Total Pageviews

Monday, April 15, 2013

ದಲಿತ ಕಾವ್ಯ ಮತ್ತು ಸಾಮಾಜಿಕ ನ್ಯಾಯ




 ಹೊಲೆಯರ ಹೆಣ್ಣು
ಹಾದರದ ಹಾದೀಗಿ ಮುಳ್ಳು ಬಡದಾಕಿ
ಇದ್ದ ಗಂಡಗ ಗುಡ್‍ಬಾಯ್ ಹೇಳಿ
ನಡುರಾತ್ರಿ ಬರೋವಾಗ ಕಾಲಮುಟ್ಟಿ
ಗುಳದಾಳಿ ಪದರಾಗ ಕಟ್ಟಿ
ಹಾಲು ಎಣ್ಣಿ ಹ್ಯಾಂಗ ಕೂಡಿತಂದಾಕಿ

ಥೇಟ್ ಜೋಗತ್ಯಾರ ದನಿ
ಮನಸ್ಸು ಮೆಚ್ಚಿದ ಮಿಂಡ
ಗಂಡ್ಯಾಕಾಗಬಾರದು?

ದ್ರೌಪದಿ ಮಚ್ಚಿದರ ಕರ್ಣಗ
ಕದ್ಯಾಕ ಕರೀಬಾರದು? ಅಂತ
ಛಾತಿ ಇದ್ದ ಹೆಂಗ್ಸು
ಜಾತಿ ಹಾಂಗ ಬದುಕಿದಾಕಿ

ನೂರು ರಾತ್ರಿಗಿ ಬಣ್ಣ
ಒಂದೊಂದ ಬೆಳಕಿನ ಕಣ್ಣ
ಆಲದಂತ ಅಪ್ಪನ ಮುಂದ
ಸೋಲಲಾರದ ಮಾತಾಡಿ
ಅವನ ಜುಟ್ಟಕ್ಕ ಎಣ್ಣಿ ಹಾಕಿ, ಅಂಗಾಲ ತೀಡಿ
ಅಂಗಾಂಗದೊಳಗಾಡಿ
ಅಂಬೆಗಾಲಿನ ಕೂಸು ಕೊಟ್ಟಾಕಿ
                        2000 ದ ಇಸ್ವಿಯಲ್ಲಿ ಬಂದ ನನ್ನ ಕವನ ಸಂಕಲನ `ಎರಡು ದಡಗಳ ನಡುವೆ’ ಕೃತಿಯ ಮೊದಲ ಕವಿತೆಯ ಕೆಲವು ಪದ್ಯಗಳಿವು. ನಾನು ಜಾತಿ ಜಂಗಮ, ಬದುಕಿನ ರೀತಿಯಲ್ಲಿಯೂ ಈ ಜಂಗಮತ್ವಕ್ಕೆ ಹಾತೊರೆದವ. ಆದರೆ ಕವನದ ವಸ್ತು ನನ್ನ ದೊಡ್ಡಪ್ಪನ ಹೆಂಡತಿ. ಅಂದರೆ ನಮ್ಮ ಜಂಗಮಸ್ಥ ಮನೆತನದ ಹಿರಿಯ ತಾಯಿ, ದೊಡ್ಡವ್ವ ದಲಿತ ಮಹಿಳೆ. ಕಾವ್ಯ ಮತ್ತು ಅದಕ್ಕೆ ಕಾರಣವಾಗುವ ಕಾರಣಿಕ ಸಂವೇದನೆಗಳನ್ನು ಕುರಿತು ಚಿಂತಿಸುವಾಗ, ದಲಿತನೊಬ್ಬ ದಲಿತ ಲೇಖಕನಾಗಿ, ದಲಿತನಲ್ಲದವನು ದಲಿತನಂತಾಗಿ, ದಲಿತ ಬರಹ ಬರೀ ದಲಿತರಿಗಾಗಿ ಇಂತಹ ವಿಮರ್ಶಾ ನೆಲೆಯ ವಾದ, ಪದ-ಪುಂಜಗಳ ಮಧ್ಯ ಸಾಗಿ ಹೋಗುವಾಗ ನನ್ನ ಈ ಕವಿತೆ ನನ್ನನ್ನು ಬಹುವಾಗಿ ಕಾಡಿದೆ.
       ಇದು ನನ್ನ ಕವಿತೆಯೋ, ನನ್ನವ್ವನ ಕವಿತೆಯೋ, ಬರೀ ಜಾತಿ ಸಂವೇದನೆಯ ಹಿನ್ನೆಲೆಯಿಂದ ಹೊರಟ ಆಲಾಪವೋ, ಆತ್ಮರತಿಯೋ ಹೀಗೆ ಏನೆಲ್ಲಾ ಪ್ರಶ್ನೆಗಳು ಹುಟ್ಟುತ್ತವೆ. ಕಾವ್ಯವೊಂದನ್ನು ಬದುಕಿನ ಕನ್ನಡಿಯಂತೆ ಮುಂದಿಟ್ಟುಕೊಂಡು ಮಾತನಾಡುವಾಗ ಈಗಲೂ ಈ ಪ್ರಶ್ನೆಗಳು ಪ್ರಸ್ತುತವೇ? ಪ್ರಸ್ತುತ ಎನ್ನುವುದಾದರೆ ಇದಕ್ಕೆ ಯಾವ ಫಲಿತಾಂಶದ ಆಧಾರ ನೀಡುತ್ತೀರಿ? ಎನ್ನುವಂತೆಯೂ ಮಾಡುತ್ತವೆ. ಇದೇ ಸಂಕಲನದ ನನ್ನದೇ ಇನ್ನೊಂದು ಪದ್ಯ `ಬೇರು ಬಿಟ್ಟವ್ರಲ್ಲ ನಾವು’ ಹೀಗಿದೆ-
ನಾವು
ನಿಮ್ಮಂತೆ ಬೇರು ಬಿಟ್ಟವರಲ್ಲ ಸ್ವಾಮಿ,
ನಿನ್ನೆ ತಾನೆ ಹುಟ್ಟಿ
ನಾಳೆಯನ್ನು ಕನಸುತ್ತಿರುವವರು
ಇಂದಿಗೆ ನಿಮ್ಮ ಒಲವು ಬೇಕು
ನೀವು ಹಾಕಿದ ಹೆದ್ದಾರಿಗಳ ಬಿಟ್ಟು
ಕವಲುದಾರಿಯ  ಕಥೆಯ ಬರೆಯ ಹೊರಟವರು
ಹರಕೆ, ಹಂಬಲ ನಮ್ಮ ಜೊತೆಗೆ ಬರಬೇಕು

ನಾವು ಇತಿಹಾಸವನು ಬಗೆದು
ಹೊಸ ಕವನ ಬರೆದು, ಹಾಡಹೊರಟವರು
ತಾಳ ಹಾಕುವ ತಾಳ್ಮೆ ನಿಮ್ಮಲ್ಲಿರಬೇಕು
ನಿಮ್ಮ ಮತಗಳ ಕೊಡವಿ
ಮರಣೋತ್ತರ ಬರೆದು
ಹುಗಿಯ ಹೊರಟವರು ಸುಮ್ಮನಿರಬೇಕು?
