳ್ಳಿ ಡಾಕ್ಟರು, ಆನಂತರ ಪ್ರೊ ಆರ್.ಕೆ.ಕುಲಕರ್ಣಿ, ಸು.ರಂ.ಯಕ್ಕುಂಡಿಯ(SU.RAM.YAKKUNDI) ಕಾವ್ಯ, ಎಲ್ಲ ಈಗಲೂ ರೋಮಾಂಚನಗೊಳಿಸುವ ಕ್ಷಣಗಳು. ಹಿರಿಯರು ‘ಜಾತಿ ನ ಪೂಚ್ ಸಾಧೂಕಿ’ ಎಂದಿದ್ದಾರೆ. ಅದಕ್ಕಾಗಿ ನಾನವರ ಜಾತಿ ಜಾಲಾಡುತ್ತಿಲ್ಲ. ನಮ್ಮಂಥವರನ್ನು ಬೆಳೆಸಿದ ಅವರ ಹೃದಯ ಶ್ರೀಮಂತಿಕೆಯ ನೆನಪುಗಳನ್ನು ಬಿಚ್ಚಿಡುತ್ತಿದ್ದೇನೆ.
‘ತಂದೆ ಗೋವಿಂದ ಗುರುವಿನ ಪಾದಕ’ ಎಂದು ಸಿ.ಅಶ್ವಥ್(C. Ashwath) ರಾಗದ ತಾರಕದಲ್ಲಿ ಹಾಡುತ್ತಿದ್ದರೆ ನನ್ನೆದೆಯ ತಂಬೂರಿಯನ್ನು ಮೀಟಿ ನೆನಪುಗಳ ಢೇರಿಯ ಮುಂದೆ ಡಂಗುರ ಸಾರಿದಂತೆ ಭಾಸವಾಗುತ್ತದೆ. ಎದ್ದು ಕಾಡುವ ಸಾವಿರಾರು ನೆನಪುಗಳಲ್ಲಿ ಕಾಡುವ ಈ ನನ್ನ ಗುರುವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ. ಅಲ್ಲಮನಂತೆ ಬಯಲಾಗುತ್ತಾ, ಆಳವಾಗುತ್ತಾ ಶಬ್ಧಗಳ ಹಂಗು ಹರಿದು, ಸಾಧನೆಯ ಭ್ರಮೆಯಿಂದ ಹೊರಬಂದು, ನಮ್ಮೂರ ಹಳ್ಳದಂತೆ ಬತ್ತಿ ಹೋದ ಆ ಪುಣ್ಯಾತ್ಮನ ಪರೋಪಕಾರದ ಬುತ್ತಿಯನ್ನು ಬಿಚ್ಚಿಡುವುದು ಸೂಕ್ತವೆನಿಸುತ್ತದೆ. ಹಾಂ, ಅಂದ ಹಾಗೆ ಇದು ಗುರುವಂದನೆಯ ಸಂದರ್ಭ. ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ಅವರವರ ಜಾತಿ ಗುರುಗಳು, ಹೆಣಗಳೂ ನಾಚುವ ರೀತಿಯಲ್ಲಿ ಶೃಂಗಾರಗೊಂಡು ಆತ್ಮರತಿಯನ್ನು ಅನುಭವಿಸಿ ಆಯಿತು. ಆದರೆ ಇವರಂತೆ ನೆಲ ನುಂಗುವ ರಾಜಕಾರಣಿಗಳನ್ನು, ಗುತ್ತಿಗೆದಾರರನ್ನು, ತನ್ನ ಅಸ್ಥಿತ್ವದ ಉಪಶಾಖೆಗಳನ್ನು ಹುಟ್ಟುಹಾಕದ ನನ್ನ ಗುರುವಿಗೆ ಈ ನುಡಿನಮನವೇ ಸಾಕಾಗಿರಬೇಕು.
ನಮ್ಮೂರು ಚಡಚಣ(chadchan). ಪ್ರಕೃತಿ ಹರಸಿದ ಒಂದೇ ಕಾಲವಾದ ಬೇಸಿಗೆಯನ್ನೇ, ಅದರ ತೀವ್ರತೆಯನ್ನು ಆದರಿಸಿ ಬೇಸಿಗೆ, ಕಡು ಬೇಸಿಗೆ ಮತ್ತು ಅತೀ ಬೇಸಿಗೆಯನ್ನು ಅನುಭವಿಸುತ್ತಾ, ಸಾಹಿತ್ಯ ಮತ್ತು ಆಧ್ಯಾತ್ಮಕ್ಕೊಂದು ಬೆಸುಗೆಯನ್ನು ಮಾಡಿಕೊಂಡಿತು. ಚಡಚಣವೆಂದರೆ ಚಂದಪ್ಪ ಹರಿಜನ್(chandappa harijan), ಪುತ್ರಪ್ಪ ಸಾಹುಕಾರ,ಕೇಶ ತಾವರಖೇಡ ಹಾಗೂ ಭೀಮಾತೀರದ ಹಂತಕರು ಎನ್ನುವ ಗೃಹಿಕೆಗೆ ತಂದು ನಿಲ್ಲಿಸಿದ್ದು ಮಾತ್ರ ನಮ್ಮ ಕನ್ನಡ ಸಿನಿಮಾದ ಕೆಲವು ಪಾತಕ ಮನಸ್ಸಿನ ನಿರ್ದೆಶಕರು ಮತ್ತು ಬೆಂಗಳೂರಿನ ಬರಹಗಾರರು. ಆದರೆ ನಲವತ್ತು ವರ್ಷಗಳ ದೀರ್ಘ ಬಾಳನ್ನು ಇಲ್ಲಿ ಕ್ರಮಿಸಿದ ನಮ್ಮಂಥವರಿಗೆ ನಮ್ಮೂರು ಗೊತ್ತು. ನಮ್ಮೂರು ಚಡಚಣ ಎಂದರೆ ಸಾಹಿತ್ಯ ಮತ್ತು ಆಧ್ಯಾತ್ಮ ದಿಗ್ಗಜರುಗಳಾದ ಸಿಂಪಿ ಲಿಂಗಣ್ಣ(Simpi Linganna), ಬೇಂದ್ರೆ(Bendre), ಮಧುರಚನ್ನ(Madhura Chenna), ಕಾಪಸೆ(Capase), ಶ್ರೀ. ಎಂ.ಆರ್.ಜಾಹಾಗೀರದಾರ( M R Jahagirdar), ಡಾ.ಜಿ.ಬಿ.ಸಜ್ಜನ(Dr. G B Sajjan), ಗದುಗಿನ ಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಸಿದ್ಧೇಶ್ವರ ಸ್ವಾಮಿಗಳು(Siddeshwara Swamiji). ನಮ್ಮೂರೆಂದರೆ ಅರವಿಂದ ಗ್ರಂಥಮಾಲೆ(Aravinda Granthamaale), ಸುಪ್ರಸಿದ್ಧ ದನಗಳ ಸಂತೆ, ಅರಿವೆ ವ್ಯಾಪಾರ ಹಾಗೂ ಜನಪದ ಜಾತ್ರೆ. ‘ಕಾನಡೀಚ ವಿಠ್ಠಲ’ ಎಂದೇ ಮಹಾರಾಷ್ಟ್ರದ ದೇವರುಗಳಲ್ಲಿ ಮರಾಠಿ(Marathi)ಗರ ವಕ್ರದೃಷ್ಠಿಗೆ ತುತ್ತಾದ ಪಂಡರಪುರದ ವಿಠ್ಠಲ(Pandarapua Vittal)ನನ್ನು ಕಾಣಲು ನೀವು ನಮ್ಮೂರನ್ನು ದಾಟಿಕೊಂಡೇ ಹೋಗಬೇಕು. ಹನ್ನೆರಡನೆ ಶತಮಾನದ ಶರಣೆ ಗುಡ್ಡಾಪುರದ ದಾನಮ್ಮ(Guddapur Danamma)ನನ್ನು ಭೆಟ್ಟಿಯಾಗಲೂ ನೀವು ನಮ್ಮೂರನ್ನೇ ಬಳಸಿಕೊಳ್ಳಬೇಕು. ಬೇಂದ್ರೆ ಸೋಲ್ಲಾಪುರದಲ್ಲಿರುವಷ್ಟೂ ಕಾಲ ಪದೇ ಪದೇ ಬಂದು ತಂಗಿದ ಊರು ಯಾವುದು ಎಂದು ಕೇಳಿದರೆ ಚಡಚಣವೆಂದೇ ಹೇಳಬೇಕು. ಬೇಂದ್ರೆ ಅವರ ನಾಟಕಗಳಲ್ಲಿ ಒಂದಾದ ‘ಮಂದಿ ಮದುವಿ’ಗೆ ನಮ್ಮೂರ ಸೇಡ್ಜಿಯ ಮನೆಯ ಜಗುಲಿಯೇ ಚಿಂತಕರ ಚಾವಡಿಯಾಯಿತು. ಹಾಗೆಯೆ ಈ ಸೆಡ್ಜಿಯ ಮನೆಯ ಪಕ್ಕದ ಸಂದಿಯೊಳಗಿನ ಒಂದು ಮನೆಯೊಳಗೆ ವಾಸವಾಗಿದ್ದ ಈ ನನ್ನ ಬರಹದ ನಾಯಕ, ನನ್ನ ಗುರು ಶ್ರೀ ಎಂ.ಆರ್.ಜಾಹಾಗೀರದಾರರ ನಾಲ್ಕು ದಶಕಗಳ ಬದುಕಿಗೆ ಚಡಚಣ ಸಾಕ್ಷಿಯಾಯಿತು.
ನಾನು ಹೆಚ್ಚು-ಕಡಿಮೆ ಏಳನೆಯ ಇಯತ್ತೆಯಲ್ಲಿದ್ದಾಗ  ಕವನದ ಗೀಳು ಶುರುವಾಯಿತು. ಆ ಆರಂಭದ ಕವಿತೆಗಳ ಮೊದಲ ಶ್ರೋತೃ ಶ್ರೀ ಸಿಂಪಿ ಲಿಂಗಣ್ಣ(Simpi Linganna). ನನ್ನದು ಅವರದು ಒಂದು ದಶಕದ ನಂಟು. ಅದೊಂದು ಯೋಗಾಯೋಗ, ಒಂದು ಮುಂಜಾನೆ ಮನೆವರೆಗೆ ಬಂದು ನನ್ನನ್ನು ಕರೆದುಕೊಂಡು ಅವರ ಮಿತ್ರರೊಬ್ಬರ ಮನೆಗೆ ಹೊರಟರು. ನನಗೆ ನೆನಪಿದೆ, ಒಂದು ಕೈಯಲ್ಲಿ ತೊಡೆಯವರೆಗೂ ಎತ್ತರಿಸಿದ ಧೋತ್ರ, ಇನ್ನೊಂದು ಕಡೆ ನಾನು, ನನ್ನ ಬಗಲಲ್ಲಿ ಕವಿತೆಗಳ ಒಂದು ನೋಟಬುಕ್, ಹೋಗಿ ನಿಂತದ್ದು ಮುಟ್ಟಿದರೆ ಕಿರ್ರಗುಟ್ಟುವ ಒಂದು ತೊಲಬಾಗಿಲ ಮುಂದೆ. ಸಣಕಲು ದೇಹದ ನಾನು ಕದ ತಳ್ಳಿ ಒಳ ಹೋದರೆ ಶ್ವೇತ ವಸ್ತ್ರಧಾರಿ, ಸ್ಥೂಲಕಾಯದ, ಪುಸ್ತಕ ರಾಶಿ, ಹಾರ್ಮೋನಿಯಂ, ಇಸ್ಪೀಟ್ ಕಾರ್ಡುಗಳ ಮಧ್ಯ ದೊಡ್ಡ ನಗೆಯೊಂದಿಗೆ ನಿತ್ಯ ನಮಗಾಗಿ, ನಮ್ಮಂಥವರಿಗಾಗಿಯೇ ಕಾಯುತ್ತಲೇ ಕುಳಿತಿರುವರೋ ಎನ್ನುವ ಓರ್ವ ಆತ್ಮಿಯ ಮನುಷ್ಯ. ಒಂದು ಕ್ಷಣ ಸಿಂಪಿ ಲಿಂಗಣ್ಣ ನನ್ನನ್ನ್ಯಾಕೆ ಇವರ ಬಳಿ ಕರೆತಂದರು ನನಗೆ ತಿಳಿಯಲೇ ಇಲ್ಲ. ಹಾಗೆ ನೋಡಿದರೆ ಬಾಲ್ಯದಿಂದಲೂ ಈ ವ್ಯಕ್ತಿ ನಮಗೆ ಚಿರಪರಿಚಿತ. ನಾವು ಎರಡು ಮೂರನೆಯ ಇಯತ್ತೆಯಲ್ಲಿದ್ದಾಗ ರಸ್ತೆಯ ಪಕ್ಕದಲ್ಲಿ ನಮಸ್ತೆ ಹೊಡೆಯಲು ಸಾಲಿನಲ್ಲಿ ನಿಂತಿರುತ್ತಿದ್ದೆವು. ಟ್ರಕ್ಕಿನವರೊ, ಟ್ರ್ಯಾಕ್ಟರನವರೊ, ಬಸ್ಸಿನವರೊ, ಸೈಕಲ್‌ನವರೊ ಯಾರಾದರೂ ಸರಿ ಅವರಿಗೆ ನಮ್ಮ ನಮಸ್ತೆ ಕಂಪಲ್ಸರಿ. ಅವರು ಮರಳಿ ಹೇಳುವುದು ಬಿಡುವುದು ಅವರ ಯೋಗ್ಯತೆ. ಯಾರೇ ಮಾಡದಿದ್ದರೂ ಲೂನಾ ಹತ್ತಿಕೊಂಡು ಮುಂಜಾನೆ ಒಂಬತ್ತಕ್ಕೆ ಸಾಯಂಕಾಲ ಐದು ಗಂಟೆಗೆ ಬರುತ್ತಿದ್ದ ಈ ಮನುಷ್ಯ ಮಾತ್ರ ಮುಗುಳ್ನಗುತ್ತ ನಮಗೊಂದು ನಮಸ್ತೆ ಹೊಡೆಯುತ್ತಾರೆನ್ನುವುದು ಖಾತ್ರಿ. ಅಂದಹಾಗೆ  ಅವರಿಗೆ ಜಹಾಗೀರದಾರ ಮಾಸ್ತರ ಎಂದು ಕರೆಯುತ್ತಾರೆ, ಅವರು ಅಘರಖೇಡದ ಜಹಾಗೀರದಾರರು. ಅವರು ಇಂಗ್ಲೀಷ ಬಾರದ ಹಳ್ಳಿ ಮಕ್ಕಳಿಗೆ ಪುಕ್ಕಟೆಯಾಗಿ ಶಿಕೋಣಿ ನಡೆಸುತ್ತಾರೆ, ಅವರು ನಮ್ಮೂರ ಹೈಸ್ಕೂಲಿನ ಹೆಡ್‌ಮಾಸ್ತರು ಎಂದೂ ನಮಗೆ ಗೊತ್ತು.
ಇಲ್ಲಿಂದಲೇ ಶುರುವಾಯಿತು ನಮ್ಮ ಜುಗಲ್‌ಬಂದಿ. ಅಂದು ಜಾಹಾಗೀರದಾರರ ಗರಡಿಗೆ ನನ್ನನ್ನು ಸೇರಿಸಿ ಸಿಂಪಿ ಲಿಂಗಣ್ಣ ಮಾರ್ಗದರ್ಶಿಯಾದರೆ, ಎತ್ತಿಕೊಂಡ ಆ ಗುರು  ನನ್ನಂತರಂಗದ ಚಕ್ಷುಗಳಾದರು. ನಾಲ್ಕಾರು ದಿನಗಳಿಗೊಮ್ಮೆ ಕವಿತೆಗಳನ್ನು ತೆಗೆದುಕೊಂಡು ನಾನು ಹೋಗುವುದು, ಅವರು ಅತ್ಯಂತ ಧ್ಯಾನಸ್ಥರಾಗಿ ಕೇಳುವುದು, ಶ್ರೀ ಅರವಿಂದೋ, ಮಾತೆ, ರಾಮಕೃಷ್ಣ ಪರಮಹಂಸ, ವಿವೇಕಾನಂದ(Vivekanand) ಮತ್ತು ಅಂಬೇಡ್ಕರ(Ambedkar)ರನ್ನ ಕುರಿತು ಒಂದಿಷ್ಟೇನಾದರು ಹೇಳುವುದು ಇದು ಮಾಮೂಲು. ಅಂದಹಾಗೆ ನನ್ನ ಗುರು ಜಾಹಾಗೀರದಾರ ‘ಮ’ ಮಾಹಾಶಯ(ಮಹೇಶ ಚಂದ್ರಗುಪ್ತಾ)(Maheh Chandrgupta)ನ ರಾಮಕೃಷ್ಣ ವಚನ ವೇದ(Ramakrishna Vachanaveda)ವನ್ನು ನನಗೆ ಓದಲು ಕೊಟ್ಟಾಗ ನಾನು ಎಂಟನೆಯ ತರಗತಿಯಲ್ಲಿದ್ದೆ. ಅದೊಂದು ಅದ್ಭುತ ಪುಸ್ತಕ. ಮುಂದೊಂದು ದಿನ ಇದ್ದಕ್ಕಿಂದಂತೆ ಅವರು ನನ್ನನ್ನು ಕೂಡ್ರಿಸಿಕೊಂಡು ಕುವೆಂಪು(Kuvempu) ಅವರ ರಾಮಾಯಣ ದರ್ಶನಂ(Ramayana Darshanam) ಬೋಧಿಸಲಾರಂಭಿಸಿದರು. ಜಹಾಗೀರದಾರರ ಓದು ಕಲುಶಿತಗೊಂಡಿರಲಿಲ್ಲ ಅಥವಾ ಜಾತಿ ಮೋಹಕ್ಕೆ ಜೋತು ಬಿದ್ದು ತಮ್ಮ ಪ್ರನಾಳ ಶಿಶುಗಳನ್ನೇ ಜಟ್ಟಿಗಳೆಂದು ಅಗ್ಗಡಿಸುವ ಅಗ್ಗತನಕ್ಕೂ ಅದು ಒಳಗಾಗಿರಲಿಲ್ಲ. ನಮ್ಮೂರ ಹಳ್ಳದಂತೆ ಮನಸಿಚ್ಚೆ ಹರಿದ ಅವರ ಅಧ್ಯಯನದಲ್ಲಿ ನಾನು ಪ್ರಮುಖವಾಗಿ ಕಂಡದ್ದು ಜೆ.ಕೃಷ್ಣಮೂರ್ತಿ(J Krishna murthy), ಓಶೋ(Osho), ವಚನ ಸಾಹಿತ್ಯ(Vachana Saahitya), ಗುರುದೇವ ರಾನಡೆ ಸಾಹಿತ್ಯ(Gurudev Ranade Literature), ಗುರುಲಿಂಗ ಜಂಗಮ ಮಹಾರಾಜ ಹಾಗೂ ಮಧುರಚನ್ನರ ಸಾಹಿತ್ಯ(Madhura Chennara Saahitya), ಅಂಬೇಡ್ಕರ ಮತ್ತು ಉಪನಿಷತ್ ಸಾಹಿತ್ಯಗಳನ್ನು. ಶ್ರೀ ಅರವಿಂದೋ ಅವರ “ಡಿವೈನ ಲೈಫ(Divine Life)” ಕುರಿತು ಕರ್ನಾಟಕದಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ಏಕೈಕ ವ್ಯಕ್ತಿ ಈ ಜಹಾಗೀರದಾರ ಎಂದು ವಿ.ಕೃ.ಗೋಕಾಕ ದಾಖಲಿಸಿದ್ದು ನನಗೆ ನೆನಪಿದೆ. ಇಂಗ್ಲೀಷ ಭಾಷಾ ಪ್ರಭುತ್ವದ ಆ ಭಾಗದ ಅದ್ಭುತ ಪ್ರತಿಭೆ ಎಂದು ಖ್ಯಾತರಾದ ಜಿ.ಬಿ.ಸಜ್ಜನ ಭಾಷಾ ಸೂಕ್ಷ್ಮತೆಗಳನ್ನು ಕುರಿತು ಅವರೊಂದಿಗೆ ಚರ್ಚಿಸುತ್ತಿದ್ದುದು ನನಗೆ ನೆನಪಿದೆ. ಸಿಂಪಿ ಲಿಂಗಣ್ಣನವರ ಎಲ್ಲ ಬರಹಗಳು ಹಸ್ತಪ್ರತಿ ರೂಪದಲ್ಲಿ ಮೊದಲು ಸೇರುತ್ತಿದ್ದುದೇ ಈ ನನ್ನ ಗುರುವಿನ ಕೈಗೆ. ಸೂರ್ಯನ ಪರಿಭ್ರಮಣ ಬೇಕಾದರೂ ಬದಲಾಗಬಹುದು ಆದರೆ ಮುಂಜಾವಿನ ಇವರಿಬ್ಬರ ಭೇಟ್ಟಿ ತಪ್ಪುವುದಿಲ್ಲ ಎನ್ನುವಷ್ಟು ಗಾಢ ಸ್ನೇಹ ಇವರದು. ಈ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತ ಜಹಾಗೀರದಾರರ ಮನೆಯಲ್ಲಿ ಬೆಳಗಾದರೆ ಅವರ ಪಕ್ಕದಲ್ಲಿಯೇ ಕುಳಿತಿರುತ್ತಿದ್ದ ನನಗೆ ಅವರ ಸಮೀಪದಲ್ಲಿರುವ ಒಂದು ಸಾತ್ವಿಕ ಸೊಕ್ಕು. ಆಗೀಗ ನನ್ನ ಹಸಿವೆಯನ್ನು ಮುಂಚೆಯೆ ಊಹಿಸಿಕೊಂಡು ಬಾಳೆಹಣ್ಣು, ಅವಲಕ್ಕಿ, ಪೇಡ, ಮಾವಿನಹಣ್ಣುಗಳ ನಿರಂತರ ಪೂರೈಕೆ ಇದ್ದೇ ಇರುತ್ತಿತ್ತು.
ಅದು ಯಾವ ದಿನ ಈಗ ನಾನು ನೆನಪು ಹಾರಿದ್ದೇನೆ. ಅವರು ಕೊಟ್ಟ ತಿಂಡಿ ತಿನ್ನಲು ನಾನು ಒದ್ದಾಡುತ್ತಿದ್ದೆ. ಅವರು ಕೇಳಿದರು - ದಿನಾಲೂ ಎಷ್ಟು ಚಪಾತಿ ತಿಂತಿಯಾ?
ಮೂರು
ನಿನ್ನ ವಯಸ್ಸಿನಲ್ಲಿ ನಾನು ಎಷ್ಟು ತಿನ್ನುತ್ತಿದ್ದೆ ಗೊತ್ತೇನು?
ಗೊತ್ತಿಲ್ಲ.
ಹತ್ತು ಚಪಾತಿ ತಿಂತಿದ್ದೆ. ಬಿಜಾಪುರದ ಗೌಳಿಗೇಟನಲ್ಲಿ ಒಂದು ಖಾನಾವಳಿ ಇತ್ತು. ಅಲ್ಲಿ ನಾನು ಊಟಾ ಮಾಡ್ತಿದ್ದೆ. ಒಂದು ಚಪಾತಿಗೆ ಒಂದು ಚಮಚ ತುಪ್ಪ ಹಚ್ಚಬೇಕು ಅಂತ ಆಗ ಪದ್ಧತಿ ಇತ್ತು. ನಾನು ಹತ್ತು ಚಪಾತಿ ತಿನ್ನಾವಾಂ. ಹತ್ತು ಚಮಚ ತುಪ್ಪ ಹಚ್ಚುದಾಗುದಿಲ್ಲಾ ಅಂಥೇಳಿ ಖಾನಾವಳಿಯಾವಾಂ ಊಟ ಬಿಡಿಸಿಬಿಟ್ಟ. ತಿಂದ್ರ ಊಟಾ ಬಡಸೋರು ಓಡಿಹೋಗಂಗ ತಿನಬೇಕು. ಎಂದು ಹೇಳಿ ಅವರು ನಕ್ಕಾಗ ಕೆಂಪಗಾಗಿದ್ದ ಅವರ ಕೆನ್ನೆಗಳನ್ನು, ಮಾತೃವಾತ್ಸಲ್ಯದ ಆ ದೃಷ್ಠಿಯನ್ನು ನನಗೆ ಇಂದಿಗೂ ಮರೆಯುವುದಾಗಿಲ್ಲ. ಮರೆಯುವಂಥದ್ದೇನನೂ ಕಲಿಸಲಿಲ್ಲ ಆ ನನ್ನ ಗುರು. ಚೆನ್ನಾಗಿ, ಮುಕ್ತವಾಗಿ ಪಂಥ ಪಂಗಡಗಳ ಗೊಡವಿಗೆ ಬೀಳದೆ ಓದಬೇಕು. ಹರಿದು ಬಂದವರನ್ನು ಬಾಚಿ ತಬ್ಬಿಕೊಳ್ಳಬೇಕು ಎಂದು ಕಲಿಸಿದ ಅವರು ನಾನು ಚೆನ್ನಾಗಿ ವ್ಯಾಯಾಮ ಮಾಡಬೇಕು ಎನ್ನುವುದರ ಕಡೆಗೂ ಗಮನವಿರಿಸಿದ್ದರು. ಅಂದಹಾಗೆ ವೃತ್ತಿಯಿಂದ ನಿವೃತ್ತರಾದ ನಂತರ ಒಬ್ಬ ಸಂಗೀತ ಮಾಸ್ತರನನ್ನು ಇಟ್ಟುಕೊಂಡು ಹಾರ್ಮೋನಿಯಂ ಕಲಿಕೆಯಲ್ಲಿ ತೊಡಗಿಕೊಂಡಿದ್ದರು. ಬದುಕಿನ ಮುಸ್ಸಂಜೆಯಲಿ ಅಂಬೇಡ್ಕರರನ್ನು ಕುರಿತು “ಕ್ರಾಂತಿ ಕಿಡಿ ಬಿ.ಆರ್.ಅಂಬೇಡ್ಕರ” ಪುಸ್ತಕ ಬರೆಯುತ್ತಿದ್ದರು. ಕೊನೆ ಕೊನೆಗೆ ಧಗೆಯ ಬಾಧೆ ತಾಳಲಾಗದಕ್ಕೆ ಬರಿಮೈಯಲ್ಲಿರುತ್ತಿದ್ದ ಅವರು ಜನಿವಾರ ಹಾಕಿಕೊಂಡಿರಲಿಲ್ಲ. ಮಾಂತಪ್ಪ ಸಾವಳಗಿ ಎನ್ನುವವರ ಹೋಟೆಲನಿಂದ ಊಟ ತರಿಸಿಕೊಳ್ಳುತ್ತಿದ್ದ ಅವರ ಮಜ್ಜಿಗೆಗೆ ಉಪ್ಪು ವಗ್ಗರಣಿಯ ನಿಷೇಧವಿರಲಿಲ್ಲ. ಅದೊಂದು ರೀತಿ ಕುಡಿವ ನೀರೇ ತೀರ್ಥ. ಸಿಕ್ಕ ಅನ್ನವೇ ಪ್ರಸಾದವೆಂದುಕೊಂಡ ಸ್ಥಿತಿ. 
