Total Pageviews

Wednesday, September 17, 2014

ಜಂಗಮನೆಂದರೆ ಜಗಳದ ಜೋಳಿಗೆ



           ಕುಂವಿ ಪದೆ ಪದೆ ಉಲ್ಲೇಖಿಸುವ ಗಾಲಿಬನ್ ಒಂದು ಮಾತು –
 ಬೇಲಿ ಮೇಲಿನ ಸಿಟ್ಟಿಗೆ
                                       ಬೇರಿಗೆ ಬೆಂಕಿ ಇಡಬೇಡ
                                       ಹಬ್ಬಿದ ಬೇಲಿಯೊಳಗೆ ಒಂದಾದರೂ
                                       ಹೂವಿರುವುದನ್ನು ಮರೆಯಬೇಡ.

          ಈ ಕಾರಣಕ್ಕಾಗಿಯೇ ಏನೋ ನಾನು ಮತ್ತೆ ಮತ್ತೆ ಮರಳಿ, ಹೋದ ಸ್ಥಳಗಳಿಗೆ ಹೋಗುತ್ತಿರುತ್ತೇನೆ. ದಿನಾಂಕ: 07/09/2014 ರಂದು ಬಾಗಲಕೋಟೆಯ ಹೊಟೇಲ್ ‘ಅನುಗ್ರಹ’ದಲ್ಲಿ ನಡೆದ ಅಶೋಕ ನರೋಡೆಯವರ ರಾಜ್ಯಮಟ್ಟದ ಸಾಹಿತ್ಯ ವಿಚಾರ ಸಂಕಿರಣಕ್ಕೆ ಹೋದದ್ದು ಈ ಕಾರಣಕ್ಕಾಗಿಯೆ. ‘ಕಳೆದುಕೊಂಡ’ ಊರಲ್ಲಿಯೇ ಪಡೆದುಕೊಳ್ಳಬೇಕು, ಕರುಳು ಮಿಡಿಯುವ ಊರಿಗೆ ಮರಳಿ ಮರಳಿ ಹೋಗಬೇಕು. ಯಾಕೆಂದರೆ ಅದು ನಮ್ಮ ಜೀವಂತಿಕೆಗೆ, ಹೃದಯಪ್ರಾಮಾಣಿಕತೆಗೆ ಸಾಕ್ಷಿಯಾದ ಊರು.
          ದಿನಾಂಕ: 06/09/2014 ರ ಮುಂಜಾವು ಚಿತ್ರದುರ್ಗದಿಂದ  ಬಾಗಲಕೋಟೆಗೆ ಬಂದೆ. ಬಹಳ ದಿನದಿಂದ ನಿದ್ರೆ ಮಾಡಲು ಒಂದು ಪ್ರಶಸ್ತ ಊರು ಬೇಕಾಗಿತ್ತು. ಮುಂಜಾನೆ ಇಳಿಯುತ್ತಲೇ ಓಡಿ ಬಂದ ಕವಿ ಗೆಳೆಯ ಉಮೇಶನಿಗೆ ಯಾರ ಬೇಟಿಯೂ ಬೇಡ ಎಂದು ಹೇಳಿ, ಹೊಟ್ಟೆ ತುಂಬ ಪುರಿ ತಿಂದು ಮಲಗಿದರೆ ಮತ್ತೆ ಏಳುವುದರೊಳಗಾಗಿ ಸಾಯಂಕಾಲದ 4.30. ಆಗಾಗ ಮಳೆ, ಮೋಡಗಳ ಅಬ್ಬರ, ಮಿಂಚು, ಮೊಬೈಲ್ ತುಂಬ 36 ಕರೆಗಳು.

          ಬೀಳಗಿಯಿಂದ ಕಾರಿನೊಂದಿಗೆ ಗೆಳೆಯ ಅಪ್ಪಾಜಿಗೋಳ ಬಂದರು. ಬೀಳಗಿಯ ಬಯಲು ಸಿದ್ಧೇಶ್ವರ ಬೆಟ್ಟದಲ್ಲಿ ನಮ್ಮ ಮದುವೆ ಮಾಡಿ, ತಂದೆಯಾಗಿ ನಿಂತು, ಧಾರೆಯೆರೆದ ಅನಾಥನಾಥ ಅವನು. ಶಿಸ್ತಿನ ಮನುಷ್ಯ. ಇತಿಹಾಸ ಉಪನ್ಯಾಸಕ, ಸ್ವಾಭಿಮಾನಕ್ಕೆ ಧಕ್ಕೆಯಾಗಿ ಬ.ವಿ.ವ.ಸ ದ ನೌಕರಿಗೆ ರಾಜಿನಾಮೆ ಬಿಸಾಕಿ, ಪ್ರಗತಿಪರ ರೈತನಾಗಿ ಉಳಿದಾತ. ಇಬ್ಬರೂ ಸೇರಿ ಸುರಿವ ಮಳೆಯಲ್ಲಿ ‘ಬಳ್ಳಾರಿ ಬಜಿ’ ಅಂಗಡಿ ಹುಡುಕುತ್ತ ಹೊರಟು, ವಲ್ಲಭಭಾಯಿ ಚೌಕ್‍ನಲ್ಲಿ ಹೊಸದಾಗಿ ಪ್ರಾರಂಭವಾದ ಅಂಗಡಿಯಲ್ಲಿ ಬಜಿ ತಿಂದು, ಬೀಳೂರು ಶ್ರೀ ಗದ್ದುಗೆ, ಬ.ವಿ.ವ ಕ್ಯಾಂಪಸ್, ವಿದ್ಯಾಗಿರಿ, ಮಳಿಯಪ್ಪಯ್ಯನ ಮಠ, ಲಡ್ಡು ಮುತ್ತ್ಯಾನ ಗದ್ದುಗೆ ಸುತ್ತಾಡಿದೆವು. ಈ ಊರಿಗೆ ಈಗ ನಾವಿಬ್ಬರೂ ಹೊರಗಿನವರು, ಆದರೆ ಊರ ಪ್ರಪಂಚಕ್ಕೆ ಹತ್ತಿರದವರು. ಮನಸ್ಸು ಬಿಚ್ಚಿದ ಮಾತು, ಮನಸ್ಸಿದ್ದವರೊಂದಿಗೆ ಮಾತ್ರ ಸಾಧ್ಯ.