`ದಲಿತ ಕಾವ್ಯ: ಸಾಮಾಜಿಕ ನ್ಯಾಯ’ ಎನ್ನುವ ಇಂದಿನ ಚರ್ಚೆಗೆ ಈ ಸಾಲುಗಳು ಸಾಕಷ್ಟು ಆಕ್ರೋಶ, ಕಳಕಳಿಯ ಜೀವಕಳೆಯ ತುಂಬುತ್ತವೆ ಎನಿಸುತ್ತವೆ. ನನ್ನ ಈ ಎರಡು ಕವಿತೆಗಳ ಉದ್ಧರಣೆಯ ಉದ್ದೇಶವಿಷ್ಟೇ, ಸಾಮಾಜಿಕ ನ್ಯಾಯದಂತಹ ಪ್ರಶ್ನೆ ಬಂದಾಗ ರಾಜಾಶ್ರಿತ ಕಾವ್ಯದ ಕಾಲಘಟ್ಟ ಹೊರತುಪಡಿಸಿ ಉಳಿದೆಲ್ಲ ಸಂದರ್ಭದಲ್ಲಿಯೂ ಕಾವ್ಯ ಅತ್ಯಂತ ಪಾರದರ್ಶಕ, ಪ್ರತಿಭಟನಾತ್ಮಕ ಮತ್ತು ಪ್ರಾಮಾಣಿಕ ಎಂದೆನಿಸಿದೆ. ಕವಿತೆಗಿರುವ ಸೌಂದಯವೇ ಇದು. ಇಲ್ಲಿ ಅಪ್ರಾಮಾಣಿಕತೆಗೆ ಆಸ್ಪದ ಕಡಿಮ. ಉಭಯಭಷ್ಟತೆಯ ಕಾವ್ಯ ನಮ್ಮನ್ನು ತಲ್ಲಣಿಸುವುದಿಲ್ಲ. ಕಾಲಾತೀತವಾಗಿ ಕಾಡುವುದಿಲ್ಲ., ಕವಿತೆಯಾಗಿ ಉದ್ಧರಿಸಲ್ಪಡುವುದಿಲ್ಲ. ಅಷ್ಟೆ ಸತ್ಯ consciousness ಒಂದಕ್ಕೆ ಒಳಪಟ್ಟ ಕಾವ್ಯದ ಗತಿಗೂ. ಇಲ್ಲಿ consciousness ಎನ್ನುವುದನ್ನು ಒಂದು ನಿಶ್ಚಿತ ವರ್ಗ ಒಂದು ಸಂವೇದನೆಯನ್ನು ತನ್ನದೇ, ತನ್ನದಷ್ಟೇ ಎನ್ನುವ ರೀತಿಯಲ್ಲಿ ಹಕ್ಕು ಪ್ರತಿಪಾದಿಸಿ ಅದರ ಸುತ್ತಲೂ ಕಾವ್ಯ ರಚಿಸಿದಾಗ ಆಗುವ ಅನಾಹುತಗಳು ಎನ್ನುವ ಹಿನ್ನೆಲೆಯಲ್ಲಿ ನಾನು ಚರ್ಚಿಸಿದ್ದೇನೆ. ಸಾಮಾಜಿಕ ನ್ಯಾಯ ಮತ್ತು ಕಾವ್ಯದ ಅನುಸಂಧಾನದ ಕಥೆ ದಲಿತ, ಬಂಡಾಯದ ಎಷ್ಟೋ ಪೂರ್ವಕ್ಕೆ ಪ್ರಾರಂಭವಾಗಿ ದಲಿತ, ಬಂಡಾಯ ಕಾವ್ಯದ ಆನಂತರದ ಅದೆಷ್ಟೋ ಅಗಣಿತ ಕಾಲದವರೆಗೂ ಮುಂದುವರೆಯುವ ಪ್ರಶ್ನೆ. 1936 ರಲ್ಲಿ ಲಾಹೋರದಲ್ಲಿ `ಜತ್-ಪತ್-ತೊಡಕ್ ಮಂಡಲ್’ ಸಂಘಟನೆಯನ್ನು ಉದ್ದೇಶಿಸಿ ಅಂಬೇಡ್ಕರರು ಜಾತಿ ನಿರ್ಮೂಲನೆಯನ್ನು ಕುರಿತು ಆಡಿದ ಈ ಮಾತುಗಳು ನಮ್ಮ ಈ ಚರ್ಚೆಯ ಸಾಧ್ಯಾ-ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲುತ್ತವೆ ಎಂದುಕೊಂಡಿದ್ದೇನೆ.
            “ what is your ideal society? If you do not want caste is a question that is bound to be asked of you. If you ask me, my ideal would be a society based on liberty, equality and feternity…. An ideal society should be mobile, should be full of channels for conveying a channels taking place in one part to other parts. In an ideal society there should be many interests  consciously communicated and shared.”
ಅಂಬೇಡ್ಕರರು ಪದೇ ಪದೇ ಹೇಳುವ ಈ ideal society ಎನ್ನುವುದು ಮತ್ತೇನೂ ಅಲ್ಲದೇ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸಮಾಜ ಅಷ್ಟೇ. ಇದನ್ನೇ ಶರಣರು-
“ ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವ ಭಕ್ತರು ಒಂದೇ ಎಂದು
ಕೊಟ್ಟು-ಕೊಂಬುದು ಸದಾಚಾರ
ಉಳಿದುದೆಲ್ಲಾ ಅನಾಚಾರ “
            ಎಂದು ವಿವರಿಸಿದ್ದು. ಇದನ್ನೇ ದಾಸರು-
“ಹೊಲೆಯ-ಹೊಲತಿ ಇವರವರಲ್ಲ
ಹೊಲಗೇರಿಯೊಳು ಹೊಲತಿಯಿಲ್ಲ
ಅರಿತು ಆಚಾರವನ್ನು ಮಾಡದಿದ್ದವ ಹೊಲೆಯ.. ..”
