Total Pageviews

Wednesday, April 15, 2015

ಆಮ್ರಪಾಲಿಗೆ ಅವನೇ ಬೇಕಿತ್ತು



ಮತ್ತೆ ಹೊಸ ವಿನ್ಯಾಸದಲ್ಲಿ ನನ್ನ ಓಶೋ. ಕುಳಿತುಕೊಂಡು ‘ಚಿನ್ನದ ಬೆಟ್ಟಕ್ಕೆ ಬೆಂಕಿಯ ಗೆರೆ’ ಎನ್ನುವ ಕೊನೆಯ ಅಧ್ಯಾಯವನ್ನು ಹುರಿಗೊಳಿಸುತ್ತ, ಓಶೋ ನಿಧನರಾದಾಗ ಹೇಗಿದ್ದರು? ಎಂಬ ಫೋಟೊಗಳನ್ನು ನೋಡುತ್ತಿದ್ದೆ. ಅಗ್ನಿ ಸ್ಪರ್ಶದ ಕೊನೆಯ ಕ್ಷಣದಲ್ಲೂ ಅವರು ಸುಮ್ಮನೆ ಮಲಗಿದಂತೆ ಕಂಡರೆ ವಿನಃ ಆ ಮುಖಕ್ಕೆ ವಿಕಾರಗಳಿರಲಿಲ್ಲ. ಅದು ಜೀವನದಲ್ಲಿ ದಮನಗೊಳ್ಳದ ಅತೃಪ್ತಿಯನ್ನು ವ್ಯಕ್ತಪಡಿಸುತ್ತಿರಲಿಲ್ಲ. ಮನದ ಮೂಲೆಯಲ್ಲಿ ಅಲ್ಲಮನ ‘ಮೃತ್ಯು ಮುಟ್ಟುವ ಮುನ್ನ’ ಎಂಬ ಎಚ್ಚೆರಿಕೆಯ ಸಾಲು ಸುಳಿದುಹೋಗುತ್ತಿತ್ತು. ಇನ್ನೊಂದೆಡೆ ಭಾಗೋಜಿಕೊಪ್ಪದ ಪ್ರಶಸ್ತಿ ಪಡೆದು ಮರಳುವಾಗ 18 ವರ್ಷ ಯುವಕನ ತಲೆಯ ಮೇಲೆ ಲಾರಿ ಹಾಯ್ದು ರಸ್ತೆಯ ಬದಿ ಬೇವಾರ್ಸಿಯಾಗಿ ಬಿದ್ದ ಹೆಣದ ಚಿತ್ರ ಕಾಡುತ್ತಿತ್ತು. ಹೊರಗಡೆ ನಿರಂತರ ಮೂರುವರೆ ಗಂಟೆಗಳ ಮಳೆ ನೆನಪುಗಳ ಬೆರಳು ನೀಡಿ ನನ್ನನ್ನು ಎಲ್ಲೆಲ್ಲೋ ಕರೆದೊಯ್ಯುತ್ತಿತ್ತು. ವಾರದಿಂದ ಬೆಂಕಿಯಾಗಿದ್ದ ಬೆಂಗಳೂರನ್ನು ಸಮಾಧಾನಿಸುತ್ತಿತ್ತು. 
 ಅಷ್ಟರಲ್ಲಿ ಡಾ.ವೈ.ಸಿ ಕಮಲಮ್ಮನ್ನವರ ಫೋನ್. ದಿನಾಂಕ:12.04.2015 ರಂದು ನೀವು ವಾಡಿಯಾ ಸಭಾಂಗಣಕ್ಕೆ ಬಂದು ಆದರ್ಶ ಶಿಕ್ಷಕ, ರಾಜ್ಯ ಪ್ರಶಸ್ತಿ ವಿಜೇತ ದಿವಂಗತ ಪಂಡಿತ್ ಚನ್ನಪ್ಪ ಎರೆಸೀಮೆ ಹಾಗೂ ಪಂಡಿತ್ ವಿಶ್ವನಾಥ ಸಾ ನಾಕೋಡ್ ಅವರ ಕುರಿತು ಮಾತನಾಡಬೇಕು. ಗೊತ್ತಿರಲಿ, ಇದು ಗುರು ಸ್ಮರಣೆಯ ದಿನ ಎಂದರು. ನಾನು ಮರುಮಾತನಾಡಲಿಲ್ಲ. ಅಧ್ಯಯನಕ್ಕೆ ತೊಡಗಿದೆ. 