           ಏನೆಲ್ಲ ಕೊಟ್ಟ ಬಾಗಲಕೋಟೆಗೆ ನಾನೇನೂ ಕೊಡಲಿಲ್ಲವೇನೊ ಎಂಬ ಅಸಮಾಧಾನ ನನಗೆ ಈಗಲೂ ಇದೆ. ಹೀಗಾಗಿಯೇ ಇರಬಹುದೇನೊ ಇಲ್ಲಿಯ ‘ಗೆಳೆಯರ ಬಳಗ’ಕ್ಕೆ ನಾನು ಮತ್ತೆ ಮತ್ತೆ ನಿಲುಕಿಸಿಕೊಂಡಿದ್ದೇನೆ. ರಾತ್ರಿ ಖಾಡೆ ಸಿದ್ಧಾರೂಢ, ನರೋಡೆ, ವಿನೋದ ಯಡಹಳ್ಳಿ ಮತ್ತು ಮಲ್ಲಿಕಾರ್ಜುನ ಛಲವಾದಿ. ಪಾನಗೋಷ್ಠಿ ಮುಗಿದಾಗ ರಾತ್ರಿ 12.30.
          ಮುಂಜಾನೆ ನನ್ನ ‘ಅರ್ಧ ಬದುಕಿನ ಒಡೆಯ: ಕೆನ್ ಸಾರೊ’ ಸಂಯುಕ್ತ ಕರ್ನಾಟಕದಲ್ಲಿ. ರವಿವಾರ, 07/09/2014, ಅಭಿಮಾನಿಗಳ ಫೋನ್‍ಗಳೇ ಕರೆಗಂಟೆಗಳು. ದಡಬಡಿಸಿ ಎದ್ದರೆ ಬಾಗಿಲಲ್ಲಿ ನಿಂತವಳು ಮಡದಿ ಪದ್ಮಶ್ರೀ. ಎರಡು ದಿನಗಳಿಂದ ಕಾದಂಭರಿಕಾರ ಗೆಳೆಯ ಬಾಳಾಸಾಹೇಬ ಭೇಟ್ಟಿಗಾಗಿ ಹಂಬಲಿಸುತ್ತಿದ್ದರು. ನಾನು, ಪದ್ದು ಬಾಳಾಸಾಹೇಬರ ಕಾರು ಹತ್ತಿ ಹೊಟೇಲ್ ಶಿವಸಂಗಮಕ್ಕೆ. ತಣ್ಣಗೆ ಕುಳಿತು ಚಹಾ ಹೀರಬಹುದಾದ ಸ್ಥಳ ಅದು. 
      ನನ್ನ ನೋವಿನ ದಿನಗಳಲ್ಲಿ ನಾನು ಕಣ್ಣೀರಿಟ್ಟ ಹೊಲಗಳು, ರಾತ್ರಿ ಸುರಿದ ಮಳೆಯಿಂದ ಒಡ್ಡುಗಳ ಎದೆ ತುಂಬಿಕೊಂಡು, ಹಾಗೆಯೇ ಒರತೆಯಾದ ನೆನಪುಗಳನ್ನು ಸಾಂಡುಗಳ ಮೂಲಕ ಸಣ್ಣಗೆ ಹರಿಬಿಟ್ಟ ರೀತಿಗೆ ನಾನು ಮೌನವಾಗಿದ್ದೆ. ಪದ್ಮಶ್ರೀ ಮತ್ತು ಬಾಳಾಸಾಹೇಬ ಕಾರಿನ ಗತಿಯಲ್ಲಿಯೇ ಮಾತಿನ ರೀತಿಯಲ್ಲಿದ್ದರು.
          ಸಿಡಿಮಿಡಿಗೊಂಡಿದ್ದೆ, ಯಾಕೋ ಗೊತ್ತಿಲ್ಲ. ಸಂಕಟವಿತ್ತು ಎದೆಯೊಳಗೆ ಮುಂಜಾನೆಯಿಂದ ಪ್ರಾರಂಭವಾದ ಆತ್ಮವಂಚೆನೆಯ ಮಾತುಗಳು ಎಲ್ಲೊ ಇಡೀ ವಿಚಾರ ಸಂಕಿರಣದ ಆಶಯವನ್ನು ಕೆಡಿಸುತ್ತಿವೆ, ಬೆಳೆಯಬೇಕಾದ ಲೇಖಕನೊಬ್ಬನ ಪುಣ್ಯತಿಥಿಯಾಗುತ್ತಿದೆಯೇ? ಭಯಗೊಂಡು ಹೊರ ಹೋಗಿ ಹಲವು ಸಾರಿ ಚಹಾ ಕುಡಿದು, ಎಲೆ ತಿಂದು ಎಷ್ಟೇ ಉಗಿದರೂ ಸಮಾಧಾನವಾಗಲಿಲ್ಲ. 
