ಅತ್ಯಾಶೆಯೆಂಬುದೆ ಪಾಪ:
ವಿನಯವಿಲ್ಲದ ರಾಜಕಾರಣ, ಪಾಂಡಿತ್ಯ ಹಾಗೂ ಜೀವನ-ವ್ಯವಹಾರ ಉಡಾಫೆಯಾಗಿರುತ್ತದೆ ಎನ್ನುವುದು ನನ್ನ ತಂದೆಯ ಪಾಠ. ವ್ಯಾಯಾಮ ಹಾಗೂ ಕುಸ್ತಿ ಪರಂಪರೆಯ ಈ ನನ್ನ ತಂದೆ ಜಟ್ಟಿಯಂತೆ ಶಾರೀರಿಕವಾಗಿ ಹೇಗೆ ಗಟ್ಟಿಯಾಗಿರಬೇಕು ಎಂಬುದನ್ನು ಕಲಿಸಿದರೋ, ಹಾಗೆಯೇ ಅನುಭಾವದ ಹೊನ್ನ ಹೊಳೆಯಲ್ಲಿ ಹೇಗೆ ಮೀಯಬೇಕು ಎಂಬುದನ್ನೂ ಕಲಿಸಿದರು. ಹೀಗಾಗಿ, ಈ ನೆಲದ ನಿಧಾನಗಳಾದ, ದಿವ್ಯ ನಿಧಿಗಳಾದ, ‘ಸಕಲ ಸಾಧು ಸಂತ ಮಹಾರಾಜ ಕಿ ಜೈ’ ಎನ್ನುವ ಘೋಷವಾಕ್ಯ ನೀಡಿದ ಇಂಚಗೇರಿ ಸಂತ ಪರಂಪರೆ, ಲಿಂಬಾಳದ ಗುರುದೇವ ರಾನಡೆ ಸಂಸ್ಕøತಿ, ಗಾಳಿಯಂತೆ ಸುಳಿದು ಹೋಗುವ ವಾರಕರಿ, ಅಲ್ಲಮಪ್ರಭು, ಬಸವಣ್ಣ, ದಾನಮ್ಮರ ವೈಚಾರಿಕ ಗಾಳಿ, ಶಾಂತೇಶ್ವರ ಸ್ವಾಮಿಗಳ, ಬಂಥನಾಳ ಶಿವಯೋಗಿಗಳ, ಜೇವೂರು ರೇವಣಸಿದ್ಧರ, ರೇವತಗಾಂವ ಸಿಂಹಘಡ ಮಹಾರಾಜರ, ಜೋಳಿಗೆಯ ನನ್ನ ದಾರಿಯಲ್ಲಿ, ಜೀವ ಹನಿಯುವ ‘ಮುಗಿಲ ಜೇನಿನ ಕವಿ ಸಿಂಪಿ ಲಿಂಗಣ್ಣ, ನಿಲ್ಲದ ನವಿಲಿನ ಕಣ್ಣ ಬಣ್ಣಗಳ ಬರೆದ ಮಧುರಚೆನ್ನ, ಸ್ವಾಭಿಮಾನದ ಹಾಡಾಗಿ ಕಾಡುವ ಹಲಸಂಗಿಯ ಖಾಜಾ ಸಾಹೇಬ, ಧೂಲಾ ಸಾಹೇಬ, ಶಿಷ್ಯ ಪರಂಪರೆಯ ಅನಂತ ಲೋಕವನ್ನು ಸೃಷ್ಟಿಸಿದ ಮಹಾಗುರು ಎಂ.ಆರ್. ಜಹಗೀರದಾರರ, ನೆರಳಂತೆ ಹಿಂಬಾಲಿಸಿ ನನ್ನ ಬರಹ ತೀಡಿದ ಪ್ರೊ. ಜಿ.ಬಿ. ಸಜ್ಜನ, ನದಾಫ ಮಾಸ್ತರರು, ದೇವರ ನಿಂಬರಗಿ ಎಂಬ ಬತ್ತದ ತತ್ರಾಣಿಯನ್ನು ನಮ್ಮ ಬಾಲ್ಯದ ಬೆನ್ನಿಗೆ ಕಟ್ಟಿದ ಪ್ರೊ. ಆರ್.ಎಸ್.ಬಿರಾದಾರÀ, ಲೋಕದ ತಾಯಂದಿರ ನೂರು ನೋವಿನ ಬುತ್ತಿ ಬಿಚ್ಚಿಟ್ಟು ನಮ್ಮೂರ ಖಬ್ರಸ್ಥಾನದಲ್ಲಿ ರಾಬಿಯಾಳಂತೆ ಕುಳಿತು ಕಾಡುವ ಜಮೀಲಾ-ಇವರೆಲ್ಲರೂ ನಾನು ನತಮಸ್ಥಕನಾಗಿ, ತಲೆಬಾಗಿ, ವಿನಯದಿಂದ ಬಾಳಬೇಕೆಂದು ನನ್ನ ತಂದೆ ತೋರಿಸಿದ ದಾರಿಯನ್ನೇ ಸೂಚಿಸಿದ ದೊಡ್ಡ ಗುರು-ಬಂಧು ಪರಂಪರೆ.
ಬಸವಯುಗದ ಮಹತ್ವದ ವಚನಕಾರ ಹಾಗೂ ಶರಣ ಹಾವಿನಾಳ ಕಲ್ಲಯ್ಯ ಬರೆಯುತ್ತಾರೆ -
“ಅತ್ಯಾಶೆಯೆಂಬುದೆ ಪಾಪ
ಬೇರೆ ಪಾಪೆಂಬುದಿಲ್ಲ ಕಂಡಿರೆ
ಪರಿಣಾಮವೆಂಬುದೆ ಪರಮಾನಂದ
ಬೇರೆ ಪರಲೋಕವಿಲ್ಲ ಕಂಡಿರೆ ಅಯ್ಯಾ
ಇಹಪರದಾಶೆಯಿಲ್ಲದಿಹುದೆ ಶಿವಯೋಗ
ಮಹಾಲಿಂಗ ಕಲ್ಲೇಶ್ವರ ಬಲ್ಲ, ಸಿದ್ಧಾರಾಮ ಪರಿಯ”
ಆಶೆ, ಆಶಯಗಳಿಲ್ಲದೆ ಜೀವನವಿಲ್ಲ ಬಂಧುಗಳೆ. ಆದರೆ ಅತ್ಯಾಶಯ, ದುರಾಸೆಗಳು ಮೃತ್ಯುವಿಗೆ ದಾರಿ ಎನ್ನುತ್ತಾರೆ ಹಾವಿನಾಳ ಕಲ್ಲಯ್ಯ. ನಿರಾಸೆ ಬೇಡ, ದುರಾಸೆ ಬೇಡ, ಅತ್ಯಾಶಯ ಬೇಡ ಸದಾಶಯವಿರಬೇಕು ಎನ್ನುತ್ತಾರೆ ನಮ್ಮ ಶರಣರು. ಶ್ರೀ ಶಿವಯೋಗೇಶ್ವರ ಪುರಾಣವನ್ನು ಬರೆದ ಇದೇ ತಾಲ್ಲೂಕಿನ ಜೇರುಟಗಿಯ ಶ್ರೀ ಸಿದ್ಧಲಿಂಗ ಕವಿಗಳು, ಕಾಲಜ್ಞಾನವನ್ನು ಸಾರುವ ‘ಡಂಗುರ’ ಬರೆದ ಗಂಗಾಧರ ಕವಿ, ಈ ನೆಲದಿಂದ ಎದ್ದು ಹೋದ ನಾಡಿನ ಹೆಸರಾಂತ ನಿರ್ದೇಶಕ ವಿ. ಶಾಂತಾರಾಮ, ತಪೋವನದ ಶ್ರೀ ಶಿವಕುಮಾರ ಸ್ವಾಮಿಗಳು, ನಮ್ಮ ಮಧ್ಯದ ಹಿರಿಯ ಚಿಂತಕ ಗುರುಲಿಂಗ ಕಾಪಸೆ ಎಲ್ಲರೂ ಸಾರುವುದು ಇದೇ –
“ಓಂ ಸಹ ನಾವವತು,
ಸಹ ನೌಭುನಕ್ತು
ಸಹ ವೀರ್ಯಂ ಕರವಾವಹೈ
ತೇಜಸ್ವಿ ನಾವಧಿತಮಸ್ತು
ಮಾ ವಿದ್ವಿಶಾವಹೈ
ಓಂ ಶಾಂತಿ, ಶಾಂತಿ, ಶಾಂತಿ ಹಿ”
ಬದುಕೆಂದರೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ಸರ್ವೇ ಜನ ಸುಖಿನೋ ಭವಂತು.
