Total Pageviews
Saturday, June 21, 2014
Saturday, June 14, 2014
ಕಣ್ಣು ಕೋರೈಸುವ ಕಂಪ್ಯೂಟರ್ ಕಣ್ಣೀರೊರೆಸುವುದಿಲ್ಲ
ಹಳೆಮನೆ: ಒಂದು ನೆನಪು
ವರ್ತಮಾನದ
ಬಿಕ್ಕಟ್ಟುಗಳು
ದಿನಾಂಕ: 14/06/2014 ಸ್ಥಳ: ಶ್ರೀರಂಗ ಸಭಾಂಗಣ, ರಂಗಾಯಣ
ಭಾಷೆಯನ್ನು ಕುರಿತು
ಮಾತನಾಡುವಾಗಲೆಲ್ಲಾ ಅಲ್ಲಮನ ಒಂದು ಸಾಲನ್ನು ಹಳೆಮನೆ ಪದೇ ಪದೇ ಹೇಳುತ್ತಿದ್ದ ನೆನಪು. 'ಪದವನರ್ಪಿಸಬಹುದಲ್ಲದೆ
ಪದಾರ್ಥವನ್ನರ್ಪಿಸಲಾಗದು'. ಈಗ ಈ ಮಾತನ್ನು ಬದಲಿಸಿ ನಾನು ಹೇಳಬೇಕು, `ಪದವನ್ನೂ ಅರ್ಪಿಸಲಾಗದು ಹಳೆಮನೆಯವರೆ.’
ಪದ, ಪದಾರ್ಥಗಳೆಲ್ಲವೂ ಮೌನದೀಚೆಗಿನ ವ್ಯಾವಹಾರಿಕ ತಳಮಳಗಳಷ್ಟೇ. ಅದನ್ನು ಮೀರಿದ ಮೇಲೆ ಮೌನದ್ದೇ ಸಾಮ್ರಾಜ್ಯ.
ಸತ್ತ ವ್ಯಕ್ತಿಯ
ಸತ್ಯದ ಮೂಲಗಳನ್ನು ತಡಕಾಡುವುದು ಅಸಾಧ್ಯವೂ ಮತ್ತು ಅಸತ್ಯವೂ ಕೂಡ. ದಿನಾಂಕ 12/06/11ರ ಸಾಯಂಕಾಲದ
ಆರು ಗಂಟೆಗೆ ರಂಗಾಯಣದ “ಭೂಮಿಗೀತ”ದಲ್ಲಿ ರಂಗಚಿಂತಕರು, ಮೈಸೂರಿನ ಒಡನಾಡಿಗಳು ಹಮ್ಮಿಕೊಂಡ “ಹಳೆಮನೆಯವರಿಗೆ
ಶೃದ್ಧಾಂಜಲಿ” ಕಾರ್ಯಕ್ರಮ ಮುಗಿಸಿಕೊಂಡು ಬಂದು ಕುಳಿತು ಈ ಲೇಖನದ ಮುಕ್ತಾಯದ ಸಾಲುಗಳನ್ನು ಬರೆಯುತ್ತಿದ್ದೇನೆ.
ಆ ಕೆಟ್ಟ ಕಾರ್ಯಕ್ರಮದಲ್ಲಿ ‘ಜನ್ನಿ’ಯೊಬ್ಬನವೇ ಮಾತುಗಳು. ಒಂದು ರೀತಿಯಲ್ಲಿ ‘ಜ್ಯೂಲಿಯಸ್ ಸೀಜರ್’
ನಾಟಕದಲ್ಲಿ ಮಾರ್ಕ್ ಎಂಟನಿಯ ಮಾತುಗಳಂತೆ. ಅದೇ ವೇಳೆಗೆ ಸರಿಯಾಗಿ ‘ಪ್ರಜಾವಾಣಿ’ಯ ಸಹೋದರಿ ಸುಶೀಲಾ
ಡೋಣೂರ ಒಂದು ಎಸ್. ಎಂ. ಎಸ್ ಕಳುಹಿಸಿದ್ದಾಳೆ. “Being frank is always better than
being falsely sweet. Because by being frank in life, we may get a lot of true
enemies but surely not untrue friends”
ನಮ್ಮ ಸುತ್ತಲಿನ ಸತ್ಯವನ್ನು ದೂರಿಕರಿಸಿ ದೂರದ ಅವಾಸ್ತವವನ್ನು ನಂಬುವ ವರ್ತಮಾನದ
ಯುವ ಜನಾಂಗ, ಕಾರ್ಪೊರೇಟ್ ವಲಯದ ಬಳಸಿ ಬಿಸಾಡುವ ಸಿದ್ಧಾಂತಕ್ಕೆ ಮರುಳಾಗಿದ್ದಾರೆ. ಅವಕಾಶಗಳ ಭ್ರಮೆಯನ್ನು
ಹುಟ್ಟಿಸುವ ಈ ಬಿಕ್ಕಟ್ಟು, ಅದೇ ಕಾರ್ಪೊರೇಟ್ ವಲಯದಿಂದ, ಮತ್ತೆ ಅದೇ ಸಿದ್ಧಾಂತದಿಂದ ಮೋಸಕ್ಕೆ ಹೋಗುವ
ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ. ಓಡಿಹೋಗಲಾಗದ, ನಿಂತು ಬದುಕಲಾಗದ ಆದರೆ ನಿರಂತರ ಹುಚ್ಚು ಹುಡುಕಾಟಕ್ಕೆ
ಹಚ್ಚುವ ಈ ಹವ್ಯಾಸ, ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ನಂಬಿಕೊಂಡಿರುವವರಿಗೆ ಹುಡುಗಾಟವೆನ್ನಿಸಿದೆ.
ಕಣ್ಣು ಕೋರೈಸುವ ಟ್ಯಾಬ್, ಮೋಬೈಲ್, ಕಂಪ್ಯೂಟರ್‍ಗಳು ಕಣ್ಣೀರೊರೆಸುವುದಿಲ್ಲ. ಫ್ಯಾಶನ್‍ನನ್ನು ಕುರಿತು
ಮಾತಾಡುವ ಈ ಲೋಕ ಪ್ಯಾಶೆನ್ ಕುರಿತು ಮನುಷ್ಯನನ್ನು ಕೇಂದ್ರಿಕರಿಸುವುದಿಲ್ಲ. ಸಹನೆಯಂತೂ ಸತ್ತುಹೋದ
ವಿಚಾರ. ಸಾಮಾಜಿಕ ತಾಣಗಳೆಂದು ಗುರುತಿಸಲ್ಪಡುವ ಈ ಅಂತರ್‍ಜಾಲ ತಾಣಗಳು ನಿಜವಾದ ಸಾಮಾಜಿಕತೆಯ ಮನುಷ್ಯ
ಸೌಂದರ್ಯವನ್ನು ಕೊಂದು ಇರುವ ಮನೆಯಲ್ಲಿಯೇ ಒಬ್ಬ ಇನ್ನೊಬ್ಬನೊಂದಿಗೆ ಮಾತನಾಡದಂತೆ ಮಾಡಿ ಆತನನ್ನು
ಭ್ರಮೆಗಳಿಂದ ತುಂಬುತ್ತದೆ. ನಾವು ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಈ ಮಾರ್ಗ ನಾನು
ಏನಾಗಬೇಕು ಎನ್ನುವುದಕ್ಕೆ ಕನ್ನಡಿ ಹಿಡಿಯುವುದಿಲ್ಲ. ಎಲೆಕ್ಟ್ರಾನಿಕ್ ಜಗತ್ತು ನಮ್ಮಲ್ಲಿ ಧೈರ್ಯವನ್ನು
ಬೆಳೆಸಲಿಲ್ಲ, ಹೇಸಿ ಧೈರ್ಯವನ್ನ, ಭಂಡ ಧೈರ್ಯವನ್ನ ಬೆಳೆಸಿತು. ಆಳ ಅಧ್ಯಯನದ ಅವಶ್ಯಕತೆಯನ್ನು ದೂರಿಕರಿಸಿ
ಮುಂಜಾನೆ ಕುಡಿಯುವ ಚಹಾ ಕುರಿತಾದ ತಿಳುವಳಿಕೆಗೂ ತನ್ನನ್ನು ಮೊರೆ ಹೋಗುವಂತೆ ಮಾಡಿತು. ದುಡ್ಡು, ಅವಕಾಶ
ಎನ್ನುವ ಪದಗಳ ಬೆನ್ನು ಹತ್ತಿ ಆತ್ಮವನ್ನು ಧಿಕ್ಕರಿಸಿ ಅನ್ಯರ ಭಾವನೆಗಳನ್ನು ಅವಹೇಳಿಸಿ ಓಡಿಹೋಗುವ
ನಿರ್ಲಜ್ಜತೆಯನ್ನು ಬೆಳೆಸಿತು.
