Total Pageviews

Sunday, June 27, 2021

ಹೆಣ ಮಾರುವವರಿಗೊಂದು ಗುಣದ ಹಾಡು


  ಕ್ರಾಂತಿಗಾಗಿ ಹಿಲಾಲು ಹಿಡಿಯಬೇಕಿಲ್ಲ, ಖಡ್ಗ, ಕೋವಿ, ಕಲ್ಲುಗಳ ಬಳಸಬೇಕಿಲ್ಲ. ನಮ್ಮೊಳಗೊಂದು ಕಾವ್ಯಾನುಭೂತಿಯಾದರೂ ಸಾಕು ಕ್ರಾಂತಿ ಘಟಿಸಿಯೇ ತಿರುತ್ತದೆ ಎನ್ನುವುದಕ್ಕೆ ಸಾಕ್ಷಿ ಈತ. ಸಾಲುಗಳನ್ನು ಓದಿ -

ದೇಖಾ ಹೈ ಜಿಂದಗಿ ಕೋ ಕುಛ್ ಇತ್ನೆ ಕರೀಬ ಸೆ

ಚಹರೆ ತಮಾಮ್ ಲಗ್ನೆ ಲಗೇ ಹೈಂ ಅಜೀಬ ಸೆ

   ಇದು ನಮ್ಮ ಇಂದಿನ ವಾಸ್ತವ. ಈಗ ಎಲ್ಲ ರೀತಿಯ ಚಳುವಳಿಗಳು, ಪ್ರತಿರೋಧಗಳು ನಿಶ್ಯಕ್ತಗೊಂಡು, ಪ್ರತಿ ಮನುಷ್ಯನೂ ನಡುಗಡ್ಡೆಯಾದ ಸಂದರ್ಭ. ಮೇಲಿನವು ನಮ್ಮನ್ನು ಎಚ್ಚರಿಸಲೆಂದೇ ರಚನೆಯಾದ ಅಬ್ದುಲ್ ಹಯಿ ಉರ್ಫ ಕ್ರಾಂತಿಕವಿ ಸಾಹೀರ್ ಲುಧಿಯಾನ್ವಿಯ ಸಾಲುಗಳು.

    ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ರಕ್ತ-ಸಿಕ್ತ ಪುಟಗಳನ್ನು ಕಂಡು, ಮತ್ತೆ ಮತ್ತೆ ತುಂಡಾಗುತ್ತ ಹೋದ ಪಂಜಾಬ್ ಲುಧಿಯಾನಾದಲ್ಲಿ 1921 ಮಾರ್ಚ್ 8 ರಂದು ಹುಟ್ಟಿದ ಸಾಹೀರ್, ಬದುಕಿದ ಜೀವಿತಾವಧಿ ಕೇವಲ ಐವತ್ತೊಂಬತ್ತು ವರ್ಷ. ಪ್ರಜ್ಞಾವಂತ ಸಮಾಜವನ್ನು ಚಿಂತನೆಗೀಡುಮಾಡುವ ಸಾವಿಲ್ಲದ ಸಾಲುಗಳನ್ನು ಹೊಸೆಯುವ ಸಾಮಥ್ರ್ಯವಿದ್ದ ಸಾಹೀರ್ಗೆ ಇಷ್ಟು ಅವಧಿ ತೀರ ಸಣ್ಣದು. ಆದರೆ ಇರುವಷ್ಟು ಅವಧಿಯಲ್ಲಿಯೇ ಆಲ್ ಇಂಡಿಯಾ ಸ್ಟುಡೆಂಟ್ಸ್ ಫೆಡರೇಷನ್ ಸದಸ್ಯನಾಗಿ, ಪ್ರಸಿದ್ಧ ಉರ್ದು ಪತ್ರಿಕೆಗಳಾದಸಹಕಾರ’, ‘ಪ್ರೀತಲಾರಿ’, ‘ಸವೇರಾಮತ್ತುಆಬಾದ--ಲತೀಫ್ಗಳ ಸಂಪಾದಕನಾಗಿ, ಕಮ್ಯುನಿಷ್ಟ ಚಿಂತಕನಾಗಿ, ಗೀತ ರಚನೆಕಾರನಾಗಿ, ಭಾರತೀಯ ಪ್ರಗತಿಶೀಲ ಸಾಹಿತ್ಯ ಚಿಂತಕರ ಮುಂಚೂಣಿಯ ಲೇಖಕನಾಗಿ, ಇಪ್ಟಾದ ಸೃಜನಶೀಲ ಶಕ್ತಿಯಾಗಿ ದೇಶದ ಸಂಸ್ಕøತಿಯೊಂದಿಗೆ ಬೆರೆತು ಹೋದ ರೀತಿ ಅವರನ್ನೀಗ ಕಾಲಾತೀತ ಮೌಲ್ಯವಾಗಿ ಉಳಿಸಿದೆ. ಸಾಹೀರ್ ಈಗ ವ್ಯಕ್ತಿಯಲ್ಲ, ಧ್ವನಿ, ಮನುಷ್ಯ ಪರ ಧ್ವನಿ.


   ಬದುಕಿನ ಬೆಲೆ ಗೊತ್ತಿದ್ದ, ಮನುಷತ್ವದ ನೆಲೆ ಗೊತ್ತಿದ್ದ ಆತನ ಹೋರಾಟಗಳ ಆಶಯ ತಿಳಿದಿದ್ದ ಸಾಹೀರ್ ತನ್ನ ಕುರಿತಾಗಿ ಹೇಳಿಕೊಂಡಿದ್ದಿಷ್ಟೆ

