Total Pageviews

Tuesday, November 10, 2020

ಬಹುರೂಪಿಯ ಬದುಕಿನ ಪಾಠಗಳು

 ಮನುಷ್ಯನ ಕುರಿತು ಹಿಗೊಂದು ಚಿಂತನೆ -

“ಬಹಳ ಅದ್ಭುತವಾಗಿದ್ದಾನೆ ‘ಮನುಷ್ಯ’ ಪ್ರತಿಯೊಬ್ಬನಲ್ಲೂ ಒಳಿತಿನ ಮಹಾಗಣಿ ಇದೆ. ಪ್ರಯತ್ನದ ಊರ್ಜೆ ಇದೆ. ಆಧ್ಯಾತ್ಮದ ಶುಭ್ರ ನೊರೆ ಇದೆ. ಇವುಗಳ ಅರಿವಿನಿಂದ ಪ್ರಪಂಚದ ಕಷ್ಟಾತೀಕಷ್ಟದ ಸಮಸ್ಯಗಳನ್ನೆದುರಿಸುವ ಕ್ಷಮತೆಯನ್ನು ಆತ ಸಾಧಿಸಿದ್ದಾನೆ. ಆದರೆ ಮನುಷ್ಯ ಗಮನಿಸಲೇಬೇಕಾದ ಸಂಗತಿಯೊಂದು ಇಲ್ಲಿದೆ ಎಂದು ನನಗನ್ನಿಸಿದೆ. ಆತನಿಗೆ ತನ್ನ ತಪ್ಪುಗಳ ಅರಿವಿರಬೇಕು ಮತ್ತು ಅವುಗಳ ಕುರಿತು ನಿರ್ಮೋಹಿಯಾಗಬೇಕು. ಬಹುತೇಕ ನಾನು ಈ ದಾರಿಯಲ್ಲಿದ್ದೇನೆ.” ಹೀಗೆ ಹೇಳಿದವನು ಹದಿನೆಂಟನೇ ಶತಮಾನದ ಯೂರೋಪಿನ ರಮ್ಯ ಕಾವ್ಯದ ಮಹತ್ವದ ಕವಿ ಜಾನ್ ಕೀಟ್ಸ್. ಈ ಚಿಂತನೆಯ ಹಿನ್ನೆಲೆಯಲ್ಲಿ ನಾನು ಲೇಖಕ ಮಿತ್ರ ರವೀಂದ್ರನಾಥ ಸಿರಿವರ ಅವರ ‘ತೋಚಿದ್ದು-ಗೀಚಿದ್ದು’ ಕೃತಿಯನ್ನು ಹಾಗೂ ಅವರ ಒಟ್ಟು ಪ್ರಯೋಗಶೀಲತೆಯನ್ನು ಓದುವ ಪ್ರಯತ್ನವನ್ನು ಮಾಡಿದ್ದೇನೆ.

ಸುಮಾರು ಅರ್ಧ ದಶಕದ ಹಿಂದಿನ ಮಾತು, ಅನಿರೀಕ್ಷಿತವಾಗಿ ಬೆಂಗಳೂರಿಗನಾದ ನನಗೆ ಅಪರೂಪದವರಂತೆ ಸಿಕ್ಕವರು ಗೆಳೆಯ ರವೀಂದ್ರನಾಥ ಸಿರಿವರ. ಆದರೆ ಅವರು ಅಪರಿಚಿತರಾಗಿ ಉಳಿಯಲಿಲ್ಲ. ಯಾರನ್ನೂ ಸೆಳೆಯುವ ಚುಂಬಕ ಶಕ್ತಿ ಅವರ ವ್ಯಕ್ತಿತ್ವದಲ್ಲಿದೆ. ಅದು ಮನುಷ್ಯಪರ ಕಾಳಜಿಗಳಿಂದಾಗಿ ಅವರಿಗೆ ದಕ್ಕಿದೆ. ಮನುಷ್ಯನನ್ನು ಮಹಾಗಣಿಯಾಗಿ ಕಾಣದವನು ಮನುಷ್ಯರನ್ನು ಸೆಳೆಯಲು ಸಾಧ್ಯವಿಲ್ಲ.

ಬದುಕಿನ ಎಂಥ ಸಂದರ್ಭದಲ್ಲಿಯೂ ಕಾರ್ಡ್ ಕೊಟ್ಟು ಯಾರನ್ನೂ ಭೇಟಿಯಾದ ಅನುಭವಗಳಿಲ್ಲ ನನಗೆ. ನಿಮಗೆಲ್ಲ ಗೊತ್ತಿರುವಂತೆ ಪುಸ್ತಕಗಳೆ ಪ್ರಪಂಚಕ್ಕೆ ನಾನು ಸಾಧಿಸಿಕೊಂಡ ಸಂಪರ್ಕ ಸೇತುವೆಗಳಾದುದರಿಂದ, ಸನ್ಮಿತ್ರ ಸಿರಿವರ ಕೂಡ ನನ್ನ ಹತ್ತಿರವಾದುದು ಪುಸ್ತಕ ಕಾರಣಕ್ಕಾಗಿಯೆ. ಆರಂಭದಲ್ಲಿ ಅವರು ಪ್ರಕಾಶಕರು, ನಾನೊಬ್ಬ ಲೇಖಕ. ಆದರೆ ಈಗ ಹಾಗಲ್ಲ, ನಾನು ಅವರ ಅಳಿಯ-ಗೆಳೆಯ, ಅವರು ನನ್ನ ಏಕವಚನದ ಮಾವ. ಒಟ್ಟಾರೆ ನಾವೀಗ ಕುಲವಿಲ್ಲದ ಕುಲಸ್ಥರ ಕಾವ್ಯ ಕರುಳ ಬಳ್ಳಿಗಳು. ಇದೆಲ್ಲದಕ್ಕೆ ಕಾರಣವಿಷ್ಟೆ, ಕನ್ನಡ-ಕರ್ನಾಟಕವೆಂಬ ಜಗದ ಸಂಕಟದೊಳಗೆ ಸಕ್ಕರೆಯ ಬೊಂಬೆಯಾಗಿ ಸೇರಿಹೋದ ರವೀಂದ್ರನಾಥ ಸಿರಿವರ ಬರೀ ಓರ್ವ ಪ್ರಕಾಶಕರಷ್ಟೇ ಅಲ್ಲ, ಅದರಾಚೆ, ಅದರೀಚೆ, ವೈವಿದ್ಯಮಯ ಜೀವನ ಅನುಭವಗಳ, ಸಂಘರ್ಷ-ಸಮಾವೇಶಗಳ, ಹೋರಾಟ-ಸಮಾವಿಷ್ಠಗಳ, ಸಿನಿಮಾ-ಸಂಸ್ಕøತಿ, ಸಮಾಜ-ಪ್ರಕೃತಿ ಹೀಗೆ- ಹಲವು ಮುಖಿ ಅಭಿವ್ಯಕ್ತಿ ಸಾಧ್ಯತೆಗಳನ್ನು ಸಾಧಿಸಿ ತೋರಿಸಿದ ಸಭ್ಯಸ್ಥ-ಸದಾಶಯಗಳ ಮನುಷ್ಯ.