 ಬೆಂಗಳೂರಿಗೆ ಬಂದಂದಿನಿಂದ ಅದೇಕೆ ಹೀಗಾಗುತ್ತಿದೆಯೋ ಗೊತ್ತಿಲ್ಲ. ಒಂದೊಮ್ಮೆ ನಾನು ಸಂದರ್ಶಿಸುತ್ತಿದ್ದ ಆಕರ್ಷಣೆಗಳ ಬೆಂಗಳೂರಿಗೂ ಇಂದು ನಾನು ವಾಸಿಸುವ ಬೆಂಗಳೂರಿಗೂ ಎಷ್ಟೊಂದು ವ್ಯತ್ಯಾಸ. ಆಗಿನದು ಕಾಡುವ, ಕತ್ತಲೆಯ, ಬೆತ್ತಲೆಯ ಬೆಂಗಳೂರು. ಈಗಿನದು ಅಂದುಕೊಂಡ ಮಾತ್ರಕ್ಕೆ ಎಲ್ಲವನ್ನು ನೀಡುವ, ನಿರಾಳವಾಗಿಸುವ ಘನತೆಯ ಸೂರು ಕೊಟ್ಟ ಬೆಂಗಳೂರು. ಈ ಒಂಬತ್ತು ತಿಂಗಳಲ್ಲಿ ಕನಿಷ್ಟ ಹತ್ತಾರು ಬಾರಿ ನಾನು ಮೈಸೂರಿಗೆ ಹೋಗಿ ಬಂದಿರಬಹುದು. ಆದರೆ ಮತ್ತೆ ನಿತಾಂತವಾಗಿ ಕಾಡಿದ್ದು ಬೆಂಗಳೂರೆ, ಮನಸ್ಸು ಯಾವಾಗಲೂ ಕನವರಿಸುವುದು ನನ್ನೂರೆ. 


ಬಹುತೇಕ ನಾವು ತೊಡಗಿಕೊಳ್ಳುವ ಕೆಲಸ, ಕ್ಷೇತ್ರ ಮತ್ತು ನಮ್ಮ ಸುತ್ತಲಿನ ಸಾಂಗತ್ಯ ಬದುಕಿನ ಅಭಿಪ್ರಾಯಗಳನ್ನು ರೂಪಿಸುತ್ತವೆ. ಒಬ್ಬ ಆಚಾರ್ಯರ ಆಶೀರ್ವಾದದಿಂದ ನಾನು ಬೆಂಗಳೂರಿಗೆ ಬಂದೆ. ಗುರು ಸ್ಮರಣೆಗಳು ಒಂದು ಗಂಡು-ಹೆಣ್ಣಿನ ಸಮಾಗಮಕ್ಕಿಂತಲೂ ರೋಮಾಂಚನ ವಿಷಯವಾಗುವ, ಗುರುದರ್ಶನ ಓರ್ವ ಮಹಾರಾಜನೊಂದಿಗಿನ ಸಂದರ್ಶನಕ್ಕಿಂತಲೂ ಮಹತ್ವದೆನಿಸುವ ಪವಿತ್ರ ನೆಲ ಭಾರತ ಒಂದೇ ಇರಬಹುದು. ಇಲ್ಲಿ ಶಿಷ್ಯರು ಗುರುಗಳನ್ನು ಹುಡುಕಿಕೊಂಡು ಬಿಸಿಲು ಮಳೆ ಗಾಳಿಗೂ ಚಿಂತಿಸದೆ ಸಾವಿರಾರು ಮೈಲು ಸುತ್ತಿಹೋದರು. ಅಂತೆಯೇ ಗುರುಗಳು ಒಡಲ ಕುಡಿಗಳಿಂತಲೂ ಕಾರುಣ್ಯದ ಕೈ ಹಿಡಿದುಕೊಂಡು ಶಿಷ್ಯನ ಬರುವಿಕೆಗಾಗಿ ಕಾಯ್ದರು. ಪಂಡಿತ್ ಚನ್ನಪ್ಪ ಎರೆಸೀಮೆಯವರು 85 ವರ್ಷ ಬದುಕಿದ್ದ ಈ ನಾಡಿನ ಅಪರೂಪದ ಗುರುಗಳು. ಅವರ ಸ್ಮರಣೆಯಲ್ಲಿ ಪಾಲ್ಗೊಳ್ಳುವುದೇ ಪುಣ್ಯ. 
