Total Pageviews

Saturday, July 20, 2013

ಅರಮನೆಗೂ-ಗುರುಮನೆಗೂ….

(ದಿ: 14/7/13, ಶಿವಪುರ, `ಮಹಾಮನೆ’ಯಲ್ಲಿ, ಶಿವಾನುಭವ ಗೋಷ್ಠಿ ಉದ್ಘಾಟಿಸುತ್ತಾ ರಾಗಂ)
       
         ಇದು ‘ಮಹಾಮನೆ’. ಸಾಮಾನ್ಯವಾಗಿ ಹೇಳುವಂತೆ ಮಠ, ಶ್ರೀಮಠ, ಪೀಠ, ಮಹಾಸಂಸ್ಥಾನ ಪೀಠ ಎಂದೇನಾದರೂ ಇದು ಒಂದಾಗಿದ್ದರೆ ಕೆಲವೊಮ್ಮೆ ಹೋಗಲೇಬೇಕಾದ ಅನಿವಾರ್ಯತೆಯೇನೂ ಇರುವುದಿಲ್ಲ. ಆದರೆ ಇದು ಮನೆ, ಶಿವಪುರದ ಮಹಾಮನೆ, ನಮ್ಮ ಮನೆಗಳಿಗಿಂತ ಸ್ವಲ್ಪ ದೊಡ್ಡ ಮನೆ ಎನ್ನುವ ಭರವಸೆ ಸಿಕ್ಕಿದುದರಿಂದ ದಿನಾಂಕ 14-07-2013 ರಂದು ಇಲ್ಲಿಯ 15 ನೇಯ ಶಿವಾನುಭವ ಗೋಷ್ಠಿಯ ಉದ್ಘಾಟನೆಗೆ ನಾನು ಹೋಗಿದ್ದೆ. ಹಿಂದಿನ ತಿಂಗಳು 23 ನೇ ತಾರೀಖಿನಂದು ನಡೆದ ಸಮಾರಂಭದಲ್ಲಿಯೇ ನಾನು ಮುಖ್ಯ ಭಾಷಣಕಾರನಾಗಿ ಪಾಲ್ಗೊಂಡು ಈ ಮಹಾಮನೆಯನ್ನು ಉದ್ಘಾಟಿಸಬೇಕಿತ್ತು. ಆದರೆ ಅಂದು ನನ್ನೊಂದಿಗೆ ಪಾಲ್ಗೊಳ್ಳಲಿರುವ ವೇದಿಕೆಯ ಮೇಲಿನ ಗಣ್ಯರ ಪಟ್ಟಿಯನ್ನು ನೋಡಿ ಬೆಚ್ಚುಬಿದ್ದ ನಾನು ನಮ್ಮ ಮನೆಗೆ ನಾನು ಯಾವಾಗಲಾದರೂ ಹೋದರಾದೀತು, ಸಧ್ಯ ಈ ಪರಸೆಯಲ್ಲಿ ಪರಮಾತ್ಮನ ಧ್ಯಾನವಂತೂ ಬೇಡ ಎಂದು ದೂರ ಉಳಿದುಕೊಂಡೆ. ಆದರೆ ಈ `ಮಹಾಮನೆ’ಯ ಮುಖ್ಯಸ್ಥ  ಶ್ರೀ  ಬಸವಾನಂದ ಸ್ವಾಮೀಜಿ ಇಷ್ಟು ಬೇಗ ಮತ್ತೆ ಕರೆಯಿಸಿಕೊಳ್ಳುತ್ತಾರೆಂಬ ಲೆಕ್ಕಾಚಾರವಿರಲಿಲ್ಲ.


       ದಿನಾಂಕ 14 ರಂದು ಮಹಾಮನೆಯ ಉಪನ್ಯಾಸದಲ್ಲಿ ಪ್ರಮುಖವಾಗಿ ನಾನು ಎತ್ತಿಕೊಂಡ ಪ್ರಶ್ನೆ ಪ್ರಪಂಚಕ್ಕೆ ಆಧ್ಯಾತ್ಮಿಕ ಗುರು ಎನಿಸಿಕೊಂಡ ಭಾರತಕ್ಕೆ ಇಂಥ ಭಾವದಾರಿದ್ರ್ಯವೇಕೆ? ಭಕ್ತಿಪಥ, ಶರಣ ಸಂಸ್ಕೃತಿ, ಸೂಫಿ, ದಾಸ, ತತ್ವಪದಕಾರರ ಮಧ್ಯ ಸಾವಿರಾರು ವರ್ಷದ ದಾರಿ ಸವೆಸಿದ ಭಾರತ ಎನ್ನುವ ಸಂಸ್ಕೃತಿಗೆ ಇಂದು ದಿಕ್ಕು ತಪ್ಪಿದ ಅನುಭವವೇಕೆ? ನಮ್ಮ ರಾಜಕಾರಣ ನಮಗೆ ಒಡ್ಡಿದ ಸವಾಲುಗಳೇನು? ಹೀಗೆ ಇನ್ನೊಂದು, ಮತ್ತೊಂದು. ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಕರ್ನಾಟಕದ ಹನ್ನೆರಡು ಜನ ಮಠಾಧೀಶರು ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಇದು ಅರಮನೆಗೂ-ಗುರುಮನೆಗೂ ಇರುವ ಸಂಬಂಧದ ಬಹಿರಂಗ ಘೋಷಣೆ ಎನ್ನೋಣವೆ? ಆರು ದಶಕಗಳಿಂದ ರಾಜಕಾರಣಿಗಳು ಎಂಬ ತಮ್ಮ ಶಿಷ್ಯರ ಎಡಬಿಡಂಗಿತನವನ್ನು ನೋಡಿ ಬೇಸತ್ತ ಧಾರ್ಮಿಕ ಗುರುಗಳ ಪ್ರತಿಭಟನೆ ಎನ್ನೋಣವೆ? ಇಲ್ಲಾ, ದೇಶದ ಸಾವಿರಾರು ಶ್ರೀಮಂತರಂತೆ ಅಪಾರ ಆಸ್ತಿಯನ್ನು, ಐಷಾರಾಮಿ ಜೀವನವನ್ನು ನೆಚ್ಚಿಕೊಂಡ ಸನ್ಯಾಸಿ ವರ್ಗ ತನ್ನನ್ನೇ ತಾನು ರಕ್ಷಿಸಿಕೊಳ್ಳಲು ಹಾಕಿದ ಹೊಸ ಯೋಜನೆ ಎನ್ನೋಣವೆ? ಇದು ಇನ್ನೂ ಭವಿಷ್ಯದಲ್ಲಿ ಇತ್ಯರ್ಥವಾಗಬೇಕಾದ ಸಂಗತಿ.
      ಧಾರವಾಡ ಹತ್ತಿರದ ಮನಗುಂಡಿ ಮತ್ತು ಹಾಸನ ಹತ್ತಿರದ ಶಿವಪುರದಲ್ಲಿ, ನಿಸರ್ಗ ರಮಣೀಯ ಸ್ಥಳಗಳಲ್ಲಿ `ಮಹಾಮನೆ’ಗಳನ್ನು ಕಟ್ಟಿಕೊಂಡು ಸಕ್ರೀಯ ರಾಜಕಾರಣ ಮತ್ತು ಸಮಾಜದ ಆರೋಗ್ಯ ಸುಧಾರಣೆಗಳತ್ತ ಗಮನ ಹರಿಸಿರುವ ಶ್ರೀ ಬಸವಾನಂದ ಸ್ವಾಮಿಗಳು ನನ್ನ ಸಾಹಿತ್ಯ ಸ್ನೇಹಿತರು. ಇದು ಪುಸ್ತಕ ಮುಖೇನ ಅರಳಿಕೊಂಡ ಸಂಬಂಧ. 

