Total Pageviews

Thursday, October 16, 2014

ಹಾಡು ಹಳೆಯದಾಗುವುದಿಲ್ಲ, ನೆನಪು ಅಂದಗೆಡುವುದಿಲ್ಲ



      ದಿನಾಂಕ: 14/10/2014 ರ ಮಂಗಳವಾರ, ಕಾಲೇಜು ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರು ಮತ್ತು ನಿರ್ದೇಶಕರು ಅಪರಾಹ್ನ 04 ರಿಂದ 05 ವರೆಗೆ, ಕಾಲೇಜು ಶಿಕ್ಷಣ ಇಲಾಖೆಯ, ಜ್ಞಾನತರಂಗ ವಾಹಿನಿ ಮೂಲಕ, ಎಜುಸ್ಯಾಟ್ ಆರ್‍ಓಟಿ ಸೌಲಭ್ಯ ಇರುವ ಎಲ್ಲ ಸರಕಾರಿ 411 ಪ್ರಥಮ ದರ್ಜೆ ಕಾಲೇಜುಗಳಿಗೆ, ಯುಜಿಸಿ ಯ 2(ಎಫ್) ಮತ್ತು 12(ಬಿ) ಮಾನ್ಯತೆಗಳ ಮೂಲಕ, ಧನಸಹಾಯ ಆಯೋಗವು ಒದಗಿಸುವ ಸೌಲಭ್ಯಗಳನ್ನು ಪಡೆಯುವ ರೀತಿಯನ್ನು ಕುರಿತು ನೀವು ಒಂದು ಗಂಟೆಯ ಸಂವಾದವನ್ನು ಮಾಡಬೇಕು ಎಂದು ಆದೇಶಿಸಿದಾಗ ನನಗೆ ಒಂದು ಕ್ಷಣ ತಬ್ಬಿಬ್ಬು.
    ಮನಸ್ಸು ಬೇಲೂರಿನ ದಿನಗಳತ್ತ ಹೊರಳಿ ನೋಡಿತು. ನಮ್ಮ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಉಪನ್ಯಾಸಕ ಗೆಳೆಯರೊಂದಿಗೆ ಕೂಡಿ ಎಜುಸ್ಯಾಟ್ ಮೂಲಕ ಆಯುಕ್ತರು ಮತ್ತು ನಿರ್ದೇಶಕರು ಮಾತನಾಡುವಾಗಲೆಲ್ಲ ಪಕ್ಕದ ನನ್ನ ಗೆಳೆಯರಿಗೆ ಹೇಳುತ್ತಿದ್ದೆ, ‘ನಾನೊಂದು ದಿನ ಅಲ್ಲಿ ಕುಳಿತು ಮಾತನಾಡುತ್ತೇನೆ, ನಿವು ಇಲ್ಲಿಯೇ ಕುಳಿತು ನೋಡುತ್ತಿರುತ್ತೀರಿ,’ ತಿರುಕನ ಕನಸೆಂದು ಅವರು ಖೊಳ್ಳೆಂದು ನಕ್ಕು ಚಹಾ ಕುಡಿಯಲು ಕರೆದೊಯ್ಯುತ್ತಿದ್ದರು. ಗತಿ ಕಾಣದ ನಾನು ಅದೇ ಬೇಸರದಲ್ಲಿ ರಾಯರ ಮೊರೆ ಹೊಕ್ಕು ಮೌನವಾಗುತ್ತಿದ್ದೆ. ಇಂದು ಆ ಅವಕಾಶ ಬಂದು, ರಾಜ್ಯದ 411 ಕಾಲೇಜುಗಳ 5 ಲಕ್ಷ ವಿದ್ಯಾರ್ಥಿ ಸಮುದಾಯದ, ಯುಜಿಸಿ ವಿಭಾಗದ ಸಮನ್ವಯ ಅಧಿಕಾರಿಯಾಗಿ ಮಾತನಾಡುವ ಅವಕಾಶ ಬಂದಾಗ ಯಾರ ಸ್ಮರಿಸಬೇಕು? ಯಾರಿಗೆ ಋಣಿಯಾಗಬೇಕು? ಯಾರಿಗೆ ಶಿರಬಾಗಬೇಕು? ಎನ್ನುವಾಗ ಬಸವಣ್ಣನ ಸಾಲೊಂದು ತಲೆಯಲ್ಲಿ ಸುತ್ತುತ್ತಿತ್ತು –
ಬಾಗಿದ ತಲೆಯ
ಮುಗಿದ ಕೈಯಾಗಿರಿಸು
ಕೂಡಲಸಂಗಮದೇವಾ
    ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಮಾನ್ಯ ಆಯುಕ್ತರ ಹಾಗೂ ನಿರ್ದೇಶಕರ ವಿಶೇಷ ಕಾಳಜಿಯಿಂದ, ಯುಜಿಸಿ ಸೆಲ್ ಪ್ರಾರಂಭವಾಗಿ, ನಾನು ಘಟಕದ ಸಂಯೋಜನಾಧಿಕಾರಿಯಾಗಿ  ಕಾರ್ಯನಿರ್ವಹಿಸುತ್ತಿದ್ದು, ಕಾಲೇಜುಗಳು 2(ಎಫ್) ಮತ್ತು 12(ಬಿ) ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕುರಿತು ವಿಷಧವಾಗಿ ತಿಳಿಸಿದೆ. ಜೊತೆಗೆ ಇದಕ್ಕೆ ಪೂರಕವಾಗಿ ಮಾಹಿತಿಯನ್ನು ಪಡೆಯಲು www.ugc.ac.in ವೆಬ್‍ಸೈಟ್‍ನ್ನು ಸಂಪರ್ಕಿಸಲು ತಿಳಿಸಿದೆ. ಇದರೊಂದಿಗೆ ರಾಜ್ಯದ 411 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಹೊಂದಿದ್ದರೆ ಕಾ.ಶಿ.ಇಲಾಖೆಯ ಇಮೇಲ್: ugccell2014@gmail.com ಗೆ ಸಂಪರ್ಕಿಸಲು ತಿಳಿಸಿದೆ.