 ಮಾಜಿ ಸಚಿವೆ ಲಿಲಾವತಿ ಆರ್. ಪ್ರಸಾದ್, ವಾಲಾವಲ್ಕರ್, ದೇವೇಂದ್ರಪ್ಪ ಹೀಗೆ ಜಾತಿ ಹನ್ನೆರಡು ಜನಗಳೆಲ್ಲ ಸೇರಿಕೊಂಡು ಗುರು ಸ್ಮರಣೆಯಲ್ಲಿದ್ದರು. ಶಿಷ್ಯರಿಂದ ಸ್ಮರಣೆಗೊಳಗಾಗುವ ಗುರು, ಮಕ್ಕಳಿಂದ ಪೂಜೆಗೊಳಗಾಗುವ ತಂದೆ-ತಾಯಿಗಳು ಬರೀ ಸ್ಮರಣೆ ಮಾತ್ರವಲ್ಲ ಸಂಸ್ಕøತಿಯ ಭಾಗವಾಗಿರುತ್ತಾರೆಂದು ನನ್ನ ಭಾಷಣ ಪ್ರಾರಂಭ. ಅತ್ಯಂತ ಕಡಿಮೆ ಸಂಬಳದಿಂದ ಏಳು ಮಕ್ಕಳ ತಂದೆಯಾಗಿ ಜೀವನ ಪ್ರಾರಂಭಿಸಿದ ಎರೆಸೀಮೆಯವರಿಗೆ ದೈವೀಕತೆ ತುಂಬಿದವರು ಅವರ ಪತ್ನಿ ಪಾರ್ವತಮ್ಮ. ನಿತ್ಯ ಗಂಡನಿಗೆ ನಮಸ್ಕರಿಸಿಯೇ ಅವರ ದೈನಿಕತೆ ಆರಂಭ. ಹೆಂಡಿತಿಯ ಸ್ಮರಣೆಯನ್ನೆ ಸಾಧನೆ ಮಾಡಿಕೊಂಡು ಜ್ಞಾನಪೀಠ ಪಡೆದ ತೆಲುಗಿ ರಾವೋರಿ ಭಾರದ್ವಾಜ್ ಒ0ದೆಡೆಯಾದರೆ, ಪಾದಸ್ಪರ್ಶದಿಂದ ಪತಿಯನ್ನು ಪರಮಾತ್ಮನ ಮಟ್ಟಕ್ಕೇರಿಸಿದ ಕನ್ನಡದ ಈ ಪಾರ್ವತಮ್ಮ ಇನ್ನೊಂದೆಡೆ. 
 ಆದರ್ಶ ಕುಟುಂಬ. ಏಳು ಮಕ್ಕಳಲ್ಲಿ ಇಬ್ಬರು ಕೆ.ಎ.ಎಸ್ ಅಧಿಕಾರಿಗಳು. ಈ ಇಬ್ಬರಲ್ಲಿ ಒಬ್ಬರಾದ ಜಯವಿಭವಸ್ವಾಮಿ ಕರ್ನಾಟಕ ಸರ್ಕಾರದ ಡೆಪ್ಯೂಟಿ ಸೆಕರೆಟರಿ. ನನ್ನ ಆತ್ಮೀಯರಲ್ಲಿ ಒಬ್ಬರು. ಮತ್ತೊಬ್ಬ ಮಗ ಉದ್ಯಮಿ. ಹೆಣ್ಣುಮಕ್ಕಳಿಬ್ಬರು ವಿಜ್ಞಾನ ವಿಭಾಗದಲ್ಲಿ ಡಾಕ್ಟರೇಟ್. ಅಳಿಯಂದಿರದು ಅಷ್ಟೇ ಎತ್ತರದ ಬದುಕು. ಕಿತ್ತು ತಿನ್ನುವ ಬಡತನದಲ್ಲಿ ಪ್ರಾಮಾಣಿಕತೆಯ ಪಾಠಗಳನ್ನು ಕಲಿಸಿ ಮಕ್ಕಳನ್ನು ವಿನಯದ ಚೇತನಗಳಾಗಿ ರೂಪಿಸಿದ ಎರೆಸೀಮೆಯವರು ಹಳೆಗನ್ನಡದ ಮಹಾನ್ ಪಂಡಿತರು. ಐವತ್ತಕ್ಕೂ ಮಿಕ್ಕಿದ ಕೃತಿಗಳನ್ನು ಬರೆದವರು. ಘಟವನ್ನೇ ಮಠವಾಗಿಸಿಕೊಂಡು ಮೌನವಾಗಿ ಬಾಳಿದವರು. 