      ಅವರಿಗೆ ನನ್ನ ಓಶೋ, ಗಾಂಧಿ, ಅಬ್ಬಾಸ್ ಕಾಡಿದ್ದಾರೆ. ನನಗೆ ಅವರ ಸಮಾಜದ ಆರೋಗ್ಯ ಕುರಿತ ಕಾಳಜಿ ಮತ್ತು ಚಟುವಟಿಕೆಗಳು ಬಹಳಷ್ಟು ಪ್ರೀತಿಯವೆನ್ನಿಸಿವೆ. ಈ ಲೋಕಸಭೆಯ ಚುನಾವಣೆಯಲ್ಲಿ ತಾವು ಬಿಜೆಪಿ ಪರ ಅಖಾಡಕ್ಕೆ ಇಳಿಯುವುದಾಗಿ ಘೋಷಿಸಿಕೊಂಡ ಸ್ವಾಮೀಜಿ ಕಂಡುಕೊಂಡಿರುವ ಸಮಾಧಾನ ನರೇಂದ್ರ ಮೋದಿ. ಈ ನರೇಂದ್ರ ಮೋದಿ ಎಂದರೆ ಅವರಿಗೆ ಎಲ್ಲಿಲ್ಲದ ಮೋಹ. ಆದರೆ ನನ್ನ ವಾದವಿಷ್ಟೇ, ಇಂದು ವ್ಯಕ್ತಿ ಮತ್ತು ಪಕ್ಷಗಳು ನೆಪ ಮಾತ್ರ. ಯಾಕೆಂದರೆ, “ಪಕ್ಷಗಳು ಈ ದೇಶದ ಪ್ರಶ್ನೆಯಲ್ಲ. ಅವು ಪ್ರಜಾಸತ್ತಾತ್ಮಕತೆಯ ಜೀವಂತಿಕೆಯ ಲಕ್ಷಣಗಳು. ಪಕ್ಷಕ್ಕೂ, ಪಥಕ್ಕೂ ಸಮನ್ವಯವಿರಬೇಕಷ್ಟೇ. `ಕಾಂಗ್ರೆಸ್’ ಗಾಂಧಿಯ ಅರ್ಥದಲ್ಲಿ ಕಾಂಗ್ರೆಸ್ ಆಗುವುದಾದರೆ, `ಜನತಾ ಪರಿವಾರ’ ಜಯಪ್ರಕಾಶ ನಾರಾಯಣರ ಚಿಂತನೆಯ ಪ್ರತಿಬಿಂಬವಾಗುವುದಾದರೆ, `ಬಿಜೆಪಿ’ ಪಾಕಿಸ್ತಾನಕ್ಕೆ ಹೋಗಿ ಕಾವ್ಯದ ಮೂಲಕ ಮಾನವ ಸಂಬಂಧಗಳನ್ನು ಬೆಸೆಯುವ ವಾಜಪೇಯಿ ಅರ್ಥದ ಪಕ್ಷವಾಗುವುದಾದರೆ, ಪಕ್ಷಗಳು ದೇಶಕ್ಕೆ ಹೊರೆಯಲ್ಲ. ಇವುಗಳ ಅನುಸರಣೆ ಅಪರಾಧವೂ ಅಲ್ಲ. ಇವುಗಳೊಂದಿಗೆ ಘರ್ಷಣೆಯ ನಮ್ಮ ಮಾತೂ ಇಲ್ಲ.”

Thursday, June 6, 2013

ಗೊಡ್ಸೆ ಕೊಂದಿದ್ದು ಯಾರನ್ನು?