ನಿಕೋಡಾಮಸ್ ಎಂಬ ಪರಮ ಪಾಪಿ ಜೀಸಸ್ರನ್ನು ಭೇಟ್ಟಿಯಾಗಿ ಕೇಳಿದ, ‘ಸ್ವಾಮಿ, ಮನುಷ್ಯತ್ವಕ್ಕೆ ಎಂದೂ ಸಲ್ಲದ ಅಪರಾಧಗಳನ್ನು ಪರಮಪಾಪಿಯಾಗಿರುವ ನನಗೆ ಉದ್ಧಾರದ ದಾರಿಯನ್ನು ತೋರಿಸಿರಿ’. ಜೀಸಸ್ ಈ ನಿಕೋಡಾಮಸ್ನಿಗೆ ಒಂದೇ ವಾಕ್ಯ ಹೇಳಿದರು, ‘ಬಿ ಬಾರ್ನ್ ಅಗೇನ್’ಮತ್ತೆ ಹುಟ್ಟು, ಮರುಹುಟ್ಟು ನಿಕೋಡಾಮಸ್’ಎಂದು. ಆದರೆ ಒಮ್ಮೆ ಹುಟ್ಟಿದವ ಮತ್ತೆ ಮತ್ತೆ ಹುಟ್ಟಲು ಸಾಧ್ಯವೆ? ಸಾಧ್ಯವಿದೆ ಎನ್ನುತ್ತಾರೆ ಈ ನೆಲದ ನಿತ್ಯದರ್ಶಿಗಳಾಗಿದ್ದ ಕವಿ ಬೇಂದ್ರೆ. ತನ್ನ ತಪ್ಪಿನ ಪ್ರತಿ ಅರಿವಿನಲ್ಲಿ ಮನುಷ್ಯನ ಮರುಜನ್ಮದ ಅದ್ಭುತ ಸಾಧ್ಯಗಳಿವೆ ಬಂಧುಗಳೆ. ಇದುವೆ ‘ನಿದ್ದಗೊಮ್ಮೆ ನಿತ್ಯ ಮರಣ, ಎದ್ದ ಸಲ ಹೊಸತು ಜನ್ಮ’ಎನ್ನುವುದರ ಅರ್ಥ. ಇದನ್ನೇ ಸಿಂಪಿ ಲಿಂಗಣ್ಣನವರು –
ನಿದ್ದೆಯಲ್ಲಿ ಬಿದ್ದೇಕೆ ಆತ್ಮವೇ
ಏಳು ಆಳದಿಂದ,
ಏಳು, ಏಳು ಜಗದಗ್ನಿಲಿಂಗವೆ
ದೇವಕಿರಣದಿಂದ.
ಎತ್ತು ನಿನ್ನ ಮೋಗವೆತ್ತು
ಹೃದಯ ಧನ ಏರು ಎಸೆದ ತೆಂಗು
ಇಂಥ ಒಂದು ಅರಿವಿನ ಮಹಾಕಾಯಕವನ್ನು ಲಚ್ಚಾಣದ ಸಿದ್ಧಲಿಂಗ ಮಹಾರಾಜರು ಇಂಡಿ ತಾಲೂಕಿನ ಈ ಪುಣ್ಯ ಭೂಮಿಯಲ್ಲಿ ಮಾಡಿದ್ದಾರೆ. ಕಲ್ಯಾಣ ಕ್ರಾಂತಿಯ ವೇಳೆ ಕೊಲೆಯಾದ ಲಕ್ಷದಾ ತೊಂಬತ್ತಾರು ಸಾವಿರ ಶರಣರ ಅವಮಾನಕ್ಕೆ ಇಡೀ ನಾಡಿನ ನೈತಿಕ ಜವಾಬ್ದಾರಿಯನ್ನು ಹೊತ್ತು ಲಕ್ಷದಾ ತೊಂಬತ್ತಾರು ಸಾವಿರ ಗಣಗಳ ಸಾಮೂಹಿಕ ಇಷ್ಟಲಿಂಗ ಪೂಜೆ, ಸರ್ವಧರ್ಮ ಸಮ್ಮೇಳನ, ಉಚಿತ ಪ್ರಸಾದ ನಿಲಯ ಈ ಪ್ರದೇಶದ ಶೈಕ್ಷಣಿಕ ಹಸಿವು ನೀಗಿಸಲು ಶಿಕ್ಷಕರ ತರಬೇತಿ ಕಾಲೇಜುಗಳಂಥ ಸಂಕಲ್ಪಗಳಿಗೆ ಕಾರಣೀಭೂತರಾದವರು ಲಚ್ಚಾಣದ ಸಿದ್ಧಲಿಂಗ ಮಹಾರಾಜರು.
ಯಾರದೋ ತಪ್ಪಿಗೆ ಬದುಕ ಬಸಿದ ಅರಿವಿನ ಮಹಾ ತವನಿಧಿ ಈ ಪುಣ್ಯಾತ್ಮರು. ಇದು ಮನುಷ್ಯನಾಗಿರುವ ಪ್ರತಿಯೊಬ್ಬನಿಗೂ ಸಾಧ್ಯವಿರುವ ದಾರಿ.