ಈ ದೇಶದಲ್ಲಿ ಗುರುವಿಗಾಗಿ ಏಕೆ ಹಸಿಯುತ್ತಾರೆ? ಎನ್ನುವುದಕ್ಕೆ ನೆನಪಾದವಳು ಆಮ್ರಪಾಲಿ. ಅವಳು ಈ ದೇಶ ಕಂಡ ಅಪರೂಪದ ಗಣಿಕೆ. ಗುರು ಶಕ್ತಿಯ ಗಣಿಕೆ. ತನ್ನೊಳಗೊಬ್ಬ ಸಂತಳನ್ನು ಹುದುಗಿಸಿಟ್ಟುಕೊಂಡಿದ್ದ ಸುಪ್ರಸಿದ್ಧ ಸೂಳೆ. ಅವಳಿಗಾಗಿ ದೇಶವಿದೇಶಗಳ ರಾಜರು, ರಾಜಕುಮಾರರು ಕಾತರಿಸುತ್ತಿದ್ದರು. ಚಿನ್ನದ ತಟ್ಟೆಯಲ್ಲಿ ತಮ್ಮ ಬಯಕೆಗಳನ್ನಿಟ್ಟುಕೊಂಡು ಆಮ್ರಪಾಲಿಗಾಗಿ ಕಾಯುತ್ತಿದ್ದ ರಾಜರುಗಳ ಬಳಿ ಅವಳು ಚಿನ್ನದ ರಥದಲ್ಲಿಯೇ ಬರುತ್ತಿದ್ದಳ0ತೆ. ಆದರೆ ಹಲವು ಗಂಡಸರ ಮೈವಾಸನೆಯುಂಡಿದ್ದ ಆಮ್ರಪಾಲಿಯ ಮನಸ್ಸಿನಲ್ಲಿ ಹುಡುಕಾಟವಿತ್ತು. ಅವಳಿಗೆ ಬುದ್ಧ ಬೇಕಾಗಿತ್ತು. ಆತನ ನಗೆ ಅವಳ ನಿದ್ರೆಗೆಡಿಸಿತ್ತು.
ಸರಿ, ಒಂದೊಮ್ಮೆ ಎಲ್ಲಬಿಟ್ಟು ರಥ ಹತ್ತಿ ಬುದ್ಧನ ಬಳಿ ಬಂದೇ ಬಿಟ್ಟಳು ಆಮ್ರಪಾಲಿ. ಎಷ್ಟೆಲ್ಲ ಗಂಡಸರನ್ನು ನೋಡಿದ್ದ ಆಮ್ರಪಾಲಿಗೆ ಬುದ್ಧನ ನಿರಾಳ ನಿಲುವು, ನಿರ್ಮೋಹದ ನೋಟ, ಎಲ್ಲ ಮಾತಾಡುವ ಆತನ ಮುಗುಳ್ನಗೆ ಎಲ್ಲವೂ ಬೇಕಾಗಿತ್ತು. ಆಶೆಗಳ ಹಿದೆ ಓಡಿ ಓಡಿ ಅಂದಣವನೇರಿದ ನಾಯಿಯಂತಾಗಿದ್ದ ಅವಳಿಗೆ ಬುದ್ಧನ0ಥ ಗುರುವಿನ ಶಿಷ್ಯಳಾಗಬೇಕಿತ್ತು. ಈಗ ಬುದ್ಧ ಹೇಳಿದರು, ‘ಬೇಡ ಆಮ್ರಪಾಲಿ ಈ ನಿನ್ನ ಆಸೆ ನಿನ್ನ ಸುಂದರವಾದ ಶರೀರವನ್ನು ಬಹಳ ಘಾಸಿಸುತ್ತದೆ. ಮಣ್ಣೇ ಕಾಣದ ನಿನ್ನ ಕಾಲು ನೋಯುತ್ತದೆ. ನಾನು ದಿನಕ್ಕೊಂದೇ ಹೊತ್ತು ಉಂಡು, ಕಂಡಕಂಡಲ್ಲಿ ಬರಿಗಾಲಲ್ಲಿ ಅಲಿಯುವವ. ನಿನಗೆ ಈ ಕಷ್ಟಬೇಡ.’ ಆದರೆ ಬಿಡಲಿಲ್ಲ. ಹಠಕ್ಕೆ ಬಿದ್ದು ಬುದ್ಧನಿಂದ ಗುರು ಬೋಧೆಯನ್ನು ಪಡೆದೆ ಬಿಟ್ಟಳು. 
