Total Pageviews

Thursday, April 14, 2011

ಮೀನಾಕುಮಾರಿ(Mina Kumarai) : ಗೊಂಬೆಯೊಳಗೊಂದು ಗೊಂಬೆ


ಮೀನಾಕುಮಾರಿ(Mina Kumarai) : ಗೊಂಬೆಯೊಳಗೊಂದು ಗೊಂಬೆ

ಗೊಂಬೆಯೊಳಗೊಂದು ಗೊಂಬೆ
ಗೊಂಬೆಯೊಳಗೊಂದು ಗೊಂಬೆ
ಗೊಂಬೆಯೊಳಗೊಂದು ಗೊಂಬೆ
ಗೊಂಬೆಯೊಳಗೂ ಒಂದು ಗೊಂಬೆ
ಹೀಗಿದ್ದ ಗೊಂಬೆಯೊಂದನ್ನು, ರಷಿಯಾದಿಂದ ಬರುವಾಗ ಕೆ.ಎ.ಅಬ್ಬಾಸ್(K A Abbas) ಮೀನಾಕುಮಾರಿಗಾಗಿ ತಂದರು. ಮಜಹಬೀನ್ ಅಲಿಯಾಸ್ ಮೀನಾಕುಮಾರಿಗೆ ಗೊಂಬೆಗಳೆಂದರೆ ಪಂಚಪ್ರಾಣ. ಅವಳ ಬೊಂಬಾಯಿಯ ಅಲಿಷಾನ್ ಮನೆ, ಗೊಂಬೆಗಳ ದೊಡ್ಡ ಮ್ಯೂಸಿಯಂ ಆಗಿತ್ತು. ಆದರೆ ಅಬ್ಬಾಸರ ಈ ಗೊಂಬೆ ಮಾತ್ರ ಅವಳಿಗೆ ಬಹಳ ಪ್ರೀತಿಯದಾಗಿತ್ತು. ಗೊಂಬೆ ಕೊಟ್ಟ ಆ ಕ್ಷಣದಲ್ಲಿ ಅಬ್ಬಾಸರಿಗೆ ಆಕೆ ಕೇಳಿದ್ದಳು: “Did you know why I collect dolls? It is because as a child, I never had opportunity to play with dolls. I began working in films from the age of seven” ಮೀನಾ ತನ್ನ ತಂದೆ-ತಾಯಿಗಳಿಗೆ ಎಂದೂ ಮಣ್ಣಾಡುವ, ಕಣ್ಣು ಮಿಟುಕಿಸಿ ನಗುವ ಮಗುವಾಗಲೇ ಇಲ್ಲ. ಯಾಕೆಂದರೆ ಆ ಎಳೆ ವಯಸ್ಸಿನಲ್ಲಿಯೇ ಅವಳು ಅವರ ಪಾಲಿಗೆ ಹಣ ಮಾಡುವ ಮಶಿನ್ ಆಗಿದ್ದಳು.
ಸುಖ ಎನ್ನುವುದು ಮರೀಚಿಕೆಯಾಗಿಯೇ ಉಳಿಯಿತು ಮೀನಾಕುಮಾರಿಯ ಪಾಲಿಗೆ ಎನ್ನುತ್ತಾರೆ ಕೆ.ಎ.ಅಬ್ಬಾಸ್. ಹೀಗಾಗಿ ಫಿಲ್ಮಿ ದುನಿಯಾದ ಅಬ್ಬಾಸರ ಇನ್ನೊಬ್ಬರು ಗೆಳೆಯರಾದ ಮಜಾಝ್ ಹಾಗೂ ಶೈಲೇಂದ್ರರ ಹಾಗೆ ಆ ಸುಖವನ್ನು ಕುಡಿತದಲ್ಲಿ ಕಾಣಲು ಹೋಗಿ ದುರಂತ ನಾಯಕಿಯಾದಳು ಮೀನಾ ಎನ್ನುವುದು ಅವರ ವಾದ. ಪ್ರೀತಿಯ ತೀವ್ರ ತಹತಹಿಕೆಯಲ್ಲಿ ಇದ್ದ ಆಕೆಗೆ ಅದು ಹಿಂಗದ ಹಸಿವಾಗಿತ್ತು, ಇಂಗದ ಕೊರತೆಯಾಗಿತ್ತು. ಆದರೆ ಆ ಒರತೆಯ ನೀರನ್ನು ಕುಡಿದು ಸತ್ತವರ ಸಂಖ್ಯೆ ಹೆಚ್ಚಾಯಿತೇ ವಿನಾ ಮರು ಜೀವನ ಪಡೆದವರದ್ದಲ್ಲ.” Many loved Meenakumari, and she loved many. But her love was a pure flame that illuminated many people’s lives and it consumed her from within” ಕುಡಿತದ ಮೀನಾ ಒಂದರ್ಥದಲ್ಲಿ ‘ಕುಮಾರಿ’ಯಾಗಿಯೇ ಉಳಿದಳೇ ವಿನಃ ದೀಪ ಬೆಳಗಿಸುವ ಭಾಗ್ಯ ಅವಳಿಗೆ ದೊರೆಯಲೇ ಇಲ್ಲ ಎನ್ನುತ್ತಾರೆ ಅಬ್ಬಾಸ್.
ಅವಳು, ಬದುಕಿನ ಭೀಷಣ ಸುಡುಗಾಳಿ ತಾಗಿ ಹಣ್ಣಾದ ಹೆಣ್ಣು. ಈ ಮಾಗುವಿಕೆ ಸಹಜವಾಗಿರಲಿಲ್ಲ. ಆಕೆಯ ತಂದೆ ಓರ್ವ ವಿಫಲ ಸಂಗೀತ ನಿರ್ದೇಶಕ, ತಾಯಿ ಡಾನ್ಸರ್. ಕಲೆ ಏನೋ ಅವಳಿಗೆ ಅವಳ ತಂದೆ-ತಾಯಿಗಳಿಂದಲೇ ಬಂತು. ಆದರೆ ಭರಿಸಲಾಗದ ಬಡತನವೂ ಅವಳಿಗೆ ಅವರಿಂದಲೇ ಬಂತು. ಅಬ್ಬಾಸ್ ಹೇಳುತ್ತಾರೆ: ಏಳೇ ಏಳು ವರ್ಷದ ಬಾಲಕಿ ಮಜಹಬೀನ ಅಲಿಯಾಸ್ ಮೀನಾಕುಮಾರಿ ಕೆಲಸ ಅರಸುತ್ತ ಬೊಂಬಾಯಿಯ ಸಿನಿಮಾದ ಸ್ಟುಡಿಯೋಕ್ಕೆ ಕದ ತಟ್ಟುತ್ತ ಅಲೆಯಬೇಕಿತ್ತು. ಹಾಗೆ ಅಲೆದಾಡಿದಾಗ ಸಿಕ್ಕ ಪಾತ್ರಗಳಿಗೆ ದೊರೆಯುತ್ತಿದ್ದ ಸಂಭಾವನೆ ದಿನ ಒಂದಕ್ಕೆ ಇಪ್ಪತ್ತರಿಂದ ಮೂವತ್ತು ರೂಪಾಯಿಗಳಂತೆ. ಆಕೆ ಚಿತ್ರ ನಟಿಯಾದುದು ಆಸೆ ಪಟ್ಟು ಅಲ್ಲ, ಅನಿವಾರ್ಯಕ್ಕೆ. ಅವಳ ಆತ್ಮದ ಶೋಧ, ಅಂತರಂಗದ ಕೂಗು ಯಾರಿಗೂ ಗಮನಕ್ಕೆ ಬರಲಿಲ್ಲ. ಜಗತ್ತು ಗುರ್ತಿಸಿದ್ದು ಮಾತ್ರ-
The Meena kumari of ‘Parineeta’
The Meena kumari of ‘Baiju Bawra’
The Meena kumari of ‘Char dil Char Rahen’
The Meena kumari of ‘Sharada’
The Meena kumari of ‘Pakeeza’
                    In each of her roles she releaved a new dignity, a new beauty, a new talent. She lived each role and all the while, she lived her own role that was Life!

