Total Pageviews

Friday, October 9, 2020

ಬದುಕಾದ ಕೀಟ್ಸ್, ಬೆಳಕಾದ ಏಟ್ಸ್

 

ಐರ್ಲ್ಯಾಂಡಿನ ಪ್ರೊಟೆಸ್ಟಂಟ್ ಮನೆತನದಲ್ಲಿ ಹುಟ್ಟಿದ ಚಂಡಮಾರುತ ವಿಲಿಯಂ ಬಿ. ಏಟ್ಸ. ಕಲಾಕಾರ ತಂದೆಯ ಕಾವ್ಯಾಸಕ್ತ ಮಗ, ಮೆಧಾವಿ. ಪೂರ್ವದೆಡೆಗೆ ಹಂಬಲವಿಟ್ಟುಕೊಂಡವ. ಇದ್ದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಾವ್ಯದಲ್ಲಿ ಹೊಸ ತಂತ್ರ ಮತ್ತು ಖಾಸಗಿ ಸಂಗತಿಗಳನ್ನು ಅಳವಡಿಸಲು ಹೆಣಗಾಡಿದ. ಮಾಡ್ಗಾನ್ ಎಂಬ ಮಹಾ ಸುಂದರಿಯನ್ನು ಪ್ರೀತಿಸಿದವ. ಆಕೆ ಜಾನ್ ಮಕ್ ಬ್ರೈಡನನ್ನು ಪ್ರೀತಿಸಿದಳು. ಈಕೆಯ ಗಂಡನನ್ನು ದಂಗೆಯಲ್ಲಿ ನಿರತನಾದ ಕಾರಣ ಗಲ್ಲಿಗೇರಿಸಲಾಯಿತು. ಈಕೆಗೆ ಇಸ್ಯೂಲ್ಟ್ ಎಂಬ ಮಗಳು ಹುಟ್ಟಿದಳು. ಏಟ್ಸ್ ಅವಳ ಮುಂದೆಯೂ ತನ್ನ ಪ್ರೇಮ ಪ್ರಸ್ತಾಪವನ್ನಿಟ್ಟ. ಇದು ಲೋಕದ ಕಣ್ಣಿಗೆ ಹುಚ್ಚುತನ, ಆದರೆ ಈ ಹುಚ್ಚುತನವೆ ಅವನ ಕಾವ್ಯಕ್ಕೆ ವರವಾಗಿತ್ತು, ಪ್ರೀತಿಯ ವರತೆಯಾಗಿತ್ತು. ಮುಂದೆ ಅವಳೂ ನಿರಾಕರಿಸಿದಾಗ ಏಟ್ಸ್ ನ ವಯಸ್ಸು 52. ಆಗ ಲೀಸಳನ್ನು ಮದುವೆಯಾಗಿ ಜೀವನವನ್ನು ಮುಂದೊರೆಸಿದ. ಕೃಷ್ಣಮೂರ್ತಿರಾವ್ ಈ ಏಟ್ಸ್ ನ ‘ವಾಟ ವಾಸ್ ಲಾಸ್ಟ್’ ಎನ್ನುವ ಪದ್ಯವನ್ನು ಸುಂದರವಾಗಿ ಭಾಷಾಂತರಿಸಿದ್ದಾರೆ –

