Total Pageviews

Friday, November 22, 2019

ಕೂಸು ದಾಸಯ್ಯನ ಸಾಮ್ರಾಜ್ಯ



  ಮಧ್ಯಾನ್ಹ ಹೋಗಿ ಬಾಗಿಲು ತೆರೆದೆ
ನಿಶ್ಚಲ ಅವಶೇಷಗಳ ಸಾಮ್ರಾಜ್ಯ
ಒಂದಕ್ಕೆ ಕಾಲಿಲ್ಲ ಮತ್ತೊಂದಕ್ಕೆ ಕಣ್ಣು
ಒಂದಕ್ಕೆ ರುಂಡವಿಲ್ಲ ಮತ್ತೊಂದೋ ವಿರೂಪ

ಸಾಮ್ರಾಜ್ಯ ಗಸ್ತು ಹೊಡೆದು ಸುಸ್ತಾದ
ಜೀಪು, ಕಾರು, ಕುದುರೆ, ಕಾಲ್ದಳ
ತುಂಡು ತುಂಡಾಗಿ ಬಿದ್ದ ಬುಲ್ಡೋಜರ್
ಹೀಗೆ ಎಲ್ಲ ಬಿಟ್ಟು ಎಲ್ಲಿಗೆ ಹೋದ ನಮ್ಮ ಸೀಜರ್?


ನೆಲವಿಲ್ಲದ ರಾಜನಿವನು
ಪ್ರೀತಿಗೊಂದು ನೆಲೆಕಟ್ಟುವವನು
ಕವಿಯಲ್ಲ, ಕಲಿಯಲ್ಲ ಇವನ
ಮುರಿದ ಬೊಂಬೆಗಳ ಸಾಮ್ರಾಜ್ಯಕ್ಕೆ
ರಕ್ತ-ಸೂತಕವಿಲ್ಲ ಹಸ್ತಿನಾಪುರದ ಗೋಳಿಲ್ಲ
ಕಳಿಂಗದ ಕಣ್ಣೀರೂ ಇಲ್ಲ
ಸತ್ತವಗೆ ಸಿಟ್ಟಲ್ಲ ಬಿಟ್ಟು ಹೋದವನೊಬ್ಬನ ಬಿಟ್ಟು
ಇಲ್ಲಾರ ಹಾಡೂ ಇಲ್ಲ

ಸದಾ ನಿದ್ರೆಗೆ ಹಂಬಲಿಸಿದ
ಕೂಸು ದಾಸಯ್ಯನ ಸಾಮ್ರಾಜ್ಯದಲ್ಲಿ
ಹಸಿವಿನ ಮಾತೇ ಇರಲಿಲ್ಲವಂತೆ
ಹಸಿ ಮುತ್ತೊಂದೇ ಸಾಕು
ನಡೆದು ಹೋಗುತ್ತಿತ್ತಿಲ್ಲಿ ಬದುಕು-ಬಾಳು-ಸಂತೆ
ಮಡಿಲು ಸಿಕ್ಕೆಡೆ ಒರಗಿ
ಕಡಲು ಸಿಕ್ಕೆಡೆ ಕರಗಿ
ನುಡಿಗೊಂದು ನಾಡು ಕಟ್ಟಿ
ಒಂದೊಂದು ಕಣ್ಣಿಗೆ ಕೋಟಿ ಕನಸುಗಳ ದಟ್ಟಿ
ದಿಟ್ಟನಿವನು ಬೆರಗ ಹಾಸುತ್ತಾನೆ ಸಿಕ್ಕ ರಟ್ಟೆಗೆ

ರಾತ್ರಿ ಕಥೆಯ ಊಟ
ಹಗಲು ಆಟದ ಪಾಠ
ಜೊತೆ ಇದ್ದರಯ್ಯೋ ಎಂಥ ಕಾಟ
ಇಲ್ಲದಿರೆ ಅನುಕ್ಷಣವೂ ಹುಡುಕಾಟ

ಕೀರಿಟವಿಲ್ಲದ ರಾಜನ ಕಟ್ಟಪ್ಪಣೆಗಳೇನೂ ಕಡಿಮೆ ಇರಲಿಲ್ಲ
ನಿಯಮ ಮೀರಿದರೆ ಯಾವ ಶಿಕ್ಷೆಗಳೂ ಇಲ್ಲ
ಬೈರಾಗಿ, ಅಘೋರಿ, ಅನಂತನಾಗುವ ಈತನ ಮುಂದೆ
ಬಾಗಿದವರಿಗೆಲ್ಲ ಶ್ರೀರಕ್ಷೆ
ಸೆಟೆದವರಿಗೂ ಉಂಟು ಸಮಾಧಾನ, ಕ್ಷಮಾದಾನ

ಹಿಡಿ ಕೆಸರಿಗೆ ತನ್ನ ಸಾಮ್ರಾಜ್ಯವನ್ನೇ ಕೊಡಬಲ್ಲ
ನಿಮ್ಮ ಚಿನ್ನಾಭರಣಗಳ ರಸ್ತೆಗೊಯ್ದು ಇಡಬಲ್ಲ
ನಡುರಸ್ತೆ, ಅಂಗಡಿ, ಜನಜಂಗುಳಿಯಲ್ಲೂ ರಾಸವನಾಡಬಲ್ಲ
ಜಡವರಿಯದ ಸುಜ್ಞಾನಿ, ಕೈಗೆಟುಕಿದ್ದಕ್ಕೆಲ್ಲ ವಿಜ್ಞಾನಿ
ಕನಸು ಕಾಡುವ ಗೊರವ
ಹೋಗಿದ್ದಾನೆ ನೀಡದೆ ಅವನಂತೆ ಬದುಕುವ ವರವ

ಸಲ್ಲದ ನಮ್ಮ ಭಾಷೆ ಹಿಡಿದು ಎಲ್ಲಿ ಹುಡುಕಲಿ ಅವನ?
ಅದ್ಯಾವ ಮೊಲೆ ಮೆತ್ತಿಕೊಂಡು ಎಂಥ ನಿದ್ರೆಯೊಳಗಿರುವನೊ ಶಿವನ!!!



