Total Pageviews

Monday, February 4, 2013

ಹದಾ ಇಲ್ದ ಪದಾ ಇಲ್ಲ


ಹದಾ ಇಲ್ದ ಪದಾ ಇಲ್ಲ

ಎರೆಯುವೆನು ಬಾ ನಿನ್ನ, ನಮ್ಮ ಪಟ್ಟದ ಮರಿಯೆ
ಸಕಲ ತೀರ್ಥದ ಕ್ಷೀರ ನೀರ ತಂದು


ಇವು ಕವಿ ಬೇಂದ್ರೆ ಮಧುರಚನ್ನ(Madhurachanna)ರನ್ನು ಹರಸಿ ಹಾಡಿದ ಸಾಲುಗಳು. ಹಾಗೆ ಬೇಂದ್ರೆ ಅನ್ಯರನ್ನು ಕುರಿತು ಬರೆದದ್ದು ಬಹಳ ಕಡಿಮೆ. ಈ ಬರೆಯುವ, ಬರೆಯಿಸಿಕೊಳ್ಳುವ ಜೀವಗಳಿಗೆ ಬರೀ ಮೈ ಒಂದಿದ್ದರಾಗದು, ಮನಸ್ಸು ಬೇಕು, ತಪಸ್ಸು ಬೇಕು ಎಲ್ಲಕ್ಕೂ ಮಿಗಿಲಾಗಿ ತಾಯ್ತನ ಬೇಕು. ಬದುಕೆಂದರೆ ಬರೀ ಶಬ್ದಗಳ ಜಾತ್ರೆ ಮತ್ತು ಮೈಯ ಮೆರವಣಿಗೆ ಎಂದುಕೊಂಡವರಿಗೆ ಈ ಸಾಲುಗಳ ಸುಖ ಗೊತ್ತಾಗುವುದಿಲ್ಲ. ಈ ಮೇಲಿನಂತೆ ಹಾಡುವ ಬೇಂದ್ರೆ(Bendre) ಈಗ ಗಂಡಲ್ಲ. ತಾಯಿ. ಕೂಸನ್ನು ಎದೆಗೇರಿಸಿಕೊಂಡು ಎರೆಯುವ ತಾಯಿ. ಮಧುರಚನ್ನರಲ್ಲೂ ಆ ಒಂದು ಮುಗ್ಧತೆಯ ಸೆಳಕು ಇರುವುದರಿಂದ ಅವರಿಗೆ ಬೇಂದ್ರೆಯನ್ನು ಸಂಪೂರ್ಣವಾಗಿ ಸಾಧ್ಯವಾಯಿತು. ಲೋಕ ವ್ಯವಹಾರವನ್ನೆ, ಉಸುರಿ ಉರಿಯುವ ಒಂದು ಪಾತ್ರವಾಗಿದ್ದರೆ ಇವರಿಬ್ಬರ ಮಧ್ಯ ಇಂಥ ಕಾವ್ಯಾನುಸಂಧಾನ ಸಾಧ್ಯವಿರಲಿಲ್ಲ.
ದಿನಾಂಕ 30 ರಂದು ದಾವಣಗೆರೆಯಲ್ಲಿ ಹುತಾತ್ಮರ ದಿನವನ್ನು ಆಚರಿಸಿ ಬಂದ ಮರುದಿನವೇ ದಿನಾಂಕ 31 ರಂದು ನಾನು(Dr.R.G.Mathapati) ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಬೆಳ್ಳಿಮಂಡಲಗಳ ಸಹಯೋಗದಲ್ಲಿ ಬೇಂದ್ರೆ ಕಾವ್ಯ ಗಾಯನ ಹಾಗೂ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಹಾಸನದ ಕಾರ್ಯಕ್ರಮದಲ್ಲಿ ‘ಬೇಂದ್ರೆ ನಾನು ಕಂಡಂತೆ’ ಎಂಬುದನ್ನು ಕುರಿತು ಮಾತನಾಡಿದೆ. ಅಂದು ನನ್ನೊಂದಿಗಿದ್ದವರು ಹೆಸರಾಂತ ಕವಿ ಶ್ರೀ ಬಿ.ಆರ್.ಲಕ್ಷ್ಮಣರಾವ್(B.R.LaxmanaRao), ಡಾ.ಜನಾರ್ಧನ, ಜಾವಗಲ್ ಪ್ರಸನ್ನ, ಶ್ರೀಮತಿ ಸುರೇಖಾ ಹೆಗಡೆ, ಟಿ.ವಿನೋದಚಂದ್ರ ಹಾಗೂ ಶ್ರೀ ರವಿ ನಾಕಲಗೂಡು.
ಮಾತುಗಾರ ಬೇಂದ್ರೆಗೆ ಮಾತು ವ್ಯಸನವಾಗಿರಲಿಲ್ಲ. ಮಾತು ಮಾತು ಮಥಿಸಿ ಕೆಲವೊಮ್ಮೆ ಅವರ ಜೀವನದಲ್ಲಿ ಮುಜುಗರದ ಸಂಧರ್ಬಗಳು ಉಂಟಾದದ್ದು ಯಾರಿಗೂ ಗೊತ್ತಿರದ ವಿಚಾರಗಳೇನಲ್ಲ. ಧಾರವಾಡದ ರೇಲ್ವೆ ಕ್ರಾಸಿಂಗ್ ಬಳಿ ಚಂಪಾ (Champa) ಮತ್ತು ಬೇಂದ್ರೆಯ ಮಧ್ಯ ನಡೆದ ಜಗಳ ಇಡೀ ನಾಡೇ ಸಾಯಂಕಾಲದ ಅವಲಕ್ಕಿ ತಿಂದಂತೆ ಚರ್ಚಿಸಿಯಾಗಿದೆ. ಕಾವ್ಯವನ್ನೂ ಇದು ಮಂತ್ರ, ಅರ್ಥ ಕೆಡಿಸಂದತೆ ಶಬ್ದಗಳ ಪೋಣಿಸುವ ತಂತ್ರ ಎಂದು ಸಾರಿದ ಬೇಂದ್ರೆಯವರ ಜಗಳದ ಅನೇಕ ಉದಾಹರಣೆಗಳನ್ನು ಅವರ ಸನ್ಮಿತ್ರರೂ, ನನ್ನ ಕಾವ್ಯ ದೀಕ್ಷಾ ಗುರುಗಳೂ ಆದ ಸಿಂಪಿ ಲಿಂಗಣ್ಣ(Simpi Linganna)ನವರು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ನಮ್ಮೂರಾದ ಚಡಚಣಕ್ಕೆ ಲಿಂಗಣ್ಣನವರನ್ನು ಹುಡಿಕಿಕೊಂಡು ಬೇಂದ್ರೆ ಬರುತ್ತಿದ್ದರು, ಬಂದಾಗ ನಮ್ಮೂರ ಸೇಡ್ಜಿಯ ಮನೆಯಲ್ಲಿ ಕುಳಿತು ಸಾಹಿತ್ಯವನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. 