        ನನ್ನ ಮಾತಿನ ಸರದಿ ಬಂದಾಗ, ನನ್ನ ಅಪ್ಪಣೆ ಇಲ್ಲದೆ ಆಕ್ರೋಶ ಸಿಡಿದು ಬಿಟ್ಟಿತು. ಅಗ್ಗಡಿಕೆಯಿಂದ ವಿನಾಶದ ಹೊರತು ಇನ್ನೇನೂ ಸಾಧ್ಯವಿಲ್ಲವೆಂದೇ ನನ್ನ ವಾದ. ಕಾವ್ಯವನ್ನು, ಕಾಮವನ್ನು ಮತ್ತು ಧ್ಯಾನಸ್ಥತೆಯನ್ನು ಹದಗೆಡಿಸುವವರು ಎಂಥವರೇ ಇರಲಿ ಒಪ್ಪಿಕೊಳ್ಳಲಾಗುವುದಿಲ್ಲ ನನಗೆ. ಇವುಗಳ ಹದ ಹಾಳಾದರೆ ಪ್ರಪಂಚದ ಸದಭಿರುಚಿಗಳೆಲ್ಲ ಸತ್ತು ಹೋಗುತ್ತವೆ ಎನ್ನುವ ಸಿಟ್ಟು ನನಗೆ. ಮನುಷ್ಯನ ಒಟ್ಟು ಸೃಜನಶೀಲತೆ ಹುರಿಗೊಳ್ಳಬೇಕಾದ ದಾರಿಗಳಿವು. ಇವುಗಳೇ ಪ್ರಚಾರದ, ಪುಂಡಾಟಿಕೆಯ ಮತ್ತು ಪ್ರತಿಸ್ಪರ್ಧೆಯ ದಾರಿಗಳಾದರೆ ಬದುಕಿನ ಸ್ಥಿತಿ ಎಂತು? ಇದೆಲ್ಲವೂ ಇಲ್ಲಿ ಹದಗೆಡುತ್ತಿದೆ ಎಂದು ಅಬ್ಬರಿಸಿದಾಗ ಇಡೀ ಸಭೆ ಒಂದು ಕ್ಷಣ ಗಂಭೀರ ಮೌನ. ನನ್ನ ವಿಚಾರ ಕಹಿಯಾಗಿತ್ತು ಸತ್ಯ, ಆದರೆ ಅದರೊಳಗೆ ಕೆಡುಕಿರಲಿಲ್ಲ. ನಾನು ಹೇಳಬೇಕಾದುದು ಹೇಳಿಯಾಗಿತ್ತು. ಜಂಗಮ ಮುಂದಿನೂರಿಗೆ ಮೊಗಮಾಡಬೇಕಿತ್ತು. ಗೆಳೆಯ ನರೋಡೆ ಅಪರೂಪದವರು. ಅವರೆಂದರೆ ನನಗೆ ಇಷ್ಟೆ – 

ತಲೆ ತುಂಬ ಸೆರಗು
ರೂಪಾಯಗಲ ಕುಂಕುಮ
****
ನೀನೊಲಿದು ಬರಲು
ನೀಲಾಗಸವೆಲ್ಲ ಕಾಮನ ಬಿಲ್ಲು
ಕಾರ್ಮೋಡದಿ ಕೋಲ್‍ಮಿಂಚಿನ ಗೊಂಚಲು
****
ನೀನೆ ನೀನೆ
ನನಗೇಲ್ಲ ನೀನೆ
ಬೆಂಕಿಯೂ ನೀನೆ
ಬುತ್ತಿಯೂ ನೀನೆ
ತುತ್ತಿನ ತಾಯಿಯೂ ನೀನೆ
****
 ಏಳು ಗೆಳೆಯ
ನನ್ನ ನೊಸಲ ಮೇಲೆ
ನಿನ್ನ ಬಿಸಿ ನೆತ್ತರ
ರಕ್ತ ತಿಲಕವಿಡು
ಹೀಗೆ ಏನೇನೊ. ಕೊನೆಗೆ ಅವರ ಕೃತಿಯೊಂದಕ್ಕೆ ಬರೆದ ಸಾಲುಗಳನ್ನು ಮತ್ತೆ ನೆನಪಿಸಬೇಕೆನಿಸುತ್ತದೆ – “ಸಾವಿನೊತ್ತಡದ ನಿನ್ನ ಒಳ ತುಡಿತ ಅಭಿವ್ಯಕ್ತಿಗೆ ಆಸಿಸದ ಹೊರತು ಪೆನ್ನು ಹಿಡಿಯಬೇಡ. ನಿನ್ನೊಂದಿಗೆ ಕಾದಾಡದೆ ನಿನ್ನ ಕವಿತೆಯನ್ನು ಓದುಗರ ಮುಂದಿಡಬೇಡ. ಸಂಕಲನದಿಂದ ಸಂಕಲನಕ್ಕೆ ಭವಿಷ್ಯವನ್ನು ಗೌರವಿಸು, ನವೀಕರಿಸು, ಅಕ್ಕಮಹಾದೇವಿಯಂತೆ ಅದನ್ನು ಒಪ್ಪಗೊಳಿಸು ಮತ್ತು ಉತ್ಸವದಂತೆ ಆಚರಿಸು.
          ಜಗಳಾಡಿಯೂ ನಾನು ನಿನ್ನ ಜೊತೆಗಿದ್ದೇನೆ. ಈ ಜಂಗಮನೆಂದರೆ ಜಗಳದ ದೊಡ್ಡ ಜೋಳಿಗೆ
         

Tuesday, September 9, 2014

ಮುರುಘಮಠದಲ್ಲಿ ಮುಸ್ಸಂಜೆಯ ಹೂ-ಮಳೆ




      ಮಧ್ಯಾಹ್ನ ಬೆಂಗಳೂರು ಬಿಟ್ಟು, ಸಾಯಂಕಾಲವಾಗುತ್ತಲೇ ದುರ್ಗಕ್ಕೆ ಬಂದಿಳಿದಾಗ ಸ್ವಲ್ಪ ಬಿರುಸುಗೊಂಡ ಮಳೆ. ರಸ್ತೆಯ ಬದಿಯ ಚಹಾದ ಅಂಗಡಿಯಲ್ಲಿ ನನ್ನ ಕಾರು ಚಾಲಕ, ಸುಲ್ತಾನ್‍ನನ್ನು ಕರೆದುಕೊಂಡು ಚಹಾ ಕುಡಿಯುವಾಗ ಪ್ರಧಾನಿ ಮೋದಿಯ ಭಾಷಣ ಅಲೆ ಅಲೆಯಾಗಿ ರೆಡಿಯೋದಿಂದ ನಮ್ಮ ಕಿವಿಗಳಿಗೆ. 
   ‘ರಾಜಕಾರಣ್ ಸಿರ್ಫ್ ಏಕ್ ಅಧಿಕಾರ ನಹಿ, ಓ ಸೇವಾಕಾ ಮಾರ್ಗ ಹೋನಾಚಾಹಿಯೆ. ಲೋಗೋಂ ಸೆ, ಆಮ್ ಆದ್ಮಿ ಸೆ ಡರಿಯೆ.’ ಎಷ್ಟೊಂದು ಎಚ್ಚರಿಕೆ ಇತ್ತು ಆ ಮಾತಿನಲ್ಲಿ! ನಮ್ಮ ನಮ್ಮ ಮನೆಗಳೊಳಗಿನ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನಿಸಿಲ್ಲ, ಆದರೆ ಸಾರ್ವಜನಿಕ ಬಾಳಿನ ಪ್ರಶ್ನೆ ಬಂದಾಗ ನಾವು ಉಡಾಫೆಯಾಗಬೇಕಿಲ್ಲ.
