Total Pageviews

Friday, November 8, 2013

ಮಲ್ಲಯ್ಯಸ್ವಾಮಿ: ಒಳಗೆ ದೀಪವನಿಟ್ಟು ಹೊರಗೆ ಹೋದವರು


“ಸ್ನೇಹ ದೂರದ ಮಾತು
ಸಾವಿನ ಟಿಪ್ಪಣೆಯೂ ಬರೆಯಲಿಲ್ಲ”
      ‘ನನಗೆ ದೀಪ ಅರುವ ಭಯವಿಲ್ಲ’ ಎನ್ನುವ ನನ್ನ ಕವಿತೆಯ ಸಾಲುಗಳ ಮೂಲಕ ಮೊನ್ನೆಯಷ್ಟೇ ಸಂಯುಕ್ತ ಕರ್ನಾಟಕದ ಮುಖಾಂತರ ಜನತೆಯೊಂದಿಗೆ ದೀಪಾವಳಿ ಆಚರಿಸಿಕೊಂಡ ಸಂಭ್ರಮದಲ್ಲಿದ್ದ ನನಗೆ ನಿನ್ನೆ ಅತೀವ ಆಘಾತದ ಕ್ಷಣಗಳೇ ಕಾದಿದ್ದವು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಡಿ.ರಾಜೇಂದ್ರಬಾಬು(D.Rajendrababu) ತೀವ್ರ ಹೃದಯಾಘಾತದಿಂದ ಸಾವನಪ್ಪಿದ್ದು, ಬಣ್ಣದ ಲೋಕಕ್ಕೆ ಈಗಷ್ಟೇ ಅಂಬೆಗಾಲಿಕ್ಕುತ್ತ ಅದರ ಬೆರಗಿಗೆ ಬಲಿಯಾಗಿ ಹೋದ, ಜಂಗಲ್‍ಜಾಕಿ(Jangal Jaaki) ಎಂದು ಹೆಸರು ಮಾಡಿದ್ದ ರಾಜೇಶ್(Rajesh) ಎನ್ನುವ ಹುಡುಗ ಮಾನಸಿಕ ಅಸ್ವಸ್ಥತೆಗೊಳಗಾಗಿ, ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಹಾಗೂ ನನ್ನ ಸಾಹಿತ್ಯದ, ಅಸ್ತಿತ್ವದ, ನೆನಪುಗಳ, ಕನಸುಗಳ, ಅನುಭವಗಳ ಭಾಗವೇ ಆಗಿದ್ದ ನನ್ನ ದೊಡ್ಡಪ್ಪ, ಪಾರಿಜಾತ ಕಲಾವಿದ ಶ್ರೀ ಮಲ್ಲಯ್ಯಸ್ವಾಮಿ ಮಠಪತಿ (ಅಥಣಿ)ಯವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದು. ಮೂವರು ಒಂದಲ್ಲಾ ಒಂದು ರೀತಿಯಲ್ಲಿ ಕಲಾದೇವಿಯ ಮಕ್ಕಳೇ, ಈ ಬೆಳಕಿನ ಹಬ್ಬ ಅದ್ಯಾಕೆ ಇವರ ಬಾಳಿನಲ್ಲಿ ಶಾಶ್ವತ ಕತ್ತಲೆಯನ್ನು ಹೊತ್ತು ತಂದಿತೋ ಅರ್ಥವಾಗುತ್ತಿಲ್ಲ.
      ಬಯಲುಸೀಮೆಯ ಸೊಗಡು, ಕೃಷ್ಣಾ(Krishna) ತೀರದ ಜಾಡು, ಎರಡನ್ನೂ ಮೇಳೈಸಿಕೊಂಡು ಹುಟ್ಟಿದ ಅಭಿಜಾತ ಕಲೆಗಳಾದ ದೊಟ್ಟಾಟ, ಬಯಲಾಟಗಳು 50 ರ ದಶಕದಿಂದ 90 ರ ದಶಕದವರೆಗೂ ಜನರ ಮನರಂಜನೆಯ ಮಾಧ್ಯಮಗಳಷ್ಟೇ ಅಲ್ಲದೆ ಪರಂಪರೆಯ ಕೊಂಡಿಗಳಂತಿದ್ದವು. ಅವುಗಳಲ್ಲಿ ಶ್ರೀ ಕೃಷ್ಣ ಪಾರಿಜಾತ(Parijata)ವೂ ಒಂದು. ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಪ್ರಾರಂಭವಾಗುವ ಆಟಗಳು ಪ್ರಚಲಿತ ತಲ್ಲಣ, ತಾಕಲಾಟಗಳನ್ನು ಅದರೊಂದಿಗೆ ಮೈಗೂಡಿಸಿಕೊಂಡು ಜನರಲ್ಲಿ ಅರಿವಿನೊಂದಿಗೆ ಸಧಭಿರುಚಿಯನ್ನು ಮೂಡಿಸುತ್ತಿದ್ದ ಕಾಲವದು. ನನ್ನ ದೊಡ್ಡಪ್ಪನು ಈ ಕಲೆಯ ಬಲೆಯೊಳಗೆ ತನ್ನ ಬದುಕನ್ನು ಕಟ್ಟಿಕೊಂಡ ಒಬ್ಬ ಕಲಾವಿದ. ‘ಶ್ರೀ ಕೃಷ್ಣ ಪರಮಾತ್ಮನಿಗೆ ಇದು ನನ್ನ ಅಳಿಲು ಸೇವೆ’ ಎನ್ನುವ ಧ್ಯೇಯದೊಂದಿಗೆ ಆತ ‘ವೆಂಕಟೇಶ್ವರ ಕೃಷ್ಣ ಪಾರಿಜಾತ ಕಂಪನಿ’ಯನ್ನು ಬೆಳಗಾವಿ(Belgaum) ಜಿಲ್ಲೆ ಅಥಣಿ(Athani)ಯಲ್ಲಿ ಕಟ್ಟಿ ಬೆಳೆಸಿದ್ದು ಈಗ ಇತಿಹಾಸ. ವರ್ಷಕ್ಕೆ 150 ಪ್ರದರ್ಶನಗಳಂತೆ ನಿರಂತರ 55 ವರ್ಷ ಕರ್ನಾಟಕ(Karnatak), ಮಹಾರಾಷ್ಟ್ರ(Maharastra), ಗೋವಾ(Goa) ಸೇರಿದಂತೆ ಇನ್ನೂ ಅನೇಕ ಕಡೆ ಆತನ ‘ಶ್ರೀ ಕೃಷ್ಣ ಪಾರಿಜಾತ ಕಂಪನಿ’ ಪ್ರದರ್ಶಿಸಿದ್ದು ಸರಿಸುಮಾರು 8000 ಕ್ಕೂ ಹೆಚ್ಚು ಪ್ರದರ್ಶನಗಳನ್ನು.
 ಅವರ ಹೆಸರು ಮಲ್ಲಯ್ಯಸ್ವಾಮಿ ಮಠಪತಿ(Mallayyaswami Mathapati), ಕರ್ನಾಟಕದ ಜನೆತೆಗೆ ‘ಶ್ರೀ ಕೃಷ್ಣ ಪಾರಿಜಾತ’ದ ಮೂಲಕ ಮಲ್ಲಯ್ಯಸ್ವಾಮಿ ಅಥಣಿ ಎಂದೇ ಹೆಸರುವಾಸಿಯಾಗಿದ್ದವರು. ಅನ್ನ, ಅಂಬಲಿ, ಹೆಸರು ನೀಡಿದ ಸ್ಥಳವನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಅವರು ಮಠಪತಿ ಎನ್ನುವ ಅಡ್ಡಹೆಸರಿನ ಬದಲಾಗಿ ಅಥಣಿಯನ್ನೇ ತಮ್ಮ ಅಡ್ಡ ಹೆಸರನ್ನಾಗಿ ಮಾಡಿಕೊಂಡಿದ್ದರು. ತಮ್ಮನ್ನು ಬೆಳೆಸಿದ ತಾಯ್ನೆಲದ  ಬಗೆಗೆ ಅವರಿಗಿರುವ ಕೃತಜ್ಞತೆ ಅಂಥದ್ದು. ಬೆಳಗಾವಿ ಜಿಲ್ಲೆಯ ಮೈಗುರು ಎಂಬಲ್ಲಿ 1939 ರಲ್ಲಿ ಜನಿಸಿದ ಅವರದು ಮೂಲತಃ ಗೌಡಿಕೆ ಮತ್ತು ಕುಸ್ತಿಪಟುಗಳ ಮನೆತನ.  ಯಾವುದೇ  ಆರ್ಥಿಕ ತೊಂದರೆಗಳು ಇಲ್ಲದ ಮನೆತನದಿಂದ ಬಂದ ಅವರಿಗೆ ಕಲಾಸೇವೆಯ ಮೂಲಕವೇ ಹೊಟ್ಟೆ ಹೊರೆದುಕೊಳ್ಳಬೇಕಾದ ಅವಶ್ಯಕತೆಯೇನೂ ಇರಲಿಲ್ಲ. ಆದರೆ ಕಲೆ ಅವರ ಆತ್ಮದ ಹಸಿವಾಗಿತ್ತು.  ತಂದೆ ಗುರುಪಾದಯ್ಯ ಮತ್ತು ತಾಯಿ ಕಾಶೀಬಾಯಿಯವರ 8 ಜನ ಮಕ್ಕಳಲ್ಲಿ 5 ನೇ ಮಗನಾಗಿ ಜನಿಸಿದ ಅವರಿಗೆ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯಲಾಗಲಿಲ್ಲ. ಅಪ್ಪಟ ನಿರಕ್ಷರಿಗಳು. ಆದರೆ ಕಲಾಸರಸ್ವತಿಯನ್ನು ತಮ್ಮ ಹುಟ್ಟುಪ್ರತಿಭೆ, ಕಠಿಣಶ್ರಮ ಮತ್ತು ಅನಂತ ಪ್ರಯತ್ನಗಳಿಂದ ಒಲಿಸಿಕೊಂಡವರು.  ತಾನು ಓದು-ಬರಹ ಬಲ್ಲವನಲ್ಲವಾದರೂ ಅಕ್ಷರ ಕಲಿತು, ಶಿಕ್ಷಕ ವೃತ್ತಿಯಲ್ಲಿ ಹೆಸರು ಮಾಡಿದ್ದ ತಮ್ಮ ಸಹೋದರ ಗಂಗಯ್ಯ ಗುರುಪಾದಯ್ಯ ಮಠಪತಿಯವರಿಂದ ಶ್ರೀ ಕೃಷ್ಣ ಪಾರಿಜಾತ ಹಾಗೂ ಇನ್ನು ಹಲವಾರು ಪೌರಾಣಿಕ ಕಥೆಗಳ ಸನ್ನಿವೇಶಗಳನ್ನು ಓದಿಸಿಕೊಂಡು, ಬರೀ ಮನನ ಶಕ್ತಿಯಿಂದಲೇ ನಿರಂತರ 8 ರಿಂದ 10 ಗಂಟೆಗಳ ಕಾಲ ಪ್ರದರ್ಶನ ನೀಡುವ ತಾಕತ್ತನ್ನು ಬೆಳೆಸಿಕೊಂಡಿದ್ದರು.
     ಹುಟ್ಟಿದ್ದು ಮೈಗುರು, ಕಂಪನಿ ಕಟ್ಟಿದ್ದು ಅಥಣಿ ಮತ್ತು ನೆಲೆಸಿದ್ದು ಜಮಖಂಡಿಯಲ್ಲಾದರೂ ಅವರ ಸಂವೇದನೆಗಳಿಗೆ ಸಾಕ್ಷಿಯಾಗಿದ್ದು ಕೋಹಳ್ಳಿ, ಅಡಹಳ್ಳಿ, ಅಡಳಹಟ್ಟಿ ಎನ್ನುವ ಅಷ್ಟೆನು ಜನರಿಗೆ ಚಿರಪರಿಚಿತವಲ್ಲದ ಚಿಕ್ಕ ಚಿಕ್ಕ ಊರುಗಳು. ಆದರೆ ಆ ನೆಲದ ಕಂಪು ನನ್ನ ದೊಡ್ಡಪ್ಪನ ಬಾಲ್ಯದುದ್ದಕ್ಕೂ ಮೈಹಾಸಿದ್ದವು ಮತ್ತು ಮುಂಬರುವ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕಿ ಕೊಟ್ಟಿದ್ದವು. 
       ಹೆಸರಾಂತ ಅಭಿಜಾತ ಕಲಾವಿದರಾದ ಅಪ್ಪಾಲಾಲ್ ನದಾಫ್, ಬರಗಿ ರಾಚಯ್ಯಸ್ವಾಮಿ ಹಾಗೂ ಕೇರುರು ಹೆಳವರಂತ ಗುರುಗಳ ಗರಡಿಯಲ್ಲಿ ಪಳಗಿದ ಅವರು ಕೆಲಕಾಲದ ನಂತರ ತಮ್ಮದೇ ಸ್ವಂತ `ವೆಂಕಟೇಶ್ವರ ಕೃಷ್ಣ ಪಾರಿಜಾತ ಕಂಪನಿ’ಯನ್ನು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಕಟ್ಟಿದರು. ಬ್ರಾಹ್ಮಣ, ದಲಿತ, ಕುರುಬ, ಲಿಂಗಾಯತ, ಮುಸ್ಲಿಂ ಎನ್ನುವ ಯಾವುದೇ ಜಾತಿ-ಮತಗಳ ಬೇಧವಿಲ್ಲದೆ ಬರೀ ಕಲೆಯನ್ನು ಉಸಿರಾಗಿಸಿಕೊಂಡವರ ದೊಡ್ಡ ಬಳಗವೇ ಅವರೊಂದಿಗಿತ್ತು.

