Total Pageviews

Thursday, July 2, 2020

ಕೈಫಿಯತ್ ಎಕ್ಸ್‍ಪ್ರೆಸ್


ಕೈಫಿಯತ್’ ಎಂದರೆ ಸಮಾಚಾರ, ಸುದ್ದಿ ಎನ್ನುವ ಅರ್ಥಗಳುಂಟು. ಈ ಶಬ್ಧಕ್ಕೊಂದು ವಿಶೇಷ ಸ್ಥಾನವನ್ನು ಕನ್ನಡದಲ್ಲಿ ಒದಗಿಸಿಕೊಟ್ಟವರು ನಾವು ಓದದ, ಇತ್ತೀಚೆಗಷ್ಟೇ ನಮ್ಮನ್ನಗಲಿದ ಮಹತ್ವದ ಲೇಖಕ ಚಂದ್ರಕಾಂತ ಕುಸನೂರ. ಅವರ ಪ್ರಮುಖ ಕಾದಂಬರಿಯೊಂದರ ಶೀರ್ಷಿಕೆ ‘ಒಂದು ಕೈಫಿಯತ್’. ಕೈಫಿ, ಕೈಫಿಯಾನಾ, ಕೈಫಿಯತ್ ಶಬ್ಧಗಳು ಉರ್ದು ಭಾಷಿಕರಲ್ಲಿ ಚಾಲ್ತಿಯಲ್ಲಿರುವಂತೆ ನಮ್ಮ ಹೈದರಾಬಾದ ಹಾಗೂ ಮುಂಬೈ ಕರ್ನಾಟಕದ ಕನ್ನಡ ಭಾಷಿಕರಲ್ಲಿಯೂ ಬಳಕೆಯಲ್ಲಿವೆ. ಆದರೆ, ಉರ್ದು ಕಾವ್ಯದಲ್ಲಿ ಇವುಗಳಿಗೊಂದು ವಿಶೇಷ ಪರಿಗಣನೆಯನ್ನು ತಂದುಕೊಟ್ಟವರು ಭಾರತದ ಹೆಮ್ಮೆಯ ಲೇಖಕ ಕೈಫಿ ಆಜ್ಮಿ.
ಇವರಿಗೊಂದು ಪರಿಚಯಬೇಕೆ? ಇದು ಪ್ರಶ್ನೆ. ಈ ದೇಶದ ಚಳುವಳಿಯ ಚರಿತ್ರೆಯನ್ನು ಬಲ್ಲವರಿಗೆ ಕೈಫಿ ಚಳುವಳಿಕಾರರ ಹಸಿವಿನಷ್ಟೇ ಹತ್ತಿರದವರು. ಆದರೆ ಬದಲಾಗುತ್ತಿರುವ, ಕೊಳ್ಳುಬಾಕು ಮತ್ತು ಪ್ರಚಾರಗಿರಿಗೆ ಹತ್ತಿರವಾಗುತ್ತಿರುವ ಸಧ್ಯದ ಭಾರತದಲ್ಲಿ ಕವಿ ಕೈಫಿಯ ಪರಿಚಯಕ್ಕೆ ಬೇರೆ ದಾರಿ ಬೇಕಾಗಿದೆ. ಹೀಗಾಗಿ ಮುಂದಿನ ವಿಶೇಷಣಗಳನ್ನು ಬಳಸಿದ್ದೇನೆ.



                 ಖ್ಯಾತ ಗಝಲ್‍ಕಾರ ಕೈಫಿ ಅವರು ಭಾರತೀಯ ಚಲನಚಿತ್ರ ರಂಗದ ಬೌದ್ಧಿಕ ತಾರೆ ಶಬಾನಾ ಆಜ್ಮಿ ಅವರ ತಂದೆ, ಮತ್ತೊರ್ವ ಶ್ರೇಷ್ಠ ಕವಿ, ಚಲನಚಿತ್ರ ಸಂಭಾಷಣಾಕಾರ ಜಾವೆದ್ ಅಕ್ತರ್‍ರ ಮಾವ - ಎನ್ನುವ ಈ ವಿವರಣೆ ಕಾಲದ ಅನಿವಾರ್ಯತೆ ಅಷ್ಟೆ, ಕೈಫಿ ಎಂಬ ಕವಿಯ ಇತಿಹಾಸದ ಅನಿವಾರ್ಯತೆ ಅಲ್ಲ.
ಇವರ ಸಾವಿರಾರು ಕವಿತೆಗಳಲ್ಲಿ ನಮ್ಮನ್ನು ಕಾಡುವ ಕೆಲವೇ ಕೆಲವು ಸಾಲುಗಳನ್ನು ನಿಮ್ಮ ಸ್ಮರಣೆಗೆ ಇಲ್ಲಿಟ್ಟಿದ್ದೇನೆ.
•  ಬಹಾರ್ ಆಯೆ ತೊ ಮೇರಾ ಸಲಾಮ್ ಕಹದೇನಾ
•  ಥೋಡಾ ಸಾ ಪ್ಯಾರ್ ಭಿ ಮುಝೆ ದೇ ದೋ ಸಜಾ ಕೆ ಸಾಥ್
•  ಬಸ್ತಿ ಮೇ ಅಪನಿ ಹಿಂದೂ-ಮುಸಲ್ಮಾನ್ ಜೋ ಬಸ್ ಗಯೆ
ಇನ್ಸಾನ್ ಕಿ ಶಕಲ್ ದೆಖನೇ ಕೋ ಹಮ್ ತರಸ್ ಗಯೆ
ಇವು ಕೈಫಿ ಎಂಬ ಕಾವ್ಯ ಕೆಂಡದ ಕಿಡಿಗಳು. ಮಹಲು-ಮಹಾತ್ಮರ ಕುರಿತು ಬರಿಯದ ಕೈಫಿ ಮನುಷ್ಯರ ಕುರಿತು, ಅವರ ಘನತೆ-ಅಪಮಾನ, ಬಡತನ-ಹೋರಾಟಗಳ ಕುರಿತು ಸಮಕಾಲೀನ ಯಾವ ಉರ್ದು ಲೇಖಕರೂ ಬರಿಯದಷ್ಟು ಕಾವ್ಯವನ್ನು ಹೊಸೆದಿದ್ದಾರೆ. ಕಾವ್ಯ ಬಿಟ್ಟು ಇನ್ನಾವುದನ್ನೂ ಬರೆಯದ ಕೈಫಿ ಅದೊಂದರ ಮೂಲಕವೇ ನಲವತ್ತರಿಂದ ಸುಧೀರ್ಘ ಎಂಟು ದಶಕಗಳ ಭಾರತದಲ್ಲಿ ಸಾಮಾಜಿಕ ಚಿಂತನೆಗಳ ಪಂಜುಗಳನ್ನು ಹೊತ್ತಿಸಿದ್ದಾರೆ, ಕ್ರಾಂತಿಯನ್ನು ಉದ್ದೀಪಿಸಿದ್ದಾರೆ. ಕವಿ ಕುವೆಂಪು ಅವರ ಭಾಷೆಯಲ್ಲಿಯೇ ಹೇಳುವುದಾದರೆ - ಸತ್ತಂತಿಹರನು ಬಡಿದೆಚ್ಚರಿಸು, ಎನ್ನುವ ಅರ್ಥದಲ್ಲಿಯೇ ಸತ್ತು ಹೋಗಿದ್ದ ಭಾರತದ ಆತ್ಮಾಭಿಮಾನವನ್ನು ಕೈಫಿ ತಮ್ಮ ಕಾವ್ಯದ ಮೂಲಕ ಬಡಿದೆಬ್ಬಿಸಿದ್ದಾರೆ.
ಅವು ಪರತಂತ್ರದ ದಿನಗಳು, ಎರಡು ಭೀಕರ ಬರಗಾಲಗಳು, ಎರಡು ಮಹಾ ಯುದ್ಧಗಳು ಇಂಥ ತಮಂಧದ ಘೋರಕಾಲದಲ್ಲಿ ಕೈಫಿಯಂತೆ ಅನೇಕ ಕವಿಗಳು ಕತ್ತಲಲ್ಲಿ ದೇಶದ ಸ್ವಾತಂತ್ರ್ಯವನ್ನು ಹುಡುಕಾಡುತ್ತಿದ್ದರು. ಇಡೀ ದೇಶ ಹಿಂದೂ-ಮುಸ್ಲಿಂ ದೊಂಬಿಗಳಿಂದ ತಲ್ಲಣಿಸಿ ಹೋಗಿತ್ತು. ಇಷ್ಟರಲ್ಲಿಯೇ ಗಾಂಧೀಜಿಯ ಹತ್ಯೆ, ನೆಹರು ಅವರ ನಿರಾಯುಧ ಸ್ಥಿತಿ, ಇವೆಲ್ಲವುಗಳ ಮಧ್ಯ ಅರಳಬೇಕಿತ್ತು ಹೊಸ ಕಾವ್ಯ. ರಮಿಸಬೇಕಿತ್ತು ರೊಚ್ಚಿಗೆದ್ದ ಮನುಷ್ಯರನ್ನು. ಕಟ್ಟಬೇಕಿತ್ತು ಜಾತ್ಯಾತೀತ ಭಾರತವನ್ನು ಹಾಗೂ ಭಾರತೀಯರನ್ನು.
