Total Pageviews

Wednesday, April 29, 2015

ಕಣ್ಣ ಕಡಲೊಳಗೆ ಕರಗಿದ ಸಕ್ಕರೆಯ ಗೊಂಬೆ ನಾ

 23 ಸಾಯಂಕಾಲ ಬೆಂಕಿಯಾದ ಬೆಂಗಳೂರಿಗೆ ಮಳೆಯ ಸಿಂಚನ. ಎರಡು ಪುಸ್ತಕಗಳ(ಬತ್ತಲೆಗೆ ಬೆರಗಾಗಬಾರದು ಮತ್ತು ಕಾವ್ಯಕ್ಕೆ ಉರುಳು ಭಾಗ-2) ಕೆಲಸದ ಒತ್ತಡದಿಂದ ಬಳಲಿದ್ದ ನಾನು ಇದೇ ನೆಪ ಒಡ್ಡಿ ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದ ಕಾರ್ಯಕ್ರಮದಿಂದ ನುಣುಚಿಕೊಳ್ಳಬಹುದು ಎಂದು ಯೋಚಿಸಿದೆ, ಆದರೆ ಅನುಸರಿಸಲಿಲ್ಲ. ಹಿಂದೆ ಮೂರು ಸಾರಿ ನಿಗಧಿಗೊಳಿಸಲಾಗಿದ್ದ ಇಲ್ಲಿಯ ಕಾರ್ಯಕ್ರಮಗಳನ್ನು ತಪ್ಪಿಸಿ ಸಹೋದರ ಡೋಣೂರರಿಗೆ ಸಾಕಷ್ಟು ಮುಜುಗರ ಮಾಡಿಯಾಗಿತ್ತು. ಆದರೆ ಬಾರಿ ನನ್ನ ಸ್ವಯಂ ಹೇರಿಕೆಗೆ ಕಾರಣವೂ ಒಂದಿತ್ತು. ಅದು ಡಾ. ರಾಜಕುಮಾರ. ನನ್ನ ಮತ್ತು ಡೋಣೂರರ ಪ್ರೀತಿ ಜಗಳದ ಕಾರಣ ಪುರುಷ.
   ಹೋದ ವರ್ಷ 2014 ಇದೇ ತಿಂಗಳಿನ ಇದೇ ದಿನಗಳಲ್ಲಿ ರಾಜಕುಮಾರರವಸಂತ ಗೀತಸಿನಿಮಾ ನೋಡುತ್ತಲೆ ಬದುಕಿನ ಕೆಲವು ಕಟುಸತ್ಯಗಳಿಗೆ ಕಣ್ತೆರೆದು, ಆನಂತರ ಇಡೀ ವರ್ಷ ಅಷ್ಟೇ ಕಟುವಾಸ್ತವಗಳನ್ನು ನೋಡಿ ನಿಬ್ಬೆರಗಾಗಿ ನಿಂತವ ನಾನು. ಮತ್ತೆ ಮುಗುಳ್ನಕ್ಕು ಇದೇ ರಾಜಕುಮಾರರ ಚಿತ್ರಗಳ ಮೂಲಕ ಜೀವನಕ್ಕೆ ಗತಿಶೀಲತೆಯನ್ನು ತಂದುಕೊಂಡವನು. ಹೀಗಾಗಿ ಋಣಭಾರವಿದೆ. ನಮ್ಮ ಕುಟುಂಬದ ತಾದಾತ್ಮ್ಯ ಅವರ ಚಿತ್ರಗಳೊಂದಿಗಿದೆ. ಈಗ ಪ್ಮಣ್ಯಾತ್ಮನ ಪುಣ್ಯಸ್ಮರಣೆಯಲ್ಲಿ ನಾನೂ ಒಬ್ಬನಿರಬೇಕೆಂದು ಅಭಿಮಾನಿಗಳು ಆಶಿಸುವಾಗ ಹೋಗದಿರುವುದು ದುರಹಂಕಾರದ ಪರಮಾವಧಿಯಾದೀತೆಂದು ಮಳೆಯ ಸಂಕಟಗಳನ್ನು ಬದಿಗಿಟ್ಟು ಹೊರಟು ಬಿಟ್ಟೆ.