            ಎಂದು ಶರಣರ ವಾದವನ್ನು ಪುಷ್ಟಿಕರಿಸಿದ್ದು. ಮುಂದುವರೆದು ಸರ್ವಜ್ಞ ಹೇಳಿದ್ದೂ ಇದನ್ನೇ-
“ಹೊಲೆಯಿಲ್ಲ ಅರಿದಂಗೆ
ಬಲವಿಲ್ಲ ಬಡವಂಗೆ
ತೊಲೆಯಿಲ್ಲ ಗಗನಕ್ಕೆ
ಯೋಗಿಗೆ ಕುಲವೆಂಬುದಿಲ್ಲ ಸರ್ವಜ್ಞ”
            ಕನ್ನಡದ ನವೋದಯದ ಘಟ್ಟಕ್ಕೆ ಬನ್ನಿ, ಸಾಮಾಜಿಕ ಅಸಮಾನತೆಯ ವಿರುದ್ಧ ದೇವರು, ಧರ್ಮದ ಹೆಸರಿನಲ್ಲಿ ನಿರಂತರವಾಗಿ ನಡೆದ ಶೋಷಣೆಯನ್ನು ವಿರೋಧಿಸಿ ಬಂದ ಕಾವ್ಯ ಕಡಿಮೆಯೂ ಅಲ್ಲ, ಕಳಪೆಯೂ ಅಲ್ಲ. ಸಾಲು-ಸಾಲು ಕವಿಗಳು ಸಮಾಜ ನ್ಯಾಯದ ಪ್ರಶ್ನೆ ಎತ್ತುತ್ತಾರೆ-
“ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿಹುದೇನು?
ಎಂದೋ ಮನು ಬರೆದಿಟ್ಟುದಿಂದಮೆಗೆ ಕಟ್ಟೇನು?
ನಿನ್ನೆದೆಯ ಧನಿಯ ಋಷಿ, ಮನು ನಿನಗೆ ನೀನು” (ಕುವೆಂಪು)
ಜೊತೆಗೆ ಆರಂಭದಲ್ಲಿ ನಾನು ಉದ್ಧರಿಸಿದ ಅಂಬೇಡ್ಕರರ ideal society ಯ ಮುನ್ಸೂಚನೆಯನ್ನು ಕೊಡುತ್ತದೆ-
“ಸರ್ವರಿಗೆ ಸಮಬಾಳು
ಸರ್ವರಿಗೆ ಸಮಪಾಲು
ಎಂಬ ನವಯುಗವಾಣಿ ಘೋಷಿಸಿದೆ ಕೇಳಿ..
ಹೋಗುತಿದೆ ಹಳೆಕಾಲ
ಹೊಸ ಕಾಲ ಬರುತಲಿದೆ”
            ಪ್ರಗತಿಶೀಲ ಕಾಲಘಟ್ಟವಂತೂ ಸಮಾಜ ನ್ಯಾಯದ ಮತ್ತು ಆ ಪ್ರಶ್ನೆಯನ್ನು ಗಂಭೀರವಾಗಿ ಎತ್ತಿಕೊಂಡ ಗದ್ಯ ಸಾಹಿತ್ಯದ ಪರ್ವಕಾಲ ಎಂದೇ ಹೇಳಬೇಕು. ನೀವದನ್ನು ಪ್ರಚಾರ ಸಾಹಿತ್ಯ, ಕುಸುರಿಲ್ಲದ ವಾಚಾಳಿ ಬರಹ, ಹುಚ್ಚು ಆದರ್ಶದ ಅತಾರ್ಕಿಕ ಪ್ರತಿಪಾದಕ ಗುಂಪು ಎಂದು ಏನೆಲ್ಲಾ ಮಾತನಾಡಿದರೂ ಅದರ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮಾತ್ರ ಸಂಶಯಪಡುವಂತಿಲ್ಲ. ಹಾಗೆ ನೋಡಿದಲ್ಲಿ ನೊಂದವರಿಗೆ, ತುಳಿತಕ್ಕೊಳಗಾದವರಿಗೆ, ದಲಿತರಿಗೆ, ಹೀಗೆ ಎಲ್ಲರಿಗೂ ಒಂದು ಸರ್ವಸಮ್ಮತ ವೇದಿಕೆಯನ್ನು ಸೃಷ್ಟಿಸಿಕೊಟ್ಟ ದೊಡ್ಡ ಶ್ರೇಯಸ್ಸು ಪ್ರಗತಿಶೀಲರಿಗೆ ಸಲ್ಲುತ್ತದೆ.
            ಖಂಡಿತವಾಗಿಯೂ ಸಾಮಾಜಿಕ ನ್ಯಾಯ ಪ್ರತಿಪಾದನೆಯ ಸಣ್ಣ ಕಥೆ, ಕಾದಂಬರಿಯಷ್ಟು ವಿಫುಲ ಸಾಹಿತ್ಯ ಪ್ರಗತಿಶೀಲ ಕಾವ್ಯದಲ್ಲಿ ಬರಲಿಲ್ಲ. ಆದರೆ ಇದರ ಉತ್ತರಾರ್ಧದಲ್ಲಿ ಅಂದರೆ ಬಂಡಾಯದಲ್ಲಿ ಇದರ ಪ್ರತಿಪಾದನೆ ಸಶಕ್ತಗೊಳ್ಳುತ್ತಾ ಹೋಯಿತು. 

       ಎಪ್ಪತ್ತರ ದಶಕದಲ್ಲಿ ನಡೆದ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿಯ ತೀವ್ರ ಪಲ್ಲಟಗಳು ದಲಿತ ಕಾವ್ಯದಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆ ಕೆನೆಗಟ್ಟಲು ಕಾರಣವಾಯಿತು. ಒಂದರ್ಥದಲ್ಲಿ ನಿರ್ದಿಷ್ಟ ಶೋಷಿತ ವರ್ಗದ ಧ್ವನಿಯಾಗಿ ಹೊರಟ ಈ ಕಾವ್ಯ ಇಡೀ ಸಮಾಜವನ್ನು ಸಮಾಜ ವ್ಯವಸ್ಥೆಯಲ್ಲಿಯ ದಮನಿತ ಧ್ವನಿಗಳನ್ನು, ಮಾನವತೆ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಈ ಪದದ ಸುತ್ತಲಿನ ಎಲ್ಲ ವಾದಗಳು ಬಗೆಹರಿದು ಸರ್ವಸಮ್ಮತವಾದ ವ್ಯಾಖ್ಯಾನವನ್ನು ಒಪ್ಪಿಕೊಳ್ಳುವಂತಾಯಿತು. ಈ ಕ್ಷಣದಲ್ಲಿ ದಲಿತ ಎಂದರೆ, “ ಶತ-ಶತಮಾನಗಳಿಂದ ಜನ ಸಮುದಾಯದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಶೋಷಣೆಗೆ ಒಳಗಾದವರು, ಒಟ್ಟು ಮನುಷ್ಯ ಸಮಾಜದೊಂದಿಗೆ ಬದುಕಲಾಗದೆ, ಊರ ಹೊರಗೆ ವಾಸಿಸಿ ಕೀಳುವೃತ್ತಿಗೆ ಅವಲಂಬಿತರಾಗಿ, ಹೆಸರು ಹೇಳಿಕೊಳ್ಳಲು ನಾಚಿಕೆಪಡುವ ಅಸ್ಪ್ರಶ್ಯರು ಅಥವಾ ಬಹಿಷ್ಕ್ರರೆನಿಸಿಕೊಂಡವರೆಲ್ಲರೂ ದಲಿತರೆನಿಸಿಕೊಳ್ಳುತ್ತಾರೆ.”