ಅಂದಿನ ಪ್ರಸಿದ್ಧ ಪತ್ರಿಕೆಯಾಗಿದ್ದ ರೂಸಿ ಕರಂಜಿಯಾ ಅವರ ಒಡೆತನದ ‘ಬ್ಲಿಟ್ಜ್’ನಲ್ಲಿ ಕೈಫಿಯ ಗೆಳೆಯ ಖ್ವಾಜಾ ಅಹಮದ್ ಅಬ್ಬಾಸ್ ಬರೆದರು - Here I am involved in mankind and mankind is involved in me. Ram and Mohammed, Gandhi and Goethe, Shakespeare and Shelly, Lenin and Jawaharlal Neharu, they were all part of me and I was part of them.  ಇದೇ ಪತ್ರಿಕೆಯ ಉರ್ದು ಅವತರಣಿಕೆಯಲ್ಲಿ ಕೈಫಿ ಬರೆದರು – ‘ಎಲ್ಲವನ್ನು ಸುಟ್ಟು ಪರಿಶುದ್ಧಗೊಳಿಸುವ ಕೆಂಡವಾಗು, ಎಲ್ಲರ ಬೆಸೆಯುವ ಮನುಷ್ಯನಾಗು’.
ಯಾವಾಗಲೂ ಹೀಗೆಯೇ - ಕಡಿಮೆ ಪದಗಳ ಹೆಗಲ ಮೇಲೆ ಅರ್ಥದ ಹಿಮಾಲಯವನ್ನು ಹೇರಿ ಕಾಡುವಂತೆ ಬರೆಯುವುದು ಕೈಫಿಯ ಖೈರಿಯತ್.
ಕವಿ ಕೈಫಿಯ ಪೂರ್ಣ ಹೆಸರು ಸೈಯದ್ ಅಖ್ತರ್ ಹುಸೇನ್ ರಿಜ್ವಿ. ಮೂಲತಃ ರಿಜ್ವಿ ಕುಟುಂಬದವರು. ಆದರೆ ಉರ್ದು ಕಾವ್ಯ ಲೋಕದಲ್ಲಿ ‘ಕೈಫಿ’ಎಂದೇ ಖ್ಯಾತರಾದರು. ಸ್ವತಂತ್ರ ಪೂರ್ವ ಭಾರತದ ಉತ್ತರ ಪ್ರದೇಶದ ಅಜಮ್‍ಘರ್‍ದಲ್ಲಿ 1919ರ ಜನೆವರಿ 14 ರಂದು ಹುಟ್ಟಿದ ಕೈಫಿ ಭಾರತೀಯ ಉರ್ದು ಸಾಹಿತ್ಯಕ್ಕೆ ಸಿನಿಮಾ ರಂಗದಲ್ಲಿ ಒಂದು ನೆಲೆಯನ್ನು ಒದಗಿಸಿದರು. ಗಂಭೀರ ಕಾವ್ಯವನ್ನು ಜನಪ್ರಿಯ ಮಾಧ್ಯಮದ ಮೂಲಕ ಮನೆ-ಮನಗಳಿಗೆ ಮುಟ್ಟಿಸಿ, ಉರ್ದು ಸಾಹಿತ್ಯವನ್ನು ಬದುಕಿಸಿದರು. ಸಿನಿಮಾ ಸಾಹಿತ್ಯವನ್ನು ಚಿಂತನಪರಗೊಳಿಸಿದರು. ಸಮಕಾಲೀನ ಸಾಹಿತ್ಯ ಪ್ರಪಂಚದ ವಿಮರ್ಶೆಯ ಗೌರವ-ಗಮನಗಳನ್ನು ಸೆಳೆಯುತ್ತಲೆ, ಉರ್ದು ಮುಷಾಯಿರಾಗಳಲ್ಲಿಯೂ ಕೈಫಿ ಜನಮನ್ನಣೆಗಳಿಸಿದ್ದು ಅವರ ಹೆಚ್ಚಿಗಾರಿಕೆಯೇ ಸರಿ. ಬದುಕಿನ ದೀರ್ಘ ಎಂಬತ್ಮೂರು ವರ್ಷಗಳ ಕಾಲ ಕೆಂಡದಂತೆಯೇ ಪ್ರಖರವಾಗಿದ್ದರು, ಜನಪರವಾಗಿದ್ದರು.
ಹೀಗೆ ಇವರೊಂದಿಗೆ ಬಂದ ಇವ ನಾಡಿನ ಇನ್ನೊಬ್ಬ ಕವಿ ಗೆಳೆಯನ ಸ್ಮರಣೆಯೂ ಇಲ್ಲಿ ಪ್ರಸ್ತುತ ಹಾಗೂ ಅನಿವಾರ್ಯ -
19 ಅಕ್ಟೊಬರ್ 1911ರಲ್ಲಿ ಜನಿಸಿದ ಮಜಾಜ್, ತೀರಿದ್ದು 5 ಡಿಸೆಂಬರ್ 1955ರಲ್ಲಿ. ತನ್ನ ರಮ್ಯ ಹಾಗೂ ಕ್ರಾಂತಿಕಾರಿ ಕವಿತೆಗಳಿಂದಾಗಿ ಜನಸಾಮಾನ್ಯರಿಗೆ ತೀರ ಹತ್ತಿರದವನಾಗಿದ್ದ ಮಜಾಜ್ ಉರ್ದುವಿನ ಗಜಲ್ ಮತ್ತು ನಜ್ಮ ಕಾವ್ಯಕ್ಕೆ ವಿಶೇಷ ಕೊಡುಗೆ ನೀಡಿದವನು. ಉತ್ತರ ಪ್ರದೇಶದ ಬಾರಾಬಂಕಿ ಪ್ರಾಂತ್ಯದ ರುಡೌಲಿ ಈತನ ಜನ್ಮಸ್ಥಳ.
ಜನಾನುರಾಗಿಯಾಗಿದ್ದ ಮಜಾಜ್ ಜನರಿಗಾಗಿ ಬರೆದ. ಜನರನ್ನೇ ತನ್ನ ಕಾವ್ಯದ ಕೇಂದ್ರ ಶಕ್ತಿಯಾಗಿರಿಸಿಕೊಂಡಿದ್ದ. ಅವನ ಕಾವ್ಯ ಆಗಸಕ್ಕೆ ಬಿಟ್ಟ ಹೂವಲ್ಲ, ಕೊಟ್ಟ ಮುತ್ತಲ್ಲ, ಕೇವಲ ನಲವತ್ನಾಲ್ಕು ವರ್ಷಗಳ ಬಾಳು ಪಡೆದು ಬಂದಿದ್ದ ಮಜಾಜ್ ಅದು ಮುಗಿಯುವುದರೊಳಗಾಗಿ ಲೋಕದೊಳಗಿನ ತನ್ನ ಅಸ್ತಿತ್ವವನ್ನು ನವೀಕರಣಗೊಳಿಸಿಕೊಳ್ಳಬೇಕಾಗಿತ್ತೇನೊ. ಅದು ಜನರಿಂದ, ಅವರ ಹೃದಯದ ಹಾಡುಗಳನ್ನು ಹಾಡುವುದರಿಂದ ಸಾಧ್ಯ ಎನ್ನುವುದು ಮಜಾಜ್‍ಗೆ ಚೆನ್ನಾಗಿ ತಿಳಿದಿತ್ತು.
ಮಜಾಜ್ ಓರ್ವ ಹಿರಿಯ ಕವಿಯಾಗಿ ಕೈಫಿಯ ಮುಂದಿನ ಕಾವ್ಯ ದಾರಿಯನ್ನು ಸುಗಮಗೊಳಿಸಿದ್ದನ್ನು ಮರೆಯುವಂತಿಲ್ಲ. ವಯಸ್ಸಿನಲ್ಲಿ ಒಂಬತ್ತೇ ವರ್ಷ ಮಜಾಜ್ ಹಿರಿಯನಾಗಿದ್ದರೂ ಅದು ಕೈಫಿಕಾವ್ಯದ ಎಂಬತ್ತು ವರ್ಷಗಳ ಪ್ರಶ್ನೆಗಳನ್ನು ಬಗೆಹರಿಸಿತ್ತು.