ಮೈ ಪಲ್ ದೊ ಪಲ್ ಕಾ ಶಾಯರ್ ಹೂಂ

ಪಲ್ ದೊ ಪಲ್ ಮೇರಿ ಕಹಾನಿ ಹೈ

ಪಲ್ ದೊ ಪಲ್ ಮೇರಿ ಹಸ್ತಿ ಹೈ

ಪಲ್ ದೊ ಪಲ್ ಮೇರಿ ಜವಾನಿ ಹೈ

   ಓರ್ವ ವಾಸ್ತವವಾದಿ ಲೇಖಕನಾಗಿ ಲುಧಿಯಾನ್ವಿ, ಕವಿತೆಯ ಚೌಕಟ್ಟಿನೊಳಗೇ ಅನೇಕ ಚಿಂತನೆಗಳನ್ನು ಹರವಿಬಿಟ್ಟಿದ್ದಾರೆ. ಪ್ರಗತಿಶೀಲ ಸಾಹಿತ್ಯದ ಮುಖ್ಯ ಕಾಳಜಿಯಾಗಿದ್ದ ಮನುಷ್ಯ ಗೌರವ, ಕೊನೆಯವರೆಗೂ ಅವರ ಬರಹದ ಬಹಳ ದೊಡ್ಡ ಕಾಳಜಿಯಾಗಿತ್ತು. ಹೀಗಾಗಿ ಅಭಿವ್ಯಕ್ತಿಯ ಪ್ರಕಾರಗಳು ಎಷ್ಟೇ ಭಿನ್ನವಾದರೂ ಅದರೊಳಗಿನ ಸಾಹೀರ್ ಎಂಬ ಸಂತನ ಚಿಂತನಾ ಕ್ರಾಂತಿ ಮಾತ್ರ ಮನುಷ್ಯಪ್ರಜ್ಞೆಯಾಗಿತ್ತು. ಹೀಗಾಗಿ ಮನುಷ್ಯತ್ವದ ಮೆಹಫಿಲ್ನಲ್ಲಿ ಕಟುವಾದ  ಮಾತುಗಳನ್ನುರುಳಿಸಿದರು. ಅವರಿಗೆ ಪಗಡೆಯೊಳಗಿನ ದಾಳಕ್ಕೂ ಮಾತಿನೊಳಗಿನ ಅರ್ಥಕ್ಕೂ ಬಹಳ ವ್ಯತ್ಯಾಸವೆನಿಸಲಿಲ್ಲ. ಅವೆರಡೂ ಎಲ್ಲ ಕಾಲಕ್ಕೂ ಅಚ್ಚರಿ ಮತ್ತು ಅನಿರೀಕ್ಷಿತಗಳಾಗಿರುವುದರಿಂದಲೇ ಆಟ ಮತ್ತು ಮಾತು ಮನುಷ್ಯನ ಒಟ್ಟು ಅಸ್ತಿತ್ವದ ಅವಿಭಾಜ್ಯ ಅಂಗಗಳಾಗಿ ಉಳಿದಿವೆ ಎಂಬುದು ಅವರ ಬರಹದ ಸಂದೇಶ.

     ಪಂಜಾಬ್ ಕರೀಮ್ಪುರದ ಗುಜ್ಜಾರ ಮುಸ್ಲಿಂ ರೈತಾಪಿ ಕುಟುಂಬದ ಕುಡಿಯಾಗಿ ಕಣ್ತೆರೆದ ಕ್ರಾಂತಿಕವಿ ಸಾಹೀರ್ ಇಸ್ಲಾಂದ ಪೊದರಿನೊಳಗೇ ಚಿಂತಿಸಬೇಕಾದುದು, ಬರೆಯಬೇಕಾದುದು ಸಹಜ ಹಾಗೂ ಅನಿವಾರ್ಯ. ಆದರೆ ಲುಧಿಯಾನದ ಖಾಲ್ಸಾ ಹೈಸ್ಕೂಲಿನಿಂದ, ಸರ್ಕಾರಿ ಕಾಲೇಜು ಹಾಗೂ ಸಮಕಾಲೀನ ಸಮಾಜದ ಮಧ್ಯ ಸಾಗಿಬಂದು ವಿಕಾಸಗೊಂಡ ಅವರ ಅಭಿವ್ಯಕ್ತಿಗೆ ಭಯದ ಸೋಂಕಿರಲಿಲ್ಲ. ಅಂತೆಯೇ ಮನುಷ್ಯನನ್ನು ಅಗೌರವಿಸುವವರನ್ನು ಕುರಿತು ಸಾಹೀರ್ ಮಾತ್ರ ಸಾಲುಗಳನ್ನು ಬರೆಯಲು ಸಾಧ್ಯವಿತ್ತು. 

ಯೇ ದಿನಕೆ ತಾಜರ್ ಯೇ ವತನ್ ಬೇಚನೆವಾಲೆ

ಇನ್ಸಾನೊಕಿಂ ಲಾಶೋ ಕೆ ಕಫನ್ ಬೆಚನೆವಾಲೆ

ಯೇ ಮೆಹಲೊ ಮೆ ಬೈಟೆ ಹುವೆ ಕಾತಿಲ್ ಯೇ ಲುಟೆರೆ

ಕಾಟೋಂ ಕೆ ಮಜರೂಹ್ ಚಮನ್ ಬೇಚನೆವಾಲೆ

      ಈ ಕ್ಷಣದ ಅವರ ಮಾತು ಇಸ್ಲಾಮಿಕ್ ಜಗತ್ತಿನಲ್ಲಿ ಅವರನ್ನುಮುಹಾಜಿರ್ನನ್ನಾಗಿಸಿದರೂ ಸೈ, ‘ಮುಜಾವೀರ್ನನ್ನಾಗಿಸಿದರೂ ಸೈ, ‘ಮುಯಜಿನ್ನನ್ನಾಗಿಸಿದರೂ ಸೈ. ಯಾಕೆಂದರೆ ಅಂತಿಮವಾಗಿ ಇವುಗಳನೆಲ್ಲಾ ಮೀರಿ ಮನುಷ್ಯರು ಮನುಷ್ಯನಾಗಿರಬೇಕಾದುದು ಎಲ್ಲ ಧರ್ಮಗಳ ಮೂಲ. ಉಳಿದವುಗಳೆಲ್ಲ ಮನುಷ್ಯನೆಂಬ ಮನುಷ್ಯನ ಮೇಲಿನ ಅನಂತರದ ಸಾಧ್ಯತೆಗಳು. ಸಾಧ್ಯತೆಗಳಿಗೆ ಕೆಲವು ಪದಗಳು. ಆದರೆ ಪದಗಳ ನಿಷ್ಪತ್ತಿಯೂ ಜೀವನ ವ್ಯವಹಾರದ ಒಂದು ಸಾಧ್ಯತೆ ಅಷ್ಟೇ ಎನ್ನುವುದು ಸಾಹೀರ್ ವಾದ.

