Total Pageviews

Saturday, April 18, 2020

ಬಯಲ ಬೆರಗನು ಬಾಚಿಕೊಂಡರೆ?


ಕೆಣಕಿ, ಹೆಣ್ಣುಗಳನ್ನು ಬಡಿದೆಬ್ಬಿಸಿ
ಆಧ್ಯಾತ್ಮದ ಸೋಗು ಹಾಕಿದ
ಗಂಡು ಮಾಯೆಗೆ
ಹೆಣ್ಣೇ ಕಾಡುವ ಪರಿಗೆ
ಮಾತುಬರೀ ಮೂಕ ಯಾತನೆ
 

ಇದು ಆಸೆಯೆಂಬ ಶೂಲದ ಮೇಲೆನಿಂತು, ನಿರ್ಮೋಹದ ಮಹಾ ಸಾಧಕ ಎಂಬ ಅಗ್ಗಡಿಕೆಗೆ ಪಾತ್ರನಾದ, ಅಲ್ಲಮನಿಗೆ ಶ್ರೀದೇವಿ ಕೆರೆಮನೆ ಎಂಬ ಕವಯತ್ರಿ ಒಡ್ಡುವ ಸವಾಲು. ಕಾವ್ಯವೆಂಬ ಒಳಗಣ್ಣಿನಿಂದ ಪುರುಷ ಲಿಖಿತ ಚರಿತ್ರೆಯ ಪುಟಗಳನ್ನು, ಅವುಗಳಲ್ಲಿ ವಿಸ್ತಾರಗೊಂಡ ಚಿಲ್ಲರೆತನಗಳನ್ನು ನಿಭಾಯಿಸುವ ಕ್ರಮ.
ಈ ಅಲ್ಲಮ ಶೂನ್ಯ ಸಿಂಹಾಸನವನ್ನೇರಿ ಶರಣಗಣ ಸಾಮ್ರಾಜ್ಯಎನ್ನಿಸಿಕೊಂಡದ್ದೂ ಒಂದು ಮಹಾ ನಾಟಕ, ಈತ ಪ್ರೀತಿಯನ್ನು ಮಾಯೆ ಎಂದವ. ಎಲ್ಲದಕ್ಕೂ ಅವಳನ್ನು ಹೊಣೆ ಮಾಡಿ ತನ್ನ ಹೊಣೆಗೇಡಿ ತನಕ್ಕೆ ಶೂನ್ಯ ಪೀಠವೆಂಬ ಸುಳ್ಳು ಸೃಷ್ಟಿಯ ಆಟ ಹೂಡಿ, ಇಹದ ನಗೆಯ ಕುಹಕಕ್ಕಂಜಿ, ಜಂಬದಲ್ಲಿ ಡಮರುಗವ ಒದ್ದು ಒಡೆದು, ‘ಬೆನ್ನು ಹಾಕಿ ಓಡಿ ಹೋದವಎಂದು ಆಪಾದಿಸಿ, ಅಲ್ಲಮನನ್ನು ಕಟಕಟೆಯಲ್ಲಿ ನಿಲ್ಲಿಸಿದ ಪರಿಗೊಂದು ಸಾಕ್ಷಿ. ಇದು ಇವಳು ಮಾಡಬಹುದು ಯಾಕೆಂದರೆ ಇವಳು ಶ್ರೀದೇವಿ. ಈಕೆಯ ಎದೆಯ ದನಿಯಾದ ಪಾಲನೆ-ಪೋಷಣೆಗಳಲ್ಲಿ ಪಲ್ಲವಿಸಿದ ಅಲ್ಲಮಎಂಬ ಆಧ್ಯಾತ್ಮ ಪುಂಡನನ್ನು, ಅಧಿಕಾರ ವಾಣಿಯನ್ನು ಆಲಿಸುವ ಸಂಸ್ಕøತಿಗೊಳಪಡಿಸುವ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ. ಯಾಕೆಂದರೆ, ಎಲ್ಲ ವಾದಿಸಿ-ಸಾಧಿಸಿಯೂ ಉಳಿಯುವ ಸತ್ಯ, ‘ಈ ಜಗತ್ತು ಅಂತಿಮವಾಗಿ ನನ್ನ ಮೊಲೆಯುಣ್ಣುವ ಕೂಸುಎನ್ನುವ ಅವಳ ಸಾತ್ವಿಕ ವಾದ. ಇದು ಬರೀ ವಾದವಷ್ಟೇ ಅಲ್ಲ ವಾಸ್ತವವೂ ಕೂಡ. ಶ್ರೀದೇವಿ ಕೆರೆಮನೆ ಈ ಕ್ರಮದಲ್ಲಿ ನಮ್ಮ ಮಧ್ಯದ ಓರ್ವ ವಾಸ್ತವಾದಿ ಕವಯತ್ರಿ.
ಮೇಲಿನ ವಾದಕ್ಕೆ ಪೂರಕವಾಗಿ ಶ್ರೀದೇವಿಯವರ ಪದ್ಯದ ಒಂದು ಸಾಲು – ‘ದಾರ ಪೋಣಿಸಿದಷ್ಟು ಸುಲಭವಲ್ಲ ಯಾವುದಕ್ಕೂ ಅಂಟದ ನಿರಾಕಾರಿಯನ್ನು ಅಂತರಂಗಕ್ಕೆಳೆದುಕೊಂಡು ಸುಖಿಸುವುದು, ಹೌದು, ಇದು ಒಪ್ಪಲೇಬೇಕಾದ ಮಾತು. The most discussed animal in the universe is woman ಎನ್ನಿಸಿಕೊಂಡಾಕೆ, ಎಲ್ಲವನ್ನೂ ಎದೆಗೆತ್ತಿಕೊಂಡು ದಕ್ಕಿಸಿಕೊಳ್ಳುತ್ತಾಳೆ, ಬದುಕುತ್ತಾಳೆ. ಆದರೆ ನಿರಾಕರಿಸುವ ನೆಲೆಗೆ ಅವಳು ಹೋಗುವುದಿಲ್ಲ. ಯಾಕೆಂದರೆ ನಿರಾಕರಣೆ ಅವಳ ಅಸ್ತಿತ್ವದಲ್ಲಿಯೇ ಇಲ್ಲ. ಸ್ವೀಕರಿಸಿ, ಸಹಕರಿಸಿ ಅಕ್ಷಯವಾಗುವ ಅವಳು ಅಕ್ಷರಗಳ ಉದಕಮಂಡಲ.
ಅವಳು ಕಡಲು ಕಾಣದೆಯೂ ಕಡಲಾಗಬಲ್ಲವಳು, ಪ್ರಾಣ ಚೈತನ್ಯವನ್ನೆಲ್ಲ ಉಸುರಿಗೆ ತುಂಬಿ ಎದೆಯೊಳಗೆ ಬಿಗಿ ಹಿಡಿದವಳು. ಸಲುಹಿ, ಸಾವರಿಸಿ ಜಗವನ್ನು ಮುಟ್ಟಿಯೂ ಮುಟ್ಟದೆಯೂ ಸಾಂತ್ವಾನಿಸಿದವಳು. ಈ ಸಂದರ್ಭದಲ್ಲಿ ನಮ್ಮ ಸಮಕಾಲೀನ ಲೇಖಕಿ ಕನಕ ಹ.ಮ. ಅವರ ಒಂದು ಪದ್ಯ ಉಲ್ಲೇಖಾರ್ಹ – ‘ಜಗವೆಲ್ಲ ಧಿಕ್ಕರಿಸಿದಾಗ ನಾ ಬಂದು ನಿನ್ನ ಅಪ್ಪಿಕೊಳ್ಳತ್ತೇನೆ.ಇದನ್ನೇ ಶ್ರೀದೇವಿ ಯಾರಿಗೂ ಸೇರದ ಈ ಭೂಮಿ ನಿನಗೂ ಸೇರಿದ್ದಲ್ಲವೆ?’ ಎಂದು ಪ್ರಶ್ನಿಸಿ ಇಡೀ ಸ್ತ್ರೀ ಕುಲವನ್ನು ಅದರೆಲ್ಲ ಮಿತಿ-ಅಮಿತಿಗಳೊಂದಿಗೆ ಪ್ರಪಂಚ ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ದಕ್ಕದ್ದನ್ನೂ ದಕ್ಕಿಸಿಕೊಳ್ಳುವಂತೆ ಮಾಡುವುದೇ ಕಾವ್ಯದ ಶಕ್ತಿ ಎನ್ನುವುದಾದರೆ ಅಂಥ ಕೆಲವು ಸತ್ಯಗಳನ್ನು ಈ ಸಂಕಲನದ ಮೂಲಕ ಶ್ರೀದೇವಿ ನಮಗೆ ದಕ್ಕಿಸಿದ್ದಾರೆ.