  ವಿಶ್ವವಿದ್ಯಾಲಯದ ಆದೇಶದ ಪ್ರಕಾರ 23 ಮುಂಜಾನೆ ಚಂಪಾ, ರಂಗಚಿಂತಕ ಗುಡಿಹಳ್ಳಿ ನಾಗರಾಜ ಹಾಗೂ ಮನು ಬಳಿಗಾರರೊಂದಿಗೆ ಮುಂಜಾನೆ 6 ಗಂಟೆಗೆ ಕಾರು ಹತ್ತಬೇಕಿತ್ತು. ಆದರೆ ಕಳೆದ ಒಂದು ವರ್ಷದಿಂದ ಆತ್ಮೀಯರಾದ ಬಾಗಲಕೋಟೆಯ ವೈದ್ಯಮಿತ್ರ ಡಾ. ಸೋರೆಗಾವಿಯವರ ಮಗಳ ಮದುವೆ ಇದೇ ದಿನ ಪ್ಯಾಲೇಸ ಗ್ರೌಂಡಿನಲ್ಲಿದ್ದುದರಿಂದ, ಜೊತೆಗೆನನ್ನ ಮಗಳ ಮದುವೆಯನ್ನು ನೀವು ದಂಪತಿಗಳು ತಪ್ಪಿಸುವಂತಿಲ್ಲಎಂದು ತಿಂಗಳುಗಳಿಂದ ಒತ್ತಾಯಿಸಿದ ಕಾರಣ ಪ್ರವಾಸ ರಾತ್ರಿಯ ರೈಲನ್ನು ನೆಚ್ಚಬೇಕಾಯಿತು. ಡಾ. ಸೋರೆಗಾವಿಯವರ ವಿಚಾರದಲ್ಲಿ ಮದುವೆಗಿಂತಲೂ ಮುಖ್ಯವಾಗಿ ನನ್ನನ್ನು ಕಾಡಿದ್ದು ಅವರ ಸರಳತೆ, ಸಾಹಿತ್ಯಾಸಕ್ತಿ ಮತ್ತು ನಮ್ಮಿಬ್ಬರ ಮಧ್ಯಬಿಂದು ಬಲರಾಜ ಸಹಾನಿ.
ಕಲಬುರಗಿಯ ಕೆಲವು ಆಕರ್ಷಣೆಗಳಲ್ಲಿ ಮಹತ್ವದ್ದು ನನ್ನ ತಾಯಿಯಂಥ ಜೀವ ಶ್ರೀ ಸಿದ್ದರಾಮಪ್ಪ ಹೂಗಾರ. ಎಂ. ದಿನಗಳಲ್ಲಿ ಸಿಡಿಸಿಡಿಯಾಗಿರುತ್ತಿದ್ದ ನನಗೆ, ಸಿಕ್ಕ ದೇವರ ಸುತ್ತಿ ಪ್ರಸಾದ ತಂದು ಹಚ್ಚಿ, ಉಣ್ಣಿಸಿ-ತಿನ್ನಿಸಿ ಬಿಸಿಲುಕಾಯ್ದು, ಹರಕೆ ಹೊತ್ತೂ ಬಳಲದ ಜೀವ. ನಾನು ಗುಲ್ಬರ್ಗಾದ ರೇಲ್ವೆ ಇಳಿದ ದಿನದಿಂದ 27 ಮುಂಜಾವು ಬೆಂಗಳೂರು ತಲುಪವವರೆಗೂ ನನ್ನೊಂದಿಗಿದ್ದ ಅವರ ವ್ಯಕ್ತಿತ್ವ ಸಮಾಧಾನದ ಒಂದು ಆಕ್ರಮಣ. ಅವರೊಂದಿಗೆ ನಾಲ್ಕುದಿನ ಬಿಸಿಲ ಬೆಸುಗೆಯಲ್ಲಿ ಸುತ್ತಿದ ಬಂದೇನವಾಜ್ ದರ್ಗಾ, ಬೌದ್ಧ ವಿಹಾರ, ಶರಣಬಸವೇಶ್ವರ ಮಠ, ಗಂಜ್, ರಾಮಮಂದಿರ ಈಗ ನನ್ನ ನೆನಪಿನ ಭಾಗಗಳಾಗಿವೆ.
