Total Pageviews

Saturday, November 5, 2011

ಸಾಧನೆಯ ಹಾದಿಯಲ್ಲಿ: ಡಾ ಐ ಎಮ್ ಮೋಹನ್

                            
                     

‘ಪ್ರೀತಿಯಿಲ್ಲದೆ ನಾನೇನೂ ಮಾಡುವುದಿಲ್ಲ. ದ್ವೇಷವನ್ನೂ ಕೂಡ ’-ಇವು ನನ್ನ ಗುರುಗಳಾದ ಚಂಪಾ ಅವರ ಸಾಲುಗಳು. ಈ ಪ್ರೀತಿಯ ನೆಲೆಗಳೇ ವಿಚಿತ್ರ. ಒಂದಂತೂ ಸತ್ಯ, ಪ್ರೀತಿಸದ, ಪ್ರೀತಿಗೊಳಪಡದ ಬದುಕಿಗೆ ಒಂದು ಹಿತವಿರುವುದಿಲ್ಲ. ನಾನು ಬೇಲೂರಿಗೆ ಬಂದಂದಿನಿಂದ ನನ್ನ ಪ್ರೀತಿಯ ತೆಕ್ಕೆಗೆ ಬಿದ್ದ ಕೆಲವೇ ಹಿರಿಯರಲ್ಲಿ ಡಾ.ಐ ಎಮ್ ಮೋಹನ್ ರು ಒಬ್ಬರು. ಈಗ ಅವರಿಗೆ ೫೬ನೆಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇದೇ ಹದಿಮೂರರಂದು ಬೇಲೂರಿನಲ್ಲಿ ನಾಗರಿಕ ಸನ್ಮಾನ. ಹೀಗಾಗಿ ಅವರ ಸಾಧನೆಯ ಹಾದಿಯ ಒಂದು ಅವಲೋಕನ ನಿಮ್ಮೊಂದಿಗೆ ಅವಶ್ಯಕ ಎಂದುಕೊಂಡಿದ್ದೇನೆ ನಾನು.  

        ಮೂಲತಃ ಈ ಪ್ರಪಂಚದಲ್ಲಿ ಯಾವುದಕ್ಕೂ ಯಾವ ಅರ್ಥವೂ ಇಲ್ಲ. ಒಂದರ್ಥದಲ್ಲಿ ಅರ್ಥ ಎನ್ನುವುದು ಆಪಾದನೆ. ಅದೊಂದು ರೀತಿಯ ಎಡಿಷನ್(edition). ಈ ಬದುಕೇ ಒಂದು ರೀತಿಯ ಅರ್ಥದ ಅನ್ವೇಷಣೆ. ಕ್ರಿಯೆಯ ಮೂಲಕ ಅರ್ಥಗಳನ್ನು ತುಂಬಿ ಮನುಷ್ಯ ಮಹಾನ್ ಆಗುತ್ತಾ ಬಂದಿದ್ದಾನೆ. ಮತ್ತು ಅಂಥವರ ಬದುಕು ಅರ್ಥಪೂರ್ಣ ಬದುಕು ಎಂದು ಇತಿಹಾಸದಲ್ಲಿ ದಾಖಲಿಸಿದ್ದಾನೆ.

       ಬದುಕಿಗೆ ಈ ಅರ್ಥಗಳನ್ನು ಆಪಾದಿಸುವ, ಅರ್ಥದ ಹೊಸ ಸಾಧ್ಯತೆಗಳನ್ನು ಹುಡುಕುವ ಮನುಷ್ಯ ಯಾವ ದೊಡ್ಡ ಕುಟುಂಬಕ್ಕೆ ಸಂಬಂಧಿಸಿದವನು ಮತ್ತು ಯಾವ ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಿನ್ನೆಲೆಗಳಿಂದ ಬಂದವನು ಎನ್ನುವ ಪ್ರಶ್ನೆಗಳು ಮುಖ್ಯವಾಗುವುದಿಲ್ಲ, ಬದಲಾಗಿ ಆತ ಯಾವ ಬದ್ಧತೆಗಳನ್ನು ಕಾಯ್ದುಕೊಂಡವನು ಎನ್ನುವುದು ಚಿಂತನಾರ್ಹ. ಮನುಷ್ಯ ಎಂದರೆ ಬದ್ಧತೆ. ಇಂತಹ ಬದ್ಧತೆಗೆ ಒಂದು ಉದಾಹರಣೆ ಡಾ ಐ ಎಮ್ ಮೋಹನ್.

