Total Pageviews

Wednesday, April 22, 2015

ಬೆಳಕಿಲ್ಲದ ಬರಹ-ಬದುಕು ಮುಂದೊರೆಯದು



ಎಂದೂ ಮುಗಿಯದ ನಮ್ಮ ಎಲ್ಲ ಪಯಣಗಳಲ್ಲೂ ಕೆಲವು ನೆನಪಿನ ತಾಣಗಳಿರುತ್ತವೆ. ಅವು ನೆನಪಿನ ತಾಣಗಳು, ಯಾಕೆಂದರೆ ಅಲ್ಲೊಂದಿಷ್ಟು ವಿಶ್ರಾಂತಿ, ಕಳೆದು ಹೋದ ಮತ್ತು ಇನ್ನೂ ಬಾಕಿ ಉಳಿದ ಆಯುಷ್ಯದ ಮಾತು, ಮಡದಿ, ಮಕ್ಕಳು, ಅವುಗಳೊಂದಿನ ಸಂಸಾರವೆಂಬ ಸುಂದರ ಸೆಲೆಬ್ರೆಷನ್ ಅಲ್ಲಿ ಆಚರಿಸಲ್ಪಟ್ಟಿರುವುದರಿಂದ ಅವುಗಳನ್ನು ನಮ್ಮ ಬದುಕಿನ ತಾಣಗಳೆಂದು ನಾವು ಮತ್ತೆ ಮತ್ತೆ ಸಂದರ್ಶಿಸುತ್ತಿರುತ್ತೇವೆ. ಅಂದಹಾಗೆ, ಅಲ್ಲಿ ಬದುಕೆಂಬ ಮಜ್ಜಿಗೆಯ ಕಡೆದು ಅನುಭವದ ಬೆಣ್ಣೆಯನ್ನು ಸಂಗ್ರಹಿಸಲಾಗಿರುತ್ತದೆ. ಹೀಗೆಯೆ ಬರಹವೂ ಕೂಡಾ. ಬದುಕು ಗತಿಶೀಲವಲ್ಲ ಎನ್ನುವುದಾದರೆ ಬರಹವೂ ಅಲ್ಲ, ಬದುಕು ಜಡವಾದರೆ ಬರಹ ಜಂಗಮದ ನಿರಂತರತೆಯನ್ನು ಹೊಂದಲು ಸಾಧ್ಯವೇ ಇಲ್ಲ. ಹೀಗಾಗಿ ಬದುಕು-ಬರಹ ಒಂದೇ ಧಾತುವಿನ ಎರಡು ಮುಖಗಳು.
ತಾಣಗಳ ಲೆಕ್ಕ ಬರಹಕ್ಕೂ ಇದೆ. ನಿರಂತರ ಶೋಧದಲ್ಲಿರುವ ಲೇಖಕನೊಬ್ಬನ ಒಕ್ಕಣಿಕೆ, ಕೆಲವು ಕಡೆ ಗಕ್ಕನೆ ನಿಂತು, ಅವಲೋಕಿಸಿ, ಆಳಗಲ ವಿಸ್ತರಿಸಿಕೊಂಡು ಮೈದುಂಬಿ ಮತ್ತೆ ಮುಂದೊರೆಯುತ್ತದೆ. ಹೀಗೆ ನಿಂತು ಹಿನ್ನೋಡಿ, ಮುಂದಾಲೋಚಿಸಿದ ಪರಿಣಾಮವೇ ಅಧ್ಯಾಯ, ಅಂಕ, ಸಂಗ್ರಹ ಮತ್ತು ತರ್ಕದ ಪಲ್ಲಟ. ಒಂದು ‘ಕೃತಿ’ ಎನ್ನುವುದು ಬರಹದ ಅನಂತತೆಯ ದಾರಿಯಲ್ಲಿ ಒಂದು ನೆನಪಿನ ತಾಣ. ಆತ ಆ ಕೃತಿಯನ್ನೆತ್ತಿಕೊಂಡಾಗ ನೆನಪಿನ ಸುರುಳಿ ಒಂದಿಷ್ಟು ಹಿಮ್ಮುಖವಾಗಿ, ಮತ್ತೆ ಒಂದಿಷ್ಟು ಭವಿಷ್ಯದೋಟವಾಗಿ ಬಿಚ್ಚಿಕೊಳ್ಳುತ್ತದೆ. ಇಂಥ ತಾಣಗಳನ್ನು “ಬದುಕಿನ ಕಟು ಸತ್ಯಗಳನ್ನು ಸಹ್ಯಗೊಳಿಸುವ ಭಾವಾಂತರದ ಹಂತ”ಗಳೆಂದು ಗುರ್ತಿಸಿದ್ದಾನೆ ಸಾಮರ್‍ಸೆಟ್ ಮಾಮ್.