ಅಲ್ಲಾ ತೇರೊ ನಾಮ್

ಈಶ್ವರ ತೇರೊ ನಾಮ್

ಸಬ್ ಕೊ ಸನ್ಮತಿ ದೇ ಭಗವಾನ್

     ಇದು ಅವರು ಕೊಟ್ಟ ಮಂತ್ರ. ಅಂದಹಾಗೆ, ಸಾಹೀರ್ ಇನ್ನೊಂದು ಚಿಂತನೆ, “ನನಗೆ ಮಾನವ ದೇಹದಷ್ಟು ಸುಂದರವಾದ ಯಂತ್ರ, ಅಲ್ಲಲ್ಲ ಮಂತ್ರ, ಅಥವಾ ತಂತ್ರ ಮತ್ತೊಂದು ಕಾಣಿಸಿಯೇ ಇಲ್ಲ. ತಣ್ಣಗೊಮ್ಮೊಮ್ಮೆ ತಂಬಿಗೆಗೆ ಕುಳಿತುಕೊಂಡಾಗಲೆಲ್ಲಾ ಪ್ರಪಂಚದ ಅತ್ಯಂತ ಮುಗ್ಧ ಸೃಷ್ಟಿಯಾದ ದೇಹವನ್ನು ಕುರಿತು ಎಷ್ಟೆಲ್ಲಾ ಯೋಚಿಸುತ್ತೇನೆ. ಬಯಲಿಗೆ ಕುಳಿತ ದೇಹ, ಬಿದ್ದ ದೇಹ, ಹಾದು ಹೋದ ಹಾದಿಗೆ ಹೂವು ಹಾಸುವ ದೇಹ, ಬಯಸುವ-ಬಸಿಯುವ, ಬೆಸೆಯುವ-ಬಸರುವ, ಬರೆಯುವ-ಮರೆಯುವ, ಬಿತ್ತುವ-ಮೆತ್ತುವ, ಅಂತಿಮವಾಗಿ ಬಯಲಾಗುವ ದೇಹ ಒಂದು ನಿರುಪದ್ರವ ಸೃಷ್ಟಿ. ಇಂಥ ದೇಹದ ದುರಂತವೇ ಬೇರೆ. ಮನಸ್ಸಿಗೆ ಮಾರ್ಗವಾಗುವ ಇದನ್ನು ನೆನೆಸಿಕೊಂಡು ನಾನು ಕಣ್ಣೀರು ಹಾಕಿದ್ದಕ್ಕೊಂದು ಸಾಕ್ಷಿ ಪದ್ಯ-

ಉಮ್ಮೀದ್ ವಕ್ತ ಕಾ ಸಬಸೆ ಬಡಾ ಸಹಾರಾ ಹೈ

ಘರ್ ಹೌಸಲಾ ಹೈ ತೊ ಹರ್ ಮೌಜ ಮೆ ಕಿನಾರಾ ಹೈ

          ಪ್ರಪಂಚದ ಎಲ್ಲ ಧರ್ಮಗಳೂ ಆತ್ಮವೆಂಬ ಪಲಾಯನದ ದಾರಿಯ ಮೇಲೆಯೆ ದೇಹವೆಂಬ ಕಟುಸತ್ಯವನ್ನು ಸಂದರ್ಭ, ಸನ್ನಿವೇಶ, ಸ್ವಾರ್ಥಗಳಿಗೆ ತಕ್ಕಂತೆ ಧಿಕ್ಕರಿಸುತ್ತಲೇ ಬಂದವುಗಳು.

          ಸಾಹೀರ್ ವಾದ ಸ್ವಲ್ಪ ಹೆಚ್ಚಾಗಿದ್ದರೂ ಸಹಿಸಿಕೊಳ್ಳಿ, ಆದರೆ ಇದು ಸತ್ಯ, ಆತ್ಮದ ಮಾತುಗಳನ್ನಾಡುವ ನಮ್ಮಲ್ಲಿ ನಮ್ಮಅಹಂನ್ನು ಕಾಪಿಟ್ಟುಕೊಳ್ಳುವ ಕಮಟು ವಾಸನೆ ಬಡಿಯದೇ ಇರುವುದಿಲ್ಲ. ಇಂಥವರಿಗೆ ಧರ್ಮ, ದೇಹ ಮತ್ತು ಆತ್ಮ ಯಾವವೂ ಅರ್ಥವಾಗಿಲ್ಲವೆಂದೇ ಅರ್ಥ. ಎಲ್ಲೋ ಆತ್ಮ ಮತ್ತು ದೇಹಗಳೆರಡರ ಸರಿಯಾದ ವಿವೇಚನೆ ಇಲ್ಲದವರು ಧರ್ಮದ ಠೇಕಿದಾರಿಕೆಯನ್ನು ಘೋಷಿಸಿಕೊಂಡಿರುವುದೇ ಪ್ರಪಂಚದ ಎಲ್ಲ ಧಾರ್ಮಿಕ ವಿಕೃತಿಗಳಿಗೆ, ವಿಭಜನೆಗಳಿಗೆ, ವಿನಾಶಗಳಿಗೆ ಕಾರಣವಾಗಿದೆ.

          ಭಾರತದ ಸ್ವಾತಂತ್ರ್ಯ ಮತ್ತು ವಿಭಜನೆಯ ನಾಲ್ಕು ವರ್ಷ ಮೊದಲು ಸಾಹೀರ್ ಇದ್ದದ್ದು ಇಂದಿನ ಪಾಕಿಸ್ತಾನದ ಲಾಹೋನಲ್ಲಿಯೆ. ಅವರ ಮೊದಲ ಉರ್ದು ಕೃತಿತಲ್ಕಿಯಾ’ 1945ರಲ್ಲಿ ಭಾರತದಿಂದಲೇ ಪ್ರಕಟವಾಯಿತು. ಆದರೆ ಕಮ್ಯುನಿಸ್ಟ್ ಆಲೋಚನೆಗಳ ಪ್ರಚಾರ ಕಾರ್ಯದಲ್ಲಿ ಆದ ಅವಘಡದ ಕಾರಣ ಪಾಕಿಸ್ತಾನ ಸರ್ಕಾರ ಅವರ ವಿರುದ್ಧ ಅರೆಸ್ಟ್ ವಾರಂಟ ಹೊರಡಿಸಿತು. ಇದು ಸಾಹೀರ್ರನ್ನು ಘಾಸಿಗೊಳಿಸಿದ ಮಹತ್ವದ ಘಟನೆಗಳಲ್ಲೊಂದು. ಧರ್ಮ, ಜಾತಿ, ದೇಶ ಎಂಬ ಕಲ್ಪನೆಗಳ ಸುತ್ತ ಮತ್ತೆ ಮತ್ತೆ ಚಿಂತಿಸುವಂತೆ ಮಾಡಿತು. ಎದೆಯ ಕುದಿಯಲ್ಲಿ ಲೇಖನಿಯನ್ನು ಅದ್ದಿ ಕಾವ್ಯ ಬರೆಯಲು ಕಾರಣವಾಯಿತು. ಕವಿ ಫೈಜ್-ಅಹಮದ್-ಫೈಜ್ರಿಂದ ಪ್ರಭಾವಿತರಾಗಿದ್ದ ಸಾಹೀರ್ ಈಗಪ್ಯಾಸಾಚಿತ್ರದ ತನ್ನ ಗೀತೆಗಳಿಂದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಪ್ರಭಾವಿಸುವ ಮಟ್ಟಿಗೆ ಅವರ ಕಾವ್ಯ ಗಟ್ಟಿ ಧ್ವನಿಯಾಗಿತ್ತು. 1940, 1950 ಮತ್ತು 1960 ದಶಕಗಳಲ್ಲಿ ಅವರ ಕಾವ್ಯದಿಂದ ಮೋಹಕ್ಕೊಳಗಾಗದವರ್ಯಾರೂ ಇರಲಿಲ್ಲ. ಅಷ್ಟೊಂದು ಮನುಜಮುಖಿಯಾಗಿತ್ತು ಅವರ ಕಾವ್ಯ. 

