Total Pageviews

Saturday, July 20, 2013

ಅರಮನೆಗೂ-ಗುರುಮನೆಗೂ….

(ದಿ: 14/7/13, ಶಿವಪುರ, `ಮಹಾಮನೆಯಲ್ಲಿಶಿವಾನುಭವ ಗೋಷ್ಠಿ ಉದ್ಘಾಟಿಸುತ್ತಾ ರಾಗಂ)
       
         ಇದುಮಹಾಮನೆ’. ಸಾಮಾನ್ಯವಾಗಿ ಹೇಳುವಂತೆ ಮಠ, ಶ್ರೀಮಠ, ಪೀಠ, ಮಹಾಸಂಸ್ಥಾನ ಪೀಠ ಎಂದೇನಾದರೂ ಇದು ಒಂದಾಗಿದ್ದರೆ ಕೆಲವೊಮ್ಮೆ ಹೋಗಲೇಬೇಕಾದ ಅನಿವಾರ್ಯತೆಯೇನೂ ಇರುವುದಿಲ್ಲ. ಆದರೆ ಇದು ಮನೆ, ಶಿವಪುರದ ಮಹಾಮನೆ, ನಮ್ಮ ಮನೆಗಳಿಗಿಂತ ಸ್ವಲ್ಪ ದೊಡ್ಡ ಮನೆ ಎನ್ನುವ ಭರವಸೆ ಸಿಕ್ಕಿದುದರಿಂದ ದಿನಾಂಕ 14-07-2013 ರಂದು ಇಲ್ಲಿಯ 15 ನೇಯ ಶಿವಾನುಭವ ಗೋಷ್ಠಿಯ ಉದ್ಘಾಟನೆಗೆ ನಾನು ಹೋಗಿದ್ದೆ. ಹಿಂದಿನ ತಿಂಗಳು 23 ನೇ ತಾರೀಖಿನಂದು ನಡೆದ ಸಮಾರಂಭದಲ್ಲಿಯೇ ನಾನು ಮುಖ್ಯ ಭಾಷಣಕಾರನಾಗಿ ಪಾಲ್ಗೊಂಡು ಮಹಾಮನೆಯನ್ನು ಉದ್ಘಾಟಿಸಬೇಕಿತ್ತು. ಆದರೆ ಅಂದು ನನ್ನೊಂದಿಗೆ ಪಾಲ್ಗೊಳ್ಳಲಿರುವ ವೇದಿಕೆಯ ಮೇಲಿನ ಗಣ್ಯರ ಪಟ್ಟಿಯನ್ನು ನೋಡಿ ಬೆಚ್ಚುಬಿದ್ದ ನಾನು ನಮ್ಮ ಮನೆಗೆ ನಾನು ಯಾವಾಗಲಾದರೂ ಹೋದರಾದೀತು, ಸಧ್ಯ ಪರಸೆಯಲ್ಲಿ ಪರಮಾತ್ಮನ ಧ್ಯಾನವಂತೂ ಬೇಡ ಎಂದು ದೂರ ಉಳಿದುಕೊಂಡೆ. ಆದರೆ `ಮಹಾಮನೆ ಮುಖ್ಯಸ್ಥ  ಶ್ರೀ  ಬಸವಾನಂದ ಸ್ವಾಮೀಜಿ ಇಷ್ಟು ಬೇಗ ಮತ್ತೆ ಕರೆಯಿಸಿಕೊಳ್ಳುತ್ತಾರೆಂಬ ಲೆಕ್ಕಾಚಾರವಿರಲಿಲ್ಲ.


