Total Pageviews

Saturday, January 18, 2020

‘ಅರ್ಥ’ ಮತ್ತೆ ಹಾಡಾಗಬಾರದೆ???


ನಾ ಇನ್ನ ಹೇಳಲಿ ಎಷ್ಟಾ
ಹೇಳಿದಷ್ಟೂ ತೀರದಷ್ಟಾ. . . .
ಹೊಟ್ಟಿ ಸಂಕಟಾ ತೆರದ ತೋಡಿಕೊಂಡ
ಶ್ರೀರಾಮ ಬರದಾನ ಕವಿತಾ (ಬರಗಾಲ ಲಾವಣಿ)
  ಲಾವಣಿಯನ್ನು ನೀವು ಓದಲೇಬೇಕು. ಇದುಹೊಳೆಸಾಲ ಬಳ್ಳಿ ಮುಗಿಯದ ಹಾಡು. ಬುದ್ಧನನ್ನು ತಬ್ಬದ ಭಾರತ ನಿಮಗೆ ಅರ್ಥವಾಗುವುದಿಲ್ಲ, ಅಂತೆಯೇ ಬರಗಾಲವನ್ನು ಓದದ, ಓದಿಸದ ಉತ್ತರ ಕರ್ನಾಟಕದ ಕವಿ-ಕಾವ್ಯಗಳೂ ನಮ್ಮ ಅನುಭವದ ಮಾತಾಗುವುದಿಲ್ಲ. ನೆಲವೇ ಹೀಗೆ, ಹೊಳೆಯ ದಡದಲ್ಲಿದ್ದೂ ಬಂಜರು. ಜನರೇ ಹೀಗೆ, ಲೋಕದೊಳಗಿದ್ದೂ ಭಿನ್ನರಾಗಿ ನಿಂತವರು. ಇದು ಶ್ರೀರಾಮ ಇಟ್ಟಣ್ಣನವರ ಕವಿತೆ ಕ್ರಮಿಸಿದ ಪರಿಯೂ ಕೂಡ.
ಡಾ ಶ್ರೀರಾಮ ಇಟ್ಟಣ್ಣನವರಹೊಳೆಸಾಲ ಬಳ್ಳಿಇಂದಿಗೆ ನಾಲ್ಕುವರೆ ದಶಕಗಳಿಗೂ ಮೀರಿದ ಕಾಲಕ್ರಮಿಸಿದ ಕಾವ್ಯ ಸಂಕಲನ. ಶುದ್ಧ ಜನಪದೀಯ, ಯೌವ್ವನೋತ್ಸಾಹದ ಭೌತಿಕಲೋಕವೇ ಹಾಡಾಗಿರುವ ಸುಂದರ ಉದಾಹರಣೆ. ಸಧ್ಯಕ್ಕೆ ಇದಕ್ಕೆ ಪರ್ಯಾಯ ಎನ್ನಿಸುವ ಕೃತಿಯೊಂದರ ಲಕ್ಷಣಗಳನ್ನು ತುಕಾರಾಮ ದೊಡ್ಡಕುಂಡಿ ಅವರಹಿಂದಕ್ಕ ನೋಡಿ ಮುಂದಕ್ಕ ನಡಿಎನ್ನುವ ಸಂಕಲನದಲ್ಲಿ ಓದಿದ ನೆನಪು ನನಗೆ.
ಅದೊಂದು ಘಟ್ಟವೆ ಸರಿ. ಡಾ ಸೋಮಶೇಖರ ಇಮ್ರಾಪೂರರಗಂಡ ಹೆಂಡಿರ ಜಗಳ ಗಂಧ ತೀಡಿದಾಂಗಕವನ ಸಂಕಲನ, ಡಾ ಮಹಾದೇವ ಕಣವಿ ಅವರಮುಟ್ಟಲು ಮುರಕಿ’, ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರನೀ-ನಾಮತ್ತುನಿನ್ನ ಮರೆಯುವ ಮಾತುಹೀಗೆ ಸಾಲುಸಾಲಾದ ಕಾವ್ಯ ಸಂಕಲನಗಳು ಯೌವ್ವನಕ್ಕೆ ಸಾವೇ ಇಲ್ಲ, ಪ್ರೀತಿಗೆ ಬದುಕು ಸಾಕಾಗುವುದಿಲ್ಲ ಎನ್ನುವ ರೀತಿಯಲ್ಲಿ ಕವಿತೆಗಳನ್ನು ಕಟ್ಟಿಕೊಟ್ಟವುಗಳು. ಇದೇ ಪರಂಪರೆಗೆ ಸೇರಿದ ಇಟ್ಟಣ್ಣನವರು ತಮ್ಮಹೊಳೆಸಾಲ ಬಳ್ಳಿಸಂಕಲನದಲ್ಲಿ ಅಭಿವ್ಯಕ್ತಿಗೆ ಆರಿಸಿಕೊಂಡ ವಿಷಯಗಳು ಮತ್ತು ಆಧಾರವಾಗಿಸಿಕೊಂಡ ಬರಹದ ಶೈಲಿಯಿಂದಾಗಿ ಮೇಲಿನವರಿಗಿಂತ ಭಿನ್ನವಾಗುತ್ತಾರೆ, ಅನನ್ಯರಾಗುತ್ತಾರೆ ಆದರೆ ಅನ್ಯವಾಗುವುದಿಲ್ಲ.