  ಒಂದು ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ, “ಜ್ಞಾನ-ವಿಜ್ಞಾನ ವಿಮುಕ್ತಯೆ” ಎನ್ನುವ ಧ್ಯೇಯ ವಾಖ್ಯದೊಂದಿಗೆ, 28 ಡಿಸೆಂಬರ್ 1953 ರಲ್ಲಿ ಪ್ರಾರಂಭವಾದ ಯುಜಿಸಿಯು ಡಿಪಾರ್ಟ್‍ಮೆಂಟ್ ಆಫ್ ಹೈಯರ್ ಎಜುಕೇಷನ್ ಹಾಗೂ ಮಿನಿಸ್ಟ್ರಿ ಆಫ್ ಹ್ಯೂಮನ್ ರಿಸೋಸ್ ಡೆವಲಪ್‍ಮೆಂಟ್ ಇಲಾಖೆಗಳ ಸಹಯೋಗತ್ವದಲ್ಲಿ ಸಾಗಿ ಬಂದು, ಕೋಆರ್ಡಿನೇಷನ್, ಡಿಟರ್ಮಿನೇಷನ್ ಹಾಗೂ ಮೆಂಟೇನನ್ಸ್ ಎಂಬ ವಿಚಾರಗಳನ್ನು ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೇಗೆ ಅಳವಡಿಸಿತು ಎಂಬುದನ್ನೂ ವಿವರಿಸಿದೆ.
       ದೇಶದ ಆರು ಪ್ರಮುಖ ನಗರಗಳಾದ ಪುಣೆ, ಭೂಪಾಲ, ಕಲ್ಕತ್ತಾ, ಹೈದ್ರಾಬಾದ್ ಹಾಗೂ ಬೆಂಗಳೂರುಗಳಲ್ಲಿರುವ ಯುಜಿಸಿಯ ಉಪಶಾಖೆಗಳ ಮೂಲಕ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿರುವ ಮೂರು ಕಛೇರಿಗಳ ಮೂಲಕ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು, 28 ಡಿಸೆಂಬರ್ 2002 ರಲ್ಲಿ ಅದು ಹೇಗೆ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತು ಎಂಬುದನ್ನು ತಿಳಿಸಿದೆ.
      21 ನೇ ಶತಮಾನದಲ್ಲಿ ಶಿಕ್ಷಣರಂಗದಲ್ಲಿ ಆಗುತ್ತಿರುವ ಮಹತ್ವದ ಬೆಳವಣಿಗೆಗಳನ್ನು ಗಮನಿಸಿ, ಯುಜಿಸಿಯು ತನ್ನ ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ ಎನ್ನುವ ವಿಚಾರವನ್ನು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ವ್ಯಕ್ತಪಡಿಸಿ, ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್‍ನನ್ನು ಯುನಿವರ್ಸಿಟಿ ಎಜುಕೇಷನ್ ಡೆವಲಪ್‍ಮೆಂಟ್ ಕಮಿಷನ್ ಎಂದು ಪರಿವರ್ತಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ಹೀಗೆ ಇಲಾಖೆಯ ಇತಿಹಾಸ ದೊಡ್ಡದು, ಈಗ ವಿಭಾಗದ ಇತಿಹಾಸ ರಚಿಸಬೇಕಾದ ಜವಾಬ್ದಾರಿ ನನ್ನದು.
       ಇಷ್ಟು ತಿಳಿಸಿ, ಸ್ಟುಡಿಯೋದಿಂದ ಹೊರಬಂದಾಗ 90 ಕರೆಗಳು ಹಾಗೂ 19 ಪ್ರಶ್ನೆಗಳು. ಒಂದು ಗಂಟೆಯ ಸ್ಟುಡಿಯೋ ಅನುಭವ, ಹೀಗೆ ನಮ್ಮನ್ನು ಜನಮುಖಿಯಾಗಿಸುವುದಾದರೆ ಮುಂದೊಮ್ಮೆ ಬದುಕೇ ಸ್ಟುಡಿಯೋದಲ್ಲಿ ಕಳೆಯುವುದಾದರೆ ನನ್ನ ಗತಿ ಏನು? ಅಬ್ಬಾ, ಕಲ್ಪನೆಗೂ ಬೇಡ. 
    ಈ ದಿನದ ವಿಶೇಷತೆಯೇ ವಿಶೇಷತೆ. ನಾನೊಂದೆಡೆ ಹೀಗೆ ಹೊರಟರೆ, ಇನ್ನೊಂದೆಡೆ ಪ್ರೀತಿಯ ಪದ್ದಿ ಇಂದಿನಿಂದ ಎನ್.ಹೆಚ್.ಆರ್.ಸಿಗೆ. ದೇವರೆ ಒಂದು ಅವಕಾಶ ನೀಡು ಎಂದು ಮೊರೆ ಹೊಕ್ಕಾಗ ಕೆ.ಎಚ್.ಆರ್.ಸಿಗೆ ತಂದಿಟ್ಟವ ಮೂರೇ ತಿಂಗಳಲ್ಲಿ ಎನ್.ಹೆಚ್.ಆರ್.ಸಿಯ ಬಾಗಿಲಲ್ಲಿ ನಿಲ್ಲಿಸಿದಾಗ ಹೇಗಂತ ಅರಗಿಸಿಕೊಳ್ಳುವುದು? ಏನಂತ ದೈವಕ್ಕೆ ಧನ್ಯವಾದ ಹೇಳುವುದು?
       ಮನೆಗೆ ಹೊರಟಾಗ ನಮ್ಮ ಇಲಾಖೆಯ ಎಡಬದಿಯಲ್ಲಿರುವ ರಾಜ್ಯ ಸಿಐಡಿ ಕಛೇರಿಯಲ್ಲಿ ಶಿಷ್ಯರ ಬಳಗೊಂದು ಕಾಯುತ್ತಿತ್ತು. ಪೋಲಿಸ್ ಅಧಿಕಾರಿಗಳಾಗಿ(ಪಿಎಸ್‍ಐ) ಅನೇಕ ಕಡೆ ಕೆಲಸ ಮಾಡುತ್ತಿರುವ ಇವರೆಲ್ಲ ಸಿಐಡಿ ಕಛೇರಿಯಲ್ಲಿ ನಾಲ್ಕು ದಿನದ ಸೈಬರ್ ಕ್ರೈಂ ಕುರಿತಾದ ತರಬೇತಿಗಾಗಿ ಬಂದಿದ್ದರು. ಇವರೆಲ್ಲರ ಮುಖಂಡ ನನ್ನ ಪರಮ ಶಿಷ್ಯ ಪ್ರಭುಲಿಂಗಯ್ಯ. ಗುಳೇದಗುಡ್ಡದಲ್ಲಿ ವಾರನ್ನ ಉಂಡು ಬೆಳೆದ ಬಡವರ ಕುಡಿ. ಶಿಷ್ಯಳೊಬ್ಬಳು ಆನಂದರಾವ್ ಸರ್ಕಲ್‍ದಲ್ಲಿ ಕಾಯುತ್ತಿದ್ದಳು. ಇದೇ ದಿನ ಎಕ್ಸ್‍ಸೈಜ್ ಇಲಾಖೆಯ ಅಂತಿಮ ಸುತ್ತಿನ ಸರ್ಟಿಫಿಕೇಟ್ ವೆರಿಫಿಕೇಷನ್ ಮುಗಿಸಿಕೊಂಡುಬಂದ ಅವಳಿಗೆ ಸ್ವರ್ಗ ಮೂರೇ ಗೇಣು. ಖುಷಿಯಾಗುತ್ತದೆ, ಬಿಸಿಲು ನಾಡಿನ ಬಸವಳಿದ ಬದುಕುಗಳು ಎದೆಯ ತುಂಬ ಭರವಸೆಯ ಬೆಳಕು ತುಂಬಿಕೊಂಡು ಕುಣಿಯುವಾಗ ನನಗೆ ಕೃಷ್ಣನ ಗೋಕುಲಾಷ್ಠಮಿ ನೆನಪಾಗುತ್ತದೆ. 