ಶೌಕತ್ ಕೈಫಿಯವರನ್ನು ಮದುವೆಯಾಗಿ, ಶಬಾನಾ ಆಜ್ಮಿ ಮತ್ತು ಬಾಬು ಆಜ್ಮಿ ಎಂಬ ಇಬ್ಬರು ಮಕ್ಕಳ ತಂದೆಯಾಗಿ ಕೈಫಿ ಕೊನೆಯವರೆಗೂ ನೆಚ್ಚಿಕೊಂಡದ್ದು ಮಾತ್ರ ಕಾವ್ಯವನ್ನು. ಕವಿಯಾಗಿ, ಸಿನಿಮಾ ಗೀತರಚನಾಕಾರರಾಗಿ ಅವರು ಏರಿದ ಎತ್ತರ ಸಾಮಾನ್ಯವಾದುದೇನಲ್ಲ. 1970 ರಲ್ಲಿ ಗೀತರಚನೆಗಾಗಿ ಅವರು ಸಿನಿಮಾ ಕ್ಷೇತ್ರದ ಮಹತ್ವದ ಫಿಲ್ಮ ಫೇರ್ ಪ್ರಶಸ್ತಿಯನ್ನು ಪಡೆದರೆ, 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದು, ಸಿನಿಮಾ ಹಾಗೂ ಸಾಹಿತ್ಯಗಳೆರಡೂ ಕ್ಷೇತ್ರಗಳ ಮಹತ್ವದ ಸಮನ್ವಯಕಾರರಾಗಿದ್ದಾರೆ. ಒಂದರ್ಥದಲ್ಲಿ ಅವರದು ಸಿನಿಮಾ-ಸಾಹಿತ್ಯಕ್ಕೆ ಮುಡಿಪಾದ ಕುಟುಂಬವೂ ಕೂಡ. ಮಗ ಬಾಬು ಆಜ್ಮಿ ಫಿಲ್ಮ ಆಟೋಗ್ರಾಫರ್ ಆದರೆ, ಸೊಸೆಯಾದ ತನ್ವಿ ಆಜ್ಮಿಯೂ ಕೂಡ ಚಿತ್ರರಂಗದ ಪ್ರಮುಖ ತಾರೆ.
Tanvi Azmi
1942 ರಲ್ಲಿ ಸಂಪ್ರದಾಯಿಕವಾದ ಪರ್ಷಿಯನ್ ಹಾಗೂ ಉರ್ದು ಕಾವ್ಯಾಧ್ಯಯನದ ಕೈಬಿಟ್ಟು ಮಾಕ್ರ್ಸ್‍ವಾದವನ್ನು ಅಪ್ಪಿಕೊಂಡ ಕೈಫಿ, 1943ರಷ್ಟಕ್ಕೆ ‘ಕಮ್ಯುನಿಸ್ಟ ಪಾರ್ಟಿ ಆಫ್ ಇಂಡಿಯಾ’ದ ಸಕ್ರಿಯ ಸದಸ್ಯರಾಗಿದ್ದರು. ಮಾಕ್ರ್ಸ್ ಚಿಂತನೆಗಳ ನಿಷ್ಠಾವಂತ ಅನುಯಾಯಿ ಆಗಿದ್ದರು.
ಲಖನೌದಲ್ಲಿ ನಡೆದ ಭಾರತೀಯ ಪ್ರಗತಿಶೀಲ ಬರಹಗಾರರ ಸಮಾವೇಶದಲ್ಲಿ ಕೈಫಿ ಹೊತ್ತುಕೊಂಡ ಜವಾಬ್ದಾರಿಗಳು ಎಲ್ಲರ ಗಮನ ಸೆಳೆದು, ಅಂದಿನಿಂದ ಅವರು ಇಂಡಿಯನ್ ಪ್ರೊಗ್ರೆಸಿವ್ ರೈಟರ್ಸ್ ಸಂಘಟನೆಯ ನಾಯಕರ ಪಂಕ್ತಿಗೆ ಸೇರಿಕೊಂಡರು. ಜಮಿನ್ದಾರನೊಬ್ಬನ ಮಗನಾಗಿ ಕೈಫಿ ನೆಮ್ಮದಿಯಾಗಿ ಉಂಡುಟ್ಟು ಬದುಕಿಬಿಡಬಹುದಾದ ಎಲ್ಲ ಸೌಕರ್ಯಗಳನ್ನು ಹೊಂದಿದ್ದಾಗಿಯೂ, ಅವರು ಗುರುತಿಸಿಕೊಂಡದ್ದು ಖಾನ್ಪೂರದ ಟೆಕ್ಸಟೈಲ್ ಮಿಲ್ ಕಾರ್ಮಿಕರ ಸಂಕಷ್ಟಗಳೊಂದಿಗೆ, ಅವರ ಬದುಕಿನ ಹೋರಾಟಗಳೊಂದಿಗೆ. ಅಷ್ಟಕ್ಕೂ ನಿಲ್ಲದ ಕೈಫಿ ಮುಂದೆ ಮುಂಬೈಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಾಯಿಸಿಕೊಂಡು, ಕಮ್ಯುನಿಸ್ಟ ಪಾರ್ಟಿ ಹಾಗೂ ಅಲ್ಲಿಯ ಸ್ಲಮ್ ವಾಸಿ ಜನರ ಪರವಾಗಿ ತಮ್ಮ ಕಾವ್ಯವನ್ನು ರೂಪಿಸಲಾರಂಭಿಸಿದರು.
ಕೈಫಿ ಸಾಮಾನ್ಯವಾಗಿ ಎಲ್ಲ ಉರ್ದು ಕವಿಗಳಂತೆ ಪ್ರೇಮ, ಪ್ರಣಯಗಳ ಕುರಿತೇ ಗಝಲ್‍ಗಳನ್ನು ಬರೆಯಲಾರಂಭಿಸಿದ್ದರೂ ಕೂಡ, ಮುಂದಿನ ಅವರ ಜನಪರ ಹೋರಾಟ ಅವರ ಕಾವ್ಯಕ್ಕೆ ಸಾಮಾಜಿಕ ಬದ್ಧತೆಯ ದೀಕ್ಷೆಯನ್ನು ನೀಡಿತು. ದಮನಿತರ ಅಸ್ತ್ರವಾಗಿ ಜವಾಬ್ದಾರಿಗಳನ್ನು ನಿಭಾಯಿಸಿದ ಅವರ ಬರಹ ಎಂದೂ ಕೂಡ ಪ್ರಚಾರ ಕಾವ್ಯ (poetry of propaganda)ದ ಅಪಾಯವನ್ನು ಎದುರಿಸಲಿಲ್ಲ ಎನ್ನುವುದು ಕೈಫಿಯ ಕಾವ್ಯ ಕ್ಷಮತೆಯನ್ನು ತೋರಿಸುತ್ತದೆ.
ದೇಶ ಸ್ವತಂತ್ರ್ಯದ ಆರು ವರ್ಷ ಮೊದಲು, ಅಂದರೆ 1943 ರಲ್ಲಿ, ಕೈಫಿಯವರ ಮೊದಲ ಕಾವ್ಯ ಸಂಕಲನ ‘ಜಂಕಾರ್’ ಪ್ರಕಟವಾಯಿತು. ಆಗ ಅವರ ವಯಸ್ಸು 24. ಆದರೆ, ಕೈಫಿ ತಮ್ಮ ಮೊದಲ ಗಝಲ್ ಬರೆದದ್ದು ಹನ್ನೊಂದು ವರ್ಷದ ಬಾಲಕನಿದ್ದಾಗ. ಉರ್ದು ಮುಷಾಯಿರಾಗಳು ಸರ್ವೇ ಸಾಮಾನ್ಯವಾಗಿದ್ದ ಆ ದಿನಗಳಲ್ಲಿ ಅವರು ತಮ್ಮ ಮೊದಲ ಗಝಲ್ ಬರೆದು ಆ ಕವಿಗೋಷ್ಠಿಯ ಅಧ್ಯಕ್ಷರಿಂದ ಪ್ರಶಂಸಿಸಲ್ಪಟ್ಟಿತು. ಆದರೆ, ಸ್ವಯಂ ಕೈಫಿಯವರ ತಂದೆ ಅದನ್ನು ನಂಬಲಿಲ್ಲ. ತನ್ನ ಅಣ್ಣನ ಕವಿತೆಯ ಸಾಲೊಂದನ್ನು ಕದ್ದು, ಒಂದಷ್ಟು ಸಾಲು ಅನುಕರಿಸಿ ಬರೆದಿದ್ದಾನೆ ಎಂದು ಸುಮ್ಮನಾದರು. ಆದರೆ, ಆಗಲೇ ಕಿಡಿಯಂತೆ ಸಿಡಿದ ಕೈಫಿ ತಕ್ಷಣವೇ
“ಇತ್ನಾ ತೋ ಜಿಂದಗಿ ಮೆ ಕರ್ಕೆ ದಿಖಾವೂಂಗಾ”ಎಂಬ ಸುಂದರ ರಚನೆಯನ್ನು ತಂದೆಯ ಮುಂದೆಯೇ ಮಾಡಿ ತೋರಿಸಿದಾಗ ಎಲ್ಲರಿಗೂ ಅಚ್ಚರಿ! ಕೈಫಿ ಇನ್ನೂ ಮೀಸೆ ಮೂಡಿಸಿಕೊಳ್ಳದ ವಯಸ್ಸಿನಲ್ಲಿದ್ದಾಗ ದೇಶದ ದೊಡ್ಡ ಗಾಯಕಿ ಬೇಗಂ ಅಖ್ತರ್ ಅವರು ಕೈಫಿಯ ಗಝಲ್‍ಗಳನ್ನು ಹಾಡಿ ಅವರಲ್ಲಿ, ಅವರ ಯೌವ್ವನದಲ್ಲಿ ಒಂದು ಹೆಗ್ಗುರಿಯನ್ನು ತುಂಬಿದರು.