Saturday, November 9, 2019

ಶತಮಾನಗಳ ಸ್ಮರಣೆ – ಗಾಂಧಿ


“If we admit that human life can be ruled by reason, then all possibility of life is destroyed”
-     Leo Tolstoy
ನನ್ನ ತಾಯಿಯೊಂದಿಗೆ ಬಾಲ್ಯದಿಂದಲೂ ಶ್ರೀಶೈಲಕ್ಕೆ ಹೋಗಿ ಬರುವ ನನಗೆ ತೆಲಗು ಭಾಷೆಯ ನಾದ ಮತ್ತು ಆದೇಶದ ಊಟ ಎರಡೂ ಇಷ್ಟ. ಅದರಲ್ಲೂ ಡಾ. ರಾಜಕುಮಾರರ ಕೃಷ್ಣದೇವರಾಯ ನನ್ನ ಒರತೆಯೊಂದಿಗೆ ಬೆರೆತು ಮುಂದೆ ಅಲ್ಲಿಯ ಮಹತ್ವದ ಲೇಖಕರಾದ ನಾಗಾರ್ಜುನ, ಶ್ರೀ ಶ್ರೀ ರಾವೋರಿ ಭಾರದ್ವಾಜ, ಶಿವಾರೆಡ್ಡಿ, ಎಂಡಮೂರಿ ಹೀಗೆ ಯಾರನ್ನೆಲ್ಲ ಓದಿಸಲು ಹಚ್ಚಿಸಿತ್ತು. ಇತ್ತೀಚಿನ ತೆಲುಗಿನ ಪಳಯುಳಿಕೆ ಸಾಹಿತ್ಯದ ಭಾಗವಾಗಿರುವ ವಿಜಯನಗರದ ಅರಸ ಕೃಷ್ಣದೇವರಾಯನಿಂದ ರಚಿತವಾದುದು ಎಂದು ದಾಖಲಾಗಿರುವಆಮುಕ್ತಮಾಲ್ಯದಕೃತಿಯೆಡೆಗೆ ನನ್ನ ಗಮನ ಸೆಳೆದವನು ನನ್ನ ಶಿಷ್ಯ ಚಂದ್ರಶೇಖರ ಹೆಗಡೆ. ಅವನು ಬರೆಯುವಂತೆಆಮುಕ್ತಮಾಲ್ಯದಎಂದರೆಅಲಂಕರಿಸಿಕೊಂಡ ಹೂ ಮಾಲೆಯನ್ನು ಕೊಟ್ಟವಳುಎಂದರ್ಥ. ಕೃತಿಯ ಸ್ಮರಣೆಗೆ ಕಾರಣನಾದ ಶಿಷ್ಯಮಿತ್ರ ಚಂದ್ರಶೇಖರನಿಗೆ ಅಭಿನಂದನೆಗಳನ್ನು ಹೇಳದೇ ಇರಲಾಗದು.
       ಕೃತಿಯ ಶೀರ್ಷಿಕೆಗೆ ಸಂಬಂಧಿಸಿದ ಕಥೇಯೇ ತುಂಬಾ ಸೊಗಸಾಗಿದೆ. ವಿಷ್ಣುವಿನ ಭಕ್ತನಾಗಿದ್ದ ವಿಷ್ಣುಚಿತ್ತ ವೃತ್ತಿಯಲ್ಲಿ ಮಾಲೆಗಾರ (ಮಾಲಗಾರ) ಇವನಿಗೋರ್ವ ಸಾಕುಮಗಳು. ಸವಳ ಹೆಸರು ಅಂಡಾಳಮ್ಮ. ಪ್ರತಿನಿತ್ಯ ಹೂಮಾಲೆಯೊಂದನ್ನು ಮಾಡಿ ಮಗಳ ಕೈಗೆ ಕೊಟ್ಟು ವಿಷ್ಣುದೇವರಿಗೆ ಮುಡಿಸಲು ಹೇಳುತ್ತಿದ್ದ. ಆದರೆ ತಂದೆಯ ಸುಂದರ ಮಾಲೆಗಳಿಗೆ ಮನಸ್ಸೋಲುತ್ತಿದ್ದ ಆಂಡಾಳಮ್ಮ ತಾನೊಂದು ಘಳಿಗೆ ಮಾಲೆಯನ್ನು ಹಾಕಿಕೊಂಡೇ ವಿಷ್ಣುವಿಗೆ ಹಾಕುತ್ತಿದ್ದಳು. ಮಗಳ ಸಂಗತಿ ಗೊತ್ತಾಗಿ ಒಂದು ದಿನ ವಿಷ್ಣುಚಿತ್ತ ಸ್ವಯಂ ತಾನೇ ಮಾಲೆ ತೊಡಿಸಲು ದೇವಾಲಯಕ್ಕೆ ಹೋದರೆ ವಿಷ್ಣುದೇವ ಅದನ್ನು ನಿರಾಕರಿಸುತ್ತಾನೆ. ‘ಸದಾ ಕಾಲವೂ ನಿನ್ನ ಮಗಳು ಮುಡಿದ ಮಾಲೆಯೇ ತನಗಿರಲಿಎಂದು ದೇವರು ಹಠಹಿಡಿಯುತ್ತಾನೆ.
ಈಗ ನಾನಿದನ್ನು ರೀತಿಯಾಗಿ ಅನ್ವಯಿಕೊಂಡಿದ್ದೇನೆ. ಒಂದೂವರೆ ಶತಮಾನದಾಚೆಯೂ ಮೌಲ್ಯವಾಗಿ ಕಾಡುವ, ಕಾಡುತ್ತಿರುವ ಗಾಂಧೀಜಿ ಎಂಬ ಮನುಷ್ಯ ಸಮಾಜ ಅಲಂಕರಿಸಿಕೊಂಡ ಮಾಲೆಯೇ ಸರಿ. ನಾವೆಲ್ಲ ಅಂಗೂಲಿ ಮಾಲಾರಾಗುವುದನ್ನು ತಪ್ಪಿಸಿದ ನಮ್ಮ ಮಧ್ಯದ ಸಂಬಂಧ ಗಾಂಧಿ. ಇತ್ತೀಚೆಗೆ ಬಾಗಲಕೋಟೆಯ ಜಿಲ್ಲಾ ಸಾಹಿತ್ಯ ಪರಿಷತ್ತು (03-11-2019) ಹಮ್ಮಿಕೊಂಡಶತಮಾನಗಳ ಸ್ಮರಣೆ: ಗಾಂಧಿಎಂಬ ನನ್ನ ಭಾಷಣದಲ್ಲಿ ನಾನು ಗಾಂಧಿಯನ್ನು ಸ್ಮರಿಸಿಕೊಂಡಿದ್ದೇ ಅಂಡಾಳಮ್ಮನ ನೆಲೆಯಿಂದ. ಮಾಲೆ ಮತ್ತು ಮೌಲ್ಯಗಳೆಂಬ ತತ್ವಗಳಿಂದ. 