ವ್ಯಾಪಾರಿಯಾಗಿದ್ದ ಸೇಡ್ಜಿಗೆ ಸಾಹಿತ್ಯದ ಗಂಧ, ಗಾಳಿ ಗೊತ್ತಿರದಿದ್ದರೂ ತಾನು ಎಲ್ಲದರಲ್ಲೂ ಆಸಕ್ತನಾಗಿದ್ದೇನೆ ಎನ್ನುವುದನ್ನು ತೋರಿಸಿಕೊಳ್ಳಲು ಬೇಂದ್ರೆ ಬಂದಾಗ ಅವರ ಮುಂದೆ ತಲೆಯಾಡಿಸುತ್ತಾ ಕುಳಿತುಕೊಳ್ಳುತ್ತಿದ್ದ. ತಕ್ಕ ಚಹಾ, ತಿಂಡಿಗಳ ವ್ಯವಸ್ಥೆಯನ್ನು ಮಾಡುತ್ತಿದ್ದ. ಆಗ ಬೇಂದ್ರೆ ‘ಮಂದಿ ಮದುವಿ’ ಎನ್ನುವ ನಾಟಕ ಬರೆಯುತ್ತಿದ್ದರು. ಅದರ ಓದನ್ನು ಚಡಚಣದ ಈ ಸೇಡ್ಜಿಯ ಮನೆಯಲ್ಲಿ ಇಟ್ಟುಕೊಂಡಿದ್ದರು. ಅತ್ತ ಸೇಡ್ಜಿಗೆ ಯಾವುದೋ ಊರಿಗೆ ಸಂತೆಗೆ ಹೋಗಬೇಕಾಗಿತ್ತು, ಇಲ್ಲಿ ನೋಡಿದರೆ ಬೇಂದ್ರೆ ನಾಟಕವನ್ನು ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಆತ ಎದ್ದು ಹೋಗುವ ಹಾಗೂ ಇಲ್ಲ, ಸಂತೆಯ ಸಮಯವಾದಿದ್ದರಿಂದ ನೆಮ್ಮದಿಯಿಂದ ಕೂಡ್ರುವ ಹಾಗೂ ಇಲ್ಲ. ಈತನ ಈ ದ್ವಂದ್ವ ಗಮನಿಸಿದ ಬೇಂದ್ರೆ ಸಿಟ್ಟಿನಿಂದ, ‘ ಏ  ಸೇಡ್ಜಿ ಎದ್ದು ಹೋಗುದಿದ್ರ ಮುಂದುಕ್ಕ ಹೋಗಿಬಿಡು. ಯಾಕ ಇಲ್ಲದ ನಾಟ್ಕಾ ಮಾಡ್ತಾ ನಾ ನಾಟಕೋದುದನ್ನ ಕೇಳಾಕ ಕುಂತೀದಿ. ನಿನ್ನ ಮನೀ ನಾಷ್ಟಾಕಾಗಿ ನಿನ್ನ ಇಲ್ಲದ ನಾಟಕ ನನಗ ಸಹಿಸಿಕೊಳ್ಳಕಾಗುದಿಲ್ಲ.’ ಎಂದ ಬೇಂದ್ರೆ ಬರಹವನ್ನು ತೆಗೆದುಕೊಂಡು ಹೊರಟೇ ಬಿಟ್ಟರು.
ಈ ಜಗಳದಲ್ಲಿ ಏನೆಲ್ಲಾ ಇದೆ. ನಮ್ಮ ಹಣ, ಅಧಿಕಾರ, ರೂಪ, ನಾವು ಕೊಡುವ ಒಂದಿಷ್ಟು ಸಮಾಧಾನಕ್ಕಾಗಿ ಜನ ನಮ್ಮ ಕಾಲು ನೆಕ್ಕಿಕೊಂಡು ಬಿದ್ದಿರುತ್ತಾರೆ, ನಾವು ಹೇಗೆ ನಡೆದರೂ ಒಪ್ಪಿಕೊಳ್ಳುತ್ತಾರೆ ಎನ್ನುವ ಉಡಾಫೆಯ ಮನೋಸ್ಥಿತಿಯವರಿಗೆ ಇಲ್ಲಿ ಕಲಿಯಲು ಸಾಕಷ್ಟಿದೆ. ವ್ಯಕ್ತಿಗೆ ಕೊಡುವ ತಿಳಿ ಮಜ್ಜಿಗೆಯೂ ಅಮೃತವಾಗಲು ಸಾಧ್ಯ, ಅಷ್ಟಕ್ಕಾಗಿಯೇ ಆತ ಸುಧಾಮನಂತೆ ನಿಮ್ಮ ಸೇವಕನಾಗಿರಲು ಸಾಧ್ಯ. ಆದರೆ ಅದು ಪ್ರಾಂಜಲವಾಗಿ ಬಂದುದಾಗಿರಬೇಕು. ಬೇಂದ್ರೆಗೆ ಬಡತನವಿತ್ತು, ಬಿಕಾರಿತನವಿರಲಿಲ್ಲ.
ತಿನ್ನುವ ಅನ್ನದಲ್ಲೂ ಮಲ್ಲಿಗೆಯ ಪರಿಮಳ ಮತ್ತು ಅರಳುವಿಕೆಯನ್ನು, ಮನೆಯ ನಾಯಿಯಲ್ಲೂ ಮಾತೃತ್ವದ ಮಹಾ ದರ್ಶನವನ್ನು ಮಾಡಿಕೊಳ್ಳುವ ಸಂಸ್ಕೃತಿ ಹೊಂದಿದ್ದ ಬೇಂದ್ರೆ ಕನ್ನಡ ನಾಡಿನ ವರ ಕವಿಯೇ ಹೌದು. ಕಾವ್ಯವನ್ನು ಬೇಂದ್ರೆ ಬರೆಯಲಿಲ್ಲ ಬದುಕಿದರು, ಅದರ ಹದಕ್ಕಾಗಿ ಏನೆಲ್ಲ ಕೆದಕಿದರು. ಹೀಗಾಗಿಯೇ ಬೇಂದ್ರೆ ಮಾತ್ರ ಪದ್ಯವನ್ನ ಕುರಿತು ಹೀಗೆ ಬರೆಯಲು ಸಾಧ್ಯವಾಯಿತು
ಹದಾ ಒಳಗ ಇಲ್ದ ತಮ್ಮಾ
ಪದಾ ಹೊರಗ ಬರೂದಿಲ್ಲಾ
ಕದಾ ತೆರ್ಯೂದಿಲ್ಲಾ ಅಂತಃಕರಣಾ