1943 ರಿಂದ ನಿರಂತರವಾಗಿ ಪ್ರಕಟವಾಗಲಾರಂಭಿಸಿದ ಅವರ ಕಾವ್ಯ ಸಂಕಲನಗಳಲ್ಲಿ ‘ಆಖೀರ-ಎ-ಸಬ್’, ‘ಸರ್‍ಮಾಯಾ’, ‘ಆವಾರಾ ಸಾಜದೆ’, ‘ಕೈಫಿಯತ್’, ‘ನಯೀ ಗುಲಿಸ್ತಾನ್’ ಅತ್ಯಂತ ಪ್ರಮುಖವಾದವುಗಳು.
‘ಹೀರ್-ರಂಜಾ’ದ ಸ್ಕ್ರಿಪ್ಟ್‍ನ್ನು ಬರೆದವರು ಕೈಫಿ. ಕೆಲಕಾಲ ಆ ದಿನಗಳಲ್ಲಿ ರೂಸಿ ಕಾರಂಜಿಯಾರ ಬ್ಲಿಟ್ಜ್ ಪತ್ರಿಕೆಯ ಉರ್ದು ಅವತರಣಿಕೆಯಲ್ಲಿ ಅಂಕಣಕಾರರಾಗಿಯೂ ಕಾರ್ಯನಿರ್ವಹಿಸಿ, ರಾಷ್ಟ್ರೀಯವಾದವನ್ನು ಬೆಂಬಲಿಸಿದ ಲೇಖನಗಳನ್ನೂ ಕೈಫಿ ಬರೆದಿದ್ದಾರೆ. ಅವರ ಜನಪ್ರೀಯ ಚಲನಚಿತ್ರ ಗೀತೆಗಳನ್ನೊಳಗೊಂಡ ಕಾವ್ಯ ಸಂಕಲನ ‘ಮೇರಿ ಆವಾಜ್ ಸುನೋ’ ಇಂದಿಗೂ ಉತ್ತರ ಭಾರತದ ಯುವ ಸಮುದಾಯದ ಪಾಲಿನ ಕ್ರಾಂತಿ-ಕಾವ್ಯವಾಗಿದೆ. ಆ ಸಂಕಲನದಿಂದ ಉದ್ಧರಿಸದೇ ಉಳಿದ ಸಾಲುಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಲ್ಲಿ ಅದು ಜನಪ್ರಿಯ. ಈ ಸಂಕಲನದ ಔರತ್, ಮಕಾನ್, ಡೇರಾ, ಸಂಪ್, ಬಹುರೂಪಿ - ಕವಿಗಳಂತೂ ಮನೆಮಾತು.
ಕರ್ ಚಲೆ ಹಮ್ ಫಿದಾ ಜಾನ್‍ವತನ್ ಸಾಥಿಯೊಂ
ಅಬ ತುಮ್ಮಾರೆ ಹವಾಲೆ ವತನ್ ಸಾಥಿಯೊಂ

ಜಿಂದಾ ರಹನೆ ಕಿ ಮೌಸಮ್ ಬಹುತ ಹೈ ಮಗರ್
ಜಾನ್ ದೇನೆ ಕಿ ವಕ್ತ ರೋಜ್ ಆತಿ ನಹಿ
“ಪ್ರೀತಿ ಮತ್ತು ಸೌಂದರ್ಯಗಳ ಪ್ರಜ್ಞೆ ಇಲ್ಲದ ಸತ್ಯ ಎಷ್ಟು ಬರಡೊ, ತ್ಯಾಗ ಬಲಿದಾನಗಳ  ಜವಾಬ್ದಾರಿ ಇಲ್ಲದ ಯೌವ್ವನವೂ ಅಷ್ಟೇ ಅರ್ಥಹೀನ. ದೇಶಕ್ಕಾಗಿ, ಜನ್ಮಭೂಮಿಗಾಗಿ ಜೀವದಾನದ ಅವಕಾಶ ಮತ್ತೆ ಮತ್ತೆ ಬರಲಾರದು, ಹೀಗಾಗಿ ದೇಶಕ್ಕಾಗಿ ನನ್ನ ಪ್ರಾಣ ನೀಡಿ, ಅದನ್ನು ರಕ್ಷಿಸಿ ನಿಮ್ಮ ಕೈಗಿಟ್ಟು ಹೊರಟಿದ್ದೇನೆ. ದೇಶದ ಮುಂದಿನ ಭವಿಷ್ಯವನ್ನು ನಿಮ್ಮ ಕೈಯಲ್ಲಿ ಕೊಟ್ಟಿದ್ದೇನೆ ಗೆಳೆಯರೆ” ಎನ್ನುವ ಅವರ ಕಾವ್ಯ ಎಂದೋ ರಚನೆಯಾಗಿದ್ದರೂ, ಇಂದಿಗೂ ಅದು ನಮ್ಮೆಲ್ಲರ ಪಾಲಿನ ಅಮರ ಗೀತೆಯಾಗಿದೆ, ಪ್ರಜ್ಞೆಯಾಗಿದೆ. ಭಾರತದ ಪ್ರತಿ ಸ್ವತಂತ್ರದ ದಿನಾಚರಣೆಯೂ ಈ ಗೀತೆಯೊಂದಿಗೆ ಸಂಪೂರ್ಣ ಹಾಗೂ ಸಾರ್ಥಕ ಎನಿಸುತ್ತದೆ. ಪ್ರಜ್ಞೆಯನ್ನು ಕಾಡುವವನೇ ಪ್ರಜ್ಞಾವಂತ ಕವಿ ಎನ್ನುವುದಕ್ಕೆ ಸಾಕ್ಷಿ ಕೈಫಿ.
ಬುಜದಿಲ್ ಚಿತ್ರಕ್ಕಾಗಿ 1951 ರಲ್ಲಿ ಮೊದಲ ಚಿತ್ರಗೀತೆಯನ್ನು ಬರೆದ ಕೈಫಿ ಆನಂತರ ಶಹೀದ್ ಲತೀಪ್, ಯಹೂದಿ ಕಿ ಬೇಟಿ, ಈದ್-ಕಾ-ಚಾಂದ್, ಗರಮ್ ಹವಾ, ಕನ್ನೇಶ್ವರ ರಾಮ್, ಕಾಗಜ್-ಕೆ-ಫೂಲ್, ಹಕೀಕತ್, ಸಾಥ ಹಿಂದೂಸ್ಥಾನಿ, ಪಾಕೀಜಾ, ಬಾವರ್ಚಿ, ಶೋಲಾ ಔರ್ ಶಬನಮ್ ಹೀಗೆ ಸಾಲು ಸಾಲಾಗಿ ಸರ್ವಕಾಲಕ್ಕೂ ಸಲ್ಲುವ ಚಿತ್ರಗಳ ಗೀತೆಗಳನ್ನು ಕವಿ ಕೈಫಿ ರಚಿಸಿದರು.