            ಋಷಿ ಸದೃಶ್ಯ ವ್ಯಕ್ತಿಯಿಂದ ವ್ಯಕ್ತಿಪರ ಮತ್ತು ಏಕಾಂತಪರವಾಗಿದ್ದ ಕಾವ್ಯ ಸಮಾಜಪರವಾದದ್ದು, ಸಮಷ್ಠಿಪರವಾದದ್ದು, ವಚನ, ದಾಸ ಮತ್ತು ತತ್ವಪದಕಾರರ ನಂತರ ಇದೇ ಕಾಲಘಟ್ಟದಲ್ಲಿ ಎಂದು ಹೇಳಬೇಕು. ಇದೇ ಸಂದರ್ಭದಲ್ಲಿ ಬಂದ ಬಂಡಾಯ ಸಾಹಿತ್ಯದ ಆಶೋತ್ತರಗಳಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳಿದ್ದ ದಲಿತ ಕಾವ್ಯ ಅಂಬೇಡ್ಕರ್, ಮಾರ್ಕ್ಸ್, ಲೋಹಿಯಾ, ಗಾಂಧಿ ಹಾಗೂ ಪೆರಿಯಾರರಿಂದ ಪಡೆದ ಪ್ರೇರಣೆ ಕಡಿಮಯೇನಲ್ಲ. ದಲಿತ ಕಾವ್ಯದ ಸಾಮಾಜಿಕ ನ್ಯಾಯದ ಆಶೋತ್ತರಗಳನ್ನು ನಿರ್ಧರಿಸುವಲ್ಲಿ 1974ರಲ್ಲಿ ಅಸ್ತಿತ್ವಕ್ಕೆ ಬಂದ ದಲಿತ ಸಂಘರ್ಷ ಸಮಿತಿ, ಇದರ ಆಸು-ಪಾಸಿನಲ್ಲಿದ್ದ ಆಂಧ್ರದ ದಿಗಂಬರ ಕಾವ್ಯ, ಮಹಾರಾಷ್ಠ್ರದ ದಲಿತ ಸಾಹಿತ್ಯ, ನಕ್ಸಲ್ ಚಳುವಳಿ, ಇದಕ್ಕಿಂತಲೂ ಮುಂಚೆ 1920 ರಲ್ಲಿ ಪ್ರಾರಂಭವಾದ ಆದಿ ದ್ರಾವಿಡ ಸಂಘ, ಜಾಂಬವ ಸಂಘ ಇವೆಲ್ಲವೂಗಳೊಂದಿಗೆ ಸಂಪರ್ಕ ಹೊಂದಿದ್ದ ಚಿಕ್ಕ ಹಣುಮಂತಯ್ಯ ಮತ್ತು ಚೆನ್ನಿಗರಾಮಯ್ಯನ ಕೊಡುಗೆ, ಬೆಳಗಾವಿ ಜಿಲ್ಲೆಯ ದೇವರಾಯ್ ಇಂಗಳೆಯವರ ಸಾಮಾಜಿಕ ಚಟುವಟಿಕೆಗಳು, ಅವರು ನಡೆಸಿದ ` ಬಹಿಷೃತ ಹಿತಕಾರಿಣಿ ಸಭಾ’ ದ ಮೂರನೇ ಸಮ್ಮೇಳನ, 1968 ರಲ್ಲಿ ಅಸ್ತಿತ್ವಕ್ಕೆ ಬಂದ `ಭೀಮಾಸೇನ’, 1973 ರಲ್ಲಿ ಕಂದಾಯ ಮಂತ್ರಿಯಾಗಿದ್ದ ಬಿ.ಬಸವಲಿಂಗಪ್ಪನವರು ಸಾಮಾಜಿಕ ಅನ್ಯಾಯದ ವಿರುದ್ಧ ಎತ್ತಿದ ಧ್ವನಿ, 1974 ರಲ್ಲಿ ಭದ್ರಾವತಿಯಲ್ಲಿ ಬಿ. ಕೃಷ್ಣಪ್ಪನವರು ಕಟ್ಟಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತೇತರನಾಗಿದ್ದರೂ ಶೋಷಣೆಯ ವಿರುದ್ಧ ನಡೆಯುವ ಹೋರಾಟ ಘೋಷಣೆ, 1978 ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಭೂ ಪರಭಾರೆ ನಿಷೇಧ ಕಾಯ್ದೆ, 1987 ರ ಆಸು-ಪಾಸಿನಲ್ಲಿ ನಡೆದ ಮದಕಿನಾಳ ಮತ್ತು ಮಹಮ್ಮದ್ ನಗರದಲ್ಲಿಯ ಹೊರಾಟಗಳು, ಕೋಲಾರ ಜಿಲ್ಲೆಯ ನಾಗಸಂದ್ರ, ಶ್ರೀನಿವಾಸಪುರ ತಾಲ್ಲೂಕಿನ ಮರಸನಪಲ್ಲಿ, ಮೈಸೂರು ಜಿಲ್ಲೆಯ ದೇವಲಾಪುರ ಭೂ ಹೋರಾಟ, ಗುಲ್ಬರ್ಗಾ ಜಿಲ್ಲೆಯ ಚಿಂಚೂರು, ಮಾನವಿಯ ಬಳಿಯ ಅರೋಲಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯ ವಿರುದ್ಧದ ಹೋರಾಟ, ಇವೆಲ್ಲವೂ ದಲಿತ ಕಾವ್ಯದ ಆಶಯವನ್ನು ನಿರ್ಧರಿಸುವಲ್ಲಿ, ಸಮಾಜ ನ್ಯಾಯದ ವಿಚಾರವನ್ನು ಕೆನೆಗಟ್ಟಿಸುವಲ್ಲಿ ಅತ್ಯಂತ ಮಹತ್ವದ ಪಾತ್ರಗಳನ್ನಾಡಿವೆ.
