Total Pageviews

Sunday, September 15, 2013

ವಿ.ಕೃ.ಗೋಕಾಕ್ : ದೊಡ್ಡ ಮನುಷ್ಯ, ದೇವತಾ ಮನುಷ್ಯ



ಮಾನವನಂತೆ ಮಣ್ಣಿನೊಳು ಜನಿಸಿ ಮಣ್ಣಾಗುತ್ತ
ಮುಳು ಮುಳು ಅತ್ತು, ಪಿಸಿ ಪಿಸಿ ನಕ್ಕು, ಹೊರಳಾಡಿ ನರಳಾಡಿ
ಕುಣಿ ಕುಣಿದು ಚಿಂತಿಸಿ, ಧೇನಿಸಿ, ಭೋಗಯೋಗಗಳ
ಸಾಧನೆಯಲ್ಲಿ ಭಾವ ಬುದ್ಧಿ ಕರ್ಮದ ಮಿಲನ.
                                                                                                      ವಿ.ಕೃ.ಗೋಕಾಕ್
ದಿನಾಂಕ 09/08/2013ರಂದು ನನ್ನ ಗುರುಗಳಾದ ಚಂಪಾ(Champa) ಬರೆದ ‘ನನ್ನ ಗುರು ಗೋಕಾಕ’ ಪುಸ್ತಕ ಬಿಡುಗಡೆ ಸಮಾರಂಭವು ಕರ್ನಾಟಕ ಸ್ವಾಭಿಮಾನಿ ವೇದಿಕೆಯಿಂದ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರಿನಲ್ಲಿ ಜರುಗಿದಾಗ ಗೋಕಾಕರ ‘ಭಾರತ ಸಿಂಧು ರಶ್ಮಿ’ಯ ಈ ಮೇಲಿನ ಸಾಲುಗಳಿಂದ ನನ್ನ ಮಾತುಗಳನ್ನಾರಂಭಿಸಿದೆ. ಎಷ್ಟೆಲ್ಲ ಬರೆದಿದ್ದ ಗೋಕಾಕ ಸಾಹಿತ್ಯಾಸಕ್ತರ ಗಮನದಲ್ಲಿ ಉಳಿದದ್ದು ಮಾತ್ರ ಅವರ ಇಂಥ ಕೆಲವು ಪದ್ಯಗಳಿಂದ. ಉಳಿದಂತೆ ಅವರು ಮತ್ತೆ ನೆನಪಾಗುವುದು ಕಮಲ ಕುಂಜ, ಗೋಕಾಕ ಚಳುವಳಿ(Gokak Chaluvali), ಸಿ.ಆಯ್.ಇ.ಎಫ್.ಎಲ್(C.I.E.F.L), ಸಾಯಿಬಾಬಾ(Saibaba)ರೆಡೆಗಿನ ಶ್ರದ್ಧೆ ಮತ್ತು ಬೇಂದ್ರೆಯವರಿಗೆ ಸಲ್ಲಿಸಿದ ಸೇವೆಯಿಂದಾಗಿ.