ಕಾವ್ಯ ಯಾವ ಕಾಲಕ್ಕೂ, ಯಾರನ್ನೂ, ಯಾವುದನ್ನೂ ಅನ್ಯವಾಗಲು ಆಸ್ಪದ ಕೊಡುವುದಿಲ್ಲ. ನಿಸ್ಸಂಶಯವಾಗಿಯೂ ಪ್ರತಿ ಕವಿಗೂ ಹೊಸ ವಿಚಾರವೊಂದನ್ನು ಹೇಳುವ ತುಡಿತ ಇರುತ್ತದೆ. ಅದರ ಹಿಂದೆ ಒಂದು ಅನುಭವವಿರುತ್ತದೆ. ಅಂತೆಯೇ ಬರೆಯುತ್ತಾರೆ, He has a whole new experience to unfold; he will tell us how it was with him, and all men will be the richer in his fortune. For, the experience of each new age requires a new confession, and the world seems always waiting for its poet. ಕೃಷ್ಣೆಯ ಒಡಲು ಹೀಗೊಬ್ಬ ಕವಿಗೆ ಕಾಯ್ದಿತ್ತು, ಅನುಭವ ಮಾಗಿತ್ತು. ಅದು ಇಟ್ಟಣ್ಣನವರ ಮಡಿಲಿಗೆ ಬಿತ್ತು.
ಲೋಕದ ಯಾವ ಕವಿಯಾದರೂ ಸರಿ, ಆತ ಬಾಹ್ಯ ನೋಟಕ್ಕೆ ತನ್ನ ಸಮಕಾಲೀನರಿಗಿಂತಲೂ ಭಿನ್ನವಾಗಿರುವಂತೆ ಇರುತ್ತಾನೆಯೇ ವಿನಃ ಅನ್ಯನಾಗಿರುವುದಿಲ್ಲ. ಆತ ಭಿನ್ನವಾಗಿರುವುದು ಶೋಧದ ಕಾರಣದಿಂದ, ಕಲೆಯ ಕಾರಣದಿಂದ ಹಾಗೂ ಹುಡುಕಾಟದ ಕಾರಣದಿಂದ. ಅವನ ಅಭಿವ್ಯಕ್ತಿಯ ಕ್ರಮ ಮತ್ತು ಭಾಷೆಯಗಳು ನಿಸ್ಸಂಶಯವಾಗಿಯೂ ಆತನನ್ನು ಅವನ ಕಾಲದಿಂದ ಭಿನ್ನವಾಗಿಸುತ್ತದೆ. ಭಿನ್ನತೆಯೇ ಕವಿಯಾಗಿ ಅವನ ಅಸ್ಮಿತೆಯ ಮೂಲ. ಇದನ್ನು ಸರಳವಾಗಿ ಛಾಪು ಎಂದುಬಿಡಬಹುದೇನೊ. ಇಟ್ಟಣ್ಣನವರದು ಜನಪದದ ಛಾಪು.
ಇಡೀ ಸಂಕಲನದಲ್ಲಿ ಶಿಷ್ಟದ ಎರಡೇ ಎರಡು ರಚನೆಗಳು, ಒಂದುಪ್ರೇಮದೋಲೆಇನ್ನೊಂದುಹಾರೈಕೆ’. ಇವೆರಡನ್ನು ಹೊರತುಪಡಿಸಿದರೆ ಇದು ಸಂಪೂರ್ಣ ಜನಪದದ ಗತ್ತಿನಲ್ಲಿ ಚಿಮ್ಮಿದ ಕಾವ್ಯ. ನನ್ನ ಓದಿನ ವ್ಯಾಪ್ತಿಯಲ್ಲಿ ಇಂಥ ಒಂದು ಶುದ್ಧ ಜನಪದೀಯ ಕಾವ್ಯ ಸಂಕಲನವನ್ನು ನಾನು ಕಂಡಿಲ್ಲ. ಹಿರಿಯರು, ಕನ್ನಡ ಕಾವ್ಯದ ಮೇರು ಕವಿಗಳೂ ಆದ ಚನ್ನವೀರ ಕಣವಿಯವರು ಶ್ರೀರಾಮ ಇಟ್ಟಣ್ಣನವರ ಕಾವ್ಯವನ್ನು ಕುರಿತು ಹೇಳಿದ ಮುಂದಿನ ಸಾಲುಗಳು ನನ್ನ ವಾದವನ್ನು ಸಮರ್ಥಿಸುವಂತಿವೆ. “ ಗೀತೆಗಳಲ್ಲಿ ಎಲ್ಲೋ ಒಂದೆರಡು ಕಡೆ ಆಧುನಿಕ ಪ್ರಜ್ಞೆಯ ಗಾಳಿ ಸೋಕಿದಂತೆನಿಸಿದರೂ ಒಟ್ಟಿನಲ್ಲಿ ಜನಪದ ಕಾವ್ಯ ಪರಂಪರೆಯಿಂದ ಇದು ಭಿನ್ನವಾದದ್ದಲ್ಲ. ಅಂದರೆ ಹಳ್ಳಿಯ ಜನಸಾಮಾನ್ಯರ ಜೀವನವನ್ನು, ಅವರ ಸಹಜವಾದ ಭಾವ-ಭಾವನೆಗಳನ್ನು ಅಲ್ಲಿಯ ವಾತಾವರಣಕ್ಕೆ ತಕ್ಕಂತೆ, ಅವರ ಮಾತಿನಲ್ಲಿಯೇ ಪ್ರಾಮಾಣಿಕವಾಗಿ ಇಲ್ಲಿ ಅಭಿವ್ಯಕ್ತಿಗೊಳಿಸಲಾಗಿದೆ.”
