Total Pageviews

Tuesday, October 4, 2011

ಸಿನಿಮಾ ಮರೆಯಬಾರದ ಸಿನಿಮಾ ರಾಮಸ್ವಾಮಿ

                

                               ಸಿನಿಮಾ ಮರೆಯಬಾರದ ಸಿನಿಮಾ ರಾಮಸ್ವಾಮಿ

 ಇವರು ಸಿನಿಮಾ ರಾಮಸ್ವಾಮಿ. ಬೇಲೂರಿನ ನನ್ನ ಸಂಶೋಧನೆಗಳಲ್ಲಿ ರಾಮಸ್ವಾಮಿಯೊಂದಿಗಿನ ಈ ಒಡನಾಟವೂ ಒಂದು.ಕೋಟೆ ಸಿದ್ಧೇಶ್ವರ ಬೀದಿಯಲ್ಲಿ ನನ್ನ ಮನೆ ಬದಲಾಯಿಸಿ ವೈಕುಂಠ ಬೀದಿಗೆ ಬಂದ ಮೇಲೆ ನನ್ನ ಲಕ್ಷ್ಯ ಪದೇ ಪದೇ ಈ ಹಿರಿಯ ಜೀವದ ಕಡೆಗೆ ಹರಿಯಲಾರಂಭಿಸಿತು.
                ಇವರು ಸಿನಿಮಾ ರಾಮಸ್ವಾಮಿ, ಯಾಕೆಂದರೆ ಸಿನಿಮಾ ಇಲ್ಲದ ಇವರ ಬದುಕಿನ ಯಾವ ಘಳಿಗೆಯೂ ಇಲ್ಲ. ಈಗ ಇವರಿಗೆ ೯೦ ರ ಯೌವ್ವನ! ಅಂದಹಾಗೆ ಈಗಲೂ ಗಡದ್ದಾಗಿ ಹನ್ನೆರಡು ಗಂಟೆ ನಿದ್ರಿಸುತ್ತಾರೆ. ಉಳಿದ ಹನ್ನೆರಡು ಘಂಟೆ ಸಿನಿಮಾ ಬದುಕುತ್ತಾರೆ. ಒಂದು ಕಾಲ ಇತ್ತು, ಮೂಟೆಯಲ್ಲಿ ದುಡ್ಡು ಬಾಚಿಕೊಂಡು ಒಂದೇ ಸಮಯಕ್ಕೆ ಹತ್ತಾರು ಸಿನಿಮಾ ಥೇಯಿಟರ್‌ಗಳನ್ನು ನಡೆಸುತ್ತಿದ್ದ ರಾಮಸ್ವಾಮಿ ಅದೇ ಶ್ರದ್ಧೆ ಮುತುವರ್ಜಿಯೊಂದಿಗೆ ಈಗ ಬೇಲೂರಿನ ತಮ್ಮದೇ `ರೇಣುಕಾ ಚಿತ್ರ ಮಂದಿರ'ದಲ್ಲಿ ಪೇಪರಮೆಂಟ್, ಪಾಪಡ್, ಮತ್ತು ಪಾನೀಯಗಳನ್ನು ಮಾರುತ್ತಾರೆ. ನಮ್ಮ ರಾಮಸ್ವಾಮಿ ಯಾವಾಗಲಾದರೂ ಅಷ್ಟೇ, ಅವರು ವಿತರಕರು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದ ನಿರ್ಲಿಪ್ತ ಮನಸ್ಸು. ಮಾತು ಕಡಿಮೆ, ಜೀವನ ಮಂತ್ರವೇ ದುಡಿಮೆ. ಅವರು ಹೇಳುವುದಿಷ್ಟೆ, ಆಳಾಗಿ ದುಡಿಯುವನು ಅರಸನಾಗಿ ಬದುಕಬಲ್ಲ.