 
      ಇತ್ತಿಚಿಗೆ ನಾನು ಓದಿದ ಡಾ.ರಾಜಶೇಖರ ಮಠಪತಿಯವರ(ರಾಗಂ) ಅವರ `ಗಾಂಧಿ: ಅಂತಿಮ ದಿನಗಳು’, ಹಾಗೂ ` ಗಾಂಧಿ: ಮುಗಿಯದ ಅಧ್ಯಾಯ’ ಇವು ವಿಭಿನ್ನ ದೃಷ್ಟಿಕೋನದ ವಿಶಿಷ್ಟ ಕೃತಿಗಳಾಗಿವೆ. ಗಾಂಧಿಯ ಸುತ್ತ ಹುತ್ತಗಟ್ಟಿರುವ ಮಿಥ್‍ಗಳನ್ನು ಒಡೆದು ಮಾನವೀಯ ತುಡಿತ ಮಿಡಿತಗಳಿಂದ ಸರಿಪಡಿಸಿ ಮಿಡಿವ ಹಾಗೆ ಮಿಡಿಯುತ್ತಲೇ ಓದುಗರ ಉಸಿರಿನೊಂದಿಗೆ ಒಂದಾಗಿಬಿಡುವ ಗಾಂಧಿಯೊಳಗಿನ ಅಸಹಾಯಕ ಗಾಂಧಿಯನ್ನು ಭೇಟಿಯಾಗುತ್ತೇವೆ. ಮಠಪತಿಯವರ ಅತ್ಯಪೂರ್ವ ವಾಸ್ತವ ಓಳನೋಟಗಳಿಂದ ಕೂಡಿದ ಈ ಎರಡು ಕೃತಿಗಳು ನಿಸ್ಸಂದೇಹವಾಗಿ ಅಪರೂಪದ ಕೃತಿಗಳಾಗಿವೆ. 
            ಈ ಕೃತಿಗಳನ್ನು ಓದಿದಂತೆ ದೂರದ ಗಾಂಧಿ ನಮಗೆ ಹತ್ತಿರವಾಗುತ್ತಾರೆ. ಹಾಗೆ ಹತ್ತಿರವಾಗುತ್ತಲೇ ಜನರ ನಾಡಿ-ಮಿಡಿತಗಳೊಂದಿಗೆ ಆಪ್ತವಾಗಿ ಮಿಡಿಯುತ್ತಾ ಒಳಚಿಂತನೆಗೆ ಪ್ರೇರೆಪಿಸುತ್ತಾರೆ. ಏಕೆಂದರೆ ಎರಡೂ ಕೃತಿಗಳು ಗಾಂಧಿಯ ಅಂತಿಮ ದಿನಗಳ ಅಸಹಾಯಕ ಸಂಕೀರ್ಣ ಓಳನೋಟಗಳ ಜೇನುಗೂಡಾಗಿವೆ. ರಾಗಂ ತಮ್ಮ ಸರಾಗವಾದ ಸರಳ ಶೈಲಿಯಲ್ಲಿ ಗಾಂಧಿ ಅಂತಿಮ ದಿನಗಳಲ್ಲಿ ಎದುರಾದ ಸಂದಿಗ್ದಗಳನ್ನು ಹಿಡಿದುಕೊಟ್ಟು ಓದುಗರ ಕುತೂಹಲವನ್ನು ಕೆರಳಿಸುತ್ತಾರೆ. ಅವರ ಈ ಚುಂಬಕ ಶಕ್ತಿಯ ಅಭಿವ್ಯಕ್ತಿಯಿಂದಾಗಿ ಗಾಂಧಿಯ ಅಸಹಾಯಕತೆಯ ಕುರಿತು ಓದುಗನನ್ನು ಮತ್ತೆ ಮತ್ತೆ ಚಿಂತನೆಗಿಡು ಮಾಡುತ್ತದೆ. ಅಭಿವ್ಯಕ್ತಿಯ ಶೈಲಿ ಅವ್ರ ಕೈಲಿ ಹೊಸ ಮೈಲಿಗಲ್ಲನ್ನು ತೆರೆದಿದೆ. ಬರವಣಿಗೆಯ ಓಘವಂತೂ ಅಮೋಘ.
         ನಿಸರ್ಗ ನಿಗೂಢಶಕ್ತಿಗಳ ಅಗಣಿತ ಗಣಿ. ಹೆಕ್ಕಿದಷ್ಟೂ ಉಕ್ಕುವ ಅದರ ಉತ್ಸಾಹಕ್ಕೆ ಕೊನೆ ಇಲ್ಲ. ಅದು ತನ್ನನ್ನು ತಾನು ಪ್ರಕಟಿಸಿಕೊಳ್ಳಲು ಹವಣಿಸುತ್ತದೆ. ದಾರ್ಶನಿಕರನ್ನು, ಮಹಾನ್ ಸಾಹಿತಿಗಳನ್ನು, ವಿಜ್ಞಾನಿಗಳನ್ನು, ಸಾಹಸಿಗರನ್ನು, ಅದ್ಭುತ ಸಂಗೀತಜ್ಞರನ್ನು, ಕಲಾವಿದರನ್ನು, ಶಿಲ್ಪಿಗಳನ್ನು ಆಯ್ಕೆಮಾಡಿಕೊಂಡು ತನ್ಮೂಲಕ ಹೊರಹೊಮ್ಮುತ್ತದೆ. ಅಂತಹ ಆಯ್ಕೆಗಳಲ್ಲಿ ಗಾಂಧಿಯೂ ಒಬ್ಬರು.
ನಿಜ, ಅದು ಗಾಂಧಿಯನ್ನು ಆಯ್ಕೆ ಮಾಡಿಕೊಂಡು ಜಗತ್ತಿಗೆ ಕರುಣಿಸಿದ ಕಾಣ್ಕೆ ಯಾವುದು? ಆ ಕಾಣ್ಕೆಗಳು ಹಲವಾದರೂ ಪ್ರಧಾನವಾಗಿ ಕಣ್ಮುಂದೆ ಕಡೆದು ನಿಲ್ಲುವುದು ಅಹಿಂಸೆ ಹಾಗೂ ಅಚ್ಚಳಿಯದ ಮಾನವ ಪ್ರೀತಿ.
ಗಾಂಧಿ ಅಹಿಂಸೆಯ ಪ್ರತಿರೂಪವಾಗಿದ್ದರೂ ಅವರು ತಮ್ಮೊಳಗೆ ಅನುಭವಿಸಿದ ಹಿಂಸೆಯ ಸ್ವರೂಪ ಅತ್ಯಂತ ಸೂಕ್ಷ್ಮವಾದುದು, ಸಂಕೀರ್ಣವಾದುದು. ಅಳತೆಗೆಟುಕದ ಅದರದು ಸಾಗರದ ಆಳ. ಆಕಾಶದ ಅಗಲ. ಇದು ಎಲ್ಲ ಸೂಕ್ಷ್ಮ ಜೀವಿಗಳೂ ಅನುಭವಿಸಲೇಬೇಕದ ಅನಿವಾರ್ಯತೆ ಎಂಬ ಸತ್ಯವನ್ನು ಸಾರುತ್ತದೆ. ನಾವು ಯಾವ ಗಾಂಧಿಯನ್ನು ನೋಡಬೇಕು? ಅರೆಬೆತ್ತಲಾಗಿ ಪ್ರಪಂಚದ ಉದ್ದಗಲ ಓಡಾಡಿದ ಆತನ ಬೆತ್ತಲೆ ಎದೆಯನ್ನೇ? ಅಥವಾ ಮಾನವ ಪ್ರೀತಿಯನ್ನೇ ಎದೆಯ ತುಂಬಾ ತುಂಬಿಕೊಂಡು ಅಹಿಂಸೆಯ ಆಗರವಾಗಿದ್ದ ಒಳ ಎದೆಯ ಗಾಂಧಿಯನ್ನೇ? ಎರಡನ್ನೂ ನೋಡಬೇಕು. ನೋಡಿ, ಅವು ಕರುಣಿಸಿದ ಕಾಣ್ಕೆಯನ್ನು ಕಂಡು ಅಪ್ಪಬೇಕು. ಬೆತ್ತಲಾಗಿದ್ದ ಆತನ ಹೊರ ಎದೆ ಕರುಣಿಸಿದ್ದು  ಸರಳತೆಯನ್ನಾದರೆ ಆತನ ಒಳ ಎದೆ ಕರುಣಿಸಿದ್ದು ಸಾರ್ವಕಾಲಿಕ ಸತ್ಯವನ್ನು. ಗಾಂಧಿಯ ಹೆಗ್ಗಳಿಕೆ ಎಂದರೆ ಆತ ಕ್ರೌರ್ಯವನ್ನು ಕರುಣೆಯನ್ನಾಗಿ ಪರಿವರ್ತಿಸಬಲ್ಲ, ಅತ್ಯಂತ ಕಠಿಣ ಎನ್ನುವ ಉಕ್ಕನ್ನೂ ಹೂವಾಗಿಸಬಲ್ಲ, ಅದುವರೆಗೂ ಜಗತ್ತು ಕಂಡರಿಯದ ವಿನೂತನ ಚುಂಬಕ ಶಕ್ತಿ. ಮನುಕುಲ ಬದುಕಿ ಉಳಿಯಬೇಕಾದರೆ ಗಾಂಧಿಯ ಈ ಕಾಣ್ಕೆಗಳನ್ನು ಅರಗಿಸಿಕೊಳ್ಳಬೇಕಾದುದು ಅನಿವಾರ್ಯ.
       ಜಗತ್ತಿಗೆ ಬಂದ ದಾರ್ಶನಿಕರು ಎರಡು ದುರಂತಗಳಿಗೆ ಒಳಗಾಗಿಬಿಡುತ್ತಾರೆ. ಒಂದೋ ಆರಾಧನೆಗೆ ಇಲ್ಲಾ ಅವಜ್ಞೆಗೆ. ಇದು  ಮಾನವ ಇತಿಹಾಸದ ಕಟು ವ್ಯಂಗ್ಯ. ಭಾರತೀಯ ಮನಸ್ಸೆಂಬುದಂತೂ ಅರಿತು ಆಚರಿಸುವ ಗುಣದ್ದಲ್ಲ, ಬದಲಿಗೆ ಪೂಜಿಸುವುದು ಇಲ್ಲ ತ್ಯಜಿಸಿಬಿಡುವುದು ಅದರ ಹುಟ್ಟುಗುಣ. ದಿನಕಳೆಂದಂತೆ ಗಾಂಧಿ ಈ ಎರಡೂ ದುರಂತಗಳಿಗೆ ಬಲಿಯಾಗುತ್ತಿದ್ದಾರೆ.
       ಬಂದೂಕಿನ ಬಲ ಹೊಂದಿದ್ದ ಬ್ರಿಟಿಷರನ್ನು ಒಲಿಸಿಕೊಂಡ ಗಾಂಧಿಯ ಶಕ್ತಿಗೆ ಭಾರತದ ಹಿಂದೂ-ಮುಸ್ಲಿಂ ನಡುವಿನ ಬಿರುಕನ್ನು ಬೆಸೆಯಲಾಗಲಿಲ್ಲ. ಕಾರಣ ಬ್ರಿಟಿಷರ ನಡೆ ಅರಿವಿನದ್ದಾದರೆ ಭಾರತೀಯರ ನಡೆ ಅಮಲಿನದು. ಧರ್ಮದ ಅರಿವಿನಿಂದ ದೂರವಾದ ಹಿಂದೂ-ಮುಸ್ಲಿಂ ಮನಸ್ಸುಗಳು ಮತೀಯ ಅಮಲನ್ನು ಅಪ್ಪಿ ಹಿಡಿದಿದ್ದವು. ಅಪ್ಪಿ-ತಪ್ಪಿಯೂ ಆ ಅಮಲಿನ ಅಪ್ಪುಗೆಯಿಂದ ಹೊರಳಲಿಲ್ಲ. ಗಾಂಧಿ ತನ್ನ ಅಂತಿಮ ದಿನಗಳಲ್ಲಿ ಅಡಿಯಿಂದ ಮುಡಿವರೆಗೆ ಅನುಭವಿಸಿದ್ದು ಈ ಮತೀಯ ಸಂಘರ್ಷದ ಕಹಿ ಒಂದಾದರೆ ಮತ್ತೊಂದು ಚರಕವನ್ನು ಬೆಂಬಲಿಸುತ್ತಲೇ `ಬೃಹತ್ ಗಿರಣಿಗಳನ್ನು ತಮ್ಮ ಅಂತರಂಗದಲ್ಲಿ ಅಪ್ಪಿ ಹಿಡಿದಿದ್ದ ಸ್ವಾರ್ಥ ಹಿಂಬಾಲಕರನ್ನು . ಅಧಿಕಾರವನ್ನೇ ಆತ್ಮವಾಗಿಸಿಕೊಂಡಿದ್ದ ಈ ಹಿಂಬಾಲಕರು ಭಾರತೀಯ ಹೃದಯವನ್ನು ಛಿದ್ರಗೊಳಿಸುವಲ್ಲಿ ಹಿಂದೆ-ಮುಂದೆ ನೋಡಲಿಲ್ಲ.
    ಗಾಂಧಿಯದು ಎಲ್ಲವೂ ಸರಿ ಎಂದಲ್ಲ. ಆದರೆ ವಿಶ್ವವ್ಯಾಪಕವಾದ ಅವರ ಮಾನವೀಯ ಹೃದಯದ ಪ್ರೀತಿಯನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತೆಯೂ ಇಲ್ಲ. ವಿಶ್ವ ಭಾತೃತ್ವವನ್ನು ಬಿತ್ತಲೆತ್ನಿಸಿದ ಅವರ ಅಹಿಂಸಾತತ್ವ ಹಿಂಸೆಯಿಂದಲೇ ಅಂತ್ಯಗೊಂಡಿದ್ದು ಒಂದು ದುರಂತವೇ ಸರಿ. ಸರ್ವಧರ್ಮಗಳನ್ನು ಸಮಾನವಾಗಿ ಪ್ರೀತಿಸಿ, ನಿರಾಶ್ರೀತರಿಗೆ ಆಶ್ರಯವನ್ನು ನೀಡಿದ ಹಾಗೂ ನೀಡುತ್ತಿರುವ ಸರ್ವಧರ್ಮ ಸಮನ್ವಯದ ಒಂದು ರಾಷ್ಟ್ರ ಭೂಮಿಯ ಮೇಲಿದ್ದರೆ ಅದು ಭಾರತ ಒಂದೇ. ಅದರ ಆ ಹೃದಯ ವೈಶಾಲ್ಯತೆಯನ್ನು ಮತೀಯ ಕತ್ತಲೆ ಮತ್ತೆ ಕಬಳಿಸದಿರಲಿ ಎಂಬ ಎಚ್ಚರವನ್ನು ಈ ಕೃತಿಗಳು ಕರುಣಿಸುತ್ತವೆ.
        ಇತಿಹಾಸವನ್ನು ಅಮೂಲಾಗ್ರ ಅರಿತಿದ್ದ ವಿವೇಕಾನಂದರು,` ಸ್ವಮತಾಭಿಮಾನ, ಅನ್ಯಮತ ದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುಕಾಲದಿಂದಲೂ ಆವರಿಸಿಕೊಂಡಿರುವುದು. ಹಲವು ವೇಳೆ ನರರಕ್ತದಿಂದ ತೋಯಿಸಿರುವುದು. ಸಂಸ್ಕೃತಿಯನ್ನು ನಾಶಮಾಡಿರುವುದು. ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುದು. ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೇ ಇದ್ದರೆ ಮಾನವ ಜನಾಂಗ ಇಂದೆಂದಿಗಿಂತಲೂ ಎಷ್ಟೋ ಮುಂದುವರೆದು ಹೋಗಬೇಕಾಗಿತ್ತು.’ ಎಂದು ವಿಶ್ವವೇದಿಕೆಯಲ್ಲಿ ಮೊಳಗಿಸಿದ ಎಚ್ಚರದ ನುಡಿಗಳು ಮತೀಯ ಅಮಲಿನ ಈ ಹುಚ್ಚರನ್ನು ಎಚ್ಚರಿಸಲಾಗಲಿಲ್ಲ. ಹೀಗಾಗಿ ಗಾಂಧಿ, ಅಹಿಂಸೆಯನ್ನು ಜಗತ್ತಿಗೆ ಸಾರಿದ ಗಾಂಧಿ ಅಂತಿಮವಾಗಿ ಗೋಡ್ಸೆಯ ಗುಂಡಿಗೆ  ತೆತ್ತರು. 