ಆಲದ ಮರದಂತೆ ಬೆಳೆಯುವ, ವಿಶಾಲವಾಗಿ ಹಬ್ಬಿಕೊಳ್ಳಬಲ್ಲ ಎಲ್ಲ ಶಕ್ತಿ ಸಾಧ್ಯತೆಗಳಿದ್ದ ಎಂ.ಆರ್.ಜಹಾಗೀರದಾರ ಈ ಚಡಚಣಕ್ಕೆ ಯಾವಾಗ ಬಂದರು? ಗೊತ್ತಿಲ್ಲ ನನಗೆ. ಆದರೆ ಯಾಕೆ ಬಂದರು ಎಂಬುದು ಗೊತ್ತು. . . . . . ಆಸುಪಾಸಿನಲ್ಲಿ ನಮ್ಮೂರ ಹೈಸ್ಕೂಲನ್ನು ವೇದಾಂತ ಕೇಸರಿ ಗದುಗಿನ ಮಲ್ಲಿಕಾರ್ಜುನ ಸ್ವಾಮಿಗಳು ಸ್ಥಾಪಿಸಿದರು. ಇವರು ಜಾತಿಯಿಂದ ನಾಯಿದರು(ನಾವಲಿಗ). ಆಗ ವೃತ್ತಿಯಿಂದ ಹವಾಲ್ದಾರರಾಗಿದ್ದ ಎಂ.ಆರ್.ಜಹಾಗೀರದಾರರಿಗೆ ದುಂಬಾಲು ಬಿದ್ದು ಇದ್ದ ವೃತ್ತಿಗೆ ರಾಜಿನಾಮೆ ಕೊಡಿಸಿ ನಮ್ಮೂರಿಗೆ ಕರೆತಂದು ಹೈಸ್ಕೂಲು ಹೆಡ್‌ಮಾಸ್ತರಿಕೆಯನ್ನು ಒಪ್ಪಿಸಿದರು. ಜೊತೆಗೆ ತಮ್ಮ ಶಿಷ್ಯನೊಬ್ಬನನ್ನು ಇವರ ಕೈಗೆ ನೀಡಿ ‘ಈತನಿಗೆ ಇಂಗ್ಲೀಷ ಕಲಿಸಬೇಕು’ ಎಂದು ತಿಳಿಸಿದರು. ಜಹಾಗೀರದಾರರಿಗೆ ಹೈಸ್ಕೂಲ ನಡೆಸುವುದು ಕಷ್ಟಕರವಾಗಿರಲಿಲ್ಲ ಆದರೆ ಸ್ವಾಮಿಗಳ ಶಿಷ್ಯನಿಗೆ ಇಂಗ್ಲೀಷ ಕಲಿಸುವುದು ಕಷ್ಟಕರವಾಗಿತ್ತು. ಯಾಕೆಂದರೆ ಊದಿದರೆ ಹಾರಿಹೋಗುವ ಶರೀರ, ಸಿಂಬಳ ಮೂಗು, ಮೇಲಾಗಿ ಈತ ಗುರುಗಳ ಶಿಷ್ಯ. ಇಂಥವನೊಂದಿಗೆ ಆರಂಭಿಕ ದಿನಗಳು ಕಷ್ಟಕರವೇ ಆಗಿದ್ದವು ಎಂ.ಆರ್.ಜಹಾಗೀರದಾರ ಅವರಿಗೆ. ಈತ ಸರಿಯಾಗಿ ಶಾಲೆಗೂ ಬರುತ್ತಿರಲಿಲ್ಲ. ಪರೀಕ್ಷೆಯ ದಿನಗಳಲ್ಲಿಯಂತೂ ಎಲ್ಲೋ ಹೋಗಿರುತ್ತಿದ್ದ ಈ ಮಹಾರಾಯನನ್ನು ಹುಡುಕಿ ತರುವ ಸತ್ವ ಪರೀಕ್ಷೆಯ ಕಾಲ. ಆತನೋ ಊ ರ ಹೊರಗಿನ ಹಾಳು ದೇಗುಲಗಳಲ್ಲಿ ಧ್ಯಾನಸ್ಥನಾಗಿರುತ್ತಿದ್ದ. ಹಾಗೂ ಹೀಗೂ ಪತ್ತೆಹಚ್ಚಿ ಎತ್ತಿ ತಂದು ಪರೀಕ್ಷೆ ಬರೆಯಿಸಿದರೆ ಪೇಪರ್ ತುಂಬಾ ಎರಡೆರಡು ಮೊಟ್ಟೆ ಇಟ್ಟು ಹೋಗಿತ್ತಿದ್ದ. ಇದನ್ನು ಸಹಿಸಲಾಗದ ಎಂ.ಆರ್.ಜಹಾಗೀರದಾರರು ಕೊನೆಗೊಮ್ಮೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ “ನನಗೆ ಬೇರೆ ಏನು ಬೇಕಾದರು ಹೇಳ್ರಿ, ಆದ್ರ ಈ ನಿಮ್ಮ ಶಿಷ್ಯನನ್ನು ಕರೆದುಕೊಂಡು ಹೋಗ್ರಿ. ಈ ಕಲ್ಲನ್ನು ನನಗೆ ಕಟೆಯೋಕ ಆಗುದಿಲ್ಲಾ” ಎಂದು ಖಡಾಮುಡಿ ಹೇಳಿಬಿಟ್ಟರು. ಮಲ್ಲಿಕಾರ್ಜುನ ಶ್ರೀಗಳ ಕಣ್ಣುಗಳು ಒದ್ದೆಯಾದವು. ಶಿಷ್ಯನನ್ನು ಸಮೀಪ ಕರೆದು ಹೇಳಿದರು “ಕೇಳಿದೆ ಏನಪ್ಪ, ಅವರಿಗೆ ಬ್ಯಾಡದ ಮ್ಯಾಲ ನೀ  ನನಗೂ ಬ್ಯಾಡ. ಈ ಎಲ್ಲಾ ಆಟಾ ಸಾಕು. ನಾನು ಇಡೀ ಜಗತ್ತನ್ನು ನಿನ್ನ ಕಣ್ಣುಗಳ ಮುಖಾಂತರ ನೋಡಬೇಕು ಅಂದುಕೊಂಡಿದ್ದೆ. . . . . . .”.
ಇದೆಲ್ಲ ಕೇಳಿ ಶಿಷ್ಯನಲ್ಲಿ ಏನೋ ಪರಿವರ್ತನೆಯಾಯ್ತು. ಆತನೂ ಅಳಲಾರಂಭಿಸಿದ, ಬದಲಾದ. ಈಗ ಇಡೀ ಕನ್ನಡ ಕುಲಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮಿಗಳು(Siddeshwara Swamiji) ಎಂದು ಪರಿಚಿತನಾದ. ಮುಂದಿನ ಅವರ ಸಾಧನೆಯ ದಾರಿ ಇಲ್ಲಿ ಬೇಡ. ನಾನು ಹೇಳಬೇಕಾದುದು, ನಿರ್ಮೊಹದ ಗುರು ನಿರ್ಭೀತಿಯ ಶಿಷ್ಯನನ್ನು ಕೊಡಲು ಸಾಧ್ಯವಿದೆ. ಹಾಗೆಯೇ ಎಂ.ಆರ್.ಜಹಾಗೀರದಾರ ಸಿದ್ಧೇಶ್ವರ ಸ್ವಾಮಿಗಳು ಎಂಬ ಶಿಷ್ಯನನ್ನು ರೂಪಿಸಿದ್ದು. ಆಗ ಕೈ ಹಿಡಿದ ಗುರು ಬದುಕಿನ ಕೊನೆಯುಸಿರಿನವರೆಗೆ ಸಿದ್ಧೇಶ್ವರರಿಗೆ ಧಾರೆ ಎರೆಯುತ್ತಲೇ ಹೋದರು. ನನಗೆ ನೆನಪಿದೆ ಸಿದ್ಧೇಶ್ವರ ಸ್ವಾಮಿಗಳು ಉಪನಿಷತ್ ಕುರಿತಾದ ಆರಂಭಿಕ ಪ್ರವಚನಗಳನ್ನೆಲ್ಲ ನೀಡಿದ್ದು ನಮ್ಮೂರಿನಲ್ಲಿಯೆ. ಯಾಕೆಂದರೆ ಎಂ.ಆರ್.ಜಹಾಗೀರದಾರ, ಸಿಂಪಿಯವರನ್ನು ಕರೆದುಕೊಂಡು ಹೋಗಿ ಶಿಷ್ಯ ನೀಡುವ ಪ್ರವಚನವನ್ನು ಕಣ್ಣು ಮುಚ್ಚಿ ಕುಳಿತುಕೊಂಡು ಅತ್ಯಂತ ಧ್ಯಾನಸ್ಥರಾಗಿ ಕೇಳುತ್ತಿದ್ದರು. ಶಿಷ್ಯನನ್ನು ವೇದಿಕೆ ಮೇಲೆ ಕೂಡ್ರಿಸಿ, ಸ್ವಲ್ಪ ಕೆಳಗೆ ಶಿಷ್ಯನ ಸಮೀಪ ತಾವೂ ಕುಳಿತು ತಮ್ಮ ಬೆತ್ತವನ್ನು ನನ್ನ ಕೈಗೆ ನೀಡಿ, ಕಾವಲಿರಿಸಿದ ಗುರುವನ್ನು ನೆನೆದರೆ ಗಂಗಾಳದ ತುಂಬ ಹುಗ್ಗಿ ಹಾಕಿ ಸೆರಗಿನಿಂದ ಗಾಳಿ ಹಾಕುತ್ತ ಪಕ್ಕದಲ್ಲಿ ಕುಳಿತ ಸಾಲು ಸಾಲು ನಮ್ಮೂರ ಅಜ್ಜಿಯರ ನೆನಪಾಗುತ್ತದೆ ನನಗೆ.
ನಮ್ಮೂರ ಸುತ್ತ-ಮುತ್ತ ಸಿಂಪಿ ಲಿಂಗಣ್ಣ, ಎಂ.ಆರ್.ಜಹಾಗೀರದಾರ ಅದೊಂದು ರೀತಿಯ ಭಲೆಜೋಡಿ. ಎಲ್ಲಿ ಸಿಂಪಿಯವರ ಭಾಷಣವೋ ಅಲ್ಲಿ ಜಹಾಗೀರದಾರರ ಅಧ್ಯಕ್ಷತೆ ಇರಲೇಬೇಕು. ಜಹಾಗೀರದಾರರು ಹೇಳಿದ್ದರು; “ನಾನೊಂದು ತರಹ ಮಾಸ್ತರ ರ ಭಾಷಣಕ್ಕೆ ಮೂಗುದಾರ” ಅವರದು ಒನ್ ಪ್ಲಸ್ ಒನ್ ಪ್ಲ್ಯಾನ್. ಒಬ್ಬರನ್ನು ಕರೆದರೆ ಇನ್ನೊಬ್ಬರನ್ನು ಕರೆಯಲೇಬೇಕು. ಅದು ಅನಿವಾರ್ಯ ಜೀವದ ಜೋಡಿ. ಸ್ನೇಹದ ಸಂಸ್ಕೃತಿಗೊಂದು ಮಿಸಾಲ್. ಅರವತ್ತರ ಗಡಿದಾಟ್ಟಿದ್ದ ಇಬ್ಬರಿಗೂ ಮಂಡೆ ನೋವು, ಇಬ್ಬರೂ ಕುಂಟುತ್ತಲೇ ಬರುತ್ತಿದ್ದರು. ಸಿಂಪಿಯವರ ಭಾಷಣ ಪ್ರಾರಂಭವಾಗುತ್ತಿದ್ದುದೇ ಈ ಹೇಳಿಕೆಯಿಂದ - “ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ” ಎಂದು ಬಸವಣ್ಣ ಹೇಳಿಕೊಂಡ. ಆದರೆ ಪ್ರಯೋಗ ಮಾಡಲಿಕ್ಕೆ ಕೂಡಲಸಂಗಯ್ಯ ನಮ್ಮಿಬ್ಬರನ್ನು ಹಿಡಕೊಂಡ, ಜಹಾಗೀರದಾರರದು ದೊಡ್ಡದೊಂದು ನಗೆ.