ಎಂದು ಸ್ಮರಿಸಿಕೊಳ್ಳುತ್ತಾರೆ ಅಬ್ಬಾಸ್. ದುರಂತ ನಾಯಕಿಯಾಗಿ ಹಿಂದಿ ಚಲನಚಿತ್ರ ಜಗತ್ತನ್ನು ತನ್ನ ಜೀವಿತಾವಧಿಯಲ್ಲಿ ಎರಡು-ಮೂರು ದಶಕಗಳ ಕಾಲ ಆಳಿದ್ದ ಮೀನಾ, ಒಂದೊಂದು ಚಿತ್ರಕ್ಕೆ ಲಕ್ಷ ಲಕ್ಷ ಪಡೆದಳು. ಅತ್ಯಂತ ಶ್ರೀಮಂತ ಕಟ್ಟಡ ಕಟ್ಟಿಸಿದಳು. ಐಶಾರಾಮಿ ವಾಹನದಲ್ಲಿ ಪ್ರವಾಸ ಮಾಡಿದಳು. ಹಾಗಂತ ಇಂದಿನ ತಾರೆಗಳಿಗಾದಂತೆ ಹಣವೇ ಎಲ್ಲವೂ ಆಗಿರಲಿಲ್ಲ ಮೀನಾಕುಮಾರಿಗೆ. ಅವಳು ಅಪ್ಪಟ ನಟಿಯಾಗಿದ್ದಳು. ಅಂತೆಲೆ ತನ್ನ ಗ್ಲಾಮರಸ್ ಲೋಕದ ಅತ್ಯಂತ ಯಶಸ್ವೀ ದಿನಗಳಲ್ಲಿಯೂ ಅಬ್ಬಾಸರ ಚಾರ್ ದಿಲ್, ಚಾರ್ ರಾಹೆ ಚಿತ್ರದಲ್ಲಿ ತನ್ನ ಸುಂದರವಾದ ಮುಖಕ್ಕೆ ಮಸಿ ಬಳಿದುಕೊಂಡು ಸಾಮಾನ್ಯ ಪಾತ್ರ ಮಾಡಿದಳು. ಚಂದ್ರಮುಖಿ (ಮಜಹಬೀನ್)ಯಾದ ಸುಂದರಿ ಅಮಾವಾಸ್ಯೆಯೊಂದಿಗೆ ಹೋಲಿಸಿಕೊಳ್ಳುವುದೆಂದರೇನು!
ನಲವತ್ತು ವರ್ಷಗಳ, ಮೀನಾಕುಮಾರಿಯ ಹೋರಾಟದ, ದುರಂತಗಳ ಸರಮಾಲೆಯ ಜೀವನವನ್ನು ನೋಡಿ ಅಬ್ಬಾಸ್ ಬರೆಯುತ್ತಾರೆ- “ತನ್ನವರೆಲ್ಲರಿಗೂ ಹಣ, ಜೀವನ ಭದ್ರತೆ, ಮಾರ್ಗದರ್ಶನ, ತಿಳುವಳಿಕೆ, ಸಹಾನುಭೂತಿ, ಪ್ರೀತಿ ಎಲ್ಲವನ್ನೂ ಕೊಟ್ಟ ಮೀನಾಕುಮಾರಿ ಸ್ವಯಂ ಕಣ್ಣೀರು ಗೆರೆಯಲು ಒಂದು ಹೆಗಲಿನ ನಿರೀಕ್ಷೆಯಲ್ಲಿದ್ದಳು. ಮದುವೆ ಎಂಬ ಬಂಧನದೊಳಗೂ ಅಥವಾ ಅದರ ಹೊರಗೂ ಅವಳಿಗೇನೂ ದೊರೆಯಲೇ ಇಲ್ಲ. ಮುದ್ದುಮುದ್ದಾಗಿದ್ದ ಆಕೆಯ ತುಟಿಗಳಿಗೆ ಹಾಗೂ ಮುಗ್ಧವಾಗಿದ್ದ ಆಕೆಯ ಕೆನ್ನೆಗಳಿಗೆ ಸಮಯ ಎಂಥ ಮುತ್ತಿಟ್ಟಿತ್ತು ಎಂದರೆ ಮನುಷ್ಯರಾರು ಅವುಗಳನ್ನು ಮುದ್ದಿಸಲು ಬಯಸಲಿಲ್ಲ”. ಹುಟ್ಟುತ್ತಲೇ ಬಾಲನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿ, ಗೊಂಬೆಗಳನ್ನು ನೋಡಿ ಆನಂದಿಸಬೇಕಾದ ಕಣ್ಣುಗಳು ಗ್ಲಿಸರಿನ್ ಹಚ್ಚಿಕೊಂಡು ಅಳುವ ಅಳುಮುಂಜಿಯ ಪಾತ್ರ ಮಾಡಬೇಕಾಯಿತು. ಇಪ್ಪತ್ತನೆಯ ವಯಸ್ಸಿಗೆ ಆಕ್ಸಿಡೆಂಟ್ ಒಂದರಲ್ಲಿ ಕೈ ಬೆರಳುಗಳ ಸಹಜತೆಯನ್ನು ಕಳೆದುಕೊಂಡು, ಸಾವು-ಬದುಕಿನ ಮಧ್ಯ ಹೋರಾಡಿದಳು. ಏಳು ವರ್ಷಗಳವರೆಗೆ ಗುಣಮುಖವಾಗದ ರೋಗ ಒಂದನ್ನು ಹೊತ್ತು ಅಲೆದಾಡಿದಳು. ಎಲ್ಲದರಿಂದ ಮುಕ್ತಿ ಬಯಸಿ ಕಮಲ್ ಅಮರೋಹಿಯನ್ನು ಮದುವೆಯಾಗಿ ತೃಪ್ತಿಗಾಗಿ ತಡಕಾಡಿದಳು. ಇಬ್ಬರೂ ಸೇರಿ ‘ಪಾಕೀಜಾ’ ದಂಥ ಅದ್ಭುತ ಚಿತ್ರವನ್ನು ಭಾರತೀಯ ಚಿತ್ರರಸಿಕರಿಗೆ ನೀಡಿದರೇ ವಿನಃ ಕೂಡಿ ಬಾಳಲಾಗಲಿಲ್ಲ. ಆಕೆಯ ಸಂಸಾರದ ವಿಘಟನೆಯ ಕಾರಣವನ್ನು ಅಬ್ಬಾಸ್ ದಾಖಲಿಸುತ್ತಾರೆ-