ಮುಂದಿನ ಮರೀಚಿಕೆಯನ್ನು ಮೆಚ್ಚಿಕೊಂಡವರು ಹಿಂದಣ ಅನಂತವನ್ನು ಅಸಹ್ಯಗೊಳಿಸುವ
ಆತ್ಮ ಭ್ರಷ್ಟತೆಯನ್ನು ಬೆಳೆಸಿತು. ಈ ರೀತಿ ಬುಡವಿಲ್ಲವಾಗಿರುವ ಈ ನನ್ನ ಎಳೆಯ ಜಗತ್ತನ್ನು ನಾನು ವಾಟೆವರ್
ಜನರೇಶನ್ ಎನ್ನುತ್ತೇನೆ, ಎನ್ನುತ್ತಾರೆ ನನ್ನೊಂದಿಗಿದ್ದ ಗೆಳೆಯ ನವೀನ್. ಇದೊಂದು ಶೇಮ್‍ಲೆಸ್ ಸೋಸಾಯಿಟಿ
ಎನ್ನುತ್ತಾರೆ ಹಿರಿಯ ಚಿಂತಕಿ ಡಾ.ಇಂದಿರಾ. ಈ ಬಿಕ್ಕಟ್ಟೆ ನಮ್ಮ ಮೂಲ. ಏಕೆಂದರೆ ವರ್ತಮಾನದ ಹೂಗಳನ್ನು
ಧಿಕ್ಕರಿಸಿ ಭವಿಷ್ಯದ ಹಣ್ಣುಗಳ ಕನಸು ಕಾಣಲಾಗುವುದಿಲ್ಲ ಹಾಗೆಯೇ ನಮ್ಮ ಮುಂದೆಯೇ ನಾಶವಾಗುವ ಯುವಜನಾಂಗವನ್ನು
ನಿರ್ಲಕ್ಷಿಸಿ ಭವಿಷ್ಯದ ಭವ್ಯ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.
Tuesday, June 10, 2014
ಸಾಧು ಸಂಗ ಕೊಟ್ಟು ಎನಗೆ ಪಾರುಗಾಣಿಸಯ್ಯ ಕೊನೆಗೆ.....
ಪೂಜ್ಯ ಮತ್ತು ಪೂಜಕ ಈರ್ವರೂ ಈಗ ಒಂದೇದ್ವೈತಕ್ಕೆ ಇಂಬಿಲ್ಲವಯ್ಯಾ.
ಕರ್ಪುರವು ಉರಿಯಲು
ನಿಶ್ಯೂನ್ಯವಾಹುದಯ್ಯಾಅಂತೆಯೇ ನಿಮ್ಮ ಚೇತನವು ಅಪ್ಪುದಯ್ಯಾ
- ಬುರಹಾನ್ ಅಲ್-ದಿನ್
ಮೇ 12 ರಿಂದ ಜೂನ್ 12 ರ ವೇಳೆ ನನ್ನ ಬದುಕಿನ ಅತ್ಯಂತ ಮಹತ್ವದ ಘಳಿಗೆ. ಇದೊಂದು ರೀತಿ ಆತ್ಮಾವಲೋಕನದ, ದೇಹಾವಲೋಕನದ ಸ್ಥಿತಿ ಎಂದೇ ಹೇಳಬೇಕು. ಈಗೆಲ್ಲ ನನ್ನ ಕೈ ಹಿಡಿದುದು ರಿಚರ್ಡ ಈಟನ್ ಅವರ ಸೂಫೀಜ್ ಆಫ್ ಬಿಜಾಪುರ ಕೃತಿ. ಮಹತ್ವದ ಸಾಲೊಂದನ್ನು ಓದಿಬಿಟ್ಟೆ, 'ಬಿಜಾಪುರ ಸೂಫಿಗಳನ್ನು ಹುಗಿದ ಸ್ಥಳಗಳ, ಕಟ್ಟಿದ ಕಟ್ಟಡಗಳ ಸಂಖ್ಯೆ ಮೂನ್ನುರರ ಸಮೀಪ.' ವಾಕ್ಯ ಓದುತ್ತಲೇ ಕುಟುಂಬ ಕಟ್ಟಿಕೊಂಡು ಓಡಿಯೇ ಬಿಟ್ಟೆ ನನ್ನೂರಿಗೆ, ಅದನ್ನು ತನ್ನ ಗರ್ಭದಲ್ಲಿರಿಸಿಕೊಂಡ ಬಿಜಾಪುರಕ್ಕೆ. ಬೇಡವಾಗಿದ್ದ ಭಾರಗಳನ್ನು ಚಿತಾಸಾಕ್ಷಿಯಾಗಿ ಹಿಡಿದ ಕಾರಣಕ್ಕೆ ನಿಭಾಯಿಸಲು ಇಂದಿಗೂ ಹೆಣಗಾಡಿದಂತೆ ಅಂದು ನಮ್ಮಪ್ಪನ ಒಂದು ಕಾಲದ ಕನಸಿನ ಹೆಗಲಾಗಿದ್ದೆ ನಾನು. ಇಂಗ್ಲೀಷ್ ಸಾಹಿತ್ಯ ಓದಬೇಕು, ಅದರೊಳಗೇ ಮಹತ್ವದ ಸಾಧನೆಯನ್ನು ಮಾಡಬೇಕು ಎನ್ನುವ ಆತನ ಕನಸಿಗೆ ಆಸರೆಯಾಗಿ ನಿಂತವರು, ನನ್ನನ್ನು ಆ ಸಾಧನೆಗೆ ಅಣಿಯಾಗಿಸಿದವರು ಇದೇ ಸೂಫಿಗಳು ಮತ್ತು ಅವರ ದರ್ಗಾಗಳು. ಬೆಳಗಿನ ಆರು ಗಂಟೆಗೆ ಬಂದು ಈ ಸ್ಥಳಗಳಲ್ಲಿ ಕುಳಿತುಕೊಳ್ಳುತ್ತಿದ್ದ ನಾನು ಮಧ್ಯಾಹ್ನದ ಮೂರು ಗಂಟೆಗೆ ಕೋಣೆ ಸೇರುತ್ತಿದ್ದೆ. ಅಂದು ನನ್ನ ಜೊತೆಯಾದ ಸೂಫಿಗಳು ಇಂದಿಗೂ ನನ್ನ ಆತ್ಮದ ಕನವರಿಕೆಯಾಗಿದ್ದಾರೆ.