  ಮನೆಗೆ ಬಂದಾಗ ನಮಗಿಬ್ಬರಿಗೂ ಅತಿಯಾದ ಆನಂದದಿಂದ ಬಂದ ಮೈ-ಕೈ ನೋವು. ಏನೂ ತಿನ್ನಬೇಕೆನ್ನುವ, ಕುಡಿಯಬೇಕೆನ್ನುವ ವಾಂಛೆಗಳಿಲ್ಲ. ಸಾಯಂಕಾಲದ ಚಹಾ ಕೂಡ ಬೇಡವಾಗಿತ್ತು ಬಾಯಿಗೆ. ಮಧ್ಯ ರಾತ್ರಿಯೂ ನಿದ್ದೆಯಿಂದೆದ್ದು ಚಹಾ ಕುಡಿದು ಮಲಗುವ ನನಗೆ ಚಹಾ ಬೇಡಾಯಿತೆಂದರೆ! ಆಕೆಗೆ ಹೇಳಿದೆ, ಈ ಬೆಂಗಳೂರಿನಲ್ಲಿ ಅಪರೂಪಕ್ಕೆ ಈ ಬೇಸರ ಬಂದಿದೆ. ಅದರೊಂದಿಗೂ ಒಂದಿಷ್ಟು ಮಾತನಾಡೋಣ, ತಲೆ ಕೆನ್ನೆ ನೇವರಿಸಿ ಸಂತೈಸೋಣ. 4 ತಿಂಗಳಾಯಿತು ನಾವಿಬ್ಬರೂ ಹೀಗೆ ಕುಳಿತು. ಬೇಲೂರಿನಲ್ಲಿದ್ದಾಗ ಬೇಸರಕ್ಕೆ ಎಷ್ಟೊಂದು ಬಳಗ. ಅತ್ತ ಹೋದರೆ ಮಲಯಮಾರುತ, ಇತ್ತ ಚಾಚಿದರೆ ಚನ್ನರಾಯಪಟ್ಟಣ-ಚಂದ್ರಗಿರಿಬೆಟ್ಟ. ಮಧ್ಯ ನಾದವಾಗಿ ನಮ್ಮ ಮೇಹಂದಿ ಹಸನ್. ಈ ಬದುಕಿನಲ್ಲಿ ಹಾಡು ಎಂದೂ ಹಳೆಯದಾಗುವುದಿಲ್ಲ, ಸುಂದರ ನೆನಪುಗಳು ಎಂದೂ ಅಂದಗೆಡುವುದಿಲ್ಲ. ಅಲ್ಲವೆ?

Saturday, October 11, 2014

ಮಾಯೆಯಿಲ್ಲ, ಮರೆಹಿಲ್ಲ, ಅಭಿಮಾನವೂ ಇಲ್ಲ.



     

   ಚಿಕ್ಕವರಿದ್ದಾಗ ಶಾಲೆಗೆ ರಜೆ ಎಂದಾಗ ಎಷ್ಟೊಂದು ಖುಷಿಯಾಗುತ್ತಿತ್ತು. ಅಂಥ ಖುಷಿಯನ್ನು ಮತ್ತೆ ನಾನೀಗ ಬೆಂಗಳೂರೆಂಬ ಬೆಂಗಾಡಿನಲ್ಲಿ ಅನುಭವಿಸುತ್ತಿದ್ದೇನೆ. ಕನಿಷ್ಟ ಆ ದಿನ ಸುಜಾತಾ ಹಾಗೂ ಓಕುಳಿಪುರಂದ ಯಮಯಾತನೆಯ ಟ್ರಾಫಿಕ್‍ನಿಂದ ಮುಕ್ತನಾಗಿ, ಗದ್ದಲವಿಲ್ಲದ ನನ್ನ ಮನೆಯಲ್ಲಿ ಮಡದಿಯೊಂದಿಗೆ, ಬೆಂಗಳೂರಿನ ಸಂಜೆ ಮಳೆಯನ್ನು ಬಿಸಿಯಾದ ಚಹಾದೊಂದಿಗೆ ಎದೆಯೊಳಗೆ ಬಸಿದುಕೊಳ್ಳಬಹುದಲ್ಲ ಎಂಬ ಸಣ್ಣ ಆಶೆ. ಆದರೆ ದುರ್ದೈವ ನಿತ್ಯ ರಜೆ ಇರುವುದಿಲ್ಲ, ಮಳೆ ಬರುವುದಿಲ್ಲ, ಸಾವಿನ ಸಕ್ಕರೆಯ ಬೊಂಬೆಗಳ ಈ ಸಂಸಾರದಲ್ಲಿ ಮಡದಿಯೂ ನಿರಂತರಳಲ್ಲ.