                ನವ್ಹೆಂಬರ್ ೨೨,೧೯೨೭ ರಲ್ಲಿ ರಾಮಸ್ವಾಮಿಯವರು ಚಿತ್ರದುರ್ಗದಲ್ಲಿ ಜನಿಸಿದರಂತೆ. ಈ ಚಿತ್ರದುರ್ಗವೇ ಹೀಗೆ, ಬಂಡೆಗಲ್ಲು, ಬಿಸಿಲನ್ನು ತನ್ನ ಒಡಲೊಳಗೆ ಇಟ್ಟುಕೊಂಡಂತೆ ಅನೇಕ ಪ್ರತಿಭೆಗಳಿಗೂ ಒಡಲಾಸರೆ ನೀಡಿದೆ. ಅಂತೆಯೇ ನಮ್ಮ ರಾಮಸ್ವಾಮಿಯವರಿಗೂ. ಇವರ ತಂದೆ ಸೆಂಟ್ರಲ್ ಗೌರ್‍ನಮೆಂಟ್ ನೌಕರರಂತೆ. ಇವರು ಹುಟ್ಟಿದ ಆರು ತಿಂಗಳಲ್ಲಿಯೇ ವಿಧಿವಶರಾದರು. ಇವರ ತಾಯಿಯ ತಂದೆ, ಅಂದರೆ ಅಜ್ಜನ ಮನೆಯಲ್ಲಿ ರಾಮಸ್ವಾಮಿ ತಮ್ಮ ಹೈಸ್ಕೂಲ್‌ವರೆಗಿನ ಶಿಕ್ಷಣ ಪೂರೈಸಿದರು. ಇವರದೇನು ಅರಸು ಮನೆತನವೇ? ಬದುಕಿಗೊಂದು ಬಾಗಿಲು ತೆರೆಯಬೇಕಾಗಿತ್ತು, ಇವರ ಬದುಕಿನಲ್ಲಿ ಆ ಬಾಗಿಲು ತೆರೆದ ಪುಣ್ಯಾತ್ಮನೇ ಗುಬ್ಬಿ ವೀರಣ್ಣ.
                ೧೯೪೦ ರ ಆಸು-ಪಾಸು. ಗುಬ್ಬಿ ನಾಟಕ ಕಂಪನಿ ಚಿತ್ರದುರ್ಗಕ್ಕೆ ಬಂದಿತು. ಆಗ ನಮ್ಮ  ರಾಮಸ್ವಾಮಿ  ತಾತಾಚಾರ್ ಶರ್ಮ ರವರ ಸಂಪಾದಕತ್ವದ `ವಿಶ್ವ ಕರ್ನಾಟಕ' ಪತ್ರಿಕೆಯ ಚಿತ್ರದುರ್ಗದ ಎಜೆಂಟ್‌ರಾಗಿದ್ದರು. ಇದೇ ವೇಳೆ ಬಂದ ಗುಬ್ಬಿ ಕಂಪನಿ ಮ್ಯಾನೇಜರ್‌ಗೆ ನಾಟಕಕ್ಕಾಗಿ ಲೈಸನ್ಸ್ ಬೇಕಿತ್ತು. ತಮ್ಮ ಪತ್ರಿಕಾ ಪ್ರಭಾವವನ್ನು ಬಳಸಿ ನಮ್ಮ ರಾಮಸ್ವಾಮಿ ಒಂದು ತಿಂಗಳಿನ ಲೈಸನ್ಸ್‌ನ್ನು ಕೊಡಿಸಿದರು. ಹೀಗೆ, ರಾಮಸ್ವಾಮಿ  ಹದಿನೇಳರ ವಯಸ್ಸಿನಲ್ಲಿ ಗುಬ್ಬಿ ಕಂಪನಿ ಸೇರಿದರು.
