Total Pageviews

Wednesday, October 30, 2013

ಮುಲ್ಲಾ-ಮಠಪತಿ ಯಾವೂರಿಗೆ?

ಬಹುತೇಕ ಪದವಿಯ ಮುನ್ನಾ ದಿನಗಳು, ಮನೆಯೊಳಗೇನೊ ಒಂದು ಸುಳ್ಳು ಹೇಳಿ, ಗೆಳೆಯ ಬಸೀರ್‍ನೊಂದಿಗೆ ಊರು ಬಿಟ್ಟು ಓಡಿಬಿಟ್ಟಿದ್ದೆ. ಆಗಷ್ಟೆ ಮಾವನ ಹೊಟೇಲಿನಲ್ಲಿ ಗಲ್ಲೆಯ ಮೇಲೆ ಕುಳಿತುಕೊಳ್ಳುತ್ತಿದ್ದ ಆತನ ಜೇಬಿನ ತುಂಬಾ ದುಡ್ಡಿತ್ತು, ನನ್ನ ತಲೆ ತುಂಬಾ ಕನಸುಗಳಿದ್ದವು. ಇಬ್ಬರೂ ಹೊರಟು ಬಂದದ್ದು ಎಲ್ಲಿಗೆ? ಧಾರವಾಡಕ್ಕೆ. ಅಲ್ಲಿಂದ ಶಿರಹಟ್ಟಿಗೆ. ಅಲ್ಲಿ ಯಾರಿದ್ದರು? ಬಂಧು ಮಿತ್ರರೇನಾದರೂ ಇದ್ದರೇ? ಅದೇನು ಹೆಣ್ಣು-ಹೆಂಡದ ಅದ್ಧೂರಿಯ ಊರೇ? ಅಲ್ಲೇನು ಜಾತ್ರೆ ನಡೆದಿತ್ತೋ? ಯಾವುದು ಇಲ್ಲ. ಸಾಮಾನ್ಯವಾಗಿ ಬಾಲಕರನ್ನೋ, ಯುವಕರನ್ನೋ ಆಕರ್ಷಿಸಬಹುದಾದ ಯಾವ ಚಟುವಟಿಕೆಗಳೂ ಅಲ್ಲಿ ನಡೆದಿರಲಿಲ್ಲ. ಆದಾಗ್ಯೂ ನಾನು ಮಠಪತಿ, ಆತ ಮುಲ್ಲಾ, ಎಲ್ಲೋ ಹೊರಟಿದ್ದೀರಿ? ಎಂದು ಯಾರಾದರೂ ಕೇಳಿದ್ದರೇ ಖಂಡಿತವಾಗಿಯೂ ನಮ್ಮ ಬಳಿ ಯಾವ ಉತ್ತರವೂ ಇರಲಿಲ್ಲ. ಒಟ್ಟಾರೆ ಹೊರಟೆವು. ಇತ್ತ ಮಸೀದಿಯೂ ಅಲ್ಲದ, ಅತ್ತ ಮಠವೂ ಅಲ್ಲದ ಶಿರಹಟ್ಟಿಯ ಫಕೀರೆಶ್ವರನ ಸನ್ನಿಧಾನದಲ್ಲಿ ಎರಡು ದಿನ ಕಳೆದೆವು. ಆನಂತರ ಎರಡು ದಿನ ಧಾರವಾಡದಲ್ಲಿ. ಆಮೇಲೆ ಮರಳಿ ಊರಿಗೆ. ಹಾಗೆ ಅಂದು ಅರ್ಥಹೀನವಾಗಿ ತಿರುಗಾಡಿದ್ದ ಎರಡೂ ಊರುಗಳು ಇಂದು ನನ್ನ ಬದುಕಿನ ಅರ್ಥದ, ಆರ್ಥಿಕತೆಯ ತಾಣಗಳಾಗಿವೆ. ಧಾರವಾಡ ನನ್ನ ತಂದೆ-ತಾಯಿ, ತಮ್ಮ ಮತ್ತು ಸಾಹಿತ್ಯವನ್ನು ಕಾಪಿಟ್ಟ ನೆಲವಾದರೆ ಶಿರಹಟ್ಟಿ ನಾನು ಮತ್ತೆ ಮತ್ತೆ ಭೇಟ್ಟಿಕೊಟ್ಟ ಸ್ಥಳವಾಗಿದೆ.