  ಸಾಮಾನ್ಯವಾಗಬಹುದಾಗಿದ್ದ ಪ್ರವಾಸ ಸಂಭ್ರಮವಾಗಲು ಕಾರಣ ಸಂಯುಕ್ತ ಕರ್ನಾಟಕದ ನನ್ನಕಾವ್ಯಕ್ಕೆ ಉರುಳುಓದುಗ ಬಳಗ. ಒಂದು ಕಾಲದಲ್ಲಿ ಸೋವಿಯತ್ ಲ್ಯಾಂಡ್ದಲ್ಲಿದ್ದ ನವಕರ್ನಾಟಕದ ಶ್ರೀ ಸೊನ್ನದ, ಲೇಖಕ ಸಹೋದರುಗಳಾದ ಮೈಸೂರು ವಾಸಿ ಶ್ರೀ ಸಿ.ಎಸ್ ಆನಂದ ಮತ್ತು ಸಿ.ಎಸ್ ಭೀಮರಾಯ, ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾರ್ಥಿಗಳು, ನನ್ನ ಕಟ್ಟರ್ ಅಭಿಮಾನಿಗಳಾದ ಶ್ರೀ ಚನ್ನಣ್ಣ ವಾಲೀಕಾರ, ಗುಲ್ಬರ್ಗಾ ರಂಗಾಯಣದ ನಿರ್ದೇಶಕರಾದ ಪ್ರೊ. ಆರ್.ಕೆ ಹುಡುಗಿ, ಒಂದೇ ಎರಡೆ, ಊರೆಲ್ಲ ನೆಂಟರು, ಕೇರಿಯಲ್ಲವೂ ಬಳಗ.
  ನನ್ನ ಆಗಮನದ ಸುದ್ದಿ ಕೇಳುತ್ತಲೇ ಓಡಿಬಂದವರು, ಸಂಯುಕ್ತ ಕರ್ನಾಟಕದ ಗುಲ್ಬರ್ಗಾ ಶಾಖೆಯ ಪತ್ರಕರ್ತಮಿತ್ರ ಶ್ರೀ ಸಂಗಮನಾಥ ರೇವತಗಾಂವ. ಅವರು ನನ್ನನ್ನು ಹಾಗೂ ಪದ್ದಿಯನ್ನು ತಮ್ಮ ಕಛೇರಿಗೆ ಕರೆದೊಯ್ದು ಸಂಭ್ರಮಿಸಿದ ಪರಿಯೇ ಅನನ್ಯ. ವಾರಕ್ಕೊಮ್ಮೆ ಶಬ್ಧಗಳ ಮೂಲಕ ಒಂದು ಬದುಕನ್ನು ಕಟ್ಟಿಕೊಡುವ ನನ್ನ ಸುತ್ತ ಅದೇ ಬದುಕುಗಳು ಇಂಥ ಒಂದು ಪ್ರೀತಿಯ ಲೋಕವನ್ನು ಸೃಷ್ಠಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿರುವುದೇ ಇತ್ತೀಚಿಗೆ. ನಾನೀಗ ಅಭಿಮಾನ ಅಕ್ಕರೆಯ ಸಾಗರದಲ್ಲಿ ಕರಗಿಹೋದ ಸಕ್ಕರೆಯ ಬೊಂಬೆ.