‘Artists seldom make stable partners. They are quick to fall in Love and as unpredictably fall out of it. The heart of an artist is more delicate than the glass of the bottle. When the two clink and clash,there is tragedy’
ಕವಿತೆ, ತಾನೇ ಒಂದು ಜೀವಂತ ಕವಿತೆಯಾಗಿದ್ದ ಮೀನಾಕುಮಾರಿ ಪ್ರೀತಿಯ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಳು. ಕವಯತ್ರಿಯಾದಳು. ಉರ್ದು ಕಾವ್ಯವನ್ನು ಹಾಲಿ, ಸಾದ, ಮಿರ್ಜಾ ಗಾಲಿಬ, ಉಮರ್ ಖಯ್ಯಾಮ್, ಮಜರೂಂ ಸುಲ್ತಾನಪುರಿ ಒಬ್ಬೊಬ್ಬ ಕವಿಯ ಕಾವ್ಯವನ್ನೂ ಕುಡಿದಳು. ಕವಿತೆಯನ್ನೇ ಕನಸಿದಳು, ಕೊನೆಗೆ ಕವಿತೆಯಂತೆಯೇ ಬದುಕು ಮುಗಿಸಿದಳು. ಕುಡಿದು, ಕುಡಿದು ಕೊನೆಯುಸಿರೆಳೆದಾಗ ಮೀನಾಕುಮಾರಿಗೆ ವಯಸ್ಸು ಕೇವಲ ನಲವತ್ತು ವರ್ಷ. ಇದು ಬರೀ ಬರೀ ಮೀನಾಕುಮಾರಿ ಎಂಬ ನಟಿಯ ಸಾವಾಗಿದ್ದರೆ ಈ ಸಾವು ಚರ್ಚೆಗೊಳಗಾಗಬೇಕಾಗಿರಲಿಲ್ಲ. ಆದರೆ ಅಬ್ಬಾಸ್ ಹೇಳುತ್ತಾರೆ : ‘Is the death of  many artists and historic creations that would have given aesthic delight and emotional satisfaction to millions of cinegoers’ಬದುಕಿರುವಾಗ ಎಂದೂ ಶಾಂತಿ ಸಿಗದೆ ನರಳಿದ ಮೀನಾಕುಮಾರಿ ಈಗ ಈ ಹೃದಯಹೀನ ಜಗತ್ತಿನಿಂದ ಮುಕ್ತಳಾಗಿದ್ದಳು. ಪ್ರಪಂಚ ಅವಳನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿತೇನೊ? ಬದುಕಿರುವಾಗ ಅವಳನ್ನೊಬ್ಬ ಚಿತ್ರನಟಿಯಾಗಿ ಆರಾಧಿಸಿದ ಜಗತ್ತು ಅವಳು ತೀರಿದ ಮೇಲೂ ಓರ್ವ ದುರಂತ ನಾಯಕಿಯಾಗಿ ಕಂಡಿತಷ್ಟೆ. ಆದರೆ ಅಬ್ಬಾಸ್ ನೆನಪಿಸಿಕೊಂಡಂತೆ, ಅವರು ಆಕೆಗಾಗಿ ರಷಿಯಾದಿಂದ ತಂದ ಗೊಂಬೆಯೊಳಗೆ ಹೇಗೆ ಅನೇಕ ಗೊಂಬೆಗಳಿದ್ದವೊ, ಕೊನೆಗೊಂದು ಅತ್ಯಂತ ಸಣ್ಣ ಗೊಂಬೆಯಿತ್ತೊ, ಹಾಗೆಯೆ ಇದ್ದಳು ಮೀನಾಕುಮಾರಿ ಎನ್ನುತ್ತಾರೆ. ಕಲಾವಿಧೆ ಮೀನಾಕುಮಾರಿಯೊಳಗೋರ್ವ, ಕವಯಿತ್ರಿ ಮೀನಾಕುಮಾರಿ, ಪ್ರೀತಿಯ ಆರಾಧಕಿ ಮೀನಾಕುಮಾರಿ ಅಡಗಿಕೊಂಡಿದ್ದಳು, ಬಚ್ಚಿಟ್ಟುಕೊಂಡಿದ್ದಳು. ದುರ್ದೈವದ ಸಂಗತಿ ಎಂದರೆ ಯಾರು, ಯಾರೂ ಬಿಚ್ಚಿನೋಡುವ ಪ್ರಯತ್ನವನ್ನೇ ಮಾಡಲಿಲ್ಲ. ನಿಜವಾದ ಮೀನಾಕುಮಾರಿ(Mina Kumarai) ಜಗತ್ತಿಗೆ ಪರಿಚಯವಾಗಲೇ ಇಲ್ಲ ಎನ್ನುತ್ತಾರೆ ಆಕೆಯ ಪ್ರೀತಿಯ ಗೆಳೆಯ ಅಬ್ಬಾಸ್.