ನಾನು ನನ್ನ ಗುರು ಜಹಾಗೀರದಾರರ ಬಳಿಗೆ ಬರುವಷ್ಟರಲ್ಲಿ ಅವರು ವಿಧುರ. ಮಕ್ಕಳು ಬೇರೆ ಬೇರೆ ಕಡೆಗೆ ನೌಕರಿಯಲ್ಲಿದ್ದರು. ಇಸ್ಪೀಟು ಅವರಿಗೆ ಬಹಳ ಪ್ರೀತಿಯ ಆಟ. ಒಂದು ರೂಪಾಯಿ ಜಿದ್ದಿಗಿಟ್ಟು ಆಡೋದು. ಸಿಂಪಿಯವರಿಂದ ಒಂದು ರೂಪಾಯಿ ಗೆದ್ದರೆ ಅದೇ ದೊಡ್ಡ ಜಾಕ್‌ಪಾಟ್. ಸಾಯಂಕಾಲದ ಅವಲಕ್ಕಿ ನಕ್ಕಿ. ಜಹಾಗೀರದಾರರು ತೀರಿದ ನಂತರ ಒಂಟಿಯಾದ ಸಿಂಪಿಯವರು ಇಸ್ಪೀಟ ಎಲೆಗಳನ್ನು ಅರವಿಂದರ ಫೋಟೋದ ಮುಂದೆ ಒಗೆದು ಕಣ್ಣೀರಿಟ್ಟದ್ದುಂಟು. ಜಹಾಗೀರದಾರರು ನನ್ನನ್ನು ಅಂಬಾಸಿಡಾರ್ ಕಾರನಲ್ಲಿ ಊರಿಗೆ ಕರೆದುಕೊಂಡು ಹೋದ ನೆನಪು.
ಬಿಜಾಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರರ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳನ್ನು ಕುರಿತು ‘ಗುರುದೇವ’ ಗ್ರಂಥ ಬಿಡುಗಡೆಯ ಕಾರ್ಯಕ್ರಮ ಇತ್ತು. ಹುಣಸ್ಯಾಳ ಗೌಡತಿಯವರು ಬರೆದ ದೊಡ್ಡ ಪುಸ್ತಕ ಅದು. ಕೃತಿ ಕುರಿತು ಅವತ್ತಿನ ಮುಖ್ಯ ಭಾಷಣ ಎಂ.ಆರ್.ಜಹಾಗೀರದಾರರದು. ನಾನು, ಗುರುಗಳು ಮತ್ತು ಸಿಂಪಿಯವರು ಚಡಚಣದಿಂದ  ಬರುವುದರೊಳಗಾಗಿ ಆಶ್ರಮದಲ್ಲಿ ಬಿ.ಟಿ.ಸಾಸನೂರ, ಶಂಗು ಬಿರಾದಾರ, ಚಿಂತಾಮಣಿ, ಸಂಗಮೇಶ ಬಿರಾದಾರ ಎಲ್ಲರೂ. ಗದುಗಿನ ಮಲ್ಲಿಕಾರ್ಜುನರ ಉಪನಿಷತ್ ಹೊಳಹುಗಳನ್ನು ಕುರಿತು, ಶಿಷ್ಯ ಸಿದ್ಧೇಶ್ವರ ಸ್ವಾಮಿಗಳ ನಿರಾಢಂಬರತೆಯನ್ನು ಕುರಿತು ಎಷ್ಟೊಂದು ಗೌರವ ಮತ್ತು ಕಕ್ಕುಲಾತಿಯಿಂದ ಮಾತನಾಡಿದ್ದರು ಎಂ.ಆರ್.ಜಿ, ಅನಂತರ ಹುಣಸ್ಯಾಳ ಗೌಡತಿಯವರ ಮನೆಯಲ್ಲಿ ಸಿಂಪಿಯವರು ಮತ್ತು ಜಹಾಗೀರದಾರರು ಜಿದ್ದಿನ ಮೇಲೆ ಹೋಳಿಗೆ ಊಟ ಮಾಡಿದ್ದು ಒಂದು ಮಾಸದ ನೆನಪು. ವಯಸ್ಸಾಗುತ್ತಾ ಬಂದಿತ್ತು. ಆಗಲೇ ಜಹಾಗೀರದಾರರ ಕಾಲುಗಳು ಸ್ವಾಧಿನ ಕಳೆದುಕೊಂಡಿದ್ದವು. ಕಾರಿನಲ್ಲಿ ಕುಳಿತ ಮೇಲೆ ಯಾರಾದರೂ ಕಾಲು ಎತ್ತಿ ಇಡಬೇಕಾಗುತ್ತಿತ್ತು. ಆ ದಿನ ನಾನು ಕಾಲು ಎತ್ತಿ ಇಡಲು ಹೋದೆ. ಪ್ರೀತಿಯಿಂದ ನಿರಾಕರಿಸಿದರು. ಆಶ್ರಮದ ಶಿಷ್ಯನೊಬ್ಬ ಬಂದು ಎತ್ತಿಟ್ಟ.
ಅವರ ಸಾವು ಇನ್ನೊಂದು ವಾರ ಇತ್ತು. ಅದೇನು ಗೊತ್ತಾಗುವ ವಿಷಯವೇ? ಅವರು ಏನೋ ಬರೆಯುತ್ತಾ ಕುಳಿತಿದ್ದರು. ನಾನು ಹೋದೆ, ಬಳಿಗೆ ಕರೆದು ಕೂಡ್ರಿಸಿಕೊಂಡು ‘ರಾಮಾಯಣ ದರ್ಶನಂ(Ramayana Darshanam)’ ಕಾವ್ಯದ ಆರಂಭದ ಕವಿಯ ಪ್ರಾರ್ಥನೆಯನ್ನು ನನಗೆ ಜೋರಾಗಿ ಓದಿ ಹೇಳಲಾರಂಭಿಸಿದರು. ವಿಪರೀತ ಕೆಮ್ಮು ಮುಂದೆ ಓದಲಾಗಲಿಲ್ಲ. ಎಷ್ಟೋ ಹೊತ್ತು ನನ್ನ ಬೆನ್ನ ಮೇಲೆ ಕೈ ಇಟ್ಟು ಹಾಗೇ ಕುಳಿತರು ಮತ್ತೆ ಓದಲು ಹೋದರು, ಆಗಲಿಲ್ಲ. ಅವರು ವಿರಮಿಸಿದರು, ನಾನು ಪುಸ್ತಕ ತೆಗೆದುಕೊಂಡು ಮನೆಗೆ ಬಂದೆ. ನನ್ನ ಗುರುಗಳಿಗೆ ಅಬ್ರಾಹ್ಮಣರ ಮನೆಯ ಮಜ್ಜಿಗೆ ಎಂದರೆ ತುಂಬಾ ಇಷ್ಟ. ಎರಡು ದಿನಗಳ ನಂತರ ಮಜ್ಜಿಗೆಯ ಗ್ಲಾಸು ಕೈಯಲ್ಲಿ ಹಿಡಿದುಕೊಂಡು ಅವರನ್ನು ನೋಡಲು ಹೋದೆ. ಅವರ ಮನೆಯ ಮುಂದೆ ಒಂದಿಷ್ಟು ಜನ ಸೇರಿದ್ದರು. ಏನಾಗಿರಬಹುದು? ನನ್ನಿಂದ ಊಹಿಸಿಕೊಳ್ಳವುದೂ ಆಗದ ಎಳೆಯ ವಯಸ್ಸು. ನನಗೆ ಈ ದೊಡ್ಡ ದೊಡ್ಡ ಜನಗಳ ಮಧ್ಯದಿಂದ ಅವರ ಬಳಿ ಹೋಗಲು ಭಯ. ನಿಂತವರ ಕಾಲುಗಳ ಸಂದಿಯಿಂದ ಗುರುಗಳ ಮುಖವನ್ನೇ ಗಮನಿಸುತ್ತಿದ್ದೆ. ಇದ್ದಕ್ಕಿದ್ದಂತೆ ಅವರು ನನ್ನೆಡೆಗೆ ನೋಡಿ ಕೆಮ್ಮುತ್ತ ಕೈ ಮಾಡಿ ಕರೆದರು. ಅಬ್ಬಾ ಎಂಥಾ ಖುಷಿ ಅಂತೀರಾ! ಮಜ್ಜಿಗೆಯ ಗ್ಲಾಸಿನೊಂದಿಗೆ ಓಡಿ ಹೋದೆ. ಒಂದಿಷ್ಟು ಕುಡಿದರು. ಬಹಳ ಬಳಲಿದ್ದರು, ಬೆನ್ನಲ್ಲಿ ನೀರು ತುಂಬಿಕೊಂಡಿತ್ತು. ತೆಗೆಸುವ ಸಲುವಾಗಿ ಸೋಲ್ಲಾಪುರದ ಆಸ್ಪತ್ರೆಗೆ ಒಯ್ಯಲು ವಾಹನ ಸಿದ್ಧವಾಗಿ ನಿಂತಿತ್ತು. ನಾನು ಅಳುತ್ತ ಮನೆಗೆ ಬಂದೆ, ಅತ್ತ ಅವರನ್ನು ಸೋಲ್ಲಾಪುರಕ್ಕೆ ಒಯ್ಯಲಾಯಿತು.
ಮರುದಿನ ಸಾಯಂಕಾಲ ಸೋಲ್ಲಾಪುರದಿಂದ ಸಿಡಿಲಿನಂಥ ಸುದ್ಧಿ. ಊರಿಗೆ ಊರೇ ಮೌನ. ಜಹಾಗೀರದಾರ ತೀರಿಹೋಗಿದ್ದರು.  ಶಿಷ್ಯರೆಲ್ಲಾ ಸೇರುವವರೆಗೆ ಬ್ರಾಹ್ಮಣರು ಹೆಣ ಇಡಲಿಲ್ಲ. ಬದುಕಿರುವವರೆಗೂ ಈ ಕರ್ಮಠತನದಿಂದ ದೂರವಿದ್ದ ನನ್ನ ಗುರುವಿನ ಹೆಣಕ್ಕೆ ಕರ್ಮ ತಪ್ಪಲಿಲ್ಲ. ಅದೊಂದು ರೀತಿ ಕಬೀರನ ಕಥೆಯಷ್ಟೆ.  ಯಾವ ನದಿಯನ್ನು ನಿತ್ಯ ದಾಟುತ್ತ ಆರು ದಶಕಗಳ ಬಾಳನ್ನು ಜಹಾಗೀರದಾರ ಸಾಗಿಸಿದ್ದರೋ ಅದೇ ನದಿಯ ದಡದಲ್ಲಿ ಅವರ ದೇಹಕ್ಕೆ ಅಗ್ನಿ ಸ್ಪರ್ಶವಾಯಿತು. ನನಗೆ ಕಣ್ಣೀರು ಬರಲಿಲ್ಲ. ಆದರೊಂದು ಕವಿತೆ ಬರೆದೆ “ಕ್ರೌಂಚದ ಕಣ್ಣೀರು”. ಅವರಿಗೇ ಅರ್ಪಿಸಿದ ನನ್ನ ಮೊದಲ ಕವನ ಸಂಕಲನದ ಕೊನೆಯ ಕವಿತೆ ಇದೆ. ಆ ಮೂಲಕ ನನ್ನ ಗುರುವಂದನೆ ನಿರಂತರವಾಗಿದೆ.
ಒಬ್ಬ ನಾಯಿದ ದೃಷ್ಠಾರ, ಒಬ್ಬ ಬ್ರಾಹ್ಮಣ ಗುರು, ಮತ್ತೊಬ್ಬ ಗಾಣಿಗ ಶಿಷ್ಯ ನಮ್ಮೂರನ್ನು ಮಾನವತೆಯ ದಿವ್ಯ ಪರಂಪರೆಗೆ ಸೇರಿಸಿದಂತೆ ಇನ್ನ್ಯಾರೂ ಸೇರಿಸಲಿಲ್ಲ. ಆನಂತರದ್ದು ರಕ್ತಚರಿತ್ರೆ, ಜಾತಿ ಕದನ. ಜಾತಿಯೊಳಗೆ ಹುಟ್ಟುವದು ನಮ್ಮ ನಿಯಂತ್ರಣದಲ್ಲಿಲ್ಲದ ಅನಿವಾರ್ಯ. ಆದರೆ ಅದರೊಳಗೇ, ಅದಕ್ಕಾಗಿಯೇ ಸಾಯುವುದು ಮಾತ್ರ ನಾವೇ ಕ್ಷಮಿಸಿಕೊಳ್ಳಲಾಗದ ಅಪರಾಧ. ಇದು ನನ್ನ ಗುರುವಿನ ಸಂದೇಶವಾಗಿತ್ತು ಎಂದುಕೊಂಡಿದ್ದೇನೆ    
      