         ಯಾವುದು ನಮ್ಮ ಜೈವಿಕ ಬದುಕಿಗೆ ಅವಶ್ಯಕ, ಅತ್ಯಂತ ಅವಶ್ಯಕವಾಗಿತ್ತೊ ಅದನ್ನೊಂದು ಮೌಲ್ಯ ಎನ್ನುವುದರೊಂದಿಗೆ, ಅದಕ್ಕೊಂದು ಮೌಲ್ಯ ಕಟ್ಟುವುದರೊಂದಿಗೆ ಶತಮಾನಗಳಿಂದ ನಮ್ಮ ಬುದ್ಧಿ ಹಾಗೂ ಭಾವಕೋಶಗಳನ್ನು, ಮೂಲಕ ಇಡಿಯಾಗಿ ಮನುಷ್ಯ ಸಂಸ್ಕøತಿಯನ್ನು ನಿರ್ದೇಶಿಸಿ, ಮುನ್ನಡೆಸಿದ ವಿಚಾರ ಹಾಗೂ ವ್ಯಕ್ತಿಗಳನ್ನು ಮಾನವ ಇತಿಹಾಸದ ಮಹಾ ಮೌಲ್ಯ ಎಂದೇ ಪರಿಗಣಿಸಲಾಗಿದೆ. ಮೌಲ್ಯ ಖಂಡಿತವಾಗಿಯೂ ಮನುಷ್ಯ ಸೃಷ್ಟಿಯೇ. ವ್ಯಕ್ತಿ ಅಥವಾ ಒಂದು ವಿಚಾರ ವೈಯಕ್ತಿಕ ನೆಲೆಯಲ್ಲಿಯೇ ಹುಟ್ಟಿ, ಹಲವು ಸತ್ವ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಸಮುದಾಯಿಕವಾಗಿ ವಿಸ್ತಾರಗೊಂಡು ಮತ್ತು ಎಲ್ಲ ಕಾಲಕ್ಕೂ ಮಾದರಿಯಾದುದನ್ನು ನಾವು ಮೌಲ್ಯ ಎಂದು ಒಪ್ಪಿಕೊಂಡಿದ್ದೇವೆ. ಪರಂಪರೆಯ ಶ್ರೋತದ ಮೂಲಕ ನಮಗೆ ಬಳುವಳಿಯಾಗಿ ಬರುವ ಇಂಥ ಮೌಲ್ಯವನ್ನು ನಮ್ಮ ನೆಮ್ಮದಿಯ ವರ್ತಮಾನಕ್ಕಾಗಿ ಸೊಗಸಾದ ಭವಿಷ್ಯಕ್ಕಾಗಿ ಹೇರಿಕೊಂಡಿದ್ದೇವೂ ಕೂಡ.
           ಮೌಲ್ಯದ ಅಪಮೌಲ್ಯಿಕರಣ ಸಾಧ್ಯವಿಲ್ಲ. ಹೀಗಾಗಿಯೇ ಅದು ಮೌಲ್ಯ. ಹಾಗಂತ ಮೌಲ್ಯ ಪ್ರಶ್ನಾತೀತವೇನೂ ಅಲ್ಲ. ಹಾಗೆ ನೋಡಿದರೆ ಪ್ರಶ್ನೆಯೇ ಮೌಲ್ಯದ ಮೌಲ್ಯವನ್ನು ಸಾಬೀತುಪಡಿಸುವ ಒರೆಗಲ್ಲು. ಆದರೆ ಪ್ರಶ್ನೆ ಒಡ್ಡುವುದು ಒರೆಗಲ್ಲಾಗಬೇಕಿಲ್ಲ. ನಾವು ಸ್ವಯಂ ಏನಾಗಿದ್ದರೂ ಸರಿ, ಮೌಲ್ಯವನ್ನು ಮಾತ್ರ ಮನಸಿಚ್ಛೆ ನೋಡುತ್ತೇನೆ ಎನ್ನುವ ವೈಚಾರಿಕ ಉದ್ಧಟತನ ಮೌಲ್ಯಗಳ ಪಲ್ಲಟಕ್ಕೆ ದಾರಿ ಮಾಡಿಕೊಡುತ್ತದೆ. ಅದು ಮುಂದೊಂದು ದಿನ ನಮ್ಮ ಭವಿಷ್ಯದ ವಿಷಯುಕ್ತ ಪುಟಗಳಿಗೆ ದಾರಿಯಾಗುತ್ತದೆ.
          ಗೋಡ್ಸೆಯ ಗುಡಿ ಕಟ್ಟಿ ನಾವು ವೈಯಕ್ತಿಕವಾಗಿ ಪೂಜಿಸಬಹುದು. ಗಾಂಧೀಜಿಯ ಮೂರ್ತಿಯನ್ನು ಅವಹೇಳಿಸಿ ಘನವಾದುದೇನೊ ಒಂದು ಸಾಧಿಸಿದೆ ಎಂದುಕೊಳ್ಳಬಹುದು. ಗಾಂಧೀಜಿಯವರನ್ನು ಮುಸ್ಲಿಂ ಚೇಲಾ, ಪಾಕಿಸ್ತಾನಿ ಪಿಂಡ, ‘ಅಹಿಂಸೆಎಂಬ ಉಪಯೋಗಕ್ಕೆ ಬಾರದ ವಿಚಾರದ ಆರಾಧಕ, ನೆಹರೂ ಮನೆತನದ ಋಣ ಸಂದಾಯ ಮಾಡಿದ ಮುದುಕ, ದೇಶ ವಿಭಜನೆಗೆ ಕಾರಣನಾದವ, ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್ ಹೀಗೆ ಹಲವರು ಮುಂಚೂಣಿಗೆ ಬಾರದಂತೆ ನೋಡಿಕೊಂಡವ ಎಂದು ಅಬ್ಬರಿಸಿ, ಹೊಸದಾಗಿ ಕೋಮು ಆಧಾರಿತ ಇತಿಹಾಸ ಬರೆಯಬೇಕು ಎಂದುಕೊಂಡವರು ಮೌಲ್ಯ ಪಲ್ಲಟದ ಹುನ್ನಾರದಲ್ಲಿದ್ದಾರೆ ಎಂಬುದನ್ನು ಮರೆಯಬಾರದು. ಮೌಲ್ಯ ಪಲ್ಲಟದ ಇಂತಹ ಯತ್ನಗಳು ರಾಜಕೀಯ ಚೆಲ್ಲಾಟಗಳಷ್ಟೆ.
