Total Pageviews

Friday, April 10, 2020

ಕದ್ದು ತಿನ್ನುವ ಹಣ್ಣಲ್ಲ ಕೀಟ್ಸ್

ಬರೆಯಬಾರದು, ಬರೆಯಿಸಲ್ಪಡಬೇಕು. ಜೀವಕೋಟಿ, ಹಂಬಲದ ಹಲವು ಹಾದಿಗಳ ಮೂಲಕ ಬೆಳಕಾಗಿ ನಮ್ಮೊಳಗಿಳಿದು, ಬೆರೆತು, ಸ್ಥಿತಿಸಿ, ಮತ್ತೆ ಮಾಗಿದ ಹೊತ್ತಿಗೆ ಹೊರಬರಲು ನಮ್ಮನ್ನು ಸಾಧನವಾಗಿಸಿಕೊಳ್ಳಬೇಕು. ನಮ್ಮಿಂದ ನಡೆಯುವ ರಚನಾ ಕಾರ್ಯಗಳಿಗೆ ನಾವು ಬರೀ ವಾಹಕರಾಗಬೇಕು, ಸಾಕ್ಷಿಯಾಗಬೇಕಷ್ಟೆ. ಅದು ಘಟಿಸಬೇಕು ಪ್ರೀತಿಯಂತೆ. ಅಂಥ ಘಟನೆಗಳು, ಕಾಲ ಕಾಡುವ ಕೃತಿ-ಕಾರ್ಯಗಳಾಗಿ, ಸಮಾಜಕ್ಕೆ ಆದರ್ಶಗಳಾಗಿ ಉಳಿಯುತ್ತವೆ.
ಹೀಗೆ ಉಳಿಯುವ ಕಾರ್ಯಗಳು ನಮ್ಮಿಂದ ನಿರೀಕ್ಷಿಸುವುದು ನಿಷ್ಠೆಯನ್ನು. ಸಂಪೂರ್ಣ ನಿಷ್ಠೆಯನ್ನು. ಸಾಹಿತ್ಯದ ಎಲ್ಲ ಮೇರು ರಚನೆಗಳ ಹಿಂದೆ ಇಂಥ ನಿಷ್ಠೆ ಕಾರ್ಯ ಮಾಡಿದೆ. ಅಂತೆಯೇ The foundation of all good and lasting work in literature is entire sincerity to oneself ಎಂದು ಹೇಳುವುದು. ಕೊನೆ ಬಾಳುವ ಕಲಾಕೃತಿಯ ಮುಖ್ಯ ಆಧಾರ ನಿಷ್ಠೆ. ಅದು ಬರೆದುದಲ್ಲ, ಬರೆಯಿಸಲ್ಪಟ್ಟದ್ದು.
  ಈ ವಾದವನ್ನು ನಾನು ಯಾವುದೇ ಸಾಹಿತ್ಯವಾದಗಳನ್ನು ಮುಂದಿರಿಸಿಕೊಂಡು ಮಂಡಿಸುತ್ತಿಲ್ಲ. ಬದಲಾಗಿ ಬರಹದ ದೀರ್ಘ ಪಯಣದ ನನ್ನ ಅನುಭವಗಳನ್ನು ಮುಂದಿರಿಸಿಕೊಂಡು ವಾದಿಸುತ್ತಿದ್ದೇನೆ. ಈ ಅರ್ಥದಲ್ಲಿ ನನ್ನ ಬಹುಪಾಲು ಕೃತಿಗಳು ಬರೆದವುಗಳಲ್ಲ, ಬರೆಯಿಸಲ್ಪಟ್ಟವುಗಳು, ಈ ಪ್ರಸ್ತುತ ಕೃತಿಯೂ ಸೇರಿಕೊಂಡು.
     ಜಾನ್ ಕೀಟ್ಸ್, ಕಳೆದ ಹದಿನೇಳು ವರ್ಷಗಳಿಂದ ಕಾವ್ಯ ಚಿಂತನೆಯ ನನ್ನ ಅಭಿವ್ಯಕ್ತಿಗಳಲ್ಲಿ ವಾದ, ಉದಾಹರಣೆ, ರೂಪಕ, ಸಿದ್ಧಾಂತವಾಗಿ ಪದೇ ಪದೇ ಉಲ್ಲೇಖಗೊಳುತ್ತಲೇ ಬಂದಿದ್ದಾನೆ. 2016 ರಲ್ಲಿ ಅಧಿಕೃತವಾಗಿ ಅವನ ಜೀವನವನ್ನು ಆಧರಿಸಿ ‘ನೀರ ಮೇಲೆ ನೆನಪ ಬರೆದು’ ಎಂಬ 176 ಪುಟಗಳ ಕೃತಿಯನ್ನು, 2017 ರಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಟ್ಟೆ. ಅತ್ಯುತ್ತಮ ಪ್ರತಿಕ್ರಿಯೆ ದೊರೆತ ಪರಿಣಾಮ, ತಕ್ಷಣವೇ ಅದರ ಎರಡನೇ ಭಾಗದ ರಚನೆಯಲ್ಲಿ ದಿನಾಂಕ 06.04.2019 ರಂದು ತೊಡಗಿಕೊಂಡೆ. ಆದರೆ, ಈ ಮಧ್ಯದಲ್ಲಿ ಯಾಜಿ ದಂಪತಿಗಳ ಅನುರೋಧದ ಮೇರೆಗೆ ಭಾರತದ ಬಾವುಟದ ಚರಿತ್ರೆಯನ್ನು ಆದರಿಸಿದ ‘ಜಗದ್ವಂದ್ಯ ಭಾರತಂ’ ಕಾದಂಬರಿ ರಚನೆಯಲ್ಲಿ ನಾನು ತೊಡಗಿಕೊಂಡದ್ದರಿಂದ ಎರಡನೆ ಹಂತದ ಕೀಟ್ಸ್ ಹಾಗೆಯೇ ಅರ್ಧಕ್ಕೆ ಉಳಿದುಕೊಂಡ.
     ಸೃಜನಶೀಲವಾದುದ್ಯಾವುದನ್ನೂ ದಿನಾಂಕುಗಳ ಕರಾರು ಒಕ್ಕತೆಗಾಗಿ ಆಗಲಿ, ಯಾರದೇ ಒತ್ತಾಯಕ್ಕಾಗಲಿ ಎಂದೂ ಮಾಡಿದವನಲ್ಲ ನಾನು. ಕೆಲವೊಮ್ಮೆ ಓದದ, ಬರೆಯದ ಒಂದೇ ಒಂದು ಫೋಟೋ ತೆಗೆಯಿಸಿಕೊಳ್ಳದ ಹಲವು ಸೊಂಬೇರಿ ತಿಂಗಳುಗಳಿರುತ್ತವೆ. ಹಾಗೆಯೇ ಇರುತ್ತವೆ ಮತ್ತೆ ಕೆಲವು ದಿನಗಳು ಬರೀ ಬರಹವನ್ನು ಅವಲತ್ತುಕೊಂಡು. ಬರೆಯುತ್ತಿರುವುದು ಕೆಲವೊಮ್ಮೆ ಗಕ್ಕನೆ ನಿಂತು ಮತ್ತಿನ್ನ್ಯಾವುದೊ ಬರೆಯಿಸಿಕೊಳ್ಳಲಾರಂಭಿಸುತ್ತದೆ. ಎತ್ತಿಕೊಂಡ ಇನ್ನ್ಯಾವುದೊ ಪಕ್ಕಕ್ಕೆ ಸರಿದು ಮಗದೊಂದ್ಯಾವುದಕ್ಕೊ ದಾರಿ ಮಾಡಿಕೊಡುತ್ತದೆ. ಹೀಗೆಯೇ ರಚನೆಯಾದವುಗಳು ನನ್ನ ಬಹುಪಾಲು ಕೃತಿಗಳು.
       ಹೀಗೆಯೇ ವಿಳಂಬಗೊಂಡ ಕೀಟ್ಸ್ ಕುರಿತ ಎರಡನೇ ಭಾಗ, ಇದ್ದಕ್ಕಿದ್ದಂತೆ 2019ರಲ್ಲಿ ಆರಂಭವಾಗಿ ದಿನಾಂಕ 06 ಏಪ್ರೀಲ್ 2020ಕ್ಕೆ ಒಂದು ಸ್ವರೂಪ ಪಡೆಯಿತು. ಇದು ಭಾರತದಲ್ಲಿ ಕರೋನಾದ ಮರಣ ಮದ್ದಳೆಯ ಕಾಲ. ಒಟ್ಟು 2016 ರಿಂದ 2020, ಅಂದರೆ ನಾಲ್ಕು ವರ್ಷಗಳ ಅವಧಿ ಕವಿತೆಯಾಗಿ ಕಾಡಿದ್ದಾನೆ ಕೀಟ್ಸ್ ನನ್ನನ್ನು. ಇಂದಿಗೆ 171 ವರ್ಷಗಳ ಹಿಂದೆ ನೂರೆಂಟು ನೋವುಗಳೊಂದಿಗೆ ಬದುಕಿದ್ದ ಈ ಕೀಟ್ಸ್, ತನ್ನ ಕಾವ್ಯದ ಮೂಲಕ ಹೇಳಿದ್ದಾದರೂ ಏನು? ಜೀವನದೊಂದಿಗೆ ಅವನ ಹಠವಾದರೂ ಏನು? ಎಂದು ಕೇಳಿದರೆ ನನಗೆ ಥಟ್ಟನೆ ನೆನಪಾಗುವುದು ಕಡಂಗೋಡ್ಲು ಅವರ ನಾಲ್ಕು ಸಾಲುಗಳು –
ಮರೆತು ಹೋಗಲಿ ದುಗುಡ, ಜಾರಿಹೋಗಲಿ ವಿರಹ
ಕಂಬನಿಯ ಬುಗ್ಗೆ ಬತ್ತಲಿ, ಸುಯ್ಯ ರೋಧನದ ಮಿಡುಕ ಮರೆಹೋಗಲಿ
ಉಸಿರು ಹಸರಿಸಲಿ ಕಮ್ಮಲರ ನೀಳೆಸಳಿನಲಿ.
ಆಗ, ಪುಲಕಗಳ ಗುಡಿಕಟ್ಟಿ, ಉತ್ಸವದಿ ಕುಣಿದು
ಮೃತ್ಯು ಆಗಮನದ ವಾರ್ತೆಯನು ಮರೆಸಿ, ಮರೆತಿರುವೆ.