     ಎರಡು ದಿನಗಳ ಹಿಂದಷ್ಟೆ ಓಕಳಿಪುರಂದ ಟ್ರಾಫಿಕ್‍ನಲ್ಲಿ, ಕಾರ್ಬನ್ ಕುಡಿಯುತ್ತ ನಿಂತಾಗ ನನ್ನ ಪಕ್ಕದಲ್ಲೊಂದು ಸ್ಕೂಟಿ. ಹೆಣ್ಣೊಂದರ ಮುಖಕ್ಕೆ ಮಪ್ಲರ್, ಮೇಲೆ ಹೆಲ್ಮೆಟ್ ಎಂಬ ಶಿರಸ್ತ್ರಾಣ ಬೇರೆ. ನನ್ನ ದೃಷ್ಠಿ ಆಕೆಯ ಕಾಲುಗಳೆಡೆಗೆ ಹೋದವು, ಎಂಥ ಮುದ್ದಾದ ಪಾದಗಳವು. ಅಷ್ಟೇ ಸುಂದರವಾಗಿ, ಒಪ್ಪವಾಗಿ ಒಂದೆಳೆಯ ಬೆಳ್ಳಿಯ ಕಾಲ್‍ಚೈನು, ಹಿಂದೆ ಕುಳಿತಿದ್ದ ನನ್ನ ಹೆಂಡತಿಗೆ ಅವುಗಳನ್ನು ತೋರಿಸುತ್ತ ಹೇಳಿದೆ, ‘ಇಂಥ ಬಿಸಿಲು, ಕಾರ್ಬನ್ನಿನ ಕಪ್ಪು ಹೊಗೆಯಲ್ಲೂ ಎಷ್ಟೊಂದು ಮುದ್ದಾದ ಪಾದಗಳು ಪದ್ದು! ನಾಳೆ ನನ್ನ ಮಗಳು ದೊಡ್ಡವಳಾದ ಮೇಲೆ, ಅವಳ ಪಾದಗಳೂ ಹೀಗಾಗಬಹುದೇ?’ ಎಂದು ಸಂಭ್ರಮಿಸುತ್ತಿರುವಾಗ, ಮಗಳು ದೊಡ್ಡವಳಾಗುವ ಕನಸು ನನ್ನನ್ನು ಮಹಾದೇವಿಯಕ್ಕನ ಒಂದು ವಚನ ನೆನಪಿಸಿಕೊಳ್ಳುವಂತೆ ಮಾಡಿತು –
 ಮದನಾರಿಯೆಂಬ ಮಳೆ ಹೊಯ್ಯಲು
ಶಿವಯೋಗವೆಂಬ ತೊರೆ ಬರಲು
ಕಾಮನೆ ಅಂಬಿಗನಾದ ನೋಡಾ
ಕರ್ಮದ ಕಡಲೆನ್ನೆಳೆದೊಯ್ಯುವಾಗ
ಕೈಯ ನೀಡು ತಂದೆ, ಚನ್ನಮಲ್ಲಿಕಾರ್ಜುನ.
       ಅಂದಹಾಗೆ, ಕಳೆದ ಎರಡು ತಿಂಗಳಿಂದ ನಾನು ಮತ್ತೆ ಮತ್ತೆ ಓದಿ ಸಮಾಧಾನಿಯಾದುದು ವಚನ ಸಾಹಿತ್ಯದಿಂದ. ಆಡಳಿತ ನನ್ನ ಒಟ್ಟು ಸೃಜನಶೀಲತೆಗೆ ಭಂಗ ತರುತ್ತದೆ ಎಂಬ ನನ್ನ ಅನೇಕ ಗೆಳೆಯರ ಆತಂಕವನ್ನು ಹುಸಿಗೊಳಿಸುವ ಶಕ್ತಿಯನ್ನು ನೀಡಿದ್ದು, ಈ ವಚನ ಸಾಹಿತ್ಯ. ಅದೇ ಓದಿನ ಸುಖದ ಮತ್ತಿನಲ್ಲಿರುವಾಗ, ಕರ್ನಾಟಕ ರಾಜ್ಯ ವೀರಶೈವ ವಿಚಾರ ವೇದಿಕೆ ಬೆಂಗಳೂರು, ಇವರು ದಿನಾಂಕ:11/10/2014  ರಂದು ರಾಜಾಜಿನಗರದ ಬಸವೇಶ್ವರ ಕಾಲೇಜಿನ, ಬಸವ ಸಭಾಂಗಣದಲ್ಲಿ ಉಪನ್ಯಾಸ ನೀಡಲು ಕೇಳಿಕೊಂಡರು. ಅದೆಷ್ಟೇ ಹಿಂಸೆಯಾದರೂ ಸರಿ, ಪ್ರೀತಿಯನ್ನು ಧಿಕ್ಕರಿಸಲಾಗದು ನನಗೆ, ಒಪ್ಪಿಕೊಂಡೆ.
     ಎರಡನೆ ಶನಿವಾರ ನಮಗಿಬ್ಬರಿಗೂ ರಜೆ. “ಸಾವಿರದ ಸಾಹಿತ್ಯ: ವಚನ” ಇದು ನನ್ನ ವಿಷಯ. ನನ್ನದೊಂದೇ ಉಪನ್ಯಾಸ. ಸಭೆಯಲ್ಲಿ ನನ್ನೊಂದಿಗೆ ಶ್ರೀ ಪಾಲನೇತ್ರ, ಅಧ್ಯಕ್ಯರು, ಕರ್ನಾಟಕ ವಿಚಾರ ವೇದಿಕೆ, ಶ್ರೀ ಗುರುಸ್ವಾಮಿ, ಆರ್.ಎಂ.ಸಿ ಯಾರ್ಡ್ ಮಂಡಿ ಕಾಂಟ್ರಾಕ್ಟರ್, ಯಶವಂತಪುರ, ಶ್ರೀಮತಿ ಕೆ.ಎನ್. ಪ್ರಮಿಳಾ, ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀ ಕೆ.ಆರ್. ಸಿದ್ದಲಿಂಗ ಆರಾಧ್ಯ, ಖಜಾಂಚಿ ಮತ್ತು ಶರಣಪ್ಪ ಕುಂಬಾರ, ಅಧ್ಯಕ್ಷರು, ಕರ್ನಾಟಕ ರಾಜ್ಯ ಬೋರ್‍ವೆಲ್ ಕಾರ್ಮಿಕರ ಒಕ್ಕೂಟ, ಶ್ರೀ ಶಂಕರ ಪಾಟೀಲ, ಅಧ್ಯಕ್ಷರು, ಕರ್ನಾಟಕ ಪ್ರತಿಭಾ ಅಕಾಡೆಮಿ, ಬೆಂಗಳೂರು ಹಾಗೂ ಹಿರಿಯ ಪತ್ರಕರ್ತ ರು. ಬಸಪ್ಪ.