ವಾಸನಾಧಾಂಗ ಆವರಣಾ
ಕೊಂಡಾಂಗ ಆವ ಆಭರಣಾ

ಬೆಳಕಿನ್ಯಾಗ ಬಣ್ಣದಾ ಬೆಳಿ
ತನ್ನತನದಾಗ ನಿನ್ನ ಕಳಿ
ಉಳಿವಿಲಿಂಗದಾಗ ಉಳಿ

Saturday, February 2, 2013

ಗಾಂಧಿ: ಸಂಸ್ಕಾರವಂತರಿಗೆ ಮಾತ್ರ


ಗಾಂಧಿ: ಸಂಸ್ಕಾರವಂತರಿಗೆ ಮಾತ್ರ
ಇಂಥ ಒಂದು ಸಮಯಕ್ಕಾಗಿ ನಾನು ಹರಕೆಯೇನು ಹೊತ್ತಿರಲಿಲ್ಲ. ಆದರೆ ನನ್ನ ಹೆರಲು ಹರಕೆ ಹೊತ್ತ ನನ್ನ ತಂದೆ-ತಾಯಿಗಳಿಗೂ ತಮ್ಮ ಬಾಳಿನ ಮುಸ್ಸಂಜೆಯ ಎಪ್ಪತ್ಮೂರರ ವಯಸ್ಸಿನಲ್ಲಿ ಹೀಗೆ ನಡೆಯುತ್ತದೆ ಎಂದು ಅವರೂ ಊಹಿಸಿರಲಿಲ್ಲ. ಇದೊಂದು ಭಾವ ವಿಭೋರತೆಯ ಕ್ಷಣ. ಸಾಧ್ಯವಾಗಿಸಿದವರು ದಾವಣಗೆರೆಯ ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷರೂ, ಕರ್ನಾಟಕದ ಅಪರೂಪದ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಸಹೋದರರೂ ಆದ ಶ್ರೀ ಎಸ್.ಎಚ್.ಪಟೇಲರು. ಮಂದಹಾಸ ಬೀರುತ್ತ, ಬಂದವರೆಲ್ಲರನ್ನೂ ಬಂಧುಗಳೆಂದು ಅಪ್ಪಿಕೊಳ್ಳುತ್ತ, ಬಂದುದೆಲ್ಲವನ್ನೂ ಭಾಗ್ಯವೆಂದೇ ಒಪ್ಪಿಕೊಳ್ಳುತ್ತ, ನಾಡಿನುದ್ದಕ್ಕೂ ಕಲಾವಿದರ, ಬರಹಗಾರರ, ರಾಜಕಾರಣಿಗಳ ಮತ್ತು ಧರ್ಮ ಗುರುಗಳ ದೊಡ್ಡ ಸಂಸಾರ ಕಟ್ಟಿಕೊಂಡವರು ಈ ಪಟೇಲರು. ಇವರ ಕುರಿತು ಒಂದೇ ಮಾತು, ಭಾವನೆಗಳು ಒಳ್ಳೆಯವಾದರೆ ಭಗವಂತನೂ ಮನೆಯಲ್ಲಿ ಕಸಗುಡಿಸಿಕೊಂಡು ಇರುತ್ತಾನೆ. ಮಡದಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಜಾತಿಯ ಹಂಗು ಹರಿದು ಯಾರೆಲ್ಲರನ್ನೂ ಸೇರಿಸಿಕೊಂಡು ಸಂಭ್ರಮಿಸುವ ಇವರ ವಾತ್ಸಲ್ಯಪೂರ್ಣ ಆತಿಥ್ಯವನ್ನು ಸ್ವಿಕರಿಸುವದಕ್ಕಾದರೂ ನಾವು ಏನಾದೊರೊಂದಾಗಿರಬೇಕು. 2012 ಅಕ್ಟೋಬರ 2 ರಂದು ನನ್ನ ‘ಗಾಂಧಿ:ಅಂತಿಮ ದಿನಗಳು’ ಬಿಡುಗಡೆ ಮಾಡಿಸಿ ಸಂಭ್ರಮಿಸಬೇಕೆಂದುಕೊಂಡಿದ್ದ ಇವರೊಂದಿಗೆ ನನಗೆ ಬೆರೆಯಲಾಗಲಿಲ್ಲ. ಕಾರಣವಿಷ್ಟೆ, ಅಂದೇ ನನ್ನ ಆ ಕೃತಿಗೆ ಪ್ರಶಸ್ತಿ ಲಭಿಸಿ ನಾನು ಅಲ್ಲಿಗೆ ಹೋಗಬೇಕಾಗಿದ್ದು.
ಅಂದಿನಿಂದ ದಾವಣಗೆರೆಯ ಈ ಪ್ರೀತಿಯ ಜನತೆಗೆ ಏನಾದರೊಂದು ಅಚ್ಚರಿಯ ಉಡುಗೊರೆಯನ್ನು ಕೊಡಲು ಹಂಬಲಿಸಿದವನು ನಾನು. ಅಂತೆಯೇ ಪಟ್ಟುಹಿಡಿದು ಕುಳಿತು ರಾಜೇಶ್ವರಿ, ಪದ್ಮಶ್ರೀ, ದೇಸಾಯಿ, ಗಿರಿರಾಜು ಮತ್ತು ಶಿವಪ್ರಸಾದ ಇವರುಗಳ ಸಹಾಯದಿಂದ ನನ್ನ ‘ಗಾಂಧಿ:ಮುಗಿಯದ ಅಧ್ಯಾಯ’ವನ್ನು ಮುಗಿಸಿ ದಾವಣಗೆರೆಯ ಮಾನವ ಹಕ್ಕುಗಳ ವೇದಿಕೆ ಹಮ್ಮಿಕೊಂಡ ಹುತಾತ್ಮರ ದಿನಾಚರಣೆಗೆ ಬಿಡುಗಡೆಗೊಳಿಸುವ ಯೋಚನೆಯನ್ನು ಕಾರ್ಯಗತಗೊಳಿಸಿದೆ.
ದ್ವೇಷ ದ್ವೇಷವನ್ನೇ ಹೆಚ್ಚಿಸುವಂತೆ ಪ್ರೀತಿ ಪ್ರೀತಿಯನ್ನು ನೂರ್ಮಡಿಸುತ್ತದೆ ಎನ್ನುವುದಕ್ಕೆ ಸಾಕ್ಷಿ ದಿನಾಂಕ 30/01/2013 ರಂದು ನಡೆದ ಈ ಕಾರ್ಯಕ್ರಮ. ಪಟೇಲರ ಗೆಳೆಯರೂ ಮತ್ತು ವೇದಿಕೆಯ ಸಕ್ರೀಯ ಕಾರ್ಯದರ್ಶಿಗಳೂ ಆದ ಅರುಣ್‍ಕುಮಾರ ಹಾಗೂ ಹನುಮಂತಪ್ಪರೊಂದಿಗೆ ಸೇರಿಕೊಂಡು ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಅದೆಷ್ಟು ಅಚ್ಚರಿಗಳು ಕಾದಿದ್ದವೆನ್ನುವನ್ನು ನೀವು