ನಾವು ಮತ್ತೆ ಮತ್ತೆ ಭಗ್ನಗೊಂಡಿದ್ದೇವೆ :
ರಾಷ್ಟ್ರಕೂಟರ ಮೂರನೇ ಕೃಷ್ಣನ ಕಾಲದ ಅಗ್ರಹಾರ ಸಾಲೋಟಗಿಯ 148 ಕೋಣೆಗಳ ಪ್ರಾಚೀನ ಮಹಾವಿದ್ಯಾಲಯದಲ್ಲಿ, ಕಲ್ಯಾಣಿ ಚಾಲುಕ್ಯರ ಸಂಸ್ಕøತಿ ಕೇಂದ್ರದಲ್ಲಿ ಕಾಲದಿಂದ ರಾನಡೆಯವರು ಬಾಹು ಮಹಾರಾಜರ ಚಿತಾಭಸ್ಮವನ್ನು ತಂದಿರಿಸಿದ ನಿಂಬಾಳದಲ್ಲಿ, ಕರ್ನಾಟಕದ ಕೊನೆಯ ಹಳ್ಳಿಯಾದ ರೇವತಗಾಂವದಲ್ಲಿ, 1883ರಲ್ಲಿ ಸ್ಥಾಪನೆಯಾಗಿ 135 ವರ್ಷಗಳ ನಿರಂತರ ಅಧ್ಯಯನ ಅಧ್ಯಾಪನದಲ್ಲಿ ತೊಡಗಿಸಿಕೊಂಡ ನಿಂಬರಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಇಂದು ಈ ತಾಲೂಕಿನ ಮಹತ್ವದ ವಿದ್ಯಾಕೇಂದ್ರಗಳಾಗುತ್ತಿರುವ ಚಡಚಣ, ಇಂಡಿಗಳಲ್ಲಿ ನಡೆಯುತ್ತಿರುವುದು ಇದೇ ಅರಿವು ಬಿತ್ತುವ, ಜ್ಞಾನದ ದೀಪ ಹೊತ್ತಿಸುವ ಕ್ರಿಯೆ. ಇವು ಮನುಷ್ಯತ್ವದ ಅರಿವಿನ ಕೇಂದ್ರಗಳು ಬಂಧುಗಳೆ.
ಆದರೆ ನಾವು ಎಲ್ಲ ಕಾಲಕ್ಕೂ ಕಡೆಗಣಿಸಲ್ಪಟ್ಟಿದ್ದೇವೆ. ಸಾಂಕ್ರಾಮಿಕವಾಗಿ ಓದಿನ ವ್ಯಾಪ್ತಿಯಿಂದ ಹೊರಗುಳಿದಿದ್ದೇವೆ. ಕನ್ನಡದ ಆಧುನಿಕ ಸಾಹಿತ್ಯ ಸಂದರ್ಭದಲ್ಲಿಯೂ ಅಷ್ಟೇ, ನಮ್ಮ ಈ ಪ್ರದೇಶದ್ದು ಸ್ವತಂತ್ರವಾದ ನಿಲುವು ಮತ್ತು ಭಿನ್ನ ಧೋರಣೆ. ಕನ್ನಡದ ನವೋದಯ ಸಾಹಿತ್ಯದ ಇತಿಹಾಸವನ್ನೋದಿದರೆ ಚಾರಿತ್ರಿಕ ದಾಖಲೆಯಲ್ಲಿಯೂ ನಮಗಾದ ಅನ್ಯಾಯ ಮತ್ತು ಕಡೆಗಣನೆ ಅರಿವಿಗೆ ಬರುತ್ತದೆ. ನಿಜವಾದ ಅರ್ಥದಲ್ಲಿ ನಮ್ಮ ಈ ಭಾಗದ ಮಹತ್ವದ ಸಂಕಲನವಾದ ‘ಗರತಿಯ ಹಾಡು’ ಹಾಗೂ ಮಹತ್ವದ ಕವಿ ಮಧುರಚೆನ್ನ ಸಾಹಿತ್ಯ ವಲಯದಲ್ಲಿ, ಕಾವ್ಯ ವಿಮರ್ಶೆಯ ಯಾವ ಸೈದ್ಧಾಂತಿಕ ನೆಲೆಯ ಮೇಲೆ ಚರ್ಚೆಗೊಳಗಾಗಬೇಕಾಗಿತ್ತೋ ಅದು ಇಂದಿಗೂ ಸಾಧ್ಯವಾಗಲಿಲ್ಲ. ಈ ಬೆಳವಣಿಗೆಯ ಎರಡನೆಯ ಸ್ತರದಲ್ಲಿದ್ದ ರಾಮಚಂದ್ರ ಬೇಂದ್ರೆ ಹಾಗೂ ಅವರ ಕಾವ್ಯ ವಿಜ್ರಂಭಿಸಿತೇ ವಿನಃ ಶುದ್ಧ ಆಧ್ಯಾತ್ಮಿಕ ನೊರೆಯ ಮಧುರಚೆನ್ನ ಮುಂಚೂಣಿಗೆ ಬರಲೇ ಇಲ್ಲ.
ನಮ್ಮ ವರ್ತಮಾನದ ಸಾಹಿತ್ಯಿಕ ಸಂದರ್ಭವೇನೂ ಈಗಲೂ ಹಿಂದಿಗಿಂತಲೂ ಉತ್ತಮವಾಗಿಲ್ಲ. ಇಂದಿಗೂ ಗಡಿಭಾಗದಲ್ಲಿ ಹುಲುಸಾಗಿ ನಿರ್ಮಾಣವಾದ ಮಕ್ಕಳ ಸಾಹಿತ್ಯ ನಮ್ಮ ರಾಜ್ಯದ ಯಾವ ವಿಶ್ವವಿದ್ಯಾಲಯಗಳ ಪಠ್ಯಕ್ರಮ ಅಥವಾ ಸಂಶೋಧನೆಯ ಗಂಭೀರ ವಸ್ತುಗಳಾಗಿರುವ ಸಾಕಷ್ಟು ಉದಾಹರಣೆಗಳಿಲ್ಲ. ಇಲ್ಲಿಯ ಶಿಸು ಸಂಗಮೇಶ, ಈಶ್ವರಚಂದ್ರ ಚಿಂತಾಮಣಿ, ಶರಣಪ್ಪ ಕಂಚ್ಯಾಣಿ, ಡಾ. ಆರ್.ಸಿ.ಮುದ್ದೇಬಿಹಾಳ, ಡಾ. ಎಮ್.ಎನ್.ವಾಲಿ, ಶ್ರೀ ಪುರುಷೋತ್ತಮ ಗಲಗಲಿ, ಶ್ರೀ ವಿರೇಂದ್ರ ಸಿಂಪಿ, ಪ್ರೊ. ಆರ್.ಕೆ ಕುಲಕರ್ಣಿ, ಶ್ರೀ ಎಸ್.ಕೆ.ಕೊಪ್ಪ ಹಾಗೂ ಇನ್ನೂ ಅನೇಕ ಮಹನೀಯರು ನಮ್ಮ ಸಾಹಿತ್ಯ ಚಿಂತನೆಯ ಗಂಭೀರ ಚಿಂತನೆಗೆ ಒಳಪಡಬೇಕಿದೆ.