       ಕನಾಟಕದಲ್ಲಿ ಬರೀ ಪ್ರಾಂಶುಪಾಲರಾಗಿದ್ದುಕೊಂಡೇ ಸಾಧನೆ ಮಾಡಿದ ಕೆಲವರಿದ್ದಾರೆ. ಉದಾಹರಣೆಗಾಗಿ ಹೇಳಬೇಕೆಂದರೆ ಪ್ರೊ.ಗಣಾಚಾರಿ, ಭೋಗಿಶಯನ, ಪ್ರೊ ಜಿ ಬಿ ಸಜ್ಜನ. ಇವರೆಲ್ಲಾ ಒಂದು ಕಾಲೇಜಿನ ಪ್ರಾಂಶುಪಾಲರಾಗಿ ಸಮಾಜದ ಗಮನ ಸೆಳೆದ ವ್ಯಕ್ತಿಗಳು. ಈಗ ಈ ಪರಂಪರೆಗೆ ಒಂದು ಹೊಸ ಸೇರ್ಪಡೆ ಡಾ ಐ ಎಮ್ ಮೋಹನ್.

       ೧೯೬೪ರ ನವ್ಹೆಂಬರ್ ೧೮ ರಂದು ಐರವಳ್ಳಿ ಮಂಜೇಗೌಡ ಮೋಹನರವರು ಬೇಲೂರು ತಾಲ್ಲೂಕಿನ ಪುಟ್ಟ ಗ್ರಾಮವಾದ ಐರವಳ್ಳಿಯಲ್ಲಿ ಜನಿಸಿದರು. ಬಾಲ್ಯದ ಏಳನೇಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರೂ ತಾಯಿ ಹುಚ್ಚಮ್ಮನವರ ಮಮತೆ, ಬೆಳವಣಿಗೆಯ ಯಾವ ಹಂತಗಳಲ್ಲೂ ಕೈ ಬಿಡಲಿಲ್ಲ. ನಿಷ್ಠುರತೆ, ಶಿಸ್ತು, ಕೃಷಿ ಕುರಿತ ಕಾಳಜಿ, ಒಕ್ಕಲುತನದ ಸೂಕ್ಷ್ಮತೆ ಹಾಗೂ ಸಂಗೀತದ ದೀಕ್ಷೆಯನ್ನು ತಂದೆ ಮಂಜೇಗೌಡರಿಂದ ಪಡೆದಿದ್ದ ಮೋಹನ, ಅಣ್ಣ-ಅಕ್ಕರೊಂದಿಗೆ ಜೀವನವನ್ನು ಅರ್ಥೈಸಿಕೊಂಡರು. ಪ್ರಾಥಮಿಕ ಶಿಕ್ಷಣವನ್ನು ಗೆಂಡೆಹಳ್ಳಿಯಲ್ಲಿ, ಕಾಲೇಜು ಶಿಕ್ಷಣವನ್ನು ಹಾಸನದಲ್ಲಿ, ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದರಲ್ಲದೇ, ಸಧ್ಯ ಬೆಳಗಾವಿಯ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ. ಅನಂತನ್ ಅವರ ಮಾರ್ಗದರ್ಶನದಲ್ಲಿ ಬಹಾದ್ದೂರ ಇನಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಮೈಸೂರಿನಿಂದ ಡಾ ಐ ಎಮ್ ಮೋಹನ್ ತಮ್ಮ ಪಿ.ಎಚ್.ಡಿ ಯನ್ನು ಪೂರೈಸಿದರು.

        ಯಾವ ವ್ಯಕ್ತಿಯು ಸ್ವಯಂಭೂ ಅಲ್ಲ. ಆತ ಅನೇಕ ವ್ಯಕ್ತಿ ಮತ್ತು ಶಕ್ತಿಗಳ ಸಂಗಮ. ಅನೇಕ ಪ್ರಭಾವಗಳ ಪ್ರತಿಫಲನ. ಹಾಗೆಯೇ ಡಾ ಐ ಎಮ್ ಮೋಹನ್‌ರನ್ನೂ ಕೂಡ ಅನೇಕ  ಗುರುವರ್ಯರು ರೂಪಿಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಎಮ್ ನರಸಿಂಹಮೂರ್ತಿ, ಪ್ರೊ ರಂಗರಾವ್, ಪ್ರೊ ನರಸಿಂಹರಾವ್, ಪ್ರೊ ಶ್ರೀಪಾದ ಹಾಗೂ ಡಾ.ಅನಂತನ್ ಅವರನ್ನೂ ಇಲ್ಲಿ ಸ್ಮರಿಸಬಹುದು. ಇದುವರೆಗೆ ೫೦ ಕ್ಕೂ ಮೀರಿದ ಪ್ರೊಜೆಕ್ಟ್‌ಗಳಿಗೆ, ಏಳು ಜನ ಎಮ್‌ಫಿಲ್ ವಿದ್ಯಾರ್ಥಿಗಳಿಗೆ ಹಾಗೂ ಓರ್ವ ಪಿಎಚ್‌ಡಿ ವಿದ್ಯಾರ್ಥಿಗೆ ಮಾರ್ಗದರ್ಶಕರಾಗಿರುವ ಡಾ ಐ ಎಮ್  ಮೋಹನ್ ಕ್ರಿಯಾಶೀಲ ಜೀವನ ಪದ್ಧತಿಯನ್ನ ರೂಢಿಸಿಕೊಂಡಿದ್ದಾರೆ.