ಗಮನಿಸಬೇಕು. ನನ್ನ ಸಾವಿರಾರು ಸಮಾರಂಭಗಳಲ್ಲಿ ಕೆಲವೊಂದಕ್ಕೆ ಮಾತ್ರ ನನ್ನ ತಂದೆ-ತಾಯಿ ಹಾಜರಿದ್ದಾರೆ. ಅಂಥ ಬೆರಳೆಣಿಕೆಯ ಸಮಾರಂಭಗಳಲ್ಲಿ ಇದೂ ಒಂದು. ಈ ಸಮಾರಂಭದಲ್ಲಿ ಶಿಕ್ಷಣಕ್ಕೆ ಅವರು ಸಲ್ಲಿಸಿದ ಸೇವೆ ಮತ್ತು ಕರ್ನಾಟಕಕ್ಕೆ ನನ್ನನ್ನು ನೀಡಿದ್ದಕ್ಕಾಗಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾದದ್ದು ಮತ್ತೊಂದು. ಕಳೆದ ಒಂದು ತಿಂಗಳಿನಿಂದ ಆಂತರಿಕ ಹಿಂಸೆಯ ಬೇಗುದಿಯಲ್ಲಿ ಬೆಂದಿದ್ದ ನನ್ನೊಂದಿಗೆ ಅಂದು ಎಷ್ಟೊಂದು ಬೆಳಕಿನ ಜನಗಳು, ಎಷ್ಟೊಂದು ಪ್ರೀತಿಯ ಕಣಗಳು.
ತತ್ವಚಿಂತನೆಯಲ್ಲಿ ಆಸಕ್ತರೂ, ದಾವಣಗೆರೆಯ ಸಧ್ಯದ ಜಿಲ್ಲಾಧಿಕಾರಿಗಳು ಆದ ಶ್ರೀ ಪಟ್ಟಣಶೆಟ್ಟಿ, ದೇಶ ದೇಶಗಳ ಮಧ್ಯ ಬೆಳಕಿನ, ಪ್ರೇಮದ ದೀಪ ಹೊತ್ತಿಸಬೇಕೆನ್ನುವ ಹಂಬಲದ ಗ್ರೀನ್ ಆಸ್ಕರ ಪುರಸ್ಕೃತ ಶ್ರೀ ಧರ್ಮದಾಸ ಬಾರ್ಕಿ, ಇವರು ಗಂಗೂಬಾಯಿ ಹಾನಗಲ್ಲರ ಮೊಮ್ಮಗ ಎನ್ನುವುದೊಂದು ಹೆಗ್ಗಳಿಕೆ, ಸದಾ ನನ್ನ ಏಳ್ಗೇಯನ್ನೆ ಬಯಸುವ ಗೆಳೆಯ ಎಮ್.ಆರ್.ಗಿರಿರಾಜು, ನಿಗರ್ವದ, ಪ್ರಾಮಾಣಿಕತೆಯ ಪ್ರತಿಬಿಂಬದಂತಿರುವ ಹೆಸರಾಂತ ಚಿತ್ರ ಕಲಾವಿದ ಶ್ರೀ ಬಿ,ಎಸ್.ದೇಸಾಯಿ, ಶಿವಮೊಗ್ಗದಿಂದ ಬಂದಿದ್ದ ನನ್ನ ದೊಡ್ಡಪ್ಪ ಶ್ರೀ ಶಿವಲಿಂಗಯ್ಯಾ ಗೊಂಬಿಗುಡ್ಡ, ತರಿಕೆರೆಯಿಂದ ಬಂದ ಗೆಳೆಯ ಹರೀಶ ಎಷ್ಟೊಂದು ಪ್ರೀತಿ. ಆನಂತರ ಹಿರಿಯರಾದ ಪಟೇಲರ ಮನೆಯಲ್ಲಿ ನಡೆದ ಊಟದಲ್ಲಿ ಎಷ್ಟೊಂದು ವೈವಿದ್ಯ ರೀತಿ, ನೀತಿ. ಇದು ಹೃದಯ ಸಂಸ್ಕಾರವಂತರಿಗೆ ಮಾತ್ರ ಅರ್ಥವಾಗುವ ಜೀವನದ ದಾರಿ. ಮಾಡಿದೆನೆಂಬುದು ಮನದಲ್ಲಿಯೂ ಹೊಳೆಯಿಸಿಕೊಳ್ಳದ ಇವರ ಮನೆಯಲ್ಲಿ ನಿತ್ಯ ದಾಸೋಹ. ಮರೆಯಬೇಡಿ ಈ ಮನೆಯಲ್ಲಿ ಒಬ್ಬ ಪುಟ್ಟ ಕವಿಯೂ ಇದ್ದಾನೆ, ಕುಮಾರ ಆದಿತ್ಯ ಪಟೇಲ. ಈತ ಪಟೇಲ ಮನೆತನದ ಭವಿಷ್ಯದ ಸಾಂಸ್ಕೃತಿಕ ರಾಯಭಾರಿ.

ದಾವಣಗೆರೆಯ ಇನ್ನೊಂದು ವಿಶೇಷವನ್ನು ನಾ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಅಕ್ಟೋಬರ 2 ರಂದು ದಾವಣಗೆರೆಗೆ ಬಾರದೇ ಹೋದ ಮಠಪತಿಯನ್ನು ನಂಬಿ, ಆತನ ಗಾಂಧಿಯನ್ನು ನಂಬಿ, ಸೂರ್ಯನಿಗಿಂತಲೂ ಕರಾರುವಕ್ಕಾಗಿ, ಅದೊಂದು ವೃತವೆನ್ನುವಂತೆ ಶ್ರೀ ಬಸವಲಿಂಗಪ್ಪ ಅವರು ಪ್ರತಿ ದಿನದ ನಸುಕಿನ 6 ಗಂಟೆಗೆ ಒಂದು ಎಸ್.ಎಮ್.ಎಸ್ ಹಾಕುತ್ತಾರೆ. ಮೋಬೈಲನ್ನು ಮನುಷ್ಯತ್ವದ ವಿಸ್ತೃತಿಗಾಗಿ ಬಳಸಿಕೊಂಡ ಅಪರೂಪದವರಲ್ಲಿ ಈ ಬಸವಲಿಂಗಪ್ಪ ಒಬ್ಬರು. ಇವರ ಎಸ್.ಎಮ್.ಎಸ್ ಗಳಿಂದ ಆತ್ಮಸ್ಥೈರ್ಯವನ್ನೂ, ಮೌನವನ್ನು ಹಾಗೂ ಸಹನೆಯನ್ನು ಬೆಳಸಿಕೊಂಡಿದ್ದ ನನಗೆ ಅಂದು ಇವರ ಭೆಟ್ಟಿಯಾಯಿತು. ಇವರ ನೋಡಿದಾಗ ನೆನಪಾಯಿತು ಸತ್ತು ಕೊಳೆತು ನಾರುವ ನಾಯಿಯ ದೇಹದಲ್ಲಿ ನೋಡುವವರಿಗೆ ಇನ್ನೂ ಹೊಳೆಯುವ ಹಲ್ಲುಗಳೂ ಉಂಟು, ಕಣ್ಣಿದ್ದೂ ಕಣ್ಣಿಲ್ಲದವರಿಗೆ ಬರೀ ಕೆಟ್ಟವಾಸನೆಯೇ ಉಂಟು. ಇವರ ಈ ಮೋಬೈಲ್ ಬಳಕೆಯ ರೀತಿ ನಮಗೆಲ್ಲಾ ಆದರ್ಶವಾಗಬಾರದೆ?

ಗಾಂಧಿ: ಏನೆಲ್ಲ ಬರೆದೂ, ಏನೂ ಬರೆಯಲಾಗಲಿಲ್ಲ...