ಇಟ್ಟಣ್ಣನವರು ಕಾವ್ಯವನ್ನು ಓದಿದವರಷ್ಟೇ ಅಲ್ಲ, ಬರೆದವರಷ್ಟೇ ಅಲ್ಲ ಬದುಕಿದವರೂ ಕೂಡ. ಅಂತೆಯೇ ಗ್ರಾಮೀಣ ಸೊಗಡಿನ ಅವರ ಕರ್ಮಭೂಮಿಯಾದ ಬೀಳಗಿಯಲ್ಲಿಯೇ ಜೀವಮಾನವೆಲ್ಲ ಉಳಿದು, ಮೈಯೆಲ್ಲ ಕಿವಿಯಾಗಿ ಕೃಷ್ಣೆಯ ಜೋಗುಳವ ಕೇಳಿಸಿಕೊಂಡು, ನೆಲದ ವಾಸನೆಗಳಾದ ಸಿಂಧೂರ ಲಕ್ಷ್ಮಣ, ಮೇಲು ಸಿದ್ದೇಶ್ವರನ ಬೆಟ್ಟ, ಕೃಷ್ಣ ಪಾರಿಜಾತದ ಗಂಧಗಳನ್ನು ಅನುಭವಿಸಿ, ಇಟ್ಟಣ್ಣನವರು ನಮ್ಮೊಂದಿಗಿದ್ದೂ ಭಿನ್ನರಾದರು. ಜನಪದರ ದೈವಭಕ್ತಿ, ಒಲವು, ಆತ್ಮ ಜಾಗೃತಿಯ ಸಾಧನೆ, ಅವರ ಕಾವ್ಯಕ್ಕೊಂದು ವಿಲಕ್ಷಣತೆಯನ್ನು ತಂದುಕೊಟ್ಟಿತು. ಇಲ್ಲಿಯ ಭಾಷೆ ಏಕಕಾಲಕ್ಕೆ ಇಟ್ಟಣ್ಣನವರ ಮೂಲಕ ಸಿಂಪಿ ಲಿಂಗಣ್ಣ, ಮಧುರಚೆನ್ನ ಹಾಗೂ ಶಿಶುನಾಳ ಶರೀಫರು ಬಳಸಿದ ಭಾಷಾನುಭವವನ್ನು ಓದಗರಿಗೆ ದಕ್ಕಿಸಿತು.
ಇಟ್ಟಣ್ಣನವರಹೊಳೆಸಾಲ ಬಳ್ಳಿಇನ್ನೊಂದು ರೀತಿಯಲ್ಲಿಯೂ ನನಗೆ ಅಚ್ಚರಿಯನ್ನುಂಟು ಮಾಡಿದೆ. ಸಂಕಲನದ ಮೂರು ಹಾಡುಗಳನ್ನು (‘ಬರತನಂದ ನಲ್ಲಾs. . .’, ‘ಹೊಳಿ ಹಾದ ಮ್ಯಾಗ’, ‘ಇಲ್ಲೇ ಅಲ್ಲೇನs’) ಕೇಳುತ್ತ, ಗುನುಗುನಿಸುತ್ತ, ಮೆಲುಕು ಹಾಕುತ್ತ ನನ್ನ ಮೇರು ಯೌವ್ವನದ ದಿನಗಳನ್ನು ಕಳೆದವನು ನಾನು. ನಮ್ಮೂರಾದ ಚಡಚಣವೆಂಬ ಮಹಾ ಜಗತ್ತಿನಲ್ಲಿ ಒಂದು ಕಾಲೇಜು. ಅದಕ್ಕೊಂದು ಗ್ಯಾದರಿಂಗ್. ಅಲ್ಲಿ ನನ್ನದೊಂದು ಹಾಡು. ಆಗಷ್ಟೇ ಮೀಸೆ ಇಣುಕುವ ವಯಸ್ಸು, ಆದರೆ ಇನ್ನೂ ಚಡ್ಡಿಯನ್ನೇ ಹಾಕಿಕೊಂಡು, ತಲೆಗೆ ಟೊಪ್ಪಿಗೆ ಇಟ್ಟುಕೊಂಡು ವೇದಿಕೆಯ ಮೇಲೆ ಹಾಡಲು ನಿಂತಿರುತ್ತಿದ್ದೆ. ಪಕ್ಕದಲ್ಲಿ ಇಬ್ಬರು ನಡುಯೌವ್ವನದ ಸಂಸಾರಸ್ಥ ಉಪನ್ಯಾಸಕರುಗಳು. ಇಲ್ಲೇ ಅಲ್ಲೇನs