         1944 ರ ವೇಳೆಗೆ ಈ ಆಶಯವನ್ನು ಪ್ರತಿಪಾದಿಸುವ 41 ಕವಿಗಳನ್ನು, 3000 ಸಾವಿರಕ್ಕಿಂತಲೂ ಹೆಚ್ಚಿನ ಕವಿತೆಗಳನ್ನು ಹಾಗೂ 63 ಕವನ ಸಂಕಲನಗಳನ್ನು ದಲಿತ ಚಿಂತಕ ಮ.ನ. ಜವರಯ್ಯನವರು ಗುರುತಿಸಿದ್ದಾರೆ.
      ಕಾಲ ಬದಲಾಗಿದೆ. ವ್ಯಕ್ತಿನಿಷ್ಠವಾಗುತ್ತಾ ಹೊರಟಿರುವ ದಲಿತ ಕಾವ್ಯದಲ್ಲಿಯೂ ಹೊಸ ಬೇಸರ, ಅದರೊಳಗೆ ಹೊಸ ಆಶಯ ಹುಟ್ಟಿಕೊಳ್ಳುತ್ತಿವೆ-
“ಅದೇಕೊ ಕಾಣೆ
ಮತ್ತೆ ಶೂನ್ಯದಿಂದಲೇ
ಪ್ರಾರಂಭವಾಗುವುದು ಹಗಲು
ರಾತ್ರಿಗಳೆಲ್ಲಾ
ಬರೀ ಸಾಧನೆ ಕುರಿತ
ಪಿಠಿಕೆಗಳು
ಕಾಣದ ಕಡಲು ದಾಟಿ
ಗುರಿ ಮುಟ್ಟುವ ಯೋಜನೆಗಳು
ಅರೆಬೆಂದ ಹವಣಿಕೆಗಳು
ಕುಡಿದಿಟ್ಟ ಖಾಲಿ ಮದಿರೆಯ
ಬಟ್ಟಲುಗಳು
ಜೋಡಿಸುತ್ತಾ ಹೋದರೆಲ್ಲಾ
ತೀರದಾಸೆಯ ಮಾಲೆಗಳು
            ಹಾಡದೆ ಉಳಿದ ಚರಣಗಳು(ಮರೆತ ಕನ್ನಡಿಯೊಳಗೆ, ರಾಜೇಶ್ವರಿ.ಎನ್)
            ಆದರೆ ವ್ಯಕ್ತಿ ಸ್ವಾತಂತ್ರಕ್ಕೆ ಸಾಧ್ಯವಾದ ಯಾವುದೇ ಚಳುವಳಿಯ ಗತದ ಹೋರಾಟವನ್ನು ಅನುಲಕ್ಷಿಸಲಾಗದು. 1975 ರಲ್ಲಿ ಸಿದ್ಧಲಿಂಗಯ್ಯನವರ `ಹೊಲೆ-ಮಾದಿಗರ ಹಾಡು’ ಬಂತು. ಕನ್ನಡ ಕಾವ್ಯದ ಭಾಷೆ ಬದಲಾಯಿತು. ಹೊಸ ಭರವಸೆ ಹುಟ್ಟಿತು.
“ ಗುಡಿಸಲುಗಳು ಗುಡುಗುತಿವೆ, ಬಂಗಲೆಗಳು ನಡುಗುತಿವೆ
ಎಲ್ಲೆಲ್ಲಿಯೂ ಮೊಳಗುತಿವೆ ನವಕ್ರಾಂತಿಯ ಗಾನ
ಮತಗಳು ಹತವಾಗುತಿವೆ ಜನಪಥಗಳು ಮೂಡುತಿವೆ
ಅಸಮಾನತೆ ಆಗುತ್ತಿದೆ ಕ್ರಾಂತಿಗೆ ಸೋಪಾನ”
            ಈ ಕವಿತೆಯ ವಿಚಾರ ವಾಸ್ತವವೇನೂ ಅಲ್ಲ. ಇದೊಂದು ಆಶಯ. ಬುದ್ಧ, ಬಸವಣ್ಣ, ದಾಸ, ತತ್ವ ಪದಕಾರ ಅಥವಾ ಯಾವುದೇ ಸೂಫಿ ಕಟ್ಟಿಕೊಂಡ ಕನಸಿನಷ್ಟೇ ಒಂದು ನಿರೀಕ್ಷೆ. ನಿರೀಕ್ಷೆಗಳೆಲ್ಲವೂ ನಿಜವಾಗಲಿಕ್ಕಿಲ್ಲ ಆದರೆ ನಿರೀಕ್ಷೆ ಸತ್ತ ಮರುಕ್ಷಣ ಸಮಾಜ ಪರಿವರ್ತನೆಯ, ವ್ಯಕ್ತಿ ಪರಿವರ್ತನೆಯ ಸಾಧ್ಯತೆಗಳೆಲ್ಲವೂ ಸತ್ತುಹೋಗುತ್ತವೆ. ದಲಿತ ಸಾಹಿತ್ಯದ ಉದಯ ಮತ್ತು ಅದರ ಅಸ್ತಿತ್ವದ ಅವಶ್ಯಕತೆಯನ್ನು ಕುರಿತು `ಕಪ್ಪು ಕಾವ್ಯ’ ದಲ್ಲಿ ಅರವಿಂದ ಮಾಲಗತ್ತಿ ಬರೆದ ಈ ಸಾಲುಗಳನ್ನು ನಾವು ಗಮನಿಸಬೇಕು-
ಹಗಲಿರುಳು ಎಡಬಿಡದೆ ಹೂಳುವೆವು ನಾವಿಂದು
ಸಾಹಿತ್ಯದ ಬೆನ್ನಲೆ ವೀರಗಲ್ಲು ನೂರೊಂದು
ಮೆಟ್ಟುವೆವು ಮೈಲಿಗಲ್ಲು ಇತಿಹಾಸದ ಬೆನ್ನಲಿ
ತಡೆವವರು ಯಾರಿಂದು ಭೂವಿಯೋಳು ನಮಗಿಲ್ಲಿ?