ಕವಿ-ಕಾವ್ಯಕ್ಕೆ ಅಥವಾ ಯಾವುದೇ ಸೃಜನಶೀಲ ಕ್ರಿಯೆಗೆ ದೇಶ-ಕಾಲಗಳು ಅಡ್ಡಿಯಾಗಬಾರದು. ಅವು ಪಸರಿಸಿಕೊಳ್ಳಬೇಕಾದ ಬೆಳಕು. ಇಂದಿಗೂ ನನಗೆ ಈ ಅರ್ಥದಲ್ಲಿ ಕನ್ನಡ ಚಿತ್ರರಂಗ ಮತ್ತು ಅದರ ಇತಿಹಾಸ ಅಪೂರ್ಣವೆನಿಸುತ್ತದೆ. ಕೇವಲ ಹಾಸನ, ಮೈಸೂರು, ಮಂಡ್ಯ ಹಾಗೂ ಬೆಂಗಳೂರಿಗೆ ಸೀಮಿತವಾದ ಈ ಕ್ಷೇತ್ರದಲ್ಲಿ ಈ ಭಾಗದ ಯಾವುದೇ ಪ್ರತಿಭೆ ಗಟ್ಟಿಯಾಗಿ ನಿಲ್ಲಲಾಗಲಿಲ್ಲ, ವಿಸ್ತರಿಸಿಕೊಳ್ಳಲಾಗಲಿಲ್ಲ. ಚಿತ್ರರಂಗದಲ್ಲಿ ವಯಸ್ಸಾದಂತೆ ನಿರ್ಲಕ್ಷಿತವಾದ ಎಲ್ಲ ಕಲಾವಿದರಿಗೂ ತನ್ನ ಜಾತ್ರೆಗಳಿಗೆ ಕರೆಯಿಸಿ, ಮೆರೆಸಿ ಅನ್ನದ ಭರವಸೆ ನೀಡಿದ ಉತ್ತರ ಕರ್ನಾಟಕದ ಈ ಪ್ರದೇಶ, ಜೀವನ, ಆಚಾರ, ವಿಚಾರ ನಂಬಿಕೆ ಹೋರಾಟಗಳು ಕನ್ನಡ ಚಿತ್ರರಂಗದ ಕಾಳಜಿಗಳಾಗಲೇ ಇಲ್ಲ. ‘ಸಿನಿಮಾ’ಎಂಬ ಮಹತ್ವದ ಜ್ಞಾನದ ಶಾಖೆ ತಂತ್ರಜ್ಞಾನ ಅಕಾಲಿಕ ದುರ್ಮರಣವನ್ನಪಿತೇ ವಿನಃ ಎಲ್ಲವನ್ನೂ ಒಳಗೊಳ್ಳುವ ವಿಶಾಲ ಧರ್ಮವನ್ನು ಬದುಕಲೇ ಇಲ್ಲ.
ಉತ್ತರ ಕರ್ನಾಟಕವನ್ನು ಕೇವಲ ಸಿನಿಮಾ ಹಂಚಿಕೆಯ ಮಾರುಕಟ್ಟೆಯಾಗಿಸಿಕೊಂಡು ಇಲ್ಲಿಯ ಬಡತನ, ಬರಗಾಲಗಳನ್ನೇ ಬಂಡವಾಳವಾಗಿಸಿಕೊಂಡು ಪ್ರಶಸ್ತಿಗಳನ್ನು ಬಾಚಿಕೊಂಡರು. ಭೀಮಾ ತೀರದ ಸಂಸ್ಕøತಿಯನ್ನು ವಿಕೃತವಾಗಿ ಬಿಂಬಿಸಿದರು. ಹೀಗಾಗಿ ಕಳೆದ ಅನೇಕ ದಶಕಗಳಿಂದ ಇಲ್ಲಿಯ ಪ್ರತಿಭೆಗಳು ಬಾಲಿವುಡ್ದತ್ತ ಮುಖ ಮಾಡಲು ಕಾರಣರಾದರು.
ಗಡಿ ಕರ್ನಾಟಕ ನಿರಂತರವಾಗಿ ಅನೇಕ ಸಂದರ್ಭ ಕಾರಣಗಳನ್ನು ಒಡ್ಡಿ ಭಗ್ನಗೊಳಿಸುತ್ತಲೇ ಬಂದಿದ್ದಾರೆ. ಹಿಂದೊಮ್ಮೆ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ನಾವೆಂದು ರಾಜಕೀಯ ಪ್ರವರ್ಧಮಾನಕ್ಕೆ ಬರದಂತೆ ಈ ಪ್ರದೇಶವನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ಎಂದು ತುಂಡರಿಸಲಾಯಿತು. ಸಾಹಿತ್ಯಿಕವಾಗಿ ನಮ್ಮನ್ನು ನಡುಗಡ್ಡೆಯಾಗಿಸಲಾಯಿತು. ಈಗ ಮತ್ತೆ ಎರಡು ಪದಗಳನ್ನು ಮುಂದಿಟ್ಟುಕೊಂಡು ಸಮಾಜ ವಿಕೇಂದ್ರಿಕರಣದ ಹುನ್ನಾರಗಳನ್ನು ಮಾಡಲಾಗುತ್ತಿದೆ.
ನಾವು ಬರೀ ಓದಲು ಹುಟ್ಟಿಲ್ಲ:
ಕರ್ನಾಟಕದ ಈ ಗಡಿಯಿಂದ ಮಧ್ಯ ಕರ್ನಾಟಕದವರೆಗೂ ಒಬ್ಬನೇ ಒಬ್ಬ ರಾಷ್ಟ್ರಕವಿ ಇಲ್ಲ. ಆದರೆ ತುಂಗಭದ್ರೆಯಿಂದ ಕಾವೇರಿಯವರೆಗೆ ಇಬ್ಬರು ರಾಷ್ಟ್ರಕವಿಗಳು ಒಂದೇ ಜಿಲ್ಲೆಯಿಂದ ಸಿಗುತ್ತಾರೆ. ಎಷ್ಟು ವಿಚಿತ್ರವಾಗಿದೆ. ಈಗ ಹೇಳಿ, ಎಷ್ಟು ಪ್ರಾಮಾಣಿಕವಾಗಿವೆ ನಮ್ಮ ಸಾಹಿತ್ಯಿಕ ಮಾನದಂಡ? ವಿಮರ್ಶೆಯ ಪರಿಭಾಷೆ? ವಿಮರ್ಶಕರ ದೃಷ್ಟಿಕೋನಗಳು? ನಾವು ಬರೀ ಓದಲು ಹುಟ್ಟಿಲ್ಲ. ಓದಿಸಿಕೊಳ್ಳುವ ಪ್ರತಿಭಾ ಸಂಪನ್ನತೆ ನಮ್ಮಲ್ಲಿಯೂ ಇದೆ
ಅಖಂಡವಲ್ಲದ್ದು ಸಾಹಿತ್ಯವೂ ಅಲ್ಲ, ಧರ್ಮವೂ ಅಲ್ಲ ಅದು ಮನುಷ್ಯತ್ವವೂ ಅಲ್ಲ.
ಅಪಾರ ಸಂಖ್ಯೆಯ ಕೃತಿಗಳು ಅನ್ಯ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಗೊಳ್ಳುತ್ತವೆ. ಕನ್ನಡದಿಂದ ಅನ್ಯಭಾಷೆಗೆ ಭಾಷಾಂತರವಾಗುವ ಕೃತಿಗಳು ಬೆರಳಣಿಕೆಯಷ್ಟೇ. ಅದರಲ್ಲಿ ಗಡಿ ಪ್ರದೇಶದ ಲೇಖಕರುಗಳ ಎಷ್ಟು ಕೃತಿಗಳು ನೆರೆಯ ಭಾಷೆಗೆ ಭಾಷಾಂತರಿಸಲ್ಪಟ್ಟವೆ?
ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಧಾರವಾಡ, ಮೈಸೂರು ಬೆಂಗಳೂರುಗಳಲ್ಲಿ ಹುಟ್ಟಿ ಎಲ್ಲ ಸಾಂಸ್ಕøತಿಕ ಗೌರವಗಳನ್ನು ದಕ್ಕಿಸಿಕೊಂಡು ವಿಶ್ವವ್ಯಾಪಿಯಾಗುವ ಲೇಖಕ ನಮ್ಮ ನಗರ-ಹಳ್ಳಿಗಳ ವೃತ್ತ-ಪುತ್ಥಳಿಗಳಾಗಿಯೂ ಗೌರವಿಸಲ್ಪಡುತ್ತಾನೆ, ಆದರೆ ಗಡಿ ಪ್ರದೇಶದಲ್ಲಿ ಹುಟ್ಟಿ ಬಡತನ-ಬರಗಾಲಗಳನ್ನುಂಡೇ ಬೆಳೆಯುವ ಈ ಪ್ರದೇಶದ ಲೇಖಕರುಗಳಿಗೆ ನಮ್ಮ ನಾಡಿನ ಅದೆಷ್ಟು ಸಾಂಸ್ಕøತಿಕ ನಗರಗಳಲ್ಲಿ ಈ ಗೌರವ ದಕ್ಕಿದೆ? ಇದು ಪ್ರಶ್ನಿಸಿಕೊಳ್ಳಬೇಕಾದುದೆ.
ನಮ್ಮ ಸಾಹಿತ್ಯ ಅನ್ಯರಂತಿರಲಿಕ್ಕಿಲ್ಲ, ಇರಬೇಕಾಗಿಯೂ ಇಲ್ಲ. ಅದು ನನ್ನ ಬೆವರ ವಾಸನೆ. ಅದು ನನ್ನ ಪ್ರದೇಶ ನನ್ನ ಚರ್ಮಕ್ಕಂಟಿಸಿದ ಬಣ್ಣ. ಭಿನ್ನವಾಗಿರುತ್ತದೆ. ಭಿನ್ನತೆಯೇ ನಮ್ಮ ಅಸ್ಮಿತೆಯ ಸಂಕೇತವಾಗಿರುತ್ತದೆ.
ಜಗತ್ತಿನ ಎಲ್ಲ ಮುಸ್ಲಿಂರಿಗೆ ಪವಿತ್ರವೆನ್ನಿಸುವ ಮಕ್ಕಾದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ(ಅಬ್ದುಲ್ ಕಲಾಂ ಅಜಾದ್) 1888 ರಿಂದ 1958 ರ ಅವಧಿಯಲ್ಲಿ ಬಂದು, ಭಾರತದಲ್ಲಿ ನೆಲೆಸಿ ಈ ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿ, ಅರೆಬಿಕ್ನಲ್ಲಿ ಒಂದು ಮಾತನ್ನು ಹೇಳಿದರು – ‘ವಹದಾಯ ಲಾ ಶರೀಕ್’ ಅಂದರೆ ‘ಅನ್ಯವಿಲ್ಲದಾತ’ ಎರಡೆಂಬುದಿಲ್ಲದಾತ. ಇದನ್ನೇ ನಮ್ಮ ಸಿದ್ಧೇಶ್ವರ ಶ್ರೀಗಳು ‘ಅದ್ವೈತ’ ಎಂದು ನಿತ್ಯ ಹೇಳುವುದು. ಭಗವಾನ್ ಶಂಕರರ ನಂತರ ಈ ನೆಲದ ಅದ್ವೈತಿಗಳು ಶ್ರೀ ಸಿದ್ಧೇಶ್ವರರು. ಬಿಜಾಪುರ ಜಿಲ್ಲೆಯ ಮಹತ್ವದ ಐದು ತಾಲೂಕುಗಳಲ್ಲಿ ಒಂದಾದ ಇಂಡಿ ತಾಲೂಕು ಈ ಪರಂಪರೆಯನ್ನು ಅನೂಚಾನವಾಗಿ ನಂಬಿದೆ. 78,925 ಕುಂಟುಂಬಗಳ, 4,21,169 ಜನಗಳ ಈ ಭೂಮಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು, ಸಾಮರಸ್ಯವನ್ನು ಸಂದೇಶವಾಗಿ ನೀಡಿದೆ. ಹೀಗಾಗಿಯೇ ಇದರ ಕುರಿತು ನಾನು ಹಿಂದೊಮ್ಮೆ ಹೇಳಿದ್ದೆ -
ಈ ನೆಲವೆಂದರೆ ಮುಗಿಲೆತ್ತರದ ಮಾತು
ಈ ಜಲವೆಂದರೆ ಎದೆಯ ಹೊಲೆತೊಳೆದ ಹಾಡು
ಕಾಡು – ಕಾಡು ಕನಸುಗಳಿಗೆ ಕಾರುಣ್ಯದ ಕೈ ಇದುವೆ
ಹಾಡು - ಪಾಡು ಮನಸುಗಳಿಗೆ ಮೊದಲ ಮೈದಾನ ಇದುವೆ
ಇಲ್ಲಿ ಜಗಳ, ಇಲ್ಲಿ ಪ್ರೀತಿ ಇಲ್ಲೇ ದಕ್ಕಿತು ಬದುಕ ರೀತಿ
ಹಣ್ಣಾಗಿಸು ಓ ಪುಣ್ಯದ ಹಿಡಿ ಮಣ್ಣೆ
ಸಣ್ಣಾಗಿಸು ಸಾಸಿರದಲಿ ನಿನ್ನ ವಿನಯದ ಹೆಣ್ಣಾಗಿಸು
ನಿನ್ನೆದೆಯ ರುದ್ರವೀಣೆಯ ಸ್ವರಕೆ ತಂತಿಯಾಗಿಸಿ
ಜಗದ ಸಂತೆಯ ಮಿಗೆಯ ಮೀರುವ ದಾರಿ ತೋರಿಸು
ಭೀಮಾತೀರದ ಬೆಳಕು:
ಇಷ್ಟೊಂದು ಜೀವ ಜೀವನದ ಸಂಸ್ಕøತಿಯನ್ನು ಪೊರೆದು ಸಾಕಿ-ಸಲುಹಿದವರ್ಯಾರು ಬಂಧುಗಳೆ? ಕರಕಿಯ ಕುಡಿಯಂತೆ ನಮ್ಮ ಸಂಸಾರಗಳು ಹಬ್ಬಲು ಕಾರಣಳಾದವಳು ತಾಯಿ ಭೀಮೆ. ಅವಳ ತೀರ ಎನ್ನುವುದು, ‘ಭೀಮಾತೀರ’ ಎನ್ನುವುದು ಬದುಕಿನ ಸಂಕೇತವೇ ವಿನಃ ಭಯದ ಸಂಕೇತವಲ್ಲ. ಭೀಮಾತೀರ ಎನ್ನುವುದು ರೋಚಕತೆಯಲ್ಲ, ರೋಮಾಂಚನವಲ್ಲ, ಇದು ಬಡತನವ ರಮಿಸುವ ಹಾಡು. ಇದು ಬೆಂಗಳೂರಿಗರ ಬಂಡವಾಳವಲ್ಲ, ಪತ್ರಿಕೆಗಳ ನೆತ್ತರ ಪುಟವಲ್ಲ, ಬಂದೂಕು-ಬಾಂಬು-ಭೀಬತ್ಸದ ಮಾತಲ್ಲ, ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಬುದ್ಧನ, ಆತನ ಶಾಂತಿ ವಿಹಾರ ಅವಶೇಷಗಳಿರುವ ಪವಿತ್ರ ನೆಲ. ಇಂಥ ಜೀವನದಿಯ ಸ್ಮರಣೆ ಇಲ್ಲಿ ಅತ್ಯಾವಶ್ಯಕ ಬಂಧುಗಳೆ.