         ಜೀಸಸ್, ಮೋಸೆಸ್, ಝರಾತೃಷ್ಟ್, ಮೊಹಮ್ಮದ್, ಬುದ್ಧ ಅಥವಾ ಬಸವ ಯಾರೇ ಆಗಿರಲಿ, ಅವರೆಲ್ಲರೂ ಮನುಷ್ಯರಾಗಿದ್ದರೆನ್ನುವುದೇ ಮನುಷ್ಯರ ಮುಂದಿರುವ ಮಹಾಪಂಥ(ಚಾಲೆಂಜ್). ಯಾವುದೇ ನೆಲೆಯಲ್ಲಾದರೂ ಸರಿ, ಇದನ್ನೊಪ್ಪಿಕೊಳ್ಳದ ಮನುಷ್ಯರು ಆರಾಧಕರಾಗುತ್ತಾರೆ, ಆರಾಧಕರು ಸಾಮಾನ್ಯವಾಗಿ ಸಮಾಜದ ಆರೋಗ್ಯಕ್ಕೆ ಹಾನಿಕಾರಕವಾಗುತ್ತಾರೆ. ಧರ್ಮ ಮತ್ತು ಧರ್ಮಾತ್ಮರು ಅನುಸರಣೆಗೆ ಮಾದರಿಗಳಾಗಬೇಕೆ ವಿನಃ ಆರಾಧನ ಕೇಂದ್ರವಾಗಬಾರದು. ಬಹುತೇಕ ಇದು ತಿರುವು-ಮುರುವಾದುದೇ ಪ್ರಪಂಚದ ಎಲ್ಲ ಧರ್ಮಗಳ ಮತಿಹೀನತನಕ್ಕೆ ಕಾರಣವಾಯಿತು. ಇದು ಇಸ್ಲಾಂದ ಪಾಲಿಗೂ ಸತ್ಯ ಎನ್ನುವುದು ಸಾಹೀರ್ ಲುಧಿಯಾನ್ವಿಯ ಅನುಭವವಾಗಿತ್ತು.

      ‘ನಯಾ ದೌರ’, ‘ಪ್ಯಾಸಾ’, ‘ಫಿರ್ ಸುಭಹ ಹೋಗಿ’, ‘ಧೂಲ ಕಾ ಫೂಲ’, ‘ಬರಸಾತ ಕಿ ರಾತ’, ‘ಹಮ್ ದೋನೊ’, ‘ಗುಮರಾಹ’, ‘ಹಮರಾಜ್’, ‘ಚಿತ್ರಲೇಖಾ’, ‘ಕಾಜಲ್’, ‘ರಾಸ್ತಾ’, ‘ವಕ್ತ’, ‘ಇಝತ್’, ‘ದಾಸ್ತಾಂ’, ‘ಕಬಿ ಕಬಿಚಿತ್ರಗಳಿಗಾಗಿ ಸಾಹೀರ್ ಲುಧಿಯಾನ್ವಿ ಬರೆದ ಕವಿತೆಗಳಲ್ಲಿ ಮನುಷ್ಯ ಪ್ರೀತಿಲೋಕದ ದಿವ್ಯತೆ ಮತ್ತು ಅಗಾಧತೆಗಳ ಅನಾವರಣ ಇದೆ. ಹೀಗಾಗಿ ಭಾರತೀಯ ಸಿನಿಮಾ ಸಾಹಿತ್ಯದಲ್ಲಿ ಕಾವ್ಯಕ್ಕಾಗಿ ಸಾಹೀರ್ರಷ್ಟು ಸಾರ್ವಕಾಲಿಕವಾದ ಸಾಹಿತಿ ಮತ್ತೊಬ್ಬರಿಲ್ಲ. 


