Total Pageviews

Wednesday, April 30, 2014

ಕೃಷ್ಣೆ, ನಾನು ಮತ್ತು ಅಂಬೇಡ್ಕರ್



     ದಿನಾಂಕ 14 ಏಪ್ರಿಲ್ 2014 ರಂದು ನನ್ನ ಕೇಳುಗರು ಜಮಖಂಡಿಯ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು. 2003 ರಿಂದ 2014 ವರೆಗಿನ 11  ವರ್ಷದ ಅವಧಿಯಲ್ಲಿ ಈ ಕಾಲೇಜಿಗೆ ಬಹುತೇಕ ಎರಡನೆಯ ಭೇಟ್ಟಿ. ಈ ಎರಡು ಸಂದರ್ಭಗಳಿಗೆ ಕಾರಣ ವ್ಯಕ್ತಿ ಹಾಗೂ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಗೆಳೆಯ ವಿಠ್ಠಲ್ ದಳವಾಯಿ. ನನ್ನ ಸಾಹಿತ್ಯ ಸೃಷ್ಠಿಯ ಹಲವು ಹಂತಗಳ ಪ್ರೀತಿಯ ಉದ್ಧರಣೆ. ಈತನ ಕಾರಣಕ್ಕಾಗಿಯೇ ನನ್ನ ‘ಅವಳು ಎನ್ನುವ ಅಪಾರ್ಥ’ ಸೃಷ್ಠಿಯಾಯಿತು. ಈತ ಅಪರೂಪಕ್ಕೊಮ್ಮೊಮ್ಮೆ ಕುಳಿತು ಗುಂಡು ಹಾಕಿದಂತೆ ನನ್ನ ಸಾಹಿತ್ಯಕ್ಕೂ ನೀರೆರೆದಿದ್ದಾನೆ, ಬೆಳೆಸಿದ್ದಾನೆ, ಬೆಳೆದ ಮರವನ್ನು ಕಂಡು ಹೆಮ್ಮೆ ಪಟ್ಟಿದ್ದಾನೆ. ನನ್ನನ್ನು ಅಲೆಮಾರಿಯಾಗಿಸಿ ತಾನು ಮಾತ್ರ ಕೃಷ್ಣಾ ನದಿ ತೀರದ ಜಮಖಂಡಿ ಮತ್ತು ಟಕ್ಕಳಕಿಯ ಮಧ್ಯ ಕೃಷ್ಣಸುಧೆಯನ್ನು ಅನುಭವಿಸುತ್ತಾ ಅಮರನಾಗಿದ್ದಾನೆ.

        ಹಿಂದಿನ ಸಾರಿ ಇಲ್ಲಿ ಬಂದಾಗ ನನ್ನ ಕೈಯಲ್ಲಿ ರಜನೀಶ್(Rajanisha, OSho) ಇದ್ದರೆ, ಈ ಸಾರಿ ನನ್ನೊಂದಿಗೆ ಬಂದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್(Dr. Ambedkar). 2009 ಕ್ಕೆ ಬೇಲೂರಿಗೆ ಬಂದ ನಾನು ನಿರಂತರ ಮೂರು ವರ್ಷ ಅಂದರೆ 2012 ವರೆಗೆ ನಾನು ಮತ್ತೆ ಮತ್ತೆ ಸಾರ್ವಜನಿಕವಾಗಿ ಕುರಿತು ಮಾತನಾಡಿದ, ಚರ್ಚಿಸಿದ ಚಿಂತಕ ಯಾರದರು ಇದ್ದರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಒಂದು ಜನಾಂಗದ ಆಮೂಲಾಗ್ರ ಅಭಿವೃದ್ಧಿಗೆ ಕಾರಣವಾದ ಒಬ್ಬ ವ್ಯಕ್ತಿಯಾಗಿ ಅವರು ನನ್ನನ್ನು ಕಾಡಿದುದರಕ್ಕಿಂತಲೂ ಹೆಚ್ಚಾಗಿ ಓರ್ವ ಇತಿಹಾಸ ತಜ್ಞನಾಗಿ, ಸಮಾಜ ಶಾಸ್ತ್ರಜ್ಞನಾಗಿ ಹಾಗೂ ಮಾನವ ಥಳಿಶಾಸ್ತ್ರದ ವಿಜ್ಞಾನಿಯಾಗಿ ಕಾಡುವ ರೀತಿ ಅನನ್ಯವಾದುದು. ಭಾರತೀಯ ಎಲ್ಲ ಸಾಮಾಜಿಕ ಸುಧಾರಕರಿಂದ ಅಂಬೇಡ್ಕರ್ ಭಿನ್ನವಾಗಿ ನಿಲ್ಲುವುದು ಈ ಸಮಾಜದ ನ್ಯೂನ್ಯತೆಯನ್ನು ಹುಡುಕುವುದರಲ್ಲಿ. ಉದಾಹರಣೆಗೆ ಜಾತಿ ಪದ್ಧತಿಯ ಮೂಲವನ್ನು ಹುಡುಕುತ್ತ ಹೋಗಿ ಅವರು ಹೇಳುವ ಈ ಸಾಲುಗಳನ್ನು ಓದಿ “ People are not in observing Caste. In my view, what is wrong is their religion, which has inculcated this notion of Caste. If this is correct, then obviously the enemy, you must grapple with, is not the people who observe Caste, but the Shastras which teach them this religon of Caste. ” 1936 ರಲ್ಲಿ ಇಂದಿನ ಪಾಕಿಸ್ತಾನದ ಲಾಹೋರ್‍ನಲ್ಲಿ ಜಾತಪಥ್ ತೋಡಕ್ ಮಂಡಳಿಯನ್ನು ಉದ್ಧೇಷಿಸಿ ಅವರು ಮಾಡಿದ ಈ ಭಾಷಣದಲ್ಲಿ ಇಂಥ ಒಬ್ಬ ಸಮ ದೃಷ್ಠಿಯ, ನಿರ್ವಿಕಾರದ ಹಾಗೂ ನ್ಯಾಯ ಪರವಾದ ಚಿಂತಕನನ್ನು ನಾನು ನೋಡಿದ್ದೇನೆ. ‘ಅನಿಹಿಲೇಶನ್ ಆಪ್ ಕಾಸ್ಟ್’ ಎಂಬ ಶಿರ್ಷಿಕೆಯ ಅವರ ಈ ಬರಹ ನನ್ನ ಪಾಲಿನ ಕಾವ್ಯವೇ ಆಗಿದೆ. ಜಮಖಂಡಿಯ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಅಂಬೇಡ್ಕರ್ ಜಯಂತಿಯ ಈ ದಿನ ನನ್ನಿಂದ ಮಾತನಾಡಿಸಿದ್ದು ಸುಮಾರು ಒಂದುವರೆ ಗಂಟೆ. ಅಪರೂಪಕ್ಕೆ ಇಂಥ ಸಹನೆಯ ವೇದಿಕೆಗಳು ನಮಗೆ ಸಿಗುತ್ತವೆ.