ಕವಯತ್ರಿ ಕೆರೆಮನೆಯವರ ಕಾವ್ಯ ಸಂಕಲನ ಆಸೆಯೆಂಬ ಶೂಲದ ಮೇಲೆಈ ತಲೆಮಾರಿನ ಸ್ತ್ರೀ ಪ್ರಜ್ಞೆಯ ವಿಸ್ತಾರಕ್ಕೊಂದು ಸಾಕ್ಷಿ. ಅವಳು ಭಿನ್ನವಾಗಿದ್ದಾಳೆ ತನ್ನ ನಡಿಗೆಯಲ್ಲಿ, ನೋಟದಲ್ಲಿ ಹಾಗೂ ವೇದ್ಯವಾಗಿಸಿಕೊಳ್ಳುವ ಸಂಗತಿಗಳಲ್ಲಿ ಎನ್ನುವುದನ್ನು ಜೋರು ಧ್ವನಿಯಲ್ಲಿ ಹೇಳಿದ ಈ ಸಂದರ್ಭದ ಸಂಕಲನವಿದು. ಆದರೆ ಈ ಜೋರು ಧ್ವನಿಗೆ ಕಾರಣನಾದ ಆ ಆತ ಯಾರು? ಇಲ್ಲಿ ಪ್ರಶ್ನೆ, ಉತ್ತರ, ಅಹಂಕಾರ, ಆಚಾರ, ಸಂಪ್ರದಾಯ, ಸಂಸ್ಕøತಿಗೆ ಸಂವಾದಿಯಾಗಿ ನಿಲ್ಲುವ ಈ ಅಲ್ಲಮ ಯಾರು? ಇವನು ಅವಳೊಳಗಿನವನೊ? ಅವಳಾಚೆಯವನೊ? ಇಹದವನೊ? ಪರದವನೊ? ಮಾತು ಸೂತಕದವನೊ? ಆಕಾರದವನೊ, ನಿರಾಕಾರದವನೊ? ಯಾವನು ಅವನು? ಶ್ರೀದೇವಿಯವರ ಈ ಕವಿತೆ ಅವನ ಕಟ್ಟಿಡುವ ಯತ್ನವೊ? ಬಿಚ್ಚಿಡುವ ಬಯಕೆಯೊ? ಹೀಗೆ ಇಡೀ ಲೋಕವೇ ಕರೋನಾದಿಂದ ಬಳಲಿ ಮೃತ್ಯು ಎಂಬ ಕತ್ತಲೆಗೆ ಜಾರಿದ ಈ ವೇಳೆಯಲ್ಲಿ ಕಾಣಲಾರದವನ, ಕಾಣಬಾರದವನ ಬೆನ್ನು ಹತ್ತಿಸಿ ಬಿಟ್ಟಿದ್ದು ಶ್ರೀದೇವಿಯವರ ಕಾವ್ಯ.
ಇಂದಿಗೆ ಹತ್ತೊಂಬತ್ತು ವರ್ಷಗಳ ಹಿಂದೆ, ಅಂದರೆ 2000 ದಲ್ಲಿ ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆಯಿಂದ ಅಲ್ಲಮನ ಕುರಿತು 1116 ಪುಟಗಳ ಬೃಹತ್ ಗ್ರಂಥವೊಂದು ಪ್ರಕಟವಾಯಿತು. ಗ್ರಂಥದ ಆರಂಭದಲ್ಲಿ ಯಾರು ಈ ಅಲ್ಲಮ? ಎಂಬ ಪ್ರಶ್ನೆಯನ್ನು ಮುಂದಿರಿಸಿಕೊಂಡು ಇಪ್ಪತ್ತೆಂಟು ಪುಟಗಳ ಚರ್ಚೆಯನ್ನು ಮಾಡಲಾಗಿದೆ. ಅದರ ಇಡಿಯಾದ ಚರ್ಚೆ ಇಲ್ಲಿ ಪ್ರಸ್ತುತವೆನಿಸಿದ್ದರೂ ಕೂಡ ಅದರಿಂದ ಆಯ್ದ ಶ್ರೀ ಸಿದ್ದೇಶ್ವರ ಶ್ರೀಗಳ ಅಲ್ಲಮನಕುರಿತ ವ್ಯಾಖ್ಯಾನದ ಕೆಲವು ಸಾಲುಗಳನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ
ಅಲ್ಲಮಶರಣರ ಮಧ್ಯ ಜ್ಞಾನ-ಚಂದ್ರಮ, ಮಾಯೆ ಮುಟ್ಟದ ಮೈ; ಮೋಹ ಸೋಂಕದ ಹೃದಯ; ಮರವೆಯನರಿಯದ ಮತಿ! ದೇಹ ದೇವಾಲಯ; ಜೀವ ದೇವ! ಅವನು ಸಾಧಿಸದ ಯೋಗವಿಲ್ಲ. ಹಠದಲ್ಲಿ ಹಠಯೋಗಿ; ಮಂತ್ರದಲ್ಲಿ ಪ್ರಣವಸಿದ್ದ; ಧ್ಯಾನದಲಿ ಅನಿಮಿಷ; ಲಿಂಗ-ಮಾರ್ಗದಲಿ ಶಿವಯೋಗಿ! ಕಣ್ಣಿನಲಿ ಕಾರುಣ್ಯ; ನಡೆಯಲ್ಲಿ ನಿಶ್ಚಿಂತತೆ; ಪ್ರಸನ್ನತೆಯೇ ಮೂರ್ತಿಗೊಂಡ ಮಹಂತ.
ದೇಶ ದೇಶಾಂತರ ಸುತ್ತಿದ; ಜನಮನದ ಕಾಳಿಕೆ ಕಳೆದ; ಸಾಧಕರಿಗೆ ಸತ್ಯದ ಸುಮಾರ್ಗ ತೋರಿದ; ತಪಸ್ವಿಗಳ ಮದ-ಮಂಜ ಚದುರಿಸಿದ. ಜ್ಞಾನದ ಮಹಿಮೆಯ ಎಲ್ಲೆಲ್ಲೂ ಮೆರೆದ. ಅವನ ಹಿರಿಮೆಯನು ಶರಣರ ಮಾತುಗಳಲ್ಲಿಯೇ ಕಾಣಬೇಕು.
ಅವನು ಘನಕ್ಕೆ ಘನಮಹಿಮ, ‘ಭುವನ ಹದಿನಾಲ್ಕರೊಳಗೆ ಪರಿಪೂರ್ಣ ನಿರಂಜನ ಜ್ಯೋತಿ. ‘ಅನುಪಮ ಚರಿತ. ‘ಬಟ್ಟ ಬಯಲು ಗಟ್ಟಿಗೊಂಡ ನಿಲುವು. ‘ಮಾತಿಂಗೆ ಅಳವಡದ ಮಹಿಮೆ. ‘ಸ್ಥೂಲ ಕಂಥೆ. ಸೂಕ್ಷ್ಮ ಟೊಪ್ಪರ. ಸತ್ಯ ದಂಡ. ಶಾಂತಿ ಭಸಿತ. ಸುಚಿತ್ತ ಮಣಿ. ತತ್ತ್ವ ಕರ್ಪುರ. ವೈರಾಗ್ಯ ಹಾವುಗೆ. ದೃಢಮನವು ಕೌಪೀನ. ಆಚಾರವೇ ಕಂಕಣ. ಕ್ಷಮೆ ದಯವೇ ಕರ್ಣಕುಂಡಲ.ಜಗತ್ಪಾವನ ಮೂರ್ತಿ; ನಿಜಸುಖದ ಇರವು!
ಇಂಥ ಅಲ್ಲಮನ ನೆಲೆ ಹುಡುಕಲು ಹೊರಡುವುದು ಎಂದರೆ, ‘ಓಗರವ ತಂದು ಮುಂದಿಟ್ಟುಕೊಂಡು, ಭೋಜನವನ್ನೇ ಮರೆಯುವವರನೆಲೆಗೆ ಹೋಗುವುದು ಎಂದರ್ಥ. ಎಲ್ಲ ಇದ್ದೂ ಕಳೆದುಕೊಂಡವರ ಕಳವಳವನ್ನು ಕರುಳಿಗೆ ಹಚ್ಚಿಸಿಕೊಳ್ಳುವುದು ಎನ್ನುವಂತೆ. ಇದು ಸುಲಭದ ಮಾತಲ್ಲ ಅಲ್ಲವೆ? ಇದನ್ನು ಇಲ್ಲಿ ಸಾಧಿಸಿದ್ದಾರೆ ಕೆರೆಮನೆ.  ಅಲ್ಲಮನ ಮಾತುಗಳಲ್ಲಿಯೇ ಹೇಳುವುದಾದರೆ ಕಡಿಯದಾ ಚೇಳಿಂಗೆ, ಏರದಾ ವಿಷಕ್ಕೆ, ಜಗವೇ ಹೊರಳಾಡಿದಂತೆಅಲ್ಲಮನ ಗುಲ್ಲನ್ನು ತನು-ಮನಗಳ ಓಣಿಓಣಿಗಳಲ್ಲಿ ಎಬ್ಬಿಸಿಕೊಂಡವಳು ಈ ಕವಯತ್ರಿ. ಈಗ ಅವನು ಅವಳ ವರ್ತಮಾನದ ಎಲ್ಲ ಪ್ರಶ್ನೆಗಳಿಗೆ ಉತ್ತರ, ಹಾಗೆಯೇ ಎಲ್ಲ ಉತ್ತರಗಳಿಗೆ ಪ್ರಶ್ನೆಯೂ ಕೂಡಾ.