 ಆದರೆ ದೀಕ್ಷೆಯ ನಂತರ ಎಲ್ಲ ಭಿಕ್ಕುಗಳಿಗೂ ಅನೇಕ ರೀತಿಯ ನಿರ್ದೇಶನ ನೀಡುತ್ತಿದ್ದ ಬುದ್ಧ, ಆಮ್ರಪಾಲಿಗೆ ಮಾತ್ರ ಏನೂ ಹೇಳಲೇ ಇಲ್ಲ. ಎಲ್ಲರಿಗೂ ತಬ್ಬಿಬ್ಬು. ಸ್ವಯಂ ಆಮ್ರಪಾಲಿಗೂ ಕೂಡ. ಆಗ ಕಾರಣ ವಿವರಿಸಿ ಬುದ್ಧ ಹೇಳಿದ, ‘ಆಮ್ರಪಾಲಿ ವೇಶ್ಯಾ ವೃತ್ತಿಯಲ್ಲಿದ್ದರೂ ಅವಳು ಸರಿದಾರಿಯಲ್ಲೇ ಇದ್ದಳು. ಅವಳಿಗೆ ಅಂತಿಮ ಸತ್ಯಗೊತ್ತಿತ್ತು. ನಮ್ಮ ಆಗಮನವೇ ಸ್ವಲ್ಪ ವಿಳಂಬವಾಯಿತು. ಈಗಲೂ ಅಷ್ಟೆ ಅವಳಿಗೆ ನನ್ನ ನಿರ್ದೇಶನದ ಅವಶ್ಯಕತೆಯಿಲ್ಲ. ಒಂದು ಉಪಸ್ಥಿತಿ ಮಾತ್ರದಿಂದಲೇ ಎಲ್ಲ ಅನುಭೂತಿಗೊಳಗಾದವಳು ಅವಳು.’
ಇದು ಗುರುಸಾನಿಧ್ಯದ ಪರಿಣಾಮ ಮತ್ತು ಫಲಿತಾಂಶ. ಇದೇ ವಾರದಲ್ಲಿ ತನ್ನ ತಂದೆ ಮತ್ತು ಗುರು ಎರಡೂ ಆಗಿದ್ದ ಹರಿವಂಶರಾಯ್‍ರು ಹೇಳುತ್ತಿದ್ದ ಒಂದು ಮಾತನ್ನು ಅಮಿತಾಬ್‍ಬಚ್ಚನ ಸ್ಮರಿಸಿಕೊಂಡಿದ್ದಾರೆ, “ಯಾರೆಷ್ಟೇ ಯತ್ನಿಸಿದರೂ ಎಲ್ಲ ಸತ್ಯಗಳು ನಿನ್ನ ಮುಂದೆ ಪ್ರಕಟಗೊಳ್ಳುವ ಕಾಲ ಬಂದೇ ಬರುತ್ತದೆ. ಹಾಗೆ ಪ್ರಕಟಗೊಂಡ ಸತ್ಯವನ್ನು ನಿರ್ಮೋಹದಿಂದ ನೋಡು, ಮತ್ತೆ ಅಲ್ಲಿಂದ ಮರುತ್ತರ ನೀಡದೆ ಹೊರಟು ಹೋಗು” ಒಂದು ಕಾಲಕ್ಕೆ ಗುರುವಾಗಿ ಅಪ್ಪ ಹೇಳಿದ ಮಾತನ್ನು ನಾಲ್ಕು ದಶಕಗಳ ನಂತರ ಶಿಷ್ಯನಾಗಿ ಮಗ ದಾಖಲಿಸಿದ್ದಾರೆ ಮತ್ತು ಇದೇ ತನ್ನ ಯಶಸ್ಸಿಗೆ ಕಾರಣ ಎಂದು ಹೇಳಿದ್ದಾರೆ.

No comments:

Post a Comment