ನನಗೆ ನನ್ನ ಜನ, ನನ್ನ ಸಂಸ್ಕೃತಿ ಅಸಹ್ಯಕ್ಕೊಳಪಡುವುದು ಸಹಿಸಲಾಗದ ವಿಚಾರ. ಬಿಜಾಪುರದ ನನ್ನ ಸಾಧನೆಯ ಸ್ಥಳಗಳು, ನನ್ನ ಏಕಾಂತದ ಅಸಹಾಯಕ ಕ್ಷಣಗಳು ಎಲ್ಲ ವಿವರಿಸುತ್ತ ಶಿಶುನಾಳಕ್ಕೆ ಬಂದಾಗ ಮಬ್ಬುಗತ್ತಲೆ. ಅವನ ಕೆಲವು ಸಾಲುಗಳು -
ಬಹಳೊಂದು ಚೆಲ್ವಿಕೆ ನನ್ನ ಹೆಂಡತಿ
ಅಳು ತಾಪ ಕೇಳಿಸಿದಿ ನನ್ನ ಹೆಂಡತಿ
ಕೀಳು ಮಾತೆಲ್ಲ ಜಗದೊಳಗೆ ಮೋಹಿಸಿ
ಸೂಳೆಯೆಂದೆನಿಸಿದಿ ನನ್ನ ಹೆಂಡತಿ
ಏಟ್ಸನ 'ಪ್ರೇಯರ್ ಟು ಮಾಯ್ ಡಾಟರ್' ನೆನಪಿಸುವ ಈ ಸಾಲುಗಳು ವರ್ತಮಾನವನ್ನು ವ್ಯಂಗಿಸುತ್ತಲೇ ನಮ್ಮ ಬದುಕುಗಳನ್ನು ತಿದ್ದುವ ಶರೀಫ, ಬದುಕಿದ್ದಾಗಲೂ ಶಿಕ್ಷಕ, ಗತಿಸಿದ ಮೇಲೂ ಶಿಕ್ಷಕ ಎನ್ನುವುದನ್ನು ಖಾತರಿ ಪಡಿಸುತ್ತವೆರ ಹೆಂಡತಿಯಾದವಳು ಹೊಸ್ತಿಲೊಳಗೆ ಇರಬೇಕಾದುದರ ಸುಖವನ್ನು ವಿವರಿಸುತ್ತದೆ.
ಒಂದು ವಾರದ ಅಲೆದಾಟದ ನಂತರ ಊರಿಗೆ ಬಂದಾಗ ಎಷ್ಟೊಂದು ತಾಯಂದಿರ, ಅಭಿಮಾನಿಗಳ ಹರಕೆ ಮತ್ತು ಕಾಣಿಕೆ. ಝಾನ್ಸಿ, ಮುಂಬಯಿ, ಗೋಕರ್ಣ, ಚಿಂತಾಮಣಿ ಸಾಲು ಸಾಲಾಗಿ ಹರಕೆಗಳು, ಹಾರೈಕೆಗಳು ಮತ್ತು ಕೊಡುಗೆಗಳು. ಇದನ್ನೊಂದು ಶಾಲುಗಳ ಸಂತೆಯೇ ಎನ್ನಬೇಕು. ಇನ್ನು ಹರಕೆಯ ಈ ಶಾಲುಗಳು ನನ್ನ ಬದುಕಿನ ಭಾಗಗಳೇ ಆಗಬೇಕು. ಅಷ್ಟೊಂದು ಬಂದಿವೆ, ಕೆಲವು ನಿಮ್ಮೊಂದಿಗಿವೆ. ನಿಮ್ಮ ಅಭಿಮಾನದ ಧೂಳಿನ ಕಣವಾದ ನಾನು ಅಹಂಕಾರದ ಸಂಕೇತವಾಗದೆ ಹೋದರೆ ಸಾಕು ನಾನು ಈ ದೇಶದ ಸೂಫಿಗಳನ್ನು, ಸಾಧು-ಸಂತರನ್ನು ಗೌರವಿಸಿದ್ದೇನೆ ಎಂದುಕೊಂಡಿದ್ದೇನೆ.
Wednesday, May 21, 2014
ಬರೆದು ಬಿಟ್ಟಿದ್ದೇನೆ, ತೆರೆದೂ ಬಿಡುತ್ತೇನೆ
2012, ಜುಲೈ ತಿಂಗಳ ಮೊದಲ ಮಳೆಗಳ ಮಣ್ಣಿನ ವಾಸನೆಯೊಂದಿಗೆ ಮೈದಾಳಲಾರಂಭಿಸಿದರು
ನನ್ನ ಸಾಕಿಯರು. ಉತ್ತರ ಕರ್ನಾಟಕದ ವಾಡೆಯಂಥ ಸಕಲೇಶಪುರದ ಹಳೆಯ ಮನೆ, ಕಾಲು ಕೆದರುತ್ತ ಸುತ್ತಲು ಸುಳಿದಾಡುವ
ಕೋಳಿ, ನಾಯಿ, ಅಪರೂಪಕ್ಕೊಮ್ಮೆ ಕಪ್ಪೆ ಹಿಡಿಯಲು ಬರುತ್ತಿದ್ದ ಹಾವು, ಮನೆಗೆ ಸುತ್ತುವರಿದು ಹುಟ್ಟುತ್ತಿದ್ದ
ಕಾಡುಕಾಡಾದ ಹೂ, ಹುಲ್ಲು ಗರಿಕೆಯ ಮೇಲೆ ಮಗಳ ರೆಪ್ಪೆಯಂಚಿನಲ್ಲಿ ಹೊಳೆಯುವ ಕಣ್ಣೀರ ಹನಿಯಂಥ ತುಂತುರು,
ಎಲ್ಲ ಈ ಸಾಕಿಯರಂತೆ. ಲೆಕ್ಕಕ್ಕೆ ಸಿಗುವುದಿಲ್ಲ, ಒಕ್ಕಣಿಕೆಗೆ ಒಳಗಾಗುವುದಿಲ್ಲ. ಇದು ಮೋಡ ತೆಕ್ಕೆ
ಹೊಡೆಯುವ ವಿಫಲ ಯತ್ನ.
ನಾನು ಇವರ ಕುರಿತು ಮಾತಾಡುತ್ತ
ಹೊರಟೆ, ಅವಳು ಹರಿಯುವ ಮಾತಿಗೆ ಲಿಪಿಯ ಕಟ್ಟೆ ಕಟ್ಟುತ್ತ ಪಾತ್ರಗಳಾಗಿ ನಿಲ್ಲಿಸಿ ಬಿಟ್ಟಳು. ಗೆಳೆಯ
ರಾಜು ಮಳವಳ್ಳಿ "'ಸಿಹಿ ಗಾಳಿ'ಗಾಗಿ ಏನಾದರೂ ವಿಶೇಷ ಕೊಡಿ ಸಾಹೇಬರೆ" ಎಂದು ಕೇಳಿದ್ದೇ
ಸಾಕಾಯಿತು, ನವೆಂಬರ್ ತಿಂಗಳ ವಿಶೇಷಾಂಕದಲ್ಲಿ ಬಯಲಿಗೆ ಬಿದ್ದ ನನ್ನ ಸಾಕಿಯರು 14 ತಿಂಗಳು ನಿರಂತರ
ಹಾಡಿದ್ದೇ ಹಾಡು. ಈ ಹಾಡುಗಳು ಕೆಲವರಿಗೆ ಇಷ್ಟ ಮತ್ತೆ ಕೆಲವರಿಗೆ ಕನಿಷ್ಟ. ಕೆಲವರಿಗೆ ಆತ್ಮದ ಆಲಾಪ
ಮತ್ತೆ ಕೆಲವರಿಗೆ ರೋಚಕ ರಂಜನೀಯ ಓದು. ಯಾರು ಏನಾದರೂ ಅಂದುಕೊಳ್ಳಲಿ ಬರಬೇಕಾದವರು ಬಂದುಬಿಟ್ಟಿದ್ದಾರಷ್ಟೆ.