   ಮಠದ ಮ್ಯಾನೇಜರ್ ಪರಮಶಿವಯ್ಯ, ಉಪನ್ಯಾಸಕ ಮಿತ್ರ ಜಯಣ್ಣ, ಆಡಳಿತಾಧಿಕಾರಿ ಮಲ್ಲಿಕಾರ್ಜುನಪ್ಪ ಹಾಗೂ ಶ್ರೀಗಳ ಪ್ರೀತಿಗೆ  ಬಾಗಿ ನಾನು ದುರ್ಗಕ್ಕೆ ಬಂದಿದ್ದೆ. ಯಾವುದೇ ಆಧುನಿಕ ರಂಗಭೂಮಿಯನ್ನೂ ನಾಚಿಸುವಂಥ ಮಠದ ಆವರಣದೊಳಗಿನ ವಾತಾವರಣ, 
ಜೊತೆಗೆ ‘ಅಲ್ಲಮ’ದ ಕೋಣೆ ಸಂಖ್ಯೆ 6 ರಲ್ಲಿ ನನ್ನ ವಾಸ್ತವ್ಯದ ವ್ಯವಸ್ಥೆಯಾಗಿತ್ತು. ತಿಂಡಿಯ ನಂತರ ಒಂದು ಕ್ಷಣ ಬೆಟ್ಟಕ್ಕೆ ಮೊಗಮಾಡಿ ನಿಂತುಕೊಂಡೆ, ಎಷ್ಟೊಂದು ನೆನಪುಗಳು!
   ಬಹಳ ಹಿಂದೆ ನನ್ನ ಸೋದರ ಮಾವನ (ಮಲ್ಲಿಕಾರ್ಜುನ ಮಠದ) ವೃತ್ತಿಯ ಆರಂಭಿಕ ದಿನಗಳಲ್ಲಿ ನಾನಿಲ್ಲಿಗೆ ನನ್ನ ತಂಗಿಯ ಪ್ರೀತಿಯ ಸಂದೇಶಿಯಾಗಿ ಬಂದಿದ್ದೆ. ಬಾಲ್ಯದಲ್ಲಿ ತ.ರಾ.ಸು ಅವರ ದುರ್ಗಾಸ್ಥಮಾನ ಓದಿದ ನೆನೆಪೂ ಕೂಡ. ಹೆಜ್ಜೆ ಹೆಜ್ಜೆಗೂ ರಕ್ತ ರಾತ್ರಿ, ಕಂಬನಿಯ ಕುಯಿಲು ಮತ್ತು ತಿರುಗು ಬಾಣದ ನೆನಪು. ಹಿಂದಿನ ಭೇಟ್ಟಿಯಲ್ಲಿ ಭರಮಣ್ಣ ನಾಯಕನ ಕಾಲದ ವ್ಯಾಯಾಮ ಶಾಲೆಯಲ್ಲಿ ಬಂಡೆಗಳ ಮೇಲೆ ಜಾರಿದ ನೆನಪು. 
          ಶಿಕ್ಷಕ ವೃತ್ತಿಯನ್ನು ಸೇರಿದಂದಿನಿಂದಲೂ ಕಾಡುವ ನಾಗರ ಹಾವು ಚಿತ್ರದ ಚಾಮಯ್ಯ ಮೇಸ್ಟ್ರ ಪಾತ್ರ, ಸುತ್ತಲಿನ ಬೆಟ್ಟಗಳಿಗೆ ಲಿಂಗಗಳಿಗಾಗುವ ಅಭ್ಯಂಗದ ಅನುಭವ, ಎಲ್ಲವೂ ಶಾಂತ, ನಿತಾಂತ, ಪ್ರಶಾಂತದ ಮಾತು. ಮೋಬೈಲ್‍ನಲ್ಲಿ ಗುಮ್ನಾಮ್ ಅಭಿಮಾನಿಯೊಬ್ಬಳು ನಿಮ್ಮೊಂದಿಗೆ ಮಾತನಾಡಬೇಕು ಎಂದು ಸಂದೇಶ ರವಾನಿಸುತ್ತಲೇ ಇದ್ದಳು. ‘ಸಾಯಂಕಾಲ 7.30 ಕ್ಕೆ ನನ್ನ ಭಾಷಣ ಪ್ರಾರಂಭವಾಗುತ್ತದೆ, ಫೋನಾಯಿಸು. ಭಾಷಣ ಮಾಡುತ್ತಿರುತ್ತೇನೆ ಧ್ವನಿ ಕೇಳಿ ಆನಂದಿಸು’ ಎಂದ ತಕ್ಷಣ, ಮತ್ತೆ ನನ್ನ ಅಭಿಮಾನಿ ತನ್ನ ಹೆಣಮೌನದ ಚಿಪ್ಪಿನೊಳಗೆ ಮುಚ್ಚಿಕೊಂಡಳು. ನನ್ನ ವಾದವಿಷ್ಟೆ, ‘ಪ್ಯಾರ್ ಕರೇಂಗೆ ತೊ ಖುಲ್ಕೆ ಕರೇಂಗೆ’. 
   ಸಂಜೆ 6 ಗಂಟೆಗೆ ಶರಣರಿಂದ ಬುಲಾವ್. ಅರ್ಧ ಗಂಟೆಯ ಉಭಯಕುಶಲೋಪರಿ. ಸರಿಯಾಗಿ ಒಂದು ವರ್ಷದ ಹಿಂದೆ ನಾವಿಬ್ಬರೂ ಮಾನ್ವಿಯಲ್ಲಿ ಒಂದೇ ವೇದಿಕೆಯನ್ನು ಹಂಚಿಕೊಂಡ ಕ್ಷಣಗಳ ನೆನಪು. ಮುಂದಿನ ಯೋಜನೆ, ಯೋಚನೆ, ವಿಚಾರ ಏನೆಲ್ಲ.
          ರಾಧಾಕೃಷ್ಣರ ಜನ್ಮ ದಿನಾಚರಣೆಯನ್ನು ನೆಪವಾಗಿಸಿಕೊಂಡು ಈ ದೇಶದ ಗುರು ಪರಂಪರೆಯ ಸುತ್ತ ನಾನು 50 ನಿಮಿಷಗಳ ಕಾಲ ಸುತ್ತಾಡಿ ಬಂದೆ. ಶರಣರೂ ಹೆಚ್ಚು-ಕಡಿಮೆ ಅಷ್ಟೆ ಅವಧಿ. ಅಕ್ಷರ ಗುರು, ವೈಧಿಕ ಗುರು ಹಾಗೂ ಸೈದ್ಧಾಂತಿಕ ಗುರುಗಳನ್ನು ಪರಿಚಯಿಸುತ್ತಾ - ಬಸವಣ್ಣ ಒಬ್ಬ ಸೈಧಾಂತಿಕ ಗುರು. ಕಾರಣ 770 ಶರಣ ಗಣಗಳನ್ನು ಕನಿಷ್ಟ 36 ಜನ ಶರಣೆಯರನ್ನೂ ಕರೆದುಕೊಂಡು ಹೊರಾಟಕ್ಕಿಳಿದ ಬಸವಣ್ಣನಿಗೆ, ತನ್ನ ಮುಂದಿದ್ದ ಗುರು ಪರಂಪರೆಯಲ್ಲಿದ್ದವರಿಗಿಂತಲೂ ತಾನು ಹೇಗೆ ಭಿನ್ನವಾಗಬೇಕು ಎಂಬ ಸ್ಪಷ್ಟತೆ ಇತ್ತು. 