ಕೊನೆಯ ಎರಡು ದಿನಗಳಲ್ಲಿ ಮಾತಿನ ಜಾತ್ರೆ ಹಿರಿಯ ನಟ ಲೋಹಿತಾಶ್ವರೊಂದಿಗೆ. ನುಡಿ, ನೆಮ್ಮದಿ, ದೃಷ್ಠಿ ಹಾಗೂ ಕನಿಷ್ಠ ಮಾನವೀಯ ಕಾಳಜಿಗಳನ್ನು ಕಳೆದುಕೊಂಡ ಸಿನಿಮಾದ ಸಂಘವೇ ಸಾಕು ಎಂದು ಬೆಂಗಳೂರು ಬಿಟ್ಟು ಬಂದು ತಿಪಟೂರು ಬಳಿಯ ತಮ್ಮ ಆರು ಎಕರೆಯ ತೋಟದಲ್ಲಿ ಅವರೀಗ ನಾಯಿಗಳೊಂದಿಗೆ ನೆಮ್ಮದಿಯಾಗಿದ್ದವರು. ಆದರೆ ರಾಜಣ್ಣನನ್ನು ಸ್ಮರಿಸಿಕೊಳ್ಳುವ ಸಮಾರಂಭ ತಪ್ಪಿಸಿ ನಾನೇಕೆ ಭಾವದಾರಿದ್ರ್ಯವನ್ನು ಎದುರಿಸಬೇಕು? ಎಂಬ ಒಂದು ಪ್ರಶ್ನೆಯೇ ಅವರನ್ನು ಇಲ್ಲಿ ತಂದು ಸೇರಿಸಿತ್ತು. ಸುಮ್ಮನೆ ನನ್ನ ಸಂಗಾತಿಯಾಗಿ ಬಂದು ತನ್ನ ಆರಾಧ್ಯದೈವವಾದ ರಾಜಕುಮಾರರ ಕುರಿತು ಕೇಳಿ ಆನಂದಿಸಬೇಕೆಂದುಕೊಂಡ ನನ್ನ ಪದ್ದಿಗಂತೂ ಇದೆಲ್ಲವೂ ಒಂದು ರೀತಿಯ ಅಚ್ಚರಿ. ಸುತ್ತಲೂ ಸೆಳೆತಗಳಿಲ್ಲದ ಸಾತ್ವಿಕ ಸಂಘ.
2014 ಬೌದ್ಧ ಪೂರ್ಣಿಮೆಗೆ ನಾನು ಹೇಳಿದ್ದೆ, ‘ಕಣ್ಣೊದ್ದೆಯಾದಾಗ ಬುದ್ಧನೊಬ್ಬನೇ ಇದ್ದ’. ಅಲ್ಲಿಂದ ಇಲ್ಲಿಯವರೆಗೂ ಆತನನ್ನು ಅನುಷ್ಠಾನಗೊಳಿಸುವ ಕಾಲ. ಮಧ್ಯ ಅನೇಕ ಸುಂದರ ವ್ಯಕ್ತಿ-ವಿಚಾರ ಸ್ಥಳಗಳೊಂದಿಗಿನ ನಮ್ಮ ಸಂಚಾರ ಮತ್ತು ಸಂಭ್ರಮಗಳು ಇನ್ನೊಂದೆಡೆಯ ಸುಳ್ಳಿನ, ಕುಹಕದ ಪೆಟ್ಟುಗಳನ್ನು ಮುಗಳ್ನಗುತ್ತ ಸಹಿಸಿಕೊಳ್ಳುವ, ಮತ್ತೆ ಮುಂದೆ ಸಾಗುವ ಪಾಠ ಕಲಿಸಿವೆ.
  ಈಗ ಮತ್ತೆ ಅವನ ಪೌರ್ಣಿಮೆ. ಬುದ್ಧನ ರೆಪ್ಪೆಯ ಮುದ್ದಿನ ಮಗಳ ಹುಟ್ಟುಹಬ್ಬ. ಬೆಂಗಳೂರಿಗೆ ಬಂದ ಎರಡೇ ಉದ್ದೇಶಗಳು. ಒಂದು ನಮ್ಮಬಾ ಬುದ್ಧನೆ ನಮ್ಮ ಬೆಳಕಾಗುಪ್ರಾರಂಭವಾಗಬೇಕು. ಇನ್ನೊಂದು ಇಲ್ಲೊಂದು ಸುಂದರ ಮಗುವಿನ ತಂದೆಯಾಗಬೇಕು. ಮುಪ್ಪಿನ ನನ್ನ ಹೆತ್ತವರಿಗೆ, ಪ್ರೀತಿ ಸಂಭ್ರಮಿಸುವ ಮಗಳಿಗೆ ಆಡಲು ಒಂದು ಗೊಂಬೆ ಕೊಡಬೇಕು, ಒಟ್ಟಾರೆ ಬುದ್ಧ ಬರುತ್ತಲೇ ಇರಬೇಕು, ಮಗುವಾಗಿ, ನಗುವಾಗಿ, ಗೆಲುವಾಗಿ ಸೋಲಿನೊಳಗೂ ಸುಗಂಧವಾಗಿ, ಸೆಲೆಯಾಗಿ, ನಮ್ಮ ಕಣ್ಣೊಳಗಿನ ಕಲೆಯಾಗಿ.
      ಈಗ ಅದು ಕೈಗೂಡುವ ಕಾಲ.