       ಎಲ್ಲಕ್ಕೂ ಮಿಕ್ಕಿ ಈ ಸಮಾರಂಭದಿಂದ ನನಗೆ ಸಿಕ್ಕ ದೊಡ್ಡ ನಿಧಿ, ಆರು ಜನ ಸಾಫ್ಟವೇರ್ ಇಂಜಿನಿಯರಿಂಗ್ ಯುವ ಗೆಳೆಯರ ಬಳಗ. ಇವರು ಕಳೆದ ಅನೇಕ ಸಭೆಗಳಿಂದ ನನ್ನ ಬೆನ್ನು ಬಿದ್ದಿದ್ದಾರೆ. ನನ್ನ ನೇತೃತ್ವದಲ್ಲಿ ಏನೋ ಒಂದು ಮಾಡಬೇಕೆನ್ನುವ ಕನಸು ಅವರಿಗೆ. ನನಗೆ ಈಗೊಂದಿಷ್ಟು ಅಕ್ಕಮಹಾದೇವಿಯ ಸುತ್ತ ಸಿಳ್ಳೆ ಹೊಡೆಯುವ ಪಡ್ಡೆಗಳು ಸಿಕ್ಕರೆಂಬ ಖುಷಿ. ಅವರ ಬಳಿಕರೆದು ಹೇಳಿದೆ ಈ ಹುಚ್ಚು ಹುಡುಗಿ ನಮ್ಮ ಪ್ರೇಮಿಗಳಿಗೆ ಮಾದರಿಯಾಗಬೇಕು. ಅದಕ್ಕೆ ನಾನು ಏನೂ ಮಾಡಲು ಸಿದ್ಧ ಎಂದು ಆಕೆಯ ಕೆಲವು ಸಾಲುಗಳ ಹೇಳಿದೆ –
 “ಅಪ್ಪುಗೆ ಸಡಿಲಿದ ಸುಖವ ಮರಳಿ ಅರಸಿದರುಂಟೆ?
ನೋಡದಿರು, ಕಾಡದಿರು, ಮನ ಬಳಲಿಸದಿರು”
ನಮ್ಮ ಹುಡುಗರ ಮೈ ಬಿಸಿಯಾಯಿತೇನೊ . . . . ಮತ್ತೆ ಹೇಳಿದೆ –
 ನಾನು ನಿನಗೊಲಿದೆ, ನೀನು ನನಗೊಲಿದೆ
ನೀ ನನ್ನ ಅಗಲಿ ಇರಲಾರೆ, ನಾ ನಿನ್ನ ಅಗಲಿ ಇರಲಾರೆ. . .
ನೀ ಕರುಣಿ ಎಂಬುದು ಬಲ್ಲೆ
ನೀನಿರಿಸಿದ ಗತಿಯೊಳಗೆ ಇರುವೆ ನಾ
ನೀನೇ ಬಲ್ಲೆ ಚೆನ್ನಮಲ್ಲಿಕಾರ್ಜುನ
   ಹೀಗೆ ಹೇಳುತ್ತಾ ಹೋದರೆ ಈ ಹುಡುಗರಿಗೆ ಮದುವೆಯೂ ಕಷ್ಟವಾದೀತೆಂದು ವಿಚಾರಕ್ಕೆ ಬಂದೆ. ಇದುವರೆಗೆ ಇರುವ 21000 ವಚನಗಳಲ್ಲಿ, 2500 ವಚನಗಳು, 9 ಭಾಷೆಗಳಿಗೆ ಭಾಷಾಂತರಗೊಂಡಿವೆ. ನೂರಾರು ಶರಣರಲ್ಲಿ ಕೇವಲ 129 ಜನ ಶರಣರ ಮತ್ತು 31 ಜನ ಶರಣೆಯರ, 13 ಜನ ಅಜ್ಞಾತರ ಹೀಗೆ ಒಟ್ಟು 173 ಜನ ವಚನಕಾರರ 2500 ವಚನಗಳು ಭಾಷಾಂತರಗೊಂಡು ಪ್ರಚಲಿತದಲ್ಲಿವೆ. ಮಿಕ್ಕ ಸಾಹಿತ್ಯದ ಗತಿ ಏನು? ಇದು ನನ್ನ ಪ್ರಶ್ನೆ. ಅಕ್ಕಮಹಾದೇವಿ ಮೆಜಿಸ್ಟಿಕ್‍ಗೆ ಬಂದು ಮಾತಾಡಬೇಕು. ಇದಕ್ಕೆ ನಮ್ಮ ದಾರಿ ಏನು? ಅವಳಂತಹ ನಿಸ್ಸಂಗಿ ಮಾತಾಡದಿದ್ದರೆ ಸಂಗಕ್ಕೂ ಅರ್ಥ ಬರುವುದಿಲ್ಲ ಎನ್ನುತ್ತ ಅವಳ ವಚನ ಒಂದನ್ನು ಹೇಳಿದೆ –
 ಹಣ್ಣ ಮೆದ್ದ ಬಳಿಕ ಆ ಮರನಾರು ತರಿದಡೆನು?
ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೆನು?
ಗಾಬರಿಯಾದರು ನನ್ನ ಗೆಳೆಯರು. ಅವಳಂಥ ಛಲಬೇಕು ಬದುಕಿಗೆ. ಅವಳಂಥ ನಿಲುವುಬೇಕು ಕಾಮಕ್ಕೆ. ಹೀಗೆ, ಅಗ್ನಿಯುಗುಳುವ ಇವಳದು ಒಂದು ರೀತಿಯಲ್ಲಿ ಅಗ್ನಿಗಾನ. ಶುದ್ಧಕಾಮಿ, ಶುದ್ಧಾಂಗಿಯಾದ ಅವಳು ವಚನ ನೀಡುತ್ತಾಳೆ -
 “ಚೆನ್ನಮಲ್ಲಿಕಾರ್ಜುನನ ಕೈ ಹಿಡಿದು
ನಿಮ್ಮ ತಲೆಗೆ ಹೂವ ತರುವೆನಲ್ಲದೆ ಹುಲ್ಲ ತಾರೆನು”
       ****
“ನಯವಿಲ್ಲದ ಶಬ್ಧವನು ನುಡಿಯಲಾರೆನು”
ಆದರೆ,
“ಮನ ಬಂದುದನು ಬಯಸಿ ಬೆಯುತ್ತಿದ್ದೆನಯ್ಯ
ನನ್ನ ಮನದ ದುರಾಶೆಯನ್ನು ನೀಗಿಸು” ಎಂದು ಆತ್ಮ ಸಾಕ್ಷಿಯಾಗಿ, ತಲೆಬಾಗಿ ಬೇಡಿಕೊಳ್ಳುತ್ತಾಳೆ. ಇಂಥ ಬಾಗುವಿಕೆ ಮನುಷ್ಯರಿಗೆ ಮಾತ್ರ ಸಾಧ್ಯ. 