ಹೀಗಾಗಿಯೇ ಆತ ಸೈದ್ಧಾಂತಿಕ ಗುರುವಾಗಲು ಸಾಧ್ಯವಾಯಿತು. ಅನುಭವ ಎಂದರೆ ಅಲ್ಲಮ, ವಿರಕ್ತಿ ಎಂದರೆ ಅಕ್ಕಮಾಹಾದೇವಿ, ಶಕ್ತಿ ಎಂದರೆ ಸಿದ್ಧರಾಮ ಎನ್ನುವಂತೆ, ಭಕ್ತಿ ಎಂದರೆ ಬಸವಣ್ಣ ಎನ್ನುವ ಸಿದ್ಧಿಯಾಯಿತು, ಸಿದ್ಧಾಂತವಾಯಿತು. ಒಟ್ಟಾರೆ, ಅಲ್ಲಮ ಹೇಳಿದಂತೆ ‘ಕಿಚ್ಚಿನೊಳಗೆ ಕೋಲ ಬಚ್ಚಿಟ್ಟಂತೆ’, ಬಸವಣ್ಣನವರ ಬದುಕಾಯಿತು.
          ಕಿಚ್ಚಿನೊಂದಿಗೆ ಸಂಘ ಮಾಡುವ ಕೋಲು, ಕಿಚ್ಚೆಂಬ ಶಕ್ತಿಯಾಗಿ ಮಾರ್ಪಡುವಂತೆ, ಬಸವಣ್ಣ ಶರಣರ ಮಹಾ ಸಂಗದಲ್ಲಿ ಶಕ್ತಿಯಾಗಿ ಹೊರಹೊಮ್ಮಿದರು. ಗುರುವಾಗಿ ಉಳಿದುಕೊಂಡರು ಎನ್ನುವ ಶರಣರ ವಿವರಣೆ ತಲೆದೂಗುವಂತಿತ್ತು.
          ರೈತರಿಗ ಭೂ ಹಂಚಿಕೆ, ಸ್ಮಶಾನದೆಡೆಗೆ ನಡಿಗೆ, ಮಲಾಲ್, ಗಧರ್‍ರಂಥವರಿಗೆ ಸನ್ಮಾನ ಹೀಗೆ ಸದಾ ಪ್ರಗತಿಶೀಲ ಹೆಜ್ಜೆಗಳನ್ನಿಡುತ್ತ, ಭಿನ್ನವಾಗಿ ಆಲೋಚಿಸುತ್ತ, ವಿಭಿನ್ನವಾಗಿಯೇ ನಿಂತ ಶರಣರು ಎಲ್ಲರಿಂದಲೂ ಬರೀ ಪ್ರೀತಿಗೇ ಭಾಜನರಾಗಿಲ್ಲ. ಸಾಕಷ್ಟು ಸಿಟ್ಟು-ಸೆಣಸಾಟವನ್ನೂ ಬೆನಿಗೇರಿಸಿಕೊಂಡಿದ್ದಾರೆ. ವೈಚಾರಿಕತೆಯ ಅಪಾಯವೇ ಅದು. ವಿಚಾರ ಎಲ್ಲರಿಗೂ ಬೇಕಾಗಿಲ್ಲ.
      ಕಾರ್ಯಕ್ರಮ ಮುಗಿಯುವದರೊಳಗಾಗಿ ಸಮಯ ರಾತ್ರಿಯ 9.30. ಆನಂತರ ಹಿರಿಯರೂ, ಕವಿಗಳೂ ಆದ ಮಲ್ಲಿಕಾರ್ಜುನಪ್ಪ ಹಾಗೂ ಗೆಳೆಯರೊಂದಿಗೆ ಚಿತ್ರದುರ್ಗದ ಹೊರವಲಯದ ಐಷಾರಾಮಿ ಹೊಟೇಲ್ ಒಂದರಲ್ಲಿ ಅವರ ಕಾವ್ಯದ ಓದು, ಮಾತು ಮತ್ತು ನೆನಪುಗಳ ಮೆರವಣಿಗೆ. ಇವರೆಲ್ಲರ ಪ್ರೀತಿಯಿಂದ ಬಿಡಿಸಿಕೊಂಡು ಬಾಗಲಕೋಟೆಯಡೆಗೆ ಬಸ್ಸು ಹತ್ತುತ್ತಿರಬೇಕಾದರೆ ಮಧ್ಯರಾತ್ರಿಯ 1.30. ನಿದ್ರೆಯೊಳಗೆ ನಾಡು ಕ್ರಮಿಸುವ ನಡಿಗೆ. ಮನಸ್ಸು ಮಾತ್ರ ನೆನಪುಗಳ ಉಡಿಗೆ.


Monday, September 1, 2014

ಚಾರ್ಮಾಡಿಯಿಂದ ಚಂದ್ರಗಿರಿಯವರೆಗೆ. . . .