                                                                                       -ಡಾ.ರಾಜಶೇಖರ.ಮಠಪತಿ(ರಾಗಂ)











Tuesday, March 27, 2012

ಆ ಬಿಸಿಲೇ ಒಂದು ಬೆಸುಗೆ

                                  ಆ ಬಿಸಿಲೇ ಒಂದು ಬೆಸುಗೆ
               

Lecturer on Ambedkar in Gulbarga

"ನಮ್ಮದು ಬುದ್ಧನ ದಾರಿ. ಬಿದ್ದು ಬಿದ್ದು ಒದ್ದಾಡಿ ಜ್ಞಾನಪೀಠ, ಆ ಪೀಠ ಈ ಪೀಠ ಇವುಗಳ ಹಿಂದ ಎಂದೂ ಹೋಗಾಂವಲ್ಲಾ. ನಾ ಹೋಗುವ ದಾರಿ ಇನ್ನು ದೀರ್ಘ ಅದ. ವ್ಯೋಮಾವ್ಯೋಮದ ಮುಂದಿನ ಭಾಗ ಆತ್ಮಾ ಅನಾತ್ಮಾದ ತಯಾರಿ ನಡೆದದ. ಕನಿಷ್ಟ ಎರಡು ಸಾವಿರ ಪುಟ ಆಗಬಹುದು. ೨೦೧೩ ರಕ್ಕ ಹೋರಗ ಬರಬಹುದು. ಅಂದಗ್ಹ ಮೇ ೧ ನೇ ತಾರಿಕಿಗೆ ಜಾಗತಿಕ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಐತಿ. ಆವತ್ತಿನ ನನ್ನ ಪಾತ್ರ ಒಂದನಾರ್ಪಣೆ, ನೀವೂ ತಪ್ಪಿಸಬ್ಯಾಡ್ರಿ".
                                                             

ಕೆಲವು ದಿನಗಳ ಹಿಂದೆಯಷ್ಟೇ ಓರಿಸ್ಸಾ(orissa) ದವರೆಗಿನ ಅರವತ್ತಾರು ಗಂಟೆಗಳ ಪ್ರವಾಸವನ್ನು ಮುಗಿಸಿಕೊಂಡು ಬಂದಿದ್ದ ನನಗೆ ಸಧ್ಯದಲ್ಲಿಯೇ ಮತ್ತೊಂದು ಧೀರ್ಘ ಪ್ರವಾಸ ಮಾಡುವ ಉತ್ಸಾಹವೂ ಇರಲಿಲ್ಲ, ಸಮಯವೂ ಇರಲಿಲ್ಲ. ಇಂತಹದರಲ್ಲಿ ಗೆಳೆಯ ವಿಜಯಕುಮಾರ ದೊಡ್ಡ ಗಾಣೀಗೇರ್ ತನ್ನ ಕಾಲೇಜಾದ People’s Education Trust ನ ‘Dr.Ambedkar college of atrs and commerce’ ನ ಅಂಬೇಡ್ಕರ್ ವಿಚಾರ ವೇದಿಕೆಯ ಎರಡು ದಿನಗಳ ಕಾರ್ಯಕ್ರಮದ ಉಧ್ಘಾಟನೆಗಾಗಿ ಬರಬೇಕೆಂದು ಪ್ರೀತಿಯ ಹಠ ಹಿಡಿದ. ಹೋಗಲೇಬೇಕಾಯಿತು, ಹಾಗೆ ನೋಡಿದರೆ ನನ್ನನ್ನು ಅನವರತವೂ ಕಾಡುವ ಅನೇಕ ವ್ಯಕ್ತಿ ಮತ್ತು ವಿಚಾರಗಳು ಈ ಗುಲ್ಬರ್ಗಾ ಎನ್ನುವ ಬಿಸಿಲು ನಾಡಿನೊಂದಿಗೆ ಬೆಸೆದುಕೊಂಡಿದೆ. ಹೆಸರಿಸಬೇಕೆಂದರೆ ನಾಲ್ಕಾರನ್ನು ನಮೂದಿಸಬಹುದೇನೋ. ಹದಿನೈದು ವರ್ಷಗಳಷ್ಟು ಹಿಂದಿನ ಧೀರ್ಘ ಕಾಲದ ಗೆಳೆಯ ವಿಜಯ ದೊಡ್ಡ ಗಾಣಿಗೇರ್, ಸಂಸಾರವಿದ್ದೂ ಅದಕ್ಕೆ ವಿಮುಖರಾಗಿ ಧಿಢೀರ್ ಸನ್ಯಾಸ ಘೋಷಿಸಿದ ಮಾತೃ ಪ್ರೀತಿಯ ಜೀವ ಶ್ರೀ ಬಸವಲಿಂಗಪ್ಪ ಹೂಗಾರ್, ಇತ್ತೀಚಿಗಷ್ಟೆ ಬಂದು ಕೇಂದ್ರಿಯ ವಿಶ್ವವಿದ್ಯಾಲಯ ಸೇರಿಕೊಂಡ ಗೆಳೆಯ ಬಸವರಾಜ ಡೋಣುರ, ಹಳೆಯ ಪತ್ರ ಮಿತ್ರ ಜಾನ್‌ಬೋ, ನವ ಕರ್ನಾಟಕ ಪ್ರಕಾಶನದ ಸೊನ್ನದ, ಪ್ರೋ.ಪಾಟೀಲ, ಇವರೆಲ್ಲ ಗುಲ್ಬರ್ಗಾ ಎಂಬ ಭೋಧಿವೃಕ್ಷಕ್ಕೆ ಹುಟ್ಟಿಕೊಂಡ ನೆನಪಿನ ಟೊಂಗೆಗಳು. ಎಲ್ಲಕ್ಕೂ ಮಿಗಿಲಾಗಿ ಆ ಬಿಸಿಲೇ ಒಂದು ಬೆಸುಗೆ. ಅದು ಮಲೆನಾಡಿನ ಬಿಸಿಲಿನಂತೆ ಒಳಗಿನಿಂದ ಭಾಧಿಸುವುದಿಲ್ಲ, ಹೊರಹೊರಗೆ ಉರಿದು,ಒಳಗಿನರಿವಿನ ಪರಿಯನ್ನ ವಿಸ್ತರಿಸುವ ಈ ಬಿಸಿಲಿಗೆ ಒಂದು ವಿಚಿತ್ರ ಶಕ್ತಿ ಇದೆ. ಅಂತೆಯೇ ಕನ್ನಡ ಕಾವ್ಯದ ಕೆನೆ ಎನ್ನಿಸಿಕೊಂಡ ವಚನ, ಅನುಭಾವ ಮತ್ತು ಸೂಫಿ(sufi) ಸಾಹಿತ್ಯ ಇಲ್ಲಿಯೇ ಹುಟ್ಟಿಕೊಂಡಿತು. ರಾಜಕೀಯದ ಅನೇಕ ವಿಪ್ಲವಗಳನ್ನು ಕಂಡ ಈ ನೆಲ ಇಂದಿಗೂ ಅನೇಕ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಅಂತಹವುಗಳಲ್ಲಿ ಎರಡು ಮಹತ್ವದ ಇತ್ತಚಿನ ದಾಖಲೆಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಒಂದು, ಮಲ್ಲಿಕಾರ್ಜುನ ಖರ್ಗೆ(Mallikarjun Kharge)ಯವರ ನೇತೃತ್ವದಲ್ಲಿ ನಿರ್ಮಾಣವಾದ ಬೌದ್ಧ(Baudha) ವಿಹಾರ, ಮತ್ತೊಂದು ಚೆನ್ನಣ್ಣ ವಾಲೀಕಾರರಿಂದ ರಚನೆಯಾದ “ವ್ಯೋಮಾವ್ಯೋಮ”.