   
       ಭಾಷಣ ಮುಗಿದು ಕೆಳಗಿಳಿದಾಗ, ಸಮಯ ರಾತ್ರಿ 9 ಗಂಟೆ. ನನ್ನ ಮದಿರಾಲಯದ ಯೋಗಕ್ಕೆ ಸರಿಯಾದ ಮಹೂರ್ತ. ಈಗ ಹೊರಡಲೇಬೇಕು. ಮೈ ಮುಟ್ಟಿದ ಹೂ, ಹೆಣ್ಣು ಮತ್ತು ಹೊಗಳಿಕೆಯ ಭಾರ, ಬದಿ ಸರಿಸಿ ಹಗುರಾಗಬೇಕು, ಮತ್ತೆ ನಾ, ನಾಗಬೇಕು.




Monday, October 6, 2014

ಇವಳು, ಗಾಂಧಿ ಮತ್ತು ರೋಮಾಂಚನ



    ಕಳೆದ ಹದಿನೈದು ವರ್ಷಗಳಿಂದ ನನ್ನೊಳಗೆ ಬೀಸಿದ ಗಾಂಧಿಯ ಗಾಳಿಗೆ ಇದೇ ಅಕ್ಟೋಬರ್ ಎರಡರಂದು ಒಂದು ರೀತಿಯಲ್ಲಿ ತವರು ಸನ್ಮಾನ. ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದ ಮಿನಿ ಆಡಿಟೋರಿಯಂನಲ್ಲಿ (ಸ್ಥಳೀಯ ವೈದ್ಯರು, ವ್ಯಾಪಾರಿಗಳು, ಎಂಜಿನೀಯರ್‍ಗಳು, ಶಿಕ್ಷಕರು ಹಾಗೂ ಕೈಗಾರಿಕೋದ್ಯಮಿಗಳು ಸೇರಿಕೊಂಡು ಕಟ್ಟಿಕೊಂಡ ವೇದಿಕೆ) ‘ಗೆಳೆಯರ ಬಳಗದ’ ವತಿಯಿಂದ ಹಮ್ಮಿಕೊಳ್ಳುವ ಪ್ರತಿ ವರ್ಷದ ಏಕೈಕ ಕಾರ್ಯಕ್ರಮ ‘ಗಾಂಧಿ ಜಯಂತಿ’. ಹಿಂದಿನ ಸಾರಿ ಇದೇ ಸಮಾರಂಭಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಮುಖ್ಯ ಅತಿಥಿಗಳಾದರೆ ಈ ಸಾರಿಯದು ನನ್ನ ಪಾಳಿ. ಶಿಸ್ತಾಗಿ, ಗಂಭೀರವಾಗಿ, ನಿಗಧಿತ ವೇಳೆಯ ವ್ಯಾಪ್ತಿಯಲ್ಲಿ ನಡೆಯುವ ಇದು ಚಿಂತಕರ ಸಭೆಯೇ ವಿನಃ ಪುಂಡರಗೋಷ್ಠಿಯಲ್ಲ. ಗಾಂಧೀಜಿಯ ಪ್ರೀತಿಯ ರಾಮ್‍ಧುನ್‍ದೊಂದಿಗೆ ಪ್ರಾರಂಭವಾಗಿ ರಾತ್ರಿಯ ಊಟದೊಂದಿಗೆ ಮುಗಿಯುವ ಈ ಸಮಾರಂಭದಲ್ಲಿ ಎಲ್ಲವೂ ಶಿಸ್ತು ಮತ್ತು ಕಾಲಪ್ರಜ್ಞೆಯ ಕ್ರಿಯೆ.
       ವಿಚಿತ್ರ ನೋಡಿ, ಬಾಗಲಕೋಟೆಯ ಪಕ್ಕದ ಮೂರು ಪ್ರಮುಖ ಊರುಗಳಲ್ಲಿ ನನ್ನ ಗಾಂಧಿ ರೂಪಗೊಂಡ. ಗುಳೇದಗುಡ್ಡದಲ್ಲಿದ್ದಾಗ “ಗಾಂಧಿ ಮತ್ತು ಗೂಂಡಾ” ಬರೆದೆ, ಮಹಾಲಿಂಗಪುರದಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿಗಳಿಂದ ಅದರ ಪ್ರದರ್ಶನವಾಯಿತು. ಇತ್ತೀಚಿಗೆ ಕೂಡಲಸಂಗಮದಲ್ಲಿ ನನ್ನ “ಗಾಂಧಿ ಅಂತಿಮ ದಿನಗಳು” (2013) ರಂಗಪ್ರದರ್ಶನವಾಯಿತು. ಆದರೆ ಸ್ಥಳೀಯ ಬಾಗಲಕೋಟೆಯಲ್ಲಿಯೇ ಈ ನನ್ನ ಗಾಂಧಿ ಮಾತಾಡಿರಲಿಲ್ಲ ಎಂಬ ಬೇಸರ ನನಗಿತ್ತು. ಆದರೆ ಗಾಂಧಿ ಯಾವಗಲೂ ನಿಧಾನ, ಬರಬೇಕಾದಾಗಲೇ ಬರುತ್ತಾನೆ. ಈ ಸಾರಿಯೂ ಬಂದ ಅತ್ಯಂತ ಗಂಭೀರವಾಗಿ, ಪರಿಣಾಮಕಾರಿಯಾಗಿ. 
