Total Pageviews

Wednesday, April 24, 2013

“ಬಿಟ್ವಿನ್ ಬಾರ್ಕಿ ಆಂಡ್ ಬೇಜವಾಡಾ ಬಾಯ್ಸ್” (Between barki and Bhejwada Boys)





             ಈ ದಿನಗಳಲ್ಲಿ ರಾಜಸ್ಥಾನಕ್ಕೊ, ಹೈದರಾಬಾದಿಗೊ, ಗುಲ್ಬರ್ಗಾಕ್ಕೊ ಹೋಗುವುದೆಂದರೆ ಹೇಗಿರುತ್ತದೆ? ಇಂಥ ಊಹೆಯೇ ಭಯಂಕರ ಅಲ್ವೇ? ಆದರೆ ಮಾಗಿಯ ಮುಖವನ್ನು ಛಳಿಗಾಲದಲ್ಲಿಯೇ ನೋಡುವಂತೆ ಬಿಸಿಲುನಾಡಿನ ಬದುಕನ್ನು ಈ ಬೇಸಿಗೆಯಲ್ಲಿಯೇ ನೋಡಬೇಕು. ಇಂಥದನ್ನು ಅನುಭವಿಸುವ ಅದರ ಪರಿಣಾಮಗಳನ್ನು ತಡೆದುಕೊಳ್ಳುವ ಆರೋಗ್ಯ ಭಾಗ್ಯ, ವಿಸ್ತೃತ ಸ್ನೇಹಲೋಕವೂ ನಮಗಿರಬೇಕು. ಈ ವಿಚಾರದಲ್ಲಿ ಭಾಗ್ಯವಂತ ನಾನು.
          ಹೈದ್ರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯ(Usmania Univaersity)  ದ ಗೆಳೆಯ ಪ್ರೊ.ಲಿಂಗಣ್ಣ ಗೋನಾಳ, ಕರ್ನಾಟಕದ ಪ್ರೊ.ತೇಜಸ್ವಿ ಕಟ್ಟಿಮನಿ(Tejaswi Kattimani) ವೇದಿಕೆಯ ಕಾರ್ಯದರ್ಶಿ ಗೆಳೆಯ ಪ್ರೊ. ಬಸವರಾಜ ಡೋಣುರರು ಜಂಟಿಯಾಗಿ ಹಮ್ಮಿಕೊಂಡ `ಕನ್ನಡ ದಲಿತ, ಬಂಡಾಯ ಮತ್ತು ತೆಲುಗು ದಲಿತ ದಿಗಂಬರ ವಿಪ್ಲವ ಕಾವ್ಯ’ ಕುರಿತ ಒಂದು ದಿನದ ವಿಚಾರ ಸಂಕಿರಣ ನನಗೆ ಈ ಮೇಲೆ ಚರ್ಚಿಸಿದ ಭಾಗ್ಯವನ್ನು ಅನುಭವಿಸಲು ಕಾರಣವಾಯಿತು. ಇಂಥ ಬಿಸಿಲಲ್ಲೂ ಎಷ್ಟೊಂದು ಗಂಭೀರ ಚರ್ಚೆ ಮತ್ತು ಆಲೋಚನೆ ಸಾಧ್ಯವಾಯಿತು.
ಹೈದ್ರಾಬಾದ್‍ನ ಈ ಬಾರಿಯ ಸಂದರ್ಶನ ಇನ್ನೂ ಅರ್ಥಪೂರ್ಣ ಎನ್ನಿಸಲು ಮುಖ್ಯ ಕಾರಣ ಕವಿ, ಉದ್ಯಮಿ ಮಿತ್ರ ಧರ್ಮದಾಸ್ ಬಾರ್ಕಿ. 