        ಕಾರ್ಯಕ್ರಮದ ಎರಡನೆಯ ಭಾಗ ಇದೇ ಕಾಲೇಜಿನ ಇಂಗ್ಲೀಷ್ ವಿಭಾಗಕ್ಕೆ ಸಂಬಂಧಿಸಿದ್ದು. ‘ಮೀಟ್ ದಿ ಆಥರ್’ ಯೋಜನೆಯಡಿ ನನ್ನ ಮೊದಲ ಉಪನ್ಯಾಸ ಕಾವ್ಯವನ್ನು ಕುರಿತು. ಅದಕ್ಕೊಂದು ವಿಶೇಷ ಶಿರ್ಷಿಕೆ ‘My Poetry My Life’. ಇತ್ತೀಚಿಗಷ್ಟೆ ಬಂದ ನನ್ನ ಕಾವ್ಯ ಸಂಕಲನ ‘ಇರುವಷ್ಟು ಕಾಲ, ಇರುವಷ್ಟೇ ಕಾಲ’ ಮುಂದಿಟ್ಟುಕೊಂಡು ಸುಮಾರು ಒಂದು ಗಂಟೆಯ ಮಾತು, ಚರ್ಚೆ ಮತ್ತು ಕಾವ್ಯ ಕಟ್ಟುವ ಪ್ರಯತ್ನಗಳು ಇಲ್ಲಿ ನಡೆದವು. ನಾನು ಹೇಳಿದೆ: ತುಂಡು ತುಂಡುಗಳ ಮಧ್ಯದ ಬೆಸುಗೆಯಿಂದ ಹುಟ್ಟುವ ಈ ಕೌದಿ ಮಾತ್ರ ಬರೀ ತುಂಡಲ್ಲ. ಅದು ಅಖಂಡ. ಅದು ಅಪೂರ್ಣವಲ್ಲ. ಪೂರ್ಣ-ಸಂಪೂರ್ಣ. ಅದಕ್ಕೆ ಹೇಳಿದೆ ಕೌದಿ ಕವಿತೆಯಂತೆ ಅಥವಾ ಕವಿತೆ ಕೌದಿಯಂತೆ ಹೇಗಾದರೂ ಅಂದುಕೊಳ್ಳಿ. ಕವಿತೆ ಹುಟ್ಟಿಕೊಳ್ಳುವುದು ಕೌದಿಯಂತೆಯೆ. ಮುಂದೊಮ್ಮೆ ಸಿದ್ಧವಾಗಬಹುದಾದ ಕೌದಿಗಾಗಿ ಸಂಗ್ರಹವಾಗುವ ಬಣ್ಣ ಬಣ್ಣದ ಬಟ್ಟೆಯ ತುಂಡುಗಳು ಸಂಗ್ರಹವಾಗುವಂತೆಯೇ ಕಾವ್ಯದ ಸಾಮಗ್ರಿಯೂ ಹಲವು ಕಾಡುವ ನೆನಪು, ಸಂವೇದನೆ, ಘಾಯ, ರಮಿಸುವಿಕೆ, ಅಚ್ಛರಿ, ಆಲೋಚನೆ ಹೀಗೆ ಏನೆಲ್ಲ ಸ್ವರೂಪದಲ್ಲಿ ನಮ್ಮಲ್ಲಿ ಸಂಗ್ರಹವಾಗತೊಡಗುತ್ತವೆ. ಒಂದೊಮ್ಮೆ ಕವಿತೆಯಂತೆ ಸಂಪೂರ್ಣವಾಗಿ ಹೊರಬಂದು ಬಿಡುತ್ತದೆ. ಹೀಗೆ ಹುಟ್ಟಿಕೊಂಡದ್ದು ನನ್ನ ‘ಇರುವಷ್ಟು ಕಾಲ... ಇರುವಷ್ಟೇ ಕಾಲ!’.  ಹಾಗೆಯೇ ಕಾವ್ಯವೆನ್ನುವುದು ನನ್ನ ಪಾಲಿಗೆ ಸಖಿಯಂತೆ. ಎಲ್ಲ ಸಂದರ್ಭದಲ್ಲಿಯೂ ಸಿದ್ಧಳಿರುವ ಇವಳನ್ನು ಆರಾಧಿಸುವುದೇ ಅಭಿಮಾನದ ಸಂಗತಿ.


        ಗೆಳೆಯ ವಿಠ್ಠಲನ ಮನೆಯ ಊಟ, ಕೃಷ್ಣೆಯಂತೆ ಮೈದುಂಬಿ ನಿಂತ ಮಗಳು ಕಿರಣಮಯಿ. ಅಲ್ಲಿಂದ ಬಿಜಾಪುರದ ರೈಲು ನಿಲ್ದಾಣದವರೆಗೆ ಸಾಕು ಸಾಕೆನಿಸುವಷ್ಟು ಕಾರಿನಲ್ಲಿ ಹರಟೆ ಹೊಡೆಯಲು ಎಳೆಯ ಗೆಳೆಯ ಫಯಾಜ್, ರಾತ್ರಿಗೆ ಗೆಳೆಯನ ಮನೆಯಿಂದ ತಂದ ರೊಟ್ಟಿಯ ಬುತ್ತಿ, ಮತ್ತೆ ಮಧ್ಯದಲ್ಲಿ ಬಾಗಲಕೋಟೆಯ ಬಜಿ. ಇದಕ್ಕೇ ಹೇಳುವುದು ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’. ಪ್ರೀತಿಯ ವರತೆ ಇಲ್ಲದ ಯಾವುದೇ ಬೌದ್ಧಿಕ ಮತ್ತು ಭಾವನಾತ್ಮಕ ಚಟುವಟಿಕೆ ಹೆಣದ ಮುಂದಿನ ಅಳುವಿನಂತಿರುತ್ತದೆ.

Sunday, March 9, 2014

ಕನ್ನಡದ ದೈವ, ಸಂಭ್ರಮ ಮತ್ತು ಜಾತ್ರೆ

“ಜಂಬುಖಂಡೆಯ ಎಪ್ಪತ್ತರ ಸೀಮೆಯ ಮುಧವಳಲು ರನ್ನನ ಜನ್ಮಸ್ಥಳ.” 