         ಎಡಬಿಡದೆ ಕಲಾದೇವಿಯ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರಿಗೆ ಎಲ್ಲೆಲ್ಲೂ ಅಭಿಮಾನಿ ಬಳಗ ನಿರ್ಮಾಣವಾಗಿತ್ತು. ಕಾಲಕ್ರಮೇಣ ಬಯಲಾಟಗಳಷ್ಟೇ ಅಲ್ಲದೆ ಆಕಾಶವಾಣಿ, ದೂರದರ್ಶನಗಳಲ್ಲೂ ಅವರ 'ಶ್ರೀ ಕೃಷ್ಣ ಪಾರಿಜಾತ’ ಹೆಸರುವಾಸಿಯಾಗಿತ್ತು. ಅಷ್ಟೇ ಅಲ್ಲದೆ ನಾಡಿನ ಹೆಮ್ಮೆಯ ಉತ್ಸವಗಳಾದ 'ಮೈಸೂರು ದಸರಾ’, 'ಹಂಪಿ ಉತ್ಸವ’, 'ಚಾಲುಕ್ಯ ಉತ್ಸವ’, 'ನವರಸಪುರ ಉತ್ಸವ’ ಹಾಗೂ ಇನ್ನು ಹಲವಾರು ಕಡೆ ಅವರು ತಮ್ಮ ಪ್ರತಿಭೆಯನ್ನು ಮೆರೆದಿದ್ದರು. 2004 ರಲ್ಲಿ ಶ್ರೀಮತಿ ರಮಾದೇವಿ(Ramadevi) ರಾಜ್ಯಪಾಲರಾಗಿ, ಎಸ್.ಎಮ್ ಕೃಷ್ಣ(S.M.Krishna) ಅವರು ಮುಖ್ಯಮಂತ್ರಿಯಾಗಿದ್ದ  ಆವಧಿಯಲ್ಲಿ ಅವರಿಗೆ ಕನ್ನಡ ನಾಡಿನ ಅತ್ಯುನ್ನತ ಪ್ರಶಸ್ತಿಯಾದ `ರಾಜ್ಯೋತ್ಸವ ಪ್ರಶಸ್ತಿ’ವೂ ಒಲಿದುಬಂದಿತ್ತು. ತಮ್ಮ ಹೆಸರು ರುಜು ಮಾಡುವುದನ್ನು ಬಿಟ್ಟು ಮತ್ತೇನನ್ನು ಬರೆಯಲು ಆಗದ ಅನಕ್ಷರಸ್ಥ ವ್ಯಕ್ತಿಯೊಬ್ಬರು ಬರೀ ತವi್ಮ ಕಲಾ ನೈಪುಣ್ಯದಿಂದ ಎಲ್ಲೆಲ್ಲೂ ಮನೆಮಾತಾಗಿದ್ದರು. 
          ತಮಗೆ ದೊರೆತ ಗೌರವ, ಮನ್ನಣೆಗಳನ್ನು ತಲೆಗೆರಿಸಿಕೊಳ್ಳದೆ ವಿನಯಶೀಲರಾಗಿ ಬದುಕಿದ್ದ ಅವರು ನಾಡಿನ ಪ್ರಮುಖ ಅಕಾಡೆಮಿಗಳಲ್ಲೊಂದಾದ ಲಲಿತಕಲಾ ಆಕೆಡೆಮಿಯ ಸದಸ್ಯರಾಗಿದ್ದರು. ತಮ್ಮ ಅವಧಿಯಲ್ಲಿ ಹಲವಾರು ವೃತ್ತಿನಿವೃತ್ತ ಕಲಾವಿದರಿಗೆ ಮಾಶಾಸನಗಳನ್ನು ಕೊಡಿಸಿದರು, ಪ್ರತಿಭಾನ್ವಿತರನ್ನು ಪ್ರಚೋದಿಸಿ ಬೆಳೆಸಿದರು. ಅವರಿಗಾಗಿ ಹಲವಾರು ವೇದಿಕೆ, ಅವಕಾಶಗಳನ್ನು ಕಲ್ಪಿಸಿಕೊಟ್ಟರು.
        ಆಧುನಿಕತೆಯ ಬಿರುಗಾಳಿಗೆ ಸಿಕ್ಕು ನಶಿಸಿಹೋದ ಕಲೆಗಳು ಲೆಕ್ಕವಿಲ್ಲದಷ್ಟು. ದೀನೆ-ದೀನೆ ಜನರ ಆಸಕ್ತಿಗಳು, ಆಲೋಚನೆಗಳು, ಮನಸ್ಥಿತಿಗಳು ಬದಲಾದವು, ದಿನಗಟ್ಟಲೇ ಆಟ ನೋಡುವಷ್ಟು ವ್ಯವಧಾನವಿಲ್ಲದ ಸಂದರ್ಭಗಳು ಸೃಷ್ಟಿಯಾದವು. ಶ್ರೀ ಕೃಷ್ಣ ಪಾರಿಜಾತವನ್ಯಾಕೆ ನಾವು ಇಡೀ ರಾತ್ರಿಯಾಟದ ಬದಲಾಗಿ ಬರೀ ಮೂರುವರೇ ಗಂಟೆಗಳಷ್ಟು ಕಡಿಮೆ ಅವಧಿಗಿಳಿಸಿ ಪ್ರದರ್ಶಿಸಬಾರದು ಎಂದು ಅವರ ಕಂಪನಿಯ ಸದಸ್ಯರೊಬ್ಬರು ಕೇಳಿದಕ್ಕೆ ಅವರು ಹೇಳಿದ್ದರಂತೆ, “ನಾನು ತೀರಿಹೋಗುವವರೆಗೂ ಅಂಥ ಬದಲಾವಣೆಗೆ ನಾನು ಸಮ್ಮತಿಸುವುದಿಲ್ಲ” ಎಂದು. ಕಲೆ ಅವರಿಗೆ ಹೊಟ್ಟೆ ತುಂಬಿಸಿಕೊಳ್ಳುವ ಮಾಧ್ಯಮವಾಗಿರಲಿಲ್ಲ ಬದಲಾಗಿ ಅವರ ಆರಾಧ್ಯ ದೈವವಾಗಿತ್ತು. 
        ತಮ್ಮ ಇಡೀ ಕುಟುಂಬವನ್ನೇ ಅವಾರು ಕಂಪನಿಯ ನಿರಂತರ ಏಳಿಗೆಗಾಗಿ ತೊಡಗಿಸಿದ್ದರು. ಹೆಂಡತಿ, ಮಕ್ಕಳು ಯಾರೂ ಈ ಚೌಕಟ್ಟಿನಿಂದ ಹೊರತಾಗಿರಲಿಲ್ಲ, ಅಷ್ಟೇ ಅಲ್ಲದೇ ಸ್ವತಃ ಅವರಿಗೆ ಪಾರಿಜಾತ ಕಲಿಸಿದ ಹೆಸರಾಂತ ಕಲಾವಿದರಾದ ಅಪ್ಪಾಲಾಲ್ ನದಾಫ್, ಬರಗಿ ರಾಚಯ್ಯಸ್ವಾಮಿ ಹಾಗೂ ಕೇರುರು ಹೆಳವರಂತ ಗುರುಗಳು ಕೂಡ ತಮ್ಮ ಶಿಷ್ಯನ ಕಂಪನಿಯಲ್ಲಿ ಕೆಲಸ ಮಾಡಿದರು. ಆ ಕಾಲದಲ್ಲೇ ನರ್ಸ್ ಆಗಿದ್ದ ಕಮಲಾಕ್ಷಿ ಎನ್ನುವ ದಲಿತ ಸಮುದಾಯದ ಮಹಿಳೆ ಮತ್ತು ಹೆಸರಾಂತ ಕಲಾವಿದೆಯೊಬ್ಬರು ತಮ್ಮ ಸರಕಾರಿ ವೃತ್ತಿಯನ್ನು ಧಿಕ್ಕರಿಸಿ ಪಾರಿಜಾತಕ್ಕೆ ಮನಸೋತು ತಮ್ಮ ಕೊನೆಯ ಉಸಿರಿರುವವರೆಗೂ ಆ ಕಂಪನಿಯಲ್ಲೇ ದುಡಿದರು. ಮುಸ್ಲಿಂ ಕಲಾವಿದರೊಬ್ಬರು ಸತ್ಯಭಾಮೆಯ ಪಾತ್ರದ ಮೂಲಕವೇ ಮನೆಮಾತಾಗಿದ್ದರು. ಅವರ ಹೆಂಡತಿ ಮಹಾದೇವಿಯವರಾಗಿರಬಹುದು, ಪ್ರಸ್ತುತ ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ಎರಡನೆಯ ಮಗ ಮುರುಗೇಶ ಮಠಪತಿ ಆಗಿರಬಹುದು, ಉಪನ್ಯಾಸಕನಾಗಿದ್ದುಕೊಂಡು ತಂದೆಯ ಆಶೋತ್ತರಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದ ಅವರ ಮೊದಲ ಮಗ ಕೃಷ್ಣಕುಮಾರ ಮಠಪತಿ ಇರಬಹುದು, ಹೀಗೆ ಅವರ ಬಳಗ ಕಲಾಸೇವೆಯನ್ನೇ ಬದುಕಿನ ಧ್ಯೆಯವಾಗಿಸಿಕೊಂಡು ಪ್ರಚಾರದ ವ್ಯಾಮೋಹಕ್ಕೆ ಬೀಳದೆ ತಮ್ಮ ಬದುಕನ್ನು ಸಾರ್ಥಕವಾಗಿಸಿಕೊಂಡವರು.

       ಅವರೊಂದಿಗಿನ ನನ್ನ ಅನುಭವಗಳು ಕವಿತೆ, ಕಥನ, ಅಂಕಣಗಳ ರೂಪದಲ್ಲಿ ಹಲವಾರು ಆಯಾಮಗಳಲ್ಲಿ ಪ್ರಕಟಗೊಂಡಿವೆ. ‘ಅಕ್ಕ’ ಎನ್ನುವ ನನ್ನ ಕವಿತೆ ಇರಬಹುದು, ಇತ್ತಿಚಿಗೆ ‘ಸಿಹಿಗಾಳಿ’ಯಲ್ಲಿ ಪ್ರಕಟಗೊಂಡ `ಪಾರಿಜಾತವೆಂದರೆ ಅವಳೇ’ ಎನ್ನುವ ನನ್ನ ಅಂಕಣವಿರಬಹುದು, ನನ್ನ ಬರಹಗಳಲ್ಲಿ ಆಗಾಗ ಬಂದು ಮಿಂಚಿ ಹೋಗುವ ಹಲವಾರು ಪಾತ್ರಗಳಿರಬಹುದು, ಪ್ರಕಟನೆಯ ಹಂತದಲ್ಲಿರುವ ನನ್ನ ‘ಈ ಸಾಕಿಯರ ಕೈ ಸೋಕಿ’ ಎನ್ನುವ 15 ಮಹಿಳೆಯರ ತುಡಿತದ ಬದುಕಿರಬಹುದು, ಇದೆಲ್ಲವೂ ನನ್ನ ದೊಡ್ದಪ್ಪ ಎನ್ನುವ ಜಂಗಮನ ಜೋಳಿಗೆಯಿಂದಲೇ ನಾನು ಆಯ್ದುಕೊಂಡ ಮುತ್ತುಗಳು. ಅವರೇ ಈ ಎಲ್ಲ ನಿವೇದನೆಗಳ ಮೂಲ ಸೆಲೆ. ಜಗದ ಲೆಕ್ಕಾಚಾರಗಳನ್ನು ಮುರಿದು ತನ್ನದೆ ಶೈಲಿ, ಗತ್ತು, ಗೈರತ್ತಿನಿಂದ ಬದುಕಿದ ನನ್ನ ದೊಡ್ದಪ್ಪ ಮೊಗೆದಷ್ಟು ಸಿಗುವ ಬತ್ತದ ಖಣಜ. ಹಾಡು, ಹೆಣ್ಣು, ಹೆಂಡ, ಕಲೆ ಎಲ್ಲವನ್ನು ಸಮನಾಗಿ  ಆರಾಧಿಸಿಕೊಂಡು ಬಂದ ಅವರಿಗೆ ಬೇಧ ಗೊತ್ತಿರಲಿಲ್ಲ. `ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಬದುಕಿದ್ದ ಅವರಿಗೆ ಅವರೇ ಸಾಟಿ. ಮಲ್ಲಯ್ಯಸ್ವಾಮಿ ಮಠಪತಿ ಈಗುಳಿದಿದ್ದ `ಶ್ರೀ ಕೃಷ್ಣ ಪಾರಿಜಾತ’ ಪರಂಪರೆಯ ಕೊನೆಯ ಕೊಂಡಿ. ಈಗ ಅದೂ ಕಳಚಿ ಬಿದ್ದಿತು. ಅಭಿಜಾತ ನಾನಿನ್ನೂ ಅವರೊಂದಿಗೆ ಸಾಕಷ್ಟು ಮಾತನಾಡುವುದಿತ್ತು, ಕೇಳುವುದಿತ್ತು, ಹೇಳುವುದಿತ್ತು, ಆದರೆ ನನ್ನ ಎಣಿಕೆಗೆ ಸಿಗದಂತೆ ಆ ಪಾತ್ರ ನನ್ನಿಂದ ಧಿಡಿರನೇ ಕಣ್ಮರೆಯಾಗಿಬಿಟ್ಟಿದೆ. ಎಷ್ಟೋ ಅಮೂಲ್ಯ ಅನುಭವಗಳಿಂದ ನಾನು ವಂಚಿತನಾಗಿಬಿಟ್ಟೆ ಎನ್ನುವ ದುಃಖ ನನ್ನನ್ನು ಕಾಡುತ್ತಿದೆ. ಈಗ ನಾನು ನನ್ನದೇ ಸಾಲುಗಳನ್ನು ಮತ್ತೇ ನೆನಪಿಸಿಕೊಳ್ಳುವಂತಾಗಿದೆ-
“ಯಾರು ಹೂವಿನ ಹಾಗೆ ಸೋಕಿ ಹೊದವರು
ಎದೆಯ ಬಟ್ಟಲ ತುಂಬಾ ಒಲವನೆರೆದವರು
  ಒಳಗೆ ದೀಪವನಿಟ್ಟು ಹೊರಗೆ ಹೋದವರು”

Wednesday, October 30, 2013

ಮುಲ್ಲಾ-ಮಠಪತಿ ಯಾವೂರಿಗೆ?

ಬಹುತೇಕ ಪದವಿಯ ಮುನ್ನಾ ದಿನಗಳು, ಮನೆಯೊಳಗೇನೊ ಒಂದು ಸುಳ್ಳು ಹೇಳಿ, ಗೆಳೆಯ ಬಸೀರ್‍ನೊಂದಿಗೆ ಊರು ಬಿಟ್ಟು ಓಡಿಬಿಟ್ಟಿದ್ದೆ. ಆಗಷ್ಟೆ ಮಾವನ ಹೊಟೇಲಿನಲ್ಲಿ ಗಲ್ಲೆಯ ಮೇಲೆ ಕುಳಿತುಕೊಳ್ಳುತ್ತಿದ್ದ ಆತನ ಜೇಬಿನ ತುಂಬಾ ದುಡ್ಡಿತ್ತು, ನನ್ನ ತಲೆ ತುಂಬಾ ಕನಸುಗಳಿದ್ದವು. ಇಬ್ಬರೂ ಹೊರಟು ಬಂದದ್ದು ಎಲ್ಲಿಗೆ? ಧಾರವಾಡಕ್ಕೆ. ಅಲ್ಲಿಂದ ಶಿರಹಟ್ಟಿಗೆ. ಅಲ್ಲಿ ಯಾರಿದ್ದರು? ಬಂಧು ಮಿತ್ರರೇನಾದರೂ ಇದ್ದರೇ? ಅದೇನು ಹೆಣ್ಣು-ಹೆಂಡದ ಅದ್ಧೂರಿಯ ಊರೇ? ಅಲ್ಲೇನು ಜಾತ್ರೆ ನಡೆದಿತ್ತೋ? ಯಾವುದು ಇಲ್ಲ. ಸಾಮಾನ್ಯವಾಗಿ ಬಾಲಕರನ್ನೋ, ಯುವಕರನ್ನೋ ಆಕರ್ಷಿಸಬಹುದಾದ ಯಾವ ಚಟುವಟಿಕೆಗಳೂ ಅಲ್ಲಿ ನಡೆದಿರಲಿಲ್ಲ. ಆದಾಗ್ಯೂ ನಾನು ಮಠಪತಿ, ಆತ ಮುಲ್ಲಾ, ಎಲ್ಲೋ ಹೊರಟಿದ್ದೀರಿ? ಎಂದು ಯಾರಾದರೂ ಕೇಳಿದ್ದರೇ ಖಂಡಿತವಾಗಿಯೂ ನಮ್ಮ ಬಳಿ ಯಾವ ಉತ್ತರವೂ ಇರಲಿಲ್ಲ. ಒಟ್ಟಾರೆ ಹೊರಟೆವು. ಇತ್ತ ಮಸೀದಿಯೂ ಅಲ್ಲದ, ಅತ್ತ ಮಠವೂ ಅಲ್ಲದ ಶಿರಹಟ್ಟಿಯ ಫಕೀರೆಶ್ವರನ ಸನ್ನಿಧಾನದಲ್ಲಿ ಎರಡು ದಿನ ಕಳೆದೆವು. ಆನಂತರ ಎರಡು ದಿನ ಧಾರವಾಡದಲ್ಲಿ. ಆಮೇಲೆ ಮರಳಿ ಊರಿಗೆ. ಹಾಗೆ ಅಂದು ಅರ್ಥಹೀನವಾಗಿ ತಿರುಗಾಡಿದ್ದ ಎರಡೂ ಊರುಗಳು ಇಂದು ನನ್ನ ಬದುಕಿನ ಅರ್ಥದ, ಆರ್ಥಿಕತೆಯ ತಾಣಗಳಾಗಿವೆ. ಧಾರವಾಡ ನನ್ನ ತಂದೆ-ತಾಯಿ, ತಮ್ಮ ಮತ್ತು ಸಾಹಿತ್ಯವನ್ನು ಕಾಪಿಟ್ಟ ನೆಲವಾದರೆ ಶಿರಹಟ್ಟಿ ನಾನು ಮತ್ತೆ ಮತ್ತೆ ಭೇಟ್ಟಿಕೊಟ್ಟ ಸ್ಥಳವಾಗಿದೆ.