      ಇದೆಲ್ಲ ಪ್ರಶ್ನೆಯಲ್ಲ ನನಗೆ. ಪ್ರಶ್ನೆ ಇರುವುದು ಒಟ್ಟು ಈ ಬರಹ ಪ್ರಕ್ರಿಯೆಯ ಕುರಿತು. ಪ್ರಪಂಚದ ಅಗಾಧ ಶಕ್ತಿಯಲ್ಲಿ ತೃಣಮಾತ್ರದವನಾದ ಮನುಷ್ಯನನ್ನು ಸಾಧನವಾಗಿಸಿಕೊಂಡು ವಿಶ್ವಾತ್ಮಕತೆ ಪ್ರತಿಕ್ರಿಯಿಸಿದ ರೀತಿ, ಅದು ವೇದ್ಯವಾಗಿಸಿದ ಬದುಕು ಹಾಗೂ ಅದರ ಲೀಲಾ ಪ್ರಪಂಚ, ಅದು ಮನುಷ್ಯ ದೃಷ್ಟಿಗೆ ಒದಗಿಸುವ ಒಂದು ನಿರ್ದಿಷ್ಟ ಕೋನ, ದೃಷ್ಟಿಕೋನ. ಇದೆಲ್ಲದರ ಹಿನ್ನಲೆಯಲ್ಲಿಯೇ ಹೇಳಿದ್ದು Art is life seen through a temperament, ಕಲೆ ಅಥವಾ ಸಾಹಿತ್ಯವೆಂದರೆ ಒಂದು ವಿಶಿಷ್ಟ ಮನೋಧರ್ಮದ ಮೂಲಕ ನೋಡಿದ ಜೀವನ ಎಂದು. ಆದರೆ ಹೀಗೆ ಒಂದು ದೃಷ್ಟಿಕೋನದ ಮೂಲಕ ಜೀವನವನ್ನು ಮನಸ್ಸೊಂದು ನೋಡುವುದರೊಳಗಾಗಿ ದಕ್ಕಬೇಕಾದ ಅನುಭವವೂ ದಕ್ಕಿಸಿಕೊಳ್ಳಲು ಸಿದ್ಧವಾಗಿರುತ್ತದೆಯೆ? ಇದು ನನ್ನ ಜಿಜ್ಞಾಸೆ ಹಾಗೂ ಬರಹದ ಬಗೆಗಿರುವ ಕುತೂಹಲ.
       ಈ ಕುತೂಹಲದ ಬೆನ್ನೇರಿಯೆ ಕಳೆದ ಹಲವು ದಶಕಗಳಿಂದ ನಾನು ಬರೆಯುತ್ತ ಹೊರಟವ, ಕುತೂಹಲಕ್ಕೆ ಪೂರಕವಾಗಿ ಸಂಗತಿಗಳು ಘಟಿಸಿದ್ದರಿಂದ ಯಾವುದೇ ಬರಹ ಬರೆಯಲಾಗದು, ಬದಲಾಗಿ ಬರೆಯಿಸಲ್ಪಡುವುದು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಬಂದವ.
ಹೊರಗಡೆ ಸುಡು ಬಿಸಿಲು, ಒಳಗಡೆ ಕರೋನದ ಕಾರಣ ಸೃಷ್ಟಿಯಾದ ಮೃತ್ಯು ಭೀತಿ, ಗಡಿರೇಖೆಯ ಮೇಲಿರುವ ನನ್ನ ಮನೆ ‘ಜೋಳಿಗೆ’ಯ ಮುಂದೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಮೃತ್ಯು ನೆಮ್ಮದಿಗಾಗಿ ಪರದಾಡುತ್ತಿದ್ದ ಜನ, ಪೊಲೀಸ್ ಗಸ್ತು, ಊರೂರುಗಳಲ್ಲಿ ಸ್ಮಶಾನ ಮೌನ, ಮಾತೆತ್ತಿದರೆ ಸತ್ತವರ ಲೆಕ್ಕ, ಉಳಿದವರ ಗೋಳಾಟ ಹೀಗೆ ಏನೆಲ್ಲ ನಡೆದಿತ್ತು ನಾನು ಕೀಟ್ಸ್ ನೊಂದಿಗೆ ಕುಳಿತಾಗ. 
      ನನ್ನ ಉಳಿದ ಕೃತಿಗಳ ಸಂದರ್ಭದಲ್ಲಿ ಜರುಗಿದಂತೆಯೇ ಕಾಲ ಏನೇನೋ ಜರುಗಿಸುತ್ತಿತ್ತು ನನ್ನ ಸುತ್ತಲು. ಕೆಲವು ಸಚಿತ್ರಗಳಾದರೆ ಮತ್ತೆ ಕೆಲವು ವಿಚಿತ್ರಗಳಾದವು. ದಿನಾಂಕ 06.04.2019 ರಲ್ಲಿ ಬರಹ ಆರಂಭವಾಗಿದ್ದು ಮಧ್ಯ ಎಲ್ಲೆಲ್ಲೋ ನಿಂತು, ವಿಳಂಬಿಸಿ, ವಿಸ್ತಾರಗೊಂಡು, ಮಧ್ಯ ಮತ್ತೊಂದು ಕೃತಿ ರಚನೆಯಾಗಿ, ಮತ್ತೆ ಸರಿಯಾಗಿ ದಿನಾಂಕ 06.04.2020 ರಂದು ಈ ಕೃತಿಯ ಮುಕ್ತಾಯವಾಗುತ್ತದೆ, 23 ಫೆಬ್ರುವರಿ 1821 ರಂದು ಜಾನ್ ಕೀಟ್ಸ್ ನರಳಾಟ ಹಾಗೂ ಗೋಳಾಟದ ಬದುಕಿನಿಂದ ಮೃತ್ಯುವಿಗೆ ಜಾರಿದ್ದು, ಆದರೆ ಇದೇ ಫೆಬ್ರುವರಿ 23 ರಂದು ನನ್ನ ಹೆಂಡತಿಯೊಂದಿಗೆ ಜೀವನ ಅರೆಸುತ್ತ ಬೆಂಗಳೂರಿಂದ ಹೊರಟು, ಲಕ್ಷ ಲಕ್ಷ ಜನರೊಂದಿಗೆ ಮೃತ್ಯುವಿನಿಂದ ಜೀವನದೆಡೆಗೆ ನಾನು ಪಯಣ ಬೆಳೆಸಿದ್ದು. ಕೀಟ್ಸ್ ಮೃತ್ಯು ವಶವಾದದ್ದು 23 ಫೆಬ್ರುವರಿ ನಸುಕಿನ ನಾಲ್ಕು ಗಂಟೆಗೆ, ಮೃತ್ಯು ಕರೋನಾ ರೂಪದಲ್ಲಿ ನಮ್ಮೊಳಗೇನಾದರೂ ಮನೆ ಮಾಡಿದೆಯಾ ಎಂದು ನಮ್ಮೆಲ್ಲರ ಆರೋಗ್ಯ ತಪಾಸಣೆಯಾದದ್ದು ಇದೇ ಫೆಬ್ರುವರಿ 23-24ರ ನಸುಕಿನಲ್ಲಿ, ಇಂಗ್ಲೆಂಡಿನಿಂದ ಬೇಸತ್ತು ಕೊನೆಗಾಲದಲ್ಲಿ ಆರೋಗ್ಯವನ್ನು ಹುಡುಕಾಡುತ್ತ ಕೀಟ್ಸ್ ಹೋದ ಇಟಲಿ ಆಗಲೂ ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿತ್ತು. ಕನ್ನಡದಲ್ಲಿ 171 ವರ್ಷಗಳ ನಂತರ ಅವನ ಚರಿತ್ರೆ ಮರುಸೃಷ್ಟಿಯಾಗುವ ಈ ಸಂದರ್ಭದಲ್ಲಿಯೂ ಇಟಲಿ ಕರೋನಾ ಎಂಬ ಸಾಂಕ್ರಾಮಿಕ ರೋಗದಿಂದ ತನ್ನ ಸಾವಿರ ಸಾವಿರ ಪ್ರಜೆಗಳನ್ನು ಕಳೆದುಕೊಂಡು ನರಳುತ್ತಿದೆ. ಕ್ವಾರಂಟೈನ್ ಎಂಬ ಪದ ಯುರೋಪಿನಲ್ಲಿ ಬಹಳ ಹಿಂದೆಯೇ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪ್ರಚಲಿತ, ಆದರೆ ಪಶ್ಚಿಮದಲ್ಲಿ ಅದೂ ಏಷಿಯಾದಲ್ಲಿ ಅದು ಜನಜನಿತವಾದುದು ಕರೋನಾದ ಈ ಸಂದರ್ಭದಲ್ಲಿ. ಕೀಟ್ಸ್‍ನನ್ನು ಕುರಿತು ಬರೆಯುತ್ತಿರುವ ನಾನು, 21 ದಿನಗಳ ಕಾಲದ ದಿಗ್ಭಂದನವನ್ನು ಕರೋನಾ ಕಾರಣಕ್ಕಾಗಿ ಅನುಭವಿಸಿದರೆ, ಸ್ವಯಂ ಕೀಟ್ಸ್ ಇಟಲಿಯ ನೆಪಲ್ಸ್ ನಲ್ಲಿ 32 ಗಂಟೆಗಳ ಕ್ವಾರಂಟೈನ್ ಅನುಭವಿಸಿ, ‘ರಾಜಕೀಯ ಪ್ರೇರಿತವಾದ ಈ ಕ್ವಾರಂಟೈನ್ ಮೃತ್ಯುವಿಗಿಂತಲೂ ಭಯಾನಕವಾದುದು’ಎಂದು ದಾಖಲಿಸುತ್ತಾನೆ.
          ಈಗ ಹೇಳಿ ಬರಹವೆಂದರೇನು? ಸಮಾನ ಅನುಭವಗಳು ಸಮ-ಸಮನಾಗಿ 171 ವರ್ಷಗಳ ನಂತರ ನನ್ನ ಮತ್ತು ಕೀಟ್ಸ್ ನ ಮಧ್ಯ ಯಾಕೆ ಜರುಗಬೇಕು? ಇದೇ ಕಾರಣ ನಾನು ಮತ್ತೆ ಮತ್ತೆ ಕೇಳಿಕೊಳ್ಳುತ್ತಿರುತ್ತೇನೆ ಬರಹ ಬರೆಯುವಂಥದ್ದೊ? ಬರೆಯಿಸಲ್ಪಡುವಂಥದ್ದೊ. ವ್ಯಕ್ತಿಯೊಂದು ತನ್ನ ಜೀವ ಕಾಡಿದ ಬಾಹ್ಯದ ಸಂದರ್ಭದ ಮರು ಸೃಷ್ಟಿಯಾಗುವವರೆಗೂ ಮತ್ತೆ ಕಾಯ್ದು ಮರು ಸೃಷ್ಟಿಯಾಯಿತೆ? ಒಂದು ವೇಳೆ ಬರಹವೆನ್ನುವುದು ಬರೆದು ತೀರಿಸಿ ಬಿಡಬಹುದಾಗಿದ್ದರೆ ಈ ಹಿಂದೆಯೇ ಈ ಕ್ರಿಯೆ ಮುಗಿದು ಬಿಡಬಹುದಿತ್ತಲ್ಲವೆ? ಅಥವಾ ಇದೆಲ್ಲ ಬರಹಗಾರನ ಆತ್ಮ, ವಿಶ್ವಾತ್ಮಕತೆಯನ್ನು ಸಾಧಿಸುವ ಹುನ್ನಾರವೆ? ನನಗೆ ತಿಳಿಯುತ್ತಿಲ್ಲ.