ನಾನು ಹಾಡುವುದು ಸೋತದ್ದಕ್ಕೆ ಅಳುಕುವುದು ಗೆದ್ದದ್ದಕ್ಕೆ

ನಡೆಯುವುದು ಮತ್ತೆ ಸೆಣಸಿದ ಕದನದೊಡನೆ

ಪ್ರೊಫೆಸರ್ ವಿ. ಕೃಷ್ಣಮೂರ್ತಿ ರಾವ್ ಕನ್ನಡದ ವಿಶಿಷ್ಟವಾದ ಪ್ರತಿಭೆ. ಅವರು ಬರೆದ ಕೃತಿಗಳ ಸಂಖ್ಯೆ ಕಡಿಮೆ, ಆದರೆ ಬರೆದವುಗಳೆಲ್ಲವೂ ಅಪರೂಪದವುಗಳೆ. ಇವರು ಪ್ರೊಫೆಸರ್ ಚಂದ್ರಶೇಖರ್ ಪಾಟೀಲರು (ಚಂಪಾ) ನನಗೆ ಪರಿಚಯಿಸಿದ ಸನಾತನ ಹಿರಿಯ ಲೇಖಕರು. ಇವರೊಂದು ರೀತಿ ಕೂಡಲಸಂಗಮ. ಸಾಹಿತ್ಯ ಮತ್ತು ರಾಜಕಾರಣದ ಹಿರಿಯರಾದ ರಾಜೀವ ತಾರಾನಾಥ, ಅನಂತಮೂರ್ತಿ, ಚಂಪಾ ಮತ್ತು ಕಂಬಾರ ಇವರಿಗೆ ತುಂಬಾ ಆತ್ಮೀಯರು. ಇವರ ವಾಸ್ತವ್ಯ ಚಂಪಾ ಪಾಲಿನ ‘ಕಿಟ್ಟಿ ಮನೆ’. ಇಲ್ಲಿ ಜಿ.ಪಿ.ಬಸವರಾಜ, ಎಲ್. ಹನುಮಂತಯ್ಯ, ಹರಿಹರಪ್ರಿಯ, ಚಂಪಾ ಮತ್ತು ನಾನು ಒಂದು ಕಾಲಕ್ಕೆ ಬೆಂಗಳೂರಿನ ಸಂಜಯನಗರದ ಈ ಮನೆಯ ಪ್ರೀತಿ ಮತ್ತು ಆತ್ಮೀಯತೆಯ ಅತಿಥಿಗಳಾದದ್ದಿದೆ. ಈ ಅರ್ಥದಲ್ಲಿ ಇವರು ಹೀಗೆ ದೊರೆತಿದ್ದು ಸಾಹಿತ್ಯಕ ಭಾಗ್ಯವೇ ಸರಿ.

ಧಾರವಾಡದ ಓದಿನ ದಿನಗಳಲ್ಲಿ ಪ್ರೊಪೆಸರ್ ಬಿ.ಟಿ ದೇಸಾಯಿ, ಚಂಪಾ ಹಾಗೂ ಗಿರಡ್ಡಿಯವರ ಒಡನಾಡಿಯಾದ ಕೃಷ್ಣಮೂರ್ತಿರಾವ್ ಬರೆದ ಸಾಹಿತ್ಯ ಅಪರೂಪದ್ದು. ವೃತ್ತಿಯರಸಿ ಮೊದಲು ಹೋದದ್ದು ಮಹಾರಾಷ್ಟ್ರಕ್ಕೆ. ಅಲ್ಲಿಂದ ಮುಂದೆ ಮಾತೃಭೂಮಿಯಿಂದ ದಶಕಗಳವರೆಗೆ ಕರ್ನಾಟಕದ ಆಚೆ ದಮನ್ ದಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಶ್ರೀಯುತರು, ಬದುಕಿನ ಉತ್ತರಾರ್ಧದಲ್ಲಿ ಕನ್ನಡಕ್ಕೆ ಮಹತ್ವದ ಅನುವಾದ ಸಾಹಿತ್ಯ ಕೃತಿಗಳನ್ನು ಕೊಡುತ್ತಿದ್ದಾರೆ. ಇತ್ತೀಚಿಗೆ ಡಬ್ಲ್ಯೂ ಬಿ ಏಟ್ಸ್ನ 70 ಕವನಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ. ಕೃಷ್ಣಮೂರ್ತಿರಾವ್ ಅವರ ವಯಸ್ಸು ಈಗ ಎಂಬತ್ತರ ಆಸುಪಾಸು, ನಾನು 49 ಆಚೆ-ಈಚೆಯವನು