        ಧಾರವಾಡ ನನ್ನೂರೇ ಆಗಿ ಹೋಗಿದೆ. ಶಿರಹಟ್ಟಿ, ಶಿಶುನಾಳ ಮತ್ತು ಸಂಶಿಗಳು ನನ್ನ ಪ್ರೀತಿಯ ಸೂಫಿಗಳ ದರ್ಶನದ ನೆಲವಾಗಿದೆ. 2000ದ ಇಸ್ವಿಯಲ್ಲಿ ನಾನು ಗುಳೇದಗುಡ್ಡದಲ್ಲಿ ಅರೆಕಾಲಿಕ ಉಪನ್ಯಾಸಕನಾಗಿದ್ದಾಗ, ನನ್ನೊಂದಿಗೇ ಇದ್ದ ಗೆಳೆಯ ಮಹಾಂತೇಶ ಭಜಂತ್ರಿಯನ್ನು ಪೂರ್ಣಪ್ರಮಾಣದ ಉಪನ್ಯಾಸಕನಾಗಿ ಶಿರಹಟ್ಟಿಯ ಎಫ್.ಎಂ.ಡಬಾಲಿ ಪದವಿಪೂರ್ವ ಕಾಲೇಜಿಗೆ ಉಪನ್ಯಾಸಕನಾಗಿ ನಾನು, ಹಿರಿಯ ಕವಿಮಿತ್ರ ಮಹಾದೇವ ಕಣವಿ ಹಾಗೂ ಶ್ರೀ ಆರ್.ಜಿ.ಕುಲಕರ್ಣಿ ಬಿಟ್ಟ ಬಂದ ನೆನಪು. 2003 ರಲ್ಲಿ ಮತ್ತೊಮ್ಮೆ ನನ್ನ ಸಂಸಾರಿಕ ಆರಂಭದ ದಿನಗಳಲ್ಲಿ ಇದೇ ಕಾಲೇಜಿಗೆ ಒಂದು ವಿಶೇಷ ಉಪನ್ಯಾಸ ನೀಡಲು ಹೋಗಿದ್ದ ನೆನಪು. ಈಗ ಸರಿಯಾಗಿ ಹತ್ತು ವರ್ಷಗಳ ನಂತರ ಮೂರನೆಯ ಬಾರಿ ಇಲ್ಲಿಗೆ ಹೋಗುವ ಸಂದರ್ಭ.
        ಊರು ಒಂದೇ ಆದರು ಸಂದರ್ಭಗಳು ಭಿನ್ನ ಭಿನ್ನ. ಬದುಕಿನ ನಲವತ್ತೆರಡನೆಯ ವರ್ಷದ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮರುದಿನವೇ (13/09/2013) ನಾನು ಮತ್ತೆ ಇದೇ ಕಾಲೇಜಿನ ಆವರಣದಲ್ಲಿ ಭಾಷಣ ಮಾಡಲು ನಿಂತುಕೊಂಡಿದ್ದೆ. ಉದ್ದೇಶ ಪೂರ್ವಕವಾಗಿ ಯತ್ನಿಸಿದರೂ ಸಾಧ್ಯವಾಗಲಾರದ ಸಂಯೋಜನೆ ಈ ಕಿರು ಕಾರ್ಯಕ್ರಮಕ್ಕೆ ಒದಗಿಬಂದಿತ್ತು. ಬಹುತೇಕ ಅತ್ಯಂತ ಎಳೆಯ ಗೆಳೆಯ, ತಂದೆ-ತಾಯಿ ನನ್ನೊಂದಿಗೆ ಹಂಚಿಕೊಂಡ ಮೊದಲ ವೇದಿಕೆ ಇದೇ ಆಗಿರಬಹುದು. ಎದುರುಗಡೆ ಹೆಂಡತಿ, ಮಗಳು ತರಂಗಿಣಿ ಹಾಗೂ ಬಾಲ್ಯದ ಆ ಹುಂಬುತನದ ಪ್ರವಾಸದಿಂದ ಇಂದಿನ ಹುಡುಕಾಟದ ಅಲೆಮಾರಿತನದವರೆಗಿನ ಎಷ್ಟೆಲ್ಲ ನೆನಪುಗಳು. ಈ ಕಾರ್ಯಕ್ರಮ ಖಂಡಿತವಾಗಿಯು ನನ್ನ ಬೌದ್ಧಿಕತೆಯ ಪ್ರದರ್ಶನವಾಗಿರಲಿಲ್ಲ ಬದಲಾಗಿ ನೆನಪುಗಳ ಕನವರಿಕೆ ಅಷ್ಟೆ.
 ಡಬಾಲಿ ಕಾಲೇಜಿನ ಪ್ರಾಚಾರ್ಯ ಎನ್.ಬಿ.ಕಲಾವಂತ, ಉಪನ್ಯಾಸಕರುಗಳಾದ ಶ್ರೀ ಎನ್.ಹನುಮರೆಡ್ಡಿ, ಪಂಗನ್ನವರ್ ಹಾಗೂ ಅಂದು ತಮ್ಮ ಸಾಧನೆಗಳಿಂದಾಗಿ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿ ವೃಂದ ನನ್ನ ಇಡೀ ಪಿ.ಯು.ಸಿ ದಿನಗಳನ್ನ ಅಲೆ ಅಲೆಯಾಗಿ ಕಣ್ಣು ಮುಂದೆ ಹರಿಯುವಂತೆ ಮಾಡಿದವು. ಕವಿಯೊಬ್ಬನ ಬದುಕಿನ ಸಾರ್ಥಕಗಳಿಗೆ ಅವನ ಕವಿತೆ ಯಾರದೋ ಕಂಠದಿಂದ ಹಾಡಾಗಿ ಹೊರ ಚಿಮ್ಮಿದಾಗ. ಈ ಸಮಾರಂಭ ಅದಕ್ಕೂ ಸಾಕ್ಷಿಯಾಯಿತು. ಇಲ್ಲಿ ನನ್ನ ಹಾಡು -                                                                                                                                     ನನ್ನೂರು ಧಾರವಾಡ
                                                                    ನನ್ನ ಹಿಂಗ್ ಕಾಡಬ್ಯಾಡ
                                                        ಹಾಡಲ್ಪಟ್ಟಿತು.


Sunday, September 15, 2013

ತತ್ವ ಸಾಹಿತ್ಯದಲ್ಲಿ ಅನುಭಾವ

  “ಆರು ನಾನೆಂದು ವಿಚಾರಿಸುವ ವಿಷಮ
ಸಂಸಾರವಿದನು ಕನಸೆಂದರಿ”
                                                                                         -ನಿಜಗುಣ ಶಿವಯೋಗಿ