ಪುರಾತನ ತಲೆಗಳಿಗೆ ಇದೊಂದಲ್ಲ ಶೃದ್ಧಾಂಜಲಿ
ಎಂಧ್ಹೇಳಿ ಇಡುವೆನು ನೊಸಲಕೆ ತಿಲಾಂಜಲಿ
            ಇಲ್ಲಿ ಒಂದು ಸರಳ ಪ್ರಶ್ನೆ, ದಾನ-ದತ್ತಿ, ನಾಯಿ-ನರಿಗಳು ದಾಖಲಾದ ಇತಿಹಾಸದಲ್ಲಿ ಮನುಷ್ಯರಂತೆ ಮನುಷ್ಯರಾದ ದಲಿತರೇಕೆ ದಾಖಲಾಗಲಿಲ್ಲ ಎನ್ನುವುದು. ಹೆಚ್ಚು-ಕಡಿಮೆ ಇದೇ ಕಾಲಘಟ್ಟದಲ್ಲಿ ದಲಿತ ಕಾವ್ಯ ಪಕ್ವವಾಗಿ ಸಾಮಾಜಿಕ ನ್ಯಾಯದ ತನ್ನ ವರಸೆಯನ್ನು ಬದಲಾಯಿಸಿತು. ಆರಂಭದ ಅಬ್ಬರ, ರೋಷ, ಆಕ್ರೋಶ, ಪ್ರತಿಭಟನೆಯಿಂದ ಹೊರಬಂದು ಮೌನದ ಸತ್ವಿಕ ಪ್ರತಿಭಟನೆ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಮನಗಂಡಿತು. ದಲಿತರ ಶತ್ರುಗಳು ಬ್ರಾಹ್ಮಣರು ಸೂಚಿಸುವಂತೆ; ಗೌಡರು, ಲಿಂಗಾಯಿತರೋ? ಲಿಂಗಾಯಿತರು ಸೂಚಿಸುವಂತೆ, ಬ್ರಾಹ್ಮಣರೋ ಎನ್ನುವ ಪ್ರಶ್ನೆಯಿಂದ ಹೊರಬಂದು-
“ನಾಡಗೆರೆಯ ಗಡಿಯ ಕಡಿದು
ಜಾತಿ-ಮತಗಳ ಬಂಡೆಯೊಡೆದು
ಧರ್ಮ-ಧರ್ಮದ ಪರಿಯ ಹರಿದು
ಹಾಲು-ಹಾಲಲಿ ಬೆರೆತು ಹೋಗಲಿ( ಅರವಿಂದ ಮಾಲಗತ್ತಿ)
            ಎಂದು ಹಾಡಲಾರಂಭಿಸಿತು. ಈ ಸಮಷ್ಟಿ ಪ್ರಜ್ಞೆಯ ಇನ್ನೊಂದು ಉತ್ತಮ ಉದಾಹರಣೆ, 2003 ರಲ್ಲಿ ಬಂದ ಮ.ನ ಜವರಯ್ಯನವರ `ವಿದ್ರೋಹ’ ಸಮಗ್ರ ಕಾವ್ಯ. ಮತ್ತು ಅವರ ಚಂಪೂ ಕಾವ್ಯ `ಗೋವಿಂದಪುರ’. ಸಮಾಜ ನ್ಯಾಯದ ಕಳಕಳಿಯ ಅವರ ಈ ಸಾಲುಗಳನ್ನು ನೋಡಿ-
“ಗುಡಿ, ಚರ್ಚು ಮಸೀದಿ
ದೂರದೂರದಿ ಮನೆಯಲಿರಲಿ
ನಾಡವಿಜಯದ ಸಮತೆ ಗಾನ
ಸದಾ ಮೊಳಗುತಿರಲಿ”
ಇಡೀ ದಲಿತ ಕಾವ್ಯದದಲ್ಲಿ ಬಿಸಿಲು ನಾಡಿನ ಬೆಂಕಿ ಉಗುಳುತ್ತಾ ಹೊರಟ ಚೆನ್ನನ್ನ ವಾಲೀಕಾರರ ಕೊಡುಗೆ ದಾಖಲಾರ್ಹ. ಅವರ ಕಾವ್ಯದಲ್ಲಿ ಕಾಣುವುದು ಪ್ರತ್ಯಕ್ಷ ಪ್ರತಿಭಟನೆ. ನಿಸ್ಸಂಶಯವಾಗಿಯೂ ಅವರು ದಲಿತ ಬಂಡಾಯದ ಮುಂಚೂಣಿಯ ಕವಿ. ವಾಲೀಕಾರರ ಕಾವ್ಯದಲ್ಲಿ `ದಲಿತ’ ಪದ ಅರ್ಥವ್ಯಾಪ್ತಿ ಒಟ್ಟು ಮಾನವ ಜನಾಂಗದಲ್ಲಿ ಶೋಷಿತ ವರ್ಗ ಎನ್ನುವಂತೆ ವಿಸ್ತಾರಗೊಳ್ಳುತ್ತದೆ. `ಭೀಮಸೇನೆ’ಯ ನಾಯಕನ ಹಾಡಿನಲ್ಲಿ ದಲಿತರನ್ನೇ ಮುಂದಿಟ್ಟಕೊಂಡು ಸ್ವಾಭಿಮಾನದ ಪ್ರಶ್ನೆ ಎತ್ತುತ್ತಾರೆ.
ಆಳುವವರು ಹಾಕುವಂತಹ
ಚೂರು ಎಲುವು ತುಂಡಿಗೆ
ಮಾರಿಕೊಂಡರೇನು ಅವರು
ತಮ್ಮ ಎದೆಯ ಗುಂಡಿಗೆ
        ವಾಲೀಕಾರರು ತಮ್ಮ ಕಾವ್ಯದಲ್ಲಿ ಸಮಾಜ ನ್ಯಾಯದ ಪ್ರಶ್ನೆಯನ್ನು ಎತ್ತುತ್ತಲೇ ವ್ಯಕ್ತಿಗತ ಸ್ವಾಭಿಮಾನ ಶೂನ್ಯತೆಯ, ವರ್ಗದೊಳಗಿನ ಶೋಷಣೆಯ ಕಾಲದ ಪರಿಕಲ್ಪನೆಯ ಪ್ರಶ್ನೆಗಳನ್ನು ತೆರೆದಿಡುತ್ತಾರೆ. ಅವರು `ಕೂಲಿ ಜನಗಳ ಕೋಲಿನ ಪದ’ ದಲ್ಲಿ ಬರೆಯುತ್ತಾರೆ-
ಮೂಡನಂಬಿಕೆ , ಮೂಡಭಾವನೆ
ಬಿಟ್ಟು ಬನ್ನಿರೋ ಬಯಲಿಗೆ
ಕಾಲಮಾನದ ಜೊತೆಗೆ ನಡೆಯಲು