ಇಂಥ ನೀಚ ಬದುಕುಗಳು ಯಾವ ಕಾರಣಕ್ಕಾಗಿ ಬರೆಯಲ್ಪಡಬೇಕು? ಇವು ಕೊಡುವ ಸಂದೇಶವಾದರೂ
ಏನು? ಕಾಮದ ಕಮನೀಯತೆಯನ್ನು ಕತ್ತಲೊಳಗಷ್ಟೆ ಖುಷಿಯಾಗಿಸಿಕೊಳ್ಳುವುದು ಒಳಿತಲ್ಲವೆ? ಎಂದು ಕೆಲವರು
ಜರಿದರೆ, ಮತ್ತೆ ಕೆಲವರು ಇದು ಬದುಕು ಸಾಗಿದ ರೀತಿ. ಇಂಥ ಬದುಕುಗಳಿಗೆ ಯಾವ ಲಯ, ಬದ್ಧತೆ ಹಾಗೂ ವ್ಯಾಕರಣಗಳು
ಇರುವುದಿಲ್ಲ. ಇದ್ದಂತೆ ಇರಲಿ ಬಿಡಿ ಎಂದು ಸಮಾಧಾನಿಸಿದವರು ಮತ್ತೆ ಕೆಲವರು. ಬರಹ ಮುಗಿದು, ಮುದ್ರಣ
ಮನೆ ಸೇರಿ, ಅಲ್ಲಿಂದ ಮನೆಮಾತಾಗಿ, ಮತ್ತೆ ಒಂದು ಪುಸ್ತಕ ರೂಪದಲ್ಲಿ ಕಟ್ಟಿಕೊಡುತ್ತಿರುವ ಈ ವೇಳೆಯಲ್ಲಿ,
ಇನ್ನೂ ನಾನು ಅದೇ ದ್ವಂದ್ವದಲ್ಲಿದ್ದೇನೆ. ಸತ್ತವರನ್ನು ನೆನಪಾಗಿ ಎಬ್ಬಿಸಿ, ಸಮಾಜಕ್ಕೆ ಭೂತವಾಗಿ
ಬೆನ್ನಟ್ಟಿಸುವ ನನ್ನ ಈ ಕ್ರಿಯೆ ಎಷ್ಟರ ಮಟ್ಟಿಗೆ ಸೂಕ್ತ? ಹೀಗಾಗಿಯೇ ಇರಬಹುದು, ಗೆಳತಿಯೊಬ್ಬಳ ಪರಿಶ್ರಮದಿಂದ
ಸಂಪೂರ್ಣಗೊಂಡು, ಹಲವು ತಿಂಗಳಿಂದ ನನ್ನ ಟೇಬಲ್ಲಿನ ಮೇಲೆ ಬಿದ್ದುಕೊಂಡಿದ್ದ ಈಕೆಯನ್ನು ಮತ್ತೆ ಛೇಡಿಸಿದವರು,
ಪೀಡಿಸಿದವರು ಚಿತ್ರ ಕಲಾವಿದ ಗೆಳೆಯ ಶ್ರೀ ಬಿ.ಎಸ್.ದೇಸಾಯಿ.
ಬರೆದು ಬಿಟ್ಟಿದ್ದೇನೆ, ತೆರೆದೂ ಬಿಡುತ್ತೇನೆ. ತೆಕ್ಕೆಯೋ, ಧಿಕ್ಕಾರವೋ: ಸಾಂತ್ವಾನವೋ,
ಸಾವೋ ಎಲ್ಲ ನಿಮಗೇ ಸೇರಿದ್ದು. ಕೃತಿಯ ಮುಖಪುಟವನ್ನು ನಿಮಗೆ ತೋರಿಸುತ್ತಿದ್ದೇನೆ. ಕೇವಲ ಒಂದು ತಿಂಗಳು
ಕಾಯಿರಿ, ಬರುತ್ತಾರಿವರು ಬೆಳಕಾಗಿ, ಕೊಳಕಾಗಿ, ಎದೆ ಕಲಕುವ ಕಥೆಗಳಾಗಿ.
Thursday, May 15, 2014
ಕಣ್ಣೊದ್ದೆಯಾದಾಗ ಬುದ್ಧನೊಬ್ಬನೇ ಇದ್ದ!!!
ನನ್ನ ಮನೆಗೆ ಬುದ್ಧ ಬರುವ ಕಾಲ, ಸಿದ್ಧತೆ ನಡೆದಿತ್ತು ನನ್ನ ಮನೆಯೊಳಗೆ ಹಾಗೂ
ಮನದೊಳಗೆ. ದಿನಾಂಕ 10, ಮಧ್ಯರಾತ್ರಿ ಎರಡು ಗಂಟೆಯ ಸಮಯ ಏನೋ ಓದಿಬಿಟ್ಟೆ. ನಮ್ಮ ಬೆನ್ನು ಹಿಂದೆಯೇ
ನಮ್ಮ ಎದೆ ಸೀಳುವ ಮೋಸದ ಆಲೋಚನೆ ಹೆಪ್ಪುಗಟ್ಟುತ್ತದೆ ಎನ್ನುವುದು ಎಷ್ಟೊಂದು ಆಘಾತಕಾರಿ! ಬೇಸರ, ಸಿಟ್ಟು
ಮತ್ತು ಮನುಷ್ಯ ಜಾತಿಯ ಬಗ್ಗೆ ಅಸಹ್ಯ ಎಲ್ಲ ಮಡುಗಟ್ಟಿದವು ಮನಸ್ಸಿನಲ್ಲಿ. ಬಿಕ್ಕಳಿಕೆ ಉಮ್ಮಳಿಸಿ
ಕಣ್ಣೊದ್ದೆಯಾದವು. ಆನಂತರ ಬರೀ ಮೌನ.
ಹೊರಗೆ ಕತ್ತಲು
ಕರಗುತ್ತಲಿತ್ತು ಆದರೆ ನಸುಕಿನ ನಿದ್ರೆಯೊಳಗೆ ಬುದ್ಧ ಬರುತ್ತಲಿದ್ದ. ಅವನು, ಅವನೊಂದಿಗೆ ಕಬೀರ, ಅಕ್ಕಮಹಾದೇವಿ,
ಸಾಕ್ರೆಟಸ್, ಸೂಳೆ ಸಂಕವ್ವ, ಮೀರಾ ಸಾಲು ಸಾಲಾಗಿ ಸಾಂತ್ವಾನದ ಕೈಗಳು, ನನ್ನ ದಡ್ಡತನಕ್ಕೆ ಮುಗುಳ್ನಗುವ
ಮೈ ಮುಖಗಳು. ಹೇಸಿ ಮೋಹದ ಮೇಲಿಯೂ ಮಲ್ಲಿಗೆಯ ಹಾಸಿ, ನಿರ್ಭಾವುಕನಾಗಿ ಎದ್ದು ಹೆಂಡತಿಯೊಂದಿಗೆ ಬುದ್ಧನ
ಬರುವಿಗಾಗಿ ಕಾಯಲು ಸಿದ್ಧನಾದೆ.