ಅಡಿಸನ್ ಇಂಗ್ಲೀಷ ಗದ್ಯಸಾಹಿತ್ಯದ ದಿಗ್ಗಜರಲ್ಲಿ ಒಬ್ಬ. ಒಮ್ಮೆ ವಿಮರ್ಶಕರೊಬ್ಬರು ‘ಅದ್ಯಾವ ಮಹಾ ಸಾಧನೆಗಾಗಿ ಸಾರಸ್ವತ ಪ್ರಪಂಚ ನಿನ್ನನ್ನು ಸ್ಮರಿಸಿಕೊಳ್ಳಬೇಕು?’ ಎಂದು ಮೂದಲಿಸಿದರು. ತಾಳ್ಮೆಗೆಡದ ಅಡಿಸನ್ ಅಷ್ಟೇ ಪ್ರಸನ್ನ ಚಿತ್ತನಾಗಿ ಹೇಳಿದ, ‘ಖಂಡಿತ ಗೆಳೆಯರೆ, ನಿಮ್ಮ ಪ್ರಶ್ನೆ ಯೋಗ್ಯವಾದುದೆ. ನನಗೆ ಸಾಕ್ರೆಟಿಸ್‍ನಂತೆ ಸ್ವರ್ಗದಲ್ಲಿದ್ದ ಫಿಲಾಸಾಫಿಯನ್ನು ಜನಸಾಮಾನ್ಯರ ಬಳಿ ತರುವುದಾಗಿಲ್ಲ. ಆದರೆ ಗ್ರಂಥಾಲಯ, ಶಾಲೆ-ಕಾಲೇಜು ಹಾಗೂ ಶ್ರೀಮಂತ, ಸುಖಿ ಪಂಡಿತರ ಸೊತ್ತಾಗಿದ್ದ ಜ್ಞಾನವನ್ನು ಸಾಮಾನ್ಯರು ಸೇರುವ ಟೀ-ಟೇಬಲ್, ಕಾಫಿ ಹೌಸ್ ಹಾಗೂ ನಾಲ್ಕು ಜನ ಗೆಳೆಯರು ಸೇರುವಲೆಲ್ಲ ತರಲು ಸಾಧ್ಯವಾಗಿದೆ. ಮಹಿಳೆಯರು ಬೀಸಣಿಗೆ ಬಳಸುವ ರೀತಿಯಿಂದ ಹಿಡಿದು, ರಾಜಕೀಯ ಭಿನ್ನಾಭಿಪ್ರಾಯಗಳವರೆಗೆ ನನಗೆ ತೋಚಿದ್ದೆಲ್ಲವನ್ನೂ ಗೀಚಿದ್ದೇನೆ. ನಾನು ಈ ಕಾರಣ ನಿಮ್ಮ ಪ್ರೀತಿ-ಅಭಿಮಾನಗಳಿಗೆ ಭಾಜನನಾಗಬೇಕು.’

ಈ ಮೇಲಿನ ಅಡಿಸನ್‍ನ ವಾದಕ್ಕೊಂದು ಕನ್ನಡದ ಸಾಕ್ಷಿಯಂತಿದೆ ಗೆಳೆಯ ರವೀಂದ್ರನಾಥ ಸಿರಿವರರ ಬದುಕು ಮತ್ತು ಪ್ರಸ್ತುತ ಕೃತಿ. ಅಡಿಸನ್ ಮಾಡಿದ ಎಲ್ಲ ಪುಣ್ಯದ ಕಾರ್ಯವನ್ನು ಸಿರಿವರ ಕನ್ನಡ ಸಾಹಿತ್ಯ ಲೋಕದಲ್ಲಿ ಮಾಡಿದ್ದಾರೆ. ಈ ಕಾರಣ ಸ್ವಘೋಷಿತ ಮಾಹಾನ್ ಲೇಖಕರಿಗೆ ಸಿರಿವರ ಅಪ್ರಿಯರಾಗಿರಲೂ ಸಾಧ್ಯವಿದೆ. ಆದರೆ, ಇವರದು ಪ್ರಯೋಗಶೀಲ ಬದುಕು. ಪ್ರಯೋಗದ ಈ ದಾರಿಯಲ್ಲಿ ಅವರಿಗೆ ಗೆಲುವಿನ ಹಠವಿಲ್ಲ, ಸೋಲಿನ ಭಯವಿಲ್ಲ. ವಿಚಿತ್ರ ನಿರಾಳತೆ ಇವರದು. ಅನುಭವ ಯಾವುದಾದರೇನು? ಅದು ಆಸ್ತಿಯೆ. ಅದುವೇ ನಿಜವಾದ ಸಂಪಾದನೆ ಎಂದುಕೊಂಡ ಕಾರಣ ಸಿರಿವರ ನಮ್ಮ ಪಾಲಿಗೆ ಬೆಟ್ಟದ ನೆಲ್ಲಿಕಾಯಿಯೂ ಆಗಲಿಲ್ಲ, ಕಡಲನ್ನೇ ಕುಡಿದ ಅಗಸ್ತರೂ ಆಗಲಿಲ್ಲ. ಬದಲಾಗಿ ಬದುಕಿನ ಪ್ರಯೋಗಾತ್ಮಕತೆಗೆ ಒಂದು ಸರಳ-ಸಾಮಾನ್ಯ ಉದಾಹರಣೆಯಾದರು. ಇದೇ ಕಾರಣ, ಅವರು ನಮ್ಮವರಾದರು. Let us, instead of writing finely, try to write naturally ಎಂಬ ಮಾತಿದೆ. ಹೀಗೆಯೇ ರವಿಂದ್ರನಾಥ ಸಿರಿವರ ಸುಂದರವಾಗಿ ಬರೆದರೊ, ಶ್ರೀಮಂತವಾಗಿ ಬದುಕಿದರೊ ಪ್ರಶ್ನೆ ಅದಲ್ಲ, ಆದರೆ, ಸಹಜವಾಗಿ ಬರೆದರು, ಸರಳವಾಗಿ ಬದುಕಿದರು, ತಮಗೆ ಸಿಕ್ಕ ಕನ್ನಡವೆಂಬ ದೈವ ಭಾಗ್ಯವನ್ನು ನನ್ನಂಥವರಿಗೂ ಹಂಚಿ ಸಂಭ್ರಮಿಸಿದರು. ಇದಕ್ಕೆ ಆಕ್ಷೇಪಣೆಗಳಿಲ್ಲ.