“ಕೊಂಡು ತಂದು, ಹೊತ್ತು ಮಾರಿ ಹಣ ಗಳಿಸಲು ವಿದ್ಯೆಯೇನು ಬಳೆಯ ಮಾಲಾರವೆ?”
       ಇವು ರನ್ನನನ್ನು ಕುರಿತು ನಾನು ಐದನೆಯ ಇಯತ್ತೆಯಲ್ಲಿದ್ದಾಗ ಓದಿದ ಸಾಲುಗಳು. ಒಂದು ಸಾಕ್ಷಿಗಲ್ಲಿನಂತೆ ನಿಂತ ರನ್ನನ ಜನ್ಮಸ್ಥಳವಾದ ಈ ಮುಧೋಳನ್ನು ಬಳಸಿಕೊಂಡೇ ನನ್ನ ನಾಲ್ಕುವರೆ ದಶಕಗಳ ಬಾಳನ್ನು ಕಳೆದಿದ್ದೇನೆ.ಇಲ್ಲಿ ನಿಂತು ಮಾತನಾಡುತ್ತಿರುವುದು, ಅದು ಸಾರ್ವಜನಿಕವಾಗಿ ಮಾತನಾಡುತ್ತಿರುವುದು, ಸಾಹಿತ್ಯದೊಂದಿಗೆ ಸಂವಾದಿಸುತ್ತಿರುವುದು ಇದೇ ಮೊದಲ ಬಾರಿ. ಕೆಲವು ತಿಂಗಳಗಳ ಹಿಂದಷ್ಟೆ ನನ್ನ ತಮ್ಮನಾದ ಪೈಲವಾನ್ ರತ್ನಕುಮಾರ ಮಠಪತಿ ಮುಧೋಳದ ವಿಶಾಲ ರನ್ನ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟಕನಾಗಿ ಪಾಲ್ಗೊಂಡರೆ, ಇಂದು ನಾನು ಪಾಲ್ಗೊಂಡಿರುವುದು ಸಾಹಿತಿಯಾಗಿ. ಜಾಗತೀಕರಣ ಮತ್ತು ಕನ್ನಡದ ಅಸ್ಮಿತೆ ಇದು ನನ್ನ ಈ ದಿನದ ಭಾಷಣದ ವಿಷಯ. ಅಂದಹಾಗೆ ಅದು ಫೆಬ್ರುವರಿ 23, 2014.
  ಮುಂಜಾನೆ ಮುಧೋಳದಲ್ಲಿ ಕಾಲಿಟ್ಟಾಗ  ಮೊದಲ ಫೋನ್ ನನ್ನ ಪ್ರೀತಿಯ ಕವಿ, ಶಂಕರ ಕಟಗಿಯವರದು. ಅವರು ನನ್ನ ಪಾಲಿಗೆ ಸಂಪಿಗೆ ತಾಯವ್ವ, ಗಣಿಯ ನಾದ, ದಟ್ಟಿದಾವಣಿ ಎಲ್ಲವೂ. ಮೊದಲ ಅಪ್ಪುಗೆ ಗೆಳೆಯ ಪ್ರಕಾಶ ಖಾಡೆಯವರದು. ಮೊದಲ ಸ್ವಾಗತ ಡಾ. ವಿಜಯಕುಮಾರ ಕಟಗೀಹಳ್ಳಿಮಠ ಅವರದು. ಬಸ್ಸ್‍ಸ್ಟ್ಯಾಂಡಿನಿಂದ ನೇರ ಖಾಡೆಯವರ ಮನೆಗೆ. ಅಲ್ಲೊಂದು ಜನಪದ ಜೀವ. ಆ ಮನೆ ಯೇ ಜನಪದ. ಗೆಳೆಯ ಪ್ರಕಾಶ ಖಾಡೆಯವರ ತಂದೆ. ಕನ್ನಡದ ಅಪರೂಪದ ಜನಪದ ವಿದ್ವಾಂಸ. ನನ್ನ ಹತ್ತಿರವಿದ್ದದ್ದು ಕೇವಲ ಒಂದು ಗಂಟೆಯ ಸಮಯ. ಆ ಸಮಯವೆಲ್ಲವು ಸಾಹಿತ್ಯದ ಸಂಸಾರಕ್ಕೇ ಮೀಸಲು.
       ಮನೆಯಿಂದ ನೇರ ಮುಧೋಳದ ರನ್ನ ಕ್ರೀಡಾಂಗಣಕ್ಕೆ. ಕನ್ನಡದ ಅಸ್ಮಿತೆಯ ಪ್ರಶ್ನೆಯನ್ನು  ನಾನು ಎತ್ತ ಬೇಕಾದುದೇ ಈ ಗಂಡು ಮೆಟ್ಟಿನ ನೆಲದಲ್ಲಿ. ಅದು ಬಾಗಲಕೋಟ ಜಿಲ್ಲೆಯ 4 ನೇ ಕನ್ನಡ ಸಾಹಿತ್ಯ ಸಮ್ಮೇಳನ. ಸಭೆಯಲ್ಲಿರುವವರೆಲ್ಲರೂ ಸಾಹಿತ್ತಿಕ ದಿಗ್ಗಜರುಗಳೆ. ವೇದಿಕೆಯ ಮುಂದೆ ಡಾ. ಪ್ರಕಾಶ ಖಾಡೆ, ತಿಮ್ಮಾಪುರ, ಮಲ್ಲಿಕಾರ್ಜುನ ಹಿರೇಮಠ, ಹುಲಗಬಾಳಿ, ಕಿಟ್ಟಣ್ಣವರ, ಕೊನೆಸಾಗರ, ವೆಂಕಟಗಿರಿ ದಳವಾಯಿ, ವಾಸಣ್ಣ ದೇಸಾಯಿ, ಮಲ್ಲಿಕಾರ್ಜುನ ಬನ್ನಿ, ಸಿದ್ಧರಾಜ ಪೂಜಾರಿ ಹೀಗೆ ದಂಡು ದಂಡಾಗಿ ಸಾಹಿತಿಗಳು. ನನ್ನೊಂದಿಗೆ ವೇದಿಕೆಯ ಮೇಲೆ ಶ್ರೀ ನಿರುಪಾದಿಶ್ವರರು. ಅದೊಂದು ಅಮೋಘ ಘಳಿಗೆ. ಕೇವಲ ಮೂರು ಗಂಟೆಯ ಉತ್ತರ ಕರ್ನಾಟಕದ ಈ ಭೇಟಿಗೆ ನಾನು ಕಳೆದದ್ದು  ಬರೋಬ್ಬರಿ 16 ಗಂಟೆಗಳ ಪ್ರಯಾಣದ ಸಮಯವನ್ನು. ಮಾತನಾಡಿದ್ದು ಕೇವಲ 45 ನಿಮಿಷಗಳು. ಆದರೆ ಸೇರಿದ ದೈವ, ಅದು ಕನ್ನಡದ ದೈವ, ಕನ್ನಡದ ಸಭ್ರಮ, ಕನ್ನಡಿಗರ ಜಾತ್ರೆ.

Saturday, March 8, 2014

ಸ್ನೇಹಕ್ಕೆ ತಲೆಬಾಗಿ



     ಒಂದು ಪ್ರೀತಿಯ ಕರೆಯನ್ನು ಎಷ್ಟು ದಿನ ನಿರಾಕರಿಸಬಹುದು? ಅಥವಾ ಅದೆಷ್ಟು ದಿನ ಮುಂದುಡಬಹುದು? ಹಾಗೆ ಮಾಡಲಾಗದ ಒಂದು ಕೋರಿಕೆ ಗೆಳೆಯ ಡಾ. ವಿರೇಶ ಬಡಿಗೇರನಿಂದ. ದಿನಾಂಕ 05/02/2014 ರಂದು ಜೆ.ಎಸ್.ಎಸ್ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಡಾ. ವಿರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರ, ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಹತ್ತನೆಯ ಹಸ್ತಪ್ರತಿ ಸಮ್ಮೇಳನಕ್ಕೆ ಈ ಗೆಳೆಯನಿಂದ ಪ್ರೀತಿಯ ಆಹ್ವಾನ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕ್ರಮಗಳನ್ನು ಜನ ಮುಖಿಯಾಗಿಸಿದ  ಒಬ್ಬ ಅಪರೂಪದ ಸಂಘಟಿಕ ಈ ನನ್ನ ಗೆಳೆಯ. ನನ್ನ ಸೃಜನಶೀಲ ಬದುಕಿನ ಅಪರೂಪದ ಸಂಗಾತಿ. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಉಪನ್ಯಾಸಕರುಗಳಿಗೆ ಇರುವ ಸಂಕುಚಿತತೆ ಮತ್ತು ಸೋಗಲಾಡಿತನಗಳನ್ನು ಮೀರಿದ ಮನುಷ್ಯ. ಸೌಜನ್ಯ, ಪ್ರೀತಿ ಮತ್ತು ಸ್ನೇಹಕ್ಕೆ ಇನ್ನೊಂದು ಹೆಸರು ಗೆಳೆಯ ವಿರೇಶ ಬಡಿಗೇರ. ಇಂಥ ಗೆಳೆಯನ ಕರೆಗೆ ಓಗೊಟ್ಟು ಈ ಸಾರಿ ಅವರು ಆಯೋಜಿಸಿದ್ದ ಹಸ್ತಪ್ರತಿ ಸಮ್ಮೇಳನದ ಒಂದು ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ನಾನು ಧಾರವಾಡಕ್ಕೆ ಹೋದೆ. ಇದು ಚಂದ್ರಶೇಖರ ಕಂಬಾರರ ಸಮ್ಮುಖದಲ್ಲಿ ನಡೆದ ಎರಡು ದಿನಗಳ ಅಪರೂಪದ ಸಮ್ಮೇಳನವಾಗಿರುವಂತೆಯೇ, ಅವರೊಂದಿಗೆ ಕೆಲವು ಕ್ಷಣಗಳನ್ನು ಹಂಚಿಕೊಳ್ಳುವ ನನ್ನ ಪಾಲಿನ ಎರಡನೆಯ ಸಂದರ್ಭವೂ ಆಗಿತ್ತು.