        ಕೀಟ್ಸ್ ನಿಗೂ ಇದು ತಿಳಿಯಲಿಲ್ಲ. ಆತ ಬರೆದದ್ದು ಬರೆಯದೇ ಇರಲು ಆಗದ್ದಕ್ಕಾಗಿ. ರೆಂಬೆ-ಕೊಂಬೆಗಳಿಗೆ ಚಿಗುರು ಬರುವಷ್ಟೇ ಸಹಜವಾಗಿ ಬರಹ ಸಾಧ್ಯವಾಗದೇ ಹೋಗುವುದಾದರೆ ಅಂಥ ಬರಹವೇ ಬೇಡ ಎಂದು ಷರಾ ಎಳೆದುಕೊಂಡಿದ್ದ ಜಾನ್ ಕೀಟ್ಸ್ ನ ಪಾಲಿಗಂತೂ ಬರಹ ವ್ಯಸನವೂ ಆಗಿರಲಿಲ್ಲ, ಪ್ರದರ್ಶನವೂ ಆಗಿರಲಿಲ್ಲ. ಬದಲಾಗಿ ಅದು ಬದುಕಿನ ಅನಿವಾರ್ಯವಾಗಿತ್ತು, ಉಸಿರಿನಷ್ಟೇ ಅಶ್ಯಕವಾಗಿತ್ತು, ಸಾವಿಗೊಂದು ಸಮಾಧಾನವಾಗಿತ್ತು. ಕಾರಣ ಅವನ ಮೂಲಕ ಬಂದ ಬರಹ ಲೋಕೋದ್ಭವವಾಗಿತ್ತು, ಲೋಕವಾಣಿಯಾಗಿತ್ತು ಮತ್ತು ಅಂತಿಮವಾಗಿ ಲೋಕಾತ್ಮಕತೆಯೇ ಅದರ ಗುರಿಯಾಗಿತ್ತು.
       ಇಂಥ ಕೀಟ್ಸ್ ಜೀವಿಸಿದ್ದು ಕಡಿಮೆ. ಆದರೆ ಕವಿಯಾಗಿ ಬದುಕಿದ್ದು, ಬಾಳಿದ್ದು ದೀರ್ಘ. ಬದುಕನ್ನು ಗಾಳಿಗೋಪುರವಾಗಲು ಬಿಡಲಿಲ್ಲ ಅವನು. ಪದ ಪದವೂ ಆತ್ಮವೃತ್ತದ ಒರತೆ. ಜಾನ್ ಕೀಟ್ಸ್ ಎಷ್ಟೊಂದು ದೀರ್ಘ ವಿಸ್ತಾರದ ಕವಿ ಎನ್ನುವುದನ್ನು ತಿಳಿಯಲು ಆತನ ನಿಧನದ ನಂತರ ಅವನ ಕವಿಮಿತ್ರನಾದ ಪರ್ಸಿ ಬ್ರೌನ್ ಶೆಲ್ಲಿ ಬರೆದ ಶೋಕ ಗೀತೆ ‘ಎಡೋನಿಸ್’ ಕವಿತೆಯನ್ನು ಒಮ್ಮೆಯಾದರೂ ನೀವು ಓದಲೇಬೇಕು. ಅದು ಮುಲಾಜಿಗಾಗಿ ಬರೆದ ಕವಿತೆಯಲ್ಲ. ಆ ಕವಿತೆಯನ್ನು ಇಡಿಯಾಗಿ ನಾನು ಉಲ್ಲೇಖಿಸುತ್ತಿಲ್ಲ. ಕೀಟ್ಸ್ ಎಷ್ಟು ಎತ್ತರದವನು ಎನ್ನುವುದಕ್ಕೆ ಸಾಕ್ಷಿಯಾಗಿರುವ ಕೆಲವೇ ಕೆಲವು ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ –
·       He lives, he wakes – it is Death is dead, not he
********
·       He is made one with Nature : there is heard
His voice in all her music, from the moan
Of thunder, to the song of Nights sweet bird
He is a presence to be felt and known
In darkness and in light, from herb and stone
Spreading itself where’er that Power may move
Which has withdrawn his being to its own
Which wields the world with never weried love
Sustains it from beneath, and kindles it above
ಸೀಮಾತೀತವಾಗಿ ಬರೆದ ಕವಿ ಕೀಟ್ಸ್ ಅವನ ಗೆಳೆಯ ಶೆಲ್ಲಿ ಹೇಳಿದಂತೆ ಸಾವಿಲ್ಲದವನೆ. ಸಮಸ್ತ ಸೃಷ್ಟಿಯ ಗತಿ-ಮತಿಗಳಲ್ಲಿ ಬೆರೆತುಹೋದವನು. ಇಡೀ ಪಾಶ್ಚಾತ್ಯ ಕಾವ್ಯದಲ್ಲಿ ಶೇಕ್ಸಪೀಯರ್‍ನ ನಂತರ ಜಗತ್ತಿನ ಜನಾನುರಾಗಕ್ಕೆ ಭಾಜನನಾದ ಅತ್ಯಂತ ಮಹತ್ವದ ಕವಿ ಯಾರಾದರೂ ಇದ್ದರೆ ಅದು ಜಾನ್ ಕೀಟ್ಸ್. ಅವನಿಗೂ ಮೊದಲಿನ ಎಡ್ಮಂಡ್ ಸ್ಪೆನ್ಸರ್ ಬಹಳಷ್ಟು ಕಾವ್ಯ ರಸಿಕರಿಗೆ ಅರ್ಥವಾಗಲಿಲ್ಲ, ಜಾನ್ ಮಿಲ್ಟನ್ ಕಬ್ಬಿಣದ ಕಡಲೇ ಆದ, ಅಲೆಗ್ಝಾಂಡರ್ ಪೋಪ್ ಪ್ರಾಯೋಗಿಕ ನೆಲೆಯಲ್ಲಿ ಉಳಿದುಕೊಂಡ, ವಡ್ರ್ಸ್‍ವರ್ಥ್ ಸಂತನಾದ, ಕೀಟ್ಸ್ ಮಾತ್ರ ಕವಿತೆ ಬರೆದು ಕವಿಯಾದ ಎನ್ನುವುದಕ್ಕಿಂತ, ಅವನು ಕವಿತೆಗಾಗಿಯೇ ಬದುಕಿದ್ದ, ಕೊನೆಗೆ ಕವಿತೆಯಾಗಿಯೇ ದಕ್ಕಿದ.  
ನಾನು ಹೇಳುತ್ತಿರುವುದು ಅಕ್ಷರಶಃ ಸತ್ಯ. ತನ್ನ ಬಾಲ್ಯದಲ್ಲಿ ಅಂದರೆ, 1804ರ ಆಸುಪಸಿನಲ್ಲಿ ಕುದುರೆಯ ಮೇಲಿಂದ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದ ಕೀಟ್ಸ್ ಜೀವನದ್ದುದ್ದಕ್ಕೂ ಬೀಳುತ್ತ, ಏಳುತ್ತ, ಮೃತ್ಯುವಿನೊಂದಿಗೆ ಸೆಣಸಾಡುತ್ತ ಮೃತ್ಯುಂಜಯನೇ  ಆದ. ಕವಿ ಮ್ಯಾಥ್ಯು ಆ್ಯರ್ನಾಲ್ಡ್ ಕೀಟ್ಸ್ ನ ಕುರಿತು ಹೇಳುತ್ತಾನೆ – ‘He is, he is with Shakespeare. Though he lived more in sensations than in thoughts. Keats soon become alive to the principle of beauty in all things and he developed a style which was Greek in its sculpturesque perfection and Shakespearean in its intensity.
