Total Pageviews

Sunday, January 19, 2014

ತುಳುಕುವುದೆಲ್ಲವೂ ಕವಿತೆಯಲ್ಲ


“ಕಾವ್ಯ ಕೈಯಲ್ಲಿ ಹಿಡಿದುಕೊಂಡು ಅರ್ಥ ಹುಡುಕಾಡಬಾರದು,
ಅದರಂಥ ಅನರ್ಥ ಕ್ರಿಯೆ ಮತ್ತೊಂದಿಲ್ಲ.
ಹಾಡಿಬಿಡಬೇಕು ಹಾಡುತ್ತ ಹಾಡುತ್ತಲೇ ನಾವೂ ಹಾಡಾಗಬೇಕು.
ಹಾಡಾಗಲಾರದವನು ಕವಿತೆಯನ್ನು ಹಿಡಿಯಬಾರದು.
ಇದು ಕವಿತೆಯೊಂದಿಗಿನ ಮೂರು ದಶಕಗಳ ನನ್ನ ಅನುಭವ.
ಮನಸ್ಸು ಮುಕ್ತ ಮತ್ತು ಭಕ್ತನಾಗಿದ್ದಾಗ ಮಾತ್ರ ಕವಿತೆ ಘಟಿಸುತ್ತದೆ.
ಅದು ಬರೆಯುವುದಲ್ಲ, ಬರೆಯಿಸಿಕೊಳ್ಳುವುದು.
ಅದು ಮುದುಕರ ಸ್ವತ್ತಲ್ಲ,
ಹಾಗಂತ ಯುವಕ-ಯುವತಿಯರಲ್ಲಿ ತುಳುಕುವುದೆಲ್ಲವೂ ಕವಿತೆಯಲ್ಲ.”
         
         ಕಾವ್ಯದ ಬಗೆಗೆ ಇಂಥ ಒಂದು ನಿಲುವು ತಳೆದಿರುವ ನನ್ನ ಇತ್ತೀಚಿನ ಆರನೆಯ ಕಾವ್ಯ ಸಂಕಲನ ‘ಇರುವಷ್ಟು ಕಾಲ’ ಎರಡನೆಯ ಬಾರಿ ಧಾರವಾಡದ ಗೆಳೆಯರೊಂದಿಗೆ ಚರ್ಚೆಗೆ ಕಾರಣವಾಯಿತು. ಸಂಕಲನವನ್ನು ಕುರಿತು ಸುದೀರ್ಘವಾಗಿ ಚರ್ಚಿಸಿದವರು, ಮಾತನಾಡಿದವರು ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ. ಅಂದಿನ ಅವರ ಭಾಷಣ ನಮ್ಮ ವಿಶ್ವವಿದ್ಯಾಲಯದ ವರ್ತಮಾನದ ಉಪನ್ಯಾಸಕರುಗಳಿಗಿಂತ ಎಷ್ಟೋ ಪ್ರಮಾಣದಲ್ಲಿ ಸಂಶೋಧಾತ್ಮಕವಾಗಿತ್ತು ಹಾಗೂ ಅನೇಕ ಹೊಸ ಹೊಳಹುಗಳಿಂದ ತುಂಬಿತ್ತು. ಅವು ಬುದ್ಧಿ ಪ್ರದರ್ಶನಕ್ಕಾಗಿ ಹೊರಟ ಮಾತುಗಳಾಗಿರಲ್ಲಿಲ್ಲ. ಬದಲಾಗಿ ಹೃದಯ ಸಂವಾದದ ಅಲೆಗಳಾಗಿದ್ದವು. ಈ ನನ್ನ ಸಂಕಲನವನ್ನು ಕುರಿತು ಮಾತನಾಡಲು ಒಪ್ಪಿಕೊಳ್ಳುವುದಕ್ಕು ಮುಂಚೆ ಅವರು ನನ್ನ ಸಾಹಿತ್ಯದ ಓದುಗರಾಗಿದ್ದಾರೆ ಎಂದು ಅವರಿಂದಲೇ ಕೇಳಿದಾಗ ನನಗೆ ಅಚ್ಚರಿ. ಗೆಳೆಯ ರಾಜು ಮಳವಳ್ಳಿಯವರ ‘ಸಿಹಿ ಗಾಳಿ’ ಸಾಹಿತ್ತಿಕ ಮಾಸಿಕ, ಅವರ ಮನೆಯನ್ನೂ ತಲುಪುತ್ತಿದ್ದು, ಅದರಲ್ಲಿಯ ‘ಈ ಸಾಕಿಯರ ಕೈ ಸೋಕಿ’ ನನ್ನ ಸ್ಥಿರ ಅಂಕಣದ ಖಾಯಂ ಓದುಗರಲ್ಲಿ ಅವರೂ ಒಬ್ಬರಂತೆ. ಸಾಹಿತಿ ಒಬ್ಬನ ಧನ್ಯತೆ ಇರುವುದೇ ಇಂಥದರಲ್ಲಿ. ಮುಖ ನೋಡದೆ, ಪರಸ್ಪರ ಭೇಟಿಯಾಗದೇ ಪತ್ರಿಕೆಗಳ ಮೂಲಕ, ಅವುಗಳೊಳಗಿನ ಬರಹದ ಮೂಲಕ ಓದುಗನೊಂದಿಗೆ ಒಂದು ಸಂಬಂಧ ಏರ್ಪಟ್ಟಾಗ ಅದು ಎಷ್ಟೆಲ್ಲ ಆಪ್ಯಾಯವೆನಿಸುತ್ತದೆ.
'Eruvastu Kaala', Book Releasing 

        ‘ಇರುವಷ್ಟು ಕಾಲ’ ದಿನಾಂಕ 12/12/2013 ರಂದು ಧಾರವಾಡ ಕಟ್ಟೆಯ ಮೂಲಕ ಮತ್ತೆ ಲೋಕಾರ್ಪಣಗೊಂಡು ಅದಕ್ಕೆ ಸಾಕ್ಷಿಯಾದವರು ಗೆಳೆಯ ಡೋಣುರ, ವನದುರ್ಗಾ, ಪೋತೆ, ದಿಬ್ಬದ, ಹಿರೇಮಠ, ಬಸೀರ್ ಹಾಗೂ ಹಿರಿಯರಾದ ವೃ.ಸ್ವಾಮಿ ಮತ್ತು ಧಾರವಾಡದ ಸಮಸ್ತ ಸಾಹಿತ್ಯಾಸಕ್ತರ ಬಳಗ.
        ಈ ಸಂಕಲನದಲ್ಲಿ ನನ್ನ ಪ್ರೀತಿಯ ಅದೆಷ್ಟೋ ಕವಿತೆಗಳಿವೆ ಆದರೆ ಅಂದಿನ ಮುಖ್ಯ ಭಾಷಣಕಾರರಾಗಿದ್ದ ಪ್ರಜ್ಞಾ ಹೇಳುವಂತೆ ‘ರೆಪ್ಪೆಯ ತೆಪ್ಪದಲ್ಲಿ’ ಅವರಿಗೆ ಅತ್ಯಂತ ಪ್ರೀತಿಯ ಕವಿತೆ. ಹೀಗಾಗಿ ಅದರ ಕೊನೆಯ ಕೆಲವು ಸಾಲುಗಳು ಇಲ್ಲಿ ನಿಮಗಾಗಿ

          ಸಂತೆಯಲ್ಲಿ ಕೈ ಬಿಟ್ಟು ಸಂಕಟಪಡುವವಳವಳೇ

ಸಂಸಾರದೊಳಗಿಟ್ಟು, ದೀಪ ಹಚ್ಚಿಟ್ಟು
ಹಚ್ಚಡದೊಳು ಹೂಗಳ ತಂದು
ರಾತ್ರಿ ಮುಡಿಗೆರಿಸಲು ಮುಗುಳ್ನಗುವವಳೂ ಅವಳೆ

ನನ್ನ ಬಾಳಿನ ಮುಂಜಾನೆಯ ಇಬ್ಬನಿ
ಮಿಡಿ ಹಗಲ ರಂಗೋಲಿ
ದೂರ ತೇಲುವ ಸುಪ್ರಭಾತ
ಲೆಕ್ಕವಿಲ್ಲದೆ ಸುರಿವ ಪಾರಿಜಾತ
ಎಲ್ಲ ಎಲ್ಲ ಎಲ್ಲವೂ ಅವಳೆ
ಕೆಲವೊಮ್ಮೆ ಅವಳೇ ಅತೀತ

ಇವಳ ಹೇಳಲು ಹೋಗಿ
ನನ್ನ ನುಡಿ ತಪ್ಪುತ್ತವೆ
ಹಿಡಿಯಲು ಹೋಗಿ
ನಡೆ ತಪ್ಪುತ್ತದೆ

                   ಈಗ ನಾನು ತೆಪ್ಪಗಾಗುತ್ತೇನೆ
                            ಯಾಕೆಂದರೆ
                    ಇವಳ ಕಣ್‍ರೆಪ್ಪೆಯ ತೆಪ್ಪದಲಿ
                 ಸಮುದ್ರವೂ ಸಣ್ಣ ದಾರಿಯೆನಿಸುತ್ತದ
                    ತೆಪ್ಪ ತಪ್ಪಿ ತಳಕ್ಕಿಳಿದರೆ ಸಾವೂ
                       ಹೊಸ ಬದುಕೆನಿಸುತ್ತದೆ


Tuesday, December 31, 2013

ಇವೆಲ್ಲವೂ ಶಶಿಯ ಕಿರಣಗಳೇ. . .