      ಈ ಚರ್ಚೆ ಮಾಡದೇ ಹೋದರೆ ಅಪೂರ್ಣವಾದೀತು ಲುಧಿಯಾನದ ದಾರಿ. ಲಾಹೋರ ಮತ್ತು ದೆಹಲಿ ಮಧ್ಯದ ಪ್ರೀತ್ ನಗರದ ಮುಷಾಯಿರಾ ಒಂದರಲ್ಲಿ ಅಮೃತಾ ಪ್ರಿತಂಳನ್ನು ಸಾಹೀರ್ ಭೇಟಿಯಾದಾಗ ಆಕೆ ಆಗಲೆ ಪ್ರಿತಂ ಸಿಂಗ್ ಹೆಂಡತಿ. ಕವಿತೆಯನ್ನು ಗೌರವಿಸದ ಆತನೊಂದಿಗಿನ ಬದುಕು ಅಮೃತಾಳಿಗೆ ವಿಷಮವೆನಿಸಿತು. ಸಾಹೀರ್ ಈಗ ಅವಳ ಸಾಹಿತ್ಯ ಸಾಥಿಯಾದ. ಆತ ಸೇದಿ ಒಗೆದ ಸಿಗರೇಟಿನ ತುಂಡುಗಳಲ್ಲಿ ಅವಳಿಗೆ ಬದುಕಿನ ಧನ್ಯತೆ ದಕ್ಕಿತು. ಆಕೆ ಕುಡಿದಿಟ್ಟ ಕಾಫಿ ಕಪ್ಪಿನಲ್ಲಿ ಸಾಹೀರ್ಗೆ ಸಮಾಧಾನ ಸಿಕ್ಕಿತು. ಆದರೆ ಚಂಚಲವಾಗಿದ್ದ ಸಾಹೀರ್ ಅಮೃತಾಳಿಗೆ ಬದ್ಧನಾಗಿರಲಿಲ್ಲ. ಸುಧಾ ಮಲ್ಹೋತ್ರಾ ಎಂಬ ಗಾಯಕಿಯೊಂದಿಗೂ ಅವರ ಸಂಬಂಧವಿದ್ದುದು ಚರ್ಚೆಯಾಗಿದೆ. ಆದರೆ ಅಮೃತಾ ಸಾಹೀರ್ ಕಾವ್ಯದ ಕೈಹಿಡಿದು ಕ್ರಮಿಸಿದ ದಾರಿ ದೊಡ್ಡದು. ಕಟ್ಟಿಕೊಟ್ಟ ದಿಟ್ಟ ಸಾಹಿತ್ಯವೂ ದೊಡ್ಡದು. ಗಮನಿಸಬೇಕಾದುದು ಸಾಹೀರ್ ಎಂದರೆ ಬರೀ ಅಮೃತಾ ಎಂಬ ಪಾತ್ರದ ಸುತ್ತಲೂ ಗಿರಿಕೆ ಹೊಡೆದ ಬದುಕಲ್ಲ ಎನ್ನುವುದು. ಇದೆಲ್ಲ ಸಾಹೀರ್ ನಮ್ಮೆಲ್ಲರಂತೆ ಬದುಕಿದ ವ್ಯಕ್ತಿಯಾಗಿದ್ದರು ಎನ್ನವುದಕ್ಕೆ ಸಾಕ್ಷಿ ಅಷ್ಟೆ.

     ಸಾಹೀರ್ ಕುರಿತು ಸಾಕಷ್ಟು ಸಾಹಿತ್ಯ ಬಂದಿದೆ. ಮುಖ್ಯವಾಗಿ ಕೆ.ಟಿ.ಮೊಹಮ್ಮದ್, ಆರ್.ಹಸನ್, ಜಾವೆದ ಅಕ್ತರ್ ಹಾಗೂ ಕೆ.ಅಬ್ಬಾಸ್ ಬರೆದ ಕೃತಿಗಳನ್ನು ಗಮನಿಸಬೇಕು. ಅಬ್ಬಾಸ್ 28 ಪುಟಗಳಪಾರ್ಛಾಯಿಯಾಂಎಂಬ ಪುಟ್ಟ ಹೊತ್ತಿಗೆಯೊಂದನ್ನು ಸಾಹೀರ್ ಕುರಿತು ಬರೆದಿದ್ದಾರೆ. ಅದರೊಳಗಿನ ಒಂದು ಸಂದರ್ಭ ಇಲ್ಲಿ ಪ್ರಸ್ತುತ.

         ಹಿಂದೀ ಚಲನಚಿತ್ರ ಪ್ರಪಂಚಕ್ಕೂ ದೇಶ ವಿಭಜನೆಯ ನಿರ್ಧಾರ ಬರಿಸಿಡಿಲಿನಂತೆ ಎರಗಿತ್ತು. “ಔರ್ ಇನ್ಸಾನ್ ಮರ್ಗಯಾಖ್ಯಾತಿಯ ರಾಮಾನಂದ ಸಾಗರ, “ಪ್ರೀತ ಲಾರಿಖ್ಯಾತಿಯ ಗುರುಭಕ್ಷಸಿಂಗ್, ಬಲರಾಜ ಸಹಾನಿಯ ಸೊದರ ಸಂಬಂಧಿ ರಾಜ ಬನ್ಸ್ ಖನ್ನಾರನ್ನು ಹೊರತುಪಡಿಸಿ ರಾವಲಪಿಂಡಿ, ಅಮೃತಸರ್, ಲಾಹೋರ್, ದಿಲ್ಲಿ, ಪಾನಿಪತ್ ಮುಸ್ಲಿಂ ಸಾಹಿತಿಗಳು, ಚಿತ್ರ ನಿರ್ಮಾಪಕರು ಪಾಕಿಸ್ಥಾನವೇ ಇನ್ನು ತಮಗೆ ಸುರಕ್ಷಿತ ಸ್ಥಳ ಎಂದು ಹೊರಟು ಹೋದರು. ಅಬ್ಬಾಸ ಹಾಗೂ ಅವರ ದೇಶನಿಷ್ಠ ಸಿನಿಮಾ ಬಳಗ ಪಾಕಿಸ್ಥಾನಕ್ಕೆ ಹೊರಟು ನಿಂತ ಪ್ರತಿಭೆಗಳನ್ನು ತಡೆದು ನಿಲ್ಲಿಸುವಲ್ಲಿ ಸೋತು ಹೋಯಿತು. ಅಲಿ ಸರ್ದಾರ್ ಝಪ್ರಿ, ಸಜ್ಜದ ಝಾಹೀರ್, ಮಜರೂಂ ಸುಲ್ತಾನಪುರಿ, ಫೈಜ ಅಹಮ್ಮದ್ ಫೈಜ್, ಇಸ್ಮತ್ ಚುಗತಾಯಿ ಇವರೆಲ್ಲರಿಗೂ ಮೊದಲು ಕವಿ ಮೊಹಮ್ಮದ್ ಇಕ್ಬಾಲ್ ಹೊರಟು ನಿಂತಿದ್ದರು.