       ತತ್ವಪದ ಸಾಹಿತ್ಯದ ಆರಂಭಿಕರಲ್ಲಿ ಅತ್ಯಂತ ಮಹತ್ವದವರು ನಿಜಗುಣ ಶಿವಯೋಗಿಗಳು. ಅನುಭಾವದ ಅದ್ಭುತ ಬೆಳಕಿನಲ್ಲಿ ರಚನೆಯಾದ ಅವರ ಸಾಹಿತ್ಯದ ಪ್ರತಿ ಸಾಲೂ ಜೀವನ ದರ್ಶನದ ಸೂಕ್ತಿಗಳು. ಅವರ ಒಂದು ಪದ್ಯ
ನಂಬು ಜ್ಞಾನವನೆ ಕರ್ಮವೆಂಬ ಜಾಲದೊಳು ಸಿಲುಕಿ
ಹಂಬಲಿಸದಿರು ಮುಕ್ತಿಯ ಬಯಸಿ.
ಇದು ನಿಜಗುಣ ಶಿವಯೋಗಿಗಳು ಜ್ಞಾನಕ್ಕೆ ನೀಡಿದ ಮಹತ್ವವನ್ನು ಸಾರುವ ಒಂದು ಪದ್ಯವಷ್ಟೆ. ಗಮನಿಸಬೇಕಾದ ಅಂಶ, ಅನುಭಾವದ ಅರಿವಿನಲ್ಲಿ ತತ್ವಪದಗಳನ್ನು ಬರೆದ ನಿಜಗುಣ ಶಿವಯೋಗಿಗಳಿಗಾಗಲಿ ಅಥವಾ ಇನ್ನ್ಯಾವುದೇ ತತ್ವಪದಕರರಿಗಾಗಲಿ ಧರ್ಮ, ಧಾರ್ಮಿಕ ಚಿಂತನೆ ವ್ಯಸನವಲ್ಲ, ಮಿತಿಯಲ್ಲ. ಅದು ಆತ್ಮವನ್ನು ಅರಿಯುವ ಅನಂತತೆಯ ದಾರಿ. ಅವರೇ ಹೇಳುವಂತೆ ಇದು
ಮುಸುಕಿದ ವಿಷಯಪತಂಗ ಬಿದ್ದುರುಳೆ
ತಾಮಸಬುದ್ಧಿಯೆಂಬ ಕತ್ತಲೆಯಳಿಯ
ಮಸಗಿ ಸುಜ್ಞಾನವೆಂಬ ಮಹಾಪ್ರಭೆ
ಪಸರಿಸಿ ಮಾಯಾಕಾಳಿಕ ಪೋರ್ದದನುಪಮ
 ಹೀಗೆ ತತ್ವಪದ ಎನ್ನುವುದು ಆತ್ಮದೊಂದಿಗಿನ ನಿರಂತರ ಸಂವಾದ, ತಾಮಸ ಬುದ್ಧಿ ಅಳಿಸಿ, ಸುಜ್ಞಾನದ ಪ್ರಭೆಯನ್ನು ಪಸರಿಸುವ ಶಕ್ತಿ..
       ತತ್ವಪದಕಾರರು ಮೂಲತಃ ಅನುಭಾವಿಗಳು. ಅವರು ಧರ್ಮಜಿಜ್ಞಾಸುಗಳೂ ಕೂಡ. ಆದರೆ ಧಾರ್ಮಿಕ ಸಾಹಿತ್ಯದಲ್ಲಿ ತೊಡಗಿದ ಕವಿಗೆ ಆಯಾ ಮತ-ಧರ್ಮವನ್ನು ಕುರಿತ ಶ್ರದ್ಧೆ ಮುಖ್ಯವಾದರೆ, ‘ಅನುಭಾವ ಸಾಹಿತ್ಯ’ಗಳಲ್ಲಿ ಅವನ್ನು ಬರೆಯುವವನಿಗೆ ಕೇವಲ ಧರ್ಮಶ್ರದ್ಧೆ ಮಾತ್ರವಲ್ಲದೆ, ಒಂದು ಬಗೆಯ ಆಧ್ಯಾತ್ಮಿಕ ನಿಲುವೂ ಮತ್ತು ಅದರೊಂದಿಗೆ ವೈಯಕ್ತಿಕವಾದ ಸಾಧನೆಯೂ ಮುಖ್ಯವಾಗುತ್ತದೆ. ಕವಿ ಇಲ್ಲಿ ಒಬ್ಬ ಸಾಧಕ. ವಚನಗಳನ್ನು ಬರೆದ ಬಸವಣ್ಣ, ಕೀರ್ತನೆಗಳನ್ನು ಬರೆದ ಪುರಂದರದಾಸ, ತತ್ವಪದಗಳ ಅದ್ವರ್ಯರಾದ ನಿಜಗುಣ ಶಿವಯೋಗಿ ಹಾಗೂ ಇತರರನ್ನು ಅನುಭಾವ ಮಾರ್ಗದ ಸಾಧಕರೆಂದು ಪರಿಗಣಿಸಬಹುದು.  ಅನುಭಾವ ಸಾಹಿತ್ಯ ನಿರ್ಮಿತಿಗೆ ಒಂದು ಬಗೆಯ ‘ಸಾಧಕ’ ಮನೋಭಾವ, ಆಧ್ಯಾತ್ಮಿಕ ಅನುಭವಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಹಂಬಲ ಅಗತ್ಯ. ಇಂಥ ನೆಲೆಯಿಂದ ಬರೆದವರು ವಚನಕಾರರು, ಹರಿದಾಸರು, ಹಾಗೂ ತತ್ವಪದಕಾರರು. ‘ಅನುಭಾವ ಸಾಹಿತ್ಯ’ ಎನ್ನುವುದು, ಭಕ್ತಿ ಸಾಹಿತ್ಯದೊಳಗಿನ ಒಂದು ಪ್ರಭೇದವಾಗಿರುವಂತೆಯೇ ತತ್ವಪದ ಅನುಭಾವ ಸಾಹಿತ್ಯದ ಅಭಿವ್ಯಕ್ತಿಯಾಗಿ ಪ್ರಕಟವಾಯಿತು. ‘ಅನುಭಾವ’ ಒಂದು ಮಾನಸಿಕ ನಿಲುವು. ಅನುಭಾವಿಯು ಮೂಲತಃ ಭಕ್ತನಾಗಿದ್ದರೂ, ಅದನ್ನೂ ಮೀರುತ್ತಾನೆ. ಆದರೆ ‘ಭಕ್ತ’ರಾದವರೆಲ್ಲರೂ ಅನುಭಾವದ ನೆಲೆಗೆ ಏರಿದವರಾಗಿರುತ್ತಾರೆಂದು ಹೇಳಲು ಬಾರದು.
           ಶರಣ ಚಳವಳಿಯ ಅಲ್ಲಮಪ್ರಭು ಈ ಸಂದರ್ಭದಲ್ಲಿ ಕನ್ನಡನಾಡು ಕಂಡಂತಹ ಮೊಟ್ಟಮೊದಲ ನಿಜವಾದ ಅನುಭಾವಿ. ಅನುಭಾವಿಯಾದ ಅಲ್ಲಮನಿಗೂ, ಅಂದಿನ ಸಾಮಾಜಿಕ-ಧಾರ್ಮಿಕ ಸ್ವರೂಪದ ಶರಣಸಂಘಟನೆಗೂ ಇರುವ ಸಂಬಂಧ ವಿಶಿಷ್ಟವಾದುದಾಗಿದೆ. ಮೂಲತಃ ಯಾವುದಕ್ಕೂ ಅಂಟಿಕೊಳ್ಳದಂತಹ ನಿಲುವಿನ ಅಲ್ಲಮ ಈ ಚಳವಳಿಯ ಮೂಲಕ ಹಾದುಹೋದ ಒಂದು ಮಿಂಚಿನ ಗೆರೆ. ಅಕ್ಕಮಹಾದೇವಿಯೂ ಅಷ್ಟೆ. ಆತನ ಆಧ್ಯಾತ್ಮಿಕ ಪ್ರಭುತ್ವವನ್ನು ಎಲ್ಲ ಶಿವಶರಣರೂ ಗೌರವದಿಂದ ಒಪ್ಪಿಕೊಂಡರು. ಅಲ್ಲಮನು ಅನುಭವಮಂಟಪದ ಅಧ್ಯಕ್ಷನಾಗಿದ್ದನೆಂಬ ಸಂಗತಿ ಈ ಗೌರವದ ಪ್ರತೀಕವಾಗಿದೆ. ಈ ದೃಷ್ಟಿಯಿಂದ ಅವನನ್ನು ‘ಪ್ರಭು’ ಎಂದು ಕರೆದದ್ದು ಅನ್ವರ್ಥಕವಾಗಿದೆ. ಈ ‘ಪ್ರಭು’ ಎನ್ನುವುದು ಇಟ್ಟ ಹೆಸರಿರಲಾರದು; ಅವರೆಲ್ಲರೂ ಕೊಟ್ಟ ಹೆಸರಾಗಿರಬಹುದು.
         ಹೊಸದಾಗಿ ರೂಪುಗೊಳ್ಳುತ್ತಿದ್ದ ಆ ಶರಣಧರ್ಮದ ಅನೇಕ ಗ್ರಹಿಕೆಗಳನ್ನು, ವಿಚಾರಗಳನ್ನು ತನ್ನ ವಿವೇಕದಿಂದ ಚಿಕಿತ್ಸೆಗೆ ಒಳಪಡಿಸಿದ್ದಷ್ಟೇ ಅಲ್ಲ, ಹಲವು ಚಿಂತನೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟವನು ಅಲ್ಲಮ. ಒಂದೆರಡು ನಿದರ್ಶನಗಳು.
         ಸಂಸಾರದೊಳಗಿದ್ದು ಶಿವಯೋಗವನ್ನು ಸಾಧಿಸುವುದು ಈ ಶರಣ ಧರ್ಮದ ಮುಖ್ಯ ತಾತ್ತ್ವಿಕ ನೆಲೆ. ಭಾರತೀಯ ಜೀವನ ದೃಷ್ಟಿ ಬದುಕನ್ನು ಇಹ-ಪರ ಎಂದು ವಿಭಾಗಿಸಿ, ಇಹಕ್ಕಿಂತ ‘ಪರ’ದ ಮೇಲೆ ಹೆಚ್ಚು ಒತ್ತನ್ನು ಕೊಡುವ ಪ್ರವೃತ್ತಿಯನ್ನು ಬೆಳೆಯಿಸಿಕೊಂಡ ಹಂತದಲ್ಲಿ, ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ’ ಎಂದು ಬಸವಣ್ಣನವರು ಹೇಳಿದರೆ, ಇದನ್ನು ಸಮರ್ಥಿಸುವಂತೆ, ಅಲ್ಲಮಪ್ರಭು -
ಕೊಟ್ಟಕುದುರೆಯ ನೇರಲರಿಯದೆ
ಮತ್ತೊಂದು ಕುದುರೆಯ ಬಯಸುವವರು
ವೀರರೂ ಅಲ್ಲ ಧೀರರೂ ಅಲ್ಲ,
ಇದು ಕಾರಣ
ನೆರೆ ಮೂರು ಲೋಕವೆಲ್ಲವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರ ಲಿಂಗವನ್ನವರೆತ್ತ ಬಲ್ಲರೋ
ಎಂಬ ಮಾತಿನಲ್ಲಿ ಈ ನಿಲುವನ್ನು ಸೊಗಸಾಗಿ ಸಮರ್ಥಿಸುತ್ತಾನೆ.
         ಮಾಯೆಯನ್ನು ಕುರಿತು ಶಿವಶರಣರ ನಿಲುವು, ಪರಂಪರಾಗತ ನಿಲುವಿಗಿಂತ ಬೇರೆಯಾದದ್ದು. ಅಲ್ಲಮ ಮಾಯೆಯನ್ನು ಕುರಿತು-
ಹೊನ್ನು ಮಾಯೆ ಎಂಬರು
ಹೊನ್ನು ಮಾಯೆ ಅಲ್ಲ,
ಹೆಣ್ಣು ಮಾಯೆ ಎಂಬರು
ಹೆಣ್ಣು ಮಾಯೆ ಅಲ್ಲ,
ಮಣ್ಣು ಮಾಯೆ ಎಂಬರು
ಮಣ್ಣು ಮಾಯೆ ಅಲ್ಲ.
ಮನದ ಮುಂದಣ ಆಸೆಯೇ
ಮಾಯೆ ಕಣಾ ಗುಹೇಶ್ವರಾ.
ಎಂದು ಹೇಳುವುದರ ಮೂಲಕ ‘ಮಾಯೆ’ಯನ್ನು ಕುರಿತು ಮಾಡುವ ವ್ಯಾಖ್ಯಾನ ಅತ್ಯಂತ ವಿಶಿಷ್ಟವಾದುದಾಗಿದೆ.
            ಒಂದು ಮತ-ಧರ್ಮ ಪ್ರಸಾರದ ಸಂದರ್ಭದಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಭಾವಾವೇಶಗಳನ್ನೂ ಅವಿಚಾರಿತ ನಡವಳಿಕೆಗಳನ್ನೂ ತಿದ್ದಿ ಅದನ್ನು ವೈಚಾರಿಕತೆಯ ಹಾಗೂ ವಾಸ್ತವದ ನೆಲೆಗಳಿಗೆ ತರುವ ಕೆಲಸ ಬಹುಮುಖ್ಯವಾದದ್ದು. ಅಲ್ಲಮ ಈ ಕಾರ್ಯವನ್ನು ತುಂಬಾ ನಿರ್ದಾಕ್ಷಿಣ್ಯವಾಗಿ ನಿರ್ವಹಿಸುತ್ತಾನೆ. ಈ ದಾಸೋಹದ ಸಂತೆಯನ್ನು ಕಂಡು-
ಇಷ್ಟಲಿಂಗಕ್ಕೆ ತೋರಿ
ಮೃಷ್ಟಾನ್ನ ಹೊಡವರಿಗೆ
ಅದೆಲ್ಲಿಯದೊ ಇಷ್ಟಾರ್ಥಸಿದ್ಧಿ?
ಅದೆಲ್ಲಿಯದೊಲಿಂಗ? ಅದೆಲ್ಲಿಯದೊ ಜಂಗಮ?
ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು
ಗುಹೇಶ್ವರಾ.
ಎನ್ನುತ್ತಾನೆ. ಅಲ್ಲಮ ಕಂಡದ್ದು ತೋರಿಕೆಯ ಭಕ್ತಿಗೂ ನಿಜವಾದ ಅನುಭಾವಕ್ಕೂ ಇರುವ ಅಂತವರನ್ನು; ಕೇವಲ ‘ಅಂಗಜೀವಿ’ಗಳು ಅಶನಕ್ಕೆ ನೆರೆದು ‘ಲಿಂಗವಾರ್ತೆ’ಯನ್ನು ನುಡಿಯುವ ವಿಡಂಬನೆಯನ್ನು; ಆತನಿಗೆ ಅನ್ನಿಸಿತು-
ಹೊಟ್ಟೆಯ ಮೇಲೆ ಕಟ್ಟೋಗರದ
ಬುತ್ತಿಯ ಕಟ್ಟಿದರೇನು
ಹಸಿವು ಇಂಗಬಲ್ಲುದೆ?
ಅಲ್ಲಮನು ಧರ್ಮದ ಹೆಸರಿನಲ್ಲಿ ನೆರೆದ, ಹುಸಿ ಭಕ್ತರ ಸಮೂಹವನ್ನು ವಿಮರ್ಶಕನ ಚಿಕಿತ್ಸೆಗೆ ಒಳಗುಪಡಿಸಿದ ಕ್ರಮ ಇದು.
ಅಲ್ಲಮನ ಉಕ್ತಿಗಳು ಸಮಕಾಲೀನರ ಉಕ್ತಿಗಳಿಗಿಂತ ಬೇರೆಯಾಗಿ ತೋರುವುದು, ಅವು ನಿಜವಾದ ಅನುಭಾವಿಯೊಬ್ಬನ ನಿಲುವುಗಳನ್ನೂ, ಕಾಣ್ಕೆಗಳನ್ನೂ ಅಭಿವ್ಯಕ್ತಿಸುತ್ತವೆ ಎಂಬುದರಿಂದ.
ಅಲ್ಲಮನದು ಒಂದು ರೀತಿಯ ಉದ್ದೇಶಿತ ರಹಸ್ಯ ಭಾಷೆ. ಈ ಭಾಷೆ ಭಾರತದಲ್ಲಿ ರೂಪುಗೊಂಡದ್ದು ಬೌದ್ಧಧರ್ಮ ತನ್ನ ಮೂಲ ಸ್ವರೂಪವನ್ನು ಕಳೆದು ಕೊಂಡು, ಜನಪ್ರಿಯತೆಗಾಗಿ ಮಂತ್ರ-ತಂತ್ರಾದಿ ಹಾಗೂ ಗುಪ್ತ ವಾಮ ಮಾರ್ಗಗಳನ್ನು ಅಳವಡಿಸಿಕೊಂಡು ವಜ್ರಯಾನ ಎಂಬ ಪಂಥವಾದಾಗ ಎಂದು ಹೇಳಲಾಗಿದೆ. ಮುಂದೆ ಬಂದ ಸಿದ್ಧಪಂಥ, ನಾಥಪಂಥಗಳೂ ಈ ‘ಸಂಧಾಭಾಷೆ’ಯ ಅಭಿವ್ಯಕ್ತಿ ಕ್ರಮವನ್ನು ಮುಂದುವರಿಸಿಕೊಂಡು ಬಂದವುಗಳಾಗಿವೆ.
            ಅಲ್ಲಮನ ವಚನಗಳು ಮೂಲತಃ ಅನುಭಾವದ ನೆಲೆಯಿಂದ ಹುಟ್ಟಿದವುಗಳಾಗಿವೆ. ಅನುಭಾವಿಯ ದೃಷ್ಟಿ ಎಂದರೆ ಅದು ಸದಾ ಮೂರ್ತದಿಂದ ಅಮೂರ್ತಕ್ಕೆ ಹಾಯುವಂಥದು. ಅಲ್ಲಮನ ಅಭಿವ್ಯಕ್ತಿಗಳಲ್ಲಿ ಮೂರ್ತಾಮೂರ್ತಗಳೆರಡನ್ನೂ ಏಕಕಾಲಕ್ಕೆ ಗುರುತಿಸಬಹುದು. ದೈವದ ನಿಲುವನ್ನು ಕುರಿತು ‘ಶಬ್ದದೊಳಗಣ ನಿಶ್ಶಬ್ದದಂತೆ ಗುಹೇಶ್ವರಾ ನಿಮ್ಮ ನಿಲುವು’ ಎಂಬ ಉಕ್ತಿಯೊಂದೇ ಸಾಕು. ಇದೊಂದು ಅದ್ಭುತವಾದ ಉಕ್ತಿ. ಹಾಗೆಯೇ ‘ಹೂವ ಮುಡಿಯಬಹುದಲ್ಲದೆ ಗಂಧವ ಮುಡಿಯಬಹುದೆ?” ಎಂಬ ಪ್ರಶ್ನೆ ಕೂಡಾ ಈ ಮೂರ್ತ- ಅಮೂರ್ತಗಳ ಪರಿಭಾಷೆಯದೇ. ದೈವೀ ಅನುಭವವನ್ನು ಕುರಿತು-
ಕದಳಿಯ ಬನವ ಹೊಕ್ಕು
ಹೊಲಬ ತಿಳಿಯದನ್ನಕ್ಕ,
ಬಯಲ ಗಾಳಿಯ ಹಿಡಿದು
ಘಟ್ಟಿ ಮಾಡದನ್ನಕ್ಕ
ಬರಿದೆ ಬಹುದೆ ಶಿವಜ್ಞಾನ?
    ಎಂಬ ಈ ದೃಷ್ಟಿಕೋನವೇ ಮೂರ್ತ ಅಮೂರ್ತಗಳ ವಿವೇಚನೆಯನ್ನು ಕುರಿತದ್ದು. ಹೀಗಾಗಿ ಕಂಡದ್ದರ ಮೂಲಕ, ಕಾಣದುದರ ಕಡೆ ನಡೆಯುವುದೇ, ಮೂರ್ತವಾದ ವಾಸ್ತವಗಳನ್ನು ವಿರುವಿಕೆಯೇ ಈ ಅನುಭಾವಿಯ ನಿಲುವಾಗಿದೆ.
         ಅನುಭಾವ ಎಂಬ ಶಬ್ದಕ್ಕೆ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟವಾದ ಅರ್ಥ ಬೆಳೆದು ಬಂದಿದೆ. ಸಂಸ್ಕೃತದ ಅಲಂಕಾರ ಗ್ರಂಥಗಳಲ್ಲಿ ಬರುವ 'ಭಾವ' , 'ವಿಭಾವ', 'ಅನುಭಾವ' ಮುಂತಾದ ಶಬ್ದಗಳು ಕನ್ನಡದ ಈ ಶಬ್ದಕ್ಕೆ ಮೂಲವಾದರೂ, ಕನ್ನಡದಲ್ಲಿ ಅನುಭಾವ ಶಬ್ದ ಇವೆಲ್ಲಕ್ಕಿಂತ ತೀರ ಭಿನ್ನವಾದ ಮತ್ತು ಮಹತ್ವಪೂರ್ಣ ಅರ್ಥ ಪಡೆದುಕೊಂಡಿದೆ. ಅನುಭಾವ ಶಬ್ದಕ್ಕೆ ಸಂಸ್ಕೃತದಲ್ಲಿ ಗ್ರಹಿಕೆ ಎಂಬ ಅರ್ಥವಿದೆ ಅಷ್ಟೇ. ಮತ್ತು ಆ ಶಬ್ದದ ಪ್ರಯೋಗವನ್ನು ಸಾಹಿತ್ಯದಲ್ಲಿ ವ್ಯಾಪಕವಾಗಿ ಎಲ್ಲೂ ಮಾಡಲಾಗಿಲ್ಲ ಕೂಡ. ಆದರೆ ಕನ್ನಡ ಸಾಹಿತ್ಯದಲ್ಲಿ ಅನುಭಾವ, ಸಾಹಿತ್ಯದ ಒಂದು ಪ್ರಾಕಾರವಾಗಿಯೇ ರೂಪುಗೊಂಡುಬಿಟ್ಟಿದೆ. "ಅನುಭಾವವೆಂಬುದು ಆತ್ಮವಿದ್ಯೆ, ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು." ಎಂಬ ಶಿವಶರಣರ ಮಾತುಗಳಿಂದ ಅನುಭಾವ ಶಬ್ದದ ಅರ್ಥ ಕಲ್ಪನೆಯನ್ನು ಮಾಡಿಕೊಳ್ಳಬಹುದು. ತಮ್ಮ ಅರಿವಿನಿಂದ ಮತ್ತು ಆಚರಣೆಯಿಂದ ಪಡೆದ ಅನುಭವವನ್ನು ಶಿವಶರಣರು ಅನುಭಾವ ಎಂದು ಕರೆದರು. 
               ಕನ್ನಡದ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಅನುಭಾವ ಸಾಹಿತ್ಯ ಕನ್ನಡದಲ್ಲಿ ಜೈನಸಾಹಿತ್ಯದೊಂದಿಗೆ ಆರಂಭವಾಯಿತು ಎನ್ನಬಹುದು. ಆದರೂ ಜೈನ ಸಾಹಿತ್ಯಕ್ಕೆ ರಾಜಾಶ್ರಯದೊರೆತ ಕಾರಣದಿಂದಾಗಿ ಅಲ್ಲಿ ಅನುಭಾವದ ಅಂಶ ಅಷ್ಟಾಗಿ ತೋರದೆ ಸಾಹಿತ್ಯಿಕ ಅಂಶಗಳೇ ಹೆಚ್ಚಾಗಿ ಕಾಣಬರುತ್ತವೆ ಎಂದು ನನಗನ್ನಿಸುತ್ತದೆ. ಅನುಭಾವ ಸಾಹಿತ್ಯದ ರಸ, ಕೇವಲ ಬುದ್ದಿ ಮತ್ತು ಮನಸ್ಸನ್ನು ಮಾತ್ರ ತೃಪ್ತಿ ಪಡಿಸುವುದಾಗಿ ಉಳಿಯುವುದಿಲ್ಲ. ಅದು ಹೃದಯವನ್ನು ಅರಳಿಸಿ ಸತ್ಯದ ಪ್ರತ್ಯಕ್ಷ ದರ್ಶನ ಪಡೆಯವ ಹಂಬಲವನ್ನೂ ಜಿಜ್ಜ್ನಾಸೆಯನ್ನೂ ತುಂಬಿಸುತ್ತದೆ. ಮತ್ತು ಅತೀ ಮುಖ್ಯವಾಗಿ ಅನುಭಾವ ಸಾಹಿತ್ಯ, ಅನುಭಾವಿಯ ಅನುಪಮ ಆನಂದದಿಂದ ಜನ್ಮ ಪಡೆದದ್ದು. ಮಾತು ಮನಗಳಿಗೆ ಮೀರಿದ್ದು. ಅದು, ನಾರದರು ತಮ್ಮ ಭಕ್ತಿಸೂತ್ರದಲ್ಲಿ ಹೇಳುವಂತೆ "ಮೂಕಂ ಸ್ವಾದನವತ್", ಮೂಕನು ರುಚಿ ನೋಡಿದಂತೆ (ಅಂದರೆ ರುಚಿಯ ಅನುಭವವನ್ನು ಅವನಿಗೆ ತಿಳಿಸಲು ಶಕ್ಯವಿಲ್ಲ). ಆದರೂ ಅನುಭಾವಿಗೆ, ತಾನು ನಡೆದ ಹಾದಿ, ಕಂಡ ಸತ್ಯ ಮತ್ತು ಪಡೆದ ಆನಂದವನ್ನು ತಿಳಿಸಲು ಅನಿವಾರ್ಯ ವಾಹಕವಾಗಿ ಸಾಹಿತ್ಯ ಅವತರಿಸುತ್ತದೆ.
              ಸಾಹಿತ್ಯದ ಮುಖ್ಯ ಲಕ್ಷಣ ಭಾವ ಮತ್ತು ಆನಂದ. ಸೌಂದರ್ಯವನ್ನು ಕಂಡಾಗ ಸಾಹಿತಿಯ ಮನ ಭಾವದಿಂದ ತುಂಬಿ ಅದನ್ನು ತಾನೇ ಆಗಿ ಅನುಭವಿಸಿ, ಆ ರಸಾನುಭವದ ಆನಂದವನ್ನು ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾನೆ. ’ಅದು ತಾನೇ ಆಗುವ’ ತಲ್ಲೀನತೆಯೇ ಸಾಹಿತಿ ಮತ್ತು ಅನುಭಾವಿಯಲ್ಲಿರುವ ಸಮಾನ ಧರ್ಮ. ಅನುಭಾವವನ್ನು ಹೇಳಿದ ಅವರ ಮಾತುಗಳಲ್ಲಿ ಒಂದೇ ಸತ್ಯವನ್ನೇ ಕಾಣಬಹುದು. ’ಸಾವ ಕೆಡುವ ಗಂಡನರೊಯ್ದು ಒಲೆಯೊಳಗೆ ಇಕ್ಕಿ, ಸಾವಿಲ್ಲದ ಕೇಡಿಲ್ಲದ ಚೆಲುವಂಗೊಲಿದೆನಯ್ಯಾ’ ಎಂದು ಹಾಡಿ, "ಚಿಲಿ ಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣೀರೇ’ ಎಂದು ತನ್ನ ಪತಿ ಮಲ್ಲಿಕಾರ್ಜುನನಿಗೆ ಪರಿತಪಿಸುವ ಅಕ್ಕಮಹಾದೇವಿಯೂ, ತನ್ನ ಸತಿಪತಿ ಭಾವದ ಸಾಧನೆಯ ಕೊನೆಯಲ್ಲಿ ತಾನೇ ಪತಿಯಾಗಿ ಪರಿಣಮಿಸಿ ಹೀಗೆ ಹಾಡುತ್ತಾಳೆ.
"ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರಿಗೆ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯಾ."
ದಾಸಸಾಹಿತ್ಯ
        "ನಾಯಮಾತ್ಮಾ ಪ್ರವಚನೇನ ಅಭ್ಯೋ ನ ಮೇಧಯಾ ನ ಬಹುಧಾ ಶ್ರುತೇನ" ಅಂದರೆ, ಆತ್ಮಜ್ಞಾನವು ಪ್ರವಚನದಿಂದಾಗಲಿ, ಮೇಧಾಶಕ್ತಿಯಿಂದಾಗಲಿ ಅಥವಾ ಶ್ರವಣದಿಂದಾಗಲಿ ಲಭ್ಯವಾಗುವುಂಥದ್ದಲ್ಲ. ಆತ್ಮವು, ಕೇವಲ ಭೌತಿಕವಾದ ಇವೆಲ್ಲಕ್ಕೂ ಅತೀತವಾದದ್ದು. ಒಳಗಣ್ಣು ತೆರೆದಾಗ ಮಾತ್ರ ಆ ದಿವ್ಯ ಬೆಳಕು ಒಳಕ್ಕೆ ಹರಿಯುತ್ತದೆ, ಆ ಬಂಗಾರದ ಮುಚ್ಚಳ ತೆರೆದು ಸತ್ಯದ ದರ್ಶನವಾಗುತ್ತದೆ. ಜಗತ್ತಿನ ಇತಿಹಾಸದಲ್ಲಿ ಹಲವರು ಸತ್ಯಶೋಧನೆಯ ಈ ಮಾರ್ಗದಲ್ಲಿ ಸಾಗಿದ್ದಾರೆ. ಅವರಲ್ಲಿ ಅನೇಕರಿಗೆ ಸತ್ಯದರ್ಶನ ಸಾಧ್ಯವಾಗಿದೆ. ಆದರೆ ಅಂತಹ ಅನುಭಾವಿಗಳಲ್ಲಿ ಕೆಲವರು ಮಾತ್ರ ತಮಗಾದ ಆ ಅನುಭವವನ್ನು ಶಬ್ದಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಒಂದು ಮಹದ್ಪ್ರಯತ್ನವನ್ನು ಹದಿನೈದನೇ ಶತಮಾನದಲ್ಲಿ ದಾಸರು ಮಾಡಿದರು.
        ಪುರಂದರ ದಾಸರು, ಕನಕದಾಸರು, ಮತ್ತು ವಾದಿರಾಜರದು ದಾಸಸಾಹಿತ್ಯದಲ್ಲಿ ಜನಪ್ರಿಯ ಹೆಸರುಗಳು.
ಕನ್ನಡದಲ್ಲಿನ ಅನುಭಾವ ಸಾಹಿತ್ಯ ಅತ್ಯಂತ ವಿಶಾಲವಾದದ್ದು. ದಾಸ ಸಾಹಿತ್ಯ ಮತ್ತು ಶರಣಸಾಹಿತ್ಯ ಎರಡು ಪ್ರಮುಖ ಘಟ್ಟಗಳಷ್ಟೆ. ಹದಿನೈದನೇ ಶತಮಾನದಲ್ಲಿ ನಿಜಗುಣ ಶಿವಯೋಗಿ ಎಂಬ ಮಹಾ ಅನುಭಾವಿ. ಅವರಿಂದ ’ತತ್ವಸಾಹಿತ್ಯ’ ಎಂಬ ಹೊಸ ಪ್ರಕಾರ ಹುಟ್ಟಿಕೊಂಡಿತು. ನಮ್ಮ ಮಧ್ಯೆ ಶಿಶುನಾಳ ಷರೀಫರು ತೀರ ಇತ್ತಿಚೆಗೆ ಆಗಿಹೋದ ಅನುಭಾವಿಗಳು. ಶರೀಫರ ಗೀತೆ ಅನುಭಾವ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿವೆ. ಅಂತೆಯೇ ಬೇಂದ್ರೆ, ಡಿ.ವಿ.ಜಿ, ಪು.ತಿ.ನ, ಮಧುರಚನ್ನ ಅವರಂತಹ ನವೋದಯ ಕವಿಗಳ ಕಾವ್ಯದಲ್ಲಿಯೂ ಅನುಭಾವದ ಹೊಳಹನ್ನು ಹೇರಳವಾಗಿ ಕಾಣಬಹುದು.
          ತತ್ವಪದ ಎಂದರೇನು?
         ‘ತತ್ವಪದ ಅಂದ್ರೆ ಬೆಂಕಿಯಿದ್ದಂಗೆ, ಅಂಥ ಬೆಂಕೀನಾ ನುಂಗಿದೀವಿ, ಅದರ ಜೊತ್ಗೇ ಬದ್ಕುತಿದೀವಿ...’’
ಎಪ್ಪತ್ಮೂರು ವರ್ಷದ, ಬದುಕಿನ ಮುಸ್ಸಂಜೆಯ ತತ್ವಪದ ಗಾಯಕ ತಂಬೂರಿ ಜವರಯ್ಯ ಹೇಳುವ ಮಾತಿದು. ಇದಕ್ಕೆ ಪೂರಕ ಎನ್ನುವಂತೆ ಮುಪ್ಪಿನ ಷಡಕ್ಷರಿಗಳ ಒಂದು ಪದ್ಯ -
ಎನ್ನ ಒಳಗೆ ಜಾರರಿಹರು
ಎನ್ನ ಒಳಗೆ ಚೋರರಿಹರು
ಎನ್ನ ಒಳಗೆ ಘೋರಪಾಪ ಪೋರರಿಹರು
ಎನ್ನ ಒಳಗೆ ಕ್ರೂರದೃಷ್ಟಿ
ಎನ್ನ್ ಒಳಗೆ ಗರ್ವಪರ್ವ
ಎನ್ನ ಒಳಗೆ ವಿದ್ಯೆ ಡೊಂಕು
ಎನ್ನ ಒಳಗೆ ವಿಷಯಕೂಪ ವಿಷಯದಾಗರ
ಎನ್ನ ಒಳಗೆ ಕೋಪಸಿಡಿಲು
ಎನ್ನ ಒಳಗೆ ಆಸೆಮೇಘ
ಎನ್ನ ಮುಸುಕಿ ಶಿವನ ನೆನೆಯಲೀಯವಕ್ಕಟಾ
       ಕೈವಲ್ಯಪದಗಳು ಎಂದು ಸಂಗ್ರಹಿಸಲ್ಪಟ್ಟ ಶಿವಯೋಗಿಗಳ ಇಂಥ ನೂರಾರು ಪದ್ಯಗಳು ಆತ್ಮ ಜ್ಞಾನದ ಸಾವಿಲ್ಲದ ನಿದರ್ಶನಗಳು. ಇಲ್ಲಿಯ ಶೋಧ ಬಹಿರ್ಮುಖಿಯಾದುದಲ್ಲ. ಅದು ತನ್ನೊಳಗಿನ ಹುಡುಕಾಟ, ತನ್ನ ತನದ ಹುಡುಕಾಟ. ತತ್ವ ಚಿಂತನೆಯಂದರೆ ತನ್ನೊಳಗಿನ ಶೋಧ. ಆತ್ಮ ಜ್ಞಾನದ ನಿರೀಕ್ಷೆಯನ್ನುವುದು ಹೇಗಿರುತ್ತದೆ ಎನ್ನುವುದಕ್ಕೆ ಮೇಲಿನ ಪದ್ಯ ಒಂದು ಉತ್ತಮ ನಿದರ್ಶನ
   ಭಾರತದಲ್ಲಿ ತತ್ವ ಚಿಂತನೆಯ ಇತಿಹಾಸ ಬಹಳ ಪುರಾತನವಾದದ್ದು. ಇದನ್ನು ಏಳು ಘಟ್ಟಗಳಲ್ಲಿ ವಿಭಜಿಸಲಾಗಿದೆ.
1. ವೇದಗಳ ಕಾಲದ ತಾತ್ವಿಕ ಚಿಂತನೆ. (ಕ್ರಿ. ಪೂ 2000- ಕ್ರಿ. ಪೂ 500)
2. ಸೂತ್ರಗಳ ಕಾಲದ ತಾತ್ವಿಕ ಚಿಂತನೆ (ಕ್ರಿ. ಪೂ 500- ಕ್ರಿ. ಪೂ 200)
3. ಮಹಾ ಕಾವ್ಯಾಗಳ ತಾತ್ವಿಕ ಚಿಂತನೆ (ಕ್ರಿ. ಶ 200- ಕ್ರಿ. ಶ 300)
4. ಪುರಾಣಗಳ ಕಾಲದ ತಾತ್ವಿಕ ಚಿಂತನೆ (ಕ್ರಿ. ಶ 300- ಕ್ರಿ. ಶ 750)
5. ಅನಂತರದ ದರ್ಶನ ಕಾಲ (ಕ್ರಿ. ಶ 750-ಕ್ರಿ. ಶ 1000)
6. ಮಧ್ಯಕಾಲದ ಹಿಂದೂ ತಾತ್ವಿಕ ಚಿಂತನೆ (ಕ್ರಿ. ಶ 1000- ಕ್ರಿ. ಶ 1800)
7. ಆಧುನಿಕ ಕಾಲದ ತಾತ್ವಿಕ ಚಿಂತನೆ (ಕ್ರಿ. ಶ 800- ಕ್ರಿ. ಶ 1950)
    ತತ್ವ ಚಿಂತನೆಗೆ ಪಾಶ್ಚಾತ್ಯರು ಕೊಟ್ಟಿರುವ ಅರ್ಥ ಬಹಳ ಸಂಕುಚಿತವಾದುದು. ಅವರ ಸಾಹಿತ್ಯದಲ್ಲಿ ಇದು Metaphysical poetry ಆಗಿ ಪ್ರಕಟವಾಯಿತು.
Metaphysical poetry is concerned with the whole experience of man, but the intelligence, learning and seriousness of the poets means that the poetry is about the profound areas of experience especially - about love, romantic and sensual; about man's relationship with God - the eternal perspective, and, to a less extent, about pleasure, learning and art. Metaphysical means dealing with the relationship between spirit to matter or the ultimate nature of reality
Metaphysical poems are lyric poems. They are brief but intense meditations, characterized by striking use of wit, irony and wordplay.
ಭಾರತೀಯರ ಪ್ರಕಾರ ತತ್ವಶಾಸ್ತ್ರ ಕೇವಲ ತರ್ಕ ವಿಶ್ಲೇಷಣೆಯಲ್ಲ. ಅದು ಪ್ರಕ್ರಮ ಪದ್ಧತಿಯೂ(ಸಿಸ್ಟಮ್ ಬಿಲ್ಡಿಂಗ್) ಅಲ್ಲ, ಬದಲಾಗಿ ಜೀವನಾನುಭವಗಳನ್ನು ತರ್ಕ ವಿಶ್ಲೇಷಿಸಬೇಕು ಆದರೆ ತರ್ಕದ ಮಿತಿಗೆ ಸಿಗದ ನಾನಾ ವಿಚಾರಗಳನ್ನೂ ತತ್ವಶಾಸ್ತ್ರ ಒಳಗೊಳ್ಳಬೇಕು. ಒಬ್ಬ ವ್ಯಕ್ತಿ ತನ್ನ ಚಿಂತನೆಯ ಎಂಥಹ ದಿವ್ಯ ಆನಂದದಲ್ಲಿ ನಮ್ಮನ್ನು ಮುಳುಗಿಸುತ್ತಾನೆ ಮತ್ತು ಎತ್ತರಕ್ಕೆ ಒಯ್ಯುತ್ತಾನೆ ಎನ್ನುವುದರ ಮೇಲೆ ತತ್ವ ಚಿಂತನೆಯ ಗುಣಮಟ್ಟದ ನಿರ್ಧಾರವಾಗಬೇಕು. ಭಾರತೀಯ ತತ್ವ ಚಿಂತನೆಗೆ ಸಮೀಪವೆನ್ನಿಸುವಂತೆ ಆಲೋಚಿಸಿದವರು ಪಾಶ್ಚಾತ್ಯರಲ್ಲಿ ಇಬ್ಬರೇ. ಒಬ್ಬ ಪ್ಲೆಟೋ ಮತ್ತೊಬ್ಬ ಪೈಥಾಗೋರಸ್. ಪ್ಲೆಟೋ ಇದನ್ನು That dear delight, ಎಂದು ಕರೆದರೆ, ಪೈಥಾಗೋರಸ್ ಇದನ್ನು Highest music ಎಂದಿದ್ದಾನೆ.
     ಭಾರತದಲ್ಲಿ 11ನೆ ಮತ್ತು 19ನೆ ಶತಮಾನಗಳ ನಡುವಿನ ಕಾಲದಲ್ಲಿ ತತ್ವ ಚಿಂತನೆಯೇ ಇರಲಿಲ್ಲವೆನ್ನುವ ಪಾಶ್ಚಾತ್ಯರ ಇನ್ನೊಂದು ದೋಷಪೂರ್ಣ ಅಭಿಪ್ರಾಯ.
      12ನೆ ಶತಮಾನದ ಕರ್ನಾಟಕದ ಶರಣ ಚಳುವಳಿ. ಅದೇ ಕಾಲದಲ್ಲಿ ಭಾರತಕ್ಕೆ ಕಾಲಿರಿಸಿದ ಇಸ್ಲಾಂ, 14ನೆ ಶತಮಾನದ ಹಿಂದೂ ಧರ್ಮದ ಭಕ್ತಿ ಪಂಕ್ತಗಳೊಂದಿಗೆ ಜನ್ಮತಾಳಿದ ಸೂಫಿಳ್, ಇವುಗಳ ಪರಿಣಾಮವೆನ್ನುವಂತೆ ಮನುಷ್ಯ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಅಕ್ಬರ್‍ನ ದೀನ್-ಇ-ಇಲಾಹಿ, ಆನಂತರದ 18ನೆ ಶತಮಾನದ ತಾತ್ವಿಕ ಚಿಂತನೆಯ ಬೆಳವಣಿಗೆಗಳು ಇಲ್ಲಿಯ ತತ್ವ ಚಿಂತನೆಯ ನಿರಂತರತೆಯನ್ನು ತೋರಿಸುತ್ತದೆ.
      ತತ್ವ ಚಿಂತನೆಯ ಬೆಳವಣಿಗೆಯಲ್ಲಿ ಪೂರ್ವದ ಕೆಲವು ಗುಂಪು ಹಾಗೂ ವ್ಯಕ್ತಿಗಳನ್ನು ಉಲ್ಲೇಖಿಸದೇ ಇರಲಾಗದು. ವಿಶಿಷ್ಟಾದ್ವೈತ, ದ್ವೈತಾದ್ವೈತ, ದ್ವೈತ ಶುದ್ಧ ಅದ್ವೈತ, ಭಕ್ತಿಪಂಕ್ತ, ಹರಿದಾಸ ಭಕ್ತಿಪಂಕ್ತ, ಶಿವಶರಣ ಭಕ್ತಿಪಂಕ್ತ, ರಮಾನಂದ ಭಕ್ತಿಪಂಕ್ತ, ನಾನಕ ಭಕ್ತಿಪಂಕ್ತ ಹೀಗೆ ಅಸಂಖ್ಯಾತ. ವ್ಯಕ್ತಿಗಳಲ್ಲಿ ಕರ್ನಾಟಕದಲ್ಲಿ ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಕೂಡಲೂರು ಬಸವಲಿಂಗ ಶರಣ, ಕಡಕೋಳ ಮಡಿವಾಳ ಶಿವಯೋಗಿ, ಬಾಲಲೀಲಾ ಮಹಂತ ಶಿವಯೋಗಿ, ಘನಮಠದ ನಾಗಭೂಷಣ ಶಿವಯೋಗಿ, ಮೈಲಾರ ಬಸವಲಿಂಗ ಶರಣ, ಶಿಶುನಾಳ ಶರೀಫ, ಶ್ರೀ ಚಿತಂಬರ ದೀಕ್ಷಿತ, ಗುಡಗೇರಿ ಕಲ್ಮಠದ ಸಂಗಮೇಶ್ವರರು, ಅಗಡಿ ಶೇಷಾಚಲ ಸ್ವಾಮಿ, ಗರಗದ ಮಡಿವಾಳ ಸ್ವಾಮಿ, ನವಲಗುಂದದ ನಾಗಲಿಂಗ ಸ್ವಾಮಿ, ಅವರಾಧಿ ಫಲಹಾರ ಸ್ವಾಮಿ, ಹುಬ್ಬಳಿಯ ಸಿದ್ಧಾರೂಢರು, ಗದುಗಿನ ಶಿವಾನಂದ ಸ್ವಾಮಿ, ದೋಟ್ಯಾಳ ಸುಖಮುನಿಯಪ್ಪ, ಅಂಕಲಗಿ ಅಡವಿ ಸ್ವಾಮಿ, ಹುಲಿಯಾಳ ಶಂಭುಲಿಂಗ ಸ್ವಾಮಿ ಹೀಗೆ ಅಸಂಖ್ಯಾತ ತತ್ವ ಚಿಂತಕರನ್ನ ಮಧುರಚನ್ನರವರೆಗೂ ಗುರುತಿಸುವಂತೆ ರಾಷ್ಟ್ರಮಟ್ಟದಲ್ಲಿ ರಾಮಾನುಜಾಚಾರ್ಯ, ಮದ್ವಾಚಾರ್ಯ, ವಲ್ಲಭಾಚಾರ್ಯ, ಮೀರಾ ದೇವಿ, ಚಂಡಿ ದಾಸ, ನರಸಿಂಗ್ ಮೇಹತಾ, ವಿದ್ಯಾಪತಿ, ಕಬೀರ, ನಾನಕ, ರಾಜಾರಾಮ್ ಮೋಹನರಾಯ್, ದೇವೆಂದ್ರನಾಥ ಟ್ಯಾಗೋರ್, ಕೇಶವ ಚಂದ್ರಸೇನ್, ಸ್ವಾಮಿ ದಯಾನಂದ ಸರಸ್ವತಿ, ದ್ಯಾನದೇವ, ಚಾಂಗದೇವ, ನಾಮದೇವ, ಏಕನಾಥ, ರಾಮದಾಸ್, ತುಕಾರಾಮ, ಜನಾರ್ಧನ ಪಂತ್, ಮೋಲೊ ಪಂತ್, ರಾಣಡೆ, ತಿಲಕ, ಆನಿಬೆಸೆಂಟ್, ವಿವೇಕಾನಂದ, ಗಾಂಧಿ, ರವಿಂದ್ರನಾಥ ಟ್ಯಾಗೋರ್, ಶ್ರೀ ಅರವಿಂದೋ, ಕೃಷ್ಣಚಂದ್ರಭಟ್ಟಚಾರ್ಯ, ರಾಧಾ ಕೃಷ್ಣನ್, ಇಕ್ಬಾಲ್, ಆನಂದಕುಮಾರ ಸ್ವಾಮಿ, ಮೇಡಂ ಬ್ಲಾವಟ್ಸ್ಕಿ ಇವರುಗಳನ್ನು ಗುರುತಿಸಬಹುದು.
ಬೇರೆ ಬೇರೆ ಕಾಲ, ಸ್ಥಳ ಮತ್ತು ಮತಗಳಿಗೆ ಸೇರಿದ ಈ ಮೇಲಿನ ಎಲ್ಲ ಶ್ರೇಷ್ಠ ಅನುಭಾವಿಗಳು ಆತ್ಮ ವಿದ್ಯೆ ಎನಿಸಿದ ತಮ್ಮ ತತ್ವ ಚಿಂತನೆಯ ಮೂಲಕ ಒಟ್ಟಾರೆ ಹೇಳಿದ್ದೇನು ಎಂಬುದನ್ನು ಹೀಗೆ ಕ್ರೂಢಿಕರಿಸಬಹುದು. – ಇಡೀ ಜಗತ್ತಿಗೇ ಕಲ್ಯಾಣವಾಗವೇಕು, ಅದಕ್ಕಾಗಿ ಸರ್ವರೂ ಶ್ರಮಿಸಬೇಕು; ಸರ್ವರನ್ನೂ ಪ್ರೀತಿ, ವಾತ್ಸಲ್ಯ, ನ್ಯಾಯಯುತವಾದ ಗೌರವದಿಂದ ನೋಡಬೇಕು; ಅಜ್ಞಾನವನ್ನು ಕಿತ್ತೊಗೆಯಬೇಕು; ಯಾವ ಧರ್ಮವೂ ಮೇಲಲ್ಲ, ಯಾವ ಧರ್ಮವೂ ಕೀಳಲ್ಲ; ಬೇರೆ ಬೇರೆ ಧರ್ಮಗಳು ಒಂದೇ ಸ್ಥಳಕ್ಕೆ(ದೇವರು) ಕೊಂಡೊಯ್ಯುವ ವಿವಿಧ ಮಾರ್ಗಗಳು; ಪ್ರತಿಯೊಬ್ಬರೂ ದೇವರಿಗಾಗಿ ಹಂಬಲಿಸಬೇಕು; ದೇವರ ಅಸ್ಥಿತ್ವ ಮಾನವನ ಅಸ್ತಿತ್ವದಷ್ಟೇ ಖಂಡಿತವಾದುದು;  ಸ್ವಯಂಸಿದ್ಧ ತತ್ತ್ವವಾದ ಅದರ ಅಸ್ತಿತ್ವವನ್ನು ತರ್ಕದಿಂದ ಸ್ಥಾಪನೆ ಮಾಡುವ ಪ್ರಯತ್ನ ನಗೆಪಾಟಲಾದೀತು; ಮೂರ್ತಿ ಪೂಜೆಯಲ್ಲಿ ತಪ್ಪೇನೂ ಇಲ್ಲ, ಮಾನವನದು ಎತ್ತರದ ಬಾಳು, ಬಿತ್ತರದ ಬದುಕು ಆಗಬೇಕು ಎಂದು ಬೋಧಿಸಿದರು.
ಹಾಗೆ ನೋಡಿದರೆ, ಯಾವುದನ್ನು ‘ತತ್ವಪದ’ ಎಂದು ನಾವು ನಿರ್ದೇಶಿಸುತ್ತೇವೆಯೋ ಅವುಗಳ ಮೂಲವನ್ನು ನಾವು ಹನ್ನೆರಡನೆಯ ಶತಮಾನದ ವಚನಕಾರರು ಬರೆದ ಹಾಡುಗಳಲ್ಲಿಯೆ ಗುರುತಿಸಬೇಕಾಗುತ್ತದೆ ಎನ್ನುತ್ತಾರೆ ಡಾ. ಎಲ್. ಬಸವರಾಜು. ಅವರು ಪ್ರಕಟಿಸಿರುವ ‘ಶಿವದಾಸ ಗೀತಾಂಜಲಿ’ ಎಂಬ ಸಂಗ್ರಹದ ಪೀಠಿಕೆಯಲ್ಲಿ “ಈ ಪ್ರಸ್ತುತ ಸಂಕಲನದಲ್ಲಿ ಇಪ್ಪತ್ತೇಳು ಜನ ‘ಶಿವದಾಸ’ರ, ಒಂದು ನೂರಾ ಎಂಬತ್ತೆಂಟು ಹಾಡುಗಳಿವೆ.  ಇವುಗಳನ್ನು ಬಸವಣ್ಣನವರೂ ಮತ್ತು ಅವರ ಸಂಗಡಿಗರಾದ, ಅಲ್ಲಮ, ಚನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ, ನೀಲಲೋಚನೆ, ಹಾವಿನಹಾಳ ಕಲ್ಲಯ್ಯ ಮೊದಲಾದವರು ಬರೆದರೆಂದೂ” ಉಲ್ಲೇಖಿಸುತ್ತಾರೆ.  ಅಂದರೆ, ನಿಜಗುಣರಿಗಿಂತ ಮೊದಲು ಹಾಗೂ ಹರಿದಾಸರುಗಳಿಗಿಂತ ಹಿಂದೆ ಬಸವಾದಿ ಶಿವಶರಣರೂ, ವಚನ ನಿರ್ಮಿತಿಯ ಜತೆಜತೆಗೆ ಹಾಡುಗಳನ್ನೂ ಬರೆದಿದ್ದರು ಎಂದಂತಾಯಿತು.
    ಮುಂದೆ ನಿಜಗುಣ ಶಿವಯೋಗಿಗಳಿಂದ ಪ್ರಾರಂಭವಾದ ತತ್ವಪದಗಳ ಪ್ರೇರಣೆ ಒಂದು ಹೊಸ ದಾರಿಯನ್ನು ತೆರೆದು ಕನ್ನಡದಲ್ಲಿ ತತ್ವ ಪದಗಳ ಸಮೃದ್ಧಿಗೆ ಕಾರಣವಾಯಿತು.
ತತ್ವಪದ ಸಾಹಿತ್ಯದ ವಿಷಯ, ಅನುಭವ, ಚರ್ಚೆಗಳ ಹರವು ಬಹಳದೊಡ್ಡದು. ಅದಕ್ಕೆ ಯಾವುದೇ ಮಿತಿ-ಮಡಿವಂತಿಕೆ ಇಲ್ಲ. ಉದಾಹರಣೆಗೆ- ಸಾಹಿತಿಗಳನ್ನು ವಿಡಂಬಿಸುತ್ತಾ ಶರೀಫರು ಬರೆದ ಒಂದು ಪದ್ಯ
ಸಾಹಿತಿ ಬ್ರಹ್ಮನ ಬೊಗಳಿದರೇನು
ಛೀ ನಾನಾ ಜಲ್ಮಕೆ ಬಿದ್ದು ಹೊರಳಾಡುವಿಯಾ ಮರುಳೇ
ಹೊಲಸಿನ ಸಿಂಬಳ ಸೇವಿಪ ನೊಣದಂತೆ
ತಿಳಿಯದೆ ವಿಷಯದಿ ಬಳಲುವಿಯಾ ಮರುಳೇ
ಹಲವು ಶಾಸ್ತ್ರಗಳೋದಿ ಗಿಳಿಯಂತೆ ಸಂಸಾರ
ಬಲಿಯ ಪಂಜರದೋಳ್ ಅಳಲುವೆಯಾ ಮರುಳೇ
ವಸುಧೆಯೋಳ್ ಶಿಶುನಾಶಧೀಶನ
ಅಸಮ ಸ್ಥಳದಲ್ಲಿ ಕ್ರಮವಿಳಿಸುವಿಯಾ ಮರುಳೇ
         ಶಿಶುನಾಳ ಶರೀಫರು ಜನಜೀವನಕ್ಕೆ ಹತ್ತಿರದ ಸಂಗತಿ ಹಾಗೂ ಅಧ್ಯಾತ್ಮ ಚಿಂತನೆಗಳನ್ನೊಳಗೊಂಡ ತತ್ವಪದಗಳನ್ನು ಆಡು ಭಾಷೆಯಲ್ಲಿ ರಚಿಸಿದರು. ತಮ್ಮ ಕಣ್ಣಿಗೆ ಏನು ಕಾಣುತ್ತದೋ ಅದನ್ನೇ ಪದ್ಯವಾಗಿಸುವ ಅದ್ಭುತ ಶಕ್ತಿ ಶರೀಫರಿಗೆ ಸಿದ್ಧಿಸಿತ್ತು. ಅಣ್ಣಿಗೇರಿ ಮದುಮಗಳೊಬ್ಬಳು ಗಂಡನ ಮನೆಗೆ ಹೊರಟು ನಿಂತಾಗ ಅಳುತ್ತಿದ್ದುದನ್ನು ಕಂಡು ಬರೆದ ಅಳಬೇಡಾ ತಂಗಿ ಅಳಬೇಡಾ, ಚಂಚಲ ಮನಸ್ಸು, ಅಜ್ಞಾನ, ಜಡತ್ವ ನೀಗಿಸಿ ಜ್ಞಾನದ ಬೆಳಕು, ಏಕಾಗ್ರತೆ, ಸ್ಥಿರತೆಯಂತಹ ಸದ್ಗುಣಗಳನ್ನು ರೂಢಿಸಿಕೊಳ್ಳುವಂತೆ ಹೇಳಿದ ‘ಕೋಡಗನ ಕೋಳಿ ನುಂಗಿತ್ತಾ’, ಸದಾ ಕಾಲ ನಿದ್ದೆ ಮಾಡುತ್ತಿದ್ದರೆ ಏನೂ ಸಾಧಿಸಲಾಗದು ಎಂಬ ಅರ್ಥ ನೀಡುವ ‘ನಿದ್ದಿ ಎಂಬ ನಿಜ ಹಾದರಗಿತ್ತಿ’, ವಿದ್ವಾಂಸರೊಬ್ಬರು ಪ್ರಭುಲಿಂಗ ಲೀಲೆಯನ್ನು ತಪ್ಪಾಗಿ ಹೇಳುತ್ತಿದ್ದಾಗ ಅದನ್ನು ಕಂಡು ‘ಎಚ್ಚರ ಇರಬೇಕೋ ಪ್ರಭುಲಿಂಗ ಲೀಲೆ ಹೇಳುವಾಗ ಸರಿಯಾಗಿ ಹೇಳಬೇಕೋ’ ಸೇರಿದಂತೆ ಬದುಕಿನ ಅನೇಕ ವಿಷಯಗಳನ್ನು ಶರೀಫರು ತತ್ವಪದಗಳಲ್ಲಿ ಮನ ಮುಟ್ಟುವಂತೆ ಹೇಳಿದ್ದಾರೆ. ಶರೀಫರ ತತ್ವಪದಗಳು ಅಧ್ಯಾತ್ಮದ ತಳಹದಿ ಮೇಲೆ ರಚನೆಗೊಂಡಿವೆ. ಆದ್ದರಿಂದ ಶರೀಫರು ಹಾಗೂ ಅವರ ತತ್ವಪದಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಧ್ಯಾತ್ಮದ ಬಗ್ಗೆ ಸ್ಪಲ್ಪವಾದರೂ ಅರಿವು ಇರಬೇಕು. ತತ್ವಪದಗಳಲ್ಲಿ ಧೈರ್ಯ, ಸ್ವಾವಲಂಬನೆ, ಸ್ವಾಭಿಮಾನ, ಭಾವೈಕ್ಯತೆ ಮತ್ತು ಎಲ್ಲರೂ ಒಂದು ಎಂಬ ಸಂದೇಶವಿದೆ. ಕರ್ನಾಟಕದ ಕಬೀರ ಎಂದೇ ಖ್ಯಾತರಾಗಿರುವ ಶರೀಫರು ಕಂಡದ್ದನ್ನು ಕಂಡಂತೆ ಯಾವುದೇ ಮುಲಾಜಿಲ್ಲದೆ ಹೇಳುವ ನಿಷ್ಠುರವಾದಿಯಾಗಿದ್ದರು. ‘ಶರೀಫ’ ಎಂದರೆ ಪಾರ್ಸಿ ಭಾಷೆಯಲ್ಲಿ ಅಧ್ಯಾತ್ಮದ ಸಾಧಕ ಮತ್ತು ‘ಎಲ್ಲರಿಂದ ಗೌರವ ಪಡೆಯುವವನು ಎಂದರ್ಥ’. 
       ಶಿಶುನಾಳ ಶರೀಫರು ಒಂದರ್ಥದಲ್ಲಿ ತತ್ವಪದಗಳ ರೂವಾರೀ, ಅವರ ಪ್ರಕಾರ ತತ್ವಪದ ಎಂದರೆ ಜೀವನದಲ್ಲಿ ಮನುಷ್ಯ ಜೀವ ಮಾಡುವ ತಪ್ಪುಗಳನ್ನು, ಯೊಚಿಸುವ ರೀತಿಯನ್ನು ಯಾವೊದೋ ಒಂದು ಸನ್ನಿವೇಶಕ್ಕೆ ಹೊಲಿಸಿ ಹಾಡಿನಿಂದ ವಿವರಿಸುವದು. ಆ ಹಾಡನ್ನು ನೇರ ಅರ್ಥದಲ್ಲಿ ಕೇಳೀದರೆ ವಿಚಿತ್ರವೆನಿಸುವುದು ಆದರೆ ಅದರ ತಿರುಳು ಅರಿತು ಜೀವನಕ್ಕೆ ಹೊಲಿಸಿದರೆ ಅದರ ಅರ್ಥ ಹೊರ ಹೊಮ್ಮುವುದು.
ಸರ್ಪಭೂಷಣ ಶಿವಯೋಗಿ
         ತತ್ವಪದಗಳು ಮೂಲತಃ ಹಾಡುಗಬ್ಬದ ಪರಂಪರೆಗೆ ಸೇರಿದವುಗಳು.  ನಾವು ಯಾವುದನ್ನು ತತ್ವಪದಗಳೆಂದು ಕರೆಯುತ್ತೇವೆಯೋ ಆ ಲಕ್ಷಣಗಳನ್ನೊಳಗೊಂಡ ಹಾಡುಗಬ್ಬಗಳನ್ನು ಮೊದಲು ಪ್ರಾರಂಭಿಸಿದವರು ಹದಿನೈದನೆಯ ಶತಮಾನದ ನಿಜಗುಣ ಶಿವಯೋಗಿಗಳು – ಎಂದು ಹೇಳಲಾಗಿದೆ.  ಸ್ವಾರಸ್ಯದ ಸಂಗತಿ ಎಂದರೆ, ಹಾಡುಗಬ್ಬಗಳ ಪರಂಪರೆಯನ್ನೆ ವಿಸ್ತರಿಸಿದ ಹರಿದಾಸರ ಕೀರ್ತನೆಗಳೂ ಹೆಚ್ಚು ಕಡಿಮೆ ಸಮಾನಾಂತರವಾಗಿ ಇದೇ ಕಾಲಮಾನದಲ್ಲಿಯೇ ಸಂಭವಿಸಿವೆ.  ಯಾಕೆಂದರೆ ಕೀರ್ತನ ಸಾಹಿತ್ಯವೆಂಬ ಪಂಥ, ಹದಿನೈದನೆಯ ಶತಮಾನದ ಶ್ರೀಪಾದರಾಯರಿಂದ ಮೊದಲಾಯಿತೆಂದು ಹೇಳಲಾಗಿದೆ.  ಹೀಗಾಗಿ ಒಂದೆಡೆ ವೀರಶೈವ ತತ್ವಪದಕಾರರ ರಚನೆಗಳೂ ಮತ್ತೊಂದೆಡೆ ಹರಿದಾಸರ ವೈಷ್ಣವಭಕ್ತಿ ಪರವಾದ ಕೀರ್ತನೆಗಳೂ ಅಂದಿನ ಕರ್ನಾಟಕದ ವಿಭಿನ್ನಪರಿಸರಗಳಲ್ಲಿ ಕಾಣಿಸಿಕೊಂಡಂತೆ ಭಾಸವಾಗುತ್ತದೆ. 
          ಈ ಎರಡೂ ಪ್ರಕಾರಗಳ ಸಮಾನ ಧೋರಣೆ ಇರುವುದು ಭಕ್ತಿಯ ಮೂಲಮಾನದಲ್ಲಿ, ಮುಖ್ಯವಾಗಿ ವೇದಾಂತವನ್ನು ಜನಸಮ್ಮುಖ ಮಾಡಿದ್ದು.  ವೇದೋಪನಿಷತ್ತುಗಳಿಗೆ ಸಮ್ಮತವೆಂದು ತೋರಿದ ಅದ್ವೈತವನ್ನೂ, ಷಟ್ಸ್ಥಲ ಸಿದ್ಧಾಂತವನ್ನೂ ಒಂದು ರೀತಿಯಲ್ಲಿ ಸಮನ್ವಯಗೊಳಿಸಿದ ವೀರಶೈವ ಸಂತ ಮತ್ತು ಕವಿ ನಿಜಗುಣ ಶಿವಯೋಗಿ.  ನಿಜಗುಣರ ನಂತರ ಮುಂದಿನ ತತ್ವಪದಕಾರರ ನಿಲುವು ಹೆಚ್ಚು ದೇಶೀಯವಾಯಿತೆಂಬುದು, ಗುರುತಿಸಿಕೊಳ್ಳಬೇಕಾದ ಸಂಗತಿ.
       ನಿಜಗುಣರ ನಂತರದ ಕಾಲದಿಂದ ಸಂತ ಶಿಶುನಾಳ ಷರೀಫರ ಕಾಲದವರೆಗೂ, ಮುಪ್ಪಿನಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಬಾಲಲೀಲಾಮಹಾಂತಸ್ವಾಮಿ, ಕಡಕೋಳ ಮಡಿವಾಳೇಶ್ವರ ಇತ್ಯಾದಿಯವರ ಹಾಡುಗಳನ್ನು ತತ್ವಪದಗಳೆಂದು ಕರೆದದ್ದರ ಜತೆಗೆ, ಸ್ವರವಚನಗಳೆಂದೂ ಕರೆದಿರುವುದು ಕುತೂಹಲದ ಸಂಗತಿಯಾಗಿದೆ. ಭುಜಲಿಂಗ ಶಿವಯೋಗಿಗಳ ಶಿಷ್ಯರಾದ ಮುಪ್ಪಿನ ಷಡಕ್ಷರಿಗಳ ಒಂದು ಪದ್ಯ-
ಎನ್ನ ಕಂದಿಸುತ್ತ ಬಹಳ
ಎನ್ನ ಬಾಧಿಸುತ್ತ ಬಿಡದೆ
ಎನ್ನ ನೊಂದು ನೆವಗಳಿಂದ ಕಾಡಿದವರಿಗೆ. . . .