 ವೇಗೋತ್ಕರ್ಷದ ಸಿದ್ಧಾಂತಕ್ಕೆ ಮಳೆ ಹೊಡೆದುಕೊಂಡ ಆಧುನಿಕ ಮನುಷ್ಯನಿಗೆ ಕೆಲವೊಮ್ಮೆ ನೆನಪುಗಳೂ ಭಾರವಾಗುತ್ತವೆ. ಇನ್ನು ಕೆಲವೊಮ್ಮೆ ಕಳದೇ ಹೋಗುತ್ತವೆ, ಮತ್ತೆ ಕೆಲವೊಮ್ಮೆ ಉಳಿದೂ ದಾಖಲಿಸಲಾಗದ ಪಳೆಯುಳಿಕೆಗಳಾಗುತ್ತವೆ. ನನ್ನ ಈ ದಾಖಲಾತಿ ಇಂಥದೇ ಒಂದು ಸಾಧ್ಯತೆಯಿಂದ ಹೊರಬರುವ ಯತ್ನ. 2012ರ ಅಕ್ಟೋಬರ್ ತಿಂಗಳಲ್ಲಿ ನನ್ನ 'ಗಾಂಧಿ : ಅಂತಿಮ ದಿನಗಳು' ಕೃತಿಗೆ ಪ್ರಶಸ್ತಿ ಬಂತು. ಆನಂತರದ್ದೆಲ್ಲವೂ ಬರೀ ಭರಾಟೆ. ಇದರ ಸದ್ದಿನಲ್ಲಿ ಮೌನದ ಕೆಲವು ಆಲಾಪಗಳು ನನಗೇ ಕೇಳಿಸದೆ ಹೋದವೆನೋ.
       ನವೆಂಬರ್ 4 ರಿಂದ 8, 2012 ರವರೆಗೆ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಶಶಿಕಿರಣ ದೇಸಾಯಿಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಜರುಗಿತು. ಈ ನಾಲ್ಕು ದಿನಗಳ ಪ್ರದರ್ಶನ ಸಮಾರಂಭದ ಉದ್ಘಾಟನೆಗೆ ಹೋದವನು ನಾನು. ನನ್ನದೇ ಉದ್ಘಾಟನಾ ಭಾಷಣವೂ ಕೂಡ. ನನ್ನೊಂದಿಗಿದ್ದವರು ಅಂತರ್ ರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ರಾಮಸ್ವಾಮಿ, ಹಾಸನದ ಬರಹಗಾರ ಮಿತ್ರರಾದ ಚಂದ್ರಕಾಂತ ಪಡೆಸೂರು, ತಿರುಪತಿಹಳ್ಳಿ ಶಿವಶಂಕರಪ್ಪ, ಯೋಗಾ ಮಾಸ್ಟರ್ ಹಾಗೂ ಹಿರಿಯ ಕಲಾವಿದ ಶ್ರೀ ಬಿ.ಎಸ್.ದೇಸಾಯಿ. ಇಷ್ಟೊಂದು ಜನಸಂದಣೀಯ ಚೆತ್ರಕಲಾ ಪ್ರದರ್ಶನವನ್ನು ನಾನು ಈ ಹಿಂದೆಂದೂ ನೋಡಿಲ್ಲವೆಂದೇ ಹೇಳಬೇಕು. ಇದು ಶ್ರೀ ಬಿ.ಎಸ್.ದೇಸಾಯಿಯವರ ಸಾಮಾಜಿಕ ಸಂಬಂಧಗಳ ಶ್ರೀಮಂತಿಕೆಗೆ ಸಾಕ್ಷಿಯಾದ ಸಮಾರಂಭವೂ ಕೂಡ.

       ಭಾವ ಮತ್ತು ಭಾವನೆಗಳ ಅದ್ಭುತ ಲೋಕದಿಂದ ಹೊರಹೊಮ್ಮುವ ಬಣ್ಣಗಳು ನಮ್ಮ ಕಣ್ಣುಗಳಿಗೆ ಕಾಣಿಸಿಕೊಳ್ಳುವುದು ನೆಪ ಮಾತ್ರಗಳಾಗಿ. ಅವುಗಳ ಹುಟ್ಟಿನೊಂದಿಗೆ ಅವುಗಳ ಉದ್ದೇಶ ಮತ್ತು ಗುರಿ ನಿರ್ಧಾರಿತವಾಗಿದ್ದೂ ಅವು ವ್ಯಕ್ತಿಯೊರ್ವನ ಕಲೆಯ ಗುರಿಯನ್ನು ತಲುಪುತ್ತಿರುವಂತೆ ವರ್ತಿಸುತ್ತವೆ. ಬಣ್ಣಕ್ಕೆ ಕಲಾವಿದ ನೆಪವಾದನೋ, ಕಲಾವಿದನಿಗೆ ಬಣ್ಣ ಸಾಧನವಾಯಿತೋ ಇದು ಬಿಡಿಸಲಾಗದ ಅತ್ಯಂತ ಸಂಕೀರ್ಣ ಪ್ರಶ್ನೆ. ಇದಕ್ಕೆ ಒಂದು ಉತ್ತರ ಸಾಧ್ಯವಿಲ್ಲ. ಆದರೆ ಒಂದನ್ನೇ ಹೇಳುವ ಹಲವು ಉತ್ತರಗಳು ಸಾಧ್ಯ. ಅಂತೆಯೇ ಈ ಸಮಾರಂಭವನ್ನು ಉದ್ಘಾಟಿಸುತ್ತ ನಾನು ಹೇಳಿದೆ ಇವೆಲ್ಲವೂ ಶಶಿಯ ಕಿರಣಗಳೇ. . .
       ಇಲ್ಲಿ ಶಶಿ ಓರ್ವ ವ್ಯಕ್ತಿಯು ಹೌದು ಸಮಷ್ಠಿಯನ್ನು ರಂಗೇರಿಸುವ ಶಕ್ತಿಯೂ ಹೌದು. ಈ ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬನ ಕುಂಚ ಸೃಷ್ಠಿಯ ಸುತ್ತಲೂ ಗಿರಕಿ ಹೊಡೆಯುವ ಕಲಾರಾಧಕನಿಗೆ ವ್ಯಕ್ತಿಯು ಸಿಗುತ್ತಾನೆ, ಸಮಷ್ಠಿಯೂ ಸಿಗುತ್ತದೆ. ಶಶಿಕಿರಣ ದೇಸಾಯಿ ಇನ್ನೂ ಶುಕ್ಲಪಥಿಕ. ಸಾಗಬೇಕಾದ ದಾರಿ ಅನಂತವಾಗಿದೆ. ಪ್ರಸಿದ್ಧಿ, ಪ್ರಚಾರದ ರೋಗಗಳಿಂದ ಮುಕ್ತನಾಗಿ ಆರೋಗ್ಯವಂತನಾಗಿ ಬೆಳೆಯಬೇಕಿದೆ. ಆತನಿಗೆ ಶುಭವಾಗಲಿ.


Friday, December 27, 2013

ನನ್ನೂರು ಧಾರವಾಡ ನನ್ನ ಹೀಂಗ ಕಾಡಬ್ಯಾಡ

Ragam with Prof. Champa, Prof. Kattimani and Donur
ನನ್ನೂರು ಧಾರವಾಡ
ನನ್ನ ಹೀಂಗ ಕಾಡಬ್ಯಾಡ
ಎದೆಯಾಗ ನೂರು ತರದ
ಕುಡುಬುಡುಕಿಯಾಡಬ್ಯಾಡ. . .
ಇವು ಕೆಲವು ವರ್ಷಗಳ ಹಿಂದೆ ಧಾರವಾಡವನ್ನು ಕಳೆದುಕೊಳ್ಳುವ ಭಯದಲ್ಲಿ ನಾನು ಬರೆದ ಸಾಲುಗಳು.
ಅಲೆಮಾರಿಯಾದ ಮನುಷ್ಯ ಬದುಕಿನ ಹಲವು ಮಜಲುಗಳಲ್ಲಿ ಪರಕೀಯತೆಯ ಮತ್ತು ಬೇರುಗಡಿತತನದ ಭಾವದಿಂದ ನರಳುತ್ತಾನೆ. ತನ್ನದಾಗಿರುವುದೆಲ್ಲವು ತನ್ನದಲ್ಲವೆನೋ ಎನ್ನುವ ಸಣ್ಣ ಗುಮಾನಿಯಿಂದ ಪ್ರಾರಂಭವಾಗುವ ಈ ಯಾತನೆ ಎಂಥೆಂಥವರಿಗೂ ಭಯಾನಕ ರೋಗವಾಗಿ ಬಳಲಿಸಿದ್ದನ್ನು ನಾವು ನೋಡಿದ್ದೇವೆ. ದಾವಂತದ ದುನಿಯಾದಲ್ಲಿ ಭಾವನಾತ್ಮಕ ಅನಾವರಣಕ್ಕೆ ಸಿಗಬೇಕಾದಷ್ಟು ಸಮಯ ಸಿಗದೇ ಇದ್ದಾಗ ಹಬ್ಬಿಕೊಳ್ಳುವ ಭಾವ ಇದು. ಆಗೆಲ್ಲ ‘ಇರುವದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’ ಎಂದು ಅನಿವಾರ್ಯವಾಗಿ ಹಾಡಿಕೊಂಡು ಬಿಡಬೇಕಾಗುತ್ತದೆ.
        ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲವು ವ್ಯವಸ್ಥೆಗಳನ್ನೂ ನಾವು ಅನೇಕ ಸಾರಿ ಹುಟ್ಟಿಹಾಕಿಕೊಂಡಿದ್ದೇವೆ. 2012ರಲ್ಲಿ ಬೆಂಗಳೂರಿನ ಸಂಜಯ ನಗರದಲ್ಲಿ ನಾಲ್ಕಾರು ಅನಿವಾಸಿ ಬೆಂಗಳೂರಿಗರೆಲ್ಲ ಸೇರಿಕೊಂಡು ಇಂಥದೇ ಒಂದು ವೇದಿಕೆಯನ್ನ ಹುಟ್ಟಿಸಿಕೊಂಡೆವು. ನನ್ನ ‘ಗಾಂಧಿ:ಅಂತಿಮ ದಿನಗಳು’ ಮೊದಲು ಬಿಡುಗಡೆಗೊಂಡದ್ದು ಇಲ್ಲಿಯೇ. ಇದರಲ್ಲಿ ನಾನು, ಹರಿಹರಪ್ರಿಯ, ಕೃಷ್ಣಮೂರ್ತಿರಾವ್, ಚೌಡಯ್ಯ, ದೇಸಾಯಿ, ಚಂಪಾ, ಎಲ್.ಹನುಮಂತಯ್ಯ, ರಾಜು ಮಳವಳ್ಳಿ, ಮಾಯಿಗೌಡ ಮತ್ತು ಭಗವಾನ್ ಎಲ್ಲರೂ ಇದ್ದೆವು. ಈ ವೇದಿಕೆಯನ್ನು ನಾವು ಕಿಟ್ಟು ಮನೆ ಎಂದು ಕರೆದೆವು. ಯಾವುದೋ ಒಂದು ಹೆಸರು, ಕೂಡಲು ಒಂದು ಕಾರಣ ಹುಡುಕಿಕೊಂಡಂತೆ.
        ಅಂಥದೇ ಒಂದು ಪ್ರಯತ್ನ ಧಾರವಾಡ ಕಟ್ಟೆ. ಇದು ವಲಸೆ ಹೋದ ಧಾರವಾಡಿಗರಿಗಾಗಿ ಗೆಳೆಯ ಬಸವರಾಜ ಡೋಣುರ ಕಂಡ ಕನಸು. 1994 ರಿಂದ ಒಂದು ವಯೋಮಾನವರಾದ ನಾನು, ಬಸವರಾಜ ಡೋಣುರ, ಶಿವಾನಂದ ಕೆಳಗಿನಮನಿ, ರಂಗರಾಜ ವನದುರ್ಗಾ, ಧನವಂತ ಹಾಜವಗೋಳ, ಮುಕುಂದ ಲಮಾಣಿ, ಡಾ. ತೇಜಸ್ವಿ ಕಟ್ಟಿಮನಿ, ಡಾ. ಕಮಲಾ ಹೆಮ್ಮಿಗೆ ಧಾರವಾಡದ ಸಾಂಸ್ಕೃತಿಕ ಪರಿಸರದಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದವರು. ಆದರೆ ಕಾಲಕ್ರಮೇಣ ಬದುಕಿನ ಓಘದಲ್ಲಿ ವೃತ್ತಿ ಹಾಗೂ ಬೇರೆ ಬೇರೆ ಕಾರಣಗಳಿಗಾಗಿ ಈ ಪ್ರೀತಿಯ ಧಾರವಾಡವನ್ನು ಬಿಟ್ಟು ಎಲ್ಲೆಲ್ಲೋ ಸೇರಿಕೊಂಡೆವು. ಆದರೆ ಈ ಸಾಂಸ್ಕೃತಿಕ ನಗರಿಯನ್ನು ಇನ್ನಿಲ್ಲದಂತೆ ಖಾಲಿಮಾಡಿಕೊಂಡು ಹೋದವರಲ್ಲ ನಾವು. ಬಾಳೆಯ ಮರ ಸಣ್ಣದೊಂದು ಬಚ್ಚೆಯನ್ನು ತನ್ನ ಪಕ್ಕದಲ್ಲಿ ಹುಟ್ಟಿಸಿಯೇ ಸಾಯುವಂತೆ ನಾವೆಲ್ಲ ನೆನಪಿನ ಬೀಜವನ್ನು ಬಿತ್ತಿಹೋದವರು. ಜಗಳಾಡುತ್ತ, ಟೀಕಿಸುತ್ತ, ಮತ್ತೆ ಮತ್ತೆ ಸೇರಲು ಆಸೆ ಪಟ್ಟವರು. ಈ ಒಂದು ಸಣ್ಣ ಕಾರಣಕ್ಕೆ ಹುಟ್ಟಿಕೊಂಡದ್ದು ಧಾರವಾಡ ಕಟ್ಟೆ.
Ragam on Dharwad Katte
        ನಮ್ಮ ಕಟ್ಟೆಗೆ ಮಹೋರ್ತ ಕೂಡಿ ಬಂದದ್ದು 22/09/2013 ರಂದು. ಆ ದಿನ ಮುಂಜಾನೆ ಗೆಳೆಯ ಬಸವರಾಜ ಡೋಣುರರ ಬೃಹತ್ ಅನುವಾದ ಸಂಪಾದನಾ ಕೃತಿ ‘ಕಥಾಮಂಜರಿ’ ಹಾಗೂ ಅವರದೇ ಇನ್ನೊಂದು ಕೃತಿ ‘ದಶಕದ ಕಥೆಗಳು’ ಬಿಡುಗಡೆಯ ಕಾರ್ಯಕ್ರಮ. ಕಥಾಮಂಜರಿಯನ್ನು ಕುರಿತು ಮಾತನಾಡಿದವನು ನಾನು. ನನ್ನ ಮಾತಿನ ಮುಖ್ಯ ಭಾಷಾಂತರ ರಶಿಯನ್ ಮೂಲದ ಚೆಕಾಫ್‍ನ ‘ಪಣ’. ಇದೊಂದು ಅದ್ಭುತ ಕಥೆಯೇ ಸತ್ಯ. ಅಷ್ಟೇ ಶಕ್ತಿಶಾಲಿ ಭಾಷಾಂತರ ಗೆಳೆಯ ಬಸವರಾಜ ಡೋಣುರರದ್ದು.