ನಾನೂ ಬರೆಯುವ ಕನ್ನಡ ಕಾವ್ಯದ ಈ ಘಟ್ಟದಲ್ಲಿ ನಮಗಿಂತಲೂ ಭಿನ್ನವಾಗಿ ಆಲೋಚಿಸುವ, ಬರೆಯುವ, ಹೊಸ ಬರಹಕ್ಕೆ ಪುಟುವು ನೀಡುವ ಲೇಖಕಿಯರ ಮಹಾ ದಂಡೊಂದು ಇದೆ ಎನ್ನವುದು ಕನ್ನಡ ಸಾಹಿತ್ಯ ಸಮ್ರಾಜ್ಯದ ಆರೋಗ್ಯಕರ ಲಕ್ಷಣ. ಅಕ್ಕ, ಅಲ್ಲಮ, ಮೀರಾ, ರಾಬಿಯಾ, ಅಮೃತಾ, ಮಹಾತ್ಮಾ, ಮಲಾಲಾ ಎಂದೆಲ್ಲ ಅವರು ರಚಿಸಿದ ಕಾವ್ಯ ಒಂದು ಕ್ಷಣ ಚಕಿತಗೊಳಿಸುವುದಲ್ಲದೆ ಅವರೆಲ್ಲರ ಕುರಿತು ಅಭಿಮಾನ ಪಡುವಂತೆಯೂ ಮಾಡಿದೆ. ಸ. ಉಷಾ, ವಿಜಯಾ ಸುಬ್ಬರಾಜ, ಹೇಮಲತಾ ಮೂರ್ತಿ, ಲೀಲಾ ಕಲಕೋಟಿ, ಪ್ರತಿಭಾ ನಂದಕುಮಾರ, ಹೇಮಾ ಮತ್ತು ಮಾಲತಿ ಪಟ್ಟಣಶೆಟ್ಟಿ, ಲಲಿತಾ ನಾಯಕ, ಲಲಿತಾ ಸಿದ್ದಬಸವಯ್ಯಾ, ಪ್ರೇಮಾ ತಹಶೀಲದಾರ, ಸರೋಜನಿ ಚಾವಲಾರ, ಚ. ಸರ್ವಮಂಗಳಾ, ಸುವರ್ಣ ಕಾಡನಕುಪ್ಪ, ಮಲ್ಲಿಕಾ ಘಂಟಿ, ಜ.ನಾ. ತೇಜಶ್ರೀ, ರೂಪಾ ಹಾಸನ, ಸವಿತಾ ನಾಗಭೂಷಣ, ಎಂ.ಆರ್. ಕಮಲ, ಮಾಧವಿ ಭಂಡಾರಿ, ಮುಕ್ತಾಯಕ್ಕ, ವೈದೇಹಿ ಇವರೆಲ್ಲರ ಮುಂದುವರಿಕೆಯಾಗಿ ಶ್ರೀದೇವಿ ಕೆರೆಮನೆ, ಕನ್ನಡ ಕಾವ್ಯ ಸಮೃದ್ಧಿಯ ಅಪರೂಪದ ಸಾಕ್ಷಿಗಳು.
ಇವರೆಲ್ಲರೂ ಮಹಿಳೆಯರು ಎನ್ನುವುದು ಹುಟ್ಟಿಗಂಟಿದ ಬಣ್ಣ. ಅದು ಆತ್ಮವನ್ನು ಆವರಿಸಿಕೊಳ್ಳಬೇಕಿಲ್ಲ. ಲಿಂಗಭಿನ್ನತೆ ಬರೀ ಜೀವ ಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯವಾಗಿರದೆ, ಅದು ಸ್ತ್ರೀ ಪುರುಷರ ಚಿಂತನಾ ಕ್ರಮದಲ್ಲಿ ಅಡಕವಾಗಿರುತ್ತದೆ ಮತ್ತು ಬದುಕಿನ ಎಲ್ಲ ವಿದ್ಯಮಾನಗಳಲ್ಲಿ ಕಂಡುಬರುತ್ತದೆ. ಸ್ತ್ರೀಯರ ಕೃತಿಗಳನ್ನು ಸ್ತ್ರೀಯ ರೂಪಗಳೆಂದು ಭಾವಿಸಲಾಗುತ್ತದೆ. ಅಲ್ಲಿ ಸ್ತ್ರೀಯ ರೂಪವನ್ನಲ್ಲದೆ ಮತ್ತೇನನ್ನೂ ಕಾಣುವುದಿಲ್ಲ. ಇದು ತಪ್ಪುಎನ್ನುವ ಆಧುನಿಕ ಚಿಂತಕಿ ಮೇರಿ ಎಲ್ಮನ್ ಆಸೆಯೆಂಬ ಶೂಲದ ಮೇಲೆಕಾವ್ಯ ಸಂಕಲನವನ್ನು ಓದುವ ಎಲ್ಲ ಸಮಯದಲ್ಲಿ ನಮ್ಮನ್ನು ಕಾಡುತ್ತಿರುತ್ತಾಳೆ. ಶ್ರೀದೇವಿಯವರ ಈ ಸಂಕಲನದ ಪ್ರಮುಖ ರಚನೆಗಳಾದ ಬಕುಳದ ಕಣ್ಣಲ್ಲಿ, ‘ಅಂಗಳದಲ್ಲಿನ ಚೆಂಡು, ‘ಬಯಲಾದವಳಿಗಾಗಿ, ‘ಭಸ್ಮ ತೀರ್ಥ, ‘ಕೊಟ್ಟ ಕುದುರೆಯ ಏರಲಾಗದವನು, ‘ಇಷ್ಟಲಿಂಗದ ಒಳಗೆಹಾಗೂ ಅಸಂಗತವನ್ನು ಅರಸುತ್ತಕವಿತೆಗಳು ಸ್ತ್ರೀವಾದಿ ಮಿತಿಯಾಚೆ ವ್ಯಾಪಕವಾದ, ಅವಿಚ್ಚಿನ್ ಹಾಗೂ ಅನಂತವಾದ ಪ್ರೀತಿಯನ್ನು ಕುರಿತು ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತವೆ. ಈಗ ನಾವು ಬಂದು ಸೇರಿದ ದಡ ಬರೀ ಸ್ತ್ರೀ ಅಥವಾ ಪುರುಷ ಎಂಬ ಅಹಂಕಾರದ ಅಪೂರ್ಣಲೋಕಗಳಲ್ಲ, ಕವಯತ್ರಿ ಶ್ರೀದೇವಿ ಬರೆಯುವಂತೆ
ಪ್ರೀತಿ ಎಂದರೆ ಬರೀ ಅಂಗಮರ್ಧನ
ಎಂದಷ್ಟೇ ತಿಳಿದುಕೊಂಡವರಿಂದ
ಆತನೂ ಹೊರತಾಗಿಲ್ಲ
ಇವಳೀಗ ತಗ್ಗಿಸಿದ ತಲೆ ಎತ್ತುವ
ಧೈರ್ಯ ತೋರುತ್ತಿಲ್ಲ.
ಕಾವ್ಯ ನಮ್ಮೊಳಗೊಂದು ಶೋಧ. ಅರಿವಿನ ಪರಿಗಳಿಗೆ ಇಂಬಾಗುವುದೇ ಅದರ ಗುರಿ ಎಂದು ನಾವು ಒಪ್ಪಿಕೊಳ್ಳುವುದಾದರೆ ಶ್ರೀದೇವಿ ಕೆರೆಮನೆಯವರ ಈ ಸಂಕಲನ ಓದುಗನಿಗೆ ಕೊಡುವ ಆನಂದದ ಅನುಭವವೇ ಭಿನ್ನ. ಆತ ಈ ಸಂಕಲನದ ಓದಿನ ನಂತರ ಬದಲಾಗುವುದಿಲ್ಲ, ಪರಿವರ್ತನಗೊಳ್ಳುತ್ತಾನೆ.
ಭಿನ್ನ ಭಿನ್ನ ಸಂಗತಿಗಳು ಜಗತ್ತಿನ ಬೇರೆ ಬೇರೆ ಭಾಷೆ ಮತ್ತು ಸಮುದಾಯದ ಕವಿಗಳನ್ನು ಕಾಡಿವೆ. ಸಮುದ್ರ ಗೀತೆಗಳ ದೊಡ್ಡ ಪರಂಪರೆ ಯುರೋಪಿಯನ್ ಕಾವ್ಯದಲ್ಲಿದೆ. ಕಥನ ಈ ಕಾವ್ಯದ ಮಹತ್ವದ ಲಕ್ಷಣ. ಭಾರತೀಯ ಕಾವ್ಯದಲ್ಲಿಯೂ ಅದು ಬಂದಿತಾದರೂ ನಮ್ಮ ಕಾವ್ಯದಲ್ಲಿ ಕಡಲು ಕೇವಲ ಒಂದು ಮೆಟಾಫರ್ ಆಗಿಯೇ ಉಳಿಯಿತು. ಕನ್ನಡದ ಪಾಲಿಗೂ ಅದು ಸತ್ಯ. ಈ ಮಿತಿಯನ್ನು ಮೀರಿ ಕಾವ್ಯ ರಚಿಸಿದ ಸು. ರಂ. ಎಕ್ಕುಂಡಿಯಂಥ ಕವಿಗಳಿದ್ದಾರೆ. ಈ ಕಥನ ಗುಣವನ್ನು ರೂಢಿಸಿಕೊಂಡ ಪ್ರತಿಭೆ ಶ್ರೀದೇವಿ ಕೆರೆಮನೆ. ಬಹುತೇಕ ಕರಾವಳಿ ತೀರದ ಸಹಜ ಧ್ವನಿಯಾಗಿಯೇ ಇದು ಬೆಳವಣಿಗೆಯಾಗಿದೆ. ಇದರಿಂದ ಹೊರತಾಗಿಲ್ಲ ಶ್ರೀದೇವಿ ಕೆರೆಮನೆ ಕೂಡ. ಈ ಸಂಕಲನದ ಬಹುಪಾಲು ಕವಿತೆಗಳು ಒಂದಿಲ್ಲಾ ಒಂದು ಕಥೆಯ್ನು ಹೇಳುತ್ತವೆ. ಈ ಕಥೆಗಳು ಘಟನಾತ್ಮಕ ವಿವರಣೆಗಳನ್ನು ನೀಡುವಂಥವಲ್ಲ, ಭಾವಲೋಕದ ಅಮೂರ್ತ ವಿಷಯಗಳನ್ನು ಅಲ್ಲಮನಂತೆ ಕಟ್ಟಿ ಕೊಡುವ ಅದ್ಭುತ ಪ್ರಯತ್ನಗಳಾಗಿವೆ. ಇವು ಎದೆ ಹಾಡುವ ಕವಿತೆಗಳಷ್ಟೇ ಅಲ್ಲ, ನಮ್ಮ ಪ್ರಜ್ಞೆಯನ್ನು ಕಾಡುವ ಕವಿತೆಗಳೂ ಕೂಡ. ಕಾವ್ಯದ ಗೇಯತೆಯೊಂದಿಗೆ ಕಥನತಂತ್ರವನ್ನೂ ರೂಢಿಸಿಕೊಂಡ ಶ್ರೀದೇವಿ ಹೆಣ್ಣೆಂಬ ಒಡಲ ಕಡಲದ ತಳಮಳವನ್ನು ತಮ್ಮ ಕಾವ್ಯದ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಪ್ರಸ್ತುತ ಶ್ರೀದೇವಿಯವರ ಈ ಕೃತಿ ಒಂದು ಕಾವ್ಯ ಸಂಕಲನ ಎನ್ನುವುದಕ್ಕಿಂತ ಪ್ರಶ್ನಾವಳಿಎನ್ನುವುದು ಹೆಚ್ಚು ಸೂಕ್ತವಾದೀತು. ಮಾಯೆ ಎಂದರೆ ಯಾರು? ಯಾವುದು? ಪ್ರೀತಿ ಎಂದರೇನು? ಬಯಲೆಂದರೇನು? ಭಿಕ್ಷೆ ನೀಡಬಹುದೆ? ನೀಡಬಹುದಾದುದೆ? ದಾರಿಯ ಗುರಿಯೇನು? ಆಸೆ, ಬಯಕೆಗಳ ಮರ್ಮವೇನು? ಹೀಗೆ ಹಲವಾರು ಪ್ರಶ್ನೆಗಳು ಇಲ್ಲಿ ಕವಿತೆಗಳಾಗಿ ಅರಳಿವೆ. ಒಂದಂತೂ ಸತ್ಯ, ಕವಿತೆಯೊ, ಕುಂಚವೊ ಪ್ರಶ್ನೆಗೆ ಆಸ್ಪದವೀಯದ ಯಾವುದೇ ಇರಲಿ, ಅದು ಅರ್ಥಹೀನ.