   ಅಲ್ಲಿಗೆ ಹೋದ  ಹಿಂದಿನೆರಡು ದಿನದಿಂದ ಮರಳಿ ಬೇಲೂರಿಗೆ ಬರುವವರೆಗೂ ಅವರು ತೆಗೆದುಕೊಂಡ ಕಾಳಜಿ, ತೊರಿದ ಪ್ರೀತಿ, ಆ ಮುತುವರ್ಜಿ ಮರೆಯ ಬಹುದಾದ ಪುಟಗಳೇ ಅಲ್ಲ. ಬೆಂಗಳೂರಿಂದ ಬಂದು ಈ ಹೈದ್ರಾಬಾದಿನಲ್ಲಿ  ನೆಲೆಸಿರುವ ಬಾರ್ಕಿ ಪಾಲಿಗೆ ಆಂದ್ರ ಮತ್ತು ಹೈದ್ರಾಬಾದಗಳೆಂದರೆ ಮತ್ತೇನೂ ಅಲ್ಲ ಬರೀ ಪ್ರೀತಿ. ಆಗಾಗ ಅವರುಹೇಳುವ ಮಾತು, “Hyderabad is hot but people are warm, Bangalore is cool but people are cold” ಅಮೇರಿಕಾ, ಮೆಕ್ಸಿಕೊ, ಭಾರತ-ಪಾಕಿಸ್ತಾನ, ಭಾರತ-ಬಾಂಗ್ಲಾದೇಶ ಹೀಗೆ ದೇಶ-ದೇಶಗಳ ಮಧ್ಯದ ಗಡಿಗಳಲ್ಲಿ ಶಾಂತಿಯ, ಸೌಹಾರ್ದದ ಒಂದು ಬಿಲಿಯನ್ ಸೋಲಾರ್ ದೀಪಗಳನ್ನು ಹಚ್ಚುವ ಕನಸು ಕಂಡಿರುವ ಈ ಗೆಳೆಯ ಹೇಳುವ ಮಾತುಗಳಲ್ಲಿ ನಾನು ಅಪ್ರಾಮಾಣಿಕತೆಯನ್ನು ಹುಡುಕುವುದಿಲ್ಲ. ನಮ್ಮದು ಒಂದು ರೀತಿ ಬೆರಕಿ ಮತ್ತು ಹಡಬೆರಿಕಿ ಸ್ನೇಹ.
        28-03-2013 ರಂದು ಬೆಂಗಳೂರಿನಿಂದ ಹೊರಟು ಹೈದರಾಬಾದಿನಲ್ಲಿ ಇಳಿದುಕೊಂಡಿದ್ದು 29 ರ ಮುಂಜಾವು. ಬಸ್ಸಿನಿಂದ ಇಳಿಯುತ್ತಲೇ ಗೆಳೆಯ ಧರ್ಮದಾಸ ಬಾರ್ಕಿ(Dharmadas Barki) ಯವರ ಕಾರು ಸಿದ್ಧ. ಆದರೆ ಹೈದರಾಬಾದಿನ ಇರಾನಿ ಶೈಲಿಯ ಚಹಾ ಸವಿಯದೇ ದಿನವನ್ನು ಆರಂಭಿಸುವುದೆಂದರೆ ನಮಗೆ ಈ ದೇಶ ಅರ್ಥವಾಗಿಲ್ಲವೆಂದೇ ಅರ್ಥ. ಆನಂತರ ಮುಂಜಾವಿನ ಮೂರು-ನಾಲ್ಕು ಗಂಟೆ ಉಸ್ಮಾನಿಯಾ ವಿಶ್ವ ವಿದ್ಯಾಲಯದ(Usmania Univaersity) ಗೆಸ್ಟ್ ಹೌಸ್‍ನಲ್ಲಿ ಧರ್ಮದಾಸರ ಮಾತು ಮತ್ತು ಕಾವ್ಯದ ನಿರಂತರ ಧಾರೆ. ಈ ಮನುಷ್ಯನನ್ನು ಮಾತು, ಕವಿತೆ ಮತ್ತು ಕನಸುಗಳಿಂದ ಹೊರತುಪಡಿಸಿ ಕಲ್ಪಿಸಿಕೊಳ್ಳುವುದೇ ಅಸಾಧ್ಯ, ಹಾಗಲ್ಲ ಅಪೂರ್ಣ. ಮುಂಜಾನೆಯ ತಿಂಡಿಯ ನಂತರ ಬಾರ್ಕಿಯವರ ಕನಸಿನ ಕೂಸಾದ ಸಿದ್ಧಾರ್ಥ್(Siddharth) ಸಿನಿಮಾದ ಲೋಕೆಷನ್‍ಗಳ ವಿಸಿಟ್. ಆನಂತರ ಮತ್ತೂ ಎರಡು ಗಂಟೆಗಳ ಮಾತು.