        ಇದೇ ಸಾಯಂಕಾಲ ‘ಧಾರವಾಡ ಕಟ್ಟೆ’ಯ ಉದ್ಘಾಟನೆ. ಪ್ರೊ. ಚಂಪಾ, ಡಾ. ತೇಜಸ್ವಿ ಕಟ್ಟೀಮನಿ, ಗಿರೀಶ ಹಾಗೂ ಡಾ.ಡಿ.ಎಂ.ಹಿರೇಮಠ ಸಮಾರಂಭದ ಉತ್ಸವ ಮೂರ್ತಿಗಳು. ಇದೇ ಸಂದರ್ಭದಲ್ಲಿ ಶಿವಶಂಕರ ಹಿರೇಮಠರ ಒತ್ತಾಸೆಯ ಮೇರೆಗೆ ಸಂ.ಶಿ.ಭೋಸನೂರಮಠರ ಭವ್ಯ ಮಾನವನ ಕುರಿತು ಅಭ್ಯಸಿಸಲು ಒಪ್ಪಿಕೊಂಡದ್ದು.

ತಪ್ಪಿತಸ್ಥನ ಅಫಿಡೆವಿಟ್ಟು


Ragam with the President of Ka.Sa.Pa Belgaum

ಹೀಗೆಯೇ . . .
ಮಾತಿಗೆ ಸಿಗದವರು, ಕೃತಿಯಾಗಿ ನಡೆದವರು
ಪುಣ್ಯವೇ ಹಣ್ಣಾದವರು
ಮತ್ತೆ ಬಂದಾರೆ ಯೇ?
ಕಾಯುತ್ತ ಕುಳಿತಿದ್ದೇವೆ ಶಬರಿಯಂತೆ!
ಪುಟದಾಚೆಗಿನ ಮಾತು
ತೆರೆ ಸರಿಯುವವರೆಗೆ
ಆಚೆ ಗೇನಿದೆಯೋ ದೇವರಿಗೇ ಗೊತ್ತು
        ಇವು ತಪ್ಪಿತಸ್ಥನೊಬ್ಬನ ಅಫಿಡೆವಿಟ್ಟುವಿನಲ್ಲಿ ಸಿಕ್ಕ ಸಾಲುಗಳು. ಈ ಅಫಿಡೆವಿಟ್ಟಿಗಾಗಿ ನೀವು ಕೋರ್ಟಿನ ಕಡತುಗಳಲ್ಲಿ ಕೈಯಾಡಿಸಬೇಕಿಲ್ಲ. ಪುಸ್ತಕದಂಗಡಿಯಲ್ಲಿ, ಇತ್ತೀಚಿನ ಕಾವ್ಯ ಸಂಕಲನಗಳಲ್ಲಿ ಈ ತಪ್ಪಿತಸ್ಥನ ಅಫಿಡೆವಿಟ್ಟು ನಿಮಗೆ ಸಿಕ್ಕುಬಿಡುತ್ತದೆ. ನಮ್ಮೆಲ್ಲರ ತಪ್ಪುಗಳ ಪ್ರಾಮಾಣಿಕ ವಾರಸುದಾರನಾಗಿ ಈತ ನೀಡಿದ ಅಫಿಡೆವಿಟ್ಟಿನ ಪುಟಗಳ ಸಂಖ್ಯೆ ಐವತ್ತನ್ನು ಮೀರುತ್ತದೆ. ಹೆಚ್ಚು-ಕಡಿಮೆ ಗೋಡ್ಸೆ(Godse)ಯ ಅಫಿಡೆವಿಟ್ಟಿನ ಪುಟಗಳ ಸಂಖ್ಯೆಯಷ್ಟಾಯಿತಲ್ಲ? ಈ ಪ್ರೀತಿಯ ಅಪರಾಧಿಯ ಹೆಸರು ಡಾ. ವೈ.ಎಂ.ಯಾಕೊಳ್ಳಿ(Yakolli). ಬಾದಾಮಿ(Badami) ತಾಲೂಕಿನ ನೀರಬೂದಿಹಾಳದಲ್ಲಿ ಹುಟ್ಟಿದ ಈತ ತನ್ನನ್ನು ತಾನು ದಾರಿ ತಪ್ಪಿದ ಮಗ ಎಂದು ಕರೆದುಕೊಳ್ಳುತ್ತಾನೆ.
ಬರೆದದ್ದು ನಾಲ್ಕಾರು ಸಾಲು
ಬೊಗಳೆಯದೇ ಮಿಗಿಲಾದ ಪಾಲು
ವಂದಿ ಮಾಗಧರ ಸಲಹಿ
ಕಂತೆ ಕಂತೆಯ ಬರೆಸಿ,
ಗುಂಪು ಗುಂಪನು ಕಟ್ಟಿ
ಗಾಂಪರ ಗುಂಪಿಗೆ ಯಜಮಾನನೆನಸಿ
ಹೊತ್ತಿಗೆಯ ಹೊರೆ ಹೊತ್ತು ನಡೆದವನನ್ನು
ಕವಿಯೆಂದು ಕರೆದಾರು ಹೇಗೆ ನನ್ನ. . .
ಎಂದು ನಮ್ಮನ್ನು ಪ್ರಶ್ನಿಸುತ್ತಾನೆ. ಹೀಗಾಗಿ ಕವಿತೆಯ ಮುಂದೆ ಮೋಣಕಾಲೂರಿ ಕುಳಿತ ಇವನನ್ನು ಕುರಿತು ನಾನು ಹೇಳಿದ್ದು ಇಷ್ಟೆ. ನನ್ನ ಈ ಹೇಳಿಕೆ ಆತನ ತಪ್ಪಿತಸ್ಥನ ಅಫಿಡೆವಿಟ್ಟಿನ ಬೆನ್ನುಡಿಯಾಗಿದ್ದರೆ ಅದೂ ಅಪರಾಧವೆಂದುಕೊಳ್ಳಬೇಕೆ?
“ತುಂಡು ತುಂಡುಗಳ ಮಧ್ಯದ ಬೆಸುಗೆಯಿಂದ ಹುಟ್ಟುವ ಈ ಕೌದಿ ಮಾತ್ರ ಬರೀ ತುಂಡಲ್ಲ. ಅದು ಅಖಂಡ. ಅದು ಅಪೂರ್ಣವಲ್ಲ. ಪೂರ್ಣ-ಸಂಪೂರ್ಣ. ಅದಕ್ಕೆ ಹೇಳಿದೆ ಕೌದಿ ಕವಿತೆಯಂತೆ ಅಥವಾ ಕವಿತೆ ಕೌದಿಯಂತೆ ಹೇಗಾದರೂ ಅಂದುಕೊಳ್ಳಿ. ಕವಿತೆ ಹುಟ್ಟಿಕೊಳ್ಳುವುದು ಕೌದಿಯಂತೆಯೆ. ಮುಂದೊಮ್ಮೆ ಸಿದ್ಧವಾಗಬಹುದಾದ ಕೌದಿಗಾಗಿ ಸಂಗ್ರಹವಾಗುವ ಬಣ್ಣ ಬಣ್ಣದ ಬಟ್ಟೆಯ ತುಂಡುಗಳು ಸಂಗ್ರಹವಾಗುವಂತೆಯೇ ಕಾವ್ಯದ ಸಾಮಗ್ರಿಯೂ ಹಲವು ಕಾಡುವ ನೆನಪು, ಸಂವೇದನೆ, ಘಾಯ, ರಮಿಸುವಿಕೆ, ಅಚ್ಛರಿ, ಆಲೋಚನೆ ಹೀಗೆ ಏನೆಲ್ಲ ಸ್ವರೂಪದಲ್ಲಿ ನಮ್ಮಲ್ಲಿ ಸಂಗ್ರಹವಾಗತೊಡಗುತ್ತವೆ. ಹೀಗೆ ಕೌದಿಯಂತೆ ಒಂದೊಮ್ಮೆ ಕವಿತೆಯಾಗಿ ಒಡಮೂಡುತ್ತದೆ. ಗೆಳೆಯ ಯಾಕೊಳ್ಳಿಯವರ ‘ತಪ್ಪಿತಸ್ಥನ ಅಫಿಡೆವಿಟ್ಟು’ವಿಗೂ ಇದು ಅನ್ವಯವಾಗುವ ಆಲೋಚನೆ.  ಮೂವತ್ನಾಲ್ಕು  ಕವಿತೆಗಳ  ಈ  ಸಂಕಲನ  ನೆನಪುಗಳೊಂದಿಗಿನ ಮುಖಾಮುಖಿ, ಧಾವಂತದಲ್ಲಿ ‘ಸಿಟಿ  ಬಸ್ಸಿಗೆ  ಓಡಿ ಹಿಡಿದಂತಲ್ಲ ಜೀವನ’, ಬಿಸಿಲು ಮಳೆಗಳಲ್ಲಿ, ಹೊಲದ ಬದುವಿನಲ್ಲಿ  ತಾಯಂದಿರ ಕೈ ಕುಡುಗೋಲುಗಳಲ್ಲಿ, ರೈತನ ನೇಗಿಲು-ಗುದ್ದಲಿಗಳಲ್ಲಿ, ಕಾರ್ಮುಕರ ಯಂತ್ರಗಳಲ್ಲಿ, ಮಗ್ನನಾದ ಭಗವಂತನನ್ನು ಗಮನಿಸುತ್ತಲೇ ಮುಂದಣ ಅನಂತತೆಗೆ ತೆರೆದುಕೊಳ್ಳುತ್ತಾ ಅನಿಕೇತನದತ್ತ ಹೊರಟಿರುವುದೇ ಈ ಹಿಂದಿನ ಸಾರ್ಥಕತೆ.”
Ragam, Lecturing on Tappitasthan Aphidevittu
        ನವೆಂಬರ್ 18 ರಂದು ಸವದತ್ತಿ(Saundatti)ಯಲ್ಲಿ ಈ ತಪ್ಪಿತಸ್ಥನ ಅಫಿಡೆವಿಟ್ಟನ್ನು ನಾನು ಸಾರ್ವಜನಿಕರೆದುರು ಅನಾವರಣಗೊಳಿಸಿದ್ದೇನೆ. ಸವದತ್ತಿಗೂ ನನಗೂ ನನ್ನ ಗಾಂಧಿ(Gandhi)ಯೊಂದಿಗೆ (‘ಗಾಂಧಿ:ಅಂತಿಮ ದಿನಗಳು’, ರಂಗ ಆರಾಧನಾ ತಂಡ, ಗೆಳೆಯ ಝಕೀರ್(Zakir)) ಶುರುವಾದ ಸಂಬಂಧ ಹೀಗೆ ಮತ್ತೆ ಮತ್ತೆ ನವೀಕರಣಗೊಳ್ಳುತ್ತಿದೆ. 2012 ಡಿಸೆಂಬರ್‍ದಲ್ಲಿ ಪ್ರಾರಂಭವಾದ ಇಲ್ಲಿಯ ನಮ್ಮ ಪ್ರವಾಸ 2013 ರಲ್ಲಿ ಮತ್ತೆ ಇಲ್ಲಿಯೇ ಬಂದು ನಿಲ್ಲುವುದರ ಮೂಲಕ ಭೂಮಿ ಗೋಲಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ.