.       ಬೆಂಗಳೂರಿನಂಥ ದಾಂಗುಡಿಯ ನಗರದಲ್ಲಿ ಕುಳಿತುಕೊಂಡು ಇಬ್ಬರು ಭಿನ್ನ ಕಾಲದ ಇಂಗ್ಲೀಷ್ ಸಾಹಿತಿಗಳನ್ನು ಕುರಿತು ಕೃತಿಗಳನ್ನು ರಚಿಸಿರುವುದು ಒಂದು ಅಪರೂಪದ ಮತ್ತು ಅಭಿಮಾನದ ಘಟನೆ. 20ನೇ ಶತಮಾನದ ಬಂಡುಕೋರ ಕವಿ ಡಬ್ಲ್ಯೂ.ಬಿ. ಏಟ್ಸ್ ನನ್ನು ಕುರಿತು ವಯೋವೃದ್ಧರಾದ ಅವರು ಬರೆದರೆ, 18ನೇ ಶತಮಾನದ ರೊಮ್ಯಾಂಟಿಕ್ ಕಾವ್ಯದ ಮಹತ್ವದ ಲೇಖಕನಾದ ಜಾನ್ ಕಿಟ್ಸ್ ನನ್ನು ಕುರಿತು ‘ಬದುಕಬಾರದೆ ಬದುಕು’ ಕೃತಿಯನ್ನು ನಾನು ಬರೆದು ಪೂರೈಸಿದ್ದೇನೆ. ನಮ್ಮಿಬ್ಬರ ಈ ಸಂದರ್ಭದ ಬೆಂಗಳೂರು ನಗರದ ವಾಸ್ತವ್ಯ ಇದಕ್ಕೆ ಸಾಕ್ಷಿಯಾಗಿದ್ದು ಕಾಕತಾಳಿಯ ಎಂದುಕೊಂಡಿಲ್ಲ ನಾನು.

ಇದು ಭಾಷೆಯಾಚೆಗಿನ ಭಾಷೆ. ಪದಗಳಾಚೆಗಿನ ಸಂವಾದ.

ಮನುಕುಲವನ್ನು ಕಾಡಿದ, ಅನುಭವಿಸಿದ ಭಾವತೀವ್ರತೆ ಹಾಗೂ ಸಾಂದ್ರತೆಯ ಮಹತ್ವದ ಕವಿಗಳು ಕೀಟ್ಸ್ ಮತ್ತು ಏಟ್ಸ್. ಕೃಷ್ಣಮೂರ್ತಿಯವರ ಏಟ್ಸ್, ಕಾವ್ಯವನ್ನು ಕುರಿತು ಭಿನ್ನವಾಗಿ ಆಲೋಚಿಸುತ್ತಾನೆ ಮತ್ತು ಬರೆಯುತ್ತಾನೆ. ಕೀಟ್ಸ್ ಕಾವ್ಯ ವ್ಯಸನಿಯಾಗುತ್ತಾನೆ ಮತ್ತು ಅದಕ್ಕಾಗಿಯೇ ಕೊನೆಯುಸಿರೆಳೆಯುತ್ತಾನೆ.

ನಮ್ಮ ಕನ್ನಡದ ಲಕ್ಷ್ಮೀನಾರಾಯಣಭಟ್ಟರು ಹಾಗೂ ಇತ್ತೀಚಿಗೆ ಕೃಷ್ಣಮೂರ್ತಿರವರು ಏಟ್ಸ್ ನನ್ನು ಕುರಿತು ಮಾಡುವ ಚರ್ಚೆಗಳಿಗೆ ಎರಡು ಭಿನ್ನ ಗುರಿಗಳಿವೆ. ಈ ಮಧ್ಯದಲ್ಲಿ ಕೆ.ಎಸ್.ನಾರಾಯಣಾಚಾರ್ಯ, ಶಂಕರ ಮುಕಾಶಿ ಪುಣೇಕರ ಮತ್ತು ಜಿ.ಎಸ್.ಅಮೂರರು ಏಟ್ಸ್ ನ ಕಡೆಗೆ ನಮ್ಮ ಗಮನವನ್ನು ಸೆಳೆದಿದ್ದಾರೆ.

