Total Pageviews

Friday, November 22, 2019

ಕೂಸು ದಾಸಯ್ಯನ ಸಾಮ್ರಾಜ್ಯ



  ಮಧ್ಯಾನ್ಹ ಹೋಗಿ ಬಾಗಿಲು ತೆರೆದೆ
ನಿಶ್ಚಲ ಅವಶೇಷಗಳ ಸಾಮ್ರಾಜ್ಯ
ಒಂದಕ್ಕೆ ಕಾಲಿಲ್ಲ ಮತ್ತೊಂದಕ್ಕೆ ಕಣ್ಣು
ಒಂದಕ್ಕೆ ರುಂಡವಿಲ್ಲ ಮತ್ತೊಂದೋ ವಿರೂಪ

ಸಾಮ್ರಾಜ್ಯ ಗಸ್ತು ಹೊಡೆದು ಸುಸ್ತಾದ
ಜೀಪು, ಕಾರು, ಕುದುರೆ, ಕಾಲ್ದಳ
ತುಂಡು ತುಂಡಾಗಿ ಬಿದ್ದ ಬುಲ್ಡೋಜರ್
ಹೀಗೆ ಎಲ್ಲ ಬಿಟ್ಟು ಎಲ್ಲಿಗೆ ಹೋದ ನಮ್ಮ ಸೀಜರ್?


ನೆಲವಿಲ್ಲದ ರಾಜನಿವನು
ಪ್ರೀತಿಗೊಂದು ನೆಲೆಕಟ್ಟುವವನು
ಕವಿಯಲ್ಲ, ಕಲಿಯಲ್ಲ ಇವನ
ಮುರಿದ ಬೊಂಬೆಗಳ ಸಾಮ್ರಾಜ್ಯಕ್ಕೆ
ರಕ್ತ-ಸೂತಕವಿಲ್ಲ ಹಸ್ತಿನಾಪುರದ ಗೋಳಿಲ್ಲ
ಕಳಿಂಗದ ಕಣ್ಣೀರೂ ಇಲ್ಲ
ಸತ್ತವಗೆ ಸಿಟ್ಟಲ್ಲ ಬಿಟ್ಟು ಹೋದವನೊಬ್ಬನ ಬಿಟ್ಟು
ಇಲ್ಲಾರ ಹಾಡೂ ಇಲ್ಲ

ಸದಾ ನಿದ್ರೆಗೆ ಹಂಬಲಿಸಿದ
ಕೂಸು ದಾಸಯ್ಯನ ಸಾಮ್ರಾಜ್ಯದಲ್ಲಿ
ಹಸಿವಿನ ಮಾತೇ ಇರಲಿಲ್ಲವಂತೆ
ಹಸಿ ಮುತ್ತೊಂದೇ ಸಾಕು
ನಡೆದು ಹೋಗುತ್ತಿತ್ತಿಲ್ಲಿ ಬದುಕು-ಬಾಳು-ಸಂತೆ
ಮಡಿಲು ಸಿಕ್ಕೆಡೆ ಒರಗಿ
ಕಡಲು ಸಿಕ್ಕೆಡೆ ಕರಗಿ
ನುಡಿಗೊಂದು ನಾಡು ಕಟ್ಟಿ
ಒಂದೊಂದು ಕಣ್ಣಿಗೆ ಕೋಟಿ ಕನಸುಗಳ ದಟ್ಟಿ
ದಿಟ್ಟನಿವನು ಬೆರಗ ಹಾಸುತ್ತಾನೆ ಸಿಕ್ಕ ರಟ್ಟೆಗೆ

ರಾತ್ರಿ ಕಥೆಯ ಊಟ
ಹಗಲು ಆಟದ ಪಾಠ
ಜೊತೆ ಇದ್ದರಯ್ಯೋ ಎಂಥ ಕಾಟ
ಇಲ್ಲದಿರೆ ಅನುಕ್ಷಣವೂ ಹುಡುಕಾಟ

ಕೀರಿಟವಿಲ್ಲದ ರಾಜನ ಕಟ್ಟಪ್ಪಣೆಗಳೇನೂ ಕಡಿಮೆ ಇರಲಿಲ್ಲ
ನಿಯಮ ಮೀರಿದರೆ ಯಾವ ಶಿಕ್ಷೆಗಳೂ ಇಲ್ಲ
ಬೈರಾಗಿ, ಅಘೋರಿ, ಅನಂತನಾಗುವ ಈತನ ಮುಂದೆ
ಬಾಗಿದವರಿಗೆಲ್ಲ ಶ್ರೀರಕ್ಷೆ
ಸೆಟೆದವರಿಗೂ ಉಂಟು ಸಮಾಧಾನ, ಕ್ಷಮಾದಾನ

ಹಿಡಿ ಕೆಸರಿಗೆ ತನ್ನ ಸಾಮ್ರಾಜ್ಯವನ್ನೇ ಕೊಡಬಲ್ಲ
ನಿಮ್ಮ ಚಿನ್ನಾಭರಣಗಳ ರಸ್ತೆಗೊಯ್ದು ಇಡಬಲ್ಲ
ನಡುರಸ್ತೆ, ಅಂಗಡಿ, ಜನಜಂಗುಳಿಯಲ್ಲೂ ರಾಸವನಾಡಬಲ್ಲ
ಜಡವರಿಯದ ಸುಜ್ಞಾನಿ, ಕೈಗೆಟುಕಿದ್ದಕ್ಕೆಲ್ಲ ವಿಜ್ಞಾನಿ
ಕನಸು ಕಾಡುವ ಗೊರವ
ಹೋಗಿದ್ದಾನೆ ನೀಡದೆ ಅವನಂತೆ ಬದುಕುವ ವರವ