      ಎಲ್ಲರ ಮನಸ್ಸುಗಳೂ ದ್ವಂದ್ವ ಹಾಗೂ ಗೊಂದಲಗಳ ಹೊಂಡ. ಒಂದೆಡೆ ಭವಿಷ್ಯದಲ್ಲಿ ಭಾರತದಲ್ಲಿ ಮುಸ್ಲಿಂರ ಬದುಕಿನ ಗತಿ ಏನಾಗಬಹುದು ಎಂಬ ಭಯ, ಇನ್ನೊಂದೆಡೆ ಭರವಸೆಯ ನೆಲವಾಗಿ ಕಣ್ಣಿಗೆ ಕುಕ್ಕುತ್ತಿರುವ ಪಾಕಿಸ್ಥಾನ. ಇವರೆಲ್ಲರೂ ಭಾರತೀಯ ಹಿಂದೀ ಚಿತ್ರ ಜಗತ್ತಿನ ಅದ್ಭುತ ಪ್ರತಿಭೆಗಳಾಗಿರುವುದರೊಂದಿಗೆÉ ಕಮ್ಯುನಿಸ್ಟ್ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಹೀಗಾಗಿ ಕೆಲವರು ಹೊಸದಾಗಿ ಹುಟ್ಟಿದ ದೇಶ ಪಾಕಿಸ್ಥಾನಕ್ಕೆ ಕಮ್ಯುನಿಸ್ಟ ವಿಚಾರಗಳ ಪ್ರಚಾರಕ್ಕಾಗಿ ಹೋದರೆ ಮತ್ತೆ ಕೆಲವರು ಭವಿಷ್ಯದಲ್ಲಿ ಭಾರತದೊಳಗಿನ ತಮ್ಮ ಜೀವನ ಸುರಕ್ಷಿತವಲ್ಲ ಎಂದು ತಿಳಿದು ಹೋದರು. ಪ್ರಧಾನಿ ನೆಹರೂ ಅವರೊಂದಿಗೆ ನೇರವಾಗಿ ಮಾತಾಡಿ ಯಾರಿಗೂ ಏನೂ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ ಎನ್ನುವ ಅಬ್ಬಾಸರ ಭರವಸೆಯನ್ನು ಯಾರೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಬೆಳ್ಳಿ ಪರದೆಯ ದುರಂತ ಅನಿವಾರ್ಯವಾಯಿತು. ಅಪಾರ ಸಂಖ್ಯೆಯ ಪ್ರತಿಭೆಗಳ ಪಲಾಯನವಾಯಿತು.

    ಈ ಹಿಂಸೆಯನ್ನು ಅನುಭವಿಸಿದವರಲ್ಲಿ ಅಬ್ಬಾಸರ ಪ್ರೀತಿಯ ಕವಿಮಿತ್ರ ಸಾಹೀರ್ ಲುಧಿಯಾನ್ವಿಯೂ ಒಬ್ಬರು. ಅಮೃತಾ ಪ್ರೀತಂಳ ಪ್ರೀತಿಯೂ ಸಾಹೀರ್ನನ್ನು ಪಾಕಿಸ್ಥಾನವೆಂಬ ಭ್ರಮೆಯಿಂದ ಹೊರತರಲಿಲ್ಲ. ಆದರೆ, ಸಾಹೀರಗೆ ಅಬ್ಬಾಸರ ಪ್ರೀತಿಯ ಆಮಂತ್ರಣವನ್ನು ತಿರಸ್ಕರಿಸಲಾಗಲಿಲ್ಲ.

     1948 India Weeklyಯಲ್ಲಿ ಅಬ್ಬಾಸರುಸಾಹೀರ್ಗೊಂದು ಜಾಹೀರ್ ಪತ್ರಎಂಬ ಶೀರ್ಷಿಕೆ ಅಡಿಯಲ್ಲಿ ಪತ್ರ ಬರೆದರು. ಒಕ್ಕಣಿಕೆ ಹೀಗಿತ್ತು.


ಪ್ರೀತಿಯ ಸಾಹೀರ್,

    ನೀನು ಯಾವ ಕಾಲಕ್ಕೂ ಭಾರತವನ್ನು ಬಿಟ್ಟು ಬಂದೆ ಎಂದುಕೊಳ್ಳಲಾಗದು. ಭಾರತದ ಪಂಚನದಿಗಳ ಪಂಜಾಬದ ಮಣ್ಣಿನ ವಾಸನೆಯ ನಿನ್ನ ಕವಿತೆ ಇಂದಿಗೂ ಅವಿಶ್ರಾಂತಿ ಆತ್ಮದಂತೆ ಇಲ್ಲಿಯೇ ಸುತ್ತುತ್ತಿದೆ. ನೀನು ಯಾವ ಕಾಲಕ್ಕೂ ಪಾಕಿಸ್ಥಾನಿಯನಾಗಲು ಸಾಧ್ಯವೇ ಇಲ್ಲ. ಕನಿಷ್ಟ ನಿನ್ನ ಹೆಸರಿನೊಂದಿಗೆ ಅಂಟಿಕೊಂಡ ಲುಧಿಯಾನಾಎಂಬ ಪದ ಇರುವವರೆಗೂ ಆದರು. ನೀನು ಪ್ರಪಂಚದ ಯಾವುದೇ ಮೂಲೆಯಲ್ಲಿರು, ನಿನ್ನ ಹೆಸರು ನೀನು ಬದಲಾಯಿಸಿಕೊಳ್ಳುವವರೆಗೂ ನೀನು ಭಾರತೀಯನೆ. ‘ಭಾರತದ ಕವಿಯೆಎಂಬುದನ್ನು ಮರೆಯಬೇಡ. ಒಂದು ವೇಳೆ ನೀನು ಪಾಕಿಸ್ಥಾನಿಯನೇ ಆಗಬೇಕಾದರೆ ನಿನ್ನ ಪಾಕಿಸ್ಥಾನ ಭಾರತದ ಲುದಿಯಾನಾವನ್ನು ಗೆಲ್ಲಬೇಕಷ್ಟೆ. ಅದು ಪಾಕಿಸ್ಥಾನಕ್ಕೆ ಜನ್ಮದಲ್ಲಿ ಸಾಧ್ಯವಾಗದ ಮಾತು. ಪ್ರೀತಿಯಿಂದ ಕರೆಯುತ್ತೇನೆ. ನೀನು ಮರಳಿ ಬಂದುಬಿಡು.