ಮೊಲೆಯ ಮೇಲಣ ಯೋಗಿ-ರಾಜಕಪೂರ....

ಮೊಲೆಯ ಮೇಲಣ ಯೋಗಿ-ರಾಜಕಪೂರ(Raj Kapoor)...
 




‘ಆವಾರಾ’(Aavara) ದ ಅಪೂರ್ವ ಯಶಸ್ಸು ಹಾಗೂ ರಾಜ್‌ಕಪೂರ್‌ರ(Raj Kapoor) ಅಂತರಾಷ್ಟ್ರೀಯ  ಮನ್ನಣೆಯನ್ನು ಗಮನಿಸಿದ ಈ ಸಂದರ್ಭದಲ್ಲಿ ರಾಜ್ ಹಾಗೂ ಅಬ್ಬಾಸ(K A Abbas)ರ ಸ್ನೇಹವನ್ನು ಕುರಿತು ತಿಳಿದುಕೊಳ್ಳುವುದು ಎಷ್ಟೊಂದು ಸಂತೋಷದ ಸಂಗತಿಯಲ್ಲವೇ? ಅಬ್ಬಾಸ್ ಬರೆಯುವಂತೆ, ರಾಜ್‌ಕಪೂರ್‌ರನ್ನು ‘ಬಾಂಬೆ ಟಾಕೀಸ್’(bombay takies) ನಲ್ಲಿ ಬೊಂಬಾಯಿಯ ದಾದರ್ ಹಾಗೂ ಮಲಾಡಗಳ ಮಧ್ಯೆ ಓಡಾಡುತ್ತಿದ್ದ ಥರ್ಡ್‌ಕ್ಲಾಸ್ ಟ್ರೇನಿನ ಬೋಗಿಯಲ್ಲಿ, ಪೃಥ್ವಿ ಥಿಯೇಟರಿನ ‘ಶಕುಂತಲಾ’(shakunthala), ‘ದೀವಾರ್’(divar) ಹಾಗೂ ‘ಪಠಾನ’(patan) ನಾಟಕಗಳಲ್ಲಿಯ ಸಣ್ಣ ಸಣ್ಣ ಹಾಸ್ಯ ಪಾತ್ರಗಳಲ್ಲಿ, ನೋಡುತ್ತಾ ಬಂದವರು. ಅನಂತರದ ಮೂವತ್ತೈದು ವರ್ಷದ ದೀರ್ಘ ಸ್ನೇಹದ ಬದುಕಿನಲ್ಲಿ ನಗುವ, ಅಳುವ ರೋಸಿಹೋದ, ನಗೆಪಾಟಲಾದ, ಕುಡಿತದ, ಕುಡಿಸುವ, ಕುಣಿಯುವ, ಪ್ರೀತಿಗಾಗಿ ಅನುರೋಧಿಸುವ ಈ ರಾಜ್‌ಕಪೂರ್ ಎಂಬ ಜೋಕರ್‌ನನ್ನು  ಅಬ್ಬಾಸ್ ಹಲವು ಹತ್ತು ಶೈಲಿಗಳಲ್ಲಿ ನೋಡಿದ್ದಾರೆ. ಬಿಮಲ್‌ರಾಯ್‌(Bhimal roy)ರ ‘ದೋ ಭೀಗಾ ಜಮೀನ್’(do bhiga jamin), ಸತ್ಯಜಿತ್ ರೇ(Sathyajit re)ಯವರ ‘ಪಥೇರ್ ಪಾಂಚಾಲಿ’(pather panchali), ಬಾಂದರ್ ಕೊಲ್ಕ್‌ರರ ‘ವಾರ್ ಆಂಡ್ ಪೀಸ್’ ಗಳನ್ನು ಮುಕ್ತವಾಗಿ ಹೊಗಳಿದ ರಾಜ್‌ಕಪೂರ್‌ರನ್ನು ಅಬ್ಬಾಸ್ ನೋಡಿದ್ದಾರೆ. ಈ ರಾಜ್‌ಕಪೂರ್ ಕೆಲವರಿಗೆ ಜೋಕರ್, ಕೆಲವರಿಗೆ ಆಕ್ಟರ್, ಕೆಲವರಿಗೆ ಲೋಫರ್, ಇನ್ನೂ ಕೆಲವರಿಗೆ ದಿಲ್‌ದಾರ್-ಹೀಗೆ ರಾಜ್‌ಕಪೂರ್ ಅಂದರೆ ಅಂದು ಸುದ್ದಿ. ಆದರೆ ಅಬ್ಬಾಸರಿಗೆ ಮಾತ್ರ ರಾಜ್‌ಕಪೂರ್(Raj Kapoor) ಎಂದರೆ ಬರೀ ಪ್ರೀತಿ, ಪ್ರೀತಿಯೆಂದರೆ ರಾಜ್‌ಕಪೂರ್.