ಹಿಂದೆ ಎನ್ನ ಬೈದವರಿಗೆ
ಮುಂದೆ ಎನ್ನ ಬೈದವರಿಗೆ
ಕುಂದದೊಲೆದು ಅವರಿಗೆಲ್ಲ ಭೋಗವಾಗಲಿ
  ‘ಸ್ವರವಚನ’ ಎಂಬ ನುಡಿಗಟ್ಟಿನಲ್ಲಿರುವ ‘ವಚನ’ ಎಂಬ ಪದ ಸಹಜವಾಗಿಯೇ, ಶಿವಶರಣರ ವಚನಗಳಿಗೂ ಇವುಗಳಿಗೂ ಇರುವ ಸಂಬಂಧವನ್ನು ಸೂಚಿಸುತ್ತದೆ. ಆ ಪರಂಪರೆಯಲ್ಲಿ ಸರ್ಪಭೂಷಣ ಶಿವಯೋಗಿಗಳ ‘ಕೈವಲ್ಯ ಕಲ್ಪವಲ್ಲರಿ’ ಒಂದು ವಿಶಿಷ್ಟವಾದ ಕೃತಿ. ಅವರ ಒಂದು ಪದ್ಯ
ಬಿಡುಬಾಹ್ಯದೊಳು ಡಂಭವ
ಮಾನಸದೊಳಗೆಡಬಿಡದಿರು ಶಂಭುವ
ಒಡಲೊಳುವಂಚಿಸಿ ಹೊರಗೆ ನೀ ಕೀರ್ತಿಯ
ಪಡೆದರೆ ಶಿವನಿನಗೊಲಿವನೆ ಮರುಳೇ