ಎರಡೂ ಬುದ್ಧನನ್ನು ಕುರಿತಾದವುಗಳೇ. ಒಂದು ಸ್ಥಾವರ, ಮತ್ತೊಂದು ಜಂಗಮ. ಭಾರತದಿಂದ ಬೌದ್ಧ ಧರ್ಮದ ೨೨೦೦ ವರ್ಷಗಳ ಧೀರ್ಘ ಕಾಲದ ಅವಸಾನದ ನಂತರ ರಂಗೂನಿನಿಂದ ಬುದ್ಧನ ವಿಗ್ರಹವನ್ನು ತಂದು ಭಾರತದ ಪುಣೆಯಲ್ಲಿ ಸ್ಥಾಪಿಸುವುದರ ಮೂಲಕ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಬೌದ್ಧ ಧರ್ಮವನ್ನು  ಪುನರುಜ್ಜೀವನಗೊಳಿಸಿದರು. ಈಗ ಸುಮಾರು ಎಪ್ಪತ್ತು ವರ್ಷಗಳ ನಂತರ ಅದೇ ಕಾರ್ಯ ಎರಡು ಭಿನ್ನ ಮಾರ್ಗಗಳ ಮೂಲಕ ಗುಲ್ಬರ್ಗಾ(Gulbarga)ದಲ್ಲಿ ಪುನರಾವರ್ತನೆಯಾಗಿದೆ. ಪುಷ್ಯಮಿತ್ರಶುಂಗನ ಕಾಲದಲ್ಲಿ ಅನೇಕ ಬೌದ್ಧ ಭಿಕ್ಕುಗಳ ಕೊಲೆಯಾಗಿ ಬೌದ್ಧ ವಿಹಾರಗಳನ್ನು ನಾಶ ಪಡಿಸಿದ್ದಕ್ಕೆ ನಿಟ್ಟುಸಿರಿಟ್ಟಿದ್ದ ಭಾರತ ಈಗ ಗುಲ್ಬರ್ಗಾದಲ್ಲೊಂದು ಬೌದ್ಧವಿಹಾರವನ್ನು ತನ್ನುಡಿಗೆ ಹಾಕಿಕೊಳ್ಳುವ ಮೂಲಕ ನೆಮ್ಮದಿ ಪಡುವಂತಾಗಿರಬಹುದು. ಒಂದು ಕಾಲಕ್ಕೆ ಗುಲ್ಬರ್ಗಾ ಎಂದರೆ ಬಂದೇನವಾಜರ ದರ್ಗಾ ಮತ್ತು ಶರಣಬಸಪ್ಪನ ಮಠ ಎನ್ನಲಾಗುತ್ತಿದ್ದ ಈ ಊರಿಗೊಂದು ಮೂರನೆಯ ದಾರಿ ಹುಟ್ಟಿಕೊಂಡಿದೆ. ಈಗ ಗುಲ್ಬರ್ಗಾ ಎಂದರೆ ಬೌದ್ಧವಿಹಾರ.


ಇದು ಕಾಟಾಚಾರಕ್ಕೆ ಕಟ್ಟಿದ ಕಟ್ಟಡವಲ್ಲ. ಸರ್ಕಾರದ ಯಾವ ಧನಸಹಾಯವಿಲ್ಲದೆ ಜಗತ್ತಿನುದ್ದಕ್ಕೂ ಹಬ್ಬಿಕೊಂಡ ಬೌದ್ಧ ಅನುಯಾಯಿಗಳ ಸಹಾಯ ಪಡೆದು, ಪ್ರಪಂಚವೇ ಬೆರಗಾಗುವಂಥಹ ಕಟ್ಟಡ ಇಲ್ಲಿ ತಲೇ ಎತ್ತಿದೆ. ನಿಮಗೊಂದು ಕ್ಷಣ ಸಾಂಚಿಗೆ ಹೋಗಿ ಬಂದ ಖುಷಿಯಾಗುತ್ತದೆ.ದಿ. ೧೭-೩-೨೦೧೨ ರ ಈ ದಿನ ನನ್ನ ಪಾಲಿಗಂತೂ ಇನ್ನೂ ವಿಶೇಷ. ಯಾಕೆಂದರೆ ಪಾಲಿ ಭಾಷೆಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ಹತ್ತು ಕೋಟಿ ರುಪಾಯಿಗಳನ್ನು ಗುಲ್ಬರ್ಗಾದ ಈ ಬೌದ್ಧವಿಹಾರಕ್ಕೆ ಬಿಡುಗಡೆ ಮಾಡಿತು. ಇಂಥಹ ಒಂದು ಅರ್ಥಪೂರ್ಣ ನೆನಪು ಮೈ ಎತ್ತಿ ನಿಲ್ಲಲು ಕಾರಣರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ನಾವು ಒಂದು ಕ್ಷಣ ಹೂತ್ಪುರ್ವಕವಾಗಿ ಅಭಿನಂದಿಸಬೇಕಲ್ಲವೇ?


ಇನ್ನೊಂದು ಮಹತ್ವದ ಕಾರ್ಯ, ಬುದ್ಧನನ್ನು ಕುರಿತಾಗಿಯೇ ಇಲ್ಲಿ ನಡೆಯಿತು ಎಂದು ಹೇಳಿದೆ. ಇದು ನನ್ನ ಕಾಲಮಾನದ ಅಚ್ಚರಿ ಎಂದು ನಾನಂತೂ ಕುಣಿದಾಡಿದ್ದೇನೆ. ಬಂದೇನವಾಜರ ದರ್ಗಾದಿಂದ ಬೌದ್ಧವಿಹಾರಕ್ಕೆ ಹೋಗುವ ದಾರಿಯಲ್ಲಿ, ಖರ್ಗೆಯವರ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಒಂದು ಸಾಧಾರಣ ಕಟ್ಟಡದಲ್ಲಿ ಅಸಾಧಾರಣ ಪ್ರತಿಭೆಯ ಜೀವವೊಂದರ ಭೇಟ್ಟಿಯಾಗುತ್ತದೆ. ಅವರೇ ನಮ್ಮ ಚೆನ್ನಣ್ಣ ವಾಲೀಕಾರ(chennanna valikar). ಬಹಳ ಚಿಕ್ಕಂದಿನಿಂದ ಬಸ್ಟ್ಯಾಂಡ್ ಪಕ್ಕದ್ದಲ್ಲಿ ಕದ್ದು ಮುಚ್ಚಿ ಮಾರಾಟವಾಗುತ್ತಿದ್ದ ‘ಓ ರಸಿಕ’, ಲಾವಣ್ಯ’ಗಳಂಥಹ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಇವರ ಪೋಲಿ, ಪೋಲಿ ಕವಿತೆಗಳನ್ನು ಓದಿದ್ದ ನನಗೆ ಈ ಚೆನ್ನಣ್ಣ  ಕರ್ನಾಟಕದ ಕಾರ್ಮಿಕ ಚಳುವಳಿ, ಕಾದಂಬರಿ, ಕಾವ್ಯ, ಜನಪರ ಹೋರಾಟ, ಮಹಾಕಾವ್ಯದ ರಚನೆ, ಸಂಶೋಧನೆ, ಕಡ್ಡಿ ಮುರಿದಂಥಹ ಮಾತುಗಳಿಂದಲೂ ಕಾಡಿದ್ದಾರೆ. ಇಂಥಹ ದೈತ್ಯ ಪ್ರತಿಭೆಯನ್ನು ಕಣ್ಣಾರೆ ನೋಡಿ ಬರಬೇಕು ಎಂಬ ನನ್ನ ಆಶೆ ಇಂದು ಫಲಿಸಿದೆ.


ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಕಾಂತ ಕುಸನೂರರನ್ನು ಕಾಣಲು ನಾನು ಇತ್ತಿಚಿಗೆ ಬೆಳಗಾವಿಗೆ ಹೋದಾಗ, ಬಳಲುತ್ತ ಮೇಲೆದ್ದ ಕುಸನೂರರು ನನ್ನ ಕೈಗೊಂದು ನೆಗುವಲಾರದ ಪುಸ್ತಕವನ್ನಿಟ್ಟರು. ದೇಹದ ಯಾವುದೇ ಭಾಗದ ಮೇಲೆ ಬಿದ್ದರೂ ಮೂಳೆ ಮುರಿಯುವುದು ಗ್ಯಾರಂಟಿ. ಯಾವುದೋ ಅಭಿನಂದನಾ ಗ್ರಂಥವೋ, ವಿಶ್ವಕೋಶವೋ, ಇಲ್ಲಾ ಎನಸೈಕ್ಲೊಪಿಡಿಯಾ ಇರಬಹುದೆಂದು ಉಪೇಕ್ಷೆಯಿಂದಲೇ ಎತ್ತಿಕೊಂಡೆ. ಆದರೆ ಸನ್ನಿವೇಶವೇ ಬೇರೆ ಇತ್ತು. ಕೈಗಿಡುತ್ತಾ ಕುಸನೂರರು ಹೇಳಿದರು,”ನಮ್ಮ ಚೆನ್ನಣ್ಣ ಕಳ್‌ಸ್ಯಾನ, ಇದು ಮಹಾಕಾವ್ಯಂತ. ಪುಸ್ತಕದೊಳಗ ನಾನು ಒಂದ ಪಾತ್ರ ಆಗಿ ಅದೀನಂತ. ಒಂದ ಸಾವಿರ ಪುಟ ಅದ ರಾಜಶೇಖರ. ವಾಕ್ಯ ಮೊದಲನೇ ಪುಟದಾಗ ಶುರು ಮಾಡ್ಯಾನ, ಸಾವಿರನೇ ಪುಟಕ್ಕೆ ಬಂದರೂ ಫುಲ್‌ಸ್ಟಾಪೇ ಹಾಕಿಲ್ಲ. ಮಧ್ಯದೊಳಗ ಎಲ್ಲೂ ಒಂದು ಸಣ್ಣ ಕಾಮಾನೂ ಇಲ್ಲ, ಪ್ಯಾರಾಗ್ರಾಫಂತೂ ಇಲ್ಲೇ ಇಲ್ಲ. ಇದರಾಗ ನನ್ನ ಹುಡುಕು ಅಂದ್ರ ಎಲ್ಲಿ ಹುಡುಕ್ಕೋಳ್ಳಿ? ಪುಸ್ತಕ ನೋಡಿನೇ ನನ್ನ ಹೆಣಾ ಬಿದ್ದ ಹೋಗೆದ. ಮತ್ತ ಮ್ಯಾಲ ದಿನಾ ಫೋನ್ ಮಾಡಿ ಓದಿದೇನ? ಅಂತ ಜೀವಾಂ ತಿಂತಾನ, ಬಾಳ ವಿಚಿತ್ರ ಮನಷಾ ಅದಾನ. ಭಯಂಕರ ಶಕ್ತಿ. ಇಷ್ಟ ವರ್ಷ ಕೂಡಿ ಅದೀನಿ, ಅವಾಂ ಎನಂತ ನನಗಂತೂ ತಿಳಿದಿಲ್ಲ. ಅವನಿಗರ ತಿಳದದೋ ಇಲ್ಲೋ ಅವಂಗ ಗೊತ್ತು.” ಎಂದು ಪುಸ್ತಕ ಕೈಗಿಟ್ಟು ಕುಸನೂರರು ಹಾಸಿಗೆಗೊರಗಿದರು. ಹರಟೆ ಒಂದಿಷ್ಟು ಕಾಲ ಗುಲ್ಬರ್ಗಾದ ಅವರ ಹಳೆಯ ನೆನಪುಗಳನ್ನು ಒತ್ತರಿಸಿರಬೇಕು, ನಾನಂತೂ ಚೆನ್ನಣ್ಣ ವಾಲೀಕಾರರ ‘ವ್ಯೋಮಾವ್ಯೋಮ’ವನ್ನು ಹಾಗೊಮ್ಮೆ- ಹೀಗೊಮ್ಮೆ, ಮೇಲೊಮ್ಮೆ-ಕೆಳಗೊಮ್ಮೆ ಎತ್ತಾಡಿ ನೋಡಿ  ಮೊದಲ ಪುಟವನ್ನು ಓದುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಿದೆ. ಓದಬಹುದು ಎನ್ನಿಸಿತು. ಆದರೆ ಇದನ್ನು ಓದುವುದಕ್ಕಿಂತ ಮುಂಚೆ ಈ ಚೆನ್ನಣ್ಣರನ್ನು ಮುಖತಃ ಭೇಟ್ಟಿಯಾಗಬೇಕೆನಿಸಿತ್ತು.