        ಹುಡುಗಿ ಇಲ್ಲೇ ಅಲ್ಲೇನs
        ಪರಕಾರದಾಗಿನ ಕೊಬ್ಬರಿ ಬೆಲ್ಲ
        ಹಾಕುತ್ತಿದ್ದಿ ನನ್ ಟೊಪಗ್ಯಾಗೆಲ್ಲಾ ಎಂದು ಮುದ್ದು-ಮುಗ್ದಾಗಿ ನಾನು ಹಾಡುತ್ತಿದ್ದರೆ ಅದೇಕೊ ಕಾಲೇಜಿನ ಹುಡುಗ ಹುಡುಗಿಯರು ಹೋssss ಎಂದು ಕೂಗುತ್ತಿದ್ದರು. ಅರ್ಥವಾಗಿರಲಿಲ್ಲ ಹಾಡು. ಈಗ ಅರ್ಥವಾಗಿದೆ, ಆದರೆ ಹುಡುಗಿ ಕಾಡುವುದಿಲ್ಲ ಹಾಡಾಗಿ. ಬೇಸರವಲ್ಲವೆ? ವಿಚಿತ್ರವೆಂದರೆ ಇದುವರೆಗೂ ಇವು ಶ್ರೀರಾಮ ಇಟ್ಟಣ್ಣನವರ ರಚನೆಗಳೆ ಎಂಬುದು ನನಗೆ ಗೊತ್ತಿರಲಿಲ್ಲ. ಸಂಕಲನ ಓದುತ್ತಿರುವಂತೆಯೇ ಸಂತಸ, ಅಚ್ಚರಿ ಹಾಗೂ ಸಂಭ್ರಮದ ಅನುಭವ. ಇದು ಕಾವ್ಯ ದಕ್ಕಬೇಕಾದ ಸರಿಯಾದ ಕ್ರಮವೂ ಕೂಡ. ಸಂಭ್ರಮಿಸದ ಕಾವ್ಯವನ್ನು ಬರೆದೇನು ಫಲ?
ಇನ್ನೂ ಟ್ರಾಕ್ಟರ್ ಸಾಹಿತ್ಯ ಹುಟ್ಟದ ಕಾಲದಲ್ಲಿ, ಉತ್ತರ ಕರ್ನಾಟಕದ ತುಂಬಲೂ ಗಾಯಕ ಗುರುರಾಜ ಹೊಸಕೋಟಿ ಅವರ ಪ್ರಸಿದ್ಧಿಯ ದಿನಗಳಲ್ಲಿ, ಕವಿ ಶ್ರೀರಾಮ ಇಟ್ಟಣ್ಣನವರ ಗೀತೆಗಳನ್ನು ಕೇಳದವರ್ಯಾರೂ ಇರಲಿಲ್ಲ. ಇದು ನಾನು ಕಂಡುಂಡ ಅನುಭವ. ಜನಪದದ ಶಕ್ತಿಯೆ ಇದು. ಗೇಯದ ದಡ ಹಿಡಿದುಕೊಂಡು ಜನಸಾಗರವನ್ನು ಸೇರುವ ಸಾಹಿತ್ಯ ಜನರ ಸಂಭ್ರಮವಾಗಿ ಮತ್ತು ಜನಶಕ್ತಿಯಾಗಿ ದೀರ್ಘಕಾಲ ಬಾಳಿಬಿಡುತ್ತದೆ.