ಬರಹ ಎನ್ನುವುದು ಬರೀ ಲೇಖನಿ ಹಾಗೂ ಪೇಪರ್‍ಗಳಿಗೆ ಮಾತ್ರ ಸೀಮಿತವಾದ ಪ್ರಕ್ರಿಯೆಯಲ್ಲ ಎನ್ನುವುದು ಚೆನ್ನಾಗಿ ಅರಿವಿದ್ದ ಕಾರಣ, ಸಿರಿವರರಿಗೇ ಮಾತ್ರ ನಮ್ಮ ಮಹಾನ್ ಬರಹಗಾರರಿಗೆ ದಕ್ಕದ ಹಲವು ರೀತಿಯ ಅಭಿವ್ಯಕ್ತಿಯ ಸಾಧ್ಯತೆಗಳು ಇವರಿಗೆ ದಕ್ಕಿವೆ. ಇವರು ಸಿನಿಮಾ, ಪತ್ರಿಕೋದ್ಯಮ, ರಂಗನಿರ್ದೇಶನ, ಜನಾಂದೋಲನ, ಶೈಕ್ಷಣಿಕ ಜಾಥಾ, ಸಾಹಿತ್ಯ ಹಾಗೂ ಸಾಂಸ್ಕøತಿಕ ಶಿಬಿರ, ಸಭೆ-ಸಮಾವೇಶಗಳ ಮೂಲಕ ಮಾಡಿದ್ದು ಕೂಡಾ ಬರಹವನ್ನೆ, ಮಾಧ್ಯಮಗಳು ಮಾತ್ರ ಭಿನ್ನ. ವಿಚಾರಗಳ ಪ್ರಸಾರ ಹಾಗೂ ದಾಖಲಾತಿಗೆ ಯಾವುದು, ಯಾವಾಗ ಯುಕ್ತವಾಗಿ ಕಂಡಿತೊ ಅದನ್ನೆಲ್ಲ ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಷ್ಟೇ ಮಹತ್ವದ ದಾಖಲೆಗಳನ್ನೂ ಅವರು ಅವುಗಳಲ್ಲಿ ಮಾಡಿದ್ದಾರೆ.

ಈ ಮೇಲಿನ ಮಾತುಗಳನ್ನು ಸಿರಿವರರಂಥವರನ್ನು ಕುರಿತು ಮಾತ್ರ ಹೇಳಲು ಸಾಧ್ಯ. ನಿಂತ ನೀರಾಗದೆ ಪ್ರವಾಹದೊಂದಿಗೆ ಈಜಿ ಫಲಿತಾಂಶದೊಂದಿಗೆ ಹೊರ ಬರುವ ಛಾತಿ ಎಲ್ಲರಿಗೂ ಇರುವುದಿಲ್ಲ. ಅದು ಕೆಲವರಿಗೆ ಮಾತ್ರ ದಕ್ಕುವ ನವನೀತ. ಹೀಗೆ ದಕ್ಕಿಸಿಕೊಂಡವರು ಸಿರಿವರ. ವೈಚಾರಿಕತೆಯ ಎಡ-ಬಲಗಳೆರಡನ್ನೂ ಗೌರವಿಸುತ್ತ, ಬುದ್ಧನ ಮಧ್ಯದ ದಾರಿಯಲ್ಲಿ ಸಾರಸ್ವತ ಸಾತ್ವಿಕತೆಯನ್ನು ತಮ್ಮದಾಗಿಸಿಕೊಂಡ ಸಿರಿವರದ್ದು ಬಹುರೂಪಿಯಂಥ ವ್ಯಕ್ತಿತ್ವ. ನನಗೆ ಶರಣ ಬಹುರೂಪಿ ಚೌಡಯ್ಯನನ್ನು ನೋಡುವ ಭಾಗ್ಯ ಸಿಗಲಿಲ್ಲ. ಈ ಸಿರಿವರರನ್ನು ನೋಡಿದ ಮೇಲೆ ಅವನನ್ನು ನೋಡಲಿಲ್ಲವಲ್ಲ ಎಂಬ ಖೇದ ಉಳಿದುಕೊಂಡಿಲ್ಲ.

ಬದುಕಿನ ಬೀದಿ ಬೆಳಕನ್ನು ಬಾಚಿಕೊಂಡು, ಅದರ ಉರಿ-ಸಂಕಟ-ನೋವು-ತಳಮಳ-ಅಪಮಾನಗಳನ್ನುಂಡು ಅವರು ಬರೆದ ಈ ಕೃತಿಯಲ್ಲಿ ಬರೀ ರೋಚಕ-ರೋಮಾಂಚನೆಗಳಿಲ್ಲ, ಬದಲಾಗಿ ಬಾಳಿನ ಸಮರ್ಥ ಪಾಠಗಳೂ ಇವೆ. ಇವು ಬರೀ ಪದ ಹೊಸೆದ ಘಟನೆಗಳಲ್ಲ, ಅನುಭವದ ಪುಟಗಳು.

ಪ್ರಸ್ತುತ ಲೇಖನಗಳ ಗೊನೆ ‘ತೊಚಿದ್ದು-ಗೀಚಿದ್ದು’ ರವೀಂದ್ರನಾಥ ಸಿರಿವರರ ಬಹುಮುಖಿ ಆಯಾಮದ ಬದುಕಿನ ಅನುಭವಗಳ ಸಂಗ್ರಹ. ಇದು ಬರೀ ಕಂಡು ಕೇಳಿದ ಅನುಭವಗಳನ್ನು ಆಧರಿಸಿದ್ದಲ್ಲ. ನೇರವಾಗಿ ಎದೆಗೆ ಬಿದ್ದದ್ದು, ಮನಕ್ಕೆ ನಾಟಿದ್ದು. ಕಣ್ಣೀರಾದದ್ದು.