          ಒಪ್ಪೋಣ, ಮನುಷ್ಯನ ತಂತ್ರ-ಕುತಂತ್ರ, ಹಠ, ಕಾರಸ್ಥಾನ ಅದಕ್ಕಾಗಿ ಹವಣಿಸುವ ರೀತಿ, ಇಡೀ ಜೀವನವನ್ನೇ ಭ್ರಮೆಗಳ ಗಾಳಿಗೆ ತೂರಿಬಿಡುವ ಸನ್ನದ್ದು, ಎಲ್ಲವೂ ಚಿಂತನಾರ್ಹ. ಒಂದು ಒಳ್ಳೆಯ ಅಥವಾ ಕೆಟ್ಟ ಮನಸ್ಸಿನ ತಯ್ಯಾರಿ ಬರೀ ಸ್ವತಂತ್ರ ಮತ್ತು ವೈಯಕ್ತಿಕವಾದುದಲ್ಲ ಎಂದು ನಾವು ಒಪ್ಪಲೇಬೇಕು. ಹೀಗೆ ಒಪ್ಪಿಕೊಂಡಾಗ ನಡೆದು ಹೋದ ಪಾಪದ ಸಾಲ ತೀರಿಸಲು ನಾವು ಚಿಂತನಶೀಲರಾಗಬೇಕು ಎನ್ನಿಸುತ್ತದೆ. ಜೀಸಸ್ನನ್ನು ಕೊಂದವರು, ಶರಣರನ್ನು ಎಳಹೂಟೆ ಮಾಡಿದವರು, ಸಾಕ್ರೆಟಸ್ನಿಗೆಹೆಮ್ಲಾಕ್ಕೊಟ್ಟವರು, ಚೆನ್ನಬಸವಣ್ಣ .......ಹುಟ್ಟಿದವ ಎಂದು ಬರೆದವರು. ಸೆಂಟ್ ಜೋನ್ಳನ್ನ ಬೆಂಕಿಗಿಟ್ಟವರು, ಗಾಂಧೀಜಿಯವರನ್ನ ಹತ್ಯೆಗೈದವರು ಯಾರೂ, ಯಾರೂ ನಮ್ಮ ಮನಸ್ಸನ್ನು ಬಿಡಿ, ಕನಿಷ್ಟ ನಮ್ಮ ಸಾರ್ವಜನಿಕ ಗೋಡೆಗಳ ಮೇಲೂ ಕೂಡ ಸ್ಥಾನ ಪಡೆಯಲಿಲ್ಲ. ಆದರೇನಾಯಿತು ಇತಿಹಾಸ ಸೇರಿದರಲ್ಲ? ಎಂದು ನಮ್ಮ ಮನಸ್ಸು ಹೇಳೀತು. ಅಂಥದಕ್ಕೊಂದು ಉತ್ತರ ಏನೆಂದರೆ ವರ್ತಮಾನದಲ್ಲಿ ಅರ್ಥ ಪಡೆಯದ ಬದುಕಿಗೆ ಇತಿಹಾಸದಲ್ಲಿ ಎಂಥ ಸ್ಥಾನ ದೊರೆತರೇನು? ಅಲ್ಲದೆ ಬಾಳೇ ಇಲ್ಲದ ಇಂಥ ಬದುಕುಗಳನ್ನು ಎಷ್ಟು ಕಾಲ ಜಪಿಸಿದರೇನು? ಆದಾಗ್ಯೂ ಚೈತನ್ಯಗಳನ್ನು ಪರೀಕ್ಷೆಗೆ ಒಳಪಡಿಸಿದ ಜೀವನಗಳನ್ನು ಚೈತನ್ಯಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆ ಕೊಟ್ಟು ಕೆಲವು ಬಾರಿ ನೋಡಬೇಕಾಗುತ್ತದೆ. ಅಲ್ಲವೇ? ಹೂವಿನ ಅವಸಾನದ ನಂತರವೂ ವಾಸನೆ ಉಳಿಯುತ್ತದೆ. ಚಿಂತನೆ ಯಾವಾಗಲೂ ವಾಸನೆಯಂತೆ ಅದು ನಿರಂತರ.
           ಲೆಕ್ಕಚಾರಗಳೆಲ್ಲ ಏನೇ ಇರಲಿ, ನಮಗೆ ಬೇಕಾಗಿಯೂ ಬೇಡಾಗಿಯೂ ನಮ್ಮ ಇತಿಹಾಸ, ವರ್ತಮಾನದ ಉದ್ಧರಣೆಯಾಗಿದ್ದಾರೆ ಗಾಂಧೀಜಿ. ಭವಿಷ್ಯದಿಂದಲೂ ಅವರನ್ನು ನಾವು ಧಿಕ್ಕರಿಸುವಂತಿಲ್ಲ. ರಜೆಯಾಗಿ, ಅಕ್ಟೋಬರ್ 2 ಮೋಜಾಗಿ ಬಂದೇ ಬರುತ್ತಾರೆ ಗಾಂಧಿ. ಚೌಕು-ವೃತ್ತಗಳಲ್ಲಿ ಕಾಲೇಜು, ಬಂದೀಖಾನೆಗಳಲ್ಲಿ, ಫೊಟೋ ಪುತ್ಥಳಿಯಾಗಿ, ಕಣ್ಣೀರಿಯುತ್ತಾರೆ ಗಾಂಧಿ. ಗುಂಡು-ಗೋಷ್ಠಿಗಳಲ್ಲಿ, ಸುಳ್ಳಿನ ಸಂತೆಯಲ್ಲಿ, ಕಾಳ ಸಂತೆಯಲಿ ಪುತ್ಥಳಿಯಾಗಿ ಮಾರಾಟವಾಗುತ್ತಾರೆ ಗಾಂಧಿ. ಉಪವಾಸದ ನಾಟಕಗಳಲ್ಲಿ, ಧರ್ಮಾರ್ಥ ಚಿಂತನೆಗಳಲ್ಲಿ ಸಾಕ್ಷಿಯಾಗುತ್ತಾರೆ ಗಾಂಧಿ. ಗಾಂಧಿಯಿಲ್ಲದ ಯಾವುದಾದರು ಸ್ಥಳ ಅಥವಾ ಆಲೋಚನೆಯನ್ನು ನಾವು ಕಲ್ಪಿಸಬಹುದೇ? ನನಗಿದು ಬಿಡಿಸಲಾಗದ ಪ್ರಶ್ನೆ. ಹೀಗೆಲ್ಲಾ ಗಾಂಧಿಯ ಬಗ್ಗೆ ವಿವೇಚಿಸುತ್ತಾ ಗಾಂಧೀಜಿಯವರನ್ನು ನಾವೆಲ್ಲಿಗೆ ಕರೆದೊಯ್ದೆವು? ನಮ್ಮ ಸಾಮಾಜಿಕತೆ ಮತ್ತು ರಾಜಕೀಯದ ಯಾವ ಅಳತೆಗೋಲಾಗಿ ಅವರನ್ನು ಇಟ್ಟುಕೊಂಡೆವು ನನಗೆ ತಿಳಿಯುತ್ತಿಲ್ಲ.