       ಇನ್ನೊಂದು ಕಾರಣಕ್ಕಾಗಿಯೂ ಇದು ನನಗೆ ಅಪರೂಪದ ಕ್ಷಣವೆ. ಪಠ್ಯ ಮತ್ತು ಲಿಂಗ ಸಂಬಂಧಿ ನೆಲೆಗಳನ್ನಿಟ್ಟುಕೊಂಡು ಮಾತನಾಡಿದ ನನ್ನೊಂದಿಗೆ, ವೇದಿಕೆಯಲ್ಲಿದ್ದವರು ನನ್ನ ಒಂದು ಕಾಲದ ಮೈಸೂರಿನ ಆಶ್ರಯದಾತ ಪ್ರೊ. ಕಿಕ್ಕೇರಿ ನಾರಾಯಣ, ಅವರದೇ ಅಧ್ಯಕ್ಷತೆ. ನನ್ನೊಂದಿಗೆ ಸಹ ಸಂಪನ್ಮೂಲ ವ್ಯಕ್ತಿಗಳಾಗಿದ್ದವರು ಡಾ. ಮಲ್ಲಿಕಾರ್ಜುನ ಮೇಟಿ, ಡಾ. ಕೇಶವಶರ್ಮಾ ಮತ್ತು ಡಾ. ನಟರಾಜ ಬೂದಾಳು. ನಟ ಶ್ರೀಧರ, ನನ್ನ ತಂದೆ ಜಿ.ಜಿ.ಮಠಪತಿ ಹಾಗೂ ಧಾರವಾಡದ ನನ್ನ ಅಪಾರ ಸಾಹಿತ್ಯ ಮಿತ್ರರು ಈ ಕಾರ್ಯಕ್ರಮದಲ್ಲಿದ್ದುದು ನನ್ನ ಬದುಕಿನ ಅಪರೂಪದ ಕ್ಷಣಗಳಲ್ಲಿ ಒಂದು.

Thursday, March 6, 2014

ನಿಂದೆ ನಿರ್ನಾಮಕಾರಿಯೇ ವಿನಹ ನಿರ್ಮಾಣಕಾರಿಯಲ್ಲ

  ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೇಲೂರು ಮತ್ತು ಡಾ. ಎನ್.ರಾಮರೆಡ್ಡಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಬೇಲೂರು ಕೃಷ್ಣಮೂರ್ತಿಯವರ ನೂರು ನಾಟಕಗಳ ಹತ್ತು ಸಂಪುಟಗಳ ಲೋಕಾರ್ಪಣೆ ಸಮಾರಂಭ ಚನ್ನಕೇಶವೇಗೌಡ ಕಲ್ಯಾಣ ಮಂಟಪ ಬೇಲೂರಿನಲ್ಲಿ ದಿನಾಂಕ 18/01/2014 ರಂದು ಜರುಗಿತು. ವೇದಿಕೆಯಲ್ಲಿ ನನ್ನೊಂದಿಗಿದ್ದವರು ಬೇಲೂರಿನ ಶಾಸಕರಾದ ಶ್ರೀ ವೈ.ಎನ್.ರುದ್ರೇಶಗೌಡ, ಪ್ರಕಾಶಕ ಮಿತ್ರ ಮಾನಸ, ಶ್ರೀ ಕವಿತಾ ಕೃಷ್ಣ, ಶ್ರೀ ಎಚ್.ಎಂ.ದಯಾನಂದ ಹಾಗೂ ಸನ್ಮಿತ್ರ ಪ್ರೊ. ಜಯಣ್ಣಗೌಡ.
      ಕೆಲವು ಸಭಾ ಮರ್ಯಾದೆ ಮತ್ತು ರೀತಿ ನೀತಿಗಳನ್ನು ಪಾಲಿಸದೇ ಇರುವದಕ್ಕಾಗಿ 14/04/2012 ರಿಂದ ಸ್ಥಳೀಯ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಿದ್ದೆ. ಆದರೆ ಬೇಲೂರು ಕೃಷ್ಣಮೂರ್ತಿಯವರ ಕಾರಣಕ್ಕಾಗಿ, ಅವರ ನಿರಂತರ ಜೀವನೋತ್ಸಾಹಕ್ಕಾಗಿ ಈ ವೇದಿಕೆಯಲ್ಲಿ ಪಾಲ್ಗೋಳ್ಳಬೇಕಾಯಿತು. 95 ರ ಅಂಚಿನಲ್ಲಿ ಕುಳಿತು ಬರೆದ ಖುಷ್‍ವಂತ ಸಿಂಗ್‍ನ ಆತ್ಮಕತೆಯ ಈ ಸಾಲುಗಳಿಂದ 85 ರ ಬೆ.ಕೃ(ಬೇಲೂರು ಕೃಷ್ಣಮೂರ್ತಿ) ಅವರ ಈ ಸಮಾರಂಭದ ಪ್ರಾಸ್ತಾವಿಕ ನುಡಿಗಳನ್ನು ನಾನು ಪ್ರಾರಂಭಿಸಿದೆ. ವ್ಯಕ್ತಿಯ ವರ್ತಮಾನದ ಜೊತೆ ಜೊತೆಗೆಯೇ ಆತನ ಇತಿಹಾಸ ರೂಪಗೊಳ್ಳುತ್ತಿರುತ್ತದೆ. ಈ ಪ್ರಜ್ಞೆ ಇರುವ ವ್ಯಕ್ತಿಯಲ್ಲಿ ಅನ್ಯ ಆಲೋಚಗಳಿಗೆ ಅವಕಾಶವಿರುವುದಿಲ್ಲ. ‘ನಿಂದೆ ನಿರ್ನಾಮಕಾರಿಯೇ ವಿನಹ ನಿರ್ಮಾಣಕಾರಿಯಲ್ಲ’ ಎನ್ನುವುದನ್ನು ತಿಳಿದ ಇಂಥವರು ಅಂಥರ್ಮುಖಿಗಳಾಗಿರುತ್ತಾರೆ. ಕವಿ ಕೀಟ್ಸ್, ಶರೀಫ್, ವೈಕುಂಠ ದಾಸರೆಲ್ಲರೂ ಇಂಥ ಅಂಥರ್ಮುಖಿಗಳೆ. ಸರ್ಪಭೂಷಣ ಶಿವಯೋಗಿ ಹೇಳುವಂತೆ-
‘ಜನಮೆಚ್ಚಿ ನಡಕೊಂಡರೇನುಂಟು ಲೋಕದಿ,
 ಮನಮೆಚ್ಚಿ ನಡಕೊಂಬುವುದೇ ಚಂದವು,
 ಜನರೇನು ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲ’ ಆತ್ಮರತಿ, ಮೆರವಣಿಗೆ ಮತ್ತು ಜನ್ಮದಿನೋತ್ಸವಗಳ ಮೋಹದಿಂದ ಹೊರಬಂದುದಾದರೆ ಕೃಷ್ಣಮೂರ್ತಿಯವರಿಗೂ ಒಂದು ಅರ್ಥಪೂರ್ಣ ಅಸ್ಥಿತ್ವವಿದೆ. ಅವರ ಸಾಹಿತ್ಯಕ್ಕೆ ಕಾಲಾತೀತ ಗೌರವವಿದೆ ಎನ್ನುವುದು ಇಂದಿನ ನನ್ನ ವಾದವಾಗಿತ್ತು.
       ಹಲವು ಹಂಗುಗಳಿಂದ ಹೊರಬಿದ್ದಿರುವ ಬೆ.ಕೃ ಅವರ ಬದುಕು ಖುಷ್‍ವಂತ್ ಸಿಂಗನ ಆತ್ಮಕಥೆಯ ಎರಡು ಉಲ್ಲೇಖಗಳನ್ನು ನಾನಿಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದೆ. ಮೊದಲನೆಯದು ಅವರ ಶಿಸ್ತು ಮತ್ತು ಸಮಯ ಪ್ರಜ್ಞೆ  ಕುರಿತಾಗಿ “You have only one life so make the best use of it. Don’t waste time, for time is worship and not a minute should be wasted” ಬೆ.ಕೃ ನೂರು ನಾಟಕಗಳನ್ನು ಬರೆದರು ಎನ್ನುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವರು ಒಂದು ಕ್ಷಣ ಸಮಯವನ್ನು ಹಾಳುಮಾಡದೆ ಬದುಕಿದರು ಎನ್ನುವುದು. ಎರಡನೆಯದಾಗಿ ದೇವರು ಮತ್ತು ದೈವದ ಭಯಗಳಿಂದ ಮುಕ್ತರಾಗಿ ಬದುಕಿದರು ಎನ್ನುವುದು. ನಿಧನದ ನಂತರ ತಮ್ಮ ಶರೀರವನ್ನು ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಗೆ ದಾನವಾಗಿ ಕೊಟ್ಟಿರುವ ಕೃಷ್ಣಮೂರ್ತಿ ಈ ಕಾರಣಕ್ಕಾಗಿಯೂ ನಮಗೆ ಅವರು ಆದರ್ಶವಾಗಲೇ ಬೇಕು. ಖುಷ್‍ವಂತನ ಈ ಸಾಲುಗಳನ್ನು ಓದಿ-
“Here lies one who spared neither man nor God, waste not tears on him” ಇದೇ ದಾರಿಯಲ್ಲಿದ್ದಾರಿ ನಮ್ಮ ಬೇಲೂರು ಕೃಷ್ಣಮೂರ್ತಿಯವರೂ ಕೂಡ.