    ಈ ದೇಶದ ಊಟದ ಹದವರಿತ ಮನುಷ್ಯ ಎಲ್ಲೆಲ್ಲೊ, ಏನೇನೋ ತಿಂದು ಹೊಟ್ಟೆಯೆಂಬ ಚೀಲವನ್ನು ತುಂಬಿಸಿಕೊಳ್ಳಲಾರ. ಇಲ್ಲಿಯ ಭಕ್ಷಗಳನ್ನು ಸವಿದು ಮುಗಿಸಲು ಖಂಡಿತವಾಗಿಯೂ ಈ ಒಂದೇ ಜನ್ಮವಂತೂ ಸಾಕಾಗದು. ನಮ್ಮ ಮಧ್ಯಾನ್ಹದ ಊಟದ ಹೆಸರನ್ನು ಎಲ್ಲಿ ಬರೆಯಬೇಕು ಎನ್ನುವ ನಿರ್ಧಾರ ಮತ್ತೆ ಬಾರ್ಕಿಯವರದೇ. ಯಾಕೆಂದರೆ `ಖಾನೆವಾಲೆ ಕೆ ನಾಮ್ ದಾನೆ ದಾನೆ ಪರ್’ ಅಲ್ವೆ? ಹೈದರಾಬಾದಿಗೆ ಹೋಗಿ ಬಿರಿಯಾನಿ ತಿನ್ನದೆ ಬಂದೆ ಎನುವುದು ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡದೆ ಬಂದೆ ಎನ್ನುವಷ್ಟೇ ಮೂರ್ಖತನದ್ದು. ಇತಿಹಾಸ ಪ್ರಸಿದ್ಧ ಹೈದರಾಬಾದಿನಲ್ಲಿ ಅಷ್ಟೇ ಇತಿಹಾಸ ಪ್ರಸಿದ್ಧ ಹೊಟೆಲ್ `ಪ್ಯಾರಡೈಸ್’(Paradaise) ಇದೆ. ನೀವು ಮಾಂಸಾಹಾರಿಗಳು ಹೌದೋ ಅಲ್ಲವೋ ಆದರೆ ಇತಿಹಾಸ ಪ್ರಜ್ಞೆ ಇರುವ ಇಷ್ಟೊಂದು ದೊಡ್ಡ ಪ್ರಮಾಣದ ಹೊಟೆಲ್‍ಗಳು ಭಾರತದಲ್ಲಿ ಇವೆ ಎಂದು ತಿಳಿದುಕೊಳ್ಳಲಾದರೂ ನೀವು ಇಲ್ಲಿ ಒಮ್ಮೆ ಹೋಗಿ ಬರಲೇಬೇಕು.