ಪ್ರಶ್ನೆ ಲೋಕ ಸೃಷ್ಠಿ ಹಾಗೂ ದೃಷ್ಠಿಗಳ ಪರಿಷ್ಕರಿಸುವ ಕುಲುಮೆ ಇದ್ದಂತೆ. ಶ್ರೀದೇವಿಯವರು ಈ ಕುಲುಮೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅವರ ಒಂದು ಪ್ರಶ್ನೆ, ಈ ಹೆಣ್ಣೆಂಬ ಹೆಣ್ಣು ಕೇಳಿದ್ದಾದರೂ ಏನು? ತರಿದ ಶಿರವೆ? ಹೆಬ್ಬೆರಳೆ? ಹುಲಿಯ ಬಾಲ, ಶಾರ್ದೂಲದ ಹಲ್ಲು, ಸಿಂಹದ ಕೇಸರವೆ? ಯಾವುದೂ ಅಲ್ಲ . . . . .
ಎದೆಯ ಮೂಲೆಯೊಳಗೆ
ಒರತೆಯಾಗಿ ಹರಿಯುವ
ಬತ್ತದ ಝರಿಯಂಥ ಪ್ರೀತಿ
ಬರಡು ಹಾದಿಯಲಿ
ಕಿರು ಬೆರಳು ಹಿಡಿದು
ಗುರಿ ತಲುಪಿಸಬಲ್ಲ ನಂಬಿಕೆ
ಕಣ್ಣೊಳಗೆ ಎಂದೂ ಮೂಡದ ಅಶಂಕೆ
ಏನೇ ಆದರೂ ನಿಭಾಯಿಸಬಲ್ಲ
ಚಿಕ್ಕದೊಂದು ಮುಗುಳ್ನಗೆ,
ಅಷ್ಟೇ, ಅಷ್ಟೇ ಅವಳ ಅನುರೋಧ ಹಾಗೂ ಬೇಡಿಕೆಗಳು ಆದರೆ, ಇಷ್ಟಕ್ಕೆ ಸಾಮ್ರಾಜ್ಯ ಕಳೆದುಕೊಳ್ಳುವವರಂತೆ ಏಕೆ ಬೆಚ್ಚಿ ಬೀಳುತ್ತದೆ ಲೋಕ? ಇದು ಶ್ರೀದೇವಿಯ ಕಾವ್ಯ ಒಡ್ಡುವ ಪ್ರಶ್ನೆ. ಇದೊಂದು ಸುಂದರ ಚಿಂತನೆಯೂ ಕೂಡಾ. ಅಂತೆಯೆ ಸಿಸಿರೊ ಒಂದು ಮಾತನ್ನು ಹೇಳಿದ I have never yet known a poet who did not think himself the best. ಕಾವ್ಯದ ಜೀವಾಳವೇ ಚಿಂತನೆ. ಸ್ವಯಂ ಸುಂದರ ಚಿಂತಕನಲ್ಲದ ವ್ಯಕ್ತಿ ಪ್ರಪಂಚ ಸುಂದರಗೊಳಿಸುವ ಚಿಂತನೆಯನ್ನು ಮಾಡಲು ಸಾಧ್ಯವಿಲ್ಲ ಎಂಬುದು ಅವನ ವಾದ. ಶ್ರೀದೇವಿಯೂ ಇದನ್ನೇ ಹೇಳುತ್ತಾರೆ
ತನುವ ನೋವಿಗೆ ಮುಲಾಮು ಲೇಪಿಸಬಹುದು
ಬಯಸಿ ನೋಯುವ ಮನಕೆ
ಪ್ರೀತಿಯಲ್ಲದೇ ಬೇರೆನಿದೆ ಔಷದ?
ಹಾಗೆಯೇ ಚಿಂತನೆಯಲ್ಲದೆ ಬೇರೆನಿದೆ ದಾರಿ, ಅಲ್ಲವೆ? ಬಯಲಾಗುವ ಮಹಿಮೆಯ, ಮಾತಿಲ್ಲದೆ ಆಚರಣೆಗೆ ತಂದವಳು ಮಹಿಳೆ, ಹೀಗಾಗಿ ಅವಳೇ ಜಗತ್ತಿಗೆ ಹೊಸ ಚಿಂತನೆಯ ಸಮರ್ಥ ದಾರಿಯೂ ಕೂಡಾ. ಶ್ರೀದೇವಿಯವರ ಈ ಸಂಕಲನದ ಪ್ರತಿಯೊಂದು ಕವಿತೆಯೂ ಈ ಸಾಧ್ಯತೆಯನ್ನು ಸಮರ್ಥಿಸುತ್ತವೆ.
ರೋಮ್ಯಾಂಟಿಕ್ ಕಾವ್ಯದ ಅಪರೂಪದ ಕವಿ ಶೆಲ್ಲಿ ಕಾವ್ಯವನ್ನು the record of the best and happiest moment of the happiest and best minds ಎಂದಿದ್ದಾರೆ. ಆದರೆ ಇದು ಕವಿ ಕಾವ್ಯದ ತೀರ ಪ್ರಾಥಮಿಕ ನಿರೀಕ್ಷೆಗಳಲ್ಲಿ ಒಂದು ಎನಿಸುತ್ತದೆ. ಈ ನೆಲೆಯ ಅನೇಕ ಕವಿತೆಗಳನ್ನೂ ಶ್ರೀದೇವಿಯವರ ಈ ಸಂಕಲನದಲ್ಲಿ ಸಿಗುತ್ತವೆ. ಆದರೆ ಇದರ ಮುಂದಿನ ಬೆಳವಣಿಗೆ A poet is the painter of the soul.  ಪ್ರಸ್ತುತ ಸಂಕಲನದಲ್ಲಿ ಆತ್ಮದ ಚಿತ್ತಾರಕ್ಕೆ ಕನ್ನಡಿ ಹಿಡಿದ ಅನೇಕ ಕವಿತೆಗಳೂ ಕೂಡ ಇವೆ. ವ್ಯಕ್ತಿ ಸಹಜವಾದ ಪ್ರಶ್ನೆಗಳಿಂದ ಪ್ರಾರಂಭವಾಗಿ ಸಮಷ್ಠಿ ವ್ಯಾಪ್ತಿಯ ಹಲವಾರು ಸಂಗತಿಗಳಿಗೆ ದಾರಿ ಮಾಡಿಕೊಡುವ ಈ ಕಾವ್ಯ ಸಂಕಲನದಲ್ಲಿ ಮಧುರಚೆನ್ನ, ಶರೀಪ, ವೀಣಾ ಬನ್ನಂಜೆ ಹಾಗೂ ನಮ್ಮ ಜನಪದ ಅನುಭಾವಿಗಳ ಮಹಾ ಪಡೆಯೇ ಹಾಯ್ದು ಹೋಗುತ್ತದೆ, ಗಝಲ್‍ನಿಂದ ಭಾವಗೀತಾತ್ಮಕ ರಚನಾ ರೀತಿಯೂ ಕಾಣಸಿಗುತ್ತದೆ, ಪ್ರೇಮ ಕಾವ್ಯದಿಂದ ಸಖ್ಯಯೋಗದವರೆಗಿನ ವಿಶ್ಲೇಷಣೆಯೂ ನಡೆಯುತ್ತದೆ.
ನಾನು ಈ ಕವಿತೆಗಳೊಳಗಿನ ಗಣಿಯ ನಾದ, ಗವಿಯ ಆಳ, ಬಯಲು ವಿಸ್ತಾರಗಳಿಗೆ ಬೆರಗಾಗಿದ್ದೇನೆ, ಓದಿ ಸುಖಿಸಿದ್ದೇನೆ, ಓದಿಸಿ ಸಂಭ್ರಮಿಸಿದ್ದೇನೆ. ಕಾವ್ಯ ಎಂದೂ ವೈಯಕ್ತಿಕವಾದುದಲ್ಲ, ಹಾಗೆ ನೋಡಿದರೆ ಕಾವ್ಯಕ್ಕೆ ವೈಯಕ್ತಿಕತೆ ಎನ್ನುವುದೇ ಇಲ್ಲ, ಅದು ಅದರ ಹುಟ್ಟಿನ ಅನಿವಾರ್ಯವಷ್ಟೆ, ವಿಸ್ತಾರದ ಮಿತಿಯಲ್ಲ.