        ಎರಡೇ ಎರಡು ಕ್ಷಣ ಕಣ್ಣು ಮುಚ್ಚಿದರೆ ಸಾಕು ಧಾರೆಯಾಗುತ್ತವೆ ಸಾವಿರಾರು ನೆನಪುಗಳು. 2009 ರ ಒಂದು ಮುಂಜಾವು ನನ್ನ ಇಡೀ ಕುಟುಂಬದೊಂದಿಗೆ (ಸಿದ್ದು, ಪದ್ದು ಮತ್ತು ಗೌರಿ) ಬಯಲು ಸೀಮೆಯಿಂದ ಅರೆಮಲೆನಾಡಿನ ಊರಾದ ಬೇಲೂರಿಗೆ ಒಂದು ಸಾಯಂಕಾಲ ಬಂದಿಳಿದೆ. ಇಲ್ಲಿಗೆ ಬರಲು ಪ್ರಧಾನ ಕಾರಣ ಪದ್ದಿಯ ಆಯ್ಕೆ, ಆಕೆಯ ಆಯ್ಕೆಯ ಕಾರಣ ಜಗತ್ಪ್ರಸಿದ್ಧ ಚನ್ನಕೇಶವನ ಆಕರ್ಷಣೆ. ಅಂದು ಊರಿನ ಯಮಸಂಧಿ ದೇವೇಗೌಡ ದೇವಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜು ಎಂಬ ಕೊಂಪೆಗೆ ಬಂದು ನಿಂತಾಗ, ಜಡಿ ಮಳೆ, ಛಳಿ ಮಿಶ್ರಿತ ಗಾಳಿ, ಸಪ್ಟೆಂಬರ್ ತಿಂಗಳಿನ 5 ನೇ ತಾರೀಖು, ಭಾರತೀಯ ಗುರು ಪರಂಪರೆಯ ದಿನ, ಶಿಕ್ಷಕರ ದಿನಾಚರಣೆ ಹಾಗೂ ನನ್ನ ಮತ್ತು ನನ್ನ ಪ್ರೀತಿಯ ಪದ್ದಿಯ ಹುಟ್ಟುಹಬ್ಬದ ಸಂಭ್ರಮ. ಅತ್ತ ಮೂಡುಗೆರೆ ಎಂಬ ತೇಜಸ್ವಿಯವರ ಮಾಯಾಲೋಕದ ಸೇಳೆತ, ಕಾಫಿ ತೋಟಗಳಲ್ಲಿ ಹೀಚು- ಹೀಗೆ ಏನೆಲ್ಲ. ಜೊತೆಗೆ ನಮ್ಮನ್ನು ನೆರಳಿನಂತೆಯೇ ಅನುಸರಿಸಿ ನೋವಿನಲ್ಲೂ ನಗುವಿನಲ್ಲೂ ನಮ್ಮೊಂದಿಗಿದ್ದವಳು ನನ್ನ ಹುಚ್ಚಿನ ಗೌರಿ.
        ಹುಚ್ಚೆನ್ನುವುದು ಯಾವಾಗಲೂ ಅರಳುವ ಮತ್ತು ಕೆರಳುವ ಕ್ರಿಯೆ ಅಲ್ಲವೆ?
     ಐದು ವರ್ಷಗಳ ಈ ಅವಧಿಗೆ ನೌಕರಿ ಸಿಕ್ಕ ಆರಂಭದಲ್ಲಿ ಎಷ್ಟೊಂದು ಕನಸುಗಳು! ಎಷ್ಟೊಂದು ಆದರ್ಶಗಳು! ಎಷ್ಟೊಂದು ಸಂಕಲ್ಪಗಳು! ಹೇಗೊ ಕಾಲ ಉರುಳಿತು. ಮಾನ-ಅಪಮಾನ, ಅಬ್ಬರ-ಸುಮ್ಮಾನ, ಮೆರವಣೆಗೆ-ಅವಮಾನಗಳ ಮಧ್ಯ, ಐದು ವರ್ಷಗಳೆನ್ನುವವು ನನ್ನ ಅವಿಶ್ರಾಂತ ಕಣ್ಣು, ದೇಹಗಳ ಮಾಗಿಸಿ, ನೋಯಿಸಿ, ಬಾಗಿಸಿ, ಗೆಲ್ಲಿಸಿ ಹೋದ ರೀತಿ ಅರಿವಿಗೇ ಬರಲಿಲ್ಲ! ಇಲ್ಲಿ ನನ್ನ ಗಾಂಧಿ ಬಂದ, ಹಾಲ ಬೆಳದಿಂಗಳ ಮಗಳು ಹುಟ್ಟಿದಳು, ನಮ್ಮ ಸಿದ್ಧ-ಬುದ್ಧ ಕಣ್ಣೀರೊರೆಸಿದ, ಮತ್ತೆ ಮತ್ತೆ ಜಗಳ, ಪ್ರೀತಿ ಎಲ್ಲವೂ ಆಯಿತು. ಈಗ ಬೆಂಗಳೂರು ನಿವಾಸಿಯಾದ ಹೆಣ್ಣು ಜೀವ ಒಂದು, ಆಗ ಈ ತಂಗಾಳಿಗೆ ಹಂಬಲಿಸಿ ಬರುತಿತ್ತು. ಏನೆಲ್ಲ ಬರೆಯಬಹುದೇನೊ. ಬರಹವೆನ್ನುವುದು ಯಾವಾಗಲೂ ಅರ್ಧ ಸತ್ಯವೆ. ಒಪ್ಪಿ ಬಿಡುತ್ತೇನೆ, ಒಟ್ಟಾರೆ ನೆನಪುಳಿಯುವ ಬಾಳಾಯಿತು.
      ಕುರುಬರ ಕೇರೆಯಲ್ಲಿ ಮಗಳು ಹುಟ್ಟಿ, ವೈಕುಂಠ ಬೀದಿಯಲ್ಲಿ ಬಾಲ್ಯ ಕಳೆದಳು. ಇದೊಂದು ರೀತಿ ಕನಕನ ಪದ್ಯಗಳಲ್ಲಿ ಮೋಹನ ತರಂಗಿಣಿಯಾಗಿ, ವೈಕುಂಠದಾಸರ ಮನೆಯಲ್ಲಿ ನಿತ್ಯ ದಾಸೋಹಕ್ಕೆ ಬಾಳೆ ಎಲೆ ಹಾಸಿದ ವಿನೀತದ ಅನುಭವ. ಅಂದಹಾಗೆ, ಇಲ್ಲಿಯ ನನ್ನ ಎರಡೂ ಮನೆಗಳು ಪುಣ್ಯದ ಮನೆಗಳೆ. ಒಂದೆಡೆ ಹಾಲಿನ ಓಕುಳಿ ಮತ್ತೊಂದೆಡೆ, ತೇರಿನ ಸಂಭ್ರಮ. ಒಂದೆಡೆ ಬಬ್ಬಮ್ಮ, ಮತ್ತೊಂದೆಡೆ ರಾಶಿ ರಾಶಿ ಬಟ್ಟೆ, ತಿಂಡಿ ಹೊತ್ತುಕೊಂಡು ಬರುತ್ತಿದ್ದ ನಮ್ಮ ಗೌರಿ, ಒಂದೆಡೆ ಜಗಳಾಡುತ್ತಲೇ ಪ್ರೀತಿಸುವ ಜಯಣ್ಣ, ಮತ್ತೊಂದೆಡೆ ಪ್ರೀತಿಸುತ್ತಲೆ ಮೊಬೈಲ್ ಹಿಡಿದುಕೊಂಡು ಮಾಯವಾಗುತ್ತಿದ್ದ ಗೆಳೆಯ ಸತೀಶ.
