“You can go on changing the outer for
lives and you will never be satisfied. Unless the inner changes, the outer can
never be perfect” ಎಷ್ಟೊಂದು ಆಳವಾದ ಚಿಂತನೆ ಅಲ್ಲವೆ? ಕಾಂತಾವರ ಭಾಷಣ ಮುಗಿಸಿ, ಮಾರ್ಚ್ 28 ರ ಸಾಯಂಕಾಲ ಮೂಡಬಿದರೆಯ ಆಳ್ವಾಸ್ ಗ್ರೌಂಡಿನಲ್ಲಿ, ಮುಳುಗಿದ ಸೂರ್ಯನ ಮಬ್ಬುಗತ್ತಲಲ್ಲಿ ಮೈ ಹಾಸಿಕೊಂಡು ಸುಮ್ಮನೆ ಕುಳಿತು ಎಷ್ಟೆಲ್ಲ ವಿಚಾರಿಸುತ್ತಿದ್ದೆ. ಪಕ್ಕದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಘಂಟೆಗಳ ನಾದ, ಕಾಂತಾವರ ಭಾಷಣದಿಂದ ಹದಗೆಡುತ್ತಿದ್ದ ನನ್ನ ಧ್ವನಿ ಪೆಟ್ಟಿಗೆ, ಮೆಲ್ಲಗೆ ಏರುತ್ತಿದ್ದ ಜ್ವರ, ಮತ್ತೆ ಬೆಳಗಾದರೆ 12 ಗಂಟೆಗಳ ನಿರಂತರ ಡ್ರೈವಿಂಗ್. ಚಾರ್ಮಾಡಿಯ ಆಕರ್ಷಣಿಯೇ ಅದು. ನನ್ನ ಪಾಲಿನ ಜೀವಜಾಲ ಇದು. ಯಾವಾಗಲೂ ನನ್ನ ಕನಸುಗಳಲ್ಲಿ ಪಿಸುಗುಡುತ್ತದೆ ‘Be like an alone peak high in the sky’.
ಬೆಂಗಳೂರಿಗೆ ಬಂದು ಎಪ್ರಿಲ್ 1 ರ ರಾತ್ರಿ ಮತ್ತೆ ಪಯಣ. ಅನಾರೋಗ್ಯದಿಂದ ಕುಸಿದು ಬೀಳುವ ಭಯ. ಆದರೆ ಬೀಳುವುದಾದರೆ ಬಸ್ಸಿನಲ್ಲೇ ಬೀಳೋಣ, ಗುರಿ ಮಾತ್ರ ತಲುಪೋಣ. ಎರಡು ದಿನ ‘ಜೋಳಿಗೆ’ಯಲ್ಲಿ ಮಲಗಿದರಾಯಿತು ಎಂದುಕೊಂಡವನಿಗೆ ಆಘಾತಕಾರಿ ಸುದ್ದಿ. ಇನ್ನೂ ಊರು ಮುಟ್ಟಿರಲಿಲ್ಲ ಗೆಳೆಯ ಬಸೀರ್ ಹೃದಯಾಘಾತದಿಂದ ಸೋಲಾಪುರದ ಅಶ್ವಿನಿ ಆಸ್ಪತ್ರೆಗೆ ದಾಖಲಾದ. ಸ್ಥಿತಿ ಸೂಕ್ಷ್ಮವಾಗಿರುವುದರಿಂದ ತಕ್ಷಣ ನಿರ್ಧಾರ ತಿಳಿಸಲು ವೈದ್ಯರ ಆದೇಶ. ಆದರೆ ನಿರ್ಧಾರ ಮಾತ್ರ ಆತ ಮತ್ತು ಆತನ ಬಂಧುಗಳ ಆದಿಯಾಗಿ ನನ್ನ ಮೇಲೆ ಹಾಕಿದರು. ನಾನು ದೇವರಿಗೆ ಋಣಿಯಾಗಿದ್ದೆ. ಖಬ್ರಸ್ಥಾನದಲ್ಲಿ ಇಳಿಯಬೇಕಾಗಿದ್ದ ಗೆಳೆಯ ಉಸಿರಾಡುತ್ತ ಆಸ್ಪತ್ರೆಯಲ್ಲಿದ್ದನಲ್ಲ, ಇದಕ್ಕಿಂತಲು ಭಾಗ್ಯ ಬೇಕೆ.
ಬಾಗೋಜಿಕೊಪ್ಪಕ್ಕೆ ಹೋಗುವುದರೊಳಗಾಗಿ ಸಾಕಷ್ಟು ತಡವಾಗಿತ್ತು. ಊರೆಲ್ಲ ಹಬ್ಬದ ವಾತಾವರಣ.
‘ಹಚ್ಚೇವು ಕನ್ನಡದ ದೀಪ,
ಕರುನಾಡ ದೀಪ, ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ’
ಎಂದು ಹಾಡಿದ ಕವಿಯ ಊರಿನ ರಸ್ತೆಗಳ ತುಂಬ ನಾನು ದೀಪಗಳ ಹುಡುಕುತ್ತಿದ್ದೆ. ಆದರೆ ಕಾಲಿಟ್ಟಲ್ಲಿ ತಿಪ್ಪೆಯ ಗುಂಡಿಗಳೇ ಸಿಕ್ಕವು. ರೈತಾಪಿ ಊರು, ಕಿರಿದಾದ ರಸ್ತೆಗಳು, ಸುಡು ಬಿಸಿಲು ಮತ್ತೇನು ಬೇಕು ರೋಗ ಉಲ್ಬಣಿಸಲು.