ನಮ್ಮ ಈ ಭೀಮಾನದಿ ಕೃಷ್ಣಾನದಿಯ ಉಪನದಿಯಾಗಿ ಹರಿದು ತನ್ನೆರಡು ತೋಳುಗಳಲ್ಲಿ ಭಾಷಾಧಾರಿತವಾಗಿ ವಿಂಗಡಿಸಲ್ಪಟ್ಟ ಕರ್ನಾಟಕ ಮತ್ತು ಮಹಾರಾಷ್ಟ್ರಗಳೆಂಬ ಎರಡು ಸಂಸ್ಕøತಿಗಳನ್ನು, ಎರಡು ರಾಜ್ಯಗಳನ್ನು ಜೊತೆಗೆ ಕನ್ನಡ ಹಾಗೂ ಮರಾಠಿ ಎಂಬ ಎರಡು ಭಾಷೆಗಳನ್ನು ನೀರುಣಿಸಿ ಸಲಹುತ್ತಾಳೆ. ನಾವು ಮೃಗಗಳೊ, ಮನುಷ್ಯರೊ ಅದು ಭೀಮಾ ನದಿಯ ಪ್ರಶ್ನೆಯಲ್ಲ ಬಂಧುಗಳೆ. ಆದರೆ ಈ ನದಿಯ ನೀರನ್ನು ನೆತ್ತರಾಗಿಸುವ, ಇಲ್ಲಾ ಪವಿತ್ರ ತೀರ್ಥವಾಗಿಸುವ ವಿವೇಚನೆ, ಸಂಸ್ಕಾರ, ನಮ್ಮ-ನಮ್ಮಗಳದ್ದು.
ನಮ್ಮ ಧರ್ಮ, ನದಿಯ ಧರ್ಮವಾಗಿರಬೇಕು ಎಂದು ಹೇಳುತ್ತಾರೆ ನನ್ನ ಪ್ರೀತಿಯ ಕವಿ ಸುಬ್ಬಣ್ಣ ರಂಗನಾಥ ಎಕ್ಕುಂಡಿ. ‘ಬೆಸೆದ ಬಂಡೆ’ಎನ್ನುವ ಕವಿತೆಯಲ್ಲಿ ಅವರು ಹೇಳುತ್ತಾರೆ –
ದೂರವಿದ್ದವರನ್ನು ಹತ್ತಿರಕ್ಕೆ ತರಬೇಕು
ಹರಿವ ಹೊಳೆಗೂ ಉಂಟು ಎರಡು ತೋಳು
ನೆಲವನಪ್ಪಿದ ಎರಡು ದಂಡೆಗಳ ಬಾಂಧವ್ಯ
ಬೆಸೆಯ ಬೇಕಲ್ಲವೆ? ನಮ್ಮ ಬಾಳು
ನಮಗೆಲ್ಲ ಅತ್ಯಂತ ಮೋಕ್ಷ ಪ್ರಧಾನವಾದ ದ್ವಾದಶಲಿಂಗಗಳಲ್ಲಿ ಒಂದು ಲಿಂಗ ಇದೇ ಭೀಮಾ ತೀರದ ಭೀಮಾಶಂಕರದಲ್ಲಿದೆ. ಪ್ರಸಿದ್ಧ ಶಕ್ತಿಪೀಠವಾದ ಚಂದ್ರಲಾ ಪರಮೇಶ್ವರಿಯ ದೇವಸ್ಥಾನವೂ ಇದೆ. ಭೀಮಾ ತೀರದ ಸನ್ನತಿ ಗ್ರಾಮದಲ್ಲಿದೆ. ಇದೇ ಗ್ರಾಮದಲ್ಲಿ ಬೌದ್ಧ ವಿಹಾರಗಳಿದ್ದ ಬಗ್ಗೆ ಅವಶೇಷಗಳು ಭಾರತೀಯ ಪ್ರಾಚ್ಯ ಸಂಶೋಧಕರಿಗೆ ದೊರಕಿವೆ. ಇಂಥ ಈ ಪವಿತ್ರ ನದಿ ಇಂದು ನಮಗೆ ದಕ್ಕಿದಷ್ಟೇ ಸುಖದಾಯಿಯಾಗಿ, ಬದುಕು ರಮಿಸುವ ತಾಯಿಯಾಗಿ ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ ಗೆಳೆಯರೆ. ಇಂಥ ನದಿಯೇ ಬತ್ತಿದರೆ, ಕುಡಿಯುವ ನೀರೇ ವಿಷವಾದರೆ, ರಕ್ತಮಯವಾದರೆ ಬದುಕು ಬೆಳೆಯುವುದೆಲ್ಲಿ?
ಕರ್ನಾಟಕದ ಈ ಮೂಲೆಯಲ್ಲಿ ಆತ್ಮಶೋಧದ ಬೀಜಗಳನ್ನು ಬಿತ್ತಿದ, ‘ಜಗದ ಜೀವವೇ ಜೀವ, ಜಗವೇ ದೇವ ದೇಹ’, ಎಂದು ಹಾಡಿದ ಮಧುರಚೆನ್ನರ ಸಾಹಿತ್ಯ ಓದುತ್ತ, ಕುಲಗುರುವಿನ ಸ್ಥಾನದಲ್ಲಿದ್ದ ಶ್ರೀ ಎಂ.ಆರ್. ಜಹಗೀರದಾರ, ಸಾಹಿತ್ಯದಲ್ಲಿ ಈ ಭಾಗಕ್ಕೆ ಹಿಮಾಲಯ ಸದೃಶ್ಯರಾಗಿದ್ದ ಸಿಂಪಿ ಲಿಂಗಣ್ಣ, ಇವರುಗಳ ಸಾಹಿತ್ಯ ಕ್ಷೇತ್ರಕ್ಕೆ ನಾನು ಪ್ರವೇಶಿಸುವಾಗ ಕನ್ನಡ ಸಾಹಿತ್ಯ ಬಂಡಾಯ-ದಲಿತದ ಹೊರಳು ಅವಧಿಯಲ್ಲಿದ್ದರೂ ಅದರ ಪರಿಣಾಮ ಹಾಗೂ ಪ್ರಭಾವಗಳೇನೂ ಈ ಪ್ರದೇಶದ ಮೇಲಾಗಲಿ, ನನ್ನಂಥ ಯುವ ಬರಹಗಾರನ ಮೇಲಾಗಲಿ ಇರಲ್ಲಿಲ್ಲ ಎಂದೇ ಹೇಳಬೇಕು.