ಹೀಗೆ ಬಯಲಂತೆ, ಬಾಳಂತೆ, ಕಡಲಂತೆ ವಿಸ್ತಾರಗೊಳ್ಳುತ್ತಿರುವ ಶ್ರೀದೇವಿಯವರ ಕಾವ್ಯ, ಮುಂದೆಯೂ ಹೀಗೆಯೆ ನವನವೋನ್ಮೆಷಶಾಲಿನಿಯಾಗಿ ಬೆಳೆಯುತ್ತಿರಲಿ, ಆ ಬೆಳವಣಿಗೆಯ ಬೆಳಗು ಕನ್ನಡ ಕಾವ್ಯ ರಸಿಕರ ಹೆಮ್ಮೆಯಾಗಲಿ ಎಂದು ಆಶಿಸುತ್ತೇನೆ. 






Friday, April 10, 2020

ಕದ್ದು ತಿನ್ನುವ ಹಣ್ಣಲ್ಲ ಕೀಟ್ಸ್

ಬರೆಯಬಾರದು, ಬರೆಯಿಸಲ್ಪಡಬೇಕು. ಜೀವಕೋಟಿ, ಹಂಬಲದ ಹಲವು ಹಾದಿಗಳ ಮೂಲಕ ಬೆಳಕಾಗಿ ನಮ್ಮೊಳಗಿಳಿದು, ಬೆರೆತು, ಸ್ಥಿತಿಸಿ, ಮತ್ತೆ ಮಾಗಿದ ಹೊತ್ತಿಗೆ ಹೊರಬರಲು ನಮ್ಮನ್ನು ಸಾಧನವಾಗಿಸಿಕೊಳ್ಳಬೇಕು. ನಮ್ಮಿಂದ ನಡೆಯುವ ರಚನಾ ಕಾರ್ಯಗಳಿಗೆ ನಾವು ಬರೀ ವಾಹಕರಾಗಬೇಕು, ಸಾಕ್ಷಿಯಾಗಬೇಕಷ್ಟೆ. ಅದು ಘಟಿಸಬೇಕು ಪ್ರೀತಿಯಂತೆ. ಅಂಥ ಘಟನೆಗಳು, ಕಾಲ ಕಾಡುವ ಕೃತಿ-ಕಾರ್ಯಗಳಾಗಿ, ಸಮಾಜಕ್ಕೆ ಆದರ್ಶಗಳಾಗಿ ಉಳಿಯುತ್ತವೆ.
ಹೀಗೆ ಉಳಿಯುವ ಕಾರ್ಯಗಳು ನಮ್ಮಿಂದ ನಿರೀಕ್ಷಿಸುವುದು ನಿಷ್ಠೆಯನ್ನು. ಸಂಪೂರ್ಣ ನಿಷ್ಠೆಯನ್ನು. ಸಾಹಿತ್ಯದ ಎಲ್ಲ ಮೇರು ರಚನೆಗಳ ಹಿಂದೆ ಇಂಥ ನಿಷ್ಠೆ ಕಾರ್ಯ ಮಾಡಿದೆ. ಅಂತೆಯೇ The foundation of all good and lasting work in literature is entire sincerity to oneself ಎಂದು ಹೇಳುವುದು. ಕೊನೆ ಬಾಳುವ ಕಲಾಕೃತಿಯ ಮುಖ್ಯ ಆಧಾರ ನಿಷ್ಠೆ. ಅದು ಬರೆದುದಲ್ಲ, ಬರೆಯಿಸಲ್ಪಟ್ಟದ್ದು.
  ಈ ವಾದವನ್ನು ನಾನು ಯಾವುದೇ ಸಾಹಿತ್ಯವಾದಗಳನ್ನು ಮುಂದಿರಿಸಿಕೊಂಡು ಮಂಡಿಸುತ್ತಿಲ್ಲ. ಬದಲಾಗಿ ಬರಹದ ದೀರ್ಘ ಪಯಣದ ನನ್ನ ಅನುಭವಗಳನ್ನು ಮುಂದಿರಿಸಿಕೊಂಡು ವಾದಿಸುತ್ತಿದ್ದೇನೆ. ಈ ಅರ್ಥದಲ್ಲಿ ನನ್ನ ಬಹುಪಾಲು ಕೃತಿಗಳು ಬರೆದವುಗಳಲ್ಲ, ಬರೆಯಿಸಲ್ಪಟ್ಟವುಗಳು, ಈ ಪ್ರಸ್ತುತ ಕೃತಿಯೂ ಸೇರಿಕೊಂಡು.
     ಜಾನ್ ಕೀಟ್ಸ್, ಕಳೆದ ಹದಿನೇಳು ವರ್ಷಗಳಿಂದ ಕಾವ್ಯ ಚಿಂತನೆಯ ನನ್ನ ಅಭಿವ್ಯಕ್ತಿಗಳಲ್ಲಿ ವಾದ, ಉದಾಹರಣೆ, ರೂಪಕ, ಸಿದ್ಧಾಂತವಾಗಿ ಪದೇ ಪದೇ ಉಲ್ಲೇಖಗೊಳುತ್ತಲೇ ಬಂದಿದ್ದಾನೆ. 2016 ರಲ್ಲಿ ಅಧಿಕೃತವಾಗಿ ಅವನ ಜೀವನವನ್ನು ಆಧರಿಸಿ ನೀರ ಮೇಲೆ ನೆನಪ ಬರೆದುಎಂಬ 176 ಪುಟಗಳ ಕೃತಿಯನ್ನು, 2017 ರಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಟ್ಟೆ. ಅತ್ಯುತ್ತಮ ಪ್ರತಿಕ್ರಿಯೆ ದೊರೆತ ಪರಿಣಾಮ, ತಕ್ಷಣವೇ ಅದರ ಎರಡನೇ ಭಾಗದ ರಚನೆಯಲ್ಲಿ ದಿನಾಂಕ 06.04.2019 ರಂದು ತೊಡಗಿಕೊಂಡೆ. ಆದರೆ, ಈ ಮಧ್ಯದಲ್ಲಿ ಯಾಜಿ ದಂಪತಿಗಳ ಅನುರೋಧದ ಮೇರೆಗೆ ಭಾರತದ ಬಾವುಟದ ಚರಿತ್ರೆಯನ್ನು ಆದರಿಸಿದ ಜಗದ್ವಂದ್ಯ ಭಾರತಂಕಾದಂಬರಿ ರಚನೆಯಲ್ಲಿ ನಾನು ತೊಡಗಿಕೊಂಡದ್ದರಿಂದ ಎರಡನೆ ಹಂತದ ಕೀಟ್ಸ್ ಹಾಗೆಯೇ ಅರ್ಧಕ್ಕೆ ಉಳಿದುಕೊಂಡ.
     ಸೃಜನಶೀಲವಾದುದ್ಯಾವುದನ್ನೂ ದಿನಾಂಕುಗಳ ಕರಾರು ಒಕ್ಕತೆಗಾಗಿ ಆಗಲಿ, ಯಾರದೇ ಒತ್ತಾಯಕ್ಕಾಗಲಿ ಎಂದೂ ಮಾಡಿದವನಲ್ಲ ನಾನು. ಕೆಲವೊಮ್ಮೆ ಓದದ, ಬರೆಯದ ಒಂದೇ ಒಂದು ಫೋಟೋ ತೆಗೆಯಿಸಿಕೊಳ್ಳದ ಹಲವು ಸೊಂಬೇರಿ ತಿಂಗಳುಗಳಿರುತ್ತವೆ. ಹಾಗೆಯೇ ಇರುತ್ತವೆ ಮತ್ತೆ ಕೆಲವು ದಿನಗಳು ಬರೀ ಬರಹವನ್ನು ಅವಲತ್ತುಕೊಂಡು. ಬರೆಯುತ್ತಿರುವುದು ಕೆಲವೊಮ್ಮೆ ಗಕ್ಕನೆ ನಿಂತು ಮತ್ತಿನ್ನ್ಯಾವುದೊ ಬರೆಯಿಸಿಕೊಳ್ಳಲಾರಂಭಿಸುತ್ತದೆ. ಎತ್ತಿಕೊಂಡ ಇನ್ನ್ಯಾವುದೊ ಪಕ್ಕಕ್ಕೆ ಸರಿದು ಮಗದೊಂದ್ಯಾವುದಕ್ಕೊ ದಾರಿ ಮಾಡಿಕೊಡುತ್ತದೆ. ಹೀಗೆಯೇ ರಚನೆಯಾದವುಗಳು ನನ್ನ ಬಹುಪಾಲು ಕೃತಿಗಳು.