ತಿದ್ದಿಕೊಳ್ಳಿರೋ ನಾಲಿಗೆ
            ದಲಿತ ಚಳುವಳಿಯ, ಸಾಮಾಜಿಕ ನ್ಯಾಯದ ಆಶಯದ ಈ ದಾರಿಯಲ್ಲಿ ಇಂಧುದರ ಹೊನ್ನಾಪುರ ಅವರ `ಕಪ್ಪು ಮನುಜರು’, `ಇಂಡಿಯವ್ವ ಮತ್ತು ದಲಿತ’, ಗಂಗಾರಾಮ ಚಾಂಡಾಲ್ ಅವರ `ಚಂಡಾಲರ ಕೂಸು’ ಅತ್ಯಂತ ಮಹತ್ವದ ರಚನೆಗಳು. ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ತಮ್ಮ ಪ್ರಶ್ನೆಗಳನ್ನು ಅತ್ಯಂತ ನಿರ್ಲಿಪ್ತವಾಗಿ ತಮ್ಮ ಕಾವ್ಯದಲ್ಲಿ ಅನಾವರನಗೊಳಿಸುವ ಕವಿ ಗೋವಿಂದಯ್ಯನವರ ಆತ್ಮವೃತ್ತಾಂತದ ಹಿನ್ನೆಲೆಯ `ಅ, ಆ ಮತ್ತು..ಕವನವನ್ನು ಗಮನಿಸಬೇಕು-
ಕತ್ತಲೆ ಬೋರ್ಡಿನ ಮೇಲೆ ಕಲಿತ ಅ, ಆ
ಅಕ್ಷರಗಳ ನಡುವೆ ಅವ್ವ, ಅಪ್ಪನ ಆಶೆಗಳು ಸಿಕ್ಕಿದವು
ನಮ್ಮ ಊರು, ಕೇರಿ, ಸಮಾಧಿಗಳು ಸಿಕ್ಕಿದವು
ಅಸ್ತಿಪಂಜರಗಳ ಪಾತಾಳದಲ್ಲಿ ಒಂದಿಷ್ಟು
ಮಾತುಗಳು ಸಿಕ್ಕಿದವು
ಹುಡುಕುತ್ತಾ ಹುಡುಕುತ್ತಾ
ಕೆಳಕ್ಕೆ ಇಳಿದಾಗ ಎದ್ದ ಪ್ರಶ್ನೆಗಳಿಗೆ
ಕಾಕಿ ಡ್ರೆಸ್ಸಿನ ಕೈ ಕಾಲುಗಳು ಮೂಡಿ
ಮೀಸೆಗಳು ಬೆಳೆದು ಅಡರಿಕೊಂಡು
ಕತ್ತಲಲಿ ಕರಗಿ ಹೋಗಿವೆ
ಅವರ ಇನ್ನೊಂದು ಕವಿತೆ `ಕಣ್ಣೀರ ಮಣ್ಣಲ್ಲಿ’ ಕೂಡ ಶತಮಾನಗಳಿಂದ ತುಳಿತಕ್ಕೊಳಪಟ್ಟಿದ್ದರೂ ದಲಿತನೊಬ್ಬ ಮತ್ತೆ ಜೀವನಪ್ರೀತಿಯಿಂದ ಹೇಗೆ ಪುಟಿಯುತ್ತಾನೆ, ತನ್ನ ನಾಳೆಗಳನ್ನು ಹೇಗೆ ಕನಸುತ್ತಾನೆ ಎನ್ನುವುದನ್ನು ಅದ್ಭುತವಾಗಿ ಹೇಳುತ್ತಾರೆ-
ಆ ಕಣ್ಣೀರ ಕಣ್ಣೋಳಗೆ ನಾನೀಗ
ನೆನೆಯುತ್ತಿದೇನೆ, ಮೊಳೆಯುತ್ತಿದ್ದೇನೆ
ರಕ್ತ ಕಾರುವ ಸೂರ್ಯನ ಜೊತೆ ಜೊತೆಗೆ ಕೆಂಪಗೆ
ನಾ ನಾಳೆ ಖಂಡಿತ ಚಿಗುರುತ್ತೇನೆ
ಒoದು ರೀತಿಯಲ್ಲಿ ಇದೇ ಶೈಲಿಯಲ್ಲಿ ಬರೆದವರು, ಆಲೋಚಿಸಿದವರು ಬಾಗಲುಕೋಟೆಯ ಕವಿ ಸತ್ಯಾನಂದ ಪಾತ್ರೋಟ. ಈ ನಾಡಿಗೆ ದಲಿತರ ನಿರ್ಮಲ ಪ್ರೀತಿ, ನಿರ್ವ್ಯಾಜ್ಯ ಸೇವೆ ನೀಡಿ ಬದುಕಿದ ದಲಿತರು ತಮ್ಮಷ್ಟಕ್ಕೆ ತಾವು ಏನು ಹಾಡಿಕೊಳ್ಳಬಲ್ಲರು? ಎಂದು ಪ್ರಶ್ನಿಸಿಕೊಳ್ಳುತ್ತಾ `ಜಾಜಿ ಮಲ್ಲಿಗೆ’ ಕವನ ಸಂಕಲನವನ್ನು ಹೊರತಂದಿದ್ದಾರೆ. ಅವರು ಭರವಸೆ ನೀಡುತ್ತಾರೆ –
“ಪುಟ್ಟ ಗುಡಿಸಲಿನಲ್ಲಿ
ಕೆಟ್ಟ ಕನಸುಗಳಿಲ್ಲ
ಮನಸು ಕನಸುಗಳಲ್ಲಿ ಜಾಜಿ ಮಲ್ಲಿಗೆ
ಸತ್ತ ನರಗಳ ಸುತ್ತ
ಹಸಿದ ಹಾವುಗಳಿಲ್ಲ
ಟೊಂಗೆ-ಟೊಂಗೆಯ ತುಂಬಾ ಬಿರಿವ ಮೊಗ್ಗೆ”
        ದಲಿತ ಕವಿ ಕೆ.ಬಿ.ಸಿದ್ಧಯ್ಯ, ಕೆ ರಾಮಯ್ಯ, ಶಿವರಾಂ ಕಾಡನಕುಪ್ಪೆ, ಕಾಳೇಗೌಡ ನಾಗವಾರ, ರಂಜಾನ್ ದರ್ಗಾ, ಬಸವರಾಜ ಸಬರದ್, ವಿಜಯಶ್ರೀ ಸಬರದ್, ಪ್ರೊ.ಚಂಪಾ, ಹೀಗೆ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕಾವ್ಯ ಕಟ್ಟಿದ ದೊಡ್ಡ ದಂಡನ್ನೇ ಕನ್ನಡ ಕಾವ್ಯದಲ್ಲಿ ಕಾಣುತ್ತೇವೆ.