     ಆದರೆ ಈ ಎಲ್ಲ ಕಾಲಕ್ಕೂ ನನ್ನಿಂದ ಹೋಳಾಗದೇ ಉಳಿದಿದ್ದ ಎರಡು ಗಟ್ಟಿ ವಸ್ತುಗಳು ಒಂದು ಘಟ್ಟದೆಡೆಗೆ ಚಾರ್ಮಾಡಿ ಬೆಟ್ಟ, ಮತ್ತೊಂದೆಡೆ ಬಾಹುಬಲಿ ಅಡಿಗೆ ಚಂದ್ರಗಿರಿ ಬೆಟ್ಟ. ಚಾರ್ಮಾಡಿಯ ಆಚೆಗೂ ಅವಳೇ ಇದ್ದಳು, ಚಂದ್ರಗಿರಿಯ ಬೆಟ್ಟದಲ್ಲೂ ಅವಳೇ ಗೆದ್ದಳು. ಆದರೆ ಈ ನಿರಂತರ ಪ್ರೀತಿಯ ಸೋಲಿಗೆ, ಶರಣಾಗತಿಗೆ ಯಾರ್ಯಾರನ್ನೋ ಕರೆದುಕೊಂಡು ಹಂಬಲಿಸಿ ಓಡಿ ಹೋಗುತ್ತಿದ್ದ ನನ್ನನ್ನು, ನಿತ್ಯ ಕಾಯ್ದವರು, ಕಲಿಸಿ ಮುನ್ನಡಿಸಿದ ತಾಯಂದಿರು ಇದೇ ಚಾರ್ಮಾಡಿ ಹಾಗೂ ಚಂದ್ರಗಿರಿ. ಚಾರ್ಮಾಡಿ ನನಗೆ ಕಾರಿನ ಚಾಲಕನಾಗುವುದನ್ನು ಕಲಿಸಿದರೆ, ಚಂದ್ರಗಿರಿ ನನಗೆ ಅವಳ ಅಪನಂಬಿಕೆಯ ತೊಡೆಯ ಮೇಲೂ ತಣ್ಣಗೆ ಮಲಗುವುದನ್ನು ಕಲಿಸಿದಳು. ಇವರ ಸುತ್ತಿ ಬರುವುದೆಂದರೆ ಅವ್ವ ಎನ್ನುವ ಜೀವದ ಬೆನ್ನ ಜಾರುಗುಂಡಿಯ ಮೇಲೆ ಆಟವಾಡಿದ ಅನುಭವ. 
       ಈ ಮಧ್ಯ ಬೇಲೂರು, ಅದರ ಸೀಮಿತ ಬಳಗ ನನ್ನನ್ನು ಬಂಧಿತನನ್ನಾಗಿಸಿತು. ನಾನೆಂದೂ ಅದರಿಂದ ಬಿಡುಗಡೆ ಹೊಂದಲಾರೆ, ಅಂತಿಮವಾಗಿ ಇದೇ ಊರಿನಲ್ಲಿ ನನ್ನ ಬಾಳನ್ನು ಕಳೆದು ಬಿಡುತ್ತೇನೆ, ಇಲ್ಲಿಗೆ ನನ್ನ ಬದುಕೇ ಮುಗಿಯಿತು ಎಂದು ಮೂದಲಿಸಿದವರನ್ನು ಮರೆಯಲಾಗುವುದಿಲ್ಲ. ಆದರೆ ನಿಂತ ನೆಲದಲ್ಲೊಂದು ಸಣ್ಣ ಹೆಜ್ಜೆಯ ಗುರ್ತನ್ನೂ ಉಳಿಸದೆ ನಾನು ಎಲ್ಲಿಂದಲೂ ಹೆಜ್ಜೆ ಕಿತ್ತಿದವನಲ್ಲ. ನಮ್ಮ ಬಾಳಿನ ದಾರಿಯ ಮೇಲೆ ಅನಿವಾರ್ಯ ಎನ್ನುವಂತೆ ಬರುವ ಈ ಊರುಗಳು, ರಸ್ತೆ ಬದಿಯ ಮೈಲು ಗಲ್ಲುಗಳಂತೆ. ಅವುಗಳನ್ನು ಗಮನಿಸದೇ, ಗುರ್ತಿಸದೇ, ಗೌರವಿಸದೇ ಮುಂದೆ ಹೋಗುವುದು ನಮ್ಮ ಬದುಕಿನ ಗಂತವ್ಯದ ಅನ್ವೇಷಣೆಯಲ್ಲಿ ಗುಮಾನಿಯನ್ನು ಹುಟ್ಟಿಸುತ್ತದೆ.