ಶಿಷ್ಟಕ್ಕೆ ಸಾಧ್ಯತೆ ಕಡಿಮೆ. ಶ್ರೀರಾಮ ಇಟ್ಟಣ್ಣನವರಹೊಳೆಸಾಲ ಬಳ್ಳಿಸಂಕಲನದ ಎಲ್ಲಾ ರಚನೆಗಳು ಜನಪದವನ್ನಾಧರಿಸಿದ ಸಂವಾದಗಳೆ. ಪ್ರೀತಿ, ಕಾಮ, ದಾಂಪತ್ಯ, ಯಾತ್ರೆ, ಜಾತ್ರೆ, ಹಬ್ಬ, ಆಚರಣೆ, ನಂಬಿಕೆ, ಸಂಪ್ರದಾಯ, ಅವ್ವ, ಹೊಲ, ಹಳ್ಳ-ಕೊಳ್ಳ: ಇಲ್ಲಿರುವುದೆಲ್ಲವೂ ಜನಪದರ ಜೀವ ಪೊರೆದ ವಸ್ತು-ವಿಷಯ ಹಾಗೂ ಸಂಗತಿಗಳೆ. ಇಲ್ಲಿ ನೋಡಿ, ಮನದನ್ನೆಯನ್ನು ಮಾತಾಡಿಸುವ ಅವರ ಒಂದು ರಚನೆ
ನಮ್ಮ ಪ್ರೀತಿ ಬೆಳ ಬೆಳದ ಬಂತ
ಹೊಳಿಸಾಲ ಬಳ್ಳಿಹಾಂಗ
ನಂದೂ ನಿಂದೂ ಪ್ರೀತಿ ಐತಿ ಖರೆ
ಕೂಡು ಬಗಿ ಹ್ಯಾಂಗ? (ಗರದಿ ಗಮ್ಮತ್ತ)
 ಗಂಡನನ್ನು ಜನಪದ ಸಮುದಾಯದ ಮಹಿಳೆ ವರ್ಣಿಸುವ ರೀತಿಯನ್ನು ವಿವರಿಸುವ ಅವರ ಇನ್ನೊಂದು ರಚನೆ -
ಅಗಸ್ಯಾನೆಲ್ಲಾ ಗುಂಡಾ
ಉಳಿಸಾಂವ ನನಗಂಡಾ
ಆಗ ಬ್ಯಾಸರಕಿ ಬೈಲಾಗಿ
ಪ್ರೀತಿ ತೊಳಿಯತೈತಿ ಮೈಲಿಗಿ
ನನಗಂಡ ತಿರಸೆಟ್ಟಿ
ಬಾಳವ್ವ ಎಡವಟ್ಟಿ
ಇದ್ದರ ಇರಲೇಳ ಅಂವ ಪಾಡ
ಏನಂದ್ರು ಅಳಬುರಕ ಗಂಡ ಬ್ಯಾಡ. (ತಿರಸೆಟ್ಟಿ ಗಂಡ)
 ಗೇಯದ ಜೊತೆ ಜೊತೆಗೆ, ವಾದ-ಸಂವಾದವಿಲ್ಲದ ಜನಪದ ಕಾವ್ಯದ ರಚನೆಯೇ ಅಸಂಭವ ಎನ್ನಬೇಕು. ಇದನ್ನೆ For it is not meters, but a meter-making argument that makes a poem ಎಂದಿದ್ದಾರೆ ಯುರೋಪಿಯನ್ ಕಾವ್ಯ ಚಿಂತಕರು. ಇದು ನಮ್ಮ ಜನಪದರಿಗೆ ಬಹಳ ಹಿಂದೆಯೇ ದಕ್ಕಿದ ಅನುಭವ.
ಸಂಕಲನದುದ್ದಕ್ಕೂ ರಂಜನೆ, ನಾಟಕೀಯತೆ, ವ್ಯಂಗ್ಯ, ಕುಟುಕುವಿಕೆಯ ಅನುಭವವನ್ನು ಕೊಡುತ್ತಲೇ ಮೌಲ್ಯ ಪಲ್ಲಟ ಮತ್ತು ಜನಪದರ ಜೀವನ ಪ್ರಜ್ಞೆಯನ್ನು ಕುರಿತಾದ ಅನೇಕ ಸಂಗತಿಗಳ ಮೇಲೂ ಶ್ರೀರಾಮ ಇಟ್ಟಣ್ಣನವರು ಬೆಳಕು ಚಲ್ಲುತ್ತಾರೆ. ಒಂದು ಉದಾಹರಣೆ
ರೈತ ಮಕ್ಕಳು ಕೂಡಿ
ಬಾಳಿನ್ಹಾಡಾ ಹಾಡಿ
ಸಾಗೋಣು ಬಾಳೆಂಬು ಬನದಾಗ;
ನಮ್ಮ ನಿಮ್ಮ ಪ್ರೀತಿ
ಚೆಂದಾಗಿ ಸಾಗಲಿ
ಹಿರಿಹೊಳಿ ತುಂಬಿ ಹರದ್ಹಾಂಗ (ಭೂಮಿತಾಯಿ ಸಾಕ!)
ಇನ್ನೊಂದು ಉದಾಹರಣೆ
ಸೊಸಿ ಬಂದ ಒಂದೊರಸದಾಗ
ನನ ಮಗಾ ಬ್ಯಾರಿ ಆದಾ
ಮಾರಿ ಚೆಂದಕ ಮಳ್ಳ ಆಗಿ
ತನ ತಾಯಿ ಕಳ್ಳ ಕೋದಾ (ಹೊಳಿ ಹಾದ ಮ್ಯಾಗ)
 ಕೊಂಕು ನುಡಿ ಜಾನಪದರ ಬಹಳ ದೊಡ್ಡ ಆಯುಧವಾಗಿತ್ತು. ಶ್ರೀರಾಮ ಇಟ್ಟಣ್ಣನವರಹೊಳೆಸಾಲ ಬಳ್ಳಿ ಜೀವ ದ್ರವ್ಯವೇ ಕೊಂಕು. ಕೊಂಕು ಪದ್ಯವಲ್ಲವೆನ್ನುತ್ತಾರೆ. ಆದರೆ ಸರ್ವಜ್ಞ, ಕೆಲವು ವಚನಕಾರರು ಹಾಗೂ ತತ್ವಪದಕಾರರು ತಮ್ಮ ಕಾವ್ಯದಲ್ಲಿ ಕೊಂಕನ್ನು ಅತ್ಯಂತ ಸಮರ್ಥವಾಗಿ ಬಳಸಿದ ಉದಾಹರಣೆಗಳಿವೆ. ಇದರಲ್ಲಿ ಗದ್ಯದ ಅವಕಾಶವಿದ್ದರೂ ಪದ್ಯದ ಸೊಗಡಿರುತ್ತದೆ. ಇದು ತೋರಿಕೆಯಲ್ಲಿ ಗಡಸು. ಆದರೆ ಭಾವಿಸಲು ಪೆಡಸು. ದಾಸರೂ ಇದನ್ನು ಬಳಸಿದ್ದುಂಟು. ದಾಸ ಸಾಹಿತ್ಯದ ಶ್ರೇಷ್ಠ ರಚನೆಯಾದಡೊಂಕು ಬಾಲದ ನಾಯಕರೆಪದ್ಯವನ್ನೊದಬೇಕು ನಾವು.