        ಅಂತಿಮವಾಗಿ ನಾನು ಉದ್ಧರಿಸಲೇಬೇಕಾದ ಇಬ್ಬರು ಮಹತ್ವದ ದಲಿತಕಾವ್ಯದ ಪ್ರಾತಿನಿಧಿಕ ಹೆಸರುಗಳು ಬರಗೂರು ರಾಮಚಂದ್ರಪ್ಪ ಹಾಗೂ ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಲಂಬಾಣಿ ಜನಾಂಗದ ಬದುಕನ್ನು ಕಟ್ಟಿಕೊಟ್ಟ ಬಿ.ಟಿ.ಲಲಿತಾ ನಾಯಕ. ಬರಗೂರು ರಾಮಚಂದ್ರಪ್ಪನವರ `ಶ್ರಮಜೀವಿಗಳ ಹಾಡು’ ಇಲ್ಲಿ ಉಲ್ಲೇಖಾರ್ಹ
              ಶ್ರಮಿಕರ ಪ್ರತಿಫಲ ಹೇಗೆ ಅವರ ಪಾಲಿನ ಒಂದು ಹೊತ್ತಿನ ಅನ್ನವು ಆಗದೇ ಉಳ್ಳವರ ಪಾಲಾಗುತ್ತದೆ ಎನ್ನುವ ಸಮಾಜದ ವಾಸ್ತವತೆಗೆ ಹಿಡಿದ ಕನ್ನಡಿ. ಸಮಾಜದ ಸ್ವಾಸ್ಥ್ಯಕ್ಕಾಗಿ ಸುಖದ ಜೀವನಕ್ಕಾಗಿ ಅವರು ಎಲ್ಲ ಮಾಡಿಯೂ ಎಲ್ಲಿಯೂ ಉಳಿಯದೇ ಹೋಗುತ್ತಾರೆ. ಅವರ `ಗುಲಾಮಗೀತೆ’ ಯ ಈ ಸಾಲುಗಳನ್ನು ಓದಿ-
“ನಾವು ಕಟ್ಟಿದ ಗೆದ್ದಲುಗೂಡು
ನಿಮಗಾಯಿತು ಹುತ್ತ
ನಾವು ಹೊತ್ತ ಮಣ್ಣಿನ ಕನಸು
ನಿಮಗಾಯಿತು ನನಸು
ನಾವು ನೀರೆರದ ಹೂವು-ಹಣ್ಣು
ನಿಮಗಾದವು ಹುಣ್ಣು
ದಾರಿ ಕಾಣುವೆವು ನಾವು
ಗೋರಿಯೊಳಗಡೆ ಘೋಷಣೆ ಕೂಗಿ
ಸಿಡಿದೇಳುವೆವು ನಾವು”
            ಬಿ.ಟಿ. ಲಲಿತಾ ನಾಯಕರ `ಹೊಂಡ’, `ಒಲೆಗ ಸೌದೆ’, `ದೊಗರು’ ಮತ್ತು `ಬಿದಿರ ಕಂತೆಯಲಿ’ ರಚನೆಗಳು ಇಂತಹವೇ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತವೆ. ಜೊತೆಗೆ ಶೋಷಣೆಯ ಹುಟ್ಟಿನಲಿ ಮನುಷ್ಯತ್ವವನ್ನೇ ಮರೆತವರನ್ನು ಮತ್ತೆ ಮನುಷ್ಯರಾಗಿಸುವ ಬುದ್ಧನ ಆಶಯವನ್ನು, ಭರವಸೆಯನ್ನು ವ್ಯಕ್ತಪಡಿಸುತ್ತವೆ. ಉದಾ-
“ನಿಮ್ಮ ಮಬ್ಬುಗಣ್ಣಿನ ಪೊರೆ ಕತ್ತರಿಸಿ
ಹೊಚ್ಚ ಹೊಸ ದೃಷ್ಟಿ ತುಂಬುವಾಸೆ ನನಗೆ
ಹೂತು ಹೋಗಿಉವ ನಿಮ್ಮ ಕಿವಿ ತೂಬನೆತ್ತಿ
ಜೀವದನಿ ಮೊಳಗಿಸುವಾಸೆ”
ಹೀಗೆ ದಲಿತ ಕಾವ್ಯದಲ್ಲಿ ಸಮಾಜ ನ್ಯಾಯದ ಸಾವಿರಾರು ಸ್ವರಗಳು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಎಲ್ಲರಿಗೂ ಸಾಮಾನ್ಯ ನೆಲೆಗಳು. ಸಾಮಾಜಿಕ ಕಳಕಳಿ, ಪರಿವರ್ತನೆಯು ಎಲ್ಲ ಕವಿಗಳ ಆಶಯವಾಗಿರುವುದರಿಂದ, ದಲಿತ ಚಳುವಳಿಗಳ ಜೊತೆ-ಜೊತೆಗೆ ಈ ಕಾವ್ಯ ಬೆಳೆದು ಬಂದಿರುವುದರಿಂದ ಕಾವ್ಯದ ವಿಷಯ ವಸ್ತುಗಳಲ್ಲಿ ನಿಸ್ಸಂಶಯವಾಗಿಯೂ ವೈವಿಧ್ಯತೆಯ ಕೊರತೆ ಇದೆ. ಆದರೆ, ಈ ಕಾವ್ಯದ ಭಾಷೆ, ಶೈಲಿ, ತಂತ್ರ ಹಾಗೂ ವಿಶ್ಲೇಷಣೆಯ ವಿಧಾನ ಆಶ್ಚರ್ಯವನ್ನುಂಟು ಮಾಡುತ್ತದೆ.
          ದಲಿತ ಕಾವ್ಯ ಜನಕಾವ್ಯ, ಜಗದ ಕಾವ್ಯ ಹಾಗೂ ಲಯದ ಕಾವ್ಯ. “ಯಾಕೆಂದರೆ ಇದು ತೀರ ಸಾಮಾನ್ಯ ಓದುಗರನ್ನು ತಲುಪುವ ಉದ್ದೇಶದಿಂದ ಸೃಷ್ಟಿಯಾದ ಕಾವ್ಯ. ಜೊತೆಗೆ ಕವನಗಳನ್ನು ಹಾಡುವುದರ ಮೂಲಕ ಜನಪಗೊಳಿಸುವ ಉದ್ದೇಶವೂ ಇತ್ತೆಂಬುದು ಗಮನಾರ್ಹ ಸಂಗತಿ. ಈ ಲಯಗಾರಿಕೆಯಿಂದ ದಲಿತ-ಬಂಡಾಯ ಕವಿಗಳ ಬಹುತೇಕ ಕವಿಗಳು ಗೀತೆಗಳಾಗಿ ಜನರ ಬಾಯಲ್ಲಿವೆ ಎಂಬುದು ಅವುಗಳ ಜೀವಂತಿಕೆಗೆ ಸಾಕ್ಷಿಯಾಗಿದೆ.
(ದಲಿತ ಕಾವ್ಯ: ಸಾಮಾಜಿಕ ನ್ಯಾಯ, ಹೈದರಾಬಾದ್ ದಿನಾಂಕ-29.03.2013)

No comments:

Post a Comment