        ಹಸ್ತ ಸಾಮುದ್ರಿಕೆಯನ್ನು ಬಲ್ಲವರಾಗಿದ್ದ ಗೋಕಾಕ ಹಲಸಂಗಿಯ ಗೆಳೆಯರ ಬಳಗಕ್ಕೂ ಅತ್ಯಂತ ನಿಕಟವರ್ತಿಗಳಾಗಿದ್ದರು ಎಂದು ಸಿಂಪಿ ಲಿಂಗಣ್ಣ ನನಗೆ ಆಗೀಗ ಹೇಳುತ್ತಿದ್ದ ನೆನಪು. ಬಿಜಾಪುರದಲ್ಲಿದ್ದಾಗ ಜಿ.ಬಿ.ಸಜ್ಜನರು ಗೋಕಾಕರ ಇಂಗ್ಲೀಷ್ ಕೈಬರಹವನ್ನು ಮತ್ತು ತಮ್ಮಿಬ್ಬರ ಮಧ್ಯದ ಪತ್ರ ವ್ಯವಹಾರವನ್ನು ನನ್ನ ಮುಂದೆ ವಿವರಿಸುತ್ತಿದ್ದುದರ ನೆನಪು. ಅಂದಹಾಗೆ ಗೋಕಾಕರ ಕೈ ಬರಹ ಅಷ್ಟೊಂದು ಮುದ್ದಾಗಿರಲಿಲ್ಲ. ನಾನು ಗೋಕಾಕರನ್ನು ಮುಖತಃ ನೋಡಿದ್ದು ಧಾರವಾಡದಲ್ಲಿ, ಅವರ ಪ್ರೀತಿಯ ಕರ್ನಾಟಕ ಕಾಲೇಜಿನ ಆವರಣದಲ್ಲಿ, ಅವರ ಹೆಸರಿನಲ್ಲಿಯೇ ಉದ್ಘಾಟನೆಯಾಗುತ್ತಿದ್ದ ಗ್ರಂಥಾಲಯದ ಸಮಾರಂಭಕ್ಕೆ ಅವರು ಬಂದಿದ್ದರು. ಬಹುತೇಕ ಅದೇ ಅವರ ಕೊನೆ ಸಮಾರಂಭವಾಯಿತೆನೋ?
        ರಾಜಕೀಯದಲ್ಲಿ ಅರಸು(Devaraj Arasu) ಮತ್ತು ರಾಮಕೃಷ್ಣ ಹೆಗಡೆ(Ramakrishna Hegade)ಯಂತೆ ಸಾಹಿತ್ಯ ಲೋಕದಲ್ಲಿ ಅತಿ ದೊಡ್ಡ ಶಿಷ್ಯರ, ಲೇಖಕರ ಪಡೆಯನ್ನು ನಿರ್ಮಿಸಿದವರು ಗೋಕಾಕ. ಬಹುತೇಕ ಅದೇ ಅವರ ಬಹಳ ದೊಡ್ಡ ಕೊಡುಗೆಯೂ ಕೂಡ. ಸ್ವಜನ ಪಕ್ಷಪಾತವಿಲ್ಲದ ನಿರ್ಮೋಹದ ಗುರು. ಚಂಪಾ ಹೇಳುವಂತೆ ‘ಅನೇಕರ ಬಾಳ ದೇಗುಲದಲ್ಲಿ ಮೇರೆಯುತಿಹ ಹಿರಿ ಕವಿಯೆ’ ಗೋಕಾಕರನ್ನು ನಾನು ಸಮೀಪದಿಂದ ಬಲ್ಲವನಲ್ಲದಿದ್ದರೂ ಅವರ ಅತ್ಯಂತ ಪುಟ್ಟ ಹೊತ್ತಿಗೆಯಾದ ಜೀವನ ಕಾಳಜಿಯಿಂದ ತುಂಬಿಕೊಂಡ ಕೃತಿ ‘ಜೀವನ ಪಾಠಗಳು’ ನನ್ನ ಹೃದಯಕ್ಕೆ ಹತ್ತಿರ.
        ವೈ.ಎಸ್.ವಿ ದತ್ತ, ಕಮಲಾ ಹಂಪನಾ, ಎಚ್,ಆರ್.ಅಮರನಾಥ, ಗೋಕಾಕರ ಮಗ ಅನೀಲ ಗೋಕಾಕ(Anil Gokak), ಡಾ.ರಾಜಕುಮಾರ(Dr.Rajakumar) ಅವರಿಗೆ ಯೋಗ ಕಲಿಸಿಕೊಟ್ಟ ಯೋಗ ಗುರು ನಾಯ್ಕರ್, ಎಸ್.ಎನ್.ಕಾತರಕಿ ಹೀಗೆ ಎಪ್ಪತ್ತರ ಆಸುಪಾಸಿನ ಈ ಎಲ್ಲ ಹಿರಿಯರ ಮುಂದೆ, ಗೋಕಾಕರ ನೇರ ಒಡನಾಡಿಗಳ ಮುಂದೆ ನಿಂತು ನಾನೇನು ಮಾತನಾಡುವುದು? ಎಂದು ಚಿಂತಿಸುತ್ತಿದ್ದಾಗ ನನ್ನ ಸಹಾಯಕ್ಕೆ ಬಂದದ್ದು ಗೋಕಾಕರ ನೇರ ಶಿಷ್ಯರೂ, ನನ್ನ ಗುರುಗಳೂ ಆದ ಜಿ.ಬಿ.ಸಜ್ಜನ(G.B.Sajjan)ರ ಪತ್ರ. ಮಹಾರಾಷ್ಟ್ರದ ಬಾರಾಮತಿಯಲ್ಲಿ ಕುಳಿತುಕೊಂಡು 15 ಜುಲೈ 2013ರಂದು ಅವರು ನನಗೆ ಈ ಪತ್ರವನ್ನು ಬರೆದಿದ್ದಾರೆ. ಆದರೆ ದೊಡ್ಡ ಮನುಷ್ಯನೊಬ್ಬ ದೊಡ್ಡವರನ್ನು ಕುರಿತು ಹೇಗೆ ದಾಖಲಿಸುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದ್ದರಿಂದ ಈ ಪತ್ರವನ್ನು ಅಂದಿನ ಸಭೆಯಲ್ಲಿ ನಾನು ಬಳಿಸಿಕೊಂಡೆ. ನೀವೂ ಓದಿ. . . .