ನನ್ನಪ್ಪನಿಂದಾಗಿ ನಾನು ಕಬೀರನ ಕೈ ಹಿಡಿದೆ. ನನ್ನ ಓದಿನಿಂದಾಗಿ ನಾನು ಬುದ್ಧನ
ಬಾಗಿಲಿಗೆ ಬಂದೆ. ಈ ಮಧ್ಯ ಎಷ್ಟೆಲ್ಲ ಓದಿದ್ದರೂ ಬದುಕಿಗೆ ಬೆಂಗಾವಲಾಗಿ ನಿಂತವರು ಇವರಿಬ್ಬರೆ. ಹಾಗಾದರೆ
ಅದ್ಯಾವ ಬೋಧ ಸುಧೆ ನನಗಿವರು ಉಣ್ಣಿಸಿರಬಹುದು? ಸರಳವಾಗಿದೆ ಉತ್ತರ. ಮಡದಿಯೇ ಮತ್ತೊಬ್ಬನಿಗಾಗಿ ಮಿಡುಕಾಡುತ್ತಿದ್ದುದು
ಗೊತ್ತಿದ್ದು, ಕಬೀರ ಆಕೆಗೆ ನಾವಿಕನಾಗಿ, ತಾನು ವಿರ್ಭಾವುಕನಾಗಿ ಬಿಟ್ಟು ಬಂದ. ಇನ್ನು ಬುದ್ಧ ತಾನುಣ್ಣುವ
ಹಂದಿ ಮಾಂಸದ ಭೋಜನವೆ ತನ್ನ ಬದುಕಿನ ಕೊನೆಯ ಊಟವಾಗುತ್ತದೆ ಎಂದು ಗೊತ್ತಿದ್ದೂ ಅದನ್ನ ಆತ ನಿರಾಕರಿಸಲಿಲ್ಲ.
ಹೀಗೆ ಇಬ್ಬರೂ ಈ ಬದುಕು ನೀಡುವ ಉರಿ ಇರಲಿ, ಸಿರಿ ಇರಲಿ ತಮ್ಮೆದುರೇ ಮೋಸದ ಮಹಾ ಮುಖವಿರಲಿ ಅವುಗಳನ್ನು
ಮನಸಾರೆ ಸವರಿ, ಮುತ್ತಿಟ್ಟು ಮನುಷ್ಯರನ್ನಾಗಿಸಲು ಯತ್ನಿಸಿದವರು. ಇಂಥ ಬುದ್ಧರು ಬರುವ ಕಾಲ ನಾನು
ಎದ್ದು ನಿಲ್ಲಲೇ ಬೇಕಿತ್ತು ಶಿರ ಬಾಗಿ ನಮಸ್ಕರಿಸಿ ಬೆಳಕನ್ನು ಬರಮಾಡಿಕೊಳ್ಳಬೇಕಿತ್ತು. ಕಬೀರನಂತೆ
ಮೌನಿಯಾಗಲೇಬೇಕಿತ್ತು ನಾನು, ಮತ್ತೆ ಬುದ್ಧನಂತೆ ಶಾಪಗಳ ಕೂಪದಲ್ಲಿ ಬಿದ್ದವರಿಗೂ ಸನ್ಮಂಗಲವೇ ಆಗಲಿ
ಎಂದು ಹರಸಿ ಮುಗುಳ್ನಗಬೇಕಿತ್ತು.
ಬೌದ್ಧ ಪೂರ್ಣಿಮೆಯ ತುಣುಕು ಬೆಳಕಿನಂತೆ ಹುಟ್ಟಿದವಳು ನನ್ನ ಮಗಳು. ಯಾವ ವೈಶಾಖ
ಪೂರ್ಣಿಮೆಯ ದಿನ ಬುದ್ಧ ಈ ಪ್ರಪಂಚಕ್ಕೆ ¨ಂದು, ಇದೇ ದಿನದಂದು ಜ್ಞಾನೋದಯ ಹೊಂದಿ ಮತ್ತೆ ಇದೇ ದಿನ
ನಿರ್ವಾಣ ಹೊಂದಿದನೋ ಅದೇ ದಿನದಲ್ಲಿ ನನಗೆ ಮಗಳು ಹುಟ್ಟಿದ್ದು. ಈ ದಿನದ ಬಗೆಗಿನ ನನ್ನ ವಿಚಿತ್ರ ಮೋಹಕ್ಕೆ
ಇದೂ ಒಂದು ಕಾರಣ. ಅವಳ ಕಣ್ಣು ರೆಪ್ಪೆಗಳಲ್ಲಿ ನಾನು ಬುದ್ಧನ ಅಬಾಧಿತ, ಶಾಂತ ನಿದ್ರೆಯನ್ನು ಕಂಡಿದ್ದೇನೆ.
ಹೀಗಾಗಿ ಇಂಥ ಘಳಿಗೆಯನ್ನು ಕಳೆದುಕೊಳ್ಳುವುದೆಂದರೆ ಬೆಳಕಿನಿಂದ ಮುಖ ಮುಚ್ಚಿಕೊಂಡಂತೆ. ಬೇಲೂರಿನ ವೇಲಾಪುರಿ
ಸಾಹಿತ್ಯ ವೇದಿಕೆಯ 20 ನೆಯ ಮನೆ ಮನೆ ಸಾಹಿತ್ಯ ಗೋಷ್ಠಿಯನ್ನು ಈ ಬೌದ್ಧ ಪೂರ್ಣಿಮೆಯ ಮತ್ತು ಮಗಳ ಜನ್ಮ
ದಿನದ ಕಾರಣಾರ್ಥ ಹಮ್ಮಿಕೊಂಡೆ. ಬುದ್ಧನ ನಗೆಯಂತೆ ಈ ಸಮಾರಂಭ ಇರಬೇಕೆನ್ನುವುದು ನನ್ನ ಬಯಕೆಯಾಗಿತ್ತು.
ಮಾತಿರಬಾರದು, ಗೊಡ್ಡು ಪಾಂಡಿತ್ಯದ ಪ್ರದರ್ಶನವಿರಬಾರದು, ಮಕ್ಕಳು ಮಹಿಳೆಯರು, ತಿಳಿದವರು ತಿಳಿಯದವರೂ
ಆನಂದಿಸುವ ಸರಳ ಸಭೆ ಇದಾಗಿರಲಿ ಎಂದುಕೊಂಡು ರಂಗ ಗೀತೆಗಳನ್ನು ಹಾಡಿಸಿ, ಆ ಮೂಲಕ ಬುದ್ಧನ ಬೆಳಕನ್ನು
ಆಹ್ವಾನಿಸಿ ಅವಳನ್ನು ಹರಸಬೇಕೆನ್ನುವುದು ನನ್ನ ತಹತಹಿಕೆ. ಹಾಗೆಯೇ ಆಯಿತು. ಸೇರಿದ ಮೂವತ್ತು ಜನರಲ್ಲಿ
ಹತ್ತಾರು ಜನ ಹಾಡಿ ನನ್ನ ಮನೆ ಮನಗಳನ್ನ ಚೇತೊಹಾರಿಯಾಗಿಸಿದರು. ಸಾಯಂಕಾಲ 5 ಗಂಟೆಯಿಂದ ರಾತ್ರಿಯ
2 ಗಂಟೆಯವರೆಗೂ ವೈಶಾಖ ಪೂರ್ಣಿಮೆಯ ಬೆಳಕಿನಲ್ಲಿ ಹಸುಳೆಯನ್ನು ಹುಡುಕಿಕೊಂಡು ಹಾರೈಸಲು ಬುದ್ಧ ಬರುತ್ತಲೇ
ಇದ್ದ, ಗೆಳೆಯನಾಗಿ, ಹಿರಿಯನಾಗಿ ಮತ್ತು ಹೆಂಗಸಾಗಿ.
ಬರುತ್ತಿರಲಿ
ಬುದ್ಧ ಹಿಗೆಯೇ, ಕಾಡಿಸುತ್ತ ಪಿಡಿಸುತ್ತ, ಹಂಗಿಸುತ್ತ ಮುಗುಳ್ನಗೆಯಿಂದ ವ್ಯಂಗಿಸುತ್ತ. ಅವನೆಷ್ಟು
ಸಾರಿ ಬಂದರೂ, ಯಾವ ರೂಪದಲ್ಲಿ ಬಂದರೂ ನಾನು ಮತ್ತೆ ಮತ್ತೆ ಕರೆಯುತ್ತೇನೆ, ಈ ಬಾಗಿಲುಗಳನ್ನು ಹಿಗೆಯೇ
ತೆರೆದಿಟ್ಟುಕೊಂಡು ಕುಟುಂಬ ಸಮೇತನಾಗಿ ಆಹ್ವಾನಿಸುತ್ತಲೇ ಇರುತ್ತೇನೆ ಬಾ ಬುದ್ಧನೆ ನಮ್ಮ ಬೆಳಕಾಗು
ಎಂದು.
Thursday, May 1, 2014
ಕಾವಲು ನಿಲ್ಲಿಸಿದ್ದೇನೆ ಕಾವ್ಯವನ್ನು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕದಳಿ ಮಹಿಳಾ ವೇದಿಕೆ, ತಾಲೂಕಾ ಶರಣ ಸಾಹಿತ್ಯ ಪರಿಷತ್, ಜಲಮಿತ್ರ ರಂಗ ವೇದಿಕೆ, ಚುಟುಕು ಸಾಹಿತ್ಯ ಪರಿಷತ್, ಮರುಳ ಸಿದ್ಧೇಶ್ವರ ಯುವಕ ಮಂಡಳಗಳ ಸಹಕಾರದೊಂದಿಗೆ ಗೆಳೆಯ ಉಮೇಶ ತಿಮ್ಮಾಪುರ ಅವರ ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ಮುಂಡರಗಿಯ ಕೆ.ಆರ್.ಬೆಲ್ಲದ ಕಾಲೇಜನಲ್ಲಿ ದಿನಾಂಕ 20/04/2014 ರ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಗೆ ನನ್ನೊಂದಿಗೆ ಕುಂ.ವೀರಭದ್ರಪ್ಪ, ಮುಖ್ಯ ಅತಿಥಿಯ ಪಾತ್ರಕ್ಕೆ ನಾನು. ಗೋಷ್ಠಿ ಒಂದರಲ್ಲಿ ಗೆಳೆಯರಾದ ಪ್ರಕಾಶ ಖಾಡೆ, ವಿದ್ಯಾ ಕುಂದರಗಿ, ಸಾವಿತ್ರಿ ಮುಜುಂದಾರ ಕವಿಗೋಷ್ಠಿಯಲ್ಲಿ ವಡ್ಡಗೆರೆ ನಾಗರಾಜಯ್ಯ, ರಾಜೇಶ್ವರಿ.ಎನ್ ಹಾಗೂ ಉಳಿದ ಇಪ್ಪತ್ನಾಲ್ಕು ಕವಿಗಳು, ಸಮಾರೋಪಕ್ಕೆ ಗೆಳೆಯರಾದ ಡಾ.ಬಾಳಾಸಾಹೇಬ ಲೋಕಾಪೂರ, ವೆಂಕಟಗಿರಿ ದಳವಾಯಿ, ಡಾ. ನಿಂಗು ಸೊಲಗಿ ಹಾಗೂ ಜೋಳದ ಕೂಡ್ಲಿಗಿ.
ಚಿಕ್ಕಮಂಗಳೂರು,
ಹರಿಹರ, ಹೂವಿನ ಹಡಗಲಿ ಮಾರ್ಗವಾಗಿ ಹಿಂದಿನ ದಿನ ಮುಂಡರಗಿಯನ್ನು ತಲುಪಿದ ನಾನು ಸರಿಯಾಗಿ ಎರಡು ರಾತ್ರಿ
ಉತ್ತರ ಕರ್ನಾಟಕದ ಊಟ, ವಿಚಾರ ಹಾಗೂ ಪ್ರೀತಿಯ ಜಾತ್ರೆಯಲ್ಲಿ
ಇದ್ದೆ ಎಂದೇ ಹೇಳಬೇಕು.
ಕಾವಲು
ನಿಲ್ಲಿಸಿದ್ದೇನೆ
ಕಾವ್ಯವನ್ನು,
ಸತ್ಯ ಸಂಘರ್ಶಗಳ
ಬೆನ್ನಿಗೆ
ಪದ ಗುಚ್ಚಗಳನ್ನೇರಿಸಿ
ಜಾತಿ-ಮತದ
ಗಡಿಯಲಿ
ಸಾಲು
ಕಟ್ಟಿದ್ದೇನೆ ಸಮಾನತೆಯ
ಅಸಮಾನತೆಯ
ಕಟುಸಂಕೋಲೆಯ
ಲಾಂಛನ
ಕಿತ್ತೆಸೆದು
ಹೀಗೆ ಕವಿತೆಗೊಂದು ಕಾಯಕ ಕಟ್ಟಿ ‘ಬಿರಿದ ನೆನಪುಗಳು’,
‘ಮೆಘಧ್ವನಿ’, ‘ತ್ವಯ್ದ ಬದುಕಿನ ಸಾಲು’. ‘ಒರತೆ’, ‘ಕಾಡುದಾರಿಯ ಕಂದಿಲುಗಳು’, ‘ನಡುಹಗಲ ಸಂಜೆ’,
‘ಸಮುಕ್ಷ’, ‘ಕಥಾಲೋಕ’ ಹತ್ತು ಹಲವಾರು ಕೃತಿಗಳನ್ನು ರಚಿಸಿ, ನನ್ನೊಂದಿಗೆ ನಮ್ಮವನಾಗಿ ಎಲ್ಲರನ್ನು
‘ಅಣ್ಣಾ’ ಎನ್ನುವ ಸಂಬೋಧನೆಯಿಂದಲೇ ಬಾಚಿ ತಬ್ಬುವ ಉಮೇಶನ ಸಾಹಿತ್ಯದ ವಿಮರ್ಶೆಗೆ ಇನ್ನೂ ದೀರ್ಘವಾದ
ದಾರಿಯಿದೆ, ಸಮಯವೂ ಇದೆ. ಆದರೆ ಬರಹವನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಎತ್ತಿಕೊಂಡಿರುವ ಇಂಥ
ಗೆಳೆಯನನ್ನು ಪ್ರೋತ್ಸಾಹಿಸಬೇಕಾದುದು ನಮ್ಮ ಧರ್ಮವಾಗಿದೆ. ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ
ಉಮೇಶ ಇದೇ ಮುಂಡರಗಿ ತಾಲೂಕಿನ ಕೆಲುರು ಗ್ರಾಮದವ. 42 ವಯಸ್ಸಿನ ಈ ನನ್ನ ಗೆಳೆಯನಿಗೆ ಸಾವಿರಾರು ಕನಸುಗಳು
ಇವೆ. ಅವುಗಳನ್ನು ಕಾಪಾಡಿಕೊಂಡರೆ ಸಾಗಿದಷ್ಟು ದಾರಿಯೂ ಇದೆ. ಅವನ ಕಾವ್ಯ ಕುರಿತು ಮುಂಡರಗಿಯಲ್ಲಿ
ಮಾತನಾಡುತ್ತ ನಾನು ಒಂದು ಮಾತನ್ನು ಹೇಳಿದೆ : With
the magnanimity of innocence poets take birth, but alas! With individual hypocrisy
they die.
ಇದೊಂದು ಸ್ಥಳೀಯ ರೋಗ. ಎಷ್ಟೆಲ್ಲ ಪ್ರತಿಭೆ ಇರುವ ಅದೆಷ್ಟೋ ಬರಹಗಾರರು ಇದರಿಂದ ಬಿಡಿಸಿಕೊಳ್ಳುವದಾಗಿಲ್ಲ.