                                                                                         ಇಂತಿ ನಿನ್ನ

                                                                                          ಖ್ವಾಜಾ

      ಆಶ್ಚರ್ಯದ ಮಾತೆಂದರೆ, ಹೇಗೊ ಪಾಕಿಸ್ತಾನಿ ಸರ್ಕಾರದ ಎಲ್ಲ ಅಡೆತಡೆಗಳನ್ನು ಮೀರಿ ಅಬ್ಬಾಸರ ಪತ್ರ ಲಾಹೋರ್ದಲ್ಲಿದ್ದ ಸಾಹೀರ್ರಿಗೆ ತಲುಪಿತು. ದುಃಖತಪ್ತ ಸಾಹೀರ್ ಪತ್ರಿಕೆಯನ್ನು ಎದೆಗೊತ್ತಿಕೊಂಡು ಗಳಗಳನೆ ಅತ್ತರು. ಇಷ್ಟೇ ಬೇಕಾಗಿತ್ತು ಸಾಹೀರ್ಗೆ. ಜಗಳವಾಡಿ ಮನೆಬಿಟ್ಟು ಹೋದ ಮಗ ಪ್ರೀತಿಯನ್ನು ನೆನೆದು ಮರಳಿ ಓಡೋಡಿ ಬರುವಂತೆ. ಪಾಕಿಸ್ಥಾನವನ್ನು ಧಿಕ್ಕರಿಸಿ ಸಾಹಿರ್ ಮತ್ತೆ ಭಾರತಕ್ಕೆ ಮರಳಿ ಬಂದರು. ಆರಂಭಿಕ ಕೆಲವು ತೊಂದರೆಗಳನ್ನು ಎದುರಿಸುತ್ತಲೇ ಮುಂದೆ ಭಾರತೀಯ ಹಿಂದಿ ಚಿತ್ರಲೋಕದ ಅಪೂರ್ವ ಪ್ರತಿಭೆಯಾದರು. ಅಬ್ಬಾಸ್ ಯಾವಾಗಲೂ ಸಾಹೀರ್ ಬೆಂಗಾವಲಾದರು.

    ಪ್ರಪಂಚದ ಎಲ್ಲ ಧರ್ಮಗಳಲ್ಲಿ ಆಗಿರುವಂತೆಯೇ ಈಗ ಇಸ್ಲಾಂದ ಠೇಕಿದಾರರೂ ಹುಟ್ಟಿಕೊಂಡಿದ್ದಾರೆ. ಅದನ್ನು ಪ್ರಶ್ನಾತೀತವೆಂದು ಸಾರುವುದರ ಮೂಲಕ ತಾವು ಪ್ರಶ್ನಾತೀತರು ಎನ್ನುವ ಸುಳ್ಳನ್ನು ಸ್ಥಾಪಿಸುತ್ತಿದ್ದಾರೆ. ಹತ್ಯೆಯ ಮೂಲಕ ಭಯವನ್ನು ಸೃಷ್ಟಿಸಬಹುದು ಎನ್ನುವ ಕಲ್ಪನೆಗಳಲ್ಲಿದ್ದಾರೆ. ಆದರೆ ಇದುವರೆಗೆ ಪ್ರಪಂಚದ ಯಾವುದೇ ಆಲೋಚಕನ ಹತ್ಯೆಯೂ ಯಾವುದೇ ಆಲೋಚನೆಯ ಹತ್ಯೆಯ ಕನಿಷ್ಟ ನಾಂದಿಯನ್ನು ಕೂಡ ಹಾಡಿಲ್ಲ. ಇದು ಸಾಹೀರ್ ಸ್ಪಷ್ಟ ನಿಲುವು.

      ಕಳೆದ 700 ವರ್ಷಗಳಿಂದ ನೆಲದೊಂದಿಗಿರುವಇಸ್ಲಾಂಯಾವುದು? ಮತ್ತು ನಾವು ಯಾವ ಇಸ್ಲಾಂನ್ನು ಗೌರವಿಸುತ್ತ ಬಂದಿದ್ದೇವೆ ಎನ್ನುವುದನ್ನು ಸಾಹೀರ್ ಲುಧಿಯಾನ್ವಿಯ ಸಾಲುಗಳಿಂದ ತಿಳಿದುಕೊಳ್ಳಬೇಕಿದೆ. ಅವರ ಪದ್ಯದ ಸಂದೇಶ ಜಗತ್ತಿನ ಎಲ್ಲ ಧರ್ಮಗಳಿಗೂ ಅನ್ವಯ. ‘ಧೂಲ್ ಕಾ ಫೂಲ್ಚಿತ್ರದಲ್ಲಿ ಬಹಳ ಸುಂದರವಾಗಿ ರಚನೆಯನ್ನು ಅಳವಡಿಕೊಂಡಿದ್ದಾರೆ. ಶುದ್ಧ ಸಾಹಿತ್ಯಿಕ ರಚನೆಯೊಂದು ಭಾರತೀಯ ಚಲನಚಿತ್ರ ರಂಗಕ್ಕೆ ಒಗ್ಗಿದ ಅಪರೂಪದ ಕೆಲವೇ ಕೆಲವು ಉದಾಹರಣೆಗಳಿವೆ. ಅದರಲ್ಲಿ ಇದೂ ಒಂದು. ನಿಟ್ಟಿನಲ್ಲಿ ಸಾಹಿರ್ ಸುದೈವಿಯೇ ಸರಿ.

ತು ಹಿಂದೂ ಬನೇಗಾ ಮುಸಲ್ಮಾನ್ ಬನೇಗಾ

ಇನ್ಸಾನ್ ಕಿ ಔಲಾದ್ ಹೇ

ಇನ್ಸಾನ್ ಬನೇಗಾ

 

ಅಚ್ಚಾ ಹೇ ಅಭಿ ತಕ್ ತೇರಾ ಕುಛ್ ನಾಮ್ ನಹೀ ಹೈ

ತುಜಕೊ ಕಿಸಿ ಮಝಹಬ್ ಸೆ ಕೋಯಿ ಕಾಮ್ ನಹೀ ಹೈ

ಜಿಸ್ ಇಲ್ಮ್ ನೇ ಇನ್ಸಾನ್ ಕೊ ತಕ್ಸಿಮ್ ಕಿಯಾ ಹೈ

ಉಸ್ ಇಲ್ಮ್ ಸೇ ತುಜ್ ಪರ್ ಕೊಯಿ ಇಲ್ಜಾಮ್ ನಹೀ ಹೈ

 

ತು ಬದಲೇ ಹುವೇ ವಕ್ತ್ ಕಿ ಪೆಹಚಾನ್ ಬನೇಗಾ

ಇನ್ಸಾನ್ ಕಿ ಔಲಾದ್ ಹೇ ಇನ್ಸಾನ್ ಬನೇಗಾ

 

ಮಾಲೀಕ್ ನೇ ಹರ್ ಇನ್ಸಾನ್ ಕೊ ಇನ್ಸಾನ್ ಬನಾಯಾ

ಹಮ್ ನೆ ಉಸೆ ಹಿಂದೂ ಯಾ ಮುಸಲ್ಮಾನ್ ಬನಾಯಾ

ಕುದರತ್ ನೆ ಜೊ ಭಕ್ಷಿದಿ ಹಮೆ ಏಕ್ ಹೀ ಧರತಿ

ಹಮ್ನೇ ಕಯಿ ಭಾರತ್ ಕಯಿ ಇರಾನ್ ಬನಾಯಾ

 