ಸಂಕಲನ ಸಣ್ಣದು. ಆದರೆ, ಒಂದೊಂದು ಘಟನೆಗೂ ಒಂದೊಂದು ಕೃತಿ ಅಥವಾ ಸಿನಿಮಾ ಆಗುವ ಸಾಮಥ್ರ್ಯ ಇರುವುದನ್ನು ಅಲ್ಲಗಳೆಯುವಂತಿಲ್ಲ. ಇಡೀ ಸಂಕಲನವನ್ನು ಜೀವನ ಪ್ರೀತಿಯಿಂದ ಓದಬೇಕು ನೀವು. ಇದು ಓದಬೇಕಾದ ಕೃತಿ. ನನ್ನ ನಿಮ್ಮ ವಿನಾಕಾರಣವಾಗಿ ಸುತ್ತಿದ, ಬದುಕಿನ ಭರವಸೆಯನ್ನೆ ಕಳೆದುಕೊಳ್ಳುವಂತೆ ನಮ್ಮನ್ನು ಕಾಡಿದ, ಏನೆಲ್ಲ ಸಂಗತಿಗಳಿವೆ ಈ ಕೃತಿಯಲ್ಲಿ. ಪ್ರತಿ ಸಂಗತಿಯಲ್ಲಿಯೂ ನಾನು ನನ್ನ ವಿವಶತೆಯ ಹಾಡು ಕೇಳಿದ್ದೇನೆ. ಪ್ರತಿರೋಧದ ಅಸ್ತ್ರಗಳಿಲ್ಲದೆ ಮೌನಕ್ಕೆ ಜಾರಿದ್ದೇನೆ, ಕಾಲಕ್ಕೆ ಕಾಯ್ದಿದ್ದೇನೆ. ಹೀಗೆ ಕಾಯ್ದವರು ಸಿರಿವರ.

ಇಲ್ಲಿಯ ಕೆಲವು ಸಂಗತಿಗಳನ್ನು ನೋಡಿ - ನಡುರಾತ್ರಿ ಹುಟ್ಟಿದ ಹುತ್ತ ಒಂದು ಮಸೀದೆಯ ಮುಂದೆ ಗುಡಿಯಾಗಿ ನಿಂತು ಕಾಡಿದ ಘಟನೆಯಾಗಿರಬಹುದು, ಅಜ್ಜಿಯ ಸಮಾಧಿಯ ಮೇಲೆ ಹುಟ್ಟಿ ಭವಿಷ್ಯದ ತಲೆಮಾರುಗಳಿಗೆ ಮಾಗಿದ ಮಾವಿನ ಹಣ್ಣಾಗಿ ದಕ್ಕುವ ಕಥೆಯಾಗಿರಬಹುದು, ಮುಗ್ಧನಾದ ತಮ್ಮ ಪೊಲೀಸರ ಕೈವಶವಾಗಿ ಪಟ್ಟ ಪಡಿಪಾಟಲಾಗಿರಬಹುದು, ಅಮಾಯಕನಾದ ಮಗನ ಗೆಳೆಯನೊಬ್ಬ ರೌಡಿಗಳ ಕೈಗೆ ಸಿಕ್ಕು ಅನುಭವಿಸುವ ಯಾತನೆಯಾಗಿರಬಹುದು - ಇವುಗಳೆಲ್ಲ ಕಾಲಾಂತರದಲ್ಲಿ ಈಗ ಓದಿ ಬದಿಗಿಡಬಹುದಾದ ಕಥೆಗಳೆನೋ ಸತ್ಯ. ಆದರೆ, ಮರೆತುಬಿಡಬಹುದಾದ ಸಂಗತಿಗಳಲ್ಲ. ಇವು ಬದುಕಲು ಬೇಕಾದ ಬದುಕಿನ ತಿಳುವಳಿಕೆಯ ಹಣತೆಗಳು. ಮರೆಯಲಾಗದ ಪಾಠಗಳು.

ಭಾರತೀಯ ಸಾಹಿತ್ಯದಲ್ಲಿ ಪ್ರಗತಿಶೀಲ ಬರಹಗಾರರನ್ನು ಮರೆಯುವಂತಿಲ್ಲ. ಮುಲ್ಕರಾಜ್ ಆನಂದರಿಂದ ಮೊದಲುಗೊಂಡು ಕೆ.ಎ.ಅಬ್ಬಾಸ್, ಬಲರಾಜ ಸಹಾನಿ, ಎ.ಕೆ.ಹಾನಗಲ್, ಖುಷ್ವಂತಸಿಂಗ್ ಎಲ್ಲರೂ ಘಟಾನುಘಟಿಗಳೆ. ಅವರು ಜನಸಾಮಾನ್ಯರಿಂದ ಸಿದ್ಧಗೊಂಡ ಲೇಖಕರು. ಹೀಗಾಗಿ, ಶ್ರೀ ಸಾಮಾನ್ಯನ ಆಶಯಗಳನ್ನು ಕುರಿತೇ ಅವರು ಬರೆದರು. ಗೆಳೆಯ ರವೀಂದ್ರನಾಥ ಸಿರಿವರ ಇದೇ ಗರಡಿಯಲ್ಲಿ ಪಳಗಿದವರು. ಹೀಗಾಗಿ ಶ್ರೀ ಸಾಮಾನ್ಯನೇ ಈ ಕೃತಿಯ ಕೇಂದ್ರ ಹಾಗೂ ಗುರಿ.