Thursday, December 26, 2013

‘ಇರುವಷ್ಟು ಕಾಲ’ದಲ್ಲಿ ಕವಿಗಳೊಂದಿಗೆ

Eruvashtu Kaal Cover Page
       ಕರ್ನಾಟಕ ಸ್ವಾಭಿಮಾನಿ ವೇದಿಕೆ ಮತ್ತು ಅತ್ತಿಮಬ್ಬೆ ಪ್ರತಿಷ್ಟಾನ ಟ್ರಸ್ಟ್ ಬೆಂಗಳೂರು, ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 02 ಡಿಸೆಂಬರ 2013 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಜರುಗಿದ ಸಮಾರಂಭದಲ್ಲಿ ನನ್ನ ಮಹತ್ವದ ಕೃತಿ ‘ಇರುವಷ್ಟು ಕಾಲ, ಇರುವಷ್ಟೇ ಕಾಲ. . .’ ಕವನ ಸಂಕಲನವನ್ನು ಡಾ. ಸಾ.ಸಿ.ಮರುಳಯ್ಯು(Dr.S.C.Marulayya)ನವರು ಬಿಡುಗಡೆ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರೂಪದ ಸೂಫಿ ಗೆಳೆಯ ಶ್ರೀ ರಂಜಾನ್ ದರ್ಗಾ(Ramjan Darga) ಆತ್ಮದ ನಿವೇದನೆಗೆ ನಮಗಿರುವ ಏಕೈಕ ಮಾಧ್ಯಮ ಕಾವ್ಯ ಎಂದದ್ದು ಎಷ್ಟೊಂದು ಸೂಕ್ತವಾಗಿತ್ತು. ಗುರು ಹಾಗೂ ಈ ಕಾರ್ಯಕ್ರಮದ ರೂವಾರಿ ಚಂಪಾ(Champa) ಮತ್ತೆ ಕಾಲೇಜಿನ ಯುವಕರಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಿಂತು ನಾಲ್ಕು ಗಂಟೆಗಳವರೆಗೆ ಈ ಕಾರ್ಯಕ್ರಮವನ್ನು ನಿಭಾಯಿಸಿದ ರೀತಿಯನ್ನು ನೀವು ಗಮನಿಸಬೇಕಿತ್ತು. ನಮ್ಮೊಂದಿಗಿದ್ದ ರಾಜಕಾರಣಿ, ಕವಿ ಶ್ರೀ ಕೆ.ಎಚ್.ಶ್ರೀನಿವಾಸ(K.H.Shinivas), ಶ್ರೀಮತಿ ಉಷಾ.ಪಿ.ರೈ(Usha.P.Rai), ಮನೋಹರಿ ಪಾರ್ಥಸಾರಥಿ, ಶ್ರೀ ಪುಟ್ಟೇಗೌಡ, ನ್ಯಾಯಮೂರ್ತಿ ಮಹಿಪಾಲ ದೇಸಾಯಿ(Mahipal Desai)(ಖಲೀಲ್ ಜಿಬ್ರಾನ್:ಪ್ರವಾದಿ), ಡಾ. ಕೊ. ಶ್ರೀವಸಂತಕುಮಾರ(Dr.K.Shrivasantakumar)(ಜೈನ ರಾಮಾಯಣ ಭಾಗ-2) ಮತ್ತು ಚಂಪಾ(ಚಂಪಾಲಹರಿ) ವೇದಿಕೆ ಮೇಲಿರುವುದರೊಂದಿಗೆ, ನನ್ನಂಥ ಎಳೆಯ ಗೆಳೆಯನೊಂದಿಗೆ ತಮ್ಮ ಕೃತಿಗಳನ್ನೂ ಬಿಡುಗಡೆಗೊಳಿಸಿ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಡಾ. ಬಾನಂದೂರು ಕೆಂಪಯ್ಯ(Dr.Bananduru Kempayya) ತಮ್ಮ ಕಂಚಿನ ಕಂಠದಿಂದ ಜನಪದ ಗೀತೆಯೊಂದನ್ನು ಹಾಡಿ ರಂಜಿಸಿದ್ದನ್ನು ಮರೆಯುವುದು ಸಾದ್ಯವಿಲ್ಲ. ಇದೇ ಸಂದರ್ಭದಲ್ಲಿ ಜರುಗಿದ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ 60 ಜನ ಕವಿಗಳು ಇದರಲ್ಲಿ ಪಾಲ್ಗೊಂಡಿದ್ದು 32 ಜನ ಕವಯತ್ರಿಯರೂ ಇದರಲ್ಲಿ ಪಾಲ್ಗೊಂಡಿದ್ದು ಲಿಂಗ ಸಮಾನತೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು ಎನ್ನಬಹುದೇ.(?)
Book Releasing ceremany of Ragam