ಈ ಹಿಂದೆ ಬಹಳಷ್ಟು ಬಾರಿ ಹೀಗೆ ಅನಿಸಿದವುಗಳಲ್ಲಿ ಕೆಲವು ಕೈಗೂಡಲಿಲ್ಲ. ಕುವೆಂಪು ಅವರನ್ನ ಕಾಣಬೇಕು, ತೇಜಸ್ವಿ(tejaswi)ಯವರೊಂದಿಗೆ ಕಾಲ ಕಳೆಯಬೇಕು ಎಂಬ ನನ್ನ ಬಯಕೆಗಳು ಬಾಯಿಗೆ ಬರುತ್ತಲೆ ಹುಸಿಯಾಗಿ ಹೋಗಿದ್ದವು. ಆದರೆ ಈ ಬಾರಿ ಹಾಗಾಗಲಿಲ್ಲ. ಅಂಬೇಡ್ಕರನ್ನ ಕುರಿತು ಮಾತನಾಡಲು ಬಂದ ಈ ಸಂದರ್ಭದಲ್ಲಿಯೆ ಚನ್ನಣ್ಣರನ್ನು ಹಿಡಿದುಬಿಟ್ಟೆ. ನಾನು ಅವರ ಮನೆಗೆ ಹೋದಾಗ ಮಧ್ಯಾನ್ಹದ ಎರಡು ಗಂಟೆಯಾಗಿರಬಹುದು. ಮೇಲಿನ ಕೊಣೆಯಲ್ಲಿ ಒಳ್ಳೆ ಏಸಿ ರೂಮ್‌ನಲ್ಲಿ ಕುಳಿತು ಬರಹ ಮಾಡುವವರಂತೆ ಸಹಾಯಕನೊಬ್ಬನನ್ನ ಇಟ್ಟುಕೊಂಡು ಚನ್ನಣ್ಣ ಧ್ಯಾನಸ್ಥರಾಗಿದ್ದರು. ಸಂಸಾರ ಕೆಳಗಿಟ್ಟು ಮೇಲಿನ ಕೊಣೆಯಲ್ಲಿ ಬರಹದಲ್ಲಿ ತೊಡಗಿಕೊಂಡಿದ್ದ ಚನ್ನಣ್ಣರನ್ನು ನೋಡಿ ನಾನೊಂದು ಕ್ಷಣ ಅಶ್ಚರಿಗೊಂಡೆ. ಕಾರಣ ಇಷ್ಟೆ ಅನೇಕ ಬಾರಿ ಕುಸುನೂರರನ್ನು ಇದೇ ತನ್ಮಯತೆಯ ಹಂತದಲ್ಲಿ ನಾನು ನೋಡಿದ್ದೆ. ಬಿಸಿಲು ನಾಡಿನ ಈ ಪ್ರತಿಭೆಗಳೇ ಹೀಗೆ. ಒಮ್ಮೆ ಒಳಗೆ ಇಳಿದರೆ ಮುಗಿಯಿತು ಲೋಕ ಅವರನ್ನು ಬಾಧಿಸುವದಿಲ್ಲ. ಚನ್ನಣ್ಣರ ಮನೆಗೆ ಹೋಗುವಾಗ ಅವರ ಖಾಸಾ ಶಿಷ್ಯರಾದ ಬಸವನಿಂಗಪ್ಪಾ ಹೂಗಾರರನ್ನು ಕರೆದುಕೊಂಡು ಹೋಗಿದ್ದೆ. ಹೀಗಾಗಿ ಸ್ನೇಹ ಇನ್ನೂ ಸಮೀಪವಾಯಿತು. ಬನಿಯನ್ ತೊಟ್ಟು ಬಾಗಿಲವರೆಗೂ ಬಂದು ಆತ್ಮಿಯವಾಗಿ ತಮ್ಮ ಪುಸ್ತಕ ಲೋಕದೊಳಗೆ ನಮ್ಮನ್ನು ಕರೆದೊಯ್ದ ಚನ್ನಣ್ಣ ಮಾತಿಗಿಳಿದರು. ಇವರು ಯಾವ ಪೀಠಿಗಳು ಅಲ್ಲದಿರುವದರಿಂದ ಪ್ರೇಮ ಮತ್ತು ಸಂಘರ್ಷ ಇಲ್ಲಿ ಸಾಧ್ಯ ಎನ್ನುವ ಭರವಸೆ ನನಗೂ ಸಾಧ್ಯವಾಯಿತು. ಈಗ ನಮ್ಮ ಸವಾಲ್ ಜವಾಬಿನ ಸಿಲ್‌ಸಿಲಾ- 

Chennanna Vaalikar in conversation with Ragam

ರಾಗಂ : ಈ ವ್ಯೋಮಾವ್ಯೋಮದ ಹಿನ್ನಲೆ ಏನು ಗುರುಗಳೆ?

ಚ.ವಾ : ಹಿಂಗ, ಒಮ್ಮಿ ಇದ್ದಕ್ಕಿದ್ದಂಗ ನಮ್ಮ ದೇವೆಂದ್ರಕುಮಾರ ಹಕಾರಿ ಹೇಳಿದ ಒಂದು ಮಾತು ನೆನಪಾತು. ಅವ್ರು ಅಂದಿದ್ರು ಮಾನ್ಯಖೇಡ ಎನ್ನುವ ಈ ನಮ್ಮ ಪ್ರದೇಶದೊಳಗ ಹೇಳಿಕೊಳ್ಳುವಂಥ ಒಂದು ಮಹಾನ್ ರಚನೆ ಯಾಕ ಆಗಲಿಲ್ಲ? ಎನ್ ಸಮಸ್ಯೆ ಅದ? ನಮ್ಮೊಳಗ ಆ ಶಕ್ತಿ ಇಲ್ಲೆನು? ಇದೊಂದ ಮಾತು, ತಲ್ಯಾಗ ಯಾವಾಗಲೂ ಹುಳಾ ಸುತ್ತದಂಗ ಸುತ್ತಾಡಲಾಕ ಸುರುಮಾಡತು. ಆಗ ನಾನು ದಿನಾಲೂ ಗುಲ್ಬರ್ಗಾದಿಂದ ರೈಚೂರಿಗೆ ಹೋಗಿ ಬರುತ್ತಿದ್ದೆ. ಟ್ರೆನ್ ಹತ್ತಿ ಕಣ್ಮುಚ್ಚಿದರ ಸಾಕು ಇದ ಪ್ರಶ್ನೆ ಕಾಡತಿತ್ತು. ಏನಾದರು ಆಗಲಿ ಕೈ ಹಾಕೆ ಬಿಡೂನು ಅಂತ ಬುದ್ಧನನ್ನ ತೆಕ್ಕಿ ಹೊಡೆದೆ, ಅಷ್ಟ. ವ್ಯೋಮಾವ್ಯೋಮ ಸಿದ್ಧ ಆಯ್ತು.

ರಾಗಂ : ಸರಿ, ಈ ರೀತಿ ಅಲ್ಪ, ಅರ್ಧ, ಪೂರ್ಣ ವಿರಾಮಗಳಿಲ್ಲದ ಸಾವಿರ ಪುಟಗಳ ಬರಹಕ್ಕೆ ಸ್ಪೂರ್ತಿ ಏನು?

ಚ.ವಾ : ಇಲ್ಲ ರಾಜಶೇಖರ, ಈ ದೇಶದ ಸಾಹಿತ್ಯ ರಚನೆಯಾಗಬೇಕಾದ ಮೂಲ ಶೈಲಿಯೊಳಗ ನಾನು ಈ ಬರಹ ಮಾಡೀನಿ. ವಾಲ್ಮಿಕಿ ವ್ಯಾಸರ ಬರಹದೊಳಗೆಲ್ಲೂ ಈ ಪಂಕ್ಚುವೇಶನ್ಸಗಳ ಪ್ರಶ್ನೆನೆ ಇಲ್ಲ. ಪಂಕ್ಚುವೇಶನ್ಸ ಅನ್ನೊದು ಪಶ್ಚಿಮದ ಪ್ರಶ್ನೆ ನಮ್ಮ ಸಮಸ್ಯೆ ಅಲ್ಲ.

ರಾಗಂ : ಇದನ್ನು ಬರೆಯುಕಿಂತ ಮೊದ್ಲ ಯಾವ ರೀತಿ ತೈಯಾರಿ ಮಾಡ್ಕೊಂದ್ರಿ?

ಚ.ವಾ : ನನ್ನನು ನಾನು ಸಮರ್ಪಿಸಿಕೊಂಡೆ. ಬುದ್ಧ ಎನ್ನುವ ಚೇತನಕ್ಕ ನನ್ನನು ನಾನು ಸಮರ್ಪಿಸಿಕೊಂಡೆ. ಒಂದು ಮಜಾ ಗೊತ್ತಿರಲಿ. ಯಾವುದೇ ಒಂದು ಶಕ್ತಿಗೆ ನಾವು ಸಮರ್ಪಿಸಿಕೊಂಡ್ರ ಅದು ನಮಗ ಅರ್ಪಿಸಿಕೊಳ್ಳತದ. ಈ ಬರಹದ ವಿಷಯದಲ್ಲಿ ಹಂಗ ಆಯ್ತು. ದಿನಾಲೂ ನಸುಕಿನ ಮೂರರಿಂದ ಐದರವರೆಗೆ ಇಪ್ಪತ್ತು ವರ್ಷ ನಿರಂತರವಾಗಿ ಬರೆದೆ. ಅದಕ್ಕ ಪಾಲಿಸಿದ್ದ ನೇಮ ಇಷ್ಟೆ - ಹಗಲು ಗದ್ಯ ರಾತ್ರಿ ಪದ್ಯ
    ಎರಡು ಸಾರಿ ಜಳಕವು
                                    ಬೈಗು ಬೆಳಗು ದೇಹ ದಾರ್ಡ್ಯ
                                    ಎರಡು ಸಾರಿ ಊಟವು

ಜಗತ್ತಿನ ಎಲ್ಲ ತತ್ವಜ್ಞಾನಿಗಳನ್ನ ಓದಿಕೊಂಡೆ. ಹಿಂಗ ಓದಲಾಕ ಒಂದು ಇಪ್ಪತ್ತು ವರ್ಷ ಕಳೆದೀನಿ.