ರಾಜ್‌ಕಪೂರರ ಮನೆ ತುಂಬಾ ಶಿವ, ಜೀಸಸ್, ಬುದ್ಧ, ಕೃಷ್ಣ, ಸಾಯಿಬಾಬಾರ ಫೋಟೋಗಳು. ಖುರಾನ್, ಮಹಾಭಾರತ ಹಾಗೂ ಗ್ರಂಥಸಾಹೀಬದಿಂದ ಆಯ್ದ ನುಡಿಮುತ್ತುಗಳು. ಇನ್ನುಳಿದಂತೆ ಆತನ ಮೆಚ್ಚಿನ ತಾರೆಯರ ಹಾಗೂ ಅವನದೇ ಚಿತ್ರಗಳು. ರಾಜ್‌ಕಪೂರ್‌ರಿಗೆ ರಾಜ್‌ಕಪೂರ್‌ನೇ ಆಸಕ್ತಿ, ಪ್ರೀತಿ ಹಾಗೂ ವ್ಯಸನ. ಅವನಿಗೆ ಅವನೇ ವ್ಯಸನ. ಅಬ್ಬಾಸ್ ಬರೆಯುತ್ತಾರೆ : ರಾಜ್‌ಕಪೂರ್‌ರ ಶಬ್ಧಕೋಶದಲ್ಲಿ ಮುಖ್ಯವಾದ ಪದವೇ ಅವರು (ನಾನು). ಹೀಗಾಗಿ ಅವರ ಚಿತ್ರಗಳ ಹೆಸರಿನಲ್ಲಿಯೂ ಇದನ್ನು ಗಮನಿಸಬಹುದಾಗಿದೆ. ಉದಾಹರಣೆಗೆ- ‘ಮೇರಾ ನಾಮ್ ಜೋಕರ್’(mera naam joker), ‘ಮೈಂ ಔರ್ ಮೇರಾ ದೋಸ್ತ್’(me aur mera dost) ಹೀಗೆ ಹುಚ್ಚರಂತ ರಾಜ್‌ಕಪೂರ್ ತನ್ನನ್ನೇ ತಾನು ಆರಾಧಿಸಿಕೊಂಡದ್ದೇಕೆ? ತನ್ನೆಲ್ಲ ಚಿತ್ರಗಳಲ್ಲಿ ತಾನೇ ಏಕೆ ಪ್ರಶ್ನೆಯೋ ಅಥವಾ ಉತ್ತರವೋ ಆಗಬೇಕು? ಎನ್ನುವುದು ನಮ್ಮ ಪ್ರಶ್ನೆ ಅಲ್ಲವೇ? ಅಬ್ಬಾಸ(K A Abbas)ರ ಬಳಿ ಗೆಳೆಯನ ಈ ಹುಚ್ಚುತನದ ಬಗ್ಗೆ ಸ್ಪಷ್ಟವಾದ ಉತ್ತರವಿದೆ.
‘ಕಾಯಕವೇ ಪೂಜೆ ಎನ್ನುವುದಾದರೆ, ರಾಜ್‌ಕಪೂರ್ ೨೦ ನೇ ಶತಮಾನದ ಕರ್ಮಯೋಗಿಯೇ ಆಗಬೇಕು. ರಾಜ್‌ಕಪೂರ್ ಕೆಲಸವನ್ನು, ಕಲೆಯನ್ನು ಪ್ರೀತಿಸಿದ ಪರಿ ಶಬ್ಧಾತೀತವಾದುದು. ಹಿಡಿದ ಕೆಲಸದಲ್ಲಿಯ ನಿಶ್ಚಿತ ಗುರಿಗಾಗಿ ರಾಜ್‌ಕಪೂರ್ ಏನನ್ನೂ ತ್ಯಾಗ ಮಾಡಲು ಸಿದ್ಧನಾಗಿದ್ದ. ಒಂದು ಕಾರ್ಯ ಮುಗಿದಾಗ ಅಂತಿಮವಾಗಿ ಆತ ಕಾಣುತ್ತಿದ್ದುದು ಎರಡನ್ನೇ. ಒಂದು ತನ್ನನ್ನು, ಮತ್ತೊಂದು ತನ್ನ ಕೆಲಸವನ್ನು. ರಾಜ್‌ಕಪೂರ್ ಎಲ್ಲವನ್ನೂ ದುಡ್ಡಿಗಾಗಿ ಮಾಡಿದ ಎಂಬುದನ್ನು ಅಬ್ಬಾಸ್ ಸುತರಾಂ ಒಪ್ಪುವುದಿಲ್ಲ. ರಾಜ್‌ಕಪೂರ್‌ರಿಗೆ ‘ತೀಸರಿ ಕಸಂ’(teesari kasam) ಕುರಿತಾಗಿ ಬಂದ ಚಿತ್ರ ವಿಮರ್ಶಕರ ಮೆಚ್ಚುಗೆಯ ಮಾತುಗಳು ಹಾಗೂ ‘ಸಂಗಮ್’ (Sangam)ಸಿನಿಮಾದಿಂದ ಬಂದ ಅಪಾರ ಹಣ ಎರಡೂ ಸಮಾನವಾಗಿದ್ದವು. ರಾಜ್‌ಕಪೂರ್ ಎಂದೂ ಬೀಳಲು ಭಯಪಟ್ಟವನಲ್ಲ. ಹೀಗಾಗಿ ಹಾಗೆಯೇ ಬಿದ್ದರು. ನರ್ಗೀಸಳ ಮೋಹದಲ್ಲಿ ಕೂಡಾ. ಸೋಲಿನಲ್ಲಿ ಅಥವಾ ಗೆಲುವಿನಲ್ಲಿ ಆತನ ತನ್ಮಯತೆ ಮಾತ್ರ ಯೋಗಿಯದೋ ಅಥವ ಸಂತನದೋ ಆಗಿರುತ್ತಿತ್ತು ಎನ್ನುತ್ತಾರೆ ಅಬ್ಬಾಸ್. ಆತನ ಜಗತ್ತಿನಲ್ಲಿ ಆತನೊಬ್ಬ ಹುಚ್ಚ, ಇಲ್ಲಾ ಹುತಾತ್ಮ. ಆತ ದೈವಭಕ್ತ. ದೇವರನ್ನು ಮನುಷ್ಯ ಸಮಾಜದ ಕೋಟಿ ಕೋಟಿ ರೂಪಗಳಲ್ಲಿ ಆರಾಧಿಸಿದವನು. ಹೀಗಾಗಿ ಈ ಸಮಾಜದಿಂದ ಎಲ್ಲ ಕಾಲಕ್ಕೂ ಆರಾಧಿಸಲ್ಪಡುತ್ತಾರೆ ರಾಜ್‌ಕಪೂರ್ ಎನ್ನುತ್ತಾರೆ ಅಬ್ಬಾಸ್.
‘ಗೆಳೆಯ ರಾಜ್‌ಕಪೂರ್ ಯಾವಾಗಲೂ ಯೌವ್ವನದ ಮಾತುಗಳನ್ನಾಡಿದನು. ಆತನ ಬಾಬಿ(Bobby), ಪ್ರೇಮ್‌ರೋಗ್(prem rog), ರಾಮ್ ತೇರಿ ಗಂಗಾ ಮೈಲಿ(Ram teri Ganga maili) ಹಾಗೂ ಹೀನಾ(Heena)ಗಳು ಮುಪ್ಪಿಲ್ಲದ ಅವನ ಯೌವ್ವನಕ್ಕೆ ಸಾಕ್ಷಿಗಳು ಎಂದು ಬರೆಯುವ ಅಬ್ಬಾಸ್, ಮರುಜನ್ಮ ಎನ್ನುವುದು ಇರುವುದಾದರೆ ಅದು ಈ ಹುಚ್ಚನೊಂದಿಗೇ ಮತ್ತೆ ಸಾಧ್ಯವಾಗಲಿ ಎಂದೇ ಹೇಳಿಕೊಂಡಿದ್ದಾರೆ. ರಾಜ್‌ಕಪೂರ್ ಎಂಬ ಹುಚ್ಚು ಕುದುರೆಯ ಓಟವನ್ನು ಅಬ್ಬಾಸ್ ತಮ್ಮ ಜೀವಿತಾವಧಿಯಲ್ಲಿ ಅಲ್ಲಲ್ಲಿ ಆಗಾಗ ನಿರ್ದೇಶಿಸಿದ್ದರೇ ವಿನಃ ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ. ಗೆಳೆಯ ರಾಜ್‌ಕಪೂರ್‌ನ ಸಿನಿಮಾಗಳನ್ನು ಕುರಿತಾಗಿ ಕೇಳಿದಾಗಲೆಲ್ಲಾ ‘ಆಗ್’ (Aag)ಚಿತ್ರದ ಈ ದೃಶ್ಯವನ್ನು ಅಬ್ಬಾಸ್ ಪದೇ ಪದೇ ಹೇಳುತ್ತಿದ್ದರು-
‘ದೋಣಿಯೊಂದರಲ್ಲಿ ರಾಜ್‌ಕಪೂರ್ ಬರುತ್ತಾನೆ. ಇನ್ನೊಂದು ದೋಣಿಯಲ್ಲಿ ನರ್ಗೀಸ್(Nargis) ಬರುತ್ತಾಳೆ. ರಾಜ್-ನರ್ಗೀಸಳ ಕೈ ಹಿಡಿದು ತನ್ನ ದೋಣಿಗೆ ಅವಳನ್ನು ಸ್ವಾಗತಿಸುತ್ತಾನೆ. ಭಯ ಪಟ್ಟ ನರ್ಗೀಸ್ ‘ನಾನು ನೀರಿಗೆ ಬೀಳುತ್ತೇನೆ’ ಎನ್ನುತ್ತಾಳೆ. ಸಾಂತ್ವನ ಹೇಳಿದ ರಾಜ್ ‘ಹಾಂ, ನಾವು ನೀರಿಗೆ ಬೀಳೋಣ’ ಎನ್ನುತ್ತಾನೆ.
ಹೀಗಿದ್ದ ರಾಜ್‌ಕಪೂರ್, ಎಂದು ಅಬ್ಬಾಸ್(K A Abbas) ಮುಗುಳ್ನಗುತ್ತಾರೆ.