         ಹೊಳೆನರಸೀಪುರ, ಮೈಸೂರು, ಕುಶಾಲನಗರ, ಹಾಸನ, ಸಕಲೇಶಪುರ ಹಾಗೂ ಸಧ್ಯ ಬೇಲೂರಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ ಐ ಎಮ್ ಮೋಹನ್ ನಿಂತ ನೀರಲ್ಲ. “ಹರಿವ ಹೊಳೆಗೂ ಉಂಟು ಎರಡು ತೋಳು, ಬೆಸೆಯಬೇಕಲ್ಲವೇ ನಮ್ಮ ಬಾಳು” ಎನ್ನುವ ಕವಿವಾಣಿಯಂತೆ ತಾವು ಸೇವೆ ಸಲ್ಲಿಸಿದ ಪ್ರತಿ ಸ್ಥಳದಲ್ಲಿಯೂ ಡಾ. ಮೋಹನ ಏನಾದರೂ ಒಂದು ಹೊಸದನ್ನು ಮಾಡಲು ಹೆಣಗಾಡಿದ್ದಾರೆ. ಯುಜಿಸಿ ಗೆ ಸಂಬಂಧಪಟ್ಟ ಅನೇಕ ಚಟುವಟಿಕೆಗಳಲ್ಲಿ ತಮ್ಮನ್ನೇ ತಾವು ಯಾವಾಗಲೂ ತೊಡಗಿಸಿಕೊಂಡು ನಿರ್ಜೀವ ಕಾಲೇಜಿಗೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಸಧ್ಯ ಕಾಲೇಜಿಗೆ ಹೊಸ ಕಾಯಕಲ್ಪ ನೀಡಿದ್ದಾರೆ. ಗೂಂಡಾಗಿರಿ, ಅಶಿಸ್ತು, ಅಕ್ರಮತೆಯ ಕೇಂದ್ರವಾಗಿದ್ದ ಕಾಲೇಜನ್ನು ಶಿಸ್ತು, ಸಮಯ ಪರಿಪಾಲನೆಯ ಮೂಲಕ ವಿದ್ಯಾಮಂದಿರವಾಗಿ ಬದಲಾಯಿಸಿ ಬೇಲೂರು ಜನತೆಯ ಪ್ರೀತಿ ಮತ್ತು ಗೌರವಗಳಿಗೆ ಭಾಜನರಾಗಿದ್ದಾರೆ. ಇಂದು ಡಾ.ಮೋಹನರವರನ್ನು ಗುರುತಿಸುವುದೆಂದರೆ ವೈಡಿಡಿ ಕಾಲೇಜನ್ನೇ ಗುರುತಿಸಿದಂತೆ. ಒಂದು ಸಾರ್ಥಕ ಬದುಕಿರಬೇಕು, ಕಾಯಕದ ಬಗ್ಗೆ ತೃಪ್ತಿ ಇರಬೇಕು, ಆಮೂಲಕ ಸಮಾಜದ ಋಣ ತೀರಿಸಬೇಕು ಎಂದು ಸದಾ ಆಲೋಚಿಸುವ ಡಾ. ಮೋಹನ ಧೀರ್ಘಾಯುಷಿಗಳಾಗಲಿ ಎನ್ನುವುದು ನಮ್ಮ ಹರಕೆ.

         ತಮ್ಮ ಸಹಧರ್ಮಿಣಿಯು, ಸಹೊದ್ಯೋಗಿಯೂ ಆಗಿರುವ ಶ್ರೀಮತಿ ಎಚ್ ಎಸ್ ಸುನಂದಾ ಅವರಿಂದಲೂ ನಾನು ಈ ಬದುಕಿನಲ್ಲಿ  ಏನೆಲ್ಲವನ್ನು ಕಲಿತಿದ್ದೇನೆ ಎಂದು ವಿನೀತನಾಗಿ ಹೇಳುವ ಡಾ.ಮೋಹನ ವೈದ್ಯಕೀಯ ಓದುತ್ತಿರುವ ಎರಡು ಮಕ್ಕಳ ತಂದೆ ಕೂಡ. “ಮನೆ ಗೆಲ್ಲದವನು ಸಮಾಜವನ್ನು ಗೆಲ್ಲಲಾರ” ಎನ್ನುವ ಸತ್ಯವನ್ನು ತಿಳಿದಿರುವ ಡಾ.ಮೋಹನ ತಮ್ಮ ವೈಯಕ್ತಿಕ ಬಾಳನ್ನು ಸೊಗಸಾಗಿರಿಸಿಕೊಂಡವರು. ಈ ಸೊಗಸಾದ ಬಾಳು ನಿರಂತರವಾಗಿರಲಿ ಎನ್ನುವುದೇ ನಮ್ಮ ನಿಮ್ಮೆಲ್ಲರ ಹಾರೈಕೆ ಅಲ್ಲವೇ?


No comments:

Post a Comment