       ಗಾಂಧಿಯ ಸಾವು ಎಂತಹ ಸಾವು? ` ನಾನು ರಾಜಕೀಯ ವೇಷ ಧರಿಸಿದ್ದರೂ ನಿಜವಾಗಿಯೂ ಅಂತರಂಗದಲ್ಲಿ ಧಾರ್ಮಿಕ ವೃತ್ತಿಯವನು’ ಎಂದು ಗಾಂಧಿ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ದಾರ್ಶನಿಕ ಗಾಂಧಿಯೊಳಗೆ ಅಪೂರ್ಣ ರಾಜಕೀಯ ವ್ಯಕ್ತಿತ್ವದ ಗಾಂಧಿ ಸೇರಿಕೊಂಡು ಅತ್ತ ಬುದ್ಧನ ಪರಿಪೂರ್ಣ ದಾರ್ಶನಿಕ ವ್ಯಕ್ತಿತ್ವವಾಗಲಿ ಇಲ್ಲಾ ಮಾವೋತ್ಸೆ ತುಂಗನ ರಾಜಕೀಯ ಮುತ್ಸದ್ಧಿತನವಾಗಲೀ ಇಲ್ಲದೇ ಗಾಂಧಿ ಅಪೂರ್ಣವಾಗಿ ನಿಲ್ಲುತಾರೆ. ಹೀಗಾಗಿ ಗೋಡ್ಸೆ ಕೊಂದದ್ದು ರಾಜಕೀಯ ಗಾಂಧಿಯನ್ನೋ ಇಲ್ಲಾ ದಾರ್ಶನಿಕ ಗಾಂಧಿಯನ್ನೋ? ರಾಜಕೀಯ ಗಾಂಧಿಯ ಕೊಲೆಯಾಗಿದ್ದರೆ ಅದು ದುರಂತ. ದಾರ್ಸನಿಕ ಗಾಂಧಿಯ ಕೊಲೆಯಾಗಿದ್ದರೆ ಅದು ಅಮರ. ಇಬ್ಬರ ಕೊಲೆಯಾಗಿದ್ದರೆ ಅದು ಇತಿಹಾಸದ ವ್ಯಂಗ್ಯ.
ಸಂಕೀರ್ಣ ಮನಸ್ಸಿನ ಈ ಗಾಂಧಿ ಜನಕ್ಕೆ ಅರ್ಥವಾಗಲೇ ಇಲ್ಲ. ಆತ ತನ್ನ ಅಂತಿಮ ದಿನಗಳಲ್ಲಿ ಪಟ್ಟ ಪರಿಪಾಟಲುಗಳನ್ನು ಡಾ.ರಾಜಶೇಖರ ಮಠಪತಿಯವರು ಮನ ಕಲುಕುವಂತೆ, ಹೃದಯ ಅಲುಗುವಂತೆ ತಾಯಿ ಪ್ರೀತಿಯ ಭಾಷೆಯಲ್ಲಿ ಕಡೆದುಕೊಟ್ಟಿದ್ದಾರೆ. ಯಾರೇ ಆಗಿರಲಿ ಅವರು ನೆಲ ಸೇರುವ ಮುನ್ನ ಓದಿದರಾದರೆ ಅವರಿಗೆ ಅದರ ಫಲ, ಇಲ್ಲವಾದರೆ ವಿಫಲ.