Thursday, January 23, 2014

ಹಡಬಡಿಸಿ ಎದ್ದೆ, ಇನ್ನೆಲ್ಲಿಯ ನಿದ್ದೆ

        ನನ್ನ ಬದುಕಿನ ಒಟ್ಟು ವ್ಯಾಪ್ತಿಯಲ್ಲಿ ಅತ್ಯಂತ ವೇಗದಿಂದ ಉರುಳಿಹೋದ ವರ್ಷ 2013. ವರ್ಷದ ತುಂಬೆಲ್ಲವೂ ವಿಚಿತ್ರವಾದ ಏರಿಳಿತಗಳು. ಸೋಲು-ಗೆಲುವು, ಮಾನ-ಅಪಮಾನ, ಒಳಿತು-ಕೆಡಕು, ಸರಿ-ತಪ್ಪು ಹೀಗೆ ಯಾವುದೇ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡದೆ ನಿರಂತರ ಒತ್ತಡದಿಂದ ನನ್ನನ್ನು ಹಣಿಹಾಕಿ ಹೈರಾಣಾಗಿಸಿದ ವರ್ಷ. ಇಷ್ಟೊಂದು ಸಂಕೀರ್ಣವಾದ ವರ್ಷವನ್ನು ಬದುಕಿನಲ್ಲಿ ನಾನು ಈ ಹಿಂದೆಂದೂ ಎದುರಿಸಲೇ ಇಲ್ಲ. ಆಗೆಲ್ಲವೂ ನಾನು ನನ್ನ ‘ಇರುವಷ್ಟು ಕಾಲ’ ಕಾವ್ಯ ಸಂಕಲನದಲ್ಲಿ ವ್ಯಕ್ತಗೊಂಡ ಭಾವದ ಸೂತ್ರ ಹಿಡಿದುಕೊಂಡು, ಜೀವ ಗಟ್ಟಿಯಾಗಿ ಹಿಡಿದುಕೊಂಡು ಜೀವನದಿಯಲ್ಲಿ ಕೊರಡಿನಂತೆ ಬಿದ್ದುಕೊಂಡವನು. ಸಾವು ಮತ್ತು ಸಮಯ ನನ್ನ ನಿರಂತರ ಶೋಧಗಳು. ಈ ಶೋಧದಲ್ಲಿ ಮುಳುಗಿದಷ್ಟೂ ಸಾಂಗತ್ಯ, ಸಂಸಾರ, ಸ್ನೇಹ ಕೆಲವೊಮ್ಮೆ ಶೂನ್ಯವೂ ಕೂಡ ನನಗೆ ವಿಚಿತ್ರವಾಗಿ ಕಂಡಿದೆ. ನಾನು ನೋವಿನಿಂದ ಅಯ್ಯೋ ಎಂದು ಅರಚುವಾಗ ಪಕ್ಕದಲ್ಲಿದ್ದೂ ದಕ್ಕದವರನ್ನು ನೋಡಿದ್ದೇನೆ. ಹಿಂದಿನ ಯಾವುದೋ ಒಂದು ಭೇಟ್ಟಿಗೆ ನೆನಪಿಟ್ಟುಕೊಂಡು ತಾವು ನಂಬಿದ ದೈವದ ಮುಂದೆ ನನಗಾಗಿಯೂ ಒಂದು ಹರಕೆಯ ದೀಪ ಹಚ್ಚಿಡುವ ಹಂಬಲದವರನ್ನೂ ನೋಡಿದ್ದೇನೆ. ಬಹುತೇಕ ನನ್ನೊಳಗಿನ ನಂಬುಗೆ ನೆಲಕ್ಕಚ್ಚಿದ್ದರೆ ನನ್ನ ನಿರ್ನಾಮ ಎಷ್ಟು ಸಮೀಪ ಎನ್ನುವುದನ್ನೂ ನಾನು ಆಗಾಗ ಗಮನಿಸುತ್ತಿರುತ್ತೇನೆ. ಆಗಾಗ ತಲ್ಲಣಿಸುವ ಮನಸ್ಸಿಗೆ –
ಕೊಂದವರೆ ಬಂದಿಹರು
ಹಾಲು ಕೊಡು ತಾಯಿ
ಕಡಿದವರೆ ಬಂದಿಹರು
ಹೂವ ಕೊಡು ತಾಯಿ
ಕಿಡಿಯಾಗಬೇಡ
ಎಂದು ನನ್ನ ಕವಿತೆಯ ಮೂಲಕ ಸಮಾಧಾನಿಸುತ್ತ ಸಾಗಿಬಂದಿದ್ದೇನೆ.
          ಮುಗಿದು ಹೋಗುವ ವರ್ಷದ ಮುಸ್ಸಂಜೆಯಲ್ಲಿ ನಿರ್ಲಿಪ್ತನಾಗಿ, ಒಂದಿಷ್ಟು ಮೌನವಾಗಿ ಕುಳಿತುಕೊಳ್ಳುವುದು, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು, ಉರುಳಿ ಹೋದುದನ್ನು ಹೊರಳಿ ನೋಡುವುದು ನನ್ನ ಪ್ರೀತಿಯ ರೂಢಿ. ಮೊಬೈಲ್ ಮೌನವಾಗಿರುತ್ತದೆ, ನನ್ನ ಮಾತೂ ಕೂಡ. ಮನಸ್ಸನ್ನು ನಿರಾಳಗೊಳಿಸಿಕೊಳ್ಳುವ ಒಂದು ಯತ್ನ. ಈ ಕೆಲಸಕ್ಕೆ ಹೋದ ವರ್ಷ ನಾನು ಶರೀಫನ ಗದ್ದಿಗೆಯನ್ನು ಆಯ್ದುಕೊಂಡರೆ, ಈ ವರ್ಷ ಶ್ರವಣಬೆಳಗೋಳದ ಬೆಟ್ಟವನ್ನು ಆಯ್ದುಕೊಂಡಿದ್ದೆ. ನನ್ನದು ಈ ದಡ, ಆಚೆ ದಡದಲ್ಲಿ ಶಾಂತಲೆ ಸಲ್ಲೇಖನ ವೃತದಿಂದ ಮೋಕ್ಷ ಪಡೆದ ಚಂದ್ರಗಿರಿ ಬೆಟ್ಟ.
Bhattarak Swamiji
Ragam with Charukirti Bhattarak Swamiji