ಭಾರತಕ್ಕೂ ಡಬ್ಲ್ಯೂ. ಬಿ. ಏಟ್ಸ್ ನಿಗೂ ಮೊದಲಿಂದಲೂ ಒಂದು ರೀತಿಯ ಅವಿನಾಭಾವ ಸಂಬಂಧ. ಭಾರತದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಗುರುದೇವ ರವೀಂದ್ರನಾಥ ಟ್ಯಾಗೋರ್ ಸಾಹಿತ್ಯಕ್ಕಾಗಿ ಮೊಟ್ಟಮೊದಲನೆಯ ನೊಬೆಲ್ ಪ್ರಶಸ್ತಿಯನ್ನು ಪಡೆಯಲಿಕ್ಕೆ ಕಾರಣನಾದ ವ್ಯಕ್ತಿ ಏಟ್ಸ್, ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ದೇಶದ ಮೊದಲ ಪ್ರಧಾನಿ ನೆಹರುರವರ ಸಂಕಲ್ಪದಂತೆ, ಹೆಸರಾಂತ ನಟರಾದ ಅಮಿತಾಬಚ್ಚನರ ತಂದೆ ಕವಿ ಹರಿವಂಶರಾಯ ಬಚ್ಚನ್ ಇಂಗ್ಲೇಂಡಿನಲ್ಲಿ ಇದೇ ಏಟ್ಸ್ ನ ಮನೆಯಲ್ಲಿ ನಿಂತು ಸಂಶೋಧನೆಯನ್ನು ಪೂರೈಸಿದ್ದು ಇಡೀ ಉತ್ತರ ಭಾರತ ಬಲ್ಲ ವಿಚಾರ.


ಈ ಸಂಬಂಧದ ಹಿನ್ನೆಲೆಯ ಏಟ್ಸ್ ನನ್ನು ಭಾಷಾಂತರಿಸುತ್ತ ಕೃಷ್ಣಮೂರ್ತಿರಾವ್ ಹೇಳುತ್ತಾರೆ - ‘ಭಾಷಾಂತರ ಸಂದರ್ಭದ ಅತ್ಯಂತ ಮಹತ್ವದ ಸಂವಹನ.’ ಇದನ್ನೇ ಕುರಿತು ಮಾತನಾಡುತ್ತಾ ಪ್ರೊಪೆಸರ್ ಎ.ಕೆ. ರಾಮಾನುಜನ್ ಹೀಗೆ ವ್ಯಾಖ್ಯಾನಿಸುತ್ತಾರೆ – ‘ಯಾವುದೇ ಪರಭಾಷೆಯಲ್ಲಿರುವ ಕವಿತೆ ಗದ್ಯ ಬರಹಗಳ ಅನುವಾದವನ್ನುಅ ಟ್ರಾನ್ಸ್ಲೇಷನ್’ ಎನ್ನಬಹುದೇ ಹೊರತುದ ಟ್ರಾನ್ಸ್ಲೇಷನ್’ ಎಂದು ಹೇಳಲಾಗದು. ಕೃತಿಗಳ ಅನುವಾದವನ್ನು ಮೂಲ ಭಾವಕ್ಕೆ ಭಂಗ ತರದಂತೆ, ಮೂಲವನ್ನು ಅನುಸರಿಸಿ ಮಾಡುವಂಥದ್ದು. ಅನುವಾದ ಸಮರ್ಪಕವೊ? ತೃಪ್ತಿಕರವೊ? ಎಂದು ಹೇಳಲು ಮೂಲಕೃತಿಯನ್ನೇ ಸಾಕ್ಷಿಯಾಗಿಟ್ಟುಕೊಳ್ಳಬೇಕು.’ ಈ ಸೂತ್ರವನ್ನು ಚಾಚೂ ತಪ್ಪದೆ ತಮ್ಮ ಅನುವಾದಗಳುದ್ದಕ್ಕೂ ಪಾಲಿಸಿದವರು  ಕೃಷ್ಣಮೂರ್ತಿ ರಾವ್. ನಾನು ಸ್ವಲ್ಪ ಭಿನ್ನ. ಆದರೆ ನನ್ನ ಆದರ್ಶ ಅವರೆ.