ಹಾಸನ                                                                                                 ಜಹೊನಾ
30-50-13                                                                                    ಮೊ-948037033
ಜ.ಹೊ. ನಾರಯನಸ್ವಾಮಿ
†064ಅ,`ಮಾನವ’
ಉತ್ತರ ಬಡಾವಣೆ
ಹಾಸನ


Sunday, May 19, 2013

ಬೋಧಿ ನೆರಳಿನ ದಾರಿಯಲ್ಲಿ….




      ಬೋಧಿ, ಬೋಧಿಸತ್ವ ಮತ್ತು ಬುದ್ಧ ಇವು ಭಾರತದ ಒಟ್ಟು ಇತಿಹಾಸವನ್ನು ಆವರಿಸಿಕೊಂಡಿರುವ ಅಮೋಘ ಪದಗಳು. ಇವು ಒಬ್ಬ ಬುದ್ಧನನ್ನು ಗಿರಕಿ ಹೊಡೆದ ಆಲೋಚನೆಗಳು ಎಂದು ನಾವು ತಿಳಿದುಕೊಳ್ಳುವುದಾದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಬುದ್ಧನಾಗುವ, ಬುದ್ಧರಾಗುವ ನಿರಂತರ ಪ್ರಯತ್ನವೇ ಭಾರತೀಯ ಬದುಕಿನ ಒಟ್ಟು ಸೌಂದರ್ಯ. ವಯಸ್ಸು ಮತ್ತು ವ್ಯಕ್ತಿಗತ ತಾತ್ಕಾಲಿಕ ಅವಶ್ಯಕತೆಗಳಿಗಾಗಿ ಯಾವುದೇ ಮಿತಿಯೊಳಗೆ ನಿಂತು ಮಾತನಾಡಿದರೂ ಯಾವುದೋ ನಿರ್ದಿಷ್ಟ ಧರ್ಮ, ಚಿಂತನೆ, ಪಂಗಡಕ್ಕೆ ಒಳಗಾಗಿದ್ದರೂ ಅಂತಿಮ ಉದ್ದೇಶ ಮಾತ್ರ ಈ `ಭೋಧಿ ನೆರಳಿನ ದಾರಿ’ಯನ್ನು ಅರಸುವುದೇ ಆಗಿದೆ. ಚೆನ್ನಪಟ್ಟಣದ ಪಲ್ಲವ ಪ್ರಕಾಶನ ಹೊರತಂದ, 2012 ನೇ ಸಾಲಿನ `ತೇಜಸ್ವಿ ಕಟ್ಟೀಮನಿ ಪ್ರಶಸ್ತಿ’ಗೆ ಭಾಜನವಾದ ಗೆಳೆಯ ವಿಠ್ಠಲ ದಳವಾಯಿಯವರ ಕಾವ್ಯ ಸಂಕಲನ `ಭೋದಿ ನೆರಳಿನ ದಾರಿ’ ನನ್ನ ಈ ಮೇಲಿನ ವಾದದ ಒಟ್ಟು ತಿರುಳಾಗಿ ಮೂಡಿಬಂದಿದೆ. ಹೃದ್ಯ ಕಾವ್ಯದ ಪ್ರೀತಿಯ ಕವಿಯಾದ ದಳವಾಯಿ ಸಮಕಾಲೀನ ತಲ್ಲಣಗಳಾದ ಭೂ ಸ್ವಾಧೀನ, ಆತ್ಮವಂಚನೆಗೊಳಗಾಗುತ್ತಿರುವ ರೈತ ಸಮುದಾಯ, ಜಾಗತೀಕರಣಗಳನ್ನು ಕುರಿತು ಗಂಭೀರವಾಗಿ ಇಲ್ಲಿ ಕವಿತೆಗಳನ್ನು ಹೆಣೆದಿದ್ದಾರೆ. ದಲಿತ ಕಾವ್ಯದ ಸಿಟ್ಟು, ಒತ್ತಡ, ಹತಾಶೆಗಳ ಹಸಿ-ಹಸಿ ಭಾಷೆಗಳಿಂದ ಹೊರಬಂದು ಸಮಷ್ಠಿ ಪ್ರಜ್ಞೆಯ ಗಂಭೀರ ಕವಿಯಾಗಿ ಹೊರ ಹೊಮ್ಮಿದ್ದಾರೆ ಎನ್ನಲು ಅವರ ಎರಡು ಕವಿತೆಗಳ ಈ ಎರಡು ಪದ್ಯಗಳನ್ನು ನೋಡಿ-