          ವರ್ಷದ ಕೊನೆಯಲ್ಲಿ ನಾನು ಹಾತೊರೆದದ್ದು ಬರೀ ನಿದ್ರೆಗಾಗಿ. ನಿರಂತರ ಒಂದು ತಿಂಗಳಿಂದ ನಿದ್ರಾಹೀನನಾಗಿ ಸಮಾರಂಭ, ಸುತ್ತಾಟ, ಸಮಾರಾಧನೆಗಳಲ್ಲಿ ಮುಳುಗಿದ್ದ ನನಗೆ ಶ್ರವಣಬೆಳಗೋಳದ ವಾತಾವರಣ ಹಿತವೆನ್ನಿಸಿತ್ತು. ನನಗೆ ನಿದ್ರಿಸಲು ಒಳ್ಳೆಯ ಸ್ಥಳ ಸೂಚಿಸುತ್ತೇನೆಂದು ಕರೆದುಕೊಂಡು ಹೋದವರು ಗೆಳೆಯ ಬಿ.ಎಸ್.ದೇಸಾಯಿ(B.S.Desai). ಚಿತ್ರಕಲಾ ಕಾರ್ಯಾಗಾರ ಒಂದು ತನ್ನ ಪಾಲಿಗೆ ತಾನು ಮುಕ್ತಾಯ ಸಮಾರಂಭವನ್ನು ಏರ್ಪಡಿಸಿತ್ತು. ನಾನು ಆ ಸಭೆಯ ಮೂಲೆಯಲ್ಲಿ  ದೂರದಲ್ಲಿ ಕುಳಿತು ನಿದ್ರೆಯ ಸುಖದಲ್ಲಿದ್ದಾಗ ಅತ್ಯಂತ ಗೌರವದಿಂದ ನನ್ನನ್ನು ಗಮನಿಸಿ ವೇದಿಕೆಗೆ ಎಳೆದವರು ಚಾರುಕೀರ್ತಿ  ಭಟ್ಟಾರಕ ಸ್ವಾಮಿಜಿ(Charukirti Bhattaraka Swamiji). ಹಡಬಡಿಸಿ ಎದ್ದೆ, ಇನ್ನೆಲ್ಲಿಯ ನಿದ್ದೆ.


          ಕಲೆ, ಸಾಹಿತ್ಯ, ಪ್ರಾಚ್ಯಶಾಸ್ತ್ರ, ಬಣ್ಣಗಳನ್ನು ಕುರಿತು ಇಷ್ಟೊಂದು ಕಾಳಜಿಯಿಂದ ಮತ್ತು ಕರಾರುವಕ್ಕಾಗಿ ಮಾತನಾಡುವ ಮತ್ತೊಬ್ಬ ಸನ್ಯಾಸಿಯನ್ನು ನಾನು ನೋಡಿಲ್ಲವೆಂದೇ ಹೇಳಬೇಕು. ಬಟಾ ಬೆತ್ತಲೆ ಗೊಮ್ಮಟನಂತೆಯೇ ಅತ್ಯಂತ ಸರಳ ಮನಸ್ಸಿನ ದೊಡ್ಡ ಮನುಷ್ಯರಂತೆ ನನಗೆ ಆ ದಿನ ಅವರು ಕಂಡರು. ಈ ಸನ್ಯಾಸಿಯ ಸಾನಿಧ್ಯದಲ್ಲಿ ಹಳೆಯ ವರ್ಷ ಉರುಳಿ ಹೋಯಿತೋ, ಹೊಸ ವರ್ಷ ಆರಂಭವಾಯಿತೋ ಎನ್ನುವ ಲೆಕ್ಕಾಚಾರದ ಗೊಡವೆಯೂ ಬೇಡ ಎನಿಸಿತು ನನಗೆ. ಯಾಕೆಂದರೆ, ಅಲ್ಲಿ ಇರುವಷ್ಟು ಕಾಲ ನನ್ನನ್ನು ಎಚ್ಚರಿಸಿ, ಬಳಿ ಕರೆದು ಕರುಣೆಯಿಂದ ಹರಸಿದ ಜೀವ ಅದು.