ಜನಮೆಚ್ಚಿ ನಡಕೊಂಡರೇನುಂಟು ಲೋಕದಿ
ಮನಮೆಚ್ಚಿ ನಡಕೊಂಬುವುದೇ ಚಂದವು
ಜನರೇನು ಬಲ್ಲರು ಒಳಗಾಗೋ ಕೃತ್ಯವ
ಮನವರಿಯದ ಕಳ್ಳತನವಿಲ್ಲವಲ್ಲ
        -ಕಡುಕೋಳ ಮಡಿವಾಳಪ್ಪ ತತ್ವಪದಕಾರರಲ್ಲಿಯೇ ಅತ್ಯಂತ ನಿರ್ಭಿಡೆಯ ಬರಹಗಾರ. ಅವರು ನಾಲ್ಕು ಕೃತಿಗಳನ್ನು ಬರೆದಿದ್ದು ವಿಡಂಬನೆ ಅವರ ಕಾವ್ಯದ ಮುಖ್ಯ ಲಕ್ಷಣ. ಉದಾಹರಣೆಗೆ-
ಬಾಯಲೊಂದು ಆಡ್ತೀರಿ
ಮನಸಿನೊಳಗೊಂದು ಮಾಡ್ತೀರಿ
ಬರೆದಿಟ್ಟದ್ದು ಓದಿಕೊಂಡು
ಭ್ರಾಂತಿಗೆಟ್ಟು ಹೋಗತೀರಿ