          1947 ಜುಲೈ 18ರಂದು ಗಾಂಧೀಜಿ ಅತ್ಯಂತ ಮಹತ್ವದ ಮಾತೊಂದನ್ನು ಆಡಿದ್ದಾರೆ. “Politics will have some effect on the people only if carried on with a sense of Dharma and with purity of conduct’’. ಧರ್ಮವೋ, ರಾಜಕಾರಣವೋ ಅಥವಾ ಇವೆರಡು ಸೇರಿದ್ದನ್ನು ಕುರಿತು ಆಡಿದ ಗಾಂಧೀಜಿಯ ಮಾತಿಗೆ ಏನಾದರೂ ಅರ್ಥವುಂಟೆ? ಅಂಬೇಡ್ಕರರು ಹೇಳುವ ``ಇತಿಹಾಸವನ್ನು ಗೌರವಿಸದವನು ಇತಿಹಾಸವನ್ನು ಸೃಷ್ಟಿಸಲಾರ’’ ಎನ್ನುವ ಮಾತನ್ನು ಮುಂದಿಟ್ಟುಕೊಂಡು ನೋಡಿದಾಗಲೂ ಗಾಂಧೀಜಿ ನಮ್ಮ ಇತಿಹಾಸದ ಅವಿಭಾಜ್ಯ ಅಂಗವಲ್ಲವೆ? ಅವರನ್ನು ಇತಿಹಾಸ ಪುರುಷ ಎಂದು ಒಪ್ಪಿಕೊಳ್ಳುವುದಾದರೆ ಅವರ ಯಾವ ತಲ್ಲಣಗಳು, ಯಾತನೆಗಳು ನಮ್ಮ ಕರುಳು ಹಿಂಡಿಸಿವೆ? ಗಾಂಧೀಜಿ ಒಬ್ಬ ಮನುಷ್ಯರಾಗಿಯೂ ಮನುಷ್ಯರನ್ನು ಕಾಡದಷ್ಟು ಏಕೆ ದೂರಾದರು? ನೀವೇ ಉತ್ತರಿಸಬೇಕು.
       ಕ್ಷಣ-ಕ್ಷಣಕ್ಕೂ ಹೆಜ್ಜೆ ತಪ್ಪುತ್ತಿದ್ದ ಭಾರತೀಯರ ನಾಗರೀಕ ಪ್ರಜ್ಞೆಯನ್ನು ಕಂಡು ಅಸಹಾಯಕನಾಗಿ ಗಾಂಧೀಜಿ ಸಿಡಿಮಿಡಿಗೊಂಡು `ಯಂಗ್ ಇಂಡಿಯಾದಲ್ಲಿ 1921ರಲ್ಲಿ ಬರೆದ ಮಾತೊಂದು ಹೀಗಿದೆ, ``ಇದೀಗ ಭಾರತವು ಬೆಂಕಿ ಹೊತ್ತಿಕೊಂಡ ಮನೆಯಂತಿದೆ ಎಂಬುದು ನನ್ನ ನಂಬಿಕೆ. ದಿನ-ದಿನವೂ ಅದರ ಮಾನವೀಯತೆಯು ಸುಟ್ಟು ಕರಕಲಾಗುತ್ತಿದೆ. ದಿನ-ದಿನವೂ ದುಡಿಯಲು ಮತ್ತು ದುಡಿಮೆಯ ಫಲದಿಂದ ಅನ್ನವನ್ನು ಗಳಿಸಿಕೊಳ್ಳಲು ಅವಕಾಶವಿಲ್ಲದೆ ಅದು ಹಸಿವೆಗೊಂಡು ಸಾಯುತ್ತಿದೆ’’.
      30 ಕೋಟಿ ಭಾರತೀಯರೆನ್ನುವವರು ತಮ್ಮ ಮೌಲ್ಯಗಳನ್ನು ಗಾಳಿಗೆ ತೂರಿ, ಕರ್ತವ್ಯವೆನ್ನುವುದನ್ನು ಮರೆತಿರುವಾಗ ಸರಕಾರವನ್ನ ಏಕೆ ದೂಷಿಸಬೇಕು? ಎನ್ನುತ್ತಿದ್ದ ಗಾಂಧೀಜಿಯವರಿಗೆ ತಮ್ಮ ಕೊನೆಯ ದಿನಗಳವರೆಗೂ ದೇಶದ ಮನೋಸ್ಥಿತಿಯಲ್ಲಿ ಬದಲಾವಣೆಯಾಗದೆ ಇರುವುದು ಖೇದದ ವಿಷಯವಾಗಿಯೇ ಉಳಿಯಿತು. ಅಹಿಂಸೆಯ ಮಹಾನ್ ಆರಾಧಕನಾಗಿದ್ದ ಗಾಂಧೀಜಿ ತಮ್ಮ ಕೊನೆಯ ದಿನಗಳನ್ನೆಲ್ಲಾ ಹಿಂದೂ-ಮುಸ್ಲಿಂರ ರಕ್ತಗಳಿಂದ ಸಿಕ್ತವಾಗಿದ್ದ ಗಲ್ಲಿಗಳನ್ನು ತೊಳೆಯುವುದರಲ್ಲಿಯೇ ಕಳೆಯಬೇಕಾದುದು, ಕೊನೆಗೆ ತನ್ನ ಬದುಕನ್ನು ಹಿಂಸೆಯಲ್ಲಿಯೇ ಅಂತ್ಯವಾಗಿಸಿಕೊಳ್ಳಬೇಕಾದುದು ಎಂಥ ವಿಪರ್ಯಾಸವಲ್ಲವೇ?