ನಿಮಗೆ ತಿಳಿ ತಿಳಿಯಾಗಲೆಂದು ನಾನು ಜಾನ್ ಕೀಟ್ಸ್ ನ ಕುರಿತು ಬರೆದಷ್ಟೂ ಆತ ಕಡಲಂತೆ ಆಳ, ಅನಂತವಾಗುತ್ತಲೇ ಹೋಗುತ್ತಾನೆ. ಇದು ಸರಿ, ಆದರೆ ಇದು ಏಕೆ ಹೀಗೆ ಎಂಬುದು ಪ್ರಶ್ನೆಯಲ್ಲವೆ? ಎಂಥ ಕವಿಗೆ ಇಂಥ ವಿಸ್ತಾರ ಸಾಧ್ಯವಾಗುತ್ತದೆ? ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಇದಕ್ಕೆ ಇಂದಿಗೆ ಐವತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಚರಿತ್ರೆಕಾರರಾದ ಪ್ರೊ. ರಂ.ಶ್ರೀ. ಮುಗಳಿ ಅವರು ಬಹಳ ಸುಂದರವಾಗಿ ಉತ್ತರಿಸಿದ್ದಾರೆ. ಅದನ್ನು ನೀವು ಗಮನಿಸಬೇಕೆಂದು ನನ್ನ ಬಯಕೆ. ಅವರು ಬರೆಯುತ್ತಾರೆ – “ಲೇಖಕನ ಜೀವನಾನುಭವ, ಆಲೋಚನೆ, ಹೃದಯಸ್ಪಂದನ ಇವುಗಳ ವಿಶಿಷ್ಟ ಪರಿಪಾಕವಾಗಿ ಅವನ ಸಾಹಿತ್ಯ ನಿರ್ಮಾಣವಾಗುತ್ತದೆ. ಇನ್ನೊಂದು ಬಗೆಯಲ್ಲಿ ಹೇಳಿರುವಂತೆ ಅದು ಸೃಷ್ಟಿ-ದೃಷ್ಟಿಗಳ ಸಂಗಮದಿಂದ ಉಂಟಾದ ನವೀನ ಸೃಷ್ಟಿಯಾಗಿರುತ್ತದೆ. ಈ ಸೃಷ್ಟಿಗೆ ಮುಖ್ಯ ಕಾರಣವಾದ ಪ್ರತಿಭಾಶಕ್ತಿ ‘ನವನವೋನ್ಮೇಷಶಾಲಿನಿ’ಯಾದ ಪ್ರಜ್ಞೆ ಎಂದು ಹೊಗಳಿಸಿಕೊಂಡಿದೆ. ಲೇಖಕನ ವ್ಯಕ್ತಿತ್ವದಲ್ಲಿ ಸಾಕ್ಷಿಭಾವ, ಸ್ನೇಹಭಾವ, ಸೌಂದರ್ಯಭಾವ ಇವು ಎಷ್ಟರ ಮಟ್ಟಿಗೆ ಮಾಗಿದ ರಸಪ್ರಜ್ಞೆಯಲ್ಲಿ ನೆಲೆನಿಲ್ಲುವುವೋ ಅಷ್ಟರ ಮಟ್ಟಿಗೆ ಅವನ ಕೃತಿ ಘನತೆಯನ್ನು ತಾಳುತ್ತದೆ. ಇಂಥ ಕೃತಿಯಲ್ಲಿ ಸಮಗ್ರ ಸೌಂದರ್ಯವು ಕಣ್ದೆರೆಯುತ್ತದೆ. ಅದರಿಂದ ನಿರ್ಮಲವಾದ, ನಿರ್ಹೇತುಕವಾದ ಆನಂದವು ಲಭಿಸುತ್ತದೆ. ಜೊತೆಗೆ ಅದು ರಸಿಕನ ಚಿತ್ರವನ್ನು ಎತ್ತರಿಸುತ್ತದೆ, ಜೀವನವನ್ನು ಸಂಸ್ಕರಿಸುತ್ತದೆ. ಅಂತರಂಗದಾಳದಲ್ಲಿ ತಿಳಿಯದಂತೆ ಹೊಕ್ಕು ಕೊನೆಬಾಳುವ ಬಾಳಿನ ಬೆಲೆಗಳನ್ನು ಸ್ಥಾಪಿಸುತ್ತದೆ. ‘ಋಷಿಯಲ್ಲದವನು ಕಾವ್ಯವನ್ನು ರಚಿಸಲಾರ, ದರ್ಶನದಿಂದಲೇ ಋಷಿ ಋಷಿಯಾಗುತ್ತಾನೆ.’ ಎಂಬ ಪ್ರಸಿದ್ಧವಾದ ಉಕ್ತಿ ಸಾಹಿತ್ಯದ ಚಿರಂತನವಾದ ಸ್ವರೂಪವನ್ನು ಬೇರೊಂದು ಬಗೆಯಲ್ಲಿ ಎತ್ತಿ ತೋರಿಸಿರುತ್ತದೆ. ಇಲ್ಲಿ ದರ್ಶನವೆಂದರೆ ಕಣ್ಣ ಮುಂದಿರುವ ಬಾಳಿನ ಹೊರನೋಟ, ಒಳಗಣ್ಣಿನಿಂದ ತಿಳಿಯುವ, ಇರಬೇಕಾದ ಬಾಳಿನ ಒಳನೋಟ. ಇದು ಲೇಖಕನ ಬುದ್ಧಿಗೆ ಮಾತ್ರ ಹೊಳೆದುದಲ್ಲ, ಅವನ ಸಮಗ್ರ ಚೇತನಕ್ಕೆ ಅರಿವಾಗಿ ಅವನ ಇರುವಿಕೆಯಲ್ಲಿ ಮೂಡಿರುವ ಇಲ್ಲವೆ ಮೂಡಲು ಹಾತೊರೆಯುತ್ತಿರುವ ಅವನದೇ ಆದ ಜೀವನದರ್ಶನವಾಗಿರುತ್ತದೆ. ಅಂತೇ ಸಾಹಿತ್ಯವು ವ್ಯಕ್ತಿತ್ವದ ಪ್ರತಿಫಲವೆಂದು ಹೇಳಿರುವುದುಂಟು. ವ್ಯಕ್ತಿವ್ಯಕ್ತಿಗೆ ನಿರ್ಮಿತಿ ಬೇರೆ ಬೇರೆಯಾಗುತ್ತದೆ. ವ್ಯಕ್ತಿ ಮಾಗಿದಷ್ಟು ಅವನ ಕೃತಿಯೂ ಮಾಗಿ ತೋರುತ್ತದೆ. ವ್ಯಕ್ತಿ ಕುಗ್ಗಿದಷ್ಟು ಅವನ ಕೃತಿಯೂ ಕುಗ್ಗಿ ನಿಲ್ಲುತ್ತದೆ.”
ಮಾಗಿದ ಕವಿ ಜಾನ್ ಕೀಟ್ಸ್ ಈ ಮೇಲಿನ ಚರ್ಚೆಯ ಹಿನ್ನೆಲೆಯವನು. ತನ್ನ ಬದುಕು ನಿಗಿನಿಗಿಯಾದರೂ ಅವನು ಕಾವ್ಯಲೋಕದಲ್ಲಿ ತಣ್ಣಗಿನ ಬೆಳಕಂತೆ ಬಂದವನು. ಇಂದಿಗೂ ಕಾವ್ಯಾರಾಧಕರಿಗೆ ಅದೇ ನೆಮ್ಮದಿಯನ್ನು ನೀಡಿದವನು. ನಾನಂತೂ ಅವನ ಕಾವ್ಯ, ಪತ್ರ, ಸಾಹಿತ್ಯ ಹಾಗೂ ಬದುಕನ್ನು ಓದಿ ಪ್ರಪಂಚದ ಮಹಾ ನಿಧಿಯೊಂದನ್ನು ದಕ್ಕಿಸಿಕೊಂಡ ಆನಂದದಲ್ಲಿದ್ದೇನೆ. ನನಗಾದ ಅನುಭೂತಿ ನಿಮಗೂ ದಕ್ಕಲಿ ಎಂಬ ಸದಾಶಯದೊಂದಿಗೆ ಈ ಪ್ರಯತ್ನ ಮಾಡಿದ್ದೇನೆ.
ಎಲ್ಲಕ್ಕೂ ಮಿಗಿಲಾಗಿ ಕೀಟ್ಸ್ ಕದ್ದು ತಿನ್ನುವ ಹಣ್ಣಲ್ಲ, ಹಂಚಿಕೊಂಡು ತಿನ್ನಬೇಕಾದ ಮಹಾಪ್ರಸಾದ, ಮಹಾನಂದ. ಈಗ ಅದು ನಿಮ್ಮೊಂದಿಗೆ.


Sunday, March 29, 2020

ಕಳೆಯಬೇಕಿದೆ ಕಳೆದುದೆಲ್ಲವನು ಒಮ್ಮೆ


ನಾನು ಹುಟ್ಟುವ ವೇಳೆಗೆ ಈ ದೇಶ ವಿಭಜನೆಗೊಂಡು ಎರಡೂವರೆ ದಶಕಗಳ ದೀರ್ಘ ಕಾಲ ಉರುಳಿ ಹೋಗಿತ್ತು. ಸಾಮ್ರಾಜ್ಯಷಾಯಿಯ ದುರಾಸೆಯೊ, ನಮ್ಮ ರಾಜಕೀಯ ನೇತಾರರ ಅಪ್ರಭುದ್ಧತೆಯೊ, ದೇಶವಾಸಿಗಳ ಧಾರ್ಮಿಕ ಸಂಕುಚಿತತೆಗಳೊ, ಒಟ್ಟಾರೆ ನಾವು ಸೀಳಿಕೊಂಡು ಆಗಿತ್ತು. ಆ ನಂತರ ಇಡೀ ಒಂದು ದಶಕವನ್ನು ಈ ದೇಶ ವಿಭಜನೆಯ ರಕ್ತ ರಂಜಿತ ಪುಟಗಳನ್ನು ಓದುವುದರಲ್ಲಿಯೇ ಕಳೆದೆ. ಹೀಗೆ ಓದಿದಾಗಲೊಮ್ಮೆ ದಿಗಿಲುಗೊಳ್ಳುತ್ತಿದ್ದ ನನಗೆ, ಇದ್ದಕ್ಕಿದ್ದಂತೆ ನಾಡು ತೊರೆದು, ಬದುಕರಿಸಿಕೊಂಡು, ಬಂದ ನಗರಗಳ ಒಮ್ಮಿಂದೊಮ್ಮೆ ತೊರೆದು ಹೊರಟುಬಿಡುವುದೆಂದರೇನು? ಎನ್ನುವುದರ ಗಂಭೀರತೆ ಅರ್ಥವಾಗಿದ್ದರೂ ವಾಸ್ತವವಾಗಿ ಕಂಡುಂಡ ಅನುಭವಗಳಿರಲಿಲ್ಲ.
ಈಗ ಅದನ್ನು ಸಾಧ್ಯವಾಗಿಸಿದ್ದು ಈ ‘ಕರೋನಾ’.
ಮಾರ್ಚ್ 21 ರಿಂದ 24 ರವರೆಗೆ ಬೆಂಗಳೂರೆಂಬ ಮಾಯೆಯ ಬಿಡಿಸಿಕೊಂಡು, ಸಿಕ್ಕದ್ದೇ ದಾರಿ ಎಂದುಕೊಂಡು, ಕಂಡಕಂಡವರ ಮುಖ-ಮಾತುಗಳಲ್ಲಿ ಕರೋನಾದ ಕರಾಳ ಛಾಯೆಯ ಕಲ್ಪಿಸಿಕೊಂಡು, ನನ್ನ ಮಕ್ಕಳು, ಹೆಂಡತಿಯೊಂದಿಗೆ ನನ್ನೂರಿಗೆ ಬಂದು ತಲುಪುವಾಗ ನನ್ನೊಂದಿಗೆ ಲಕ್ಷಾಂತರ ಜನಗಳು ಬೆಂಗಳೂರು ಬಿಟ್ಟು, ಹೀಗೆಯೇ ತಮ್ಮ ತಮ್ಮ ಊರಿಗೆ ಹೊರಟಿದ್ದರು. ಬಸ್ಸು, ಕಾರು, ಲಾರಿ, ಆಟೋ, ಬೈಕ್, ಸೈಕಲ್ ಕೊನೆಗೆ ಪಾದಾಚಾರಿಗಳಾಗಿಯೂ ಹೊರಟ ಜನಗಳನ್ನು ನೋಡಿದರೆ ಕರುಳು ಹಿಂಡಿದ ಅನುಭವ. ಮುಂದೆ ಕತ್ತಲೆ, ಹಿಂದೆ ಕರೋನಾ, ಕೈ ಬೀಸಿ ಕರೆಯುತ್ತಿದ್ದ ಹೈವೇದ ಎರಡೂ ಬದಿಗಳ ಹೋಟೆಲ್ ರೆಸ್ಟಾರೆಂಟ್‍ಗಳ ಮುಂದೆ ನಿಷೇಧದ ಆಜ್ಞೆ.