Tuesday, April 5, 2011

ಜಗತ್ತಿನಲ್ಲಿ ಅತೀ ರೋಮಾಂಚಕಾರಿ ಶಬ್ದ....(the world's mesmerising word-mother)


ಜಗತ್ತಿನಲ್ಲಿ ಅತೀ ರೋಮಾಂಚಕಾರಿ ಶಬ್ದ…….

         ನಿಮಗೆ ಬೇಜಾರಾದರೂ ಚಿಂತೆಯಿಲ್ಲ, ನಾನು ಮತ್ತೆ ಮತ್ತೆ ಹೇಳುತ್ತೇನೆ-ತಾಯಿಗೂ ನಾಯಿಗೂ ಬಹಳ ಸಾಮ್ಯತೆಗಳಿವೆ. ಮುಪ್ಪಿನ ದಾರಿದ್ರ್ಯದಲ್ಲಿ ಅವ್ವನ ಪಾಡು, ನಾಯಿ ಪಾಡಾಗಿರುತ್ತದೆ. ತನ್ನ ಕಂದಮ್ಮಗಳ ರಕ್ಷಣೆಗೆ ಅವಳು ನಾಯಿಯಂತೆ ಕಾಲು ಕೆದರಿ ಜಗಳಕ್ಕೂ ಸಿದ್ಧಳಾಗುತ್ತಾಳೆ. ಮಕ್ಕಳ ಬೆಳೆಯುವಿಕೆಯ ಪ್ರಕ್ರಿಯೆ ಅವ್ವ ಕಳೆದುಕೊಳ್ಳುವ ವ್ಯಥೆಯ ಹಾಡಾಗುತ್ತದೆ. ನಾವು ಹೆಂಡಂದಿರ ತೋಳುಗಳ ಬಿಸುಪಿಗೆ ಹೋದಷ್ಟೂ ಅವ್ವ ಬರಿದಾಗುತ್ತಾಳೆ. ನಾವು ಗಹನವಾದಷ್ಟೂ ಅವಳು ವಾಚಾಳಿಯಗುತ್ತಾಳೆ. ಮುಪ್ಪು ಆಕೆಯ ಮೈ ಏರಿದಷ್ಟೂ ಅವಳು ಹತಾಶಳಾಗುತ್ತಾಳೆ, ಜಗಳಗಂಟಿಯಾಗುತ್ತಾಳೆ, ಮಣ್ಣುಮಯವಾಗಿ ಕಣ್ಣು ಮುಚ್ಚುವವರೆಗೂ ಅವಳು ಪ್ರೀತಿಗಾಗಿ ಹಪಹಪಿಸುತ್ತಾಳೆ. ನಮ್ಮ ಕವಿಗಳ ಸಾಲುಗಳಲ್ಲಿಯೇ ಅವಳನ್ನು ವ್ಯಾಖ್ಯಾನಿಸಬೇಕೆಂದರೇ, ಅವಳು ‘ಬನದ ಕರಡಿ’, ‘ಭುವನದ ಬಾಗ್ಯ’, ‘ಎದೆಯ ಬೂದಿ’, ‘ಛಲದ ಹಾದಿ’,‘ ನೆಲದ ಕೋಟಿ ಕೋಟಿ ಜೀವ ಜನ್ಮದ ಧಾರೆಯದಾರಿ’.
              
             ಜಗತ್ತಿನಲ್ಲಿ ಅತೀ ರೋಮಾಂಚಕಾರಿ ಶಬ್ದ ಯಾವುದು? ಎಂದು ಯಾರಾದರೂ ನನ್ನನ್ನು ಕೇಳಿದರೆ ‘ಅವ್ವ’ ಎಂದೇ ಹೇಳುತ್ತೇನೆ.  ಅವ್ವನನು ಹುಗಿದು ಬಂದು ನಿರಮ್ಮಳವಾಗಿರುವುದು ಯಾರಿಗಾದರೂ ಸಾಧ್ಯವೇ?

             ಗಯ್ಯಾಳಿಯಾಗಿದ್ದ ಹೆಂಡತಿಯ ಕಪಿಮುಷ್ಟಿಯಿಂದ ಮುಪ್ಪಿನ ತಾಯಿಯನ್ನು  ಉಳಿಸಿಕೊಳ್ಳಲು ಹೋರಾಡಿದ,ತಮ್ಮ ಸಂಸಾರವನ್ನೇ ಬಲಿಕೊಟ್ಟ        ನನ್ನಗುರುಗಳೊಬ್ಬರನ್ನುನೋಡಿದ್ದೇನೆ. “ಮಗನ ಮದುವೆಯೆಂಬುದು ತಾಯಿಗೆ ಯವ ಕಾಲಕ್ಕೂ ನೆಮ್ಮದಿ ತರುವ ವಿಷಯವಲ್ಲ. ಅದು ಪ್ರೀತಿಗಾಗಿ ಹೋರಾಟ ಪ್ರಾರಂಭವಾಗುವುದರ ದಿನ. ಹೀಗಾಗಿ ಯಾವ ಕಾಲಕ್ಕೂ ಮದುವೆಯ ವಿಷಯದಲ್ಲಿ ತಾಯಿಯ ವಿರುದ್ಧ ಹೋಗಬಾರದು” ಎಂದು ಗುರುಗಳೊಬ್ಬರು ಹೇಳುತ್ತಿದ್ದುದನ್ನು ಕೇಳಿದ್ದೇನೆ.
       
             ಅವು ಸಂಶೋಧನೆಗಾಗಿ ನಾನು ಅಲೆಮಾರಿಯಾಗಿದ್ದ ದಿನಗಳು. ಬಾಲ್ಯ ಸ್ನೇಹಿತನೊಂದಿಗೆ ಸೇರಿಕೊಂಡು ಪುಣೆಗೆ ಹೋಗಿದ್ದೆ. ಅಲ್ಲಿ ಅವನ ಅವ್ವ ವೇಶ್ಯಾವೃತ್ತಿ  ಮಾಡಿಕೊಂದು ಬದುಕಿದ್ದಳು. ಪುಟ್ಟ ಕೋಣೆ. ಅದರಲ್ಲೇ ಒಂದು ಮಂಚ. ರಾತ್ರಿ ನಾವಿಬ್ಬರು ಗೆಳೆಯರು(ಮಕ್ಕಳು) ಮಂಚದ ಮೇಲೆ ಮಲಗಿದರೇ ಅವಳು ಅದರ ಕೆಳಗೆ ಮಲಗಿಕೊಂಡು ಈ ಸಮಾಜದಿಂದ, ಮನೆಯವರಿಂದ ತಾನು ಮೊಸ ಹೋದ ಕಥೆಯನ್ನು ಹೇಳುತ್ತಿದ್ದಳು.