ಜೋ ತೊಡೆಗಾ ಹರ ಬಂದ್ ವೋ ತೂಫಾನ್ ಬನೇಗಾ

ಇನ್ಸಾನ್ ಕೀ ಔಲಾದ್ ಹೈ ಇನ್ಸಾನ್ ಬನೇಗಾ

 

ನಫರತ್ ಜೋ ಸಿಖಾಯೇ ವೋ ಧರಮ್ ತೇರಾ ನಹೀ ಹೈ

ಇನ್ಸಾಫ್ ಜೋ ರೂಂದೆ ವೋ ಕದಮ್ ತೇರಾ ನಹೀ ಹೈ

ಕುರ್-ಆನ್ ಹೊ ಜಿಸಮೆ ವೋ ಮಂದಿರ್ ನಹೀ ತೇರಾ

ಗೀತಾ ಹೊ ಜಿಸಮೆ ವೋ ಹರಮ್ ತೇರಾ ನಹೀ ಹೈ

 

ತು ಅಮ್ನ್ ಕಾ ಔರ್ ಸುಲಹ ಕಾ ಅರಮಾನ್ ಬನೇಗಾ

ಇನ್ಸಾನ್ ಕೀ ಔಲಾದ್ ಹೈ ಇನ್ಸಾನ್ ಬನೇಗಾ

          ಧರ್ಮ-ದೇಶ, ಯುದ್ಧ-ವಿಭಜನೆಗಳಂಥ ಶಬ್ಧಗಳು, ಅವುಗಳ ಸುತ್ತಲಿನ ನೆಲ-ನೆತ್ತರ ದಾಹದ ರಾಜಕರಣಗಳ ಆಳಗಲ ಅರ್ಥವಾಗುವುದಕ್ಕೂ ಮುಂಚೆ ಕೇಳಬೇಕಾದ ಪದ್ಯ ಇದು. ಕವಿತೆಯೊಂದರ ಸುಖವೇ ಇದು. ಅದು ಅರ್ಥ, ಅನರ್ಥ, ಅಪಾರ್ಥಕ್ಕೆ ದಕ್ಕಿ ಹಿಪ್ಪೆಯಾಗುವ ಮೊದಲು ಸುಮ್ಮನೆ ತಂಗಾಳಿಯಂತೆ ನಮ್ಮಲ್ಲೊಮ್ಮೆ ಸುಳಿದುಹೋಗಿಬಿಡುತ್ತದಲ್ಲಾ, ಅದೇ ಅದರ ಸಾರ್ಥಕ್ಯ. ಕಾವ್ಯ ಪ್ರಿಯರಿಗೆ ಸಾರ್ಥಕ್ಯದ ಅದೆಷ್ಟೊ ಕ್ಷಣಗಳನ್ನು ಸಾಹೀರ್ ಒದಗಿಸಿದರು.

       ಪದ್ಮಶ್ರೀ, ಫಿಲ್ಮ ಫೇರ್ ಅವಾರ್ಡ್ಗಳಂಥ ದೇಶದ ಉನ್ನತ ಪ್ರಶಸ್ತಿಗಳಿಗೆ ಭಾಜನರಾಗಿ, ಭಾರತ ಸ್ವತಂತ್ರಗೊಂಡ ಮೂವತ್ಮೂರು ವರ್ಷಗಳ ನಂತರ 1980 ಅಕ್ಟೋಬರ್ 25ರಂದು ಸಾಹೀರ್ ತನ್ನ ಸನ್ಮಿತ್ರ ಜಾವೇದ್ ಅಕ್ತರ್ರೊಂದಿಗೆ ಮುಂಬೈನ ಅಂಧೇರಿಯಲ್ಲಿದ್ದಾಗ ಲೋಕಮುಕ್ತರಾದರು. ಪಾಕಿಸ್ತಾನ ಬಿಟ್ಟು 1949ರಲ್ಲಿ ದೆಹಲಿಗೆ ಬಂದು ಅಲ್ಲಿಂದ ಎರಡು ತಿಂಗಳ ನಂತರ ಮುಂಬೈಗೆ ಬಂದ ಸಾಹೀರ್ ಕೊನೆಗಾಲದವರೆಗೂ ಗುಲ್ಜಾರ್, ಕೃಷ್ಣಚಂದರ್, ಅಬ್ಬಾಸ್ರೊಂದಿಗೆ ಸಾಹಿತ್ಯ ಮತ್ತು ಸಿನಿಮಾ ಲೋಕಗಳ ಚರ್ಚೆಗಳಲ್ಲಿ ಸಕ್ರಿಯರಾಗಿದ್ದರು. ಅಲ್ಲಿಯ ಜುಹು ಮುಸ್ಲಿಂ ಸ್ಮಶಾನದಲ್ಲಿ ಅವರನ್ನು ದಫನ್ ಮಾಡಲಾಯಿತಾದರೂ, ಸಾಯುವ ಮುಂದಿನವರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ 2010ರಲ್ಲಿ ಅವರ ಸಮಾಧಿಯನ್ನು ನಾಶಮಾಡಲಾಯಿತು ಎನ್ನುತ್ತವೆ ಮಾಹಿತಿಗಳು. ಬದುಕೆಲ್ಲವು ಮನುಷ್ಯನ ಪೂಜಾರಿಯಾಗಿ ಆತನ ಹೋರಾಟದ ಇತಿಹಾಸವನ್ನು ತನ್ನ ಕ್ರಾಂತಿ ಕಾವ್ಯದಲ್ಲಿ ದಾಖಲಿಸಿ, ಮನುಷ್ಯರನ್ನು ಹಿಲಾಲುಗಳಂತೆ ಎತ್ತಿ ಹಿಡಿದ ಸಾಹೀರ್ಗೆ ಮತ್ತು ಆತನ ಸಮಾಧಿಗೆ ಎಸಗಲಾದ ಅಪಚಾರವನ್ನು ಏನಂತ ನೋಡಬೇಕು? ಹೇಗಂತ ಓದಬೇಕು? ಎನ್ನುವುದನ್ನು ಪ್ರಜ್ಞಾವಂತ ಸಮಾಜ ನಿರ್ಧರಿಸಬೇಕಿದೆ.