ಹಗಲಿರಳು ದುಡಿದರೂ
ಹೊಸತಾಗದ ಬನಿಯನ್ನಿನಲ್ಲಿ
ಮೂಡಿದ ಭಾರತ ನಕಾಶೆ
ನನ್ನಪ್ಪನ ಕಪ್ಪು ಬೆನ್ನನ್ನು ಬೆತ್ತಲಾಗಿಸುತ್ತದೆ  (ಅಪ್ಪ ನೆನಪಾಗುತ್ತಿಲ್ಲ)
**************

ಅವಧೂತರ ಆತುಮಗಳು ಅಡ್ಡಾಡುವ
ಈ ಅವನಿಯಲ್ಲಿ ಕಾಲಿಡಲಾಗದಷ್ಟು
ಅವಮಾನ ಮರಾಮೋಸದ ಮಗ್ಗುಲ ಮುಳ್ಳೆದ್ದು
ರಕ್ತಸಿಕ್ತ ಹೆಜ್ಜೆಜಾಡು ಮೂಡಿದೆ  (ಅವಧೂತರ ನೆಲದಲ್ಲಿ)
***************

         ದಳವಾಯಿಯವರ ಮೊದಲ ಪದ್ಯ ರೈತನಾದ ತನ್ನ ತಂದೆಯನ್ನು ಕುರಿತೇ ಹಾಡಿದ್ದರೂ ಅದರೊಳಗಿನ ಹಸಿವು ಮತ್ತು ಬಡತನ ಮಾತ್ರ ಸರ್ವವ್ಯಾಪಿಯಾದವುಗಳು. ಈ ಸಾಲುಗಳು ತಟ್ಟನೆ ಒಂದು ಕ್ಷಣ ಸಿದ್ಧಯ್ಯ ಪುರಾಣಿಕರ `ಸಲಾಂ ಸಾಬ್’ ಪದ್ಯವನ್ನು ನೆನಪಿಸುತ್ತವೆ. `ಜಡ ತನುವಿಗಿರಬಹುದು, ಬಡತನಕ್ಕೆ ಕುಲವುಂಟೆ’ ಎಂದು ಮಾತನಾಡಿದ ಪುರಾಣಿಕರ ಜಾಡಿನಲ್ಲಿಯೇ ದಳವಾಯಿಯವರ `ಅಪ್ಪ ನೆನಪಾಗುತ್ತಿಲ್ಲ’ ಕವಿತೆ ಸಾಗಿ ಹೋಗುತ್ತದೆ. ಹಾಗೆಯೇ ಅವರ `ಅವಧೂತರು ನಡೆದ ನೆಲದಲ್ಲಿ’ ಕವಿತೆಯೂ ಕೂಡ. ಕವಿ ಬಿ.ಆರ್. ಪೋಲಿಸ ಪಾಟೀಲರ `ಎಂಥ ಚೆಂದಿತ್ತ ಹಿಂದೂಸ್ಥಾನ’ ಕವಿತೆಯನ್ನು ಈ ಕವಿತೆಯ ಪಕ್ಕದಲ್ಲಿಯೇ ಇಟ್ಟುಕೊಂಡು ಓದಬೇಕು. ಪಾಟೀಲರು ಲಾವಣಿಯ ಶೈಲಿಯಲ್ಲಿ ಹೇಳುತ್ತಾರೆ, `ತ್ಯಾಗಿ ಮಾಡಿದ ಮಂಚದ ಮ್ಯಾಲ ಗೂಗಿ ಕುಂತಾವಲ್ಲ, ಮೈಲಾರ ಲಿಂಗ’. ಇದನ್ನೇ ದಳವಾಯಿ `ಅವಧೂತರ ಆತುಮಗಳು ಅಡ್ಡಾಡುವ ... ...’ ಎನ್ನುವ ಸಮಕಾಲೀನ ಭಾಷೆಯಲ್ಲಿ ಪುನರುಚ್ಛರಿಸಿದ್ದಾರೆ.
       ಕಾವ್ಯದ ವಸ್ತು ಆಯ್ಕೆಯ ಸೂಕ್ಷತೆಯನ್ನು ಸೂಚಿಸುವ ದಳವಾಯಿಯವರ ಎರಡು ಕವಿತೆಗಳು `ಕಡಲ ತಡಿಯಲ್ಲೊಬ್ಬ ಬಡ ಜೋಗಿ’ ಹಾಗೂ `ಅವಸರವಿದ್ದರೂ’ . ಈ ಕೆಳಗಿನ ಪದ್ಯಗಳನ್ನು ಓದಿ-
ಒಲವಿನ ಮಾನಿನಿಯರೆ
ಸಾಕಿನ್ನು ಏಳಿ ಸೂರ್ಯಸ್ನಾನ
ಬಡಜೋಗಿಯು ನಾನು
ಒಂಚೂರು ಕೇಳಿ ಎದೆಯ ಗಾನ   (ಕಡಲ ತಡಿಯಲ್ಲೊಬ್ಬ ಬಡ ಜೋಗಿ)
****************

ಅದೆಷ್ಟೇ ಅವಸರವಿದ್ದರೂ
ಅಡ್ಡಾಡುವ ಕೋಳಿಮರಿ
ನೋಡಿಕೊಂಡೇ ಗಾಡಿ ಓಡಿಸು
ಗೆಳೆಯಾ
ಇರುವಂತೆಯೇ ದಾಟಿಸಲಾಗದು ಮುಟ್ಟಿಸಲಾಗದು
ಒಳ ಹುಟ್ಟಿ ಹೊರಳಾಡುವ ಹಸಿ ಮಾತುಗಳ  (ಅದೆಷ್ಟೇ ಅವಸರವಿದ್ದರೂ)
*******************
      