ಗಾಂಧಿ: ಏನೆಲ್ಲ ಬರೆದೂ, ಏನೂ ಬರೆಯಲಾಗಲಿಲ್ಲ...                                                                     
ಲೋಕದಲ್ಲಿ ಸಾಮಾನ್ಯರಂತೆ ಹುಟ್ಟಿ ಸಾಯುವ ಶಿಶುಗಳಿಗೆ ನವಮಾಸಗಳ ಗರ್ಭ ಸಾಕಾಗಬಹುದು. ಆದರೆ ಸಾವಿಲ್ಲದವರ ಗರ್ಭದ ಕಥೆ ಹೀಗಲ್ಲ. ಗಾಂಧಿ(Gandhi) ಅಂಥ ಒಂದು ಸಾವಿಲ್ಲದ ಶಕ್ತಿ, ಸಾಮಾನ್ಯ ಮತ್ತು ಚಿಂತನೆಗಳ ಸಾಗರ. 1996, ಅಂದರೆ ಇಂದಿಗೆ 17 ವರ್ಷಗಳ ಹಿಂದೆ ದೆಹಲಿಯ ಗಾಂಧಿಯ ಸಮಾಧಿಗೆ ಭೇಟ್ಟಿ ಕೊಡುವುದರ ಮೂಲಕ ಈತನನ್ನು ನನ್ನೊಳಗೆ ಹೊಗಿಸಿಕೊಂಡ ನಾನು ಹೊತ್ತು ತಿರುಗಿದ್ದು, ಸಾವರಿಸಿಕೊಂಡದ್ದು, ಆತ ನನ್ನೊಳಗೆ ಬೆಳೆಯುವ ಪರಿಗೆ ಮತ್ತೆ ಮತ್ತೆ ನನ್ನನ್ನೇ ನಾನು ಮುಟ್ಟಿಕೊಂಡು ನೋಡಿದ್ದು ನಿಜಕ್ಕೂ ದೀರ್ಘ ಅವಧಿಯಲ್ಲವೆ? ಸಾಯುವ ಯಾವ ಸಂತಾನವು ನಮ್ಮೊಳಗೆ ಇಷ್ಟೊಂದು ಗಟ್ಟಿಯಾದ ಗರ್ಭವನ್ನು ಕಟ್ಟಿಕೊಳ್ಳುವುದಿಲ್ಲ. ಹೀಗೆ ನನ್ನೊಳಗೆ, ನನ್ನೊಂದಿಗೆ ಬೆಳೆದ ಗಾಂಧಿ ಹೊರ ಬರಲು ಪ್ರಾರಂಭಿಸಿದ್ದು 2002 ರಿಂದ. ಮೊದಲ ಬಾರಿಗೆ ಈತನನ್ನು ಕುರಿತು ‘ಗಾಂಧಿ ಮತ್ತು ಗೂಂಡಾ’ (Gandhi Mattu Gunda) ಎಂಬ ಸಣ್ಣ ನಾಟಕ ಬರೆದೆ. ಬರಿದಾಗಲಿಲ್ಲ ಒಳಗಿನ ಬೇಗುದಿ. ಮತ್ತೆ ಹೆಪ್ಪುಗಟ್ಟಲಾರಂಭಿಸಿದ. 2012 ರಲ್ಲಿ ನನ್ನೊಂದಿಗೆ ತನ್ನ ಅಂತಿಮ ದಿನಗಳ ನೋವುಗಳನ್ನು ತೋಡಿಕೊಳ್ಳುತ್ತ ‘ಗಾಂಧಿ: ಅಂತಿಮ ದಿನಗಳು’ ಬರಿಯಿಸಿಕೊಂಡ. ಈಗಲಾದರೂ ಹೆತ್ತು ಹಗುರಾಗಬೇಕಿತ್ತಲ್ಲ ನಾನು, ಹಾಗಾಗಲಿಲ್ಲ. ಹೆರುವ ಜೀವಕ್ಕೆ ನೋವಿನ ಕ್ಷಣದ ವೈರಾಗ್ಯವನ್ನು ಮರೆಯಲು ಅಣಿಯಾದರೆ ಮತ್ತೆ ಹೊಸ ಕನಸು, ಹೊಸ ಕೂಸು. ಈಗ ದಿನಾಂಕ 30/01/2013 ರಂದು ದಾವಣಗೆರೆಯ ಮಾನವ ಹಕ್ಕುಗಳ ವೇದಿಕೆ ಅಡಿಯಲ್ಲಿ, ಗ್ರೀನ್ ಆಸ್ಕರ್ (Green Oscar) ಪ್ರಶಸ್ತಿ ವಿಜೇತ ಧರ್ಮದಾಸ ಬಾರ್ಕಿ (Dharmadas Barki) ಮತ್ತು ಎಸ್.ಎಚ್.ಪಟೇಲರ (S.H.Patel) ಅಭಿಮಾನಿ ವಲಯದಲ್ಲಿ ನನ್ನಿಂದ ಮತ್ತೆ ಈ ಲೋಕಕ್ಕೆ ‘ಗಾಂಧಿ: ಮುಗಿಯದ ಅಧ್ಯಾಯ’ವಾಗಿ ಬಂದ. ಹೀಗೆ 1996 ರಿಂದ ಈ ಗಾಂಧಿಯನ್ನು ನಾನೊಬ್ಬನೇ ಹೊತ್ತು ತಿರುಗಿದೆನೆ? ಹಾಗೊಂದು ವೇಳೆ ಹೇಳಿದರೆ ಮಹಾ ಸುಳ್ಳು. ಸತ್ಯಾನ್ವೇಷಕನಿಗೆ ಸಲ್ಲಿಸುವ ಅಗೌರವ. ಈ ಒಟ್ಟು ಹೆರಿಗೆಯ ಸುತ್ತಲೂ ಕಣ್ವ (Kanva) ಪ್ರಕಾಶನದ ಗೆಳೆಯ ಎಮ್.ಆರ್.ಗಿರಿರಾಜು, ಲೇಖಕಿಯರಾದ ರಾಜೇಶ್ವರಿ.ಎನ್, ಪದ್ಮಶ್ರೀ, ಲೋಕಕ್ಕೆ ಬಂದ ಈ ಮಗುವನ್ನು ತಿದ್ದಿ ತೀಡಿದ ಅಪಾರ ಓದುಗ ಬಳಗ ಎಲ್ಲರೂ ನನ್ನೊಂದಿಗಿದ್ದರು ಎನ್ನುವುದು ಸಂಭ್ರಮದ ವಿಷಯವಲ್ಲವೆ? ಆದರೆ ಹೀಗೆ ಬಂದ ಈ ಒಟ್ಟು ಬರಹದ ಅಂತ್ಯದಲ್ಲಿ ನನಗನ್ನಿಸಿದ್ದು ಏನೆಲ್ಲ ಬರೆದೂ, ಏನೂ ಬರೆಯಲಾಗಲಿಲ್ಲ...
          ಆದರೆ ಹೀಗಂತ ನಾನೊಬ್ಬನೇ ಹೇಳುತ್ತಿಲ್ಲ. ನನ್ನೊಂದಿಗೆ ಈ ಗಾಂಧಿಯೂ ಹೇಳಿದ್ದಾನೆ. ಆತನ ಕೊನೆಯ ದಿನಗಳಿಗೆ ಸ್ವಲ್ಪ ಮುನ್ನ ಮಾರ್ಟಿನ್ ಕಿಂಗ್ಸ್ ಲೇ (Martin Kingsley)ಹಾಗೂ ವಿನ್ಸೆಂಟ್ ಶೀನ್‍ (Wincent Sheen )ರೊಂದಿಗೆ ಮೆಹರಾಲಿಯ ಖ್ವಾಜಾ ಸೈಯ್ಯದ್ ಕುತುಬುದ್ದಿನ್ ಭಕ್ತಿಯಾರ(Kutbuddin Bhaktiar)ರ ಉರಸ್‍ನಲ್ಲಿ ಪಾಲ್ಗೊಂಡಿದ್ದ ಗಾಂಧಿ ನನ್ನಂತೆಯೇ ರಾಗವೆಳೆದಿದ್ದ. `ಏನೆಲ್ಲ ಬರೆದು ಏನೂ ಬರೆಯಲಾಗಲಿಲ್ಲ...’. ಇದು ನಮ್ಮ ಮಿತಿ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಕಾಲಧರ್ಮ. ಕೇವಲ ಒಂದು ಬತ್ತಳಿಕೆಯಂತೆ  ಬಳಕೆಯಾಗುವ ಮನುಷ್ಯ ಪ್ರಪಂಚದ ಅಗಾಧ ಉದ್ದೇಶ ಮತ್ತು ಗುರಿಗೆ ಸಾಧನವಷ್ಟೆ. ಎಲ್ಲ ನಡೆದು, ನುಡಿದು ಕಾಲದ ಅಣತಿಯಂತೆ ಹೊರಡಬೇಕಾದ ನಾವು, ನೀವು ಮತ್ತು ಈ ಗಾಂಧಿ ಇನೆಷ್ಟು ಹೇಳಬಹುದು? ನಮ್ಮ ಗರ್ವಕ್ಕೆ ಧಕ್ಕೆಯಾಗದಿರಲೆನ್ನುವ ಕಾರಣಕ್ಕೆ ಬೆಂಜಮಿನ್ ಡಿಸ್ರೆಲಿಯಂತೆ ನುಡಿಯಬಹುದಷ್ಟೇ, ಎಲ್ಲ ಬರೆದು ಆತ ಕೊನೆಗೆ ಹೇಳಿದ, The time will come, when you will hear me.”  