ಪರಸ್ಪರ ಕಾಲೆಳೆಯುವದರಲ್ಲಿ ಯೇ
ಕಾಲ ಕರಗಿ ಹೋಗಿದೆ.
ಸಂತೋಷದ
ಸಂಗತಿ ಇದರಿಂದ ಹೊರತಾದವನು ಗೆಳೆಯ ಉಮೇಶ ತಿಮ್ಮಾಪೂರ. ಇವನ ಅನೇಕ ರಚನೆಗಳಲ್ಲಿ ನನಗೆ ಇಷ್ಟವಾದ ಒಂದು
ರಚನೆ ನಿಮ್ಮೊಂದಿಗೆ. . . . .
ನೀನೆಂದರೆ
ಮೈಮುರಿದು
ಮಲಗಿದ ಬೆಟ್ಟ
ಸುಖ
ಸ್ಪರ್ಶ ನೀಡುವ
ತಂಗಾಳಿ
ತಲೆಯ
ತೆವಲಿನ ತುರುಬ
ಬತ್ತಿ
ಹೆಣೆದ ಜಡೆಗೆ
ತೀಡಿ
ಮಾಡಿದ
ಮುತ್ತು
ಮಾಲೆ
ನೀನೆಂದರೆ.
.
ಕಾಡು
ತೋಪಿನ ಮಾವು
ರೆಂಬೆಗಿಳಿದಾ
ಗೊಂಚಲು
ಹಸಿದ
ಹೊಟ್ಟೆ ತಣಿದ
ರಸಪಾಕ
ನೀನೆಂದರೆ.
.
ಹರಿವ
ನೀರ್ಝೆರೆ
ತುಳುಕಿ
ದಡ ಸೇರುವ
ತೆರೆ
ಸರಿದ
ಕತ್ತಲಿನ
ಸೆರಗ
ಮುಡಿಯಲಿ ತುಂಬುವ
ಹಗಲ
ಬೆಳಕಿನ
ಕಣ್ಣ
ಮಂಜು
ನೀನೆಂದರೆ.
.
ಒಡಲು
ಬಿರಿದ
ನೆಲದೊಡತಿಯ
ಮಳೆಯ
ಮುಂಜಾವ
ಎದೆಯೊಳಗ
ಪುಳಕಗೊಂಡ
ಜಲಕನ್ಯ
Wednesday, April 30, 2014
ಕೃಷ್ಣೆ, ನಾನು ಮತ್ತು ಅಂಬೇಡ್ಕರ್
ದಿನಾಂಕ
14 ಏಪ್ರಿಲ್ 2014 ರಂದು ನನ್ನ ಕೇಳುಗರು ಜಮಖಂಡಿಯ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು.
2003 ರಿಂದ 2014 ವರೆಗಿನ 11 ವರ್ಷದ ಅವಧಿಯಲ್ಲಿ
ಈ ಕಾಲೇಜಿಗೆ ಬಹುತೇಕ ಎರಡನೆಯ ಭೇಟ್ಟಿ. ಈ ಎರಡು ಸಂದರ್ಭಗಳಿಗೆ ಕಾರಣ ವ್ಯಕ್ತಿ ಹಾಗೂ ಕಾಲೇಜಿನ ಇಂಗ್ಲೀಷ್
ವಿಭಾಗದ ಮುಖ್ಯಸ್ಥ ಗೆಳೆಯ ವಿಠ್ಠಲ್ ದಳವಾಯಿ. ನನ್ನ ಸಾಹಿತ್ಯ ಸೃಷ್ಠಿಯ ಹಲವು ಹಂತಗಳ ಪ್ರೀತಿಯ ಉದ್ಧರಣೆ.
ಈತನ ಕಾರಣಕ್ಕಾಗಿಯೇ ನನ್ನ ‘ಅವಳು ಎನ್ನುವ ಅಪಾರ್ಥ’ ಸೃಷ್ಠಿಯಾಯಿತು. ಈತ ಅಪರೂಪಕ್ಕೊಮ್ಮೊಮ್ಮೆ ಕುಳಿತು
ಗುಂಡು ಹಾಕಿದಂತೆ ನನ್ನ ಸಾಹಿತ್ಯಕ್ಕೂ ನೀರೆರೆದಿದ್ದಾನೆ, ಬೆಳೆಸಿದ್ದಾನೆ, ಬೆಳೆದ ಮರವನ್ನು ಕಂಡು
ಹೆಮ್ಮೆ ಪಟ್ಟಿದ್ದಾನೆ. ನನ್ನನ್ನು ಅಲೆಮಾರಿಯಾಗಿಸಿ ತಾನು ಮಾತ್ರ ಕೃಷ್ಣಾ ನದಿ ತೀರದ ಜಮಖಂಡಿ ಮತ್ತು
ಟಕ್ಕಳಕಿಯ ಮಧ್ಯ ಕೃಷ್ಣಸುಧೆಯನ್ನು ಅನುಭವಿಸುತ್ತಾ ಅಮರನಾಗಿದ್ದಾನೆ.
ಹಿಂದಿನ ಸಾರಿ ಇಲ್ಲಿ ಬಂದಾಗ ನನ್ನ ಕೈಯಲ್ಲಿ ರಜನೀಶ್(Rajanisha,
OSho) ಇದ್ದರೆ, ಈ ಸಾರಿ ನನ್ನೊಂದಿಗೆ ಬಂದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್(Dr. Ambedkar).
2009 ಕ್ಕೆ ಬೇಲೂರಿಗೆ ಬಂದ ನಾನು ನಿರಂತರ ಮೂರು ವರ್ಷ ಅಂದರೆ 2012 ವರೆಗೆ ನಾನು ಮತ್ತೆ ಮತ್ತೆ ಸಾರ್ವಜನಿಕವಾಗಿ
ಕುರಿತು ಮಾತನಾಡಿದ, ಚರ್ಚಿಸಿದ ಚಿಂತಕ ಯಾರದರು ಇದ್ದರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಒಂದು
ಜನಾಂಗದ ಆಮೂಲಾಗ್ರ ಅಭಿವೃದ್ಧಿಗೆ ಕಾರಣವಾದ ಒಬ್ಬ ವ್ಯಕ್ತಿಯಾಗಿ ಅವರು ನನ್ನನ್ನು ಕಾಡಿದುದರಕ್ಕಿಂತಲೂ
ಹೆಚ್ಚಾಗಿ ಓರ್ವ ಇತಿಹಾಸ ತಜ್ಞನಾಗಿ, ಸಮಾಜ ಶಾಸ್ತ್ರಜ್ಞನಾಗಿ ಹಾಗೂ ಮಾನವ ಥಳಿಶಾಸ್ತ್ರದ ವಿಜ್ಞಾನಿಯಾಗಿ
ಕಾಡುವ ರೀತಿ ಅನನ್ಯವಾದುದು. ಭಾರತೀಯ ಎಲ್ಲ ಸಾಮಾಜಿಕ ಸುಧಾರಕರಿಂದ ಅಂಬೇಡ್ಕರ್ ಭಿನ್ನವಾಗಿ ನಿಲ್ಲುವುದು
ಈ ಸಮಾಜದ ನ್ಯೂನ್ಯತೆಯನ್ನು ಹುಡುಕುವುದರಲ್ಲಿ. ಉದಾಹರಣೆಗೆ ಜಾತಿ ಪದ್ಧತಿಯ ಮೂಲವನ್ನು ಹುಡುಕುತ್ತ
ಹೋಗಿ ಅವರು ಹೇಳುವ ಈ ಸಾಲುಗಳನ್ನು ಓದಿ “
People
are not in observing Caste. In my view, what is wrong is their religion, which
has inculcated this notion of Caste. If this is correct, then obviously the
enemy, you must grapple with, is not the people who observe Caste, but the
Shastras which teach them this religon of Caste. ”
1936 ರಲ್ಲಿ ಇಂದಿನ ಪಾಕಿಸ್ತಾನದ ಲಾಹೋರ್‍ನಲ್ಲಿ ಜಾತಪಥ್ ತೋಡಕ್ ಮಂಡಳಿಯನ್ನು ಉದ್ಧೇಷಿಸಿ ಅವರು
ಮಾಡಿದ ಈ ಭಾಷಣದಲ್ಲಿ ಇಂಥ ಒಬ್ಬ ಸಮ ದೃಷ್ಠಿಯ, ನಿರ್ವಿಕಾರದ ಹಾಗೂ ನ್ಯಾಯ ಪರವಾದ ಚಿಂತಕನನ್ನು ನಾನು
ನೋಡಿದ್ದೇನೆ. ‘ಅನಿಹಿಲೇಶನ್ ಆಪ್ ಕಾಸ್ಟ್’ ಎಂಬ ಶಿರ್ಷಿಕೆಯ ಅವರ ಈ ಬರಹ ನನ್ನ ಪಾಲಿನ ಕಾವ್ಯವೇ ಆಗಿದೆ.