        ಕವಿ ವಿಠ್ಠಲ ದಳವಾಯಿಯವರ `ಬಡ ಜೋಗಿಯ ಹಾಡು’ ಅದೊಂದು ರೀತಿಯಲ್ಲಿ ಎದೆಯ ಗಾನ. ಊರ್ಜ್ವ ಸಂಸ್ಕೃತಿಯೊಂದಿಗೆ ಮುಖಾಮುಖಿ. ಸುಖ ಮತ್ತು ಶ್ರಮ ವರ್ಗಗಳ ಮಧ್ಯದ ವಾಗ್ವಾದ. ಕಾಸ್ಮೆಟಿಕ್ ಸಂಸ್ಕೃತಿಯನ್ನು ಧಿಕ್ಕರಿಸಿ ನೆಲಕ್ಕೆ ಬನ್ನಿ, ಮಹಲುಗಳನ್ನು ಮಗ್ಗಲಿರಿಸಿ ಮನುಷ್ಯರಾಗಲು ಕಾತರಿಸಿ ಎನ್ನುವ ವಿಚಾರಗಳನ್ನು ಆವರಿಸಿಕೊಂಡ ಮಹತ್ವದ ಕವಿತೆ.  ಹಾಗೆಯೇ ಎರಡನೆಯ ಕವಿತೆಯೂ ಕೂಡಾ. ಅದ್ಯಾವ ಓಟಕ್ಕೆ ಸಿಕ್ಕು ಸಂಸಾರದಲ್ಲಿ ಸಿಗುವ ಸಹಜ ಸುಖವನ್ನು ಮರೆತಿರುವನೋ ಮನುಷ್ಯ, ಅವನಿಗೊಂದಿಷ್ಟು ಸಾವಧಾನದ, ಸಮಾಧಾನದ ಸಿಂಚನ ಇಲ್ಲಿದೆ. ಷೇರ್ ಮಾರ್ಕೆಟು, ಕಾಂಕ್ರಿಟ್ ಕಟ್ಟಡಗಳು, ಚುನಾವಣಾ ಪ್ರಣಾಳಿಕೆಗಳು ಹೀಗೆ ಪ್ರಗತಿಯ ಹೆಸರಿನಲ್ಲಿ ಪಾಪಿಯಾಗುತ್ತಿರುವ ಮನುಷ್ಯನಿಗೆ `ಕೋಳಿ ಮರಿ ನೋಡಿಕೊಂಡೇ ಗಾಡಿ ಓಡಿಸು ಗೆಳೆಯಾ’ ಎಂದು ಹೇಳುವ ಮೂಲಕ ಸಮಾಜವನ್ನು ಮಾನವೀಯಗೊಳಿಸುವ ಮಹತ್ವದ ಕೆಲಸವನ್ನು ಕವಿ ಇಲ್ಲಿ ಪೂರೈಸಿದ್ದಾರೆ.

    ಸಂಕಲನದ ಶೀರ್ಷಿಕೆ ಪದ್ಯ `ಭೋಧಿ ನೆರಳಿನ ದಾರಿ’ ಮನುಷ್ಯನ ವಿವಶತೆಗೆ, ಹತಾಶೆಗೆ ಹಿಡಿದ ಕನ್ನಡಿ. ಈ ಸಾಲುಗಳನ್ನು ನೋಡಿ- 


ಕೆಲಸವಿಲ್ಲದಿದ್ದರೆ ನಿಮ್ಮ ಕೈ
ಜಾಲಿಮುಳ್ಳಿನ ಜಾತ್ರೆಯಲ್ಲಿ
ಜೋಲಿ ಹೊಡೆಯುವ ಕುರಿಗಳು
ಹುಲ್ಲುಗಾವಲು ಹುಡುಕಾಡುವ ಚಿತ್ರ
ನಿಮ್ಮ ಕಣ್ಣಿಗೆ ಖಾರದ ಬಣ್ಣ ತರುತ್ತದೆ 
      (ಭೋಧಿ ನೆರಳಿನ ದಾರಿ)
  
           ಇದು ಇಡೀ ಸಂಕಲನದಲ್ಲಿರುವ, ಜಾತಿ ಮತ್ತು ವರ್ಗ ಸಂಘರ್ಷವನ್ನು ಢಾಳು ಢಾಳಾಗಿ ಬಿಂಬಿಸುವ ಏಕೈಕ ಪದ್ಯ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೆಚ್ಚು ಪ್ರಸ್ತುತವೆನಿಸಬಹುದಾಗಿದ್ದ ಈ ಸಾಲುಗಳಲ್ಲಿ ಅದೇ ಕೇರಿ ಮತ್ತು ಉಚ್ಛ ಜಾತಿಗಳ ಮಧ್ಯದ ತಿಕ್ಕಾಟವನ್ನು ನೋಡಬಹುದಾಗಿದೆ. ಶೋಷಿತ, ಅವಮಾನಿತ, ತುಳಿತಕ್ಕೊಳಗಾದ ಜಾತಿಗಳ ಪ್ರತಿನಿಧಿಯಾಗಿ ಆಕ್ರೋಶದ ಮಾತನಾಡುವ ಕವಿ ದಳವಾಯಿ ತಮ್ಮ ಈ ಆಕ್ರೋಶವನ್ನು ಅತ್ಯಂತ ಯುನಿವರ್ಸಲ್ ಆಗಿ ಹೇಳುವ ಉತ್ತಮ ಪದ್ಯ ಅವರ `ಅಕಾಲ ಹಣು’್ಣ. ಕಾವ್ಯ ಕಟ್ಟುವಿಕೆಯ ಈ ಕವಿಯ ಸಾಮರ್ಥ್ಯಕ್ಕೆ ಸಾಕ್ಷಿ ಪದ್ಯದ ಈ ಎರಡು ಸಾಲುಗಳು-

ಹೌದು ನಾನು ಹಣ್ಣಾದೆ
ನೀನು ಉಣ್ಣದೆ ಮಣ್ಣಿಗೆಸೆದೆ   (ಅಕಾಲ ಹಣ್ಣು)