       18 ಜುಲೈ 1947 ಶುಕ್ರವಾರ ದೆಹಲಿಯ ಭಂಗಿ ಕಾಲೋನಿಯಲ್ಲಿ ನಾಯಕರ ಗುಂಪೊಂದು ಗಾಂಧೀಜಿಯನ್ನು ಭೆಟ್ಟಿಯಾಯಿತು. ಅವು ಗಾಂಧೀಜಿ, `ರಾಜಕೀಯವೂ ಧರ್ಮದ ಚೌಕಟ್ಟಿನಲ್ಲಿರಬೇಕುಎಂದು ಬೋಧಿಸುತ್ತಿದ್ದ ದಿನಗಳು. ಗಾಂಧೀಜಿ ಬೋಧಿಸುತ್ತಿದ್ದ ಧರ್ಮ ಹಿಂದೂ ಮತ್ತು ಮುಸ್ಲಿಂ ಮತಗಳನ್ನು ಮೀರಿದ ವಿವೇಕ ಮತ್ತು ವಿವೇಚನೆಯಾಗಿತ್ತು. ಆದರೆ ಬಹುಪಾಲು ಸಿಖ್ರಿಂದ ಕೂಡಿದ್ದ ಗುಂಪಿಗೆ ಗಾಂಧೀಜಿಯ ಯಾವ ವಿಶ್ಲೇಷಣೆಗಳು, ಮೌಲ್ಯಗಳು ಮನವರಿಕೆಯಾಗುವ ಲಕ್ಷಣಗಳಿರಲಿಲ್ಲ. ಮುಸ್ಲಿಂರು, ದೇಶದಲ್ಲಿ ಅಲ್ಪಸಂಖ್ಯಾತರು ಎನ್ನುವ ಒಂದು ನೆಪವನ್ನಿಟ್ಟುಕೊಂಡು ಗಾಂಧೀಜಿ ನಿರಂತರವಾಗಿ ಮುಸ್ಲಿಂರ ಬೆಂಬಲಕ್ಕೆ ನಿಂತಿರುವುದು ಸಿಖ್ ಯುವಕರ ಆಕ್ರೋಶಕ್ಕೆ ಕಾರಣವಾಗಿತ್ತು. ಪಾಕಿಸ್ತಾನದೊಂದಿಗೆ ತೃಪ್ತವಾಗಿರದ ಮುಸ್ಲಿಂರು ಮುಂದೊಂದು ದಿನ ಭಾರತದ ಪ್ರಮುಖ ನಗರಗಳಾದ ಆಗ್ರಾ, ಅಜ್ಮೀರ, ಅಲಿಘಡ್ ಮತ್ತು ದೆಹಲಿಗಳನ್ನೂ ಕೇಳಲು ಹಿಂಜರಿಯಲಾರರು ಎನ್ನುವುದೇ ಅವರ ವಾದ. ``ಹಿಂಸೆಗೆ ಮುಸ್ಲಿಂರು ಕಾರಣವಾಗಿರುವಾಗ ಹಿಂದುಗಳಷ್ಟನ್ನೇ ಏಕೆ ಜರಿಯುತ್ತೀರಿ? ಇಷ್ಟೆಲ್ಲಾ ಅವಘಡಗಳು ಜರುಗಿದ ಮೇಲೂ ಮುಸ್ಲಿಂರನ್ನು ಏಕೆ ನಂಬುತ್ತೀರಿ? ಎನ್ನುವ ಸಿಖ್ ಯುವಕರ ಪ್ರಶ್ನೆ ಗಾಂಧೀಜಿಯವರ ಒಳಬೇನೆಗೆ ಕಾರಣವಾಗಿತ್ತು.
          ಛಿದ್ರವಾಗುತ್ತಿದ್ದ ದೇಶ, ದಾರಿತಪ್ಪಿದ್ದ ಮಗ, ಸ್ವಾರ್ಥಪರವಾಗುತ್ತಿದ್ದ ರಾಜಕಾರಣ, ರಸ್ತೆ-ರಸ್ತೆಗಳಲ್ಲಿ ಅಮಾಯಕರ ಬಲಿ, ದೊಂಬಿ, ಲೂಟಿ, ಸ್ತ್ರೀ-ಮಾನಹರಣ, ಕುಸಿಯುತ್ತಿದ್ದ ಮೌಲ್ಯಗಳು, ಹೀಗೆ ಕುದಿಯುತ್ತಿದ್ದ ವರ್ತಮಾನವೆಂಬ ಬಾಣಲೆಯ ಪಕ್ಕದಲ್ಲಿ ನಿಂತಿದ್ದ ಗಾಂಧೀಜಿ ನಿರಾಯುಧ ಬಾಣಸಿಗರಾಗಿದ್ದರಷ್ಟೆ. ಮನುಷ್ಯನ ಹೃದಯ ಸೌಂದರ್ಯದಲ್ಲಿ, ಮೌಲ್ಯಗಳಲ್ಲಿ ವಿಶ್ವಾಸ ಕಳೆದುಕೊಳ್ಳದ ಗಾಂಧೀಜಿ ಹೇಳಿದ್ದಿಷ್ಟೆ. ``ಪಾಕಿಸ್ತಾನದಲ್ಲಿ ಹಿಂದೂಗಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ ಎನ್ನುವುದನ್ನು ನಾನು ಬಲ್ಲೆ. ಆದರೆ ಕ್ರಿಯೆಗೆ ಇಲ್ಲಿ ಒಂದು ಪ್ರತಿಕ್ರಿಯೆಗೆ ತೊಡಗುವ ನಾನು ಅವರಿಗಿಂತಲೂ ನಿರ್ಲಜ್ಜನಾಗಬೇಕಾಗುತ್ತದೆ. ಪ್ರತಿಕಾರದಿಂದ ನಾವು ಏನನ್ನು ಸಾಧಿಸಲು ಸಾಧ್ಯವಿದೆ? ಉದಾಹರಣೆಗೆ ನನ್ನ ಬದುಕನ್ನೇ ನೋಡಿ. ನನ್ನ ಹಿರಿಯ ಮಗ ಹರಿಲಾಲ್ ಅನೇಕ ಸಾರಿ ಇಲ್ಲಿಗೆ ಬರುತ್ತಾನೆ. ಪ್ರತಿಸಾರಿಯು ಸಮಜಾಯಿಷಿ ನೀಡುತ್ತಾನೆ. ದುಷ್ಟರ ಸಂಗವನ್ನು ಬಿಡುತ್ತೇನೆ, ನಾನಿನ್ನು ಕುಡಿಯುವುದಿಲ್ಲ ಬಾಪು, ಎಲ್ಲ ದುಷ್ಟ ಚಟುವಟಿಕೆಗಳಿಂದಲೂ ದೂರವಿರುವ ನಿರ್ಧಾರ ಮಾಡಿದ್ದೇನೆ ಎಂದೇ ಹೇಳುತ್ತಾನೆ. ಆದರೆ ಅವನೇ ಆಡಿದ ಒಂದು ಮಾತನ್ನೂ ಆತನಿಗೆ ಇದುವರೆಗೆ ಒಮ್ಮೆಯೂ ಪಾಲಿಸಲು ಆಗಿಲ್ಲ; ಇಷ್ಟಾಗ್ಯೂ, ಇಂದು ಮತ್ತೇ ಆತ ಬಂದು ತನ್ನನ್ನು ತಾನು ಸುಧಾರಿಸಿಕೊಳ್ಳುವ ಮಾತುಗಳನ್ನು ಹೇಳುವುದಾದರೆ ನಾನು ಅವನ ಮೇಲೆ ಸಿಟ್ಟಿಗೇಳುವುದೆ? ನಾನು ಆತನನ್ನು ಧಿಕ್ಕರಿಸಲಾದೀತೆ? ಇಲ್ಲ ಖಂಡಿತವಾಗಿಯೂ ಅವನು ತನ್ನ ಮಾತನ್ನು ಉಳಿಸಿಕೊಳ್ಳುವಂತೆ ಪ್ರೋತ್ಸಾಹದ ಮಾತುಗಳನ್ನೇಳುವುದೇ ನನ್ನ ಧರ್ಮವಾಗಿದೆ. ಇದರಲ್ಲಿಯೇ ಆತನ ಸುಧಾರಣೆಯ ಆಶಾಕಿರಣವಿದೆ.”
       ಹೀಗೆ ಭಾರತಕ್ಕೆ ನಿಷ್ಠರಾಗಿರುತ್ತೇವೆ ಎಂದು ಮುಸ್ಲಿಂರು ಹೇಳುತ್ತಿರುವವರೆಗೂ ಮುಸ್ಲಿಂರನ್ನು ನಂಬಬೇಕಾದುದು ನಮ್ಮ ಧರ್ಮವಾಗಿದೆ. ಇದರೊಂದಿಗೆ ಜಾಗರೂಕರಾಗಿರಬೇಕಾದುದೂ ಅವಶ್ಯಕವಾಗಿದೆ. ಇತ್ತೀಚೆಗೆ ಪಂಡಿತ್ ಪಂಥ್ರವರು ಉತ್ತರ ಪ್ರದೇಶದಲ್ಲಿ ಮುಸ್ಲಿಂರ ರಕ್ಷಣೆಯನ್ನು ಮಾಡಲಾಗುವುದು ಎಂದು ಹೇಳಿದ್ದಾರೆ. ಇದರ ಅರ್ಥ ನಿರಂತರವಾಗಿ ಹಿಂದೂಗಳನ್ನು ಉದ್ರೇಕಿಸುವ ಮುಸ್ಲಿಂ ಲೀಗ್ ನಾಯಕರು ಏನೆಲ್ಲ ಮಾಡಿದರೂ ಅವರನ್ನು ರಕ್ಷಿಸುವುದು ಎಂದರ್ಥವಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. “ಬಂಧುಗಳೇ, ಜಾತಿಯ ಹುಚ್ಚುತನವನ್ನು ಮರೆತು ದೇಶ ಎಂದು ಬಾಳುವದು ಎನ್ನುವುದನ್ನು ನೋಡಲು ನಾನು ಕಾತುರನಾಗಿದ್ದೇನೆ. ನಮ್ಮ ಧರ್ಮಗಳು ಏನೇ ಆಗಿರಲಿ ನಮ್ಮ ಕ್ರಿಯೆ ಮಾತ್ರ ಭಾರತ, ಭಾರತೀಯತೆಯಾಗಿರಲಿಎಂದು ಸ್ಪಷ್ಟಪಡಿಸಿದ ಗಾಂಧೀಜಿ, ದೊಂಬಿಯ ದಿನಗಳಲ್ಲಿ ಮಾಧ್ಯಮ ಮಿತ್ರರಿಗೆ, ಪತ್ರಿಕೆಯ ಸಂಪಾದಕರುಗಳಿಗೆ ಕೈ ಮುಗಿದು ಹೇಳಿದ್ದು ಇಷ್ಟೆ- ``ಬಂಧುಗಳೇ ಕೋಟಿ ಕೋಟಿ ಭಾರತೀಯರ ಶಿಕ್ಷಣ ಉತ್ತಮ ಆಹಾರ, ಮೈ ತುಂಬಾ ಬಟ್ಟೆ, ನೆಮ್ಮದಿಯ ನಿದ್ರೆಗಾಗಿ ಒಂದು ಸೂರು, ನಿಮ್ಮ ಬರಹದ ಉದ್ದೇಶಗಳಾಗಲಿ, ಪರಸ್ಪರ ಹಿಂದೂ-ಮುಸ್ಲಿಂರ ಕಡಿದಾಟ ರೋಚಕದ ಸುದ್ದಿಗಳಾಗಿ ನಿಮ್ಮ ಪತ್ರಿಕೆಗಳಲ್ಲಿ ಎಂದೂ ಬಿತ್ತರಗೊಳ್ಳದಿರಲಿ.’’