ಸಲ್ಲದ ನಮ್ಮ ಭಾಷೆ ಹಿಡಿದು ಎಲ್ಲಿ ಹುಡುಕಲಿ ಅವನ?
ಅದ್ಯಾವ ಮೊಲೆ ಮೆತ್ತಿಕೊಂಡು ಎಂಥ ನಿದ್ರೆಯೊಳಗಿರುವನೊ ಶಿವನ!!!



5 comments:

  1. ಸರ್ ಬಾಳ ದಿನದ ನನ್ನ ಓದಿನ ಜಡಕೆ ಕೆಲವು ಉಪ್ಪಿಲ್ಲದ ಹುಳಿಯಿಲ್ಲದ ರಸವಿಲ್ಲದ ನನ್ನ ಕೆಲವು ಓದುಗಳಿಗೆ ಇವತ್ತು ಅದೇನೋ ಎಲ್ಲ ರುಚಿ ಉಂಡು ಬಾಯಿ ಒಂಥರ ರಸ ರಸ ಉಂಡಂಗ ಆತು ಸರ್
    ಈ ಜಡವರಿಯದ ನಮ್ಮ ವಿಜ್ಞಾನಿಯ ಒಂದೊಂದು ಲೀಲೆಗಳು ತುಂಬಾ ಖುಷಿ ನೀಡಿದವು ಸರ್

    ReplyDelete
  2. ಸರ್,
    ನಿಮ್ಮ ಕೂಸದಿಸಯ್ಯ ಕವಿತೆ ಓದುತ್ತಿದ್ದಂತೆ Wordsworth ಕವಿಯ Ode on Intimations of Immortality ಕವಿತೆಯ Heaven lies about us in our infancy ಸಾಲು ಮಿಂಚಿ ಹೋಯಿತು. ಈ ಕವಿತೆ Wordsworthನ ಕವಿತೆಗಿಂತ ಭಿನ್ನವಾದ ಆಶಯದಲ್ಲಿ ವಿಸ್ತಾರಗೊಳ್ಳುತ್ಯ ಹೋಗಿದೆ. ಈ ಕೂಸಿನ ಬಳಿ ಸಾಮ್ರಜ್ಯವಿದೆ; ಆದರೆ ಸಾಮ್ರಾಜ್ಯಶಾಹಿತನ ಬಾಲಲೀಲೆಯಲ್ಲಿ ಮುಳುಗಿರುವ ಅವನ ಪಾದಧೂಳಿನಲ್ಲಿ ಲೀನವಾಗಿದೆ. ಅವನ ಬಳಿ ಛತ್ರಿ ಚಾಮರ ಅಶ್ವದಳ ಗಜದಳಗಳಿವೆ; ಆದರೆ ಸುತ್ತಲಿನ ನೆಲದ ಮೇಲೆ ದಂಡೆತ್ತಿ ಹೋಗುವುದಿಲ್ಲ. ಅವನದೇನಿದ್ದರೂ ರಕ್ಷಕನ ಅಂತಃಕರಣ; ಆದರೆ ರಕ್ಷಕನೆಂಬ ಅಹಂಕಾರಕ್ಕೆ ಅವನ ಸಾಮ್ರಾಜ್ಯದಲ್ಲಿ ಜಾಗೆಯಿಲ್ಲ. ಸರ್ ಇಂದು ಬೆಳ್ಳಂಬೆಳಿಗ್ಗೆ ಕೂಸದಾಸಯ್ಯನ ದರ್ಶನ ಮಾಡಿಸಿದ್ದಕ್ಕೆ ವಂದನೆಗಳು. #ಚನ್ನಪ್ಪ ಕಟ್ಟಿ, ಸಿಂದಗಿ

    ReplyDelete
  3. ಮೊದಲನೆಯ ಸಾಲಿನಲ್ಲಿನ ಕೂಸದಿಸಯ್ಯ ವನ್ನು ಕೂಸದಾಸಯ್ಯ ಎಂದು ಓದಿಕೊಳ್ಳಿರಿ

    ReplyDelete
  4. ನಿಮ್ಮ ಗಮನಿಸುವಿಕೆ ಸರಿಯಾಗಿದೆ, ಸಮರ್ಪಕ ತುಲನೆ. ತಮ್ಮೊಳಗೊಂದು ಮಗುವನ್ನು ಕಾಪಾಡಿಕೊಂಡವರಿಗೆ ಇಂಥ ಕವಿತೆಗಳು ಕಾಡುತ್ತವೆ.ನಿಮ್ಮ ಅಗಾಧ ಜ್ಞಾನದ ಸೌಂದರ್ಯವೇ ಮಗುವಿನ ಮುಗ್ಧತೆ.ನಿಮ್ಮ ಓದಿಗೆ ಧನ್ಯವಾದಗಳು ಸರ್.

    ReplyDelete
  5. ವಂದನೆಗಳು ರಾಗಂಜಿ

    ReplyDelete