ಇಲ್ಲೊಂದು ನೆನಪು. ಖ್ಯಾತ ಪತ್ರಕರ್ತ ಕೆ.ಎ.ಅಬ್ಬಾಸ್ ಒಮ್ಮೆ ತಮ್ಮ ನಲವತ್ತೇಳು ವರ್ಷಗಳ ಅಂಕಣಗಳ ಸಂಕಲನಕ್ಕೆ ಏನೆಂದು ಶೀರ್ಷಿಕೆ ಇಡಬೇಕು? ಎಂದು ಒದ್ದಾಡಿದರು. ಕೊನೆಗೆ I write As I feel ಎಂದು ಹೆಸರಿಟ್ಟರು. ಮಹಾಕವಿ ಶೇಕ್ಸಪೀಯರ್ ನಾಟಕವೊಂದನ್ನು ಬರೆದು ಮುಗಿಸಿದ. ಶೀರ್ಷಿಕೆ ಹೊಳೆಯಲಿಲ್ಲ. ಕಾರಣ ತನ್ನ ಪ್ರೇಕ್ಷಕ ಪ್ರಭುಗಳ ಮುಂದಿಟ್ಟು ‘As You Like it’

 ಎಂದ. ಪ್ರಸ್ತುತ ಲೇಖನಗಳ ಸಂಗ್ರಹವೂ ಅಷ್ಟೆ, ರವೀಂದ್ರನಾಥ ಸಿರಿವರರು ಇದಕ್ಕೆ ‘ತೋಚಿದ್ದು-ಗೀಚಿದ್ದು’ ಎಂದು ಹೆಸರಿಸಿದ್ದಾರೆ. ಹಾಗೆ ನೋಡಿದರೆ ಒಂದು ನೆಲೆಯಲ್ಲಿ ಬರಹ ಎಂದರೆ ಇದೆ, ಅಲ್ವೆ?

ನನ್ನ ಪ್ರಕಾರ, ವ್ಯಕ್ತಿ ಕುತೂಹಲವೆ ಸಮಷ್ಠಿ ಕುತೂಹಲದ ಮೂಲ. ಕಳೆದ ಆರು ವರ್ಷಗಳಿಂದ ಲೇಖಕ ಸಿರಿವರರನ್ನು ಇಂಥ ಹಲವು ಕುತೂಹಲಗಳ ಬೆನ್ನೆರಿ ನಾನು ಗಮನಿಸುತ್ತ ಬಂದಿದ್ದೇನೆ. ಅವರನ್ನು ಸಮಕಾಲೀನ ಅದೆಷ್ಟೋ ಅನನ್ಯ ಪ್ರತಿಭೆಗಳ ಮೂಲಕ ಓದಿದ್ದೇನೆ. ಉದಾಹರಣೆಗಾಗಿ - ಹಂಸಲೇಖ, ವಿ. ಸೋಮಶೇಖರ, ನಾಗತಿಹಳ್ಳಿ ಚಂದ್ರಶೇಖರ, ಎಸ್.ಜಿ. ಸಿದ್ದರಾಮಯ್ಯ, ರಾಜೇಂದ್ರಸಿಂಗ್ ಬಾಬು, ವಸುಂಧರಾ ಭೂಪತಿ, ಡಿ.ಎಸ್. ಚೌಗಲೆ, ಕೆ. ಮರುಳಸಿದ್ದಪ್ಪ, ಜಯಮಾಲಾ, ಭಾರತಿ ವಿಷ್ಣುವರ್ಧನ್ - ಹೀಗೆ ಸಾಹಿತ್ಯ-ಸಿನಿಮಾ-ನಾಟಕ ಮತ್ತು ಜನಪರ ಹೋರಾಟಗಳಿಂದ ಬಂದ ಅನೇಕ ಮಹತ್ವದ ಪ್ರತಿಭೆಗಳ ಮೂಲಕ ನಾನು ಸಿರಿವರರನ್ನು ಓದಿದ್ದೇನೆ. ಎಲ್ಲರೂ ಅವರಲ್ಲಿ ಕಂಡ ಮಹತ್ವದ ಗುಣ ಜೀವನ ಶ್ರದ್ಧೆ. ಹಿರಿಮೆ-ಗರಿಮೆಗಳ ವಾಂಛೆ ಇಲ್ಲದೆ ಸರಳವಾಗಿ ಬೆರೆತು ಹೋಗುವ ಸಿರಿವರ, ಬದುಕನ್ನು ಅದರ ಸಮಗ್ರತೆಯೊಂದಿಗೆ ಅತ್ಯಂತ ಗೌರವದಿಂದ ಕಂಡವರು. ಹೀಗಾಗಿ ಗೌರವಾನ್ವಿತರೆಲ್ಲ ಅವರಿಗೆ ದಕ್ಕಿದ್ದಾರೆ. ಪ್ರಸ್ತುತ ಸಂಕಲನದಲ್ಲಿಯೂ ಬದುಕನ್ನು ಗೌರವಿಸಬೇಕಾದ ಮತ್ತು ಸರಿಯಾದುದನ್ನು ಗುರುತಿಸಬೇಕಾದ, ಎಷ್ಟೊಂದು ಜವಾಬ್ದಾರಿಗಳು ಬರಹಗಾರನ ಮೇಲಿವೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಇದು ಈ ಕೃತಿಯ ಮೂಲಕ ಸಿರಿವರ ನೀಡುವ ಮಹತ್ವದ ಸಂದೇಶವೂ ಕೂಡ. 

ಅಕ್ಷರಗಳಿಂದ ಅನ್ನ ಗಳಿಸುವುದು ಅಂದುಕೊಂಡಷ್ಟು ಸರಳವಲ್ಲ. ಇದರ ಸಂಕಟ ಬಲ್ಲವನು ನಾನು. ಹೀಗಾಗಿ ನನ್ನಂತೆಯೆ ಸಂಕಟ ಪಟ್ಟ ಸನ್ಮಿತ್ರನನ್ನು ನಾನು ಸಂಭ್ರಮಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ.

 

Friday, October 9, 2020

ಬದುಕಾದ ಕೀಟ್ಸ್, ಬೆಳಕಾದ ಏಟ್ಸ್

 