ಗಾಭರಿಗೊಂಡಿದ್ದ ನನ್ನ ಬಾಳ ಸಂಗಾತಿಯಂತೂ ಪ್ರತಿಕ್ಷಣವೂ ತಲ್ಲಣ್ಣಿಸುತ್ತಿದ್ದಳು. ದೂರದಲ್ಲಿದ್ದ ಮಕ್ಕಳನ್ನು ನೆನೆದು ಹರಕೆ ಹಂಬಲಗಳ ಉಸಿರು ಹಾಕುತ್ತಿದ್ದಳು. ಎಲ್ಲರೂ ಹೊರಟಿದ್ದರು ಹೊರಡಬೇಕಾದ ಅನಿವಾರ್ಯತೆಗೆ. ಎಲ್ಲಿಗೆ? ಯಾತಕ್ಕಾಗಿ? ಎಷ್ಟು ದಿನ? ಒಂದೂ ಗೊತ್ತಿಲ್ಲ. ಅವರೆಲ್ಲರನ್ನೂ ಬರೀ ನೋಟದಿಂದ ಪ್ರಶ್ನಿಸುತ್ತಿದ್ದ ನನ್ನ ಮನಸ್ಸು, ಕೇಳಿದ ಪ್ರಶ್ನೆಗಳೇ ಇಲ್ಲಿಯ ಈ ಕವಿತೆ. ಇಲ್ಲಿರುವ ಸಖಿ ಸಮಗ್ರ ಸಮಾಜ ರೂಪಿಸಿದ ನಿರುತ್ತರೆ!!!  
ಅವಳು ಕೊಡದ ಉತ್ತರವನ್ನು ನೀವಾದರೂ ಕೊಡಬಹುದೇ? ಕೊಟ್ಟರೆ ನಾನು ಸುಖಿ, ಕೊಡದಿದ್ದರೆ ನೀವೂ ನನ್ನ ಸಖಿ.
 
ಸಖಿಯೆ ಕಂಡ ಕನಸುಗಳನೆಲ್ಲ
ಅಳುಕಿಸುವದು ಹೇಗೆ ಈ ಕಣ್ಣುಗಳಿಂದ?
ಕ್ಷಣದ ಹಿಂದಿನ ಮರಣ
ಶತಮಾನಗಳ ಅನುರಣನ
ಸಖಿಯೆ, ಎಲ್ಲ ತುಂಬಿದ ಕಣ್ಣೆಂಬ ಈ ಹಡಗ ಸರಕನು
ಕ್ಷಣದಲಿ ಖಾಲಿ ಮಾಡುವುದು ಹೇಗೆ?

ಸ್ಪರ್ಶಕ್ಕೂ ಕಣ್ಣುಂಟು
ಶಬ್ಧಕ್ಕೆ ವಾಸನೆಯ ನಂಟಿದೆ
ಎಂದು ಹೇಳುವುದು ಹೇಗೆ ಕಿವಿ ಇಲ್ಲದವರಿಗೆ?
ಸಖಿಯೆ, ಕಳೆಯಬೇಕಿದೆ ಕಳೆದುದೆಲ್ಲವನು ಒಮ್ಮೆ
ಸಲ್ಲಬೇಕಿದೆ ಮತ್ತೆ ಮಗುವಿನಂತೆ
ಅರಳಬೇಕಿದೆ ನಿನ್ನ ನಗುವಿನಂತೆ.
ನನ್ನ ನೋವಿನ ನೂರು ಕನವರಿಕೆಗೆ
ರೆಕ್ಕೆ-ಗಳಿದ್ದಿದ್ದರೆ ಸಖಿಯೆ, ಹೊತ್ತೊಯುತ್ತಿದ್ದೆ ನಿನ್ನ
ಹೊತ್ತೆ ಮುಳುಗದ ನಾಡಿಗೆ, ಮತ್ತೆ ಮರಳದಂತೆ.
ಮೇಲೆ ಮೇಲೆ ಮೇಲಕೇರುವ ರೆಕ್ಕೆಗಳಿದ್ದಿದ್ದರೆ
ಹಾರಿಸುತ್ತಿದ್ದೆ ಪ್ರೀತಿ ಪತಾಕೆಯ ಗಗನದ ತುಂಬ
ಹೇಳಿಬಿಡು ಸಖಿ ಒಮ್ಮೆ, ನಾನು
ಏನು ಕುಡಿದರೆ ತೀರದ ಕಡಲು, ಮುಗಿಯದ ಆಗಸವ
ಸುತ್ತಾಡಿಸಬಹುದು ನಿನ್ನ?

ದಿಕ್ಕು ತೋಚುತ್ತಿಲ್ಲ, ರೆಕ್ಕೆ ಮೂಡುತ್ತಿಲ್ಲ
ಮುರಿದ ಹಡಗಿದು ಕಡಲ ಕ್ರಮಿಸುವದೆಂತು?
ತಿಳಿಯುತ್ತಿಲ್ಲ.
ಸುತ್ತ ಸುಳಿಯುವುದೆಲ್ಲ ಸತ್ತ ಹಕ್ಕಿಗಳ ವಾಸನೆ
ನಿಂತ ಹಡಗಿಗೆ ಮೃತ್ಯು ಕತ್ತಲೆಯ ಸೂತಕ
ಸಖಿಯೆ, ಹೇಳು ನನಗೆ ನರಕದ ನೆರಳಿಂದ
ಬಿಡುಗಡೆ ಇನ್ನೆಂದು?
ಒಂದು ಹಗಲಿನ ಹಾಡು ಮತ್ತೆ ಕೇಳುವುದೆಂದು?
ಕೂಡಿ ನಾವಿಬ್ಬರೂ ಮಾತನಾಡುವುದೆಂದು?



Friday, March 20, 2020

ಸರಳತೆಯ ಸೂತ್ರದಲಿ ಸುಖವ ಕಂಡವರು


“Let no act be done without a purpose,
nor otherwise than according to the perfect Principles of art.”     
                                         - Marcus Aurelius
*****************
ಹಿರಿಯ ಕಲಾವಿದರಾದ ಎಸ್.ಎಂ. ಖೇಡಗಿಯವರ ಕುರಿತ ಬರಹದ ಈ ಸಂದರ್ಭದಲ್ಲಿ, ನನ್ನನ್ನು ಮತ್ತೆ ಮತ್ತೆ ಸ್ಮರಣೆಗೆಳೆಸುತ್ತಿರುವ ಒಂದು ಪಾತ್ರ ಕೃಷ್ಣ ಪಾರಿಜಾತದ ಕಲಾವಿದರಾದ ಶ್ರೀ ಟಕ್ಕಳಕಿ ವಿಠ್ಠಲರಾವ. ನನ್ನ ದೊಡ್ಡಪ್ಪನವರಾದ ಮಲ್ಲಯ್ಯಸ್ವಾಮಿ ಅಥಣಿಯವರ ಕಾರಣದಿಂದಾಗಿ ನಾನು ವಿಠ್ಠಲರಾವ ಅವರಂಥವರನ್ನು ಸ್ಮರಿಸಿಕೊಳ್ಳಲು ಸಾಧ್ಯವಾಗಿರುವುದು.
ಅವರಿಗೆ ಅನಾರೋಗ್ಯ ಎಂದು ಗೊತ್ತಾಗಿ ಒಮ್ಮೆ ಜಮಖಂಡಿಯಲ್ಲಿರು ಸನ್ಮಿತ್ರ ಪ್ರೊ. ವಿಠ್ಠಲ ದಳವಾಯಿ ಅವರೊಂದಿಗೆ ಸೇರಿಕೊಂಡು, ಕೃಷ್ಣಾನದಿ ತೀರದ ವಿಠ್ಠರಾವ್‍ರ ತೋಟದ ಮನೆ (ಊರು) ಟಕ್ಕಳಕಿಗೆ ಹೋದೆ. ಆದರೆ ಅಲ್ಲಿ ಕಂಡ ವಾಸ್ತವ ಈಗಲೂ ಕಣ್ಣಿಗೆ ಕಟ್ಟಿದಂತೆ ಇದೆ.
ಸಾಯಂಕಾಲದ ಹೊತ್ತು, ದನ-ಕರುಗಳ ಕೊರಳಿಂದ ಗಂಟೆಗಳ ನಾದ, ದವಸ ಧಾನ್ಯಗಳಿಂದ ಶ್ರೀಮಂತವಾದ ವಿಠ್ಠಲರಾವರ ಮನೆ, ಮಕ್ಕಳು, ಮೊಮ್ಮಕ್ಕಳು, ಮಹಿಳೆಯರ ಮಧ್ಯ ಕೃಷ್ಣನ ನಾದಲೋಕದ ಗಾರುಡಿಗ, ಮಹಾನ್ ಕಲಾವಿದ, ಮೌನದಿಂದ ಸಮೃದ್ಧರಾದ ವಿಠ್ಠಲರಾವ್ ಟಕ್ಕಳಕಿ ಕುಳಿತಿದ್ದರು. ಅವರ ಆರೋಗ್ಯ ಚನ್ನಾಗಿಯೇ ಇತ್ತು, ಛೆ! ಎಂಥ ತಪ್ಪು ತಿಳುವಳಿಕೆಯಿಂದ ನಾವು ಬಂದೆವಲ್ಲ! ಎಂದುಕೊಂಡು ಮೆಲ್ಲಗೆ ಅವರೊಂದಿಗೆ ಮಾತಿಗಿಳಿದಿದ್ದೆ.
ಹೊರಗೆ ಸೂರ್ಯ ಮುಳುಗುತ್ತಿದ್ದ, ಇಲ್ಲಿ ಒಳಗೆ ಕೃಷ್ಣಸಖ ಮೆಲ್ಲಗೆ ಮಾತಿಗೆ ಅರಳುತ್ತಿದ್ದ. ನನ್ನ ಆ ದಿನದ, ಆ ಸಂದರ್ಶನದ ಬಹಳ ದೊಡ್ಡ ಸಾಧನೆ ಮತ್ತು ಸಂದೇಶಗಳೆಂದರೆ, ಕಲಾವಿದನೊಬ್ಬನ ಜೀವನಶಿಸ್ತು ಹಾಗೂ ಅವನ ಸಂತೃಪ್ತ ಭಾವ ಎಲ್ಲ ಕಂಡೆ, ಎಲ್ಲ ಉಂಡೆ. ಎಲ್ಲ ಅಮೃತವಾಗಿತ್ತು ಜಗದ ಜೋಳಿಗೆಯಲ್ಲಿ, ಎಂದು ತೊಂಬತ್ತರ ಮಹಾಸಂಜೆಯ ಕಲಾವಿದನೊಬ್ಬ ಸಂತನಂತೆ ಸಂತೃಪ್ತಿಯಿಂದ ಮಾತನಾಡುವಾಗ, ಮನದ ಇನ್ನೊಂದು ಮೂಲೆಯಲ್ಲಿ ಕನ್ನಡ ನಾಟಕ ಪರಂಪರೆಯ ಮೇರು ಸಾಧಕರಾದ, ನನ್ನ ಬುದ್ಧಿ-ಭಾವಗಳ ಭಾಗವೇ ಆದ, ಮತ್ತೋರ್ವ ರಂಗಕರ್ಮಿ ಶ್ರೀ ಎಂ.ಎಸ್. ಖೇಡಗಿ ಅವರ ಜೀವನ ಸಂವಾದದ ಸಂದರ್ಭಗಳೂ ಮೆಲ್ಲಗೆ ಮೂಡಿಹೋಗುತ್ತಿದ್ದವು.