       ಹೀಗೆಯೇ ವಿಳಂಬಗೊಂಡ ಕೀಟ್ಸ್ ಕುರಿತ ಎರಡನೇ ಭಾಗ, ಇದ್ದಕ್ಕಿದ್ದಂತೆ 2019ರಲ್ಲಿ ಆರಂಭವಾಗಿ ದಿನಾಂಕ 06 ಏಪ್ರೀಲ್ 2020ಕ್ಕೆ ಒಂದು ಸ್ವರೂಪ ಪಡೆಯಿತು. ಇದು ಭಾರತದಲ್ಲಿ ಕರೋನಾದ ಮರಣ ಮದ್ದಳೆಯ ಕಾಲ. ಒಟ್ಟು 2016 ರಿಂದ 2020, ಅಂದರೆ ನಾಲ್ಕು ವರ್ಷಗಳ ಅವಧಿ ಕವಿತೆಯಾಗಿ ಕಾಡಿದ್ದಾನೆ ಕೀಟ್ಸ್ ನನ್ನನ್ನು. ಇಂದಿಗೆ 171 ವರ್ಷಗಳ ಹಿಂದೆ ನೂರೆಂಟು ನೋವುಗಳೊಂದಿಗೆ ಬದುಕಿದ್ದ ಈ ಕೀಟ್ಸ್, ತನ್ನ ಕಾವ್ಯದ ಮೂಲಕ ಹೇಳಿದ್ದಾದರೂ ಏನು? ಜೀವನದೊಂದಿಗೆ ಅವನ ಹಠವಾದರೂ ಏನು? ಎಂದು ಕೇಳಿದರೆ ನನಗೆ ಥಟ್ಟನೆ ನೆನಪಾಗುವುದು ಕಡಂಗೋಡ್ಲು ಅವರ ನಾಲ್ಕು ಸಾಲುಗಳು
ಮರೆತು ಹೋಗಲಿ ದುಗುಡ, ಜಾರಿಹೋಗಲಿ ವಿರಹ
ಕಂಬನಿಯ ಬುಗ್ಗೆ ಬತ್ತಲಿ, ಸುಯ್ಯ ರೋಧನದ ಮಿಡುಕ ಮರೆಹೋಗಲಿ
ಉಸಿರು ಹಸರಿಸಲಿ ಕಮ್ಮಲರ ನೀಳೆಸಳಿನಲಿ.
ಆಗ, ಪುಲಕಗಳ ಗುಡಿಕಟ್ಟಿ, ಉತ್ಸವದಿ ಕುಣಿದು
ಮೃತ್ಯು ಆಗಮನದ ವಾರ್ತೆಯನು ಮರೆಸಿ, ಮರೆತಿರುವೆ.
      ಇದೆಲ್ಲ ಪ್ರಶ್ನೆಯಲ್ಲ ನನಗೆ. ಪ್ರಶ್ನೆ ಇರುವುದು ಒಟ್ಟು ಈ ಬರಹ ಪ್ರಕ್ರಿಯೆಯ ಕುರಿತು. ಪ್ರಪಂಚದ ಅಗಾಧ ಶಕ್ತಿಯಲ್ಲಿ ತೃಣಮಾತ್ರದವನಾದ ಮನುಷ್ಯನನ್ನು ಸಾಧನವಾಗಿಸಿಕೊಂಡು ವಿಶ್ವಾತ್ಮಕತೆ ಪ್ರತಿಕ್ರಿಯಿಸಿದ ರೀತಿ, ಅದು ವೇದ್ಯವಾಗಿಸಿದ ಬದುಕು ಹಾಗೂ ಅದರ ಲೀಲಾ ಪ್ರಪಂಚ, ಅದು ಮನುಷ್ಯ ದೃಷ್ಟಿಗೆ ಒದಗಿಸುವ ಒಂದು ನಿರ್ದಿಷ್ಟ ಕೋನ, ದೃಷ್ಟಿಕೋನ. ಇದೆಲ್ಲದರ ಹಿನ್ನಲೆಯಲ್ಲಿಯೇ ಹೇಳಿದ್ದು Art is life seen through a temperament, ಕಲೆ ಅಥವಾ ಸಾಹಿತ್ಯವೆಂದರೆ ಒಂದು ವಿಶಿಷ್ಟ ಮನೋಧರ್ಮದ ಮೂಲಕ ನೋಡಿದ ಜೀವನ ಎಂದು. ಆದರೆ ಹೀಗೆ ಒಂದು ದೃಷ್ಟಿಕೋನದ ಮೂಲಕ ಜೀವನವನ್ನು ಮನಸ್ಸೊಂದು ನೋಡುವುದರೊಳಗಾಗಿ ದಕ್ಕಬೇಕಾದ ಅನುಭವವೂ ದಕ್ಕಿಸಿಕೊಳ್ಳಲು ಸಿದ್ಧವಾಗಿರುತ್ತದೆಯೆ? ಇದು ನನ್ನ ಜಿಜ್ಞಾಸೆ ಹಾಗೂ ಬರಹದ ಬಗೆಗಿರುವ ಕುತೂಹಲ.
       ಈ ಕುತೂಹಲದ ಬೆನ್ನೇರಿಯೆ ಕಳೆದ ಹಲವು ದಶಕಗಳಿಂದ ನಾನು ಬರೆಯುತ್ತ ಹೊರಟವ, ಕುತೂಹಲಕ್ಕೆ ಪೂರಕವಾಗಿ ಸಂಗತಿಗಳು ಘಟಿಸಿದ್ದರಿಂದ ಯಾವುದೇ ಬರಹ ಬರೆಯಲಾಗದು, ಬದಲಾಗಿ ಬರೆಯಿಸಲ್ಪಡುವುದು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಬಂದವ.
ಹೊರಗಡೆ ಸುಡು ಬಿಸಿಲು, ಒಳಗಡೆ ಕರೋನದ ಕಾರಣ ಸೃಷ್ಟಿಯಾದ ಮೃತ್ಯು ಭೀತಿ, ಗಡಿರೇಖೆಯ ಮೇಲಿರುವ ನನ್ನ ಮನೆ ಜೋಳಿಗೆಯ ಮುಂದೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಮೃತ್ಯು ನೆಮ್ಮದಿಗಾಗಿ ಪರದಾಡುತ್ತಿದ್ದ ಜನ, ಪೊಲೀಸ್ ಗಸ್ತು, ಊರೂರುಗಳಲ್ಲಿ ಸ್ಮಶಾನ ಮೌನ, ಮಾತೆತ್ತಿದರೆ ಸತ್ತವರ ಲೆಕ್ಕ, ಉಳಿದವರ ಗೋಳಾಟ ಹೀಗೆ ಏನೆಲ್ಲ ನಡೆದಿತ್ತು ನಾನು ಕೀಟ್ಸ್ ನೊಂದಿಗೆ ಕುಳಿತಾಗ. 
      ನನ್ನ ಉಳಿದ ಕೃತಿಗಳ ಸಂದರ್ಭದಲ್ಲಿ ಜರುಗಿದಂತೆಯೇ ಕಾಲ ಏನೇನೋ ಜರುಗಿಸುತ್ತಿತ್ತು ನನ್ನ ಸುತ್ತಲು. ಕೆಲವು ಸಚಿತ್ರಗಳಾದರೆ ಮತ್ತೆ ಕೆಲವು ವಿಚಿತ್ರಗಳಾದವು. ದಿನಾಂಕ 06.04.2019 ರಲ್ಲಿ ಬರಹ ಆರಂಭವಾಗಿದ್ದು ಮಧ್ಯ ಎಲ್ಲೆಲ್ಲೋ ನಿಂತು, ವಿಳಂಬಿಸಿ, ವಿಸ್ತಾರಗೊಂಡು, ಮಧ್ಯ ಮತ್ತೊಂದು ಕೃತಿ ರಚನೆಯಾಗಿ, ಮತ್ತೆ ಸರಿಯಾಗಿ ದಿನಾಂಕ 06.04.2020 ರಂದು ಈ ಕೃತಿಯ ಮುಕ್ತಾಯವಾಗುತ್ತದೆ, 23 ಫೆಬ್ರುವರಿ 1821 ರಂದು ಜಾನ್ ಕೀಟ್ಸ್ ನರಳಾಟ ಹಾಗೂ ಗೋಳಾಟದ ಬದುಕಿನಿಂದ ಮೃತ್ಯುವಿಗೆ ಜಾರಿದ್ದು, ಆದರೆ ಇದೇ ಫೆಬ್ರುವರಿ 23 ರಂದು ನನ್ನ ಹೆಂಡತಿಯೊಂದಿಗೆ ಜೀವನ ಅರೆಸುತ್ತ ಬೆಂಗಳೂರಿಂದ ಹೊರಟು, ಲಕ್ಷ ಲಕ್ಷ ಜನರೊಂದಿಗೆ ಮೃತ್ಯುವಿನಿಂದ ಜೀವನದೆಡೆಗೆ ನಾನು ಪಯಣ ಬೆಳೆಸಿದ್ದು. ಕೀಟ್ಸ್ ಮೃತ್ಯು ವಶವಾದದ್ದು 23 ಫೆಬ್ರುವರಿ ನಸುಕಿನ ನಾಲ್ಕು ಗಂಟೆಗೆ, ಮೃತ್ಯು ಕರೋನಾ ರೂಪದಲ್ಲಿ ನಮ್ಮೊಳಗೇನಾದರೂ ಮನೆ ಮಾಡಿದೆಯಾ ಎಂದು ನಮ್ಮೆಲ್ಲರ ಆರೋಗ್ಯ ತಪಾಸಣೆಯಾದದ್ದು ಇದೇ ಫೆಬ್ರುವರಿ 23-24ರ ನಸುಕಿನಲ್ಲಿ, ಇಂಗ್ಲೆಂಡಿನಿಂದ ಬೇಸತ್ತು ಕೊನೆಗಾಲದಲ್ಲಿ ಆರೋಗ್ಯವನ್ನು ಹುಡುಕಾಡುತ್ತ ಕೀಟ್ಸ್ ಹೋದ ಇಟಲಿ ಆಗಲೂ ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿತ್ತು. ಕನ್ನಡದಲ್ಲಿ 171 ವರ್ಷಗಳ ನಂತರ ಅವನ ಚರಿತ್ರೆ ಮರುಸೃಷ್ಟಿಯಾಗುವ ಈ ಸಂದರ್ಭದಲ್ಲಿಯೂ ಇಟಲಿ ಕರೋನಾ ಎಂಬ ಸಾಂಕ್ರಾಮಿಕ ರೋಗದಿಂದ ತನ್ನ ಸಾವಿರ ಸಾವಿರ ಪ್ರಜೆಗಳನ್ನು ಕಳೆದುಕೊಂಡು ನರಳುತ್ತಿದೆ. ಕ್ವಾರಂಟೈನ್ ಎಂಬ ಪದ ಯುರೋಪಿನಲ್ಲಿ ಬಹಳ ಹಿಂದೆಯೇ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪ್ರಚಲಿತ, ಆದರೆ ಪಶ್ಚಿಮದಲ್ಲಿ ಅದೂ ಏಷಿಯಾದಲ್ಲಿ ಅದು ಜನಜನಿತವಾದುದು ಕರೋನಾದ ಈ ಸಂದರ್ಭದಲ್ಲಿ. ಕೀಟ್ಸ್‍ನನ್ನು ಕುರಿತು ಬರೆಯುತ್ತಿರುವ ನಾನು, 21 ದಿನಗಳ ಕಾಲದ ದಿಗ್ಭಂದನವನ್ನು ಕರೋನಾ ಕಾರಣಕ್ಕಾಗಿ ಅನುಭವಿಸಿದರೆ, ಸ್ವಯಂ ಕೀಟ್ಸ್ ಇಟಲಿಯ ನೆಪಲ್ಸ್ ನಲ್ಲಿ 32 ಗಂಟೆಗಳ ಕ್ವಾರಂಟೈನ್ ಅನುಭವಿಸಿ, ‘ರಾಜಕೀಯ ಪ್ರೇರಿತವಾದ ಈ ಕ್ವಾರಂಟೈನ್ ಮೃತ್ಯುವಿಗಿಂತಲೂ ಭಯಾನಕವಾದುದುಎಂದು ದಾಖಲಿಸುತ್ತಾನೆ.