ಐರ್ಲ್ಯಾಂಡಿನ ಪ್ರೊಟೆಸ್ಟಂಟ್ ಮನೆತನದಲ್ಲಿ ಹುಟ್ಟಿದ ಚಂಡಮಾರುತ ವಿಲಿಯಂ ಬಿ. ಏಟ್ಸ. ಕಲಾಕಾರ ತಂದೆಯ ಕಾವ್ಯಾಸಕ್ತ ಮಗ, ಮೆಧಾವಿ. ಪೂರ್ವದೆಡೆಗೆ ಹಂಬಲವಿಟ್ಟುಕೊಂಡವ. ಇದ್ದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಾವ್ಯದಲ್ಲಿ ಹೊಸ ತಂತ್ರ ಮತ್ತು ಖಾಸಗಿ ಸಂಗತಿಗಳನ್ನು ಅಳವಡಿಸಲು ಹೆಣಗಾಡಿದ. ಮಾಡ್ಗಾನ್ ಎಂಬ ಮಹಾ ಸುಂದರಿಯನ್ನು ಪ್ರೀತಿಸಿದವ. ಆಕೆ ಜಾನ್ ಮಕ್ ಬ್ರೈಡನನ್ನು ಪ್ರೀತಿಸಿದಳು. ಈಕೆಯ ಗಂಡನನ್ನು ದಂಗೆಯಲ್ಲಿ ನಿರತನಾದ ಕಾರಣ ಗಲ್ಲಿಗೇರಿಸಲಾಯಿತು. ಈಕೆಗೆ ಇಸ್ಯೂಲ್ಟ್ ಎಂಬ ಮಗಳು ಹುಟ್ಟಿದಳು. ಏಟ್ಸ್ ಅವಳ ಮುಂದೆಯೂ ತನ್ನ ಪ್ರೇಮ ಪ್ರಸ್ತಾಪವನ್ನಿಟ್ಟ. ಇದು ಲೋಕದ ಕಣ್ಣಿಗೆ ಹುಚ್ಚುತನ, ಆದರೆ ಈ ಹುಚ್ಚುತನವೆ ಅವನ ಕಾವ್ಯಕ್ಕೆ ವರವಾಗಿತ್ತು, ಪ್ರೀತಿಯ ವರತೆಯಾಗಿತ್ತು. ಮುಂದೆ ಅವಳೂ ನಿರಾಕರಿಸಿದಾಗ ಏಟ್ಸ್ ನ ವಯಸ್ಸು 52. ಆಗ ಲೀಸಳನ್ನು ಮದುವೆಯಾಗಿ ಜೀವನವನ್ನು ಮುಂದೊರೆಸಿದ. ಕೃಷ್ಣಮೂರ್ತಿರಾವ್ ಈ ಏಟ್ಸ್ ನ ‘ವಾಟ ವಾಸ್ ಲಾಸ್ಟ್’ ಎನ್ನುವ ಪದ್ಯವನ್ನು ಸುಂದರವಾಗಿ ಭಾಷಾಂತರಿಸಿದ್ದಾರೆ –

ನಾನು ಹಾಡುವುದು ಸೋತದ್ದಕ್ಕೆ ಅಳುಕುವುದು ಗೆದ್ದದ್ದಕ್ಕೆ

ನಡೆಯುವುದು ಮತ್ತೆ ಸೆಣಸಿದ ಕದನದೊಡನೆ

ಪ್ರೊಫೆಸರ್ ವಿ. ಕೃಷ್ಣಮೂರ್ತಿ ರಾವ್ ಕನ್ನಡದ ವಿಶಿಷ್ಟವಾದ ಪ್ರತಿಭೆ. ಅವರು ಬರೆದ ಕೃತಿಗಳ ಸಂಖ್ಯೆ ಕಡಿಮೆ, ಆದರೆ ಬರೆದವುಗಳೆಲ್ಲವೂ ಅಪರೂಪದವುಗಳೆ. ಇವರು ಪ್ರೊಫೆಸರ್ ಚಂದ್ರಶೇಖರ್ ಪಾಟೀಲರು (ಚಂಪಾ) ನನಗೆ ಪರಿಚಯಿಸಿದ ಸನಾತನ ಹಿರಿಯ ಲೇಖಕರು. ಇವರೊಂದು ರೀತಿ ಕೂಡಲಸಂಗಮ. ಸಾಹಿತ್ಯ ಮತ್ತು ರಾಜಕಾರಣದ ಹಿರಿಯರಾದ ರಾಜೀವ ತಾರಾನಾಥ, ಅನಂತಮೂರ್ತಿ, ಚಂಪಾ ಮತ್ತು ಕಂಬಾರ ಇವರಿಗೆ ತುಂಬಾ ಆತ್ಮೀಯರು. ಇವರ ವಾಸ್ತವ್ಯ ಚಂಪಾ ಪಾಲಿನ ‘ಕಿಟ್ಟಿ ಮನೆ’. ಇಲ್ಲಿ ಜಿ.ಪಿ.ಬಸವರಾಜ, ಎಲ್. ಹನುಮಂತಯ್ಯ, ಹರಿಹರಪ್ರಿಯ, ಚಂಪಾ ಮತ್ತು ನಾನು ಒಂದು ಕಾಲಕ್ಕೆ ಬೆಂಗಳೂರಿನ ಸಂಜಯನಗರದ ಈ ಮನೆಯ ಪ್ರೀತಿ ಮತ್ತು ಆತ್ಮೀಯತೆಯ ಅತಿಥಿಗಳಾದದ್ದಿದೆ. ಈ ಅರ್ಥದಲ್ಲಿ ಇವರು ಹೀಗೆ ದೊರೆತಿದ್ದು ಸಾಹಿತ್ಯಕ ಭಾಗ್ಯವೇ ಸರಿ.

ಧಾರವಾಡದ ಓದಿನ ದಿನಗಳಲ್ಲಿ ಪ್ರೊಪೆಸರ್ ಬಿ.ಟಿ ದೇಸಾಯಿ, ಚಂಪಾ ಹಾಗೂ ಗಿರಡ್ಡಿಯವರ ಒಡನಾಡಿಯಾದ ಕೃಷ್ಣಮೂರ್ತಿರಾವ್ ಬರೆದ ಸಾಹಿತ್ಯ ಅಪರೂಪದ್ದು. ವೃತ್ತಿಯರಸಿ ಮೊದಲು ಹೋದದ್ದು ಮಹಾರಾಷ್ಟ್ರಕ್ಕೆ. ಅಲ್ಲಿಂದ ಮುಂದೆ ಮಾತೃಭೂಮಿಯಿಂದ ದಶಕಗಳವರೆಗೆ ಕರ್ನಾಟಕದ ಆಚೆ ದಮನ್ ದಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಶ್ರೀಯುತರು, ಬದುಕಿನ ಉತ್ತರಾರ್ಧದಲ್ಲಿ ಕನ್ನಡಕ್ಕೆ ಮಹತ್ವದ ಅನುವಾದ ಸಾಹಿತ್ಯ ಕೃತಿಗಳನ್ನು ಕೊಡುತ್ತಿದ್ದಾರೆ. ಇತ್ತೀಚಿಗೆ ಡಬ್ಲ್ಯೂ ಬಿ ಏಟ್ಸ್ನ 70 ಕವನಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ. ಕೃಷ್ಣಮೂರ್ತಿರಾವ್ ಅವರ ವಯಸ್ಸು ಈಗ ಎಂಬತ್ತರ ಆಸುಪಾಸು, ನಾನು 49ರ ಆಚೆ-ಈಚೆಯವನು