ಸಭೆಯ ಕ್ಷಮೆ ಕೇಳಿ ನಾನು ವೇದಿಕೆ ಹತ್ತಿದೆ. ಆದರೆ ನಮ್ಮ ಹಳ್ಳಿಗರ ಹೃದಯ ಸಂಸ್ಕಾರವೇ ಭಿನ್ನ. ತಕ್ಷಣವೇ ನನ್ನ ಪಕ್ಕ ಇನ್ನೊಂದು ಕುರ್ಚಿ ಹಾಕಿ ನನ್ನ ಹೆಂಡತಿಯನ್ನು ಪಕ್ಕದಲ್ಲೇ ಕೂಡಿಸಿದರು. ನಾನೊಂದು ಕ್ಷಣ, ನನ್ನ ಎಂಥ ಪ್ರಮಾದವನ್ನು ಈ ಹಳ್ಳಿಗರು ಸರಿಪಡಿಸಿದರೆಂದು ಒಳಗೊಳಗೇ ಖುಷಿ ಪಡುತ್ತಿದ್ದೆ.
ಗಾಂಧಿಯನ್ನು ನಾನೊಬ್ಬನೇ ಬರೆದು ತೀರಿಸಲಿಲ್ಲ. ಅದರಲ್ಲೂ “ಗಾಂಧಿ: ಮುಗಿಯದ ಅಧ್ಯಾಯ” ಎಂಬ ನಿಗಧಿತ ಅವಧಿಯ ರಚನೆಗೆ ನನ್ನ ಹೆಂಡತಿ ಪದ್ಮಶ್ರೀಯ ಕೊಡುಗೆ ಅಪಾರ. ಮುಖವಾಣಿಯಾಗಿಯೇ ಬಂದ ಈ ಕೃತಿಯನ್ನು ಒಂದು ಲ್ಯಾಪ್ಟಾಪ್ ಸಹಾಯದಿಂದ ಬರೆದು ತೀರಿಸಿದವಳು ಪದ್ಮಶ್ರೀ. ಕೊನೆಯ ಭಾಗಕ್ಕೆ ಅಷ್ಟೇ ಮುತುವರ್ಜಿಯಿಂದ ಕೈಹಚ್ಚಿದವಳು ನಮ್ಮ ಗೌರಿ. ಹೀಗಾಗಿ ಈ ವೇದಿಕೆಯಲ್ಲಿ ನನ್ನ ಪಕ್ಕದ ಖುರ್ಚಿ ಅವಳದಾಗಿರಬೇಕಾದುದು ಅಪೇಕ್ಷಿತ. ಈ ಪ್ರಶಸ್ತಿ ಹೀಗೆ ಸಹಕರಿಸಿದವರಿಗೆಲ್ಲ ಸಮರ್ಪಿತ.
ಸಣ್ಣ, ಸರಳ ಸಮಾರಂಭ. ಮೈಸೂರು ಪೇಟದ ನನ್ನ ಮೊದಲ ಸನ್ಮಾನ ಇರಬಹುದೇನೊ. 10,0000/- ರೂಗಳ ನಗದು. ದೊಡ್ಡ ಮೊತ್ತ. ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಪ್ರೊ. ಅಂಗಡಿಯವರೂ ಈ ಪ್ರಶಸ್ತಿಯನ್ನು ನನ್ನೊಂದಿಗೆ ಹಂಚಿಕೊಂಡಿದ್ದರಿಂದ ಅರ್ಧ ಮೊತ್ತ ನಮ್ಮದಾಗಿತ್ತು. ಆದರೆ ಶ್ರಮಕ್ಕೆ ಸಂಧ ಗೌರವಕ್ಕಾಗಿ ಸಂತಸವಿತ್ತು. ಮನದ ಮೂಲೆಯಲ್ಲಿ ಷಣ್ಮುಖಶಿಯೋಗಿಗಳ ಸಾಲೊಂದು ತೇಲುತ್ತಿತ್ತು –
ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ
ಮನ ಅಚ್ಚೊತ್ತಿದಂತಿರಬೇಕು ಕಾಯಕದಲ್ಲಿ
ಇಂತೀ ಗುಣವುಳ್ಳಾತನೇ ಸಾಧಕ ನೋಡಾ ಅಖಂಡೇಶ್ವರಾ.
ವೇದಿಕೆ ಇಳಿಯುತ್ತಲೇ ಗೆಳೆಯನ ಆಪರೇಷನ್ ಯಶಸ್ಸಾದ ಸುದ್ಧಿ. ಇತ್ತ ಸಮಾರಂಭ ಸಂರ್ಪೂಗೊಂಡ ಸಮಾಧಾನ. ಯರಗಟ್ಟಿಯಡೆಗೆ ನನ್ನ ಕಾರು. ಆನಂತರದ್ದು ನಿರಾಳ ನಿದ್ರೆ.
ಹೃದಯಧನವಿದ್ದವರಿಗೆ ಮಣ್ಣೂ ಹೊನ್ನಾಗಿ ಕಾಣುತ್ತದೆ.
ಇಷ್ಟು ಸಾಕು, ಈ ಬಾರಿಯ ಬೆಸಿಗೆ ಬೆಂಕಿ ಮಳೆಗರಿಯುತ್ತಿದೆ, ನೆರಳಿನ ಕೈಗಳನ್ನು ಕಾಯ್ದುಕೊಳ್ಳಿ.
No comments:
Post a Comment