ಜನಪದ ಕಾವ್ಯದ ಜೀವಾಳವೆ ಸಾಂಪ್ರದಾಯಿಕತೆ. ಹೀಗಾಗಿ ಸಾಂಪ್ರದಾಯಿಕ ಕಾವ್ಯವು ಗತಕಾಲದ ಮೌಲ್ಯಗಳನ್ನು, ಘಟನೆಗಳನ್ನು ಹಾಗೂ ಕಾಲಪ್ರವಾಹವನ್ನು ಬದಲಾಯಿಸುತ್ತ ಹೋಗುತ್ತದೆ. ಹೀಗಾಗಿ ಅವು ಬರೀ ವಾಹನಪ್ರಭೇದಗಳಲ್ಲ, ಬದಲಾಗಿ ಪೂರ್ಣತೆಯನ್ನು ಸಾಧಿಸುವ ವಾಹಿಕ ಪ್ರಭೇದಗಳು. ಜಾನಪದ ಕಾವ್ಯಗಳಲ್ಲಿ ವರ್ತಮಾನದ ಘಟನೆಗಳನ್ನು ಎಳೆದು ತರುವ ಕ್ರಿಯೆ ಒಂದೇ ನಡೆದಿರುವುದಿಲ್ಲ. ಬದಲಾಗಿ ಭೂತದ ಘಟನೆಗಳನ್ನು ವರ್ತಮಾನದ ಮೌಲ್ಯಗಳೊಂದಿಗೆ ನೋಡುವ ಕಾರ್ಯವೂ ನಡೆದಿರುತ್ತದೆ. ಉದಾಹರಣೆಗೆ
ನಮ್ಹಾಂಗ ಕಾದಾಡಿ
ಹಿಂದsಕೆಷ್ಟೊ ಮಂದಿ
ಮಣ್ಣ ತಿಂದಾರ ಬ್ಯಾಡೊ ಜಿದ್ದಾ ವರಮಾ;
ಕ್ವಾಟಿ ಕೊತ್ತಳ ಹಾಳ
ಭೂಮಿ ಬಿದ್ದಾವ ಬೀಳ
ನಾನೂ ನೀನು ಯಾ ತಪ್ಪಲೊ ತಮ್ಮಾ (ಅಚಿ ಮನಿ ಪೌ ಇಚಿ ಮನಿ ಪೌ)
 ಹೀಗೆ ಕಾವ್ಯದಲ್ಲಿ ಸಮಯದ ಪರಿಕಲ್ಪನೆಯೂ ಕೂಡಾ ಹಿಂದು ಮುಂದಾಗಿ ಕೊನೆಗೆ ಸಮಕಾಲೀನವಾಗುತ್ತದೆ. ಇಟ್ಟಣ್ಣನವರಹೊಳೆಸಾಲ ಬಳ್ಳಿಪ್ರಕಟಿತ ಕಾವ್ಯ ಸಂಕಲನವಾದರೂ ಅವರ ಬೇರುಗಳಿರುವುದೆಲ್ಲ ಜನಪದದಲ್ಲಿ ಹಾಗೂ ಜನಪದರ ಮೌಖಿಕ ಕಾವ್ಯಗಳಲ್ಲಿ.
ಕಾವ್ಯಾಕೃಷಿಕರೆಲ್ಲರಿಗೂ ಗೊತ್ತಿರುವಂತೆ ಮೌಖಿಕ ಕಾವ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಳೆದ ಪಾತ್ರಗಳು ಇರುವುದಿಲ್ಲ. ದೇವತೆಗಳೂ ಕೂಡ ಇಲ್ಲಿ ಮೌಲ್ಯಗಳ ಸಂಪೂರ್ಣ ಪ್ರತಿನಿಧಿಗಳಲ್ಲ. ಅವು ಕೂಡಾ ಅಪಕ್ವ, ಅಪೂರ್ಣ ಹಾಗೂ ಬೆಳವಣಿಗೆಯ ಹಂತದಲ್ಲಿರುವವೇ ಆಗಿರುತ್ತವೆ. ಹೀಗಾಗಿ ಇಲ್ಲಿಯ ಅನೇಕ ರಚನೆಗಳು ಗಕ್ಕನೆ ನಿಂತಂತೆ, ಥಟ್ಟನೆ ಯಾವುದೋ ತಿರುವು ಪಡೆದಂತೆ, ಅಪೂರ್ಣಗೊಂಡಂತೆ ಅನ್ನಿಸುವುದು ಸಹಜ.