         ಇಲ್ಲಿ ಆಲೋಚಿಸಿದಷ್ಟು ಅರ್ಥಗಳು, ಮನಸ್ಸು ಮತ್ತು ಮನುಷ್ಯನ ಆಲೋಚನೆಗಳು ಹೊರಳಿದಷ್ಟು ಅರ್ಥದ ಹೊಸ ಪದರುಗಳು. ಸ್ತ್ರೀ ವಾದವನ್ನು ಒಳಗೊಂಡು ಅಧ್ಯಾತ್ಮಿಕ ಅನುಭವಗಳವರೆಗೂ ಅರ್ಥ ಸಾಧ್ಯತೆಗಳನ್ನು ಹೊರಹೊಮ್ಮಿಸುವ ಶಕ್ತಿ ಈ ಪದ್ಯಕ್ಕಿದೆ. ಕವಿ ಹೇಳಿಕೊಂಡಂತೆ ಪುಟ್ಟ ಜೀವವೊಂದರ ಆಕಸ್ಮಿಕ ಸಾವಿನ ಹಿನ್ನೆಲೆಯನ್ನಿಟ್ಟುಕೊಂಡು ಈ ಕವಿತಯನ್ನು ಬರೆದಿದ್ದರೂ ಸಾವಿನಷ್ಟೇ ಸರ್ವವ್ಯಾಪಿ ಮತ್ತು ಸಾರ್ವತ್ರಿಕ ವೈಶಾಲವನ್ನು ಸಾಧಿಸಿವೆ, ಸಿದ್ಧಿಸಿವೆ. ಹೀಗೆ ಸಂಕಲನದುದ್ದಕ್ಕೂ ಹರಳುಗಟ್ಟುವ ಅದೆಷ್ಟೋ  ಅನುಭವಗಳನ್ನು `ಭೋಧಿ ನೆರಳಿನ ದಾರಿ’ಯಲ್ಲಿ ಕಾವ್ಯಾಸಕ್ತರು ಪಡೆಯಬಹುದಾಗಿದೆ.

        ಬಡತನವನ್ನು ಚಿಂತಿಸುತ್ತ ಹುಟ್ಟಿನಿಂದ ತನಗೆ ಬಂದ ಕಪ್ಪುಕಪ್ಪಾದ ವರ್ಣದ ಬಗ್ಗೆ ಹಿಂಜರಿಯುತ್ತ ನಮ್ಮ ದಲಿತ ಕವಿಗಳು ಪ್ರೇಮದಂತಹ ಅನುಭವಗಳಿಂದ ಮತ್ತು ಅವುಗಳಿಗೆ ತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಿ ಕೊಡುವುದರಿಂದ ದೂರವೇ ಉಳಿದರು ನಮ್ಮ ಕುಂವೀ ಅವರ ವಾದ. ಆದರೆ ಇದಕ್ಕೆ ಅಪವಾದ ಕವಿ ವಿಠ್ಠಲ ದಳವಾಯಿ. ಅವರ ಈ ಅಪವಾದವೇ ಈ ಪಂಥದ ಕವಿಗಳಿಂದ ಅವರನ್ನು ಒಂದು ಹೆಜ್ಜೆ ಮುಂದೊಯ್ದು ನಿಲ್ಲಿಸುವುದು ಕೂಡ. ಅವರ ಈ ಸಂಕಲನದ `ಕಪ್ಪು ದಾಸವಾಳದ ಕನವರಿಕೆ’ ನಾವೆಲ್ಲ ಓದಲೇಬೇಕಾದ ಮಹತ್ವದ ಪ್ರೇಮಗೀತೆ. 


ಸಾಲಿಯ ಬೀದಿಯಲಿ
ನಿನ್ನ ನಗುವಿನ ಬಸಿರ ಹೊತ್ತು
ಹೂ-ಹಣ್ಣು ಹೆತ್ತ ಮರ
ನನ್ನ ಕಂಡೊಡನೆ ತಲೆತಗ್ಗಿಸುತ್ತದೆ
ನನ್ನಾಳದ ಅಳಲಿಗೆ ತೊಳಲುವ
ಕೃತಜ್ಞತೆಗೆ ಎರಡು ಕಂಬನಿ ಮೀಸಲಿವೆ
ಸೇತುವೆ ಮರದ ಪಥದಲಿ
ಸರಿದು ಹೋದ ನೀನು
        ಹೊರಳಿ ನಿರುಕಿಸುವುದು ಸರಿಯೇನು ಸಖಿ?
  ಅಮವಾಸೆ ನಾನು
            ನನ್ನ ಬೆಳದಿಂಗಳ ರಾತ್ರಿಗಳ ಹೇಗೆ ಹೇಳಲಿ ಸಖಿ?  
  (ಕಪ್ಪು ದಾಸವಾಳದ ಕನವರಿಕೆ)

            `ಭೋಧಿ ನೆರಳಿನ ದಾರಿ’ ಒಂದು ಉತ್ತಮ ಕಾವ್ಯ ಸಂಕಲನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನೊಂದು ಅತ್ಯುತ್ತಮ ಸಂಕಲನವನ್ನಾಗಿ ಇನ್ನೂ ಮಾಡಬಹುದಿತ್ತಲ್ಲವೇ? ಎನ್ನುವ ಪ್ರಶ್ನೆಯನ್ನು ಕವಿ ಹಾಕಿಕೊಳ್ಳುವುದಾದರೆ ಈಗ ಬಳಸಿರುವ ಪದಗಳ ಅರ್ಧ ಸಂಖ್ಯೆಯಲ್ಲಿಯೇ ಈ ಸಂಕಲನವನ್ನು ಇನ್ನೂ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಿತ್ತು. ಪದವೇ ಕವಿತೆಗೆ ದಾರಿಯಾಗಿರುವಂತೆ ಅದುವೇ ತಪ್ಪಿದಲ್ಲಿ ಕಾವ್ಯದ ಒಟ್ಟೂ ಸೌಂದರ್ಯಕ್ಕೆ ಭಂಗ ಎನ್ನುವುದು ಕೂಡ ತಿಳಿದುಕೊಳ್ಳುವುದು ಮುಖ್ಯ. ಉದಾಹರಣೆಗೆ `ಅವಧೂತರು ನಡೆದ ನೆಲದಲ್ಲಿ’ ಬದಲಾಗಿ `ಅವಧೂತರ ನೆಲದಲ್ಲಿ’ ಸಾಕಾಗಿತ್ತು. ಮತ್ತೊಂದು ಕಡೆ `ಅಮವಾಸೆ ನಾನು ನನ್ನ ಬೆಳದಿಂಗಳ ರಾತ್ರಿಗಳ ಹೇಗೆ ಹೇಳಲಿ ಸಖಿ?’ ಎನ್ನುವ ಬದಲಾಗಿ `ಅಮವಾಸೆ ನಾನು, ಬೆಳದಿಂಗಳ ಹೇಗೆ ಹೇಳಲಿ ಸಖಿ’ ಎನ್ನಬಹುದಿತ್ತು. ಹೀಗೆ ಸಂಕಲನದುದ್ದಕ್ಕೂ ಹತ್ತಾರು ಉದಾಹರಣೆಗಳ್ನ್ನು ಎತ್ತಿಕೊಳ್ಳಬಹುದು. ಖಂಡಿತ ಈ ಅಭಿವ್ಯಕ್ತಿ ಪ್ರೌಢಿಮೆಯನ್ನು ತಮ್ಮ ಮುಂದಿನ ಸಂಕಲನಗಳಲ್ಲಿ ಕವಿ ದಳವಾಯಿ ಸಾಧಿಸುತ್ತಾರೆ ಎಂದು ಆಶಿಸುತ್ತೇನೆ.