 ಅಂದುಕೊಂಡಂತೆ, ಕೈಫಿಯಂಥ ಲಕ್ಷಾಂತರ ಕವಿಗಳ ಕನಸು ಮತ್ತು ಹೋರಾಟದ ಫಲವಾಗಿ ದೇಶ ಸ್ವತಂತ್ರವಾಯಿತು. ದುರಂತವೆಂದರೆ ಅದರ ವಿಭಜನೆಯೂ ಆಯಿತು. ಅಖಂಡ ಭಾರತದ ಕನಸು ಕಂಡಿದ್ದ ಅದೆಷ್ಟೋ ಲೇಖಕರಿಗೆ ಭ್ರಮನಿರಸನವಾಯಿತು. ರಕ್ತಮಯ ಭಾರತ ಮನುಷ್ಯನಲ್ಲಿಯ ರಾಕ್ಷಸೀ ಪ್ರವೃತ್ತಿಗೆ ಅಂದು ಸಾಕ್ಷಿಯಾಗಿತ್ತು. ಆ ಸಂದರ್ಭದ ಒಂದು ನೆನಪು -
ಮುಂಬೈನ ‘ಮಹಿಮಾ’ ಚೌಕದಲ್ಲಿ ಹಿಂದೂಗಳು ಕಾಲಿಟ್ಟರೆ ಕೊಲೆಯಾಗುತ್ತಾರೆ. ಹಾಗೆಯೆ ಮುಸ್ಲಿಂರು ಅದೇ ಬೊಂಬಾಯಿಯ ‘ಶಿವಾಜಿ ಪಾರ್ಕ್’ ಪ್ರದೇಶದಲ್ಲಿ ಕಾಲಿಟ್ಟರೆ ಕೊಲೆಯಾಗುತ್ತಾರೆ. ಇದು 1947 ರಲ್ಲಿ ಇದ್ದ ಬೊಂಬಾಯಿ ನಗರದೊಳಗಿನ ನೈಜ ಚಿತ್ರಣ. ಈ ವೇಳೆಯಲ್ಲಿ ಇಡೀ ನಗರ ಹಿಂದೂ-ಮುಂಬೈ ಹಾಗೂ ಮುಸ್ಲಿಂ-ಮುಂಬೈ ಎಂದು ವಿಭಜನೆಯಾಗಿತ್ತು. ವಾತಾವರಣವನ್ನು ತಿಳಿಗೊಳಿಸುವ ಸಲುವಾಗಿ ಅಬ್ಬಾಸ್ ಭಾರತೀಯ ಚಿತ್ರರಂಗ, ಸಾಹಿತ್ಯಕ್ಷೇತ್ರ, ಧಾರ್ಮಿಕ ಹಿನ್ನೆಲೆ ಹಾಗೂ ರಂಗಭೂಮಿಯ ಮಹಾನ್ ಮಾನವತಾವಾದಿಗಳನ್ನೆಲ್ಲ ಒಂದೆಡ ಸೇರಿಸಿ, ಸದ್ಭಾವನಾ ಯಾತ್ರೆಯನ್ನು ಪ್ರಾರಂಭಿಸಿದರು. ಇದರ ಮುಂಚೂಣಿಯಲ್ಲಿದ್ದ ಅನೇಕರಲ್ಲಿ ಕವಿ, ಸಾಮಾಜಿಕ ಚಿಂತಕ, ಐಕ್ಯತೆಯ ಕನಸುಗಾರ ಕೈಫಿ ಆಜ್ಮಿಯೂ ಒಬ್ಬರು.
ಭಾರತೀಯ ಉರ್ದು ಸಾಹಿತ್ಯ ಕ್ಷೇತ್ರದ ಅಲಿ ಸರ್ದಾರ್ ಝಫ್ರಿ, ಸಜ್ಜದ ಜಾಹಿರ್, ಸಾಹಿರ್ ಲುದಿಯಾನ್ವಿ ಹಾಗೂ ಮಜರೂಂ ಸುಲ್ತಾನಪುರಿ ಹಾಗೂ ಅಬ್ಬಾಸರ ವಾರಗೆಯವರಾದ ಕೈಫಿ ಆಜ್ಮಿ ಇವರೆಲ್ಲರಿಗಿಂತ ಧೋರಣೆಯಲ್ಲಿ ಹಾಗೂ ಅಭಿವ್ಯಕ್ತಿಯಲ್ಲಿ ಸ್ವಲ್ಪ ಭಿನ್ನ. ಈ ಕೈಫಿ ಕೆಂಡದ ಹಾಗೆ, ಕೈಯಲ್ಲಿ ಪೆನ್ನು ಹಿಡಿದರೆ ಓದುಗರ ನರಮಂಡಲದಲ್ಲಿ ವಿದ್ಯುತ್ ಸಂಚಾರ ಮಾಡಬಲ್ಲ ಸಾಲುಗಳೇ ಹುಟ್ಟಬೇಕು. ಕೈಫಿ ಬದುಕಿದ್ದೂ ಹಾಗೆಯೆ. ಜಾತಿಯನ್ನು ಬಂಡವಾಳವಾಗಿಸಿಕೊಂಡು ಅವರ ಬಳಿ ಯಾರೂ ಸುಳಿಯುವಂತಿರಲಿಲ್ಲ. ಅಪರೂಪದ ಕಮ್ಯುನಿಸ್ಟ್ ಹಾಗೂ ವಿಶಿಷ್ಟ ಪ್ರಗತಿಶೀಲ ಕವಿ.
ಅಂದಹಾಗೆ, 1997 ಅಗಸ್ಟ್ 12 ರ The Times of India ದಲ್ಲಿ ಕೈಫಿ ಆಜ್ಮಿಯವರ ಒಂದು ವೈಚಾರಿಕ ಸಂದರ್ಶನವನ್ನು ಓದಿದ್ದೆ. ಅದರಲ್ಲಿಯ ಅವರ ಎರಡು ಪದ್ಯ ಅಥವಾ ಹೇಳಿಕೆ, ಏನಾದರೂ ಅಂದುಕೊಳ್ಳಿ, ಈಗಲೂ ಪ್ರಸ್ತುತ. ಅವು ಹಿಂದೂ-ಮುಸ್ಲಿಂ ಎಂಬ ಈ ಸಾಮಾಜಿಕ ವಿಭಜನೆಯನ್ನು ವಿರೋಧಿಸುತ್ತ ಅವರು ಬರೆದ ಸಾಲುಗಳು. ಅವು ನನಗೆ ಬಹಳಷ್ಟು ಇಷ್ಟವಾದ ಸಾಲುಗಳು ಎನ್ನುವುದರೊಂದಿಗೆ ಈ ಸಾಲುಗಳು ನಿಮಗೆ ಕೈಫಿ ಆಜ್ಮಿಯ ವ್ಯಕ್ತಿತ್ವ ಹಾಗೂ ಕಾವ್ಯದ ದರ್ಶನವನ್ನು ಮಾಡಿಸಬಲ್ಲವು ಎಂದು ದಾಖಲಿಸುತ್ತಿದ್ದೇನೆ.
ಸುನಾ ಹೈ, ಇನ್ಸಾನ್ ಪೆಹಲಾ ಬಂದರ ಥಾ
ಅಬ ತರಕ್ಕಿ ಕರತೆ ಕರತೆ ಕುತ್ತಾ ಹೋಗಯಾ ಹೈ, ಕುತ್ತಾ!
ಇನ್ನೊಂದು ಅವರ ಹೇಳಿಕೆ - “all our progress is stopped over one cow and one masjid”
Mazaj
 ಕ್ಯಾಲೆಂಡರಿನ ಮುಖದ ಮೇಲೆ ವರ್ಷ, ತಿಂಗಳುಗಳು ಬದಲಾಗುತ್ತಲೇ ಹೋಗುತ್ತವೆ. ಸ್ವಾತಂತ್ರೋತ್ಸವಗಳು ನಡೆಯುತ್ತಲೇ ಇರುತ್ತವೆ. ಆದರೆ ಬದಲಾಗದ ಇಲ್ಲಿಯ ಮನುಷ್ಯ ಮತ್ತೆ ಮತ್ತೆ ಏಳೆಂಟು ದಶಕಗಳ ನಂತರವೂ ಕೈಫಿ ಹೇಳಿದ ಮೇಲಿನ ಸಾಲುಗಳನ್ನೇ ತನ್ನ ಮಿತಿಯಾಗಿಸಿಕೊಂಡು, ರೆಷ್ಮೆಯ ಹುಳದಂತೆ ಸಾಯುತ್ತಿರುತ್ತಾನೆ. ಇದಕ್ಕಿಂತಲೂ ವ್ಯಂಗ್ಯಬೇಕೆ? ದುರಂತದ ಬದುಕುಬೇಕೆ?