    ಬೇಲೂರಿನ ವೈ.ಡಿ.ಡಿ ಕಾಲೇಜು ಸೇರಿದ ಮೇಲೆ ಅತ್ಯಂತ ಪ್ರೀತಿಯಿಂದ ಜವಾಬ್ದಾರಿಯೊಂದನ್ನು ಹೊತ್ತುಕೊಂಡೆ. ಹೊತ್ತುಕೊಂಡ ಪ್ರೀತಿ ಹೊರೆಯಾಯಿತು ಆದರೂ ಹಾದಿಯ ಬದಿಯಲ್ಲೇ ಅದನ್ನಿಟ್ಟು ಓಡಿ ಹೋಗುವುದು ಜವಾಬ್ದಾರನೊಬ್ಬನ ಲಕ್ಷಣವಲ್ಲ. ಏನೆಲ್ಲ ಬಲಿಕೊಟ್ಟಾದರೂ ಅದನ್ನೊಂದು ನೆಲೆಗೆ ಹಚ್ಚಲೇಬೇಕು. ನಾಲ್ಕಕ್ಷರ ಇಂಗ್ಲೀಷ್ ಬರುತ್ತದೆ ಎಂದಾಗ ಸರಕಾರಿ ಕಾಲೇಜುಗಳಲ್ಲಿ ನ್ಯಾಕ್, ಐಕ್ಯೂಎಸಿ, ರೂಸಾ ಹೀಗೆ ಏನೆಲ್ಲ ನಮ್ಮ ಹೆಗಲೇರುವುದು ಸ್ವಾಭಾವಿಕ. ನಾನು ಈ ಕಾಲೇಜಿನ ಇಂಥ ಹಲವಾರು ಹೆಣಭಾರ ಯೋಜನೆಗಳನ್ನು ಹೊತ್ತುಕೊಂಡು ಹೈರಾಣಾಗುವುದಲ್ಲದೆ ಕೈ ಹಿಡಿದ ಹೆಂಡತಿ, ಮಕ್ಕಳು, ಗೆಳೆಯ, ಗೆಳತಿಯರನ್ನೂ ಈ ಕಾಯಕಕ್ಕೆ ಬಳಸಿಕೊಂಡಿದ್ದೇನೆ. ಕಾಲೇಜಿನ ನ್ಯಾಕ್ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು 2009 ರಲ್ಲಿ ಪ್ರಾಂಶುಪಾಲರಾದ ಡಾ. ಐ.ಎಂ.ಮೋಹನ ಪ್ರಾರಂಭಿಸಿದರು. ಆದರೆ ಅದು ಮುಗಿದು ‘ಸಿ’ ಮಾನ್ಯತೆಯ ಕಾಲೇಜು ‘ಬಿ’ ಮಾನ್ಯತೆಗೆ ಬಂದು ನಿಲ್ಲುವುದರೊಳಗಾಗಿ ಐದು ಜನ ಪ್ರಾಂಶುಪಾಲರುಗಳು ಬದಲಾದರು. ನಾನು ಸಾಕಷ್ಟು ಬಾರಿ ಸೋತೆ, ಬಿದ್ದೆ ಮತ್ತೆ ಎದ್ದೆ. ಒಟ್ಟಾರೆ 2014 ರಲ್ಲಿ ಈ ಕ್ರಿಯೆ ಪೂರ್ಣಗೊಂಡಾಗ ನಾನು ನಿರಾಳನಾಗಿದ್ದೆ. ದೈಹಿಕವಾಗಿ, ಮಾನಸಿಕವಾಗಿ ಬೆಂಗಳೂರಿನೆಡೆಗೆ ಮೊಗಮಾಡಿದ್ದೆ. ದಾರಿಗಾಗಿ ದೈವದ ಮೊರೆ ಹೊಕ್ಕಿದ್ದೆ.

     ಭ್ರಮೆ ಇರಲಿಲ್ಲ. ಬೇಲೂರಿಗಿಂತಲೂ ಬೆಂಗಳೂರು ಬೃಹತ್ತಾದುದು, ಮಹತ್ತಾದುದು ಎನ್ನುವ ಹುಚ್ಚು ಭ್ರಮೆಗಳೇನೂ ಇರಲಿಲ್ಲ. ಕರ್ನಾಟಕದ ಹಳ್ಳಿಯಿಂದ ಹೊರಟ ಹೈದ ನಾನು, ರಾಜಧಾನಿಯನ್ನೊಮ್ಮೆ ನೋಡಬೇಕು. ಅಲ್ಲಿಯ ಸಾಹಿತ್ಯ, ಸಂಸ್ಕತಿ, ರಾಜಕಾರಣಕ್ಕೆ ಮುಖಾಮುಖಿಯಾಗಬೇಕು ಎಂಬ ಶುದ್ಧ ಹಂಬಲ ಬಿಟ್ಟರೆ ಇನ್ನೇನೂ ಇರಲಿಲ್ಲ. ಹಾಗೆ ನೋಡಿದರೆ ಬೆಂಗಳೂರಿನ ಯಾವುದೇ ಪುಸ್ತಕ ಮಳಿಗೆಗಳಲ್ಲಿ ಅತ್ಯುತ್ತಮವಾಗಿ ಮಾರಾಟವಾಗುವ ನಮ್ಮ ನವೋದಯದ ಬರಹಗಾರರು, ತಮ್ಮ ತಮ್ಮ ಊರುಗಳಲ್ಲಿಯೇ ರಾಜ್ಯವನ್ನು, ರಾಷ್ಟ್ರವನ್ನು, ಜಾಗತಿಕ ಅಸ್ತಿತ್ವವನ್ನು ಆರಾಧಿಸಿದರು. ನವ್ಯದ ತೇಜಸ್ವಿಯೂ ಈ ನಿಟ್ಟಿನಲ್ಲಿ ನಮಗೆ ದೊಡ್ಡ ಆದರ್ಶ.
      ಸುಮ್ಮನೆ ಬದಲಾವಣೆಗಾಗಿ ಬೆಂಗಳೂರು ಕೇಳಿದರೆ, ಇಲಾಖೆ ಕೇಂದ್ರ ಕಛೇರಿಯಲ್ಲಿ ನನಗೆ ಮಹತ್ವದ ಸ್ಥಾನ ನೀಡಿ ಮನ್ನಿಸಿತು. ನೊಂದು ಮುದ್ದೆಯಾಗಿದ್ದ ಮನಸ್ಸು ಮತ್ತೆ ಹೂವಾಗಿ ಅರಳಿತು. ನನಗಿಂತಲೂ ಒಂದೇ ತಿಂಗಳು ಮುಂಚೆ ಬೆಂಗಳೂರಿಗೆ ಬಂದಿದ್ದ ಪದ್ದಿಯೊಂದಿಗೆ ಮತ್ತೆ ಕೈ ಕೈ ಸೇರಿಸಿ ಬಾಳಿನ ಹೊಸ ಕನಸು ಕಾಣುವ ಅವಕಾಶ ದೊರೆಯಿತು. ಈಗ ಬೆಂಗಳೂರಿಗೇನೊ ಬಂದಿದ್ದೇನೆ, ಆದರೆ ಸದಾಕಾಲ ಸುಡುಸುಡುವ ನನ್ನೂರು, ಚಾರ್ಮಾಡಿಯ ಬೆಟ್ಟ ಮತ್ತು ಚಂದ್ರಗಿರಿಯ ಜಾರುವಿಕೆಗಾಗಿ ಹಸಿಯುತ್ತಲೇ ಇರುತ್ತೇನೆ. ಎಷ್ಟಾದರೂ ಈ ಬಾಳೆಂದರೆ ನಿರಂತರ, “ಇರುವುದೆಲ್ಲವ ಬಿಟ್ಟು, ಇರದುದರ ಕಡೆಗೆ ತುಡಿಯುವ” ಕಥೆಯಲ್ಲವೆ?