        ಹೆಸರಿಸಲೇಬೇಕಾದ ಕೆಲವು ಹಿರಿಯರು ನಮ್ಮೊಂದಿಗೆ ಈ ಕಾರ್ಯಕ್ರಮದಲ್ಲಿ ಕೇಳುಗರಾಗಿ ಪಾಲ್ಗೊಂಡಿದ್ದಾರೆ. ಉದಾಹರಣೆಗೆ ಶ್ರೀ ಜರಗನಹಳ್ಳಿ ಶಿವಶಂಕರ(Jaraganahalli Shivashankar), ಡಾ. ಜಿ.ಎಚ್.ಹನ್ನೆರಡುಮಠ, ಶ್ರೀ ವಡ್ಡಗೆರೆ ನಾಗರಾಜಯ್ಯ, ಶ್ರೀದೇವಿ ಕಳಸದ, ಸುಜಾತಾ ವಿಶ್ವನಾಥ(Sujata Vishwanath), ಡಾ. ವರದಾ ಶ್ರೀನಿವಾಸ, ಶ್ರೀಮತಿ ಸಕೀನಾ ಬೇಗಂ ಇನ್ನೂ ಅನೇಕರು.
Ragam with Ramjan Darga
    ‘ಇರುವಷ್ಟು ಕಾಲ! ಇರುವಷ್ಟೇ ಕಾಲ. . .’ ನನ್ನ ಅತ್ಯಂತ ಪ್ರೀತಿಯ ಆರನೆಯ ಕಾವ್ಯ ಸಂಕಲನ. ಕಣ್ವ ಪ್ರಕಾಶನದ ಗೆಳೆಯ ಎಂ.ಆರ್.ಗಿರಿರಾಜು(M.R.Giriraju) ಈ ಸಂಕಲನವನ್ನು ಕಾವ್ಯಕ್ಕೆ ದುಬಾರಿಯಾದ ಈ ಕಾಲಘಟ್ಟದಲ್ಲಿ ಅತ್ಯಂತ ಮುತುವರ್ಜಿಯಿಂದ ಪ್ರಕಟಿಸಿದ್ದಾರೆ. ಸನ್ಮಿತ್ರ ಶ್ರೀ ಬಿ.ಎಸ್.ದೇಸಾಯಿ(B.S.Desai) ಸಂಕಲನದ ತುಂಬ ತಮ್ಮ ರೇಖಾ ಚಿತ್ರಗಳನ್ನು ಎಳೆದು ಜೀವ ತುಂಬಿದ್ದಾರೆ. ಸಂಕಲನ ಪ್ರಕಟವಾಗುವ ಸಂದರ್ಭದ ಆಸು-ಪಾಸಿನಲ್ಲಿಯೇ ಸಿಹಿಗಾಳಿಯ ಸಂಪಾದಕ ಮಿತ್ರ ರಾಜು ಮಳವಳ್ಳಿ(Raju Malavalli) ಮುಂಚಿತವಾಗಿಯೇ ಒಂದು ಲೇಖನವನ್ನು ಪ್ರಕಟಿಸಿ ಪುಸ್ತಕದ ಪ್ರಮೋಷನ್‍ಗೆ ಸಹಕರಿಸಿದ್ದಾರೆ. ಹೀಗಾಗಿ ನನ್ನ ಪುಸ್ತಕವನ್ನು ಕುರಿತು ನಾನು ಈ ದಿನ ಬಹಳಷ್ಟು ಏನಾದರು ಹೇಳಬೇಕಾದುದಿದೆ ಅಂದುಕೊಳ್ಳಲೇ ಇಲ್ಲ. ನನ್ನ ನಂಬಿಕೆ ಇಷ್ಟೆ-
      ‘ಕವಿತೆಯೊಂದಿಗಿನ ನನ್ನ ಈ ಅನುಸಂಧಾನ ನನ್ನ ಪ್ರೀತಿಯೊಂದಿಗಿನ ಸಮಾಗಮವಷ್ಟೆ. ನನ್ನ ಕವಿತೆಯೊಳಗಿನ ಮನುಷ್ಯರು ಬದಲಾಗಿದ್ದಾರೆ. ಬದುಕಿನ ವ್ಯವಹಾರದಲ್ಲಿ ಹಂತ ಹಂತಕ್ಕೆ ಸೈದ್ಧಾಂತಿಕ ಜಾರತನಕ್ಕೆ ಒಳಗಾಗಿದ್ದಾರೆ. ತಮ್ಮ ಪಾಪದ ಹೇಸಿಗೆಯನ್ನೂ ನನ್ನ ಹಾಗೂ ನನ್ನ ಕವಿತೆಗೆ ಹೊರಸಿ ಶುದ್ಧರಾಗಿದ್ದಾರೆ. ಇಂದು ಆ ಶುದ್ಧಿಯ ವ್ಯಾಪ್ತಿಗೆ ಒಳಪಡದವರು ನಾನು ಮತ್ತು ನನ್ನ ಕವಿತೆ ಮಾತ್ರ. ಹಾಗೆ ನೋಡಿದರೆ ನಾನು ಶುದ್ಧ ಪಾಪಿ, ಕವಿತೆ ಶುದ್ಧ ಲಜ್ಜಾಹೀನ. ಬಿರುಗಾಳಿಯಂತೆ ಸುತ್ತಿಬರುವ ನಾವು ಯಾರಿಗೆ ಪ್ರೀಯರೋ ಆ ದೇವರಿಗೇ ಗೊತ್ತು. ನಾವಿಬ್ಬರೂ ಮಾತ್ರ ಪ್ರೀತಿಯ, ಸಮಾಗಮದ ತೂರ್ಯಾವಸ್ಥೆಯಲ್ಲಿದ್ದೇವೆ.’ ಎಂದುಕೊಂಡಿದ್ದೇನೆ.
Ragam with Bananduru Kempayya


        ನನ್ನೊಳಗಿನ ಧ್ಯಾನ, ಮೌನ ಮತ್ತು ಮುಕ್ತಿಗಳ ಮೊದಲ ಕೂಡಲಸಂಗಮ ಜರುಗಿದ್ದು ಈ ಸಂಕಲನದಲ್ಲಿ. ಪದಗಳ ಮೋಹದಿಂದ ಹೊರ ಬಂದು ಅರ್ಥದ ಹಾಗೂ ಅದರ ಆಚೆಯ ಅನಂತ ಲೋಕದಲ್ಲಿ ಕ್ರಮಿಸಿದ ಒಂದಿಷ್ಟು ಅನುಭವ ನನಗೆ ಈ ಬರಹದ ಮೂಲಕ ಒದಗಿದೆ. ಪುಸ್ತಕ ನಿಮ್ಮ ಮೆಚ್ಚಿನ ಅಂಗಡಿಗಳಲ್ಲಿ ಲಭ್ಯವಿದೆ.