    ಅಂದಹಾಗೆ, ಸರಿಯಾಗಿ ಸಾಯಂಕಾಲ 6.30 ಕ್ಕೆ ಮಾತನಾಡಲಾರಂಭಿಸಿದ ನಾನು, ಭಾಷಣ ಮುಗಿಸಿದಾಗ ಸಮಯ 8 ಗಂಟೆ. ಒಂದೂವರೆ ಗಂಟೆಗಳ ಈ ವಾಗ್ಝ್‍ರಿಗೆ ಜನ ಹುರುದುಂಬಿಸಿ, ಹರಸಿ ಕಳುಹಿಸಿದ ಅಭಿಮಾನಿಗಳ ರೀತಿಗೆ ನಾನು ಚಿರಋಣಿ. ಪುಸ್ತಕಗಳ ಭರ್ಜರಿ ವ್ಯಾಪಾರ, ಕಿಕ್ಕಿರಿದ ಸಭಾಂಗಣ, ಬೀಳೂರು ಗುರುಬಸವ ಸಮಾಧಿಯ ದರ್ಶನ, ಜೊತೆಗೆ ಬಾದಾಮಿಯ ಅಭಿಮಾನಿಗಳು, ಹೆಂಡತಿ, ಮಕ್ಕಳು ಎಲ್ಲವೂ ಯೋಗಾಯೋಗ.
        1869 ಅಕ್ಟೋಬರ್ 2 ರಂದು ಹುಟ್ಟಿ, 1948 ಜನೇವರಿ 30 ರಂದು ಕೊಲೆಯಾಗುವ ಗಾಂಧಿಯ ಆಯುಷ್ಯ 78 ವರ್ಷ, 3 ತಿಂಗಳು, 28 ದಿನಗಳು. ಆದರೆ ನನ್ನ ಚರ್ಚೆಯ ಗಾಂಧಿಯ ಬದುಕು ಕೇವಲ ಆರೇ ತಿಂಗಳದ್ದು. 1947 ಜುಲೈ 18 ರಿಂದ 1948 ಜನೆವರಿ 30 ರ ವರೆಗಿನ ಈ ನನ್ನ ಗಾಂಧಿಯೊಂದಿಗೆ ಮಾನಸ ಪುತ್ರ ಮಹಾದೇವ ದೇಸಾಯಿ ಇಲ್ಲ, 62 ವರ್ಷ ಸಂಸಾರ ಮಾಡಿದ ಮಡದಿ ಬಾ ಇಲ್ಲ, ಇವನ ಕರಸಂಜಾತರಾದ ಪಟೇಲ-ನೆಹರೂ ಇವನೊಂದಿಗಿದ್ದೂ ಇವನೊಂದಿಗಿಲ್ಲ. ಒಂದೆಡೆ ದೇಶ ವಿಭಜನೆಯ ನೆಪದಲ್ಲಿ 42000 ಸಂಸಾರಗಳು, ನಿರಾಶ್ರಿತರಾದ ಒಂದು ಕೋಟಿ ಜನ, ನಿರಂತರವಾಗಿ ಕಾಡುತ್ತಿದ್ದ ದೆಹಲಿಯ ಮಳೆ, 47 ರ ವಯಸ್ಸಿನ ಕೊಲೆಗಡುಕ ಸುಹರ್‍ವರ್ಧಿ, ಪ್ರಶ್ನೆಗಳ-ಪತ್ರಗಳ ಸುರಿಮಳೆ, ಒಂಟಿತನ, ಕೆಮ್ಮು, ನಿದ್ರಾಹೀನ ರಾತ್ರಿಗಳು ಮತ್ತು ಎಲ್ಲ ತಲ್ಲಣಗಳ ಮಧ್ಯ ಸಮಾಧಾನಿಸುತ್ತಿದ್ದ ಈ ಸಾಲುಗಳು –
ವೇದ ಪುರಾನ ಕುರಾನ ಯಹ ಸಬ ಕಹಾನಿ
ಗಂಗಾ ಜಮುನಾ ತೀರಥ ಯಹಬಸಬ ಪಾನಿ
ತೋ ಮತ ಹೋ ಇನಕಾ ಅಭಿಮಾನಿ
ಯಹ ಸಬ್ ಛೋಡ್, ಹೋ ಆತಮ ಗ್ಯಾನಿ
      ಇಷ್ಟೆ, ಇಂದು ನಾನೆತ್ತಿಕೊಂಡ ಗಾಂಧಿ. ಒಂದು ಬಾರಿಗೆ 25 ಲಕ್ಷ ಜನರನ್ನು ಸಭೆಗಳಲ್ಲಿ ಸೇರಿಸಬಲ್ಲವನಾಗಿದ್ದ ಗಾಂಧಿ ಈಗ ಮುಷ್ಠಿಯಷ್ಟು ಶ್ರದ್ಧಾವಂತರನ್ನು ನಂಬಿ ಸಮಾಧಾನಿಯಾಗಿರಬೇಕಿತ್ತು. ಈ ಸ್ಥಿತಪ್ರಜ್ಞೆ, ನಿರ್ಲಿಪ್ತ, ನಿರ್ವಿಕಾರದ ಗಾಂಧಿ ನನಗೆ ಅದೆಷ್ಟೋ ವರ್ಷ ಬರೀ ಪ್ರಶ್ನೆಯಾಗಿ ಕಾಡಿ, ಕೃತಿಗಳಾಗಿ ಹೊರಬಂದು, ನಾಟಕ ಮತ್ತು ಭಾಷಣಗಳಾಗಿ ಮಾತಾಡಿದ್ದೆನೆ ಹೊರತು ಬದುಕಿನ ಕ್ರಮವಾಗಿರಲಿಲ್ಲ. ಆದರೆ ಈ ಸಾರಿ ತ್ರಿಕರ್ಣ ಪೂರ್ವಕಾಲವಾಗಿ ಆತನನ್ನು ನಂಬಿದ್ದರಿಂದಲೇನೋ ಮತ್ತೆ ಬದುಕು, ಭರವಸೆ ಸತ್ಯವಾಯಿತು. 
    ನನ್ನ ಪಾಲಿಗೆ ಗಾಂಧಿ ಎಂದರೆ ನಂಬಿಕೆ. ಆತ ನಂಬಿ, ಮೋಸ ಹೋಗಿ, ಮಹಾತ್ಮನಾದ. ಮೋಸ ಹೋಗುವುದರಲ್ಲಿ ಇರುವ ಸುಖ ಮೋಸ ಮಾಡುವುದರಲ್ಲಿ ಇಲ್ಲ. ಮೊಲೆಕೊಟ್ಟು ಜಾರಣಿಯಾಗುವವಳಿಗಿಂತ ಮೊಲೆ ಕುಡಿಯುವ ಮಗು ದೇವ ಸ್ವರೂಪಿ. ಅದು ನಂಬಿಕೆ, ಅವಳು ಜಾರಣಿ.