          ಈಗ ಹೇಳಿ ಬರಹವೆಂದರೇನು? ಸಮಾನ ಅನುಭವಗಳು ಸಮ-ಸಮನಾಗಿ 171 ವರ್ಷಗಳ ನಂತರ ನನ್ನ ಮತ್ತು ಕೀಟ್ಸ್ ನ ಮಧ್ಯ ಯಾಕೆ ಜರುಗಬೇಕು? ಇದೇ ಕಾರಣ ನಾನು ಮತ್ತೆ ಮತ್ತೆ ಕೇಳಿಕೊಳ್ಳುತ್ತಿರುತ್ತೇನೆ ಬರಹ ಬರೆಯುವಂಥದ್ದೊ? ಬರೆಯಿಸಲ್ಪಡುವಂಥದ್ದೊ. ವ್ಯಕ್ತಿಯೊಂದು ತನ್ನ ಜೀವ ಕಾಡಿದ ಬಾಹ್ಯದ ಸಂದರ್ಭದ ಮರು ಸೃಷ್ಟಿಯಾಗುವವರೆಗೂ ಮತ್ತೆ ಕಾಯ್ದು ಮರು ಸೃಷ್ಟಿಯಾಯಿತೆ? ಒಂದು ವೇಳೆ ಬರಹವೆನ್ನುವುದು ಬರೆದು ತೀರಿಸಿ ಬಿಡಬಹುದಾಗಿದ್ದರೆ ಈ ಹಿಂದೆಯೇ ಈ ಕ್ರಿಯೆ ಮುಗಿದು ಬಿಡಬಹುದಿತ್ತಲ್ಲವೆ? ಅಥವಾ ಇದೆಲ್ಲ ಬರಹಗಾರನ ಆತ್ಮ, ವಿಶ್ವಾತ್ಮಕತೆಯನ್ನು ಸಾಧಿಸುವ ಹುನ್ನಾರವೆ? ನನಗೆ ತಿಳಿಯುತ್ತಿಲ್ಲ.
        ಕೀಟ್ಸ್ ನಿಗೂ ಇದು ತಿಳಿಯಲಿಲ್ಲ. ಆತ ಬರೆದದ್ದು ಬರೆಯದೇ ಇರಲು ಆಗದ್ದಕ್ಕಾಗಿ. ರೆಂಬೆ-ಕೊಂಬೆಗಳಿಗೆ ಚಿಗುರು ಬರುವಷ್ಟೇ ಸಹಜವಾಗಿ ಬರಹ ಸಾಧ್ಯವಾಗದೇ ಹೋಗುವುದಾದರೆ ಅಂಥ ಬರಹವೇ ಬೇಡ ಎಂದು ಷರಾ ಎಳೆದುಕೊಂಡಿದ್ದ ಜಾನ್ ಕೀಟ್ಸ್ ನ ಪಾಲಿಗಂತೂ ಬರಹ ವ್ಯಸನವೂ ಆಗಿರಲಿಲ್ಲ, ಪ್ರದರ್ಶನವೂ ಆಗಿರಲಿಲ್ಲ. ಬದಲಾಗಿ ಅದು ಬದುಕಿನ ಅನಿವಾರ್ಯವಾಗಿತ್ತು, ಉಸಿರಿನಷ್ಟೇ ಅಶ್ಯಕವಾಗಿತ್ತು, ಸಾವಿಗೊಂದು ಸಮಾಧಾನವಾಗಿತ್ತು. ಕಾರಣ ಅವನ ಮೂಲಕ ಬಂದ ಬರಹ ಲೋಕೋದ್ಭವವಾಗಿತ್ತು, ಲೋಕವಾಣಿಯಾಗಿತ್ತು ಮತ್ತು ಅಂತಿಮವಾಗಿ ಲೋಕಾತ್ಮಕತೆಯೇ ಅದರ ಗುರಿಯಾಗಿತ್ತು.
       ಇಂಥ ಕೀಟ್ಸ್ ಜೀವಿಸಿದ್ದು ಕಡಿಮೆ. ಆದರೆ ಕವಿಯಾಗಿ ಬದುಕಿದ್ದು, ಬಾಳಿದ್ದು ದೀರ್ಘ. ಬದುಕನ್ನು ಗಾಳಿಗೋಪುರವಾಗಲು ಬಿಡಲಿಲ್ಲ ಅವನು. ಪದ ಪದವೂ ಆತ್ಮವೃತ್ತದ ಒರತೆ. ಜಾನ್ ಕೀಟ್ಸ್ ಎಷ್ಟೊಂದು ದೀರ್ಘ ವಿಸ್ತಾರದ ಕವಿ ಎನ್ನುವುದನ್ನು ತಿಳಿಯಲು ಆತನ ನಿಧನದ ನಂತರ ಅವನ ಕವಿಮಿತ್ರನಾದ ಪರ್ಸಿ ಬ್ರೌನ್ ಶೆಲ್ಲಿ ಬರೆದ ಶೋಕ ಗೀತೆ ಎಡೋನಿಸ್ಕವಿತೆಯನ್ನು ಒಮ್ಮೆಯಾದರೂ ನೀವು ಓದಲೇಬೇಕು. ಅದು ಮುಲಾಜಿಗಾಗಿ ಬರೆದ ಕವಿತೆಯಲ್ಲ. ಆ ಕವಿತೆಯನ್ನು ಇಡಿಯಾಗಿ ನಾನು ಉಲ್ಲೇಖಿಸುತ್ತಿಲ್ಲ. ಕೀಟ್ಸ್ ಎಷ್ಟು ಎತ್ತರದವನು ಎನ್ನುವುದಕ್ಕೆ ಸಾಕ್ಷಿಯಾಗಿರುವ ಕೆಲವೇ ಕೆಲವು ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ
·       He lives, he wakes – it is Death is dead, not he
********
·       He is made one with Nature : there is heard
His voice in all her music, from the moan
Of thunder, to the song of Nights sweet bird
He is a presence to be felt and known
In darkness and in light, from herb and stone
Spreading itself where’er that Power may move
Which has withdrawn his being to its own
Which wields the world with never weried love
Sustains it from beneath, and kindles it above
ಸೀಮಾತೀತವಾಗಿ ಬರೆದ ಕವಿ ಕೀಟ್ಸ್ ಅವನ ಗೆಳೆಯ ಶೆಲ್ಲಿ ಹೇಳಿದಂತೆ ಸಾವಿಲ್ಲದವನೆ. ಸಮಸ್ತ ಸೃಷ್ಟಿಯ ಗತಿ-ಮತಿಗಳಲ್ಲಿ ಬೆರೆತುಹೋದವನು. ಇಡೀ ಪಾಶ್ಚಾತ್ಯ ಕಾವ್ಯದಲ್ಲಿ ಶೇಕ್ಸಪೀಯರ್‍ನ ನಂತರ ಜಗತ್ತಿನ ಜನಾನುರಾಗಕ್ಕೆ ಭಾಜನನಾದ ಅತ್ಯಂತ ಮಹತ್ವದ ಕವಿ ಯಾರಾದರೂ ಇದ್ದರೆ ಅದು ಜಾನ್ ಕೀಟ್ಸ್. ಅವನಿಗೂ ಮೊದಲಿನ ಎಡ್ಮಂಡ್ ಸ್ಪೆನ್ಸರ್ ಬಹಳಷ್ಟು ಕಾವ್ಯ ರಸಿಕರಿಗೆ ಅರ್ಥವಾಗಲಿಲ್ಲ, ಜಾನ್ ಮಿಲ್ಟನ್ ಕಬ್ಬಿಣದ ಕಡಲೇ ಆದ, ಅಲೆಗ್ಝಾಂಡರ್ ಪೋಪ್ ಪ್ರಾಯೋಗಿಕ ನೆಲೆಯಲ್ಲಿ ಉಳಿದುಕೊಂಡ, ವಡ್ರ್ಸ್‍ವರ್ಥ್ ಸಂತನಾದ, ಕೀಟ್ಸ್ ಮಾತ್ರ ಕವಿತೆ ಬರೆದು ಕವಿಯಾದ ಎನ್ನುವುದಕ್ಕಿಂತ, ಅವನು ಕವಿತೆಗಾಗಿಯೇ ಬದುಕಿದ್ದ, ಕೊನೆಗೆ ಕವಿತೆಯಾಗಿಯೇ ದಕ್ಕಿದ.  