       ದಿನಾಂಕ 14 ರಂದು ಮಹಾಮನೆಯ ಉಪನ್ಯಾಸದಲ್ಲಿ ಪ್ರಮುಖವಾಗಿ ನಾನು ಎತ್ತಿಕೊಂಡ ಪ್ರಶ್ನೆ ಪ್ರಪಂಚಕ್ಕೆ ಆಧ್ಯಾತ್ಮಿಕ ಗುರು ಎನಿಸಿಕೊಂಡ ಭಾರತಕ್ಕೆ ಇಂಥ ಭಾವದಾರಿದ್ರ್ಯವೇಕೆ? ಭಕ್ತಿಪಥ, ಶರಣ ಸಂಸ್ಕೃತಿ, ಸೂಫಿ, ದಾಸ, ತತ್ವಪದಕಾರರ ಮಧ್ಯ ಸಾವಿರಾರು ವರ್ಷದ ದಾರಿ ಸವೆಸಿದ ಭಾರತ ಎನ್ನುವ ಸಂಸ್ಕೃತಿಗೆ ಇಂದು ದಿಕ್ಕು ತಪ್ಪಿದ ಅನುಭವವೇಕೆ? ನಮ್ಮ ರಾಜಕಾರಣ ನಮಗೆ ಒಡ್ಡಿದ ಸವಾಲುಗಳೇನು? ಹೀಗೆ ಇನ್ನೊಂದು, ಮತ್ತೊಂದು. ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಕರ್ನಾಟಕದ ಹನ್ನೆರಡು ಜನ ಮಠಾಧೀಶರು ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಇದು ಅರಮನೆಗೂ-ಗುರುಮನೆಗೂ ಇರುವ ಸಂಬಂಧದ ಬಹಿರಂಗ ಘೋಷಣೆ ಎನ್ನೋಣವೆ? ಆರು ದಶಕಗಳಿಂದ ರಾಜಕಾರಣಿಗಳು ಎಂಬ ತಮ್ಮ ಶಿಷ್ಯರ ಎಡಬಿಡಂಗಿತನವನ್ನು ನೋಡಿ ಬೇಸತ್ತ ಧಾರ್ಮಿಕ ಗುರುಗಳ ಪ್ರತಿಭಟನೆ ಎನ್ನೋಣವೆ? ಇಲ್ಲಾ, ದೇಶದ ಸಾವಿರಾರು ಶ್ರೀಮಂತರಂತೆ ಅಪಾರ ಆಸ್ತಿಯನ್ನು, ಐಷಾರಾಮಿ ಜೀವನವನ್ನು ನೆಚ್ಚಿಕೊಂಡ ಸನ್ಯಾಸಿ ವರ್ಗ ತನ್ನನ್ನೇ ತಾನು ರಕ್ಷಿಸಿಕೊಳ್ಳಲು ಹಾಕಿದ ಹೊಸ ಯೋಜನೆ ಎನ್ನೋಣವೆ? ಇದು ಇನ್ನೂ ಭವಿಷ್ಯದಲ್ಲಿ ಇತ್ಯರ್ಥವಾಗಬೇಕಾದ ಸಂಗತಿ.
      ಧಾರವಾಡ ಹತ್ತಿರದ ಮನಗುಂಡಿ ಮತ್ತು ಹಾಸನ ಹತ್ತಿರದ ಶಿವಪುರದಲ್ಲಿ, ನಿಸರ್ಗ ರಮಣೀಯ ಸ್ಥಳಗಳಲ್ಲಿ `ಮಹಾಮನೆಗಳನ್ನು ಕಟ್ಟಿಕೊಂಡು ಸಕ್ರೀಯ ರಾಜಕಾರಣ ಮತ್ತು ಸಮಾಜದ ಆರೋಗ್ಯ ಸುಧಾರಣೆಗಳತ್ತ ಗಮನ ಹರಿಸಿರುವ ಶ್ರೀ ಬಸವಾನಂದ ಸ್ವಾಮಿಗಳು ನನ್ನ ಸಾಹಿತ್ಯ ಸ್ನೇಹಿತರು. ಇದು ಪುಸ್ತಕ ಮುಖೇನ ಅರಳಿಕೊಂಡ ಸಂಬಂಧ

      ಅವರಿಗೆ ನನ್ನ ಓಶೋ, ಗಾಂಧಿ, ಅಬ್ಬಾಸ್ ಕಾಡಿದ್ದಾರೆ. ನನಗೆ ಅವರ ಸಮಾಜದ ಆರೋಗ್ಯ ಕುರಿತ ಕಾಳಜಿ ಮತ್ತು ಚಟುವಟಿಕೆಗಳು ಬಹಳಷ್ಟು ಪ್ರೀತಿಯವೆನ್ನಿಸಿವೆ. ಲೋಕಸಭೆಯ ಚುನಾವಣೆಯಲ್ಲಿ ತಾವು ಬಿಜೆಪಿ ಪರ ಅಖಾಡಕ್ಕೆ ಇಳಿಯುವುದಾಗಿ ಘೋಷಿಸಿಕೊಂಡ ಸ್ವಾಮೀಜಿ ಕಂಡುಕೊಂಡಿರುವ ಸಮಾಧಾನ ನರೇಂದ್ರ ಮೋದಿ. ನರೇಂದ್ರ ಮೋದಿ ಎಂದರೆ ಅವರಿಗೆ ಎಲ್ಲಿಲ್ಲದ ಮೋಹ. ಆದರೆ ನನ್ನ ವಾದವಿಷ್ಟೇ, ಇಂದು ವ್ಯಕ್ತಿ ಮತ್ತು ಪಕ್ಷಗಳು ನೆಪ ಮಾತ್ರ. ಯಾಕೆಂದರೆ, “ಪಕ್ಷಗಳು ದೇಶದ ಪ್ರಶ್ನೆಯಲ್ಲ. ಅವು ಪ್ರಜಾಸತ್ತಾತ್ಮಕತೆಯ ಜೀವಂತಿಕೆಯ ಲಕ್ಷಣಗಳು. ಪಕ್ಷಕ್ಕೂ, ಪಥಕ್ಕೂ ಸಮನ್ವಯವಿರಬೇಕಷ್ಟೇ. `ಕಾಂಗ್ರೆಸ್ಗಾಂಧಿಯ ಅರ್ಥದಲ್ಲಿ ಕಾಂಗ್ರೆಸ್ ಆಗುವುದಾದರೆ, `ಜನತಾ ಪರಿವಾರಜಯಪ್ರಕಾಶ ನಾರಾಯಣರ ಚಿಂತನೆಯ ಪ್ರತಿಬಿಂಬವಾಗುವುದಾದರೆ, `ಬಿಜೆಪಿಪಾಕಿಸ್ತಾನಕ್ಕೆ ಹೋಗಿ ಕಾವ್ಯದ ಮೂಲಕ ಮಾನವ ಸಂಬಂಧಗಳನ್ನು ಬೆಸೆಯುವ ವಾಜಪೇಯಿ ಅರ್ಥದ ಪಕ್ಷವಾಗುವುದಾದರೆ, ಪಕ್ಷಗಳು ದೇಶಕ್ಕೆ ಹೊರೆಯಲ್ಲ. ಇವುಗಳ ಅನುಸರಣೆ ಅಪರಾಧವೂ ಅಲ್ಲ. ಇವುಗಳೊಂದಿಗೆ ಘರ್ಷಣೆಯ ನಮ್ಮ ಮಾತೂ ಇಲ್ಲ.”