        ಇಂದಿನ ಈ ವೇದಿಕೆಯ ಆರಂಭದಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಗೀತ ವಿಭಾಗದಿಂದ ಗಾಂಧಿ ಭಜನ್ ಬಿಟ್ಟರೆ, ಉದ್ಘಾಟನೆ, ಅಧ್ಯಕ್ಷಿಯ ಶರಾ, ಪರಿಚಯ ಏನೂ ಇಲ್ಲ. ನಾನು, ನನ್ನ ಗಾಂಧಿ ಎದುರಿಗೆ ಪ್ರಜ್ಞಾವಂತ ಕೇಳುಗ ಬಳಗ.
   ಅಕ್ಟೋಬರ್ 1 ರಾತ್ರಿ ಬೆಂಗಳೂರಿನ ಪೀಣ್ಯಾ ದಾಟಬೇಕಾದರೆ ರಾತ್ರಿ 1.30. ಬಾಗಲಕೋಟೆಗೆ ಹೋದಾಗ ಬೆಳಗಿನ 10 ಗಂಟೆ. ಯಥಾ ಪ್ರಕಾರ ಅದೇ ಅನುಗ್ರಹ-ಆರಾಧನಾ ಹೋಟೆಲ್, ಐದು ತಿಂಗಳಲ್ಲಿ ಇದು ನನ್ನ ಮೂರನೇ ವಾಸ್ತವ್ಯ ನಿರಾತಂಕ ನಿದ್ರೆ. ಮಧ್ಯಾಹ್ನ 1.30 ಕ್ಕೆ ನವನಗರದ 50ನೇ ಸೆಕ್ಟರ್‍ನಲ್ಲಿರುವ ಯಡಹಳ್ಳಿ ವಕೀಲರ ಭವ್ಯ ಬಂಗಲೆಯಲ್ಲಿ ನಾನು, ಶ್ರೀ ವಿನೋದ, ಶ್ರೀ ಬಸವರಾಜ ಭಗವತಿ, ಸಿನಿಮಾ ಪ್ರೀತಿಯ ನಗರದ ಹಿರಿಯ ವೈದ್ಯ ಡಾ. ಸೋರೆಗಾವಿ, ಡಾ.ಯೋಗಪ್ಪನವರ ಮತ್ತು ಇತರರೊಂದಿಗೆ ಕುಟುಂಬ ಸಮೇತನಾಗಿ ಮಾತು, ಪ್ರೀತಿ ಮತ್ತು ಊಟ. ಈ ಮನೆಯಲ್ಲಿಯ ಅದ್ಭುತ, ಮಾರ್ಬಲ್‍ನಲ್ಲಿಯ ಮೀರಾಬಾಯಿಯ ಮೂರ್ತಿ. ಇವಳೊಂದು ನನ್ನ ಬಾಳಿನ ಅಳಿಯದ ರೋಮಾಂಚನ. ಬಾಗಲಕೋಟೆಗೂ ನನಗೂ ನೆನಪಿನ ಬಂಧನ.


        ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದಾಗ ಅಭಿಮಾನದಿಂದ ಬಾಚಿ ತಬ್ಬಿದವರು ಅದೆಷ್ಟು ಹಿರಿಯರು! ಎದೆಯುಬ್ಬಿಸಿ ಅಭಿಮಾನ ಪಟ್ಟವರು ಅದೆಷ್ಟು ಕಿರಿಯರು! ಆದರೆ ಮೋಹಗೊಂಡು ಎಲ್ಲಿಯೂ ನಿಲ್ಲುವ ಹಾಗಿರಲಿಲ್ಲ. ಡಾ|| ಮುಕ್ತಾ ಅವರ ಆತಿಥ್ಯ ಅವರ ಕಾರಿನೊಂದಿಗೆ ಸಿದ್ಧವಾಗಿತ್ತು.
    ಡಾ|| ಮುಕ್ತಾ ಹಾಗೂ ಅವಳ ಒಟ್ಟು ಕುಟುಂಬ ಕಳೆದ ನಾಲ್ಕು ತಿಂಗಳಿಂದ ನನಗಾಗಿ ಕಾಯುತ್ತಿತ್ತು. ಇಲ್ಲಿಂದ 70 ಕಿ.ಮಿ ಹೋದರೆ ಅವಳ ಪ್ರೀತಿಯ ಫಾರ್ಮ ಹೌಸ್. ಇಲ್ಲಿ ಎರಡು ದಿನನೆಮ್ಮದಿಯಾಗಿರಬೇಕೆಂದು ನನ್ನ ಮಹದಾಸೆ. ಆಶೆಗಳ ಹಾವಳಿಯಲ್ಲಿ ದೇಹದಣಿದದ್ದೇ ಕೆಲವೊಮ್ಮೆ ಗೊತ್ತಾಗುವುದಿಲ್ಲ. ವಿಶ್ರಾಂತಿಯ ಕನಸು ಮರಿಚಿಕೆಯಾಗಿಯೇ ಉಳಿಯುತ್ತದೆ. ಈಗ ಇದೆಲ್ಲದಕ್ಕೂ ಡಾ|| ಮುಕ್ತಾ. ಜಗಳವಾಡಲು, ಮುನಿಸುಕೊಳ್ಳಲು ಪ್ರೀತಿಯ ಗೆಳೆಯ ರಾಮು(ನಾಯಿ). ದಿನಾಂಕ 2 ರಂದು ರಾತ್ರಿ ಇಲ್ಲಿ. ಇಂದು ಸೇರಿದ ನಾವು ದಿನಾಂಕ 05 ರವರೆಗೆ ಪ್ರೀತಿಯ ಅಮಲಿನಲ್ಲಿ.



   ಇನ್ನೆರಡು ದಿನ ಧಾರವಾಡದಲ್ಲಿ ತಮ್ಮ, ತಂದೆ-ತಾಯಿ, ಮೈಯೆಲ್ಲ ಮಾತಾಡುವ ಮಗಳು, ಮುಟ್ಟುವ ಮುಂಚೆಯೇ ನಕ್ಕು ಬಿಡುವ ಮಗ, ನಮ್ಮ ಸಂಸಾರ ಸಿನಿಮಾ ನಿರ್ದೇಶಕಿ ನೀತು, ಮಧ್ಯ ಬೆಂಗಳೂರಿನ ಕಛೇರಿಯಿಂದ ರಿಂಗಣಿಸುವ ಫೋನುಗಳು, ಎಲ್ಲದಕ್ಕೂ ಮೌನ, ಮಹಾಮೌನ.