‘ಸಂತೃಪ್ತಿ ಹಾಗೂ ಸಮಾಧಾನಗಳ ನೆಲೆಗೆ ಬಂದು ನಿಲ್ಲದ ಯಾವುದೇ ಕಲಾವಿದ, ಕಲೆ ಹಾಗೂ ಸಾಧಕನ ಬದುಕು ಸಂದೇಶವಾಗಲಾರದು. ವಿರಾಟ-ವಿಶಾಲ ರಂಗಸಜ್ಜಿಕೆಯಲ್ಲಿ ನನ್ನ ಸಾಧನೆ ಎನ್ನುವುದು ನಾಟಕದ ಒಂದು ದೃಶ್ಯ ಇದ್ದಂತೆ,’ ಎಂದು ಹೇಳುತ್ತ ವಿಠ್ಠಲರಾವ್ ಅಂದು ನನ್ನ ಮುಂದೆ ಇಡೀ ನಾಟಕ-ನಟ ಎಂಬ ಸಂಸ್ಕøತಿಯ ಸಾಧನೆಯ ತಿರುಳನ್ನೇ ಬಿಚ್ಚಿಟ್ಟಿದ್ದರು. ಆನಂತರದ ನನ್ನ ಹುಡುಕಾಟದಲ್ಲಿ ಅದೇ ಸಂದೇಶವನ್ನು ಪುನರ್ ಉಚ್ಚರಿಸಿದವರು ಬಿಜಾಪುರದ ರಂಗ ಸಾಧಕ ಶ್ರೀ ಎಸ್.ಎಂ. ಖೇಡಗಿ.
ಸಾಧನೆ ಹಾಗೂ ಸಂಸ್ಕøತಿಯ ಎತ್ತರದಲ್ಲಿರುವವರು ಶ್ರೀ ಖೇಡಗಿ. ನನ್ನ ಬಾಲ್ಯದಿಂದ ಇದುವರೆಗಿನ ಮೂರು ದಶಕಗಳ ಜೀವನ ಅದರ ರಂಗ ಗಂಗೆಯ ಇಕ್ಕೆಲಗಳಲ್ಲಿಯೇ ರೂಪ ಹಾಗೂ ಆಕೃತಿಯನ್ನು ಪಡೆದಿದೆ. ನನ್ನ ಸೃಜನಶೀಲತೆಯ ಕಣ್ಣರಳಿದ್ದು ಖೇಡಗಿಯವರ ರಂಗಕಾವ್ಯದಲ್ಲಿ. ನಾವು ಬೆಳೆದು, ಬದುಕು ಹಾಗೂ ಭಾಷೆಗಳನ್ನು, ಜೀವನ ವ್ಯವಹಾರ ಹಾಗೂ ಸಾಮಾಜಿಕತೆಗಳನ್ನು ಕಲಿತಿದ್ದು, ಈ ಖೇಡಗಿ ಎಂಬ ಸಾಧಕರ ರಂಗದೀಕ್ಷಾ ಕೇಂದ್ರದಲ್ಲಿಯೆ. ಹೀಗಾಗಿ ಅವರು ನಮಗೆ ರಂಗಮಂಡಲವಷ್ಟೇ ಅಲ್ಲ ಬಾಳಮಂಡಲವೂ ಕೂಡಾ.
ನನ್ನ ದೊಡ್ಡಪ್ಪ, ದೊಡ್ಡವ್ವಂದಿರು ಹಾಗೂ ಕಿರಿಯ ಸಹೋದರನ ಕಾರಣ ರಂಗವಾತಾವರಣ ಮನೆತನದಲ್ಲಿ ಇದ್ದುದರಿಂದ ನಾನು ಕಲಾವಿದರನ್ನು ಹಾಗೂ ಅವರ ದುರಂತ ಮತ್ತು ವ್ಯಸನಾಶ್ರಿತ ಜೀವನವನ್ನು ಬಹಳ ಸಮೀಪದಿಂದ ನೋಡಿದವನು. ಮುಂದೊರೆದು, ಹವ್ಯಾಸದ ಕಾರಣ, ವೃತ್ತಿ ಹಾಗೂ ಅಮೆಚ್ಯೂರ್ ತಂಡಗಳ ಕಲಾವಿದ ಗೆಳೆಯರೊಂದಿಗೆ ಬದುಕಿ, ಅವರ ಏರಿಳಿತವನ್ನು ಕಂಡವನು. ಬಾಳಿ ಬದುಕಬೇಕಾದ ಅದೆಷ್ಟೋ ಪ್ರತಿಭಾನ್ವಿತ ಗೆಳೆಯ-ಗೆಳತಿಯರನ್ನು ಈ ರಂಗಭೂಮಿಯಲ್ಲಿಯೇ ಕಳೆದುಕೊಂಡವನು. ಇರುವ ಜೀವನವೆಲ್ಲ ಬಣ್ಣಕ್ಕಾಗಿ ಬದುಕಿ, ತಮ್ಮ ಬಾಳಿನ ಮುಸ್ಸಂಜೆಯಲ್ಲಿ ಪಿಂಚಣಿಗಾಗಿ ಪರದಾಡುತ್ತ, ಬಾಳೆಲ್ಲ ಕತ್ತಲಾಗಿಸಿಕೊಂಡವರೊಂದಿಗೆ ನಿಸ್ಸಹಾಯಕನಾಗಿ ಕುಳಿತು ಎದ್ದು ಹೋದವನು ನಾನು. ಇಂಗ್ಲೀಷ ಸಾಹಿತ್ಯದ ವಿದ್ಯಾರ್ಥಿಯಾಗಿ, ಥಾಮಸ್ ಕಿಡ್, ಕ್ರಿಸ್ಟೋಪರ್ ಮಾರ್ಲೊ, ಥಾಮಸ್ ನ್ಯಾಶ್ ಹಾಗೂ ವಿಲಿಯಂ ಶೇಕ್ಸಪೀಯರ್‍ನ ಜೀವನಗಳನ್ನು ಓದಿದವನು. ಇಲ್ಲೆಲ್ಲಿಯೂ ಸಂತೃಪ್ತಿಯ ನೆಲೆಯನ್ನು ಕಾಣದ ನಾನು ಶ್ರೀಯುತ ಖೇಡಗಿಯವರ ಸ್ವಚ್ಛ-ಸುಂದರ ಸಾಧನೆಯ ಬಾಳಿಗಾಗಿ ನಿಜಕ್ಕೂ ಅಚ್ಚರಿಗೊಂಡಿದ್ದೇನೆ ಹಾಗೂ ಆದರ್ಶವಾಗಿಸಿಕೊಂಡಿದ್ದೇನೆ.
‘ಬಣ್ಣದ ನಂಟು ಮಣ್ಣಿಗೆ ಹೋಗುವವರೆಗೂ’ ಎಂಬುದೊಂದು ಪ್ರಸಿದ್ಧ ಹೇಳಿಕೆ. ಒಂದರ್ಥದಲ್ಲಿ ಇಡೀ ಮನುಕುಲಕ್ಕೆ ಅಂಟಿಕೊಂಡ ಬಣ್ಣ ಈ ಮಣ್ಣು. ಎಲ್ಲರೂ ಪಾತ್ರಧಾರಿಗಳೆ, ಸಿಕ್ಕ ಪಾತ್ರ ಹಾಗೂ ಅವಕಾಶ ತೀರ ಸಣ್ಣ ಅವಧಿಯದ್ದು. ಆದರೆ, ಸಿಕ್ಕಷ್ಟನ್ನೇ ಸಶಕ್ತವಾಗಿ ಬಳಸಿಕೊಂಡು ಸಮಾಜಕ್ಕೆ ಸರ್ವಕಾಲಿಕ ಹಾಗೂ ಸಮೃದ್ಧವಾದುದನ್ನು ನೀಡಿದವರು ಕೆಲವೇ ಕೆಲವು ರಂಗ ಕರ್ಮಿಗಳು. ಈ ಕೆಲವರ ವಿರಳರ ಗುಂಪಿಗೆ ಸೇರಿದವರಲ್ಲಿ ಒಬ್ಬರು ನಮ್ಮ ಎಸ್.ಎಂ. ಖೇಡಗಿ. ಸಿಕ್ಕ ಈ ಬಣ್ಣದ ಮಣ್ಣನ್ನು ಮೃಷ್ಟಾನ್ನವಾಗಿ ಕಂಡುಂಡು, ಕಲಾಶಾರದೆಯ ಮುಡಿಗೆ ಮರೆಯಲಾಗದ ಮಹತ್ವದ ಕಾಣಿಕೆಗಳನ್ನು ನೀಡಿದವರು. ಕನ್ನಡ ರಂಗಲೋಕದ ಅಭಿಮಾನಧನರು. ಅವರ ಪಾತ್ರಗಳ ಸೃಷ್ಟಿ ಜೀವನ ದೃಷ್ಟಿ ಎಲ್ಲ ಕಾಲಕ್ಕೂ ಅನುಕರಣೀಯ.
ನಮ್ಮೂರು ಚಡಚಣ. ಒಂದು ಕಾಲಕ್ಕೆ ಸಂತೆಗೆ, ಜಾತ್ರೆಗೆ ಹಾಗೂ ಸಾಹಿತ್ಯ ಚಿಂತನೆಗೆ ಬಹಳ ಪ್ರಸಿದ್ಧವಾಗಿತ್ತು. ನನಗೆ ನಮ್ಮೂರ ಸಂತೆಯಲಿ ಸಿಕ್ಕವರು ಈ ಖೇಡಗಿ ಎಂಬ ರಂಗಜಂಗಮ. ಅವರ ನಾಟಕ ರತ್ನಗಳಾದ ‘ಪಾಪಿಯ ದೇಹ ಪುಣ್ಯದ ಜೀವ’, ಗೌರಿ ಹೋದಳು ಗಂಗೆ ಬಂದಳು’, ‘ಕಿತ್ತೂರ ರಾಣಿ ಚೆನ್ನಮ್ಮ’ ಇವುಗಳನ್ನೆಲ್ಲ ನಾನು ಗಮನಿಸಿದ್ದು ನಮ್ಮೂರ ಜಾತೆಯಲ್ಲಿಯೆ. ನಾನು ಬಾಲ್ಯದಿಂದಲೂ ನಾಟಕದ ನಾದಕ್ಕೆ ಮನಸೋತವನು. ಮುಂದೆ ಕುಳಿತುಕೊಂಡು ನಾಟಕ ನೋಡುವುದೆಂದರೆ ಕಣ್ಣುಗಳಿಗೆ ಮಹಾ ಹಬ್ಬ. ‘ಕರ್ಣಾನಂದ’, ‘ಗೌರಿ ಹೋದಳು ಗಂಗೆ ಬಂದಳು’ ನಾಟಕದಲ್ಲಿ ಗೌಡನ ಪಾತ್ರದಲ್ಲಿ ಬರುತ್ತಿದ್ದ ಎಸ್.ಎಂ. ಖೇಡಗಿ, ಖಳನಾಯಕನ ಪಾತ್ರವನ್ನು ಅದ್ಭುತವಾಗಿ ಅಭಿನಯಿಸುತ್ತಿದ್ದರು.
ಖೇಡಗಿ ಅವರ ನಾಟಕಗಳೆಂದರೆ ಗಂಭೀರ ಚಿಂತನೆ ಹಾಗೂ ಅಭಿವ್ಯಕ್ತಿಗಳ ಮಹಾ ಸಂಗಮ. ಪ್ರತಿ ಪುಟ್ಟ ಸಂಗತಿಯೂ ಅವರ ಪ್ರದರ್ಶನಗಳಲ್ಲಿ  ಪ್ರಪಂಚರೂಪಿ ವ್ಯಾಪ್ತಿಯನ್ನು ಪಡೆದು ಬಿಡುತ್ತಿದ್ದವು. ತಿಂಗಳುಗಳವರೆಗೆ ಒಂದೇ ನಾಟಕ ನಡೆದುದ್ದನ್ನು ನೋಡಿದ್ದೇನೆ. ಒಬ್ಬ ಶ್ರೇಷ್ಠ ಕಲಾವಿದ, ನಿರ್ದೇಶಕ ಹಾಗೂ ಸಾಧಕನ ಸಾಮಥ್ರ್ಯ ಅಭಿವ್ಯಕ್ತಗೊಳ್ಳುವುದು ಸಂದರ್ಭಗಳ ಆತನ ಸೂಕ್ಷ್ಮ ನಿರ್ವಹಣೆಯಲ್ಲಿ. ಈ ನಿಟ್ಟಿನಲ್ಲಿ ಕಲಾಶಕ್ತಿಯ ಮೂಲ ಸೆಲೆಯನ್ನು ಅರಿತ ಎಸ್.ಎಂ. ಖೇಡಗಿ, ಎಲ್ಲ ಚಿಕ್ಕದ್ದನ್ನು ವಿಶಾಲವಾಗಿಸುತ್ತ ಹೋಗಿ, ಸ್ವಯಂ ತಾವೇ ರಂಗಸಂಸ್ಕøತಿಯ ವಿರಾಟ ಅವತಾರವಾಗಿಬಿಟ್ಟರು.
ರಂಗಭೂಮಿಯನ್ನು ಅಷ್ಟೊಂದು ಪ್ರೀತಿಸಿದರು ಖೇಡಗಿ. ಇಂಗ್ಲೀಷನಲ್ಲಿ ಒಂದು ಮಾತಿದೆ, Love the art, poor as it may be, which thou hast learned and be content with it; and pass through the rest of life like one who has intrusted to the gods with his whole soul all that he has, making thyself neither the tyrant nor the slave on any man. 
ರಂಗಭೂಮಿಯ ಇತಿಹಾಸ ಮನುಷ್ಯನ ಇತಿಹಾಸದಷ್ಟೇ ವೈವಿದ್ಯತೆ ಹಾಗೂ ಏರಿಳಿತಗಳಿಂದ ಕೂಡಿದೆ. ಸ್ವಯಂ ರಂಗಭೂಮಿ ಅದೇಷ್ಟು ರಚನಾತ್ಮಕವಾದುದೊ ಅದು ಇಂದಿಗೂ ದೊಡ್ಡ ಪ್ರಶ್ನೆ. ಆದರೆ, ಒಂದಂತೂ ಸತ್ಯ, ಯಾರು ಅದನ್ನು ಜೀವನ ಮೌಲ್ಯಗಳೊಂದಿಗೆ ಬಾಚಿಕೊಂಡರೊ, ಅವರಿಗೆ ಅವಿಸ್ಮರಣೀಯ ಬದುಕನ್ನೇ ಅದು ನೀಡಿದೆ. ಕಲೆಯನ್ನು ಪ್ರೀತಿಸುವವರು, ತಪಸ್ಸಾಗಿಸಿಕೊಂಡವರು ಅದಕ್ಕೆ ಅತ್ಯಂತ ಮುಖ್ಯ. ವ್ಯಸನಕ್ಕಾಗಿ, ಐಹಿಕತೆಗಾಗಿ, ಲೋಲುಪತನಕ್ಕೆ ಅದನ್ನು ವೇದಿಕೆಯಾಗಿಸಿಕೊಂಡಾಗ ಅಲ್ಲಿ ಸಿಗುವ, ಪ್ರಾಪ್ತಿಯಾಗುವ ಫಲಿತಾಂಶವೇ ಬೇರೆ. ಕಲಾತಪಸ್ವಿಗಳಾದ ಎಸ್. ಎಂ. ಖೇಡಗಿ, ಈ ಕ್ಷೇತ್ರವನ್ನು ತಪೋಭೂಮಿಯಂತೆಯೇ ಗೌರವಿಸಿದ್ದರಿಂದ ಅವರು ಎಲ್ಲರೊಂದಿಗಿದ್ದೂ ಎಲ್ಲರಿಗೂ ಮೇರು ಉದಾಹರಣೆಯಾದರು.
ನಾಟಕ ರಚನೆ, ಅಭಿನಯಗಳಾಚೆಯೂ ರಂಗಭೂಮಿ ಇದೆ. ಅದು ಶರೀರ, ಶಾರೀರ ಹಾಗೂ ವ್ಯಾವಹಾರಿಕತೆಗಳಿಗೆ ಅನ್ವಯಿಸಿದ್ದು. ಸ್ಥಿತಪ್ರಜ್ಞನಾದವ ಇದನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿದೆ. ಇದನ್ನು ವ್ಯವಸ್ಥಿತವಾಗಿ ಸಾಧಿಸಿದ ಸಾಧಕ ನಮ್ಮ ಎಸ್.ಎಂ. ಖೇಡಗಿ ಅವರು. ಅಷ್ಟೇ ಸಮರ್ಥವಾಗಿ ಅದರ ಸಾಹಿತ್ಯ ರಚನೆಯಂಥ ಭಾವಲೋಕವನ್ನೂ ಅವರು ನಿಭಾಯಿಸಿದ್ದಾರೆ. ಈ ದ್ವಿಮುಖ ಸಾಧನೆ ರಂಗಲೋಕದಲ್ಲಿ ವಿರಳ ಎಂದೇ ಹೇಳಬೇಕು. ನಮ್ಮ ವಿಶ್ವವಿದ್ಯಾಲಯಗಳು ಅಕಾರಣ ಕಾರಣಗಳನ್ನು ಹುಡುಕಿ, ಸಾಹಿತ್ಯ ಸೀಳುವ ಮನೋಸ್ಥಿತಿಯಿಂದ ಹೊರಬಂದರೆ, ಎಸ್.ಎಂ. ಖೇಡಗಿಯಂಥ ರಂಗಸಾಧಕರ ಕುರಿತು ಹಲವು ಆಯಾಮಗಳ ಅಧ್ಯಯನ ಸಾಧ್ಯವಾಗುತ್ತದೆ. ಹತ್ತಾರು ಪ್ರಬುದ್ಧ ಸಂಶೋಧನಾ ಪ್ರಬಂಧಗಳು ಸಿದ್ಧವಾಗುತ್ತವೆ.
ಕನ್ನಡ ರಂಗಚರಿತ್ರೆಯ ಪುಟಗಳಲ್ಲಿ ಹಂದಿಗನೂರು ಸಿದ್ರಾಮಪ್ಪ, ಗುಬ್ಬಿ ವೀರಣ್ಣ, ಶಾರದಾ ನಾಟಕ ಮಂಡಳಿಯ ಹೊಸಮನಿ, ಬಿ.ಆರ್ ಅರಿಷಿಣಗೋಡಿ, ಸುಳ್ಳದ ದೇಸಾಯಿ, ಜಂದೋಡಿ ಲೀಲಾ, ಗುಡಗೇರಿ ಬಸವರಾಜ ಹೀಗೆ ಅದೆಷ್ಟೋ ರಂಜನೀಯ ಹಾಗೂ ರೋಚಕ ಪುಟಗಳಿವೆ. ಆದರೆ ಇದೆಲ್ಲದರೊಂದಿಗೆ ಶ್ರೀ ಎಸ್.ಎಂ. ಖೇಡಗಿಯವರ ವ್ಯಕ್ತಿತ್ವದ ಇನ್ನೊಂದು ವೈಶಿಷ್ಟ್ಯ ಅವರ ಸಾತ್ವಿಕತೆ. ಇದನ್ನು ರಂಗದೊಂದಿಗೆ ಹೊಂದಿಸುವುದು ಕಷ್ಟದ ಕೆಲಸವೆ. ಕಾಲಾಂತರದಲ್ಲಿ ತನ್ನ ಕೇವಲದ ಅಸ್ತಿತ್ವಕ್ಕಾಗಿ, ರಂಗಸಿದ್ಧತೆ ಹಾಗೂ ಬದ್ಧತೆಗಳೆರಡರಲ್ಲೂ ಎಷ್ಟೊಂದ ಬದಲಾವಣೆಗಳಾದರೂ, ನೈತಿಕ ಸಡಿಲತೆಗಳಾದರೂ ಅವುಗಳಿಂದ ಅಭಾದಿತವಾಗಿ ಬೆಲೆಯುತ್ತ ಹೋದವರು ಶ್ರೀ ಎಸ್.ಎಂ. ಖೇಡಗಿ. ಅವರು ತೊಡುವ ಶುಭ್ರ, ಸ್ವಚ್ಚ ಬಟ್ಟೆಯಂತೆಯೇ ತಮ್ಮ ಜೀವನ ವ್ಯವಹಾರ ಹಾಗೂ ಸಾಧನೆಗಳನ್ನು ಉಳಿಸಿಕೊಂಡಿದ್ದಾರೆ. ಇಡೀ ಮನೆಯನ್ನೇ ರಂಗಶಾಲೆಯಾಗಿಸಿಕೊಂಡು ಮಡದಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಅವರು ಕಟ್ಟಿಕೊಂಡ ನಿರಂತರ ರಂಗಚಿಂತನಾ ಪ್ರಜ್ಞೆ ಉಳಿದವರಿಗೆ ದಕ್ಕಲಿಲ್ಲ. ಬಹುತೇಕ ಅದು ಈ ಹಿಂದಿನವರ ಉದ್ದೇಶವೂ ಆಗಿರಲಿಲ್ಲ.  