                ಜೂನ್ ೭,೧೯೪೦ ರಾಮಸ್ವಾಮಿ ಬದುಕಿನಲ್ಲಿ ಮತ್ತೊಂದು ತಿರುವು, ಗುಬ್ಬಿ ವೀರಣ್ಣನವರು ದಾವಣಗೆರೆಯಲ್ಲಿ ವಿನೋದಾ ಚಿತ್ರ ಮಂದಿರವನ್ನು ಪ್ರಾರಂಭಿಸಿ, ಈಶ್ವರಲಾಲ್ ಮತ್ತು ನಟಿ ಖುರ್ಷಿದ್ ತಾರಾಗಣದ ‘ಹೋಲಿ' ಚಿತ್ರವನ್ನು ಪ್ರದರ್ಶಿಸಲಾರಂಭಿಸಿದರು. ಈಗ ಒಬ್ಬ ಯೋಗ್ಯ ಯುವಕನ ನಿರೀಕ್ಷೆಯಲ್ಲಿದ್ದರು ಗುಬ್ಬಿ ವೀರಣ್ಣನವರು. ಹೀಗಾಗಿ ೬ ರೂಪಾಯಿ ಸಂಬಳದ ವ್ಯಕ್ತಿಗೆ ೧೫ ರೂಪಾಯಿ ಸಂಬಳ  ನೀಡಿ ರಾಮಸ್ವಾಮಿಯನ್ನು ದಾವಣಗೆರೆಗೆ ಕರೆಸಿಕೊಂಡರು. ಯಾಕೆಂದರೆ ಇದಕ್ಕಿಂತಲೂ ಮುಖ್ಯವಾಗಿ ವೀರಣ್ಣನವರು `ಸುಭದ್ರಾ' ಚಿತ್ರವನ್ನು ಮಾಡುವುದಕ್ಕಾಗಿ ಪೂನಾಕ್ಕೆ ಹೋಗಬೇಕಿತ್ತು. ಇದೆಲ್ಲವು ವ್ಯವಹಾರ ಮತ್ತು ವಿಶ್ವಾಸದ ಪ್ರಶ್ನೆಯಾಗಿದ್ದರಿಂದ ಇವೆರಡನ್ನು ಗಳಿಸಿದ್ದ ರಾಮಸ್ವಾಮಿ ವೀರಣ್ಣನವರ ಹೃದಯಕ್ಕೆ ಹತ್ತಿರವಾಗಿದ್ದರು.
               ಗುಬ್ಬಿ ನಾಟಕ ಕಂಪನಿಯಲ್ಲಿ ೬ ರೂಪಾಯಿ ಸಂಬಳದ ಎಲೆಕ್ಟ್ರಿಷಿಯನ್ ಆಗಿದ್ದ ನಮ್ಮ ರಾಮಸ್ವಾಮಿ  ಸ್ಮರಿಸಿಕೊಳ್ಳುವುದು  ಮಾತ್ರ ವೀರಣ್ಣನವರ ವಿದ್ಯಾ ಪ್ರೇಮವನ್ನು. ಗುಬ್ಬಿ ನಾಟಕ ಮಂಡಳಿ ಯಾವುದೇ ಊರಲ್ಲಿದ್ದರೂ ಸರಿ, ಪ್ರತಿ ಶುಕ್ರವಾರ ಆ ಪ್ರದೇಶದ ವಿದ್ವಾಂಸರನ್ನು ಕರೆದು ಸನ್ಮಾನಿಸುವ ಒಂದು ವಿನೂತನ ವಿಚಾರವನ್ನು ಪಾಲಿಸುತ್ತಿತ್ತು ಎನ್ನುವುದನ್ನು. ಕುರುಕ್ಷೇತ್ರ ನಾಟಕವನ್ನು ಆಂಧ್ರ, ತಮಿಳುನಾಡುಗಳಲ್ಲಿ ಪ್ರದರ್ಶಿಸಿ ವೀರಣ್ಣನವರು ಕನ್ನಡ ಚಲನಚಿತ್ರ ಜಗತ್ತನ್ನು ಕಟ್ಟಿದ ಅವಧೂತ ಎನ್ನುತ್ತಾರೆ ನಮ್ಮ ರಾಮಸ್ವಾಮಿ.