ಕೈಫಿ ತುಂಬಾ ಪ್ರೀತಿಸಿದ, ಬದುಕಿದ ನಗರ ಮುಂಬೈ. ಹೀಗೆ ಮುಂಬೈಯನ್ನು ಪ್ರೀತಿಸಿದವರಲ್ಲಿ ನೌಷಾದ್ ಅಲಿ, ಶಕೀಲ್ ಬದೌನಿ, ಅಖ್ತರ್-ಉಲ್-ಇಮಾನ್, ಕೆ. ಅಬ್ಬಾಸ್ ಅತ್ಯಂತ ಮಹತ್ವದವರು. ಕೈಫಿ ಮುಂಬೈಯನ್ನು ಪ್ರೀತಿಸುವುದರಲ್ಲಿ ಇವರಿಗೂ ಒಂದು ಹೆಜ್ಜೆ ಮುಂದೆ. ಕಡು ಯೌವ್ವನದಲ್ಲಿ ಪೆನ್ನನ್ನೆ ಗನ್ನಿನಂತೆ ಹಿಡಿದುಕೊಂಡು ಲಖನೌದಿಂದ ಇಲ್ಲಿಗೆ ಬಂದ ಕೈಫಿಗೆ ಸಮಕಾಲೀನ ಕವಿ ಗೆಳೆಯರ ದೊಡ್ಡ ಸಾಂಗತ್ಯವಿತ್ತು. ರಾಜೇಂದ್ರ ಕೃಷ್ಣ, ಜಗನ್ನಾಥ ಆಝಾದ್, ಸಾಹಿರ್ ಲುಧಿಯಾನ್ವಿ, ಮಜಾಜ್, ಅಲಿ ಸರ್ದಾರ್ ಜಫ್ರಿ, ಮಕ್ದುಮ್ ಮೊಹಿದ್ದಿನ್, ರೈಸ್ ಅಮರೋಹಿ - ಹೀಗೆ ಈ ಕೈಫಿ ಎಂಬ ಕಾವ್ಯ ಬಳ್ಳಿಗೆ ಹತ್ತಾರು ಸ್ನೇಹದ ಫಲಗಳು. ಇವರೆಲ್ಲ ಬಹುಪಾಲು ಕಮ್ಯುನಿಸ್ಟ್ ಚಿಂತನೆ ಹಾಗೂ ಹೋರಾಟಗಳ ಕಾರಣಕ್ಕಾಗಿಯೇ ಕೈಫಿಗೆ ಹತ್ತಿರವಾದವರು.
ಸಿನಿಮಾ, ಮುಷಾಯಿರಾ ಮತ್ತು ಮುಂಬೈ ಎಂದರೆ ಕೈಫಿ ಎನ್ನುವಷ್ಟು ಪರಸ್ಪರ ಸಂಬಂಧ. ಇಂಥ ಮುಂಬೈಯನ್ನು ಕುರಿತು ಕೈಫಿ ಒಂದೆಡೆ ಬರೆಯುತ್ತಾರೆ –
ತುಮ್ ಖುದಾ ಹೋ ಯಾ ಖುದಾ ಕೆ ಬೇಟೆ ಹೊ
ಜೋಭಿ ಹೋ ಮುಝಕೊ ಅಚ್ಚೆ ಲಗತೆ ಹೊ ಮುಝಕೊ ಸಚ್ಚೆ ಲಗತೆ ಹೊ
ಅದೊಂದು ಕಾಲ, ಈ ದೇಶ ಆಲೋಚನೆಗಳಿಂದ ಆಳಲ್ಪಟ್ಟಿತ್ತು. ಕೈಫಿ ಆಲೋಚನೆಗಳ ಆ ಕಾಲ ಘಟ್ಟದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಂಡವರು. ಎಸ್.ಡಿ ಬರ್ಮನ್‍ರ ‘ಶಹೀದ್’ ಚಿತ್ರಕ್ಕೆ ಕೆಲವು ಗೀತೆ, ಬಿಮಲ್ ರಾಯ್‍ರ ಕಥೆ ಆಧಾರಿತ ಅಬ್ಬಾಸ್‍ರ ಸಿನಿಮಾಕ್ಕೆ ಹಾಗೂ ಶಾಮ್ ಬೆನಗಲ್‍ರ ‘ಮಂಥನ್’ ಚಿತ್ರಕ್ಕೆ ಸಂಭಾಷಣೆ, ಚೇತನಾ ಆನಂದರ ‘ಹೀರ್ ರಾಂಜಾ’ಕ್ಕೆ ಒಂದಷ್ಟು ಗಝಲ್, ಎಂ.ಎಸ್ ಸತ್ಯು ಅವರ ‘ಗರಮ್ ಹವಾ’ ಚಿತ್ರಕ್ಕೆ ಕೆಲವು ಬರಹ ಮಾಡುತ್ತಾ ಹೋದರು ಕೈಫಿ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಂತ್ಯ ಸಂಸ್ಕಾರವನ್ನಾಧರಿಸಿಯೂ ಕೈಫಿಯ ಒಂದು ಕವಿತೆಯನ್ನು ಚಿತ್ರೀಕರಿಸಲಾಯಿತು. ಗುರುದತ್ತರ ‘ಕಾಗಜ ಕೆ ಫೂಲ್’ ಚಿತ್ರದ ಕೈಫಿಯ ಹಾಡುಗಳನ್ನು ಯಾರೂ, ಎಂದೂ ಮರೆಯಲು ಸಾಧ್ಯವಿಲ್ಲ.
Kaifiyat Express Train
ಕೈಫಿ ಕೊನೆ ಕೊನೆಗೆ ಆತ್ಮಕಥೆ ಬರೆದರು. ಶೀರ್ಷಿಕೆ ಕೇಳಿ ನಗಬೇಡಿ. ಕೈಫಿ ಇದ್ದದ್ದೇ ಹಾಗೆ. ನೇರ ಹಾಗೂ ದಿಟ್ಟ. ಅವರ ಆತ್ಮಕಥೆ ‘ಆಜ ಕೆ ಪ್ರಸಿದ್ಧ್ ಶಾಯರ್: ಕೈಫಿ ಆಜ್ಮಿ’. ಹೀಗೆ ತಮ್ಮನ್ನೂ ಒಳಗೊಂಡು ಎಲ್ಲವನ್ನೂ ಟೀಕಿಸಿದ, ಚಿಂತಿಸಿದ ಕೈಫಿಗೆ ವಾಸ್ತವದ ಪ್ರಜ್ಞೆ ಇತ್ತು. ಪ್ರಸಿದ್ಧಿ ಒಂದು ಕ್ಷಣದ ಮೋಡ. ಈಗ ಇಲ್ಲಿದ್ದು ಮತ್ತೊಂದು ಕ್ಷಣ ಮರೆಯಾಗುವ ಅದನ್ನು ನೆಚ್ಚಿಕೊಂಡು ಬೆಳೆದ ಕವಿಯಲ್ಲ ನಾನು ಎನ್ನುವುದನ್ನು ಸೂಕ್ಷ್ಮವಾಗಿ ಶಿರ್ಷಿಕೆಯಲ್ಲಿ ಸೂಚಿಸಿದ್ದಾರೆ.
ಇಂಥ ಕೈಫಿ, 2002ನೇ ಇಸ್ವಿಯ ಮೇ 10 ರಂದು ತಮ್ಮ 83ನೇ ವಯಸ್ಸಿನಲ್ಲಿ ತೀರಿಕೊಂಡರು. ಅವರಿಗೆ ನೀಡಲಾದ ಪದ್ಮಶ್ರೀ, ಸೊವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಲೋಟಸ್ ಅವಾರ್ಡ್ ಆಫ್ ಆಫ್ರೋ ಏಷಿಯನ್ ರೈಟರ್ಸ್, ಭಾರತ ಸರ್ಕಾರದ ಮಿಲಿಯನಿಯಮ್ ಅವಾರ್ಡ್, ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಎಲ್ಲ ಇಲ್ಲಿಯೇ ಉಳಿದುಕೊಂಡಿವೆ. ಎಲ್ಲ ಸ್ಮರಣಿಕೆಗಳು ಇಲ್ಲಿಯೇ ಉಳಿದುಕೊಳ್ಳುತ್ತವೆ, ಹಿಂದುಳಿದವರ ಹೆಣಭಾರವಾಗುತ್ತವೆ, ಸ್ಮರಣೆ ಮಾತ್ರ ನಿರಂತರವಾಗುತ್ತದೆ.