‘ಚಡಚಣ’ ಎನ್ನುವ ಮಂತ್ರಬಳ್ಳಿಯ ನೆರಳು:
ನಾನು ಗಮನಿಸಿದಂತೆ ಮೊದಲಿನಿಂದಲೂ ಈ ಪ್ರದೇಶ ಹೀಗೆಯೇ. ಇಲ್ಲಿಯ ಸಾಹಿತ್ಯದ ಶೋಧವೇ ಭಿನ್ನ. ಒಂದು ಕಾಲಕ್ಕೆ ಗುರುದೇವ ರಾನಡೆಯವರ ಆಶ್ರಮದಲ್ಲಿ ನಡೆಯುತ್ತಿತ್ತು ಎನ್ನಲಾದ ತಾಯಿತ ಕಟ್ಟುವ ಚಟುಚಟಿಕೆಯ ವಿರುದ್ಧ ಬಂಡೆದ್ದು, ಮಧುರಚೆನ್ನರ ನೇತೃತ್ವದಲ್ಲಿ ಅರವಿಂದಾಶ್ರಮದ ಆತ್ಮಶೋಧದ ಆಚಾರವನ್ನೊಪ್ಪಿಕೊಂಡ ಇಲ್ಲಿನ ಸಾಹಿತ್ಯ ತೀರ ಲೌಕಿಕವಾದುದುರೆಡೆಗೆ; ಘೋಷಣೆ, ಚಳುವಳಿಗಳೆಡೆಗೆ ಆಸಕ್ತಿ ವಹಿಸಿದ್ದು ಕಡಿಮೆ. ಆಧ್ಯಾತ್ಮದ ವಾಸನೆ ಇಲ್ಲದ ಏನನ್ನೂ ಇಲ್ಲಿಯ ಜನರು ಆಸ್ವಾದಿಸಲಾರರು, ಗೌರವಿಸಲಾರರು.
ಬಂಧುಗಳೆ, ನನ್ನ ಬಾಲ್ಯದ ವೇಳೆಯಲ್ಲಿ ನನ್ನೂರು ಚಡಚಣ ಸಾಹಿತ್ಯಿಕವಾಗಿ, ಸಂಸ್ಕøತಿಕವಾಗಿ ತುಂಬ ಅದ್ಭುತವಾಗಿತ್ತು. ಅಕ್ಕಮಹಾದೇವಿಯ ವಚನದ ಭಾಷೆಯಲ್ಲಿಯೇ ಹೇಳಬೇಕೆಂದರೆ ‘ಸಂತೆಯಲ್ಲಿ ಸಣ್ಣದೊಂದು ಮನೆಯ ಮಾಡಿ’ದಂತಿದ್ದ ನಾನು ಕಲಿತ ಬಾಲವಾಡಿ, ನನ್ನ ಶಾಲೆಗಳಿಗೆ ಶಬ್ಧಸೂತಕದ ಛಾಯೆ ಇರಲಿಲ್ಲ. ಅವೆಲ್ಲ ಶಬ್ಧಶಃ ಗಿಜಗನ ಗೂಡುಗಳು.
ಜಂಗಮ ಮಗುವಾಗಿ ಬಹುತೇಕ ಈ ಊರಿನ ಎಲ್ಲ ಜಾತಿ ಜನಾಂಗಗಳ ತಾಯಂದಿರ ಮನೆಯೂಟ ಮಾಡಿದ್ದೇನೆ ನಾನು. ಚಕ್ಕಡಿ ಹೊಡೆಯುವ ಹಮಾಲಿಗಳು ನನ್ನ ಕುಸ್ತಿಯ ಗುರುಗಳಾಗಿದ್ದರು. ಈ ಊರಿನ ಬಹುಪಾಲು ದೇವಾಲಯಗಳ ಪುರಾಣ ಭಜನೆಗಳಲ್ಲಿ ಹಾಡು ಹೇಳಿದ್ದೇನೆ ನಾನು. ಈ ಕಾಲೇಜಿನ ನನ್ನ ತಂದೆಯ ಸಹೋದ್ಯೋಗಿಗಳೊಂದಿಗೆ ಸೇರಿ ಬಾಲಕಲಾವಿದನಾಗಿ ನಾಟಕ ಮಾಡಿದ್ದೇನೆ. ಭಾಷಾ ಶುದ್ಧಿಯನ್ನು ಕಲಿತಿದ್ದೇನೆ. ಕಷ್ಟಗಳನ್ನು ಎದೆಗೊಟ್ಟು ಎದುರಿಸುವುದನ್ನು, ಗೌರವವನ್ನು ತಲೆ ಬಾಗಿ ಸ್ವೀಕರಿಸುವುದನ್ನು ಕಲಿಸಿದ ಮಹಾನ್ ಭೂಮಿ ಇದು.
ಖಂಡಿತವಾಗಿಯೂ ಸಾರ್ವಜನಿಕರ ದಾಳಿಗೊಳಗಾಗಿದ್ದ ನಮ್ಮ ಶಾಲೆಗಳಲ್ಲಿ ಆಗ ಸ್ವಚ್ಛತೆಯಿರಲಿಲ್ಲ, ಮೂಲಭೂತ ಸೌಕರ್ಯಗಳಿರಲಿಲ್ಲ, ಕಿಟಕಿ-ಬಾಗಿಲುಗಳಿರಲಿಲ್ಲ. ಆದರೆ ಇಂದು ಬೆಂಗಳೂರಿನ ಅತ್ಯಂತ ಸುಸಜ್ಜಿತ ಶಾಲೆಗಳಲ್ಲಿಯೂ ಇಲ್ಲದ ಅಚ್ಚ ಕನ್ನಡದ ಬೆಳಕಿತ್ತು, ಜನಸಾಮಾನ್ಯರ ಮಕ್ಕಳಿಂದಲೇ ತುಂಬಿದ್ದ ನಾ ಕಲಿತ ಚಡಚಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಬಡತನವಿತ್ತೇ ವಿನಃ ಭಾವ-ಬುದ್ಧಿಯ ದಾರಿದ್ರ್ಯವಿರಲಿಲ್ಲ. ಎಲ್ಲೆಂದರಲ್ಲಿ ನುಸುಳುವ ಧೂಳು, ಮಣ್ಣು, ಶಾಲೆಯ ಎದುರೇ ಸದಾ ಮೈದುಂಬಿ ಹರಿಯುತ್ತಿದ್ದ ಹಳ್ಳ, ದಿವಂಗತ ಜೀವರಾಜ ಜೋಶಿಯವರ ಕಾಲಕ್ಕೆ ನೆಡೆಸಿದವುಗಳು ಎನ್ನಲಾದ ಸಾಲುಸಾಲು ಹುಣಸೆ ಮರಗಳ ನೆರಳು, ಕುಣಿ-ಕುಣಿದೇ ಪಾಠ ಮಾಡುತ್ತಿದ್ದ ಅಚ್ಚ ಬಿಳಿ ಬಟ್ಟೆಯಲ್ಲಿ ಮುಚ್ಚಿಟ್ಟ ಜ್ಞಾನಪರಿಮಳದ ನನ್ನ ವಿದ್ಯಾ ಗುರುಗಳು, ಅವರ ಪ್ರೀತಿ, ಸಿಟ್ಟು, ಪ್ರೋತ್ಸಾಹಗಳೇ ನನ್ನ ಹಿಂದಿನ-ಇಂದಿನ ಬೆಳಕು ಬಂಧುಗಳೆ.