ರಾಗಂ : ಈ ಬರಹ ನಿಮ್ಮ ದೇಹವನ್ನೇನಾದರು ಬಾಧಿಸ್ತೇನು?

ಚ.ವಾ : ಈಗ ನನಗ ವಯಸ್ಸು ಅರವತ್ತೆಂಟು. ನನಗೇನು ಇದರಿಂದ ತೊಂದರಿ ಆಗ್ಯಾದ ಅಂತ ಅನಿಸಿಲ್ಲ. ಹಂಗ ನೋಡಿದ್ರ ಈ ಬರಹದಿಂದ ನನ್ನ ಆರೋಗ್ಯ ಸುಧಾರಿಸ್ತು.

ರಾಗಂ : ಬರಹವನ್ನ ಮೊದಲಿಗೆ ಯಾರಿಗೆ ತೋರಿಸಿದ್ರಿ?

ಚ.ವಾ : ಯಾರಿಗೂ ತೋರಿಸಲಿಲ್ಲ. ಬರಗೂರು, ಕೀ.ರಂ ಭಾಳ ಕಾಡತಿದ್ರು, ಅದೇನ್ರ ಬರೆದಿದೀ ನಮಗೂ ಒಂದಿಷ್ಟು ತೋರ್ಸ್ರು ಅಂತಿದ್ರು. ನಾನು ಯಾರಿಗೂ ತೋರಿಸಲಿಲ್ಲ. ನೋಡಿ ಏನರ ಅಂದ ಬಿಟ್ಟರ ಎಲ್ಲಿ ನನ್ನ ಬರಹ ನಿಂತು ಹೋದೀತೂ ಅಂತ ಭಯ ಇತ್ತು ನನಗ. ಹಿಂಗಾಗಿ ಯಾರಿಗೂ ತೋರಿಸಲಿಲ್ಲ. ಕೊನೆಗೊಮ್ಮ ಒಯ್ದು ಕೀ.ರಂ ಮುಂದಿಟ್ಟೆ. ಅವ್ರು ನೋಡಿ ಗಾಭರ್‍ಯಾದ್ರು. ಏನೂ ಮಾತಾಡ್ಲಿಲ್ಲ. ಉದ್ದೇಶ ಇಷ್ಟ ತಾನು ತಾನಾಗಬೇಕು. ಹಂಗ ಆಗು ವ್ಯಾಳ್ಯಾಕ ಅದೆಲ್ಲೂ ಹೋರಬೀಳಬಾರ್‍ದು.

ರಾಗಂ : ಬಿಡುಗಡೆಯ ಸಂದಂರ್ಭ ಭಾಳ ಮಜಾ ಇತ್ತು ಅಂತ ಕೇಳೀನಿ.

ಚ.ವಾ : ಹೌದು, ಪುಸ್ತಕ ಬಂತು ಅನಂತಮೂರ್ತಿ(Anantamurthi)ಯವರಿಗೆ ಫೋನ್ ಮಾಡ್ದೆ. ಅವ್ರು ಅಂದ್ರು ‘ನೀನು ನನ್ನ ಪ್ರೀತಿಯ ಮನುಷ್ಯ ನಾ ಬಂದ$ ಬರ್‍ತೀನಿ. ಮುಂದ ಪುಸ್ತಕಾ ಕಳಸ್ದೆ. ತಪಾಸ ಇಲ್ಲ. ಏನೋ ಒಂದು ಸಣ್ಣದು ಕಳಸ್ತನ ಅಂತ ಅವರು ತಿಳಿದಿದ್ರು.  ಇದ್ದಕ್ಕಿದ್ದಂಗ ವಲ್ಲೆ ಅಂದ್ರ ನಾ ಹ್ಯಾಂಗ ಬಿಡುದು? ಮತ್ತ ಫೋನ್ ಮಾಡ್ದೆ, ಹೇಳ್ದೆ. ನನ್ನ ಪುಸ್ತಕ ನಿವೇನು ಪೂರಾ ಓದಬಾಡ್ರಿ, ನಿಮಗಾದಷ್ಟು ಓದ್ರಿ. ಕಡೀಗಿ ಒಂದೇ ಪೇಜ್ ಓದಿ ಮಾತಾಡ್ರಿ. ಅವರೆಲ್ಲಾ ದೊಡ್ಡೊರು. ಓದಿ ಹೇಳದ್ರ ನಾನು ಮತ್ತೊಂದಿಷ್ಟು ಸುಧಾರಿಸ್ಕೋತೀನಿ. ಆದರ ಅವ್ರು ಒಪ್ಪಲಿಲ್ಲ. ಇದ್ದ ವಿಷ್ಯಾನ ಕೀ.ರಂಗೆ ಹೆಳ್ದೆ. ಅಂವ ಅನಂತಮೂರ್ತಿಯವರನ್ನ ತರಾಟೆಗೆ ತೊಗೊಂಡ. ಕಡೀಗಿ ಅವರು ಒಪ್ಪಿಕೊಂಡ್ರು. ಅವ್ರು ಹೇಳಿದ್ರು ‘ಖರೆ ಹೇಳಬೇಕಂದ್ರ ಕೀ.ರಂ ನಾನು ಆ ಪುಸ್ತಕಾನ ಓದಿಲ್ಲ. ನನ್ನಿಂದ ಓದಾಕೂ ಆಗುದಿಲ್ಲ. ಅದು ಭಯಂಕರ ಅದ$’ ನಾನು ಅಷ್ಟ ಸಾಕ ಅಂದೆ. ಅನಂತಮೂರ್ತಿಯವರು ಖರೆ ಮಾತಾಡ್ಯಾರಲ್ಲಾ ಅಷ್ಟೆ ಸಾಕು ಅಂದೆ.

ರಾಗಂ : ಹಂಗಾದ್ರ ಕೃತಿ ಬಿಡುಗಡೆ ಏನಾಯ್ತು?

ಚ.ವಾ : ಕೃತಿ ಬಿಡುಗಡೆ ಅಂತು ಆಯ್ತು. ಕಲ್ಬುರ್ಗಿ ಅದ್ಯಕ್ಷತೆಯೊಳಗ ಸಿ.ಎನ್.ರಾಮಚಂದ್ರನ್(C.N.R) ಪುಸ್ತಕ ಬಿಡುಗಡೆ ಮಾಡಿದ್ರು. ಎಚ್.ಎಸ್.ರಾಘವೇಂದ್ರರಾವ್ ಕೃತಿ ಕುರಿತು ಮಾತಾಡದ್ರು ಬಾಳ ಛಲೋ ಆಯ್ತು. ನಾ ಹೇಳುದು ಏನು ಇರಲಿಲ್ಲ. ಗಾಲಿಬ್ ಒಂದಕಡೆ ಹೇಳ್ತನ ‘ಗಾಲಿಬ್ ಹೇಳೂದು ಹೇಳಿ ಬಿಟ್ಟಾನ, ಅವನಕಿಂತಲೂ ಛಲೋ ಹೇಳವ್ರು ಹೇಳಬಹುದು.’ ನನ್ನದೂ ಇದೇ ವಾದ. ಇಪ್ಪತ್ತು ವರ್ಷ ಓದಿ, ಇಪ್ಪತ್ತು ವರ್ಷ ಬರೆದು ನಾನು ಏನ್ ಹೇಳಬೇಕ ಅಂದಿದ್ನಿ ಅದೆಲ್ಲನೂ ಹೇಳಿ ಬಿಟ್ಟಿನಿ. ಬಾಕಿ ಉಳಿದವ್ರು ಹೇಳ ಬೇಕು.

ರಾಗಂ : ಜ್ಞಾನಪೀಠದ ಪ್ಲ್ಯಾನ್ ಇದ್ರ ನಮ್ಮಲ್ಲಿ ಮಹಾ ಕಾವ್ಯ ಹುಟ್ಟತಾವ. ಇಲ್ಲ ಯಾರಿಗೋ ಒಬ್ಬರಿಗೆ ಜ್ಞಾನಪೀಠ ಕೊಡಬೇಕಾಗಿದ್ರ ಅವರ ಅಭಿನಂದನಾ ಗ್ರಂಥಗಳೂ ಮಹಾಕಾವ್ಯದಂಗ ಚರ್ಚೆ ಆಗತಾವ. ಇದರೋಳಗ ನಿಮ್ಮದು ಯಾವ ದಾರಿ?

ಚ.ವಾ : ನಮ್ಮದು ಬುದ್ಧನ ದಾರಿ. ಬಿದ್ದು ಬಿದ್ದು ಒದ್ದಾಡಿ ಜ್ಞಾನಪೀಠ, ಆ ಪೀಠ ಈ ಪೀಠ ಇವುಗಳ ಹಿಂದ ಎಂದೂ ಹೋಗಾಂವಲ್ಲಾ. ನಾ ಹೋಗುವ ದಾರಿ ಇನ್ನು ದೀರ್ಘ ಅದ. ವ್ಯೋಮಾವ್ಯೋಮದ ಮುಂದಿನ ಭಾಗ ಆತ್ಮಾ ಅನಾತ್ಮಾದ ತಯಾರಿ ನಡೆದದ. ಕನಿಷ್ಟ ಎರಡು ಸಾವಿರ ಪುಟ ಆಗಬಹುದು. ೨೦೧೩ ರಕ್ಕ ಹೋರಗ ಬರಬಹುದು. ಅಂದಗ್ಹ ಮೇ ೧ ನೇ ತಾರಿಕಿಗೆ ಜಾಗತಿಕ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಐತಿ. ಆವತ್ತಿನ ನನ್ನ ಪಾತ್ರ ಒಂದನಾರ್ಪಣೆ, ನೀವೂ ತಪ್ಪಿಸಬ್ಯಾಡ್ರಿ.
ಕುಳಿತಿದ್ದರೆ ಇನ್ನು ಮಾತನಾಡುತ್ತಿದ್ದರೆನೋ ಚನ್ನಣ್ಣ ಆದರೆ ಕಾಲದ ಪರಿಧಿಯೊಳಗೆ ಸುತ್ತುವ ಮನುಷ್ಯ ಸ್ವತಂತ್ರನಲ್ಲ. ಅಂದಹಾಗೆ ತಡವಾಗಿಯಾದರೂ ಚಿಂತೆಯಿಲ್ಲ ಚನ್ನಣ್ಣನವರ ವ್ಯೋಮಾವ್ಯೋಮದ ತುಲನಾತ್ಮಕ ಅಧ್ಯಯನ ಕುವೆಂಪು ಅವರ ರಾಮಾಯಣ ದರ್ಶನಂ, ಗೋಕಾಕರ ಭಾರತ ಸಿಂಧೂ ರಶ್ಮಿ ಹಾಗೂ ಇನ್ನೂ ಅನೇಕ ಕೃತಿಗಳೊಂದಿಗೆ ನಾಡಿನುದ್ದಕ್ಕೂ ಇಷ್ಟರಲ್ಲಿಯೆ ಶುರು ಆಗೊದಿದೆ.
ಒಂದೇ ಮಾತು ಗುಲ್ಬುರ್ಗಾದ ಬಿಸಿಲು ಬಾಡುವುದಿಲ್ಲ ಹಾಗೆಯೆ ಚನ್ನಣ್ಣನವರ ವ್ಯೋಮಾವ್ಯೋಮ ಎಚ್ಚರಾಗಿರುವ, ಮುಕ್ತವಾಗಿರುವ ಯಾವ ಮನಸ್ಸನ್ನೂ ಕಾಡದೇ ಇರುವುದಿಲ್ಲ.