Wednesday, January 22, 2014

ಕೃಷ್ಣನೆಂದರೆ ಕುಂಚ, ಕೋಲಾಹಲ ಮತ್ತು ಶಾಂತಿ



“Why do you study so much? What secret are you looking for? Life will reveal it to you very soon. I already know everything, without reading or writing. Not very long ago, maybe only a few days back, I was a girl going her way through a world of precise and tangible colors and forms. Everything was mysterious, and something was always hidden; guessing at nature was a game for me. If only I had know how hard it is to gain knowledge so suddenly, as though the Earth had been elucidated by a single ray of light! Now I live on a planet of pain, transparent like ice. It is as if I’d understood everything all at once, in a matter of seconds. My best friends and the girls I know have slowly become women. I grew old in a few seconds, and now everything is blamed and flat. I know that there is nothing else, because if there were, I would see it.”
                        -     Frida Khalo
      ಫ್ರಿದಾ ಕಾಹ್ಲೊ ಒಬ್ಬ ಶ್ರೇಷ್ಠ ಮೆಕ್ಸಿಕನ್ ಚಿತ್ರಕಲಾವಿದೆ. ಬಣ್ಣ ಮತ್ತು ಬದುಕಿನ ಅನುಭವದಲ್ಲಿ ಇವಳು ನಮ್ಮ ಅಮೃತ್ ಶೇರ್‍ಗಿಲ್ರನ್ನು ನೆನಪಿಸುತ್ತಾಳೆ. ಈ ಮೇಲೆ ಉದ್ಧರಿಸಿದ ನನ್ನ ಮಾತುಗಳು ಆಕೆ ತನ್ನ ಮೊದಲ ಪ್ರಿಯಕರನಿಗೆ ಬರೆದ ಪತ್ರಗಳಿಂದ ಆಯ್ದುಕೊಂಡವುಗಳು. ಸಾಂಪ್ರದಾಯಿಕ ಚಿಂತನೆಯಲ್ಲಿ ಅನುಭವ ಮಾಗಲು ವಯಸ್ಸಿನ ಲೆಕ್ಕಾಚಾರ ಬಹಳ ಮುಖ್ಯವಾಗುತ್ತದೆ. ಆದರೆ ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾಳೆ ಫ್ರಿದಾ. ತೊಂಬತ್ತು ವರ್ಷದ ಒಬ್ಬ ಕಲಾವಿದ ಅಥವಾ ಲೇಖಕನಿಗೆ ಸಾಧ್ಯವಾಗದ ಒಂದು ಅನುಭವ ಹತ್ತೊಂಬತ್ತು ವರ್ಷದ ಒಬ್ಬ ಎಳೆಯನಿಗೆ ಸಾಧ್ಯವಾಗಬಹುದು. ಅನುಭೂತಿಗೆ ಆತ್ಮದ ತೀವ್ರತೆ ಮುಖ್ಯವಾಗುತ್ತದೆಯೇ ವಿನಹ ದೇಹವನ್ನು ಹೈರಾಣಾಗಿಸುವ ವಯಸ್ಸಲ್ಲ.
ದಿನಾಂಕ 17/11/2013 ರಿಂದ 19/11/2013 ರವರೆಗೆ, ಹಾಸನಾಂಬಾ ಕಲಾಕ್ಷೇತ್ರದಲ್ಲಿ ನಡೆದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುತ್ತ, ಕುಮಾರಿ ಐಶ್ವರ್ಯಳನ್ನು ಮುಂದಿಟ್ಟುಕೊಂಡು ನಾನು ಈ ಮಾತುಗಳನ್ನು ಹೇಳಬೇಕಾಯಿತು. ಈ ದಿನದ ವಿಚಿತ್ರ ನೋಡಿ, ಇದನ್ನು ನೀವು ವಿಶೇಷ ಎಂದುಕೊಳ್ಳಲೂಬಹುದು. ಇದೆ ಕಲಾಕ್ಷೇತ್ರದ ಇನ್ನೊಂದು ಮಗ್ಗುಲಲ್ಲಿ ‘ಕುರುಕ್ಷೇತ್ರ’ದಂತಹ ನಾಟಕ ಪ್ರದರ್ಶನಗೊಳ್ಳುತ್ತಿದೆ. ಕುರುಕ್ಷೇತ್ರವೆಂದರೆ ಯುದ್ಧ, ರಕ್ತಪಾತ ಮತ್ತು ಕೋಲಾಹಲ. ಇದು ಕುಂಚದ ಕುಸುರಿಯಂತಹ ನವಿರಾದ ಕ್ರಿಯೆಗೆ ಬಾಹ್ಯದಲ್ಲಿ ಸಂಪೂರ್ಣ ವಿರುದ್ಧ ಎನ್ನುವಂತೆ ಭಾಸವಾಗುತ್ತದೆ. ಆದರೆ ಅದು ನಮ್ಮ ಮೇಲಸ್ತರದ ಓದಷ್ಟೆ.
        ಇವು ಒಂದು ಇನ್ನೊಂದರಲ್ಲಿ ಎರಕ ಹೊಯ್ದುಕೊಂಡಿವೆ. ಕುಂಚಕ್ಕು ಕೋಲಾಹಲವನ್ನೆಬ್ಬಿಸುವ ಶಕ್ತಿ ಇದೆ. ಕುರುಕ್ಷೇತ್ರಕ್ಕೂ ಶಾಂತಿಯ ಸಂದೇಶವನ್ನು ನೀಡುವ ಮುಕ್ತ ಮಾರ್ಗವಿದೆ. ಇವೆರಡರ ಹಿಂದೆಯೂ ಒಂದೇ ಶಕ್ತಿ, ಒಬ್ಬನೇ ವ್ಯಕ್ತಿ ಆತ ಕೃಷ್ಣ. ಕೃಷ್ಣನೆಂದರೆ ಬಣ್ಣ, ಬೆಳಕಿನ ಕಣ್ಣು, ಬಣ್ಣಗಳ ಗೋಕುಲಾಷ್ಟಮಿ, ಹಸಿ ಮಣ್ಣು ಮತ್ತು ಆಸೆಯಿಂದ ಹಂಬಲಿಸುವ ಮನಸ್ಸು ಎನ್ನುವುದು ಎಷ್ಟು ಸತ್ಯವೋ ಆತನೆಂದರೆ ಕುರುಕ್ಷೇತ್ರ ಎನ್ನುವುದು ಕೂಡ ಅಷ್ಟೇ ಸತ್ಯ. ಈ ಆಲೋಚನೆಯ ಬೆಳಕಿನಲ್ಲಿ ಇಂದಿನ ನನ್ನ ಉದ್ಘಾಟನಾ ಭಾಷಣ ಮುಂದುವರೆಯಿತು.
     
      ಜೊತೆಗಿದ್ದವರು ಐಶ್ವರ್ಯಳ ಗುರು ಶ್ರೀ ಬಿ.ಎಸ್.ದೇಸಾಯಿ, ವಾರ್ತಾ ಇಲಾಖೆಯ ನಿರ್ದೇಶಕರು, ಹಿರಿಯ ಪತ್ರಕರ್ತ ಮಿತ್ರ ಆರ್.ಪಿ.ವೆಂಕಟೇಶಮೂರ್ತಿ ಹಾಗೂ ಕಲಾವಿದರ ಬಳಗ.

Sunday, January 19, 2014

ತುಳುಕುವುದೆಲ್ಲವೂ ಕವಿತೆಯಲ್ಲ


“ಕಾವ್ಯ ಕೈಯಲ್ಲಿ ಹಿಡಿದುಕೊಂಡು ಅರ್ಥ ಹುಡುಕಾಡಬಾರದು,
ಅದರಂಥ ಅನರ್ಥ ಕ್ರಿಯೆ ಮತ್ತೊಂದಿಲ್ಲ.
ಹಾಡಿಬಿಡಬೇಕು ಹಾಡುತ್ತ ಹಾಡುತ್ತಲೇ ನಾವೂ ಹಾಡಾಗಬೇಕು.
ಹಾಡಾಗಲಾರದವನು ಕವಿತೆಯನ್ನು ಹಿಡಿಯಬಾರದು.
ಇದು ಕವಿತೆಯೊಂದಿಗಿನ ಮೂರು ದಶಕಗಳ ನನ್ನ ಅನುಭವ.
ಮನಸ್ಸು ಮುಕ್ತ ಮತ್ತು ಭಕ್ತನಾಗಿದ್ದಾಗ ಮಾತ್ರ ಕವಿತೆ ಘಟಿಸುತ್ತದೆ.
ಅದು ಬರೆಯುವುದಲ್ಲ, ಬರೆಯಿಸಿಕೊಳ್ಳುವುದು.
ಅದು ಮುದುಕರ ಸ್ವತ್ತಲ್ಲ,
ಹಾಗಂತ ಯುವಕ-ಯುವತಿಯರಲ್ಲಿ ತುಳುಕುವುದೆಲ್ಲವೂ ಕವಿತೆಯಲ್ಲ.”
         
         ಕಾವ್ಯದ ಬಗೆಗೆ ಇಂಥ ಒಂದು ನಿಲುವು ತಳೆದಿರುವ ನನ್ನ ಇತ್ತೀಚಿನ ಆರನೆಯ ಕಾವ್ಯ ಸಂಕಲನ ‘ಇರುವಷ್ಟು ಕಾಲ’ ಎರಡನೆಯ ಬಾರಿ ಧಾರವಾಡದ ಗೆಳೆಯರೊಂದಿಗೆ ಚರ್ಚೆಗೆ ಕಾರಣವಾಯಿತು. ಸಂಕಲನವನ್ನು ಕುರಿತು ಸುದೀರ್ಘವಾಗಿ ಚರ್ಚಿಸಿದವರು, ಮಾತನಾಡಿದವರು ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ. ಅಂದಿನ ಅವರ ಭಾಷಣ ನಮ್ಮ ವಿಶ್ವವಿದ್ಯಾಲಯದ ವರ್ತಮಾನದ ಉಪನ್ಯಾಸಕರುಗಳಿಗಿಂತ ಎಷ್ಟೋ ಪ್ರಮಾಣದಲ್ಲಿ ಸಂಶೋಧಾತ್ಮಕವಾಗಿತ್ತು ಹಾಗೂ ಅನೇಕ ಹೊಸ ಹೊಳಹುಗಳಿಂದ ತುಂಬಿತ್ತು. ಅವು ಬುದ್ಧಿ ಪ್ರದರ್ಶನಕ್ಕಾಗಿ ಹೊರಟ ಮಾತುಗಳಾಗಿರಲ್ಲಿಲ್ಲ. ಬದಲಾಗಿ ಹೃದಯ ಸಂವಾದದ ಅಲೆಗಳಾಗಿದ್ದವು. ಈ ನನ್ನ ಸಂಕಲನವನ್ನು ಕುರಿತು ಮಾತನಾಡಲು ಒಪ್ಪಿಕೊಳ್ಳುವುದಕ್ಕು ಮುಂಚೆ ಅವರು ನನ್ನ ಸಾಹಿತ್ಯದ ಓದುಗರಾಗಿದ್ದಾರೆ ಎಂದು ಅವರಿಂದಲೇ ಕೇಳಿದಾಗ ನನಗೆ ಅಚ್ಚರಿ. ಗೆಳೆಯ ರಾಜು ಮಳವಳ್ಳಿಯವರ ‘ಸಿಹಿ ಗಾಳಿ’ ಸಾಹಿತ್ತಿಕ ಮಾಸಿಕ, ಅವರ ಮನೆಯನ್ನೂ ತಲುಪುತ್ತಿದ್ದು, ಅದರಲ್ಲಿಯ ‘ಈ ಸಾಕಿಯರ ಕೈ ಸೋಕಿ’ ನನ್ನ ಸ್ಥಿರ ಅಂಕಣದ ಖಾಯಂ ಓದುಗರಲ್ಲಿ ಅವರೂ ಒಬ್ಬರಂತೆ. ಸಾಹಿತಿ ಒಬ್ಬನ ಧನ್ಯತೆ ಇರುವುದೇ ಇಂಥದರಲ್ಲಿ. ಮುಖ ನೋಡದೆ, ಪರಸ್ಪರ ಭೇಟಿಯಾಗದೇ ಪತ್ರಿಕೆಗಳ ಮೂಲಕ, ಅವುಗಳೊಳಗಿನ ಬರಹದ ಮೂಲಕ ಓದುಗನೊಂದಿಗೆ ಒಂದು ಸಂಬಂಧ ಏರ್ಪಟ್ಟಾಗ ಅದು ಎಷ್ಟೆಲ್ಲ ಆಪ್ಯಾಯವೆನಿಸುತ್ತದೆ.
'Eruvastu Kaala', Book Releasing 

        ‘ಇರುವಷ್ಟು ಕಾಲ’ ದಿನಾಂಕ 12/12/2013 ರಂದು ಧಾರವಾಡ ಕಟ್ಟೆಯ ಮೂಲಕ ಮತ್ತೆ ಲೋಕಾರ್ಪಣಗೊಂಡು ಅದಕ್ಕೆ ಸಾಕ್ಷಿಯಾದವರು ಗೆಳೆಯ ಡೋಣುರ, ವನದುರ್ಗಾ, ಪೋತೆ, ದಿಬ್ಬದ, ಹಿರೇಮಠ, ಬಸೀರ್ ಹಾಗೂ ಹಿರಿಯರಾದ ವೃ.ಸ್ವಾಮಿ ಮತ್ತು ಧಾರವಾಡದ ಸಮಸ್ತ ಸಾಹಿತ್ಯಾಸಕ್ತರ ಬಳಗ.
        ಈ ಸಂಕಲನದಲ್ಲಿ ನನ್ನ ಪ್ರೀತಿಯ ಅದೆಷ್ಟೋ ಕವಿತೆಗಳಿವೆ ಆದರೆ ಅಂದಿನ ಮುಖ್ಯ ಭಾಷಣಕಾರರಾಗಿದ್ದ ಪ್ರಜ್ಞಾ ಹೇಳುವಂತೆ ‘ರೆಪ್ಪೆಯ ತೆಪ್ಪದಲ್ಲಿ’ ಅವರಿಗೆ ಅತ್ಯಂತ ಪ್ರೀತಿಯ ಕವಿತೆ. ಹೀಗಾಗಿ ಅದರ ಕೊನೆಯ ಕೆಲವು ಸಾಲುಗಳು ಇಲ್ಲಿ ನಿಮಗಾಗಿ

          ಸಂತೆಯಲ್ಲಿ ಕೈ ಬಿಟ್ಟು ಸಂಕಟಪಡುವವಳವಳೇ

ಸಂಸಾರದೊಳಗಿಟ್ಟು, ದೀಪ ಹಚ್ಚಿಟ್ಟು
ಹಚ್ಚಡದೊಳು ಹೂಗಳ ತಂದು
ರಾತ್ರಿ ಮುಡಿಗೆರಿಸಲು ಮುಗುಳ್ನಗುವವಳೂ ಅವಳೆ

ನನ್ನ ಬಾಳಿನ ಮುಂಜಾನೆಯ ಇಬ್ಬನಿ
ಮಿಡಿ ಹಗಲ ರಂಗೋಲಿ
ದೂರ ತೇಲುವ ಸುಪ್ರಭಾತ
ಲೆಕ್ಕವಿಲ್ಲದೆ ಸುರಿವ ಪಾರಿಜಾತ
ಎಲ್ಲ ಎಲ್ಲ ಎಲ್ಲವೂ ಅವಳೆ
ಕೆಲವೊಮ್ಮೆ ಅವಳೇ ಅತೀತ

ಇವಳ ಹೇಳಲು ಹೋಗಿ
ನನ್ನ ನುಡಿ ತಪ್ಪುತ್ತವೆ
ಹಿಡಿಯಲು ಹೋಗಿ
ನಡೆ ತಪ್ಪುತ್ತದೆ

                   ಈಗ ನಾನು ತೆಪ್ಪಗಾಗುತ್ತೇನೆ
                            ಯಾಕೆಂದರೆ
                    ಇವಳ ಕಣ್‍ರೆಪ್ಪೆಯ ತೆಪ್ಪದಲಿ
                 ಸಮುದ್ರವೂ ಸಣ್ಣ ದಾರಿಯೆನಿಸುತ್ತದ
                    ತೆಪ್ಪ ತಪ್ಪಿ ತಳಕ್ಕಿಳಿದರೆ ಸಾವೂ
                       ಹೊಸ ಬದುಕೆನಿಸುತ್ತದೆ