        ಧಾರವಾಡ ನನ್ನೂರೇ ಆಗಿ ಹೋಗಿದೆ. ಶಿರಹಟ್ಟಿ, ಶಿಶುನಾಳ ಮತ್ತು ಸಂಶಿಗಳು ನನ್ನ ಪ್ರೀತಿಯ ಸೂಫಿಗಳ ದರ್ಶನದ ನೆಲವಾಗಿದೆ. 2000ದ ಇಸ್ವಿಯಲ್ಲಿ ನಾನು ಗುಳೇದಗುಡ್ಡದಲ್ಲಿ ಅರೆಕಾಲಿಕ ಉಪನ್ಯಾಸಕನಾಗಿದ್ದಾಗ, ನನ್ನೊಂದಿಗೇ ಇದ್ದ ಗೆಳೆಯ ಮಹಾಂತೇಶ ಭಜಂತ್ರಿಯನ್ನು ಪೂರ್ಣಪ್ರಮಾಣದ ಉಪನ್ಯಾಸಕನಾಗಿ ಶಿರಹಟ್ಟಿಯ ಎಫ್.ಎಂ.ಡಬಾಲಿ ಪದವಿಪೂರ್ವ ಕಾಲೇಜಿಗೆ ಉಪನ್ಯಾಸಕನಾಗಿ ನಾನು, ಹಿರಿಯ ಕವಿಮಿತ್ರ ಮಹಾದೇವ ಕಣವಿ ಹಾಗೂ ಶ್ರೀ ಆರ್.ಜಿ.ಕುಲಕರ್ಣಿ ಬಿಟ್ಟ ಬಂದ ನೆನಪು. 2003 ರಲ್ಲಿ ಮತ್ತೊಮ್ಮೆ ನನ್ನ ಸಂಸಾರಿಕ ಆರಂಭದ ದಿನಗಳಲ್ಲಿ ಇದೇ ಕಾಲೇಜಿಗೆ ಒಂದು ವಿಶೇಷ ಉಪನ್ಯಾಸ ನೀಡಲು ಹೋಗಿದ್ದ ನೆನಪು. ಈಗ ಸರಿಯಾಗಿ ಹತ್ತು ವರ್ಷಗಳ ನಂತರ ಮೂರನೆಯ ಬಾರಿ ಇಲ್ಲಿಗೆ ಹೋಗುವ ಸಂದರ್ಭ.
        ಊರು ಒಂದೇ ಆದರು ಸಂದರ್ಭಗಳು ಭಿನ್ನ ಭಿನ್ನ. ಬದುಕಿನ ನಲವತ್ತೆರಡನೆಯ ವರ್ಷದ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮರುದಿನವೇ (13/09/2013) ನಾನು ಮತ್ತೆ ಇದೇ ಕಾಲೇಜಿನ ಆವರಣದಲ್ಲಿ ಭಾಷಣ ಮಾಡಲು ನಿಂತುಕೊಂಡಿದ್ದೆ. ಉದ್ದೇಶ ಪೂರ್ವಕವಾಗಿ ಯತ್ನಿಸಿದರೂ ಸಾಧ್ಯವಾಗಲಾರದ ಸಂಯೋಜನೆ ಈ ಕಿರು ಕಾರ್ಯಕ್ರಮಕ್ಕೆ ಒದಗಿಬಂದಿತ್ತು. ಬಹುತೇಕ ಅತ್ಯಂತ ಎಳೆಯ ಗೆಳೆಯ, ತಂದೆ-ತಾಯಿ ನನ್ನೊಂದಿಗೆ ಹಂಚಿಕೊಂಡ ಮೊದಲ ವೇದಿಕೆ ಇದೇ ಆಗಿರಬಹುದು. ಎದುರುಗಡೆ ಹೆಂಡತಿ, ಮಗಳು ತರಂಗಿಣಿ ಹಾಗೂ ಬಾಲ್ಯದ ಆ ಹುಂಬುತನದ ಪ್ರವಾಸದಿಂದ ಇಂದಿನ ಹುಡುಕಾಟದ ಅಲೆಮಾರಿತನದವರೆಗಿನ ಎಷ್ಟೆಲ್ಲ ನೆನಪುಗಳು. ಈ ಕಾರ್ಯಕ್ರಮ ಖಂಡಿತವಾಗಿಯು ನನ್ನ ಬೌದ್ಧಿಕತೆಯ ಪ್ರದರ್ಶನವಾಗಿರಲಿಲ್ಲ ಬದಲಾಗಿ ನೆನಪುಗಳ ಕನವರಿಕೆ ಅಷ್ಟೆ.
 ಡಬಾಲಿ ಕಾಲೇಜಿನ ಪ್ರಾಚಾರ್ಯ ಎನ್.ಬಿ.ಕಲಾವಂತ, ಉಪನ್ಯಾಸಕರುಗಳಾದ ಶ್ರೀ ಎನ್.ಹನುಮರೆಡ್ಡಿ, ಪಂಗನ್ನವರ್ ಹಾಗೂ ಅಂದು ತಮ್ಮ ಸಾಧನೆಗಳಿಂದಾಗಿ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿ ವೃಂದ ನನ್ನ ಇಡೀ ಪಿ.ಯು.ಸಿ ದಿನಗಳನ್ನ ಅಲೆ ಅಲೆಯಾಗಿ ಕಣ್ಣು ಮುಂದೆ ಹರಿಯುವಂತೆ ಮಾಡಿದವು. ಕವಿಯೊಬ್ಬನ ಬದುಕಿನ ಸಾರ್ಥಕಗಳಿಗೆ ಅವನ ಕವಿತೆ ಯಾರದೋ ಕಂಠದಿಂದ ಹಾಡಾಗಿ ಹೊರ ಚಿಮ್ಮಿದಾಗ. ಈ ಸಮಾರಂಭ ಅದಕ್ಕೂ ಸಾಕ್ಷಿಯಾಯಿತು. ಇಲ್ಲಿ ನನ್ನ ಹಾಡು -                                                                                                                                     ನನ್ನೂರು ಧಾರವಾಡ
                                                                    ನನ್ನ ಹಿಂಗ್ ಕಾಡಬ್ಯಾಡ
                                                        ಹಾಡಲ್ಪಟ್ಟಿತು.