ಜಮಖಂಡಿಯ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಅಂಬೇಡ್ಕರ್ ಜಯಂತಿಯ ಈ ದಿನ ನನ್ನಿಂದ ಮಾತನಾಡಿಸಿದ್ದು
ಸುಮಾರು ಒಂದುವರೆ ಗಂಟೆ. ಅಪರೂಪಕ್ಕೆ ಇಂಥ ಸಹನೆಯ ವೇದಿಕೆಗಳು ನಮಗೆ ಸಿಗುತ್ತವೆ.
ಕಾರ್ಯಕ್ರಮದ ಎರಡನೆಯ ಭಾಗ ಇದೇ ಕಾಲೇಜಿನ ಇಂಗ್ಲೀಷ್
ವಿಭಾಗಕ್ಕೆ ಸಂಬಂಧಿಸಿದ್ದು. ‘ಮೀಟ್ ದಿ ಆಥರ್’ ಯೋಜನೆಯಡಿ ನನ್ನ ಮೊದಲ ಉಪನ್ಯಾಸ ಕಾವ್ಯವನ್ನು ಕುರಿತು.
ಅದಕ್ಕೊಂದು ವಿಶೇಷ ಶಿರ್ಷಿಕೆ ‘My Poetry My Life’. ಇತ್ತೀಚಿಗಷ್ಟೆ ಬಂದ ನನ್ನ ಕಾವ್ಯ ಸಂಕಲನ
‘ಇರುವಷ್ಟು ಕಾಲ, ಇರುವಷ್ಟೇ ಕಾಲ’ ಮುಂದಿಟ್ಟುಕೊಂಡು ಸುಮಾರು ಒಂದು ಗಂಟೆಯ ಮಾತು, ಚರ್ಚೆ ಮತ್ತು
ಕಾವ್ಯ ಕಟ್ಟುವ ಪ್ರಯತ್ನಗಳು ಇಲ್ಲಿ ನಡೆದವು. ನಾನು ಹೇಳಿದೆ: ತುಂಡು ತುಂಡುಗಳ ಮಧ್ಯದ ಬೆಸುಗೆಯಿಂದ
ಹುಟ್ಟುವ ಈ ಕೌದಿ ಮಾತ್ರ ಬರೀ ತುಂಡಲ್ಲ. ಅದು ಅಖಂಡ. ಅದು ಅಪೂರ್ಣವಲ್ಲ. ಪೂರ್ಣ-ಸಂಪೂರ್ಣ. ಅದಕ್ಕೆ
ಹೇಳಿದೆ ಕೌದಿ ಕವಿತೆಯಂತೆ ಅಥವಾ ಕವಿತೆ ಕೌದಿಯಂತೆ ಹೇಗಾದರೂ ಅಂದುಕೊಳ್ಳಿ. ಕವಿತೆ ಹುಟ್ಟಿಕೊಳ್ಳುವುದು
ಕೌದಿಯಂತೆಯೆ. ಮುಂದೊಮ್ಮೆ ಸಿದ್ಧವಾಗಬಹುದಾದ ಕೌದಿಗಾಗಿ ಸಂಗ್ರಹವಾಗುವ ಬಣ್ಣ ಬಣ್ಣದ ಬಟ್ಟೆಯ ತುಂಡುಗಳು
ಸಂಗ್ರಹವಾಗುವಂತೆಯೇ ಕಾವ್ಯದ ಸಾಮಗ್ರಿಯೂ ಹಲವು ಕಾಡುವ ನೆನಪು, ಸಂವೇದನೆ, ಘಾಯ, ರಮಿಸುವಿಕೆ, ಅಚ್ಛರಿ,
ಆಲೋಚನೆ ಹೀಗೆ ಏನೆಲ್ಲ ಸ್ವರೂಪದಲ್ಲಿ ನಮ್ಮಲ್ಲಿ ಸಂಗ್ರಹವಾಗತೊಡಗುತ್ತವೆ. ಒಂದೊಮ್ಮೆ ಕವಿತೆಯಂತೆ
ಸಂಪೂರ್ಣವಾಗಿ ಹೊರಬಂದು ಬಿಡುತ್ತದೆ. ಹೀಗೆ ಹುಟ್ಟಿಕೊಂಡದ್ದು ನನ್ನ ‘ಇರುವಷ್ಟು ಕಾಲ... ಇರುವಷ್ಟೇ
ಕಾಲ!’. ಹಾಗೆಯೇ ಕಾವ್ಯವೆನ್ನುವುದು ನನ್ನ ಪಾಲಿಗೆ
ಸಖಿಯಂತೆ. ಎಲ್ಲ ಸಂದರ್ಭದಲ್ಲಿಯೂ ಸಿದ್ಧಳಿರುವ ಇವಳನ್ನು ಆರಾಧಿಸುವುದೇ ಅಭಿಮಾನದ ಸಂಗತಿ.
ಗೆಳೆಯ ವಿಠ್ಠಲನ ಮನೆಯ ಊಟ, ಕೃಷ್ಣೆಯಂತೆ ಮೈದುಂಬಿ
ನಿಂತ ಮಗಳು ಕಿರಣಮಯಿ. ಅಲ್ಲಿಂದ ಬಿಜಾಪುರದ ರೈಲು ನಿಲ್ದಾಣದವರೆಗೆ ಸಾಕು ಸಾಕೆನಿಸುವಷ್ಟು ಕಾರಿನಲ್ಲಿ
ಹರಟೆ ಹೊಡೆಯಲು ಎಳೆಯ ಗೆಳೆಯ ಫಯಾಜ್, ರಾತ್ರಿಗೆ ಗೆಳೆಯನ ಮನೆಯಿಂದ ತಂದ ರೊಟ್ಟಿಯ ಬುತ್ತಿ, ಮತ್ತೆ
ಮಧ್ಯದಲ್ಲಿ ಬಾಗಲಕೋಟೆಯ ಬಜಿ. ಇದಕ್ಕೇ ಹೇಳುವುದು ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’. ಪ್ರೀತಿಯ
ವರತೆ ಇಲ್ಲದ ಯಾವುದೇ ಬೌದ್ಧಿಕ ಮತ್ತು ಭಾವನಾತ್ಮಕ ಚಟುವಟಿಕೆ ಹೆಣದ ಮುಂದಿನ ಅಳುವಿನಂತಿರುತ್ತದೆ.
Subscribe to:
Posts (Atom)