             ಗಾಂಧೀಜಿ ಆಕಾಶದೆತ್ತರಕ್ಕೆ ಬೆಳೆದಿದ್ದರು. ಬೆಳವಣಿಗೆ ಒಂದು ಕಡೆಯಲ್ಲಿ ಸರಳ-ಸರಳ ಎನಿಸಿಕೊಂಡರೆ, ಇನ್ನೊಂದೆಡೆ ಸಾಮಾನ್ಯನಿಗೆ ತುಂಬಾ ಸಂಕೀರ್ಣವೆನ್ನಿಸುವ ಗಾಂಧೀಜಿಯನ್ನು ತೋರಿಸುತ್ತಿತ್ತು. ಗಾಂಧೀಜಿಯವರ ಮೌಲ್ಯಗಳ ಯಾತ್ರೆಯಲ್ಲಿ ಪ್ರತಿ ಹೆಜ್ಜೆಗೂ ಪ್ರಶ್ನೆಗಳು ಸಾಮಾನ್ಯವಾಗಿದ್ದವು. ಒಬ್ಬ ಗಾಂಧೀಜಿಯೇ ತಮ್ಮೆಲ್ಲಾ ಪ್ರಶ್ನೆಗಳಿಗೆ ನೈತಿಕ ಹೊಣೆಗಾರನಾಗುವುದು ಅಥವಾ ಹೊಣೆಗಾರನನ್ನಾಗಿಸುವುದು ತಪ್ಪು ಎಂದು ಯಾರಿಗೂ ಅನಿಸಲಿಲ್ಲ.
           ‘ಬಾಂಬೆ ಕ್ರಾನಿಕಲ್ಪತ್ರಿಕೆಯ ಸಂಪಾದಕರಾದ ಮಿ| ಎಸ್.. ಬ್ರಾಲ್ವಿಗೆ ಗಾಂಧೀಜಿ ಹಿಂದಿ ಭಾಷೆಯೊಂದನ್ನೇ ರಾಷ್ಟ್ರ ಭಾಷೆಯಾಗಿಸುತ್ತಿರುವುದು ಇಷ್ಟವಿರಲಿಲ್ಲ. ಬದಲಾಗಿ ಉರ್ದು ಸ್ಥಳದಲ್ಲಿ ಯಾಕೆ ಬರಬಾರದು? ಎನ್ನುವ ಪ್ರಶ್ನೆ. ಕೆಲವರು ಭಾರತದ ರಾಷ್ಟ್ರಧ್ವಜದ ಮೂಲೆಯಲ್ಲಿ ಬ್ರಿಟಿಷ್ ಯೂನಿಯನ್ ಜೈಕನ್ನು ತೋರಿಸಬೇಕೆಂದು ಮತ್ತೆ ಕೆಲವರು ಬೇಡ ಎಂದು; ವಿಭಜನೆಯಾಗುತ್ತಿದ್ದ ಭಾರತ ಮತ್ತು ಪಾಕಿಸ್ತಾನ ಸೈನ್ಯದ ತುಕ್ಕಡಿಗಳಿಗೆ ಜನರಲ್ ವಿಲಿಯಂ ಸ್ಲಿಂ ಮತ್ತು ಜನರಲ್ ಫ್ರಾನ್ಸಿಸ್ ಟ್ಯೂಕರ್ ಮುಂದಾಳುಗಳಾಗಿರಬೇಕು ಎಂದು ಕೆಲವರು ವಾದಿಸಿದರೆ ಮತ್ತೆ ಕೆಲವರು ಇವರುಗಳು ಬೇಡವೇ ಬೇಡವೆಂದು; ಗೋಹತ್ಯೆ ನಿಷೇಧಿಸಬೇಕೆಂದು ಹಿಂದೂಗಳು ಮುಂದಾದರೆ ಅವುಗಳನ್ನು ಕಸಾಯಿಖಾನೆಯಲ್ಲಿಗಿಂತಲೂ ಕೆಟ್ಟದಾಗಿ ಜೀವಂತವಾಗಿ ನಡೆಸಿಕೊಳ್ಳುವುದಕ್ಕಿಂತಲೂ ಹತ್ಯೆ ಮಾಡುವುದರಲ್ಲಿ ತಪ್ಪೇನಿಲ್ಲ ಎನ್ನುವುದು ಮುಸ್ಲಿಂರ ವಾದ. ತಮ್ಮೊಳಗೇ ಇಷ್ಟೊಂದು ದ್ವಂದ್ವಗಳನ್ನಿಟ್ಟುಕೊಂಡು ಗಾಂಧೀಜಿಯೊಬ್ಬರಿಂದ ಒಂದೇ ಅಭಿಪ್ರಾಯ ಬರಬೇಕೆಂಬುದು ಮೂರ್ಖತನದ ಪ್ರಶ್ನೆ ಎಂದು ಯಾರಿಗೂ ಅನಿಸಲಿಲ್ಲ. ಆದರೆ ಗಾಂಧೀಜಿ ನಿರ್ಮೋಹಿಯಾಗಿದ್ದರು ಮತ್ತು ತಾವು ನಂಬಿದ ಮೌಲ್ಯಗಳಿಗೆ ಬದ್ಧರಾಗಿದ್ದರು.
          ಮೌಲ್ಯಕ್ಕೆ ಹೋರಾಡುವ ಪ್ರತಿಯೊಬ್ಬನೂ ಸಹನೆಯ ಪರಮೋಚ್ಛ ಹಂತವನ್ನು ಸಾಧಿಸಬೇಕೆನ್ನುವುದು ಗಾಂಧೀಜಿಯವರ ವಾದವಾಗಿತ್ತು. ಅವರು ಅಂಧಕಾರದ ಮಧ್ಯ ಬೆಳಕಿಗಾಗಿ ತಡಕಾಡುತ್ತಿದ್ದರು. ಮೌಲ್ಯಗಳ ದೀವಟಿಗೆ ಹಿಡಿದುಕೊಂಡು ಬೆಳಕು ತೋರಲು ಮುಂದೆ ಬರುವ ಮನಸ್ಸುಗಳಿಗಾಗಿ - ಮನುಷ್ಯರಿಗಾಗಿ ಕಾಯುತ್ತಿದ್ದರು.