ಒಂದು ಶುದ್ಧ ಪ್ರಜ್ಞಾಪೂರ್ವಕ, ಲೌಕಿಕ ಜೀವನವನ್ನು ಅದರೆಲ್ಲ ಏರಿಳಿತಗಳೊಂದಿಗೆ ರಂಗಕ್ಕೆ ಹೊಂದಿಸಿ, ಮತ್ತೆ ಅದನ್ನೇ ಆಧ್ಯಾತ್ಮಕ್ಕೆ ಸೋಪಾನವಾಗಿಸಿಕೊಂಡವರು ಎಸ್.ಎಂ. ಖೇಡಗಿ. ಅದನ್ನು ಯಾವಾಗಲೂ ವ್ಯಾಸಪೀಠದಲ್ಲಿ ಇರಿಸಿ, ಅದರಿಂದಲೇ ಎಲ್ಲವನ್ನು ಕಲಿಯುತ್ತ, ತಾನು ಕಲಿತುದನ್ನು ಲೋಕಕ್ಕೆ ವಿಸ್ತರಿಸುತ್ತ ಹೋಗಿದ್ದಾರೆ ಖೇಡಗಿ. ಒಂದು ಮಾತಿದೆ – Try how the life of the good man suits thee, the life of him who is satisfied with his portion out of the whole, and satisfied with his own just acts and benevolent disposition. ಈ ಪ್ರಜ್ಞೆ ಯಾವಾಗಲೂ ಜಾಗೃತವಾಗಿರುವ ಕಾರಣ ಇಂದು ಎಸ್.ಎಂ. ಖೇಡಗಿ ನಮ್ಮ ಮಧ್ಯದ ಮಹತ್ವದ ಚಿಂತನೆಯಾಗಿದ್ದಾರೆ.     
ಜಾತ್ಯಾತೀತ ಮಾನವ ಸಮಾಜ ನಿರ್ಮಾಣದಲ್ಲಿ ಸಂಗೀತದಷ್ಟೇ ಮಹತ್ವದ ಪಾತ್ರವಾಡಿದ ಮತ್ತೊಂದು ಕ್ಷೇತ್ರ ರಂಗಭೂಮಿ. ಅದು ಅದರಷ್ಟಕ್ಕೆ ಸೀಮಾತೀತ ಎಂದು ಹೇಳಿದ್ದಾರೆ ಆಂದ್ರದ ಪ್ರಖ್ಯಾತ ರಂಗಕರ್ಮಿ ಗುರುಜಾಡಾ ಅಪ್ಪಾಜಿರಾವ್. ಇಂದಿಗೂ ಬಾಗಲಕೋಟೆಯ ಪಕ್ಕದಲ್ಲಿ, ಕಂದಗಲ್ಲ ಹನುಮಂತರಾಯರ ಕಾಲದಲ್ಲಿ, ನಿರ್ಮಾಣವಾಯಿತು ಎನ್ನಲಾದ ಹಂಸನೂರು ಎಂಬ ಗ್ರಾಮ ನೂರಕ್ಕೆ ನೂರರಷ್ಟು ರಂಗ ಕಲಾವಿದರನ್ನು ಹೊಂದಿದೆ. ಇಲ್ಲಿ ಹುಟ್ಟುವ ಪ್ರತಿ ಮಗುವಿಗೂ ರಂಗಭೂಮಿಯೇ ತಂದೆ, ಗುರು ಮತ್ತು ಭವಿತವ್ಯ. ಅವರು ಹಿಂದು-ಮುಸ್ಲಿಂರಲ್ಲ, ಕ್ರೈಸ್ತ, ಝರೋಸ್ಟ್ರಿಯನ್, ಭೌದ್ಧರೂ ಅಲ್ಲ, ಅವರೆಲ್ಲ ರಂಗಕಲಾ ಕುಲತಿಲಕರು. ಇಂಥ ಅನುಭವವನ್ನು ಶ್ರೀಯುತ ಎಸ್.ಎಂ. ಖೇಡಗಿಯವರ ಸಾಂಗತ್ಯದಲ್ಲಿ ನಾನು ಯಾವಾಗಲೂ ಅನುಭವಿಸಿದ್ದೇನೆ. ಅವರೊಬ್ಬ ಮುಸಲ್ಮಾನ ಎಂದು ನನಗೆ ಗೊತ್ತಾದುದು ತೀರ ಇತ್ತೀಚಿಗೆ.
ಮುಂದೊಮ್ಮೆ ನಾನೂ ಮುಸಲ್ಮಾನನಾಗಿ ಹುಟ್ಟಿದರೆ ನನಗೆ ಇವರಂತಾಗುವ ಭಾಗ್ಯ ಕೊಡು ಎಂದು ಪ್ರಾರ್ಥಿಸುವ ಮಟ್ಟಿಗೆ ಅವರ ಜೀವನ, ಆದರ್ಶಗಳಿಂದ ಕೂಡಿದೆ.
ಒಂದೊಮ್ಮೆ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿ, ಇನ್ನೇನು ಹೊರಡಬೇಕು ಖೇಡಗಿಯವರು ನನ್ನನ್ನು ತಮ್ಮ ಮನೆಯ ಅಡುಗೆ ಕೋಣೆಗೆ ಕರೆದೊಯ್ದರು. ಒಳಗೆ ಹೋದರೆ ಪುರಾತನವಾದ ಒಂದು ಹನುಮಂತನ ಮೂರ್ತಿ ಆತನ ಮುಂದೊಂದು ನಂದಾ ದೀಪ. ನನ್ನ ಕೈ ಹಿಡಿದು ಗದ್ಗದಿತರಾಗಿ ಖೇಡಗಿಯವರು ಹೇಳಿದರು – “ನಮ್ಮ ಬಾಳು ಕಾಯ್ದ ದೈವ ಈತ, ಮನೆ ಕಟ್ಟಿಸುವಾಗ ನೆಲದಲ್ಲಿ ಸಿಕ್ಕ”.
ಈಗ ಮಾತು ಹೊರಡದಾಯಿತು. ಬಂದು ಹೊರಕುಳಿತು ಸುಮ್ಮನೆ ಆಲೋಚಿಸುತ್ತ, ಮೇಲೆ ನೋಡಿದರೆ ಮನೆಯ ಗೋಡೆಯ ಮೇಲೆ ಸಾಲು ಸಾಲಾಗಿ ಕನ್ನಡ ರಂಗಭೂಮಿಯ ಎಲ್ಲ ರಂಗ ಜಂಗಮರ ಭಾವಚಿತ್ರಗಳು. ಪೌರಾಣಿಕ ನಾಟಕದ ಪರಿಕರಗಳು, ಅಪ್ರಕಟಿತ ಮ್ಯಾನ್ಯುಸ್ಕ್ರಿಪ್ಟ್ಸ್‍ಗಳು, ರಂಗಬಾವುಟದ ವಿವರಗಳು ಒಂದೇ, ಎರಡೆ. ‘ಇದು ಮನೆಯಲ್ಲೋ ಅಣ್ಣ, ರಂಗ ಸಂಶೋಧನಾ ಕೇಂದ್ರ.’ ಈ ಮಟ್ಟಿಗೆ ರಂಗವನ್ನು ಅವಗಾಹಿಸಿಕೊಂಡ ಒಬ್ಬ ಕಲಾವಿದ ಖೇಡಗಿಯವರನ್ನು ಹೊರತು ಪಡಿಯಿಸಿ ಮತ್ತೊಬ್ಬರಿಲ್ಲ.
ಪ್ರೀತಿ, ಮಾತು, ಚಿಂತನೆ ಹಾಗೂ ರಂಗಸಂಘಟನೆಯ ಕಾಯ ರೂಪ ನಮ್ಮ ಎಸ್.ಎಂ. ಖೇಡಗಿ. ಚಡಚಣದ ನನ್ನ ‘ಜೋಳಿಗೆ’ಗೆ ಬಂದು ಅತ್ಯಂತ ವಿನಯದಿಂದ 2018 ರಲ್ಲಿ ನಮ್ಮ ‘ಸಾವಿರದ ಶರಣು’ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಬಿಜಾಪುರ-ಬೆಂಗಳೂರು ಎಲ್ಲಿಯೇ ರಂಗ ಚಿಂತನೆ ನಡೆದರೂ, ಅಲ್ಲಿ ಸಲ್ಲಿರುತ್ತಾರೆ ಖೇಡಗಿ. ಅವರ ಅದಮ್ಯ ಉತ್ಸಾಹ, ಕಾಳಜಿ ಹಾಗೂ ಕನಸುಗಳಿಗೆ ಈ ನೂರು ವರ್ಷಗಳ ಬಾಳು ಬಹಳ ಚಿಕ್ಕದು. ಅವರದು ದೈತ್ಯ ಪ್ರತಿಭೆ. ದೇಶ, ಕಾಲ ಹಾಗೂ ಧರ್ಮಗಳ ಗಡಿಯಿಂದ ಹೊರಬಂದು, ತಾನೇ ತಾನಾದ ವ್ಯಕ್ತಿತ್ವ. ಸಾಮರಸ್ಯ-ಸೌಹಾರ್ಧಗಳ ನಿಲುವು, ಇವರ ನಾಟಕಗಳ ತುಂಬಾ ಜೀವನ ಮೌಲ್ಯಗಳದ್ದೇ ಗೆಲವು - - -
ಹೀಗೆ, ಹೀಗೆ ಎಷ್ಟು ಬರೆದರೂ ಬಿಳಲುಗಳಂತೆ ಮೈ ಚಾಚಿಕೊಳ್ಳುತ್ತಲೇ ಹೋಗುತ್ತದೆ ಅವರ ವ್ಯಕ್ತಿತ್ವ. ಈಗ ನೆಪಕ್ಕೊಂದು ಪೂರ್ಣವಿರಾಮ ಹಾಕಲೇ ಬೇಕಿದೆ, ಹಾಕುತ್ತೇನೆ. ನಮ್ಮ ಕನ್ನಡ ರಂಗ ಸಂಸ್ಕøತಿಯ ಕಬೀರರಂತಿರುವ ಶ್ರೀ ಎಸ್.ಎಂ. ಖೇಡಗಿ ಅವರಿಗೆ ಜಗದ ಬೆಳಕೆಲ್ಲವೂ ದಕ್ಕಲಿ, ಅವರು ಸದಾ ನಮಗೆ ಬೆಳಕಾಗಿರಲಿ ಎಂದು ಹಾರೈಸುತ್ತೇನೆ.