Total Pageviews

Sunday, March 17, 2013

ನನ್ನ ಕವಿತೆ.... ನನ್ನ ಮಾತು....



         ಕವಿತೆಯೊಂದಿಗಿನ ನನ್ನ ಅನುಸಂಧಾನ ನನ್ನ ಪ್ರೀತಿಯೊಂದಿಗಿನ ಸಮಾಗಮವಷ್ಟೆ. ಇಂಥ ವಿಚಾರ ಕುರಿತು ಕೆ.ಆರ್.ಪೇಟೆಯ ಪ್ರೀತಿಯ ಗೆಳೆಯರು ಮಾತನಾಡಲು ಕರೆದಾಗ ಮುಜುಗರ, ಭಯ, ಒಂದು ರೀತಿಯ ದಣಿವು ಎಲ್ಲವೂ ಇತ್ತು. ಕಾರಣವಿಷ್ಟೆ, ಇದೇ ತಿಂಗಳ ದಿನಾಂಕ 13ರರ ರಾತ್ರಿಯಿಂದ ನಿದ್ದೆಗೆಟ್ಟ ನಾನು, ಬ್ಲಾಗಿನ ಕ್ಷಣದವರೆಗೂ ನಿದ್ರಿಸಿದ ನೆನಪಿರಲಿಲ್ಲ. ಪೂಜೆಯಷ್ಟು ಪವಿತ್ರವಾದ, ಮಗುವಿನಷ್ಟು ಹಠಮಾರಿಯಾದ ಪ್ರೀತಿಗೆ ಇಂಥ ನಿದ್ರಾಹೀನತೆ ಆಗಾಗ ಸಾಧ್ಯ. ದೇಹ ಮುಖೇನ ಹರಿದು ಹೋಗುವ ಕಾಮವಷ್ಟೆ ಪ್ರೀತಿ ಎಂದುಕೊಂಡವರಿಗೆ ನನ್ನ ಕವಿತೆ, ಮಾತು, ಜಗಳ ಯಾವುದೂ ಅರ್ಥವಾಗಲು ಸಾಧ್ಯವಿಲ್ಲ.

ಆದರೆ ವೇದಿಕೆ ಎನ್ನುವುದು ಒಂದು ಜಾದು ಎನ್ನುವುದಕ್ಕೆ ಸಾಕ್ಷಿಯಾಗಿತ್ತು ಕಾರ್ಯಕ್ರಮ. ವೇದಿಕೆ ಹತ್ತುವ ಕೊನೆ ಕ್ಷಣದವರೆಗೂ ನಿದ್ರೆಯಿಂದ ಕುಸಿದು ಬಿಳುತ್ತೇನೆ ಎನ್ನುವ ಭಯದಲ್ಲಿದ್ದ ನನ್ನನ್ನು ಕೈ ಹಿಡಿದು, ರಕ್ಷಿಸಿ, ನಿಲ್ಲಿಸಿ ಮಾತನಾಡಿಸಿದ್ದು ನನ್ನ ಕವಿತೆ. ನೆಪ ಮಾತ್ರದ ಗೆಳತಿಯರು, ಗೆಳೆಯರು, ಚಪ್ಪಾಳೆಯ ಅಭಿಮಾನಿಗಳು ನನ್ನನ್ನು ಅನಾಥನಂತೆ ಬೀದಿ ಮಗುವಾಗಿಸಿ ಬಿಟ್ಟು ಹೋದಾಗ ಕೈ ಹಿಡಿದದ್ದು, ಒಂಟಿತನದ ನನ್ನ ರಾತ್ರಿಗಳಲ್ಲಿ ಭರವಸೆಯ ಜೋಗುಳ ಹಾಡಿದ್ದು ಇದೇ ನನ್ನ ಕವಿತೆ. ನನ್ನ ಕವಿತೆಯೆಂದರೆ ನಾನಷ್ಟೆ