ಒಂದು ಇಡೀ ಕವಿತೆಗಿರುವ ಅರ್ಥ ಮತ್ತು ಜೀವಂತಿಕೆಯನ್ನು ಇಟ್ಟಣ್ಣನವರ ಕಾವ್ಯದಲ್ಲಿ ಕೆಲವೊಮ್ಮೆ ಬರೀ ಒಂದು ಶಬ್ಧದಲ್ಲಿ ಕಾಣಬಹುದು. ಅವರ ಎಲ್ಲ ರಚನೆಗಳಲ್ಲಿ ಭಾಷೆಯೊಂದು ಬರೀ ಚೌಕಟ್ಟು ಎಂಬ ಪರಿಗಣನೆಯನ್ನು ಸಾಧಿಸದೆ, ಭಾಷೆಯನ್ನು ಬೌದ್ಧಿಕ ಹೋರಾಟದ ತತ್ವಸಿದ್ಧಾಂತಗಳ ಸ್ಥಾಪನೆಯ ಉದ್ದೇಶಕ್ಕಾಗಿ ಬಳಸದೆ, ಅದನ್ನೊಂದು ನಟನೆ ಹಾಗೂ ಘಟನೆ ಎಂದು ಪರಿಗಣಿಸಿಹೊಳೆಸಾಲ ಬಳ್ಳಿಕಾವ್ಯ ಸಂಕಲನವನ್ನು ಎಲ್ಲ ಕಾಲಕ್ಕೂ ಸಲ್ಲುವ ರಚನೆಯಾಗಿ ನಿಲ್ಲಿಸಿದ್ದಾರೆ. Every word was ones a poem. Every new relation is a new word, ಎನ್ನುವ ಪರಿಕಲ್ಪನೆ ಇದೆ ಅವರಿಗೆ. ಅವರ ಒಂದು ಸುಂದರ ರಚನೆ
ಎದಿಯಾನ ಪ್ರೀತಿ ಕಣ್ಣಾಗ ತುಳತುಳಕಿ
ಹಾಕತೈತಿ ತಾಳs
ನಾ ಹೇಳು ಮಾತ ಹೌದಲ್ಲೊ ನೀ ಖರೆ
ಕಿರೇ ಮಾಡಿ ಹೇಳ (ಕಿರೇಮಾಡಿ ಹೇಳ)
ಶ್ರೀರಾಮ ಇಟ್ಟಣ್ಣನವರ ಸಂಕಲನ ಸಮಕಾಲೀನ ಜಗತ್ತಿನಿಂದ ದೂರವಾದ, ಒಂದು ಕಾಲಕ್ಕೆ ಹಳ್ಳಿಗರ ಬದುಕಿಗೆ ತೀರ ಹತ್ತಿರವಾಗಿದ್ದ ಅನೇಕ ವಸ್ತುಗಳನ್ನು ಕುರಿತೂ ಸಂಕಲನದಲ್ಲಿ ಹಾಡಿದ್ದಾರೆ. ಅನಂತವಾದ ಬದುಕಿನ ಚರ್ಚೆಗಳಿಗೇನು ಇಲ್ಲಿ ಕೊರತೆ ಇಲ್ಲ. ಕಾವ್ಯವನ್ನುಹೃದಯ ಕುಸುಮಗಳುಎಂದು ಕರೆದಿದ್ದಾರೆ. ಹೀಗಾಗಿ ಪ್ರಸ್ತುತ ಸಂಕಲನದಲ್ಲಿ ನೂರಾರು ಹೃದಯ ಹಿಂಡುವ ಜೀವನ ಚಿತ್ರಣಗಳೂ ಇವೆ. ಚಲನಶೀಲ ಸಮಾಜದ ಸಮಕಾಲೀನ ಚಲನದ ಗತಿಯನ್ನೂ ಅವರ ಕಾವ್ಯ ದಾಖಲಿಸುತ್ತದೆ. ಜೀವನದ ಯಾಂತ್ರಿಕವಾದ ಪ್ರತಿನಿತ್ಯದ ಕ್ರಿಯೆಗಳೊಂದಿಗೆ ಐತಿಹಾಸಿಕ ಮೌಲಿಕತೆಯನ್ನು ಹೊಂದಿರುವ ಅನೇಕ ಸಾಂಸ್ಕøತಿಕ, ಧಾರ್ಮಿಕ ಮತ್ತು ಸಾಮಾಜಿಕ ರೀತಿ-ನೀತಿಗಳು ಇಡೀ ಕಾವ್ಯ ಸಂಕಲನದುದ್ದಕ್ಕೂ ಚರ್ಚೆಗೊಂಡಿವೆ. ಕವಿ ಇಟ್ಟಣ್ಣನವರು ಏನೆಲ್ಲವನ್ನು ಕಂಡಿದ್ದಾರೆ ಜೀವನದಲ್ಲಿ. ಹೀಗಾಗಿ ಕಾವ್ಯದ ಕೈ ಹಿಡಿದುಕೊಂಡು ಇನ್ನೂ ಕಾಣಬೇಕಾದುದರೆಡೆಗೆ ತುಡಿಯುತ್ತಿದ್ದಾರೆ. The poet did not stop at the colour, or the form, but read their meaning; neither may he rest in this meaning, but he makes the same objects exponent of his new thought. ಹೌದು, ಕವಿ ನಿಂತರೆ ಕಾವ್ಯ ಚಿಂತನೆಯೂ ನಿಂತಂತೆ. ಕವಿಯ ನಿರಂತರತೆಯೇ ಕಾವ್ಯದ ನಿರಂತರತೆಯೂ ಕೂಡ.