            ಅವಳದು ಚಿಕ್ಕ ವಯಸಿನಲ್ಲಿಯ ಮದುವೆ. ಕುಗ್ರಾಮದಿಂದ ಗಂಡನನ್ನು ಅನುಸರಿಸಿ ಬೊಂಬಾಯಿಗೆ ಹೋದಳು. ಇದ್ದಕ್ಕಿದ್ದಂತೆ ಕುಡುಕ ಗಂಡ ಸತ್ತು ಹೋದ. ಆಗಲೇ ಮೂರು ಮಕ್ಕಳ ತಾಯಿ. ಮರಳಿ ತವರಿಗೆ ಬರಬೇಕೆಂದರೆ ತಾಯಿಯೂ ದೈವಾಧಿನ. ಅಷ್ಟರಲ್ಲಿಯೇ ಬೊಂಬಾಯಿಯ ಕೆಂಪು ದೇಪದ ಪ್ರಪಂಚ ಅವಳಿಗೆ ಸದಸ್ಯತ್ವ ಕೊಟ್ಟಿತ್ತು. ಮೂರು ಮಕ್ಕಳನ್ನು  ಯಥೀಮಖಾನೆ(ಅನಥಾಶ್ರಮ)ಯಲ್ಲಿ ಹಾಕಿ ಅವಳು ದುಬೈಗೆ ಹೋದ ಸುದ್ದಿಯನ್ನು ಕೇಳುತ್ತಲೇ ಆಕೆಯ ದುಷ್ಟ ಸಹೋದರನೊಬ್ಬ ಓಡಿ ಹೋಗಿ ಈಕೆಯ ಮೂರು ಮಕ್ಕಳನ್ನು ತಂದು ತನ್ನ ಬಳಿ ಇರಿಸಿಕೊಂಡ. ಈ ಅವ್ವ ಆಗ  ಚಿನ್ನದ ಮೊಟ್ಟೆ ಇಡುವ ಕೋಳಿಯಾದಳು. ಯೌವ್ವನವನ್ನು ಮಾರಿಕೊಂಡು ತನ್ನ ಹಣವನ್ನೆಲ್ಲಾ ಮಕ್ಕಳಿಗಾಗಿ ಕಳುಹಿಸಿದಳು. ಈಕೆಯ ಮಕ್ಕಳ ಹೆಸರಿನಲ್ಲಿ ಅಣ್ಣ ಶ್ರೀಮಂತನಾದ, ಮಕ್ಕಳು ಭಿಕಾರಿಗಳಾಗಿಯೇ ಉಳಿದರು. ದುಬೈಯಿಂದ ಆಕೆ ಬಂದಾಗ ಮತ್ತೆ ಬಾಡಿಗೆ ಮನೆಯೇ ಗತಿಯಾಗಿತ್ತು. ಹಿರಿಯ ಮಗನ ಮದುವೆಯಾಯಿತು. ವೇಶ್ಯಾವೃತ್ತಿಯ ಹಿನ್ನೆಲೆ ಹೊಂದಿದ್ದಈ ಅತ್ತೆ ಸೊಸೆಗೆ ಕಾಲಕಸವಾದಳು. ಒಂದು ದಿನ ಈ ತಾಯಿಯ ಗಂಟುಮೂಟೆಗಳನ್ನು ಸೊಸೆ ಎತ್ತಿ ರಸ್ತೆಗೆಸೆದಳು. ತಾಯಿಯ ಬಾಳು ಮತ್ತೆ ನಾಯಿಯ ಬಾಳಾಯಿತು. ತನಗೆ ತನ್ನ ವೃತ್ತಿಯೇ ಗತಿಯೆಂದು ಮತ್ತೆ ಪೂನಾಕ್ಕೆ ಓಡಿದಳು. ವಯಸ್ಸಾಗಿತ್ತು, ಯಾರು ಬರಬೇಕು ಈಗವಳ ಬಳಿ? ಮತ್ತೆ ಮರಳಿದಳು ಮಗನ ಆಸರೆ ಬಯಸಿ. ಮಗ ಪ್ರೀತಿಸಿದ, ಸೊಸೆ ಧಿಕ್ಕರಿಸಿದಳು. ಹೃದಯ ಬೇನೆಯಿಂದ ಬಳಲುತ್ತಿದ್ದ ತಾಯಿ ಹೀಗೊಂದು ದಿನ ಕೊನೆಯುಸಿರೆಳೆದಳು. ಮಗ ದುಖಿಃಸಿದ, ಸೊಸೆ ಸ್ವಾತಂತ್ರೋತ್ಸವ ಆಚರಿಸಿದಳು. ನಾನು ಈ ಅವ್ವನ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದೆ.ಬರೀ ಬೆತ್ತಲಾಗಿದ್ದ ದೇಹಕ್ಕೆ ಬಿಳಿ ಬಟ್ಟೆ ಸುತ್ತಿದ್ದರು. ಆಕೆಯ ತೋಳುಗಳಲ್ಲಿ ಒದ್ದಾಡಿದ ಗಂಡಸರು ಆಕೆಗೆ ಮೋಕ್ಷದ ದಾರಿ ತೋರಿಸುತ್ತಿದ್ದರು.

         ಸಾವಿರಾರು ಗಾವುದ ಈ ಮಕ್ಕಳಿಗಾಗಿ ಹಂಬಲಿಸಿ ಬಂದಿದ್ದ ಆ ಅವ್ವನಿಗೆ ಸಾವು ನೀಡಿದಷ್ಟು ಸುಖವನ್ನು ಸೊಸೆಯಾಗಲೀ,ಮಗನಾಗಲೀ, ಸಮಜವಾಗಲೀ, ನೀಡಲಿಲ್ಲ ಎನಿಸುತ್ತದೆ. ಯಾರೋ ಬರೆದ ಕವನ ನೆನಪಾಗುತ್ತದೆ-

               “ಹುಗಿದ ನೆಲದೊಳಗೊಂದಿಷ್ಟು
               ಸುಮ್ಮನಿರಬಹುದು  ನನ್ನವ್ವ
               ನರಳುವ ನಾಯಿ ಬಾಳಿನಿಂದ ಮುಕ್ತಿ ಪಡೆದು
               ಅವ್ವ ತಣ್ಣಗಿರಬಹುದು”

                                          

                       ಡಾ.ರಾಜಶೇಖರ ಮಠಪತಿ(ರಾಗಂ)