    ನನ್ನ ಕವಿತೆಯೊಳಗಿನ ಮನುಷ್ಯರು ಬದಲಾಗಿದ್ದಾರೆ. ಬದುಕಿನ ವ್ಯವಹಾರದಲ್ಲಿ ಹಂತ ಹಂತಕ್ಕೆ ಸೈದ್ಧಾಂತಿಕ ಜಾರತನಕ್ಕೆ ಒಳಗಾಗಿದ್ದಾರೆ. ತಮ್ಮ ಪಾಪದ ಹೇಸಿಗೆಯನ್ನೂ ನನ್ನ ಹಾಗೂ ನನ್ನ ಕವಿತೆಗೆ ಹೊರಸಿ ಶುದ್ಧರಾಗಿದ್ದಾರೆ. ಇಂದು ಶುದ್ಧಿಯ ವ್ಯಾಪ್ತಿಗೆ ಒಳಪಡದವರು ನಾನು ಮತ್ತು ನನ್ನ ಕವಿತೆ ಮಾತ್ರ. ಹಾಗೆ ನೋಡಿದರೆ ನಾನು ಶುದ್ಧ ನೀಚ, ಕವಿತೆ ಶುದ್ಧ ಲಜ್ಜಾಹೀನ. ಬಿರುಗಾಳಿಯಂತೆ ಸುತ್ತಿಬರುವ ನಾವು ಯಾರಿಗೆ ಪ್ರೀಯರೋ ದೇವರಿಗೇ ಗೊತ್ತು. ನಾವಿಬ್ಬರೇ ಮಾತ್ರ ಪ್ರೀತಿಯ, ಸಮಾಗಮದ ತೂರ್ಯಾವಸ್ಥೆಯಲ್ಲಿದ್ದೇವೆ.
ಕವಿತೆ ಎನ್ನುವುದು ತ್ಯಾಗ, ಧ್ಯಾನ ಮತ್ತು ಶುದ್ಧ ಹಾರೈಕೆ. ಗೊತ್ತಿರಲಿ ಅದು ಶಬ್ಧಗಳ ಹಾದರವಲ್ಲ. ನನ್ನ ಒಂದು ಕವಿತೆ -‘ಸಖಿ-ಹಸನ್ಮುಖಿ’ ಅದರ ಕೆಲವು ಸಾಲುಗಳು ಹೀಗೆ, ಎರಡು ಒತ್ತಡಗಳ ಮಧ್ಯ ಸಿಕ್ಕು ಒದ್ದಾಡುವ ವ್ಯಕ್ತಿಯೊಬ್ಬನ ಚಿತ್ರ. . . .
ರೆಪ್ಪೆಯೊಳಗೊಂದು ಗೂಡು ಕಟ್ಟಿಕೊಂಡು
ತೆಕ್ಕೆಯೊಳಗೊಂದು ಬದುಕಪ್ಪಿಕೊಂಡು
ನಿತ್ಯ ಭಯದಿಂದ ನಡುಗುನ ನಿನ್ನ
ಎಷ್ಟು ಸಲುಹಿದರೂ
ಸ್ಪೂರ್ತಿ ಧಾರೆಯಾಗಿಸಿದರೂ,
ನೀನು ನೋವಿನ ನಿರಂತರ ಜ್ವಾಲಾಮುಖಿ
ಎಂದಾಗುವೆ ಹೇಳು ಸಖಿ
ನನ್ನ ಪಾಲಿಗೆ ಹಸನ್ಮುಖಿ.

           ಕವಿತೆಯೆನ್ನುವುದು ಬರೀ ಪ್ರಶ್ನೆಯಲ್ಲ. ಅದು ಹಾರೈಕೆಯೂ ಕೂಡ. ನನ್ನ ಮತ್ತೊಂದು ಕವಿತೆಸ್ವಾಗತ ಗೌರಿ’. ಕವಿತೆಯೊಳಗಿನ ಗೌರಿ ಶುದ್ಧ ಹೂ, ಮಗು, ಪ್ರಪಂಚದ ಮುಗ್ಧವಾದುದೆಲ್ಲವೂ. ಆಕೆ ಯಾರದೋ ನೋವಿಗೆ ಹುಟ್ಟಿಯೂ ನೋವನ್ನಳಿಸಲು ಹೊರಟ ಮಮತಾಮಯಿ, ಪ್ರೀತಿಯ ನೂರಾರು ಮುಖದ ಮಾಯಿ. ಅಂಥವಳಿಗೆ ಕವಿ ಹಾರೈಸುತ್ತಾನೆ. . . .
ಬಂದವಳು ನೀನವ್ವ
ಬರದವರ ಮನೆಗೆ
ಬರೆದಿರುವೆ ತಾಯವ್ವ
ಭರವಸೆಯ ಹೊಸ ಒಸಗೆ
ಹಬ್ಬು ಬಳ್ಳಿಯ ಹಾಗೆ
ಹಾಯಾಗಿ ಮಾಲ್ಯಾಗಿ
ತಬ್ಬು ನಮ್ಮನ್ನು ಹೀಗೆ
ಒಲವಾಗಿ ಚಲುವಾಗಿ.
      ಕೆ.ಆರ್.ಪೇಟೆಯ ಕಾಲೇಜಿನ ವೇದಿಕೆಗೆ, ಪ್ರೀತಿಯ ಎಳೆಯ ಗೆಳೆಯ-ಗೆಳತಿಯರಿಗೆ ಅದ್ಯಾವ ಶಕ್ತಿ ಇತ್ತೊ ನಿದ್ರೆ ಕಾಣದ ನನ್ನನ್ನು ನಿಲ್ಲಿಸಿ, ನನ್ನ ಅವಾಂತರಗಳ ಕುರಿತು ಎರಡು ಗಂಟೆ ಮಾತನಾಡಿಸಿದರು, ಚಪ್ಪಾಳೆಯಿಂದ ನನ್ನ ಬಾಳ ಹರುಸಿದರು, ಒಬ್ಬಳಂತೂ ಭಾಷಣದ ನಂತರ ಓಡಿ ಬಂದು ಕೈ ಕುಲುಕಿದ ನೆನಪಾದರೆ ಎದೆ ಕಲಕುತ್ತದೆ. ಇಂಥವೆರೇ ನನ್ನ ಬಾಳಿನ, ನನ್ನ ಕವಿತೆಯ ನಿತ್ಯ-ನಿರಂತರ ಸಂಗಾತಿಗಳು ಎನಿಸುತ್ತದೆ.