ಕೈಫಿಯ ಸ್ಮರಣೆಗಾಗಿ ಅವರ ಹುಟ್ಟೂರಾದ ಅಜಮ್‍ಘರ್ ಹಾಗೂ ದೆಹಲಿಯ ಮಧ್ಯ ‘ಕೈಫಿಯತ್ ಎಕ್ಸ್‍ಪ್ರೆಸ್’ ಟ್ರೇನ್ ಈಗಲೂ ನಿತ್ಯ ಓಡುತ್ತಲೇ ಇದೆ. ಹೈದರಾಬಾದಿನ ಗಲ್ಲಿಯೊಂದರ ಮುಖ್ಯ ಬೀದಿಗೆ ‘ಕೈಫಿ ಆಜ್ಮಿ ರೋಡ್’ ಎಂದೇ ಹೆಸರಿಸಲಾಗಿದೆ. ಭಾರತವೆನ್ನುವ ಪ್ರಪಂಚದ ಸಾಕಷ್ಟು ಗೌರವಗಳು ಕೈಫಿ ಎನ್ನುವ ಕವಿಗೆ ಸಂದಿವೆ. ಆದರೆ ಅವರು ಕಂಡ ಕನಸುಗಳು ಮಾತ್ರ ಭಾರತೀಯರ ಬದುಕಿಗೆ ಇಂದಿಗೂ ದಕ್ಕದೆ ಉಳಿದುಕೊಂಡಿವೆ.
ಇದು ದುರಂತವೋ, ಜಾಣ್ಮೆಯೋ ಕಾಲವೇ ಉತ್ತರಿಸಬೇಕು.
   

Saturday, May 30, 2020

ಹಣತೆ ಹಚ್ಚಿಡುವಾಗ


ಸತ್ತವರ ಮನೆಯೊಳಗೆ
ಎಷ್ಟೊಂದು ಸಾಯುತ್ತಾರೆ ಜನರು?
ಸತ್ತ ಮನೆಯಲ್ಲೂ ಸಾಯುತ್ತಾರೆ.
ನಿತ್ಯ ಅತ್ತರೂ ಬಿತ್ತರಗೊಳ್ಳುವ
ಸತ್ತ ಸುದ್ದಿಗಳಲ್ಲಿ, ಇಲ್ಲಿ
ಮತ್ತೆ ಸಾಯುವವರದೇ ಮಾತು
 
ನಿದ್ದೆ ತಪ್ಪುವುದಿಲ್ಲ ಈ ಸುದ್ದಿಗೆ
ನಿನ್ನೆ ಇದ್ದವರು,
ಇಂದು ನಿದ್ದೆ ಹೋದವರು
ಈ ಕ್ಷಣದ ಮೊದಲಷ್ಟೇ
ಮುತ್ತು ಹಸಿ ತುಟಿಗೊರಸಿದವರು
ತುತ್ತು-ಬಿಸಿಬಾಳ,
ಒಸಗೆ ಹೊಸ್ತಿಲಾಚೆ ಹೋದವರು
ಕಟ್ಟಿಟ್ಟ ಗಂಟುಗಳ
ನಂಟು ಕಳೆದುಕೊಂಡವರು
ಅಂಟಿಕೊಂಡ ಕನಸುಗಳ
ತೂರಿಕೊಂಡವರು
ಹೆಮ್ಮರದ ಹಣ್ಣೆಲೆಯಂತೆ
ಈಗಷ್ಟೇ ಉದುರಿ ಮಣ್ಣಾಗುವುದ ನೋಡಿ
ವಾರ್ತಾ ಲಾಪವ ಹಾಡಿ
ಎಣ್ಣೆ ಕಾಣದ ಬದುಕಿನ
ಮೇಲೊಂದು ಚಪ್ಪಡಿ ಹಾಸಿ
ಕಣ್ಣು ಕೂಡಿಸಿ ಎಂದೂ ಮಾತಾಡದವರು
ಇಂದು
ನೆನಪಿನ ಹಣತೆ ಹಚ್ಚಿಡುವಾಗ
ಹುಚ್ಚು ಮೋಹದ ಮಳೆಯೊಳಗೆ
ಜಗದ ಸಾವಿನ ಮರ್ಮ
ಸಿಡಿಲ ಗೆರೆಯಂತೆ
ಒಡಲಿಗೆ ಅರ್ಥವಾಗುತ್ತದೆ
 
ಅರಿವು ಆತ್ಮಕ್ಕೆ ಮುಟ್ಟಿ
ಗಟ್ಟಿ ಪುಟವೊಂದರ ಮೇಲೆ
ವಿವರ ಬರೆದಿಡಬೇಕೆನ್ನುವುದರಲ್ಲಿ
ಮತ್ತ್ಯಾರೋ ಸಾಯುತ್ತಾರೆ

ಬಿದ್ದ ಹೆಣಕ್ಕೆ ಹೆಗಲಾದ ನಾನು
ವಿವರಗಳಿಲ್ಲ ಒಕ್ಕಣಿಕೆಗೆ
ಅಡಿ ಟಿಪ್ಪಣೆ ಬರೆದು
ಕಡೆಗೀಲಾಗುತ್ತೇನೆ ಸಾವಿಗೆ
ಬಂಡಿ ಮುಂದೊರೆಯುತ್ತದೆ
ದಂಡಿ ದಂಡಿ ಸಾವುಗಳ ಹೊತ್ತುಕೊಂಡು

Thursday, May 21, 2020

ಹಂಗಿಲ್ಲ ಹೂವಿಗೆ

  ರೋಮ್ ನಗರದ ಪ್ರೊಟಸ್ಟಂಟ್ ಸೆಮೆಟ್ರಿಯ ಅತ್ಯಂತ ಸುಂದರ ಸ್ಥಳದಲ್ಲಿ ಕೀಟ್ಸ್ನ ಸಮಾಧಿಯಾಯಿತು. 
        ಸದಾ ಹಸಿರಾಗಿರುವ, ಬೆಟ್ಟದ ಇಳಿಜಾರಿನಲ್ಲಿರುವ ಆತನ ಸಮಾಧಿ ಈಗ ಪ್ರಪಂಚದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದು. ಬ್ರಿಟನ್ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಮರು ಸೃಷ್ಟಿಸಲಾಗದ, ದೇವ ಸೃಷ್ಟಿಯದು. ಸನಾತನ ಸಂತರ ನೆಲವದು.
ಕೀಟ್ಸ್ ಜೀವಂತವಾಗಿದ್ದಾಗ, ವಾಯುವಿಹಾರದಲ್ಲಿ ಒಮ್ಮೆ ತನ್ನ ಕೊನೆಗಾಲದ ಗೆಳೆಯ ಸೇವರ್ನ್‍ನಿಗೆ ಹೇಳಿದ್ದನಂತೆ. “ನಾನು ಅತ್ಯಂತ ತೀವ್ರವಾದ ಆನಂದವನ್ನು ಅನುಭವಿಸುವುದು ಅರಳುವ ಹೂಗಳನ್ನು ನೋಡುವುದರಲ್ಲಿ. ಹೀಗಾಗಿ ನನಗೊಂದು ಆಶೆ ಸೇವರ್ನ್. ಮುಂದೊಮ್ಮೆ ನಾನು ಶಾಶ್ವತವಾಗಿ ಮಲಗಿದಲ್ಲಿ ಹೂಗಳು ಅರಳಬೇಕು.” ಅಚ್ಚರಿ ಎಂದರೆ ಇದು. ಈ ಮಾತು ಸತ್ಯವಾಯಿತು. ಅವನ ಕನಸು ಕೈಗೂಡಿತು.
        ಈಗ ಕೀಟ್ಸ್ನ ಸಮಾಧಿಯ ಮೇಲೆ ಹಾಗೂ ಅದರ ಸುತ್ತಲು ಹೂಗಳು ಅರಳಲು ಯಾರೂ ನೀರೆರೆದು ಕಾಯಬೇಕಿಲ್ಲ. ನಿತ್ಯ ಹರಿದ್ವರ್ಣದಿಂದ ಕೂಡಿದ ಅವನ ಸಮಾಧಿಯ ಸ್ಥಳದಲ್ಲಿ ನೇರಳೆ, ಡೆಫೋಡಿಲ್, ಗುಲಾಬಿ ಹಾಗೂ ಡೇಜಿ ಹೂಗಳು ನಿತ್ಯ ಅರಳುತ್ತವೆ ರಾಶಿ ರಾಶಿಯಾಗಿ. ಇಡೀ ಛಳಿಗಾಲ ಅವನ ಸಮಾಧಿಯ ಸುತ್ತ ಸುರಿವ ಈ ಹೂಗಳ ನೋಡಲು ಎರಡು ಕಣ್ಣುಗಳು ಸಾಲವು. ಈ ಸ್ಥಳದ ಕುರಿತು ಮುಂದೊಮ್ಮೆ ಕವಿ ಗೆಳೆಯ ಶೆಲ್ಲಿ ಬರೆಯುತ್ತಾನೆ, making one in love with death, to think that one should be buried in so sweet a place.’