    ಇಲ್ಲಿಂದ ನೇರ ರವಿತೇಜ(Ravitej)ರ ಬಳಿ. ಇವರು ತೆಲುಗಿನ ಮಹತ್ವದ ಚಿಂತಕ. ಷಾಫೆನವರ್, ನಿಶೆ(Nishthe), ಜೆಕೆ(GK) ಹಾಗೂ ಒಶೋ(Osho) ರ ಆಲೋಚನೆಗಳನ್ನು ಚರ್ಚಿಸುತ್ತಾ, ಒರೆಗೆ ಹಚ್ಚುತ್ತಾ ಪ್ರಪಂಚ ಸುತ್ತಿದ ಮನುಷ್ಯ. ಬಹಳ ಬರೆಯದೇ ಇದ್ದರೂ ಬರಹ ಮತ್ತು ಬರಹಗಾರನ ನಾಡಿ ಮಿಡಿತವನ್ನು ಬಲ್ಲ ಸೂಕ್ಷ್ಮಜ್ಞ. ಇವರೊಂದಿಗೆ ಒಂದು ಗಂಟೆಯ ಹರಟೆಯ ನಂತರ ಹೊದದ್ದು ಹೈದರಾಬಾದಿನ ಪ್ರತಿಷ್ಠಿತ ಜ್ಯುಬಿಲಿ ಹಿಲ್ಸಿ(Jubli hills)ಗೆ. ತೆಲುಗು ಚಿತ್ರರಂಗ(Telagu Industry)ದ ಬಹುಪಾಲು ಚಿತ್ರ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರುಗಳು ವಾಸವಿರುವುದು ಇಲ್ಲಿಯೇ. ನಮ್ಮ ಭೆಟ್ಟಿ ಇದ್ದದ್ದು ಸ್ಕಾಯ್ ಲೈನ್ ಪ್ರೊಡಕ್ಷನ್(Sky line production)ನ `ಬೇಜವಾಡಾ ಬಾಯ್ಸ್’(Bajawada Boys) ಗಳೊಂದಿಗೆ.
         

 ಮೂವತ್ತನ್ನು ಮೀರದ ಈ ಎಳೆಯ ಗೆಳೆಯರ ಮಧ್ಯ ಮುಪ್ಪಿಗೆ ಆಸ್ಪದವಿಲ್ಲ. ಸದಾ ಒಂದು ಕಾಲು ಹಾಲಿವುಡ್(Hollywood)ನಲ್ಲಿಯೇ ಇಟ್ಟುಕೊಂಡು ಕೆಲಸ ಮಾಡುವ ಇವರಿಗೆ ಭಾರತೀಯ ಚಿತ್ರರಂಗದೊಂದಿಗೆ, ಅದರ ಗುಣಾತ್ಮಕತೆಯೊಂದಿಗೆ ಬಹಳಷ್ಟು ತಕರಾರಿದೆ. ತೆಲುಗು ಚಿತ್ರರಂಗ(Telagu Industry)ದ ಮೋಸ, ವಂಚನೆಗಳಿಂದಲಂತೂ ಇವರು ಸೋತುಹೋಗಿದ್ದಾರೆ. ಹೀಗಾಗಿ ಇವರದೇನಿದ್ದರೂ ಅಂತರಾಷ್ಟ್ರಿಯ ವ್ಯವಹಾರ. ವಿಶ್ವಸುಂದರಿಯಾದ ಸ್ಪ್ಯಾನಿಷ್ ದೇಶದ ಬೊಲಿವಿಯಾ(Bolivia)ಳನ್ನು ಹಾಕಿಕೊಂಡು ಇವರು ನಿರ್ಮಿಸಿರುವ ಅನಾಥ ಮಕ್ಕಳ ಕುರಿತ ಹತ್ತು ನಿಮಿಷದ ಒಂದು ಸಾಂಗ್ ಸಿಕ್ವೆನ್ಸ್ ನೀವು ನೋಡಿದರೆ ಗೊತ್ತಾಗುತ್ತದೆ ಅವರ ಕೆಲಸದ ಸೂಕ್ಷ್ಮತೆ. ಒಂದುವರೆ ಕೋಟಿ ರೂಪಾಯಿ ವೆಚ್ಚದ ಈ ಕೆಲಸವನ್ನು ಅವರು ಕೇವಲ 25 ಲಕ್ಷ ರೂಪಾಯಿಗಳಲ್ಲಿ ಮುಗಿಸಿದ್ದಾರೆ. ಜೊತೆಗೆ ಸುಂದರಿಯೊಬ್ಬಳನ್ನು ಬಳಸಿಕೊಂಡು ಮಾನವನ ಹೃದಯ ಶ್ರೀಮಂತಿಕೆಗೊಂದು ಕನ್ನಡಿ ಹಿಡಿದಿದ್ದಾರೆ. ಇವರೊಂದಿಗಿನ ಕಾರ್ಯಾತತ್ಪರತೆಯ, ಸಿನಿಮಾ ನಿಷ್ಠೆಯ ಮಾತುಗಳಿಗೆ ನಾನೂ ಸಮ್ಮತಿಸಿದ್ದೇನೆ.