“ಪ್ರಿಯ ‘ರಾಗಂ’ ಅವರೇ
        ಹೇಗಿದೀರಿ? ಇತ್ತೀಚಿನ ಬರಹ ಯೋಜನೆ ಏನು? ಗೋಕಾಕ(V.K.Gokak)ರ ‘ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆ ತರುವೆ ನಾ’ ಆಗಾಗ ಹಾಡಿಕೊಂಡಿರ್ತೇನೆ. ಅಷ್ಟೇ ಅದೊಂದೇ ಸಾಲು ಬರ್ತದೆ. ಮುಂದಿನ ರಾಗವೂ ತಪ್ಪಿ ಹೋಗುತ್ತೆ. ಹೋದರೇನಂತೆ, ಅದರ ಹಿಂದೆ ಇರುವ ಮಾಧುರ್ಯ ಉಳಿದಿರುತ್ತೆ. “ನಿಮ್ಮ ಹಾಡನ್ನು ಹಾಡುವ ವಿದ್ಯಾರ್ಥಿನಿ ನಮ್ಮಲ್ಲೊಬ್ಬರಿದಾರೆ. ಹಾಡಿನ ಸನ್ನಿವೇಶ ಮನದ ಮುಂದೆ ಮೂಡಿ ನಿಲ್ಲುವಂತೆ ಸುಶ್ರಾವ್ಯವಾಗಿ ಹಾಡ್ತಾಳೆ. ಅದನ್ನು ಕೇಳಲಾದರೂ ನೀವೊಮ್ಮೆ ನಮ್ಮ ಕಾಲೇಜಿಗೆ ಬರಬೇಕು” ಅಂತ ಗೋಕಾಕರಿಗೆ ಆಮಿಷೆ ಒಡ್ಡಿದ್ದೆ - ಪತ್ರ ಮುಖೇನ ಅಂತ ಕಾಣ್ತದೆ. ಅವರು ಆಗ ಎಲ್ಲಿದ್ದರೋ  ನೆನಪಿಲ್ಲ. ಧಾರವಾಡ ಬಿಟ್ಟು ಹೋದಮೇಲೆ (ಕರ್ನಾಟಕ ಕಾಲೇಜಿನಿಂದ ನಿರ್ಗಮಿಸಿದ ಮೇಲೆ) ಅಲ್ಲಿಗೆ ಅವರೇನು ಬರಲಿಲ್ಲ, ನೆಲೆಸಲಿಲ್ಲ.
 ಅವರು ಬೆಂಗಳೂರಿನಲ್ಲಿರಲಾಗಿಯೇ, ಅವರಿಂದ ಅವರ ಎರಡೂ ಕವನಸಂಕಲನಗಳ ಉಳಿದ ಒಂದೇ ಒಂದು ಪ್ರತಿಯನ್ನು “ನನ್ನ ಜೀವದಕಿಂತ ಹೆಚ್ಚಿಗೆ ಜೋಪಾನ ಮಾಡಿ ನಿಮಗೆ ತಿರುಗಿ ತಂದು ಒಪ್ಪಿಸ್ತೇನೆ, ಸರ್” ಅಂತ ಹೇಳಿ ಇಸಿದುಕೊಂಡು ಬಂದಿದ್ದೆ. P.G valuationಗಾಗಿ ಹೋಗಿದ್ದಾಗ. ಅಲ್ಲಿ ಇರುತ್ತಲೇ, valuation camp ಮುಗಿದ ಹಾಗೆ, ನನಗೆ ಏನು