              ೧೯೫೦ ರಲ್ಲಿ ಅರಕಲಗೂಡು ತಾಲೂಕಿನ ಕೋಣನೂರಿನಲ್ಲಿ ಸ್ವಂತ ಟೂರಿಂಗ್ ಥೇಯಿಟರನ್ನು ಪ್ರಾಂಭಿಸಿದ ಇವರು ೧೯೭೭ ರ ವರೆಗೆ ೩ ತಿಂಗಳಿಗೊಮ್ಮೆ ಊರುಗಳನ್ನು ಬದಲಾಯಿಸುತ್ತಾ, ಜಾತ್ರೆಗಳನ್ನು ಅರಸುತ್ತಾ ಅಲೆಮಾರಿಯಾಗಿದ್ದರು. ೧೯೭೯ರಲ್ಲಿ ಎಲ್ಲ ಥೇಯಿಟರ್‌ಗಳನ್ನು ಮಾರಿ ಬೆಂಗಳೂರಿಗೆ ಬಂದು ಸಿನಿಮಾ ವಿತರಕರಾಗಿ(ಡಿಸ್ಟ್ರಿಬ್ಯೂಟರ್)ಆಗಿ ಜೀವನ ಪಾರಂಭಿಸಿದರು. ಹಾಸನದ ಇಂಪೀರಿಯಲ್ ಥೆಯಿಟರ್ ಮತ್ತು ಪಿಕ್ಚರ್ ಪ್ಯಾಲೆಸ್ಸಿನಲ್ಲಿ ಮಾರ್ನಿಂಗ್ ಶೋಗಳನ್ನು ಬಾಡಿಗೆ ಆಧಾರಿತವಾಗಿ ನಡೆಸುತ್ತಿದ್ದರು. ಒಂದು ಕಾಲದ ೬ ರೂ ಸಂಬಳದ ರಾಮಸ್ವಾಮಿ ಈಗ ಇಡೀ ಹಾಸನ ಜಿಲ್ಲೆಗೆ ಮತ್ತು ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಚಿತ್ರ ವಿತರಕರು ಮತ್ತು ಪ್ರದರ್ಶಕರಾಗಿ
ಬೆಳೆದಿದ್ದರು.
              ಎಲ್ಲವನ್ನು ಕಂಡುಂಡ ಜೀವ ೧೯೬೭ರಲ್ಲಿ ಬೇಲೂರಿಗೆ ಬಂತು. ಆನಂತರ ೫೦ ವರ್ಷ ಈ ಊರ ಉಸಿರೊಳಗೆ ಉಸಿರಾಗಿ ಹೋಯಿತು. ಇಡೀ ಕರ್ನಾಟಕವನ್ನು ಸುತ್ತಿದ ನಮ್ಮ ರಾಮಸ್ವಾಮಿ ಬೇಲೂರಿನ ಮುನ್ಸಿಪಲ್ ಕೌನ್ಸಿಲರ್ ಆಗಿ ಎರಡು ಸಾರಿ ಆಯ್ಕೆಯಾಗಿದ್ದಾರೆ. ಒಮ್ಮೆ ಅವಿರೋಧ ಇನ್ನೊಮ್ಮೆ  ನೇರ ಚುನಾವಣೆಯ ಮೂಲಕ. ಒಂದೇ ಸಮಯಕ್ಕೆ ಏಳು ಚಿತ್ರಮಂದಿರಗಳನ್ನು ನಡೆಸಬಲ್ಲವರಾಗಿದ್ದ ರಾಮಸ್ವಾಮಿ ಈಗ ರಾಜಕಾರಣವನ್ನೂ ಮಾಡಬಲ್ಲವನಾಗಿದ್ದ. ಆದರೆ ಮನುಷ್ಯತ್ವ, ಸ್ನೇಹ ಮತ್ತು ಪ್ರೀತಿಯ ಪ್ರಶ್ನೆ ಬಂದಾಗ ಅವರು ನೆನೆಯುವುದು ರಾಜ್‌ಕುಮಾರ್, ಹುಣಸೂರು ಕೃಷ್ಣಮೂರ್ತಿ, ಜಿ ವ್ಹಿ ಅಯ್ಯರ್ ಮತ್ತು ಅನ್ನದಾತ ಗುಬ್ಬಿ ವೀರಣ್ಣನವರನ್ನು ಮಾತ್ರ. ಅವರದೇ ಮಾತುಗಳಲ್ಲಿ ಹೇಳಬೇಕೆಂದರೆ"gubbi company is the university  of  drama . ಆನಂತರ ಬಂದ ಸುಬ್ಬಯ್ಯ ನಾಯ್ಡುಯವರನ್ನು ಕೂಡ ನಮ್ಮ  ರಾಮಸ್ವಾಮಿ ಅದೇ ಒದ್ದೆ ಕಣ್ಣುಗಳಿಂದ ಸ್ಮರಿಸುತ್ತಾರೆ.