ಇಟ್ಟಣ್ಣನವರ ಕಾವ್ಯದೊಂದಿಗೆ ಒಂದಷ್ಟು ದೀರ್ಘವಾಗಿ ಸಾಗಿಬಂದ ನಾನು, ಪ್ರಾದೇಶಿಕವಾಗಿ ಒಂದು ಕಾಲಕ್ಕೆ ತೀರ ಅವರ ಹತ್ತಿರದಲ್ಲಿದ್ದೂ ಕೆಲವು ಚರ್ಚೆಗಳಿಗೆ ಮುಖಾ-ಮುಖಿಯಾಗಲೇ ಇಲ್ಲವಲ್ಲ ಎಂಬ ಬೇಸರವಿದೆ ನನಗೆ. ಯಾಕೆಂದರೆ, ಕವಿಯ ಸಂವಾದದ ಹಿನ್ನೆಲೆಯಲ್ಲಿ ಓದುವ ಕಾವ್ಯಕ್ಕೆ ಹೆಚ್ಚಿನ ನಿಖರತೆ ಹಾಗೂ ಸ್ಪಷ್ಟತೆ ಇರುತ್ತದೆ. ಸಾಧ್ಯವಾದಷ್ಟು ಕವಿಯ ನಂಬಿಕೆಗಳನ್ನು ಗ್ರಹಿಸಲು, ಅವನ ಕಾವ್ಯದೊಂದಿಗೆ ಇನ್ನಷ್ಟು ನ್ಯಾಯ ಸಮ್ಮತವಾಗಿ ಚರ್ಚಿಸಲು ಅವಕಾಶವನ್ನು ಕಲ್ಪಿಸುತ್ತದೆ. ಅದೇಕೊ ಗೊತ್ತಿಲ್ಲ. ಈಗ ತೀರ ಅವರಿಂದ ದೂರ ಬಂದು ಓದಿನ ಮೂಲಕ ಹತ್ತಿರವಾಗಿದ್ದೇನೆ. ಅಂತರದಲ್ಲಿ ಕುಳಿತುಕೊಂಡೇ ಸಾಧ್ಯವಾದಷ್ಟು ಅವರ ಕಾವ್ಯದ ಕಾಳಜಿಗಳನ್ನು ಗ್ರಹಿಸಲು ಯತ್ನಿಸಿದ್ದೇನೆ. ಗೊತ್ತಿದೆ ನನಗೆ, ಕೋಟಿ ಕೋಟಿ ಅರ್ಥಗಳ ಕಾವ್ಯಕ್ಕೆ ನಾನು ಕಟ್ಟುವ ಅರ್ಥಗಳು ಆಪಾದನೆಗಳಷ್ಟೆ. ಇದಕ್ಕೂ ಮೀರಿದ್ದು ಅಲ್ಲಿ ತುಂಬ ಇದೆ. ನನ್ನ ಓದಿನಾಚೆಯೂ ಇದ್ದಾರೆ ಇಟ್ಟಣ್ಣನವರು. ಕಾರಣ ಹೊಸ ತಲೆಮಾರು ಮತ್ತೆ ಮತ್ತೆ ಅವರನ್ನು ಓದಬೇಕಿದೆ, ಓದುತ್ತಿರೋಣ.
ಇದುಹೊಳೆಸಾಲ ಬಳ್ಳಿ’, ಹಬ್ಬುತ್ತಲೇ ಇರಬೇಕು ನಾಡಿನುದ್ದಕ್ಕೂ. ಸಂಕ್ರಮಣದ ದಿನ ಸಂಕಲನದ ಚರ್ಚೆಗೆ ನಾನು ಪೂರ್ಣವಿರಾಮ ಇಡುತ್ತಿದ್ದೇನೆ. ಜೊತೆಗೆ ಕವಿ ಇಟ್ಟಣ್ಣನವರ ಸಂಕ್ರಾತಿಯ ಸಂದೇಶವನ್ನೂ ನಿಮಗೆ ಕೊಡುತ್ತಿದ್ದೇನೆ
ಸವಿ ಮಾತಿನೊಳಗ ಸವಿ ನಡತಿ ಕೂಡಿ
ಆಗೇತಿ ಎಳ್ಳು-ಬೆಲ್ಲಾ;
ಎರಡು ತಿಂದ ನಾವಿಂದ ಹಾಡಿ
ಗೆದಿಬೇಕ ಬದುಕ ಎಲ್ಲಾ.