ಶೀಲವಂತರಂತೇಳಿ ಸುಳ್ಳೆ ಶೀಲ ಮಾಡ್ತೀರಿ
ಸಂತ್ಯಾನ ಲಿಂಗ ಕಟಗೊಂಡು
ಸತ್ಯಾನಾಸಾಗಿ ಹೋಗತೀರಿ
          ಆದರೆ ಈ ಶೈಲಿಗೆ ತೀರ ವಿರುದ್ಧ ಎನ್ನುವಂತೆ ಮೃದು, ಮಿತ, ಹದುಳ ಭಾಷೆಯ ಮತ್ತೊಬ್ಬ ತತ್ವಪದಕಾರ ಬಾಲಲೀಲಾ ಮಹಾಂತ ಶಿವಯೋಗಿ. ಅವರ ಒಂದು ಉದಾಹರಣೆ-
ಅವರವರ ಭಕ್ತಿಗೆ ಅವರವರ ಭಾವಕ್ಕೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಇರುವೊಂದು ಕನ್ನಡಿಯ ನೂರಾರು ಜನಪಿಡಿಯೆ
ಸರಳಾಗಿ ಅವರವರ ರೂಪ ಕಾಣುವಂತೆ
ತತ್ವಪದಗಳನ್ನು ರಚಿಸಿದವರಂತಯೇ ಅವುಗಳನ್ನು ಪ್ರಚಾರ ಮಾಡುತ್ತ ಬತಿಹನಕನ್ನು ಸವೆಸಿದ, ಅವುಗಳಲ್ಲಿ ಹುದುಗಿದ ಅನುಭಾವದ ಬೆಳಕನ್ನು ಪಸರಿಸುತ್ತ ಬಾಳಿದ ಜನಪದ ಕಲಾವಿದರ ದೊಡ್ಡ ಪರಂಪರೆಯು ಈ ನಾಡಿನಲ್ಲಿದೆ. ಅವರೆಲ್ಲರೂ ವಂದ್ಯರು ಮತ್ತು ಪ್ರಾತಃಸ್ಮರಣಿಯರು

•           ದಿನಾಂಕ:07/09/2013ು ಕನ್ನಡ ಸಾಹಿತ್ಯದಲ್ಲಿ ಅನುಭಾವ, ರಾಷ್ಟ್ರೀಯ ವಿಚಾರ ಸಂಕಿರಣ, ಶಿವಾನಂದ ಕಾಲೇಜ ಕಾಗವಾಡ

ವಿ.ಕೃ.ಗೋಕಾಕ್ : ದೊಡ್ಡ ಮನುಷ್ಯ, ದೇವತಾ ಮನುಷ್ಯ



ಮಾನವನಂತೆ ಮಣ್ಣಿನೊಳು ಜನಿಸಿ ಮಣ್ಣಾಗುತ್ತ
ಮುಳು ಮುಳು ಅತ್ತು, ಪಿಸಿ ಪಿಸಿ ನಕ್ಕು, ಹೊರಳಾಡಿ ನರಳಾಡಿ
ಕುಣಿ ಕುಣಿದು ಚಿಂತಿಸಿ, ಧೇನಿಸಿ, ಭೋಗಯೋಗಗಳ
ಸಾಧನೆಯಲ್ಲಿ ಭಾವ ಬುದ್ಧಿ ಕರ್ಮದ ಮಿಲನ.
                                                                                                      ವಿ.ಕೃ.ಗೋಕಾಕ್
ದಿನಾಂಕ 09/08/2013ರಂದು ನನ್ನ ಗುರುಗಳಾದ ಚಂಪಾ(Champa) ಬರೆದ ‘ನನ್ನ ಗುರು ಗೋಕಾಕ’ ಪುಸ್ತಕ ಬಿಡುಗಡೆ ಸಮಾರಂಭವು ಕರ್ನಾಟಕ ಸ್ವಾಭಿಮಾನಿ ವೇದಿಕೆಯಿಂದ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರಿನಲ್ಲಿ ಜರುಗಿದಾಗ ಗೋಕಾಕರ ‘ಭಾರತ ಸಿಂಧು ರಶ್ಮಿ’ಯ ಈ ಮೇಲಿನ ಸಾಲುಗಳಿಂದ ನನ್ನ ಮಾತುಗಳನ್ನಾರಂಭಿಸಿದೆ. ಎಷ್ಟೆಲ್ಲ ಬರೆದಿದ್ದ ಗೋಕಾಕ ಸಾಹಿತ್ಯಾಸಕ್ತರ ಗಮನದಲ್ಲಿ ಉಳಿದದ್ದು ಮಾತ್ರ ಅವರ ಇಂಥ ಕೆಲವು ಪದ್ಯಗಳಿಂದ. ಉಳಿದಂತೆ ಅವರು ಮತ್ತೆ ನೆನಪಾಗುವುದು ಕಮಲ ಕುಂಜ, ಗೋಕಾಕ ಚಳುವಳಿ(Gokak Chaluvali), ಸಿ.ಆಯ್.ಇ.ಎಫ್.ಎಲ್(C.I.E.F.L), ಸಾಯಿಬಾಬಾ(Saibaba)ರೆಡೆಗಿನ ಶ್ರದ್ಧೆ ಮತ್ತು ಬೇಂದ್ರೆಯವರಿಗೆ ಸಲ್ಲಿಸಿದ ಸೇವೆಯಿಂದಾಗಿ.

        ಹಸ್ತ ಸಾಮುದ್ರಿಕೆಯನ್ನು ಬಲ್ಲವರಾಗಿದ್ದ ಗೋಕಾಕ ಹಲಸಂಗಿಯ ಗೆಳೆಯರ ಬಳಗಕ್ಕೂ ಅತ್ಯಂತ ನಿಕಟವರ್ತಿಗಳಾಗಿದ್ದರು ಎಂದು ಸಿಂಪಿ ಲಿಂಗಣ್ಣ ನನಗೆ ಆಗೀಗ ಹೇಳುತ್ತಿದ್ದ ನೆನಪು. ಬಿಜಾಪುರದಲ್ಲಿದ್ದಾಗ ಜಿ.ಬಿ.ಸಜ್ಜನರು ಗೋಕಾಕರ ಇಂಗ್ಲೀಷ್ ಕೈಬರಹವನ್ನು ಮತ್ತು ತಮ್ಮಿಬ್ಬರ ಮಧ್ಯದ ಪತ್ರ ವ್ಯವಹಾರವನ್ನು ನನ್ನ ಮುಂದೆ ವಿವರಿಸುತ್ತಿದ್ದುದರ ನೆನಪು. ಅಂದಹಾಗೆ ಗೋಕಾಕರ ಕೈ ಬರಹ ಅಷ್ಟೊಂದು ಮುದ್ದಾಗಿರಲಿಲ್ಲ. ನಾನು ಗೋಕಾಕರನ್ನು ಮುಖತಃ ನೋಡಿದ್ದು ಧಾರವಾಡದಲ್ಲಿ, ಅವರ ಪ್ರೀತಿಯ ಕರ್ನಾಟಕ ಕಾಲೇಜಿನ ಆವರಣದಲ್ಲಿ, ಅವರ ಹೆಸರಿನಲ್ಲಿಯೇ ಉದ್ಘಾಟನೆಯಾಗುತ್ತಿದ್ದ ಗ್ರಂಥಾಲಯದ ಸಮಾರಂಭಕ್ಕೆ ಅವರು ಬಂದಿದ್ದರು. ಬಹುತೇಕ ಅದೇ ಅವರ ಕೊನೆ ಸಮಾರಂಭವಾಯಿತೆನೋ?
        ರಾಜಕೀಯದಲ್ಲಿ ಅರಸು(Devaraj Arasu) ಮತ್ತು ರಾಮಕೃಷ್ಣ ಹೆಗಡೆ(Ramakrishna Hegade)ಯಂತೆ ಸಾಹಿತ್ಯ ಲೋಕದಲ್ಲಿ ಅತಿ ದೊಡ್ಡ ಶಿಷ್ಯರ, ಲೇಖಕರ ಪಡೆಯನ್ನು ನಿರ್ಮಿಸಿದವರು ಗೋಕಾಕ. ಬಹುತೇಕ ಅದೇ ಅವರ ಬಹಳ ದೊಡ್ಡ ಕೊಡುಗೆಯೂ ಕೂಡ. ಸ್ವಜನ ಪಕ್ಷಪಾತವಿಲ್ಲದ ನಿರ್ಮೋಹದ ಗುರು. ಚಂಪಾ ಹೇಳುವಂತೆ ‘ಅನೇಕರ ಬಾಳ ದೇಗುಲದಲ್ಲಿ ಮೇರೆಯುತಿಹ ಹಿರಿ ಕವಿಯೆ’ ಗೋಕಾಕರನ್ನು ನಾನು ಸಮೀಪದಿಂದ ಬಲ್ಲವನಲ್ಲದಿದ್ದರೂ ಅವರ ಅತ್ಯಂತ ಪುಟ್ಟ ಹೊತ್ತಿಗೆಯಾದ ಜೀವನ ಕಾಳಜಿಯಿಂದ ತುಂಬಿಕೊಂಡ ಕೃತಿ ‘ಜೀವನ ಪಾಠಗಳು’ ನನ್ನ ಹೃದಯಕ್ಕೆ ಹತ್ತಿರ.
        ವೈ.ಎಸ್.ವಿ ದತ್ತ, ಕಮಲಾ ಹಂಪನಾ, ಎಚ್,ಆರ್.ಅಮರನಾಥ, ಗೋಕಾಕರ ಮಗ ಅನೀಲ ಗೋಕಾಕ(Anil Gokak), ಡಾ.ರಾಜಕುಮಾರ(Dr.Rajakumar) ಅವರಿಗೆ ಯೋಗ ಕಲಿಸಿಕೊಟ್ಟ ಯೋಗ ಗುರು ನಾಯ್ಕರ್, ಎಸ್.ಎನ್.ಕಾತರಕಿ ಹೀಗೆ ಎಪ್ಪತ್ತರ ಆಸುಪಾಸಿನ ಈ ಎಲ್ಲ ಹಿರಿಯರ ಮುಂದೆ, ಗೋಕಾಕರ ನೇರ ಒಡನಾಡಿಗಳ ಮುಂದೆ ನಿಂತು ನಾನೇನು ಮಾತನಾಡುವುದು? ಎಂದು ಚಿಂತಿಸುತ್ತಿದ್ದಾಗ ನನ್ನ ಸಹಾಯಕ್ಕೆ ಬಂದದ್ದು ಗೋಕಾಕರ ನೇರ ಶಿಷ್ಯರೂ, ನನ್ನ ಗುರುಗಳೂ ಆದ ಜಿ.ಬಿ.ಸಜ್ಜನ(G.B.Sajjan)ರ ಪತ್ರ. ಮಹಾರಾಷ್ಟ್ರದ ಬಾರಾಮತಿಯಲ್ಲಿ ಕುಳಿತುಕೊಂಡು 15 ಜುಲೈ 2013ರಂದು ಅವರು ನನಗೆ ಈ ಪತ್ರವನ್ನು ಬರೆದಿದ್ದಾರೆ. ಆದರೆ ದೊಡ್ಡ ಮನುಷ್ಯನೊಬ್ಬ ದೊಡ್ಡವರನ್ನು ಕುರಿತು ಹೇಗೆ ದಾಖಲಿಸುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದ್ದರಿಂದ ಈ ಪತ್ರವನ್ನು ಅಂದಿನ ಸಭೆಯಲ್ಲಿ ನಾನು ಬಳಿಸಿಕೊಂಡೆ. ನೀವೂ ಓದಿ. . . .