Friday, November 8, 2013

ಮಲ್ಲಯ್ಯಸ್ವಾಮಿ: ಒಳಗೆ ದೀಪವನಿಟ್ಟು ಹೊರಗೆ ಹೋದವರು


“ಸ್ನೇಹ ದೂರದ ಮಾತು
ಸಾವಿನ ಟಿಪ್ಪಣೆಯೂ ಬರೆಯಲಿಲ್ಲ”
      ‘ನನಗೆ ದೀಪ ಅರುವ ಭಯವಿಲ್ಲ’ ಎನ್ನುವ ನನ್ನ ಕವಿತೆಯ ಸಾಲುಗಳ ಮೂಲಕ ಮೊನ್ನೆಯಷ್ಟೇ ಸಂಯುಕ್ತ ಕರ್ನಾಟಕದ ಮುಖಾಂತರ ಜನತೆಯೊಂದಿಗೆ ದೀಪಾವಳಿ ಆಚರಿಸಿಕೊಂಡ ಸಂಭ್ರಮದಲ್ಲಿದ್ದ ನನಗೆ ನಿನ್ನೆ ಅತೀವ ಆಘಾತದ ಕ್ಷಣಗಳೇ ಕಾದಿದ್ದವು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಡಿ.ರಾಜೇಂದ್ರಬಾಬು(D.Rajendrababu) ತೀವ್ರ ಹೃದಯಾಘಾತದಿಂದ ಸಾವನಪ್ಪಿದ್ದು, ಬಣ್ಣದ ಲೋಕಕ್ಕೆ ಈಗಷ್ಟೇ ಅಂಬೆಗಾಲಿಕ್ಕುತ್ತ ಅದರ ಬೆರಗಿಗೆ ಬಲಿಯಾಗಿ ಹೋದ, ಜಂಗಲ್‍ಜಾಕಿ(Jangal Jaaki) ಎಂದು ಹೆಸರು ಮಾಡಿದ್ದ ರಾಜೇಶ್(Rajesh) ಎನ್ನುವ ಹುಡುಗ ಮಾನಸಿಕ ಅಸ್ವಸ್ಥತೆಗೊಳಗಾಗಿ, ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಹಾಗೂ ನನ್ನ ಸಾಹಿತ್ಯದ, ಅಸ್ತಿತ್ವದ, ನೆನಪುಗಳ, ಕನಸುಗಳ, ಅನುಭವಗಳ ಭಾಗವೇ ಆಗಿದ್ದ ನನ್ನ ದೊಡ್ಡಪ್ಪ, ಪಾರಿಜಾತ ಕಲಾವಿದ ಶ್ರೀ ಮಲ್ಲಯ್ಯಸ್ವಾಮಿ ಮಠಪತಿ (ಅಥಣಿ)ಯವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದು. ಮೂವರು ಒಂದಲ್ಲಾ ಒಂದು ರೀತಿಯಲ್ಲಿ ಕಲಾದೇವಿಯ ಮಕ್ಕಳೇ, ಈ ಬೆಳಕಿನ ಹಬ್ಬ ಅದ್ಯಾಕೆ ಇವರ ಬಾಳಿನಲ್ಲಿ ಶಾಶ್ವತ ಕತ್ತಲೆಯನ್ನು ಹೊತ್ತು ತಂದಿತೋ ಅರ್ಥವಾಗುತ್ತಿಲ್ಲ.
      ಬಯಲುಸೀಮೆಯ ಸೊಗಡು, ಕೃಷ್ಣಾ(Krishna) ತೀರದ ಜಾಡು, ಎರಡನ್ನೂ ಮೇಳೈಸಿಕೊಂಡು ಹುಟ್ಟಿದ ಅಭಿಜಾತ ಕಲೆಗಳಾದ ದೊಟ್ಟಾಟ, ಬಯಲಾಟಗಳು 50 ರ ದಶಕದಿಂದ 90 ರ ದಶಕದವರೆಗೂ ಜನರ ಮನರಂಜನೆಯ ಮಾಧ್ಯಮಗಳಷ್ಟೇ ಅಲ್ಲದೆ ಪರಂಪರೆಯ ಕೊಂಡಿಗಳಂತಿದ್ದವು. ಅವುಗಳಲ್ಲಿ ಶ್ರೀ ಕೃಷ್ಣ ಪಾರಿಜಾತ(Parijata)ವೂ ಒಂದು. ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಪ್ರಾರಂಭವಾಗುವ ಆಟಗಳು ಪ್ರಚಲಿತ ತಲ್ಲಣ, ತಾಕಲಾಟಗಳನ್ನು ಅದರೊಂದಿಗೆ ಮೈಗೂಡಿಸಿಕೊಂಡು ಜನರಲ್ಲಿ ಅರಿವಿನೊಂದಿಗೆ ಸಧಭಿರುಚಿಯನ್ನು ಮೂಡಿಸುತ್ತಿದ್ದ ಕಾಲವದು. ನನ್ನ ದೊಡ್ಡಪ್ಪನು ಈ ಕಲೆಯ ಬಲೆಯೊಳಗೆ ತನ್ನ ಬದುಕನ್ನು ಕಟ್ಟಿಕೊಂಡ ಒಬ್ಬ ಕಲಾವಿದ. ‘ಶ್ರೀ ಕೃಷ್ಣ ಪರಮಾತ್ಮನಿಗೆ ಇದು ನನ್ನ ಅಳಿಲು ಸೇವೆ’ ಎನ್ನುವ ಧ್ಯೇಯದೊಂದಿಗೆ ಆತ ‘ವೆಂಕಟೇಶ್ವರ ಕೃಷ್ಣ ಪಾರಿಜಾತ ಕಂಪನಿ’ಯನ್ನು ಬೆಳಗಾವಿ(Belgaum) ಜಿಲ್ಲೆ ಅಥಣಿ(Athani)ಯಲ್ಲಿ ಕಟ್ಟಿ ಬೆಳೆಸಿದ್ದು ಈಗ ಇತಿಹಾಸ. ವರ್ಷಕ್ಕೆ 150 ಪ್ರದರ್ಶನಗಳಂತೆ ನಿರಂತರ 55 ವರ್ಷ ಕರ್ನಾಟಕ(Karnatak), ಮಹಾರಾಷ್ಟ್ರ(Maharastra), ಗೋವಾ(Goa) ಸೇರಿದಂತೆ ಇನ್ನೂ ಅನೇಕ ಕಡೆ ಆತನ ‘ಶ್ರೀ ಕೃಷ್ಣ ಪಾರಿಜಾತ ಕಂಪನಿ’ ಪ್ರದರ್ಶಿಸಿದ್ದು ಸರಿಸುಮಾರು 8000 ಕ್ಕೂ ಹೆಚ್ಚು ಪ್ರದರ್ಶನಗಳನ್ನು.
 ಅವರ ಹೆಸರು ಮಲ್ಲಯ್ಯಸ್ವಾಮಿ ಮಠಪತಿ(Mallayyaswami Mathapati), ಕರ್ನಾಟಕದ ಜನೆತೆಗೆ ‘ಶ್ರೀ ಕೃಷ್ಣ ಪಾರಿಜಾತ’ದ ಮೂಲಕ ಮಲ್ಲಯ್ಯಸ್ವಾಮಿ ಅಥಣಿ ಎಂದೇ ಹೆಸರುವಾಸಿಯಾಗಿದ್ದವರು. ಅನ್ನ, ಅಂಬಲಿ, ಹೆಸರು ನೀಡಿದ ಸ್ಥಳವನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಅವರು ಮಠಪತಿ ಎನ್ನುವ ಅಡ್ಡಹೆಸರಿನ ಬದಲಾಗಿ ಅಥಣಿಯನ್ನೇ ತಮ್ಮ ಅಡ್ಡ ಹೆಸರನ್ನಾಗಿ ಮಾಡಿಕೊಂಡಿದ್ದರು. ತಮ್ಮನ್ನು ಬೆಳೆಸಿದ ತಾಯ್ನೆಲದ  ಬಗೆಗೆ ಅವರಿಗಿರುವ ಕೃತಜ್ಞತೆ ಅಂಥದ್ದು. ಬೆಳಗಾವಿ ಜಿಲ್ಲೆಯ ಮೈಗುರು ಎಂಬಲ್ಲಿ 1939 ರಲ್ಲಿ ಜನಿಸಿದ ಅವರದು ಮೂಲತಃ ಗೌಡಿಕೆ ಮತ್ತು ಕುಸ್ತಿಪಟುಗಳ ಮನೆತನ.  ಯಾವುದೇ  ಆರ್ಥಿಕ ತೊಂದರೆಗಳು ಇಲ್ಲದ ಮನೆತನದಿಂದ ಬಂದ ಅವರಿಗೆ ಕಲಾಸೇವೆಯ ಮೂಲಕವೇ ಹೊಟ್ಟೆ ಹೊರೆದುಕೊಳ್ಳಬೇಕಾದ ಅವಶ್ಯಕತೆಯೇನೂ ಇರಲಿಲ್ಲ. ಆದರೆ ಕಲೆ ಅವರ ಆತ್ಮದ ಹಸಿವಾಗಿತ್ತು.  ತಂದೆ ಗುರುಪಾದಯ್ಯ ಮತ್ತು ತಾಯಿ ಕಾಶೀಬಾಯಿಯವರ 8 ಜನ ಮಕ್ಕಳಲ್ಲಿ 5 ನೇ ಮಗನಾಗಿ ಜನಿಸಿದ ಅವರಿಗೆ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯಲಾಗಲಿಲ್ಲ. ಅಪ್ಪಟ ನಿರಕ್ಷರಿಗಳು. ಆದರೆ ಕಲಾಸರಸ್ವತಿಯನ್ನು ತಮ್ಮ ಹುಟ್ಟುಪ್ರತಿಭೆ, ಕಠಿಣಶ್ರಮ ಮತ್ತು ಅನಂತ ಪ್ರಯತ್ನಗಳಿಂದ ಒಲಿಸಿಕೊಂಡವರು.  ತಾನು ಓದು-ಬರಹ ಬಲ್ಲವನಲ್ಲವಾದರೂ ಅಕ್ಷರ ಕಲಿತು, ಶಿಕ್ಷಕ ವೃತ್ತಿಯಲ್ಲಿ ಹೆಸರು ಮಾಡಿದ್ದ ತಮ್ಮ ಸಹೋದರ ಗಂಗಯ್ಯ ಗುರುಪಾದಯ್ಯ ಮಠಪತಿಯವರಿಂದ ಶ್ರೀ ಕೃಷ್ಣ ಪಾರಿಜಾತ ಹಾಗೂ ಇನ್ನು ಹಲವಾರು ಪೌರಾಣಿಕ ಕಥೆಗಳ ಸನ್ನಿವೇಶಗಳನ್ನು ಓದಿಸಿಕೊಂಡು, ಬರೀ ಮನನ ಶಕ್ತಿಯಿಂದಲೇ ನಿರಂತರ 8 ರಿಂದ 10 ಗಂಟೆಗಳ ಕಾಲ ಪ್ರದರ್ಶನ ನೀಡುವ ತಾಕತ್ತನ್ನು ಬೆಳೆಸಿಕೊಂಡಿದ್ದರು.
     ಹುಟ್ಟಿದ್ದು ಮೈಗುರು, ಕಂಪನಿ ಕಟ್ಟಿದ್ದು ಅಥಣಿ ಮತ್ತು ನೆಲೆಸಿದ್ದು ಜಮಖಂಡಿಯಲ್ಲಾದರೂ ಅವರ ಸಂವೇದನೆಗಳಿಗೆ ಸಾಕ್ಷಿಯಾಗಿದ್ದು ಕೋಹಳ್ಳಿ, ಅಡಹಳ್ಳಿ, ಅಡಳಹಟ್ಟಿ ಎನ್ನುವ ಅಷ್ಟೆನು ಜನರಿಗೆ ಚಿರಪರಿಚಿತವಲ್ಲದ ಚಿಕ್ಕ ಚಿಕ್ಕ ಊರುಗಳು. ಆದರೆ ಆ ನೆಲದ ಕಂಪು ನನ್ನ ದೊಡ್ಡಪ್ಪನ ಬಾಲ್ಯದುದ್ದಕ್ಕೂ ಮೈಹಾಸಿದ್ದವು ಮತ್ತು ಮುಂಬರುವ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕಿ ಕೊಟ್ಟಿದ್ದವು. 
       ಹೆಸರಾಂತ ಅಭಿಜಾತ ಕಲಾವಿದರಾದ ಅಪ್ಪಾಲಾಲ್ ನದಾಫ್, ಬರಗಿ ರಾಚಯ್ಯಸ್ವಾಮಿ ಹಾಗೂ ಕೇರುರು ಹೆಳವರಂತ ಗುರುಗಳ ಗರಡಿಯಲ್ಲಿ ಪಳಗಿದ ಅವರು ಕೆಲಕಾಲದ ನಂತರ ತಮ್ಮದೇ ಸ್ವಂತ `ವೆಂಕಟೇಶ್ವರ ಕೃಷ್ಣ ಪಾರಿಜಾತ ಕಂಪನಿ’ಯನ್ನು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಕಟ್ಟಿದರು. ಬ್ರಾಹ್ಮಣ, ದಲಿತ, ಕುರುಬ, ಲಿಂಗಾಯತ, ಮುಸ್ಲಿಂ ಎನ್ನುವ ಯಾವುದೇ ಜಾತಿ-ಮತಗಳ ಬೇಧವಿಲ್ಲದೆ ಬರೀ ಕಲೆಯನ್ನು ಉಸಿರಾಗಿಸಿಕೊಂಡವರ ದೊಡ್ಡ ಬಳಗವೇ ಅವರೊಂದಿಗಿತ್ತು.