           ಮರುದಿನ ಕಾರ್ಯದ ಒತ್ತಡದಿಂದಾಗಿ ತಮಗೆ ಬರಲಾಗದು ಎಂದು ಹೇಳಿ ಹೋಗಿದ್ದ ಬಾರ್ಕಿ ಉಸ್ಮಾನಿಯಾ ವಿಶ್ವವಿದ್ಯಾಲಯದ ನನ್ನ ಭಾಷಣ ಮುಗಿಯುತ್ತಲೇ ಕಾರಿನೊಂದಿಗೆ ಮತ್ತೆ ಸಿದ್ಧವಾಗಿದ್ದರು. ಅಲ್ಲಿಂದ ನೇರ ಚಾರ್‍ಮಿನಾರ್(Charminar))ಗೆ. ಇದನ್ನು ಹೋಲುವ ಅನೇಕ ಇಸ್ಲಾಮಿಕ್ ಕಟ್ಟಡಗಳನ್ನು ನೀವು ಭಾರತದ ಅನೇಕ ಕಡೆಗೆ ನೋಡಬಹುದಾಗಿದೆ. ಆದರೆ ಅದರ ಸುತ್ತಲಿನ ಬದುಕನ್ನು ಮಾತ್ರ ಹೈದರಾಬಾದಿನಲ್ಲಿಯೇ ನೋಡಿ ಅನುಭವಿಸಬೇಕು. ಇದು ಮಹಿಳೆಯರ ಪಾಲಿನ ಸ್ವರ್ಗವೇ ಸರಿ. ಭಾರತದ ಕೋಗಿಲೆ ಸರೋಜಿನಿ ನಾಯ್ಡು(Sarojini Naidu) ಈ ಬಾಜಾರಕ್ಕೆ ಬೆರಗಾಗಿ ಎಷ್ಟೆಲ್ಲಾ ಕವಿತೆಗಳನ್ನು ಬರೆದಿದ್ದಾರೆ. ಕೈ ಬಳೆಯಿಂದ ಹಿಡಿದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಿವಿಯೊಲೆಯ ವ್ಯವಹಾರ ನಡೆಯುವುದು ಇಲ್ಲಿಯೇ. ಅಂದ ಹಾಗೆ ಕೋಹಿನೂರಿನ(Kohinoor) ಕತೆ ಪ್ರಾರಂಭವಾಗುವುದೇ ಈ ಹೈದರಾಬಾದಿನಿಂದ ಅಲ್ಲವೇ?