ಆ ಕಾಲ ಈಗ ಬಂದಿದೆಯೇ? ಬಂದಿದೆ ಎನ್ನುವ ಭ್ರಮೆಯಲ್ಲಿ ನಾನು ಗಾಂಧಿಯನ್ನು ಮತ್ತೇ ನಿಮ್ಮ ಮುಂದೆ ನಿಲ್ಲಿಸಿದ್ದೇನೆ. ಬಂದಿದೆಯೋ ಇಲ್ಲವೋ ಆದರೆ ಕೆಲವು ಭ್ರಮೆಗಳೊಂದಿಗೆ ಬದುಕಿದಾಗ ಸಿಗುವ ಆತ್ಮಸ್ಥೈರ್ಯ ಬದುಕಿನಿಂದಲೂ ಸಿಗುವುದಿಲ್ಲ. ಅಂತಹ ಮಾಯಾವಿ ಈ ಗಾಂಧಿ ನನ್ನ ಪಾಲಿಗೆ ನನ್ನಂತಹ ಅನೇಕರ ಪಾಲಿಗೆ. ಈ ಗಾಂಧಿ ಯಾರು? ಏನು? ಹೇಗೆ? ಎಂದು ಎಷ್ಟೆಲ್ಲಾ ಜನ ಬರೆದಿದ್ದಾರೆ ಆದರೆ ನನಗೆ ಮಾತ್ರ ಸ್ಟೆಫೆರ್ಡ್ ಕ್ರಿಪ್ಸ್‍ನ ಮಾತುಗಳಲ್ಲಿಯೇ ಗಾಂಧಿ, ಗಾಂಧಿಯಾಗಿ ಕಾಣಿಸುತ್ತಾನೆ, I know of no other man in our time, or indeed in recent history, who so convincingly demonstrated the power of the spirit over material things”. ಹೆಸರಾಂತ ಇತಿಹಾಸಕಾರ ವಿಲ್ ಡ್ಯೂರಾಂಟ್‍(Wil Durant)ನು ಇದನ್ನೇ ಹೇಳಿದ, ‘ಗಾಂಧಿ ತಾವು ಸಾಧಿಸಬೇಕಾದುದನ್ನು ತಮ್ಮ ಸಾವಿನಲ್ಲಿ ಸಾಧಿಸಿದ್ದಾರೆ. ಉಳಿದವರು ಮಾಡಬೇಕಾದುದು ಸಾಕಷ್ಟಿದೆ.’
ಈ ಉಳಿದವರ ಸಾಲಿನಲ್ಲಿ ಬರುತ್ತೇವೆ ನಾವು, ನೀವು ಹಾಗೂ ಇಡೀ ಪ್ರಪಂಚ. ನೆಹರೂ(Nehru), ಚರ್ಚಿಲ್(Charchil), ಹಾಗೂ ಮನಮೋಹನ್ ಸಿಂಗ್(Manmohan Singh). ನಾವೆಲ್ಲಾ ಗಾಂಧಿಯ ಹೆಸರನ್ನು ನೆಪವಾಗಿಸಿಕೊಳ್ಳಲು ಸೋತವರು ಎಂದು ಕೆಲವೊಮ್ಮೆ ನನಗನಿಸಿದೆ. ಚರ್ಚಿಲ್‍ನ ಇಡೀ ಬದುಕಂತೂ ಗಾಂಧಿಯ ಟೀಕೆಯಲ್ಲಿಯೇ ಕರಗಿಹೋಯಿತು. ಆತ ಎಸೆದ ಒಂದೊಂದು ಟೀಕೆಯ ಕಲ್ಲನ್ನು ಮೆಟ್ಟಿಲಾಗಿಸಿಕೊಂಡು ಮೇಲೆರಿದವನು ಈ ಮುದುಕ. ಈತ ಮಹಾತ್ಮ(Mahatma)ನಾಗಿ ಪ್ರಪಂಚದಲ್ಲಿ ಉಳಿದ, ಚರ್ಚಿಲ್ ಮನುಷ್ಯನಾಗಿ ಪ್ರಪಂಚದಿಂದ ಅಳಿದ. ವಿಚಿತ್ರ ನೋಡಿ, ಮಹಾತ್ಮನನ್ನು ಬೈಯ್ದೂ ಇತಿಹಾಸದ ಅವಿಭಾಜ್ಯ ಅಂಗವಾಗಿ ಉಳಿಯುವ ಸುದೈವಿ(?) ಚರ್ಚಿಲ್. ಇವನಷ್ಟೇ ಭಾಗ್ಯಶಾಲಿ(?) ಆ ಗೋಡ್ಸೆ. ಈ ಭಾಗ್ಯ ನಿಮಗಿದೆಯೋ? ನನಗಂತೂ ದಕ್ಕಿದೆ. ಈತನ ಕುರಿತು `ಗಾಂಧಿ ಮತ್ತು ಗೂಂಡಾ’, ` ಗಾಂಧಿ: ಅಂತಿಮ ದಿನಗಳು’ ಮತ್ತು ` ಗಾಂಧಿ: ಮುಗಿಯದ ಅಧ್ಯಾಯ’ ಹೀಗೆ ಏನೆಲ್ಲಾ ಬರೆದಿದ್ದೇನೆ. ಮುದುಕನನ್ನು ಕುರಿತು ಬರೆದು ಮುಪ್ಪನ್ನು ಆಹ್ವಾನಿಸಿಕೊಂಡ ಮೂರ್ಖ ಎನ್ನುವ ಟೀಕೆಗೂ ಒಳಗಾಗಿರಬಹುದು. ಈ ಟೀಕೆಯಲ್ಲಿಯೇ ನನ್ನ ಪುನರುತ್ಥಾನವಿದೆ. ಕಬೀರ(Kabeer), ಅಕ್ಕಮಹಾದೇವಿ, ಗಾಂಧಿ, ಒಶೋ(Osho), ಅಬ್ಬಾಸ್(Abbas), ಅಂಬೇಡ್ಕರ(Ambedkar)ರನ್ನು ಕುರಿತು ಬರೆದು ನಾನು ಮುಪ್ಪಿನವರ ಸಾಲಿನಲ್ಲಿ ಸೇರುವುದಾದರೆ ಈ ದೇಶಕ್ಕೆ ಇವರ ಆಲೋಚನೆಗಳು, ಪ್ರಯೋಗಗಳು ಅರ್ಥವಾಗಲಿಲ್ಲ ಎಂದು ದುಖಃ ಪಡುತ್ತೇನೆಯೇ ವಿನಃ ನನಗೆ ಮುದುಕರ ಪಟ್ಟ ಬಂದಿತೆಂದಲ್ಲ. ಅಷ್ಟಾಗಿಯೂ ಅದು ಬರುವುದಾದರೆ ಅವಿವೇಕದ ಯವ್ವೌನಕ್ಕಿಂತ ವಿವೇಕದ ಈ ಮುದುಕರ ಸಂಘವೇ ಒಳಿತೆಂದು ಸಂಭ್ರಮಿಸುತ್ತೇನೆ. ಗಾಂಧಿಯ ಕುರಿತು ಈ ನನ್ನ ಬರಹ ಏನು ಎನ್ನುವುದನ್ನು ಚರ್ಚಿಲ್‍ನ ಮಾತುಗಳಲ್ಲಿಯೇ ಹೇಳುತ್ತೇನೆ, This is not the end. It is not even the beginning of the end. But it is, perhaps, the end of the beginning” ಎರಡು ದಶಕಗಳ ಬಾಳಿನಲ್ಲಿ ಗಾಂಧಿಯನ್ನು ಕುರಿತು ಸಾಕಷ್ಟು ತಲೆಕೆಡಿಸಿಕೊಂಡಿದ್ದೇನೆ ಎನ್ನುವುದು ಸುಖದ ಮಾತಾಗಿದೆಯೇ? ಗೊತ್ತಿಲ್ಲ. ಪ್ರಾಥಮಿಕ ಶಾಲಾ ವಿಧ್ಯಾರ್ಥಿಯಾಗಿ ಈತನ ಜಯಂತಿಯ ಸಿಹಿಯನ್ನು, ಈತನ ಪುಣ್ಯತಿಥಿಯ ಮಧ್ಯಾನ್ಹದ ಊಟವನ್ನು ಅನುಭವಿಸಿದ ನನಗೆ ಕಾಡಿದ್ದು ಒಂದೇ ಪ್ರಶ್ನೆ, ನಮ್ಮ ಮಧ್ಯದ ಈ ಗಾಂಧಿ ಯಾಕೆ ಒಗಟಿನಂತಾದ? ಕೇತಲದೇವಿ, ನೀವು ಈ ಹೆಸರನ್ನು ಕೇಳಿರಬಹುದು. ಆಕೆಯ ಒಂದು ವಚನದ ಆರಂಭಿಕ ಎರಡು ಸಾಲುಗಳು-
` ಹದ ಮಣ್ಣಲ್ಲದ ಮಡಿಕೆಯಾಗಲಾರದು
ವೃತಹೀನನ ಬೆರೆಯಲಾಗದು’
ಎಷ್ಟೊಂದು ಸರಳ ಈ ಸಾಲುಗಳು. ಆದರೆ ವಾಸ್ತವದಲ್ಲಿ ಎಷ್ಟೊಂದು ಕಠಿಣ ಇದರ ಸಾಧನೆ. ಒಬ್ಬ ಗಾಂಧಿಯ ಸೋಲು-ಗೆಲುವು ಎಲ್ಲ ನಿರ್ಭರವಾಗುವುದು ಈ ಸಾಲುಗಳನ್ನಾಧರಿಸಿಯೇ. ಕೇತಲದೇವಿಯ ಈ ಸಾಲುಗಳು ಗಾಂಧಿಯ ಅಂತಿಮ ದಿನಗಳಿಗೆ ಹೊಂದಿಸುವಷ್ಟು ಇನ್ಯಾರ ಸಾಲುಗಳನ್ನು ಹೊಂದಿಸಲಾಗದು. ಕನಿಷ್ಟ ಆತನ ಎರಡು ವರ್ಷದ ಅಂತಿಮ ಬದುಕು ಪಶ್ಚಾತಾಪದ ಕಣ್ಣೀರಿನಲ್ಲಿ ಮಿಂದೆದ್ದಿದೆ. ಅಹಿಂಸೆ, ಸತ್ಯಾಗ್ರಹ, ಖಾದಿ, ಚರಕ, ಗ್ರಾಮ ಸ್ವರಾಜ್ಯ, ರಾಮರಾಜ್ಯ ಎಲ್ಲವೂ ತನ್ನೊಂದಿಗೆ ಅಳಿಯುತ್ತಿವೆ ಎನ್ನುವ ವಾಸ್ತವ ಅವನ ಅರಿವಿಗೆ ಬಂದಿದೆ. ಹದವಲ್ಲದ ಮಣ್ಣು ಮಡಿಕೆಗೆ ಬಾರದಂತೆ, ವೃತಹೀನರ ಸಂಗ ಸಾತ್ವಿಕ ಶಕ್ತಿಯಾಗದಂತೆ ಗಾಂಧಿಯ ಪಾಡಾಗಿದೆ. ಹೀಗೆ ಹೇಳುವಾಗ ಗಾಂಧಿಯನ್ನು ಮಹಾತ್ಮನನ್ನಾಗಿ ನೋಡಬೇಕಿಲ್ಲ. ಮನುಷ್ಯನಾಗಿಯೂ ಅವನ ಹೂಡಿಕೆ ತಪ್ಪಾಗಿದೆ. ಯಾಕೆಂದರೆ, Among people generally corrupt, liberty cannot long exist.” ಗಾಂಧಿ, ಸತ್ಯಸಂಧರಾಗಿರಬೇಕು, ಆತ್ಮಸಾಕ್ಷಿಯಿಂದ ಬದುಕಬೇಕು ಎನ್ನುವುದರ ಅರ್ಥ ನಮ್ಮನೆಲ್ಲಾ  ಹಿಮಾಲಯಕ್ಕೆ ಕರೆದುಕೊಂಡು ಹೋಗಿ ಬೈರಾಗಿಗಳನ್ನು ಮಾಡುವುದು ಎಂದಲ್ಲ. ಬದಲಿಗೆ ನಾವು ನಂಬಿದ ಲೌಕಿಕ ವ್ಯವಸ್ಥೆಗಳಿಗೂ ಒಂದು ಸಿದ್ಧಾಂತ ಬೇಕಾಗುತ್ತದೆ ಎನ್ನುವ ಸರಳ ಸತ್ಯ ಹೇಳುವುದರಲ್ಲಿಯೇ ಅವನ ಇಡೀ ಜೀವನ ಕಳೆದುಹೋಯಿತು ಎನ್ನುವುದು ಅತ್ಯಂತ ಖೇದದ ಸಂಗತಿ. ವ್ಯಕ್ತಿಗತವಾಗಿ ಕಳೆದುಕೊಂಡ ಮೌಲ್ಯಗಳನ್ನು, ತತ್ವಗಳನ್ನು ಯಾವುದೋ ಸರಕಾರ, ಇನ್ನಾವುದೋ ಮಹಾತ್ಮ ತನಗೆ ತಂದುಕೊಡಲಿ ಎಂದು ಬಯಸುವ ಸ್ಥಿತಿ ಇದೆಯಲ್ಲಾ, ಅದು ಅಧಃಪತನದ ಕೊನೆಯ ಹಂತ. ಕೋಮು-ಗಲಭೆ, ಧಾರ್ಮಿಕ ಅಸಹಿಷ್ಣುತೆ, ಬ್ರಷ್ಟಾಚಾರದ ಭಾರತದಲ್ಲಿ ಎಚ್ಚರವಾಗಿ, ಸಾಮಾನ್ಯ ಪ್ರಜೆಯಾಗಿ ಗಾಂಧಿ ಇಂಥ ಸಂದೇಶವನ್ನು ಕೊಡುತ್ತಿದ್ದನಲ್ಲ, ಅದು ಆತನ ದುರಂತ.
ಗಾಂಧಿಯನ್ನು ಯಾರೂ ಮೋಸಮಾಡಬಹುದಾಗಿತ್ತು. ಇದರಿಂದ ಗಾಂಧಿಗೆ ಯಾವ ಹಾನಿಯೂ ಇಲ್ಲ. ಅದೇ ಆತನ ಸೌಂದರ್ಯ, ಶಕ್ತಿ ಮತ್ತು ಸಾಧನೆ. ಆದರೆ ಮೋಸದ ನಮ್ಮ-ನಿಮ್ಮ ಗತಿಯೇನು? ಈ ಸಮಾಜದ ಭವಿಷ್ಯವೇನು? ನಾನು ಗಮನಿಸಿದಂತೆ ಈ ದೇಶ, ಜನಗಳ ಬಗೆಗಿದ್ದ ಮೋಹನದಾಸನೆಂಬ ಸಾಮಾನ್ಯ ವ್ಯಕ್ತಿಯ ಮೋಹಗಳನ್ನೇ ಬಳಸಿಕೊಂಡು ಆತನನ್ನು ಹೇಗೆಲ್ಲಾ ಎಳೆಯಲಾಯಿತು, ಆತನ ಎಲ್ಲ ಆಲೋಚನೆಗಳಿಗೆ, ಕನಸುಗಳಿಗೆ ವಿರುದ್ಧವಾದ ಘಟನೆಗಳಿಗೆ ಆತನನ್ನೇ ಸಾಕ್ಷಿಯಾಗಿಸಲಾಯಿತು, ಸಾಲದಕ್ಕೆ ನಮ್ಮ ರಾಜಕೀಯ ಅಪರಾಧಕ್ಕೆ ಆತನನ್ನು ಕೊಲೆ ಮಾಡಿ ಆತ ಜೀವಮಾನದುದ್ದಕ್ಕೂ ವಿರೋಧಿಸಿದ್ದ ವ್ಯಕ್ತಿಪೂಜೆಯನ್ನು ಸ್ಥಾಪಿಸಲಾಯಿತು. ಅಂತಿಮವಾಗಿ `ಗಾಂಧಿ’ ಎಂಬ ಈ ಮನುಷ್ಯನಿಂದ ಒಟ್ಟು ಇತಿಹಾಸದಲ್ಲಿ ಏನಾಯಿತು ಎಂದು ನೀವು ಕೇಳಿದರೆ ನನಗೆ ಫ್ರಾನ್ಸಿಸ್ ಬೇಕನ್(Fransis Becon) ನೆನೆಪಾಗುತ್ತಾನೆ. ಆತ ಬರೆಯುತ್ತಾನೆ, It is as hard and severe a thing to be a true politician as to be truly moral. ಗಾಂಧಿ ಒಬ್ಬ ಸತ್ಯಸಂಧನಾಗಿದ್ದಕಾಗಿ ಮತ್ತು ತತ್ವಾಧಾರಿತ ರಾಜಕಾರಣಿಯಾಗಿ ಮಾಡಿದ ಪ್ರಯತ್ನಕ್ಕಾಗಿ ಆಗಬೇಕಾದುದೇ ಆಗಿದೆ ಎಂದು ನೀವು ಆತ್ಮಸಾಕ್ಷಿಯಾಗಿ ಒಪ್ಪುವುದಾದರೆ ನಾನೂ ನಿಮ್ಮೊಂದಿಗಿರುತ್ತೇನೆ ಮತ್ತು ವರ್ತಮಾನದ ಎಲ್ಲ ದುರಂತಗಳಿಗೂ ಬೆಲೆ ತೆರುತ್ತೇನೆ.
ಕೊನೆಯದಾಗಿ, ನನಗೀಗ ಆ ಅಜ್ಜಿ ನೆನಪಾಗುತ್ತಾಳೆ, ಈಕೆಯ ನೆರಳಿನಲ್ಲಿ ನನ್ನ ಎರಡು ದಶಕಗಳ ಬಾಲ್ಯ ಕಳೆಯುತು. ಮಹಾ ಬಿಗುಮಾನದ ಮುದುಕಿ. ಆಕೆಗೆ ಗಾಂಧಿಯ ಹುಟ್ಟುಹಬ್ಬ ಮತ್ತು ಹುತಾತ್ಮರ ದಿನ ಗೊತ್ತಿರಲಿಲ್ಲ. ಆದರೆ ಗಾಂಧಿ ಗೊತ್ತಿದ್ದ. ಹೀಗಾಗಿಯೇ ಜೀವನದ ಕೊನೆಯವರೆಗೂ ಆಕೆ ಗಾಂಧಿಯ ಚರಕ ಬಿಡಲಿಲ್ಲ. ಆಕೆಯ ನೆನಪು ಬಂದಾಗಲೆಲ್ಲಾ ನನಗೆ ಕದಿರ ರೆಮ್ಮವ್ವೆ ಎಂಬ ಶರಣೆಯ ಸಾಲುಗಳು ನೆನಪಾಗುತ್ತವೆ. ಆಕೆಯ ಹೆಸರೇ ಕದಿರ ರೆಮ್ಮವ್ವೆ. ಆಕೆಗೂ ಚರಕಕ್ಕೂ ಅವಿನಾಭಾವ ಸಂಬಂಧ ಎಂದು ಬಿಡಿಸೇನೂ ಹೇಳಬೇಕಾಗಿಲ್ಲ. ಆದರೆ ಚರಕದೊಂದಿಗಿನ ಆಕೆಯ ಸಂಬಂಧ ಎಂತಹದ್ದು ಎನ್ನುವುದನ್ನು ನಿಮಗೆ ನಾನು ತಿಳಿಸಲೇಬೇಕು. ಯಾಕೆಂದರೆ ಈ ಕದಿರ ರೆಮ್ಮವ್ವೆಯ ಸಾಲುಗಳೆಂದರೆ ಗಾಂಧಿಯ ಚರಕದ ಸುತ್ತಲಿನ ಒಟ್ಟು ಆಲೋಚನೆ. ಅಥವಾ ನಾನು ಮೇಲೆ ಸೂಚಿಸಿದ ಮಹಿಳೆಯ ಒಟ್ಟು ಬದುಕು. ಆಕೆ ಬರೆಯುತ್ತಾಳೆ-
“ನಾ ತಿರುಹುವ ರಾಟಿಯ ಕುಲ ಜಾತಿಯ ಕೇಳಿರಕ್ಕ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ... ... ... ಹೀಗೆ ಏನೆಲ್ಲಾ.
ಒಟ್ಟಾರೆ ಚರಕ ಅಲ್ಲಿ ವ್ಯಾಪಾರವಲ್ಲ. ಗಾಂಧಿಯೂ ಇದನ್ನೇ ಹೇಳುತ್ತಿದ್ದ. ನಮ್ಮೊಳಗಿನ ಶಾಂತಿಗೆ ಆ ಮೂಲಕ ನಾಡಿನ ನೆಮ್ಮದಿಗೆ ದೇಶದ ಪ್ರಗತಿಗೆ ಸಂಕೇತವಾಗಿದ್ದ ಚರಕ ರಾಷ್ಟ್ರದ್ವಜದ ಭಾಗವಾಗಬೇಕು ಎಂದು ಬಯಸಿದ್ದ. ಗಾಂಧಿಗೆ ಗೊತ್ತಾಗದಂತೆ ಇನ್ನಿಲ್ಲದಂತಾಗಿ ಹಿಂಸೆಯ ಸಂಕೇತವಾದ ಅಶೋಕ ಚಕ್ರ ಅಲ್ಲಿ ಸೇರಿಕೊಂಡಿರುವುದು ಆತನ ಕನಿಷ್ಟ ಅಪೇಕ್ಷೆಯನ್ನು ತಿರಸ್ಕರಿಸಿದ್ದಕ್ಕೆ ಸಾಕ್ಷಿ. ಈಗ ಗಾಂಧಿ ಕುರಿತು ಗೋಡ್ಸೆ ಹೇಳಿದ್ದು ಸರಿ ಎನಿಸುತ್ತದೆ. ಆತ ಹೇಳುತ್ತಾನೆ, “ 33 ವರ್ಷಗಳ ಗಾಂಧೀಜಿಯ ರಾಜಕೀಯ ಜೀವನದಲ್ಲಿ ಅವರಿಗೆ ಒಂದೇ ಒಂದು ಸಣ್ಣ ವಿಜಯವೂ ಸಿಕ್ಕಿರಲಿಲ್ಲ.” ಆದರೆ ಇದೆಲ್ಲವೂ ಒಂದು ಹಂತಕ್ಕೆ ನಡೆದುಹೋಗುತ್ತದೆ. ಗಾಂಧಿ ಒಂದು ವಿಚಿತ್ರ ಪ್ರಜ್ಞೆಯಾಗಿ ನಮ್ಮನ್ನು ಬೇಟೆಯಾಡುತ್ತಾನೆ. ಈ ಕಾರಣಕ್ಕಾಗಿ ನಾನು ಬರೆಯುತ್ತೇನೆ, ನೀವು ತಲೆಕೆಡಿಸಿಕೊಳ್ಳುತ್ತೀರಿ. ಆತ ಮುಗಿಯದ ಅಧ್ಯಾಯವಾಗಿ ಮುಂದುವರೆಯುತ್ತಾನೆ.