   ಕೀಟ್ಸ್ನ ನಿಧನದ ನಂತರ ಹತ್ತು ದಿನಗಳವರೆಗೆ ದಾನ-ಧರ್ಮದ ಎಲ್ಲ ಕ್ರಿಯಾವಿಧಿಗಳನ್ನು ಮುಗಿಸಿ ಸೇವರ್ನ್ ತನ್ನ ಗೆಳೆಯ ಮಿಸ್ಟರ್ ಹ್ಯಾಸ್ಲಮ್‍ಗೆ ಈ ಕುರಿತು ತಿಳಿಸುತ್ತಾನೆ. – ‘ಗೆಳೆಯನೆ, ಈಗ ಕೀಟ್ಸ್ನ ಎಲ್ಲ ಕೋರಿಕೆಗಳನ್ನು ಈಡೇರಿಸಲಾಗಿದೆ. ಆತ ಪ್ರಪಂಚದ ಅತ್ಯಂತ ಪ್ರಶಾಂತ ಹೂರಾಶಿಯ ಸ್ಥಳದಲ್ಲಿದ್ದಾನೆ. ಕೆಲವು ದಿನಗಳ ಹಿಂದೆ ಒಬ್ಬನೇ ನಾನು ಅವನ ಸಮಾಧಿಯ ಸುತ್ತ ಸುತ್ತಾಡಿ ಬಂದೆ. ಸುತ್ತಲೂ ಅರಳಿದ ಕೋಟಿ ಕೋಟಿ ಡೇಜಿ ಹೂಗಳ ನೋಡಿ ಎದೆ ತುಂಬಿ ಬಂದಿತು. ರೋಮ್‍ನ ಅತ್ಯಂತ ನಿತಾಂತ ಸ್ಥಳವಿದು. ಇಂಥ ಒಂದು ಸ್ಥಳ ಇಂಗ್ಲೇಂಡ್‍ನಲ್ಲಿ ಯಾವ ಕಾಲಕ್ಕೂ ಸಾಧ್ಯವಿಲ್ಲ.’ 
         ಹೂ ಮನಸ್ಸಿನ ಈ ಗೆಳೆಯನ ಸಮಾಧಿಯ ಸುತ್ತ ಇಷ್ಟೊಂದು ಬಗೆ ಬಗೆಯ ಹೂಗಳಿರುವುದನ್ನು ನೋಡುವುದೇ ಚೆಂದ. ಎದೆ ಭಾರವಾಗಿ ಇಲ್ಲಿಗೆ ಬರುವ ನಾನು ಹೂಗಳೊಂದಿಗೆ ಹಗುರವಾಗುತ್ತೇನೆ. ಹೂಗಳಂತೆ ಒಂದೊಮ್ಮೆ ನನ್ನೊಂದಿಗಿದ್ದ, ನನ್ನ ತೆಕ್ಕೆಯ ಹೂವಾಗಿದ್ದ ಕೀಟ್ಸ್ನ ಜೀವಿತಾವಧಿಯ ಶಾರೀರಿಕ ಪೀಡೆ, ಮಾನಸಿಕ ಕ್ಷೋಭೆ, ಆ ರೋಗ, ಹಿಂಸೆ-ಅಪಮಾನ ಎಲ್ಲ ನೆನಪಾದರೆ ಇವೆಲ್ಲವುಗಳಿಂದ ಮುಕ್ತನಾಗಿ ಕೀಟ್ಸ್ ಈಗ ಈ ಹೂಗಳ ಮಧ್ಯ ಎಷ್ಟು ಸಮಾಧಾನದಿಂದಿರಬಹುದು ಎನಿಸುತ್ತದೆ.
  ಮೊದಲಿನಿಂದಲೂ ಅಷ್ಟೆ. ಹೂಗಳೆಂದರೆ ಹುಚ್ಚು ಕೀಟ್ಸ್ನಿಗೆ. ತಂಗಾಳಿಯಲ್ಲಿ, ಎಲ್ಲೊ ಬೆಟ್ಟದ ತುದಿಯಲ್ಲಿ ಮೇಯುತ್ತಿರುವ ಕುರಿ-ದನಕರುಗಳ ಗಂಟೆಯ ನಾದದೊಂದಿಗೆ ಮೆಲ್ಲಗೆ ನಲುಗುವ ಈ ಡೇಜಿ ಹೂಗಳನ್ನು ನೋಡಿದರೆ ಹೇಳಬೇಕು ಎನಿಸುತ್ತದೆ – ‘ಹೀಗೆಯೇ, ನಿಮ್ಮಂತೆಯೆ ಇದ್ದ ನಮ್ಮ ಕೀಟ್ಸ್. ಹೀಗಾಗಿ ಈ ತನ್ನ ಸಮಾಧಿಯಿಂದ ಆತ ನಿಮ್ಮನ್ನು ಎದೆಗೇರಿಸಿಕೊಂಡ. ಆತ ಇಲ್ಲಿರುವುದಕ್ಕಾಗಿ ನಾನು ದೇವರಿಗೆ ಋಣಿಯಾಗಿದ್ದೇನೆ.’
  ಇದಾದ ಕೇವಲ ಒಂದು ವರ್ಷ ಐದು ತಿಂಗಳ ಅವಧಿಯ ನಂತರ, ಸ್ವಲ್ಪ ಎತ್ತರದಲ್ಲಿ ಒಂದು ಸಮಾಧಿ ಕಲ್ಲನ್ನು ನೆಟ್ಟು ಅದರ ಮೇಲೆ ‘ಪ್ರಪಂಚದ ಅತ್ಯಂತ ಭಾವೋದ್ರಿಕ್ತ ಕವಿಯ ಹೃದಯ ಇಲ್ಲಿ ವಿರಮಿಸಿದೆ’ ಎಂದು ಕೆತ್ತಿಸಲಾಯಿತು, ಅದು ಕೀಟ್ಸ್ನ ಕವಿಗೆಳೆಯ ಪಿ.ಬಿ. ಶೆಲ್ಲಿಯದ್ದು. ಕಾವ್ಯ ಚಿಂತನೆಯಲ್ಲಿ ಬದುಕಿದಾಗ ಬೇರೆಯಾಗಿದ್ದ ಇಬ್ಬರೂ ಮೃತ್ಯುವಿನಲ್ಲಿ ಒಂದೇ ಕಡೆ ಬೆರೆತುಬಿಟ್ಟರು ಹೂ ಗಂಧದಲ್ಲಿ.
  ಶೆಲ್ಲಿ ಕೇವಲ 29 ವರ್ಷ ಬದುಕಿದ್ದ ಇಂಗ್ಲೀಷ ರೋಮ್ಯಾಂಟಿಕ್ ಚಳುವಳಿಯ ಎರಡನೇ ತಲೆಮಾರಿನ ಮಹತ್ವದ ಕವಿ. ಹಲವು ತಾತ್ವಿಕ ಭಿನ್ನತೆಗಳ ಮಧ್ಯದಲ್ಲೂ ಕೀಟ್ಸ್ನ ಆತ್ಮೀಯ ಗೆಳೆಯರಲ್ಲಿ ಒಬ್ಬನಾದವ. ಕೀಟ್ಸ್ನ ನಿಧನದ ನಂತರ ಅವನ ಕುರಿತು ‘ಎಡೋನಿಸ್’ ಎಂಬ ಶೋಕ ಕಾವ್ಯ ಬರೆದು ಕೀಟ್ಸ್ನ ಕಾವ್ಯ ಪ್ರತಿಭೆಯನ್ನು ಜಗತ್ತಿಗೆ ಸಾರಿ ಹೇಳಿದವ. ಇದನ್ನು the incomparable tribute of genius to genius, ಎಂದು ಪರಿಗಣಿಸಲಾಗಿದೆ. 
          ನಿಸ್ಸಂಶಯವಾಗಿಯೂ ಮಾನವ ಕಲ್ಪನೆಯ, ಕಾವ್ಯದ ಇತಿಹಾಸದಲ್ಲಿ ಕೀಟ್ಸ್ ಹಾಗೂ ಶೆಲ್ಲಿ ಅಸಾಧಾರಣ ಸಾಧಕರೆ. ಆದರೆ ಮಗುವಿನ ಮುಗ್ಧತೆಯ, ಹೂವಿನ ಸೂಕ್ಷ್ಮತೆಯ ಕೀಟ್ಸ್ನೇ ಭಿನ್ನ-ಅನ್ಯ ಮತ್ತು ಅನುಪಮ.