         ಎಡಬಿಡದೆ ಕಲಾದೇವಿಯ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರಿಗೆ ಎಲ್ಲೆಲ್ಲೂ ಅಭಿಮಾನಿ ಬಳಗ ನಿರ್ಮಾಣವಾಗಿತ್ತು. ಕಾಲಕ್ರಮೇಣ ಬಯಲಾಟಗಳಷ್ಟೇ ಅಲ್ಲದೆ ಆಕಾಶವಾಣಿ, ದೂರದರ್ಶನಗಳಲ್ಲೂ ಅವರ 'ಶ್ರೀ ಕೃಷ್ಣ ಪಾರಿಜಾತ’ ಹೆಸರುವಾಸಿಯಾಗಿತ್ತು. ಅಷ್ಟೇ ಅಲ್ಲದೆ ನಾಡಿನ ಹೆಮ್ಮೆಯ ಉತ್ಸವಗಳಾದ 'ಮೈಸೂರು ದಸರಾ’, 'ಹಂಪಿ ಉತ್ಸವ’, 'ಚಾಲುಕ್ಯ ಉತ್ಸವ’, 'ನವರಸಪುರ ಉತ್ಸವ’ ಹಾಗೂ ಇನ್ನು ಹಲವಾರು ಕಡೆ ಅವರು ತಮ್ಮ ಪ್ರತಿಭೆಯನ್ನು ಮೆರೆದಿದ್ದರು. 2004 ರಲ್ಲಿ ಶ್ರೀಮತಿ ರಮಾದೇವಿ(Ramadevi) ರಾಜ್ಯಪಾಲರಾಗಿ, ಎಸ್.ಎಮ್ ಕೃಷ್ಣ(S.M.Krishna) ಅವರು ಮುಖ್ಯಮಂತ್ರಿಯಾಗಿದ್ದ  ಆವಧಿಯಲ್ಲಿ ಅವರಿಗೆ ಕನ್ನಡ ನಾಡಿನ ಅತ್ಯುನ್ನತ ಪ್ರಶಸ್ತಿಯಾದ `ರಾಜ್ಯೋತ್ಸವ ಪ್ರಶಸ್ತಿ’ವೂ ಒಲಿದುಬಂದಿತ್ತು. ತಮ್ಮ ಹೆಸರು ರುಜು ಮಾಡುವುದನ್ನು ಬಿಟ್ಟು ಮತ್ತೇನನ್ನು ಬರೆಯಲು ಆಗದ ಅನಕ್ಷರಸ್ಥ ವ್ಯಕ್ತಿಯೊಬ್ಬರು ಬರೀ ತವi್ಮ ಕಲಾ ನೈಪುಣ್ಯದಿಂದ ಎಲ್ಲೆಲ್ಲೂ ಮನೆಮಾತಾಗಿದ್ದರು. 
          ತಮಗೆ ದೊರೆತ ಗೌರವ, ಮನ್ನಣೆಗಳನ್ನು ತಲೆಗೆರಿಸಿಕೊಳ್ಳದೆ ವಿನಯಶೀಲರಾಗಿ ಬದುಕಿದ್ದ ಅವರು ನಾಡಿನ ಪ್ರಮುಖ ಅಕಾಡೆಮಿಗಳಲ್ಲೊಂದಾದ ಲಲಿತಕಲಾ ಆಕೆಡೆಮಿಯ ಸದಸ್ಯರಾಗಿದ್ದರು. ತಮ್ಮ ಅವಧಿಯಲ್ಲಿ ಹಲವಾರು ವೃತ್ತಿನಿವೃತ್ತ ಕಲಾವಿದರಿಗೆ ಮಾಶಾಸನಗಳನ್ನು ಕೊಡಿಸಿದರು, ಪ್ರತಿಭಾನ್ವಿತರನ್ನು ಪ್ರಚೋದಿಸಿ ಬೆಳೆಸಿದರು. ಅವರಿಗಾಗಿ ಹಲವಾರು ವೇದಿಕೆ, ಅವಕಾಶಗಳನ್ನು ಕಲ್ಪಿಸಿಕೊಟ್ಟರು.
        ಆಧುನಿಕತೆಯ ಬಿರುಗಾಳಿಗೆ ಸಿಕ್ಕು ನಶಿಸಿಹೋದ ಕಲೆಗಳು ಲೆಕ್ಕವಿಲ್ಲದಷ್ಟು. ದೀನೆ-ದೀನೆ ಜನರ ಆಸಕ್ತಿಗಳು, ಆಲೋಚನೆಗಳು, ಮನಸ್ಥಿತಿಗಳು ಬದಲಾದವು, ದಿನಗಟ್ಟಲೇ ಆಟ ನೋಡುವಷ್ಟು ವ್ಯವಧಾನವಿಲ್ಲದ ಸಂದರ್ಭಗಳು ಸೃಷ್ಟಿಯಾದವು. ಶ್ರೀ ಕೃಷ್ಣ ಪಾರಿಜಾತವನ್ಯಾಕೆ ನಾವು ಇಡೀ ರಾತ್ರಿಯಾಟದ ಬದಲಾಗಿ ಬರೀ ಮೂರುವರೇ ಗಂಟೆಗಳಷ್ಟು ಕಡಿಮೆ ಅವಧಿಗಿಳಿಸಿ ಪ್ರದರ್ಶಿಸಬಾರದು ಎಂದು ಅವರ ಕಂಪನಿಯ ಸದಸ್ಯರೊಬ್ಬರು ಕೇಳಿದಕ್ಕೆ ಅವರು ಹೇಳಿದ್ದರಂತೆ, “ನಾನು ತೀರಿಹೋಗುವವರೆಗೂ ಅಂಥ ಬದಲಾವಣೆಗೆ ನಾನು ಸಮ್ಮತಿಸುವುದಿಲ್ಲ” ಎಂದು. ಕಲೆ ಅವರಿಗೆ ಹೊಟ್ಟೆ ತುಂಬಿಸಿಕೊಳ್ಳುವ ಮಾಧ್ಯಮವಾಗಿರಲಿಲ್ಲ ಬದಲಾಗಿ ಅವರ ಆರಾಧ್ಯ ದೈವವಾಗಿತ್ತು. 
        ತಮ್ಮ ಇಡೀ ಕುಟುಂಬವನ್ನೇ ಅವಾರು ಕಂಪನಿಯ ನಿರಂತರ ಏಳಿಗೆಗಾಗಿ ತೊಡಗಿಸಿದ್ದರು. ಹೆಂಡತಿ, ಮಕ್ಕಳು ಯಾರೂ ಈ ಚೌಕಟ್ಟಿನಿಂದ ಹೊರತಾಗಿರಲಿಲ್ಲ, ಅಷ್ಟೇ ಅಲ್ಲದೇ ಸ್ವತಃ ಅವರಿಗೆ ಪಾರಿಜಾತ ಕಲಿಸಿದ ಹೆಸರಾಂತ ಕಲಾವಿದರಾದ ಅಪ್ಪಾಲಾಲ್ ನದಾಫ್, ಬರಗಿ ರಾಚಯ್ಯಸ್ವಾಮಿ ಹಾಗೂ ಕೇರುರು ಹೆಳವರಂತ ಗುರುಗಳು ಕೂಡ ತಮ್ಮ ಶಿಷ್ಯನ ಕಂಪನಿಯಲ್ಲಿ ಕೆಲಸ ಮಾಡಿದರು. ಆ ಕಾಲದಲ್ಲೇ ನರ್ಸ್ ಆಗಿದ್ದ ಕಮಲಾಕ್ಷಿ ಎನ್ನುವ ದಲಿತ ಸಮುದಾಯದ ಮಹಿಳೆ ಮತ್ತು ಹೆಸರಾಂತ ಕಲಾವಿದೆಯೊಬ್ಬರು ತಮ್ಮ ಸರಕಾರಿ ವೃತ್ತಿಯನ್ನು ಧಿಕ್ಕರಿಸಿ ಪಾರಿಜಾತಕ್ಕೆ ಮನಸೋತು ತಮ್ಮ ಕೊನೆಯ ಉಸಿರಿರುವವರೆಗೂ ಆ ಕಂಪನಿಯಲ್ಲೇ ದುಡಿದರು. ಮುಸ್ಲಿಂ ಕಲಾವಿದರೊಬ್ಬರು ಸತ್ಯಭಾಮೆಯ ಪಾತ್ರದ ಮೂಲಕವೇ ಮನೆಮಾತಾಗಿದ್ದರು. ಅವರ ಹೆಂಡತಿ ಮಹಾದೇವಿಯವರಾಗಿರಬಹುದು, ಪ್ರಸ್ತುತ ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ಎರಡನೆಯ ಮಗ ಮುರುಗೇಶ ಮಠಪತಿ ಆಗಿರಬಹುದು, ಉಪನ್ಯಾಸಕನಾಗಿದ್ದುಕೊಂಡು ತಂದೆಯ ಆಶೋತ್ತರಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದ ಅವರ ಮೊದಲ ಮಗ ಕೃಷ್ಣಕುಮಾರ ಮಠಪತಿ ಇರಬಹುದು, ಹೀಗೆ ಅವರ ಬಳಗ ಕಲಾಸೇವೆಯನ್ನೇ ಬದುಕಿನ ಧ್ಯೆಯವಾಗಿಸಿಕೊಂಡು ಪ್ರಚಾರದ ವ್ಯಾಮೋಹಕ್ಕೆ ಬೀಳದೆ ತಮ್ಮ ಬದುಕನ್ನು ಸಾರ್ಥಕವಾಗಿಸಿಕೊಂಡವರು.

       ಅವರೊಂದಿಗಿನ ನನ್ನ ಅನುಭವಗಳು ಕವಿತೆ, ಕಥನ, ಅಂಕಣಗಳ ರೂಪದಲ್ಲಿ ಹಲವಾರು ಆಯಾಮಗಳಲ್ಲಿ ಪ್ರಕಟಗೊಂಡಿವೆ. ‘ಅಕ್ಕ’ ಎನ್ನುವ ನನ್ನ ಕವಿತೆ ಇರಬಹುದು, ಇತ್ತಿಚಿಗೆ ‘ಸಿಹಿಗಾಳಿ’ಯಲ್ಲಿ ಪ್ರಕಟಗೊಂಡ `ಪಾರಿಜಾತವೆಂದರೆ ಅವಳೇ’ ಎನ್ನುವ ನನ್ನ ಅಂಕಣವಿರಬಹುದು, ನನ್ನ ಬರಹಗಳಲ್ಲಿ ಆಗಾಗ ಬಂದು ಮಿಂಚಿ ಹೋಗುವ ಹಲವಾರು ಪಾತ್ರಗಳಿರಬಹುದು, ಪ್ರಕಟನೆಯ ಹಂತದಲ್ಲಿರುವ ನನ್ನ ‘ಈ ಸಾಕಿಯರ ಕೈ ಸೋಕಿ’ ಎನ್ನುವ 15 ಮಹಿಳೆಯರ ತುಡಿತದ ಬದುಕಿರಬಹುದು, ಇದೆಲ್ಲವೂ ನನ್ನ ದೊಡ್ದಪ್ಪ ಎನ್ನುವ ಜಂಗಮನ ಜೋಳಿಗೆಯಿಂದಲೇ ನಾನು ಆಯ್ದುಕೊಂಡ ಮುತ್ತುಗಳು. ಅವರೇ ಈ ಎಲ್ಲ ನಿವೇದನೆಗಳ ಮೂಲ ಸೆಲೆ. ಜಗದ ಲೆಕ್ಕಾಚಾರಗಳನ್ನು ಮುರಿದು ತನ್ನದೆ ಶೈಲಿ, ಗತ್ತು, ಗೈರತ್ತಿನಿಂದ ಬದುಕಿದ ನನ್ನ ದೊಡ್ದಪ್ಪ ಮೊಗೆದಷ್ಟು ಸಿಗುವ ಬತ್ತದ ಖಣಜ. ಹಾಡು, ಹೆಣ್ಣು, ಹೆಂಡ, ಕಲೆ ಎಲ್ಲವನ್ನು ಸಮನಾಗಿ  ಆರಾಧಿಸಿಕೊಂಡು ಬಂದ ಅವರಿಗೆ ಬೇಧ ಗೊತ್ತಿರಲಿಲ್ಲ. `ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಬದುಕಿದ್ದ ಅವರಿಗೆ ಅವರೇ ಸಾಟಿ. ಮಲ್ಲಯ್ಯಸ್ವಾಮಿ ಮಠಪತಿ ಈಗುಳಿದಿದ್ದ `ಶ್ರೀ ಕೃಷ್ಣ ಪಾರಿಜಾತ’ ಪರಂಪರೆಯ ಕೊನೆಯ ಕೊಂಡಿ. ಈಗ ಅದೂ ಕಳಚಿ ಬಿದ್ದಿತು. ಅಭಿಜಾತ ನಾನಿನ್ನೂ ಅವರೊಂದಿಗೆ ಸಾಕಷ್ಟು ಮಾತನಾಡುವುದಿತ್ತು, ಕೇಳುವುದಿತ್ತು, ಹೇಳುವುದಿತ್ತು, ಆದರೆ ನನ್ನ ಎಣಿಕೆಗೆ ಸಿಗದಂತೆ ಆ ಪಾತ್ರ ನನ್ನಿಂದ ಧಿಡಿರನೇ ಕಣ್ಮರೆಯಾಗಿಬಿಟ್ಟಿದೆ. ಎಷ್ಟೋ ಅಮೂಲ್ಯ ಅನುಭವಗಳಿಂದ ನಾನು ವಂಚಿತನಾಗಿಬಿಟ್ಟೆ ಎನ್ನುವ ದುಃಖ ನನ್ನನ್ನು ಕಾಡುತ್ತಿದೆ. ಈಗ ನಾನು ನನ್ನದೇ ಸಾಲುಗಳನ್ನು ಮತ್ತೇ ನೆನಪಿಸಿಕೊಳ್ಳುವಂತಾಗಿದೆ-
“ಯಾರು ಹೂವಿನ ಹಾಗೆ ಸೋಕಿ ಹೊದವರು
ಎದೆಯ ಬಟ್ಟಲ ತುಂಬಾ ಒಲವನೆರೆದವರು
  ಒಳಗೆ ದೀಪವನಿಟ್ಟು ಹೊರಗೆ ಹೋದವರು”

Wednesday, October 30, 2013

ಮುಲ್ಲಾ-ಮಠಪತಿ ಯಾವೂರಿಗೆ?