ಮನಸ್ಸೆಂಬ ಅಗ್ನಿಕುಂಡ


ಮನಸ್ಸೆಂಬ ಅಗ್ನಿಕುಂಡ
ಹದಿನಾರು ವರ್ಷಗಳ ಗಾಂಧಿ ಕುರಿತ ಭಾರವನ್ನು “ಗಾಂಧಿ:ಮುಗಿಯದ ಅಧ್ಯಾಯ”ದೊಳಗೆ ಸುರಿದು ನಾನು ಮುಖ ಮಾಡಿದ್ದು ಸೂಫಿಗಳ ಕಡೆಗೆ. ಸಾವಿಲ್ಲದ ಸಾಹಿತ್ಯ ಬರೆದಿಟ್ಟವರು ಸೂಫಿಗಳು. ನಮ್ಮ ನಿಮ್ಮಂತೆ ಸಂಸಾರದೊಳಗಿದ್ದೂ ಸಂದೇಹಗಳಿಲ್ಲದ ಸಂದೇಶಗಳನ್ನು ಕೊಟ್ಟ ಸಾರ್ವತ್ರಿಕರು, ಸರ್ವಕಾಲಿಕರು, ಸಮಾವಿಷ್ಟದ ಮಹಾ ಸಂಕೇತಗಳಿವರು. ನಾನು ಬೇಲೂರು ಬಿಟ್ಟಾಗ 28/12/2012, ಇದೊಂದು ರೀತಿಯ ಕೊನೆಯ ಪಯಣ. ರಾಬರ್ಟ್ ಬ್ರಿಜಿಸ್ಸ್‍ನ ದ ಲಾಷ್ಟ ರೈಡ್ ಟುಗೆದರದಂತೆ. ಮುಪ್ಪಾದ ನಮ್ಮ ಮಾರುತಿ ಝನ್ನಿನ ಮನಸ್ಸೂ ನನ್ನಂತೆಯೇ. ಈ ಕಾರು, ಪ್ರೀತಿಯ ಗೆಳತಿ, ಅವಳ ಸಾವಿರಾರು ಸಂದೇಹ, ಸಮಾಧಾನಗಳು ಜೊತೆಗೆ ಮಾತೆಂದರೆ ಮುನಿಸಿಕೊಳ್ಳುವ ಮಗ. ಹೀಗೆ 28 ರ ಮುಂಜಾವು ಹೊರಟ ನಾವು ಹೋಗಿ ತಲುಪಿದ್ದು ಬೆಳಗಾವಿಯನ್ನು. ದಲಿತ ಸಾಹಿತ್ಯ ಸಮ್ಮೆಳನದಲ್ಲಿ ಅವಳ ಪ್ರಶಸ್ತಿ ಸಮಾರಂಭವನ್ನು ಮುಗಿಸಿಕೊಂಡು ನಾನು ಹೊರಡಬೇಕಾದುದ್ದೇ ಈ ಸೂಫಿಗಳ ಕಡೆಗೆ. ನಾದ ಲೋಕದ ಎಡೆಗೆ. ಎಪ್ಪತ್ತರಾಚೆ ಇರುವ ಅಪ್ಪ, ಅರವತ್ತರ ಗಡಿಯಲ್ಲಿರುವ ಅವ್ವ ಅದೆಷ್ಟು ಖುಷಿ ಪಟ್ಟರೊ. ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಹೆತ್ತವರನ್ನು ತೀರ್ಥ ಯಾತ್ರೆಗೆ ಕರೆದುಕೊಂಡು ಹೊರಟ ನನ್ನಂಥ ಆಧುನಿಕ ಶ್ರವಣಕುಮಾರರಿಗೆ ಅದೇನು ಹರಕೆ ಇಟ್ಟರೊ. ಧಾರವಾಡದಿಂದ ಶಿರಹಟ್ಟಿಯ ಫಕೀರೆಶ್ವರನ ಕಡೆಗೆ ಹೊರಟಾಗ ದಿನಾಂಕ 31/12/2012, ವರ್ಷದ ಕೊನೆಯ ದಿನ ನಾ ಹಿಡಿಯಲು ಹೊರಟ ನನ್ನ ಗುರು ನನ್ನಂತೆ ಅಲೆಮಾರಿಯಾಗಿದ್ದ. ಶಿರಹಟ್ಟಿಗೆ ಹೋದ ನಮ್ಮನ್ನ ಲಕ್ಷ್ಮೇಶ್ವರಕ್ಕೆ ಕರೆದೊಯ್ದ, ಸಾರ್ವಜನಿಕ ಸಭೆಯೊಂದರ ವೇದಿಕೆಯಿಂದ ಕೆಳಗಿಳಿದು ಬರುತ್ತಲೇ ಸಂಶಿಗೆ ಹೋಗೋಣ ನಡೆ ಎಂದರು. ನಮ್ಮದು ಗುಡಿಗೇರಿ ದ್ಯಾಮವ್ವನ ಬೆನ್ನು ಹತ್ತಿದ ಶರೀಫ ಮತ್ತು ಗುರು ಗೋವಿಂದ ಭಟ್ಟರ ಸ್ಥಿತಿಯಾಗಿತ್ತು. ಸಂಶಿಯ ಮಠದಲ್ಲಿ ಅಷ್ಟಿಷ್ಟು ಆಧ್ಯಾತ್ಮ, ಭಾವೈಕ್ಯದ ಕನಸು ಕಾಣುತ್ತಿರುವಾಗ ಹೊಸ ವರ್ಷ ಕಣ್ತೆರೆಯಿತು. ಈ ಖುಷಿಗೆ ಜೊತೆಗಿದ್ದ ಸದ್ಗುರುವಿನ ಪಾದ ಮುಟ್ಟಿ, ತಂದೆ-ತಾಯಿಗಳ ಆಶಿರ್ವಾದ ಪಡೆಯುತ್ತಿರುವಾಗ ಮನಸ್ಸು ಕುವೆಂಪುವಿನ ಕಲ್ಕಿ ಪದ್ಯವನ್ನು ಹೇಳುತ್ತಿತ್ತು
ಕನಸೊಡೆದೆದ್ದೆ
ಇನ್ನೆಲ್ಲಿಯ ನಿದ್ದೆ
ಬೆಳಗಾದರೆ ಶರೀಫನ ಹುಲಗುರು ಸಂತೆಗೆ ಹೋಗುವ ಆಸೆ, ಇರುವ ಇರದಿರುವ ದಾರಿಗಳನ್ನೆಲ್ಲ ಸುತ್ತಿ ಹುಲಗುರು ಬಸ್ಟ್ಯಾಂಡಿನ ಮುಂದೆ ಕುಳಿತು ಚಹಾ ಹೀರುವಾಗ ಕಂಡ ಕಂಡ ಮುದುಕಿಯರ ಕಣ್ಣಲ್ಲೂ ಶರೀಫನ ಕವನ. ಸಂತೆಯ ಸಂದಿ ಸಂದಿಯಲ್ಲಿ ಸಿಕ್ಕವರಿಗೂ ನಿನಗ ಲೋಕದ ಚಿಂತಿ ಯಾಕ ಎಂದು ಕೇಳಿದ್ದ ಶರೀಫ, ತಾಳಿದ ಕೋಟಿ ಕೋಟಿ ಅವತಾರಗಳನ್ನು ಹುಲಗುರಿನಲ್ಲಿ ನೋಡುವ ತವಕ. ಮುಂದೆ ಹೊರಟು ಶಿಶುನಾಳ ತಲುಪಿದಾಗ ಎಷ್ಟೊಂದು ಬಿಸಿಲು, ಊರ ಹೊರಗಿನ ಮೂರು ಎಕರೆಯ ತನ್ನ ಹೊಲದಲ್ಲಿಯೇ ತಣ್ಣಗಿದ್ದಾನೆ ಶರೀಫ. ಆತನ ಸಮಾಧಿಯ ತಲೆಗೆ ಶಿಶುನಾಳಧಿಶ ಬಸವಣ್ಣ, ಮೇಲೆ ಬೇವು, ಮಲ್ಲಿಗೆ ಮರಗಳು, ಈ ಶರೀಫನನ್ನೊಬ್ಬ ಪವಾಡ ಪುರುಷನೆಂದು ಕೈ ಮುಗಿಯುವವರಿಗೆ ನವಿಲು ಗರಿ ಮುಟ್ಟಿಸಲು ಅಲ್ಲೊಬ್ಬ ದರವೇಸಿ, ಬಿಟ್ಟರೆ ಇಲ್ಲಿ ಮತ್ತೇನೂ ಇಲ್ಲ. ಇಲ್ಲಿ ಯಾವ ಅಚ್ಚರಿಗಳು ನಡೆಯುವುದೇ ಇಲ್ಲ ಎನ್ನುವುದೇ ಅಚ್ಚರಿ. ಕುಲದ ನೆಲೆಗಾಗಿ ನೊಂದುಕೊಳ್ಳದ ನಮ್ಮ ಸೂಫಿಗಳೇ ಅಚ್ಚರಿ. ಮನೆ ಕಟ್ಟಲಿಲ್ಲ, ಮಡದಿ ಮಕ್ಕಳನ್ನು ಮೋಹಿಸಿ ಸಂಸಾರದೊಳಗಿದ್ದೂ ಸುಳ್ಳಿಗೆ ಸೆಣಸಾಡಲಿಲ್ಲ.
ನನಗೆ ಹೊಸ ವರ್ಷದ ಹೊಸ್ತಿಲಲ್ಲಿ ಶಿಶುನಾಳಕ್ಕೆ ಹೋಗಿ ಬಂದದ್ದು ಹಿತವೆನಿಸಿದೆ.
ಇನ್ನೂ ಎರಡು ವಾರ ಉರುಳಿರಲಿಲ್ಲ, ಮಾನಸಿಕವಾಗಿ ನರಳಾಡುತ್ತಿದ್ದ ನನಗೆ ಈ ಸಾರಿ ಮತ್ತೆ ಹೈದರಾಬಾದ ಕರ್ನಾಟಕಕ್ಕೆ ಕರೆಯಿಸಿಕೊಂಡದ್ದು ಬಸವಣ್ಣ. ಈಗ ನಾನು ಹೋಗಬೇಕಾದದ್ದು ಚಿತ್ರದುರ್ಗದ ಮುರುಘಶರಣರು ಹಮ್ಮಿಕೊಂಡ ಎರಡು ದಿನಗಳ ಶರಣಮೇಳಕ್ಕೆ. ನನ್ನ ವಾಸಸ್ಥಳ ಬೇಲೂರಿನಿಂದ ನಾನು ಹೊರಟು ನಿಂತ ಮಾನ್ವಿ ಸುಮಾರು 450 ಕಿ.ಮಿ ದಾರಿ. 18 ರ ಮಧ್ಯಾಹ್ನ 12 ಗಂಟೆಗೆ ಹೊರಟ ನನಗೆ, ಸ್ವಾಸ್ಥ್ಯವಿಲ್ಲದ ಮನಸ್ಸಿಗೆ ಇನ್ನೂ ಡ್ರೈವಿಂಗ ಸಾಧ್ಯವಿಲ್ಲ ಎನಿಸಿ ಸಿರಗುಪ್ಪಿಯ ಯಾವುದೋ ಲಾಡ್ಜನಲ್ಲಿ ನಿದ್ದೆ ಇಲ್ಲದ ರಾತ್ರಿ ಉರುಳಿಸಿದೆ. ಬೆಳಗಾದರೆ ಮಸ್ಕಿಯ ಅಶೋಕನ ಶಾಸನ ಸೆಳೆಯುತ್ತಿತ್ತು. ಈ ಶಾಸನದಲ್ಲೊಂದು ಹೇಳಿಕೆ ಇದೆ. ಉಚ್ಚರಿಗೆ, ಕುಲೀನರಿಗೆ ಇರುವ ದೇವರು ನೀಚರಿಗೂ ಬಡವರಿಗೂ ಇದ್ದಾನೆ ಎಂಬ ಭರವಸೆ ಇದೆ. ಇಲ್ಲಿಂದ ಹೊರಟು ಮಾನ್ವಿಯನ್ನು ತಲುಪಿದಾಗ ಸಾಯಂಕಾಲದ 6 ಗಂಟೆ, ಆನಂತರದ್ದೆಲ್ಲವೂ ಅನುಭವ ಮಂಟಪ. ಆ ಪ್ರಮಾಣದಲ್ಲಿ, ಸುಮಾರು 1500 ಜನ ಸಂಖ್ಯೆಯ ಮಧ್ಯದಲ್ಲಿ, ಅಪಾರ ಸಂಖ್ಯೆಯ ಹಿಂದೂ ಮುಸ್ಲಿಂರ ಸಾಮರಸ್ಯದಲ್ಲಿ ಬಸವ ಚಿಂತನೆಯನ್ನು ನೋಡಿದ್ದು ನನ್ನ ಜೀವನದ ಅತ್ಯಂತ ರೋಮಾಂಚನಕಾರಿ ಅನುಭವ. ಆದರೆ ಈ ನನ್ನ ಅನುಭವ ಸಂಪೂರ್ಣವಾಗಲಿಲ್ಲ ಕಾರಣ ನನ್ನೊಂದಿಗೆ ನನ್ನ ಇಷ್ಟದ ಎಲ್ಲ ಜೀವಗಳೂ ಇರಲಿಲ್ಲ.
ಬದುಕಿನ ದುರ್ವಿದಿ ಎಂದರೆ ಇದೇ ಅಲ್ಲವೆ?
ಹಾದಿ ಹಾದಿಗೂ ಬಿದ್ದಿರುವ, ಹಬ್ಬಿರುವ ಪ್ರೇಮದ, ಸಹನೆಯ, ಸಾಂತ್ವನದ ಹಾಗೂ ಭರವಸೆಯ ಹುಲ್ಲು ಸದಾ ಅಗ್ನಿಕುಂಡವಾದವರಿಗೆ ಕಾಣುವುದೇ ಇಲ್ಲ.
ನಾನು ನಂಬುವದಿಷ್ಟೆ ‘ಒಲವೆ ನಮ್ಮಯ ತಂದೆ ಎಲ್ಲ ಎಲ್ಲವೂ ಇಹುದು ಒಂದು ಪ್ರೀತಿಯ ಹಿಂದೆ’