ಬೇಕೋ ಅಷ್ಟನ್ನು notes ಮಾಡಿಕೊಂಡು, ಗೋಕಾಕರಿಗೆ ತಿರುಗಿ ಒಪ್ಪಿಸಿ ಬಂದಿದ್ದೆ. ಮತ್ತೊಮ್ಮೆ ಹೋಗಿದ್ದಾಗ, ನನ್ನ ಇಂಗ್ಲೀಷ್ ವಿಮರ್ಶೆಯನ್ನು ಅವರ ಕೈಯಲ್ಲಿ ಕೊಟ್ಟು ಬಂದು, ನಂತರ phone ಮೇಲೆ ಏನೆನ್ನಿಸಿತು ಸಾರ್? ಅಂತ ಕೇಳಿದೆ. ‘ಇಂಗ್ಲೀಷ್ ಅನ್ನಿಸದ ಕೆಲ ನುಡಿಗಟ್ಟನ್ನೂ ಬಳಸಿದ್ದಾರೆ’ (Today here, tomorrow where? ಇರಬೇಕು) ಅನ್ನೋ ಮಾತಿಗೆ ಅವರ ಪ್ರತಿಕ್ರಿಯೆ ಏನು ಬರ್ತದೆ ಅಂತ ಕಾಯ್ದಿದ್ದೆ.
ಬಹಳ ದೊಡ್ಡ ಮನುಷ್ಯ. ಜೀವನದಲ್ಲಿ ಎಂತೆಂಥದೋ ವಿಷ ನುಂಗಿ ಬಾಳಿ ಬಂದ ದೇವತಾ ಮನುಷ್ಯ. ‘ಚನ್ನಾಗಿದೆ’ ಅಂತಷ್ಟೇ ಅಂದರೆ. ‘Pratibha India’ ಅಂತಾ ಉತ್ತರ ಭಾರತದ ಒಂದು ‘Journal’ ಇದೆ. ಅದಕ್ಕೆ ಕಳಿಸಿರಿ ಅಂತಲೂ ಹೇಳಿದರು. . . .
        ಅವರ ಬಗೇಗಿನ ಇಂಗ್ಲೀಷ್ ಲೇಖನದ ಕನ್ನಡ version ನಿಮ್ಮ ಪುಸ್ತಕದಲ್ಲಿ ಬಂದಿದೆಯೋ ಇಲ್ಲವೋ ಅಂತ ನೋಡಿದೆ. ಬಂದಿದೆ. . . . ಹಾಗೆಯೇ ನಿಮ್ಮ ಮುನ್ನುಡಿಯ ಕೆಲವು ಸಾಲುಗಳೂ ಕಣ್ಣಿಗೆ ಬಿದ್ದವು. . .”

        ಹೀಗೆ ವ್ಯಕ್ತಿಗತ ನೆಲೆಯಲ್ಲಿ ಪತ್ರ ಮುಂದುವರೆಯುತ್ತದೆ. ಏನೂ ಗೊತ್ತಿಲ್ಲದ ನನ್ನಂಥವರಿಗೆ ಪ್ರಾಮಾಣಿಕವಾದ ಈ ಸಾಲುಗಳಲ್ಲಿ ಗೋಕಾಕ ಎಂಬ ಮಹಾನ್ ಚೇತನದ ಬೆಳಕಿನ ದರ್ಶನವಾಗುತ್ತದೆ.

            

No comments:

Post a Comment