.       ಬೆಂಗಳೂರಿನಂಥ ದಾಂಗುಡಿಯ ನಗರದಲ್ಲಿ ಕುಳಿತುಕೊಂಡು ಇಬ್ಬರು ಭಿನ್ನ ಕಾಲದ ಇಂಗ್ಲೀಷ್ ಸಾಹಿತಿಗಳನ್ನು ಕುರಿತು ಕೃತಿಗಳನ್ನು ರಚಿಸಿರುವುದು ಒಂದು ಅಪರೂಪದ ಮತ್ತು ಅಭಿಮಾನದ ಘಟನೆ. 20ನೇ ಶತಮಾನದ ಬಂಡುಕೋರ ಕವಿ ಡಬ್ಲ್ಯೂ.ಬಿ. ಏಟ್ಸ್ ನನ್ನು ಕುರಿತು ವಯೋವೃದ್ಧರಾದ ಅವರು ಬರೆದರೆ, 18ನೇ ಶತಮಾನದ ರೊಮ್ಯಾಂಟಿಕ್ ಕಾವ್ಯದ ಮಹತ್ವದ ಲೇಖಕನಾದ ಜಾನ್ ಕಿಟ್ಸ್ ನನ್ನು ಕುರಿತು ‘ಬದುಕಬಾರದೆ ಬದುಕು’ ಕೃತಿಯನ್ನು ನಾನು ಬರೆದು ಪೂರೈಸಿದ್ದೇನೆ. ನಮ್ಮಿಬ್ಬರ ಈ ಸಂದರ್ಭದ ಬೆಂಗಳೂರು ನಗರದ ವಾಸ್ತವ್ಯ ಇದಕ್ಕೆ ಸಾಕ್ಷಿಯಾಗಿದ್ದು ಕಾಕತಾಳಿಯ ಎಂದುಕೊಂಡಿಲ್ಲ ನಾನು.

ಇದು ಭಾಷೆಯಾಚೆಗಿನ ಭಾಷೆ. ಪದಗಳಾಚೆಗಿನ ಸಂವಾದ.

ಮನುಕುಲವನ್ನು ಕಾಡಿದ, ಅನುಭವಿಸಿದ ಭಾವತೀವ್ರತೆ ಹಾಗೂ ಸಾಂದ್ರತೆಯ ಮಹತ್ವದ ಕವಿಗಳು ಕೀಟ್ಸ್ ಮತ್ತು ಏಟ್ಸ್. ಕೃಷ್ಣಮೂರ್ತಿಯವರ ಏಟ್ಸ್, ಕಾವ್ಯವನ್ನು ಕುರಿತು ಭಿನ್ನವಾಗಿ ಆಲೋಚಿಸುತ್ತಾನೆ ಮತ್ತು ಬರೆಯುತ್ತಾನೆ. ಕೀಟ್ಸ್ ಕಾವ್ಯ ವ್ಯಸನಿಯಾಗುತ್ತಾನೆ ಮತ್ತು ಅದಕ್ಕಾಗಿಯೇ ಕೊನೆಯುಸಿರೆಳೆಯುತ್ತಾನೆ.

ನಮ್ಮ ಕನ್ನಡದ ಲಕ್ಷ್ಮೀನಾರಾಯಣಭಟ್ಟರು ಹಾಗೂ ಇತ್ತೀಚಿಗೆ ಕೃಷ್ಣಮೂರ್ತಿರವರು ಏಟ್ಸ್ ನನ್ನು ಕುರಿತು ಮಾಡುವ ಚರ್ಚೆಗಳಿಗೆ ಎರಡು ಭಿನ್ನ ಗುರಿಗಳಿವೆ. ಈ ಮಧ್ಯದಲ್ಲಿ ಕೆ.ಎಸ್.ನಾರಾಯಣಾಚಾರ್ಯ, ಶಂಕರ ಮುಕಾಶಿ ಪುಣೇಕರ ಮತ್ತು ಜಿ.ಎಸ್.ಅಮೂರರು ಏಟ್ಸ್ ನ ಕಡೆಗೆ ನಮ್ಮ ಗಮನವನ್ನು ಸೆಳೆದಿದ್ದಾರೆ.

ಭಾರತಕ್ಕೂ ಡಬ್ಲ್ಯೂ. ಬಿ. ಏಟ್ಸ್ ನಿಗೂ ಮೊದಲಿಂದಲೂ ಒಂದು ರೀತಿಯ ಅವಿನಾಭಾವ ಸಂಬಂಧ. ಭಾರತದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಗುರುದೇವ ರವೀಂದ್ರನಾಥ ಟ್ಯಾಗೋರ್ ಸಾಹಿತ್ಯಕ್ಕಾಗಿ ಮೊಟ್ಟಮೊದಲನೆಯ ನೊಬೆಲ್ ಪ್ರಶಸ್ತಿಯನ್ನು ಪಡೆಯಲಿಕ್ಕೆ ಕಾರಣನಾದ ವ್ಯಕ್ತಿ ಏಟ್ಸ್, ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ದೇಶದ ಮೊದಲ ಪ್ರಧಾನಿ ನೆಹರುರವರ ಸಂಕಲ್ಪದಂತೆ, ಹೆಸರಾಂತ ನಟರಾದ ಅಮಿತಾಬಚ್ಚನರ ತಂದೆ ಕವಿ ಹರಿವಂಶರಾಯ ಬಚ್ಚನ್ ಇಂಗ್ಲೇಂಡಿನಲ್ಲಿ ಇದೇ ಏಟ್ಸ್ ನ ಮನೆಯಲ್ಲಿ ನಿಂತು ಸಂಶೋಧನೆಯನ್ನು ಪೂರೈಸಿದ್ದು ಇಡೀ ಉತ್ತರ ಭಾರತ ಬಲ್ಲ ವಿಚಾರ.