 ನಿಮ್ಮ ಓದಿಗೆ ಒಡ್ಡಿಕೊಳ್ಳಲಣಿಯಾಗಿರುವ ಕಾವ್ಯಕ್ಕೆ ಉರುಳು ಭಾಗ-2 ನನ್ನ ಅಂಕಣ ಬರಹದ ಅನನ್ಯತೆಯ ದಾರಿಯಲ್ಲಿ ಅಂಥದೇ ಒಂದು ತಾಣ. ‘ಆಲೋಚನೆ’ ಎಂಬ ಮೃತ್ಯುವಿನ ಅಶ್ವ ಹತ್ತಿಕೊಂಡು, ಆದರ್ಶಗಳ ಗೊಂಡಾರಣ್ಯ ಹೊಕ್ಕ ಇವರ್ಯಾರೂ ಹೊರಳಿ ಬರಲಿಲ್ಲ. ಮರಳಿ ಮತ್ತೆ ಅವರೊಂದಿಗೊಂದೂ ಮಾತಾಗಲಿಲ್ಲ. ಅಗೋಚರವಾದ ಕಾಲ ದಡಬಡಿಸಿ ಉರುಳಿ ಹೋಗಿದೆ. ಈಗ ಇಲ್ಲಿ ನಿಂತು ಈ ಬದುಕುಗಳನ್ನೆಲ್ಲ ಅವಲೋಕಿಸಿದಾಗ ಅವರ ಆ ಹೊರಡುವಿಕೆಯೇ ಒಂದು ಸಂದೇಶದಂತೆ ಓದಿಸಿಕೊಳ್ಳುತ್ತಿದೆ. ನಿತ್ಯ ಸತ್ತ ಈ ಹೆಣಗಳ ಜಾತ್ರೆಯಲ್ಲಿ ನಿಜವಾಗಿಯೂ ಅವರದೇ ಬದುಕು, ನಮ್ಮದೊಂದು ಶವದ ಮೆರವಣಿಗೆ ಎನ್ನಿಸುತ್ತಿದೆ. ಅದಕ್ಕೇ ಇರಬಹುದೇನೊ ಅವರು ದೀಪವಾಗಿದ್ದಾರೆ ನಾವು ಈ ಭೂಮಿಯ ತಾಪ, ಬರೀ ತಾಪವಾಗಿದ್ದೇವೆ.
ನಾವೀಗ ಸುಖಪರ ಎಲ್ಲ ಆವಿಷ್ಕಾರಗಳ ಲಾಭಪಡೆಯುತ್ತ ನಾಡೆಂಬ ನಾಡಿನೊಳಗಿದ್ದೂ, ಅಂತರಂಗದಲ್ಲಿ ಅಡವಿಯೊಳಗೆ ಹಲಬುಗೆಟ್ಟ ಪಶುವಿನಂತೆ ಪರಾಧೀನತೆಯ ಭಯದೊಳಗೆ ಪರದಾಡುತ್ತಿದ್ದೇವೆ. ಅವರು ಮಾತ್ರ ತಾವು ಎತ್ತಿಕೊಂಡ ಹೋರಾಟದ ಹಾದಿಯಲ್ಲಿ, ಯಾರೊಬ್ಬರನ್ನೂ ಆಶ್ರಯಿಸಿದೆ, ತಮ್ಮ ತಾವೇ ಸುಟ್ಟುಕೊಂಡು, ದೊಂದಿಗಳಾಗಿ ಉರಿದು ಹಲವು ಬದುಕುಗಳ ಹಣತೆ ಹಚ್ಚಿಟ್ಟವರು. ಹೀಗಾಗಿ ಅವರು ಮಾನ್ಯರು. ಅವರ ಓದಿನಿಂದಾಗಿ ಈ ಕ್ಷಣಕ್ಕೆ ನಾವೂ ಧನ್ಯರು.
ಬದುಕಿನ ಪ್ರೀತಿಯ ಮಹಾಪಾಠಗಳಾದ ಇವರನ್ನು ಬರೆಯುವಾಗ ಕಬೀರನ ಒಂದು ಪದ್ಯ ನನ್ನನ್ನು ಎಷ್ಟೊಂದು ಕಾಡಿದೆ.
ಇಂಥವರ ಕುರಿತೇ ಆತ ಹೇಳಿದನೇನೊ -
‘ಓ ಸಾಧು
ಈ ಲೋಕದೊಳಗೆ
ಯಾವ ಹೊಸ ಪಾಠಗಳು ನಿನ್ನನ್ನು
ಅನಂತ ಬದುಕಿನ ವಾರಸುದಾರನನ್ನಾಗಿಸಿದವೊ
ನನ್ನ ಹೃದಯ ಮಂದಿರದಲ್ಲಿ ನಿತ್ಯ
ಆ ಪ್ರೀತಿಯ ಸ್ಮರಣೆ ನಡೆದಿರುತ್ತದೆ.