              ರಾಮಸ್ವಾಮಿಯವರಿಗೆ ಇದುವರೆಗು ನಿಮಗೆ ಕೈತುಂಬ ಹಣ ನೀಡಿದ ಚಿತ್ರಗಳಾವವು ಎಂದು ಪ್ರಶ್ನಿಸಿದರೆ ನಮ್ಮ ರಾಮಸ್ವಾಮಿ ಕೊಡುವ ಪಟ್ಟಿ ಬಹಳ ದೊಡ್ಡದು. ಅವುಗಳಲ್ಲಿ ಆಯ್ದ ಕೆಲವನ್ನು ನಾನು ನಿಮ್ಮ ಮುಂದೆ  ಇಡಬಹುದಷ್ಟೇ. `ಭೂ ಕೈಲಾಸ', `ಆದರ್ಶ ಸತಿ', `ಸಹೋದರ', ‘ರತ್ನ ಮಂಜರಿ', ‘ಕೃಷ್ಣ ದೇವರಾಯ', `ರತ್ನಗಿರಿ ರಹಸ್ಯ', `ಬೇಡರ ಕಣ್ಣಪ್ಪ', `ಭಕ್ತ ಕುಂಬಾರ', `ಅಮರಶಿಲ್ಪಿ ಜಕಣಾಚಾರಿ', `ತಾಯಿ ನುಡಿ', ಮುತೈದೆ ಭಾಗ್ಯ',
`ನಾಗರಹಾವು', `ಬಂಧನ', `ಸಿಂಹಾದ್ರಿಯ ಸಿಂಹ', `ಆಪ್ತರಕ್ಷಕ'.ಹೀಗೆ ನೆನಪುಗಳು ಅನಂತ.
              ಚಿತ್ರೋದ್ಯಮಿಯಾಗಿ ನೀವು ಹೇಳಿಕೊಳ್ಳುವುದೇನು? ನಿಮ್ಮ ಹಕ್ಕೇನು? ಎಂದು ಕೇಳಿದರೆ ರಾಮಸ್ವಾಮಿ  ಹೇಳುತ್ತಾರೆ, "I am  senior  most  in  the whole kannda  industry  "ಎನ್ನುತ್ತಾರೆ.
              ನಮ್ಮ ರಾಮಸ್ವಾಮಿಗೆ `ಪದ್ಮಭೂಷಣ'ವಂತೂ ಸಿಕ್ಕಿಲ್ಲ, ಐದು ಗಂಡು ಒಂದು ಹೆಣ್ಣು ಹೀಗೆ ಆರು ಮಕ್ಕಳ ತಂದೆಯಾಗುವ ಭಾಗ್ಯ ತಪ್ಪಿಲ್ಲ, ಒಬ್ಬ ಮಗ ತೀರಿದ್ದಾನೆ, ಅಳಿಯ ತೀರಿದ್ದಾನೆ, ಜೀವನ ವ್ಯವಹಾರ ಮುಂದುವರೆದಿದೆ. ಮುಂದುವರೆಯುತ್ತದೆ. ಮುಂದುವರೆಯಲೇಬೇಕು. ನಾವೆಲ್ಲ  ಕನ್ನಡ ಚಿತ್ರರಂಗದ ಈ ಹಿರಿಯ ಜೀವಕ್ಕೆ ಒಂದು ಬಾರಿ "Wish You  happy  long  life "! ಹೇಳಬೇಕಲ್ಲವೇ.           
             
                          



No comments:

Post a Comment