Total Pageviews

Friday, June 2, 2017

ಹುಟ್ಟು-ಹಬ್ಬ?




ನಡು ಮಧ್ಯಾಹ್ನ ಹುಟ್ಟು-ಹಬ್ಬ-ಕಬ್ಬ
ಆರು ಅಂತಸ್ತುಗಳ ಮೇಲಿನಿಂದ
ಕೆಳನೋಡಿದೆ ಕಾಕ್ರೋಚ್‍ಗಳು ನಿಂತಂತೆ
ಥರಾವರಿ ಕಾರುಗಳು ಸಾಲುಸಾಲು
ಮನುಷ್ಯರೊ, ಮಧ್ಯ ನುಸುಳುವ ಇರುವೆಗಳಂತೆ.
ಕಾಕ್ರೋಚ್ ಸತ್ತರೆ ಇರುವೆಗಳ ಸಂತೆ
ಇರುವೆ ಸತ್ತರೆ? ಕಾಕ್ರೋಚ್‍ಗೆ ಟ್ರಾಫಿಕ್ ಧಾಟುವ ಚಿಂತೆ.
ಹುಡುಕುತ್ತಿದ್ದೆ ನನ್ನ ಹೆಣವನ್ನು
ಇಲ್ಲೇ, ಇಬ್ಬರ ಮಧ್ಯದಲ್ಲೆ
ಸಿಗಲೇ ಇಲ್ಲ, ಸಿಗುವುದೂ ಇಲ್ಲ
ಸತ್ತವನ ಹುಡುಕುವ ಸೂತ್ರದ
ಸಮಾಜ, ಸರಕಾರಗಳಿಗೆ
ಇದ್ದೂ ಸತ್ತವರ ಆಕ್ರಂದನ
ಕೇಳಿಸುವುದೇ ಇಲ್ಲವೆ?
ಬೇಸರಾಗಿ, ಆರು ಅಂತಸ್ತುಗಳ ಮಹಡಿಯಿಂದ
ಆಕಾಶದೆಡೆಗೆ ಮೊಗ ಮಾಡಿದೆ
ಅಬ್ಬಾ! ಆ ಬಯಲೊಳಗೆ
ಎಷ್ಟೊಂದು ಬೆಂಬಲದ ಕೈಗಳು
ಹಂಬಲದ ಮೈ-ಮುತ್ತು-ತುತ್ತುಗಳು
ಸ್ವತ್ತೆಂದು ಹಕ್ಕು ಹಚ್ಚದೆ ಹುಚ್ಚಾದ ಎದೆಗಳು
ಇದಕ್ಕೇ ಇರಬಹುದು
ಬಯಲ ತಬ್ಬಿದ ಬಯರಾಗಿ ‘ಅಲ್ಲಮ’ನಾದ
ಭುವಿಯ ತಬ್ಬಿದ ‘ಬಸವಣ್ಣ’ ಕೊಲೆಯಾದ
ಬಯಲ-ಭೂಮಿಯ ಮಧ್ಯದ ‘ನಾ’
ಬಿಂದುವಾದೆನೆ? ಬಂಧುವಾದೆನೆ?
ನಿಮ್ಮ ಕಣ್ಣೀರಗಳ ಸೇರಿ ಸಿಂಧುವಾದೆನೆ?

No comments:

Post a Comment