“ಪ್ರಿಯ ‘ರಾಗಂ’ ಅವರೇ
        ಹೇಗಿದೀರಿ? ಇತ್ತೀಚಿನ ಬರಹ ಯೋಜನೆ ಏನು? ಗೋಕಾಕ(V.K.Gokak)ರ ‘ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆ ತರುವೆ ನಾ’ ಆಗಾಗ ಹಾಡಿಕೊಂಡಿರ್ತೇನೆ. ಅಷ್ಟೇ ಅದೊಂದೇ ಸಾಲು ಬರ್ತದೆ. ಮುಂದಿನ ರಾಗವೂ ತಪ್ಪಿ ಹೋಗುತ್ತೆ. ಹೋದರೇನಂತೆ, ಅದರ ಹಿಂದೆ ಇರುವ ಮಾಧುರ್ಯ ಉಳಿದಿರುತ್ತೆ. “ನಿಮ್ಮ ಹಾಡನ್ನು ಹಾಡುವ ವಿದ್ಯಾರ್ಥಿನಿ ನಮ್ಮಲ್ಲೊಬ್ಬರಿದಾರೆ. ಹಾಡಿನ ಸನ್ನಿವೇಶ ಮನದ ಮುಂದೆ ಮೂಡಿ ನಿಲ್ಲುವಂತೆ ಸುಶ್ರಾವ್ಯವಾಗಿ ಹಾಡ್ತಾಳೆ. ಅದನ್ನು ಕೇಳಲಾದರೂ ನೀವೊಮ್ಮೆ ನಮ್ಮ ಕಾಲೇಜಿಗೆ ಬರಬೇಕು” ಅಂತ ಗೋಕಾಕರಿಗೆ ಆಮಿಷೆ ಒಡ್ಡಿದ್ದೆ - ಪತ್ರ ಮುಖೇನ ಅಂತ ಕಾಣ್ತದೆ. ಅವರು ಆಗ ಎಲ್ಲಿದ್ದರೋ  ನೆನಪಿಲ್ಲ. ಧಾರವಾಡ ಬಿಟ್ಟು ಹೋದಮೇಲೆ (ಕರ್ನಾಟಕ ಕಾಲೇಜಿನಿಂದ ನಿರ್ಗಮಿಸಿದ ಮೇಲೆ) ಅಲ್ಲಿಗೆ ಅವರೇನು ಬರಲಿಲ್ಲ, ನೆಲೆಸಲಿಲ್ಲ.
 ಅವರು ಬೆಂಗಳೂರಿನಲ್ಲಿರಲಾಗಿಯೇ, ಅವರಿಂದ ಅವರ ಎರಡೂ ಕವನಸಂಕಲನಗಳ ಉಳಿದ ಒಂದೇ ಒಂದು ಪ್ರತಿಯನ್ನು “ನನ್ನ ಜೀವದಕಿಂತ ಹೆಚ್ಚಿಗೆ ಜೋಪಾನ ಮಾಡಿ ನಿಮಗೆ ತಿರುಗಿ ತಂದು ಒಪ್ಪಿಸ್ತೇನೆ, ಸರ್” ಅಂತ ಹೇಳಿ ಇಸಿದುಕೊಂಡು ಬಂದಿದ್ದೆ. P.G valuationಗಾಗಿ ಹೋಗಿದ್ದಾಗ. ಅಲ್ಲಿ ಇರುತ್ತಲೇ, valuation camp ಮುಗಿದ ಹಾಗೆ, ನನಗೆ ಏನು ಬೇಕೋ ಅಷ್ಟನ್ನು notes ಮಾಡಿಕೊಂಡು, ಗೋಕಾಕರಿಗೆ ತಿರುಗಿ ಒಪ್ಪಿಸಿ ಬಂದಿದ್ದೆ. ಮತ್ತೊಮ್ಮೆ ಹೋಗಿದ್ದಾಗ, ನನ್ನ ಇಂಗ್ಲೀಷ್ ವಿಮರ್ಶೆಯನ್ನು ಅವರ ಕೈಯಲ್ಲಿ ಕೊಟ್ಟು ಬಂದು, ನಂತರ phone ಮೇಲೆ ಏನೆನ್ನಿಸಿತು ಸಾರ್? ಅಂತ ಕೇಳಿದೆ. ‘ಇಂಗ್ಲೀಷ್ ಅನ್ನಿಸದ ಕೆಲ ನುಡಿಗಟ್ಟನ್ನೂ ಬಳಸಿದ್ದಾರೆ’ (Today here, tomorrow where? ಇರಬೇಕು) ಅನ್ನೋ ಮಾತಿಗೆ ಅವರ ಪ್ರತಿಕ್ರಿಯೆ ಏನು ಬರ್ತದೆ ಅಂತ ಕಾಯ್ದಿದ್ದೆ.
ಬಹಳ ದೊಡ್ಡ ಮನುಷ್ಯ. ಜೀವನದಲ್ಲಿ ಎಂತೆಂಥದೋ ವಿಷ ನುಂಗಿ ಬಾಳಿ ಬಂದ ದೇವತಾ ಮನುಷ್ಯ. ‘ಚನ್ನಾಗಿದೆ’ ಅಂತಷ್ಟೇ ಅಂದರೆ. ‘Pratibha India’ ಅಂತಾ ಉತ್ತರ ಭಾರತದ ಒಂದು ‘Journal’ ಇದೆ. ಅದಕ್ಕೆ ಕಳಿಸಿರಿ ಅಂತಲೂ ಹೇಳಿದರು. . . .
        ಅವರ ಬಗೇಗಿನ ಇಂಗ್ಲೀಷ್ ಲೇಖನದ ಕನ್ನಡ version ನಿಮ್ಮ ಪುಸ್ತಕದಲ್ಲಿ ಬಂದಿದೆಯೋ ಇಲ್ಲವೋ ಅಂತ ನೋಡಿದೆ. ಬಂದಿದೆ. . . . ಹಾಗೆಯೇ ನಿಮ್ಮ ಮುನ್ನುಡಿಯ ಕೆಲವು ಸಾಲುಗಳೂ ಕಣ್ಣಿಗೆ ಬಿದ್ದವು. . .”

        ಹೀಗೆ ವ್ಯಕ್ತಿಗತ ನೆಲೆಯಲ್ಲಿ ಪತ್ರ ಮುಂದುವರೆಯುತ್ತದೆ. ಏನೂ ಗೊತ್ತಿಲ್ಲದ ನನ್ನಂಥವರಿಗೆ ಪ್ರಾಮಾಣಿಕವಾದ ಈ ಸಾಲುಗಳಲ್ಲಿ ಗೋಕಾಕ ಎಂಬ ಮಹಾನ್ ಚೇತನದ ಬೆಳಕಿನ ದರ್ಶನವಾಗುತ್ತದೆ.

            

Saturday, July 20, 2013

ಅರಮನೆಗೂ-ಗುರುಮನೆಗೂ….

(ದಿ: 14/7/13, ಶಿವಪುರ, `ಮಹಾಮನೆಯಲ್ಲಿಶಿವಾನುಭವ ಗೋಷ್ಠಿ ಉದ್ಘಾಟಿಸುತ್ತಾ ರಾಗಂ)
       
         ಇದುಮಹಾಮನೆ’. ಸಾಮಾನ್ಯವಾಗಿ ಹೇಳುವಂತೆ ಮಠ, ಶ್ರೀಮಠ, ಪೀಠ, ಮಹಾಸಂಸ್ಥಾನ ಪೀಠ ಎಂದೇನಾದರೂ ಇದು ಒಂದಾಗಿದ್ದರೆ ಕೆಲವೊಮ್ಮೆ ಹೋಗಲೇಬೇಕಾದ ಅನಿವಾರ್ಯತೆಯೇನೂ ಇರುವುದಿಲ್ಲ. ಆದರೆ ಇದು ಮನೆ, ಶಿವಪುರದ ಮಹಾಮನೆ, ನಮ್ಮ ಮನೆಗಳಿಗಿಂತ ಸ್ವಲ್ಪ ದೊಡ್ಡ ಮನೆ ಎನ್ನುವ ಭರವಸೆ ಸಿಕ್ಕಿದುದರಿಂದ ದಿನಾಂಕ 14-07-2013 ರಂದು ಇಲ್ಲಿಯ 15 ನೇಯ ಶಿವಾನುಭವ ಗೋಷ್ಠಿಯ ಉದ್ಘಾಟನೆಗೆ ನಾನು ಹೋಗಿದ್ದೆ. ಹಿಂದಿನ ತಿಂಗಳು 23 ನೇ ತಾರೀಖಿನಂದು ನಡೆದ ಸಮಾರಂಭದಲ್ಲಿಯೇ ನಾನು ಮುಖ್ಯ ಭಾಷಣಕಾರನಾಗಿ ಪಾಲ್ಗೊಂಡು ಮಹಾಮನೆಯನ್ನು ಉದ್ಘಾಟಿಸಬೇಕಿತ್ತು. ಆದರೆ ಅಂದು ನನ್ನೊಂದಿಗೆ ಪಾಲ್ಗೊಳ್ಳಲಿರುವ ವೇದಿಕೆಯ ಮೇಲಿನ ಗಣ್ಯರ ಪಟ್ಟಿಯನ್ನು ನೋಡಿ ಬೆಚ್ಚುಬಿದ್ದ ನಾನು ನಮ್ಮ ಮನೆಗೆ ನಾನು ಯಾವಾಗಲಾದರೂ ಹೋದರಾದೀತು, ಸಧ್ಯ ಪರಸೆಯಲ್ಲಿ ಪರಮಾತ್ಮನ ಧ್ಯಾನವಂತೂ ಬೇಡ ಎಂದು ದೂರ ಉಳಿದುಕೊಂಡೆ. ಆದರೆ `ಮಹಾಮನೆ ಮುಖ್ಯಸ್ಥ  ಶ್ರೀ  ಬಸವಾನಂದ ಸ್ವಾಮೀಜಿ ಇಷ್ಟು ಬೇಗ ಮತ್ತೆ ಕರೆಯಿಸಿಕೊಳ್ಳುತ್ತಾರೆಂಬ ಲೆಕ್ಕಾಚಾರವಿರಲಿಲ್ಲ.


       ದಿನಾಂಕ 14 ರಂದು ಮಹಾಮನೆಯ ಉಪನ್ಯಾಸದಲ್ಲಿ ಪ್ರಮುಖವಾಗಿ ನಾನು ಎತ್ತಿಕೊಂಡ ಪ್ರಶ್ನೆ ಪ್ರಪಂಚಕ್ಕೆ ಆಧ್ಯಾತ್ಮಿಕ ಗುರು ಎನಿಸಿಕೊಂಡ ಭಾರತಕ್ಕೆ ಇಂಥ ಭಾವದಾರಿದ್ರ್ಯವೇಕೆ? ಭಕ್ತಿಪಥ, ಶರಣ ಸಂಸ್ಕೃತಿ, ಸೂಫಿ, ದಾಸ, ತತ್ವಪದಕಾರರ ಮಧ್ಯ ಸಾವಿರಾರು ವರ್ಷದ ದಾರಿ ಸವೆಸಿದ ಭಾರತ ಎನ್ನುವ ಸಂಸ್ಕೃತಿಗೆ ಇಂದು ದಿಕ್ಕು ತಪ್ಪಿದ ಅನುಭವವೇಕೆ? ನಮ್ಮ ರಾಜಕಾರಣ ನಮಗೆ ಒಡ್ಡಿದ ಸವಾಲುಗಳೇನು? ಹೀಗೆ ಇನ್ನೊಂದು, ಮತ್ತೊಂದು. ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಕರ್ನಾಟಕದ ಹನ್ನೆರಡು ಜನ ಮಠಾಧೀಶರು ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಇದು ಅರಮನೆಗೂ-ಗುರುಮನೆಗೂ ಇರುವ ಸಂಬಂಧದ ಬಹಿರಂಗ ಘೋಷಣೆ ಎನ್ನೋಣವೆ? ಆರು ದಶಕಗಳಿಂದ ರಾಜಕಾರಣಿಗಳು ಎಂಬ ತಮ್ಮ ಶಿಷ್ಯರ ಎಡಬಿಡಂಗಿತನವನ್ನು ನೋಡಿ ಬೇಸತ್ತ ಧಾರ್ಮಿಕ ಗುರುಗಳ ಪ್ರತಿಭಟನೆ ಎನ್ನೋಣವೆ? ಇಲ್ಲಾ, ದೇಶದ ಸಾವಿರಾರು ಶ್ರೀಮಂತರಂತೆ ಅಪಾರ ಆಸ್ತಿಯನ್ನು, ಐಷಾರಾಮಿ ಜೀವನವನ್ನು ನೆಚ್ಚಿಕೊಂಡ ಸನ್ಯಾಸಿ ವರ್ಗ ತನ್ನನ್ನೇ ತಾನು ರಕ್ಷಿಸಿಕೊಳ್ಳಲು ಹಾಕಿದ ಹೊಸ ಯೋಜನೆ ಎನ್ನೋಣವೆ? ಇದು ಇನ್ನೂ ಭವಿಷ್ಯದಲ್ಲಿ ಇತ್ಯರ್ಥವಾಗಬೇಕಾದ ಸಂಗತಿ.
      ಧಾರವಾಡ ಹತ್ತಿರದ ಮನಗುಂಡಿ ಮತ್ತು ಹಾಸನ ಹತ್ತಿರದ ಶಿವಪುರದಲ್ಲಿ, ನಿಸರ್ಗ ರಮಣೀಯ ಸ್ಥಳಗಳಲ್ಲಿ `ಮಹಾಮನೆಗಳನ್ನು ಕಟ್ಟಿಕೊಂಡು ಸಕ್ರೀಯ ರಾಜಕಾರಣ ಮತ್ತು ಸಮಾಜದ ಆರೋಗ್ಯ ಸುಧಾರಣೆಗಳತ್ತ ಗಮನ ಹರಿಸಿರುವ ಶ್ರೀ ಬಸವಾನಂದ ಸ್ವಾಮಿಗಳು ನನ್ನ ಸಾಹಿತ್ಯ ಸ್ನೇಹಿತರು. ಇದು ಪುಸ್ತಕ ಮುಖೇನ ಅರಳಿಕೊಂಡ ಸಂಬಂಧ

      ಅವರಿಗೆ ನನ್ನ ಓಶೋ, ಗಾಂಧಿ, ಅಬ್ಬಾಸ್ ಕಾಡಿದ್ದಾರೆ. ನನಗೆ ಅವರ ಸಮಾಜದ ಆರೋಗ್ಯ ಕುರಿತ ಕಾಳಜಿ ಮತ್ತು ಚಟುವಟಿಕೆಗಳು ಬಹಳಷ್ಟು ಪ್ರೀತಿಯವೆನ್ನಿಸಿವೆ. ಲೋಕಸಭೆಯ ಚುನಾವಣೆಯಲ್ಲಿ ತಾವು ಬಿಜೆಪಿ ಪರ ಅಖಾಡಕ್ಕೆ ಇಳಿಯುವುದಾಗಿ ಘೋಷಿಸಿಕೊಂಡ ಸ್ವಾಮೀಜಿ ಕಂಡುಕೊಂಡಿರುವ ಸಮಾಧಾನ ನರೇಂದ್ರ ಮೋದಿ. ನರೇಂದ್ರ ಮೋದಿ ಎಂದರೆ ಅವರಿಗೆ ಎಲ್ಲಿಲ್ಲದ ಮೋಹ. ಆದರೆ ನನ್ನ ವಾದವಿಷ್ಟೇ, ಇಂದು ವ್ಯಕ್ತಿ ಮತ್ತು ಪಕ್ಷಗಳು ನೆಪ ಮಾತ್ರ. ಯಾಕೆಂದರೆ, “ಪಕ್ಷಗಳು ದೇಶದ ಪ್ರಶ್ನೆಯಲ್ಲ. ಅವು ಪ್ರಜಾಸತ್ತಾತ್ಮಕತೆಯ ಜೀವಂತಿಕೆಯ ಲಕ್ಷಣಗಳು. ಪಕ್ಷಕ್ಕೂ, ಪಥಕ್ಕೂ ಸಮನ್ವಯವಿರಬೇಕಷ್ಟೇ. `ಕಾಂಗ್ರೆಸ್ಗಾಂಧಿಯ ಅರ್ಥದಲ್ಲಿ ಕಾಂಗ್ರೆಸ್ ಆಗುವುದಾದರೆ, `ಜನತಾ ಪರಿವಾರಜಯಪ್ರಕಾಶ ನಾರಾಯಣರ ಚಿಂತನೆಯ ಪ್ರತಿಬಿಂಬವಾಗುವುದಾದರೆ, `ಬಿಜೆಪಿಪಾಕಿಸ್ತಾನಕ್ಕೆ ಹೋಗಿ ಕಾವ್ಯದ ಮೂಲಕ ಮಾನವ ಸಂಬಂಧಗಳನ್ನು ಬೆಸೆಯುವ ವಾಜಪೇಯಿ ಅರ್ಥದ ಪಕ್ಷವಾಗುವುದಾದರೆ, ಪಕ್ಷಗಳು ದೇಶಕ್ಕೆ ಹೊರೆಯಲ್ಲ. ಇವುಗಳ ಅನುಸರಣೆ ಅಪರಾಧವೂ ಅಲ್ಲ. ಇವುಗಳೊಂದಿಗೆ ಘರ್ಷಣೆಯ ನಮ್ಮ ಮಾತೂ ಇಲ್ಲ.”