ಆಗ ಕನ್ನಡ ಶಾಲೆಯಲ್ಲಿದ್ದ, ನನ್ನ ತಂದೆಯ ಹಿರಿಯಣ್ಣನಂತಿದ್ದ ಶ್ರೀ ಎಚ್.ಎನ್.ನದಾಫ ಗುರುಗಳ ಸಂಸಾರವೆನ್ನುವುದು, ಶಿಶುನಾಳ ಶರೀಫ ಹಾಡಿದಂತೆ ‘ಹುಲುಗುರ ಸಂತೆ’. ದೇವರ ನಿಂಬರಗಿಯ ಇನ್ನೋರ್ವ ನನ್ನ ತಂದೆಯ ವೃತ್ತಿ ಬಾಂಧವರಾದ ಪ್ರೊ. ಆರ್.ಎಸ್.ಬಿರಾದಾರರ ನಾಲ್ಕು, ನನ್ನ ತಂದೆಯ ಮೂರು, ಸ್ವತಃ ತಮ್ಮ ನಾಲ್ಕು ಹೀಗೆ ಒಟ್ಟು ಹನ್ನೊಂದು ಮಕ್ಕಳನ್ನೆದೆಯಲ್ಲಿರಿಸಿಕೊಂಡ ಮಾತಾರವಿಂದ, ಬಾದಾಮಿ ಬನಶಂಕರಿಯ ಪೂಜಿಸುತ್ತ ಬೆಳೆದು ಬೆಳೆಸಿದ ಅವರು ಮುಲ್ಲಾ ಎಂದು ನನಗೆ ಗೊತ್ತಾಗುವ ವೇಳೆಗೆ ನನ್ನ ಎಂ.ಎ ಮುಗಿದಿತ್ತು. ನಾನು ಎಂ.ಎ ಇಂಗ್ಲಿಷನ್ನೇ ಮಾಡಬೇಕೆಂಬುದು ಅವರ ಮಹದಾಶೆಯಾಗಿತ್ತು. ಭಾವೈಕ್ಯತೆಯ ಸಾಮರಸ್ಯದ ಈ ಕನ್ನಡ ಶಾಲೆಯ ಮಾಸ್ತರ ನನಗೆ ಮನುಷ್ಯತ್ವದ ಮಹೋನ್ನತಿಯ ಪಾಠ ಕಲಿಸಿದ ಮಹಾಗುರು.
ನನ್ನ ಹೈಸ್ಕೂಲ ಓದಿನ ದಿನಗಳು ಆರಂಭವಾದುದು ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ. ಅವು ಹಳ್ಳ ದಾಟುವ ಹಿಗ್ಗಿನ ದಿನಗಳು ಊರಲ್ಲಿ ನನ್ನ ಮನೆಯ ಪಕ್ಕದಲ್ಲಿಯೆ ‘ಮುಂಡಕೋಪನಿಷತ್ತು’ ಕುರಿತು ಶ್ರೀ ಸಿದ್ದೇಶ್ವರ ಶ್ರೀಗಳ ಒಂದು ತಿಂಗಳ ಪ್ರವಚನವನ್ನಾರಂಭಿಸಿದರು. ಇಲ್ಲಿಂದ ಆರಂಭವಾದ ಸಾನಿಧ್ಯದ ಈ ಆತ್ಮೀಯ ದಿನಗಳು ಸುಮಾರು ಎರಡು ದಶಕಗಳವರೆಗೆ ಅಖಂಡ ಹಾಗೂ ಅಭಾದಿತವಾಗಿತ್ತು. “ಸಾಹಿತಿಯೊಬ್ಬ ಸಮಾಜದ ಏರೆ-ಕೋರೆಗಳನ್ನು ಬರೆಯುವುದೆಂದರೆ ತನ್ನವರನ್ನೇ ಹೀಗಳೆಯುವುದಲ್ಲ, ಲೇವಡಿ ಮಾಡುವುದಲ್ಲ. ಬದಲಾಗಿ ತನ್ನ ಸುತ್ತಲಿನದೆಲ್ಲವನ್ನೂ ಪ್ರೀತಿಯಿಂದ ಬಾಚಿಕೊಳ್ಳುತ್ತ ಪ್ರಗತಿಯತ್ತ, ಪರಿವರ್ತನೆಯತ್ತ ಮುಂದೊರೆಯುವುದು’ ಎಂದು ಶ್ರೀಗಳು ನನ್ನ ಮೊದಲ ಕೃತಿಯಾದ ‘ಅರ್ಪಣೆ’ಯನ್ನು ಇದೇ ಸಂಗಮೇಶ್ವರ ದೇವಸ್ಥಾನದಲ್ಲಿ ಶ್ರೀ ಸಿಂಪಿ ಲಿಂಗಣ್ಣ, ಶ್ರೀ ಎಸ್.ಜಿ. ಕರೂರ ಹಾಗೂ ಚಡಚಣದ ಸಮಸ್ತ ನಾಗರಿಕರ ಸಮ್ಮುಖದಲ್ಲಿ ನೇರವೇರಿಸುತ್ತಾ ನನಗೆ ಹೇಳಿದ್ದು, ಆ ವಾಕ್ಯಗಳ ಅನುಸರಣೆ ಹಾಗೂ ಅನುಷ್ಠಾನಗಳೇ ಇದುವರೆಗಿನ ನನ್ನ ಸಾಹಿತ್ಯ ಕೃಷಿಯ ಗುರಿ ಹಾಗೂ ಗಂತವ್ಯಗಳಾಗಿವೆ. ಇದುವರೆಗೆ ನಾನು ಬರೆದ ಎಪ್ಪತ್ತಕ್ಕೂ ಮೀರಿದ ಕೃತಿಗಳಲ್ಲಿ ಇದೇ ಕಾಳಜಿಯ ಭಿನ್ನ ಆಯಾಮಗಳನ್ನು ನೀವು ಕಾಣುತ್ತೀರಷ್ಟೆ.
ಜೀವ ಧರ್ಮದ ಮೇಲೆ ಪಲ್ಲವಿಸಿದ ಈ ಸಾಹಿತ್ಯ ಎಂಬ ರಸಬಳ್ಳಿ ಪ್ರತಿಕ್ಷಣವೂ ಚಿಗುರುತ್ತದೆ, ಅನವರತವೂ ಬೆಳೆಯುತ್ತಿರುತ್ತದೆ. ಇದರ ನೆರಳಿಗೆ ಮೈ-ಮನಸ್ಸುಗಳನ್ನು ಚಾಚಿಕೊಂಡ ಮನುಷ್ಯ ‘ಸಾಹಿತಿ’ಎನಿಸಿಕೊಳ್ಳುತ್ತಾನೆ. ಶ್ರೀ ಸಾಮಾನ್ಯನೊಬ್ಬ ‘ಸಾಹಿತಿ’ಎಂಬ ಭಿನ್ನ ಉಪಾದಿಗೆ ಭಾಜನವಾಗುವುದು ಈ ಮಂತ್ರಬಳ್ಳಿಯ ನೆರಳಿನಿಂದಾಗಿ. ಇದರಡಿಯಲ್ಲಿದ್ದುಕೊಂಡು ಆತ ಆಲೋಚಿಸಬೇಕು. ಹೊಸ ಸಮಾಜದ ಆದರ್ಶಗಳನ್ನು ರೂಪಿಸಬೇಕು. ಧ್ವನಿಯಾಗಬೇಕು ಸಾಹಿತಿಯ ಲೇಖನಿ. ತನ್ನ ಜನರ ಆಶೆ-ಆಶಯಗಳನ್ನು ತನ್ಮೂಲಕ ಪ್ರಚುರಪಡಿಸಬೇಕು. ಇಂದು ಇದು ನನಗಿರುವ ಜವಾಬ್ದಾರಿ, ಮುಂದಿನವರಿಗೂ ಅನ್ವಯವಾಗಬೇಕಾದುದೆ.
No comments:
Post a Comment