     ರಾತ್ರಿಕ್ಕೆ ಇಲ್ಲಿಯ ಲಕಡಿ ಕಾ ಪೂಲ್‍ನಿಂದ ಪ್ರವಾಸ ಪ್ರಾರಂಭಿಸಬೇಕಾದ ನಾವಿಬ್ಬರು ಗೆಳೆಯರು ಅಗಲುವ ಅರೆಕ್ಷಣವನ್ನೂ ಬಳಸಿಕೊಳ್ಳುತ್ತಿದ್ದೇವು. ಇಲ್ಲಿಯೇ ಸಮೀಪದ ಸ್ಟಾರ್ ಹೊಟೆಲಾದ `ಯಾತ್ರಿ ನಿವಾಸ’ದಲ್ಲಿ ನಾವು ಹೊಟ್ಟೆ ತುಂಬಾ ಬೀರು ಹೀರುತ್ತಿದ್ದರೆ ಮಗ ಸಿದ್ಧಾರ್ಥ್ ಮತ್ತು ಪದ್ಮಶ್ರಿ ಇಲ್ಲಿಯ ಆಟಗಳಲ್ಲಿ ಮಗ್ನ. ಒಂದುವರೆ ಗಂಟೆಯ ಇಲ್ಲಿಯ ಮಾತುಕತೆಗಳಲ್ಲಿ ನಾವು ನಮ್ಮ ಇಡೀ ಭವಿಷ್ಯವನ್ನು ಕಟ್ಟಿಕೊಳ್ಳಬೇಕಿದೆ. ಹಾಡಬೇಕಿದೆ, ಹಂಚಿಕೊಳ್ಳಬೇಕಿದೆ. ಹೊಸ ಯುಗದ ಮುನ್ನುಡಿಯನ್ನು ಬರೆಯಬೇಕಿದೆ. ಕನಸು ದೊಡ್ಡದಾಯಿತು ಆದರೆ ಹೊರೆಯಾಗಿಲ್ಲ. ಇನ್ನು ಬಸ್ಸು ಹತ್ತುವ ತವಕ ನನಗೆ, ಇಲ್ಲ ಹೈದರಾಬಾದಿನ ನೆಕ್ಲೆಸ್ ರೋಡನ್ನು ನಾನು ನಿಮಗೆ ತೋರಿಸದೇ ಹೋದರೆ ನನಗೇ ಹೈದರಾಬಾದ್ ಅರ್ಥವಾಗಿಲ್ಲ ಎಂದಾಗುತ್ತದೆ ಎಂದು ಸುಮಾರು ಹತ್ತು ಸುತ್ತಳತೆಯ ನಗರದ ಹೃದಯ ಭಾಗದಲ್ಲಿಯ ಈ ಕೆರೆಯನ್ನು ರಾತ್ರಿ ತೋರಿಸಿದರು ಬಾರ್ಕಿ. ನಗರದ ಒಟ್ಟು ಆಚರಣೆಗಳು ಇದರ ಸುತ್ತಲೂ. ಇಲ್ಲಿ ಹಗಲು ರಾತ್ರಿಗಳ ಭೇದ ಎಣಿಸಲಾಗದು. ಅಂತಹ ಜೀವಂತಿಕೆ ಇಲ್ಲಿ ನಿರಂತರವಾಗಿರುತ್ತದೆ.
          ಈಗ ಕೊನೆ ಕೊನೆಯ ಪೋಲಿ ಪೋಲಿ ಮಾತುಗಳು. `ಮಾಮೊಚೆ, ಬಾತೊಚೆ ಮತ್ತು ತುತೊಚೆ’ ಎಂದರೆ ಏನು ಹೇಳಿ ರಾಗಂ? ಇದು ಬಾರ್ಕಿ ಪ್ರಶ್ನೆ. ನನಗೆ ಗೊತ್ತಿಲ್ಲ, ಬಹುತೇಕ ಮಕ್ಕಳ ಭಾಷೆಯಿರಬಹುದು, ಇದು ನನ್ನ ಊಹೆ, ಆದರೆ ಧರ್ಮದಾಸ್ ಕೊಡುವ ವಿವರಣೆ ಕೇಳಿದರೆ ಮತ್ತೆ ಹದಿನೆಂಟರ ತುಂಟತನ ಇಣುಕು ಹಾಕುತ್ತದೆ. ಅವರ ವಿವರ ಕೇಳಿ ನಕ್ಕಿದ್ದೇ ನಕ್ಕಿದ್ದು. ಇದನ್ನೇ ಅಲ್ಲವೇ ಹೆಸ್(Hes) ಹೇಳುವುದು `The true lovers never separate  without appreciating each other’.  

No comments:

Post a Comment