ಹೌದು, ಖಂಡಿತವಾಗಿಯೂ, ಇವು ಸ್ಮರಣೆಗಳಾಗಬೇಕಾದ ಬದುಕುಗಳೆ.
ಬರಹದ ಪ್ರಶ್ನೆ ಬಂದಾಗ ಸಾಮರ್‍ಸೆಟ್ ಮಾಮ್‍ನ ಇನ್ನೊಂದು ಮಾತು ಸದಾ ಎಚ್ಚರಿಕೆಯಾಗಿ ಕಾಡುತ್ತದೆ. ಆತ ಹೇಳುತ್ತಾನೆ ‘It is well that a writer should think not only that the book he himself is writing is important, but that the book other people are writing are important too’.  ತುಲನಾತ್ಮಕ ಕ್ರಮದಿಂದಲೇ ನಮ್ಮ ಬರಹದ ಕ್ರಮಕ್ಕೆ ಹೊಸ ಗತ್ತು ಮತ್ತು ಗತಿ ಸಾಧ್ಯವಾಗುವುದು. ಅಂಕಣಕ್ಕೆ ಈ ದುರಂತ ಲೇಖಕರ ಜೀವನಗಳನ್ನು ಆಯ್ದುಕೊಂಡ ಕ್ಷಣದಿಂದ, 50 ವಾರಗಳ ದೀರ್ಘ ದಾರಿಯನ್ನು ಕ್ರಮಿಸಿ ಮುಂದೊರೆಯುವ ಪ್ರತಿಕ್ಷಣದಲ್ಲಿ ನಾನು ಕೇಳಿಕೊಳ್ಳುವ ಪ್ರಶ್ನೆ ಇದೆ, ನನ್ನ ಸುತ್ತಲಿನ ಬದುಕಿನೊಂದಿಗೆ ಏನು ನಡೆದಿದೆ? ಮತ್ತು ನನ್ನ ಈ ಬರಹಗಳಿಂದ ಅವುಗಳಿಗ್ಯಾವ ಹೊಸ ಹುರುಪಿನ ಸಿಂಚನ ಸಾಧ್ಯವಿದೆ?
ಈ ರವಿವಾರ ಒಂದು ಬದುಕು ಅನಾವರಣಗೊಂಡು ಅದರ ಸುತ್ತ ಪ್ರತಿಕ್ರಿಯೆ, ಪ್ರತಿಧ್ವನಿಗಳೆಲ್ಲ ಹೊರಟು, ಮುಂದಿನ ರವಿವಾರದವರೆಗೂ ಅದು ಸ್ಮರಣೆಯಾಗದ ಹೊರತು ನಾನು ಈ ಬರಹವನ್ನು ಮುಂದೊರೆಸಿಲ್ಲ. ಬೆಳಕಿಲ್ಲದ ಬರಹವನ್ನು ಮುಂದೊರೆಸುವುದೂ ಇಲ್ಲ.
ಬಹಳಷ್ಟು ಓದುಗರು ಈ ಅಂಕಣಮಾಲೆಯ ಲೇಖನಗಳನ್ನು ಆಯಾ ವಾರ ಪತ್ರಿಕೆಯನ್ನು ಕಾಯ್ದಿಡುವ ಮೂಲಕ ಸಂಗ್ರಹಿಸಿಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಆ ಸಂಗ್ರಹ ಕಷ್ಟಕರ ಮತ್ತು ನ್ಯೂeóïಪೇಪರ್‍ನ ಆಯುಷ್ಯವೂ ಕಡಿಮೆ. ಈ ಅಂಕಣಮಾಲೆ ಸಂಗ್ರಹಗೊಂಡು ಕಾವ್ಯಕ್ಕೆ ಉರುಳು ಭಾಗ-1, ಭಾಗ-2 ಶೀರ್ಷಿಕೆ ಅಡಿಯಲ್ಲಿ ಕರ್ನಾಟಕದ ಎಲ್ಲ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರುವ ಸಂಗತಿ ಇನ್ನೂ ಅದೆಷ್ಟೋ ಓದುಗರಿಗೆ ಗೊತ್ತಿಲ್ಲದ ವಿಚಾರ. ಈ ಮೂಲಕ ಒಂದು ಕೋರಿಕೆ. ಈಗಾಗಲೆ ಈ ಸಂಗ್ರಹಗಳನ್ನು ಲಭ್ಯವಾಗಿಸಿಕೊಂಡ ಓದುಗ ಬಂಧುಗಳು ಈ ವಿಚಾರವನ್ನು ಉಳಿದ  ಓದುಗರೊಂದಿಗೂ ಹಂಚಿಕೊಂಡರೆ ಅವರನ್ನು ಈ ರೀತಿ ಪೇಪರ್ ಕಾಯ್ದಿಡುವ ಹಿಂಸೆಯಿಂದ ಮುಕ್ತಗೊಳಿಸಿದ ಧನ್ಯತೆಯನ್ನು ಅನುಭವಿಸಬಹುದು. ಆ ಮೂಲಕ ಜೀವನಶೃದ್ಧೆಯ ಈ ಚೇತನಗಳ ಸಂದೇಶ ಹೊತ್ತ ಈ ಹೊತ್ತಿಗೆಗಳನ್ನು ಜನಮುಖಿಯಾಗಿಸಬಹುದು. ಅಲ್ಲವೆ?

No comments:

Post a Comment