ಈ ಸಂಬಂಧದ ಹಿನ್ನೆಲೆಯ ಏಟ್ಸ್ ನನ್ನು ಭಾಷಾಂತರಿಸುತ್ತ ಕೃಷ್ಣಮೂರ್ತಿರಾವ್ ಹೇಳುತ್ತಾರೆ - ‘ಭಾಷಾಂತರ ಈ ಸಂದರ್ಭದ ಅತ್ಯಂತ ಮಹತ್ವದ ಸಂವಹನ.’ ಇದನ್ನೇ ಕುರಿತು ಮಾತನಾಡುತ್ತಾ ಪ್ರೊಪೆಸರ್ ಎ.ಕೆ. ರಾಮಾನುಜನ್ ಹೀಗೆ ವ್ಯಾಖ್ಯಾನಿಸುತ್ತಾರೆ – ‘ಯಾವುದೇ ಪರಭಾಷೆಯಲ್ಲಿರುವ ಕವಿತೆ ಗದ್ಯ ಬರಹಗಳ ಅನುವಾದವನ್ನು ‘ಅ ಟ್ರಾನ್ಸ್ಲೇಷನ್’ ಎನ್ನಬಹುದೇ ಹೊರತು ‘ದ ಟ್ರಾನ್ಸ್ಲೇಷನ್’ ಎಂದು ಹೇಳಲಾಗದು. ಕೃತಿಗಳ ಅನುವಾದವನ್ನು ಮೂಲ ಭಾವಕ್ಕೆ ಭಂಗ ತರದಂತೆ, ಮೂಲವನ್ನು ಅನುಸರಿಸಿ ಮಾಡುವಂಥದ್ದು. ಅನುವಾದ ಸಮರ್ಪಕವೊ? ತೃಪ್ತಿಕರವೊ? ಎಂದು ಹೇಳಲು ಮೂಲಕೃತಿಯನ್ನೇ ಸಾಕ್ಷಿಯಾಗಿಟ್ಟುಕೊಳ್ಳಬೇಕು.’ ಈ ಸೂತ್ರವನ್ನು ಚಾಚೂ ತಪ್ಪದೆ ತಮ್ಮ ಅನುವಾದಗಳುದ್ದಕ್ಕೂ ಪಾಲಿಸಿದವರು  ಕೃಷ್ಣಮೂರ್ತಿ ರಾವ್. ನಾನು ಸ್ವಲ್ಪ ಭಿನ್ನ. ಆದರೆ ನನ್ನ ಆದರ್ಶ ಅವರೆ.

ನೀನು ಮುದಿಯಾಗಿ ನೆರೆತು, ನಿದ್ದೆ ತುಂಬಿ ಬಂದು,

ಬೆಂಕಿಯ ಬಳಿ ಕಂಪಿಸುತ್ತಿಯಲ್ಲಾ, ಆಗ ತೆಗೆದುಕೊ ಈ ಪುಸ್ತಕವನ್ನು

*****

ಎಷ್ಟು ಜನ ಪ್ರೀತಿಸಿದರು ನಿನ್ನ ಹರ್ಷ ಬರಿತ ಕಣ್ಣುಗಳನ್ನು,

ಎಷ್ಟು ಜನ ಪ್ರೀತಿಸಿದರು ನಿಜವೋ ಹುಸಿಯೋ ನಿನ್ನ ಸೊಬಗನ್ನು

ಅವರಲ್ಲೊಬ್ಬ ಪ್ರೀತಿಸಿದ್ದು ನಿನ್ನೊಳಗಿನ ಯಾತ್ರೆ ಆತ್ಮವನ್ನು

ಪ್ರೀತಿಸಿದ್ದು ಬದಲಾಗುತ್ತಿದ್ದ ನಿನ್ನ ಚಹರೆಯ ದುಗುಡಗಳನ್ನು

******

ಹೆಣಗುವ ಜಗ, ಹೊಯ್ದಾಡುವ ಆತ್ಮಗಳ ಮಧ್ಯೆ, ನಮ್ಮ ಒಂಟಿತನದ ಜೀವಿತಗಳು,


ಏಟ್ಸ್ ಮತ್ತು ಕೀಟ್ಸ್ ನನ್ನ ವೃತ್ತಿ ಬದುಕಿನ ಕಾಲಬಳ್ಳಿಗಳು, ಎದೆಯ ವೇದನೆಗಳು, ಮನದ ಮಿಂಚುಗಳು. ಏಟ್ಸ್ ನ ‘ದ ಸೆಕೆಂಡ್ ಕಮಿಂಗ್’, ‘ಪ್ರೆಯರ್ ಟು ಮೈ ಡಾಟರ್’ ಹಾಗೂ ಕೀಟ್ಸ್ ನ ‘ಓಡ ಆನ್ ಗ್ರೇಸಿಯನ ಅರ್ನ್’ ಮತ್ತು ‘ಲಾ ಬೆಲ್ಲೆ ಡ್ಯಾಮ್ನ ಸ್ಯಾನ್ಸ್ ಮರ್ಸಿ’ಗಳನ್ನು ಓದುತ್ತ ಓದಿಸುತ್ತ ಬದುಕಿನ ಮಧ್ಯ ಹಂತಕ್ಕೆ ಬಂದು ನಿಂತಿದ್ದೇನೆ. ಈ ದಾರಿ ಸಾರ್ಥಕವಾಗಿದೆ.


    ಅಂದಹಾಗೆ, ನನ್ನ ‘ಜಗದ್ವಂದ್ಯ ಭಾರತಂ’ ಕಾದಂಬರಿಗೆ ಹಾಗೂ ಕೃಷ್ಣಮೂರ್ತಿರಾವ್ ಅವರ ಏಟ್ಸ್ ನ ಭಾಷಾಂತರಕ್ಕೆ 2019ರ ಸಾಲಿನ ಕಾವ್ಯ-ಕಾದಂಬರಿ ಪ್ರಶಸ್ತಿಗಳನ್ನು ಶಿವಮೊಗ್ಗೆಯ ಕರ್ನಾಟಕ ಸಂಘವು ಘೋಷಿಸಿ ಭಿನ್ನ ಕಾಲಘಟ್ಟದ ಇಬ್ಬರು ಲೇಖಕರ ವೇದಿಕೆಯಾಗಿ ಸಾಕ್ಷಿಯಾಗುತ್ತಿದ್ದಾರೆ. ನನಗೆ ಬದುಕು ತೋರಿಸಿದವನು ಕೀಟ್ಸ್, ಕೃಷ್ಣಮೂರ್ತಿರಾವ್ ಅವರರಿಗೆ ಅದರಾಚೆಯ ಬೆಳಕು ತೋರಿಸಿದವನು ಏಟ್ಸ್. ಎರಡೂ ಕಾವ್ಯ ಚೇತನಗಳಿಗೆ ನೂರೊಂದು ನಮನ.