ನಾನು ಹೇಳುತ್ತಿರುವುದು ಅಕ್ಷರಶಃ ಸತ್ಯ. ತನ್ನ ಬಾಲ್ಯದಲ್ಲಿ ಅಂದರೆ, 1804ರ ಆಸುಪಸಿನಲ್ಲಿ ಕುದುರೆಯ ಮೇಲಿಂದ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದ ಕೀಟ್ಸ್ ಜೀವನದ್ದುದ್ದಕ್ಕೂ ಬೀಳುತ್ತ, ಏಳುತ್ತ, ಮೃತ್ಯುವಿನೊಂದಿಗೆ ಸೆಣಸಾಡುತ್ತ ಮೃತ್ಯುಂಜಯನೇ  ಆದ. ಕವಿ ಮ್ಯಾಥ್ಯು ಆ್ಯರ್ನಾಲ್ಡ್ ಕೀಟ್ಸ್ ನ ಕುರಿತು ಹೇಳುತ್ತಾನೆ ‘He is, he is with Shakespeare. Though he lived more in sensations than in thoughts. Keats soon become alive to the principle of beauty in all things and he developed a style which was Greek in its sculpturesque perfection and Shakespearean in its intensity.
ನಿಮಗೆ ತಿಳಿ ತಿಳಿಯಾಗಲೆಂದು ನಾನು ಜಾನ್ ಕೀಟ್ಸ್ ನ ಕುರಿತು ಬರೆದಷ್ಟೂ ಆತ ಕಡಲಂತೆ ಆಳ, ಅನಂತವಾಗುತ್ತಲೇ ಹೋಗುತ್ತಾನೆ. ಇದು ಸರಿ, ಆದರೆ ಇದು ಏಕೆ ಹೀಗೆ ಎಂಬುದು ಪ್ರಶ್ನೆಯಲ್ಲವೆ? ಎಂಥ ಕವಿಗೆ ಇಂಥ ವಿಸ್ತಾರ ಸಾಧ್ಯವಾಗುತ್ತದೆ? ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಇದಕ್ಕೆ ಇಂದಿಗೆ ಐವತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಚರಿತ್ರೆಕಾರರಾದ ಪ್ರೊ. ರಂ.ಶ್ರೀ. ಮುಗಳಿ ಅವರು ಬಹಳ ಸುಂದರವಾಗಿ ಉತ್ತರಿಸಿದ್ದಾರೆ. ಅದನ್ನು ನೀವು ಗಮನಿಸಬೇಕೆಂದು ನನ್ನ ಬಯಕೆ. ಅವರು ಬರೆಯುತ್ತಾರೆ – “ಲೇಖಕನ ಜೀವನಾನುಭವ, ಆಲೋಚನೆ, ಹೃದಯಸ್ಪಂದನ ಇವುಗಳ ವಿಶಿಷ್ಟ ಪರಿಪಾಕವಾಗಿ ಅವನ ಸಾಹಿತ್ಯ ನಿರ್ಮಾಣವಾಗುತ್ತದೆ. ಇನ್ನೊಂದು ಬಗೆಯಲ್ಲಿ ಹೇಳಿರುವಂತೆ ಅದು ಸೃಷ್ಟಿ-ದೃಷ್ಟಿಗಳ ಸಂಗಮದಿಂದ ಉಂಟಾದ ನವೀನ ಸೃಷ್ಟಿಯಾಗಿರುತ್ತದೆ. ಈ ಸೃಷ್ಟಿಗೆ ಮುಖ್ಯ ಕಾರಣವಾದ ಪ್ರತಿಭಾಶಕ್ತಿ ನವನವೋನ್ಮೇಷಶಾಲಿನಿಯಾದ ಪ್ರಜ್ಞೆ ಎಂದು ಹೊಗಳಿಸಿಕೊಂಡಿದೆ. ಲೇಖಕನ ವ್ಯಕ್ತಿತ್ವದಲ್ಲಿ ಸಾಕ್ಷಿಭಾವ, ಸ್ನೇಹಭಾವ, ಸೌಂದರ್ಯಭಾವ ಇವು ಎಷ್ಟರ ಮಟ್ಟಿಗೆ ಮಾಗಿದ ರಸಪ್ರಜ್ಞೆಯಲ್ಲಿ ನೆಲೆನಿಲ್ಲುವುವೋ ಅಷ್ಟರ ಮಟ್ಟಿಗೆ ಅವನ ಕೃತಿ ಘನತೆಯನ್ನು ತಾಳುತ್ತದೆ. ಇಂಥ ಕೃತಿಯಲ್ಲಿ ಸಮಗ್ರ ಸೌಂದರ್ಯವು ಕಣ್ದೆರೆಯುತ್ತದೆ. ಅದರಿಂದ ನಿರ್ಮಲವಾದ, ನಿರ್ಹೇತುಕವಾದ ಆನಂದವು ಲಭಿಸುತ್ತದೆ. ಜೊತೆಗೆ ಅದು ರಸಿಕನ ಚಿತ್ರವನ್ನು ಎತ್ತರಿಸುತ್ತದೆ, ಜೀವನವನ್ನು ಸಂಸ್ಕರಿಸುತ್ತದೆ. ಅಂತರಂಗದಾಳದಲ್ಲಿ ತಿಳಿಯದಂತೆ ಹೊಕ್ಕು ಕೊನೆಬಾಳುವ ಬಾಳಿನ ಬೆಲೆಗಳನ್ನು ಸ್ಥಾಪಿಸುತ್ತದೆ. ಋಷಿಯಲ್ಲದವನು ಕಾವ್ಯವನ್ನು ರಚಿಸಲಾರ, ದರ್ಶನದಿಂದಲೇ ಋಷಿ ಋಷಿಯಾಗುತ್ತಾನೆ.ಎಂಬ ಪ್ರಸಿದ್ಧವಾದ ಉಕ್ತಿ ಸಾಹಿತ್ಯದ ಚಿರಂತನವಾದ ಸ್ವರೂಪವನ್ನು ಬೇರೊಂದು ಬಗೆಯಲ್ಲಿ ಎತ್ತಿ ತೋರಿಸಿರುತ್ತದೆ. ಇಲ್ಲಿ ದರ್ಶನವೆಂದರೆ ಕಣ್ಣ ಮುಂದಿರುವ ಬಾಳಿನ ಹೊರನೋಟ, ಒಳಗಣ್ಣಿನಿಂದ ತಿಳಿಯುವ, ಇರಬೇಕಾದ ಬಾಳಿನ ಒಳನೋಟ. ಇದು ಲೇಖಕನ ಬುದ್ಧಿಗೆ ಮಾತ್ರ ಹೊಳೆದುದಲ್ಲ, ಅವನ ಸಮಗ್ರ ಚೇತನಕ್ಕೆ ಅರಿವಾಗಿ ಅವನ ಇರುವಿಕೆಯಲ್ಲಿ ಮೂಡಿರುವ ಇಲ್ಲವೆ ಮೂಡಲು ಹಾತೊರೆಯುತ್ತಿರುವ ಅವನದೇ ಆದ ಜೀವನದರ್ಶನವಾಗಿರುತ್ತದೆ. ಅಂತೇ ಸಾಹಿತ್ಯವು ವ್ಯಕ್ತಿತ್ವದ ಪ್ರತಿಫಲವೆಂದು ಹೇಳಿರುವುದುಂಟು. ವ್ಯಕ್ತಿವ್ಯಕ್ತಿಗೆ ನಿರ್ಮಿತಿ ಬೇರೆ ಬೇರೆಯಾಗುತ್ತದೆ. ವ್ಯಕ್ತಿ ಮಾಗಿದಷ್ಟು ಅವನ ಕೃತಿಯೂ ಮಾಗಿ ತೋರುತ್ತದೆ. ವ್ಯಕ್ತಿ ಕುಗ್ಗಿದಷ್ಟು ಅವನ ಕೃತಿಯೂ ಕುಗ್ಗಿ ನಿಲ್ಲುತ್ತದೆ.
ಮಾಗಿದ ಕವಿ ಜಾನ್ ಕೀಟ್ಸ್ ಈ ಮೇಲಿನ ಚರ್ಚೆಯ ಹಿನ್ನೆಲೆಯವನು. ತನ್ನ ಬದುಕು ನಿಗಿನಿಗಿಯಾದರೂ ಅವನು ಕಾವ್ಯಲೋಕದಲ್ಲಿ ತಣ್ಣಗಿನ ಬೆಳಕಂತೆ ಬಂದವನು. ಇಂದಿಗೂ ಕಾವ್ಯಾರಾಧಕರಿಗೆ ಅದೇ ನೆಮ್ಮದಿಯನ್ನು ನೀಡಿದವನು. ನಾನಂತೂ ಅವನ ಕಾವ್ಯ, ಪತ್ರ, ಸಾಹಿತ್ಯ ಹಾಗೂ ಬದುಕನ್ನು ಓದಿ ಪ್ರಪಂಚದ ಮಹಾ ನಿಧಿಯೊಂದನ್ನು ದಕ್ಕಿಸಿಕೊಂಡ ಆನಂದದಲ್ಲಿದ್ದೇನೆ. ನನಗಾದ ಅನುಭೂತಿ ನಿಮಗೂ ದಕ್ಕಲಿ ಎಂಬ ಸದಾಶಯದೊಂದಿಗೆ ಈ ಪ್ರಯತ್ನ ಮಾಡಿದ್ದೇನೆ.
ಎಲ್ಲಕ್ಕೂ ಮಿಗಿಲಾಗಿ ಕೀಟ್ಸ್ ಕದ್ದು ತಿನ್ನುವ ಹಣ್ಣಲ್ಲ, ಹಂಚಿಕೊಂಡು ತಿನ್ನಬೇಕಾದ ಮಹಾಪ್ರಸಾದ, ಮಹಾನಂದ. ಈಗ ಅದು ನಿಮ್ಮೊಂದಿಗೆ.