ನೀನು ಮುದಿಯಾಗಿ ನೆರೆತು, ನಿದ್ದೆ ತುಂಬಿ ಬಂದು,

ಬೆಂಕಿಯ ಬಳಿ ಕಂಪಿಸುತ್ತಿಯಲ್ಲಾ, ಆಗ ತೆಗೆದುಕೊ ಪುಸ್ತಕವನ್ನು

*****

ಎಷ್ಟು ಜನ ಪ್ರೀತಿಸಿದರು ನಿನ್ನ ಹರ್ಷ ಬರಿತ ಕಣ್ಣುಗಳನ್ನು,

ಎಷ್ಟು ಜನ ಪ್ರೀತಿಸಿದರು ನಿಜವೋ ಹುಸಿಯೋ ನಿನ್ನ ಸೊಬಗನ್ನು

ಅವರಲ್ಲೊಬ್ಬ ಪ್ರೀತಿಸಿದ್ದು ನಿನ್ನೊಳಗಿನ ಯಾತ್ರೆ ಆತ್ಮವನ್ನು

ಪ್ರೀತಿಸಿದ್ದು ಬದಲಾಗುತ್ತಿದ್ದ ನಿನ್ನ ಚಹರೆಯ ದುಗುಡಗಳನ್ನು

******

ಹೆಣಗುವ ಜಗ, ಹೊಯ್ದಾಡುವ ಆತ್ಮಗಳ ಮಧ್ಯೆ, ನಮ್ಮ ಒಂಟಿತನದ ಜೀವಿತಗಳು,


ಏಟ್ಸ್ ಮತ್ತು ಕೀಟ್ಸ್ ನನ್ನ ವೃತ್ತಿ ಬದುಕಿನ ಕಾಲಬಳ್ಳಿಗಳು, ಎದೆಯ ವೇದನೆಗಳು, ಮನದ ಮಿಂಚುಗಳು. ಏಟ್ಸ್ ನ ‘ದ ಸೆಕೆಂಡ್ ಕಮಿಂಗ್’, ‘ಪ್ರೆಯರ್ ಟು ಮೈ ಡಾಟರ್’ ಹಾಗೂ ಕೀಟ್ಸ್ ನ ‘ಓಡ ಆನ್ ಗ್ರೇಸಿಯನ ಅರ್ನ್’ ಮತ್ತು ‘ಲಾ ಬೆಲ್ಲೆ ಡ್ಯಾಮ್ನ ಸ್ಯಾನ್ಸ್ ಮರ್ಸಿ’ಗಳನ್ನು ಓದುತ್ತ ಓದಿಸುತ್ತ ಬದುಕಿನ ಮಧ್ಯ ಹಂತಕ್ಕೆ ಬಂದು ನಿಂತಿದ್ದೇನೆ. ಈ ದಾರಿ ಸಾರ್ಥಕವಾಗಿದೆ.


    ಅಂದಹಾಗೆ, ನನ್ನ ‘ಜಗದ್ವಂದ್ಯ ಭಾರತಂ’ ಕಾದಂಬರಿಗೆ ಹಾಗೂ ಕೃಷ್ಣಮೂರ್ತಿರಾವ್ ಅವರ ಏಟ್ಸ್ ನ ಭಾಷಾಂತರಕ್ಕೆ 2019ರ ಸಾಲಿನ ಕಾವ್ಯ-ಕಾದಂಬರಿ ಪ್ರಶಸ್ತಿಗಳನ್ನು ಶಿವಮೊಗ್ಗೆಯ ಕರ್ನಾಟಕ ಸಂಘವು ಘೋಷಿಸಿ ಭಿನ್ನ ಕಾಲಘಟ್ಟದ ಇಬ್ಬರು ಲೇಖಕರ ವೇದಿಕೆಯಾಗಿ ಸಾಕ್ಷಿಯಾಗುತ್ತಿದ್ದಾರೆ. ನನಗೆ ಬದುಕು ತೋರಿಸಿದವನು ಕೀಟ್ಸ್, ಕೃಷ್ಣಮೂರ್ತಿರಾವ್ ಅವರರಿಗೆ ಅದರಾಚೆಯ ಬೆಳಕು ತೋರಿಸಿದವನು ಏಟ್ಸ್. ಎರಡೂ ಕಾವ್ಯ ಚೇತನಗಳಿಗೆ ನೂರೊಂದು ನಮನ.