ಬಹುತೇಕ ಪದವಿಯ ಮುನ್ನಾ ದಿನಗಳು, ಮನೆಯೊಳಗೇನೊ ಒಂದು ಸುಳ್ಳು ಹೇಳಿ, ಗೆಳೆಯ ಬಸೀರ್‍ನೊಂದಿಗೆ ಊರು ಬಿಟ್ಟು ಓಡಿಬಿಟ್ಟಿದ್ದೆ. ಆಗಷ್ಟೆ ಮಾವನ ಹೊಟೇಲಿನಲ್ಲಿ ಗಲ್ಲೆಯ ಮೇಲೆ ಕುಳಿತುಕೊಳ್ಳುತ್ತಿದ್ದ ಆತನ ಜೇಬಿನ ತುಂಬಾ ದುಡ್ಡಿತ್ತು, ನನ್ನ ತಲೆ ತುಂಬಾ ಕನಸುಗಳಿದ್ದವು. ಇಬ್ಬರೂ ಹೊರಟು ಬಂದದ್ದು ಎಲ್ಲಿಗೆ? ಧಾರವಾಡಕ್ಕೆ. ಅಲ್ಲಿಂದ ಶಿರಹಟ್ಟಿಗೆ. ಅಲ್ಲಿ ಯಾರಿದ್ದರು? ಬಂಧು ಮಿತ್ರರೇನಾದರೂ ಇದ್ದರೇ? ಅದೇನು ಹೆಣ್ಣು-ಹೆಂಡದ ಅದ್ಧೂರಿಯ ಊರೇ? ಅಲ್ಲೇನು ಜಾತ್ರೆ ನಡೆದಿತ್ತೋ? ಯಾವುದು ಇಲ್ಲ. ಸಾಮಾನ್ಯವಾಗಿ ಬಾಲಕರನ್ನೋ, ಯುವಕರನ್ನೋ ಆಕರ್ಷಿಸಬಹುದಾದ ಯಾವ ಚಟುವಟಿಕೆಗಳೂ ಅಲ್ಲಿ ನಡೆದಿರಲಿಲ್ಲ. ಆದಾಗ್ಯೂ ನಾನು ಮಠಪತಿ, ಆತ ಮುಲ್ಲಾ, ಎಲ್ಲೋ ಹೊರಟಿದ್ದೀರಿ? ಎಂದು ಯಾರಾದರೂ ಕೇಳಿದ್ದರೇ ಖಂಡಿತವಾಗಿಯೂ ನಮ್ಮ ಬಳಿ ಯಾವ ಉತ್ತರವೂ ಇರಲಿಲ್ಲ. ಒಟ್ಟಾರೆ ಹೊರಟೆವು. ಇತ್ತ ಮಸೀದಿಯೂ ಅಲ್ಲದ, ಅತ್ತ ಮಠವೂ ಅಲ್ಲದ ಶಿರಹಟ್ಟಿಯ ಫಕೀರೆಶ್ವರನ ಸನ್ನಿಧಾನದಲ್ಲಿ ಎರಡು ದಿನ ಕಳೆದೆವು. ಆನಂತರ ಎರಡು ದಿನ ಧಾರವಾಡದಲ್ಲಿ. ಆಮೇಲೆ ಮರಳಿ ಊರಿಗೆ. ಹಾಗೆ ಅಂದು ಅರ್ಥಹೀನವಾಗಿ ತಿರುಗಾಡಿದ್ದ ಎರಡೂ ಊರುಗಳು ಇಂದು ನನ್ನ ಬದುಕಿನ ಅರ್ಥದ, ಆರ್ಥಿಕತೆಯ ತಾಣಗಳಾಗಿವೆ. ಧಾರವಾಡ ನನ್ನ ತಂದೆ-ತಾಯಿ, ತಮ್ಮ ಮತ್ತು ಸಾಹಿತ್ಯವನ್ನು ಕಾಪಿಟ್ಟ ನೆಲವಾದರೆ ಶಿರಹಟ್ಟಿ ನಾನು ಮತ್ತೆ ಮತ್ತೆ ಭೇಟ್ಟಿಕೊಟ್ಟ ಸ್ಥಳವಾಗಿದೆ.

        ಧಾರವಾಡ ನನ್ನೂರೇ ಆಗಿ ಹೋಗಿದೆ. ಶಿರಹಟ್ಟಿ, ಶಿಶುನಾಳ ಮತ್ತು ಸಂಶಿಗಳು ನನ್ನ ಪ್ರೀತಿಯ ಸೂಫಿಗಳ ದರ್ಶನದ ನೆಲವಾಗಿದೆ. 2000ದ ಇಸ್ವಿಯಲ್ಲಿ ನಾನು ಗುಳೇದಗುಡ್ಡದಲ್ಲಿ ಅರೆಕಾಲಿಕ ಉಪನ್ಯಾಸಕನಾಗಿದ್ದಾಗ, ನನ್ನೊಂದಿಗೇ ಇದ್ದ ಗೆಳೆಯ ಮಹಾಂತೇಶ ಭಜಂತ್ರಿಯನ್ನು ಪೂರ್ಣಪ್ರಮಾಣದ ಉಪನ್ಯಾಸಕನಾಗಿ ಶಿರಹಟ್ಟಿಯ ಎಫ್.ಎಂ.ಡಬಾಲಿ ಪದವಿಪೂರ್ವ ಕಾಲೇಜಿಗೆ ಉಪನ್ಯಾಸಕನಾಗಿ ನಾನು, ಹಿರಿಯ ಕವಿಮಿತ್ರ ಮಹಾದೇವ ಕಣವಿ ಹಾಗೂ ಶ್ರೀ ಆರ್.ಜಿ.ಕುಲಕರ್ಣಿ ಬಿಟ್ಟ ಬಂದ ನೆನಪು. 2003 ರಲ್ಲಿ ಮತ್ತೊಮ್ಮೆ ನನ್ನ ಸಂಸಾರಿಕ ಆರಂಭದ ದಿನಗಳಲ್ಲಿ ಇದೇ ಕಾಲೇಜಿಗೆ ಒಂದು ವಿಶೇಷ ಉಪನ್ಯಾಸ ನೀಡಲು ಹೋಗಿದ್ದ ನೆನಪು. ಈಗ ಸರಿಯಾಗಿ ಹತ್ತು ವರ್ಷಗಳ ನಂತರ ಮೂರನೆಯ ಬಾರಿ ಇಲ್ಲಿಗೆ ಹೋಗುವ ಸಂದರ್ಭ.
        ಊರು ಒಂದೇ ಆದರು ಸಂದರ್ಭಗಳು ಭಿನ್ನ ಭಿನ್ನ. ಬದುಕಿನ ನಲವತ್ತೆರಡನೆಯ ವರ್ಷದ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮರುದಿನವೇ (13/09/2013) ನಾನು ಮತ್ತೆ ಇದೇ ಕಾಲೇಜಿನ ಆವರಣದಲ್ಲಿ ಭಾಷಣ ಮಾಡಲು ನಿಂತುಕೊಂಡಿದ್ದೆ. ಉದ್ದೇಶ ಪೂರ್ವಕವಾಗಿ ಯತ್ನಿಸಿದರೂ ಸಾಧ್ಯವಾಗಲಾರದ ಸಂಯೋಜನೆ ಈ ಕಿರು ಕಾರ್ಯಕ್ರಮಕ್ಕೆ ಒದಗಿಬಂದಿತ್ತು. ಬಹುತೇಕ ಅತ್ಯಂತ ಎಳೆಯ ಗೆಳೆಯ, ತಂದೆ-ತಾಯಿ ನನ್ನೊಂದಿಗೆ ಹಂಚಿಕೊಂಡ ಮೊದಲ ವೇದಿಕೆ ಇದೇ ಆಗಿರಬಹುದು. ಎದುರುಗಡೆ ಹೆಂಡತಿ, ಮಗಳು ತರಂಗಿಣಿ ಹಾಗೂ ಬಾಲ್ಯದ ಆ ಹುಂಬುತನದ ಪ್ರವಾಸದಿಂದ ಇಂದಿನ ಹುಡುಕಾಟದ ಅಲೆಮಾರಿತನದವರೆಗಿನ ಎಷ್ಟೆಲ್ಲ ನೆನಪುಗಳು. ಈ ಕಾರ್ಯಕ್ರಮ ಖಂಡಿತವಾಗಿಯು ನನ್ನ ಬೌದ್ಧಿಕತೆಯ ಪ್ರದರ್ಶನವಾಗಿರಲಿಲ್ಲ ಬದಲಾಗಿ ನೆನಪುಗಳ ಕನವರಿಕೆ ಅಷ್ಟೆ.
 ಡಬಾಲಿ ಕಾಲೇಜಿನ ಪ್ರಾಚಾರ್ಯ ಎನ್.ಬಿ.ಕಲಾವಂತ, ಉಪನ್ಯಾಸಕರುಗಳಾದ ಶ್ರೀ ಎನ್.ಹನುಮರೆಡ್ಡಿ, ಪಂಗನ್ನವರ್ ಹಾಗೂ ಅಂದು ತಮ್ಮ ಸಾಧನೆಗಳಿಂದಾಗಿ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿ ವೃಂದ ನನ್ನ ಇಡೀ ಪಿ.ಯು.ಸಿ ದಿನಗಳನ್ನ ಅಲೆ ಅಲೆಯಾಗಿ ಕಣ್ಣು ಮುಂದೆ ಹರಿಯುವಂತೆ ಮಾಡಿದವು. ಕವಿಯೊಬ್ಬನ ಬದುಕಿನ ಸಾರ್ಥಕಗಳಿಗೆ ಅವನ ಕವಿತೆ ಯಾರದೋ ಕಂಠದಿಂದ ಹಾಡಾಗಿ ಹೊರ ಚಿಮ್ಮಿದಾಗ. ಈ ಸಮಾರಂಭ ಅದಕ್ಕೂ ಸಾಕ್ಷಿಯಾಯಿತು. ಇಲ್ಲಿ ನನ್ನ ಹಾಡು -                                                                                                                                     ನನ್ನೂರು ಧಾರವಾಡ
                                                                    ನನ್ನ ಹಿಂಗ್ ಕಾಡಬ್ಯಾಡ
                                                        ಹಾಡಲ್ಪಟ್ಟಿತು.